ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ ಎನಿಸುತ್ತದೆ. ತುರ್ತುಪರಿಸ್ಥಿತಿಗಿರುವ ಅದ್ಭುತ ದಾಖಲೆಯೇ ಶಾ ಕಮಿಷನ್ ವರದಿ.
ಜನಸಂಖ್ಯೆಯಲ್ಲಿ ಇದೀಗ ಚೀನಾವನ್ನು ಹಿಂದೆ ಹಾಕಿ ಒಂದನೇ ಸ್ಥಾನವನ್ನು ಅಲಂಕರಿಸಿರುವ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇದು ಹೆಮ್ಮೆಪಡುವಂತಹ ಸಾಧನೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ದೇಶದ ಪ್ರಜಾಪ್ರಭುತ್ವವು ಈಗ ಅಪಾಯದಲ್ಲಿದೆ; ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾಪಕ್ಷದ ಸರ್ಕಾರದಿಂದ ಸಂವಿಧಾನಕ್ಕೆ ಅಪಾಯವಿದೆ; ಸಂವಿಧಾನವನ್ನು ಅವರು ಹಾಳುಗೆಡವುತ್ತಾರೆ; ದೇಶದ ಬಹುತ್ವವನ್ನು ನಾಶ ಮಾಡಿ ಏಕರೂಪವನ್ನು ತರುತ್ತಾರೆ – ಎಂದು ವಿರೋಧಪಕ್ಷ ಕಾಂಗ್ರೆಸ್ ಮತ್ತು ಚೂರುಪಾರು ಜೀವ ಉಳಿಸಿಕೊಂಡಿರುವ ಕಮ್ಯೂನಿಸ್ಟರು ಆರೋಪಿಸುತ್ತಾರೆ. ಈ ಪಕ್ಷಗಳ ಬಾಲಂಗೋಚಿಗಳಂತೆ ವರ್ತಿಸುತ್ತಿರುವ ದೇಶದ ಬುದ್ಧಿಜೀವಿ ವರ್ಗಕ್ಕಂತೂ ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ಅವರು ಈ ರಾಜಕೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ.
ಇವರೆಲ್ಲ ಕಾಂಗ್ರೆಸ್ ಪಕ್ಷ ಮತ್ತು ಅದರ ಪ್ರಧಾನಿ ಇಂದಿರಾಗಾಂಧಿಯವರು ೧೯೭೦ರ ದಶಕದ ಮಧ್ಯಭಾಗದಲ್ಲಿ ಇಡೀ ದೇಶದ ಮೇಲೆ ಹೇರಿದ ಭಯಾನಕ ತುರ್ತುಪರಿಸ್ಥಿತಿಯನ್ನು ಜನ ಮರೆತಿದ್ದಾರೆಂದು ಭಾವಿಸಿದ್ದಾರೋ ಏನೋ! ಆದರೆ ದೇಶ ಅದನ್ನು ಮರೆಯುವುದು ಸಾಧ್ಯವಿಲ್ಲ. ಅದರಲ್ಲಿ ವೈಯಕ್ತಿಕವಾಗಿ ಹಿಂಸೆ, ಕಷ್ಟ-ನಷ್ಟಗಳನ್ನು ಅನುಭವಿಸಿದ ಅಸಂಖ್ಯ ಮಂದಿ ಈಗಲೂ ನಮ್ಮ ನಡುವೆ ಇದ್ದಾರೆ. ಅದಲ್ಲದೆ ಈಗ ನಾವು ಕೆಲವರಿಂದ ಇನ್ನೂ ಒಂದು ಮಾತನ್ನು ಕೇಳುತ್ತೇವೆ. ಅದೆಂದರೆ ದೇಶದಲ್ಲೀಗ ತುರ್ತುಪರಿಸ್ಥಿತಿಗಿಂತಲೂ ಭಯಾನಕ ವಾತಾವರಣವನ್ನು ಕೇಂದ್ರದ ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಸರ್ಕಾರವು ನಿರ್ಮಿಸಿದೆ ಎಂಬುದು.
ಇವರೆಲ್ಲ ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ಅಸೀಮ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು – ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ ಎನಿಸುತ್ತದೆ. ತುರ್ತುಪರಿಸ್ಥಿತಿಗಿರುವ ಅದ್ಭುತ ದಾಖಲೆಯೇ ಶಾ ಕಮಿಷನ್ ವರದಿ. ತುರ್ತುಪರಿಸ್ಥಿತಿಯ ಆ ಭೀಕರ ಅಧ್ಯಾಯದ ಅನಂತರ ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶ ಜೆ.ಸಿ. ಶಾ ಅವರು ಅಂದಿನ ಅತಿರೇಕಗಳನ್ನು ಕುರಿತು ಸಿದ್ಧಪಡಿಸಿದ ಸವಿವರ ವರದಿಯೇ ‘ಶಾ ಕಮಿಷನ್ ರಿಪೋರ್ಟ್’ ಎಂದು ಪ್ರಸಿದ್ಧವಾದ ಶಾ ಆಯೋಗದ ವರದಿ.
ಕಳೆದುಹೋದ ವರದಿ
ಮಾಜಿ ಸಂಸತ್ ಸದಸ್ಯ ಇರಾ ಸೆಳಿಯನ್ ಅವರು ಸಂಪಾದಿಸಿ ಸಂಗ್ರಹಿಸಿದ ಶಾ ಕಮಿಷನ್ ವರದಿಯ ಶೀರ್ಷಿಕೆಯ ಜೊತೆಗೆ ‘ಒಮ್ಮೆ ಕಳೆದುಹೋಗಿ ಮತ್ತೆ ಮೇಲಕ್ಕೆ ತಂದದ್ದು (Lost and Regained)’ ಎಂದು ಉಲ್ಲೇಖಿಸಲಾಗಿದೆ. ಅದಲ್ಲದೆ ‘ಒಂದು ಅಮೂಲ್ಯ ಐತಿಹಾಸಿಕ ಮತ್ತು ರಾಜಕೀಯ ದಾಖಲೆ – ಒಮ್ಮೆ ಹೂತುಹಾಕಿ ಮತ್ತೆ ಮೇಲಕ್ಕೆ ತಂದದ್ದು’ ಹಾಗೂ ‘೧೯೭೫-೭೭ರ ಅವಧಿಯಲ್ಲಿ ಹೇರಿದ ಆಂತರಿಕ ಮತ್ತು ಬಾಹ್ಯ ಎನ್ನುವ ಎರಡು ತುರ್ತುಪರಿಸ್ಥಿತಿಗಳ ಹೇರಿಕೆಗಳ ವೇಳೆ ನಡೆದ ವ್ಯಾಪಕ ಅಧಿಕಾರ ದುರುಪಯೋಗದ ತನಿಖೆ’ ಎನ್ನುವ ಸಂಕ್ಷಿಪ್ತ ವಿವರವನ್ನೂ ನೀಡಲಾಗಿದೆ.
ಹಾಗಾದರೆ ಇಂದಿರಾಗಾಂಧಿಯವರ ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿ ಹೇರಿಕೆಯಂತಹ ಉಗ್ರಕ್ರಮಕ್ಕೆ ಮುಂದಾದದ್ದೇಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಒಂದು ರೀತಿಯಲ್ಲಿ ನೋಡುವುದಾದರೆ ತುರ್ತುಪರಿಸ್ಥಿತಿ ಹೇರಿಕೆಯು ಆಕಸ್ಮಿಕವಲ್ಲ. ೧೯೬೬ರ ಆರಂಭದಲ್ಲಿ ಪ್ರಧಾನಿಯಾದ ಇಂದಿರಾಗಾಂಧಿ ಮರುವರ್ಷ ತಮ್ಮ ಮೊದಲ ಲೋಕಸಭಾ ಚುನಾವಣೆಯನ್ನು ಎದುರಿಸಿದಾಗ ಮಿಶ್ರಫಲವನ್ನು ಕಂಡಿದ್ದರು. ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸುವ ಆವಶ್ಯಕತೆ ಅವರಿಗೆ ಕಂಡಾಗ ಎದುರಾದದ್ದು ಪಕ್ಷದ ಹಿರಿಯ ನಾಯಕರ ಸಮಸ್ಯೆ. ಅವರನ್ನು ಬದಿಗೊತ್ತಿ ತಮ್ಮ ಹಿಂಬಾಲಕವರ್ಗವನ್ನು ಬೆಳೆಸಬಯಸಿದ ಆಕೆ ೧೯೬೯ರ ರಾಷ್ಟ್ರಪತಿ ಚುನಾವಣೆಯನ್ನು ಅದಕ್ಕೆ ಬಳಸಿಕೊಂಡರು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನೀಲಂ ಸಂಜೀವರೆಡ್ಡಿ ಅವರನ್ನು ಆರಿಸಿದ ಬಳಿಕ ವಿ.ವಿ. ಗಿರಿಯವರನ್ನು ಕಣಕ್ಕಿಳಿಸಿ ಅವರನ್ನು ಬೆಂಬಲಿಸಿದರು. ಇದು ಪಕ್ಕಾ ಅಶಿಸ್ತು ಮತ್ತು ಪಕ್ಷವಿರೋಧಿ ಚಟುವಟಿಕೆಯಾಗಿತ್ತು. ಆದರೂ ಅವರ ಬೆಂಬಲಿಗರಿಂದಾಗಿ ವಿ.ವಿ. ಗಿರಿ ಗೆದ್ದರು. ಪಕ್ಷ ಒಡೆಯುವುದು ಅನಿವಾರ್ಯವಾಯಿತು. ಹಿರಿಯರು ಹೊರಗೆ ಹೋದಾಗ ಪಕ್ಷವು ಬಹುತೇಕ ಪೂರ್ತಿಯಾಗಿ ಇಂದಿರಾ ಅವರ ಹಿಡಿತಕ್ಕೆ ಸಿಕ್ಕಿತು. ಭಾರತ-ಪಾಕಿಸ್ತಾನ ಯುದ್ಧದಲ್ಲಿ ಜಯ ಮತ್ತು ಬಂಗ್ಲಾದೇಶದ ಉದಯದಿಂದ ಅವರ ವರ್ಚಸ್ಸು ಹೆಚ್ಚಿತು; ಹಿಂಬಾಲಕರು ಚೇಲಾಗಳಾಗತೊಡಗಿದರು. ಶಾಸಕಾಂಗ ಕಾರ್ಯಾಂಗಗಳಾಚೆಗೆ ನ್ಯಾಯಾಂಗವೂ ತಮ್ಮ ಹಿಡಿತಕ್ಕೆ ಸಿಗುವಂತೆ ಆಕೆ ಕಾರ್ಯಪ್ರವೃತ್ತರಾದರು; ನ್ಯಾಯಮೂರ್ತಿಗಳ ಸೀನಿಯಾರಿಟಿಯನ್ನು (ಹಿರಿತನ) ಮುರಿದು ತಮಗೆ ಇಷ್ಟವಾದವರನ್ನು ಉನ್ನತ ಸ್ಥಾನಕ್ಕೆ ಏರಿಸಿದರು. ಚೇಲಾಗಳ ಬಳಗ ಬೆಳೆದಂತೆ ಆಡಳಿತದಲ್ಲಿ ಭ್ರಷ್ಟಾಚಾರ, ದುರಾಡಳಿತಗಳು ವ್ಯಾಪಕವಾದವು. ಆ ಹೊತ್ತಿಗೆ ಸರ್ವಾಧಿಕಾರಿ ಪ್ರವೃತ್ತಿ ಇಂದಿರಾ ಅವರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಜೆ.ಪಿ. ಚಳವಳಿಯ ಬಿಸಿ
ಈ ಸರ್ವಾಧಿಕಾರಿ ಪ್ರವೃತ್ತಿ, ಭ್ರಷ್ಟಾಚಾರ, ದುರಾಡಳಿತಗಳನ್ನು ನೇರವಾಗಿ ಎದುರುಹಾಕಿಕೊಂಡು ಚಳವಳಿಗೆ ಇಳಿದವರು ಅಪೂರ್ವ ನಾಯಕ ಜಯಪ್ರಕಾಶ ನಾರಾಯಣರು. ದೆಹಲಿಯಲ್ಲದೆ ಗುಜರಾತ್, ಬಿಹಾರ ಮುಂತಾಗಿ ಇತರ ಭಾಗಗಳಲ್ಲೂ ‘ಸಂಪೂರ್ಣ ಕ್ರಾಂತಿ’ ಚಳವಳಿಯು ಬಿರುಸನ್ನು ಪಡೆದುಕೊಂಡು ಇಂದಿರಾಗಾಂಧಿಯವರನ್ನು ಕೆಣಕುತ್ತಲೇ ಹೋಯಿತು. ದೇಶದ ಯುವಜನರ ಒಂದು ದೊಡ್ಡ ವರ್ಗ ಜೆ.ಪಿ. ಅವರ ಹೋರಾಟದಲ್ಲಿ ಭಾಗಿಯಾಗತೊಡಗಿತು. ಆ ಸನ್ನಿವೇಶದಲ್ಲಿ ಬಂದದ್ದು ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದ ಅಲಹಾಬಾದ್ ಹೈಕೋರ್ಟ್ನ ತೀರ್ಪು.
೧೯೭೧ರ ಲೋಕಸಭಾ ಚುನಾವಣೆಯಲ್ಲಿ ರಾಯ್ಬರೇಲಿ ಕ್ಷೇತ್ರದಲ್ಲಿ ಇಂದಿರಾಗಾಂಧಿಯವರು ರಾಜನಾರಾಯಣ್ ಮತ್ತಿತರರನ್ನು ಸೋಲಿಸಿದ್ದರು. ರಾಜನಾರಾಯಣ್ ಅದನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನ್ಯಾ. ಜೆ.ಎಂ.ಎಲ್. ಸಿನ್ಹಾ ಅವರು ಜೂನ್ ೧೨, ೧೯೭೫ರಂದು ನೀಡಿದ ತೀರ್ಪಿನಲ್ಲಿ, ಇಂದಿರಾಗಾಂಧಿಯವರು ಚುನಾವಣಾ ಅಕ್ರಮವೆಸಗಿದ್ದು ದೃಢಪಟ್ಟಿದ್ದು, ಅವರ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. ಆದರೆ ಆ ತೀರ್ಪಿಗೆ ಇಪ್ಪತ್ತು ದಿನ ತಡೆ ನೀಡಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ನೀಡಿದರು. ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸಬಾರದೆಂಬುದು ತೀರ್ಪಿನ ಇನ್ನೊಂದು ಅಂಶ.
ಆದರೆ ಈ ತೀರ್ಪಿಗೆ ಇಂದಿರಾಗಾಂಧಿ ಮತ್ತವರ ಬೆಂಬಲಿಗರ ಪ್ರತಿಕ್ರಿಯೆ ಬೇರೆಯೇ ರೀತಿ ಇತ್ತು. ದೆಹಲಿಯಲ್ಲಿ ಬಗೆಬಗೆಯ ಚಟುವಟಿಕೆಗಳು ಗರಿಗೆದರಿದವು. ಇಂದಿರಾ ಅವರ ಅನರ್ಹತೆಯನ್ನು ಬದಿಗೊತ್ತಬೇಕು; ಕೋರ್ಟ್ ಏನೇ ಹೇಳಿರಲಿ, ಆಕೆ ಪ್ರಧಾನಿಯಾಗಿ ಮುಂದುವರಿಯಬೇಕು – ಎಂಬ ಉದ್ದೇಶದಿಂದ ದೆಹಲಿಯಲ್ಲಿ ಪ್ರತಿಭಟನೆ, ಮತಪ್ರದರ್ಶನ, ರ್ಯಾಲಿಗಳು ದೊಡ್ಡ ರೀತಿಯಲ್ಲಿ ನಡೆದವು. ಅದಕ್ಕಾಗಿ ವಿಶೇಷ ಬಸ್ಸುಗಳು ಓಡಿದವು; ಅದರಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಸರ್ಕಾರಿ ಅಧಿಕಾರಿ-ನೌಕರರ ಮೇಲೂ ಒತ್ತಡಗಳು ಬಂದವು.
