ಮಣಿಪುರದಲ್ಲಿ ವಾಸಿಸುವ ಮೈತೇಯಿ, ಕುಕಿಗಳು ಹಾಗೂ ನಾಗಾ ಎಂಬ ಮೂರು ವಿಧದ ಬುಡಕಟ್ಟು ಜನಾಂಗಗಳಲ್ಲಿ ಕುಕಿಗಳು ಹಾಗೂ ಮೈತೇಯಿ ಎಂಬ ಎರಡು ಸಮುದಾಯಗಳ ನಡುವಿನ ಸಂಘರ್ಷವಿದು. ಆದರೆ ಈ ಸಂಘರ್ಷದ ಮೂಲವನ್ನು ಹುಡುಕುತ್ತಹೋದರೆ ಅನೇಕ ಕಾರಣಗಳು ಗೋಚರಿಸುತ್ತವೆ. ಈ ಕಾರಣಗಳನ್ನು ಐತಿಹಾಸಿಕ ಕಾರಣಗಳು, ರಾಜಕೀಯ ಕಾರಣಗಳು, ಧಾರ್ಮಿಕ ಕಾರಣಗಳು, ಜನಾಂಗೀಯ ಕಾರಣಗಳು ಎಂಬುದಾಗಿ ವಿಭಾಗಿಸಬಹುದು. ಇವುಗಳನ್ನು ಚರ್ಚಿಸುವ ಮೊದಲು ಮಣಿಪುರದ ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ಇತಿಹಾಸ ಹಾಗೂ ಅದರ ಭಾಗವಾದ ಐತಿಹಾಸಿಕವಾದ ಕೆಲವು ತಪ್ಪುಗಳು ಕೂಡ ಇವತ್ತಿನ ಗಲಭೆಗೆ ಮುಖ್ಯವಾದ ಕಾರಣಗಳಾಗಿವೆ.
ಭಾರತದ ಪ್ರತಿಯೊಂದು ರಾಜ್ಯವೂ ವಿಭಿನ್ನವೇ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ – ಎಲ್ಲ ದೃಷ್ಟಿಯಿಂದಲೂ ಭಾರತದಷ್ಟು ವೈವಿಧ್ಯ ಮತ್ತೆಲ್ಲೂ ಕಾಣಲು ಸಿಗಲಿಕ್ಕಿಲ್ಲ. ಒಂದೊಂದು ಪ್ರದೇಶದ ಆಚರಣೆ, ಭಾಷೆ, ಆಹಾರ, ಚಿಂತನೆ ಪ್ರತಿಯೊಂದೂ ಬೇರೆ. ಹಾಗಾಗಿಯೆ ಭಾರತವನ್ನು ಅರ್ಥ ಮಾಡಿಕೊಳ್ಳಲು ಮೂರು ಜನ್ಮ ಸಾಲುವುದಿಲ್ಲ ಎಂಬ ಒಂದು ಮಾತಿದೆ. ಸ್ವತಃ ಭಾರತೀಯರಿಗೆ ತಮ್ಮ ದೇಶದ ಮತ್ತೊಂದು ರಾಜ್ಯದ ಬಗ್ಗೆ ಸೂಕ್ಷ್ಮವಾಗಿ ತಿಳಿದಿರುವುದಿಲ್ಲ. ಅದರಲ್ಲೂ ಈಶಾನ್ಯಭಾರತವೆಂದರೆ ಉಳಿದ ಭಾರತದ ಪ್ರದೇಶಗಳ ಜನರಿಗೆ ಅಪರಿಚಿತವೇ ಎನ್ನಬಹುದು. ಈಶಾನ್ಯಭಾರತದಲ್ಲಿ ಒಟ್ಟು ಎಂಟು ರಾಜ್ಯಗಳಿವೆ. ಅರುಣಾಚಲಪ್ರದೇಶ, ಅಸ್ಸಾಮ್, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಮ್ ಮತ್ತು ತ್ರಿಪುರಾ. ಈ ಒಂದೊಂದು ರಾಜ್ಯದ ಭೌಗೋಳಿಕ ಸ್ಥಿತಿ, ಇಲ್ಲಿನ ಜನರ ಸಂಸ್ಕೃತಿ, ಭಾಷೆ ಸೇರಿದಂತೆ ಪ್ರತಿಯೊಂದೂ ಕೂಡ ವಿಭಿನ್ನ ಮತ್ತು ಅನನ್ಯ.
ಈಶಾನ್ಯರಾಜ್ಯಗಳು ಭಾರತದ ಉಳಿದ ಭಾಗದ ಜನರಿಗೆ ಕೇವಲ ಪ್ರವಾಸಿತಾಣ. ಈಶಾನ್ಯರಾಜ್ಯಗಳ ಸ್ಥಿತಿಗತಿಗಳು, ಅಲ್ಲಿನ ಸಮಸ್ಯೆಗಳು ಮತ್ತು ಅವುಗಳ ಮೂಲಕಾರಣಗಳೆಲ್ಲ ಹೆಚ್ಚಿನ ಜನರಿಗೆ ಅರ್ಥವಾಗದೆ ಉಳಿದುಬಿಡುತ್ತವೆ. ಬೆರಳತುದಿಯಲ್ಲಿ ಮಾಹಿತಿ ಸಿಗುವ ಈಗಿನ ಕಾಲದಲ್ಲಿಯೂ ಹೆಚ್ಚೆಂದರೆ ಒಂದಿಷ್ಟು ತಪ್ಪುಭಾವನೆ ಮೂಡುವ ಮೂಲಕ ಗೋಜಲು ಎನಿಸಬಹುದೇ ಹೊರತು ಸರಿಯಾಗಿ ಅರ್ಥೈಸಿಕೊಳ್ಳುವುದು ಬಹಳ ಕಷ್ಟ. ಏಕೆಂದರೆ ಅಷ್ಟೊಂದು ಸಂಕೀರ್ಣವಾದ ಇತಿಹಾಸ ಹಾಗೂ ಹಿನ್ನೆಲೆಯನ್ನು ಈ ರಾಜ್ಯಗಳು ಹೊಂದಿವೆ. ಹಾಗಾಗಿಯೆ ಈಶಾನ್ಯರಾಜ್ಯಗಳ ವಿಷಯದಲ್ಲಿ ಹೆಚ್ಚಿನವರಿಗೆ ಗೊಂದಲ ಅಥವಾ ಅನಾಸಕ್ತಿ. ಇದನ್ನು ಮನಗಂಡು ಒಂದಷ್ಟು ದೇಶವಿರೋಧಿ ಶಕ್ತಿಗಳು ಸರ್ಕಾರಗಳ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸಲು ಜನರ ಈ ಮಾಹಿತಿಯ ಕೊರತೆಯನ್ನು ಉಪಯೋಗಿಸಿಕೊಳ್ಳುತ್ತವೆ.
ಕಳೆದ ಕೆಲವು ತಿಂಗಳಿನಿಂದ ಭಾರೀ ಸುದ್ದಿ ಮಾಡುತ್ತಿರುವ ಮಣಿಪುರದ ಬಗ್ಗೆಯೂ ಇದೇ ಪ್ರವೃತ್ತಿಯನ್ನು ಕಾಣಬಹುದಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಗಳ ಕುರಿತಾಗಿ ಹಾಗೂ ಅದರ ಕಾರಣಗಳ ಕುರಿತಾಗಿ ಎಲ್ಲ ಕಡೆಯೂ ಬಿಡಿಬಿಡಿಯಾದ ವರದಿಗಳು ಮಾತ್ರ ಬರುತ್ತಿವೆಯೇ ಹೊರತು ಈಗ ನಡೆಯುತ್ತಿರುವ ಘಟನೆಗಳ ಮೂಲಕಾರಣವನ್ನು ಸಮಗ್ರವಾಗಿ ಚರ್ಚಿಸುವ ಪ್ರಯತ್ನವನ್ನು ಹೆಚ್ಚಿನ ಮಾಧ್ಯಮಗಳು ಮಾಡಿಲ್ಲ ಎಂದೇ ಅನಿಸುತ್ತದೆ. ಕನ್ನಡದಲ್ಲಿಯಂತೂ ಈ ಪ್ರಯತ್ನ ಅತ್ಯಂತ ಅಲ್ಪ. ಆ ಕಾರಣಕ್ಕಾಗಿ ಲಭ್ಯವಿರುವ ಮಾಹಿತಿಗಳು, ಈಶಾನ್ಯಭಾರತದಲ್ಲಿ ಐದು ವರ್ಷಗಳ ಕಾಲ ವಾಸಮಾಡಿದ ಅನುಭವ, ಮಾಧ್ಯಮಗಳ ವರದಿ, ದಾಖಲೆಗಳು ಇತ್ಯಾದಿಗಳ ಆಧಾರದಲ್ಲಿ ಮಣಿಪುರದ ಬಗ್ಗೆ ವಿಸ್ತೃತವಾದ ಲೇಖನವೊಂದನ್ನು ಬರೆಯುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ.
ಮಣಿಪುರ ಯಾಕೆ ಸುದ್ದಿಯಲ್ಲಿದೆ?
ಮಣಿಪುರವು ಕೆಲವು ತಿಂಗಳುಗಳಿಂದ ಗಲಭೆಗೆ ತುತ್ತಾಗಿದೆ. ಈ ಗಲಭೆಗಳ ಪರಿಣಾಮವಾಗಿ ನೂರಾರು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಮನೆಗಳು ಸುಟ್ಟುಹೋಗಿವೆ. ಅದೆಷ್ಟೋ ಕುಟುಂಬಗಳು ತಮ್ಮ ಮೂಲಸ್ಥಳವನ್ನು ಬಿಟ್ಟು ಗುಳೇ ಹೊರಟಿವೆ. ಇಡೀ ರಾಜ್ಯದಲ್ಲಿ ಈಗ ಒಂದು ರೀತಿಯ ಭಯದ ವಾತಾವರಣ. ಒಬ್ಬರ ಮೇಲೆ ಮತ್ತೊಬ್ಬರಿಗೆ ವಿಶ್ವಾಸವಿಲ್ಲದಂಥ ಸ್ಥಿತಿ. ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ, ಇನ್ನು ಕೆಲವು ಪ್ರದೇಶಗಳಲ್ಲಿ ಕಂಡಲ್ಲಿ ಗುಂಡು ಆದೇಶವನ್ನು ಹೊರಡಿಸುವಷ್ಟು ಪರಿಸ್ಥಿತಿ ಗಂಭೀರವಾಗಿಬಿಟ್ಟಿದೆ. ಅಲ್ಲೀಗ ಪರಿಸ್ಥಿತಿಯನ್ನು ಮತ್ತೆ ಮೊದಲಿನಂತೆ ಮಾಡಲು ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ಶತಪ್ರಯತ್ನ ನಡೆಸಿವೆ.
ನೇರವಾಗಿ ಕಾಣುವುದು ಎರಡು ಜನಾಂಗಗಳ ನಡುವಿನ ಗಲಭೆ ಎಂಬುದಾಗಿ. ಅಂದರೆ, ಮಣಿಪುರದಲ್ಲಿ ವಾಸಿಸುವ ಮೈತೇಯಿ, ಕುಕಿಗಳು ಹಾಗೂ ನಾಗಾ ಎಂಬ ಮೂರು ವಿಧದ ಬುಡಕಟ್ಟು ಜನಾಂಗಗಳಲ್ಲಿ ಕುಕಿಗಳು ಹಾಗೂ ಮೈತೇಯಿ ಎಂಬ ಎರಡು ಸಮುದಾಯಗಳ ನಡುವಿನ ಸಂಘರ್ಷವಿದು. ಆದರೆ ಈ ಸಂಘರ್ಷದ ಮೂಲವನ್ನು ಹುಡುಕುತ್ತಹೋದರೆ ಅನೇಕ ಕಾರಣಗಳು ಗೋಚರಿಸುತ್ತವೆ. ಈ ಕಾರಣಗಳನ್ನು ಐತಿಹಾಸಿಕ ಕಾರಣಗಳು, ರಾಜಕೀಯ ಕಾರಣಗಳು, ಧಾರ್ಮಿಕ ಕಾರಣಗಳು, ಜನಾಂಗೀಯ ಕಾರಣಗಳು ಎಂಬುದಾಗಿ ವಿಭಾಗಿಸಬಹುದು. ಇವುಗಳನ್ನು ಚರ್ಚಿಸುವ ಮೊದಲು ಮಣಿಪುರದ ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ. ಏಕೆಂದರೆ ಇತಿಹಾಸ ಹಾಗೂ ಅದರ ಭಾಗವಾದ ಐತಿಹಾಸಿಕವಾದ ಕೆಲವು ತಪ್ಪುಗಳು ಕೂಡ ಇವತ್ತಿನ ಗಲಭೆಗೆ ಮುಖ್ಯವಾದ ಕಾರಣಗಳಾಗಿವೆ.
ಮಣಿಪುರದ ಭೌಗೋಳಿಕ ಪರಿವೇಶ
ಮಣಿಪುರವು ಈಶಾನ್ಯಭಾರತದ ಎಂಟು ರಾಜ್ಯಗಳಲ್ಲಿ ಒಂದಾಗಿದೆ. ಇದು ಪೂರ್ವ ಮತ್ತು ದಕ್ಷಿಣದಲ್ಲಿ ಬರ್ಮಾ ಅಥವಾ ಮಯನ್ಮಾರ್ ದೇಶದೊಂದಿಗೂ, ಉತ್ತರದಲ್ಲಿ ನಾಗಾಲ್ಯಾಂಡ್ ರಾಜ್ಯದೊಂದಿಗೂ, ಪಶ್ಚಿಮದಲ್ಲಿ ಅಸ್ಸಾಂ ರಾಜ್ಯದೊಂದಿಗೂ, ನೈಋತ್ಯದಲ್ಲಿ ಮಿಜೋರಾಂನೊಂದಿಗೂ ತನ್ನ ಸೀಮೆಯನ್ನು ಹಂಚಿಕೊಂಡಿದೆ. ಮಣಿಪುರವು ಆಗ್ನೇಯ ಏಷ್ಯಾ ಹಾಗೂ ಭಾರತ ಉಪಖಂಡವು ಸೇರುವ ಕೇಂದ್ರಸ್ಥಾನವಾಗಿದೆ. ರಾಜ್ಯದ ಮಧ್ಯದಲ್ಲಿರುವ ಮಣಿಪುರ ಕಣಿವೆಯು ಸಮುದ್ರಮಟ್ಟದಿಂದ ೭೯೦ ಮೀಟರ್ಗಳಷ್ಟು ಎತ್ತರದಲ್ಲಿದೆ ಮತ್ತು ಒಂಭತ್ತು ಪರ್ವತ ಸಾಲುಗಳಿಂದ ಸುತ್ತುವರಿಯಲ್ಪಟ್ಟಿದೆ. ಈ ಕಣಿವೆ ಪ್ರದೇಶವು ಮಣಿಪುರದ ಭೂಪ್ರದೇಶದ ಶೇಕಡಾ ಹತ್ತರಷ್ಟು ಮಾತ್ರವೇ ಆಗಿದ್ದು, ಈ ಪ್ರದೇಶದಲ್ಲಿ ಮಣಿಪುರದ ಮೈತೇಯಿಗಳು ವಾಸಿಸುತ್ತಾರೆ. ಈ ಮೈತೇಯಿಗಳು ಬಾಮನ್ಗಳು ಮತ್ತು ಪಂಗನ್ಗಳನ್ನು ಒಳಗೊಂಡಂತೆ ಮಣಿಪುರದ ಒಟ್ಟು ಜನಸಂಖ್ಯೆಯ ಸುಮಾರು ಅರವತ್ತು ಪ್ರತಿಶತದಷ್ಟಿದ್ದಾರೆ. ಇಷ್ಟೂ ಜನರು ಮಣಿಪುರದ ಶೇಕಡಾ ಹತ್ತರಷ್ಟು ಭೂಪ್ರದೇಶವಾದ ಮಣಿಪುರ ಕಣಿವೆ ಪ್ರದೇಶದಲ್ಲಿ ವಾಸವಾಗಿದ್ದಾರೆ.
