ಕರುಣಾಕರನ ಮಾತುಗಳಿಗೆ ತಲೆದೂಗಿದ ಯಮಧರ್ಮರಾಯರು “ನೀನು ಹೇಳುವುದು ಯಥೋಚಿತವಾಗಿದೆ. ಆದರೆ ಮಾನ್ಯ ಮಾಡತಕ್ಕದ್ದಲ್ಲ. ಭೂಮಿಯಲ್ಲಿ ಕರ್ಮಾನುಸಾರ ಶಿಕ್ಷೆಯನ್ನು ಅನುಭವಿಸಿದರೂ ಅಲ್ಲಿ ಅದು ಅಪೂರ್ಣವಾದರೆ ಇಲ್ಲಿ ಕೊಡಲ್ಪಡುವ ಶಿಕ್ಷೆಯನ್ನು ಯಾರೊಬ್ಬರದೂ ಯಾವುದೇ ನೆರವಿಲ್ಲದೆ ಅನುಭವಿಸಿ ಪೂರೈಸಿಕೊಳ್ಳಬೇಕು. ಆದರೆ ನಿನ್ನ ನಡವಳಿಕೆ ಮತ್ತು ಮಾನಸಿಕ ಪ್ರೌಢಿಮೆಯಿಂದ ನಾನು ಪ್ರಸನ್ನನಾಗಿದ್ದೇನೆ.
ಮಾಯಾನಗರಿಯ ಜನಪ್ರಿಯ ಸಂತ ಪ್ರಜ್ಞಾನಂದರಿಗೂ ಮಧ್ಯಮ ವರ್ಗದ ಕುಟುಂಬಸ್ಥ ಕರುಣಾಪರನಿಗೂ ಒಂದೇ ದಿನದ ಒಂದೇ ಗಳಿಗೆಯಲ್ಲಿ ಮರಣಯೋಗ ಪ್ರಾಪ್ತವಾಯಿತು. ಯಮಧರ್ಮ ತನ್ನ ದೂತರನ್ನು ಕರೆದು ಈ ಇಬ್ಬರನ್ನೂ ಸಶರೀರವಾಗಿಯಾಗಲಿ ಇಲ್ಲವೇ ಆತ್ಮರೂಪದಿಂದಾಗಲಿ ಬರುವ ಆಯ್ಕೆಯನ್ನು ಅವರಿಗೆ ನೀಡಿ ಕರೆತರುವಂತೆ ಅಪ್ಪಣೆ ಮಾಡಿದರು.
ದೂತರು ಇಬ್ಬರ ಬಳಿಗೂ ಆಗಮಿಸಿ ಯಮಧರ್ಮರ ಸಂದೇಶವನ್ನು ತಿಳಿಸಿ ತಮ್ಮ ಜೊತೆಯಲ್ಲಿ ಬರುವಂತೆ ಹೇಳಿದರು.
“ನಾನು ಇಲ್ಲಿನ ಜನಗಳ ಪ್ರೀತಿಯ ಸಂತ. ಇಲ್ಲಿಯ ಜನರು ನನ್ನ ದೇಹವನ್ನು ಪೂಜಿಸಿ ಧರ್ಮಾನುಸಾರ ನನ್ನ ಸಮಾಧಿಯನ್ನು ನಿರ್ಮಿಸಿ, ಪ್ರತಿನಿತ್ಯ ದರ್ಶನ ಪಡೆದು ಪೂಜಿಸುತ್ತಾರೆ. ನನ್ನ ಕೀರ್ತಿ-ಪ್ರತಿಷ್ಠೆಗಳು ಚಿರಕಾಲ ಉಳಿಯುತ್ತದೆ” ಎಂದು ಆಲೋಚಿಸಿದ ಪ್ರಜ್ಞಾನಂದರು ಆತ್ಮರೂಪಿಯಾಗಿ ತನ್ನನ್ನು ಕರೆದೊಯ್ಯುವಂತೆ ನಿವೇದಿಸಿದರು.
