ಕರ್ನಾಟಕವು ಒಂದು ಪ್ರಗತಿಶೀಲ ರಾಜ್ಯವಾಗಿದ್ದು, ಬಿಜೆಪಿ ಆಡಳಿತದಲ್ಲಿ ರಾಜ್ಯದ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಕಳೆದ ೭೦ ವರ್ಷಗಳಲ್ಲಿ ಕೈಗೊಳ್ಳಲಾಗದ ಸಾಧನೆಗಳು ಕೇವಲ ೯ ವರ್ಷಗಳಲ್ಲಿ ಸಾಧಿಸಿದ್ದು ಐತಿಹಾಸಿಕ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅನುದಾನ ಪಡೆದುಕೊಳ್ಳುವಲ್ಲಿ ರಾಜ್ಯವು ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದ್ದು, ೧,೧೬,೦೦೦ ಕೋಟಿ ರೂ.ಗಳ ೪ ಸಾವಿರಕ್ಕೂ ಅಧಿಕ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಈಗ ಅತ್ಯಂತ ವೇಗದಲ್ಲಿ ನಡೆಯುತ್ತಿರುವುದು ಗಮನಾರ್ಹ. ವಾಯುಯಾನ ಸಂಪರ್ಕ ಕ್ಷೇತ್ರದಲ್ಲಿ ಮೋದಿ ಸರ್ಕಾರದ ನೇತೃತ್ವದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದು, ಪ್ರತಿ ೨೦೦ ಕಿ.ಮೀ.ಗೆ ಒಂದು ನಿಲ್ದಾಣ ನಿರ್ಮಾಣ ಮಾಡಲಾಗಿದೆ.
೨೦೧೪ರ ಮೇ ೨೬ರಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರವು ಕಳೆದ ೯ ವರ್ಷಗಳಲ್ಲಿ, ಭಾರತದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಪ್ರತಿ ದಿನ ಕೇಳಿಬರುತ್ತಿದ್ದ ಹಗರಣಗಳು, ಉಗ್ರಕೃತ್ಯಗಳ ವರದಿಗಳು ದೇಶದ ರಾಜಕಾರಣವನ್ನು ಕುರಿತು ಜುಗುಪ್ಸೆಯನ್ನು ಮೂಡಿಸುವಂತಹದ್ದಾಗಿದ್ದವು. ದೇಶದ ಸಂಪನ್ಮೂಲ, ಅಭಿವೃದ್ಧಿಯು ಕಟ್ಟಕಡೆಯ ವ್ಯಕ್ತಿಗೂ ತಲಪಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಕಳೆದ ೯ ವರ್ಷಗಳಲ್ಲಿ ಇಡೀ ದೇಶದಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಿದೆ. ಹಣಕಾಸು, ಮೂಲಸೌಕರ್ಯ, ಆರೋಗ್ಯ, ರಕ್ಷಣೆ, ಇಂಥ ಕ್ಷೇತ್ರಗಳಲ್ಲಿದ್ದ ಏಕತಾನತೆಯನ್ನು ಹೋಗಲಾಡಿಸಿ, ಆ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ಅಥವಾ ಹೊಸ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಭಾರತದ ಭವ್ಯ ಭವಿಷ್ಯಕ್ಕೆ ನಾಂದಿ ಹಾಡಿದೆ. ಕಳೆದ ಕೆಲ ದಶಕಗಳಲ್ಲಿ ತ್ವರಿತವಾಗಿ ಬದಲಾಗುತ್ತಿರುವ ಜಾಗತಿಕ ಟ್ರೆಂಡ್ಗಳಿಗೆ ಅನುಗುಣವಾಗಿ ಭಾರತವು ಬದಲಾಗದೆ ಇದ್ದುದರ ಪರಿಣಾಮವಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಪ್ರಗತಿಯು ಮಂದಗತಿಯಲ್ಲಿ ಸಾಗುತ್ತಿತ್ತು. ಇದನ್ನು ಪಾದರಸದಂತೆ ಚುರುಕಾಗಿಸಿದ ಹೆಗ್ಗಳಿಕೆ ಮೋದಿ ಸರ್ಕಾರದ್ದು. ತಳಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಮೋದಿ ಸರ್ಕಾರವು ಭಾರತವನ್ನು ಅಭಿವೃದ್ಧಿಗೊಳಿಸಿದ ರೀತಿಯು ಬೆರಗು ಮೂಡಿಸುವಂಥದ್ದು.