ಉಳಿದ ನಲವತ್ತು ಶೇಕಡಾ ಜನಸಂಖ್ಯೆಯಲ್ಲಿ ನಾಗಾ ಆದಿವಾಸಿಗಳು ಮತ್ತು ಕುಕಿ ಆದಿವಾಸಿಗಳು ಸೇರಿದ್ದಾರೆ. ಇವರು ಮಣಿಪುರವನ್ನು ಶೇಕಡಾ ತೊಂಬತ್ತರಷ್ಟು ವ್ಯಾಪಿಸಿರುವ ಪರ್ವತಪ್ರದೇಶಗಳಲ್ಲಿ ವಾಸಿಸುತ್ತಾರೆ. ಈ ಆದಿವಾಸಿಗಳಲ್ಲಿನ ಕೆಲವು ಪಂಗಡಗಳೆಂದರೆ, ತಂಗ್ಖುಲ್, ಥಾಡೌ, ಝೆಲಿಯಾಂಗ್ರಾಂಗ್ (ಝೆಮಿ, ಲೈಂಗ್ಮೈ, ರೌಂಗ್ಮೇ – ಕಬುಯಿಸ್), ಮಾವೋ, ಮರಮ್, ಪೌಮೈ, ಪೈಟೆ, ಹ್ಮಾರ್, ಮಾರಿಂಗ್, ಅನಲ್, ಐಮೋಲ್, ಅಂಗಮಿ, ಚಿರು, ಚೋಥೆ, ಗಂಗ್ಟೆ, ಮೊನ್ಸಾಂಗ್, ಮೊಯೋನ್, ಕೋಮ್, ಪುರುಮ್, ರಾಲ್ಟೆ, ಸೆಮಾ, ಸಿಮ್ಟೆ, ಸಾಲ್ಟೆ, ವೈಫೇಯ್, ಲಾಮ್ಗಾಂಗ್, ಝೌ, ಇತ್ಯಾದಿ. ಪ್ರತಿಯೊಂದು ಪಂಗಡವೂ ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಹೊಂದಿದೆ. ಎಲ್ಲ ಬುಡಕಟ್ಟುಗಳ ಜನರಿಗೂ ಸಮಾನ ಸಂವಹನ ಭಾಷೆಯಾಗಿ Meitei-lon (Meitei ಭಾಷೆ ಅಥವಾ ಮಣಿಪುರಿ) ಬಳಸಲ್ಪಡುತ್ತದೆ. ಮಣಿಪುರದ ರಾಜಧಾನಿ ಇಂಫಾಲ್ ಆಗಿದ್ದು ಇದು ಪ್ರಮುಖ ವ್ಯಾಪಾರಕೇಂದ್ರವಾಗಿದೆ. ರಾಜ್ಯವು ಪ್ರಸ್ತುತ ಒಂಭತ್ತು ಜಿಲ್ಲೆಗಳನ್ನು ಹೊಂದಿದ್ದು ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಾಲ್, ಬಿಶೆನ್ಪುರ್ (ಕಣಿವೆ ಜಿಲ್ಲೆಗಳು), ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್, ಚಂಡೇಲ್ ಮತ್ತು ಚುರಾಚಂದ್ಪುರ (ಪರ್ವತಪ್ರದೇಶದ ಜಿಲ್ಲೆಗಳು) ಎಂಬುದಾಗಿ ವಿಭಾಗಿಸಲ್ಪಟ್ಟಿದೆ. ಇವಿಷ್ಟು ಭೌಗೋಳಿಕವಾದ ಪರಿಚಯವಾಯಿತು.
ಮಣಿಪುರದ ಇತಿಹಾಸ
ಮಣಿಪುರವು ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ನೂರಕ್ಕೂ ಹೆಚ್ಚು ರಾಜರಿಂದ ಆಳಲ್ಪಟ್ಟ ಮಣಿಪುರದ ಇತಿಹಾಸವು ಕ್ರಿ.ಶ. ೩೩ರಷ್ಟು ಹಿಂದಕ್ಕೆ ಸಾಗುತ್ತದೆ. ಈ ಪ್ರದೇಶದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ರಾಜರಿಂದ ಆಳ್ವಿಕೆ ನಡೆಸಲ್ಪಟ್ಟಿದೆ. ಅಷ್ಟೇ ಅಲ್ಲ, ಇದನ್ನು ಕಾಲಕಾಲಕ್ಕೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅವುಗಳಲ್ಲಿ ಕೆಲವು ಹೆಸರುಗಳೆಂದರೆ, ಸನ್ನಾ ಲೀಪಾಕ್, ಟಿಲ್ಲಿ ಕೊಕ್ಟಾಂಗ್, ಪೊಯಿರೆ ಲ್ಯಾಮ್, ಮಿಟೆ ಲಿಪಾಕ್, ಮೀಟ್ರಾಬಕ್ ಇತ್ಯಾದಿ. ಮಣಿಪುರದ ಮೊದಲ ಪ್ರಸಿದ್ಧ ರಾಜನೆಂದರೆ ಸಾಮಾನ್ಯ ಶಕೆ ೩೩ರಲ್ಲಿ ಆಳುತ್ತಿದ್ದ ಪಖಂಗ್ಬಾ ರಾಜ. ೧೬ನೆ ಶತಮಾನದಲ್ಲಿ ಮಣಿಪುರವನ್ನು ಆಳಿದ ಖಗೆಂಬಾ (ಸನಾ ಹಿಹೊನ್ಹಾನ್) ಮತ್ತು ೧೭ನೆ ಶತಮಾನದಲ್ಲಿ ಪಮ್ಹೇಬಾ (ಗರೀಬ್ ನಿವಾಜ್) ರಾಜರು ನೆರೆಯ ರಾಜ್ಯವಾದ ಬರ್ಮಾ ಮೇಲೆ ಬಲವಾದ ದಾಳಿ ಮಾಡುವ ಮೂಲಕ ಮಣಿಪುರ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದರು. ಮಣಿಪುರ ಸಾಮ್ರಾಜ್ಯದ ವಿಶಾಲವಾದ ಇತಿಹಾಸದಲ್ಲಿ, ಮಹಾರಾಜ ಭಾಗ್ಯಚಂದ್ರ (೧೭೬೨ – ೧೭೯೮ ಸಾ.ಶ.) ವಿಶೇಷ ಉಲ್ಲೇಖಕ್ಕೆ ಅರ್ಹರು. ಪ್ರಸಿದ್ಧ ನೃತ್ಯ ಪ್ರಕಾರವಾದ ರಾಸ್ ಲೀಲಾವನ್ನು ಮಹಾರಾಜ ಭಾಗ್ಯಚಂದ್ರರು ನಿರ್ಮಿಸಿದ್ದಾರೆ. ಇವರು ಮಣಿಪುರದಲ್ಲಿ ವೈಷ್ಣವಧರ್ಮವನ್ನು ದೊಡ್ಡ ಪ್ರಮಾಣದಲ್ಲಿ ಹರಡಿದರು. ಮಣಿಪುರವನ್ನು ಬರ್ಮಾ ಆಕ್ರಮಣಗಳಿಂದ ಪದೇಪದೇ ಹೋರಾಡಿ ರಕ್ಷಿಸಿದ ಕೀರ್ತಿ ಮಹಾರಾಜ ಭಾಗ್ಯಚಂದ್ರರಿಗೆ ಸಲ್ಲುತ್ತದೆ.
ಮಣಿಪುರದ ಆಧುನಿಕ ಇತಿಹಾಸವು ೧೭೬೨ರಿಂದ ಪ್ರಾರಂಭವಾಯಿತು. ರಾಜ ಜೈಸಿಂಗ್ ಮಯನ್ಮಾರ್ (ಬರ್ಮಾ)ನಿಂದ ಬರ್ಮನ್ನರ ಆಕ್ರಮಣವನ್ನು ಹಿಮ್ಮೆಟ್ಟಿಸಲು ಬ್ರಿಟಿಷರೊಂದಿಗೆ ಒಪ್ಪಂದವನ್ನು ಮಾಡಿಕೊಂಡ. ೧೮೧೯ರವರೆಗೂ ರಾಜ್ಯದಲ್ಲಿ ಮೈತೇಯಿಗಳು ಮತ್ತು ಪರ್ವತಪ್ರದೇಶದ ಬುಡಕಟ್ಟು ಜನಾಂಗಗಳ ನಡುವೆ ಹೆಚ್ಚಿನ ಸಂದರ್ಭಗಳಲ್ಲಿ ಸೌಹಾರ್ದವಿತ್ತು. ತಮ್ಮ ತಮ್ಮ ಸಂಸ್ಕೃತಿಯನ್ನು ಇವರೆಲ್ಲರೂ ಅನುಸರಿಸುತ್ತ, ಪರಸ್ಪರ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದರು. ಈ ರಾಜ್ಯದ ಇತಿಹಾಸದಲ್ಲಿ ಅತ್ಯಧಿಕ ಸಮಯದವರೆಗೆ ಮೈತೇಯಿ ರಾಜರುಗಳೇ ಆಳ್ವಿಕೆಯನ್ನು ನಡೆಸಿದ್ದರು. ಈ ನಡುವೆ ೧೮೧೯ರಿಂದ ೧೮೨೫ರ ಅವಧಿಯಲ್ಲಿ ಬರ್ಮಾದ ರಾಜ ಮಣಿಪುರದ ಮೇಲೆ ಆಕ್ರಮಣವನ್ನು ನಡೆಸಿದ. ಬರ್ಮಾದ ರಾಜನು ಮೈತೇಯಿ ರಾಜನನ್ನು ಸೋಲಿಸಿದ ಅನಂತರ, ಮೈತೇಯಿ ಜನರ ಮೇಲೆ ಬರ್ಮಾದ ಸಂಸ್ಕೃತಿಯನ್ನೂ, ಬೌದ್ಧಧರ್ಮವನ್ನೂ ಅನುಸರಿಸುವಂತೆ ಒತ್ತಡ ಹೇರಲಾಯಿತು.
ಈ ಹಿಂದೆಯೇ ಹೇಳಿದಂತೆ ಮೈತೇಯಿ ಜನಾಂಗದವರು ಹೆಚ್ಚಾಗಿ ವೈಷ್ಣವಮತವನ್ನು ಅನುಸರಿಸುವವರು. ಈ ಏಳು ವರ್ಷಗಳ ಅವಧಿಯಲ್ಲಿ ಪರ್ವತಪ್ರದೇಶದ ಬುಡಕಟ್ಟುಗಳಾದ ನಾಗಾ ಮತ್ತು ಕುಕಿಗಳ ಮೇಲೂ ಬರ್ಮಾದ ಆಕ್ರಮಣ ನಡೆಯುತ್ತಲೇ ಇತ್ತು. ಹಾಗಾಗಿ ಈ ಏಳು ವರ್ಷಗಳ ಅವಧಿಯು ಮಣಿಪುರದ ಇತಿಹಾಸದಲ್ಲಿ ಸಪ್ತ ವರ್ಷಾತ್ಮಕ ನಾಶ ಎಂದೇ ಗುರುತಿಸಲ್ಪಟ್ಟಿದೆ. ಆ ಸಮಯದಲ್ಲಿ ಬ್ರಿಟಿಷರು ಭಾರತದ ಒಂದೊಂದೇ ಭೂಪ್ರದೇಶವನ್ನು ಕಬಳಿಸುತ್ತಾ ಸಾಗಿದ್ದರು. ೧೮೨೬ರಲ್ಲಿ ಮೊದಲ ಆಂಗ್ಲೋ-ಬರ್ಮೀಸ್ ಯುದ್ಧ ನಡೆದು ಅದರಲ್ಲಿ ಬರ್ಮಾದ ರಾಜನನ್ನು ಇಂಗ್ಲಿಷರು ಸೋಲಿಸಿದರು, ಜೊತೆಗೆ ಮಣಿಪುರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ೧೮೩೫ರಲ್ಲಿ ಇಂಗ್ಲಿಷರು ಮಣಿಪುರದಲ್ಲಿ ರಾಜಕೀಯ ಏಜೆನ್ಸಿಯನ್ನು ರಚಿಸಿದರು. ೧೮೯೧ರಲ್ಲಿ ಇದನ್ನು ಪ್ರಿನ್ಸ್ಲಿ ಸ್ಟೇಟ್ ಆಗಿ ಪರಿವರ್ತಿಸಿದರು. ಪೊಲಿಟಿಕಲ್ ಏಜೆನ್ಸಿ ಹಾಗೂ ಪ್ರಿನ್ಸ್ಲಿ ಸ್ಟೇಟ್ ಎಂಬ ದರ್ಜೆಗಳ ನಡುವೆ ಅಂತರವಿದೆ. ಪೊಲಿಟಿಕಲ್ ಏಜೆನ್ಸಿ ಎಂದರೆ ರಾಜನಿಗೆ ಒಬ್ಬ ಸಲಹಾಕಾರನನ್ನು ನೇಮಿಸುವುದು ಮತ್ತು ಆ ಸಲಹಾಕಾರನ ಸೂಚನೆಯಂತೆ ರಾಜ್ಯವನ್ನು ರಾಜನ ಮೂಲಕ ನಡೆಸುವುದು. ಪ್ರಿನ್ಸ್ಲಿ ಸ್ಟೇಟ್ ಎಂದರೆ ರಾಜನೇ ರಾಜ್ಯಭಾರವನ್ನು ಮಾಡುತ್ತಾನೆ; ಆದರೆ ಆತ ಕಪ್ಪ ಕಾಣಿಕೆಯನ್ನು ಬ್ರಿಟಿಷರಿಗೆ ಕಟ್ಟುತ್ತಾನೆ. ಮೊದಮೊದಲು ಮೈತೇಯಿ ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಮೇಲೆ ಬ್ರಿಟಿಷರು ಇಲ್ಲೂ ಒಡೆದು ಆಳುವ ನೀತಿಯನ್ನು ಅನುಸರಿಸಿದರು.