ತುರ್ತುಪರಿಸ್ಥಿತಿಯು ಸರ್ಕಾರ ಮತ್ತು ಅದರ ವಿವಿಧ ಇಲಾಖೆಗಳಲ್ಲಿ ರೂಪಗೊಳ್ಳುತ್ತ ಮುಂದುವರಿಯಿತು; ಕೆಲವು ಇಲಾಖೆಗಳಲ್ಲಿ ಅದರ ಪ್ರಭಾವ-ಪರಿಣಾಮ ಜೋರಾಗಿತ್ತು. ಅಂತಹ ಇಲಾಖೆಗಳಲ್ಲಿ ಮುಖ್ಯವಾದ ಒಂದು ಇಲಾಖೆಯೆಂದರೆ ಕೇಂದ್ರದ ವಾರ್ತಾ-ಪ್ರಸಾರ ಇಲಾಖೆ. ಸೂಕ್ಷ್ಮವೂ, ಜನರ ನಾಡಿಮಿಡಿತಕ್ಕೆ ಹತ್ತಿರವೂ ಆದ ಇಲಾಖೆಯಲ್ಲಿ ಮಾರಕ ನಿರ್ಧಾರಗಳು ಬಂದವು; ಒರಟುತನವೇ ಆಡಳಿತದ ಮುಖ್ಯಲಕ್ಷಣ ಎಂಬಂತಾಯಿತು. ಎಂತೆಂಥವರು ಅದಕ್ಕೆ ತಲೆಬಾಗಿದರು, ತಲೆಬಾಗಬೇಕಾಯಿತು ಎಂಬುದನ್ನು ಗಮನಿಸಿದರೆ ಮೈಜುಮ್ಮೆನ್ನುತ್ತದೆ. ಅದನ್ನೆಲ್ಲ ನ್ಯಾ. ಜೆ.ಸಿ. ಶಾ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಮಾಧ್ಯಮಕ್ಕೆ ಮೂಗುದಾರ
ವಾರ್ತಾ-ಪ್ರಸಾರ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನಿ ಇಂದಿರಾಗಾAಧಿಯವರ ಅಪೇಕ್ಷೆಯ ಮೇರೆಗೆ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆಯೊಂದು ಜರುಗಿತು. ಅದರಲ್ಲಿ ಆಗಿನ ಕಾನೂನು ಮಂತ್ರಿ ಎಚ್.ಆರ್. ಗೋಖಲೆ, ವಾರ್ತಾ-ಪ್ರಸಾರ ಸಚಿವ ವಿದ್ಯಾಚರಣ ಶುಕ್ಲ, ವಿದೇಶಾಂಗ ಖಾತೆಯ ಜಿ. ಪಾರ್ಥಸಾರಥಿ ಮೊದಲಾದವರು ಭಾಗವಹಿಸಿದ್ದರು. ‘ವರ್ತಮಾನ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ದೋಷಪೂರಿತ, ಕಿಡಿಗೇಡಿ ವರದಿಗಳು ಪ್ರಕಟವಾಗುತ್ತಿದ್ದು ಇನ್ನು ಮುಂದೆ ಅಂಥವು ಬರಬಾರದು; ಸುದ್ದಿಸಂಸ್ಥೆಗಳ ಪುನರ್ವ್ಯವಸ್ಥೆಯಾಗಬೇಕು; ಡಿಎವಿಪಿ ಮೂಲಕ ನೀಡುವ ಜಾಹೀರಾತಿನ ನೀತಿಯನ್ನು ಪುನರ್ವಿಮರ್ಶೆ ಮಾಡಬೇಕು; ಪತ್ರಿಕಾಮಂಡಳಿಯು (ಪ್ರೆಸ್ ಕೌನ್ಸಿಲ್) ಸಹಜ ಸಾವಿಗೆ ಗುರಿಯಾಗಬೇಕು ಮತ್ತು ಸರ್ಕಾರವು ಪತ್ರಿಕಾ ವರದಿಗಾರರಿಗೆ (ಬಾತ್ಮೀದಾರರಿಗೆ) ನೀಡುವ ಸವಲತ್ತುಗಳ ಮರುಪರಿಶೀಲನೆ ನಡೆಯಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ತುರ್ತುಪರಿಸ್ಥಿತಿಯನ್ನು ಹೇರುವುದಕ್ಕೆ ಕಾರಣವಾದ ಸನ್ನಿವೇಶದ ಬಗ್ಗೆ ವಿವರಿಸಿದ ಇಂದಿರಾಗಾಂಧಿ “ಪತ್ರಿಕೆಗಳು ಜನರನ್ನು ಪ್ರಚೋದಿಸಿ ಅಸಹನೀಯ ಪರಿಸ್ಥಿತಿಯನ್ನು ನಿರ್ಮಿಸಿದವು. ಚಳವಳಿ (ಹೋರಾಟ) ಇದ್ದುದು ಪತ್ರಿಕೆಗಳಲ್ಲಿ ಮಾತ್ರ. ಅವುಗಳ ಮೇಲೆ ನಿರ್ಬಂಧವನ್ನು ಹೇರುತ್ತಲೇ ಚಳವಳಿಯು ನಿಂತುಹೋಯಿತು” ಎಂದು ಹೇಳಿದರು.
ಚಿಂತನೆಯ ನಿಯಂತ್ರಣ
‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯ ಸಂಪಾದಕ ಬಿ.ಜಿ. ವರ್ಗೀಸ್ ಅವರು, ಶಾ ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ ದೆಹಲಿಯಲ್ಲಿರುವ ಪತ್ರಿಕೆಗಳ ಸಂಪಾದಕರ ಮೊದಲ ಸಭೆಯ ವಿವರ ನೀಡಿದರು. ಅಲ್ಲಿ ಮಾತನಾಡಿದ ವಿ.ಸಿ. ಶುಕ್ಲ ಅವರು “ಇನ್ನು ಮುಂದೆ ಪತ್ರಿಕೆ ಮತ್ತು ಸರ್ಕಾರದ ನಡುವೆ ಮುಖಾಮುಖಿಗೆ (ಜಗಳ) ಅವಕಾಶವಿಲ್ಲ; ಹಾಗೆಯೇ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗಳಿಗೆ ಕೂಡ ಅವಕಾಶವಿಲ್ಲ” ಎಂದು ಅಬ್ಬರಿಸಿದರಂತೆ. ವರ್ಗೀಸ್ ಅವರ ಪ್ರಕಾರ ಈ ಕ್ರಮಗಳಿಗೆ ಕಾರಣವೆಂದರೆ, ಜನರನ್ನು ಅಜ್ಞಾನದಲ್ಲಿಡುವುದು, ಅವರಲ್ಲಿ ಭಯ ಹುಟ್ಟಿಸುವುದು ಮತ್ತು ಆ ಮೂಲಕ ಎಲ್ಲ ಬಗೆಯ ವೈಯಕ್ತಿಕ, ರಾಜಕೀಯ, ಸಂಸದೀಯ ಮತ್ತು ನ್ಯಾಯಾಂಗ ಭಿನ್ನಾಭಿಪ್ರಾಯಗಳಿಗೆ ತಡೆಹಾಕುವುದು. ಸುದ್ದಿ ನಿರ್ವಹಣೆಯು ಅದರ ಮಾರ್ಗವಾದರೆ ಚಿಂತನೆಯನ್ನೇ ನಿಯಂತ್ರಿಸುವುದು ಅದರ ಗುರಿ.
ಮುಂಬಯಿಯ ‘ಹಿಮ್ಮತ್’ ಪತ್ರಿಕೆಯ ಸಂಪಾದಕ ರಾಜಮೋಹನ್ಗಾಂಧಿ ಅವರು ಶಾ ಆಯೋಗದ ಮುಂದೆ ಹೇಳಿಕೆ ನೀಡಿ, ಪತ್ರಿಕಾ ನಿರ್ಬಂಧದ (ಸೆನ್ಸಾರ್ಶಿಪ್) ಉದ್ದೇಶವು ಭಿನ್ನಾಭಿಪ್ರಾಯಗಳಿಗೆ ತಡೆ ಹಾಕುವುದಾಗಿತ್ತು; ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಗಳನ್ನು ಉದ್ದೇಶವೆಂದು ಹೇಳಿಕೊಂಡಿದ್ದರೂ ನಿಜವಾಗಿ ಅದರ ಉದ್ದೇಶ ಪ್ರಜಾಪ್ರಭುತ್ವ ಎನ್ನುವ ಪ್ರತಿಷ್ಠೆಯ ಜೊತೆಗೆ ಸರ್ವಾಧಿಕಾರದಲ್ಲಿ ಇರುವಂತಹ ಅಧಿಕಾರವನ್ನು ನೀಡುವುದಾಗಿತ್ತು – ಎಂದು ಹೇಳಿದರು. “ಈ ವೃತ್ತಿಯ ಎಲ್ಲರ ಸುತ್ತ ಭಯ ಆವರಿಸಿತ್ತು. ರಾಷ್ಟ್ರೀಯ ದೈನಿಕಗಳ ಸಂಪಾದಕರು ಕೂಡ ಮಾಧ್ಯಮದ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ವಿರುದ್ಧ ಮಾತನಾಡಲಿಲ್ಲ” ಎಂದವರು ‘ಸೆಮಿನಾರ್’ ಸಂಪಾದಕ ರೊಮೇಶ್ ಥಾವರ್.
ತುರ್ತುಪರಿಸ್ಥಿತಿಯ ನಿರ್ಬಂಧಗಳ ಕಾರಣದಿಂದಾಗಿ ಹಲವು ನಿಯತಕಾಲಿಕಗಳು ಪ್ರಕಟಣೆಯನ್ನು ನಿಲ್ಲಿಸಿದವು. ಏಕೆಂದರೆ ಭಯದಿಂದ ಹಲವು ಮುದ್ರಕರು ಪತ್ರಿಕೆಗಳ ಮುದ್ರಣದಿಂದ ಹಿಂದೆ ಸರಿದರು. ಮುದ್ರಕರು ಸಿಗದ ಕಾರಣ ‘ಒಪಿನಿಯನ್’ ಸಂಪಾದಕ ಎ.ಡಿ. ಗೋರ್ವಾಲಾ ಅವರು ತಮ್ಮ ಪತ್ರಿಕೆಯನ್ನು ಸೈಕ್ಲೋಸ್ಟೈಲ್ನಲ್ಲಿ ಮುದ್ರಿಸಿ ಓದುಗರಿಗೆ ತಲಪಿಸಿದರು. ಕೆಲವು ಸಂಪಾದಕರಿಗೆ ಮುದ್ರಣಾಲಯಗಳನ್ನು ಬದಲಿಸಬೇಕಾಯಿತು. ಕೆಲವು ಪ್ರೆಸ್ಗಳವರು ವಕೀಲರನ್ನು ಇರಿಸಿಕೊಂಡು ಅವರು ‘ಮುದ್ರಿಸಬಹುದು’ ಎಂದು ಒಪ್ಪಿದ ಅನಂತರವೇ ಸಂಬಂಧಪಟ್ಟ ಪತ್ರಿಕೆಯನ್ನು ಮುದ್ರಿಸುವ ಕ್ರಮವನ್ನು ಅನುಸರಿಸಿದರು.
ಪತ್ರಿಕಾ ಕಚೇರಿಗೆ ವಿದ್ಯುತ್ ಸ್ಥಗಿತ
ತುರ್ತುಪರಿಸ್ಥಿತಿಯ ವೇಳೆ ಮಾಧ್ಯಮಗಳು ಕೆಲಸ ಮಾಡಬೇಕಿದ್ದ ಪರಿಸ್ಥಿತಿಯನ್ನು ಶಾ ಆಯೋಗವು ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಗಮನಿಸಿದೆ. ಅವುಗಳೆಂದರೆ,
೧. ಪತ್ರಿಕಾ ನಿರ್ಬಂಧ (ಸೆನ್ಸಾರ್ಶಿಪ್)
೨. ಪತ್ರಿಕೆಗಳ ಮೇಲೆ ಇತರ ಒತ್ತಡಗಳು
೩. ಆಕಾಶವಾಣಿ, ದೂರದರ್ಶನಗಳು ಸೇರಿದಂತೆ ಸರ್ಕಾರಿ ಮಾಧ್ಯಮಗಳು ಕೆಲಸ ಮಾಡುತ್ತಿದ್ದ ರೀತಿ.
೧. ಪತ್ರಿಕಾ ನಿರ್ಬಂಧ
ತುರ್ತುಪರಿಸ್ಥಿತಿ ಸಂದರ್ಭದ ಪತ್ರಿಕೆ ನಿರ್ಬಂಧವು ಮುದ್ರಣಾಲಯಗಳ ವಿದ್ಯುತ್ ಪೂರೈಕೆ ಸ್ಥಗಿತದ ಕೆಟ್ಟ ರೀತಿಯಲ್ಲಿ ಆರಂಭವಾಯಿತು. ಜೂನ್ ೨೫, ೧೯೭೫ರಂದು ಇದ್ದಕ್ಕಿದ್ದಂತೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಪತ್ರಿಕೆಗಳನ್ನು ಹಾಗೆಯೇ ಬಿಡುವಂತಿರಲಿಲ್ಲ. ನಿಯಂತ್ರಣ ಅನಿವಾರ್ಯವಾಗಿತ್ತು. ಮರುದಿನ ಗೃಹಇಲಾಖೆಯ ಶಿಫಾರಸ್ಸಿನ ಮೇರೆಗೆ ಸೆನ್ಸಾರ್ಶಿಪ್ ಜಾರಿಗೊಳಿಸಿದರು; ಮತ್ತು ೨-೩ ದಿನಗಳಲ್ಲಿ ಪತ್ರಿಕಾನಿರ್ಬಂಧದ ವಿಧಿವಿಧಾನಗಳನ್ನು ರೂಪಿಸಿದರು. ಅದಕ್ಕೆ ಮುನ್ನ ಏನಾದರೂ ಮಾಡಬೇಕಿತ್ತು. ಆಗ ದೆಹಲಿಯಲ್ಲಿ ಕೈಗೊಂಡ ಕ್ರಮವೆಂದರೆ ಪತ್ರಿಕಾ ಕಚೇರಿ, ಮುದ್ರಣಾಲಯಗಳ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದ್ದು. ಜೂನ್ ೨೫ರಂದು ರಾತ್ರಿಯೇ ಅದು ಜಾರಿಯಾಯಿತು.
ವಿದ್ಯುತ್ ಪೂರೈಕೆಯನ್ನು ನಿಲ್ಲಿಸುವ ಬಗ್ಗೆ ದೆಹಲಿ ಉಪ ರಾಜ್ಯಪಾಲ (ಲೆಫ್ಟಿನೆಂಟ್ ಗವರ್ನರ್) ಕೃಶನ್ಚಂದ್ ಅವರು ದೆಹಲಿ ವಿದ್ಯುತ್ ಪೂರೈಕೆ ಸಂಸ್ಥೆಯ ಜನರಲ್ ಮ್ಯಾನೇಜರ್ ಅವರಿಗೆ ಮೌಖಿಕ ಆದೇಶ ನೀಡಿದ್ದರು. ಔಪಚಾರಿಕ ಆದೇಶದಲ್ಲಿ ಭದ್ರತೆಯ ಕಾರಣವನ್ನು ನೀಡಿದ್ದರು. ಪತ್ರಿಕಾ ಕಚೇರಿ, ಮುದ್ರಣಾಲಯಗಳು ಬೇರೆಬೇರೆ ಕಡೆಗಳಲ್ಲಿ ಇದ್ದ ಕಾರಣ ಏಕಕಾಲಕ್ಕೆ ವಿದ್ಯುತ್ ಕಡಿತ ಆಗಲಿಲ್ಲ. ಜೂನ್ ೨೫ರಂದು ವಿದ್ಯುತ್ ಕಡಿತ ಮಾಡದಿದ್ದ ಕಡೆ ೨೬ರಂದು ಕಡಿತ ಮಾಡಿದರು. ಎರಡು-ಮೂರು ದಿನಗಳಾಗುವಷ್ಟರಲ್ಲಿ ಪತ್ರಿಕಾ ನಿರ್ಬಂಧದ ವಿಧಿ-ವಿಧಾನಗಳು ಸಿದ್ಧವಾದ ಮೇಲೆ ವಿದ್ಯುತ್ ಪೂರೈಕೆ ತೊಂದರೆ ನಿವಾರಣೆಯಾಯಿತು. ಪ್ರಧಾನಿಯವರ ನಿವಾಸದಲ್ಲಿ ಹತ್ತಾರು ಸಭೆಗಳು ನಡೆಯುವಾಗಲೇ ವಿದ್ಯುತ್ ಕಡಿತದ ಬಗ್ಗೆ ಸೂಚನೆ ಬಂದಿತ್ತು. ಯಾರು ಹೇಳಿದ್ದೆಂದು ನೆನಪಾಗುವುದಿಲ್ಲವೆಂದು ಉಪರಾಜ್ಯಪಾಲರು ಆಯೋಗದ ಮುಂದೆ ಹೇಳಿದರು.
ನಿಯಮ ೪೮
ಭಾರತದ ರಕ್ಷಣೆ ಮತ್ತು ಆಂತರಿಕ ಭದ್ರತಾ ನಿಯಮಗಳ ನಿಯಮ ೪೮ರ ಪ್ರಕಾರ ಪತ್ರಿಕಾ ನಿರ್ಬಂಧವನ್ನು (ಸೆನ್ಸಾರ್ಶಿಪ್) ಹೇರಿದರು. ಅದರಂತೆ ಸರ್ಕಾರ ಈ ಕೆಳಗಿನ ವಿಷಯಗಳಲ್ಲಿ ಸೆನ್ಸಾರ್ಶಿಪ್ ಪ್ರಿ-ಸೆನ್ಸಾರ್ಶಿಪ್ (ಪತ್ರಿಕಾನಿರ್ಬಂಧ ಪೂರ್ವ) ಅವಕಾಶಗಳನ್ನು ಪಡೆದುಕೊಂಡಿತ್ತು. ಎ) ಭಾರತದ ರಕ್ಷಣೆ ಬಿ) ನಾಗರಿಕ ಸಂರಕ್ಷಣೆ (ಸಿವಿಲ್ ಡಿಫೆನ್ಸ್) ಸಿ) ಸಾರ್ವಜನಿಕ ಸುರಕ್ಷೆ ಡಿ) ಸಾರ್ವಜನಿಕ ವ್ಯವಸ್ಥೆಯ ನಿರ್ವಹಣೆ ಇ) ಸೇನಾ ಕಾರ್ಯಾಚರಣೆಯ ದಕ್ಷ ನಿರ್ವಹಣೆ.
ಯಾವೆಲ್ಲ ವಿಷಯಗಳು ಪ್ರಿ-ಸೆನ್ಸಾರ್ಶಿಪ್ಗೆ ಸೇರುತ್ತವೆಂದು ಸರ್ಕಾರ ಜೂನ್ ೨೬ರಂದು ಆದೇಶವನ್ನು ಹೊರಡಿಸಿತು. ಮುಂದೆ ಇನ್ನಷ್ಟು ವಿಷಯಗಳನ್ನು ಸೇರಿಸಿದರು.
ಸೆನ್ಸಾರ್ಶಿಪ್ ಮಾರ್ಗದರ್ಶಿ ಸೂತ್ರಗಳು: ಪ್ರಧಾನ ಸೆನ್ಸಾರ್ ಅಧಿಕಾರಿಯವರು ಹೊರಡಿಸಿದ ‘ಮಾರ್ಗದರ್ಶಿಸೂತ್ರ’ಗಳ ಪ್ರಕಾರ ಪತ್ರಿಕಾನಿರ್ಬಂಧವನ್ನು ಮಾಡಲಾಯಿತು. ಅವುಗಳನ್ನು ಅವರ ಕೆಳಗಿನ ಅಧಿಕಾರಿಗಳು ಮತ್ತು ಪತ್ರಿಕಾ ಕಚೇರಿಗಳಿಗೆ ತಿಳಿಸಲಾಯಿತು. ಈ ಮಾರ್ಗದರ್ಶಿಸೂತ್ರಗಳನ್ನು ಪ್ರಕಟಿಸಬಾರದೆನ್ನುವ ನಿಯಮವಿತ್ತು. ಮಾರ್ಗದರ್ಶಿಸೂತ್ರಗಳು ಜುಲೈ ೩ ಮತ್ತು ೪ರಂದು ಬಂದವು. ಅವುಗಳನ್ನು ಅವಸರದಲ್ಲಿ ಮಾಡಿದ್ದು, ಅದರಲ್ಲಿ ಅಸ್ಪಷ್ಟತೆ ಇತ್ತು. ಅದಕ್ಕಾಗಿ ವಾರ್ತಾಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರು ಮತ್ತೆ ಹೊಸದಾಗಿ ತಯಾರಿಸಿದ್ದು, ಮಂತ್ರಿ ವಿ.ಸಿ. ಶುಕ್ಲ ಅದಕ್ಕೆ ಮಂಜೂರಾತಿ ನೀಡಿದರು.
