ಶ್ರದ್ಧಾನಂದರ ಪ್ರೇರಣೆ ಕಲ್ಲೇಶಿಯ ಅಂತಃಸತ್ತ್ವವನ್ನು ಕಲಕಿತ್ತು. ‘ತಾನು ಏನನ್ನಾದರೂ ನಿಜವಾಗಿಯೂ ಮಾಡಬಲ್ಲೆನೆ?’ ಎಂಬ ಎಂದೂ ಕಾಡದ ಆಲೋಚನೆಯಲ್ಲಿ ಹಲವಾರು ದಿನಗಳ ಕಾಲ ಮುಳುಗಿಹೋದ. ಕೊನೆಗೆ ತನ್ನ ತಾಯಿ ಅವನು ಚಿಕ್ಕವನಾಗಿದ್ದಾಗ ಅವನನ್ನು ಜೊತೆಯಲ್ಲಿ ಸೇರಿಸಿಕೊಂಡು ಮಾಡುತ್ತಿದ್ದ ಉದ್ಯೋಗ ನೆನಪಾಯಿತು. ಭಿಕ್ಷಾಟನೆಯಲ್ಲಿ ಉಳಿಸಿಟ್ಟಿದ್ದ ಹಣದಿಂದ ಹೂವಿನ ವ್ಯಾಪಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕಲ್ಲೇಶಿ. ಮೊದಲನೆಯ ಹೂವಿನ ಹಾರವನ್ನು ಆಲಯದ ದೇವರಿಗೆ ಅರ್ಪಿಸಿ ಯಶಸ್ಸಿಗಾಗಿ ಪ್ರಾರ್ಥಿಸಿದ. ದಿನಗಳುರುಳಿದಂತೆ ಅವನ ವ್ಯಾಪಾರ ಸೊಗಸಾಗಿ ಸಾಗಿ ಆತನಲ್ಲಿ ಹಣ ಸಂಗ್ರಹಣೆಯಾಗತೊಡಗಿತು.
ಪ್ರಗತಿಪುರದ ತ್ರಯಂಬಕೇಶ್ವರನ ದೇವಾಲಯದ ಮುಂದೆ ಪ್ರತಿದಿನ ಭಿಕ್ಷಾಟನೆಯಲ್ಲಿ ತೊಡಗಿದ್ದ ಕಲ್ಲೇಶಿಗೆ ಕೆಲವರು ತಮ್ಮ ಕೈಲಾದ್ದನ್ನು ಕೊಟ್ಟು ಸಾಗಿದರೆ ಇನ್ನೂ ಕೆಲವರು “ಗಟ್ಟಿಮುಟ್ಟಾಗಿದ್ದೀಯ ದುಡಿದು ತಿನ್ನಬಾರದೆ” ಎಂದು ಜರಿದು ಮುಂದೆ ಸಾಗುತ್ತಿದ್ದರು. ಜನಗಳ ಬೈಗುಳ ಹಾಗೂ ತೆಗಳಿಕೆಯನ್ನು ಕೇಳಿದಾಗಲೆಲ್ಲ ತಾನೂ ಒಂದು ಬೆಚ್ಚನೆಯ ಮನೆಯಲ್ಲಿ ಸಿರಿಸಂಪತ್ತಿನ ಒಡೆಯನಾಗಿ ಗೌರವದಿಂದ ಬಾಳಬೇಕೆನ್ನುವ ಕ್ಷಣಿಕ ಆಸೆ ಚಿಗುರುತ್ತಿತ್ತಾದರೂ, ಅದು ತನ್ನಿಂದ ಅಸಾಧ್ಯವೆಂದು ತೀರ್ಮಾನಿಸಿ ತನ್ನ ಸುತ್ತಲೂ ತಾನೇ ಲಕ್ಷ್ಮಣರೇಖೆಯನ್ನೂ ಹಾಕಿಕೊಂಡಿದ್ದರಿಂದ ಅವನ ಆಸೆ ತಿರುಕನ ಕನಸಾಗಿ ಉಳಿದಿತ್ತು.
