ರಾಜನು ಪಲ್ಲಕ್ಕಿಯಿಂದ ಹೊರಬಿದ್ದ. ಅವನ ಶರೀರವೆಲ್ಲ ನೀಳವಾಗಿ ಚಲನಹೀನವಾಗಿಬಿಟ್ಟಿತ್ತು.
ಈತನಿಗೆ ಧರ್ಮ ಬಿಟ್ಟು ಣರೇನೂ ಕಾಣಿಸುವುದಿಲ್ಲವೆ? – ಎಂದುಕೊಂಡ. ಪಂಡಿತನ ಆಲೋಚನಾಲಹರಿಯನ್ನು ಊಹಿಸಿದ ವಿಶ್ವನಾಥಭಟ್ಟ ಧರ್ಮೋ ರಕ್ಷತಿ ರಕ್ಷಿತಃ. ಒಬ್ಬ ಮಹಾರಾಜ ಹೋದರೆ ಇನ್ನೊಬ್ಬ ಮಹಾರಾಜ ಬರುತ್ತಾನೆ. ಆದರೆ ದೈವಕ್ಕಿಂತ ಮಿಗಿಲಾದುದು ಧರ್ಮ ಎಂದ.
ದಾಮೋದರ ಮಹಾರಾಜನಿಗೆ ವಿಪ್ರೋತ್ತಮರು ಶಾಪ ಕೊಟ್ಟಿದ್ದಾರಂತೆ.
ಈ ಸುದ್ದಿ ಕಾಳ್ಗಿಚ್ಚಿನಂತೆ ಕಶ್ಮೀರದಾದ್ಯಂತ ಹರಡಲು ತಡವಾಗಲಿಲ್ಲ. ಪ್ರಜೆಗಳೆಲ್ಲ ಸಹಜವಾಗಿ ವಿಚಲಿತರಾದರು.
ರಾಜನು ಏನಾದರೂ ಅಪರಾಧವೆಸಗಿದರ ಅದರ ಪರಿಣಾಮವನ್ನು ಪ್ರಜೆಗಳು ಅನುಭವಿಸುತ್ತಾರೆ. ಹಾಗೆಯೇ ಪ್ರಜೆಗಳಾರಾದರೂ ಪಾಪಕಾರ್ಯ ಮಾಡಿದಲ್ಲಿ ಅದರ ಬಾಧೆಯನ್ನು ರಾಜನು ಅನುಭವಿಸಬೇಕಾಗುತ್ತದೆ. ಯಾರು ಪಾಪವನ್ನು ಮಾಡಿದ್ದಾರೆಯೋ – ಅಂತೂ ಈಗ ಬ್ರಾಹ್ಮಣಶಾಪ ರಾಜನಿಗೆ ತಗುಲಿದೆ.
ಹೀಗೆಲ್ಲ ದುಃಖತಪ್ತ ಜನರು ಮಾತನಾಡಿಕೊಳ್ಳತೊಡಗಿದರು.
ಪರಮದೈವಭಕ್ತನಾದ ದಾಮೋದರ ಮಹಾರಾಜನಿಗೆ ಅದು ಹೇಗೆ ವಿಪ್ರಶಾಪ ಎರಗಿದೆ? – ಎಲ್ಲರಲ್ಲಿಯೂ ಎದ್ದಿದ್ದುದು ಇದೇ ಪ್ರಶ್ನೆ.
ದಾಮೋದರನು ಸಾಮಾನ್ಯನಲ್ಲ. ಜಲೌಕ ಮಹಾರಾಜನ ತರುವಾಯ ಇಷ್ಟು ಸಮರ್ಥವಾಗಿ ಕಶ್ಮೀರವನ್ನು ಪಾಲನೆ ಮಾಡುತ್ತಿರುವ ರಾಜ ಈತನೇ.
ಬ್ರಾಹ್ಮಣಶಾಪವು ದಾಮೋದರನ ಮೇಲೆ ನಡೆಯಲಾರದು. ಈತ ಪೂರ್ಣವಾಗಿ ಶಿವಾನುಗ್ರಹಕ್ಕೆ ಪಾತ್ರನಾದವನು. ಶಿವನ ಅನುಜ್ಞೆ ಇಲ್ಲದೆ ಜಗತ್ತಿನಲ್ಲಿ ಒಂದು ಇರುವೆಯೂ ಚಲಿಸಲಾರದು. ಹೀಗಿರುವಾಗ ತನ್ನ ಭಕ್ತನಿಗೆ ಬಾಧೆಯುಂಟಾಗುವುದನ್ನು ಶಿವನು ಸಹಿಸಿಯಾನೆ?
ಕಶ್ಮೀರಪ್ರಜೆಗಳ ದುರ್ವಿಧಿ ಹೀಗಿದ್ದರೆ ಯಾರು ಏನು ಮಾಡಲಾಗುತ್ತದೆ!
ದಾಮೋದರ ಮಹಾರಾಜನು ಕುಬೇರನಿಗೆ ಪರಮಮಿತ್ರ. ಯಕ್ಷಲೋಕಕ್ಕೆ ಆಪ್ತ. ಇಲ್ಲದಿದ್ದಲ್ಲಿ ಇಷ್ಟು ಅದ್ಭುತವಾದ ಸೇತುವೆಯನ್ನು ನಿರ್ಮಿಸಿರುವುದು ಮನುಷ್ಯಮಾತ್ರನಿಗೆ ಸಾಧ್ಯವಾಗುತ್ತಿತ್ತೆ? ಇಂತಹ ಧೀರ ವ್ಯಕ್ತಿ ಮನುಷ್ಯರ ಶಾಪಕ್ಕೆ ಹೆದರುತ್ತಾನೆಯೆ?
ಸತ್ಕಾರ್ಯನಿರತ ರಾಜನಿಗೆ ಯಾವುದೇ ಆಪತ್ತು ಬರುವುದು ಸಾಧ್ಯವಿಲ್ಲ.
ದಾಮೋದರ ಮಹಾರಾಜನು ಸಂಕಲ್ಪಿಸಿರುವ ಸೇತುವೆ ಜಗತ್ತಿನಲ್ಲಿಯೆ ದೊಡ್ಡ ವಿಸ್ಮಯವೆನಿಸುತ್ತದೆ. ಇಂತಹ ಮಹಾನ್ ಸಾಧಕನಿಗೆ ದೈವವು ತೊಂದರೆ ಮಾಡಲಾರದು.
ಜಲಪ್ರವಾಹಗಳಿಂದಾಗಿ ದುರ್ಘಟನೆಗಳು ಸಂಭವಿಸದಿರುವಂತೆ ಮಹಾರಾಜನು ಯಕ್ಷರ ಸಹಾಯದಿಂದ ಇನ್ನೂ ಅನೇಕ ಸೇತುವೆಗಳನ್ನು ನಿರ್ಮಿಸಲು ಯೋಚಿಸಿದ್ದಾನಂತೆ. ಇಂತಹ ಪ್ರಜಾವತ್ಸಲ ರಾಜನಿಗೆ ಯಾವ ಕೇಡೂ ತಾಗದು.
ಹಾಗಾದರೆ ವಿಪ್ರಶಾಪದ ಕಥೆ ಏನಾದೀತು?
ಏನೂ ಆಗದು. ಶಾಪ ನೀಡಿದ ವಿಪ್ರರೇ ಅದನ್ನು ಉಪಸಂಹಾರ ಮಾಡಿಬಿಡುತ್ತಾರೆ. ಆದರೆ ಮಹಾರಾಜನೇನಾದರೂ ಕ್ರೋಧಗೊಂಡರೆ ಅದನ್ನು ಯಾರೂ ಉಪಶಮನ ಮಾಡಲಾರರು.