ಮತಾಂತರ
ಬ್ರಿಟಿಷರು ಮೈತೇಯಿ ವರ್ಗದವರಿಗೂ, ಕುಕಿ ಸಮುದಾಯದವರಿಗೂ ನಿರ್ದಿಷ್ಟ ಭೂಪ್ರದೇಶವನ್ನು ಗೊತ್ತುಮಾಡಿದರು. ಬುಡಕಟ್ಟು ಜನಾಂಗದವರು ಸತತವಾಗಿ ಕಾಡಿನಲ್ಲಿ ಅಲೆದಾಡುವವರಾದ್ದರಿಂದ ಅವರಿಗೆ ನಿರ್ದಿಷ್ಟವಾದ ಭೂಪ್ರದೇಶವನ್ನು ಕೊಟ್ಟು ಅವರ ಸಂಸ್ಕೃತಿಯನ್ನು ಅನುಸರಿಸದಂತೆ ಪರೋಕ್ಷವಾಗಿ ಬ್ರಿಟಿಷರು ತಡೆಯೊಡ್ಡಿದ್ದರು. ಕ್ರಮೇಣ ಅಲ್ಲಿ ತಮ್ಮ ಕ್ರೈಸ್ತಮತದ ಪ್ರಚಾರವನ್ನು ಮಾಡತೊಡಗಿದರು. ಹೀಗೆ ಮತಾಂತರಗೊಡ ಕ್ರಿಶ್ಚಿಯನ್ನರನ್ನು ಮೈತೇಯ್ ಕ್ರಿಶ್ಚಿಯನ್ನರು ಎನ್ನಲಾಗುತ್ತದೆ. ಮೈತೇಯ್ ಕ್ರಿಶ್ಚಿಯನ್ನರು ಮುಖ್ಯವಾಗಿ ಬ್ಯಾಪ್ಟಿಸ್ಟ್ ಮೈತೇಯ್ ಕ್ರಿಶ್ಚಿಯನ್ನರು ಮತ್ತು ಪ್ರೆಸ್ಬಿಟೇರಿಯನ್ ಕ್ರಿಶ್ಚಿಯನ್ನರು ಎಂಬುದಾಗಿ ವಿಭಾಗಿಸಲ್ಪಟ್ಟಿದ್ದಾರೆ. ಇನ್ನುಳಿದ ಸಣ್ಣಸಣ್ಣ ಉಪಪಂಗಡಗಳು ಕೂಡ ಇವರಲ್ಲಿ ಹರಡಿಕೊಂಡಿವೆ. ಮೈತೇಯಿ ಜನರನ್ನು ಕ್ರಿಶ್ಚಿಯನ್ನರನ್ನಾಗಿ ಪರಿವರ್ತಿಸುವ ಅಭಿಯಾನವನ್ನು ಮೊದಲಬಾರಿಗೆ ಇಂಗ್ಲೆಂಡಿನ ಆಂಗ್ಲಿಕನ್ ಚರ್ಚ್ನ ಸದಸ್ಯ ವಿಲಿಯಂ ಪೆಟ್ಟಿಗ್ರೂ ಪ್ರಾರಂಭಿಸಿದ. ಆತ ೧೮೯೦ರ ದಶಕದಲ್ಲಿ ಮಣಿಪುರಕ್ಕೆ ಬಂದು ಮಣಿಪುರದ ಮಕ್ಕಳಿಗೆ ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದ. ಆತ ತನ್ನ ಕಾರ್ಯಕ್ಕಾಗಿ ಮಣಿಪುರದಲ್ಲಿ ಶಾಶ್ವತವಾದ ನೆಲೆಯನ್ನು ಸ್ಥಾಪಿಸಿಕೊಂಡು ಮೈತೇಯಿ ಸಮುದಾಯದ ನಡುವೆ ಮತಪ್ರಚಾರವನ್ನು ಪರೋಕ್ಷವಾಗಿ ಮಾಡಲು ತೊಡಗಿದ. ಇದು ಉದ್ದೇಶಪೂರ್ವಕ ವಸಾಹತುಶಾಹಿ ನೀತಿಯ ಭಾಗವಾಗಿ ಮೈತೇಯಿ ಜನರ ನಡುವೆ ಕ್ರಿಶ್ಚಿಯನ್ ಮತವನ್ನು ಹೇರಲು ಪೆಟ್ಟಿಗ್ರೂ ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿದ ಮೇಲೆ ಸಂಪ್ರದಾಯವಾದಿ ಹಿಂದೂಗಳ ಕೋಲಾಹಲಕ್ಕೆ ಕಾರಣವಾಯಿತು. ಆದಾಗ್ಯೂ, ಪೆಟ್ಟಿಗ್ರೂ ತನ್ನ ಕಾರ್ಯವನ್ನು ಮುಂದುವರಿಸಿದ ಮತ್ತು ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ಸ್ಥಾಪಿಸಿದ.
ಹೀಗೆ ಪ್ರಾರಂಭವಾದ ಕ್ರಿಶ್ಚಿಯನ್ ಮತಾಂತರಣ ಕಾರ್ಯದಿಂದಾಗಿ ಮೊದಲ ಸ್ಥಾನದಲ್ಲಿದ್ದ ಹಿಂದೂಗಳು ಇವತ್ತು ಎರಡನೆಯ ಸ್ಥಾನಕ್ಕೆ ತಳ್ಳಲ್ಪಡುತ್ತಿದ್ದಾರೆ. ೨೦೧೧ರ ಜನಸಂಖ್ಯೆಯ ಗಣತಿಯ ಪ್ರಕಾರ ಕ್ರಿಶ್ಚಿಯನ್ನರು ೪೧.೨೯ ಇದ್ದರೆ, ಹಿಂದೂಗಳು ೪೧.೩೯ ಇದ್ದರು. ಹಿಂದೂಗಳ ಜನಸಂಖ್ಯೆಯು ಕಳೆದ ದಶಕದಲ್ಲಿ ಗಣನೀಯವಾಗಿ ಕಡಮೆಯಾಗಿರುವುದಷ್ಟೇ ಅಲ್ಲ, ಕ್ರಿಶ್ಚಿಯನ್ನರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಮತ್ತೊಂದು ಕಾರಣವೆಂದರೆ ನುಸುಳುಕೋರತನ. ಬರ್ಮಾದಿಂದ ಕುಕಿಜನಾಂಗದವರ ನಿರಂತರ ಅಕ್ರಮವಲಸೆಯಿಂದಾಗಿ ರಾಜ್ಯದ ಜನಸಂಖ್ಯೆ ಗಣನೀಯವಾಗಿ ವ್ಯತ್ಯಸ್ತಗೊಂಡಿದೆ. ಇವತ್ತಿನ ಗಲಭೆಗೆ ಅತಿ ಮುಖ್ಯ ಕಾರಣಗಳಲ್ಲಿ ಈ ನುಸುಳುಕೋರತನದ ಪಾಲೂ ಬಹಳ ದೊಡ್ದದಿದೆ. ನುಸುಳುಕೋರರು ಇಡೀ ರಾಜ್ಯದ ಸ್ಥಿತಿಗತಿಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಈ ಅಂಶವು ಮೈತೇಯಿ ಜನಾಂಗದವರನ್ನು ಕಾಡುತ್ತಿದೆ.
೧೮೯೧ರಲ್ಲಿ ಮಣಿಪುರವು ಬ್ರಿಟಿಷರ ಅಧೀನವಾಯಿತು. ಆಗ ಬರ್ಮನ್ನರನ್ನು ಬ್ರಿಟಿಷರು ಸೋಲಿಸಿದರು. ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಮಣಿಪುರವು ಅನೇಕ ಯುದ್ಧಗಳಿಗೆ ಸಾಕ್ಷಿಯಾಯಿತು. ಇಂಫಾಲ್ ಯುದ್ಧವು ಅದರಲ್ಲಿ ಒಂದು. ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಲು ಜಪಾನ್ ವಿಫಲ ಪ್ರಯತ್ನ ಮಾಡಿತ್ತು. ಅದನ್ನು ಇಂಫಾಲ್ ಯುದ್ಧ ಎಂದೇ ಕರೆಯಲಾಗುತ್ತದೆ. ಈ ಭೀಕರ ಯುದ್ಧವು ಮಾರ್ಚ್ ೬, ೧೯೪೪ರಿಂದ ಜೂನ್ ೨೨, ೧೯೪೪ರವರೆಗೆ ಮುಂದುವರಿಯಿತು. ಇತಿಹಾಸದಲ್ಲಿ ಜಪಾನಿನ ಅತಿದೊಡ್ಡ ವೈಫಲ್ಯಗಳಲ್ಲಿ ಇದು ಒಂದಾಗಿದೆ. ಸುಮಾರು ೧,೨೦,೦೦೦ ಜನರನ್ನು ಒಳಗೊಂಡ ಜಪಾನಿನ ಬೃಹತ್ ಸೈನ್ಯವು ಬ್ರಿಟಿಷ್ ಮತ್ತು ಭಾರತೀಯ ಸೈನ್ಯವನ್ನು ಇಂಫಾಲ್ನಿಂದ ಹೊರಹಾಕಲು ಪ್ರಯತ್ನಿಸಿತು. ಆದರೆ ಇಂಫಾಲ್ ಯುದ್ಧದ ಸಮಯದಲ್ಲಿ ವಾಯು ಮತ್ತು ಫಿರಂಗಿಗಳಲ್ಲಿ ಬ್ರಿಟಿಷ್ ಮತ್ತು ಭಾರತೀಯ ಸಂಯೋಜಿತ ಪಡೆಗಳ ಪ್ರಾಬಲ್ಯವು ಮಣಿಪುರದ ಇತಿಹಾಸದಲ್ಲಿ ದೊಡ್ಡ ಯಶಸ್ಸನ್ನು ತಂದಿತು.
ಬ್ರಿಟಿಷರು ೧೯೪೭ರ ಭಾರತದ ಸ್ವಾತಂತ್ರ್ಯದವರೆಗೂ ಮಣಿಪುರವನ್ನು ಆಳಿದರು. ಅನಂತರ ಭಾರತದೊಂದಿಗೆ ಮಣಿಪುರದ ವಿಲೀನದ ಕುರಿತಾದ ಒಪ್ಪಂದವನ್ನು ೨೧ ಸೆಪ್ಟೆಂಬರ್ ೧೯೪೯ರಂದು ಭಾರತದ ಗವರ್ನರ್-ಜನರಲ್ ಮತ್ತು ಮಣಿಪುರದ ಮಹಾರಾಜರ ನಡುವೆ ಮಾಡಿಕೊಳ್ಳಲಾಯಿತು. ಕೆಲವು ಸೂಕ್ಷ್ಮ ಸಮಸ್ಯೆಗಳಿಂದಾಗಿ ಮಣಿಪುರವು ಅತ್ಯಂತ ಅನಿಶ್ಚಿತ ಸ್ಥಳೀಯ ರಾಜ್ಯಗಳಲ್ಲಿ ಒಂದಾಗಿರುವುದರಿಂದ ಒಪ್ಪಂದವನ್ನು ಮಾಡಿಕೊಳ್ಳಬೇಕಾಯಿತು. ಮಣಿಪುರ ರಾಜ್ಯ ಮತ್ತು ಭಾರತೀಯ ಆಡಳಿತ ಎರಡರ ಹಿತದೃಷ್ಟಿಯಿಂದ ಮಣಿಪುರವು ಭಾರತಸರ್ಕಾರದ ಆಡಳಿತ ಮತ್ತು ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಒಪ್ಪಂದವು ಹೇಳುತ್ತದೆ. ಆಗ ಹೊಸದಾಗಿ ರಚನೆಯಾದ ಕಾಂಗ್ರೆಸ್ ನೇತೃತ್ವದ ಭಾರತಸರ್ಕಾರ ಮತ್ತು ಮಹಾರಾಜ ಬೋಧಚಂದ್ರಸಿಂಗ್ ನಡುವಿನ ಈ ಒಪ್ಪಂದವು ೧೫ ಅಕ್ಟೋಬರ್ ೧೯೪೯ರಿಂದ ಜಾರಿಗೆ ಬಂದಿತು.
ಸ್ವಾತಂತ್ರ್ಯೋತ್ತರ ನೀತಿಯ ದುಷ್ಪರಿಣಾಮ
೧೮೯೧ರಲ್ಲಿ ಬ್ರಿಟಿಷರು ಮಣಿಪುರವನ್ನು ಒಂದು ಪ್ರಿನ್ಸೆಸ್ ಸ್ಟೇಟ್ ಆಗಿ ಪರಿವರ್ತಿಸಿದ್ದರು. ಭಾರತದ ಸ್ವಾತಂತ್ರ್ಯದ ಅನಂತರ ಮಣಿಪುರದ ರಾಜ ಬೋಧಚಂದ್ರಸಿಂಗ್ ಅವರಿಗೆ ಒಂದೋ ಮಣಿಪುರವನ್ನು ಭಾರತದ ಜೊತೆ ವಿಲೀನಗೊಳಿಸಬೇಕಿತ್ತು ಅಥವಾ ರಾಜ್ಯವನ್ನು ಸ್ವತಂತ್ರವಾಗಿ ನಡೆಸಬೇಕಿತ್ತು. ಮೊದಲಿಗೆ ಸ್ವತಂತ್ರವಾಗಿ ಇರಿಸಿಕೊಳ್ಳಲು ಬೋಧಚಂದ್ರಸಿಂಗ್ ನಿರ್ಧರಿಸಿದರು. ಆದರೆ ಭಾರತಕ್ಕೆ ಮಣಿಪುರವನ್ನು ತನ್ನಲ್ಲಿ ಸೇರಿಸಿಕೊಳ್ಳುವ ಜರೂರಿತ್ತು. ಯಾಕೆಂದರೆ ಮಣಿಪುರವು ಒಂದೆಡೆ ಮಯನ್ಮಾರ್ ಮತ್ತು ಮತ್ತೊಂದೆಡೆ ಚೈನಾದೊಂದಿಗೆ ಸೀಮೆಯನ್ನು ಹಂಚಿಕೊಳ್ಳುತ್ತದೆ. ಹಾಗಾಗಿ ಭದ್ರತಾ ದೃಷ್ಟಿಯಿಂದ ಮಣಿಪುರವನ್ನು ಭಾರತದೊಳಕ್ಕೆ ಸೇರಿಸಿಕೊಳ್ಳಲು ಪ್ರಯತ್ನಗಳು ಶುರುವಾದವು. ಬೋಧಚಂದ್ರರ ಮೇಲೆ ಅನೇಕ ವಿಧದ ಒತ್ತಡಗಳನ್ನು ಸೃಷ್ಟಿಸಿ, ಅಂತೂ ಭಾರತದೊಂದಿಗೆ ಒಪ್ಪಂದಕ್ಕೆ ಒಪ್ಪುವಂತೆ ಮಾಡಲಾಯಿತು.