ಅದೇ ದೇವಾಲಯಕ್ಕೆ ದೇವರ ಅರ್ಚನೆ ಹಾಗೂ ಪ್ರಾರ್ಥನೆಗಳ ಸಲುವಾಗಿ ಆಗಾಗ ಬರುತ್ತಿದ್ದ ಶ್ರದ್ಧಾನಂದರು ಅವನ ಚಾಚಿದ ಕೈಗಳನ್ನು ಕಂಡು ಕೆಲವು ಕ್ಷಣಗಳ ಕಾಲ ಅವನ ಮುಖವನ್ನೇ ದಿಟ್ಟಿಸಿ ಮೌನವಾಗಿ ಮುಂದಕ್ಕೆ ಹೋಗಿಬಿಡುತ್ತಿದ್ದರು. ಅವರ ವರ್ತನೆಯಿಂದ ಉತ್ತೇಜಿತನಾಗಿದ್ದ ಕಲ್ಲೇಶಿ ಗೌರವಾನ್ವಿತರಾದ ಶ್ರದ್ಧಾನಂದರು ಎಂದಾದರೂ ಒಂದು ದಿನ ಭಿಕ್ಷೆಯನ್ನು ನೀಡುವರೆಂಬ ಭರವಸೆಯಲ್ಲಿ ಅಂದು ಕೇಳಿಯೇಬಿಟ್ಟ.
“ಸ್ವಾಮೀ! ಭಿಕ್ಷೆಯನ್ನು ನಾನು ಕೇಳುತ್ತಲೇ ಇದ್ದೇನೆ. ತಾವು ಕೊಡುವುದೂ ಇಲ್ಲ. ತಿರಸ್ಕರಿಸುವುದೂ ಇಲ್ಲ. ಹಾಗೆಯೇ ನಕ್ಕು ಮುಂದಕ್ಕೆ ಹೋಗಿಬಿಡುತ್ತೀರಿ. ದಯಮಾಡಿ ಏನನ್ನಾದರೂ ನೀಡಿ” ಕಲ್ಲೇಶಿಯಿಂದ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದ ಶ್ರದ್ಧಾನಂದರು “ನಿನಗೆ ಏನನ್ನಾದರೂ ನೀಡುವ ಆಸೆ ನನಗೂ ಇದೆ. ಆದರೆ ಮೊದಲು ನೀನು ನನ್ನ ಮಾತನ್ನು ಕೇಳುವುದಾದರೆ ಯೋಚಿಸುತ್ತೇನೆ” ಎಂದು ತಮ್ಮ ಮೌನವನ್ನು ಮುರಿದರು.
“ಹೇಳಿ ಸ್ವಾಮಿ ಕೇಳುತ್ತೇನೆ” – ಎಂದ ಕಲ್ಲೇಶಿಗೆ ಶ್ರದ್ಧಾನಂದರು,
“ವಯಸ್ಸಿಗೆ ತಕ್ಕ ಆರೋಗ್ಯ, ಶಕ್ತಿ ಹಾಗೂ ಚೈತನ್ಯಗಳನ್ನು ಭಗವಂತನಿಂದ ಪಡೆದು ಅದೃಷ್ಟಶಾಲಿಯಾಗಿರುವ ನಿನಗೆ ಸ್ವಂತ ಸಂಪಾದನೆಯಲ್ಲಿ ತೊಡಗಿ ಯಶಸ್ಸನ್ನು ಕಾಣುವ ಎಲ್ಲಾ ಅವಕಾಶಗಳಿವೆ. ಪ್ರಯತ್ನವಿಲ್ಲದೆ ಯಾವುದೂ ಫಲಿಸುವುದಿಲ್ಲ. ಯೋಚಿಸು, ನಿನ್ನ ದಾರಿಯನ್ನು ಹುಡುಕು. ಮತ್ತೆ ಬರುತ್ತೇನೆ…” ಎಂದು ಹೇಳಿ ಉತ್ತರಕ್ಕೆ ಕಾಯದೆ ನಡೆದುಬಿಟ್ಟರು.