ಕರ್ನಾಟಕವು ಹಿಂದಿನಿಂದಲೂ ಅತ್ಯಂತ ಸಂಪದ್ಭರಿತ ರಾಜ್ಯವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ನರೇಂದ್ರ ಮೋದಿ ಸರ್ಕಾರವು ರಾಜ್ಯದ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಗೆ ಈ ಹಿಂದಿನ ಯಾವ ಸರ್ಕಾರವೂ ಒದಗಿಸದಷ್ಟು ಕೊಡುಗೆಗಳನ್ನು ನೀಡಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ.
೨೦೨೩ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಪತ್ರ ಬರೆದು, ಕರ್ನಾಟಕದ ಅಭಿವೃದ್ಧಿಯು ದೇಶದ ಪ್ರಗತಿಯಲ್ಲಿ ಎಷ್ಟರಮಟ್ಟಿಗೆ ಪ್ರಾಮುಖ್ಯ ಪಡೆದಿದೆ ಎಂಬುದನ್ನು ಈ ರೀತಿ ವಿವರಿಸಿದ್ದು ವಿಶೇಷ.
ಅಮೃತಕಾಲದ ಅಭ್ಯುದಯಪಥ
“ಸ್ವಾತಂತ್ರ್ಯೋತ್ಸವದ ಅಮೃತಕಾಲದಲ್ಲಿರುವ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಸೇರಿಸಲು ಪ್ರಯತ್ನಪಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಕರ್ನಾಟಕದ ಮುಂದಾಳತ್ವ ಆವಶ್ಯಕ. ಭಾರತ ಇಂದು ವಿಶ್ವದ ಐದನೇ ಪ್ರಬಲ ಆರ್ಥಿಕಶಕ್ತಿಯಾಗಿದ್ದು, ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ತಲಪುವ ಗುರಿ ಹೊಂದಿದ್ದೇವೆ. ಕರ್ನಾಟಕವು ಒಂದು ಟ್ರಿಲಿಯನ್ ಡಾಲರ್ ಆರ್ಥಿಕ ಬೆಳವಣಿಗೆ ಸಾಧಿಸಿದರೆ ಮಾತ್ರ ನಾವು ಈ ಗುರಿ ತಲಪಲು ಸಾಧ್ಯ. ಬಿಜೆಪಿ ಸರ್ಕಾರದ ನಿರ್ಣಾಯಕ, ದೂರದೃಷ್ಟಿಯ ನೀತಿಗಳಿಂದಾಗಿ ಕರ್ನಾಟಕದ ಆರ್ಥಿಕತೆಯು ವೇಗ ಪಡೆದುಕೊಂಡಿದೆ. ಕರ್ನಾಟಕದ ಅಭಿವೃದ್ಧಿ ಮತ್ತು ಯುವಜನರ ಉಜ್ಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಇರುವ ಬದ್ಧತೆಗೆ ಇದು ಸಾಕ್ಷಿ.
ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ಸಾರಿಗೆ-ಸಂಪರ್ಕ, ಸುಲಲಿತ ಜೀವನ, ವ್ಯವಹಾರಗಳಿಗೆ ಒತ್ತುನೀಡಿ ತೆಗೆದುಕೊಂಡ ನಿರ್ಧಾರಗಳು, ಪ್ರಾರಂಭಗೊಳಿಸಿರುವ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ದೃಢವಾದ ಅಡಿಪಾಯ ಹಾಕಿವೆ. ಭವ್ಯ ಸಾಂಸ್ಕೃತಿಕ ಪರಂಪರೆ ಹೊಂದಿರುವ ಕರ್ನಾಟಕದ ಯಶೋಗಾಥೆ ಇಡೀ ರಾಷ್ಟ್ರಕ್ಕೆ ಪ್ರೇರಣಾದಾಯಿಯಾಗಿದ್ದು, ಕರ್ನಾಟಕದ ಎಲ್ಲ ನಗರಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಸಂಚಾರವ್ಯವಸ್ಥೆಯ ಅಧುನಿಕೀಕರಣ, ಹಳ್ಳಿ ಹಾಗೂ ನಗರಗಳಲ್ಲಿ ಗುಣಮಟ್ಟದ ಜೀವನ, ಮಹಿಳೆಯರು ಹಾಗೂ ಯುವಜನರಿಗೆ ಹೊಸ ಅವಕಾಶಗಳ ಸೃಷ್ಟಿ – ಹೀಗೆ ಕರ್ನಾಟಕ ಸಮೃದ್ಧಿ ಮತ್ತು ಪ್ರಗತಿ ಪಥದಲ್ಲಿ ಸಾಗಲು ಬಿಜೆಪಿ ಸರ್ಕಾರದ ಕೊಡುಗೆ ಅನನ್ಯ.”
