ನಿಷ್ಕಲ್ಮಶ ನಡೆನುಡಿಯ ಅವಿದ್ಯಾವಂತ ಬಿಲ್ಲವರು ತಮ್ಮ ಸಂಪ್ರದಾಯ ನಂಬಿಕೆ ಹಾಗೂ ಆರಾಧನೆಯನ್ನು ತ್ಯಜಿಸಿ ಕ್ರೈಸ್ತರಾಗುವ ಕಠಿಣ ನಿಲವನ್ನು ಹೊಂದಲು ಕಾರಣವಾಗುವ ಸನ್ನಿವೇಶಗಳು ಬಹಳ ಮುಖ್ಯವಾದವು. ಈ ಸಂದರ್ಭದಲ್ಲಿ ಒಂದು ಮಾತನ್ನು ನಾವು ನೇರವಾಗಿ ಹೇಳಬೇಕಾಗುತ್ತದೆ. “ಮತಾಂತರಗೊಳಿಸಿದ್ದಾರೆ ಎನ್ನುವುದಕ್ಕಿಂತಲೂ ಮತಾಂತರಕ್ಕೆ ಪೂರಕವಾದ ಅವಕಾಶವನ್ನು ಹಾಗೂ ಸನ್ನಿವೇಶವನ್ನು ನಾವು ಸೃಷ್ಟಿಸಿಕೊಟ್ಟಿರುವೆವು ಎನ್ನುವುದು ಸೂಕ್ತವಾದುದು.” ಅಂದರೆ ಅದಕ್ಕಾಗಿ ನಾವು ಅವರಿಗೆ ಕೃತಜ್ಞತೆ ಹೇಳಬೇಕೆ? ಈ ವಾದವನ್ನು ನಾವು ಎಡಪಂಥೀಯರು; ಬುದ್ಧಿಜೀವಿಗಳು ಸೇರಿದಂತೆ ಹಲವರಿಂದ ಕೇಳುತ್ತೇವೆ. ಮತಾಂತರ ಮಾಡಿಸಿದ್ದರಲ್ಲಿ ಏನೂ ತಪ್ಪಿಲ್ಲವೆ? ಮನೆಯ ಬಾಗಿಲು ತೆರೆದಿದೆ ಎಂದು ಕಳ್ಳತನ ಮಾಡಬಹುದೆ? ಅಂತಹ ಕಳ್ಳತನ ಅಪರಾಧ ಆಗುವುದಿಲ್ಲವೆ?
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕುಳಿತವರಿಗೆ ನಾಡಿನ ಕರಾವಳಿ ಭಾಗದ ವಿದ್ಯಮಾನಗಳು, ಅದರಲ್ಲೂ ವಿಶೇಷವಾಗಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ, ಅಂದರೆ ಇಂದಿನ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿದ್ಯಮಾನಗಳು ಅರ್ಥವಾಗುವುದು ಕಷ್ಟ; ಅಲ್ಲಿ ಕೋಮುವಾದ ವಿಪರೀತವಾಗಿ ಬೆಳೆದಿದೆ ಎಂದು ಸಾರಾಸಗಟಾಗಿ ಹೇಳುವ ಮೂಲಕ ಅವರು ತಮ್ಮ ಅಜ್ಞಾನವನ್ನು ಮುಚ್ಚಿಡಲು ಹವಣಿಸುತ್ತಾರೆ. ಅಲ್ಲಿ ಕೋಮುವಾದ ಹೆಚ್ಚಿದೆ ಎಂಬುದರಲ್ಲಿ ಸ್ವಲ್ಪ ನಿಜಾಂಶ ಇರಬಹುದಾದರೂ ಅದಕ್ಕೇನು ಕಾರಣ, ಅದರಲ್ಲಿ ಯಾರದೆಲ್ಲ ಪಾತ್ರ ಇದೆ, ಮುಂತಾಗಿ ಆಳಕ್ಕೆ ಹೋಗಿ ಅರಿಯುವ ವ್ಯವಧಾನವು ಬಹಳ ಜನರಿಗೆ ಇದ್ದಂತಿಲ್ಲ.
ಈ ಭಾಗಕ್ಕೆ ಸೇರುವಂತಹ ಕಾಸರಗೋಡಿನ ಭಾಗ, ಅಂದರೆ ಕರ್ನಾಟಕದ ಗಡಿಯಾದ ತಲಪಾಡಿಯಿಂದ ಚಂದ್ರಗಿರಿಯವರೆಗಿನ ಪ್ರದೇಶ ಈಗ ನಮ್ಮೊಂದಿಗಿಲ್ಲ. ಮಂಗಳೂರು, ಉಡುಪಿಗಳಂತೆಯೇ ಇದ್ದ ಆ ಭಾಗ ೧೯೫೬ರ ರಾಜ್ಯ ಪುನರ್ವಿಂಗಡಣೆ ವೇಳೆ ಕೇರಳಕ್ಕೆ ಸೇರಿ ಬೆಂಗಳೂರಿಗರ ಹಣೆಪಟ್ಟಿಯಿಂದ ತಪ್ಪಿಸಿಕೊಂಡಿದೆ. ಬೆಂಗಳೂರಿನ ಒಂದು ವರ್ಗ ಕಾಸರಗೋಡು ಪ್ರದೇಶ ತುಂಬ ಸೆಕ್ಯುಲರ್ ಆಗಿದೆ ಎಂದು ಸಂತೋಷಪಡಬಹುದು. ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷವೆಂದು ಕಾಂಗ್ರೆಸ್ ಅಧಿನಾಯಕ ರಾಹುಲ್ಗಾಂಧಿ ಅವರೇ ಇತ್ತೀಚೆಗೆ ಅಪ್ಪಣೆಕೊಡಿಸಿದ್ದಾರೆ.
ರಾಜ್ಯದ ಕರಾವಳಿಗೆ ಸೇರುವ ಉತ್ತರಕನ್ನಡ ಜಿಲ್ಲೆಯು ಕೆನರಾ ಜಿಲ್ಲೆಗೆ ಒಳಪಟ್ಟಿದ್ದರೂ ಮುಂದೆ ಮುಂಬಯಿ ಪ್ರಾಂತಕ್ಕೆ ಸೇರಿದ ಮೇಲೆ ಕ್ರಮೇಣ ಸ್ವರೂಪದಲ್ಲಿ ಕೂಡ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಿಂದ ವ್ಯತ್ಯಾಸವನ್ನು ಪಡೆದುಕೊಳ್ಳುತ್ತಹೋಯಿತು. ಆ ಮೂಲಕ ಬೆಂಗಳೂರಿಗರ ಮೇಲಿನ ಟೀಕೆಯಿಂದ ಪಾರಾಯಿತೆನ್ನಬಹುದು.
ಕರ್ನಾಟಕದ ಕರಾವಳಿಯು ಕ್ರಿಸ್ತಪೂರ್ವದ ಕಾಲದಿಂದಲೇ ವಿದೇಶಗಳೊಂದಿಗೆ ಸಂಬಂಧವನ್ನು ಹೊಂದಿತ್ತು. ಜಲಮಾರ್ಗದ ಮೂಲಕ ಸಂಪರ್ಕವಿದ್ದು ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಈ ಸಂಬಂಧವು ೧೫-೧೬ನೇ ಶತಮಾನಗಳಲ್ಲಿ ಐರೋಪ್ಯ ದೇಶಗಳ ಆಗಮನದ ಸಂದರ್ಭದಲ್ಲಿ ಕೂಡ ವಿಶೇಷವಾಗಿ ಮುಂದುವರಿಯಿತು; ಮತ್ತು ದೇಶದ ಬೆಳವಣಿಗೆಗಳಿಗೆ ಕರಾವಳಿ ಪ್ರದೇಶವು ಚೆನ್ನಾಗಿ ಸ್ಪಂದಿಸುತ್ತ ಬಂದಿತು.
ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಅನೇಕ ಬದಲಾವಣೆಗಳು ಬಂದವು. ಅವರ ಕೆಲವು ನೀತಿಗಳು ಭಾರತೀಯರನ್ನು ಜಾಗೃತಗೊಳಿಸಿದವು. ಅನೇಕ ಪುರೋಗಾಮಿಗಳೂ, ಸಂತರೂ, ಹಿಂದೂಧರ್ಮಕ್ಕೆ ಹೊಸ ಚೈತನ್ಯವನ್ನು ನೀಡಲು ಸುಧಾರಣೆಯ ಹಾದಿಯಲ್ಲಿ ಕಾರ್ಯಪ್ರವೃತ್ತರಾದರು. ಬ್ರಹ್ಮಸಮಾಜ, ಆರ್ಯಸಮಾಜ, ಪ್ರಾರ್ಥನಾಸಮಾಜ, ಥಿಯೊಸಾಫಿಕಲ್ ಸೊಸೈಟಿ, ರಾಮಕೃಷ್ಣ ಮಿಷನ್ ಹಾಗೂ ಅನೇಕ ಮುಸ್ಲಿಂ, ಸಿಖ್ ಚಳವಳಿಗಳು ಹುಟ್ಟಿಕೊಂಡವು. ಮೂಢನಂಬಿಕೆಗಳನ್ನು ಕೈಬಿಟ್ಟು, ಹಳೆಯ ಸಂಪ್ರದಾಯಗಳನ್ನು ಪರಿಷ್ಕರಿಸುವ ಕಾರ್ಯ ನಡೆಯಿತು. ಮಿಷನರಿಗಳು ಮತ್ತು ಬ್ರಿಟಿಷರು ಆರಂಭಿಸಿದ ಇಂಗ್ಲಿಷ್ ಶಿಕ್ಷಣವು ಸಾಮಾಜಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದಿತು.
ಮಿಷನರಿಗಳ ನಿಷೇಧ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳು ಮೊದಲಿಗೆ ತಮ್ಮ ವ್ಯಾಪಾರ ವ್ಯವಹಾರ ಹಾಗೂ ಸಾಮ್ರಾಜ್ಯವನ್ನು ವಿಸ್ತರಿಸುವ ಯುದ್ಧಗಳಲ್ಲಿ ತೊಡಗಿಕೊಂಡಿದ್ದರು. ಮಿಷನರಿಗಳ ಸೇವಾಕಾರ್ಯದಿಂದ ತಮ್ಮ ವ್ಯಾಪಾರಿ ಯೋಜನೆಗಳಿಗೆ ತೊಡಕಾಗಬಹುದೆಂದು ಭಾವಿಸಿ ಭಾರತಕ್ಕೆ ಮಿಷನರಿಗಳು ಪ್ರವೇಶಿಸುವುದರ ವಿರುದ್ಧ ತಡೆಯಾಜ್ಞೆ ವಿಧಿಸಿದ್ದರು. ಭಾರತಕ್ಕೆ ಬರುವ ಮಿಷನರಿಗಳು ಲಂಡನ್ನಿನ ‘ಭಾರತಭವನ’ದಲ್ಲಿ ೫೦೦ ಪೌಂಡ್ ಭದ್ರತಾನಿಧಿ ಠೇವಣಿ ಇರಿಸಿ ಕಂಪೆನಿಯ ಆಡಳಿತ ಮತ್ತು ಅಧಿಕಾರಗಳಿಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟು ಬರಬೇಕಿತ್ತು. ಮುಂದೆ ಈಸ್ಟ್ ಇಂಡಿಯಾ ಕಂಪೆನಿಯು ಸಾಮಾಜಿಕ ಸುಧಾರಣೆಗೆ ಕೂಡ ಗಮನಹರಿಸಬೇಕೆಂದು ಒತ್ತಾಯಗಳು ಬಂದ ಕಾರಣ ೧೮೧೩ರಲ್ಲಿ ನಿಯಮವನ್ನು ಬದಲಾಯಿಸಿ ಮಿಷನರಿಗಳ ಮೇಲೆ ಹಿಂದೆ ಇದ್ದ ನಿಷೇಧವನ್ನು ರದ್ದುಪಡಿಸಿದರು. ಅನಂತರ ಅನೇಕ ಮಿಷನರಿಗಳು ಬಂದು ದೇಶದ ವಿವಿಧೆಡೆ ಸೇವಾಕೇಂದ್ರಗಳನ್ನು ಸ್ಥಾಪಿಸಿದರು.
ಸ್ವಿಜರ್ಲೆಂಡ್ನ ಬಾಸೆಲ್ ನಗರದಲ್ಲಿ ೧೮೧೬ರಲ್ಲಿ ಸ್ಥಾಪನೆಗೊಂಡ ‘ಸೌವಾರ್ತಿಕ ಸಂಘ’ವು ಭಾರತದ ಪಶ್ಚಿಮ ಕರಾವಳಿಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿತು. ಭಾರತದಲ್ಲಿ ಕ್ರೈಸ್ತಧರ್ಮದ ಪ್ರಚಾರವು ಅದರ ಉದ್ದೇಶವಾಗಿತ್ತು. ರೆವೆರೆಂಡ್ ಸಾಮುವೆಲ್ ಹೆಬಿಕ್, ರೆ| ಜೆ.ಸಿ. ಲೆಹನರ್ ಮತ್ತು ರೆ| ಸಿ.ಎಲ್. ಗ್ರೀನರ್ ಎಂಬ ಮೂವರು ಮಿಷನರಿಗಳು ೧೮೩೪ರ ಮಾರ್ಚ್ ೨೩ರಂದು ಬಾಸೆಲ್ನಿಂದ ಹೊರಟು ಇಂಗ್ಲೆಂಡಿಗೆ ಹೋಗಿ, ಅಲ್ಲಿಂದ ಜುಲೈ ೧೫ರಂದು ಹಡಗಿನಲ್ಲಿ ಹೊರಟು ಅಕ್ಟೋಬರ್ ೩೦ರಂದು ಮಂಗಳೂರಿನ ಚೊಕ್ಕಪಟ್ನದಲ್ಲಿ ಬಂದಿಳಿದರು. ಬ್ರಿಟಿಷ್ ಜಿಲ್ಲಾಧಿಕಾರಿ ಫಿಂಡ್ಲೆ ಆಂಡರ್ಸನ್ ಆ ಮೂವರಿಗೆ ಭವ್ಯ ಸ್ವಾಗತವನ್ನು ನೀಡಿದರು. ಮಂಗಳೂರಿನ ಈಗಿನ ಮಿಷನ್ ರಸ್ತೆಯಲ್ಲಿ ಅವರಿಗಾಗಿ ಒಂದು ಮನೆಯನ್ನು ಖರೀದಿಸಲಾಯಿತು. ಅಲ್ಲಿ ಬಾಸೆಲ್ ಮಿಷನ್ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಕೇಂದ್ರವನ್ನು ಸ್ಥಾಪಿಸಿತು. ಕ್ರಮೇಣ ತುಳುನಾಡಿನಲ್ಲಿ ವಿಸ್ತರಿಸಿ ಹಲವು ಉಪಕೇಂದ್ರಗಳನ್ನು ಸ್ಥಾಪಿಸಿದರು.
ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ ಮಿಷನರಿಗಳು ತುಳು, ಕನ್ನಡ, ಕೊಂಕಣಿ ಮುಂತಾದ ಸ್ಥಳೀಯ ಭಾಷೆಗಳನ್ನು ಕಲಿತು, ಇಲ್ಲಿಯ ಆಚಾರ-ವಿಚಾರ, ಸಂಪ್ರದಾಯ, ಕಲೆ, ಸಂಸ್ಕೃತಿಗಳನ್ನು ಅಧ್ಯಯನ ಮಾಡಿದರು. ಮೇ ೨೯, ೧೮೩೬ರಂದು ಮಂಗಳೂರಿನ ಹಳೆಬಂದರಿನ ನೀರೇಶ್ವಾಲ್ಯ ಎಂಬಲ್ಲಿ ತಮ್ಮ ಪ್ರಥಮ ಕೇಂದ್ರದಲ್ಲಿ ರವಿವಾರದ ಬೆಳಗ್ಗಿನ ಆರಾಧನೆಯನ್ನು ಸ್ಥಳೀಯ ಭಾಷೆಯಲ್ಲಿ ಪ್ರಾರಂಭಿಸಿದರು.
ಮೊದಲ ಮೂವರು
ಸೆಪ್ಟೆಂಬರ್ ೧೬, ೧೮೩೭ರಂದು ಮಂಗಳೂರಿನ ಮೂವರು ಬಿಲ್ಲವರಿಗೆ ದೀಕ್ಷಾಸ್ನಾನ ನೀಡಿ ಕ್ರೈಸ್ತಮತಕ್ಕೆ ಸೇರಿಸಿಕೊಳ್ಳಲಾಯಿತು. ಪ್ರಥಮ ಪ್ರೊಟೆಸ್ಟೆಂಟ್ ಕ್ರೈಸ್ತರಾದ ಇವರಲ್ಲಿ ಚಂದುವಿಗೆ ಅಬ್ರಹಾಂ ಎಂದೂ ಆತನ ಮಗಳಿಗೆ ರಾಹೆಲ್ ಎಂದೂ, ತಿಮ್ಮಪ್ಪನಿಗೆ ಪೀಟರ್ ಎಂದೂ ನಾಮಕರಣ ಮಾಡಲಾಯಿತು. ಅಬ್ರಹಾಂ ಕ್ರೈಸ್ತಮತ ಬೋಧಕನಾದರೆ, ಪೀಟರ್ ಮಿಷನ್ ಶಾಲೆಯ ಶಿಕ್ಷಕನಾದನು. ೧೮೪೧ರಲ್ಲಿ ಮಂಗಳೂರಿನ ಸಭೆಯಲ್ಲಿ ೧೮ ವಯಸ್ಕ ಸದಸ್ಯರು ಹಾಗೂ ೧೨ ಮಕ್ಕಳು ಇದ್ದರೆಂದು ಬಾಸೆಲ್ ಮಿಷನ್ ವರದಿಯನ್ನು ಉಲ್ಲೇಖಿಸಿ ರಮಾನಾಥ ಕೋಟೆಕಾರ್ ಅವರು ತಮ್ಮ ಪುಸ್ತಕ ‘ಬಿಲ್ಲವರು ಮತ್ತು ಬಾಸೆಲ್ ಮಿಷನ್- ಒಂದು ಅಧ್ಯಯನ’ದಲ್ಲಿ ಹೇಳಿದ್ದಾರೆ. (೨೦೧೧, ಪ್ರಕಾಶಕರು: ಸಾಯಿಸುಂದರಿ ಸೇವಾ ಟ್ರಸ್ಟ್, ಮಂಗಳೂರು). ದಕ್ಷಿಣಕನ್ನಡ ಜಿಲ್ಲೆಯ (ಆಗಿನ ಮಂಗಳೂರು) ಜಿಲ್ಲಾಧಿಕಾರಿ ಎಚ್.ಎಂ. ಬ್ಲೇರ್ ಈಗಿನ ಬಲ್ಮಠ (ಬೆಲ್ಮೌಂಟ್)ದಲ್ಲಿ ವಿಶಾಲವಾದ ಸರ್ಕಾರೀ ಜಮೀನನ್ನು ಹರಾಜಿನಲ್ಲಿ ಖರೀದಿಸಿ, ಬಾಸೆಲ್ ಮಿಷನ್ಗೆ ಕೊಡುಗೆಯಾಗಿ ನೀಡಿದನು (೧೮೪೦). ಹೀಗೆ, ಮಂಗಳೂರಿನ ಬಲ್ಮಠವು ಬಾಸೆಲ್ ಮಿಷನಿನ ಚಟುವಟಿಕೆಗಳ ಕೇಂದ್ರಸ್ಥಾನವಾಯಿತು.