ನಿಜವೆಂದರೆ, ಈ ಮಾರ್ಗದರ್ಶಿಸೂತ್ರಗಳು (ಗೈಡ್ಲೈನ್ಸ್) ಭದ್ರತೆಗೆ ಸಂಬಂಧಿಸಿದ ನಿಯಮ ೪೮ನ್ನು ಮೀರಿದ್ದವು. ಅದರ ಪ್ರಕಾರ ಪತ್ರಿಕೆಗಳ ಸಂಪಾದಕೀಯದ ಜಾಗವನ್ನು ಖಾಲಿ ಬಿಡುವುದು ಅಥವಾ ಅಲ್ಲಿ ಮಹಾತ್ಮಾ ಗಾಂಧಿ, ಟಾಗೋರ್ ಮುಂತಾದವರ ಹೇಳಿಕೆಗಳನ್ನು ಹಾಕುವುದು ಇತ್ಯಾದಿಗೆ ಅವಕಾಶವಿಲ್ಲ. ಇವು ನಿಯಮ ೪೮ರ ವ್ಯಾಪ್ತಿಯ ಒಳಗಿವೆಯೇ ಇಲ್ಲವೆ ಎಂದು ಪರಿಶೀಲಿಸಲು ವಾರ್ತಾಇಲಾಖೆ ಹೋಗಲಿಲ್ಲ. ಅದಕ್ಕೆ ಕಾನೂನುಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳೋಣವೆಂದು ಹೇಳಿದರು.
ಕಾನೂನುಬಾಹಿರ
ಶಾ ಆಯೋಗದ ಮುಂದೆ ಸಾಕ್ಷ್ಯ ಹೇಳುವಾಗ ಶುಕ್ಲ ಅವರು “ಸಂಪಾದಕರಿಗೆ ಸಹಾಯವಾಗಲೆಂದು ಆ ಮಾರ್ಗದರ್ಶಿಸೂತ್ರಗಳನ್ನು ತಯಾರಿಸಿದ್ದೆವು. ಅವುಗಳಿಗೆ ಕಾನೂನಾತ್ಮಕ ಸಿಂಧುತ್ವ ಬೇಕು ಅನ್ನಿಸಲಿಲ್ಲ. ಆದ್ದರಿಂದ ಅವು ಕಾನೂನಿಗೆ ಅನುಗುಣವಾಗಿವೆಯೆ ಎಂದು ನೋಡಲಿಲ್ಲ. ಆದರೆ ಆ ಸೂತ್ರಗಳಿಗೆ ಅವಿಧೇಯತೆಯನ್ನು ತೋರಿಸಿದರೆ ಶಿಕ್ಷೆ ಆಗಿಯೇ ಆಗುತ್ತದೆ ಎಂಬಂತಿರಲಿಲ್ಲ” ಎಂದು ಸಮರ್ಥಿಸಿಕೊಂಡರು.
ಆದರೆ ಅದು ನಿಜವಲ್ಲ. ಗುಜರಾತ್ ಹೈಕೋರ್ಟಿನ ಮುಂದೆ ಬಂದ ‘ಭೂಮಿಪುತ್ರ’ ಪ್ರಕರಣದಲ್ಲಿ ಪ್ರಧಾನ ಸೆನ್ಸಾರ್ ಅಧಿಕಾರಿಯವರ ಪರವಾಗಿ ವಾದಿಸಿದ ಕೇಂದ್ರಸರ್ಕಾರದ ವಕೀಲರು ಈ ಮಾರ್ಗದರ್ಶಿಸೂತ್ರಗಳನ್ನು ಹಿಡಿದೇ ವಾದಿಸಿದರು. ‘ಭೂಮಿಪುತ್ರ’ ಪತ್ರಿಕೆಯ ಮೇಲೆ ಗೈಡ್ಲೈನ್ಸ್ ಪ್ರಕಾರ ನಿರ್ಬಂಧ ಹೇರಲಾಗಿದ್ದು, ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮಾರ್ಗದರ್ಶಿಸೂತ್ರಗಳು ಕಾನೂನುಬಾಹಿರ ಮತ್ತು ಅವು ಕೆಲಸ (ಕಾರ್ಯನಿರ್ವಹಣೆ) ಮಾಡುವುದಿಲ್ಲ ಎಂದು ಹೇಳಿತು. ಪ್ರಸ್ತುತ ನಿಯಮ ೪೮ನ್ನು ತಯಾರಿಸಿದ ಮೇಲೆ ಕೇಂದ್ರಸರ್ಕಾರ ಮತ್ತು ಪ್ರಧಾನ ಸೆನ್ಸಾರ್ ಅಧಿಕಾರಿಯವರು ನಿಯಮ ೪೮ನ್ನು ಮತ್ತೆ ಮತ್ತೆ ಉಲ್ಲಂಘಿಸಿದರೆಂದು ಹೈಕೋರ್ಟ್ ದಾಖಲಿಸಿತು. ಇನ್ನೊಂದು ಪ್ರಕರಣದಲ್ಲಿ ಮುಂಬಯಿ ಹೈಕೋರ್ಟ್, ಸೆನ್ಸಾರ್ಶಿಪ್ ಆದೇಶದ ಅಡಿಯಲ್ಲಿ ಪ್ರಧಾನ ಸೆನ್ಸಾರ್ ಅವರು ನಿರ್ದೇಶನ ನೀಡುವಂತಿಲ್ಲ; ಅದು ಸೆನ್ಸಾರ್ಶಿಪ್ ವ್ಯಾಪ್ತಿಯನ್ನು ಮೀರುತ್ತದೆ ಎಂದು ಹೇಳಿತು.
ಸಂಸತ್ ಕಲಾಪದ ವರದಿ
ತುರ್ತುಪರಿಸ್ಥಿತಿಯ ವೇಳೆ ಪಾರ್ಲಿಮೆಂಟ್ ಮತ್ತು ನ್ಯಾಯಾಲಯದ ಕಲಾಪಗಳನ್ನು ಕೂಡ ಸೆನ್ಸಾರ್ಶಿಪ್ಗೆ ಒಳಪಡಿಸಲಾಯಿತು. ಸಂಸತ್ ಮತ್ತು ಶಾಸನಸಭೆಗಳಿಗೆ ಸಂಬಂಧಿಸಿದ ಕೆಲವು ಸುದ್ದಿಗಳ ಪ್ರಕಟಣೆಗೆ ಕೂಡ ಪತ್ರಿಕಾನಿರ್ಬಂಧವು ಅನ್ವಯವಾಗುತ್ತದೆಂದು ಜುಲೈ ೧೩ರ (೧೯೭೫) ಮಾರ್ಗದರ್ಶಿಸೂತ್ರವು ಹೇಳಿತು: “ಸರ್ಕಾರದ ಪರವಾಗಿ ನೀಡಿದ ಹೇಳಿಕೆಗಳನ್ನು ಪೂರ್ತಿ ಅಥವಾ ಸಾರರೂಪದಲ್ಲಿ ಪ್ರಕಟಿಸಬಹುದು. ಆದರೆ ಸೆನ್ಸಾರ್ಶಿಪ್ ನಿಯಮವನ್ನು ಮೀರುವಂತಿಲ್ಲ. ಸದಸ್ಯರು ಒಂದು ವಿಷಯದ ಪರ ಅಥವಾ ವಿರುದ್ಧವಾಗಿ ಮಾತನಾಡಿದಾಗ ಅವರ ಹೆಸರು ಮತ್ತು ಅವರ ಪಕ್ಷವನ್ನು ಮಾತ್ರ ಹೇಳಬಹುದು. ವಿಷಯವನ್ನು ಮತಕ್ಕೆ ಹಾಕಿದಾಗ ಅದರ ಫಲಿತಾಂಶವನ್ನು ಪ್ರಕಟಿಸಬಹುದು” ಎಂದಿತ್ತು.
ಸಂಸತ್ ಕಲಾಪದ ವರದಿಗೆ ಸಂಬಂಧಿಸಿದ ಪೂರಕ ಸೂತ್ರಗಳು ಅದೇ ಜುಲೈ ೨೨ರಂದು ಬಂದವು. ಅದರಲ್ಲಿ,
೧. ಸದನದೊಳಗೆ ಸದಸ್ಯರು ಆಚೀಚೆ ಹೋದುದನ್ನು ವರದಿ ಮಾಡಬಾರದು. ಉದಾಹರಣೆಗೆ, ಆಳುವ ಪಕ್ಷದ ಸದಸ್ಯರು ಪ್ರತಿಪಕ್ಷದವರ ಬಳಿಗೆ ಹೋದರು ಅಥವಾ ಪ್ರತಿಪಕ್ಷದವರು ಆಳುವ ಸದಸ್ಯರ ಕಡೆಗೆ ಹೋದರು ಮುಂತಾಗಿ ವರದಿ ಮಾಡಬಾರದು.
೨. ಸದನದ ಅಧ್ಯಕ್ಷರು (ಸ್ಪೀಕರ್) ಅಥವಾ ಸಭಾಪತಿ ನೀಡಿದ ಪತ್ರಿಕ್ರಿಯೆಗಳನ್ನು (ಕಮೆಂಟ್) ವರದಿ ಮಾಡಬಾರದು.
೩. ಪ್ರತಿಪಕ್ಷದ ಯಾರು ಗೈರುಹಾಜರಾಗಿದ್ದಾರೆ ಎಂಬುದರ ವರದಿ ಸಲ್ಲದು.
೪. ಯಾವ ಸದಸ್ಯರು ಗೈರುಹಾಜರಾಗಿದ್ದಾರೆ ಎಂದು ಕೂಡ ಪತ್ರಿಕೆಗಳು ವರದಿ ಮಾಡುವಂತಿಲ್ಲ.
ಚಳಿಗಾಲದ ಅಧಿವೇಶನದ ಮುನ್ನ ಡಿಸೆಂಬರ್ ೧೩, ೧೯೭೫ರಂದು ಸಂಸದೀಯ ವ್ಯವಹಾರ ಸಚಿವ ಕೆ. ರಘುರಾಮಯ್ಯ ಅವರ ನಿವಾಸದಲ್ಲೊಂದು ಸಭೆ ಜರಗಿತು. ಅಲ್ಲಿ ಲೋಕಸಭೆ, ರಾಜ್ಯಸಭೆಗಳ ಅಧಿವೇಶನದ ಬಗೆಗಿನ ಎಲ್ಲ ಸುದ್ದಿ, ಕಾಮೆಂಟ್, ವದಂತಿಗಳನ್ನು ಪ್ರಿ-ಸೆನ್ಸಾರ್ಶಿಪ್ಗೆ ಒಳಪಡಿಸಬೇಕು. ಅಧಿವೇಶನಕ್ಕೆ ನಿಯಮ ೪೮ ಅನ್ವಯವಾಗುವ ಕಾರಣ ಪ್ರಕಟಣೆಗೆ ಮುನ್ನ ಸೆನ್ಸಾರ್ ಅಧಿಕಾರಿಯ ಒಪ್ಪಿಗೆ ಪಡೆಯಬೇಕು. ಜೊತೆಗೆ ಮಾಡು, ಮಾಡಬೇಡದ (ವಿಧಿ-ನಿಷೇಧ) ದೊಡ್ಡಪಟ್ಟಿಯೂ ಬಂತು. ಅದಲ್ಲದೆ ಸಂಸತ್ನಲ್ಲಿ ಫಲಕ(ಬೋರ್ಡ್)ವಿಲ್ಲದ ಒಂದು ಸೆನ್ಸಾರ್ರೂಮ್ ಬಂತು. ಸಂಸತ್ನಲ್ಲಿ ಸೆನ್ಸಾರ್ಶಿಪ್ ಬಗ್ಗೆ ನಡೆದ ಪ್ರಶ್ನೆ, ಉತ್ತರ, ಹೇಳಿಕೆ, ಚರ್ಚೆ ಬಗೆಗಿನ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು.
ಮರುವರ್ಷ ಮಾರ್ಚ್ ೭ರಂದು (೧೯೭೬) ಸಂಸತ್ನ ವಿಷಯದ ಪ್ರಕಟಣೆಗೆ ಸಂಬAಧಿಸಿ ಹೊಸ ಮಾರ್ಗದರ್ಶಿಸೂತ್ರಗಳು ಬಂದವು. ಪಾರ್ಲಿಮೆಂಟ್ ಜನತೆಯ ಧ್ವನಿ, ಸಾರ್ವಭೌಮ ಸಂಸ್ಥೆ ಎಂಬ ಘನತೆಗೆ ಕುಂದುಬರಬಾರದು. ಆದರೆ ಎಲ್ಲ ಕಲಾಪಗಳ ಸುದ್ದಿ ನಿಯಮ-೪೮ಕ್ಕೆ ಅಧೀನ ಎಂಬುದರಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವಲ್ಲಿ ಸರ್ಕಾರದ ದ್ವಂದ್ವ ನಿಲವಷ್ಟೇ ಪ್ರಕಟವಾಗಿತ್ತು.
ಕೋರ್ಟ್ ವರದಿಗೂ ಸೆನ್ಸಾರ್
ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವ ಬಗ್ಗೆ ಕೂಡ ಪತ್ರಿಕೆಗಳಿಗೆ ಗೈಡ್ಲೈನ್ಸ್ ನೀಡಲಾಯಿತು. ನ್ಯಾಯಾಲಯದ ಸುದ್ದಿ, ಕಾಮೆಂಟ್ಗಳನ್ನು ವರದಿ ಮಾಡುವಾಗ ಆಪರೇಟಿವ್ (ಕ್ರಿಯಾತ್ಮಕ) ವಿಭಾಗವನ್ನು ಮಾತ್ರ ವರದಿ ಮಾಡಬೇಕು; ಅದು ಸೂಕ್ತಭಾಷೆಯಲ್ಲಿರಬೇಕು. ಸೆನ್ಸಾರ್ಶಿಪ್ ಕಾನೂನನ್ನು ಮೀರುವ ಏನನ್ನೂ ಪ್ರಕಟಿಸಬಾರದು – ಎಂದು ಸೂಚಿಸಿದ್ದರು. “ಗೃಹಇಲಾಖೆಯು ಕಾನೂನುಇಲಾಖೆಯ ಜೊತೆ ಚರ್ಚಿಸಿ ನೀಡಿದ ಸೂಚನೆಗಳ ಮೇರೆಗೆ ಕೋರ್ಟ್ ಕಲಾಪಗಳನ್ನು ಸೆನ್ಸಾರ್ ಮಾಡಲಾಗುತ್ತಿತ್ತು” ಎಂದು ಪ್ರಧಾನ ಸೆನ್ಸಾರ್ ಅಧಿಕಾರಿ (ಚೀಫ್ ಸೆನ್ಸಾರ್) ಎಚ್.ಜೆ. ಡಿಪೆನ್ಹಾ ಆಯೋಗದ ಮುಂದೆ ಹೇಳಿದರು. ‘ಭೂಮಿಪುತ್ರ’ ಪ್ರಕರಣದಲ್ಲಿ ತೀರ್ಪನ್ನು ಸೆನ್ಸಾರ್ ಮಾಡಬಾರದೆಂದು ಹೈಕೋರ್ಟ್ ಆದೇಶ ನೀಡಿದ್ದರೂ ‘ನೀವು ಎಲ್ಲ ಪತ್ರಿಕೆಗಳಿಗೆ ತೀರ್ಪನ್ನು ಪ್ರಕಟಿಸಬಾರದೆಂದು ಸೂಚಿಸಿದಿರಲ್ಲವೇ?’ ಎಂದು ಕೇಳಿದಾಗ ಆ ಅಧಿಕಾರಿ “ಅದು ಸೆನ್ಸಾರ್ಶಿಪ್ ಆದೇಶವಲ್ಲ; ಕೇವಲ ‘ಜನಸಂಪರ್ಕ’ದ ಬಗೆಗಿನ ಸಲಹೆ” ಎಂದು ಜಾರಿಕೊಂಡರು.
ತುರ್ತುಪರಿಸ್ಥಿತಿಯ ವೇಳೆ ನ್ಯಾಯಾಲಯದ ತೀರ್ಪುಗಳ ಪ್ರಕಟಣೆಯನ್ನು ಸೆನ್ಸಾರ್ ಮಾಡಿದ್ದಷ್ಟೇ ಅಲ್ಲ; ನಿರ್ದಿಷ್ಟ ತೀರ್ಪುಗಳನ್ನು ಹೇಗೆ ಪ್ರಕಟಿಸಬೇಕೆಂದು ನಿರ್ದೇಶನ ಕೂಡ ನೀಡಲಾಯಿತು. ತಮ್ಮ ಚುನಾವಣೆ ಪ್ರಕರಣದಲ್ಲಿ ಇಂದಿರಾಗಾಂಧಿಯವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದಾಗ ಚೀಫ್ ಸೆನ್ಸಾರ್ ಅವರು ಪತ್ರಿಕೆಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು: ಪ್ರಕರಣದ ಯಾವ ಅಂಶಗಳಿಗೆ ಪ್ರಚಾರ ನೀಡಬೇಕು; ಯಾವ ಅಂಶಗಳನ್ನು ಹೇಳಲೇಬಾರದು ಇತ್ಯಾದಿ. ಪ್ರಕರಣದ ತೀರ್ಪು ಬಂದಾಗ ಎಲ್ಲ ವರ್ತಮಾನ ಪತ್ರಿಕೆಗಳಿಗೆ ಸೂಚನೆ ಹೋಯಿತು. ಇಂದಿರಾ ಅವರ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂಬುದನ್ನು ಒತ್ತು ನೀಡಿ ಪ್ರಕಟಿಸಬೇಕು; ಅದೇ ರೀತಿ ರಾಜನಾರಾಯಣರ ಪ್ರತಿ ಮೇಲ್ಮನವಿಯನ್ನು ವಜಾ ಮಾಡಲಾಗಿದೆ ಎಂಬುದಕ್ಕೆ ಕೂಡ ಒತ್ತು ನೀಡಬೇಕು – ಎಂದು ಸೂಚಿಸಲಾಗಿತ್ತು. ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ ವಿ.ಸಿ. ಶುಕ್ಲ ಅವರು “ಹೈಕೋರ್ಟ್ ತೀರ್ಪುಗಳ ಪ್ರಕಟಣೆಗೆ ಸಂಬಂಧಿಸಿದ ನಮ್ಮ ಸೂಚನೆಗಳೆಲ್ಲ ಕಾನೂನು ಪ್ರಕಾರವೇ ಇದ್ದವು. ಇಲಾಖೆಯ ಯಾವುದೇ ಅಧಿಕಾರಿ ಕಾನೂನು ಮೀರುವಂತಿರಲಿಲ್ಲ; ಅಥವಾ ಕೋರ್ಟ್ ನಿರ್ದೇಶನದ ವಿರುದ್ಧ ಹೋಗುವಂತಿರಲಿಲ್ಲ” ಎಂದು ಸಮರ್ಥಿಸಿಕೊಳ್ಳದೆ ಬಿಡಲಿಲ್ಲ.