ಹೀಗೆ ಬಗೆಬಗೆಯ ಚರ್ಚೆಗಳೂ ವಾದೋಪವಾದಗಳೂ ಕಶ್ಮೀರದಲ್ಲೆಲ್ಲ ತುಂಬಿಹೋಗಿದ್ದವು. ಜನರು ತಮ್ಮ ಕೆಲಸಗಳನ್ನೆಲ್ಲ ಬದಿಗಿಟ್ಟು ಗುಂಪುಗುಂಪುಗಳಾಗಿ ಈ ವಿಷಯದ ಚರ್ಚೆಯಲ್ಲಿ ಮುಳುಗಿಹೋಗಿದ್ದರು. ಇಷ್ಟಾಗಿ ಆ ವಿಪ್ರರು ಏನು ಶಾಪ ಕೊಟ್ಟಿದ್ದರೋ, ಏಕೆ ಕೊಟ್ಟಿದ್ದರೋ ಯಾರಿಗೂ ಸ್ಪಷ್ಟವಾಗಿ ತಿಳಿದಂತಿರಲಿಲ್ಲ.
ರಾತ್ರಿಯೊಳಗಾಗಿ ರಕ್ತಕಾರಿಕೊಂಡು ಸಾಯಲಿ ಎಂದು ಶಾಪ ಕೊಟ್ಟಿದ್ದಾರಂತೆ – ಹೀಗೆಲ್ಲ ಜನಜನಿತ ಮಾತುಗಳು. ಯಾರಿಗೂ ಖಚಿತವಾಗಿ ಏನೂ ತಿಳಿದುಬಂದಿರಲಿಲ್ಲ.
ಸಾಮಾನ್ಯವಾಗಿ ಪ್ರಜೆಗಳಿಗೆ ಸುದ್ದಿ ತಿಳಿಸುವ ದೂತರು ರಾಜಧಾನಿಯಿಂದ ಹೊರಕ್ಕೆ ಬಂದಿರಲಿಲ್ಲ. ಹೀಗಾಗಿ ಬುಡವಿಲ್ಲದ ವದಂತಿಗಳು ಯಥೇಷ್ಟ ಹರಡಿದ್ದವು. ಏನು ನಡೆಯಲಿದೆಯೋ ಎಂದು ಪ್ರಜೆಗಳೆಲ್ಲ ಆತಂಕಗೊಂಡಿದ್ದರು.
ಯಥಾರ್ಥವನ್ನು ಅರಿತಿದ್ದ ದಾಮೋದರ ಮಹಾರಾಜನು ತುಟಿ ಎರಡು ಮಾಡಿರಲಿಲ್ಲ. ಅವನ ವಿಶ್ವಾಸಪಾತ್ರರೆಲ್ಲ ಅರಮನೆಯಲ್ಲಿ ಸಮಾವೇಶಗೊಂಡಿದ್ದರು.
ಕಳವಳ ತುಂಬಿದ ಧ್ವನಿಯಲ್ಲಿ ಮಹಾಮಂತ್ರಿ ಕೇಳಿದ – ವಾಸ್ತವವಾಗಿ ಏನು ನಡೆದಿದೆ ಮಹಾರಾಜರೆ? ತಮಗೆ ವಿಪ್ರಶಾಪ ತಗುಲಿದೆಯೆಂದು ರಾಜ್ಯದಲ್ಲೆಲ್ಲ ಮೈಯಲ್ಲಿ ವಿಷ ಹರಡಿದಂತೆ ಹರಡಿಬಿಟ್ಟಿದೆ. ಆದರೆ ಏನು ನಡೆದಿದೆ ಎಂಬುದು ಯಾರಿಗೂ ಗೊತ್ತಾಗಿಲ್ಲ.
ಸೇನಾಪತಿ ಕೋಪದ ಧ್ವನಿಯಲ್ಲಿ ಕೇಳಿದ – ಆ ವಿಪ್ರರದು ಅದೇನು ಸಾಹಸ? ಶೌರ್ಯದಲ್ಲಿ ಇಂದ್ರನಿಗೂ ಐಶ್ವರ್ಯದಲ್ಲಿ ಕುಬೇರನಿಗೂ ಸಮಾನನಾದ ಮತ್ತು ದಾನಿಗಳಲ್ಲಿ ಹೋಲಿಕೆಯೇ ಇಲ್ಲದ ತಮ್ಮನ್ನು ಶಪಿಸುವ ಸಂದರ್ಭ ಹೇಗೆ ಉಂಟಾಯಿತು?
ಸೇನಾಪತಿಯ ಉದ್ರೇಕದ ಮಾತುಗಳು ಮಹಾಮಂತ್ರಿಗೆ ಹಿಡಿಸಲಿಲ್ಲ. ಆತ ಹೇಳಿದ:
ಆವೇಶ ತಕ್ಕದ್ದಲ್ಲ, ಸೇನಾಪತಿಗಳೇ! ಈ ಸೃಷ್ಟಿಯಲ್ಲಿ ಕಾರಣವಿಲ್ಲದೆ ಕಾರ್ಯ ಇರುವುದಿಲ್ಲ. ಬ್ರಾಹ್ಮಣರು ಶಾಪ ನೀಡಿದ್ದಾರೆಂದರೆ ಯಾವುದೋ ಪ್ರಬಲವಾದ ಕಾರಣವೇ ಇರುತ್ತದೆ. ಇಷ್ಟಕ್ಕೂ ಆ ಬ್ರಾಹ್ಮಣರು ತಮಗೆ ಪರಿಚಿತರೇ, ಮಹಾರಾಜರೆ?
ಮಹಾರಾಜನು ಮಂತ್ರಿಯತ್ತ ನೋಟಬೀರಿ ಹೇಳಿದ – ತಿಳಿದಿದೆ. ಆ ಬ್ರಾಹ್ಮಣರ ಪೈಕಿ ವಿಶ್ವನಾಥಭಟ್ಟನೂ ಇದ್ದಾನೆ.
ಆ ಮಾತು ಕೇಳಿ ಮಂತ್ರಿ ಚೇಳು ಕುಟುಕಿದಂತೆ ಹೌಹಾರಿದ. ಅವನನ್ನು ಅವಮಾನಿಸಿ ಕೆಣಕುವಂತಹ ಕಾರ್ಯ ಏನು ನಡೆದಿದೆ ಪ್ರಭುಗಳೆ? ವಿಶ್ವನಾಥಭಟ್ಟನು ಹೆಡೆಯೆತ್ತಿದ ವಿಷಸರ್ಪದಂತೆ ಎಂಬುದು ತಿಳಿದಿರುವ ಸಂಗತಿಯೇ. ಅಂತಹವನೊಡನೆ ಚೆಲ್ಲಾಟ ನಡೆಯಿತೆ?
ಓಹೋ! ಶಾಪವನ್ನಿತ್ತ ಬ್ರಾಹ್ಮಣರಲ್ಲಿ
ವಿಶ್ವನಾಥಭಟ್ಟನೂ ಇದ್ದಾನೆಯೋ! ಎಂದು ಉದ್ಗಾರ ಮಾಡಿದ, ಆಸ್ಥಾನ ವಿದ್ವಾಂಸನೂ ಜೌತಿಷ್ಯಶಾಸ್ತ್ರಜ್ಞನೂ ಆದ ಸರ್ವೋತ್ತಮಪಂಡಿತ.