೧೮೩೬ರಲ್ಲಿ ರೆ| ಹೆಬಿಕ್ ನೀರೇಶ್ವಾಲ್ಯದಲ್ಲಿ ಕ್ರೈಸ್ತ ಮಕ್ಕಳಿಗಾಗಿ ಶಾಲೆಯೊಂದನ್ನು ಪ್ರಾರಂಭಿಸಿದರು. ಮೊದಲಿಗೆ ಅಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳಿದ್ದರು. ಪೀಟರ್ (ತಿಮ್ಮಪ್ಪ) ಅಲ್ಲಿ ಶಿಕ್ಷಕರಾದರು. ೧೮೩೮ರಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ಅದೇ ಶಾಲೆ ಈಗ ಮಂಗಳೂರಿನ ರಥಬೀದಿಯಲ್ಲಿ (ಕಾರ್ಸ್ಟ್ರೀಟ್) ಮಿಷನ್ ಹೈಸ್ಕೂಲ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿ ಬ್ಲೇರ್ ೧೮೪೭ರಲ್ಲಿ ಮಂಗಳೂರು ಸಮೀಪದ ಕೊಣಾಜೆಯ ಬೊಲ್ಮದಲ್ಲಿ ನೂರಾರು ಎಕ್ರೆ ಜಮೀನು ಖರೀದಿಸಿ ಮಿಷನ್ಗೆ ದಾನವಾಗಿ ನೀಡಿದರು. ಅಲ್ಲಿ ಕೂಡ ಕೇಂದ್ರ ಮತ್ತು ಶಾಲೆ ಆರಂಭವಾಯಿತು.
ತುಳುನಾಡಿನಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರಾದವರಲ್ಲಿ ಶೇ. ೯೦ಕ್ಕೂ ಹೆಚ್ಚಿನವರು ಬಿಲ್ಲವರು; ಮಿಷನರಿಗಳು ಇದನ್ನು ತಮ್ಮ ವಾರ್ಷಿಕ ವರದಿ, ಪ್ರಕಟಣೆಗಳಲ್ಲಿ ದೃಢಪಡಿಸಿದ್ದಾರೆ. ಈಗಿನ ಉಡುಪಿ ಜಿಲ್ಲೆಯಲ್ಲಿ ಮಿಷನರಿಗಳಿಂದ ಕ್ರೈಸ್ತರಾದ ಬಹುತೇಕ ಎಲ್ಲರೂ ಬಿಲ್ಲವರು ಎಂಬುದಾಗಿ ಪುಸ್ತಕ ‘ಬಿಲ್ಲವರು ಮತ್ತು ಬಾಸೆಲ್ ಮಿಷನ್’ ಹೇಳುತ್ತದೆ; ಬಿಲ್ಲವರು ಏಕೆ ಆ ಕಡೆಗೆ ಹೆಚ್ಚು ಆಕರ್ಷಿತರಾದರು ಎಂಬುದನ್ನು ಕೂಡ ಪುಸ್ತಕ ವಿವರಿಸುತ್ತದೆ.
ಆರೋಪ ನಿಜವಲ್ಲ
“ಅವಿದ್ಯಾವಂತರಿಗೆ ನಾನಾ ಆಮಿಷ ನೀಡಿ ಮತಾಂತರಿಸಿದರೆಂದು ಈಚೆಗೆ ಕೆಲವರು ಆರೋಪಿಸುತ್ತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಆ ಕಾಲದಲ್ಲಿ ಬಿಲ್ಲವರಲ್ಲಿ ಸಾಕಷ್ಟು ಆಸ್ತಿ ಸಂಪತ್ತು ಹಾಗೂ ಸಮಾಜದಲ್ಲಿ ಗೌರವದ ಸ್ಥಾನ ಹೊಂದಿದ್ದವರು, ಸಮಾಜದ ಮುಖ್ಯಸ್ಥರೆನಿಸಿಕೊಂಡ ಗುರಿಕಾರರು, ಗರಡಿ ಹಾಗೂ ಭೂತಸ್ಥಾನದ ಪೂಜಾರಿಗಳು ಕುಟುಂಬಸಮೇತ ಕ್ರೈಸ್ತಮತವನ್ನು ಅವಲಂಬಿಸಿದ್ದಾರೆ. ಅನಕ್ಷರಸ್ಥರಾಗಿದ್ದರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದು ಯಾವುದೇ ಪ್ರಲೋಭನೆಗಳಿಗೆ ಜಗ್ಗದ ಬಗ್ಗದ ಸ್ವಾಭಿಮಾನಿಗಳಾಗಿದ್ದರು” ಎನ್ನುವ ಲೇಖಕರು ಮತಾಂತರವನ್ನು ಸ್ವಲ್ಪ ಸಹಾನುಭೂತಿಯಿಂದಲೇ ನೋಡಿದ್ದಾರೆ. ಅದಲ್ಲದೆ ಅವರ ಪ್ರಧಾನ ಮೂಲವು (source) ಬಾಸೆಲ್ ಮಿಷನ್ನ ವರದಿಗಳು (೧೮೪೧ರಿಂದ ೧೯೧೪) ಎಂಬುದು ಕೂಡ ಇಲ್ಲಿ ಗಮನಾರ್ಹ.
ಬಿಲ್ಲವರ ಮತಾಂತರವೇ ಯಾಕೆ ಜಾಸ್ತಿ ನಡೆಯಿತು ಎಂಬುದಕ್ಕೆ ಪುಸ್ತಕ ಹೀಗೆ ಉತ್ತರಿಸಿದೆ: “ಜಾತೀಯ ಅಸಮಾನತೆಯ ಪರಾಕಾಷ್ಠೆಯ ಕಾಲಘಟ್ಟದಲ್ಲಿ ತುಳುನಾಡಿನ ಮೂಲನಿವಾಸಿಗಳಾದ ಬಿಲ್ಲವರು ಶೋಷಣೆಗೆ ಒಳಪಟ್ಟು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಅವಕಾಶವಂಚಿತರಾಗಿದ್ದರು. ಭೂತಾರಾಧನೆಯನ್ನು ಅವಲಂಬಿಸಿಕೊಂಡು ಬಂದಿದ್ದ ಬಿಲ್ಲವರಿಗೆ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲ. ತುಳುನಾಡಿನ ಇತರ ಮೂಲನಿವಾಸಿಗಳಾದ ಕುಲಾಲ(ಕುಂಬಾರ), ದೇವಾಡಿಗ, ಗಾಣಿಗ, ಮಡಿವಾಳ ಮುಂತಾದವರಿಗೆ ದೇವಾಲಯಗಳಲ್ಲಿ ಸೇವೆ ಮಾಡಲು ಅವಕಾಶವಿತ್ತು. ಬಿಲ್ಲವರಿಗೆ ದೇವಳದ ಅಂಗಳಕ್ಕೂ ಪ್ರವೇಶವಿರಲಿಲ್ಲ. ೧೮೬೫ರಲ್ಲಿ ಅರಸಪ್ಪನವರು ಕದ್ರಿ ದೇವಾಲಯಕ್ಕೆ ಪ್ರವೇಶ ಕೋರಿ ಕಾನೂನು ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ೧೯೪೩ರಲ್ಲಿ ಪಣಂಬೂರಿನ ನಂದನೇಶ್ವರ ದೇವಾಲಯದಲ್ಲಿ ಪ್ರವೇಶ ಕೋರಿ ನಡೆಸಿದ ಕಾನೂನು ಹೋರಾಟ ಕೂಡ ಫಲ ನೀಡಲಿಲ್ಲ. ದೇಶವು ಸ್ವಾತಂತ್ರ್ಯ ಗಳಿಸಿದ ಬಳಿಕವಷ್ಟೇ ಬಿಲ್ಲವರಿಗೆ ದೇವಾಲಯ ಪ್ರವೇಶ ಸಾಧ್ಯವಾಯಿತು. ನಮ್ಮ ದೇಶದಲ್ಲಿ ಪುರೋಹಿತಶಾಹಿಗಳು ಸೃಷ್ಟಿಸಿದ ವರ್ಣವ್ಯವಸ್ಥೆಯ ಶೋಷಣೆಯ, ಶೂದ್ರವರ್ಗದ ಜನರ ಅಮಾನವೀಯ ಬದುಕಿನ ಕಾಲವನ್ನು ಮಿಷನರಿಗಳು ತಮ್ಮ ಮೂಲ ಉದ್ದೇಶವಾದ ಮತಪ್ರಚಾರಕ್ಕಾಗಿ ಸೂಕ್ತವಾಗಿ ಮತ್ತು ವಿವೇಚನಾತ್ಮಕವಾಗಿ ಬಳಸಿಕೊಂಡರು” ಎಂದು ರಮಾನಾಥ ಕೋಟೆಕಾರ್ ಹೇಳಿದ್ದಾರೆ. ಇಲ್ಲಿ ಶೂದ್ರವರ್ಗ ಎನ್ನುವಾಗ ಅದರಲ್ಲಿ ಮೇಲೆ ಹೇಳಿದ ಕುಲಾಲ, ದೇವಾಡಿಗ, ಗಾಣಿಗ, ಮಡಿವಾಳರು ಕೂಡ ಬರುತ್ತಾರೆ. ಇಲ್ಲಿ ಅವರು ಹೇಳುವ ಶೋಷಣೆ ಅನ್ವಯವಾಗಿಲ್ಲ ಎನ್ನುವುದು ಒಂದಾದರೆ ಮಿಷನರಿಗಳು ಆ ಕಾಲವನ್ನು (ಸಂದರ್ಭವನ್ನು) ‘ಸೂಕ್ತವಾಗಿ ಮತ್ತು ವಿವೇಚನಾತ್ಮಕವಾಗಿ ಬಳಸಿಕೊಂಡರು’ ಎನ್ನುವುದು ಕೂಡ ಚರ್ಚಾಸ್ಪದವಾಗುತ್ತದೆ. ಇಲ್ಲಿ ದಾಳಿಗೆ ಗುರಿಯಾದದ್ದು ಪುರೋಹಿತಶಾಹಿಗಳ ಸೃಷ್ಟಿ ಎನ್ನಬಹುದಾದ ಅಂಶಗಳು ಮಾತ್ರ ಅಲ್ಲ; ಭೂತಸ್ಥಾನಗಳು ಮತ್ತು ಭೂತಾರಾಧನೆಯ ಪರಿಕರಗಳನ್ನು ಇಲ್ಲಿ ಬರುವ ಮಿಷನರಿಗಳು ಸಮೂಲವಾಗಿ ಕಿತ್ತುಹಾಕಿದ್ದನ್ನು ಪುಸ್ತಕ ಸವಿವರವಾಗಿ ಚಿತ್ರಿಸುತ್ತದೆ. ಸಂತ್ರಸ್ತರ ಕಷ್ಟದ ಸನ್ನಿವೇಶಗಳನ್ನು ಅವರು ಧಾರಾಳ ಬಳಸಿಕೊಂಡಿದ್ದಾರೆ; ಅಂದರೆ ದುರುಪಯೋಗ ಮಾಡಿದ್ದಾರೆ. ಲೇಖಕರು ಬಳಸಿರುವ ಮೂಲಗಳು ಆ ಬಗ್ಗೆ ಮೂಕವಾಗಿವೆ; ಅಥವಾ ಅಗತ್ಯವಿರುವಷ್ಟು ಗಮನಸೆಳೆಯುವುದಿಲ್ಲ ಅಷ್ಟೆ. ಲೇಖಕರು ಹೇಳದಿರುವ ಇನ್ನೊಂದು ಅಂಶವಿದೆ. ಅದೆಂದರೆ ಬಿಲ್ಲವರಿಗೆ ಕೆಲವೆಡೆ ಅಸ್ಪೃಶ್ಯತೆ ಕೂಡ ಇತ್ತು.
ಮುಂದಿನ ಮಾತುಗಳಲ್ಲಿ ಲೇಖಕರ ನಿಲವು ಇನ್ನಷ್ಟು ಸ್ಪಷ್ಟವಾಗುತ್ತದೆ: “ಯಾವುದೇ ಮತಾಂತರವು ರಾತ್ರಿ ಬೆಳಗಾಗುವುದರೊಳಗೆ ಅಥವಾ ಒಂದೆರಡು ದಿನಗಳಲ್ಲಿ ನಡೆದ ಕಾರ್ಯವಲ್ಲ. ಒಬ್ಬ ವ್ಯಕ್ತಿಯನ್ನು ಅನೇಕ ಬಾರಿ ಭೇಟಿಯಾಗಿ ಹಲವು ಸಮಯ ಆತನಿಗೆ ಕ್ರೈಸ್ತ ಬೋಧನೆ ನೀಡಿ ಅವನು ಕ್ರೈಸ್ತ ತತ್ತ್ವಗಳನ್ನು ತಿಳಿದುಕೊಂಡ ಬಳಿಕವೇ ಆತನಿಗೆ ದೀಕ್ಷಾಸ್ನಾನ ನೀಡಿ ಮತಾಂತರಿಸಲಾಗಿದೆ. ಒಂದೊಂದು ಕುಟುಂಬಗಳಿಗೆ ಆರು ತಿಂಗಳು, ಒಂದು ಅಥವಾ ಎರಡು ವರ್ಷ ತೆಗೆದುಕೊಂಡ ಪ್ರಕರಣವಿದೆ. ಇಷ್ಟಾದ ಮೇಲೂ ಕ್ರೈಸ್ತರಾದವರು ಅನೇಕ ಮಂದಿ ತಮ್ಮ ಮೂಲಧರ್ಮಕ್ಕೆ ಹಿಂತಿರುಗಿದ್ದಾರೆ. ನಿಷ್ಕಲ್ಮಶ ನಡೆನುಡಿಯ ಅವಿದ್ಯಾವಂತ ಬಿಲ್ಲವರು ತಮ್ಮ ಸಂಪ್ರದಾಯ ನಂಬಿಕೆ ಹಾಗೂ ಆರಾಧನೆಯನ್ನು ತ್ಯಜಿಸಿ ಕ್ರೈಸ್ತರಾಗುವ ಕಠಿಣ ನಿಲವನ್ನು ಹೊಂದಲು ಕಾರಣವಾಗುವ ಸನ್ನಿವೇಶಗಳು ಬಹಳ ಮುಖ್ಯವಾದುದು. ಈ ಸಂದರ್ಭದಲ್ಲಿ ಒಂದು ಮಾತನ್ನು ನಾವು ನೇರವಾಗಿ ಹೇಳಬೇಕಾಗುತ್ತದೆ. “ಮತಾಂತರಗೊಳಿಸಿದ್ದಾರೆ ಎನ್ನುವುದಕ್ಕಿಂತಲೂ ಮತಾಂತರಕ್ಕೆ ಪೂರಕವಾದ ಅವಕಾಶವನ್ನು ಹಾಗೂ ಸನ್ನಿವೇಶವನ್ನು ನಾವು ಸೃಷ್ಟಿಸಿಕೊಟ್ಟಿರುವೆವು ಎನ್ನುವುದು ಸೂಕ್ತವಾದುದು.” ಅಂದರೆ ಅದಕ್ಕಾಗಿ ನಾವು ಅವರಿಗೆ ಕೃತಜ್ಞತೆ ಹೇಳಬೇಕೆ? ಈ ವಾದವನ್ನು ಎಡಪಂಥೀಯರು; ಬುದ್ಧಿಜೀವಿಗಳು ಸೇರಿದಂತೆ ಹಲವರಿಂದ ನಾವು ಕೇಳುತ್ತೇವೆ. ಮತಾಂತರ ಮಾಡಿಸಿದ್ದರಲ್ಲಿ ಏನೂ ತಪ್ಪಿಲ್ಲವೆ? ಮನೆಯ ಬಾಗಿಲು ತೆರೆದಿದೆ ಎಂದು ಕಳ್ಳತನ ಮಾಡಬಹುದೆ? ಅಂತಹ ಕಳ್ಳತನ ಅಪರಾಧ ಆಗುವುದಿಲ್ಲವೆ?
ಇರಲಿ, ಇಂತಹ ಸನ್ನಿವೇಶದಲ್ಲಿ ನಾವು ಎಲ್ಲೆಡೆ ಮಾಡುತ್ತಿದ್ದ ತಪ್ಪನ್ನು ಪುಸ್ತಕ ಉಲ್ಲೇಖಿಸಿದೆ: “ಆ ಕಾಲದಲ್ಲಿ ಮೂಡಬಿದರೆಯಲ್ಲಿ ತಹಸೀಲ್ದಾರರಾಗಿದ್ದ ‘ತಲ್ವಾರ್’ ಎಂಬ ಉಪನಾಮದ ಬಿಲ್ಲವರೊಬ್ಬರಿಗೆ ಬ್ರಿಟಿಷ್ ಅಧಿಕಾರಿಯೊಂದಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಲಾಯಿತು. ಅನಂತರ ಅವರು ಕ್ರೈಸ್ತರಾಗಿ ಮತಾಂತರ ಹೊಂದಿ ಆ ದೇವಾಲಯವನ್ನು ಪ್ರವೇಶಿಸಿದರು. ಅದೇ ಸಮಯದಲ್ಲಿ ಮುನ್ಸಿಫ್ (ನ್ಯಾಯಾಧೀಶ) ಆಗಿದ್ದ ಕೊರಗಪ್ಪ ಎಂಬ ಬಿಲ್ಲವರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸಿದ ಕಾರಣ ಅವರು ಕ್ರೈಸ್ತಧರ್ಮವನ್ನು ಸ್ವೀಕರಿಸಿದರು.”