ಆದರೆ ಹೀಗೆ ಭಾರತದ ತೆಕ್ಕೆಗೆ ಬಂದ ಮೇಲೂ ಇಪ್ಪತ್ತೈದು ವರ್ಷಗಳ ಕಾಲ ಮಣಿಪುರವು ಒಂದು ಪೂರ್ಣ ರಾಜ್ಯವಾಗಿರದೆ, ಕೇಂದ್ರಾಡಳಿತ ಪ್ರದೇಶವಾಗಿಯೆ ಇತ್ತು. ಇದು ಅಲ್ಲಿನ ಹೆಚ್ಚಿನ ಜನರಿಗೆ ಇಷ್ಟವಿರಲಿಲ್ಲ. ಏಕೆಂದರೆ ಅಲ್ಲಿನ ಆಡಳಿತವೆಲ್ಲವನ್ನೂ ದೂರದ ದೆಹಲಿಯಲ್ಲಿ ಕುಳಿತ ಅಧಿಕಾರಿಗಳೇ ನಡೆಸುತ್ತಿದ್ದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ವಹಿಸುವವರಿರಲಿಲ್ಲ. ಮಣಿಪುರದಂಥ ಸೂಕ್ಷ್ಮಪ್ರದೇಶದಲ್ಲಿ ಜನರ ವಿಲಕ್ಷಣ ಸಮಸ್ಯೆಗಳು ದೆಹಲಿಯವರೆಗೆ ತಲಪುತ್ತಿರಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿನ ಒಂದೊಂದು ಜನಾಂಗವೂ ಒಂದೊಂದು ರೀತಿಯಲ್ಲಿ ಆಲೋಚಿಸುತ್ತಿತ್ತು. ನಾಗಾ ಸಮುದಾಯದವರು ಮಣಿಪುರವನ್ನು ಸೇರಿಸಿಕೊಂಡು ಈಶಾನ್ಯರಾಜ್ಯದ ಕೆಲವು ಭಾಗವನ್ನೇ ಪ್ರತ್ಯೇಕ ನಾಗಾ ದೇಶವಾಗಿ ಮಾರ್ಪಡಿಸಲು ಚಿಂತಿಸುತ್ತಿದ್ದರು. ಕುಕಿಗಳೂ ಕೂಡ ಹತ್ತಿರದ ಕುಕಿ ಪ್ರಾಬಲ್ಯದ ಪ್ರದೇಶವನ್ನು ಸೇರಿಸಿಕೊಂಡು ಒಂದು ಪ್ರತ್ಯೇಕ ದೇಶವನ್ನಾಗಿ ಮಾಡಿಕೊಳ್ಳಬೇಕೆಂದು ಯತ್ನಿಸುತ್ತಿದ್ದರು.
ಆದರೆ ಮೈತೇಯಿಗಳು ಇವೆರಡನ್ನೂ ಬಯಸುತ್ತಿರಲಿಲ್ಲ. ನೂರಾರು ವರ್ಷಗಳಿಂದಲೂ ಮೈತೇಯಿ ರಾಜರುಗಳೇ ಮಣಿಪುರವನ್ನು ಆಳುತ್ತಾ ಬಂದಿರುವುದರಿಂದ ನಾಗಾ ಮತ್ತು ಕುಕಿಗಳು ವಾಸಿಸುವ ಪ್ರದೇಶವನ್ನೂ ಕೂಡ ಮಣಿಪುರದಲ್ಲಿ ಸೇರಿಸಿಕೊಳ್ಳಬೇಕೆಂದು ಬಯಸುತ್ತಿದ್ದರು. ಇವೆಲ್ಲವನ್ನೂ ಗಮನಿಸಿದ ಭಾರತ ಸರ್ಕಾರವು ಒಂದು ವಿಚಿತ್ರವಾದ ನಿಯಮವನ್ನು ಜಾರಿಗೆ ತರುತ್ತದೆ. ಅದೇನೆಂದರೆ, ಮಣಿಪುರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ, ಮೈತೇಯಿಗಳಿಂದ ಈ ಹಿಂದೆ ಇದ್ದ ಎಸ್.ಟಿ. ಸ್ಥಾನಮಾನವನ್ನು ತೆಗೆದುಬಿಡುತ್ತದೆ. ಹಾಗೆಯೇ ಮೈತೇಯಿ, ಕುಕಿ ಮತ್ತು ನಾಗಾಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಇವರೆಲ್ಲರನ್ನೂ ಪ್ರತ್ಯೇಕವಾಗಿಯೇ ಇಡುವ ಉದ್ದೇಶದಿಂದ ಮೈತೇಯಿಗಳಿಗೆ ಪರ್ವತಪ್ರದೇಶದಲ್ಲಿ (ಅಂದರೆ ನಾಗಾ ಮತ್ತು ಕುಕಿಗಳ ಪ್ರಾಬಲ್ಯವಿರುವಲ್ಲಿ) ಎಲ್ಲಿಯೂ ಜಾಗವನ್ನು ಖರೀದಿಸುವಂತಿಲ್ಲ ಎಂದು ನಿಯಮವನ್ನು ಮಾಡುತ್ತದೆ.
ಇದೆಲ್ಲದರ ಜೊತೆಗೆ, ನಾಗಾ ಮತ್ತು ಕುಕಿಗಳಿಗೆ ಎಸ್.ಟಿ. ಸ್ಥಾನಮಾನ ಕೊಟ್ಟು, ಆ ಸಮುದಾಯದವರಿಗೆ ಮಣಿಪುರದ ಎಲ್ಲಿ ಬೇಕಾದರೂ ಜಾಗ ಕೊಳ್ಳಬಹುದೆಂಬ ನಿಯಮವನ್ನು ನೆಹರೂ ನೇತೃತ್ವದ ಸರ್ಕಾರ ರಚಿಸಿತು. ವಸ್ತುತಃ ಇವತ್ತಿನ ಸಮಸ್ಯೆಗೆ ಮೂಲ ಕಾರಣಗಳಲ್ಲಿ ಇದೂ ಒಂದು.
೧೯೭೨ರಲ್ಲಿ ಮಣಿಪುರವನ್ನು ಪ್ರತ್ಯೇಕ ರಾಜ್ಯವನ್ನಾಗಿಸಲಾಯಿತು ಮತ್ತು ಅದೇ ವರ್ಷ ಮಣಿಪುರದಲ್ಲಿ ಚುನಾವಣೆಯನ್ನು ನಡೆಸಲಾಯಿತು. ಕ್ಷೇತ್ರವಾರು ಪ್ರಾತಿನಿಧ್ಯದಲ್ಲಿ ಒಟ್ಟು ಅರವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತೇಯಿಗಳಿಗೆ ನಲವತ್ತು ಕ್ಷೇತ್ರಗಳೂ, ಉಳಿದವರಿಗೆ ಇಪ್ಪತ್ತು ಕ್ಷೇತ್ರಗಳೂ ದೊರೆತವು. ಇದರಿಂದಾಗಿ ಮಣಿಪುರದಲ್ಲಿ ಹೆಚ್ಚಿನ ಸಮಯ ಮೈತೇಯಿ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಕುಕಿಗಳಲ್ಲಿ ಮತ್ತು ಉಳಿದ ಸಮುದಾಯದ ಆದಿವಾಸಿಗಳಲ್ಲಿ ಯಾವತ್ತಿಗೂ ಒಂದು ಅಸಮಾಧಾನವಿದೆ.
ಎಲ್ಲಿಯವರೆಗೆ ತಮ್ಮ ಜನಸಂಖ್ಯೆ ಹೆಚ್ಚುವುದಿಲ್ಲವೋ ಅಲ್ಲಿಯವರೆಗೆ ಮೈತೇಯಿಗಳ ಎದುರು ರಾಜಕೀಯ ಪ್ರಾಬಲ್ಯವನ್ನು ಹೊಂದುವುದು ಕಷ್ಟವೆಂದು ಅವರು ಅರಿತರು. ಈ ಕಾರಣಕ್ಕಾಗಿಯೇ ಮಣಿಪುರದ ಯಾವುದೇ ಸರ್ಕಾರವೂ ತಮ್ಮ ಪರವಾಗಿ ಶಾಸನವನ್ನು ಮಾಡುವುದಿಲ್ಲ ಎಂಬ ಅಸಮಾಧಾನವೊಂದು ಈ ಸಮುದಾಯಗಳಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿತು. ಆದಿವಾಸಿಗಳ ಪ್ರಕಾರ ಮಣಿಪುರ ಸರ್ಕಾರವು ಯಾವತ್ತಿಗೂ ತಮ್ಮ ನೆಲವನ್ನು ಕಿತ್ತುಕೊಳ್ಳಲು ಯತ್ನಿಸುತ್ತಲೇ ಇರುತ್ತದೆ. ತಮ್ಮಿಂದ ಕಿತ್ತು ಮೈತೇಯಿಯವರಿಗೆ ಕೊಡಲು ಯತ್ನಿಸುತ್ತದೆ ಎಂಬ ಆರೋಪವನ್ನು ಇಲ್ಲಿಯ ಆದಿವಾಸಿಗಳು ಮಾಡುತ್ತಾರೆ. ಮೈತೇಯಿಗಳು ಆದಿವಾಸಿಗಳನ್ನು ವಲಸಿಗರೆಂದು ಭಾವಿಸುತ್ತಾರೆ. ಹಾಗಾಗಿಯೇ ಅವರಿಗೆ ದ್ವಿತೀಯ ದರ್ಜೆಯ ಸ್ಥಾನವನ್ನು ಕೊಡಬೇಕೆಂದು ಅವರು ಭಾವಿಸುತ್ತಾರೆ. ಆದರೆ ಇದನ್ನು ಕುಕಿ ಮೊದಲಾದ ಆದಿವಾಸಿಗಳು ಒಪ್ಪುವುದಿಲ್ಲ. ಈ ನೆಲ ತಮ್ಮದು, ತಾವು ಅನಾದಿ ಕಾಲದಿಂದಲೂ ಇರುವವರು, ಈ ನೆಲದ ಮೂಲ ನಿವಾಸಿಗಳು ತಾವು – ಎಂಬುದು ಅವರ ವಾದ.
ಮತ್ತೊಂದು ಕಡೆ ಮೈತೇಯಿಗಳು ತಮ್ಮ ನೆಲದಲ್ಲಿಯೇ ತಾವು ಪರಕೀಯರಾಗುತ್ತಿದ್ದೇವೆ ಎಂದು ಅಸಮಾಧಾನಪಟ್ಟಿದ್ದಾರೆ. ಸುಮಾರು ೬೦ ಶೇಕಡಾ ಇದ್ದ ಮೈತೇಯಿ ಜನಸಂಖ್ಯೆ ಈಗ ೪೪ ಶೇಕಡಾ ಪ್ರಮಾಣಕ್ಕೆ ಇಳಿದುಹೋಗಿದೆ. ಇದೆಲ್ಲದರ ಜೊತೆಗೆ ಆದಿವಾಸಿಗಳು ಕಾನೂನಿನ ಪ್ರಕಾರ ತಮ್ಮ ಜಮೀನನ್ನು ಖರೀದಿಸಬಹುದು. ಆದರೆ ತಾವು ಮಾತ್ರ ಮಣಿಪುರದ ಹತ್ತು ಶೇಕಡಾ ಭೂಭಾಗವಾದ ಕಣಿವೆ ಪ್ರದೇಶವನ್ನು ಹೊರತುಪಡಿಸಿ ಮತ್ತೆಲ್ಲೂ ಜಮೀನನ್ನು ಖರೀದಿಸಲು ಸಾಧ್ಯವಿಲ್ಲ. ಇದರಿಂದಾಗಿ ತಾವು ತಮ್ಮ ಭೂಮಿಯಲ್ಲೇ ಪರಕೀಯರಾಗುತ್ತಿದ್ದೇವೆ, ಮುಂದೊಂದು ದಿನ ನಮಗೆ ಅಸ್ತಿತ್ವವೇ ಇಲ್ಲದಂತೆ ಆಗಬಹುದು ಎಂಬುದು ಅವರ ವಾದ. ಇದರ ಜೊತೆಗೆ ಆದಿವಾಸಿ ಸಮುದಾಯದವರಿಗೆ ಎಸ್.ಟಿ. ಸ್ಥಾನವನ್ನು ಕೊಟ್ಟಿದ್ದರಿಂದಾಗಿ ಎಲ್ಲ ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳೂ ಕೂಡ ಕುಕಿ ಅಥವಾ ನಾಗಾ ಸಮುದಾಯದವರೇ ಆಗಿದ್ದಾರೆ. ಸರ್ಕಾರೀ ನೌಕರಿಯಲ್ಲಿ ತಮಗೆ ಹೆಚ್ಚಿನ ಅವಕಾಶವಾಗುವುದಿಲ್ಲ; ಹಾಗಾಗಿ ಸರ್ಕಾರದ ಅಡಳಿತವು ತಮ್ಮ ವಿರುದ್ಧವಾಗಿ ನಡೆಯುತ್ತದೆ – ಎಂಬುದು ಅವರ ಅಳಲು. ಹಾಗಾಗಿ ತಮಗೂ ಅವರಂತೆಯೇ ಎಲ್ಲ ಕಡೆ ಜಮೀನನ್ನು ಖರೀದಿಸಲು ಅವಕಾಶ ಕೊಡಬೇಕು ಮತ್ತು ತಮಗೂ ಎಸ್.ಟಿ. ಸ್ಥಾನವನ್ನು ಕೊಡಬೇಕೆಂಬುದು ಮೈತೇಯಿಗಳ ಆಗ್ರಹ.
ಮೈತೇಯಿಗಳ ಇನ್ನೊಂದು ಆಗ್ರಹವೇನೆಂದರೆ, ಮಯನ್ಮಾರ್ನಿಂದ ಕುಕಿಗಳು ಅಕ್ರಮವಾಗಿ ವಲಸೆ ಬಂದು ಕಾಡಿನಲ್ಲಿ ನೆಲಸುತ್ತಿರುವುದರಿಂದ ಮೈತೇಯಿಗಳ ಜನಸಂಖ್ಯೆಗಿಂತ ಕುಕಿಗಳ ಜನಸಂಖ್ಯೆ ಹೆಚ್ಚುತ್ತಿದೆ. ಹೀಗೆ ಅಕ್ರಮ ವಲಸಿಗರು ಜಾಸ್ತಿಯಾಗುತ್ತಿದ್ದಂತೆ ತಮ್ಮ ರಾಜಕೀಯ ಪ್ರಾಬಲ್ಯ ಕಡಮೆಯಾಗುತ್ತದೆ. ಹಾಗಾಗಿ ಬೇರೆ ಈಶಾನ್ಯರಾಜ್ಯಗಳಲ್ಲಿ ಇರುವಂತೆ ಇನ್ನರ್ ಲೈನ್ ಪರ್ಮಿಟ್ ಸಿಸ್ಟಮ್ ಅಂದರೆ ಯಾರೇ ಹೊರಗಿನವರು ಪ್ರವೇಶಿಸಲೂ ವಿಶೇಷ ಅನುಮತಿಯನ್ನು ಪಡೆಯುವಂಥ ನಿಯಮವನ್ನು ತರಬೇಕೆಂದು ಮೈತೇಯಿಗಳ ಆಗ್ರಹ. ಆದರೆ ಇದನ್ನು ಕುಕಿಗಳು ವಿರೋಧಿಸುತ್ತಾರೆ. ಏಕೆಂದರೆ ಒಮ್ಮೆ ಇಂಥ ವಿಶೇಷ ನೀತಿಯನ್ನು ತಂದರೆ ಈಗಾಗಲೇ ಕುಕಿಗಳು ವಲಸಿಗರು ಎನ್ನುತ್ತಿರುವ ಮೈತೇಯಿಗಳು ನಮ್ಮನ್ನು ಶಾಶ್ವತವಾಗಿ ರಾಜ್ಯದಿಂದ ಹೊರಹಾಕಬಹುದು ಅಥವಾ ತಮಗೂ ಅನುಮತಿಯನ್ನು ಕಡ್ಡಾಯಗೊಳಿಸಬಹುದು ಎಂಬುದು ಕುಕಿಗಳ ಆತಂಕ.