ಶ್ರದ್ಧಾನಂದರ ಪ್ರೇರಣೆ ಕಲ್ಲೇಶಿಯ ಅಂತಃಸತ್ತ್ವವನ್ನು ಕಲಕಿತ್ತು. ‘ತಾನು ಏನನ್ನಾದರೂ ನಿಜವಾಗಿಯೂ ಮಾಡಬಲ್ಲೆನೆ?’ ಎಂಬ ಎಂದೂ ಕಾಡದ ಆಲೋಚನೆಯಲ್ಲಿ ಹಲವಾರು ದಿನಗಳ ಕಾಲ ಮುಳುಗಿಹೋದ. ಕೊನೆಗೆ ತನ್ನ ತಾಯಿ ಅವನು ಚಿಕ್ಕವನಾಗಿದ್ದಾಗ ಅವನನ್ನು ಜೊತೆಯಲ್ಲಿ ಸೇರಿಸಿಕೊಂಡು ಮಾಡುತ್ತಿದ್ದ ಉದ್ಯೋಗ ನೆನಪಾಯಿತು. ಭಿಕ್ಷಾಟನೆಯಲ್ಲಿ ಉಳಿಸಿಟ್ಟಿದ್ದ ಹಣದಿಂದ ಹೂವಿನ ವ್ಯಾಪಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಕಲ್ಲೇಶಿ. ಮೊದಲನೆಯ ಹೂವಿನ ಹಾರವನ್ನು ಆಲಯದ ದೇವರಿಗೆ ಅರ್ಪಿಸಿ ಯಶಸ್ಸಿಗಾಗಿ ಪ್ರಾರ್ಥಿಸಿದ. ದಿನಗಳುರುಳಿದಂತೆ ಅವನ ವ್ಯಾಪಾರ ಸೊಗಸಾಗಿ ಸಾಗಿ ಆತನಲ್ಲಿ ಹಣ ಸಂಗ್ರಹಣೆಯಾಗತೊಡಗಿತು.
ಮೂರು ತಿಂಗಳ ನಂತರ ಶ್ರದ್ಧಾನಂದರು ದೇವಾಲಯದ ಆವರಣದೊಳಗೆ ಬರುತ್ತಿದ್ದಂತೆ “ಗುರುಗಳೇ!” ಎಂಬ ಕೂಗು ಕೇಳಿ ಹಿಂದಿರುಗಿ ನೋಡಿದರು. ಒಂದು ಪುಟ್ಟ ಹೂವಿನ ಅಂಗಡಿಯಲ್ಲಿ ಕುಳಿತ ಕಲ್ಲೇಶಿಯನ್ನು ಕಂಡು, ಅಂಗಡಿಯ ಬಳಿಗೆ ಹೋಗಿ “ಭಲೇ ಕಲ್ಲೇಶಿ! ನನ್ನ ಸಲಹೆಯನ್ನು ಮಾನ್ಯ ಮಾಡಿದ್ದಕ್ಕೆ ಧನ್ಯವಾದಗಳು” ಎನ್ನುತ್ತ ಅವನನ್ನು ಪ್ರಶಂಸಿಸಿದರು.
“ನೀವು ಹೇಳಿದಂತೆ ಕೇಳಿದ್ದೇನೆ. ಈಗಲಾದರೂ ಭಿಕ್ಷೆಯನ್ನು ನೀಡುವಿರೋ…” ಎಂದು ನಗುತ್ತಲೇ ಕೈಚಾಚಿದ ಕಲ್ಲೇಶಿ.