ಕರ್ನಾಟಕಕ್ಕೆ ಮೊದಲ ಐಐಟಿ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಮೋದಿ ಸರ್ಕಾರ ಹಸಿರು ನಿಶಾನೆ ತೋರಿಸಿ ೬೦೦ ಕೋಟಿ ರೂ. ಬಿಡುಗಡೆ ಮಾಡಿತು. ಶಿವಮೊಗ್ಗ ಭಾಗದ ಮುಳುಗಡೆ ಸಂತ್ರಸ್ತರ ಎರಡು ದಶಕಗಳ ಬೇಡಿಕೆ ಇದಾಗಿತ್ತು. ಕನ್ನಡಿಗರಿಗೆ ಇದೇ ಮೊದಲಬಾರಿಗೆ ರೈಲ್ವೇ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಿ ಮೋದಿ ಸರ್ಕಾರ ಹಲವು ದಶಕಗಳ ಕನ್ನಡಿಗರ ಕನಸನ್ನು ಈಡೇರಿಸಿದೆ. ೪೮ ಗಂಟೆಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಸುಪ್ರೀಂಕೋರ್ಟ್ ಆದೇಶಿಸಿದಾಗ ಅದು ನಿಮ್ಮ ಕೆಲಸವಲ್ಲ, ಸಂಸತ್ತಿನ ಕೆಲಸ ಎಂದು ಹಿಂದಿನ ಎಲ್ಲ ಸರ್ಕಾರಗಳಿಗಿಂತ ಗಟ್ಟಿ ಧ್ವನಿಯಲ್ಲಿ ಸುಪ್ರೀಂಕೋರ್ಟ್ನಲ್ಲಿ ಹೇಳಿದ್ದು ಇದೇ ಮೋದಿ ಸರ್ಕಾರ. ಬೆಳಗಾವಿಯ ವಿಷಯ ಬಂದಾಗ ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದು ಇದೇ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರ.
‘ಸ್ಮಾರ್ಟ್ ಸಿಟಿ’ ಮಿಷನ್ನಲ್ಲಿ ಕರ್ನಾಟಕದಲ್ಲಿ ಆಯ್ಕೆಯಾಗಿರುವ ೬ ಸ್ಮಾರ್ಟ್ಸಿಟಿಗಳಾದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಬಿಡುಗಡೆಯಾಗಿದೆ. ಕೆಲ ವರ್ಷದ ಹಿಂದೆ ಅಡಕೆ ಧಾರಣೆಯಲ್ಲಿ ವ್ಯಾಪಕ ಕುಸಿತ ಕಂಡಿದ್ದಾಗ ಮೋದಿ ಸರ್ಕಾರದ ಬಳಿ ಕರ್ನಾಟಕದ ರೈತರು ನಿಯೋಗ ಕೊಂಡೊಯ್ದಿದ್ದರು. ಅದಕ್ಕೆ ಸ್ಪಂದಿಸಿದ ಮೋದಿ ಸರ್ಕಾರ, ವಿದೇಶದಿಂದ ಆಮದಾಗುತ್ತಿದ್ದ ಅಡಕೆ ಮೇಲಿನ ಸುಂಕ ಹೆಚ್ಚಿಸಿ, ಕರ್ನಾಟಕದ ಅಡಕೆಗೆ ಉತ್ತಮವಾದ ಮಾರುಕಟ್ಟೆ ಒದಗಿಸಿ ಅನುಕೂಲ ಕಲ್ಪಿಸಿದ್ದು ಗಮನಾರ್ಹ. ಇದರ ಪರಿಣಾಮದಿಂದ ಕೆಲವೇ ದಿನಗಳಲ್ಲಿ ಅಡಕೆ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡುಬಂದು ರೈತರು ನಿರಾಳಗೊಳ್ಳುವಂತಾಗಿತ್ತು.