ಅಧಿಕಾರ ಹಸ್ತಾಂತರ
ಪತ್ರಿಕಾನಿರ್ಬಂಧವನ್ನು ಹೇರಿದ ಆರಂಭದಲ್ಲಿ ನಿಯಮ-೪೮ರ ಅಧಿಕಾರವು ಗೃಹಇಲಾಖೆಯ ಬಳಿ ಇತ್ತು. ಸಾಕಷ್ಟು ಸಮಯಾವಕಾಶ ಮತ್ತು ವಿಷಯ ಇಲ್ಲದಿದ್ದರೂ ಪ್ರಿ-ಸೆನ್ಸಾರ್ಶಿಪ್ ಆದೇಶ ಹೊರಡಿಸಿ ಎಂದು ವಾರ್ತಾ-ಪ್ರಸಾರ ಇಲಾಖೆಯು ಕೇಳುತ್ತಿದ್ದ ಬಗ್ಗೆ ಗೃಹಇಲಾಖೆಗೆ ಬೇಸರವಿತ್ತು. ‘ಸೆಮಿನಾರ್’ ಪತ್ರಿಕೆಗೆ ಪ್ರಿ-ಸೆನ್ಸಾರ್ಶಿಪ್ ವಿಧಿಸುವಾಗ ವಾರ್ತಾಇಲಾಖೆ ಸಂಬಂಧಿತ ಆಯ್ದಭಾಗವನ್ನು ಕೊಡಲಿಲ್ಲ; ಮತ್ತು ಪರಿಶೀಲನೆಗೆ ಸಮಯಾವಕಾಶವನ್ನೂ ಕೊಡದೆ ಆದೇಶವು ಕೂಡ ಬರಬೇಕೆಂದು ಒತ್ತಾಯಿಸಿತು. ಜುಲೈ ೧೫, ೧೯೭೬ರಂದು ನಡೆದ ಸಭೆಯಲ್ಲಿ ವಿ.ಸಿ. ಶುಕ್ಲ ಅವರು ಗೃಹಇಲಾಖೆ ಜಂಟಿ ಕಾರ್ಯದರ್ಶಿಯವರಿಗೆ “ನನ್ನ ಮಟ್ಟದಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಒಂದು ನಿರ್ಧಾರವನ್ನು ಕೈಗೊಂಡ ಬಳಿಕ ಗೃಹಇಲಾಖೆಯಲ್ಲಿ ಮತ್ತೆ ಅದರ ಪರಿಶೀಲನೆ ನಡೆಯುವುದು ಸರಿಯಲ್ಲ” ಎಂದು ಹೇಳಿದರು.
ಆಗ ಗೃಹಸಚಿವರ ಮಟ್ಟದಲ್ಲಿ ಒಂದು ನಿರ್ಧಾರವನ್ನು ಕೈಗೊಳ್ಳಲಾಯಿತು. ವಾರ್ತಾಇಲಾಖೆಯು ಅವಶ್ಯವಾದ ಪೂರ್ತಿ ವಿಷಯಗಳನ್ನು (ಮೆಟೀರಿಯಲ್) ಒದಗಿಸಬೇಕು; ಆಗ ಗೃಹಇಲಾಖೆ ಶೀಘ್ರ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ತಿಳಿಸಲಾಯಿತು.
ಆದರೆ ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಮುಂದೆ ಆಗಸ್ಟ್ ೨೧ರಂದು ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಮೇಲೆ ಪ್ರಿ-ಸೆನ್ಸಾರ್ಶಿಪ್ ವಿಧಿಸಬೇಕೆಂದು ಕೋರಿದ ವಾರ್ತಾಇಲಾಖೆ ಕಾರಣ ತಿಳಿಸಲಿಲ್ಲ. ತುಂಬ ಒತ್ತಾಯ ಮಾಡಿದ ಅನಂತರ ಗೃಹಇಲಾಖೆಯು ಫೋನ್ ಮೂಲಕ ಪ್ರಿ-ಸೆನ್ಸಾರ್ಶಿಪ್ ಬಗ್ಗೆ ಆದೇಶ ನೀಡಿತು. ವಿವರಗಳನ್ನು ಮತ್ತು ಅಗತ್ಯ ವಿಷಯಗಳನ್ನು ನೀಡಲು ವಾರ್ತಾಇಲಾಖೆಗೆ ಇಷ್ಟವಿಲ್ಲ ಎಂಬುದು ಇದರಿಂದ ಖಚಿತವಾಯಿತು. ಪರಿಣಾಮವಾಗಿ ಈ ನಿಟ್ಟಿನಲ್ಲಿ ನಿಯಮ-೪೮ರ ಎಲ್ಲ ಅಧಿಕಾರಗಳನ್ನು ಗೃಹಇಲಾಖೆ ವಾರ್ತಾಇಲಾಖೆಗೆ ಬಿಟ್ಟುಕೊಟ್ಟಿತು.
ಲಾಗ್ಬುಕ್ನಲ್ಲಿ ಎಂಟ್ರಿ
೧೯೭೫ರ ಜುಲೈನಲ್ಲಿ ನೀಡಿದ ಒಂದು ಮಾರ್ಗದರ್ಶಿಸೂತ್ರದಲ್ಲಿ ಪ್ರಧಾನ ಸೆನ್ಸಾರ್ ಅಧಿಕಾರಿ ಮೌಖಿಕ ಆದೇಶಗಳು ಸಲ್ಲದೆಂದು ಹೇಳಿದ್ದರು. “ಆದರೆ ವರ್ತಮಾನ ಪತ್ರಿಕೆಗಳು ಇಡೀ ದಿನ ಕೆಲಸ ಮಾಡುತ್ತವೆ. ಆದ್ದರಿಂದ ಆದೇಶಗಳು ಲಿಖಿತವಾಗಿಯೆ ಬರಬೇಕೆಂದರೆ ಸೆನ್ಸಾರ್ಶಿಪ್ನ ಉದ್ದೇಶವೇ ವಿಫಲವಾದೀತು. ಆದ್ದರಿಂದ ಮೌಖಿಕ ಆದೇಶ ಅನಿವಾರ್ಯ. ವಾರ್ತಾಇಲಾಖೆಯ ಹಲವು ಅಧಿಕಾರಿಗಳು ನನಗೆ ಮೌಖಿಕ ಆದೇಶವನ್ನೇ ನೀಡುತ್ತಿದ್ದರು. ಇತರ ಇಲಾಖೆಗಳಲ್ಲೂ ಹಾಗೆಯೆ ನಡೆಯುತ್ತಿತ್ತು. ತೀರಾ ಅಪರೂಪವಾಗಿ ಲಿಖಿತ ಆದೇಶಗಳು ಬರುತ್ತಿದ್ದವು. ಅದಕ್ಕಾಗಿ ಸೆನ್ಸಾರ್ ಲಾಗ್ಬುಕ್ನಲ್ಲಿ ಎಂಟ್ರಿ ಮಾಡುತ್ತಿದ್ದೆವು” ಎಂದು ಅವರೇ ತಿಳಿಸಿದ್ದರು. ಕೆಲವು ಎಂಟ್ರಿಗಳು ಹೀಗಿವೆ:
೧. ಸಂಸತ್ ಕಲಾಪ ಅಥವಾ ಸುಪ್ರೀಂಕೋರ್ಟ್ನಲ್ಲಿ ಪ್ರಧಾನಿ ಸಲ್ಲಿಸಿದ ಮೇಲ್ಮನವಿ ಬಗ್ಗೆ ಯಾವುದೇ ವರದಿಗೆ ಅನುಮತಿ ನೀಡಲಾಗಿಲ್ಲ. (ಜುಲೈ ೧೪, ೧೯೭೪)
೨. ಪ್ರಧಾನಿಯವರ ಮೇಲ್ಮನವಿ ವಿಚಾರಣೆಯ ದಿನಾಂಕವನ್ನು ಮಾತ್ರ ವರದಿ ಮಾಡಬಹುದು. ನ್ಯಾಯವಾದಿಗಳ ಹೆಸರನ್ನು ಪ್ರಕಟಿಸಬಹುದು; ಆದರೆ ನ್ಯಾಯಾಧೀಶರ ಹೆಸರು ಬೇಡ. (ಜುಲೈ ೨೨, ೧೯೭೫)
೩. ಅಹಮದಾಬಾದ್ನಲ್ಲಿ ಆಳುವ ಪಕ್ಷ ಜನತಾ ಫ್ರಂಟ್ ಬಂದ್ ನಡೆಸಿತು. ಬಂದ್ ವಿಫಲವಾಯಿತೆಂದು ವರದಿಗಳು ಬಂದರೆ ಅದಕ್ಕೆ ಅನುಮತಿ ನೀಡಬಹುದು. ಆದರೆ ಬಂದ್ನ ವಿವರಗಳು ಸೆನ್ಸಾರ್ ಸೂಚನೆಗಳಿಗೆ ವಿರುದ್ಧ ಆಗಿರಬಾರದು.
೪. ಗುಜರಾತ್ ಮುಖ್ಯಮಂತ್ರಿಯವರು ಕೇಂದ್ರಸರ್ಕಾರವು ಕೈಗೊಂಡ ಕ್ರಮವನ್ನು ಟೀಕಿಸಿ ಯಾವುದೇ ಹೇಳಿಕೆ ನೀಡಿದರೆ ಅದನ್ನು ಪ್ರಕಟಿಸುವುದು ಬೇಡ; ಅವರ ಹೇಳಿಕೆ ಸೌಮ್ಯವಾಗಿದ್ದರೆ ಪ್ರಕಟಿಸಬಹುದು. ಯಾವುದೇ ಸಂಶಯವಿದ್ದರೆ ಹೆಚ್ಚುವರಿ ಪ್ರಧಾನ ಸೆನ್ಸಾರ್ ಅವರಿಗೆ ಫೋನ್ ಮಾಡಬಹುದು. (ಜುಲೈ ೨೬, ೧೯೭೫)
೫. ನೌಕರರ ಬೋನಸ್ ಬಗೆಗಿನ ಯಾವುದೇ ವರದಿ, ಪ್ರತಿಕ್ರಿಯೆ, ಸಂಪಾದಕೀಯ, ಲೇಖನ, ಹೇಳಿಕೆ ಅಥವಾ ಸುದ್ದಿಗಳಿಗೆ ಅವಕಾಶ ಇಲ್ಲ. (ಸೆಪ್ಟೆಂಬರ್ ೪, ೧೯೭೫)
೬. ‘ಮೀಸಾ’ ಬಂಧಿತರಿಗೆ ಹೈಕೋರ್ಟ್ ಮೆಟ್ಟಿಲೇರುವ ಅಧಿಕಾರ ಇದೆ ಎನ್ನುವ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಕಟಿಸುವುದು ಬೇಡ; ಆ ವರದಿಯನ್ನು ಹರಿದುಹಾಕಿ. (ಅಕ್ಟೋಬರ್ ೩೦, ೧೯೭೫)
೭. ಜೆ.ಪಿ. ಅವರ ಬಿಡುಗಡೆ ಬಗೆಗಿನ ವರದಿಗೆ ಮಹತ್ತ್ವ ನೀಡುವುದು (ಫೋಟೋ ಸಹಿತ ಪ್ರಕಟಣೆ ಇತ್ಯಾದಿ) ಬೇಡ. (ನವೆಂಬರ್ ೧೩, ೧೯೭೫)
೮. ಗುಜರಾತ್ನ ಜನತಾರಂಗ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕೆಲವು ಶಾಸಕರು ಹಿಂತೆಗೆದುಕೊಳ್ಳಬಹುದು. ಅವರ ಹೇಳಿಕೆಗಳನ್ನು ಪ್ರಕಟಿಸಲೇಬೇಕು. ಆ ಸರ್ಕಾರಕ್ಕೆ ಬೆಂಬಲ ನೀಡುವವರ ಹೇಳಿಕೆಗಳನ್ನು ಹರಿದುಹಾಕಿ. (ಫೆಬ್ರುವರಿ ೧೧, ೧೯೭೬)
೯. ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸಂಬAಧಿಸಿದ ಯಾವುದೇ ಉಲ್ಲೇಖ ಅಥವಾ ಪ್ರತಿಕ್ರಿಯೆಗಳಿಗೆ ಅನುಮತಿ ಬೇಡ. (ಜೂನ್ ೧, ೧೯೭೬)
ಹೀಗೆ ಸರ್ಕಾರಕ್ಕೆ ಪರವಲ್ಲದ ಸುದ್ದಿಗಳನ್ನು ಮುಚ್ಚಿಹಾಕಲು ಪತ್ರಿಕಾನಿರ್ಬಂಧವನ್ನು ಧಾರಾಳವಾಗಿ ಬಳಸಲಾಯಿತು. ಸರ್ಕಾರಕ್ಕೆ ಪರವಾದುದನ್ನು ಎತ್ತಿ ಹೇಳಿದರು. ಕಾಂಗ್ರೆಸ್ ಬೆಂಬಲಿಗರ ಸುದ್ದಿಗಳಿಗೆ ಮಹತ್ತ್ವ ನೀಡಿದರು. ಸಚಿವರ ಸೂಚನೆಯ ಮೇರೆಗೇ ಹಾಗೆ ಮಾಡಲಾಗುತ್ತಿತ್ತು. ಕಾಂಗ್ರೆಸ್ನ ಒಳಜಗಳಗಳ ಸುದ್ದಿಗಳನ್ನು ಸೂಚನೆಯ ಮೇರೆಗೆ ತಡೆಯಲಾಗುತ್ತಿತ್ತು.
ಸಂಜಯಗಾಂಧಿ ಟೀಕೆಗೆ ಶಿಕ್ಷೆ
ಇಂದಿರಾಗಾಂಧಿಯವರ ಪುತ್ರ ಸಂಜಯಗಾಂಧಿ ಅವರು ತುರ್ತುಪರಿಸ್ಥಿತಿ ಕಾಲದ ಅನೇಕ ಅತಿರೇಕಗಳ ಹಿಂದೆ ಇದ್ದರು. ‘ಮೈನ್ಸ್ಟ್ರೀಮ್’ ಪತ್ರಿಕೆಯ ಮೇಲೆ ಪ್ರಿ-ಸೆನ್ಸಾರ್ಶಿಪ್ ಹೇರಿದ್ದಕ್ಕೆ ಅದರ ಸಂಪಾದಕ ನಿಖಿಲ್ ಚಕ್ರವರ್ತಿ ಅವರು ಸಂಜಯಗಾಂಧಿ ಅವರನ್ನು ಟೀಕಿಸಿದ್ದೇ ಕಾರಣವಾಗಿತ್ತು. ವಿ.ಸಿ. ಶುಕ್ಲ ಅವರು ಚಕ್ರವರ್ತಿ ಅವರಿಗೆ ಫೋನ್ ಮಾಡಿ “ಸಂಜಯಗಾಂಧಿ ಅವರು ರಾಷ್ಟ್ರೀಯ ನಾಯಕರಾಗಿದ್ದು ಅವರನ್ನು ಟೀಕಿಸುವ ಲೇಖನವನ್ನು ಪ್ರಕಟಿಸಬಾರದು; ಮುಂದೆ ಟೀಕಿಸುವುದಿಲ್ಲವೆಂದು ಭರವಸೆ ನೀಡಬೇಕು” ಎಂದು ಒತ್ತಡ ತಂದರು. ‘ಭರವಸೆ ಕೊಡುವುದಿಲ್ಲ’ ಎಂದಾಗ ಪತ್ರಿಕೆಯನ್ನು ಪ್ರಿ-ಸೆನ್ಸಾರ್ಶಿಪ್ಗೆ ಒಳಪಡಿಸಿದರು. ಕೇಂದ್ರದಲ್ಲಿದ್ದ ಒಂದು ಕೂಟಕ್ಕೆ ಇಷ್ಟವಿಲ್ಲದೆ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸಿದ ಸಂಬಂಧ ಸಂಜಯಗಾಂಧಿಯನ್ನು ಟೀಕಿಸಲಾಗಿತ್ತು. ಆಯೋಗವು ಆ ಬಗ್ಗೆ ಕೇಳಿದಾಗ ವಿ.ಸಿ. ಶುಕ್ಲ “ಅವರ ಒಳ್ಳೆಯದಕ್ಕಾಗಿ ನಾನು ಹಾಗೆ ಹೇಳಿದೆ. ಮುಂದೆ ನಿಖಿಲ್ ಚಕ್ರವರ್ತಿ ಮತ್ತವರ ಪತ್ರಿಕೆಯ ವಿರುದ್ಧ ನಡೆಸಲಾದ ಕ್ರಮಕ್ಕೂ ನನ್ನ ಮಾತು ಕೇಳದೆ ಇದ್ದುದಕ್ಕೂ ಸಂಬAಧವಿಲ್ಲ” ಎಂದು ಹೇಳಲು ಮರೆಯಲಿಲ್ಲ.