ಶ್ರದ್ಧಾನಂದರು ಅವನ ಅಂಗಡಿಯಿಂದ ಒಂದಿಷ್ಟು ಹೂವುಗಳನ್ನು ಕೊಂಡು ಅವನು ಬೇಡವೆಂದರೂ ಅದರ ಮೌಲ್ಯವನ್ನು ಪಾವತಿಸಿ “ನೀನು ಇನ್ನೂ ಹೆಚ್ಚಿನದನ್ನು ಮಾಡಬಹುದಾಗಿದೆ. ನನಗೆ ತಿಳಿದ ಒಬ್ಬ ಮಹನೀಯರ ವಿಳಾಸವನ್ನು ಕೊಡುತ್ತೇನೆ. ಅವರನ್ನು ಭೇಟಿಯಾಗು. ನಿನಗೆ ಒಳ್ಳೆಯದಾಗುತ್ತದೆ” ಎಂದು ಹೇಳಿ ಅವನ ಕೈಯಲ್ಲಿ ಒಂದು ವಿಳಾಸದ ಚೀಟಿಯನ್ನಿಟ್ಟು ಹೊರಟುಹೋದರು.
ಶ್ರದ್ಧಾನಂದರ ಮಿತ್ರರೂ ಹಾಗೂ ಉದ್ಯೋಗ ಪ್ರಶಿಕ್ಷಣಕೇಂದ್ರದ ಅಧ್ಯಕ್ಷರೂ ಆದ ಜ್ಞಾನತೀರ್ಥರು ಕಲ್ಲೇಶಿಯನ್ನು ಆದರರಿಂದ ಬರಮಾಡಿಕೊಂಡು ಅವನಿಗೆ ಹಲವಾರು ಉದ್ಯೋಗಗಳ ಪರಿಚಯವನ್ನು ಮಾಡಿಕೊಟ್ಟು, ಆತ ಆಸಕ್ತಿ ತೋರಿದ ಅಗರಬತ್ತಿ ತಯಾರಿಕೆಯ ಉದ್ಯೋಗದಲ್ಲಿ ಪ್ರಶಿಕ್ಷಣವನ್ನು ಕೊಡಿಸಿದರು. ಹೂವಿನ ವ್ಯಾಪಾರದ ಜೊತೆಯಲ್ಲಿ ಅಗರಬತ್ತಿ ತಯಾರಿಕೆಯ ಉದ್ಯೋಗವನ್ನೂ ಪ್ರಾರಂಭಿಸಿದ ಕಲ್ಲೇಶಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಜ್ಞಾನತೀರ್ಥರು ಒದಗಿಸಿಕೊಟ್ಟರು. ಭಿಕ್ಷಾಟನೆಯಲ್ಲಿ ತೊಡಗಿದ್ದ ತನ್ನ ಸಹಚರರಲ್ಲಿ ಕೆಲವರನ್ನು ತನ್ನ ಉದ್ಯೋಗಕ್ಕಾಗಿ ನೇಮಿಸಿಕೊಂಡ ಕಲ್ಲೇಶಿ. ಅವನ ಉತ್ಪನ್ನ ಲೋಕಪ್ರಿಯವಾಗಿ ವ್ಯಾಪಾರ ಚೆನ್ನಾಗಿ ಸಾಗಿತು. ಸಹಜ ಮುನ್ನಡೆಯನ್ನು ಕಂಡ ಆತ ಹಿಂದಿರುಗಿ ನೋಡಲಿಲ್ಲ. ವಿವಿಧ ಉತ್ಪನ್ನಗಳನ್ನು ತಯಾರಿಸಿ ಒಬ್ಬ ಯಶಸ್ವೀ ಉದ್ಯಮಿಯಾಗಿ ಗುರ್ತಿಸಲ್ಪಟ್ಟ. ಆತನ ವೇಷಭೂಷಣಗಳು ಬದಲಾದವು. ಇರಲು ಬೆಚ್ಚಗಿನ ಮನೆ ಓಡಾಡಲು ಕಾರು ಸೇರಿದಂತೆ ಸಕಲ ಸೌಲಭ್ಯಗಳು ತಾವಾಗಿ ಒದಗಿಬಂದವು.