ಅನುದಾನಪ್ರಮಾಣದ ಏರಿಕೆ
ಕರ್ನಾಟಕವು ಕಳೆದ ೭೦ ವರ್ಷಗಳಲ್ಲಿ ಪಡೆದುಕೊಂಡಿರದಿದ್ದ ಅನುದಾನವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಡೆದುಕೊಂಡಿದ್ದನ್ನು ಅಂಕಿಅಂಶಗಳೇ ದೃಢೀಕರಿಸುತ್ತವೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಪ್ರಯತ್ನದ ಫಲವಾಗಿ ದಶಕಗಳಿಂದ ನೆನೆಗುದಿಯಲ್ಲಿದ್ದ ಕಳಸಾ ಬಂಡೂರಿ ಡಿ.ಪಿ.ಆರ್.ಗೆ ಒಪ್ಪಿಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿರುವುದರಿಂದ ರಾಜ್ಯದ ನೀರಾವರಿ, ಕೃಷಿ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಮೆಟ್ರೋ, ಸಬ್ಅರ್ಬನ್ ರೈಲು, ಸ್ಯಾಟಲೈಟ್ ಟೌನ್ ರಿಂಗ್ರೋಡ್, ಭೂಸಾರಿಗೆ ಪ್ರಾಧಿಕಾರ ಸ್ಥಾಪನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರವು ಮಹತ್ತ್ವದ ಕೊಡುಗೆಗಳನ್ನು ನೀಡಲಾಗಿದ್ದು, ಬಿಜೆಪಿ ಸರ್ಕಾರದ ಅಭಿವೃದ್ಧಿಯ ಮಾದರಿಗೆ ಇದು ಸಾಕ್ಷಿ.
ಕಳೆದ ೫ ವರ್ಷಗಳಲ್ಲಿ ಕೇಂದ್ರಸರ್ಕಾರದಿಂದ ಕರ್ನಾಟಕಕ್ಕೆ ದೊರೆತ ಅನುದಾನ:
ರಾಷ್ಟ್ರೀಯ ಹೆದ್ದಾರಿ – ೬೪ ಸಾವಿರ ಕೋಟಿ
ರೈಲ್ವೇ – ೩,೪೨೦ ಕೋಟಿ
ಸ್ಮಾರ್ಟ್ ಸಿಟಿ – ೨,೫೦೦ ಕೋಟಿ
ಕಿಸಾನ್ ಸಮ್ಮಾನ ನಿಧಿ – ೧೧,೦೦೦ ಕೋಟಿ (೫೩ ಲಕ್ಷ ಫಲಾನುಭವಿಗಳು).
ಮೇಲಣ ಹಾಗೂ ಇನ್ನಿತರ ಯೋಜನೆಗಳಲ್ಲಿ ಯು.ಪಿ.ಎ. ಅವಧಿಗಿಂತ ಎರಡುಮೂರು ಪಟ್ಟು ಅಧಿಕ ಅನುದಾನ ನೀಡಲಾಗಿದೆ.
ಕರ್ನಾಟಕದಲ್ಲಿ ಕಳೆದ ೭೦ ವರ್ಷಗಳಲ್ಲಿ ಕೇವಲ ೨೫ ಲಕ್ಷ ಮನೆಗಳಿಗೆ ಮಾತ್ರ ಇದ್ದ ನಲ್ಲಿನೀರಿನ ಸಂಪರ್ಕವನ್ನು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಇಡೀ ಕರ್ನಾಟಕದಲ್ಲಿ ೫೫ ಲಕ್ಷ ಮನೆಗಳಿಗೆ ತಲಪಿಸಲಾಗಿದೆ ಎನ್ನುವುದು ಬದಲಾವಣೆಯ ಪರ್ವಕ್ಕೆ ಸಾಕ್ಷಿ.