ಭೂತದ ಭಯ
ಬಿಲ್ಲವರು ಪುರಾತನ ಕಾಲದಿಂದಲೂ ಭೂತಾರಾಧಕರು. ತಮಗೆ, ತಮ್ಮ ಸಾಕುಪ್ರಾಣಿಗಳಿಗೆ ರೋಗಬಾಧೆ ಉಂಟಾದಾಗ ಅದು ಭೂತದ ಉಪದ್ರವದಿಂದ ಎಂದು ತಿಳಿಯುತ್ತಿದ್ದರು. ತಮ್ಮ ಮಕ್ಕಳು, ಹಿರಿಯರು, ಬಂಧುಗಳು, ದನಕರುಗಳು, ಇತರ ಪ್ರಾಣಿಗಳು ತೀರಿಹೋದಾಗ ಮಾನಸಿಕ ಸ್ತಿಮಿತ ಕಳೆದುಕೊಂಡು ತಾನು ದೈವಗಳಿಗೆ ಹರಕೆ-ಕಾಣಿಕೆ ಸಲ್ಲಿಸಿದರೂ ಅದು ತಮಗೆ ಬಾಧೆ ನೀಡಿತು ಎಂದು ದುಃಖಪಟ್ಟು ವೈರಾಗ್ಯದಿಂದ ಕ್ರೈಸ್ತರಾದ ಪ್ರಕರಣಗಳು ಅತ್ಯಂತ ಹೆಚ್ಚು. ಕ್ರೈಸ್ತರಿಗೆ ಯಾವ ಭೂತಬಾಧೆಗಳೂ ತಟ್ಟುವುದಿಲ್ಲ ಎಂಬ ಮಾತು ಆಗ ಪ್ರಚಲಿತವಿತ್ತು.
“ಅನಾರೋಗ್ಯಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು ಮತಾಂತರಕ್ಕೆ ಮುಖ್ಯ ಕಾರಣವಾಗಿದ್ದವುಗಳಲ್ಲಿ ಒಂದು. ಉಡುಪಿ ಸಮೀಪದ ಪಾಂಗಾಳದಲ್ಲಿ ಬಿಲ್ಲವರ ಒಂದು ಮಗುವಿಗೆ ಅನಾರೋಗ್ಯದಿಂದ ಮೈನಡುಕ ಬರುತ್ತಿತ್ತು. ಭೂತಪ್ರೇತದ ಬಾಧೆಯೆಂದು ಭಾವಿಸಿ ದೈವಗಳಿಗೆ ಹರಕೆ ಸಲ್ಲಿಸಿದರೂ ಗುಣವಾಗಲಿಲ್ಲ. ಯೇಸುಕ್ರಿಸ್ತನನ್ನು ನಂಬಿದವರಿಗೆ ಭೂತಬಾಧೆ ತಟ್ಟುವುದಿಲ್ಲ; ಮಿಷನ್ನ ಫಾದರ್ರವರ ಬಳಿ ಭೂತಗಳು ಬರುವುದಿಲ್ಲವೆಂದು ಯಾರೋ ಹೇಳಿದರು. ಆ ತಾಯಿ ತನ್ನ ಮಗುವನ್ನು ಫಾದರ್ರವರ ಕೈಯಲ್ಲಿ ನೀಡಿದಾಗ ಅವರು ಯೇಸುವನ್ನು ನಂಬಿ ಎಂದು ಹೇಳಿದರು. ಮಗು ಗುಣಮುಖ ಹೊಂದಿದ ಬಳಿಕ ಇಡೀ ಕುಟುಂಬ ಕ್ರೈಸ್ತ ಮತಾವಲಂಬಿಯಾಯಿತು.” ಇದು ಅಂದಿನ ಅವಿದ್ಯಾವಂತರಾದ ಬಿಲ್ಲವರ ಮಾನಸಿಕಸ್ಥಿತಿಗೆ ಸಹಜವೆನಿಸಿತ್ತು. ತುಂಬಾ ಕಷ್ಟದ ಕಾಲದಲ್ಲಿ ಮತಾಂತರ ಹೊಂದಿದ ಸಾಕಷ್ಟು ಜನ ಅನಂತರ ತಮ್ಮ ಮೂಲಧರ್ಮಕ್ಕೆ ಹಿಂದಿರುಗಿದ್ದಿದೆ; ಮತ್ತು ಹೆಚ್ಚಿನ ಸಂಖ್ಯೆಯ ಬಿಲ್ಲವರು ಭೂತಾರಾಧನೆಯನ್ನು ದೃಢವಾಗಿ ನಂಬಿಕೊಂಡು ಬಿಲ್ಲವರಾಗಿಯೇ ಉಳಿದರು ಎನ್ನುವುದಕ್ಕೆ ಕರಾವಳಿ ಜನಜೀವನವು ಸಾಕ್ಷಿಯಾಗಿದೆ.
ಪ್ರಕೃತಿವಿಕೋಪದಿಂದ, ರೋಗಬಾಧೆಗಳಿಂದ ಬೆಳೆಗಳು ಕೆಟ್ಟು ಫಲ ಶೂನ್ಯವಾದಾಗ, ಭೂಮಾಲೀಕರಿಂದ ಗೇಣಿದಾರ ರೈತರಿಗೆ ಪೀಡನೆ, ಗೇಣಿ ಬಾಕಿಯಾಗಿದೆಯೆಂದು ಸುಳ್ಳು ಲೆಕ್ಕಪತ್ರಗಳು, ಒಕ್ಕಲೆಬ್ಬಿಸುವಿಕೆ, ನಿಂದನೆ, ಅಪಮಾನಗಳು ವಿಪರೀತವಾದಾಗ ಬೇಸತ್ತು ಪ್ರಸ್ತುತ ಪ್ರೊಟೆಸ್ಟೆಂಟ್ ಕ್ರೈಸ್ತಮತಕ್ಕೆ ಸೇರಿದವರಿದ್ದಾರೆ. ಮಿಷನರಿಗಳು ಇಡೀ ತುಳುನಾಡಿನಲ್ಲಿ ಸರ್ಕಾರದಿಂದ ಜಮೀನುಗಳನ್ನು ಪಡೆದು ಅದನ್ನು ಕ್ರೈಸ್ತರಾದ ಜಮೀನುರಹಿತರಿಗೆ ಒದಗಿಸಿ ಅವರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ.
ಭೂಮಾಲೀಕ ದೌರ್ಜನ್ಯ
ಉಡುಪಿ ತಾಲೂಕಿನ ಉಚ್ಚಿಲದ ಭೂತದ ಪೂಜಾರಿಯೊಬ್ಬರಿಗೆ ಸೇರಿದ್ದ ಸಣ್ಣ ಕಾಡಿನ ಮರವನ್ನು ಭೂಮಾಲೀಕರು ಐದಾರು ಆಳುಗಳನ್ನು ಕಳುಹಿಸಿ ಅಕ್ರಮವಾಗಿ ಕಡಿಸಿದಾಗ ಪ್ರತಿಭಟಿಸಿದ ಪೂಜಾರಿಗೆ ಹೊಡೆದು ಓಡಿಸಿದರು. ಅವಮಾನದಿಂದ ತೀವ್ರವಾಗಿ ನೊಂದ ಪೂಜಾರಿ ಮಿಷನರಿಗಳ ಸಹಾಯ ಪಡೆದರು. ಕೊನೆಗೆ ಅವರ ಕುಟುಂಬವೇ ಕ್ರೈಸ್ತರಾದರು. ಭೂಮಾಲೀಕರು ಬಡ ಗೇಣಿದಾರರನ್ನು ಪೀಡಿಸುತ್ತಿದ್ದ ಆ ಕಾಲದಲ್ಲಿ ಜನರಿಗೆ ನೆರವು ನೀಡುವವರೇ ಇರಲಿಲ್ಲ. ಭೂಮಾಲೀಕರ ಹಾಗೂ ಮೇಲ್ವರ್ಗದವರ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಆಗ ಮಿಷನರಿಗಳು ಬಡವರ ಪರವಾಗಿ ನಿಂತು ಅವರಿಗೆ ಸಲಹೆ ಸಹಕಾರಗಳನ್ನು ನೀಡಿದ ಕಾರಣ ಅನೇಕ ಕುಟುಂಬಗಳು ಕ್ರೈಸ್ತಮತಕ್ಕೆ ಸೇರಿಕೊಂಡವು.
ಈಗಿನಂತೆ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದ ಆ ಕಾಲದಲ್ಲಿ ಕಾಲರಾ, ಸಿಡುಬು, ಟೈಫಾಯಿಡ್ ಮುಂತಾದ ರೋಗಗಳು ಬಂದಾಗ ಜನ ಕಂಗಾಲಾಗುತ್ತಿದ್ದರು. ಪ್ಲೇಗ್ ಬಂದರೆ ಊರೇ ಖಾಲಿಯಾಗುತ್ತಿತ್ತು. ಜನ ಅಂತಹ ಕಾಯಿಲೆಗಳಿಂದ ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿದ್ದಾಗ ಬಂಧುಗಳು ಅವರ ದೀನಾವಸ್ಥೆಯನ್ನು ನೋಡಿ ಮರುಗಿ ಯಾವುದೇ ಚಿಕಿತ್ಸೆ, ಹರಕೆ ನಿಷ್ಫಲಗೊಂಡಾಗ ಕೊನೆಗೆ ಮಿಷನರಿಗಳಿಗೆ ಶರಣಾಗುತ್ತಿದ್ದರು. ವೈದ್ಯಕೀಯ ನೆರವಿನಿಂದ ರೋಗನಿವಾರಣೆಯಾದಾಗ ಉಪಕಾರ ಸ್ಮರಣೆಯಿಂದ ಮುಗ್ಧಜೀವಿಗಳು ಮಿಷನರಿಗಳ ಮಾತಿನಂತೆ ಕ್ರೈಸ್ತರಾಗುತ್ತಿದ್ದರು. ಮಿಷನರಿಗಳ ಬಂಗ್ಲೆಗಳಲ್ಲಿ ಟಿಶ್ಯೂ ಮದ್ದುಗಳನ್ನು ಹಾಗೂ ಹೋಮಿಯೋಪತಿ ಔಷಧಿಗಳನ್ನು ನೀಡುತ್ತಿದ್ದು, ಅನೇಕರು ಅಲ್ಲಿಗೆ ಚಿಕಿತ್ಸೆಗಾಗಿ ಹೋಗುತ್ತಿದ್ದರು.
ಮಿಷನ್ ಶಾಲೆ ಶಿಕ್ಷಣ
ಮಿಷನ್ ಶಾಲೆಗಳಲ್ಲಿ ಶಿಕ್ಷಣ ಪಡೆದ ಮಕ್ಕಳು ಕ್ರೈಸ್ತಮತವನ್ನು ಸ್ವೀಕರಿಸಿ ಅನಂತರ ತಮ್ಮ ಕುಟುಂಬವನ್ನೂ ಕ್ರೈಸ್ತರನ್ನಾಗಿ ಮಾಡಿದ್ದಿದೆ. ಬಹಳಷ್ಟು ಪ್ರಕರಣಗಳಲ್ಲಿ ಕ್ರೈಸ್ತಮತಕ್ಕೆ ಸೇರಿದ ಗಂಡನೊಂದಿಗೆ ಹೆಂಡತಿ ಮತ್ತು ಮಕ್ಕಳು ಅನಂತರ ಸೇರಿದ್ದಿದೆ. ತಮ್ಮ ಪ್ರೀತಿಯ ಮಕ್ಕಳನ್ನು ಬಿಡಲಾಗದೆ ತಾವೂ ಕೈಸ್ತರಾದ ತಂದೆ-ತಾಯಿ ಬಹಳ ಇದ್ದಾರೆ.
ಮಿಷನರಿಗಳಿಂದ ಕ್ರೈಸ್ತರಾದವರು ಶಿಕ್ಷಣ ಪಡೆದು ಉದ್ಯೋಗ ಹೊಂದಿ ತಮ್ಮಲ್ಲಿ ನಡೆ-ನುಡಿ, ಭಾಷೆ, ಆಚಾರ-ವಿಚಾರ, ಶಿಸ್ತು, ಸ್ವಚ್ಛತೆಗಳನ್ನು ಬೆಳೆಸಿಕೊಂಡರು. ಸಂಬಂಧಿಕರನ್ನು ತಮ್ಮ ಮನೆಗೆ ಕರೆಸಿ ಬಹಳಷ್ಟು ದಿನ ಉಳಿಸಿಕೊಂಡು ಅವರ ಮನಃಪರಿವರ್ತನೆ ಮಾಡಿದರು. ಈ ನವಕ್ರೈಸ್ತರ ಜೀವನದಿಂದ ಪ್ರಭಾವಿತರಾದ ಬಹಳಷ್ಟು ಜನ, ಅವರ ಬಂಧುಗಳು ಕ್ರೈಸ್ತರಾದರು. ಕ್ರೈಸ್ತ ಕನ್ಯೆಯನ್ನು ಮದುವೆಯಾಗಿ ಕ್ರೈಸ್ತರಾದವರೂ ಇದ್ದರು.
ಬಾಸೆಲ್ ಮಿಷನ್ ಸ್ಥಾಪಿಸಿದ ನೇಯ್ಗೆ, ಮುದ್ರಣಾಲಯ, ಮೆಕ್ಯಾನಿಕಲ್ ವರ್ಕ್ಶಾಪ್ ಮತ್ತು ಹೆಂಚಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಬಹಳಷ್ಟು ಕಾರ್ಮಿಕರು ಅನಂತರ ಕ್ರೈಸ್ತಮತ ಸ್ವೀಕಾರ ಮಾಡಿದರು; ಅಲ್ಲಿ ಉದ್ಯೋಗ ನೀಡುವಲ್ಲಿ ಕ್ರೈಸ್ತರಾದವರಿಗೆ ಪ್ರಾಶಸ್ತ್ಯ ಇದ್ದ ಕಾರಣ ಹಲವರು ಕ್ರೈಸ್ತ ಮತಾವಲಂಬಿಗಳಾಗಿರಲೂಬಹುದು.
ಕ್ರೈಸ್ತಮತ ಸ್ವೀಕರಿಸಿದವರ ಸಾಮಾಜಿಕ ಸ್ಥಿತಿಗತಿ ಉತ್ತಮಗೊಳ್ಳುತ್ತ ಬಂತು. ಅವರಿಗೆ ಯಾವ ಭೂತದ ಉಪದ್ರವವೂ ನಾಟುವುದಿಲ್ಲ ಎಂಬ ನಂಬಿಕೆ ಪ್ರಚಾರ ಪಡೆದುಕೊಂಡಿತು; ಜನರು ಕ್ರೈಸ್ತ ಬೋಧಕರನ್ನು ತಮ್ಮ ಮನೆಗೆ ಕರೆಸಿ ಬೋಧನೆಗಳನ್ನು ಆಲಿಸಿದರು. ಅವರ ಆಶ್ರಯ, ಕೃಪೆಗಳಲ್ಲಿ ತಾವು ಸುಭದ್ರ ಎಂಬ ನಂಬಿಕೆ ಬೆಳೆಯಿತೆಂದು ಬಾಸೆಲ್ ಮಿಷನ್ ವರದಿ ದಾಖಲಿಸಿದೆ.
“ಮಿಷನರಿಗಳು ಆಗಿನ ಕಾಲದಲ್ಲಿ ಅವಿದ್ಯಾವಂತ ಮುಗ್ಧ ಜನರಲ್ಲಿದ್ದ ಕೀಳರಿಮೆ ಹಾಗೂ ಮೂಢನಂಬಿಕೆಗಳನ್ನು ಖಂಡಿಸಿ ಬರೆದು ಪ್ರಕಟಿಸಿ ಜನಜಾಗೃತಿಯನ್ನು ಮೂಡಿಸಿದ್ದಾರೆ. ಜ್ಯೋತಿಷಿಗಳು ಅನಕ್ಷರಸ್ಥ ಜನರನ್ನು ಶೋಷಿಸುವ ರೀತಿಯನ್ನು ವರ್ಣಿಸಿದ್ದಾರೆ. ಧಾರ್ಮಿಕ ಶೋಷಣೆಯನ್ನು ಸವಿವರವಾಗಿ ಬಹಿರಂಗಪಡಿಸಿದ್ದಾರೆ. ಕೆಟ್ಟ ಅಭ್ಯಾಸಗಳಿಂದ ಹಾಗೂ ಸೋಮಾರಿತನದಿಂದ ಜನ ತಮ್ಮ ಸಂಕಷ್ಟಗಳಿಗೆ ತಾವೇ ಕಾರಣರೆಂದು ತಿಳಿವಳಿಕೆ ನೀಡಿದ್ದಾರೆ. ಬಡರೈತರ ಸಂಕಷ್ಟಗಳನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ. ಮುಖ್ಯವಾಗಿ ಮಳೆಗಾಲದಲ್ಲಿ ತಮ್ಮ ಮಕ್ಕಳನ್ನು ಖಾಲಿಹೊಟ್ಟೆಯಲ್ಲಿ ಶಾಲೆಗೆ ಕಳುಹಿಸುತ್ತಿದ್ದ ಜನರ ಅಸಹಾಯಕತೆಗೆ ದನಿಯಾಗಿದ್ದಾರೆ” ಎಂದ ಪುಸ್ತಕ, ಬಂಟರು ಮತ್ತು ಬ್ರಾಹ್ಮಣರು ಅನಕ್ಷರಸ್ಥ ಬಿಲ್ಲವರನ್ನು ಶೋಷಿಸುತ್ತಿದ್ದರು, ಬಿಲ್ಲವರು ತಲಾತಲಾಂತರದಿಂದ ತಮ್ಮ ಅಜ್ಞಾನ-ಮೂಢನಂಬಿಕೆಗಳಿಂದ ಹೊರಬರಲು ಒಪ್ಪುತ್ತಿರಲಿಲ್ಲ ಎಂದು ವಿಶ್ಲೇಷಿಸಿದೆ.