“ಈ ಶರೀರ ಭೂಮಿಯಿಂದಲೇ ಆದ ಭೂಮಿಯದ್ದೇ ಸ್ವತ್ತು. ಇಲ್ಲಿಯೇ ಇದರ ಉಪಯೋಗವಾಗಬೇಕು. ಆದ್ದರಿಂದ ನನ್ನೆಲ್ಲಾ ಶರೀರದ ಅಂಗಾಂಗಗಳನ್ನು ನಾನು ದಾನವಾಗಿ ನೀಡಿಬಿಟ್ಟಿದ್ದೇನೆ. ಶರೀರಸಹಿತ ಬರಲಾರೆ. ದಯಮಾಡಿ ಆತ್ಮರೂಪದಲ್ಲಿಯೇ ನನ್ನನ್ನು ಕರೆದೊಯ್ಯಿರಿ” ಎಂದು ಕರುಣಾಕರ ಯಮದೂತರನ್ನು ಪ್ರಾರ್ಥಿಸಿದರು.
ಇಬ್ಬರನ್ನೂ ಆತ್ಮರೂಪಿಗಳಾಗಿ ಯಮಧರ್ಮರಾಜರ ಮುಂದೆ ಹಾಜರುಪಡಿಸಲಾಯಿತು. ಚಿತ್ರಗುಪ್ತನಿಂದ ಅವರ ಜೀವನದ ಪಾಪಪುಣ್ಯಗಳ ವಿವರಗಳನ್ನು ಪಡೆದುಕೊಂಡು ಸಮಾಲೋಚನೆ ನಡೆಸಿದ ಬಳಿಕ “ಕರುಣಾಕರನು ಸ್ವರ್ಗಕ್ಕೂ, ಪ್ರಜ್ಞಾನಂದರು ನರಕಕ್ಕೂ ಕಳುಹಿಸಲ್ಪಡಲಿ” ಎಂದು ತೀರ್ಮಾನ ಪ್ರಕಟವಾಯಿತು.
ಹೌಹಾರಿದ ಪ್ರಜ್ಞಾನಂದರು “ನಾನು ಧರ್ಮ ಪರಿಪಾಲಕ, ಮಹಾಜ್ಞಾನಿ. ನನ್ನ ಉಪನ್ಯಾಸಗಳ ಮೂಲಕ ಜನಸಮೂಹದಲ್ಲಿ ಜ್ಞಾನವನ್ನು ಪಸರಿಸಿದ್ದೇನೆ. ಜಪ-ತಪ ಹಾಗೂ ಪೂಜಾ ವಿಧಾನಗಳಿಂದ ಆತ್ಮೋದ್ಧಾರವನ್ನು ಪಡೆದಿದ್ದೇನೆ. ಭೂಲೋಕದ ಜನ ನನ್ನನ್ನು ದೇವರೆಂದೇ ತಿಳಿದು ನನ್ನ ಪಾದಪೂಜೆ ಮಾಡಿ ಆರಾಧಿಸುತ್ತಾರೆ. ಅಂತಹ ನನಗೆ ನರಕವೇ? ಇದು ಅನ್ಯಾಯ” ಎಂದು ಖಂಡತುಂಡವಾಗಿ ವಾದಿಸಿದರು.
ಯಮಧರ್ಮರಾಜರ ಅಪ್ಪಣೆ ಮೇರೆಗೆ ಚಿತ್ರಗುಪ್ತನು ಉತ್ತರಿಸಿದ:
“ನೀವು ಎಷ್ಟೇ ಆತ್ಮಜ್ಞಾನವನ್ನು ಪಡೆದಿದ್ದರೂ ಶರೀರದ ಮೇಲಿನ ವ್ಯಾಮೋಹ ಹೋಗಿಲ್ಲವೆಂದು ನಿಮ್ಮನ್ನು ಇಲ್ಲಿಗೆ ಕರೆತರುವಾಗ ತಿಳಿದುಹೋಯಿತು. ನಿಮ್ಮ ಕೋಪಾವೇಶಗಳು ದೂರವಾಗಿಲ್ಲವೆನ್ನುವುದು