ಅವನತ್ತ ಮಹಾರಾಜನು ನೀರಸವಾಗಿ ನೋಡಿ ಹೇಳಿದ – ವಿಶ್ವನಾಥಭಟ್ಟನೆಂದರೆ ನೀವೆಲ್ಲ ಏಕೆ ಭಯಪಡುತ್ತಿದ್ದೀರಿ? ನಿಮ್ಮ ಭಯಕ್ಕೆ ಕಾರಣವಿಲ್ಲ. ಕಾರಣವಿಲ್ಲದೆ ಕೋಪಕ್ಕೆ ಒಳಗಾಗುವವನು ಬ್ರಾಹ್ಮಣನಾದರೂ ಒಂದೇ, ಅನ್ಯನಾದರೂ ಒಂದೇ. ಬ್ರಾಹ್ಮಣ್ಯವೆಂಬುದು ವರ್ತನೆಯಿಂದ ಸಿದ್ಧಿಸುತ್ತದೆಯೇ ಹೊರತು ಕೇವಲ ಹುಟ್ಟಿನಿಂದ ಅಲ್ಲ. ಒಂದೆರಡು ಕ್ಷಣ ಮೌನವಾಗಿದ್ದು ಮುಗುಳ್ನಕ್ಕು ಮುಂದುವರಿಸಿದ – ಆ ಘಳಿಗೆಯಲ್ಲಿಯೆ ಅವರನ್ನು ನನ್ನ ಕತ್ತಿಯಿಂದ ಆಹುತಿ ತೆಗೆದುಕೊಳ್ಳದೆ ಬ್ರಾಹ್ಮಣರೆಂಬ ದಾಕ್ಷಿಣ್ಯದಿಂದ ಅಲಕ್ಷಿಸಿದುದಕ್ಕೆ ಈಗ ಬಾಧೆಪಡುತ್ತಿದ್ದೇನೆ.
ಸರ್ವೋತ್ತಮಪಂಡಿತ ಹೇಳಿದ: ಮಹಾರಾಜರೆ! ಹುಟ್ಟಿನ ಕಾರಣದಿಂದಷ್ಟೆ ನಿಜವಾದ ಬ್ರಾಹ್ಮಣತ್ವ ಸಿದ್ಧಿಸುವುದಿಲ್ಲ ಎಂಬುದು ನಿಜವೇ. ಆದರೆ ವಿಶ್ವನಾಥ ಭಟ್ಟನು ಉಗ್ರತಪಸ್ವಿಯೂ ಆಗಿದ್ದಾನೆ. ತಪಸ್ವಿಗಳಾದ
ಬ್ರಾಹ್ಮಣರ ಮಹಿಮೆ ವಿಶೇಷವಾದದ್ದು, ಊಹೆಗೆ ಎಟುಕದುದು. ಅಂತಹವರು ಬಯಸಿದರೆ ತಾವು ಇಷ್ಟುಕಾಲ ಗಳಿಸಿರುವ ಪ್ರತಿಷ್ಠೆಯನ್ನೆಲ್ಲ ಕ್ಷಣದಲ್ಲಿ ನಿಃಸತ್ವಗೊಳಿಸಬಲ್ಲರು; ಭೂಕಂಪಗ್ರಸ್ತ ಭೂಮಿಯನ್ನು ಅರಳಿಸಬಲ್ಲರು; ಶತ್ರುಗಳಿಂದ ನಾಶಗೊಂಡ ಮಂದಿರಗಳನ್ನು ಮತ್ತೆ ಉಜ್ಜೀವಿಸಬಲ್ಲರು. ದಾಯಾದಿಗಳನ್ನು ಎದುರುಹಾಕಿಕೊಂಡರೆ ಅನಂತರ ಚೇತರಿಸಿಕೊಳ್ಳಬಹುದು; ಆದರೆ ಬ್ರಾಹ್ಮಣರನ್ನು ಅವಮಾನಿಸುವವರ ಇಡೀ ವಂಶವೇ ಅವನತಿ ಹೊಂದುತ್ತದೆ.
ದಾಮೋದರ ಮಹಾರಾಜನು ನಕ್ಕು ಹೇಳಿದ:
ನಿಜವಾಗಿ ನಡೆದುದು ಏನೆಂದು ತಿಳಿದಲ್ಲಿ ಸರ್ವೋತ್ತಮ ಪಂಡಿತರು ಹೀಗೆ ಮಾತಾಡಲಾರರು.
ಇಷ್ಟಕ್ಕೂ ನಡೆದದ್ದು ಏನು, ಪ್ರಭುಗಳೆ?
ದಾಮೋದರ ಮಹಾರಾಜನು ನಿಟ್ಟುಸಿರಿಟ್ಟು ಹೇಳಿದ:
ಶ್ರಾದ್ಧದ ಆಚರಣೆಗಾಗಿ ವಿತಸ್ತಾನದಿಯ ಕಡೆಗೆ ಹೋಗಲು ಸಿದ್ಧರಾಗುತ್ತಿರುವಾಗ ಕೆಲವರು ಬ್ರಾಹ್ಮಣರು ಮುಂಚೆಯೇ ತಮಗೆ ಭೋಜನ ನೀಡಬೇಕೆಂದು ಕೋರಿದರು.
ಮಂತ್ರಿಯೂ ಸೇನಾಪತಿಯೂ ಆಶ್ಚರ್ಯಗೊಂಡರು. ಸರ್ವೋತ್ತಮಪಂಡಿತನು ಕುತೂಹಲದಿಂದ ಮಹಾರಾಜನೆಡೆಗೆ ನೋಡಿದ.
ಸ್ನಾನಕ್ಕೆ ಮೊದಲೇ ಭೋಜನವೆ? ಇದೆಂತಹ
ಅರ್ಥವಿಲ್ಲದ ಕೋರಿಕೆ ಎಂದ, ಸೇನಾಪತಿ.
ನಾನೂ ಹಾಗೆಯೇ ಹೇಳಿದೆ. ಆದಷ್ಟು ಶೀಘ್ರದಲ್ಲಿ, ವಿಳಂಬ ಮಾಡದೆ, ಸ್ನಾನ ಮುಗಿಸಿ ಬರುತ್ತೇನೆಂದು ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ಸ್ನಾನಕ್ಕೆ ಮೊದಲೇ ಭೋಜನ ನೀಡಬೇಕೆಂದು ಹಠ ಹಿಡಿದರು.
ಮೂರ್ಖ ಬೇಡಿಕೆ! ಎಂದ, ಸೇನಾಪತಿ.
ಮಂತ್ರಿಯು ಗಂಭೀರವಾಗಿ ಸರ್ವೋತ್ತಮಪಂಡಿತನತ್ತ ದೃಷ್ಟಿ ಬೀರುತ್ತಿದ್ದಂತೆ ಪಂಡಿತನೂ ಮಂತ್ರಿಯ ಕಡೆಗೆ ತಿರುಗಿದ್ದ. ಇಬ್ಬರ ಆಲೋಚನೆಗಳೂ ಒಂದೇ ದಿಕ್ಕಿನಲ್ಲಿ ಸಾಗಿದಂತೆ ಇದ್ದಿತು. ಇಬ್ಬರಿಗೂ ಅನಿಸಿದುದು ‘ಬ್ರಾಹ್ಮಣರು ಇಂತಹ ಕೀಳುಮಟ್ಟದ ಕೋರಿಕೆ ಮುಂದಿಟ್ಟುದಲ್ಲದೆ ಆಗ್ರಹವನ್ನೂ ತೋರಿದರೆಂದರೆ ಅದರ ಹಿಂದೆ ಯಾವುದೋ ಗಹನವಾದ ಕಾರಣ ಇರುತ್ತದೆ’ ಎಂದು.