‘ಸುವರ್ಣಯುಗ’
“೧೮೬೫ರವರೆಗೆ ಕ್ರೈಸ್ತರಾದವರ ಸಂಖ್ಯೆ ಬಹಳ ನಿಧಾನಗತಿಯಲ್ಲಿ ಮುನ್ನಡೆಯುತ್ತಿತ್ತು. ೧೮೬೯ರಿಂದ ೧೮೭೬ರ ವರೆಗಿನ ಅವಧಿಯನ್ನು ಕ್ರೈಸ್ತಸಭೆಗಳ ಸುವರ್ಣಯುಗವೆಂದು ಕರೆಯಬಹುದು” ಎಂದು ಬಾಸೆಲ್ ಮಿಷನ್ ವಾರ್ಷಿಕ ವರದಿಗಳನ್ನು ಉಲ್ಲೇಖಿಸಿ ಲೇಖಕ ರಮಾನಾಥ ಕೋಟೆಕಾರ್ ಹೇಳಿದ್ದಾರೆ. ಸುವರ್ಣಯುಗ ಎನಿಸಿದ ಈ ಅವಧಿಯಲ್ಲಿ ಈ ಭಾಗದ ಪ್ರೊಟೆಸ್ಟೆಂಟ್ ಕ್ರೈಸ್ತರ ಸಂಖ್ಯೆ ದ್ವಿಗುಣಗೊಂಡಿತು. ಮಂಗಳೂರಿನಲ್ಲಿ ೭೫೧ರಷ್ಟಿದ್ದ ಸಂಖ್ಯೆ ೧೮೭೫ರಲ್ಲಿ ೧,೧೭೯ಕ್ಕೆ ಏರಿತು. ಮೂಲ್ಕಿ ಪರಿಸರದಲ್ಲಿ ೩೩೨ರಿಂದ ೭೩೩ಕ್ಕೆ ಏರಿದರೆ, ಉಡುಪಿಯಲ್ಲಿ ೧೭೨ರಿಂದ ೮೪೧ಕ್ಕೆ ಏರಿತು.
ಈ ಅವಧಿಯಲ್ಲಿ ಉಡುಪಿ ಮತ್ತು ಮೂಲ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವೆಡೆ ಒಂದು ದಿನದ ವಿಶೇಷ ಉತ್ಸವವನ್ನು ಏರ್ಪಡಿಸಿ ಜನರಿಗೆ ಸಾಮೂಹಿಕವಾಗಿ ಕ್ರೈಸ್ತ ದೀಕ್ಷೆಯನ್ನು ನೀಡಲಾಯಿತು. ಈಸ್ಟರ್ ಹಬ್ಬದಂದು (ಮಾರ್ಚ್ ೨೮, ೧೮೭೫) ಕಾಪು ಸಮೀಪದ ಪಾದೂರು ಚರ್ಚ್ನಲ್ಲಿ ೪೮ ಮಂದಿಗೆ ದೀಕ್ಷಾಸ್ನಾನವು ನಡೆಯಿತು. ಕೆಲವರು ಹಿಂದಿನ ವರ್ಷವೇ ಸೇರಿದರೆ ಮತ್ತೆ ಕೆಲವರು ಒಂದು ವರ್ಷದಿಂದ ಕಾದಿದ್ದರು. ಅವರು ಪಾದೂರು ಮತ್ತು ಪೇರೂರಿನವರು. ಹೆಚ್ಚಿನವರು ಕೃಷಿಕರಾಗಿದ್ದು, ಉಪಕಸುಬಿನಲ್ಲಿ ಮೂರ್ತೆದಾರ(ಹೆಂಡ ಇಳಿಸುವುದು)ರಾಗಿದ್ದರು; ಕೆಲವು ರೀತಿಯ ತೊಂದರೆಗಳು, ಕಾಯಿಲೆ, ಮಕ್ಕಳ ಮರಣ, ಹಣ ಹಾಗೂ ದ್ರವ್ಯದ ನಷ್ಟ ಅವರನ್ನು ಕ್ರೈಸ್ತಧರ್ಮದೆಡೆಗೆ ತಳ್ಳಿದವು.
ಒಬ್ಬಾಕೆ ತನ್ನ ಗಂಡ ರೋಗಬಾಧೆಗೊಳಗಾದಾಗ ಬಹಳ ಹೆದರಿದಳು. ಗಂಡ ಗುಣಮುಖನಾಗಿ ಕ್ರೈಸ್ತರೊಂದಿಗೆ ಸಂಬಂಧ ಇರಿಸಿಕೊಂಡಿದ್ದರೂ ಎರಡು ವರ್ಷಗಳ ಹಿಂದೆ ಪೂರ್ವಧರ್ಮಕ್ಕೆ ಹಿಂದಿರುಗಿದ್ದ. ಪತ್ನಿ ತನ್ನ ಮಗನೊಂದಿಗೆ ಕ್ರೈಸ್ತಳಾದಳು. ಡೇವಿಡ್ ಮತ್ತು ಲಿಯೋ ತಮ್ಮ ಹಲವು ಮಕ್ಕಳನ್ನು ಕಳೆದುಕೊಂಡವರು. ೧೮೭೪ರಲ್ಲಿ ಅವರ ಒಬ್ಬ ಮಗು ಅನಾರೋಗ್ಯಪೀಡಿತವಾದಾಗ ಆಕೆ ಕ್ರಿಸ್ತರೇ ಅವನನ್ನು ರಕ್ಷಿಸಬೇಕೆಂದು ಪತಿಯ ಮನವೊಲಿಸಿ ಇಬ್ಬರೂ ಕ್ರೈಸ್ತರಾದರು. ಆದರೂ ಮಗು ಉಳಿಯಲಿಲ್ಲ; ಆದರೆ ಅವರು ಕ್ರೈಸ್ತಮತ ತ್ಯಜಿಸಲಿಲ್ಲ. ತುಕ್ರ (ಸಾಮುವೆಲ್) ತನ್ನ ಕುಟುಂಬದೊAದಿಗೆ ಕ್ರೈಸ್ತಮತಕ್ಕೆ ಸೇರಬಯಸಿದ್ದ; ಆದರೆ ಧೈರ್ಯವಹಿಸಲಿಲ್ಲ. ೧೮೭೪ರಲ್ಲಿ ಅವರ ಒಂದು ಮಗು ರೋಗಪೀಡಿತವಾದಾಗ ಆತ ಕ್ರೈಸ್ತಮತಕ್ಕೆ ಸೇರಲು ಇಚ್ಛಿಸಿದ.
ಪೌಲ್ಗೆ ೧೮೭೦ರಲ್ಲಿ ದೀಕ್ಷಾಸ್ನಾನವಾಗಿತ್ತು. ಆತನ ಪತ್ನಿ ಅವನನ್ನು ಬಿಟ್ಟಳು. ಆದರೆ ಆಕೆ ಭೂತದ ಉಪದ್ರವದಿಂದ ಬಹಳ ಕಷ್ಟಪಟ್ಟಳು ಮತ್ತು ಗಂಡನ ಜೊತೆ ಕ್ರೈಸ್ತಳಾಗಲು ಇಚ್ಛಿಸಿದಳು. ಜೋಷ್ಯ ೧೮೭೦ರಲ್ಲಿ ಬೋಧನೆ ಪಡೆದರೂ ಅನಂತರ ಮಾತೃಧರ್ಮಕ್ಕೆ ಹಿಂದಿರುಗಿದ್ದ. ಆದರೆ ಮನಶ್ಶಾಂತಿಯಿಲ್ಲದೆ ಮನೆಯಲ್ಲಿ ಬಹಳ ತೊಂದರೆ ಅನುಭವಿಸಿ, ಕೊನೆಗೆ ದೀಕ್ಷಾಸ್ನಾನ ಬಯಸಿದ; ಆತ ತನ್ನ ಗೆಳೆಯರನ್ನು, ಸಂಬಂಧಿಕರನ್ನು ಕರೆತರಲು ಉತ್ಸುಕನಾಗಿದ್ದಾನೆ ಎಂದು ಬಾಸೆಲ್ ಮಿಷನ್ ವರದಿ ಹೇಳಿದೆ.
ಗುರುವ (ಸೊಲೊಮನ್) ಬಹಳ ಹಿಂದೆಯೇ ಕ್ರೈಸ್ತಧರ್ಮ ಸೇರಲು ಉತ್ಸುಕನಾಗಿದ್ದ. ಆದರೆ ಜಾತಿಯಲ್ಲಿ ಬಹಳ ಪ್ರಭಾವಿಯಾಗಿದ್ದುದರಿಂದ ಹಿಂದೆ ಸರಿದ. ಆತ ಭೂತದ ಪೂಜಾರಿಯಾಗಿದ್ದ ಹಾಗೂ ಆತನ ಆರ್ಥಿಕಮಟ್ಟ ಚೆನ್ನಾಗಿತ್ತು. ಆದರೆ ಜೋಷ್ಯ (ಆತನ ಭಾವ) ಆತನ ಮನ ಒಲಿಸಿದನು. ೧೮೭೪ರಿಂದ ಪ್ರಚಾರಕರಿಂದ ಬೋಧನೆ ಪ್ರಾರಂಭಗೊಂಡು ೧೮೭೫ರಲ್ಲಿ ಮುಕ್ತಾಯಗೊಂಡಿತು. ಒಬ್ಬಾತ ತನ್ನ ಮಗುವಿನೊಂದಿಗೆ “ಮಗು, ನಾವು ಮರಣದ ಹಾದಿಯಲ್ಲಿದ್ದೆವು. ಆದರೆ ದೇವರು ನಮ್ಮನ್ನು ಗುರುತಿಸಿದ; ಆತನ ಸೇವಕರನ್ನು ನಮ್ಮ ಹಳ್ಳಿಗೆ ಕಳುಹಿಸಿದ; ನಮಗೆ ಹೊಸ ದಾರಿ ತೋರಿಸಿದ” ಎಂದು ಹೇಳುತ್ತಿದ್ದ.
ಪಾದೂರಿನಲ್ಲಿ ದೀಕ್ಷಾಸ್ನಾನ ಕೊಡುವ ದಿನ ಸುತ್ತಲಿನ ಉಚ್ಚಿಲಗುಡ್ಡೆ, ಉಡುಪಿ ಆಸುಪಾಸಿನವರಿಗೆ ಆಮಂತ್ರಣ ನೀಡಲಾಯಿತು. ವಿವಿಧ ಕಡೆಯಿಂದ ಕೆಲವು ಕ್ರೈಸ್ತರು ಆಗಮಿಸಿದರು. ಉಡುಪಿ ಮಿಡ್ಲ್ ಸ್ಕೂಲ್ನಿಂದ ಮತ್ತು ಮಂಗಳೂರು ಸೆಮಿನರಿಯಿಂದ ಮಕ್ಕಳು, ಅಧ್ಯಾಪಕರು ಮತ್ತು ಮಿಷನರಿಗಳು ಆಗಮಿಸಿದರು. ಪಾದೂರಿನ ಸಣ್ಣ ಕೊಠಡಿ ಜನರಿಗೆ ಸಾಲದಾಯಿತು; ಜನ ಮನೆಯ ಹೊರಗೆ ನಿಂತಿದ್ದರು. ಕೆಲವು ಹಿಂದುಗಳು ಕೂಡ ಇದ್ದರು. ಹಸಿರೆಲೆಯ ತೋರಣ ಕಟ್ಟಿದರು. ಮನೆಯ ಮುಂಭಾಗವನ್ನು ಅಲಂಕರಿಸಲಾಯಿತು. ದೀಕ್ಷಾಸ್ನಾನದ ಪ್ರಾರ್ಥನೆಯನ್ನು ಮಂಗಳೂರು ಸೆಮಿನರಿಯವರು ತುಳುಭಾಷೆಯಲ್ಲಿ ನೆರವೇರಿಸಿದರು. ದೀಕ್ಷಾರ್ಥಿಗಳಿಗೆ ಪ್ರಶ್ನೆ ಕೇಳಿ ಸಮರ್ಪಕ ಉತ್ತರವನ್ನು ಪಡೆಯಲಾಯಿತು. ಅನಂತರ ಪ್ರತಿ ಕುಟುಂಬದವರು ಮುಂದಕ್ಕೆ ಬಂದು ಬಗ್ಗಿ ದೀಕ್ಷಾಸ್ನಾನವನ್ನು ಸ್ವೀಕರಿಸಿ, ನೂತನ ಹೆಸರನ್ನು ಪಡೆದುಕೊಂಡರು. ಅನಂತರ ಪ್ರಾರ್ಥನೆ ನಡೆಸಲಾಯಿತು.
ಮಧ್ಯಾಹ್ನದ ಬಳಿಕ ಪುನಃ ಎಲ್ಲರೂ ಸೇರಿದರು. ಪ್ರಾರ್ಥನೆಯೊಂದಿಗೆ ಗ್ರೇಟರ್ರವರು ಸಂದೇಶ ನೀಡಿದರು. ಸ್ಥಳೀಯ ಸಭಾಪಾಲಕ ಸೆಬೆಸ್ಟಿಯನ್ ಫುರ್ಟಾಡೋ ಅವರು ಕ್ರಿಸ್ತನನ್ನು ಮರೆಯದಂತೆ ಮನವಿ ಮಾಡಿದರು, ಕೊನೆಗೆ ಪ್ರಚಾರಕ ಎಲಿಸರ್ ಮಾತನಾಡಿದರು. ನೂತನ ಸದಸ್ಯರಿಂದ ತುಳುವಿನಲ್ಲಿ ಪ್ರಾರ್ಥನೆಯಾದ ಅನಂತರ ಔತಣಕೂಟವು ನೆರವೇರಿತು ಎಂದು ಬಾಸೆಲ್ ಮಿಷನ್ ವರದಿ ವಿವರಿಸಿದೆ.
ಪಾಂಗಾಳ ಗುಡ್ಡೆ ಉತ್ಸವ
ಪಾದೂರಿನ ರೀತಿಯಲ್ಲೇ ಉಡುಪಿ ಕಟಪಾಡಿ ಸಮೀಪದ ಪಾಂಗಾಳಗುಡ್ಡೆಯಲ್ಲಿ ಅದೇ ವರ್ಷ ಸೆಪ್ಟೆಂಬರ್ ೫ರಂದು ವಿಶೇಷ ಉತ್ಸವವನ್ನು ನಡೆಸಲಾಯಿತು. ಅಂದು ಅಲ್ಲಿ ಒಟ್ಟು ೯೪ ಜನ ಕ್ರೈಸ್ತಮತಕ್ಕೆ ಸೇರ್ಪಡೆಯಾದರು. ಅವರಲ್ಲಿ ೪೫ ಜನ ಹಿರಿಯರು, ೩೮ ಮಕ್ಕಳು. ಹಿರಿಯರಲ್ಲಿ ಏಳು ಮಂದಿ ಹಿಂದೆ ದೀಕ್ಷಾಸ್ನಾನ ಹೊಂದಿ ಮತ್ತೆ ಮೂಲಧರ್ಮಕ್ಕೆ ಹಿಂದಿರುಗಿದವರು; ಈಗ ಎರಡು ಮಕ್ಕಳೊಂದಿಗೆ ಹಿಂದಿರುಗಿದ್ದರು. ಪ್ರಚಾರಕರು ಬೋಧನೆ ನೀಡಿದ ಬಳಿಕ ಅವರನ್ನು ದೀಕ್ಷಾಸ್ನಾನಕ್ಕೆ ತಯಾರುಗೊಳಿಸಲು ಎರಡು ತಿಂಗಳು ಬೇಕಾಗಿತ್ತು. ಆಮಂತ್ರಣದ ಮೇರೆಗೆ ಎಲ್ಲ ಕೇಂದ್ರಗಳಿಂದ ಸದಸ್ಯರು ಆಗಮಿಸಿದ್ದರು. ಮಂಗಳೂರಿನಿಂದ ನಾಲ್ವರು ಮಿಷನರಿಗಳು, ಉಡುಪಿಯಿಂದ ಬ್ರಾಷೆ ದಂಪತಿಗಳು, ಶಾಲಾಮಕ್ಕಳು, ಉಳಿದ ಕೇಂದ್ರಗಳಿAದ ಕ್ರೆöÊಸ್ತರು ಆಗಮಿಸಿದ್ದರು.
ಪಾಂಗಾಳಗುಡ್ಡೆ ಕೇಂದ್ರದ ಒಳಭಾಗದಲ್ಲಿ ದೀಕ್ಷಾರ್ಥಿಗಳು ಮಾತ್ರ ನಿಲ್ಲಲು ಸ್ಥಳಾವಕಾಶವಿತ್ತು. ಆದ್ದರಿಂದ ಮಹಿಳೆಯರು ಮಾತ್ರ ಒಳಗಡೆ, ಉಳಿದವರೆಲ್ಲ ಹೊರಗಡೆ ಇರಬೇಕಾಯಿತು. ಮೊದಲು ಮಂಗಳೂರು ಸೆಮಿನರಿಯವರಿಂದ ಪ್ರಾರ್ಥನೆ, ಅನಂತರ ಸ್ಥಳೀಯ ಸಭಾಪಾಲಕ ಸೆಬೆಸ್ಟಿಯನ್ ಫುರ್ಟಾಡೋ ಅವರಿಂದ ಉಪನ್ಯಾಸ, ಸೂಕ್ತವಾದ ನುಡಿಮುತ್ತುಗಳು, ಬಳಿಕ ಮಾತೃಧರ್ಮಕ್ಕೆ ಹಿಂತಿರುಗಿದ್ದ ಏಳು ಜನ ಹಿರಿಯರಿಗೆ ಎರಡು ಮಕ್ಕಳೊಂದಿಗೆ ಮರುಸ್ವೀಕಾರ ನಡೆಯಿತು. ಅನಂತರ ನೂತನ ದೀಕ್ಷಾರ್ಥಿಗಳು ಕುಟುಂಬ ಸಮೇತರಾಗಿ ದೀಕ್ಷಾವೇದಿಕೆಗೆ ಬಂದು ತಲೆಬಾಗಿ ದೀಕ್ಷಾಸ್ನಾನವನ್ನು ಸ್ವೀಕರಿಸಿದರು; ಹಾಗೂ ನೂತನ ಹೆಸರುಗಳನ್ನು ಪಡೆದುಕೊಂಡರು.