ಹಲವು ವರ್ಷಗಳ ನಂತರ ‘ಕಲ್ಲೇಶಿ ಗ್ರೂಪ್ ಆಫ್ ಇಂಡಸ್ಟ್ರೀಸ್’ ಕಚೇರಿಯೊಳಗೆ ಶ್ರದ್ಧಾನಂದರ ಪ್ರವೇಶವಾಯಿತು. ಅವರನ್ನು ಕಂಡೊಡನೆ ಕಲ್ಲೇಶಿ ಗೌರವಾದರಗಳಿಂದ ಅವರ ಪಾದಗಳಿಗೆರಗಿ ನಮಸ್ಕರಿಸಿ ಬರಮಾಡಿಕೊಂಡ. ಕುಳಿತುಕೊಳ್ಳಲು ಆಸನವನ್ನು ನೀಡಿ ಕುಡಿಯಲು ಪಾನೀಯವನ್ನಿತ್ತು ಉಪಚರಿಸಿ, ಫಲತಾಂಬೂಲವನ್ನಿತ್ತು ಸತ್ಕರಿಸಿ “ನೋಡಿ ಗುರುಗಳೇ… ನಿಮ್ಮ ಮುಂದಿರುವುದು ನೀವೇ ರೂಪಿಸಿದ ಕಲ್ಲೇಶಿಯ ಜೀವಂತ ಶಿಲ್ಪ…” ಎಂದ.
“ಕಲ್ಲೇಶಿ! ಸತತ ಪ್ರಾಮಾಣಿಕ ಪ್ರಯತ್ನಗಳಿಗೆ ಸೋಲಿಲ್ಲ. ಯಾವುದೇ ಪ್ರಗತಿಗೂ ಕೊನೆಯಿಲ್ಲ. ನೀನು ಬೆಳೆಯುತ್ತಲೇ ನಮ್ಮ ದೇಶಕ್ಕೆ ವಿದೇಶೀ ವಿನಿಮಯ ಹರಿದುಬರಬೇಕು.” ಶ್ರದ್ಧಾನಂದರ ಪ್ರೇರಣಾತ್ಮಕ ಮಾತುಗಳನ್ನು ಕೇಳಿ ಉತ್ತೇಜಿತನಾದ ಕಲ್ಲೇಶಿ “ಆಗಲಿ ಗುರುಗಳೇ. ನೀವು ಹೇಳಿದಂತೆ ನಡೆಯುತ್ತೇನೆ. ನಾನೆಂದೂ ನಿಮ್ಮ ಮಾತುಗಳನ್ನು ಮೀರುವುದಿಲ್ಲ” ಎಂದು ತನ್ನ ಸಹಮತವನ್ನು ವ್ಯಕ್ತಪಡಿಸಿ “ಆದರೂ ಗುರುಗಳೇ ನೀವು ನನಗೆ ಭಿಕ್ಷೆಯನ್ನೇ ನೀಡಲಿಲ್ಲವಲ್ಲ…” ಎಂದು ನಗುತ್ತಲೇ ನೆನಪಿಸಿದ ಕಲ್ಲೇಶಿ.
“ಈಗಾಗಲೇ ಹಲವು ಬಾರಿ ನನ್ನಿಂದ ಭಿಕ್ಷೆಯನ್ನು ಪಡೆದಿರುವೆಯಲ್ಲ…”
“ಹಲವು ಬಾರಿ ಭಿಕ್ಷೆಯನ್ನು ನೀಡಿರುವಿರಾ! ಹೇಗೆ ಗುರುಗಳೇ?” ಶ್ರದ್ಧಾನಂದರ ಮಾತುಗಳಿಂದ ಗೊಂದಲಕ್ಕೊಳಗಾದ ಕಲ್ಲೇಶಿ.