ಮಹಾರಾಜನು ಮುಂದುವರಿಸಿದ: ನಾನು ಅವರ ಮಾತುಗಳನ್ನು ಉಪೇಕ್ಷೆ ಮಾಡಿ ವಿತಸ್ತಾನದಿಯ ಕಡೆಗೆ ಹೊರಟೆ. ಆದರೆ ಅದೇನು ಬ್ರಾಹ್ಮಣರು ಮಾಡಿದ ಮಾಯೆಯೋ ಅಥವಾ ನನಗೆ ಮುಸುಕಿನ ಭ್ರಮೆಯೋ ತಿಳಿಯಲಿಲ್ಲ – ನಾನು ಎಷ್ಟು ದೂರ ನಡೆದರೂ ವಿತಸ್ತಾನದಿ ಕಾಣಿಸಲೇ ಇಲ್ಲ! ಆ ಬ್ರಾಹ್ಮಣರಿಗೆ ಭೋಜನ ನೀಡಿದ ಮೇಲೆಯೇ ತಾನು, ನನಗೆ ಗೋಚರಿಸುವುದಾಗಿ ವಿತಸ್ತಾನದಿ ನನಗೆ ಹೇಳುತ್ತಿದೆಯೇನೋ ಅನಿಸಿತು. ನನ್ನ ಹಠ ತಡೆದುಕೊಳ್ಳಲಾಗಲಿಲ್ಲ. ಭೋಜನಕ್ಕೆ ಪಟ್ಟುಹಿಡಿದ ಬ್ರಾಹ್ಮಣರನ್ನು ನೋಡಿ ನನ್ನ ಕೋಪ ಏರಿತು. ‘ನಾನು ಸ್ನಾನ ಮಾಡದೆ ನಿಮಗೆ ಭೋಜನ ನೀಡಲಾರೆ; ನಿಮ್ಮನ್ನ ನೋಡಿದರೆ ಅಪಸರ್ಪಗಳಂತೆ ಭಾಸವಾಗುತ್ತದೆ; ನೀವು ಹೊರಟುಹೋಗಿರಿ’ – ಎಂದುಬಿಟ್ಟೆ. ಇದಕ್ಕೆ ವಿಶ್ವನಾಥಭಟ್ಟ ಹೀಗೆಂದ: ‘ನಮ್ಮನ್ನು ಸರ್ಪಗಳೆಂದು ದೂಷಿಸಿದೆಯಲ್ಲವೆ? ನೀನೇ ಸರ್ಪವಾಗಿಹೋಗುತ್ತೀ’ ಎಂದ. ಇದುವರೆಗೇನೋ ನಾನು ಸರ್ಪವಾಗಿಲ್ಲ ಎಂದು ನಕ್ಕ ಮಹಾರಾಜನು ಇದರಲ್ಲಿ ನನ್ನ ತಪ್ಪೇನೂ ಇಲ್ಲವಾದುದರಿಂದ ಅವರ ಶಾಪ ಫಲಿಸಲಾರದು. ಅಲ್ಲದೆ ಒಂದೇ ಒಂದು ದಿನ ರಾಮಾಯಣ ಕೇಳಿದವರು ಯಾವುದೇ ಶಾಪ ಪರಿಹಾರವಾಗುತ್ತದೆ ಎಂದು ಬ್ರಾಹ್ಮಣರೇ ಹೇಳಿದ್ದಾರಲ್ಲವೆ. ನೀವುಗಳೇ ಹೇಳಿರಿ – ಸ್ನಾನ ಮಾಡದೆಯೇ ನಾನು ಭೋಜನ ನೀಡಬೇಕಿತ್ತೆ?
ಒಂದು ಕ್ಷಣ ಯೋಚಿಸಿ ಸರ್ವೋತ್ತಮಪಂಡಿತನು ಎದ್ದುನಿಂತು: ಪ್ರಭುಗಳೇ! ವಿಶ್ವನಾಥಭಟ್ಟನನ್ನು ನಾನು ಬಲ್ಲೆ. ಕಾರಣವಿಲ್ಲದೆ ಏನೂ ಮಾಡುವವನಲ್ಲ ಅವನು. ಪ್ರಜೆಗಳನ್ನು ಮಕ್ಕಳಂತೆ ಪಾಲಿಸುತ್ತಿರುವ ಮತ್ತು ಸದಾ ಕಲ್ಯಾಣಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ನಿಮ್ಮೆದುರಿಗೆ ವಿಚಿತ್ರ ಬೇಡಿಕೆಯನ್ನಿಟ್ಟು ನಿಮ್ಮನ್ನು ಶಾಪಗ್ರಸ್ತರಾಗಿಸಬೇಕಾದರೆ ಅದರ ಹಿಂದೆ ಗೂಢವಾದ ಏನೋ ಕಾರಣ ಇದ್ದೇ ಇರುತ್ತದೆ. ತಾವು ಅಪ್ಪಣೆ ಕೊಟ್ಟರೆ ನಾನು ಹೋಗಿ ವಿಷಯವನ್ನರಿತು ಬರುತ್ತೇನೆ.
ಸರ್ವೋತ್ತಮಪಂಡಿತರೆ! ನಾನೇನೂ ಭಯಪಡುತ್ತಿಲ್ಲ. ಆದರೂ ತಾವು ಹೇಳಿದಂತೆ ಆಗಲಿ ಎಂದ ಮಹಾರಾಜ.
ಸರ್ವೋತ್ತಮಪಂಡಿತನು ತಡಮಾಡದೆ ವಿಶ್ವನಾಥಭಟ್ಟನ ನಿವಾಸಕ್ಕೆ ತೆರಳಿದ.
* * *
ದಯಮಾಡಿಸಿ, ಪಂಡಿತರೇ ಎಂದು ಸರ್ವೋತ್ತಮಪಂಡಿತನನ್ನು ವಿಶ್ವನಾಥಭಟ್ಟನು ಆದರದಿಂದ ಸ್ವಾಗತಿಸಿದ.
ತನ್ನ ಸಂದೇಹಕ್ಕೆ ವಿಶ್ವನಾಥಭಟ್ಟ ನೀಡಿದ ಉತ್ತರವನ್ನು ಕೇಳಿ ಸರ್ವೋತ್ತಮಪಂಡಿತನು ಆಶ್ಚರ್ಯಗೊಂಡು ಕೌತುಕದಿಂದ ವಿಶ್ವನಾಥಭಟ್ಟನತ್ತ ನೋಡಿದ. ವಿಶ್ವನಾಥಭಟ್ಟನ ಮುಖದಲ್ಲಿ ಅಸಮಾಧಾನವಾಗಲಿ ದೋಷಪ್ರಜ್ಞೆಯಾಗಲಿ ಏನೂ ಕಾಣಿಸಲಿಲ್ಲ. ಅವನ ಮುಖ ಪ್ರಶಾಂತವಾಗಿತ್ತು.
ಸರ್ವೋತ್ತಮಪಂಡಿತನನ್ನು ಉತ್ತಮ ಆಸನದಲ್ಲಿ ಕುಳ್ಳಿರಿಸಿ ಸತ್ಕರಿಸಿದ, ವಿಶ್ವನಾಥಭಟ್ಟ. ತನ್ನ ಪ್ರಶ್ನೆಗೆ ವಿಶ್ವನಾಥಭಟ್ಟ ನೀಡಿದ ಸಮಾಧಾನ ಸರ್ವೋತ್ತಮಪಂಡಿತನನ್ನು ಅಚ್ಚರಿಗೊಳಿಸಿತು. ಮಹಾರಾಜನು ಪ್ರಕೃತಿಯೊಡನೆ ಚೆಲ್ಲಾಟ ಆಡುತ್ತಿರುವನೆ! ಇದೆಂತಹ ಆರೋಪ? ಎಂದ.
ಸರ್ವೋತ್ತಮಪಂಡಿತರೆ! ಮಹಾರಾಜನು ನಡೆಸುತ್ತಿರುವ ಪ್ರಜಾಹಿತ ಕಾರ್ಯಕ್ರಮಗಳನ್ನು ಮೇಲೆಮೇಲೆ ಪರಿಶೀಲಿಸಿ ನೀವೆಲ್ಲ ಅವುಗಳಿಂದಾಗುವ ತಾತ್ಕಾಲಿಕ ಲಾಭಗಳನ್ನಷ್ಟೆ ಲೆಕ್ಕಹಾಕುತ್ತಿದ್ದೀರಿ. ಆದರೆ ಅವನ್ನು ಸೂಕ್ಷ್ಮವಾಗಿ ನೀವು ವಿಮರ್ಶಿಸಿ ಮುಂದಿನ ಕಾಲದಲ್ಲಿ ಆಗುವ ದುಷ್ಪರಿಣಾಮಗಳ ಬಗೆಗೆ ಯೋಚಿಸಿಲ್ಲ.
