ಹಿಂದೆ ಸುಶರ್ಮನೆಂಬುವವನೊಬ್ಬನಿದ್ದನು. ಅವನು ಜಾತಿಯಿಂದ ಬ್ರಾಹ್ಮಣನಾಗಿದ್ದರೂ ವೇದಾಧ್ಯಯನವನ್ನು ಮಾಡಿರಲಿಲ್ಲ. ಜಪ-ಹೋಮಾದಿಗಳನ್ನೂ ಮಾಡುತ್ತಿರಲಿಲ್ಲ. ವಿಷಯಸುಖಗಳಲ್ಲೇ ಆಸಕ್ತನಾಗಿ ಕಾಲ ಕಳೆಯುತ್ತಿದ್ದ. ಮದ್ಯಮಾಂಸಗಳನ್ನೂ ಸೇವಿಸುತ್ತಿದ್ದ. ಹೀಗಿರುತ್ತ ಒಮ್ಮೆ ಅವನು ಹಾವು ಕಚ್ಚಿ ವಿಷವೇರಿ ಸತ್ತುಹೋದ. ಬಳಿಕ ನರಕಕ್ಕೆ ಹೋಗಿ ತಾನು ಮಾಡಿದ ಪಾಪಗಳಿಗೆ ಅನೇಕ ವಿಧವಾದ ಶಿಕ್ಷೆಗಳನ್ನು ಅನುಭವಿಸಿ ಮುಂದಿನ ಜನ್ಮದಲ್ಲಿ ಒಂದು ಎತ್ತಾಗಿ ಹುಟ್ಟಿದನು. ಆ ಎತ್ತನ್ನು ಕುಂಟನೊಬ್ಬನು ದುಡ್ಡುಕೊಟ್ಟು ಕೊಂಡನು. ಅವನು ಅದನ್ನು ತನ್ನ ವಾಹನವನ್ನಾಗಿ ಬಳಸಿಕೊಂಡು ಎಲ್ಲಿ ಹೋಗಬೇಕಾದರೂ ಅದರ ಮೇಲೆ ಕುಳಿತೇ ಹೋಗುತ್ತಿದ್ದನು.
ಒಮ್ಮೆ ಆ ಕುಂಟನು ವೇಗವಾಗಿ ಹೋಗುವುದಕ್ಕಾಗಿ ಎತ್ತಿನ ತಲೆಗೆ ಜೋರಾಗಿ ತಿವಿದಾಗ ಅದು ಬಿದ್ದುಬಿಟ್ಟಿತು. ನೋವನ್ನು ತಡೆಯಲಾರದೆ ತನ್ನ ಕಾಲುಗಳನ್ನು ಅತ್ತಿತ್ತ ಬೀಸುತ್ತಿತ್ತು. ಕಣ್ಣುಗಳನ್ನು ಹೊರಳಿಸುತ್ತಿತ್ತು. ಅದರ ಬಾಯಿಂದ ನೊರೆ ಬರಲಾರಂಭಿಸಿತು. ಒಟ್ಟಿನಲ್ಲಿ ಅದು ಸಾಯಲಾರದೆ ಬದುಕಲೂ ಆಗದೆ ತುಂಬಾ ಒದ್ದಾಡುತ್ತಲಿತ್ತು.
ಅದರ ಕಷ್ಟವನ್ನು ಕಂಡು ಅನೇಕ ಜನ ಗುಂಪುಗೂಡಿದರು. ಅವರಲ್ಲಿ ಯಾವನೋ ಒಬ್ಬ ಪುಣ್ಯಾತ್ಮನು ಎತ್ತು ಹೇಗಾದರೂ ಬದುಕಿಕೊಳ್ಳಲಿ ಎಂಬ ದೃಷ್ಟಿಯಿಂದ ತನ್ನ ಪುಣ್ಯದಲ್ಲಿ ಸ್ವಲ್ಪ ಭಾಗವನ್ನು ಕೊಟ್ಟನು. ಅದನ್ನು ಕಂಡು ಅಲ್ಲಿದ್ದವರಲ್ಲಿ ಅನೇಕರೂ ತಮ್ಮ ಪುಣ್ಯದಲ್ಲಿ ಸ್ವಲ್ಪ ಭಾಗವನ್ನು ಎತ್ತಿಗೆ ಕೊಟ್ಟರು. ಅವರ ಮಧ್ಯದಲ್ಲಿ ಒಬ್ಬ ವೇಶ್ಯೆಯೂ ಇದ್ದಳು. ಅವಳಿಗೆ ತಾನು ಏನು ಪುಣ್ಯ ಮಾಡಿದ್ದೇನೆಂಬುದೆ ಗೊತ್ತಿರಲಿಲ್ಲ. ಆದರೂ ಅವಳು ನಾನು ಮಾಡಿರುವ ಪುಣ್ಯ ಏನಾದರೂ ಇರುವುದಾದರೆ ಅದು ಇದಕ್ಕೆ ಸೇರಲಿ ಎಂದು ಹೇಳಿದಳು. ಅನಂತರ ಆ ಎತ್ತು ಸತ್ತು ಹೋಯಿತು.