ಹೀಗೆ ಪರಸ್ಪರ ತಮ್ಮ ತಮ್ಮ ಸಮುದಾಯದ ರಕ್ಷಣೆಯ ಜೊತೆಗೆ ಪ್ರಭುತ್ವವನ್ನು ಸಾಧಿಸುವ ಮನೋಭಾವದ ನಡುವೆ ಅನೇಕ ವಿಷಯಗಳಿಗಾಗಿ ಇವರಿಬ್ಬರ ನಡುವೆ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ಮೈತೇಯಿಗಳು ಹಲವು ವಿಧದಲ್ಲಿ ಕಾನೂನನ್ನು ಜಾರಿಗೆ ತರಲು ಯತ್ನಿಸಿದ್ದರೂ ಕೂಡ ಅದನ್ನು ಭಾರತ ಸರ್ಕಾರವು ತಿರಸ್ಕರಿಸಿದೆ. ಇದರಿಂದ ಬೇಸತ್ತ ಮೈತೇಯಿಗಳು ತಮಗೂ ಎಸ್.ಟಿ. ಸ್ಥಾನವನ್ನು ಕೊಡಬೇಕೆಂದು ಹಠ ಹಿಡಿದಿವೆ. ೨೦೧೩ರಿಂದ ಮೈತೇಯಿಗಳು ಈ ಆಗ್ರಹವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಆದರೆ ಇಡೀ ರಾಜ್ಯದಲ್ಲಿ ಎಲ್ಲರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮೈತೇಯಿಗಳಿಗೆ ಎಸ್.ಟಿ. ಸ್ಥಾನವನ್ನು ಕೊಟ್ಟರೆ ಅವರು ತಮ್ಮ ಜಾಗವನ್ನೂ ಆಕ್ರಮಣ ಮಾಡುತ್ತಾರೆ, ಹಾಗಾಗಿ ಅದಕ್ಕೆ ಅವಕಾಶ ಕೊಡಬಾರದು – ಎಂಬುದು ಕುಕಿಗಳ ಆಗ್ರಹ.
ಹೀಗೆ ಈ ಎರಡೂ ಸಮುದಾಯಗಳ ನಡುವೆ ವೈಮನಸ್ಯ, ಪರಸ್ಪರ ಅಪನಂಬಿಕೆ ಮತ್ತು ಅಸ್ತಿತ್ವಕ್ಕಾಗಿ ಸಂಘರ್ಷವು ಪ್ರಾರಂಭವಾಗಿ, ಅನೇಕ ದಶಕಗಳಿಂದ ಮುಂದುವರಿಯುತ್ತಲೇ ಬರುತ್ತಿದೆ. ಇದಕ್ಕೆ ಬ್ರಿಟಿಷರ ತಂತ್ರದಿಂದ ಆರಂಭಿಸಿ, ಸ್ವಾತಂತ್ರ್ಯೋತ್ತರ ಭಾರತದ ನೀತಿಗಳವರೆಗೆ ಅನೇಕ ಕಾರಣಗಳಿವೆ.
ಬಂಡುಕೋರರ ಪೋಷಣೆ
ಪರಸ್ಪರ ಅಪನಂಬಿಕೆ ಮತ್ತು ಅಸ್ತಿತ್ವದ ಪ್ರಶ್ನೆಯಿಂದಾಗಿ ಮಣಿಪುರದಲ್ಲಿ ಒಂದೊಂದು ಸಮುದಾಯವೂ ಅನೇಕ ಬಂಡುಕೋರರ ಸಮೂಹವನ್ನು ಪೋಷಿಸಿಕೊಂಡು ಬರುತ್ತಿದೆ. ತಮ್ಮ ತಮ್ಮ ಜನರ ಸುರಕ್ಷೆಯ ನೆಪದಲ್ಲಿ ಕುಕಿಗಳು ಅನೇಕ ಬಂಡುಕೋರರ ಸಮೂಹವನ್ನು ಸೃಷ್ಟಿಸಿಕೊಂಡಿದ್ದಾರೆ. ಕುಕಿ ಕಮಾಂಡೋ ಫೋರ್ಸ್, ಕುಕಿ ನ್ಯಾಶನಲ್ ಆರ್ಮಿ, ಕುಕಿ ನ್ಯಾಶನಲ್ ಆರ್ಗನೈಸೇಶನ್, ಕುಕಿ ಇಂಡಿಪೆಂಡೆಂಟ್ ಆರ್ಮಿ, ಕುಕಿ ರೆವೊಲ್ಯೂಷನರಿ ಫೋರ್ಸ್, ಕುಕಿ ಡಿಫೆನ್ಸ್ ಫೋರ್ಸ್ – ಇವು ಮುಖ್ಯವಾದವುಗಳು. ನಾಗಾಸಮುದಾಯದ ಬಂಡುಕೋರರ ಸಮೂಹಗಳು ಕೂಡ ಇವೆ. ಉದಾಹರಣೆಗೆ ಎನ್.ಎಸ್.ಸಿ.ಎನ್.(ಐ.ಎಮ್) ನಾಗಾ ಬಂಡುಕೋರ ಸಮೂಹವಾಗಿದೆ. ಕುಕಿಗಳು ಮತ್ತು ನಾಗಾಗಳು ಆದಿವಾಸಿ ಜನಾಂಗಕ್ಕೆ ಸೇರಿದವರೇ ಆಗಿದ್ದರೂ ನಾಗಾ ಮತ್ತು ಕುಕಿ ಸಮುದಾಯದವರಿಗೆ ಆಗಿಬರುವುದಿಲ್ಲ. ಅವರ ನಡುವೆಯೂ ಅನೇಕ ಬಾರಿ ಸಂಘರ್ಷಗಳು ಉಂಟಾಗಿವೆ. ೧೯೯೦ ರಲ್ಲಿ ಕುಕಿ ಮತ್ತು ನಾಗಾಗಳ ನಡುವೆ ನಡೆದ ಸಂಘರ್ಷದಲ್ಲಿ ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಹೀಗೆ ಏಕಾಗುತ್ತದೆಂದರೆ, ನಾಗಾ ಮತ್ತು ಕುಕಿಗಳ ಸಂಸ್ಕೃತಿಗಳು ಭಿನ್ನವೇ ಆಗಿವೆ. ಹಾಗಾಗಿ ಇದು ಒಂದು ರೀತಿಯಲ್ಲಿ ತ್ರಿಕೋನ ಸಂಘರ್ಷ. ಯಾರಿಗೆ ಒಳ್ಳೆಯದನ್ನು ಮಾಡಲು ಹೋದರೂ ಮತ್ತಿಬ್ಬರು ತಮಗೆ ಅಪಕಾರವಾಯಿತೆಂದು ಬಗೆಯುವ ಅತ್ಯಂತ ಸಂಕೀರ್ಣ ಮತ್ತು ವಿಚಿತ್ರ ಸ್ಥಿತಿ ಅಲ್ಲಿದೆ.
ಹಿಂಸಾಚಾರ ಮತ್ತು ಅದರ ಕಾರಣಗಳು
ನ್ಯಾಯಾಲಯದ ನಿರ್ದೇಶನ
ಇಂದು ಇಡೀ ದೇಶದ ಚರ್ಚೆಗೆ ಗ್ರಾಸವಾಗಿರುವ ಮಣಿಪುರದ ಹಿಂಸಾಚಾರವು ಆರಂಭವಾದದ್ದು ಕಳೆದ ಮೇ ೩ರಂದು. ಇದಕ್ಕೆ ಮುಖ್ಯ ಪ್ರೇರಣೆ ದೊರಕಿದ್ದು ಮಣಿಪುರದ ಉಚ್ಚನ್ಯಾಯಾಲಯದ ಒಂದು ತೀರ್ಪಿನಿಂದಾಗಿ. ಮಾರ್ಚ್ ೨೭ರಂದು ಮಣಿಪುರ ಉಚ್ಚ ನ್ಯಾಯಾಲಯ ರಾಜ್ಯಸರ್ಕಾರಕ್ಕೆ ಅಚಾನಕ್ಕಾಗಿ ಒಂದು ನಿರ್ದೇಶನವನ್ನು ಹೊರಡಿಸಿತು. ಅದೇನೆಂದರೆ ರಾಜ್ಯಸರ್ಕಾರವು ಮೈತೇಯಿಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವವನ್ನು ಸಲ್ಲಿಸಬೇಕೆಂದೂ, ಈ ಪ್ರಕ್ರಿಯೆಯನ್ನು ಕೇವಲ ನಾಲ್ಕು ವಾರಗಳಲ್ಲಿ ನಡೆಸಬೇಕೆಂದೂ ಅದು ನಿರ್ದೇಶನವನ್ನು ಹೊರಡಿಸುತ್ತದೆ. ಇದು ಅನೇಕ ವರ್ಷಗಳಿಂದ ಮೈತೇಯಿ ಸಮುದಾಯದ ಬೇಡಿಕೆಯಾಗಿತ್ತು. ಆದರೆ ಒಮ್ಮೆಲೇ ಕೋರ್ಟ್ ಹೇಗೆ ಮತ್ತು ಏಕೆ ಈ ರೀತಿ ಸೂಚನೆಯನ್ನು ಕೊಟ್ಟಿತೆಂದು ಸ್ವತಃ ಕೇಂದ್ರ ಗೃಹಸಚಿವರೇ ಸದನದಲ್ಲಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಈ ನಿರ್ದೇಶನದ ಅನಂತರ ರಾಜ್ಯದೆಲ್ಲೆಡೆ ಮೈತೇಯಿ ಜನಾಂಗದವರಿಗೆ ಎಸ್.ಟಿ. ಸ್ಥಾನವನ್ನು ಕೊಡುವುದನ್ನು ಕುಕಿ ಪಂಗಡದವರು ವಿರೋಧಿಸಲು ತೊಡಗಿದರು. ಇದರಿಂದ ಮಣಿಪುರದಲ್ಲಿ ಎಲ್ಲೆಡೆ ದಂಗೆಗಳು ಪ್ರಾರಂಭವಾದವು. ಮೈತೇಯಿ ಸಮುದಾಯಕ್ಕೆ ಎಸ್.ಟಿ. ಸ್ಥಾನ ಸಿಕ್ಕಿಬಿಟ್ಟರೆ ಅವರ ಮೇಲುಗೈ ಆಗಿಬಿಡುತ್ತದೆ ಎಂಬ ಕಾರಣಕ್ಕಾಗಿಯೇ ದಶಕಗಳಿಂದಲೂ ಮಣಿಪುರದಲ್ಲಿ ಈ ಸಮುದಾಯಗಳ ನಡುವೆ ಸಂಘರ್ಷ ಏರ್ಪಡುತ್ತಲೇ ಇರುವುದು. ಈ ನಡುವೆ ಅಚಾನಕ್ಕಾಗಿ ಹೈಕೋರ್ಟ್ ಹೀಗೆ ಆದೇಶಿಸಿದ್ದು ಬೂದಿ ಮುಚ್ಚಿದ ಕೆಂಡಕ್ಕೆ ಸೀಮೆ ಎಣ್ಣೆ ಸುರಿದಂತಾಯಿತು.
ಕುಕಿಗಳ ಅಕ್ರಮ ಪ್ರವೇಶ
ಕಳೆದ ಆರು ವರ್ಷಗಳಿಂದ ಮಣಿಪುರದಲ್ಲಿ ಬಿಜೆಪಿ ಶಾಸನವನ್ನು ಮಾಡುತ್ತಿದೆ. ಅಧಿಕಾರಕ್ಕೆ ಬಂದ ಈ ಆರು ವರ್ಷಗಳಲ್ಲಿ ಮಣಿಪುರದಲ್ಲಿ ಒಂದೇ ಒಂದು ದಂಗೆಯಾಗಲಿ, ಒಂದೇ ಒಂದು ಕರ್ಫ್ಯೂವಾಗಲಿ ಉಂಟಾಗಿರಲಿಲ್ಲ. ೨೦೨೧ರಲ್ಲಿ ಪಕ್ಕದ ದೇಶವಾದ ಮಯನ್ಮಾರ್ನಲ್ಲಿ ಅಧಿಕಾರದ ಬದಲಾವಣೆ ಆಯಿತು. ಅಲ್ಲಿದ್ದ ಸರ್ಕಾರವು ಬಿದ್ದುಹೋಗಿ ಮಿಲಿಟರಿ ಆಡಳಿತ ಬಂದೊದಗಿತು. ಮಯನ್ಮಾರ್ನಲ್ಲಿ ಕೂಡ ಅಧಿಕಸಂಖ್ಯೆಯ ಕುಕಿಗಳೇ ಇದ್ದಾರೆ. ಅಲ್ಲಿನ ಕುಕಿ ಡೆಮೊಕ್ರ್ಯಾಟಿಕ್ ಫ್ರಂಟ್, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಹೋರಾಟದಲ್ಲಿ ತೊಡಗಿತು. ಇದರಿಂದಾಗಿ ಅಲ್ಲಿನ ಮಿಲಿಟರಿ ಸರ್ಕಾರವು ಕುಕಿಗಳ ವಿರುದ್ಧವಾಗಿ ಕ್ರಮವನ್ನು ತೆಗೆದುಕೊಳ್ಳತೊಡಗಿತು. ತಮಗೆ ಪ್ರತಿಕೂಲ ಪರಿಸ್ಥಿತಿ ಇರುವುದರಿಂದ ಅಧಿಕಸಂಖ್ಯೆಯ ಕುಕಿಗಳು ಮಯನ್ಮಾರ್ನಿಂದ ಭಾರತದ ಮಣಿಪುರಕ್ಕೆ ನಿರಾಶ್ರಿತರಾಗಿ ಅಕ್ರಮವಾಗಿ ಒಳ ಪ್ರವೇಶಿಸಲು ತೊಡಗಿದರು. ಮಯನ್ಮಾರ್ ಮತ್ತು ಭಾರತದ ಸೀಮೆಯಲ್ಲಿ ಯಾವುದೇ ಬೇಲಿಯಿಲ್ಲ. ಇದು ಮೊದಲಿನಿಂದಲೂ ಇರುವುದು ಹೀಗೆಯೇ. ಹಾಗಾಗಿ ಸುಲಭದಲ್ಲಿ ಕುಕಿಗಳು ರಾಜ್ಯವನ್ನು ಪ್ರವೇಶಿಸಿ, ಗುಡ್ಡಗಾಡಿನಲ್ಲಿ ವಾಸಿಸಲು ತೊಡಗಿದರು. ಕುಕಿಗಳು ಈ ಮೊದಲೂ ಅಕ್ರಮವಾಗಿ ಪ್ರವೇಶಿಸುತ್ತ ಗುಡ್ಡಗಾಡಿನಲ್ಲಿ ಅರಣ್ಯವನ್ನು ನಾಶಮಾಡುತ್ತ ಅಕ್ರಮವಾಗಿ ನೆಲಸಲು ತೊಡಗಿದ್ದರಿಂದಲೇ ಮಣಿಪುರದ ಜನಸಂಖ್ಯೆಯ ಅನುಪಾತ ಬಹುಬೇಗ ವ್ಯತಿರಿಕ್ತವಾಗಲು ತೊಡಗಿದ್ದು. ೨೦೨೧ರ ಈಚೆಗೆ ಒಮ್ಮಿಂದೊಮ್ಮೆಲೇ ಈ ಜನಸಂಖ್ಯೆಯ ಅನುಪಾತದಲ್ಲಿ ವ್ಯತ್ಯಾಸವಾದುದನ್ನು ಮನಗಂಡು ಅಲ್ಲಿನ ಮತಾಯಿ ಜನಾಂಗದವರು ಧ್ವನಿಯೆತ್ತಿದರು.