ತಾವು ಏನು ಹೇಳುತ್ತಿರುವುರೋ ನನಗೆ ಅರ್ಥವಾಗುತ್ತಿಲ್ಲ ಎಂದ, ಗೊಂದಲಕ್ಕೀಡಾದ ಸರ್ವೋತ್ತಮಪಂಡಿತ.
ಮಹಾರಾಜನು ನದಿಗಳ ಮೇಲೆ ಸೇತುವೆಗಳನ್ನು ಕಟ್ಟಿಸುತ್ತಿದ್ದಾನೆ. ಅದು ಒಳ್ಳೆಯದೇ. ಆದರೆ ಅಲ್ಲಲ್ಲಿ ನದಿಯ ಹರಿವಿನ ದಿಕ್ಕನ್ನೇ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದಾನೆ. ನದಿಗಳ ಪ್ರವಾಹಗಳಿಗೆ ಅಡ್ಡಗಟ್ಟೆಗಳನ್ನು ನಿರ್ಮಿಸಿ ನೀರಿನ ಪ್ರವಾಹವನ್ನು ನಿಯಂತ್ರಣ ಮಾಡಲು ಹೊರಟಿದ್ದಾನೆ. ತನಗೆ ಯಕ್ಷರ ಸಹಕಾರ ಇರುವುದರಿಂದ ತಾನು ಕಶ್ಮೀರದ ನದಿಗಳನ್ನು ತನಗೆ ತೋರಿದಂತೆ ನಡೆಸಿಕೊಳ್ಳಬಹುದು ಎಂದುಕೊಂಡಿದ್ದಾನೆ. ಇದೆಲ್ಲ ಪ್ರಕೃತಿಯೊಡನೆ ಚೆಲ್ಲಾಟವಾಡಿದಂತೆ.
ವಿಶ್ವನಾಥಭಟ್ಟರೆ! ತಾವು ಅನಾವಶ್ಯಕವಾಗಿ ಉತ್ಪ್ರೇಕ್ಷೆ ಮಾಡಿ ಮಾತನಾಡುತ್ತಿದ್ದೀರಿ. ಮಹಾರಾಜನು ಮಾಡಹೊರಟಿರುವುದು ಯೋಗ್ಯವಾದ ಕಾರ್ಯಗಳೇ ಎನಿಸುತ್ತದೆ. ನದಿಗಳ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಬದಲು ಅವನ್ನು ಅಲ್ಲಲ್ಲಿ ಅಡ್ಡಗಟ್ಟಿ ಶೇಖರಿಸಿ ನೀರಿನ ಕೊರತೆ ಇರುವವರಿಗೆ ಒದಗಿಸಿದರೆ ತಪ್ಪೇನಿದೆ? ಅದರಿಂದ ಈಗ ಆಸರೆ ಇಲ್ಲದಿರುವ ಭೂಮಿ ಸಸ್ಯಶ್ಯಾಮಲೆ ಆಗಬಹುದಲ್ಲವೆ? ಇದು ಪ್ರಕೃತಿಯೊಡನೆ ಚೆಲ್ಲಾಟವಾಡಿದಂತೆ ಆಗುತ್ತದೆಯೆ? ಬಹುಮಂದಿಗೆ ಪ್ರಯೋಜನವಾದಲ್ಲಿ ಯಾರೋ ಕೆಲವರಿಗೆ ನಷ್ಟವಾಗುತ್ತದೆಂಬ ಕಾರಣಕ್ಕೆ ಎಲ್ಲರಿಗಾಗುವ ಲಾಭವನ್ನು ಕೈಬಿಡಬೇಕೆ?
ವಿಶ್ವನಾಥಭಟ್ಟ ನಕ್ಕು ಹೇಳಿದ: ಸರ್ವೋತ್ತಮಪಂಡಿತರೆ! ತಾವು ಶಾಸ್ತ್ರಪಾರಂಗತರು. ತಮಗೆ ನಾನು ಹೊಸದಾಗಿ ಹೇಳಬೇಕಾದುದೇನೂ ಇಲ್ಲ. ಭೌತಪ್ರಪಂಚದಲ್ಲಿ ಸಮತೋಲನ ಇರುವುದು ಒಳ್ಳೆಯದೆಂದು ತಾವು ಬಲ್ಲಿರಿ.
ಹಾಗಾದರೆ………?
ಮಹಾರಾಜರು ಕೈಗೊಂಡಿರುವ ಯೋಜನೆಗಳು ಪ್ರಕೃತಿಯ ಸಮತೋಲನಕ್ಕೆ ಭಂಗ ತರುತ್ತಿವೆ. ಪ್ರಕೃತಿಯಲ್ಲಿ ಒಂದನ್ನೊಂದು ಆಶ್ರಯಿಸಿಕೊಂಡಿರುವ ಜೀವಿಗಳ ಸಹ-ಬಾಳ್ವೆಗೆ ಧಕ್ಕೆಯುಂಟುಮಾಡುತ್ತಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಕಶ್ಮೀರದಲ್ಲಿ ಮನುಷ್ಯರ ಉಳಿವೇ ದುಃಶಕ್ಯವಾಗಬಹುದು.
ಅದು ಹೇಗೆ?
ಪಂಡಿತರೆ! ಭೂಮಿಯ ಸ್ವಾಭಾವಿಕ ಅಸ್ಥಿರತೆಗೆ ಹಿಮಾಲಯವೇ ಪ್ರತೀಕವಲ್ಲವೆ? ಭೂಮಿಯ ಅಸ್ಥಿರತೆಯನ್ನು ಹೆಚ್ಚಿಸಬಾರದೆಂಬುದಕ್ಕೆ ಹಿಮಾಲಯ ಮೂಲದ ಭೂಕಂಪನಗಳೇ ಎಚ್ಚರಿಕೆಯ ಸಂದೇಶಗಳಲ್ಲವೆ? ನಮ್ಮ ಕಶ್ಮೀರ ಪ್ರಾಂತವಾದರೋ ಅಸ್ಥಿರತೆಯ ನಡುವೆ ಸ್ಥಿರತೆಯನ್ನು ಸಾಧಿಸಿಕೊಂಡಿದೆ. ನದಿಗಳ ಹರಿವಿನ ರೀತಿಗಳು ಆ ಸ್ಥಿರತೆಯ ಮೇಲೆ ಆಧಾರಗೊಂಡಿರುತ್ತವೆ. ಈ ವ್ಯವಸ್ಥೆಗೆ ಅನುಗುಣವಾಗಿಯೇ ಕೃಷಿಕಾರ್ಯಗಳು ನಡೆದಿರುತ್ತವೆ. ಇದಕ್ಕೆ ಹೊಂದಿಕೊಂಡೇ ಜನರ ಜೀವನರೀತಿಯು ಏರ್ಪಟ್ಟಿರುತ್ತದೆ. ಯಾವಾವ ಪ್ರಾಂತದಲ್ಲಿ ಯಾವಾವ ಪರಿಸ್ಥಿತಿ ಇರುತ್ತದೋ ಅದನ್ನು ಅನುಸರಿಸಿ ಜನರು ತಮ್ಮ ಜೀವನಪದ್ಧತಿಗಳನ್ನು ರೂಪಿಸಿಕೊಂಡಿರುತ್ತಾರೆ.
ಮಹಾರಾಜರು ಜಲಾಶಯಗಳನ್ನು ನಿರ್ಮಿಸುತ್ತಿದ್ದಾರೆ; ಎಂದರೆ ಪ್ರಕೃತಿಯಲ್ಲಿಲ್ಲದ ಕೃತ್ರಿಮ ವ್ಯವಸ್ಥೆಗಳನ್ನು ಅಮಲುಗೊಳಿಸುತ್ತಿದ್ದಾರೆ. ಇದರಿಂದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ನೀರಿನ ಒತ್ತಡ ಹೆಚ್ಚುವುದಕ್ಕೆ ಆಸ್ಪದವಾಗುತ್ತದೆ. ಅಲ್ಲದೆ ನೀರಿನ ಸಹಜ ಪ್ರವಾಹವನ್ನು ತಡೆಗಟ್ಟುವುದರಿಂದ ಪ್ರಕೃತಿಯ ಸಮತೋಲನಕ್ಕೆ ಭಂಗ ಬರುವುದಿಲ್ಲವೆ?