ಯಮನ ದೂತರು ಬಂದು ಅದನ್ನು ಯಮಲೋಕಕ್ಕೆ ಕೊಂಡೊಯ್ದರು. ಯಮನು ಅದರ ಪುಣ್ಯಪಾಪಗಳನ್ನು ಪರಿಶೀಲಿಸಿ ಆ ವೇಶ್ಯೆಯು ಕೊಟ್ಟ ಪುಣ್ಯದಿಂದಾಗಿ ಅದು ಮುಂದಿನ ಜನ್ಮದಲ್ಲಿ ಕುಲಶೀಲವಂತರಾದ ಬ್ರಾಹ್ಮಣರ ಮನೆಯಲ್ಲಿ ಹುಟ್ಟುವಂತೆ ಮಾಡಿದನು. ಹೀಗೆ ಹುಟ್ಟಿದ ಆತನಿಗೆ ಹಿಂದಿನ ಜನ್ಮದ ನೆನಪು ಉಳಿದಿತ್ತು. ಒಮ್ಮೆ ಅವನಿಗೆ ತನ್ನ ಶ್ರೇಯಸ್ಸಿಗೆ ಕಾರಣಳಾದ ವೇಶ್ಯೆಯನ್ನು ನೋಡಬೇಕು ಮತ್ತು ಅವಳು ಕೊಟ್ಟ ಯಾವ ಪುಣ್ಯದ ಫಲವಾಗಿ ನನಗೆ ಇಂಥ ಒಳ್ಳೆಯ ಕುಲದಲ್ಲಿ ಜನ್ಮ ದೊರಕಿತು ಎಂದು ತಿಳಿಯಬೇಕೆನ್ನಿಸಿತು.
ಅವನು ಆ ವೇಶ್ಯೆಯನ್ನು ಹುಡುಕಿಕೊಂಡು ಅವಳ ಮನೆಗೆ ಹೋಗಿ ಅವಳನ್ನೇ – ಅಮ್ಮಾ, ನಿನ್ನ ಯಾವ ಪುಣ್ಯವನ್ನು ನನಗೆ ಕೊಟ್ಟಿರುವೆ? ಎಂದು ಕೇಳಿದನು. ವೇಶ್ಯೆಯು ಅದು ನನಗೂ ಗೊತ್ತಿಲ್ಲ. ನನ್ನ ಮನೆಯಲ್ಲಿರುವ ಈ ಗಿಳಿ ಪ್ರತಿದಿನ ಏನನ್ನೋ ಹೇಳುತ್ತದೆ. ಅದನ್ನು ಕೇಳಿಸಿಕೊಂಡಿದ್ದರಿಂದ ಬಂದ ಪುಣ್ಯದ ಫಲವಿದ್ದಿರಬೇಕು ಎಂದಳು. ಆಮೇಲೆ ಅವರಿಬ್ಬರೂ ಸೇರಿ ಆ ಗಿಳಿಯನ್ನೇ ಕೇಳಿದರು. ಗಿಳಿಗೆ ಹಿಂದಿನ ಜನ್ಮದ ಸ್ಮರಣೆಯೂ ಇತ್ತು. ಅದು ಮನುಷ್ಯಭಾಷೆಯಲ್ಲಿ ಹೇಳಿತು:
ನಾನು ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ವಾಂಸನಾಗಿದ್ದೆ. ಆ ವಿದ್ವತ್ತೆಯ ಹೆಮ್ಮೆಯಿಂದಾಗಿ ನನ್ನ ವಿವೇಕ ಕಳೆದುಹೋಗಿತ್ತು. ರಾಗದ್ವೇಷಗಳಿಗೆ ಒಳಗಾಗಿ ನಾನು ಇತರ ವಿದ್ವಾಂಸರ ಬಗೆಗೆ ಅಸೂಯೆಪಡುತ್ತಿದ್ದೆ. ನನ್ನ ಗುರುವನ್ನೂ ನಿಂದಿಸುತ್ತಿದ್ದೆ. ಹೀಗಿರುತ್ತಿರಲು ಕೆಲವು ದಿನಗಳ ಅನಂತರ ನಾನು ಮರಣಹೊಂದಿದೆ. ನಾನು ಮಾಡಿದ್ದ ಗುರುನಿಂದೆಯ ಫಲವಾಗಿ ಈ ಜನ್ಮದಲ್ಲಿ ಗಿಳಿಯಾಗಿ ಹುಟ್ಟಿದೆ. ತಂದೆತಾಯಿಯರಿಂದ ಬೇರೆಯಾಗಿ ಒಮ್ಮೆ ಬಿಸಿಲಿನಲ್ಲಿ ನಾನು ಬಳಲುತ್ತಿದ್ದಾಗ ಋಷಿಪುಂಗವರೊಬ್ಬರು ನನ್ನನ್ನು ಕರುಣೆಯಿಂದ ಎತ್ತಿಕೊಂಡು ತಮ್ಮ ಆಶ್ರಮಕ್ಕೆ ಒಯ್ದರು. ಅಲ್ಲಿ ಪಂಜರದಲ್ಲಿ ನನ್ನನ್ನು ಇರಿಸಿದರು. ಆಶ್ರಮದ ವಟುಗಳು ಪ್ರತಿದಿನವೂ ಭಗವದ್ಗೀತೆಯ ಮೊದಲ ಅಧ್ಯಾಯವನ್ನು ಆವರ್ತನೆ ಮಾಡುತ್ತಿದ್ದರು. ಅದನ್ನು ಕೇಳಿ ಕೇಳಿ ಅದು ನನಗೂ ಕಂಠಪಾಠವಾಯಿತು.
ಹೀಗಿರುವಾಗ ಒಮ್ಮೆ ಪಂಜರದಿಂದ ಹೊರಬಂದು ನಾನು ವಿಹರಿಸುತ್ತಿದ್ದಾಗ ಬೇಡನೊಬ್ಬನು ಮೋಸದಿಂದ ಬಲೆಯನ್ನು ಒಡ್ಡಿ ನನ್ನನ್ನು ಹಿಡಿದನು. ಕೊನೆಗೆ ಇವಳಿಗೆ ನನ್ನನ್ನು ಮಾರಾಟ ಮಾಡಿದನು. ನನ್ನ ಪೂರ್ವಸಂಸ್ಕಾರದಿಂದಾಗಿ ನಾನು ಇಲ್ಲಿಯೂ ಪ್ರತಿದಿನ ಗೀತೆಯ ಮೊದಲ ಅಧ್ಯಾಯವನ್ನು ಹೇಳಿಕೊಳ್ಳುತ್ತಿದ್ದೆ.
ಗಿಳಿಯ ಮಾತುಗಳನ್ನು ಕೇಳಿ ಆ ಬ್ರಾಹ್ಮಣಕುಮಾರ ಮತ್ತು ವೇಶ್ಯೆಯರಿಬ್ಬರೂ ಆಶ್ಚರ್ಯಪಟ್ಟರು. ಗೀತಾಪಾರಾಯಣದ ಮಹತ್ತ್ವವನ್ನು ಅವರಿಬ್ಬರೂ ಪರಸ್ಪರ ಹೇಳಿಕೊಂಡು ಸಂತೋಷಪಟ್ಟರು. ಕೊನೆಗೆ ತಾವೂ ಪ್ರತಿದಿನ ಗೀತೆಯ ಪಾರಾಯಣ ಮಾಡುತ್ತ ಮುಕ್ತಿಯನ್ನು ಪಡೆದರು.
(ಪದ್ಮಪುರಾಣ, ಉತ್ತರಖಂಡ)