ಶ್ರದ್ಧಾನಂದರು ಉತ್ತರಿಸಿದರು “ಪ್ರಥಮ ಬಾರಿ ನಿನ್ನಲ್ಲಿ ಇಚ್ಛಾಶಕ್ತಿ ಜಾಗೃತಗೊಂಡು ಮೊಳೆಯುವಂತೆ ಮಾಡಿದೆ. ಎರಡನೆಯ ಬಾರಿ ನಿನ್ನ ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಗಳ ಸಂಯೋಗವಾಗುವಲ್ಲಿ ನೆರವಾದೆ. ಮೂರನೆಯ ಬಾರಿ ಅಂದರೆ ಈಗ ನಿನ್ನ ಕ್ರಿಯಾಶಕ್ತಿಯನ್ನು ವೃದ್ಧಿಸುವ ಪ್ರಯತ್ನವನ್ನು ಮಾಡಿದ್ದೇನೆ. ಎಂದೆಂದಿಗೂ ನಿನ್ನಲ್ಲೇ ಉಳಿಯುವ ತ್ರಿಶಕ್ತಿಯ ಪ್ರಚ್ಛನ್ನ ಧನವೀಗ ನಿನ್ನದು. ಅಷ್ಟು ಸಾಲದೇ?”
ಅತ್ಯಂತ ಕೆಳಮಟ್ಟದಿಂದ ಉನ್ನತಮಟ್ಟವನ್ನು ಸಾಧಿಸಿದ್ದ ಕಲ್ಲೇಶಿಯ ಮನಸ್ಸು ತುಂಬಿ ಬಂದು ಶ್ರದ್ಧಾನಂದರನ್ನು ಪದೇ ಪದೇ ಶ್ಲಾಘಿಸಿ “ಗುರುಗಳೇ, ನಿಮಗಾಗಿ ಏನನ್ನಾದರೂ ಕೇಳಿ. ಗುರುದಕ್ಷಿಣೆಯಾಗಿ ಕೊಡುತ್ತೇನೆ” ಎಂದು ವಿನಂತಿಸಿದ.
“ನಾನೊಬ್ಬ ಸ್ವಯಂಸೇವಕ. ಪ್ರವಾಸಿ ಕಾರ್ಯಕರ್ತ. ಸಮಾಜದ ಸಕಾರಾತ್ಮಕ ಪರಿವರ್ತನೆಯ ಕಾಯಕದಲ್ಲಿ ನನ್ನೆಲ್ಲ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ವಿನಿಯೋಗಿಸಿ ಕ್ರಿಯಾಶೀಲನಾಗಿರುವ ನನಗೆ ಯಾವ ಸಂಪತ್ತಿನ ಅಭಿಲಾಷೆಯೂ ಇಲ್ಲ. ನೀನೀಗ ಸಮಾಜದಿಂದ ಪಡೆದಿರುವುದರಿಂದ ದೀನರು, ದುರ್ಬಲರು, ಅನಾಥರು ಹಾಗೂ ವೃದ್ಧರಿಗೆ ನೆರವಾಗುವ ಮೂಲಕ ಒಂದಿಷ್ಟು ಭಾಗವನ್ನು ಧಾರಾಳವಾಗಿ ಹಿಂದಿರುಗಿಸು. ಬಿದ್ದವರನ್ನು ಮೇಲೇತ್ತುವ ಕೆಲಸವನ್ನು ಮಾಡು. ನಿನ್ನ ಅನುಭವ ಇತರರಿಗೆ ಮಾರ್ಗದರ್ಶಕವಾಗಲಿ. ಇದೇ ನೀನು ನನಗೆ ಕೊಡುವ ಗುರುದಕ್ಷಿಣೆ.” ಶ್ರದ್ಧಾನಂದರ ಮಾತುಗಳು ಮುಗಿಯುತ್ತಿದ್ದಂತೆ ಆಲಯದ ಗಂಟೆ ಬಾರಿಸಿತು.
“ಹಾಗೆಯೇ ಆಗಲಿ ಗುರುಗಳೇ. ನಿಮ್ಮ ಅಪೇಕ್ಷೆಯನ್ನು ತಪ್ಪದೇ ಈಡೇರಿಸುತ್ತೇನೆ” ಎಂದ ಕಲ್ಲೇಶಿ.
ಶ್ರದ್ಧಾನಂದರು ಸಾರ್ಥಕ ಮುಗುಳ್ನಗೆಯೊಂದಿಗೆ ಅವನಿಂದ ಬೀಳ್ಕೊಂಡರು.