“ಇನ್ನೊಂದು ಸಂಗತಿಯನ್ನು ಯೋಚಿಸಿರಿ. ಪ್ರವಾಹದ ಗತಿಯನ್ನು ಬದಲಿಸುವುದರಿಂದ ಕೆಲವು ಪ್ರದೇಶಗಳು ನೀರಿನ ಪಾಲಾಗುತ್ತವೆ. ಹೀಗೆ ಅನೇಕರ ಜೀವನದ ಆಸರೆ ಕೊಚ್ಚಿಹೋಗುತ್ತದೆ. ಎಷ್ಟೋ ಪುರಾತನ ಮಂದಿರಗಳೂ ಪವಿತ್ರಸ್ಥಳಗಳೂ ಜಲಸಮಾಧಿಯಾಗುತ್ತವೆ. ಇದನ್ನೆಲ್ಲ ಪರಿಶೀಲಿಸುವಾಗ ಪ್ರಕೃತಿಯೊಡನೆ ಸಹಕಾರದಿಂದ ಬಾಳಬೇಕಾದ ಮಾನವನು ತನ್ನ ಸ್ವಾರ್ಥಲಾಭಕ್ಕಾಗಿ ಪ್ರಕೃತಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದಾನೆ ಎನಿಸುವುದಿಲ್ಲವೆ? ಪ್ರಕೃತಿಗಾಗಿ ಮನುಷ್ಯ ಇದ್ದಾನೆಯೆ, ಅಥವಾ ಮನುಷ್ಯನಿಗಾಗಿ ಪ್ರಕೃತಿ ಇದೆಯೆ?
ಇದಲ್ಲದೆ ಈ ಸಾಹಸಗಳ ಪರಿಣಾಮವಾಗಿ ಲೆಕ್ಕವಿಲ್ಲದಷ್ಟು ಮರಗಳು ಕಣ್ಮರೆಯಾಗುವುದಿಲ್ಲವೆ?
ಮನುಷ್ಯರಿಗಿಂತ ಮರಗಳ ನಾಶವೇ ನಿಮಗೆ ಮಹತ್ತ್ವದ್ದಾಗಿ ಕಾಣಿಸುತ್ತಿರುವಂತಿದೆ! ಎಂದ ಸರ್ವೋತ್ತಮಪಂಡಿತ, ವ್ಯಂಗ್ಯವಾಗಿ.
ಸೃಷ್ಟಿಯ ಆರಂಭದಲ್ಲಿ ಎಲ್ಲವೂ ಜನಮಯವೇ ಆಗಿತ್ತು. ಅನಂತರ ಭಗವಂತನ ನಾಭಿಯಿಂದ ಕಮಲವು ಉದ್ಭವಿಸಿತು. ಕಮಲದಿಂದ ಬ್ರಹ್ಮನ ಉದ್ಭವವಾಯಿತು…… ಎಂದು ವಿಶ್ವನಾಥಭಟ್ಟನು ಹೇಳತೊಡಗಿದಾಗ ಸರ್ವೋತ್ತಮಪಂಡಿತ ಗೊಂದಲಕ್ಕೀಡಾದ.
ವಿಶ್ವನಾಥಭಟ್ಟ ವಿವರಿಸಿದ: ಬ್ರಹ್ಮನಿಗೂ ಮೊದಲೇ ಕಮಲ ಹುಟ್ಟಿತ್ತೆಂಬುದನ್ನು ನೆನಪಿಸಿಕೊಳ್ಳಿ. ಅದರಿಂದ ಅನುಕ್ರಮವಾಗಿ ಹುಟ್ಟಿದ ವೃಕ್ಷಗಳೇ ನಮಗೆ ಜೀವನಾಧಾರಗಳು….
ತಿಳಿದಿದೆ. ಸೂರ್ಯನು ಉದಯಿಸಿ ಪೂರ್ವದಿಕ್ಕನ್ನು ಪ್ರವೇಶಿಸಿದಾಗ ಆ ದಿಗ್ಭಾಗದ ಜೀವಿಗಳೆಲ್ಲ ಸೂರ್ಯನ ಕಿರಣಗಳಿಂದ ಜೀವವನ್ನು ಧರಿಸಿದವು. ಹಾಗೆಯೇ ಉಳಿದ ದಿಕ್ಕುಗಳು, ಇತರ ಜೀವನಮೂಲಗಳು ಎಂದ, ಸರ್ವೋತ್ತಮಪಂಡಿತ.
ಹಾಗೆಂದರೆ ಎಲ್ಲೆಲ್ಲಿ ಜೀವವೂ ಪ್ರಾಣವೂ ಪ್ರಕಟಗೊಂಡಿವೆಯೋ ಅಲ್ಲೆಲ್ಲ ಇರುವುದು ಸೂರ್ಯನ ಪ್ರಭಾವವೇ ಎಂದು ಸಿದ್ಧವಾಗುವುದಿಲ್ಲವೆ?
ಹೌದು.
ಅನ್ನವೇ ಪ್ರಜಾಪತಿ ಎಂಬ ಮಾತು ಇದೆಯಲ್ಲವೆ? ಏನು ಅದರ ಅರ್ಥ?
ಅನ್ನದಿಂದ ರೇತಸ್ಸಿನ ರೂಪದ ಶಕ್ತಿ ಏರ್ಪಡುವುದರಿಂದ ಅನ್ನವೇ ಪ್ರಜಾಪತಿ ಎಂದು ತಾತ್ಪರ್ಯವಲ್ಲವೆ?
ಆದರೆ ಸೂರ್ಯನಿಂದ ಅನ್ನಸೃಷ್ಟಿ ಎಂದೂ ಕೇಳಿದೆವಲ್ಲ? ಸೂರ್ಯಕಿರಣಗಳು ನಮಗೆ ಅನ್ನವನ್ನು ನೀಡುವವೆಂಬುದು ಹೇಗೆ?
ಸರ್ವೋತ್ತಮಪಂಡಿತ ಗಲಿಬಿಲಿಗೊಂಡಂತೆ ವಿಶ್ವನಾಥಭಟ್ಟನ ಕಡೆ ದಿಟ್ಟಿಸತೊಡಗಿದ.
ವಿಶ್ವನಾಥಭಟ್ಟ ಮುಂದುವರಿಸಿದ: ಸೂರ್ಯಕಿರಣಗಳಲ್ಲಿ ನಿಕ್ಷಿಪ್ತವಾಗಿರುವ ಅನಂತ ಶಕ್ತಿಯು ಆಹಾರವಾಗಿ ಪರಿಣಮಿಸುವಂತೆ ಮಾಡುವ ಸಾಮರ್ಥ್ಯ ಇರುವುದು ವೃಕ್ಷಗಳಲ್ಲಿ ಮಾತ್ರ. ಈ ಸೃಷ್ಟಿಯಲ್ಲಿ ಯಾವುದು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ವೃಕ್ಷಗಳಿಲ್ಲದಲ್ಲಿ ಸೃಷ್ಟಿಯೇ ಇರದು. ಇದನ್ನೇ ಬ್ರಹ್ಮನಿಗಿಂತ ಮೊದಲು ಕಮಲ ಉದಯವಾದದ್ದು ಸೂಚಿಸುತ್ತದೆ.
ಕೆಲವು ನಿಮಿಷ ಮೌನ ತಳೆದ ಸರ್ವೋತ್ತಮಪಂಡಿತ ಕಡೆಗೆ ಕೇಳಿದ:
ಅಂದರೆ ಜಲಾಶಯಗಳ ನಿರ್ಮಾಣವನ್ನೇ ಕೈಬಿಡಬೇಕೆ?