ಸೆನ್ಸಾರ್ ಅಧಿಕಾರಿಗಳು ಬೇಕಾಬಿಟ್ಟಿ ಮತ್ತು ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆಂದು ಹಲವು ಸಂಪಾದಕರು ಶಾ ಆಯೋಗದ ಮುಂದೆ ಸಾಕ್ಷ್ಯ ನೀಡಿದರು. ದೇಶದ ರಕ್ಷಣೆ ಅಥವಾ ಆಂತರಿಕ ಭದ್ರತೆಗೆ ಏನೂ ಸಂಬಂಧವಿಲ್ಲದಿದ್ದರೂ ತಮ್ಮ ಪತ್ರಿಕೆಯ ಬಹಳಷ್ಟು ಹಾಸ್ಯಲೇಖನ, ವ್ಯಂಗ್ಯಚಿತ್ರ, ವ್ಯಂಗ್ಯಲೇಖನಗಳನ್ನೂ ಅಧಿಕಾರಿಗಳು ತಡೆಹಿಡಿದರೆಂದು ‘ತುಘಲಕ್’ ಪತ್ರಿಕೆಯ ಸಂಪಾದಕ ಚೋ. ರಾಮಸ್ವಾಮಿ ಆರೋಪಿಸಿದರು. ಮೊರಾರ್ಜಿ ದೇಸಾಯಿ ಅವರ ಜನ್ಮದಿನದಂದು ಪ್ರಕಟಿಸಬಯಸಿದ ಶುಭಾಶಯಗಳನ್ನು ಕೂಡ ಪೂರ್ತಿ ಸೆನ್ಸಾರ್ ಮಾಡಿದರು. ಇಂದಿರಾಗಾಂಧಿಯವರ ಹಿಂದಿನ ಕೆಲವು ಹೇಳಿಕೆಗಳನ್ನು ಕೂಡ ಪ್ರಕಟಿಸಬಾರದೆಂದರು. ಕೆಲವು ಸಲ ಇಡೀ ಪತ್ರಿಕೆಯನ್ನು ಪ್ರಿ-ಸೆನ್ಸಾರ್ಶಿಪ್ಗೆ ಒಳಪಡಿಸಿದರು.
‘ಒಪಿನಿಯನ್’ ಪತ್ರಿಕೆಯಲ್ಲಿ ಭಗವದ್ಗೀತೆಯ ಕೊಟೇಶನ್ಗಳನ್ನು ಪ್ರಕಟಿಸಲು ಮುಂದಾದಾಗ ಅದನ್ನು ಪೂರ್ತಿ ಸೆನ್ಸಾರ್ ಮಾಡಲಾಯಿತು. ಲೋಕಸಭೆಯಲ್ಲಿ ಮಾಡಿದ ಭಾಷಣಗಳು, ಸ್ಪೀಕರ್ ಅನುಮತಿಯ ಮೇರೆಗೆ ಪುಸ್ತಕರೂಪದಲ್ಲಿ ಪ್ರಕಟವಾದುದನ್ನು ಪ್ರಕಟಿಸುವುದಕ್ಕೂ ಸೆನ್ಸಾರ್ನವರು ಒಪ್ಪಲಿಲ್ಲವೆಂದು ‘ಒಪಿನಿಯನ್’ ಸಂಪಾದಕರು ದೂರಿದರು. ಸೆನ್ಸಾರ್ಶಿಪ್ ಬಂದಾಗ ತನಗೆ ಹೊಳೆದದ್ದೆಂದರೆ ‘ಒಪಿನಿಯನ್’ನಂತಹ ಪತ್ರಿಕೆ ಈಗ ಇರಿಸಿಕೊಳ್ಳಬಹುದಾದ ಏಕೈಕ ಗುರಿ ಎಂದರೆ ಸ್ವಾತಂತ್ರö್ಯಕ್ಕಾಗಿ ಹೋರಾಡುವುದು ಎನ್ನುವುದು – ಎಂದು ಸಂಪಾದಕ ಎ.ಡಿ. ಗೋರ್ವಾಲಾ ಹೇಳಿದರು. ತುರ್ತುಪರಿಸ್ಥಿತಿ ಹೇರಿಕೆ ಅನಂತರದ ಮೊದಲ ಸಂಚಿಕೆಯಲ್ಲಿ ಅವರು ಸ್ವಾತಂತ್ರ್ಯದ ಬಗ್ಗೆ ಯರ್ಯಾರು ಏನೇನು ಹೇಳಿದ್ದರೋ ಎಲ್ಲವನ್ನೂ ಹಾಕಿದ್ದರು. ಆದರೆ ಸೆನ್ಸಾರ್ ಅಧಿಕಾರಿಗಳು ಅದನ್ನೆಲ್ಲ ಹೊಡೆದುಹಾಕಿದರು; ಲಿಬರ್ಟಿ, ಫ್ರೀಡಂ, ಡೆಮಾಕ್ರಸಿ ಮುಂತಾದ ಪದಗಳಿಗೆ ಕೂಡ ಅವಕಾಶ ಕೊಡಲಿಲ್ಲ.
ತನ್ನ ಅನುಭವ ಕೂಡ ಅದೇ ಎಂದವರು ‘ಸಾಧನಾ’ದ ಸಂಪಾದಕ ಎಸ್.ಎಂ. ಜೋಶಿ ಅವರು. ಗಾಂಧಿ ಮತ್ತಿತರ ಗಣ್ಯರು, ನಾಯಕರ ಹೇಳಿಕೆಗಳನ್ನು ಕೂಡ ಪ್ರಕಟಿಸುವುದಕ್ಕೆ ಬಿಡಲಿಲ್ಲ ಎಂದ ಅವರು, ಎಲ್ಲರ ಬಾಯಿ ಮುಚ್ಚಿಸುವುದೇ ಸರ್ಕಾರದ ಉದ್ದೇಶವಾಗಿತ್ತು; ಪತ್ರಿಕಾನಿರ್ಬಂಧದ ವಿಷಯದಲ್ಲಿ ಕಾನೂನೆಂಬುದೇ ಇರಲಿಲ್ಲ – ಎಂದು ಆಯೋಗಕ್ಕೆ ತಿಳಿಸಿದರು. ಆ ಕುರಿತು ಸ್ಪಷ್ಟನೆ ಕೇಳಿದಾಗ ಮಂತ್ರಿ ಶುಕ್ಲ “ಆ ಕೊಟೇಶನ್ಗಳು ಬ್ರಿಟಿಷರ ಆಳ್ವಿಕೆಯ ವಿರುದ್ಧವಿದ್ದು ಇಂದಿನ ಪರಿಸ್ಥಿತಿಗೆ ಅದು ಹೊಂದುವುದಿಲ್ಲ (ಅಪ್ರಯೋಜಕ); ಮತ್ತು ತಪ್ಪು ಅಭಿಪ್ರಾಯ ಉಂಟುಮಾಡುತ್ತವೆ; ಅದಕ್ಕಾಗಿ ಬೇಡ ಎಂದೆವು” ಎಂದು ಸಮರ್ಥನೆ ನೀಡಿದರು.
ಖಾಲಿ ಜಾಗ ಸಲ್ಲದು
ತುರ್ತುಪರಿಸ್ಥಿತಿಯನ್ನು ಹೇರಿದ ಕರಾಳದಿನ (ಮರುದಿನದ ಸಂಚಿಕೆ) ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯದ ಜಾಗವನ್ನು ಖಾಲಿಬಿಟ್ಟವು. ಅದು ತಾನಾಗಿಯೇ ಒಂದು ಪ್ರತಿಭಟನೆಯಾಗಿತ್ತು. ಆದ್ದರಿಂದ ಮುಂದೆ ಸೆನ್ಸಾರ್ನವರು ಖಾಲಿ ಜಾಗವನ್ನು ಬಿಡಲು ಒಪ್ಪಲಿಲ್ಲ. “ಜಾಗ ಖಾಲಿ ಬಿಟ್ಟರೆ ಅದು ಪತ್ರಿಭಟನೆಯಾಗುತ್ತದೆ. ಸರ್ಕಾರದ ನೀತಿಯ ಪ್ರಕಾರ ಈ ವಿಷಯದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಅದು ಕಾನೂನುಬಾಹಿರವಾಗುತ್ತದೆ. ಆದ್ದರಿಂದ ಖಾಲಿ ಬಿಡಬಾರದು” ಎಂದು ಮಂತ್ರಿ ಶುಕ್ಲ ಸ್ಪಷ್ಟೀಕರಣವನ್ನು ನೀಡಿದರು. ದೇಶದಲ್ಲಿ ಪತ್ರಿಕಾನಿರ್ಬಂಧ (ಸೆನ್ಸಾರ್ಶಿಪ್) ಇಲ್ಲ ಎನ್ನುವ ಭಾವನೆಯನ್ನು ಉಂಟುಮಾಡುವ ಉದ್ದೇಶದಿಂದ ಕೂಡ ಸರ್ಕಾರ ಸಂಪಾದಕೀಯದ ಜಾಗವನ್ನು ಖಾಲಿ ಬಿಡಬಾರದೆಂದು ಕಟ್ಟುನಿಟ್ಟು ಮಾಡಿತೆಂದು ರಾಜಮೋಹನಗಾಂಧಿ ಮತ್ತು ನಿಖಿಲ್ ಚಕ್ರವರ್ತಿ ಹೇಳಿದ್ದಾರೆ. ಸರ್ಕಾರಕ್ಕೆ ಅನುಕೂಲಕರವಾದ ಲೇಖನಗಳಿಗೆ ಜಾಗ ಬೇಕಲ್ಲವೆ? ಆ ಉದ್ದೇಶದಿಂದ ಕೂಡ ಜಾಗ ಖಾಲಿ ಬಿಡಬಾರದೆಂದು ಸೂಚಿಸಿದರೆಂದು ವಿಶ್ಲೇಷಿಸಲಾಗಿದೆ.
* * *
ಚುನಾವಣೆ ಘೋಷಣೆ
ಯಾರ ಸಲಹೆಯೋ ಅಥವಾ ಚುನಾವಣೆ ನಡೆಸಿ ಗೆದ್ದು ಬಂದು ಸರ್ವಾಧಿಕಾರಕ್ಕೆ ಅಧಿಕೃತ ಮುದ್ರೆಯನ್ನು ಪಡೆದುಕೊಳ್ಳುವ ಹುನ್ನಾರವೋ, ಅಂತೂ ಜನವರಿ ೧೮, ೧೯೭೭ರಂದು ಇಂದಿರಾಗಾಂಧಿ ಚುನಾವಣೆಯನ್ನು ಘೋಷಿಸಿದರು. ಅದರೊಂದಿಗೆ ಪತ್ರಿಕಾನಿರ್ಬಂಧವನ್ನು ಸಡಿಲಗೊಳಿಸಿ, ಅದಕ್ಕೆ ಸಂಬಂಧಿಸಿದ ಶಾಸನವನ್ನು ಅಮಾನತಿನಲ್ಲಿಟ್ಟರು. ಆದರೂ ಆಗ ಪತ್ರಿಕೆಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವ ಒಂದು ಬಗೆಯ ಪ್ರಯತ್ನ ಮುಂದುವರಿದೇ ಇತ್ತು. ಸರ್ಕಾರ ಅನೌಪಚಾರಿಕವಾಗಿ ಆಫ್ ದ ರೆಕಾರ್ಡ್ (ಪ್ರಕಟಣೆಯ ಆಚೆಗೆ) ಮುಸುಕಿನ ಬೆದರಿಕೆಯನ್ನು ಹಾಕುತ್ತಿತ್ತು. ಸರ್ಕಾರದ ನಿರ್ದೇಶನವನ್ನು ಪಾಲಿಸದಿದ್ದರೆ ಚುನಾವಣೆ ಫಲಿತಾಂಶದ ಅನಂತರ ಏನಾದೀತೆನ್ನುವ ಎಚ್ಚರ ಇರಲಿ; ಅದಕ್ಕಾಗಿ ನಿರ್ದಿಷ್ಟ ಲೇಖನಗಳನ್ನು ಪ್ರಕಟಿಸಿ; ಪ್ರಚಾರಕ್ಕೆ ಸಹಕರಿಸಿ ಎಂದು ತೆರೆಮರೆಯಿಂದ ಹೇಳುತ್ತಿದ್ದರು.
ಪತ್ರಿಕೆಗಳ ಕೆಲಸದ ಮೇಲೆ ನಿಗಾ ಇಡುವ ಸಲುವಾಗಿ ಮೇಲ್ತನಿಖೆ ಸಮಿತಿಯೊಂದನ್ನು ರಚಿಸಬೇಕೆಂದು ‘ಟೈಮ್ಸ್ ಆಫ್ ಇಂಡಿಯ’ ಸಂಪಾದಕ ಗಿರಿಲಾಲ್ಜೈನ್ ಆಯೋಗದ ಮುಂದೆ ಹೇಳಿದರು. ಅದಕ್ಕಾಗಿ ಸಚಿವಾಲಯದ ಅಧಿಕಾರಿಗಳು ‘ನೀತಿಸಂಹಿತೆ’ಯನ್ನು ಕೂಡ ತಯಾರಿಸಿದ್ದರು. ಆದರೆ ದೊಡ್ಡ ಪತ್ರಕರ್ತರನ್ನು ಹೊರಗಿಟ್ಟೇ ಅದನ್ನು ಮಾಡಿದ್ದರು. ಈ ನೀತಿಸಂಹಿತೆಯು (ಕೋಡ್ ಆಫ್ ಎಥಿಕ್ಸ್) ಶಾಸನ ಆಗಬೇಕೆಂದು ವಿ.ಸಿ. ಶುಕ್ಲ ಮಂಡಿಸಿದರು; ಆದರೆ ಸಚಿವ ಸಂಪುಟ ಅದನ್ನು ವಿರೋಧಿಸಿತು. ಪತ್ರಿಕೆಗಳು ಕೂಡ ಅದನ್ನು ಒಪ್ಪಲಿಲ್ಲ. ಏನಿದ್ದರೂ ಚುನಾವಣೆಯ ವೇಳೆಯೂ ಪ್ರಧಾನ ವಾರ್ತಾಧಿಕಾರಿ ಎಲ್. ದಯಾಳ್ ಪತ್ರಿಕೆಗಳಿಗೆ ಅನೌಪಚಾರಿಕ ಎಚ್ಚರಿಕೆ ನೀಡುತ್ತಿದ್ದರೆಂದು ‘ಸ್ಟೇಟ್ಸ್ಮನ್’ ಸಂಪಾದಕ ಎಸ್. ಸಹಾಯ್ ಆಯೋಗಕ್ಕೆ ತಿಳಿಸಿದರು. ಡಿಪೆನ್ಹಾ ಮತ್ತು ಕೆ.ಎನ್. ಪ್ರಸಾದ್ (ವಾರ್ತಾಇಲಾಖೆ ಹೆಚ್ಚುವರಿ ಕಾರ್ಯದರ್ಶಿ) ಎಚ್ಚರಿಕೆ ನೀಡಿದ್ದರೆಂದು ‘ಇಂಡಿಯನ್ ಎಕ್ಸ್ಪ್ರೆಸ್’ ಸಂಪಾದಕರು, ಅಧಿಕಾರಿಗಳು ಹೇಳಿದರು. ಕೆಲವು ಪತ್ರಿಕೆಗಳು ಕುಟುಂಬಯೋಜನೆಯ ದೌರ್ಜನ್ಯಗಳ ಕುರಿತು ಲೇಖನ ಪ್ರಕಟಿಸಿದಾಗ, ಸರ್ಕಾರಕ್ಕೆ ಅದರಿಂದ ಸಿಟ್ಟು ಬಂದಿದೆ. ಚುನಾವಣೆಯ ಬಿಸಿ ಏರುವಾಗ ಕುಟುಂಬಯೋಜನೆಯ ವಿಷಯ ಅದನ್ನು ಹೆಚ್ಚಿಸೀತು ಎಂಬಂತಹ ಎಚ್ಚರಿಕೆಗಳು ಬಂದವು.
ಹೊಸ ಕಾಯ್ದೆಗಳು
ಒಟ್ಟಿನಲ್ಲಿ ತುರ್ತುಪರಿಸ್ಥಿತಿಯ ವೇಳೆ ಪತ್ರಿಕಾನಿರ್ಬಂಧವನ್ನು ನಾಡಿನ ಸಾಮಾನ್ಯ ಶಾಸನಗಳೊಂದಿಗೆ ಸೇರುವಂತೆ ಮಾಡಲಾಯಿತು. ಆ ನಿಟ್ಟಿನಲ್ಲಿ ಆಕ್ಷೇಪಾರ್ಹ ವಿಷಯದ ಪ್ರಕಟಣೆ ತಡೆ ಕಾಯ್ದೆಯನ್ನು (Prevention of Publication of Objectionable Matter Act) ತರಲಾಯಿತು. ಒಂದು ಸುಗ್ರೀವಾಜ್ಞೆಯ ಮೂಲಕ ಭಾರತ ಪತ್ರಿಕಾಮಂಡಳಿಯನ್ನು (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ) ವಜಾಗೊಳಿಸಲಾಯಿತು. ಸಂಸದೀಯ ಕಲಾಪ (ಪ್ರಕಟಣೆಯ ರಕ್ಷಣೆ) ಕಾಯ್ದೆ-೧೯೫೬ನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ತುರ್ತುಪರಿಸ್ಥಿತಿಯನ್ನು ಸಾಂಸ್ಥಿಕವಾಗಿ ಭದ್ರಗೊಳಿಸುವುದು ಈ ಶಾಸನದ ಉದ್ದೇಶವಾಗಿತ್ತು.
ಇತರ ಒತ್ತಡಗಳು
ತನ್ನ ಉದ್ದೇಶ ಈಡೇರಿಕೆಗಾಗಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತ್ರಿಕೆಗಳ ಮೇಲೆ ಇತರ ಒತ್ತಡಗಳನ್ನು ತರುವಲ್ಲಿ ಹಿಂದೆ ಬೀಳಲಿಲ್ಲ. ಆ ನಿಟ್ಟಿನಲ್ಲಿ ಜಾಹೀರಾತು ಮತ್ತು ದೃಶ್ಯ ಪ್ರಚಾರದ ವಿಭಾಗವನ್ನು (ಡಿಎವಿಪಿ) ಬಳಸಿಕೊಳ್ಳಲಾಯಿತು. ಇದು ಸರ್ಕಾರದ ಜಾಹೀರಾತು ಸಂಸ್ಥೆಯಾಗಿದ್ದು, ಜಾಹೀರಾತು ಉದ್ದೇಶಕ್ಕೆ ಸಾರ್ವಜನಿಕರಂಗದ (ಸರ್ಕಾರೀ) ಇತರ ಸಂಸ್ಥೆಗಳು ಕೂಡ ಇದನ್ನು ಬಳಸಿಕೊಳ್ಳುತ್ತವೆ. ಸಂಸತ್ತಿನ ಒಪ್ಪಿಗೆಯ ಮೇರೆಗೆ ಸರ್ಕಾರ ಆಗಾಗ ಜಾಹೀರಾತು ನೀತಿಯನ್ನು ಬದಲಿಸುತ್ತದೆ. ಆದರೆ ಸರ್ಕಾರೀ ಜಾಹೀರಾತನ್ನು ರಾಜಕೀಯದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ; ಅಂದರೆ ಆಳುವ ಪಕ್ಷ, ವಿರೋಧಪಕ್ಷ ಎಂಬ ಭೇದ ಸಲ್ಲದು. ಸಮತೋಲನ, ಸಮಾನತೆ ಬೇಕು; ಮತ್ತು ಇದು ಪತ್ರಿಕೆಗಳಿಗೆ ನೀಡುವ ಆರ್ಥಿಕ ಸಹಾಯ ಅಲ್ಲ (ಆ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬಾರದು).
ತುರ್ತುಪರಿಸ್ಥಿತಿಯ ಘೋಷಣೆಯ ಅನಂತರ ಜುಲೈ ೨೬ರಂದು ಪ್ರಧಾನಿ ಇಂದಿರಾಗಾಂಧಿಯವರ ಕಚೇರಿಯಲ್ಲಿ ಒಂದು ಉನ್ನತಮಟ್ಟದ ಸಭೆ ನಡೆಯಿತು. ಸರ್ಕಾರದ ಜಾಹೀರಾತು ನೀತಿಯನ್ನು ನಿರ್ಧರಿಸುವುದು ಅದರ ಉದ್ದೇಶವಾಗಿದ್ದು, ವಾರ್ತಾ-ಪ್ರಸಾರ ಮಂತ್ರಿ ವಿ.ಸಿ. ಶುಕ್ಲ ಮತ್ತಿತರರು ಅದರಲ್ಲಿ ಭಾಗವಹಿಸಿದ್ದರು. ಅದಕ್ಕೆ ಮುನ್ನ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಶುಕ್ಲ ಅವರು, ಎಲ್ಲ ಪತ್ರಿಕೆಗಳನ್ನು (ಸರ್ಕಾರದ) ಸ್ನೇಹಿತರು, ತಟಸ್ಥರು ಮತ್ತು ವಿರೋಧಿಗಳು ಎನ್ನುವ ರೀತಿಯಲ್ಲಿ ಒಂದು ಪಟ್ಟಿಯನ್ನು ತಯಾರಿಸಲು ಪ್ರಧಾನ ವಾರ್ತಾಧಿಕಾರಿಗೆ ಸೂಚಿಸಿದ್ದರು. ಅದರಂತೆ ಡಾ|| ಎ.ಆರ್. ಬಾಜಿ ಅವರು, ತುರ್ತುಪರಿಸ್ಥಿತಿಗೆ ಮುನ್ನ ಮತ್ತು ಅದನ್ನು ಹೇರುತ್ತಲೇ ನಿರ್ದಿಷ್ಟ ವರ್ತಮಾನ ಪತ್ರಿಕೆಯು ಸುದ್ದಿ ಹಾಗೂ ಕಾಮೆಂಟ್(ಪ್ರತಿಕ್ರಿಯೆ)ಗಳನ್ನು ಯಾವ ರೀತಿ ಮಾಡಿತು ಎಂಬುದರ ಆಧಾರದಲ್ಲಿ ವರ್ಗೀಕರಣ ಮಾಡಿ ಪಟ್ಟಿಯನ್ನು ತಯಾರಿಸಿದ್ದರು. ಮುಂದೆ ಅದೇ ಜೂನ್ ೧೨-೨೬ರ ನಡುವೆ ಪತ್ರಿಕೆಯ ಸಂಪಾದಕೀಯ ಅಂಕಣಗಳು ಹೇಗಿದ್ದವೆಂದು ನೋಡಿ ಆ ಪಟ್ಟಿಯನ್ನು ಚಿಕ್ಕದು (ಶಾರ್ಟ್ಲಿಸ್ಟ್) ಮಾಡಿದರು. ಪಟ್ಟಿಯನ್ನು ಮೊದಲಿಗೆ ಸಚಿವ ಶುಕ್ಲ ಮತ್ತು ಅನಂತರ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಒಟ್ಟಾರೆ ರೇಟಿಂಗ್ ಕೊಟ್ಟು ಪಟ್ಟಿಯನ್ನು ಅಂತಿಮಗೊಳಿಸಿದರು.
ಜಾಹೀರಾತು ದುರುಪಯೋಗ
ಹೀಗೆ ರಾಜಕೀಯ ತಾರತಮ್ಯ ಸಲ್ಲದೆನ್ನುವ ಡಿಎವಿಪಿ ನಿಯಮಕ್ಕೇನೇ ಅಲ್ಲಿ ತಿಲಾಂಜಲಿ ನೀಡಲಾಗಿತ್ತು. ಪತ್ರಿಕೆಯ ರಾಜಕೀಯ ನಿಲವು ಅದಕ್ಕೆ ಸಂಬಂಧಪಟ್ಟ ರಾಜಕೀಯ ನಾಯಕರು, ಪಕ್ಷಗಳ ಜೊತೆಗಿನ ಅದರ ಸಂಬಂಧ ಮುಂತಾದವು ಆ ವರ್ಗೀಕರಣದಲ್ಲಿ ನಿರ್ಣಾಯಕವಾಗಿದ್ದವು. ಸರ್ಕಾರದ ಬಗೆಗಿನ ಅದರ ನಿಲವು, ಸಂಬಂಧಗಳು ಮುಖ್ಯವಾಗಿದ್ದವು. ಎ, ಬಿ, ಸಿ ಎನ್ನುವ ಆ ವರ್ಗೀಕರಣದಲ್ಲಿ ಎ-ಸ್ನೇಹಿತರು, ಬಿ-ವಿರೋಧಿಗಳು ಮತ್ತು ಸಿ-ತಟಸ್ಥರು ಎಂದಾಗಿತ್ತು. ಎ ಯಲ್ಲಿ ಇಂಗ್ಲಿಷ್ ದೈನಿಕ ‘ದ ಹಿಂದು’, ‘ಮಲೆಯಾಳ ಮನೋರಮಾ’, ‘ಟೈಮ್ಸ್ ಆಫ್ ಇಂಡಿಯ’, ‘ಅಮೃತಬಾಜಾರ್ ಪತ್ರಿಕಾ’ ಮೊದಲಾದವಿದ್ದರೆ, ಬಿ ಯಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್, ‘ದೇಶಾಭಿಮಾನಿ’ (ಮಲೆಯಾಳಂ), ‘ಕನ್ನಡಪ್ರಭ’, ಮರಾಠಿಯ ‘ನವಭಾರತ್’ ಇತ್ಯಾದಿ ಇದ್ದವು. ಸಿ ವಿಭಾಗದಲ್ಲಿ ‘ಡೆಕ್ಕನ್ ಕ್ರಾನಿಕಲ್’, ‘ಫಿನಾನ್ಶಿಯಲ್ ಎಕ್ಸ್ಪ್ರೆಸ್’, ‘ಪ್ರಜಾವಾಣಿ’ ಮೊದಲಾದವನ್ನು ಸೇರಿಸಲಾಗಿತ್ತು. ಬಹಳಷ್ಟು ಪತ್ರಿಕೆಗಳನ್ನು ಬಿ ವಿಭಾಗದಲ್ಲಿ (ವಿರೋಧಿಗಳು) ಸೇರಿಸಿದ್ದರು. ಸಚಿವರು (ಶುಕ್ಲ) ನೀಡಿದ ಸೂಚನೆಯ ಮೇರೆಗೆ ಈ ಪಟ್ಟಿಯನ್ನು ಮಾಡಿದ್ದೇವೆಂದು ಅಧಿಕಾರಿಗಳು ಆಯೋಗಕ್ಕೆ ತಿಳಿಸಿದರೆ, ವಿ.ಸಿ. ಶುಕ್ಲ ಅವರು, “ಈ ಪಟ್ಟಿಯನ್ನು ತಯಾರಿಸಲು ನಾನು ನಿರ್ದೇಶನ ನೀಡಿದ್ದು ನಿಜ. ಸರ್ಕಾರದ ಜೊತೆಗಿನ ಅವರ ಸಾಮಾನ್ಯ ಸಂಬಂಧ, ಸಹಕಾರಗಳನ್ನು ನೋಡಿ ಮುಖ್ಯವಾಗಿ ತುರ್ತುಪರಿಸ್ಥಿತಿ ಸಮಯದ ಹೊಂದಾಣಿಕೆಯನ್ನು ಗಮನಿಸಿ ಪಟ್ಟಿಯನ್ನು ಸಿದ್ಧಪಡಿಸಲಾಯಿತು” ಎಂದರು.
ಲಭ್ಯ ಸಾಕ್ಷ್ಯಗಳಿಂದ ತಿಳಿಯುವ ಅಂಶವೆಂದರೆ, ಸರ್ಕಾರದ ಜಾಹೀರಾತು ನೀಡುವುದಕ್ಕೆ ರಾಜಕೀಯವು ನಿರ್ಣಾಯಕ ಅಂಶವಾಯಿತು. ದಾಸ್ತಾನ್-ಎ-ವತನ್’ ಎನ್ನುವ ಉರ್ದು ನಿಯತಕಾಲಿಕವು ಹಿಂದೆ ಜನಸಂಘ ಪರ (ಹಿಂದಿನ ಬಿಜೆಪಿ) ನೀತಿಯನ್ನು ಅನುಸರಿಸುತ್ತಿತ್ತು. ಅದನ್ನು ಬಿಟ್ಟು ಪತ್ರಿಕೆಯು ಕಾಂಗ್ರೆಸ್ಪರ ಆದ ಬಳಿಕ ಜಾಹೀರಾತು ನೀಡಲು ಆರಂಭಿಸಲಾಯಿತು. ಇದಕ್ಕೆ ಭಿನ್ನವಾಗಿ ಗುಜರಾತ್ನ ‘ಲೋಕರಾಜ್’ ಸಂಸ್ಥಾ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದೆ ಎಂಬ ದೂರು ಬಂದ ಮೇರೆಗೆ ಅದಕ್ಕೆ ಜಾಹೀರಾತನ್ನು ನಿಲ್ಲಿಸಿದರು. ಪತ್ರಿಕಾ ಮಾಹಿತಿ ಕಾರ್ಯಾಲಯದ (ಪಿಐಬಿ) ಮೂಲಕ ತನಿಖೆ ನಡೆಸಿದಾಗ ಅದು ಕಾಂಗ್ರೆಸ್ ಪರವೇ ಎಂದು ಗೊತ್ತಾಗಿ ಶುಕ್ಲ ಜಾಹೀರಾತು ಪುನರಾರಂಭಕ್ಕೆ ಆದೇಶ ನೀಡಿದರು.
ದೊಂಬರಾಟ, ಕಸರತ್ತು
ಇದರಲ್ಲಿ ಏನೇನೋ ದೊಂಬರಾಟ ನಡೆದದ್ದು ಬೇಕಾದಷ್ಟಿದೆ. ತಮಿಳಿನ ‘ಅಲಾ ಒ ಸಾ’ ದೈನಿಕವು ಡಿಎಂಕೆ ಪರ ಎಂದು ತೀರ್ಮಾನಿಸಿದ ಡಿಎವಿಪಿ ಜಾಹೀರಾತನ್ನು ತಡೆಹಿಡಿಯಿತು. ಪಕ್ಷದ ನಾಯಕ ಎಂ. ಭಕ್ತವತ್ಸಲಂ ಅವರು ತಮಗೆ ಜಾಹೀರಾತು ನೀಡಬೇಕೆಂದು ಶುಕ್ಲ ಅವರಲ್ಲಿ ಮನವಿ ಮಾಡಿದಾಗ ಕೊಡಲು ಆರಂಭಿಸಿದರು. ಸಂಸದ ವಿ. ವಿಶ್ವನಾಥನ್ ಅವರು ಪತ್ರಿಕೆಯು ತುಂಬಾ ಡಿಎಂಕೆ ಪರ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಜಾಹೀರಾತನ್ನು ನಿಲ್ಲಿಸಲಾಯಿತು. ಕೆಲವೇ ಸಮಯದಲ್ಲಿ ತಮಿಳುನಾಡು ಕಾಂಗ್ರೆಸ್ ಉಪಾಧ್ಯಕ್ಷರು ಸಚಿವರಿಗೆ ಪತ್ರ ಬರೆದು ಈಗ ಆ ದೈನಿಕವನ್ನು ಒಬ್ಬ ಕಾಂಗ್ರೆಸಿಗರು ಖರೀದಿಸಿದ್ದಾರೆ ಎಂಬ ಮಾಹಿತಿ ನೀಡಿದರು. ಡಿಎವಿಪಿ ಕೂಡಲೆ ಜಾಹೀರಾತು ನೀಡಲು ಪುನರಾರಂಭಿಸಿತು. ಕಾಂಗ್ರೆಸ್ನ ಹಲವು ಅಧಿಕೃತ ಸಾಪ್ತಾಹಿಕಗಳಿಗೆ ಸರ್ಕಾರ ತುಂಬಾ ಜಾಹೀರಾತು ನೀಡಿದರೆ ಪ್ರತಿಪಕ್ಷಗಳ ಅಧಿಕೃತ ಪತ್ರಿಕೆಗಳಿಗೆ ಅದು ಕುಸಿಯುತ್ತಲೇ ಹೋಯಿತು.
ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಸಂಸತ್ತಿನಲ್ಲಿ ಪ್ರಕಟಿಸಿದ ಜಾಹೀರಾತು ನೀತಿಗೆ ವಿರುದ್ಧವಾಗಿ ಜಾಹೀರಾತು ಬಿಡುಗಡೆ ಮಾಡುವಾಗ ರಾಜಕೀಯ ಅಂಶಗಳನ್ನು ಪರಿಗಣಿಸಲಾಯಿತು. ಜಾಹೀರಾತು ನೀತಿಯನ್ನು ಪತ್ರಿಕೆಗಳಿಗೆ ಆರ್ಥಿಕ ನೆರವು ನೀಡುವ ಅಥವಾ ಅವುಗಳನ್ನು ದಂಡಿಸುವ (ನೆರವು ನಿರಾಕರಿಸುವ) ರೀತಿಯಲ್ಲಿ ಬಳಸಿಕೊಂಡರು. ಸರ್ಕಾರದ ನೀತಿಯನ್ನು ಆಕ್ಷೇಪಿಸಿದ, ಟೀಕಿಸಿದ ಪತ್ರಿಕೆಗಳಿಗೆ ಜಾಹೀರಾತನ್ನು ನಿರಾಕರಿಸಿದರು. ಸರ್ಕಾರದ ನೀತಿಯನ್ನು ಬೆಂಬಲಿಸಿದ ಅಮೃತ್ಬಜಾರ್ ಪತ್ರಿಕಾ, ನ್ಯಾಷನಲ್ ಹೆರಾಲ್ಡ್ಗಳಿಗೆ ಅವುಗಳ ನ್ಯಾಯಸಮ್ಮತ ಪಾಲಿಗಿಂತ ಜಾಸ್ತಿ ಜಾಹೀರಾತನ್ನು ನೀಡಿದರು. ‘ಸೆಮಿನಾರ್’ ಪತ್ರಿಕೆಯ ಕೆಲವು ಲೇಖನಗಳಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂದು ಸರ್ಕಾರ ಅದಕ್ಕೆ ಜಾಹೀರಾತು ನಿಲ್ಲಿಸಿತೆಂದು ಸಂಪಾದಕ ರೊಮೇಶ್ ಥಾವರ್ ಹೇಳಿದರೆ, ‘ಹಿಮ್ಮತ್’ ಪತ್ರಿಕೆಗೆ ಬ್ಯಾಂಕ್ಗಳು ಜಾಹೀರಾತು ನಿಲ್ಲಿಸಿದಾಗ ಸಂಪಾದಕ ರಾಜಮೋಹನ್ಗಾಂಧಿ ಆ ಸಂಸ್ಥೆಗಳನ್ನು ಕೇಳಿದಾಗ ‘ನಿಮ್ಮನ್ನು ಸರ್ಕಾರ ನಿರ್ಬಂಧಿತ ಪಟ್ಟಿಯಲ್ಲಿ ಇರಿಸಿದೆ’ ಎಂಬ ಉತ್ತರ ದೊರೆಯಿತು.