೨೦೧೪ಕ್ಕಿಂತಲೂ ಮುಂಚೆ ಕರ್ನಾಟಕ ರಾಜ್ಯದಲ್ಲಿದ್ದ ಏರ್ಪೋರ್ಟ್ಗಳು ಕೇವಲ ೨ ಮಾತ್ರವಿತ್ತ್ರು. ೨೦೧೪ರ ನಂತರ ಕೇವಲ ೯ ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡ ಏರ್ಪೋರ್ಟ್ಗಳ ಸಂಖ್ಯೆ ೧೦. ೨೦೧೪ಕ್ಕೆ ಮುಂಚೆ ಬೆಂಗಳೂರು ನಗರದ ಮೆಟ್ರೋ ಸಂಪರ್ಕ ಕೇವಲ ೭ ಕಿ.ಮೀ. ಮಾತ್ರವಿತ್ತು. ಪ್ರಸ್ತುತ ಇಡೀ ಬೆಂಗಳೂರು ೭೦ ಕಿ.ಮೀ. ಮೆಟ್ರೋರೈಲು ಸಂಪರ್ಕ ವ್ಯಾಪ್ತಿಯನ್ನು ಹೊಂದಿದೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಅಗಾಧ ಸುಧಾರಣೆಗಳನ್ನು ಕೈಗೊಂಡಿದ್ದು, ಕ್ಷಿಪ್ರ, ವೇಗದ ಗತಿಯ ಅಭಿವೃದ್ಧಿಯು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ಜನಸಾಮಾನ್ಯರ ಅನಿಸಿಕೆಯಾಗಿದೆ.
ಸರ್ವಾಂಗೀಣ ಅಭಿವೃದ್ಧಿ
ಕರ್ನಾಟಕವು ಒಂದು ಪ್ರಗತಿಶೀಲ ರಾಜ್ಯವಾಗಿದ್ದು, ಬಿಜೆಪಿ ಆಡಳಿತದಲ್ಲಿ ರಾಜ್ಯದ ಸಮಗ್ರ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಕಳೆದ ೭೦ ವರ್ಷಗಳಲ್ಲಿ ಕೈಗೊಳ್ಳಲಾಗದ ಸಾಧನೆಗಳು ಕೇವಲ ೯ ವರ್ಷಗಳಲ್ಲಿ ಸಾಧಿಸಿದ್ದು ಐತಿಹಾಸಿಕ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅನುದಾನ ಪಡೆದುಕೊಳ್ಳುವಲ್ಲಿ ರಾಜ್ಯವು ಗಣನೀಯ ಪ್ರಮಾಣದಲ್ಲಿ ಪ್ರಗತಿ ಸಾಧಿಸಿದ್ದು, ೧,೧೬,೦೦೦ ಕೋಟಿ ರೂ.ಗಳ ೪ ಸಾವಿರಕ್ಕೂ ಅಧಿಕ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಈಗ ಅತ್ಯಂತ ವೇಗದಲ್ಲಿ ನಡೆಯುತ್ತಿರುವುದು ಗಮನಾರ್ಹ.
ಕರ್ನಾಟಕವು ವಾಯುಯಾನ ಸಂಪರ್ಕ ಕ್ಷೇತ್ರದಲ್ಲಿ ಮೋದಿ ಸರ್ಕಾರದ ನೇತೃತ್ವದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದು, ಪ್ರತಿ ೨೦೦ ಕಿ.ಮೀ.ಗೆ ಒಂದು ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಉಡಾನ್ ಯೋಜನೆಯ ಅಡಿಯಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಬೀದರ್, ಕಲಬುರ್ಗಿ, ಬಳ್ಳಾರಿ, ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕವು ಅತ್ಯಂತ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿದ್ದು, ಮಂಗಳೂರು ಬಂದರು ಮರುನಿರ್ಮಾಣ, ಕಾರವಾರದ ಐ.ಎನ್.ಎಸ್. ಕದಂಬ ನೌಕಾನೆಲೆಯನ್ನು ೧೨,೦೦೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಇದು ಏಷಿಯಾದ ಅತ್ಯಂತ ಸುಸಜ್ಜಿತ ನೌಕಾ ನೆಲೆಯಾಗಲಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.