ವಿಶ್ವನಾಥಭಟ್ಟ ನಕ್ಕು ಉತ್ತರಿಸಿದ: ಎಂದೋ ಒಂದುದಿನ ಮರಣ ತಪ್ಪದೆಂಬ ಕಾರಣಕ್ಕೆ ಈಗ ಬದುಕನ್ನು ಬೇಡವೆನ್ನುತ್ತೇವೆಯೆ? ವಿಚಕ್ಷಣೆ ಇರಬೇಕೆಂಬುದು ತಾತ್ಪರ್ಯ. ಮನುಷ್ಯನನ್ನು ಪ್ರಾಣಿಗಳಿಂದ ಬೇರ್ಪಡಿಸುವ ಗುಣವೇ ವಿಚಕ್ಷನೆ, ಅಲ್ಲವೆ? ವಿಚಕ್ಷಣೆಯನ್ನು ಬಳಸಿ ಸೂಕ್ಷ್ಮವಾಗಿ ವಿಚಾರ ಮಾಡಿ ಕೆಲಸಗಳನ್ನು ಕೈಗೊಳ್ಳಬೇಕು. ತಾತ್ಕಾಲಿಕ ಲಾಭವನ್ನು ಗಮನಿಸಿ ಶಾಶ್ವತ
ದುಷ್ಪರಿಣಾಮಗಳನ್ನು ಅಲಕ್ಷ್ಯ ಮಾಡಬಾರದು. ಜಲಾಶಯಗಳನ್ನೇನೋ ನಿರ್ಮಿಸಬೇಕು. ಆದರೆ ಅವಕ್ಕೆ ಯುಕ್ತವಾದ ಪ್ರದೇಶಗಳನ್ನು ಆಯ್ದುಕೊಳ್ಳಬೇಕು. ಜನಗಳ ಆಲೋಚನೆಗಳನ್ನೂ ಸಂದರ್ಭಗಳನ್ನೂ ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕು. ಯಾವುದೇ ಕಾರ್ಯದ ಪರಿಣಾಮವು ಪ್ರಕೃತಿಯ ಮೇಲೆ ಏನು ಆಗುತ್ತದೆಂದು ವಿಮರ್ಶೆ ಮಾಡಬೇಕು. ಪ್ರಕೃತಿಯ ಬಗೆಗೆ ಪೂಜ್ಯಭಾವ ಇರಬೇಕು. ಪ್ರಕೃತಿಯನ್ನು ದೋಚಿ ನಾವು ಉದ್ಧಾರವಾಗಲಾರೆವು. ಪ್ರಕೃತಿಯ ಬಗೆಗೆ ಸ್ವೈರದಿಂದ ವರ್ತಿಸುವುದು ತಾನು ಏರಿರುವ ಮರದ ಕೊಂಬೆಯನ್ನು ತಾನೇ ಛೇದ ಮಾಡಿದಂತೆ.
ತಾವು ಈ ವಿಷಯಗಳನ್ನೆಲ್ಲ ಮಹಾರಾಜರಿಗೆ ಏಕೆ ತಿಳಿಯಪಡಿಸಲಿಲ್ಲ?
ನೀವುಗಳೆಲ್ಲ ಸುರಿಸುವ ಹೊಗಳಿಕೆಯಿಂದ ಅಹಂಕಾರ ಬೆಳೆಸಿಕೊಂಡು ತಾನು ಹೇಳುವುದೇ ವೇದವಾಕ್ಯವೆಂದು ಭಾವಿಸಿರುವ ಮಹಾರಾಜ ಬೇರೆಯವರ ಮಾತನ್ನು ಕೇಳಿಯಾನೆ? ನಾವು ಹಸಿದಿದ್ದೇವೆ, ನಮಗೆ ಭೋಜನ ನೀಡಿ ನೀನು ಸ್ನಾನಕ್ಕೆ ತೆರಳು ಎಂದುದಕ್ಕೆ ‘ನಾನು ಈಗ ಸ್ನಾನಕ್ಕೆ ಹೋಗುವವನು. ನಾನು ಬರುವವರೆಗೆ ನೀವು ಇದ್ದರೆ ಭೋಜನ ನೀಡುತ್ತೇನೆ’ ಎಂಬ ಧೋರಣೆ ಪ್ರಕಟಿಸಿದಲ್ಲಿ ತಾತ್ಕಾಲಿಕ ಪರಿಣಾಮಗಳನ್ನು ಮೀರಿ ಶಾಶ್ವತ ತತ್ತ್ವಗಳಿಗೆ ನಿಷ್ಠೆ ಮೆರೆದಂತೆ ಆಗುತ್ತದೆಯೆ?
ಸರ್ವೋತ್ತಮಪಂಡಿತನು ದಿಗ್ಭ್ರಮೆಗೊಂಡು ವಿಶ್ವನಾಥಭಟ್ಟನತ್ತ ನೋಡಿದ.
“ರಾಜನೊಬ್ಬನು ಎಷ್ಟೇ ಉತ್ತಮನಾಗಿದ್ದರೂ ಅವನು ತತ್ತ್ವಚಿಂತಕನೂ ಆಗಿರಬೇಕು. ಅವನ ದೃಷ್ಟಿಯು ಪ್ರಸ್ತುತ ಸನ್ನಿವೇಶಕ್ಕೆ ಪರಿಮಿತವಾಗಿಬಾರದು.
ಆದರೂ ‘ಮಹಾರಾಜನು ಸರ್ಪವಾಗಲಿ’ ಎಂದು ಶಪಿಸುವುದು ಯುಕ್ತವೆ?
ಯಾವ ಜಲವನ್ನು ನಿಯಂತ್ರಿಸಿ ತನ್ನ ಹೆಚ್ಚುಗಾರಿಕೆಯನ್ನು ಮೆರೆಯಬಯಸಿದ್ದಾನೋ ಆ ಜಲದ ಮೇಲೆಯೆ ಆಧಾರಗೊಂಡಿದ್ದರೂ ಬಾಯಾರಿಕೆ ತಣಿಯದೆ ಬದುಕಬೇಕಾದುದಕ್ಕಿಂತ ನ್ಯಾಯವಾದ ಶಿಕ್ಷೆ ಬೇರೆ ಏನಿದೆ ಪಂಡಿತರೆ?
ಸರ್ವೋತ್ತಮಪಂಡಿತನು ನಿರುತ್ತರನಾದ. ಈತನಿಗೆ ಧರ್ಮ ಬಿಟ್ಟು ಬೇರೇನೂ ಕಾಣಿಸುವುದಿಲ್ಲವೆ?
– ಎಂದುಕೊಂಡ. ಪಂಡಿತನ ಆಲೋಚನಾಲಹರಿಯನ್ನು ಊಹಿಸಿದ ವಿಶ್ವನಾಥಭಟ್ಟ ಧರ್ಮೋ ರಕ್ಷತಿ ರಕ್ಷಿತಃ.
ಒಬ್ಬ ಮಹಾರಾಜ ಹೋದರೆ ಇನ್ನೊಬ್ಬ ಮಹಾರಾಜ ಬರುತ್ತಾನೆ. ಆದರೆ ದೈವಕ್ಕಿಂತ ಮಿಗಿಲಾದುದು ಧರ್ಮ ಎಂದ.
ಈ ವೇಳೆಗೆ ಹೊರಗೆ ಏನೋ ಕೋಲಾಹಲ ನಡೆಯುತ್ತಿದ್ದ ಸದ್ದು ಕೇಳಿ ಇಬ್ಬರೂ ಹೊರಕ್ಕೆ ಹೋದರು.