ಮಾದಕ ದ್ರವ್ಯ ಸಾಗಣೆ ಮತ್ತು ಅದರ ನಿಯಂತ್ರಣಕ್ಕೆ ಕ್ರಮ
ಕುಕಿಗಳ ಅಕ್ರಮ ಪ್ರವೇಶದಿಂದಾಗಿ, ಜನಸಂಖ್ಯೆಯಲ್ಲಿನ ಅನುಪಾತದಲ್ಲಷ್ಟೇ ಅಲ್ಲ, ಅಲ್ಲಿನ ದಟ್ಟವಾದ ಅರಣ್ಯಪ್ರದೇಶವೆಲ್ಲ ಬಟ್ಟಬಯಲಾಗತೊಡಗಿತು. ಅಕ್ರಮವಾಗಿ ಪ್ರವೇಶಿಸಿದ ಕುಕಿಗಳು ಒಮ್ಮಿಂದೊಮ್ಮೆಲೇ ಅರಣ್ಯವನ್ನು ಕಡಿದು ಬಯಲು ಮಾಡಿಕೊಂಡು ಮಾದಕದ್ರವ್ಯಗಳ ಉತ್ಪಾದನೆಯನ್ನು ಆರಂಭಿಸಿದರು. ಈಶಾನ್ಯ ರಾಜ್ಯಗಳಲ್ಲಿ ಮಾದಕದ್ರವ್ಯದ ಸೇವನೆ, ಸಾಗಾಟ ಹಾಗೂ ಮಾದಕ ಬೆಳೆಗಳ ಉತ್ಪಾದನೆ ತುಂಬ ಜೋರಾಗಿ ನಡೆಯುತ್ತದೆ. ಅವುಗಳ ಮೇಲೆ ಕಡಿವಾಣ ಹಾಕುವುದು ಒಂದು ಸವಾಲಿನ ಕೆಲಸ. ಈ ಹಿಂದೆ ತ್ರಿಪುರಾ ರಾಜ್ಯದಲ್ಲೂ ಕೂಡ ಮಾದಕದ್ರವ್ಯಗಳ ಸಾಗಾಟ ಅವ್ಯಾಹತವಾಗಿ ನಡೆಯುತ್ತಿತ್ತು. ಅಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಆದಿವಾಸಿಗಳ ಮೂಲಕ ನಡೆಸಲ್ಪಡುವ ಈ ಮಾದಕ ದ್ರವ್ಯಗಳ ಸಾಗಾಟಕ್ಕೆ ಅಂಕುಶ ಬಿದ್ದಿದೆ. ಹೀಗೆ ಸತತವಾಗಿ ಮಾದಕ ಬೆಳೆಗಳನ್ನು ಬೆಳೆಯುತ್ತಿರುವುದು ಸರ್ಕಾರಕ್ಕೆ ತಲೆಬಿಸಿಯನ್ನು ಉಂಟುಮಾಡಿತು. ಇದನ್ನು ಹೇಗಾದರೂ ನಿಯಂತ್ರಿಸಲೇಬೇಕೆಂಬ ಉದ್ದೇಶದಿಂದ ಮಣಿಪುರದ ಮುಖ್ಯಮಂತ್ರಿ ಬಿರೇನ್ಸಿಂಗ್ ನಿಶ್ಚಯಿಸಿದರು. ಚೂರಾಚಂದಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಅರಣ್ಯವನ್ನು ಕಡಿದು ಮನೆ ಮಾಡಿಕೊಂಡಿದ್ದ ಕೆಲವರನ್ನು ಅಲ್ಲಿಂದ ಎಬ್ಬಿಸಲು ಮಣಿಪುರ ಸರ್ಕಾರ ಆರಂಭಿಸಿತು. ಇದರಿಂದ ಕುಕಿಗಳ ವಿವಿಧ ಬಂಡುಕೋರ ಸಂಘಟನೆಗಳು ಗಲಭೆಯನ್ನು ಪ್ರಾರಂಭಿಸಿದವು. ಹೀಗೆ ಮಾದಕ ಬೆಳೆಗಳನ್ನು ನಿಯಂತ್ರಿಸಲು ಪಣ ತೊಟ್ಟಿದ್ದೇ ಕುಕಿಗಳನ್ನು ಬಡಿದೆಬ್ಬಿಸಲು ಕಾರಣವಾಗಿತ್ತು. ಮಣಿಪುರದ ಸರ್ಕಾರಕ್ಕೂ ಈ ಕ್ರಮವನ್ನು ತೆಗೆದುಕೊಳ್ಳದೆ ಬೇರೆ ದಾರಿಯಿರಲಿಲ್ಲ. ಏಕೆಂದರೆ ಇಡೀ ರಾಜ್ಯದ ಜನಸಂಖ್ಯಾ ಪ್ರಮಾಣ ವಿನ್ಯಾಸವೇ ಬದಲಾಗುತ್ತಿರುವ ಈ ಹಂತದಲ್ಲಿ ಮಾದಕದ್ರವ್ಯಗಳ ಉತ್ಪನ್ನಗಳನ್ನು ನಿಯಂತ್ರಿಸುವುದು ಅತ್ಯವಶ್ಯವಾಗಿತ್ತು. ಆದರೆ ಇದನ್ನು ತಮ್ಮ ಸಮುದಾಯದ ವಿರುದ್ಧದ ಕ್ರಮವೆಂದು ಕುಕಿಗಳು ಬಿಂಬಿಸಲು ತೊಡಗಿದರು ಮತ್ತು ನಿಧಾನವಾಗಿ ಹಿಂಸಾಚಾರಕ್ಕೆ ತೊಡಗಿಕೊಂಡರು.
ಹಿಂಸಾಚಾರದ ಇತಿವೃತ್ತ
ಮಣಿಪುರದ ಉಚ್ಚನ್ಯಾಯಾಲಯ ಮೈತೇಯಿಗಳನ್ನು ಎಸ್.ಟಿ. ವರ್ಗಕ್ಕೆ ಸೇರಿಸಲು ನಾಲ್ಕು ವಾರಗಳ ಗಡುವು ಕೊಟ್ಟು ರಾಜ್ಯಸರ್ಕಾರಕ್ಕೆ ನಿರ್ದೇಶನ ಕೊಟ್ಟ ಒಂದೇ ತಿಂಗಳಲ್ಲಿ ಹಿಂಸಾಚಾರವು ಭುಗಿಲೆದ್ದಿತು. ಮೈತೇಯಿಗಳಿಗೆ ಎಸ್.ಟಿ. ವರ್ಗಕ್ಕೆ ಸೇರಿಸುವುದನ್ನು ವಿರೋಧಿಸಲೆಂದು ಮೇ ೩ರಂದು ಆಲ್ ಟ್ರೈಬಲ್ ಸ್ಟುಡೆಂಟ್ಸ್ ಯುನಿಯನ್ ಮಣಿಪುರ್ (ATSUM) ಸಂಘಟನೆಯು ಸೂಚನೆ ಹೊರಡಿಸಿತು. ಈ ಸಂದರ್ಭದಲ್ಲಿ ಅರವತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಮಿತಾಯಿ ಮತ್ತು ಕುಕಿ ಸಮುದಾಯದವರ ನಡುವೆ ಚುರಾಚಾಂದ್ಪುರ ಎಂಬ ಜಿಲ್ಲೆ ಮತ್ತು ಬಿಷ್ಣುಪುರ ಜಿಲ್ಲೆಯಲ್ಲಿ ಸಂಘರ್ಷ ಶುರುವಾಯಿತು. ಈ ಗಲಭೆ ವ್ಯಾಪಕಗೊಂಡು ನೂರಾರು ಜನ ಮರಣವನ್ನಪ್ಪಿದರು. ಇದೀಗ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಕ್ರಮಗಳ ಕಾರಣದಿಂದಾಗಿ ಹಿಂಸಾಚಾರವು ಕಡಮೆಯಾಗಿದೆಯಾದರೂ ಒಳಗಿನ ದ್ವೇಷದ ವಾತಾವರಣ ನಿಂತಿಲ್ಲ. ಇದುವರೆಗೆ ಹಿಂಸಾಚಾರದ ಕಾರಣದಿಂದ ೧೫೨ ಜನ ಮರಣವನ್ನಪ್ಪಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಅದೆಷ್ಟೋ ಕುಟುಂಬಗಳು ಗುಳೇ ಹೊರಟಿವೆ. ೧೭೦೦ ಮನೆಗಳು ಬೆಂಕಿಗೆ ಆಹುತಿಯಾಗಿವೆ.
ಈಶಾನ್ಯರಾಜ್ಯಗಳಲ್ಲಿನ ವಿದ್ಯಮಾನಗಳು ಅತ್ಯಂತ ಸಂಕೀರ್ಣ ಮತ್ತು ಸೂಕ್ಷ್ಮಸ್ವರೂಪದವು. ಗಲಭೆ ಆರಂಭವಾಗುತ್ತಿದ್ದಂತೆ ರಕ್ಷಣೆ ಒದಗಿಸಬೇಕಿದ್ದ ಪೊಲೀಸ್ ಸಿಬ್ಬಂದಿಗಳೂ ಕೂಡ ತಮ್ಮ ತಮ್ಮ ಮೂಲಸ್ಥಾನದ ಸಮೀಪದ ಠಾಣೆಗಳಿಗೆ ಹೋಗಿಬಿಟ್ಟರು. ಪೊಲೀಸ್ ಇಲಾಖೆಯಲ್ಲಿದ್ದ ಕುಕಿಗಳು ಪರ್ವತಪ್ರದೇಶಕ್ಕೂ, ಮೈತೇಯಿಗಳು ಕಣಿವೆಪ್ರದೇಶಕ್ಕೂ ಸೀಮಿತರಾಗಿ, ಇಡೀ ರಾಜ್ಯ ಎರಡು ವಿಭಾಗವಾಗಿಬಿಟ್ಟಿತು. ಅಷ್ಟರಮಟ್ಟಿಗೆ ಪರಸ್ಪರ ಅಪನಂಬಿಕೆಗಳು ಬೆಳೆದವು. ದೊಡ್ಡ ದೊಡ್ಡ ಅಧಿಕಾರಿಗಳೂ ಕೂಡ ಮೈತೇಯಿ ಮತ್ತು ಕುಕಿಗಳ ಪ್ರಾಬಲ್ಯವಿರುವ ತಮ್ಮ ತಮ್ಮ ಪ್ರದೇಶಗಳಿಗೆ ತೆರಳಿಬಿಟ್ಟರು. ಕೇಂದ್ರವು ಸೇನೆಯನ್ನು ಕಳುಹಿಸಿತಾದರೂ ಅವುಗಳ ಮೇಲೆ ಕೂಡ ಅಲ್ಲಿನ ಜನರಿಗೆ ಅಪನಂಬಿಕೆ ಬೆಳೆದವು. ಅಸ್ಸಾಂ ರೈಫಲ್ನವರು ಕುಕಿಗಳಿಗೆ ಬೆಂಬಲವಾಗಿದ್ದಾರೆ ಎಂಬ ಸುದ್ದಿಯನ್ನು ಹರಡಿಸಲಾಯಿತು. ಹಾಗೆಯೆ ಕುಕಿಗಳ ಕಡೆಯಲ್ಲಿಯೂ ಕೇಂದ್ರದ ತುಕಡಿಗಳು ಮೈತೇಯಿಗಳಿಗೆ ಸಹಾಯ ಮಾಡುತ್ತಿವೆ ಎಂಬ ಭಾವವನ್ನು ಹುಟ್ಟಿಸಲಾಯಿತು. ಒಟ್ಟಿನಲ್ಲಿ ಎಲ್ಲರಿಗೂ ಅಸುರಕ್ಷತೆಯ ಭಾವ ಉಂಟಾಗುವ ಎಲ್ಲ ಗಾಳಿ ಸುದ್ದಿಯನ್ನೂ ತ್ವರಿತವಾಗಿ ಹರಡಲಾಯಿತು.
ಗಲಭೆ ನಡೆದ ತಕ್ಷಣ ಮೈತೇಯಿ ಪ್ರಾಬಲ್ಯದ ಇಂಫಾಲ್ ಪಶ್ಚಿಮ, ಕಕ್ಚಿಂಗ್, ತೌಬಲ್, ಜಿರಿಬಾಮ್ ಮತ್ತು ಬಿಷ್ಣುಪುರ್ ಜಿಲ್ಲೆಗಳಲ್ಲಿ ಹಾಗೂ ಬುಡಕಟ್ಟು ಪ್ರಾಬಲ್ಯದ ಚುರಾಚಂದ್ಪುರ, ಕಾಂಗ್ಪೋಕ್ಪಿ ಮತ್ತು ತೆಂಗ್ನೌಪಾಲ್ ಜಿಲ್ಲೆಗಳು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು. ಮಣಿಪುರ ಸರ್ಕಾರವು ಮೇ ೪ರಂದು ಕಂಡಲ್ಲಿ ಗುಂಡು ಆದೇಶವನ್ನು ಹೊರಡಿಸಿತು. ಮೇ ೩ರ ರಾತ್ರಿಯ ವೇಳೆಗೆ, ಅಸ್ಸಾಂ ರೈಫಲ್ಸ್ ಮತ್ತು ಭಾರತೀಯ ಸೇನೆಯ ೫೫ ತುಕಡಿಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಯಿತು ಮತ್ತು ಮೇ ೪ರ ಹೊತ್ತಿಗೆ ೯,೦೦೦ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಮೇ ೫ರಂದು ಸುಮಾರು ೨೦,೦೦೦ ಮತ್ತು ಮೇ ೬ರ ಹೊತ್ತಿಗೆ ೨೩,೦೦೦ ಜನರನ್ನು ಮಿಲಿಟರಿ ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಕೇಂದ್ರಸರ್ಕಾರವು ಕ್ಷಿಪ್ರ ಕಾರ್ಯಾಚರಣೆ ಪಡೆಯ ೫ ಕಂಪೆನಿಗಳನ್ನು ಈ ಪ್ರದೇಶಕ್ಕೆ ವಿಮಾನದ ಮೂಲಕ ರವಾನಿಸಿತು. ಮಣಿಪುರದಲ್ಲಿ ಸುಮಾರು ೧೦,೦೦೦ ಸೇನೆ, ಅರೆಸೇನಾಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಮೇ ೧೪ರವರೆಗೆ, ಮಣಿಪುರದಲ್ಲಿ ಒಟ್ಟು ೧೨೬ ಸೇನಾ ತುಕಡಿಗಳು ಮತ್ತು ಅರೆಸೇನಾ ಪಡೆಗಳ ೬೨ ಕಂಪೆನಿಗಳನ್ನು ನಿಯೋಜಿಸಲಾಗಿತ್ತು.