“ಮಧ್ಯಾಹ್ನದ ಅನಂತರ ಎರಡನೇ ಆರಾಧನೆಯ ಕಾರ್ಯಕ್ರಮ. ಮೂವರು ಮಿಷನರಿಗಳು ಹಾಗೂ ಮೂವರು ಪ್ರಚಾರಕರಿಂದ ನೂತನ ದೀಕ್ಷಾರ್ಥಿಗಳಿಗೆ ಶುಭಾಂಶೆ (ಬುದ್ಧಿವಾದ) ನೆರವೇರಿತು. ದೀಕ್ಷಾಸ್ನಾನ ಹೊಂದಿದವರಲ್ಲಿ ೩೩ ಮಂದಿ ಪಾಂಗಾಳಗುಡ್ಡೆ ಹಾಗೂ ಕಾಪು ನಿವಾಸಿಗಳು. ಇದರಿಂದಾಗಿ ಸದಸ್ಯರ ಸಂಖ್ಯೆ ೧೬೭ಕ್ಕೆ ಏರಿತು. ಗುಡ್ಡೆಗೆ ಉತ್ತರದ ಎರಡು ಮೈಲು (೩.೨ ಕಿ.ಮೀ.) ದೂರದ ಪ್ರದೇಶ ಈಗ ೬೪ ಕ್ರೈಸ್ತರ ಸಭೆ. ಊರಿನ ಮಧ್ಯಭಾಗದ ನಿವಾಸಿಗಳು ಮುಂದೆ ಊರಿಡೀ ಹಬ್ಬಬಹುದೆಂದು ನಮ್ಮ (ಮಿಷನ್ನ) ನಿರೀಕ್ಷೆ. ಅವರ ಮುಖ್ಯಸ್ಥ ಪೀಟರ್ (ಹಿಂದೆ ಗುರುವ) ಊರಿನ ಪ್ರಮುಖ ವ್ಯಕ್ತಿ. ಆತನ ಪತ್ನಿ ಸಾರಾ ಕೂಡ ಒಳ್ಳೆಯ ಹೆಸರು ಪಡೆದವಳು. ಆಕೆಯ ಸಂಬಂಧಿಕರು ಆಕೆಯನ್ನು ಹಿಂದೆ (ಮೂಲಧರ್ಮಕ್ಕೆ) ಪಡೆಯಲು ಬಹಳ ಶ್ರಮಪಟ್ಟರು. ಆಕೆ ತನ್ನ ಆಭರಣಗಳನ್ನು ತೆಗೆದಿರಿಸಿದಾಗ ಆಸೆಬಿಟ್ಟರು. ಆ ದಂಪತಿ ಕ್ರೈಸ್ತರಾಗಲು ಧೈರ್ಯ ಹೊಂದಿರಲಿಲ್ಲ. ಆದರೆ ದೇವರು ಪರಿಸ್ಥಿತಿಯ ನಿರ್ಮಾಣ ಮಾಡಿದರು. ಅವರ ಹಿರಿಯ ಮಗ ಒಂದು ವರ್ಷದಿಂದ ತನ್ನ ತಂದೆತಾಯಿಯನ್ನು ಕ್ರೈಸ್ತರಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ಅವರು ತಾವು ಮುದುಕರಾಗಿದ್ದೇವೆಂದು ಬರಲು ನಿರಾಕರಿಸುತ್ತಿದ್ದರು. ಕೊನೆಗೆ ಆತ ಅನಾರೋಗ್ಯಪೀಡಿತನಾದ. ತನ್ನ ಕೊನೆಯ ಕಾಲ ಬಂತೆಂದು ತಿಳಿದ ಆತ, ತಂದೆತಾಯಿಯನ್ನು ಹತ್ತಿರ ಕರೆದು ತಡಮಾಡದೆ ಕ್ರೈಸ್ತರಾಗುವಂತೆ ವಿನಂತಿಸಿದ. ಅಷ್ಟರಲ್ಲಿ ಆತ ತೀರಿಹೋದ. ಹೆತ್ತವರು ಆತನ ಶವಸಂಸ್ಕಾರವನ್ನು ತಮ್ಮ ಜಾತಿಪದ್ಧತಿಯಂತೆ ನೆರವೇರಿಸಲಿಲ್ಲ; ಮತ್ತು ಕ್ರೈಸ್ತರಾಗಿ ಮತಾಂತರ ಹೊಂದಿದರು.
“ಪಾಂಗಾಳಗುಡ್ಡೆಯಲ್ಲಿ ಮತಾಂತರ ಹೊಂದಿದವರಲ್ಲಿ ಜೋಸೆಫ್ ಪ್ರಮುಖನು. ಕೆಲವು ವರ್ಷಗಳಿಂದ ಆತ ಕ್ರೈಸ್ತನಾಗಲು ಇಷ್ಟಪಟ್ಟಿದ್ದ. ಆದರೆ ಸಂಬಂಧಿಕರು ಆತನನ್ನು ತಡೆಗಟ್ಟಿದ್ದರು. ೧೮೭೫ರಲ್ಲಿ ದೃಢನಿರ್ಧಾರವನ್ನು ಹೊಂದಿ ಸಂಬಂಧಿಕರು ಕೂಡ ತನ್ನನ್ನು ಅನುಸರಿಸಬೇಕೆಂದು ಬಯಸಿದ. ಆದರೆ ಅದು ಈಡೇರಲಿಲ್ಲ. ಪತ್ನಿ ಆತನನ್ನು ಅನುಸರಿಸಿದಳು” ಎಂದು ಮಿಷನ್ ವರದಿ ತಿಳಿಸಿದೆ.
ಕುತ್ಯಾರಿನಲ್ಲಿ
ಕ್ರಿಸ್ತರ ಪುನರುತ್ಥಾನದ ದಿನ (ಈಸ್ಟರ್ ಭಾನುವಾರ ೧೮೭೬) ಕುತ್ಯಾರಿನ ಸಣ್ಣ ಕೇಂದ್ರದಲ್ಲಿ ೨೬ ಮಂದಿ ಕ್ರೈಸ್ತಮತಕ್ಕೆ ಸೇರ್ಪಡೆಯಾದರು; ಎಲ್ಲರೂ ಬಿಲ್ಲವರು. ಅವರು ಐದು ಕುಟುಂಬಗಳಿಗೆ ಸೇರಿದವರು. ಇಸ್ರೇಲ್ ಮತ್ತು ಆತನ ಕುಟುಂಬದ ಸುಮಾರು ಹತ್ತು ಮಂದಿ ಅವರ ಹಳ್ಳಿಯಲ್ಲಿ ಕ್ರೈಸ್ತರಾದ ಮೊದಲಿಗರು. ಅವರು ಭಾನುವಾರ ಪ್ರಾರ್ಥನಾ ಸಭೆಗೆ ಹಾಜರಾಗುತ್ತಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟಕರವಾಗಿತ್ತು.
ಐಸಾಕ್, ಆತನ ಪತ್ನಿ, ನಾಲ್ವರು ಮಕ್ಕಳು ತಮ್ಮ ಪಾಲಿಗೆ ಒದಗಿದ ಸೌಭಾಗ್ಯಕ್ಕಾಗಿ ಬಹಳ ಸಂತೋಷದಿಂದಿದ್ದರು. ಜಾಕೋಬ್, ಆತನ ಪತ್ನಿ ಸಾರಾ ಅವರು ಕ್ರೈಸ್ತಸಭೆಗೆ ಸೇರಿ ಆಗಲೇ ಎರಡು ವರ್ಷ ಕಳೆದಿತ್ತು. ಆದರೆ ದೀಕ್ಷಾಸ್ನಾನ ಹೊಂದಲು ಧೈರ್ಯ ತಾಳಿರಲಿಲ್ಲ. ಈ ಬಾರಿ ದೀಕ್ಷಾಸ್ನಾನಕ್ಕಾಗಿ ಮುಂದೆ ಬಂದರು.
“ಡೇನಿಯಲ್ ಮತ್ತು ಸಾಲೋಮ್ ತಮ್ಮ ಹಳೆಯ ಅಭ್ಯಾಸಗಳನ್ನು ಬಿಟ್ಟು ಹೊಸ ಜೀವನಶೈಲಿಗೆ ಬದಲಾಗಿದ್ದರು. ಕೆಲವು ವರ್ಷಗಳ ಹಿಂದೆ ಅವರು ನಮ್ಮ ಜೊತೆ ಸೇರಿದ್ದರು. ಆದರೆ ಬಹುಬೇಗ ಹಿಂದಿರುಗಿ ತಮ್ಮ ಮೊದಲಿನ ಕೆಟ್ಟ ಅಭ್ಯಾಸಗಳನ್ನು ಮುಂದುವರಿಸಿದ್ದರು. ಆದ್ದರಿಂದ ಅವರನ್ನು ಜಾತಿ ಬಹಿಷ್ಕೃತರೆಂದು ಪರಿಗಣಿಸಿ ಪ್ರತ್ಯೇಕವಾಗಿ ಕುಳ್ಳಿರಿಸಲಾಯಿತು. ಆಗ ಅವರು ವಿನಮ್ರತೆಯಿಂದ ಬೋಧನೆಯನ್ನು ಆಲಿಸಿದರು. ಅದಕ್ಕಾಗಿ ಅವರಿಗೆ ದೀಕ್ಷಾಸ್ನಾನವನ್ನು ನೀಡಲಾಯಿತು.
“ಅಬ್ರಹಾಂ ಮತ್ತು ಕಬಿತ ಅವರ ಇಬ್ಬರು ಮಕ್ಕಳು ಕೊನೆಯಲ್ಲಿ ನಮ್ಮ ಜೊತೆ ಸೇರಿದವರು. ಅವರ ಪತ್ನಿ ಗಣ್ಯ ಕುಟುಂಬದವರು; ಕ್ರಿಸ್ತರನ್ನು ನಂಬುವುದು ಕಷ್ಟವೆನಿಸಿ ಹಿಂದೆ ಸರಿದಿದ್ದರು. ಆದರೆ ಕೆಲವೇ ಸಮಯದ ಅಂತರದಲ್ಲಿ ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದರು. ದೈವದ ಮುನಿಸನ್ನು ಯಾವುದೇ ಹರಕೆಯಿಂದ ತಣಿಸಲಾಗಲಿಲ್ಲ. ದೈವಗಳಿಂದ ಮುಕ್ತಿ ಪಡೆಯಲು (ಪ್ರಾರ್ಥಿಸುವ ಬಗ್ಗೆ) ಅಬ್ರಹಾಂ ನಮ್ಮನ್ನು ಅವರ ಮನೆಗೆ ಕರೆದರು. ಅಂದಿನಿಂದ ಅವರ ಮನೆಯಲ್ಲಿ ಶಾಂತಿ ನೆಲೆಸಿತೆಂದು ತಿಳಿಸಿದರು. ಕ್ರಿಸ್ತರ ಅನುಯಾಯಿಗಳಾದರು. ೧೮೭೫ರಲ್ಲಿ ಇವರು ಪ್ರಾರಂಭಿಕ ಬೋಧನೆಯನ್ನು ಅಬ್ರಹಾಂ ಹೆರಿ ಅವರಿಂದ ಪಡೆದರು. ಅನಕ್ಷರಸ್ಥರಾದ ಕಾರಣ ಇವರು ಎಲ್ಲವನ್ನೂ ನೆನಪಿನಲ್ಲಿ ಇಡಬೇಕಾಗಿತ್ತು. ದೀಕ್ಷಾಸ್ನಾನವನ್ನು ಏಪ್ರಿಲ್ ೧೬ಕ್ಕೆ ನಿಗದಿಪಡಿಸಲಾಯಿತು (ಈಸ್ಟರ್ ಭಾನುವಾರ).
“ನಮ್ಮ ಆಹ್ವಾನದ ಮೇರೆಗೆ ಬಹಳ ಜನ ಬಂದಿದ್ದರು. ಉಡುಪಿಯಿಂದ ಮಿಷನರಿ ಓಟ್ಟ್ ಮತ್ತು ಜೀಗ್ಲರ್, ಸಾಂತೂರಿನಿಂದ ಉಪಸಭಾಪಾಲಕ ಡೇನಿಯಲ್ ಆರೋನ್, ಪಾದೂರಿನಿಂದ ಕೆಲವು ಕ್ರೈಸ್ತರು, ಮಂಗಳೂರು ಸೆಮಿನರಿಯಿಂದ ಕೆಲವರು ಆಗಮಿಸಿದ್ದರು. ಆರಂಭಿಕ ಬೋಧನೆಯ ತರುವಾಯ ಮೂಲ್ಕಿ ಶಾಲೆಯ ಹೆಣ್ಣುಮಕ್ಕಳು ವಿಶೇಷ ಸಂಗೀತವನ್ನು ಹಾಡಿದರು. ಬಳಿಕ ಕ್ರೈಸ್ತರಾಗುವವರು ಉಚ್ಚಸ್ವರದಲ್ಲಿ ಯೇಸುಸ್ವಾಮಿಯ ಮೇಲಿನ ತಮ್ಮ ನಂಬಿಕೆಯನ್ನು ಪ್ರಕಟಿಸಿದರು. ಒಂದು ಕುಟುಂಬದ ಅನಂತರ ಇನ್ನೊಂದು ಕುಟುಂಬದವರು ತಲೆಬಾಗಿ ದೀಕ್ಷಾಸ್ನಾನವನ್ನು ಸ್ವೀಕರಿಸಿದರು. ಬಳಿಕ ಮಂಗಳೂರು ಸೆಮಿನರಿಯವರು ಸಂಗೀತ ಹಾಡಿದರು. ಮಧ್ಯಾಹ್ನ ಪುನಃ ಎಲ್ಲರೂ ಒಟ್ಟು ಸೇರಿದರು. ಮಿಷನರಿ ಓಟ್ಟ್ರವರು ನೂತನ ಕ್ರೈಸ್ತರಿಗೆ ಬುದ್ಧಿವಾದದ ಮಾತುಗಳನ್ನು ಹೇಳಿದರು. ಉಪಸಭಾಪಾಲಕ ಡೇನಿಯಲ್ ಆರೋನ್ರಿಂದ ಶುಭಾಂಶೆ (ಬೋಧನೆ), ಇಸ್ರೇಲ್ ಎಲಿಜರ್ನಿಂದ ಪ್ರಾರ್ಥನೆ ನೆರವೇರಿತು.
ಉಡುಪಿಯಲ್ಲಿ
ಅದೇ ಏಪ್ರಿಲ್ ೨೩ರಂದು ಇನ್ನೊಂದು ಮಿಷನ್ ಹಬ್ಬವು ಉಡುಪಿಯ ಗುಂಡಿಬೈಲಿನಲ್ಲಿ ಜರಗಿತು. ೩೦ ಜನರಲ್ಲಿ ೨೩ ಮಂದಿಗೆ ದೀಕ್ಷಾಸ್ನಾನವು ನೆರವೇರಿತು. ಕೆಲವು ಕುಟುಂಬಗಳವರು ಭೂತಾರಾಧನೆಯನ್ನು ಬಿಟ್ಟು ಬರಲು ಸಿದ್ಧರಾದರು. ಮಿಷನರಿಗಳಿಗೆ ಮನವಿ ಸಲ್ಲಿಸಿ ಭೂತದ ವಸ್ತುಗಳನ್ನು ತೆಗೆಯುವಂತೆ ಕೇಳಿಕೊಂಡರು. ಕೆಲವರು ಮೂಲಧರ್ಮಕ್ಕೆ ಹಿಂದಿರುಗಿದರು. ಅಲ್ಲಿ ಅತಿ ಹೆಚ್ಚು ಮತಾಂತರಗೊಂಡವರು ಬಿಲ್ಲವ ಜಾತಿಯವರು ಎಂದು ಬಾಸೆಲ್ ಮಿಷನ್ ೧೮೭೭ರ ವರದಿ ತಿಳಿಸಿದೆ.
ಅದೇ ರೀತಿ ಡಿಸೆಂಬರ್ ೩೧, ೧೮೭೬ರಂದು ಮಡಂಬೈಲಿನಲ್ಲಿ ವಿಶೇಷ ಉತ್ಸವ ನಡೆಸಿ ೩೦ ಜನರಿಗೆ ಕ್ರೈಸ್ತದೀಕ್ಷೆಯನ್ನು ನೀಡಲಾಯಿತು. ಅದಲ್ಲದೆ ಕಟಪಾಡಿ, ಮೂಲ್ಕಿ, ಉಡುಪಿ ಕ್ಷೇತ್ರದ ಉಪಕೇಂದ್ರಗಳಲ್ಲಿ ವಿಶೇಷ ಸಮಾರಂಭ ನಡೆಸಿ ಸಾಮೂಹಿಕ ಕ್ರೈಸ್ತದೀಕ್ಷೆ ನೀಡಲಾಯಿತು. ೧೮೬೯ರಲ್ಲಿ ಇಡೀ ವರ್ಷ ೨೪ ಮೈಲು ಉದ್ದ (ಒಂದು ಮೈಲು ಅಂದರೆ ೧.೬ ಕಿ.ಮೀ), ನಾಲ್ಕು ಮೈಲು ಅಗಲದ ಉಡುಪಿ ವ್ಯಾಪ್ತಿಯ ೨೮ ಹಳ್ಳಿಗಳು, ಮುಖ್ಯವಾಗಿ ಸಾಂತೂರು, ಉಚ್ಚಿಲ, ಕಾಪು, ಕಟಪಾಡಿ, ಉದ್ಯಾವರ, ಬೊಲ್ಮಾರ್, ಬಸ್ರೂರುಗಳಿಂದ ಜನ ಬಾಸೆಲ್ ಮಿಷನ್ ಕೇಂದ್ರಗಳಿಗೆ ಆಗಮಿಸಿ, ಮಿಷನರಿಗಳು ಮತ್ತು ಪ್ರಚಾರಕರೊಂದಿಗೆ ಮಾತನಾಡಿ, ತಮ್ಮ ಮನೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಭೂತಾರಾಧನೆಗೆ ಸಂಬಂಧಿಸಿದ ವಸ್ತುಗಳನ್ನು ತೆರವುಗೊಳಿಸುವಂತೆ ವಿನಂತಿಸಿದರು. ಪ್ರತಿದಿನ ಒಂದು ಅಥವಾ ಎರಡು ಮನೆಯವರು ಕ್ರೈಸ್ತಮತಕ್ಕೆ ಸೇರಿಕೊಂಡರು. ಇವರೆಲ್ಲ ಮುಖ್ಯವಾಗಿ ಬಿಲ್ಲವರು.
ಮುಂದೆ ಕುಂದಾಪುರ, ಕಾರ್ಕಳ ಹಾಗೂ ಕಾಸರಗೋಡು ಕೇಂದ್ರಗಳು ಪ್ರಾರಂಭವಾದ ಮೇಲೆ ಕ್ರೈಸ್ತಮತಕ್ಕೆ ಸೇರುವ ಕುಟುಂಬಗಳ ಸಂಖ್ಯೆ ವೃದ್ಧಿಯಾಗುವುದರೊಂದಿಗೆ ಸದಸ್ಯರ ಸಂಖ್ಯೆ ನಿಧಾನಗತಿಯಲ್ಲಿ ಏರಿತು.