ಹೊರಗಡೆ ಮಹಾರಾಜನ ಸೇನೆಯು ನಿಂತಿತ್ತು. ಪಲ್ಲಕ್ಕಿಯನ್ನು ನಿಲ್ಲಿಸಿದರು. ರಾಜನು ಪಲ್ಲಕ್ಕಿಯಿಂದ ಹೊರಬಿದ್ದ. ಅವನ ಶರೀರವೆಲ್ಲ ನೀಳವಾಗಿ ಚಲನಹೀನವಾಗಿಬಿಟ್ಟಿತ್ತು. ಎಷ್ಟು ಯತ್ನಿಸಿದರೂ ಸಾಗದೆ ಅಂಗಗಳೆಲ್ಲ ಸೇದಿಕೊಂಡುಬಿಟ್ಟಿದ್ದವು. ಮಹಾರಾಜನು ಕದಲಲಾರದ ಸ್ಥಿತಿಯಲ್ಲಿ ಇದ್ದ.
ವಿಶ್ವನಾಥಭಟ್ಟನಿಗೆ ನಮಸ್ಕಾರ ಮಾಡಬೇಕೆಂದು ಜೋಡಿಸಿದ ಕೈಗಳು ಅದೇ ಸ್ಥಿತಿಯಲ್ಲಿ ಉಳಿದುಬಿಟ್ಟವು. ಕಾಲುಗಳೂ ಸೇದಿಕೊಂಡಿದ್ದವು.
ಮಹಾರಾಜನು ಮಲಗಿ ಭುಜಗಳ ನೆರವಿನಿಂದ ತೆವಳತೊಡಗಿದ. ವಿಶ್ವನಾಥಭಟ್ಟನಿಗೆ ಏನೋ ಹೇಳಬೇಕೆಂದು ಮಹಾರಾಜನು ಬಾಯಿ ತೆರೆದೊಡನೆ ನಾಲಿಗೆಯು ಎರಡು ಭಾಗವಾಗಿ ಸೀಳಿತು, ಒಳಕ್ಕೂ ಹೊರಕ್ಕೂ ಆಡತೊಡಗಿತು.
ನೋಡನೋಡುತ್ತಿದ್ದಂತೆ ಅವನ ಶರೀರವು ಸರ್ಪದಂತಾಗಿತ್ತು. ಕೈಕಾಲುಗಳೆಲ್ಲ ಸರಳರೇಖೆಯಂತೆ ಆಗಿಬಿಟ್ಟವು. ಕಣ್ಣುಗಳನ್ನು ಹಿಂದಕ್ಕೆ ಸರಿಸಿ ಮೂಗು ಮುಂದಕ್ಕೆ ಬೆಳೆದು ಮುಖದಷ್ಟಕ್ಕೂ ಹರಡಿತು. ಆಮೆಯು ಮೈಯನ್ನೆಲ್ಲ ಒಳಕ್ಕೆ ಸೆಳೆದುಕೊಳ್ಳುವಂತೆ ದಾಮೋದರನ ಶರೀರಭಾಗಗಳೆಲ್ಲ ಅದೃಶ್ಯವಾದವು. ದಾಮೋದರನ ಆಕಾರವನ್ನು ಯಾರೋ ಸರ್ಪದಂತೆ ಮಾರ್ಪಡಿಸಿದಂತೆ ಆಗಿತ್ತು.
ದಾಮೋದರನು ಸರ್ಪದಂತೆ ಬುಸುಗುಟ್ಟತೊಡಗಿದ್ದ. ಕಾಲು ಇಲ್ಲದಿದ್ದರಿಂದ ಬಾಲದ ಆಸರೆಯ ಮೇಲೆ ಎದ್ದು ನಿಲ್ಲಲು ಯತ್ನಿಸುತ್ತಿದ್ದ.
ನೆರೆದಿದ್ದ ಪ್ರಜೆಗಳೆಲ್ಲ ಭಯಗ್ರಸ್ತರಾಗಿ ಚದುರಿದರು.
ಪ್ರಕೃತಿಯ ಮೇಲೆ ಪ್ರಭುತ್ವ ಸ್ಥಾಪಿಸಬೇಕೆಂಬಂತಹ ದಾನವ ಯೋಚನೆ ಮಾಡುವವರ ಪಾಡು ಏನು ಆಗುತ್ತದೆಂಬ ಗುಣಪಾಠವನ್ನು ಸಾರುತ್ತ ಕೆಲವು ಕಾಲ ಜೀವಿಸಿರು ಎಂದು ಹೇಳಿ ವಿಶ್ವನಾಥಭಟ್ಟನು
ಜಲವನ್ನು ಮಂತ್ರಿಸಿ ರಾಜನ ಮೇಲೆ ಪ್ರೋಕ್ಷಿಸಿ ಅಲ್ಲಿಂದ ನಿರ್ಗಮಿಸಿದ.
ಸರ್ಪಾಕೃತಿಯ ದಾಮೋದರ ಬುಸುಗುಟ್ಟುತ್ತಿದ್ದಂತೆ ಅವನ ಶರೀರ ವಿಶ್ವನಾಥಭಟ್ಟನ ಪಾದವನ್ನು ತಾಕಿತು. ವಿಶ್ವನಾಥಭಟ್ಟನ ಪಾದಧೂಳಿಯನ್ನು ಸರ್ಪವು ಶಿರಸ್ಸಿನಲ್ಲಿ ಧರಿಸಿದಂತೆ ಭಾಸವಾಯಿತು.
ದಾಮೋದರನು ಕಡೆಯ ಬಾರಿಗೆ ಪ್ರಜೆಗಳತ್ತ ನೋಡಿ, ಬುಸುಗುಟ್ಟುತ್ತ ವೇಗವಾಗಿ ಅಲ್ಲಿಂದ ನಿಷ್ಕ್ರಮಿಸಿದ.
ಈಗಲೂ ದಾಮೋದರ ನಾಮಾಂಕಿತ ಮಡುವಿನಲ್ಲಿ ತೀರದ ತೃಷೆಯಿಂದ ಜನಿಸಿದ ಶಾಖವು ವಿಷಾನಿಲದಂತೆ ಕಾಣಿಸಿಕೊಳ್ಳುತ್ತದೆ.
ಪ್ರಕೃತಿಯನ್ನು ನಿಯಂತ್ರಿಸುವೆವೆಂದು ಹೊರಡುವವರಿಗೆಲ್ಲ ಗುಣಪಾಠದಂತೆ ಇವತ್ತಿಗೂ ಪ್ರಕೃತಿಯ ದಯೆಯ ಆಧಾರದ ಮೇಲೆ ಬದುಕುತ್ತಿದೆ, ದಾಮೋದರಸರ್ಪ.
ತನ್ನನ್ನು ತಾನು ಕರ್ತವ್ಯಕ್ಕಾಗಿ ಅರ್ಪಿಸಿಕೊಳ್ಳುವುದಕ್ಕಿಂತ ಮಿಗಿಲಾದ ದೇವತಾರಾಧನೆ ಇನ್ನೊಂದಿಲ್ಲ -ಸ್ವಾಮಿ ವಿವೇಕಾನಂದ.
ಆನಂದ ಮತ್ತು ನೈತಿಕ ಕರ್ತವ್ಯ ಪರಸ್ಪರ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿದೆ – ಜಾರ್ಜ್ ವಾಷಿಂಗ್ಟನ್.
ಯಾವತ್ತು ಅನ್ಯಾಯವೇ ನ್ಯಾಯವಾಗುವುದೋ ಆವತ್ತು ಪ್ರತಿಭಟಿಸುವುದೇ ಕರ್ತವ್ಯವಾಗುತ್ತದೆ – ಜಾರ್ಜ್ ಜಫರ್ಸನ್
ನ್ಯಾಯವೇ ಸಮಾಜದ ಆದ್ಯ ಕರ್ತವ್ಯ – ಅಲೆಕ್ಸಾಂಡರ್ ಹ್ಯಾಮಿಲ್ಟನ್.
ಕರ್ತವ್ಯವನ್ನು ಅರಿಯದ ಬದುಕಿಗೆ ಬೆಲೆಯಿಲ್ಲ’ – ಅನಾಮಿಕ.