ಅಮೃತಬಾಜಾರ್ ಪತ್ರಿಕಾ ಸರ್ಕಾರವನ್ನು ಬೆಂಬಲಿಸಲು ಏನು ಬೇಕಾದರೂ ಮಾಡುವ ಸ್ಥಿತಿಯಲ್ಲಿತ್ತು; ಆ ಪತ್ರಿಕೆಗೆ ಶುಕ್ಲ ಜಾಹೀರಾತು ದರದ ಮಧ್ಯಾವಧಿ ಪರಿಷ್ಕರಣೆಗೂ (ಏರಿಕೆ) ಅವಕಾಶ ನೀಡಿದರು; ಅಂತಹ ಸಂದರ್ಭದಲ್ಲಿ ಪತ್ರಿಕೆಯ ಪ್ರಸಾರ ಇಳಿದರೂ ದರ ಏರಿಸುತ್ತಿದ್ದರು. ಆ ಬಗ್ಗೆ ಕೇಳಿದಾಗ ಶುಕ್ಲ, “ರಾಷ್ಟ್ರೀಯವಾದಿ ನೀತಿಗಳನ್ನು ಬೆಂಬಲಿಸುತ್ತಿದ್ದ ಅವರು ಹಕ್ಕಿನಿಂದ ದರ ಏರಿಕೆಗೆ ಕೇಳಿದ್ದರು” ಎನ್ನುವ ಉತ್ತರ ನೀಡಿದರು. ಅದೇ ರೀತಿ ಕಾಂಗ್ರೆಸ್ನ ಕೃಪಾಕಟಾಕ್ಷಕ್ಕೆ ಪಾತ್ರವಾಗಿದ್ದ ‘ನ್ಯಾಷನಲ್ ಹೆರಾಲ್ಡ್’ನ ಜಾಹೀರಾತು ದರ ಎರಡು, ಮೂರು, ನಾಲ್ಕು ಪಾಲು ಏರಿತು; ಪತ್ರಿಕೆಯ ಪ್ರಸಾರ ಇದ್ದಲ್ಲೇ ಇತ್ತು. ಆಯೋಗದ ಪ್ರಶ್ನೆಗೆ ಉತ್ತರಿಸಿದ ವಿ.ಸಿ. ಶುಕ್ಲ ಸರ್ಕಾರ ಕೆಲವು ಮಾನದಂಡಗಳನ್ನು (ಕ್ರೈಟೀರಿಯ) ಮಾಡಿಕೊಂಡು ಅದನ್ನು ಸಾಧ್ಯವಾದಷ್ಟು ನ್ಯಾಯಸಮ್ಮತವಾಗಿ ಜಾರಿ ಮಾಡಲು ಯತ್ನಿಸಿತು” ಎಂದರು. ನಿರ್ದಿಷ್ಟ ವ್ಯಕ್ತಿ ಅಥವಾ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿಕೊಂಡ ಅವರು “ದಾಖಲೆಗಳನ್ನು ನೋಡಿ ನೀವು ನಿಮ್ಮದೇ ತೀರ್ಮಾನಕ್ಕೆ ಬನ್ನಿ; ಅಧಿಕಾರಿಗಳು ಗೈಡ್ಲೈನ್ಸ್ಗಳನ್ನು ತಪ್ಪಾಗಿ ಜಾರಿ ಮಾಡಿ ತಪ್ಪೆಸಗಿರಲೂಬಹುದು” ಎಂದು ಸಮಜಾಯಿಷಿ ನೀಡಿದರು.
ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್ ಅವರು ಸಚಿವ ಶುಕ್ಲ ಅವರೊಂದಿಗೆ ಚರ್ಚಿಸಿ ಡಿಎವಿಪಿಗೆ ಒಂದು ನೀತಿಸಂಬಂಧಿ ಸೂಚನೆಯನ್ನು (policy note) ನೀಡಿದರು. ಡಿಎವಿಪಿ ಅದರಂತೆ ಎಲ್ಲ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕರಂಗದ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸ್ವಾಯತ್ತ ಸಂಸ್ಥೆಗಳ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿತ್ತು. ರಾಜ್ಯಸರ್ಕಾರಗಳು ಡಿಎವಿಪಿ ಮೂಲಕ ಜಾಹೀರಾತು ಬಿಡುಗಡೆಗೆ ಒಪ್ಪಲಾರವು ಎಂದಿದ್ದರೂ ಕೂಡ ತಾನು ಪಟ್ಟಿಯಿಂದ ಹೊರಹಾಕಿದ ಪತ್ರಿಕೆಗಳಿಗೆ ಜಾಹೀರಾತು ನೀಡಬೇಡಿ ಎಂದು ಕೇಂದ್ರಸರ್ಕಾರ ಸೂಚನೆ ನೀಡಿತ್ತು.
ಖಾಸಗಿ ಜಾಹೀರಾತಿಗೂ ತಡೆ
ಪಟ್ಟಿಯಿಂದ ಹೊರಹಾಕಿದ ಪತ್ರಿಕೆಗಳಿಗೆ ಖಾಸಗಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುವುದನ್ನೂ ತಡೆಯುವ ಸಾಧ್ಯತೆಯ ಬಗ್ಗೆ ಜಾಣತನದಿಂದ ಪ್ರಯತ್ನಿಸಬೇಕೆಂದು ಡಿಎವಿಪಿಗೆ ಸೂಚಿಸಲಾಗಿತ್ತು. ಆದರೆ ಪಟ್ಟಿಯಿಂದ ಹೊರಹಾಕಲಾದ (ಡೀಲಿಸ್ಟಾದ) ವರ್ತಮಾನ ಪತ್ರಿಕೆಗಳಿಗೆ ಜಾಹೀರಾತು ನೀಡದಂತೆ ಖಾಸಗಿ ಜಾಹೀರಾತು ಸಂಸ್ಥೆಗಳನ್ನು ಒಲಿಸುವ ಕೆಲಸ ಡಿಎವಿಪಿಯಿಂದ ಸಾಧ್ಯವಾಗಲಿಲ್ಲ; ಅವು ಡಿಎವಿಪಿ ಮಾತು ಕೇಳಲಿಲ್ಲ. ಆಗ ಶುಕ್ಲ ಸ್ವತಃ ಖಾಸಗಿ ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದು ಒತ್ತಡ ತಂದರು. ಆ ಮೂಲಕ ಜಾಹೀರಾತು ಬಿಡುಗಡೆಯ ಸರ್ಕಾರಿ ನೀತಿಯನ್ನು ಪಾಲಿಸುತ್ತೇವೆ ಎಂದು ಅವರಿಂದ ಭರವಸೆ ಪಡೆಯಲಾಯಿತು.
ಸರ್ಕಾರದ ಪರ ಪತ್ರಿಕೆ, ನಿಯತಕಾಲಿಕಗಳಿಗೆ ಉದಾರವಾಗಿ ಜಾಹೀರಾತು ನೀಡಿದ ಕಾರಣದಿಂದ ಡಿಎವಿಪಿ ವೆಚ್ಚದಲ್ಲಿ ಭಾರೀ ಏರಿಕೆಯಾಯಿತು. ೧೯೭೪-೭೫ರಲ್ಲಿ ೧.೪೨ ಕೋಟಿ ರೂ. ಇದ್ದ ವೆಚ್ಚ ಮುಂದಿನ ವರ್ಷ ೨.೨೧ ಕೋಟಿ ರೂ. ಗೇರಿತು; ಮತ್ತು ೧೯೭೬-೭೭ರಲ್ಲಿ ೨.೭೯ ಕೋಟಿಗೇರಿತು. ಅದೇ ಅವಧಿಯಲ್ಲಿ ೮೯ ವರ್ತಮಾನ ಪತ್ರಿಕೆ ಮತ್ತು ನಿಯತಕಾಲಿಕಗಳಿಗೆ ಬಹುತೇಕ ರಾಜಕೀಯ ಕಾರಣದಿಂದ (ಬೇರೆ ಬೇರೆ ಅವಧಿಗೆ) ಜಾಹೀರಾತನ್ನು ನಿರಾಕರಿಸಲಾಯಿತು.
‘ಸಮಾಚಾರ್’ ಸ್ಥಾಪನೆ
‘ಸಮಾಚಾರ್’ ಎನ್ನುವ ಏಕೀಕೃತ ಸುದ್ದಿಸಂಸ್ಥೆಯು ತುರ್ತುಪರಿಸ್ಥಿತಿ ಸಂದರ್ಭದ ಒಂದು ಪ್ರಮುಖ ಘಟನೆಯಾಗಿದೆ. ಆಗ ಪಿಟಿಐ, ಯುಎನ್ಐ, ಹಿಂದುಸ್ತಾನ್ ಸಮಾಚಾರ್ ಮತ್ತು ಸಮಾಚಾರ್ ಭಾರತಿ ಎನ್ನುವ ನಾಲ್ಕು ಸುದ್ದಿಸಂಸ್ಥೆಗಳಿದ್ದವು. ಜುಲೈ ೨೬, ೧೯೭೫ ಮತ್ತು ಮುಂದಿನ ತಿಂಗಳು ೧೨ರಂದು ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ನಡೆದ ಎರಡು ಸಭೆಗಳಲ್ಲಿ ಅವುಗಳನ್ನು ವಿಲೀನಗೊಳಿಸಿ ಒಂದು ಸಂಸ್ಥೆ ರಚಿಸಲು ತೀರ್ಮಾನಿಸಲಾಯಿತು. ವಿಲೀನದ ಬಗ್ಗೆ ಮಂತ್ರಿಮಂಡಲದ ಒಪ್ಪಿಗೆ ಪಡೆಯುವ ಉದ್ದೇಶದಿಂದ ಸಚಿವ ಶುಕ್ಲ ಅವರು ಒಂದು ಸುಗ್ರೀವಾಜ್ಞೆಯನ್ನು ಸಿದ್ಧಪಡಿಸಿದರು. ಸಂಪುಟ ಅದಕ್ಕೆ ಒಪ್ಪಲಿಲ್ಲ. ಕಾನೂನು ಪ್ರಕ್ರಿಯೆ ಮೂಲಕ ಮಾಡುವುದು ಬೇಡ; ಇತರ ವಿಧಾನವನ್ನು ಅನುಸರಿಸಿ ಎಂದು ಸಲಹೆ ನೀಡಿತು.
‘ಇತರ ವಿಧಾನ’ ಎಂಬುದಕ್ಕೆ ಶುಕ್ಲ ಅವರು ಮಾಡಿದ ಅರ್ಥವೆಂದರೆ, ಆ ಸುದ್ದಿಸಂಸ್ಥೆಗಳ ಮೇಲೆ ಒತ್ತಡ ಹಾಕುವುದು, ಆಕಾಶವಾಣಿ ಅವುಗಳ ಚಂದಾದಾರಿಕೆಯನ್ನು ನಿಲ್ಲಿಸುವುದು, ಸುದ್ದಿ ನೀಡುವ ಅವರ ಟೆಲಿಪ್ರಿಂಟರ್ ಬೇಡ ಎನ್ನುವುದು, ಸರ್ಕಾರಕ್ಕೆ ಆ ಸಂಸ್ಥೆಗಳಿಂದ ಬರಬೇಕಾದ ಹಣವನ್ನು ಬಲಾತ್ಕಾರವಾಗಿ ವಸೂಲಿ ಮಾಡುವುದು ಇತ್ಯಾದಿ. ವಿಲೀನ ಮಾಡುವುದರ ಉದ್ದೇಶ ಒಂದೇ ಸಂಸ್ಥೆಯಾದರೆ ನಿಯಂತ್ರಣ (ಸೆನ್ಸಾರ್ಶಿಪ್) ಸುಲಭವಾಗುತ್ತದೆ ಎನ್ನುವುದಾಗಿತ್ತು. ಇತರ ವಿಧಾನಗಳನ್ನು ಅನುಸರಿಸಬೇಕು ಎಂಬುದರಲ್ಲಿ ಒತ್ತಾಯಿಸುವುದು, ಒತ್ತಡ ತರುವುದು, ಜನಾಭಿಪ್ರಾಯ ರೂಪಿಸುವುದು, ವೃತ್ತಿಪರ ಸಂಸ್ಥೆಗಳ ಅಭಿಪ್ರಾಯ ರೂಪಿಸುವುದು, ಸುದ್ದಿಸಂಸ್ಥೆಗಳ ನೌಕರರ ಅಭಿಪ್ರಾಯ ರೂಪಿಸುವುದು ಕೂಡ ಇದ್ದವು.
ಕಾಕತಾಳೀಯ ಎಂದ ಮಂತ್ರಿ
ಆ ಸಂಬಂಧವಾಗಿ ವಿ.ಸಿ. ಶುಕ್ಲ, ಶಾ ಆಯೋಗದ ಮುಂದೆ ಹೇಳಿದ್ದಿಷ್ಟು: “ನಾಲ್ಕು ಸಂಸ್ಥೆಗಳ ವಿಲೀನದ ಕುರಿತು ಚರ್ಚೆ ನಡೆಯುವಾಗಲೇ ಸರ್ಕಾರಿ ಕಚೇರಿಗಳ ಟೆಲಿಪ್ರಿಂಟರ್ಗಳ ಸಂಪರ್ಕವನ್ನು ಕಡಿದುಹಾಕಿದ್ದು ಕೇವಲ ಕಾಕತಾಳೀಯ.” ಅಂಚೆ-ತಂತಿ ಇಲಾಖೆಯ ಬಾಕಿ ವಸೂಲಿಗೆ ಸರ್ಕಾರ ಸುದ್ದಿಸಂಸ್ಥೆಗಳ ವಿರುದ್ಧ ತುರ್ತುಕ್ರಮವನ್ನು ಕೈಗೊಳ್ಳಲಿಲ್ಲ. ಏಕೆಂದರೆ ಆ ಸಂಸ್ಥೆಗಳ ಆರ್ಥಿಕ ಸ್ಥಿತಿ ಕಷ್ಟವಾಗಿತ್ತು. ಸ್ವಲ್ಪ ಸಮಯ ಒಲವು, ಅಂದರೆ ಒಂದು ಬಗೆಯ ಪೋಷಕತ್ವವನ್ನು (patronage) ತೋರಿಸಲಾಯಿತು. ಪೋಷಕತ್ವ ಬೇಡ ಎಂದು ನಿರ್ಧರಿಸಿದಂದಿನಿಂದ ಅಂಚೆ-ತಂತಿ ಇಲಾಖೆಯು ಬಾಕಿ ವಸೂಲಿಗೆ ಆರಂಭಿಸಿತು.
ಆಕಾಶವಾಣಿ ನಡೆಸಿದ ಬಾಕಿ ವಸೂಲಿಯ ಬಗ್ಗೆ ವಿವರಣೆ ನೀಡಿದ ವಿ.ಸಿ. ಶುಕ್ಲ ಅವರು, “ಸುದ್ದಿಸಂಸ್ಥೆಗಳ ಜೊತೆಗಿನ ಒಪ್ಪಂದದ ಅವಧಿ ಮುಗಿದಿತ್ತು; ಹೊಸ ಒಪ್ಪಂದ ಮಾಡಲಾಯಿತು. ಆದರೆ ಅದಕ್ಕೆ ಸಹಿ ಮಾಡಲಿಲ್ಲ. ಪಾವತಿಗಳನ್ನು ಅಡ್ಹಾಕ್ (ತಾತ್ಕಾಲಿಕ) ರೀತಿಯಲ್ಲಿ ಮಾಡಲಾಯಿತು. ಸಂಸ್ಥೆಗಳ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದ ಕಾರಣ ಪೂರ್ತಿ ಅಡ್ಹಾಕ್ ರೀತಿಯಲ್ಲಿ ಅವುಗಳಿಗೆ ೫ ಲಕ್ಷ ರೂ. ನೀಡಲಾಯಿತು” ಎಂದು ತಿಳಿಸಿದರು.
ಒತ್ತಡದಿಂದ ನಿವೃತ್ತಿ
ವಿಲೀನಕ್ಕೆ ಸಂಬಂಧಿಸಿ ಆಯೋಗದ ಮುಂದೆ ಹೇಳಿಕೆ ನೀಡಿದ ಯುಎನ್ಐ ಸಂಸ್ಥೆಯ ಸಂಪಾದಕ ಮತ್ತು ಜನರಲ್ ಮ್ಯಾನೇಜರ್ ಮೀರ್ಚಂದಾನಿ ಅವರು “ಸುಗ್ರೀವಾಜ್ಞೆಯನ್ನು ಸಚಿವ ಸಂಪುಟವು ತಿರಸ್ಕರಿಸಿದ್ದು ತನಗಾದ ಹಿನ್ನಡೆ ಎಂದು ತಿಳಿದ ಶುಕ್ಲ ಅವರು ವಿಲೀನಕ್ಕೆ ಸಂಬಂಧಿಸಿ ಸುದ್ದಿಸಂಸ್ಥೆಗಳ ಆಡಳಿತಗಳಿಗೆ ಕಿರುಕುಳ ನೀಡಲಾರಂಭಿಸಿದರು. ನಾನು ಅವರಿಗೆ ಅಸಮಾಧಾನವನ್ನು ಉಂಟುಮಾಡಿದೆ. ಸಂಪುಟವು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದಕ್ಕೆ ನಾನೇ ಕಾರಣವೆಂದು ಅವರು ನಂಬಿದ್ದರು. ವಿಲೀನದ ತಡೆಗಾಗಿ ನಾನು ಸಂಜಯಗಾಂಧಿ ಅವರನ್ನು ಕೂಡ ಭೇಟಿ ಮಾಡಿದ್ದೆ. ಆದ್ದರಿಂದ ಶುಕ್ಲ ಅವರ ಬೇಡಿಕೆ (ಆಗ್ರಹ) ಮೇರೆಗೆ ನಾನು ನಿವೃತ್ತನಾಗಬೇಕಾಯಿತು” ಎಂದರು.
ಅದೇ ಸಂಸ್ಥೆಯ ಅಧ್ಯಕ್ಷ ರಾಂ ತನೇಜ ಅವರು, ಮೀರ್ಚಂದಾನಿ ಅವರನ್ನು ನಿವೃತ್ತಿಗೊಳಿಸಲು ಶುಕ್ಲ ತನ್ನ ಮೇಲೆ ತುಂಬ ಒತ್ತಡ ಹಾಕಿದರೆಂದು ತಿಳಿಸಿದರು. ಆ ಬಗ್ಗೆ ಶುಕ್ಲ ಅವರು “ಮೀರ್ಚಂದಾನಿ ವಿಲೀನವನ್ನು ವಿರೋಧಿಸಿದ್ದು ನನಗೆ ಗೊತ್ತಿತ್ತು. ಅಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರಿಗೆ ಸಂಸ್ಥೆಯಲ್ಲಿ ಸ್ಥಾಪಿತ ಹಿತಾಸಕ್ತಿ ಇತ್ತು. ಒಂದು ಏಕೀಕೃತ ರಾಷ್ಟ್ರೀಯ ಸುದ್ದಿಸಂಸ್ಥೆಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಅದಕ್ಕೊಂದು ತಡೆ ಎಂದು ನನಗೆ ಅನ್ನಿಸಿತ್ತು” ಎಂದು ಸಮರ್ಥಿಸಿಕೊಂಡರು.