* * *
ಪುಸ್ತಕವು ಬಿಲ್ಲವರನ್ನು ಕೇಂದ್ರವಾಗಿ ಇರಿಸಿಕೊಂಡಿದ್ದರೂ ಕೂಡ ಬಾಸೆಲ್ ಮಿಷನ್ ಮೂಲಕ ಇತರರು ಮತಾಂತರಗೊಂಡದ್ದನ್ನು ಸಹಿತ ಗುರುತಿಸಿದೆ. ಮಂಗಳೂರಿನಲ್ಲಿ ವಿದ್ಯಾವಂತ ಸಾರಸ್ವತ ಬ್ರಾಹ್ಮಣ ಸಮಾಜದ ಕೆಲವರು ಮತಾಂತರ ಹೊಂದಿದರು. ರಾಮರಾವ್ ೨೧ ವರ್ಷದ ಸಾರಸ್ವತ ಬ್ರಾಹ್ಮಣ. ಕೆಲವು ವರ್ಷಗಳಿಂದ ಬೈಬಲ್ ಓದುತ್ತಿದ್ದ. ಮಿಷನ್ನವರ ಇಂಗ್ಲಿಷ್ ಶಾಲೆಗೆ ಸೇರಿದ್ದ. ಅಲ್ಲಿಯ ಬೈಬಲ್ ಶಿಕ್ಷಣ ಅವನ ಮೇಲೆ ಪ್ರಭಾವ ಬೀರಿತು. ಆತ ಮುಲ್ಲರ್ರವರಲ್ಲಿ ದೀಕ್ಷಾಸ್ನಾನಕ್ಕೆ ವಿನಂತಿಸಿದ. ಆಗಸ್ಟ್ ೭ರಂದು (೧೮೭೮) ಮಿಷನ್ ಬಂಗ್ಲೆಯಲ್ಲಿ ಆಶ್ರಯ ಪಡೆದ. ಇದರಿಂದ ಮಂಗಳೂರಿನ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಉದ್ವಿಗ್ನತೆ ಉಂಟಾಯಿತು. ಆತನ ಅನೇಕ ಕುಟುಂಬಿಕರು ಮಿಷನ್ ಬಂಗ್ಲೆಗೆ ಬಂದು ಆತನಲ್ಲಿ ಮಾತನಾಡಿ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸಿದರು. ಆದರೆ ಆತ ಡಿಸೆಂಬರ್ ೩ರಂದು ದೀಕ್ಷಾಸ್ನಾನ ಪಡೆದನು.
ಬ್ರಾಹ್ಮಣರ ಮತಾಂತರ
ಪ್ರತಿಷ್ಠಿತ ಸಾರಸ್ವತ ಬ್ರಾಹ್ಮಣ ಸಮಾಜದ ಸರ್ಕಾರೀ ವಕೀಲರಾದ ಮಂಕಿ ರಾಮರಾವ್ ಎಂಬವರು ೧೮೭೦ರಲ್ಲೇ ಕ್ರೈಸ್ತಧರ್ಮದ ಬಗ್ಗೆ ಒಲವು ತೋರಿದ್ದರು. ಜನವರಿ ೧೪, ೧೮೮೩ರಂದು ತಮ್ಮ ಮೂರು ವರ್ಷದ ಮಗನೊಂದಿಗೆ ದೀಕ್ಷಾಸ್ನಾನವನ್ನು ಪಡೆದರು. ಓರ್ವ ಶಿವಳ್ಳಿ ಬ್ರಾಹ್ಮಣ ಡಿಸೆಂಬರ್ ೩, ೧೮೮೨ರಂದು ದೀಕ್ಷಾಸ್ನಾನವನ್ನು ಪಡೆದರು. ಆತನ ನೂತನ ಹೆಸರು ಕ್ರಿಸ್ತಾನಂದ. ಆತ ಬಸ್ರೂರಿನಲ್ಲಿ ಬೈಬಲ್ ಬೋಧನೆಗಳನ್ನು ಪಡೆದಿದ್ದರು. ಆತ ಸ್ವಲ್ಪ ಸಮಯ ಕೈಲ್ಕೆರೆಯಲ್ಲಿದ್ದ ಅಣ್ಣನ ಮನೆಯಲ್ಲಿ ಕೈದಿಯಂತೆ ಇರಬೇಕಾಯಿತು. ಮತ್ತೆ ಅಲ್ಲಿಂದ ಬಹಳ ದೂರದ ಮನೆಯಲ್ಲಿ ಇರಿಸಲಾಯಿತು. ಅಲ್ಲಿಂದ ಆತ ತಪ್ಪಿಸಿಕೊಂಡು ಮಿಷನ್ ಬಂಗ್ಲೆಗೆ ಬಂದು ಕ್ರೈಸ್ತನಾದ. ಮುಂದೆ ಆತನ ಅಣ್ಣ ಮತ್ತು ಅತ್ತಿಗೆ ಕೂಡ ಕ್ರೈಸ್ತರಾದರು. ಕೈಲ್ಕೆರೆಯ ಈ ಬ್ರಾಹ್ಮಣ ಕುಟುಂಬದವರು ವಿರೋಧ ಅನುಭವಿಸಬೇಕಾಯಿತೆಂದು ಬಾಸೆಲ್ ಮಿಷನ್ ವರದಿ ದಾಖಲಿಸಿದೆ.
ಇನ್ನು ಮಂಗಳೂರಿನ ಓರ್ವ ಸಾರಸ್ವತ ಬ್ರಾಹ್ಮಣ ಅಲ್ಲಿಯ ಹೈಸ್ಕೂಲಿನಲ್ಲಿ ಕ್ರೈಸ್ತನಾಗಿ ಶಿಕ್ಷಣ ಮುಂದುವರಿಸಿ, ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಉಪ್ಪಿನಂಗಡಿಯಲ್ಲಿ ಸೇವೆ ಸಲ್ಲಿಸಿದ್ದು, ಅದೇ ರೀತಿ ಮಂಗಳೂರಿನ ಮಿಷನ್ ಹೈಸ್ಕೂಲು ವಿದ್ಯಾರ್ಥಿಯಾಗಿದ್ದ ಓರ್ವ ಬ್ರಾಹ್ಮಣ ಯುವಕ ಕಾಯಿಲೆಯಿಂದ ಗುಣಮುಖನಾದರೆ ಕ್ರೈಸ್ತನಾಗುವುದಾಗಿ ಹರಕೆ ಹೊತ್ತು ಕ್ರೆöÊಸ್ತನಾಗಿ ಆಗಸ್ಟಿನ್ ಎಂಬ ಹೆಸರು ಪಡೆದದ್ದು ಕೂಡ ಪುಸ್ತಕದಲ್ಲಿದೆ.
ಕುತ್ಯಾರಿನ ೧೮ ವರ್ಷದ ಶ್ರೀಮಂತ ಬಂಟ ಯುವಕ ಮಂಗಳೂರಿನ ಮಿಷನ್ ಬಂಗ್ಲೆಗೆ ಬಂದು ಕ್ರೈಸ್ತನಾಗುವ ಇಚ್ಛೆ ಹಾಗೂ ಸೆಮಿನರಿಯಲ್ಲಿ ಕಲಿಯುವ ಬಯಕೆ ವ್ಯಕ್ತಪಡಿಸಿದ. ಕುತ್ಯಾರಿನಲ್ಲಿ ಮೂಲ್ಕಿಯ ವ್ಯಾಪ್ತಿಗೊಳಪಟ್ಟ ಕ್ರೈಸ್ತ ಸಭೆಯಿತ್ತು. ಕುತ್ಯಾರಿನ ಶಾಲೆಯ ವಿದ್ಯಾರ್ಥಿಯಾಗಿದ್ದ ಆತನಿಗೆ ಕ್ರೈಸ್ತರ ನಿಕಟ ಸಂಪರ್ಕವಿತ್ತು. ಕನ್ನಡದ ಬೈಬಲ್ ಕಥೆಗಳನ್ನು ಓದಿ ಪ್ರಭಾವಿತನಾಗಿದ್ದ ಆತನನ್ನು ಮೂಲ್ಕಿ ಕೇಂದ್ರಕ್ಕೆ ಕಳುಹಿಸಲಾಯಿತು. ಸಂಬಂಧಿಕರು ಅವನ ನಿರ್ಧಾರವನ್ನು ಬದಲಿಸಲು ಬಹಳ ಪ್ರಯತ್ನಪಟ್ಟರು. ಆದರೆ ಆತ ತನ್ನ ನಿರ್ಧಾರವನ್ನು ಧೈರ್ಯವಾಗಿ ತಿಳಿಸಿ ಕ್ರೈಸ್ತನಾದನು. ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದ ಓರ್ವ ಬಂಟ ಯುವಕ ಕ್ರೈಸ್ತನಾಗಿ ಮಂಗಳೂರು ಸೆಮಿನರಿಗೆ ಸೇರಿ ಕಲಿತು ಸುವಾರ್ತಾ ಬೋಧಕನಾದನೆಂದು ೧೯೦೯ರ ವರದಿ ವಿವರಿಸಿದೆ.
* * *
ಮೊಗವೀರರ ಪ್ರತಿರೋಧ
ಕರಾವಳಿಯ ಇನ್ನೊಂದು ಪ್ರಮುಖ ಸಮುದಾಯವಾದ ಮೊಗವೀರರಲ್ಲಿ ಕೆಲವರು ಬಾಸೆಲ್ ಮಿಷನ್ನ ಸಂಪರ್ಕಕ್ಕೆ ಬಂದು ಮತಾಂತರಗೊಂಡರೂ ಕೂಡ ಸಮುದಾಯ ಬಹುಬೇಗ ಎಚ್ಚೆತ್ತುಕೊಂಡು ಪ್ರತಿರೋಧ ಒಡ್ಡಿದ್ದು ತಿಳಿಯುತ್ತದೆ. ಅವರು ಕ್ರೈಸ್ತರಾಗಲು ಹೆದರುತ್ತಿದ್ದರು. ಯಾಕೆಂದರೆ ಅವರ ಕುಟುಂಬ ಸರ್ವನಾಶವಾಗುವುದು ಎಂಬ ಭಯವಿತ್ತು. ಅವರು ಕ್ರೈಸ್ತರಾದರೆ ಉಳಿದವರು ಅವರನ್ನು ವೃತ್ತಿಯಲ್ಲಿ ಜೊತೆಗೆ ಸೇರಲು ಬಿಡುತ್ತಿರಲಿಲ್ಲ.
ರೋಗಬಾಧೆಯ ಕಾರಣದಿಂದ ಮಂಗಳೂರಿನ ಬೊಕ್ಕಪಟ್ಣದಲ್ಲಿ ಮೊಗವೀರ ಸಮಾಜದ ಮೂವರು ಯುವಕರು ದೀಕ್ಷಾಸ್ನಾನವನ್ನು ಪಡೆದರು. ಅವರು ಮಂಗಳೂರು ಮಿಷನ್ ಕೇಂದ್ರ ಪ್ರಾರಂಭವಾದ ಅನಂತರದ ಈ ಸಮಾಜದ ಮೊದಲ ಮತಾಂತರಿಗಳು. ಅದರಿಂದ ಕೆರಳಿದ ಮೊಗವೀರರು ಮುಸ್ಲಿಮರ ಬೆಂಬಲದೊಂದಿಗೆ ಮಿಷನರಿಗಳ ಸಂಪರ್ಕದಲ್ಲಿದ್ದ ಎಲ್ಲ ಮೊಗವೀರರಿಗೆ ಜಾತಿಯಿಂದ ಬಹಿಷ್ಕಾರ ಹಾಕುವ ತೀರ್ಮಾನವನ್ನು ಕೈಗೊಂಡರೆಂದು ೧೯೦೩ರ ಮಿಷನ್ ವರದಿ ತಿಳಿಸಿದೆ. ಮೊಗವೀರರನ್ನು ಜಾತಿಯಿಂದ ಬಹಿಷ್ಕರಿಸಿದರೆ ಅವರ ಸಮಾಜಬಾಂಧವರು ಅವರನ್ನು ತಮ್ಮೊಂದಿಗೆ ಮೀನುಗಾರಿಕೆ ವೃತ್ತಿಯಲ್ಲಿ ದುಡಿಯಲು ಅವಕಾಶ ನೀಡುತ್ತಿರಲಿಲ್ಲ.
ಗರಡಿಯ ಪೂಜಾರಿ ಕ್ರೈಸ್ತನಾದ
ಇದಕ್ಕೆ ಹೋಲಿಸಿದರೆ ಪ್ರಬಲ ಬಿಲ್ಲವ ಸಮುದಾಯದಿಂದ ಬಹುಕಾಲ ಯಾವುದೇ ಸಂಘಟಿತ ಪ್ರತಿರೋಧವು ಬಾರದಿದ್ದುದು ಆಶ್ಚರ್ಯ ಮೂಡಿಸುತ್ತದೆ. ಕೆಲವೆಡೆ ಗರಡಿಯ ಪೂಜಾರಿಗಳೇ ಮಿಷನರಿಗಳ ಪ್ರಭಾವದಿಂದ ಪ್ರೊಟೆಸ್ಟೆಂಟ್ ಕ್ರೈಸ್ತರಾದರು. ಪಾಂಗಾಳಗುಡ್ಡೆ ಗರಡಿಯ ಪೂಜಾರಿಯಾಗಿದ್ದ ತೋನ್ಸೆ ಮೂಲದ ಅಣ್ಣು ಪೂಜಾರಿ ಕ್ರೈಸ್ತ ಮಿಷನರಿಗಳ ಪ್ರಭಾವಕ್ಕೊಳಗಾಗಿ ತಾನು ಪೂಜಿಸುತ್ತಿದ್ದ ಗರಡಿಯ ಮೂರ್ತಿ ಹಾಗೂ ಆರಾಧನೆಗೆ ಸಂಬಂಧಪಟ್ಟ ವಸ್ತುಗಳನ್ನು ಕೆರೆಗೆ ಬಿಸಾಡಿ ಕ್ರೈಸ್ತನಾಗಿ ಇಮ್ಯಾನುವೆಲ್ ಎಂಬ ಹೆಸರು ಪಡೆದನು. ಮಾನಸಿಕವಾಗಿ ದ್ವಂದ್ವದಲ್ಲಿದ್ದ ಈತ ಕೆಲವು ವರ್ಷಗಳ ಬಳಿಕ ಮೂಲಧರ್ಮಕ್ಕೆ ಹಿಂತಿರುಗಿ ಗರಡಿಯ ಅಧಿಕಾರ ವಹಿಸಿಕೊಂಡನು. ಆದರೆ ಮತ್ತೆ ಮನಸ್ಸು ಬದಲಾಯಿಸಿ ಗರಡಿಯ ಆಡಳಿತವನ್ನು ತನ್ನ ಸೋದರಳಿಯನಿಗೆ ವಹಿಸಿಕೊಟ್ಟು ಪುನಃ ಕ್ರೈಸ್ತನಾದನು. ಆತನ ಮೊದಲ ಪತ್ನಿ ಮತ್ತು ಮಕ್ಕಳು ಕ್ರೈಸ್ತರಾಗದೆ ಬಿಲ್ಲವರಾಗಿಯೇ ಉಳಿದರು. ಆತ ಮತಾಂತರಿತರೊಬ್ಬರ ಮಗಳನ್ನು ಎರಡನೇ ವಿವಾಹವಾದನು. ಪೂಜಾರಿಯ ಮತಾಂತರವಾದಾಗ ಗರಡಿಯ ಬಹಳ ದೊಡ್ಡ ಸಾಕಷ್ಟು ಮರದ ಮೂರ್ತಿಗಳನ್ನು ಹೊರತೆಗೆದು ರಾತ್ರಿ ವೇಳೆ ಸುಟ್ಟುಹಾಕಲಾಯಿತು. ಬಹಳಷ್ಟು ಕ್ರೈಸ್ತ ಸದಸ್ಯರು ಆ ಬಗ್ಗೆ ಪ್ರಾರ್ಥನೆ ಮಾಡಿದರು. ಅಲ್ಲಿ ೨೨ ಮಂದಿಗೆ ದೀಕ್ಷಾಸ್ನಾನವೂ ನಡೆಯಿತು (೧೮೫೫).
೧೮೮೨ರ ಬಾಸೆಲ್ ಮಿಷನ್ ವರದಿ ಇದೊಂದು ಸಂದರ್ಭವನ್ನು ಹೇಳುತ್ತದೆ: “ಒಂದು ಕುಟುಂಬದವರು ನಮ್ಮನ್ನು ಸೇರಿದರು. ಅವರು ಹಲವು ವರ್ಷಗಳಿಂದ ಭೂತಾರಾಧಕರಾಗಿದ್ದರು. ಅವರ ಮನೆಯ ಹಿತ್ತಲಿನಲ್ಲಿ ಹಲವು ಗುಡಿಗಳಿದ್ದವು. ಅವುಗಳಲ್ಲಿ ಹಿತ್ತಾಳೆಯ ಮೂರ್ತಿಗಳಿದ್ದವು. ಎಂಟು ಅಡಿ ಎತ್ತರದ ಒಂದು ವಿಗ್ರಹ, ಕೋಣದ ನಿಜವಾದ ಅಳತೆಯ ಮೂರ್ತಿ, ನಾಗನ ಕಲ್ಲುಗಳು, ಭೂತಾರಾಧನೆಯ ವಸ್ತುಗಳು ಇದ್ದವು. ನೆರೆಹೊರೆಯವರು ಅಲ್ಲಿ ಪೂಜೆ- ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಭೂತಗಳಿಗೆ ಅಷ್ಟು ಸೇವೆ ಸಲ್ಲಿಸಿಯೂ ಆ ಕುಟುಂಬದವರಿಗೆ ರೋಗಬಾಧೆ, ಸಾವುನೋವುಗಳು ಉಂಟಾದವು. ತಾವು ಸಂಪೂರ್ಣ ನಾಶ ಹೊಂದುತ್ತೇವೆಂದು ಹೆದರಿ ಅವರು ಮಿಷನ್ನವರಲ್ಲಿ ಆಶ್ರಯ ಬೇಡಿದರು; ಗಟ್ಟಿಯಾಗಿ ಅವಲಂಬಿಸಿ ಪರಿಹಾರವನ್ನು ಅಪೇಕ್ಷಿಸಿದರು” ಎಂದು ಮತಾಂತರದ ಹಿನ್ನೆಲೆಯನ್ನು ತಿಳಿಸಲಾಗಿದೆ.