ಇದೀಗ ತಿಳಿಯಿತು. ಪ್ರಪಂಚದ ಸುಖಮಯ ಜೀವನದ ಆಕರ್ಷಣೆಯ ಸೆಳೆತ ನಿಮ್ಮನ್ನು ತೊರೆದಿಲ್ಲ. ಧ್ಯಾನ-ಜಪತಪಗಳು ಕೇವಲ ನಿಮ್ಮ ಸ್ವಾರ್ಥಕ್ಕಾಗಿ ಮಾಡಿದ್ದು. ನಿಮ್ಮ ಮಾತುಗಳ ಮೋಡಿಯಲ್ಲಿ ಜನರನ್ನು ಆಕರ್ಷಿಸಿ ಅವರಿಂದ ಪೂಜೆಗೊಳಪಟ್ಟಿದ್ದೀರಿ. ಸಂನ್ಯಾಸವನ್ನು ಜೀವನೋಪಾಯಕ್ಕೂ, ಜನಗಳಿಂದ ಬರುವ ಅಪಾರ ಕಾಣಿಕೆಗಳನ್ನು ಆಶ್ರಮದ ಅಭಿವೃದ್ಧಿಗೂ ಬಳಸಿ ಐಷಾರಾಮಿ ಜೀವನವನ್ನು ನಡೆಸಿದ್ದಿರಿ. ಎಲ್ಲರೂ ನಿಮ್ಮ ಸೇವೆಯನ್ನು ಮಾಡಿದ್ದಾರೆ. ಯಾರಿಗೂ ನಿಮ್ಮಿಂದ ಯಾವ ಉಪಕಾರವೂ ಆಗಿಲ್ಲ. ನಿಮ್ಮ ಅನುಯಾಯಿಗಳ ಉದಾರಮನೋಭಾವವೂ ನಿಮ್ಮಲ್ಲಿಲ್ಲ. ಸೇವಾಧರ್ಮದ ಹೊರತಾಗಿ ಯಾವ ಧರ್ಮಾಚರಣೆಯೂ ಪರಿಪೂರ್ಣವಲ್ಲ.
ಇನ್ನು ಕರುಣಾಕರ ತನಗೆ ಬರುವ ಅತ್ಯಲ್ಪ ಆದಾಯದಲ್ಲೂ ತನ್ನ ಸಂಸಾರದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಒಂದಿಷ್ಟನ್ನು ಉಳಿಸಿ ತನ್ನ ಸುತ್ತಮುತ್ತಲ ಜನಗಳಿಗೆ ಕೈಲಾದ ಸೇವೆಯನ್ನು ಕಾಯಾ, ವಾಚಾ, ಮನಸಾ ಮಾಡಿದ್ದಾನೆ. ನಿರ್ಗತಿಕರು, ಅನಾಥರು ಹಾಗೂ ವೃದ್ಧರಿಗೆ ನೆರವಾಗಿದ್ದಾನೆ. ದೇವರಲ್ಲಿ ಸ್ವಾರ್ಥರಹಿತ ಶ್ರದ್ಧಾಭಕ್ತಿಗಳನ್ನು ಹೊಂದಿ ಲೋಕಹಿತಕ್ಕಾಗಿ ಸದಾ ಪ್ರಾರ್ಥಿಸಿದ್ದಾನೆ. ಪ್ರಾಪಂಚಿಕ ವಸ್ತುಗಳಲ್ಲಿ ವ್ಯಾಮೋಹರಹಿತನಾಗಿ ಪರಹಿತಕ್ಕಾಗಿ ಸೇವಾಧರ್ಮವನ್ನು ಪಾಲಿಸಿ ಜೀವನ್ಮುಕ್ತನಾಗಿ ಬದುಕಿದ್ದಾನೆ. ಯಮಧರ್ಮರಾಯರ ತೀರ್ಪು ನ್ಯಾಯಬದ್ಧವಾಗಿದ್ದು ಅನುಷ್ಠಾನಯೋಗ್ಯವಾಗಿದೆ.”