ಬೆತ್ತಲೆ ಕುಕಿ ಮಹಿಳೆಯರ ವೈರಲ್ ವಿಡಿಯೋ
ಯಾವುದೇ ಗಲಭೆಗಳಾದಾಗ ವಾಸ್ತವಕ್ಕಿಂತ ಹೆಚ್ಚಿನ ಹಾನಿಯನ್ನು ಸುಳ್ಳುಸುದ್ದಿಗಳು, ಗಾಳಿಮಾತುಗಳು ಹಾಗೂ ಊಹೆಗಳು ಉಂಟುಮಾಡುತ್ತವೆ. ಮಣಿಪುರದಲ್ಲಿ ಕೂಡ ಆದ ಗಲಭೆಗೆ ಮತ್ತು ಇವತ್ತಿನ ಅಶಾಂತಿಗೆ ಮುಖ್ಯ ಕಾರಣ ಇಂಥ ಗಾಳಿಸುದ್ದಿಯೇ ಆಗಿದೆ. ಈ ನಡುವೆ ಜುಲೈ ೧೯ರಂದು ಇಬ್ಬರು ಕುಕಿ ಮಹಿಳೆಯರನ್ನು ನಗ್ನವಾಗಿ ತೋರಿಸುವ ವಿಡಿಯೋ ವೈರಲ್ ಆಯಿತು. ಘಟನೆ ನಡೆದ ಸುಮಾರು ಎರಡು ತಿಂಗಳ ಅನಂತರ ಈ ವಿಡಿಯೋ ವೈರಲ್ ಆಗಿ ಇಡೀ ರಾಜ್ಯ ಮತ್ತೊಮ್ಮೆ ಗಲಭೆಗೆ ತುತ್ತಾಗುವಂತೆ ಮಾಡಿತು. ಯಾವಾಗ ಈ ವಿಡಿಯೋ ಹೊರಬಂತೋ ಆಗ ಇಡೀ ದೇಶದಲ್ಲಿ ಮತ್ತೊಮ್ಮೆ ಮಣಿಪುರದ ಬಗ್ಗೆ ಸುದ್ದಿ ಹರಡಿತು. ಅಂಥ ಕೃತ್ಯವನ್ನು ಮಾಡಿದವರು ಮೈತೇಯಿಗಳು ಎಂಬ ಸುದ್ದಿ ಹರಡಿಸಲಾಯಿತು. ಅಲ್ಲಿಂದ ಮತ್ತೊಮ್ಮೆ ಕುಕಿ ಮತ್ತು ಮೈತೇಯಿಗಳ ನಡುವೆ ಸಂಘರ್ಷ ಪ್ರಾರಂಭವಾಯಿತು. ಆದರೆ ಸಂಸತ್ ಅಧಿವೇಶನಕ್ಕೆ ಸ್ವಲ್ಪ ಮುಂಚೆ ಈ ವಿಡಿಯೋ ಹೊರಬರಲು ಕಾರಣವೇನು ಎಂಬ ಸಂಶಯವನ್ನು ಕೇಂದ್ರ ಗೃಹಸಚಿವರು ಲೋಕಸಭೆಯಲ್ಲಿ ಹೊರಹಾಕಿದ್ದನ್ನು ಗಮನಿಸಿದರೆ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಯಾರಿಗಾದರೂ ಅನ್ನಿಸದಿರದು.
ಮಣಿಪುರದಲ್ಲಿ ನಡೆದ ಹಿಂಸಾಚಾರಗಳ ಪಟ್ಟಿ
ಮಣಿಪುರದಲ್ಲಿ ಹಿಂಸಾಚಾರವು ಇದೇ ಮೊದಲ ಬಾರಿಗೆ ನಡೆಯುತ್ತಿರುವುದಲ್ಲ. ಈ ಹಿಂದೆಯೂ ಅನೇಕ ಬಾರಿ ಘಟಿಸಿದೆ. ಇದಕ್ಕಿಂತಲೂ ಹೆಚ್ಚು ಜನರು ಸತ್ತಿದ್ದಾರೆ, ಗಾಯಗೊಂಡಿದ್ದಾರೆ ಮತ್ತು ನಿರಾಶ್ರಿತರಾಗಿದ್ದಾರೆ. ಅದರ ವಿವರ ಹೀಗಿದೆ.
- ೧೯೯೩ರಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಮಣಿಪುರದಲ್ಲಿ ನಾಗಾ ಮತ್ತು ಕುಕಿಗಳ ನಡುವೆ ಸಂಘರ್ಷವೇರ್ಪಟ್ಟಿತ್ತು. ಆಗ ಏಳು ನೂರು ಜನ ಗಲಭೆಯಲ್ಲಿ ಸಾವನ್ನಪ್ಪಿದ್ದರು. ಇನ್ನೂರು ಜನ ಗಾಯಾಳುಗಳಾಗಿದ್ದರು. ನಲವತ್ತೈದು ಸಾವಿರ ಜನ ನಿರಾಶ್ರಿತರಾಗಿದ್ದರು. ಒಂದೂವರೆ ವರ್ಷ ನಿರಂತರವಾಗಿ ಈ ಹಿಂಸಾಚಾರವು ನಡೆಯಿತು.
- ೧೯೯೭-೯೮ರಲ್ಲಿ ಇಂದ್ರಕುಮಾರ್ ಗುಜ್ರಾಲ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮುನ್ನೂರೈವತ್ತು ಜನ ಸಾವನ್ನಪ್ಪಿದರು. ಒಂದು ವರ್ಷ ನಿರಂತರವಾಗಿ ಆ ಸಂಘರ್ಷವು ನಡೆಯಿತು.
- ೨೦೦೪ರಲ್ಲಿ ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದಾಗ ೧೭೦೦ ಜನರ ಎನ್ಕೌಂಟರ್ ನಡೆದಿತ್ತು.
- ೨೦೨೨ರ ಮೇ ೩ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೆ ೧೫೨ ಜನ ಸಾವನ್ನಪ್ಪಿದ್ದಾರೆ.
ಇದರಲ್ಲಿ ಮೇ ತಿಂಗಳಿನಲ್ಲಿ ೧೦೭ ಜನ, ಜೂನ್ನಲ್ಲಿ ೩೦ ಜನ, ಜುಲೈನಲ್ಲಿ ೧೫ ಜನ, ಆಗಸ್ಟ್ನಲ್ಲಿ ೪ ಜನ ಸಾವನ್ನಪ್ಪಿದ್ದಾರೆ ಎಂದು ಗೃಹಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕೇಂದ್ರಸರ್ಕಾರ ಕೈಗೊಂಡಿರುವ ಕ್ರಮಗಳು
- ಕೇಂದ್ರಸರ್ಕಾರವು ಮಣಿಪುರದ ಹಿಂಸಾಚಾರದ ಬಗ್ಗೆ ತುಂಬ ಜಾಗರೂಕತೆಯಿಂದ ನಡೆದುಕೊಂಡಿದೆಯೆಂಬುದನ್ನು ಸಾರ್ವಜನಿಕರು ಗಮನಿಸಬೇಕು. ಮೋದಿ ನೇತೃತ್ವದ ಕೇಂದ್ರಸರ್ಕಾರವು ಆಡಳಿತಕ್ಕೆ ಬಂದ ದಿನದಿಂದ ಮಣಿಪುರದಲ್ಲಿ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಹಿಂಸಾಚಾರದ ಬಗ್ಗೆ ಅಧ್ಯಯನವನ್ನು ನಡೆಸಿದೆ. ಕೇಂದ್ರಸರ್ಕಾರವು ೨೦೨೧ರಲ್ಲಿಯೇ ಮಯನ್ಮಾರ್ ಸೀಮೆಯಲ್ಲಿ ಬೇಲಿಯನ್ನು ಹಾಕಲು ಪ್ರಾರಂಭಿಸಿತು. ಅಲ್ಲಿಯವರೆಗೆ ಅಕ್ರಮವಾಗಿ ಪ್ರವೇಶಿಸುವವರನ್ನು ತಡೆಯಲು ಮಯನ್ಮಾರ್ ಸೀಮೆಯಲ್ಲಿ ಯಾವುದೇ ರೀತಿಯಿಂದಲೂ ಸಾಧ್ಯವಿಲ್ಲವೆಂಬ ಸ್ಥಿತಿಯಿತ್ತು. ಈ ಹಿಂದಿನ ಸರ್ಕಾರಗಳು ಕೂಡ ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಆದರೆ ೨೦೨೧ರಲ್ಲಿ ಕೇಂದ್ರಸರ್ಕಾರವು ಬೇಲಿಯನ್ನು ಹಾಕಲು ತೊಡಗಿ ಸದ್ಯ ಹತ್ತು ಕಿ.ಮೀ. ಬೇಲಿಯನ್ನು ಹಾಕಲಾಗಿದೆ. ಏಳು ಕಿ.ಮೀ. ಬೇಲಿಯ ಕಾರ್ಯ ನಡೆದಿದೆ ಮತ್ತು ಆರು ನೂರು ಕಿ.ಮೀ.ಗಳಷ್ಟು ಸರ್ವೇ ಕಾರ್ಯ ನಡೆಯುತ್ತಿದೆ.
- ಮಯನ್ಮಾರ್ನಲ್ಲಿ ಸೇನೆಯ ಆಡಳಿತ ಬಂದ ಮೇಲೆ ಭಾರತಕ್ಕೆ ನುಸುಳುವ ಕುಕಿಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದಾಗಿ ಹಾಗೆ ನಿರಾಶ್ರಿತರಾಗಿ ಬಂದಿರುವವರನ್ನು ಮತದಾರ ಮತ್ತು ಆಧಾರ್ ಕಾರ್ಡಿನಲ್ಲಿ ನೆಗೆಟಿವ್ ಪಟ್ಟಿಯಲ್ಲಿ ಸೇರಿಸುವ ಕಾರ್ಯ ನಡೆಯುತ್ತಿದೆ.
- ಗಲಭೆ ನಡೆದ ದಿನದಿಂದಲೇ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರು ಮಣಿಪುರದ ಬಗ್ಗೆ ಅನೇಕ ಸಭೆಗಳನ್ನು ನಡೆಸಿದ್ದಾರೆ. ಸ್ವತಃ ಅಮಿತ್ ಶಾ ಮಣಿಪುರದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಅಷ್ಟೇ ಅಲ್ಲ ಹದಿನೇಳು ಬಾರಿ ವಿಡಿಯೋ ಕಾನ್ಫರೆನ್ಸ್ ಕೂಡ ನಡೆಸಿದ್ದಾರೆ. ಕೇಂದ್ರಸರ್ಕಾರದಿಂದ ಗೃಹಮಂತ್ರಿಯೊಬ್ಬರು ಗಲಭೆಯ ಸಂದರ್ಭದಲ್ಲಿ ಸ್ವತಃ ತೆರಳಿದ್ದು ಇದೇ ಮೊದಲ ಬಾರಿ. ಈವರೆಗಿನ ಯಾವುದೇ ದಂಗೆಯ ಸಂದರ್ಭದಲ್ಲಿ ಕೇಂದ್ರದಿಂದ ಯಾವುದೇ ಮಂತ್ರಿಯೂ ತೆರಳಿರಲಿಲ್ಲ.
- ಘಟನೆ ನಡೆದ ತಕ್ಷಣ ೩೬,೦೦೦ ರಕ್ಷಣಾ ಸೈನಿಕರನ್ನು ಮಣಿಪುರಕ್ಕೆ ಕಳಿಸಲಾಗಿದೆ. ವಾಯುಸೈನ್ಯದ ವಿಮಾನಗಳ ಮೂಲಕ ಅತ್ಯಂತ ಕ್ಷಿಪ್ರವಾಗಿ ಸಿಆರ್ಪಿಎಫ್ ಪಡೆಗಳನ್ನು ಕಳುಹಿಸಲಾಗಿದೆ.
- ದಂಗೆ ನಡೆದ ಕೆಲವೇ ತಾಸುಗಳಲ್ಲಿ ಮುಖ್ಯಕಾರ್ಯದರ್ಶಿಯನ್ನು ಬದಲಿಸಲಾಯಿತು. ಡಿಜಿಪಿಯನ್ನು ಬದಲಿಸಲಾಯಿತು. ಮುಖ್ಯಕಾರ್ಯದರ್ಶಿಯನ್ನೂ, ಡಿಜಿಪಿಯನ್ನೂ ಕೇಂದ್ರಸರ್ಕಾರವೇ ಕಳುಹಿಸಿಕೊಟ್ಟಿತು. ಇವೆಲ್ಲವನ್ನೂ ಕೂಡ ಘಟನೆ ನಡೆದ ಎರಡು ದಿನದೊಳಗೇ ಮಾಡಲಾಗಿದೆ.
- ಈ ಹಿಂದಿನ ಘಟನೆಗಳಲ್ಲಿ ಯುಪಿಎ ಸರ್ಕಾರವಿದ್ದಾಗ ವರ್ಷಗಟ್ಟಲೆ ಬ್ಲಾಕೇಡ್ಗಳು ನಡೆಯುತ್ತಿದ್ದವು. ಪೆಟ್ರೋಲ್ ದರ ಸಾವಿರ ರೂಪಾಯಿಗೆ ತಲಪುತ್ತಿತ್ತು. ಆದರೆ ಈ ಸಲ ಕೇಂದ್ರಸರ್ಕಾರವು ಕೇವಲ ಇಪ್ಪತ್ತು ದಿನಗಳಲ್ಲಿ ಮತ್ತೆ ಮೊದಲಿನಂತೆ ಆಹಾರಸಾಮಗ್ರಿಗಳನ್ನು ಪೂರೈಸುವ ಕೆಲಸ ಮಾಡಿದೆ. ಸಂಘರ್ಷದ ಕಾರಣಕ್ಕಾಗಿ ಎಲ್ಲಿಯೂ ಯಾವುದಕ್ಕೂ ಅಭಾವವಾಗದಂತೆ ನೋಡಿಕೊಂಡಿದೆ. ಅಬಾಧಿತವಾಗಿ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ನಡೆಯುವಂತೆ ಮುತುವರ್ಜಿ ವಹಿಸಿದೆ.