ಕದಿಕೆಯ (ಹಳೆಯಂಗಡಿ) ಪ್ರಭಾವಿ ಭೂತದ ಪೂಜಾರಿಯು ಕ್ರೈಸ್ತನಾಗಿ ತನ್ನ ಭೂತಸ್ಥಾನವನ್ನು ಕೆಡವಿ ನಾಶಪಡಿಸಿದಾಗ ಸ್ಥಳೀಯ ಜನರು ಉಗ್ರರಾಗಿ ಆತ (ಅಮ್ಮನ್) ವಾಸಿಸುತ್ತಿದ್ದ ಮನೆಗೆ ಬೆಂಕಿಯಿಟ್ಟು ನಾಶಪಡಿಸಿದರು. ಶಾಲೆಯನ್ನು ನಾಶ ಮಾಡಿದರು. ವಿರೋಧಿಗಳು ಗುಂಪು ಸೇರಿದರು. ಈತ ಹೆಸರಾಂತ ಪೂಜಾರಿಯಾಗಿದ್ದು, ಕೆಲವು ದಿನಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿ ಕ್ರೈಸ್ತನಾಗಲು ಬಯಸಿದ್ದನು. ಅದರಿಂದ ಊರಿನಲ್ಲಿ ಪ್ರತಿಭಟನೆ ಎದುರಿಸಬೇಕಾಯಿತು. ಆದರೂ ಆತ ಎಲ್ಲ ಕಷ್ಟನಷ್ಟಗಳನ್ನು ಎದುರಿಸಿ ಕ್ರೈಸ್ತನಾದನು. ಊರಿನವರಲ್ಲಿ ‘ನಾನು ಇನ್ನು ಮುಂದೆ ನಿಮ್ಮವನಲ್ಲ’ ಎಂದನು. ಆತನ ಪತ್ನಿ, ಮಕ್ಕಳು, ಕೆಲಸಗಾರರು ಕೈಬಿಟ್ಟರು; ಆದರೆ ಮಗಳು ಆತನನ್ನು ಅನುಸರಿಸಿದಳು. ಅಲ್ಲಿ ಐದು ಕುಟುಂಬಗಳು ಸೇರಿ ೨೭ ಮಂದಿಗೆ ಬೋಧನೆ ನೀಡಲಾಗುತ್ತಿತ್ತು.
ಕಾಪು ಸಮೀಪದ ಉಚ್ಚಿಲದಲ್ಲಿ ಗರಡಿಯೇ ಕ್ರೈಸ್ತ ಪ್ರಾರ್ಥನಾಲಯವಾಯಿತು. ಅಲ್ಲಿಯ ಕೊರಗ ಪೂಜಾರಿ ಭೂತಾರಾಧನೆಯನ್ನು ತ್ಯಜಿಸಿ ತನ್ನ ಭೂತಸ್ಥಾನವನ್ನು ನಾಶಪಡಿಸಿ ಕ್ರೈಸ್ತನಾದನು. ಆತನಿಗೆ ಸಂಬಂಧಿಸಿದ ಎಲ್ಲರೂ ಅದನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದರಿಂದ ಪರಿಸರದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಯಿತು. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಆತ ಕ್ರೈಸ್ತನಾದನು; ಪತ್ನಿ ಹಿಂಬಾಲಿಸಿದಳು.
ಪಾದೂರು ಸಮೀಪದ ಮಡಂಬು ಎಂಬಲ್ಲಿ ಯುವ ಭೂತದ ಪೂಜಾರಿ ಮತಾಂತರವಾಗಲು ಮುಂದಾದಾಗ ಭೂತದ ಗುಡಿಯ ಮಾಲೀಕತ್ವಕ್ಕೆ ಸಂಬಂಧಿಸಿ ವಿವಾದ ಉಂಟಾಗಿ ಪೊಲೀಸರನ್ನು ಕರೆಸಬೇಕಾಯಿತು. ಯುವ ಪೂಜಾರಿ ತಾಲೂಕು ದಂಡಾಧಿಕಾರಿಯವರ ಮುಂದೆ ಅಕ್ರಮ ಪ್ರವೇಶದ ಬಗ್ಗೆ ಕ್ರಿಮಿನಲ್ ದೂರು ಸಲ್ಲಿಸಿದಾಗ ಮಾಲೀಕತ್ವ ಆತನದೆಂದಾಯಿತು. ವಿರೋಧಿಗಳು ಹಿಂತೆಗೆದರು. ಕ್ರೈಸ್ತಬಾಂಧವರು ಆತನ ಮನೆಯಲ್ಲಿ ಉಪಾಹಾರಕ್ಕೆ ಸೇರಿ ಭೂತದ ಗುಡಿಯ ವಸ್ತುಗಳನ್ನು ತೆಗೆದರು. ಆ ಬಗ್ಗೆ ೧೮೮೧ರ ವರದಿಯಲ್ಲಿ ಮಿಷನರಿ “ನಾನು ನನ್ನ ಜೀವನದಲ್ಲಿ ಅಷ್ಟು ಸಂಖ್ಯೆಯ ಭೂತಗಳನ್ನು ನೋಡಿರಲಿಲ್ಲ. ಮನೆಯ ಹಿತ್ತಲಿನಲ್ಲಿದ್ದ ಎರಡು ಸಣ್ಣ ಭೂತದ ಗುಡಿಗಳನ್ನು ನಾಶಪಡಿಸಿದೆವು. ಒಂದು ಗುಡಿಯಲ್ಲಿ ಇಟ್ಟಿದ್ದ ಹಗ್ಗದ ಕಟ್ಟನ್ನು (ಮರ್ಲ್ ಜುಮಾದಿಗೆ ಸಂಬಂಧಿಸಿದ್ದು) ತೆಗೆದೆವು. ಬಹಳ ಗಟ್ಟಿಯಾದ ತಗ್ಗಾದ ೪೦ ಅಡಿ ಉದ್ದ ಇಪ್ಪತ್ತು ಅಡಿ ಅಗಲದ ಗರಡಿಯನ್ನು ಶುಚಿಗೊಳಿಸಿದೆವು. ಐದು ಅಡಿ ಎತ್ತರದ ಮಾಯಂದಾಲ್ ಹೆಸರಿನ, ಮಗುವನ್ನು ಹಿಡಿದುಕೊಂಡಿದ್ದ ಸ್ತ್ರೀ ಪ್ರತಿಮೆಯನ್ನು ತೆಗೆದೆವು. ಅನಂತರ ಆತನ ಮನೆಗೆ ಬಂದು ಯೇಸುಸ್ವಾಮಿ ಮಹಿಮೆಯ ಹಾಡುಗಳನ್ನು ಹಾಡಿದೆವು. ಬೋಧನೆ, ಪ್ರಾರ್ಥನೆ ನಡೆಯಿತು” ಎಂದು ಹೇಳಿದ್ದು ದಾಖಲಾಗಿದೆ.
ಬಿಲ್ಲವರಿಗೆ ಶ್ಲಾಘನೆ
ಒಂದು ಬಾಸೆಲ್ ಮಿಷನ್ ವರದಿಯಲ್ಲಿ ಬೂರರ್ ಎಂಬಾತ ಹೀಗೆ ಹೇಳಿದ್ದಾರೆ: “ನಾವು ಸಮೀಪದ ಎಲ್ಲ ಹಳ್ಳಿಗಳಿಗೆ, ಕೃಷಿಕರ ಮನೆಗಳಿಗೆ ಭೇಟಿ ನೀಡಿದ್ದೇವೆ. ದೇವರ ಸಂದೇಶಕ್ಕೆ ಜನ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಲ್ಲವರು (ಶೇಂದಿ ಇಳಿಸುವವರು) ಅದನ್ನು ತುಂಬ ಚೆನ್ನಾಗಿ ಸ್ವೀಕರಿಸಿದರು. ನಮಗೆ ಹೆಚ್ಚಿನ ಹಿಂಬಾಲಕರು(ಮತಾಂತರಿತರು) ಅವರಲ್ಲೇ ದೊರೆತರು. ಮೊಗವೀರರು ಕುಡುಕರಾಗಿದ್ದು ಸತ್ಯವನ್ನು ಕೇಳಲು ಅವರು ಸಿದ್ಧರಿರಲಿಲ್ಲ. ಒಕ್ಕಲಿಗರು (ಬಂಟರು) ರೈತರಲ್ಲಿ ಮೇಲ್ವರ್ಗದವರಾಗಿದ್ದು, ಅಹಂಕಾರ, ಮಾತ್ಸರ್ಯಗಳು ಅವರಲ್ಲಿ ತುಂಬಿವೆ; ಉಪದ್ರವಕಾರಿಗಳಾದ ಅವರು ಭೂತಾರಾಧನೆಯ ಪ್ರಮುಖರು (ಮಾಲೀಕರು). ಗೋವಾದಿಂದ ವಲಸೆ ಬಂದ ಕೊಂಕಣಸ್ಥರು ಹಣ ಮಾಡುವ ಪ್ರವೃತ್ತಿಯವರು, ಸುವಾರ್ತೆಯ ವಿರೋಧಿಗಳು”ಅಂದರೆ ಅವರ ಮತಾಂತರಕ್ಕೆ ಅನುಕೂಲರಾದವರು ಒಳ್ಳೆಯವರು!
ಚರ್ಚ್ಗೆ ಬೆಂಕಿ
ವಿರೋಧಗಳ ನಡುವೆ ಚರ್ಚ್ಗೆ ಬೆಂಕಿ ಹಾಕಿದ ಒಂದು ಘಟನೆ ಉಡುಪಿಯಲ್ಲಿ ನಡೆಯಿತು. “ತುಳು ಬ್ರಾಹ್ಮಣರ ಮುಖ್ಯ ಕೇಂದ್ರ(ಉಡುಪಿ)ದಲ್ಲಿ ನಮ್ಮ ಕೇಂದ್ರದ ಸ್ಥಾಪನೆಗೆ ಸರ್ಕಾರದಿಂದ ಸ್ಥಳ ದೊರಕಿತು. ಈ ಬಗ್ಗೆ ಬ್ರಾಹ್ಮಣರು ವಿರೋಧ ಮಾಡಿದರು. ಒಂದು ರಾತ್ರಿ ಮರಗಳನ್ನು ಕಡಿದುಹಾಕಲಾಯಿತು. ಉಡುಪಿ ಚರ್ಚನ್ನು ಮಾರ್ಚ್ ೨, ೧೮೫೬ರಂದು ಸುಟ್ಟುಹಾಕಿದರು. ಆಗ ಏಳು ವರ್ಷಗಳಿಂದ ಶ್ರಮಪಟ್ಟು ತಯಾರಿಸುತ್ತಿದ್ದ ಸತ್ಯವೇದದ ಭಾಷಾಂತರಗಳೆಲ್ಲ ಸುಟ್ಟುಹೋದವು. ಕೃಷ್ಣಮಠದ ಬೀದಿಯಲ್ಲಿ ಪ್ರಚಾರಕರ ಮೇಲೆ ಕಲ್ಲೆಸೆದರು. ಗದ್ದಲ ಎಷ್ಟು ಜೋರಾಗಿತ್ತೆಂದರೆ ಅದರಿಂದ ಬೋಧಕರನ್ನು ಬಿಡಿಸಿ ತರಲು ತುಂಬಾ ಕಷ್ಟಪಡಬೇಕಾಯಿತು” ಎಂದು ವರದಿ ತಿಳಿಸಿದೆ.
* * *
ಪ್ರೊಟೆಸ್ಟೆಂಟ್ ಕ್ರೈಸ್ತರ ಪ್ರಸ್ತುತ ಮತಾಂತರಗಳಿಗೆ ವಿರೋಧವು ಕ್ರಮೇಣ ಸಮಾಜದ ನಡುವಿನಿಂದಲೇ ಬಂದದ್ದು ಗಮನಕ್ಕೆ ಬರುತ್ತದೆ. ಮಂಗಳೂರಿನಲ್ಲಿ ಬಿಲ್ಲವ ಸಮಾಜದವರೇ ಬ್ರಹ್ಮಸಮಾಜವನ್ನು ಆರಂಭಿಸಿದರು. ಅದು ಬಹುತೇಕ ಬಾಸೆಲ್ ಮಿಷನ್ಗೆ ಪರ್ಯಾಯವಾಗಿ ಆರಂಭವಾಯಿತೆನ್ನಬಹುದು. ಏಕೆಂದರೆ ಬಿಲ್ಲವರಿಂದ ಕ್ರೈಸ್ತರಾದವರು ಒಂದು ಪ್ರತ್ಯೇಕ ಸಮುದಾಯವಾದದ್ದು ಬಿಲ್ಲವರ ಬಹುಪಾಲು ಜನರಿಗೆ ಸ್ವೀಕೃತವಾಗಲಿಲ್ಲ. ವಿಶಾಲ ಹಿಂದೂಸಮಾಜದ ಚೌಕಟ್ಟಿನೊಳಗೇ ಇದ್ದು, ಜಾತಿಪದ್ಧತಿಯ ಅಸಮಾನತೆ, ಅಸ್ಪೃಶ್ಯತೆಗಳನ್ನು ತ್ಯಜಿಸಿ ಒಂದು ಸುಧಾರಿತ ಆಧುನಿಕ ಸಮಾಜವನ್ನು ಕಟ್ಟಲು ಬ್ರಹ್ಮಸಮಾಜವನ್ನು ಸೇರಿಕೊಳ್ಳುವುದು ಸೂಕ್ತವೆಂದು ಅವರು ಭಾವಿಸಿದರು.
ಇನ್ನೊಂದು ಪ್ರತಿರೋಧವು ದಕ್ಷಿಣದ ಕೇರಳದಿಂದ ಬಂತು. ೨೦ನೇ ಶತಮಾನದ ಪ್ರಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ನೇತೃತ್ವದಲ್ಲಿ ಬಿಲ್ಲವ ಸಮಾಜದ ಮರುಸಂಘಟನೆ, ಪುನರುಜ್ಜೀವನಗಳು ನಡೆದಾಗ ಆ ಪ್ರಭಾವ ಕರ್ನಾಟಕದ ಕರಾವಳಿಯನ್ನು ಕೂಡ ಪ್ರವೇಶಿಸಿತು. ‘ಒಂದೇ ಧರ್ಮ, ಒಂದೇ ಜಾತಿ, ಒಬ್ಬನೇ ದೇವರು’ ಎಂಬ ಅವರ ಧ್ಯೇಯ ಬಿಲ್ಲವರಲ್ಲಿ ಶಕ್ತಿ, ಸಂಘಟನೆಗಳನ್ನು ತುಂಬಿತು. ಬಿಲ್ಲವರು ಹಿಂದೂ ಸಮಾಜದ ಚೌಕಟ್ಟಿನೊಳಗೇ ಇದ್ದು ತನ್ನತನವನ್ನು ಉಳಿಸಿಕೊಂಡು ಪ್ರಗತಿಪಥದಲ್ಲಿ ಮುಂದುವರಿಯಲು ಸಾಧ್ಯವಾಯಿತು.
ಮತಾಂತರವು ಒಂದು ಧಾರ್ಮಿಕ ಅಥವಾ ಮತೀಯ ವಿಷಯವಾದರೂ ಕೂಡ ಸಮಾಜದ ಸ್ವರೂಪ, ಜನಜೀವನದ ದಿಕ್ಕುದೆಸೆಗಳನ್ನು ನಿರ್ಧರಿಸುವಲ್ಲಿ ಹಾಗೂ ಪ್ರಭಾವ ಬೀರುವಲ್ಲಿ ಅದರ ಪಾತ್ರ ದೊಡ್ಡದಿದೆ. ಇಂದಿನ ೨೧ನೇ ಶತಮಾನದಲ್ಲಂತೂ ಅದು ರಾಷ್ಟ್ರೀಯತೆ, ದೇಶಪ್ರೇಮ ಅಥವಾ ಅದರ ಅಭಾವಗಳೊಂದಿಗೆ ತಳುಕು ಹಾಕಿಕೊಂಡು ತುಂಬ ಸೂಕ್ಷ್ಮವಾಗಿ ಬಿಟ್ಟಿದೆ. ಬಾಸೆಲ್ ಮಿಷನ್ ನಡೆಸಿದ ಕ್ರೈಸ್ತ ಮತಪ್ರಚಾರದಲ್ಲಿ ಬಿಲ್ಲವರು ಸುಲಭದ ದಾಳ ಆಗುವಲ್ಲಿ ಜಾತಿಪದ್ಧತಿಯ ವೈಷಮ್ಯ, ಅದಕ್ಕಿಂತ ಹೆಚ್ಚಾಗಿ ಅಸ್ಪೃಶ್ಯತೆಯ ಪಾಲುಗಳಿವೆ. ಇಂದು ಸಮಾಜದಲ್ಲಿ ಇಷ್ಟೆಲ್ಲ ಬದಲಾವಣೆಗಳಾದರೂ ಕೂಡ ‘ಅಸ್ಪೃಶ್ಯತೆಯನ್ನು ನಾವು ತೊಡೆದುಹಾಕಿದ್ದೇವೆ’ ಎಂದು ಹೇಳುವ ಧೈರ್ಯ ಯಾರಿಗಿದೆ? ಅದೇ ನಮ್ಮ ಒಂದು ದೌರ್ಬಲ್ಯವಾಗಿ ಇಂದಿಗೂ ಇದೆ. ಆದರೆ ಈ ಸಮಸ್ಯೆಗೆ ನಾವು ಪರಿಹಾರವನ್ನು ಸಮಾಜದ ಹೊರಗೆ ಹುಡುಕಲು ಹೋಗಬಾರದು; ವಿಶಾಲ ಹಿಂದೂ ಸಮಾಜದ ಒಳಗೇ ಹುಡುಕಬೇಕು ಎಂಬುದು ಕಾಲಾತೀತ ಸತ್ಯ.