ಪ್ರಜ್ಞಾನಂದರು ತಲೆತಗ್ಗಿಸಿ ನಿಂತರು. ಅಂಜಲೀಬದ್ಧನಾಗಿ ನಿಂತಿದ್ದ ಕರುಣಾಕರ,
“ಮಹಾಸ್ವಾಮಿ! ಸ್ವರ್ಗದಲ್ಲಿ ನಾನು ಮಾಡುವುದಾದರೂ ಏನಿದೆ? ಅಲ್ಲಿ ಎಲ್ಲವೂ ಅಚ್ಚುಕಟ್ಟು ಹಾಗೂ ವ್ಯವಸ್ಥಿತ. ಎಲ್ಲರೂ ಸುಖಸಂತೋಷಗಳಿಂದಿರುತ್ತಾರೆ. ಆದರೆ ನರಕದಲ್ಲಿ ಅಪಾರ ನೋವು ಹಾಗೂ ಆಕ್ರಂದನಗಳಿಂದ ನರಳುವವರು ಇರುತ್ತಾರೆ. ಅಂತವರಿಗೆ ಸೇವೆ ಹಾಗೂ ನೆರವಿನ ಅಗತ್ಯ ಬಹಳವಾಗಿರುತ್ತದೆ. ದಯಮಾಡಿ ನನ್ನನ್ನು ಅಲ್ಲಿಗೇ ಕಳುಹಿಸಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಾಗ್ಯವನ್ನು ಕರುಣಿಸಿ. ಈ ಸ್ವಾಮಿಗಳನ್ನು ಬೇಕಾದರೆ ನನ್ನ ಪರವಾಗಿ ಸ್ವರ್ಗಕ್ಕೆ ಕಳುಹಿಸಿ” – ಎಂದು ವಿನಂತಿಸಿದನು.
ಪ್ರಜ್ಞಾನಂದರಿಗೆ ಸಂಪೂರ್ಣ ಜ್ಞಾನೋದಯವಾಯಿತು. ಕರುಣಾಕರನಿಗೆ ಕೈ ಎತ್ತಿ ನಮಸ್ಕರಿಸಿದರು. ಕರುಣಾಕರನ ಮಾತುಗಳಿಗೆ ತಲೆದೂಗಿದ ಯಮಧರ್ಮರಾಯರು “ನೀನು ಹೇಳುವುದು ಯಥೋಚಿತವಾಗಿದೆ. ಆದರೆ ಮಾನ್ಯ ಮಾಡತಕ್ಕದ್ದಲ್ಲ. ಭೂಮಿಯಲ್ಲಿ ಕರ್ಮಾನುಸಾರ ಶಿಕ್ಷೆಯನ್ನು ಅನುಭವಿಸಿದರೂ ಅಲ್ಲಿ ಅದು ಅಪೂರ್ಣವಾದರೆ ಇಲ್ಲಿ ಕೊಡಲ್ಪಡುವ ಶಿಕ್ಷೆಯನ್ನು ಯಾರೊಬ್ಬರದೂ ಯಾವುದೇ ನೆರವಿಲ್ಲದೆ ಅನುಭವಿಸಿ ಪೂರೈಸಿಕೊಳ್ಳಬೇಕು. ಆದರೆ ನಿನ್ನ ನಡವಳಿಕೆ ಮತ್ತು ಮಾನಸಿಕ ಪ್ರೌಢಿಮೆಯಿಂದ ನಾನು ಪ್ರಸನ್ನನಾಗಿದ್ದೇನೆ. ಆದ್ದರಿಂದ ನಿನಗೆ ಧನಿಕನೂ, ಆತ್ಮಜ್ಞಾನಿಯೂ ಆಗುವಂತೆ ಭೂಮಿಯಲ್ಲಿ ಮರುಜನ್ಮವನ್ನು ಪ್ರಸಾದಿಸುತ್ತೇನೆ. ಅಲ್ಲಿ ನೀನು ನಿನ್ನ ಸೇವಾಧರ್ಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರಿಸಿ ಜನಾನುರಾಗಿಯಾಗಿ ಕಷ್ಟಕಾರ್ಪಣ್ಯಗಳಲ್ಲಿರುವವರಿಗೆ ನೆರವಾಗಿ ಪುನೀತನಾಗು. ಪ್ರಜ್ಞಾನಂದರು ಇಲ್ಲಿ ಕರ್ಮಫಲದ ನರಕವನ್ನನುಭವಿಸಿ ನಂತರ ಮರುಜನ್ಮವನ್ನು ಪಡೆದು ನಿನ್ನ ಕೈಂಕರ್ಯದಲ್ಲಿ ಕೈ ಜೋಡಿಸುವರು. ನಿಮ್ಮ ಸೇವಾಧರ್ಮಕ್ಕೆ ಜಯವಾಗುವುದು” ಎಂದು ಅನುಗ್ರಹಿಸಿದರು.