- ಪ್ರಸ್ತುತ ಗಲಭೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೧೫೨. ಇದರಲ್ಲಿ ಮೇ ತಿಂಗಳಿನಲ್ಲಿ ಒಟ್ಟು ೧೦೭ ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ ಮೇ ೩ರಿಂದ ೫ರವರೆಗೆ ೭೭ ಜನ ಸಾವನ್ನಪ್ಪಿದ್ದಾರೆ. ಅಂದರೆ ಮುಂದೆ ಸಾವನ್ನಪ್ಪಿದವರ ಸಂಖ್ಯೆ ಗಣನೀಯವಾಗಿ ಕಡಮೆಯಾಗುತ್ತ ಸಾಗಿದೆ. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕಾಲಿಕ ಕಾರ್ಯಾಚರಣೆಯೇ ಕಾರಣವಾಗಿದೆ.
- ಎಂ.ಓ.ಎಸ್. (ಕೇಂದ್ರ ಗೃಹಸಚಿವಾಲಯದ ರಾಜ್ಯಮಂತ್ರಿ) ನಿತ್ಯಾನಂದ ಅವರು ಮೂವತ್ತಮೂರು ದಿನಗಳ ಕಾಲ ಮಣಿಪುರದಲ್ಲಿಯೇ ಇದ್ದು ಸುರಕ್ಷಾಕ್ರಮಗಳನ್ನು ಅತ್ಯಂತ ಸಮೀಪದಿಂದ ನೋಡಿಕೊಂಡಿದ್ದಾರೆ.
- ಮಣಿಪುರದ ಗಲಭೆಯ ತನಿಖೆಗಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ.
- ಇಂದಿಗೂ ಕುಕಿ ಮತ್ತು ಮೈತೇಯಿ ವಾಸ್ತವ್ಯದ ಪ್ರದೇಶದ ಮಧ್ಯೆ ಮೂವತ್ತಾರು ಸಾವಿರ ಯೋಧರು ತಡೆಗೋಡೆಯಾಗಿ ಹಗಲು ರಾತ್ರಿ ನಿಂತಿದ್ದಾರೆ. ಹೀಗಾಗಿ ಹಿಂಸೆಯು ನಿಯಂತ್ರಣದಲ್ಲಿದೆ.
- ಸುರಕ್ಷತಾ ದೃಷ್ಟಿಯಿಂದ ಸೇನಾಪಡೆಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಳ್ಳಲು ಯೂನಿಫೈಡ್ ಕಮಾಂಡ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಏಕೆಂದರೆ ಅಲ್ಲಿ ಬಿ.ಎಸ್.ಎಫ್., ಸಿ.ಆರ್.ಪಿ.ಎಫ್., ಅಸ್ಸಾಂ ರೈಫಲ್ಸ್, ಸೇನೆ ಹಾಗೂ ಮಣಿಪುರ ಪೊಲೀಸ್ ಸೇರಿ ಒಟ್ಟು ಐದು ರೀತಿಯ ವಿವಿಧ ಸುರಕ್ಷಾದಳಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಡುವೆ ಸಮನ್ವಯವನ್ನು ಸಾಧಿಸಲು ಸುರಕ್ಷಾ ಸಲಹೆಗಾರರಿಗೆ ಅಧಿಕಾರವನ್ನು ನೀಡಲಾಗಿದೆ.
- ನಿರಾಶ್ರಿತರಿಗೆ ಪುನರ್ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೂವತ್ತು ಸಾವಿರ ಮೆಟ್ರಿಕ್ ಟನ್ಗಳಷ್ಟು ಅಕ್ಕಿಯನ್ನು ರಾತ್ರೋರಾತ್ರಿ ಕಳುಹಿಸಿಕೊಡಲಾಗಿದೆ.
- ನಿರಾಶ್ರಿತರ ಕ್ಯಾಂಪ್ಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಾಗದಂತೆ ಕೇಂದ್ರಸರ್ಕಾರದಿಂದ ಎಂಟು ತಂಡಗಳನ್ನು ಕಳುಹಿಸಿಕೊಡಲಾಗಿದೆ.
- ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣದ ವ್ಯವಸ್ಥೆಯು ಪ್ರಾರಂಭವಾಗಿದೆ.
ಹೀಗೆ ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡೂ ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸುವ ಸಲುವಾಗಿ ಅಹರ್ನಿಶಿ ಪ್ರಯತ್ನದಲ್ಲಿ ತೊಡಗಿವೆ. ವಸ್ತುತಃ ಮಾಧ್ಯಮಗಳಲ್ಲಿ ಈ ಯಾವ ಕಾರ್ಯವನ್ನೂ ತೋರಿಸಲಾಗುತ್ತಿಲ್ಲ. ಪ್ರತಿಪಕ್ಷಗಳೂ ಕೂಡ ಇನ್ನಷ್ಟು ಗಲಭೆಯನ್ನು ಪ್ರಚೋದಿಸುತ್ತಿವೆ. ಮಣಿಪುರದ ಬಗ್ಗೆ ಕೇಂದ್ರಸರ್ಕಾರವು ಮೌನವಾಗಿದೆ ಎಂಬುದಾಗಿ ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಲೋಕಸಭೆಯಲ್ಲಿ ಸ್ವತಃ ಗೃಹಮಂತ್ರಿಗಳು ಮಣಿಪುರದ ಬಗ್ಗೆ ಎಲ್ಲ ವಿವರಗಳನ್ನೂ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಸ್ವತಃ ಪ್ರಧಾನಿಗಳು ಲೋಕಸಭೆಯಲ್ಲಿ ಮಣಿಪುರದಲ್ಲಿ ಶಾಂತಿಸ್ಥಾಪನೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಚರ್ಚೆಯಲ್ಲಿ ಭಾಗವಹಿಸಬೇಕಿದ್ದ ವಿಪಕ್ಷಗಳು ಬಾಲಿಶವಾಗಿ ಸಭಾತ್ಯಾಗ ಮಾಡಿ ಹೊರನಡೆದಿದ್ದಾರೆ. ಅಧಿವೇಶನದಲ್ಲಿ ಚರ್ಚೆಯಲ್ಲಿ ಭಾಗವಹಿಸದ ವಿಪಕ್ಷಗಳು ಹೊರಗಡೆ ಪತ್ರಿಕಾಗೋಷ್ಠಿಗಳಲ್ಲಿ ಕುಳಿತು ಮಣಿಪುರದಲ್ಲಿ ಭಾರತಮಾತೆಯ ಹತ್ಯೆ ನಡೆದಿದೆ ಎಂದೆಲ್ಲ ಹೇಳುತ್ತ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಲು ಹೊರಟಿದ್ದಾರೆ.
ಭಾರತದಂಥ ದೇಶದಲ್ಲಿ ಪ್ರತಿ ಹತ್ತು ಕಿ.ಮೀ.ಗೆ ಭಾಷೆ, ಸಂಸ್ಕೃತಿಗಳು ಬದಲಾಗುವುದರಿಂದ ಯಾವುದೇ ವಿಚಾರಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡುವುದು ಸುಲಭ. ಏಕೆಂದರೆ ಹೊರಜಗತ್ತಿನವರಿಗೆ ಇದು ಯಾವತ್ತೂ ಅರ್ಥವಾಗದ ಸಂಗತಿ. ಮಣಿಪುರದ ವಿಷಯ ಅದೆಷ್ಟು ಗಂಭೀರವಾಗಿರುವಂಥದ್ದು ಎಂದರೆ ಯಾರಿಂದಲೂ ತತ್ಕ್ಷಣದಲ್ಲಿ ದೀರ್ಘಕಾಲಿಕವಾದ ಪರಿಹಾರವನ್ನು ಹೇಳಲು ಸಾಧ್ಯವೇ ಇಲ್ಲದಂಥದ್ದು. ಇದು ಎಲ್ಲರ ದೃಷ್ಟಿಯಿಂದಲೂ ಅಸ್ತಿತ್ವದ ಪ್ರಶ್ನೆ. ತಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿಯ ಉಳಿವಿನ ಪ್ರಶ್ನೆ. ಯಾರ ಆತಂಕವನ್ನೂ ನಿರಾಕರಿಸಲು ಸಾಧ್ಯವಿಲ್ಲ. ಹೀಗಿರುವಾಗ ಯಾವುದೋ ಕೆಟ್ಟ ಘಳಿಗೆಯಲ್ಲಿ ಮೂಡಿದ ಅವಿಶ್ವಾಸವನ್ನು ಹೋಗಲಾಡಿಸಲು ಬಹಳ ಕಾಲ ಬೇಕಾಗುತ್ತದೆ. ಯಾವುದೋ ಒಂದನ್ನು ಪರಿಹಾರವೆಂದು ಭಾವಿಸಿ ಯಾವುದೇ ಹೆಜ್ಜೆ ಇಟ್ಟರೂ ಅದರಿಂದ ಇನ್ನೊಂದಷ್ಟು ಪರಿಸ್ಥಿತಿ ಬಿಗಡಾಯಿಸುವ ಸಂದರ್ಭ ಇರುತ್ತದೆ. ಉದಾಹರಣೆಗೆ, ಅರಣ್ಯನಾಶ ಮತ್ತು ಮಾದಕಬೆಳೆಗಳ ಉತ್ಪನ್ನವನ್ನು ಕಡಮೆ ಮಾಡಲು ಹೊರಟ ಮಣಿಪುರದ ಮುಖ್ಯಮಂತ್ರಿಯನ್ನೇ ಈ ಘಟನೆಗೆ ಕಾರಣವನ್ನಾಗಿ ಬಿಂಬಿಸಲಾಗುತ್ತಿದೆ. ಹಾಗಿದ್ದರೆ ಅವರು ಮಾಡಿದ್ದು ತಪ್ಪೇ?
ಅಕ್ರಮ ವಲಸಿಗರಿಂದಾಗಿ ಮೈತೇಯಿ ಜನಾಂಗ ತನ್ನ ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಹಾಗಾಗಿ ದಶಕಗಳಿಂದ ಎಸ್.ಟಿ. ವರ್ಗದ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದೆ. ಇದು ತಪ್ಪೇ? ಇತ್ತ ಮೈತೇಯಿಯವರಿಗೆ ಸ್ಥಾನ ಕೊಡುವುದರಿಂದ ಕುಕಿ ಜನಾಂಗದವರ ಹಕ್ಕುಗಳ ನಾಶವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಪರ್ವತಪ್ರದೇಶದಲ್ಲಿನ ಅಕ್ರಮ ವಲಸಿಗರನ್ನು ತಡೆದರೂ ಅದನ್ನು ತಮ್ಮ ಜನಾಂಗದ ವಿರುದ್ಧದ ಕ್ರಮವೆಂದು ಅವರು ಭಾವಿಸುತ್ತಾರೆ. ಇಂಥ ವಾತಾವರಣದಲ್ಲಿ ಒಮ್ಮೆಲೇ ಏನು ಮಾಡಲು ಸಾಧ್ಯ? ನಿಧಾನವಾಗಿ ಎಲ್ಲ ಜನಸಮುದಾಯಗಳ ವಿಶ್ವಾಸವನ್ನು ಗಳಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಅದಕ್ಕೆ ಕಾಲ ಬೇಕಾಗುತ್ತದೆ. ಎಷ್ಟೋ ವರ್ಷಗಳಿಂದ ಬಂದಿರುವ ಸಮಸ್ಯೆಗಳಿಗೆ ಯಾವುದೋ ಒಂದು ಅವಧಿಯ ಸರ್ಕಾರವನ್ನು ಹೊಣೆ ಮಾಡಿಬಿಡುವುದು ಜನರನ್ನು ಮೋಸ ಮಾಡುವ ಒಂದು ತಂತ್ರವಷ್ಟೇ. ವಸ್ತುತಃ ಅವರಿಗೆ ಸಮಸ್ಯೆಯೇ ಗೊತ್ತಿರುವುದಿಲ್ಲ ಮತ್ತು ಅದರ ಪರಿಹಾರವೇ ಬೇಕಿಲ್ಲ ಎಂದು ಅನಿಸುತ್ತದೆ.
ಈಶಾನ್ಯರಾಜ್ಯಗಳಲ್ಲಿ ಪ್ರತ್ಯೇಕ ದೇಶದ ಬೇಡಿಕೆಯನ್ನು ಇಡುವ ಗುಂಪುಗಳು ಎಲ್ಲ ಎಂಟೂ ರಾಜ್ಯಗಳಲ್ಲಿವೆ. ಅವರೆಲ್ಲ ಹೆಚ್ಚಾಗಿ ಮತಾಂತರ ಹೊಂದಿದ ಬುಡಕಟ್ಟು ಜನಾಂಗದವರೇ ಆಗಿರುತ್ತಾರೆ. ಇದು ಏಕೆ ಎಂಬುದನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ಹೆಚ್ಚು ಹೆಚ್ಚು ಮತಾಂತರ ಚಟುವಟಿಕೆ ನಡೆದಷ್ಟೂ ದೇಶವಿರೋಧಿ ಚಟುವಟಿಕೆಗಳು ಹೆಚ್ಚಿರುವುದನ್ನು ನಾವು ಈಶಾನ್ಯರಾಜ್ಯಗಳಲ್ಲಿ ವಿಶೇಷವಾಗಿ ಕಾಣಬಹುದು. ಹಾಗಾಗಿ ಮಣಿಪುರದ ಸಮಸ್ಯೆಗೂ ಅಲ್ಲಿನ ಕುಕಿಗಳ ಮತಾಂತರ ಹಾಗೂ ಮಯನ್ಮಾರ್ ದೇಶದ ಕುಕಿಗಳ ಅಕ್ರಮ ಪ್ರವೇಶ – ಇವು ಮುಖ್ಯ ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕೆ ಪರಿಹಾರವನ್ನೂ ಹುಡುಕಬೇಕಿದೆ. ದೇಶವೇ ಒಂದಾಗಿ ಈ ಬಗ್ಗೆ ಯೋಚಿಸಬೇಕಾದ ಸಮಯವಿದು.
ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಪ್ರಧಾನಿ ಹಾಗೂ ಗೃಹಮಂತ್ರಿಗಳಿಬ್ಬರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದು ನಿಜವಾಗಲಿ ಮತ್ತು ಭಾರತಮಾತೆಯ ಕಿವಿಯೋಲೆಯಂತಿರುವ ಮಣಿಪುರ ಮತ್ತೆ ಮೊದಲಿನಂತಾಗಲಿ ಎಂದು ಪ್ರಾರ್ಥಿಸೋಣ.