ಕಹಿ ನೀಡಿದ ಸುವಾರ್ತಾ ಪ್ರಚಾರಯಾತ್ರೆ
ಬಾಸೆಲ್ ಮಿಷನ್ನ ಮಿಷನರಿಗಳು ಮತ್ತು ಪ್ರಚಾರಕರು ತಮ್ಮ ಮತಪ್ರಚಾರ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿದ್ದಂತೆಯೇ ಸ್ಥಳೀಯ ಜನರಿಂದ ಕೆಲವು ಸಂದರ್ಭಗಳಲ್ಲಿ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗುವುದು ಕೂಡ ಇತ್ತು. ಅಂತಹ ಘಟನೆಗಳಲ್ಲಿ ಕೆಲವು ಅವರಿಗೆ ತುಂಬ ಕಹಿ ಅನುಭವಗಳಾದದ್ದು ಕೂಡ ಇದೆ. ಮಿಷನ್ನ ವರದಿಗಳು ಅವುಗಳನ್ನು ತುಂಬ ನಿರ್ಲಿಪ್ತತೆಯಿಂದ ವಿವರಿಸಿವೆ. ಅಂತಹ ಒಂದು ಘಟನೆ ‘ಒಂದು ಸುವಾರ್ತಾ ಪ್ರಚಾರಯಾತ್ರೆಯ ವರದಿ’ ಎನ್ನುವ ಶೀರ್ಷಿಕೆಯಲ್ಲಿ ಪುಸ್ತಕದಲ್ಲಿ ದಾಖಲಾಗಿದೆ. ಅದು ಹೀಗಿದೆ:
“ಸೆಪ್ಟೆಂಬರ್ನಲ್ಲಿ ಮಂಗಳೂರಿನ ಹಿರಿಯ ಸದಸ್ಯ ಸೈಮನ್ನನ್ನು ನಾಲ್ವರು ಹಿರಿಯರೊಂದಿಗೆ ಸುವಾರ್ತಾ ಪ್ರಚಾರಕ್ಕಾಗಿ ಕಾಪುವಿಗೆ ಕಳುಹಿಸಲಾಯಿತು. ಅವರೊಂದಿಗೆ ಕಾಪುವಿನ ಟೈಟಸ್ ಸೇರಿದನು. ಆತನ ಅನೇಕ ಸಂಬಂಧಿಕರು ಕಾಪು ಪರಿಸರದಲ್ಲಿ ಇದ್ದರು. ಸೆಪ್ಟೆಂಬರ್ ೨೮, ೧೮೪೪ರಂದು ಮಂಗಳೂರಿನಿAದ ಹೊರಟು ಕದಿಕೆಗೆ ಬಂದು ಅಲ್ಲಿ ರಾತ್ರಿ ವಾಸ್ತವ್ಯ ಮಾಡಿದೆವು. ಮರುದಿನ ಟೈಟಸ್ನ ಸಹೋದರಿಯ ಮನೆಗೆ ಎರ್ಮಾಳು ಪೊಲ್ಯಕ್ಕೆ ಹೋದೆವು. ಅಂದು ರಾತ್ರಿ ಬಹಳ ಜನ ನಮ್ಮ ಸುವಾರ್ತೆ ಕೇಳಲು ಸೇರಿದ್ದರು. ಅಲ್ಲಿಂದ ಕೊಪ್ಲಕ್ಕೆ ಹೋದೆವು. ಅಲ್ಲಿ ಟೈಟಸ್ನ ಸಹೋದರನಿದ್ದನು. ಅದೇ ವೇಳೆ ಪಣಂಬೂರಿನ ಕೆಲವು ಮುಸಲ್ಮಾನರು ಬಂದು ನಮ್ಮಲ್ಲಿ ಚರ್ಚಿಸತೊಡಗಿದರು. ಅವರು ಬಹಳ ವಿರೋಧಿಗಳಾಗಿದ್ದರು. ನಾವು ಅಲ್ಲಿಯ ಬಿಲ್ಲವರಲ್ಲಿ ಸುವಾರ್ತೆ ಹೇಳಿದೆವು.
ಆರನೇ ದಿನ ಸಾಂತೂರಿಗೆ ಬಂದು ಟೈಟಸ್ನ ಭಾವನ ಮನೆಯಲ್ಲಿ ನಿಂತೆವು. ಮರುದಿನ ಟೈಟಸ್ನ ಪೂರ್ವಿಕರ ಮನೆಗೆ ಹೋಗಿ ಅಲ್ಲಿಯ ಪೂಜಾರಿಯೊಂದಿಗೆ ಮಾತನಾಡಿದೆವು. ಆದರೆ ಆತ ನಮ್ಮ ಮಾತುಗಳಿಗೆ ಮನಸ್ಸು ಕೊಡಲಿಲ್ಲ. ಮುಂದೆ ಹೋಗುವಾಗ ಪೂಜಾರಿಯ ಜನರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಳಿ ಬಂದು ಮಾತನಾಡಿದೆವು. ಕ್ರಿಸ್ತನೊಬ್ಬನೇ ನಮ್ಮ ಪಾಪಕರ್ಮಗಳಿಂದ ಮುಕ್ತಿ ಕೊಡುವವನೆಂದು ಹೇಳಿದೆವು. ಅರ್ವಡಕ್ಕೆ ಹೋದಾಗ ಸುತ್ತಮುತ್ತಲಿನ ಕೃಷಿಕರು ಸೇರಿದರು; ಅವರಲ್ಲಿ ನಮ್ಮ ಸುವಾರ್ತೆ ಸಾರಿದೆವು. ಮರುದಿನ ಕೊಪ್ಲಕ್ಕೆ ಹೋದೆವು. ಅಲ್ಲಿ ಓರ್ವ ಕೊಂಕಣಿ ಬ್ರಾಹ್ಮಣರ ಅಂಗಡಿಯ ಮುಂದೆ ಸೇರಿದ್ದ ಬ್ರಾಹ್ಮಣರೊಂದಿಗೆ ವಾಗ್ವಾದ ನಡೆಯಿತು. ಅಲ್ಲಿಂದ ಮುಂಡೇರಿಯಲ್ಲಿ ನಡೆಯುತ್ತಿದ್ದ ಸಂತೆಗೆ ಹೋದೆವು. ಆಗ ಅಪರಾಹ್ನ ೩ ಗಂಟೆಯಾಗಿತ್ತು. ಅಲ್ಲಿಂದ ಒಂದು ಮನೆಗೆ ಹೋದೆವು.
ಮನೆಯ ಯಜಮಾನರು ಬೆಂಚಿನಲ್ಲಿ ಕುಳಿತು ಬರೆಯುತ್ತಿದ್ದರು. ನಮ್ಮನ್ನು ನೋಡಿ ‘ಯಾರು ನೀವು? ಎಲ್ಲಿಂದ ಬಂದಿರಿ?’ ಎಂದು ಕೇಳಿದರು. ‘ನೀವು ನಿಮ್ಮ ಕೆಲಸ ಮುಗಿಸಿ. ಅನಂತರ ನಾವು ವಿಷಯ ಹೇಳುವೆವು’ ಎಂದೆವು. ಟೈಟಸ್ಗೆ ಬಹಳ ಬಾಯಾರಿಕೆಯಾಗಿತ್ತು. ಅವರು ನೀರು ಕೇಳಿದರು. ಆಗ ಯಜಮಾನರು ‘ನೀವು ಯಾರು? ಎಲ್ಲಿಯವರು? ಬಂದ ಉದ್ದೇಶವೇನು?’ ಎಂದು ಮತ್ತೆ ಕೇಳಿದರು.
“ನಾವು ಮಂಗಳೂರಿನವರು. ನಿಮಗೆ ಪಾದ್ರಿಗಳು ಈ ದೇಶಕ್ಕೆ ಬಂದ ಉದ್ದೇಶ ಗೊತ್ತಿರಬಹುದು. ಅವರ ಸದುದ್ದೇಶಗಳನ್ನು ಹೇಳಲು ಬಂದಿದ್ದೇವೆ” ಎಂದೆವು. ಅವರು ಆಶ್ಚರ್ಯ ಸೂಚಿಸುತ್ತ “ನೀವು ಪಾದ್ರಿಗಳ ಜನರೆ? ನನಗೆ ಅವರ ಪೂರ್ಣ ಚರಿತ್ರೆ ತಿಳಿದಿದೆ. ನೀವು ಶಾಂತಿಯಿಂದ ಇಲ್ಲಿಂದ ಹೋಗಿ” ಎಂದಾಗ ನಾವು “ಅವರ ಬಗ್ಗೆ ಅವರ ಬೋಧನೆ ಬಗ್ಗೆ ತಿಳಿದಿದ್ದರೆ ನೀವು ನಮ್ಮೊಂದಿಗೆ ಈ ರೀತಿ ಮಾತನಾಡುತ್ತಿರಲಿಲ್ಲ. ನಮ್ಮ ಪಾದ್ರಿಗಳು ಮತ್ತು ನಾವು ಮಾನವನ ಒಳಿತಿಗಾಗಿ ದೇವರ ವಾಕ್ಯವನ್ನು ಹೇಳುತ್ತೇವೆ” ಎಂದೆವು. ಆಗ ಆತ ಜೋರಾಗಿ ಅಬ್ಬರಿಸಿದರು. “ನೀವು ಶಾಂತಿಯಿಂದ ಹೋಗುತ್ತೀರಾ, ಅಥವಾ ನಾನೇ ಕುತ್ತಿಗೆ ಹಿಡಿದು ಹೊರಗೆ ದಬ್ಬಬೇಕಾ?” ಎಂದಾಗ ನಾವು “ಯಾಕಿಷ್ಟು ಕೋಪಗೊಳ್ಳುತ್ತೀರಿ? ನಾವಿಲ್ಲಿ ಉಳಿಯಲು ಬಂದಿಲ್ಲ” ಎಂದೆವು. ಆಗ ಆ ಯಜಮಾನರು ತಮ್ಮ ಜನರನ್ನು ಕೂಗಿ ಕರೆದು ‘ಇವರನ್ನು ಕುತ್ತಿಗೆ ಹಿಡಿದು ಹೊರಗೆ ದಬ್ಬಿ’ ಎಂದು ಅಬ್ಬರಿಸಿದರು; ಮತ್ತು ತಾನು ಕುಳಿತ ಚಾಪೆ ಹಾಗೂ ಸಮೀಪ ಇದ್ದ ಹಿತ್ತಾಳೆಯ ಚೊಂಬನ್ನು ನಮ್ಮೆಡೆಗೆ ಬಿಸಾಡಿದರು. ನಮ್ಮ ಸುತ್ತ ಅವರ ಜನರನ್ನು ನಿಲ್ಲಿಸಿ ನಮ್ಮನ್ನು ಹೊರಗೆ ಮರದ ನೆರಳಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.
ನಾವು ಮರದ ನೆರಳಲ್ಲಿ ಕುಳಿತು ಅರ್ಧಗಂಟೆ ಆಗುವಾಗ ಆ ಮನುಷ್ಯ ನಮ್ಮ ಬಳಿ ಬಂದು “ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ. ನನ್ನೊಂದಿಗೆ ಪಟೇಲರಲ್ಲಿಗೆ ಬನ್ನಿ” ಎಂದನು. ಪಟೇಲರು ಅಲ್ಲೇ ಅಂಗಡಿಯೊAದರಲ್ಲಿ ಕುಳಿತುಕೊಂಡಿದ್ದರು. ಆ ಮನುಷ್ಯ ಪಟೇಲರನ್ನು ದೂರ ಕರೆದು ಸ್ವಲ್ಪ ಹೊತ್ತು ಮಾತನಾಡಿದರು. ಪಟೇಲರು ನಮ್ಮೊಂದಿಗೆ ಮಾತನಾಡಿದಾಗ ನಾವು ಮೊದಲ ವ್ಯಕ್ತಿಗೆ (ದಾಸ ಶೆಟ್ಟಿ) ನೀಡಿದ ಉತ್ತರವನ್ನೇ ನೀಡಿದೆವು. ನಮ್ಮ ಕೈಯಲ್ಲಿದ್ದ ಕಟ್ಟನ್ನು ಬಿಚ್ಚಲು ಹೇಳಿದರು. ಪುಸ್ತಕವನ್ನು ಓದಲು ಹೇಳಿದಾಗ ನಾವು ೨೮ನೇ ಪುಟವನ್ನು ಓದಿದೆವು. ಆಗ ಓರ್ವ ಬ್ರಾಹ್ಮಣ ಹಾರಿ ಕೂಗಿ ‘ಈ ಹುಚ್ಚರ ಮಾತು ನಮ್ಮ ಕಿವಿಗೆ ಬೀಳಬಾರದು’ ಎಂದಾಗ ಅಲ್ಲಿದ್ದ ಎಲ್ಲರೂ ಉದ್ರೇಕಗೊಂಡರು. ನಮ್ಮನ್ನು ಮುಟ್ಟಿದರೆ ಏನಾಗಬಹುದೆಂಬ ಹೆದರಿಕೆಯೂ ಅವರಿಗಿರಲಿಲ್ಲ.
ಆಗ ಪಟೇಲರು “ಈ ಅವಿದ್ಯಾವಂತರಿಗೆ ಏನು ಗೊತ್ತಿದೆ? ನೀವು ಕಲಿತವರು, ತಿಳಿದವರು” ಎಂದು ಹೇಳಿ ತನ್ನ ಇಬ್ಬರು ಜನರೊಂದಿಗೆ ನಮ್ಮನ್ನು ಹೊಳೆಯ ಆಚೆ ಬದಿಗೆ ದಾಟಿಸಲು ಹೇಳಿದರು. ನಾವು ಹೊಳೆ ದಾಟುವಾಗ ಸಂಜೆ ೬ ಗಂಟೆಯಾಗಿತ್ತು. ನಾವು ಅಲ್ಲೇ ಹತ್ತಿರದ ಒಂದು ಮನೆಯಲ್ಲಿ ಉಳಿದುಕೊಳ್ಳುವ ವಿಚಾರ ಹೇಳಿದಾಗ ಅವರು ಒಪ್ಪಲಿಲ್ಲ.
ಒಬ್ಬ ಸಣ್ಣ ಹುಡುಗ ನಮಗೆ ಪಟೇಲರ ಮನೆಯ ದಾರಿ ತೋರಿಸಿದ. ಅಲ್ಲಿ ಹೊರಗೆ ನಾವು ಕಾದು ಕುಳಿತೆವು. ೭ ಗಂಟೆಗೆ ಪಟೇಲರು ಬಂದಾಗ ನಾವು ಮಂಗಳೂರಿನಿಂದ ಬಂದವರೆಂದು ತಿಳಿಸಿದೆವು. ಆಗ ಅವರು ‘ನಿಮ್ಮ ಪಾದ್ರಿ ಏನು ಹೇಳುತ್ತಾರೆ? ಎಲ್ಲ ಜಾತಿಯನ್ನು ಒಂದು ಮಾಡಲು ಸಾಧ್ಯವೆ?’ ಎಂದು ಪ್ರಶ್ನಿಸಿದಾಗ ನಾವು ‘ಪಾದ್ರಿಗಳ ಮಾತು ಸತ್ಯ. ಆದರೆ ಜನರು ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಉತ್ತರಿಸಿದೆವು. ಪಟೇಲರು ಒಮ್ಮೆಲೇ ಸಿಟ್ಟಾಗಿ ಪಾದ್ರಿಗಳನ್ನು ಬೈಯಲು ಪ್ರಾರಂಭಿಸಿದರು. ಆಗ ಇಬ್ಬರು ಕೊಂಕಣಿ ಬ್ರಾಹ್ಮಣರು ಬಂದು ಪಟೇಲರೊಂದಿಗೆ ಖಾಸಗಿಯಾಗಿ ಏನೋ ಹೇಳಿದರು. “ಈ ಜನರು ಮುಂಡೇರಿಯಲ್ಲಿ ಕರಾಮತ್ತು ಮಾಡಿ ಈಗ ಇಲ್ಲಿಗೆ ಬಂದಿದ್ದಾರೆ” ಎಂದು ಅವರು ಹೇಳುತ್ತಲೇ ಪಟೇಲರು ರೋಷಾವಿಷ್ಟರಾಗಿ ಕೆಟ್ಟ ಮಾತುಗಳಿಂದ ಜರೆದರು. ಒಬ್ಬ ಮರದ ಕೆಲಸದವನನ್ನು ಕರೆಸಿ ಬೆತ್ತ ತಯಾರಿಸಲು ಹೇಳಿ, ‘ಈ ದಗಲ್ಬಾಜಿಗಳಿಗೆ ಸರಿಯಾದ ಶಾಸ್ತಿ ಮಾಡಬೇಕು; ಇವರನ್ನು ಹಾಗೇ ಹೋಗಲು ಬಿಡಬಾರದು’ ಎಂದು ಅಬ್ಬರಿಸಿದನು. ಆ ಕೊಂಕಣಿಗರು ನಮ್ಮನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಬೀಗ ಜಡಿದರು; ರಾತ್ರಿಯಿಡೀ ಕಾಯಲು ಜನವನ್ನಿಟ್ಟರು.
ಮರುದಿನ ಬೆಳಗ್ಗೆ ಪಟೇಲ ನಮ್ಮನ್ನು ಕರೆದನು. ನಮ್ಮನ್ನು ಕಾಯುತ್ತಿದ್ದವರೊಂದಿಗೆ ‘ಈ ದುಷ್ಟರನ್ನು ಕಳುಹಿಸಿಬಿಡಿ’ ಎಂದಾಗ ನಾವು ‘ನಮ್ಮನ್ನು ಪರೀಕ್ಷಿಸದೆ ಬಿಟ್ಟುಬಿಡುತ್ತೀರಾ?’ ಎಂದು ಕೇಳಿದೆವು. ಆಗ ಆತ ‘ನೀವು ಹೋಗಿ’ ಎಂದು ಬೊಬ್ಬರಿದನು. ನಾವು ಅಲ್ಲಿಂದ ಹೊರಟು ಮಧ್ಯಾಹ್ನ ಮೂಲ್ಕಿಗೆ ಬಂದು ತಲಪಿದೆವು; ಅಮ್ಮಣ್ಣ ದೊರೆಯವರನ್ನು ಪ್ರವಾಸಿ ಬಂಗ್ಲೆಯಲ್ಲಿ ಕಂಡು ಮಾತನಾಡಿ ಮಂಗಳೂರಿಗೆ ಸುರಕ್ಷಿತವಾಗಿ ಬಂದು ಸೇರಿದೆವು” ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕೋಪಾಟೋಪದ ಒಂದಷ್ಟು ಅಂಶಗಳನ್ನು ಬಿಟ್ಟರೆ ಇದು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಾವು ಇಂದಿಗೂ ಕಾಣುವ ವಿದ್ಯಮಾನವಲ್ಲವೆ? ಎರಡು ಶತಮಾನಗಳು ಸಮೀಪಿಸುತ್ತ ಬಂದರೂ ಭಾರತ ಇಂದಿಗೂ ಅದೇ ರೀತಿ ಮತಪ್ರಚಾರಕರಿಗೆ ಆಡುಂಬೊಲವಾಗಿ ಉಳಿದಿರುವುದಕ್ಕೆ ಏನೆನ್ನೋಣ! ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ತಂದ ಮತಾಂತರ ನಿಷೇಧ ಕಾಯ್ದೆಯನ್ನು ಹೊಸ ಕಾಂಗ್ರೆಸ್ ಸರ್ಕಾರ ರದ್ದುಪಡಿಸುವ ಸಿದ್ಧತೆಯಲ್ಲಿದೆ. ಅಂದರೆ ಇವರ ಪ್ರಕಾರ ಮತಾಂತರ ಮಾಡುವುದು ಸರಿ!