ಪಿಟಿಐ ಅಧ್ಯಕ್ಷ ಪಿ.ಸಿ. ಗುಪ್ತ ಮತ್ತು ರಾಂ ತನೇಜ ಅವರು ನೀಡಿದ ಹೇಳಿಕೆಯಲ್ಲಿ “ಟೆಲಿಪ್ರಿಂಟರ್ ಸಂಪರ್ಕ ಕಡಿತ, ಆಕಾಶವಾಣಿಯ ಬಾಕಿ ಹಣ ಕೊಡದಿರುವುದು, ತುಂಬ ಬಾಕಿ ಮಾಡಿಕೊಂಡಿದ್ದಾರೆಂದು ಪತ್ರಿಕೆಗಳಲ್ಲಿ ಅಪಪ್ರಚಾರ ಮುಂತಾದ ರೀತಿಯಲ್ಲಿ ನಮ್ಮ ಮೇಲೆ ಸಚಿವರು ಒತ್ತಡ ತಂದರು” ಎಂದು ತಿಳಿಸಿದರು. ‘ಸುದ್ದಿಸಂಸ್ಥೆಗಳ ವಿಲೀನಕ್ಕೆ ಸುಗ್ರೀವಾಜ್ಞೆಗೆ ಹೊರತಾದ ವಿಧಾನ ಅನುಸರಿಸಿ ಎಂದು ಸಂಪುಟ ನನಗೆ ಡಿಸೆಂಬರ್ ೧೩ರಂದು ಸೂಚಿಸಿತ್ತು. ೪೧ ದಿನಗಳಲ್ಲಿ ನನ್ನ ಪ್ರಯತ್ನ ಫಲ ನೀಡಿತು’ ಎಂದು ಶುಕ್ಲ ಆಯೋಗಕ್ಕೆ ತಿಳಿಸಿದರು.
ಸರ್ಕಾರದ ನಿಗಾದಲ್ಲೇ ಕೆಲಸ
‘ಸಮಾಚಾರ್’ ಸ್ಥಾಪನೆಯಾದ ಮೇಲೆ ಸರ್ಕಾರಕ್ಕೆ ಸುದ್ದಿಗಳ ನಿಯಂತ್ರಣ, ನಿರ್ವಹಣೆ ಸುಲಭವಾಯಿತು. ಸಂಸ್ಥೆಯ ಆಡಳಿತ ಮತ್ತು ಸಂಪಾದಕೀಯ ಎರಡೂ ಸರ್ಕಾರದ ನಿಗಾದಲ್ಲೇ ಕಾರ್ಯನಿರ್ವಹಿಸಿದವು. ಸಮಾಚಾರ್ ಆಡಳಿತ ಮಂಡಳಿಯ ಅಧ್ಯಕ್ಷ ಜಿ. ಕಸ್ತೂರಿ ಅವರು (‘ದ ಹಿಂದು’ ಸಂಪಾದಕರು) ಹೇಳಿಕೆ ನೀಡಿ, “ಸಂಸ್ಥೆಯ ಕೆಲಸದಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆಗಾಗ ಸರ್ಕಾರ ಮತ್ತು ಸಚಿವ ಶುಕ್ಲ ಸಲಹೆ ನೀಡುತ್ತಿದ್ದರು. ಅದನ್ನು ಅನುಸರಿಸಲೇಬೇಕಾಗಿತ್ತು. ಏಕೆಂದರೆ ಸರ್ಕಾರ ಆರಂಭದಿಂದಲೇ ಸಂಸ್ಥೆಯಲ್ಲಿತ್ತು; ಮತ್ತು ಸಮಾಚಾರ್ ಆರ್ಥಿಕವಾಗಿ ಗಟ್ಟಿಯಾಗಲು ಸರ್ಕಾರದ ನೆರವು ಬೇಕಿತ್ತು” ಎಂದು ಹೇಳಿದರು.
ಆದರೆ ಇಲಾಖೆಯ ದಾಖಲೆಗಳಿಂದ ತಿಳಿಯುವ ಅಂಶವೆಂದರೆ, ಮೂರು ಸಮಾಚಾರ್ ಸಮಿತಿಗಳನ್ನು ರಚಿಸುವ ಬಗ್ಗೆ (ಕಾಂಗ್ರೆಸ್ ನಾಯಕ) ಮಹಮ್ಮದ್ ಯೂನುಸ್ ಅವರಿಗೆ ಸಲಹೆ ನೀಡುವ ಮುನ್ನ ಕಸ್ತೂರಿ ಅವರು ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರೊಂದಿಗೆ ಚರ್ಚಿಸಿದ್ದರು. ಅದೇ ರೀತಿ ಕಾರ್ಯಕ್ರಮ ಪಟ್ಟಿಯ (ಅಜೆಂಡಾ) ಬಗ್ಗೆ ಪ್ರಸಾದ್ ಅವರು, ಯೂನುಸ್ ಮತ್ತು ಶುಕ್ಲ ಅವರ ಒಪ್ಪಿಗೆ ಪಡೆದಿದ್ದರು. ಅದರಂತೆ ಯೂನುಸ್ ಮುಂದೆ ಸಮಾಚಾರ್ ಆಡಳಿತ ಸಮಿತಿ ಸಭೆಗಳಲ್ಲಿ ಅಗತ್ಯ ಕ್ರಮಕೈಗೊಳ್ಳುತ್ತಿದ್ದರು. “ಸಮಾಚಾರ್ ಸಿಬ್ಬಂದಿಗಳ ಪಟ್ಟಿಯನ್ನು ಪರಿಶೀಲನೆಗಾಗಿ ಸರ್ಕಾರಕ್ಕೆ ಕಳುಹಿಸುತ್ತಿದ್ದೆವು. ಹಣಕಾಸಿಗೆ ಸಂಬಂಧಿಸಿ ನಾನು ಆಗಾಗ ಸರ್ಕಾರವನ್ನು ಸಂಪರ್ಕಿಸುತ್ತಿದ್ದೆ. ಆದರೆ ನಾನು ಸರ್ಕಾರದಿಂದ ನಿರ್ದೇಶನ ಪಡೆಯುತ್ತಿರಲಿಲ್ಲ” ಎಂದು ಸಮಾಚಾರ್ ಜನರಲ್ ಮ್ಯಾನೇಜರ್ ಡಬ್ಲ್ಯು. ಲಾಜರಸ್ ಶಾ ಆಯೋಗಕ್ಕೆ ತಿಳಿಸಿದರು. ಆದರೆ ಪಿ.ಸಿ. ಗುಪ್ತ ಮತ್ತು ರಾಂ ತನೇಜ ಅವರು (ಇಬ್ಬರೂ ಸಮಾಚಾರ್ ಸಮಿತಿ ಸದಸ್ಯರು) “ಆಡಳಿತದ ವಿವಿಧ ವಿಷಯಗಳಲ್ಲಿ ಸರ್ಕಾರದಿಂದ ಆದೇಶಗಳು ನಿರಂತರವಾಗಿ ಬರುತ್ತಿದ್ದವು” ಎಂದು ತಿಳಿಸಿದರು.
ಸಂಪಾದಕೀಯ ನಿಯಂತ್ರಣ
ಸಂಪಾದಕೀಯ ವಿಭಾಗದ ನಿಯಂತ್ರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಆ ವಿಭಾಗದ ಪಿ.ಎಸ್. ಕಸ್ಬೇಕರ್, ಸಿ.ಪಿ. ಮಾಣಿಕ್ತಲಾ, ಸಿ.ಕೆ. ಅರೋರಾ, ಡಿ.ವಿ. ದೇಸಾಯಿ ಮತ್ತಿತರರು ಸರ್ಕಾರ ಮತ್ತು ಅಧಿಕಾರಿಗಳಿಂದ ಸೂಚನೆಗಳು ಬರುತ್ತಲೇ ಇದ್ದವು ಎಂದರು. ವರದಿಗಾರರಿಗೆ ‘ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಉತ್ತಮ ಪ್ರಚಾರ ನೀಡಬೇಕು; ಪ್ರತಿಪಕ್ಷಗಳ ಚಟುವಟಿಕೆಗಳಿಗೆ ಹೆಚ್ಚು ಪ್ರಚಾರ ನೀಡಬಾರದು’ ಎನ್ನುವ ಸೂಚನೆ ನೀಡಲಾಗಿತ್ತು. ಚುನಾವಣೆಯ ವೇಳೆ ಈ ಅಸಮತೋಲನವು ಹೆಚ್ಚಾಯಿತು. ಸಮಾಚಾರ್ ವರದಿಗಾರರು ಸಿದ್ಧಪಡಿಸಿದ ಮೂಲ ವರದಿ ಮತ್ತು ಎಡಿಟಾದ ವರದಿಗಳ ನಡುವೆ ತುಂಬ ವ್ಯತ್ಯಾಸ ಇರುತ್ತಿತ್ತು. ವಾರ್ತಾಇಲಾಖೆ ಕಾರ್ಯದರ್ಶಿ ಎಸ್.ಎಂ.ಎಚ್. ಬರ್ನಿ ಅವರು ನಡೆಸುವ ಸಮನ್ವಯ ಸಭೆಗಳಲ್ಲಿ ಸಮಾಚಾರ್ ಜನರಲ್ ಮ್ಯಾನೇಜರ್ ಲಾಜರಸ್, ಕಾರ್ಯಕಾರಿ ಸಮಿತಿ ಸದಸ್ಯ ಡಾ|| ರಾಜ್ ಕೆ. ನಿಗಮ್ ಕೂಡ ಭಾಗವಹಿಸುತ್ತಿದ್ದರು.
ಸಚಿವಾಲಯವು ಸಮಾಚಾರ್ನ ಸಂಪಾದಕೀಯ ಸ್ವಾತಂತ್ರ್ಯದಲ್ಲಿ ಕೈಹಾಕುತ್ತಿದ್ದದ್ದು ತನಗೆ ಗೊತ್ತಿಲ್ಲ ಎಂದು ಆಯೋಗಕ್ಕೆ ತಿಳಿಸಿದ ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್, ಆದರೆ ಸೆನ್ಸಾರ್ಶಿಪ್ ಮತ್ತು ಪತ್ರಿಕಾ ಹೇಳಿಕೆಗಳ ಬಗ್ಗೆ ಸಮಾಚಾರ್ಗೆ ಸೂಚನೆಗಳು ಬರುತ್ತಿದ್ದುದು ನಿಜ ಎಂದು ಒಪ್ಪಿಕೊಂಡರು. ಸೂಕ್ಷ್ಮಸ್ವರೂಪದ ವರದಿಗಳ (sensitive copy) ಬಗ್ಗೆ ತನಗೆ ತಿಳಿಸಿ ಎಂದು ಪ್ರಸಾದ್ ತನ್ನಲ್ಲಿ ಹೇಳಿದ್ದರೆಂದು ಲಾಜರಸ್ ತಿಳಿಸಿದರು. ಸರ್ಕಾರದ ಅಗತ್ಯಕ್ಕೆ ಅನುಗುಣವಾಗಿ ಸುದ್ದಿಗಳನ್ನು ತಿದ್ದುವುದಕ್ಕಾಗಿ (ಉದಾಹರಣೆಗೆ ಕಾಂಗ್ರೆಸಿಗೆ ಜಗಜೀವನರಾಮ್ ಅವರ ರಾಜೀನಾಮೆ) ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್ ಅವರಿಗೆ ತಿಳಿಸಬೇಕಿತ್ತು; ಸಚಿವ ಶುಕ್ಲ ಅವರು ಹೇಳಿದಂತೆ ತಾನಿದನ್ನು ಮಾಡುತ್ತಿದ್ದೆ ಎಂದು ಲಾಜರಸ್, ಶಾ ಆಯೋಗಕ್ಕೆ ತಿಳಿಸಿದರು.
ಪತ್ರಕರ್ತರಿಗೆ ಪೊಲೀಸ್ ತಪಾಸಣೆ
ತುರ್ತುಪರಿಸ್ಥಿತಿಯ ವೇಳೆ ಬಗೆಬಗೆಯ ಹಿಂಸೆ-ಕಿರುಕುಳಗಳನ್ನು ಅನುಭವಿಸಿದವರಲ್ಲಿ ಪತ್ರಕರ್ತರು ಕೂಡ ಸೇರಿದ್ದಾರೆ. ಸರ್ಕಾರದ ಚಟುವಟಿಕೆಗಳನ್ನು ವರದಿ ಮಾಡುವುದಕ್ಕೆ ವರದಿಗಾರರು ಮತ್ತು ಕ್ಯಾಮರಾಮನ್ಗಳಿಗೆ ಎಕ್ರೆಡಿಟೇಶನ್ ಕಾರ್ಡ್ ನೀಡುವ ಕ್ರಮ ಹಿಂದಿನಿಂದ ಚಾಲ್ತಿಯಲ್ಲಿತ್ತು. ತುರ್ತುಪರಿಸ್ಥಿತಿ ಘೋಷಣೆಯಾದಾಗ ದೆಹಲಿಯ ಹಲವು ಪತ್ರಕರ್ತರ ಎಕ್ರೆಡಿಟೇಶನ್ ಕಾರ್ಡ್ಗಳನ್ನು ರದ್ದುಗೊಳಿಸಿದರು; ಅದರ ಪುನರ್ವಿಮರ್ಶೆ ಮಾಡುವುದಾಗಿ ತಿಳಿಸಲಾಯಿತು.
ವಾರ್ತಾ-ಪ್ರಸಾರ ಸಚಿವ ವಿ.ಸಿ. ಶುಕ್ಲ ಅವರು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರಿಗೆ ಎಕ್ರೆಡಿಟೇಶನ್ ಹೊಂದಿರುವ ಬಾತ್ಮೀದಾರರ ಒಂದು ಪಟ್ಟಿ ನೀಡಿ, ಇದರಲ್ಲಿ ಯಾರ್ಯಾರು ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ತಪಾಸಣೆ ನಡೆಸಿ ಎಂದು ಸೂಚಿಸಿದರು. ಇಂಟೆಲಿಜೆನ್ಸ್ ಬ್ಯೂರೋ (ಜಾಗೃತದಳ) ಮೂಲಕ ಪ್ರಸಾದ್ ತಪಾಸಣೆ ನಡೆಸಿ ಪಟ್ಟಿಯನ್ನು ಸಚಿವರಿಗೆ ಮರಳಿಸಿದರು. ಕಡತದ ಮೇಲೆ ಹೆಚ್ಚುವರಿ ಕಾರ್ಯದರ್ಶಿಯವರು “ಸಚಿವರು ಪಟ್ಟಿಯನ್ನು ನೋಡಿದ್ದಾರೆ; ಮತ್ತು ಎಕ್ರೆಡಿಟೇಶನ್ ಕಾರ್ಡ್ ನಿಯಮವನ್ನು ಅಂಗೀಕರಿಸಿದ್ದಾರೆ” ಎಂದು ಟಿಪ್ಪಣಿಯನ್ನು ಹಾಕಿದ್ದರು. ಸಚಿವರು ೩೩ ಬಾತ್ಮೀದಾರರ ಎಕ್ರೆಡಿಟೇಶನ್ ಕಾರ್ಡ್ಗಳನ್ನು ರದ್ದುಪಡಿಸಿದರು. ಕೆಲವರಿಗೆ ಪ್ರತಿಕೂಲವಾದ ತಪಾಸಣಾ ವರದಿ ಕಾರಣವಾದರೆ ಇತರರು ವ್ಯವಸ್ಥೆಯ (ಸರ್ಕಾರ) ವಿರೋಧಿ ನಿಲವು ಹೊಂದಿದ್ದು ಕಾರಣವಾಗಿತ್ತು. ಇದೆಲ್ಲವೂ ಶುಕ್ಲ ಅವರ ಸಮ್ಮತಿಯ ಮೇರೆಗೆ ನಡೆದಿತ್ತು.
ತುರ್ತುಪರಿಸ್ಥಿತಿಯ ವೇಳೆ ವಿದೇಶೀ ಬಾತ್ಮೀದಾರರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಯಿತು. ಸರ್ಕಾರದ ನೀತಿಯನ್ನು ಅವರು ಒಪ್ಪಿಕೊಳ್ಳಬೇಕಿತ್ತು; ಮತ್ತು ಪ್ರಿ-ಸೆನ್ಸಾರ್ ಕಾನೂನಿಗೆ ತಮ್ಮ ಒಪ್ಪಿಗೆಯಿದೆ ಎನ್ನುವ ಬಾಂಡ್ಗೆ ಸಹಿ ಹಾಕಬೇಕಿತ್ತು. ಇದು ಸರ್ಕಾರದ ನೀತಿಯಾಗಿದ್ದು, ಸ್ವದೇಶಿ-ವಿದೇಶಿ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗಿತ್ತು. ಭಾರತದಲ್ಲಿ ಕೆಲಸ ಮಾಡುವುದಾದರೆ ಅವರು ನಾಡಿನ ಶಾಸನವನ್ನು ಪಾಲಿಸಬೇಕೆಂದು ಶುಕ್ಲ ಹೇಳಿದರು. ವಿದೇಶೀ ಪತ್ರಿಕೆಗಳ ಕೆಲವು ಭಾರತೀಯ ಪ್ರತಿನಿಧಿಗಳಿಗೆ ಹೆಚ್ಚು ಕಿರುಕುಳ ನೀಡಿದ ಪ್ರಸಂಗಗಳು ಕೂಡ ಇವೆ. ಉದಾಹರಣೆಗೆ ಅಮೆರಿಕದ ‘ನ್ಯೂಸ್ವೀಕ್’ನ ಬಾತ್ಮೀದಾರ ರಾಮಾನುಜಂ ಅವರ ಟೆಲಿಫೋನ್ ಸಂಪರ್ಕವನ್ನು ಕಡಿತಗೊಳಿಸಿದ್ದಲ್ಲದೆ, ಆತನಿಗೆ ನೀಡಿದ್ದ ಮನೆಯನ್ನು ವಾಪಸ್ ಪಡೆದರು; ಪತ್ರಿಕೆ ನಿರ್ಬಂಧ ವಿಧಿಸಿದ ಅನಂತರದ ಭಾರತದ ಬಗೆಗಿನ ಯಾವುದೇ ವರದಿಗೆ ರಾಮಾನುಜಂ ಕಾರಣ ಅಲ್ಲವೆಂದು ‘ನ್ಯೂಸ್ವೀಕ್’ ವತಿಯಿಂದ ಭಾರತಸರ್ಕಾರಕ್ಕೆ ತಿಳಿಸಿದರೂ ಕೂಡ ಆತನ ಬಗ್ಗೆ ಕರುಣೆ ತೋರಿಸಲಿಲ್ಲ.
(ಸಶೇಷ)