ಹಣಕಾಸು ನಿರ್ವಹಣಾ ವ್ಯವಸ್ಥೆಯಲ್ಲಿ ಅತಿದೊಡ್ಡ ಸುಧಾರಣೆಯಾಗಿ ಜನಧನ್ ಖಾತೆಗಳನ್ನು ಆರಂಭಿಸಲಾಗಿದ್ದು, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಅದರ ಸಂಪೂರ್ಣ ಲಾಭವನ್ನು ಪಡೆಯಲು ಅತ್ಯಂತ ಅನುಕೂಲವಾಗಿದೆ. ಕರ್ನಾಟಕದಲ್ಲಿ ಇದುವರೆಗೆ ೧.೫೬ ಕೋಟಿ ಜನಧನ್ ಖಾತೆಗಳಿದ್ದು, ಇದರಲ್ಲಿ ೮೮ ಲಕ್ಷ ಮಹಿಳಾ ಖಾತೆಗಳಿವೆ. ಇದರಲ್ಲಿ ೫,೮೨೧ ಕೋಟಿ ರೂ.ಗಳ ಠೇವಣಿ ಹೊಂದಿರುವುದು ಕೇಂದ್ರಸರ್ಕಾರದ ಮಹತ್ತ್ವದ ಕಾರ್ಯಯೋಜನೆಗಳಲ್ಲಿ ಒಂದು.
ಅಸಂಘಟಿತ ಕಾರ್ಮಿಕರಿಗೆ ಸರಕಾರದ ಯೋಜನೆಗಳನ್ನು ತಲಪಿಸುವ, ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಇ-ಶ್ರಮ್ ಪೋರ್ಟಲ್ ಪ್ರಾರಂಭಿಸಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ೭೫ ಲಕ್ಷಕ್ಕೂ ಅಧಿಕ ಕಾರ್ಮಿಕರು ತಮ್ಮ ಹೆಸರನ್ನು ನೋಂದಣಿಗೊಳಿಸಿದ್ದಾರೆ. ಬಡ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವೈದ್ಯಕೀಯ ವೆಚ್ಚ ನಿರ್ವಹಣೆಗೆ ಪ್ರತಿ ವರ್ಷ ೫ ಲಕ್ಷ ರೂ. ಗಳನ್ನು ಒದಗಿಸುವ ಆಯುಷ್ಮಾನ್ ಭಾರತ್ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ೨೦೧೮ರಲ್ಲಿ ಚಾಲನೆ ನೀಡಿದ್ದು, ಕರ್ನಾಟಕದಲ್ಲಿ ೧೯ ಲಕ್ಷ ಅಯುಷ್ಮಾನ್ ಭಾರತ್ ಕಾರ್ಡ್ ವಿತರಿಸಿರುವುದು ಗಮನಾರ್ಹ.
ಹಣಕಾಸು ಕೊರತೆಯಿಂದ ಉದ್ಯಮ ಆರಂಭಿಸಲು ಹಿಂಜರಿಯುವ ಯುವ, ಮಹಿಳಾ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಆರಂಭಿಸಲಾಗಿರುವ ಮುದ್ರಾ ಯೋಜನೆಯ ಅಡಿಯಲ್ಲಿ ಇದುವರೆಗೆ ರಾಜ್ಯದಲ್ಲಿ ೩.೨೩ ಲಕ್ಷ ಜನರು ಸಾಲ ಪಡೆದಿದ್ದು, ೧.೬ ಲಕ್ಷ ಕೋಟಿ ಮೊತ್ತವನ್ನು ಉದ್ಯಮ ಆರಂಭಕ್ಕೆ ವಿತರಿಸಲಾಗಿದೆ.
ಸಾರಿಗೆಯ ಕ್ಷೇತ್ರದ ಕ್ರಾಂತಿ
ಕೇಂದ್ರಸರ್ಕಾರದ ಇತ್ತೀಚೆಗಿನ ಆಯ-ವ್ಯಯದಲ್ಲಿ, ಕರ್ನಾಟಕದಲ್ಲಿ ರೇಲ್ವೆ ಅಭಿವೃದ್ಧಿಗೆ ಯುಪಿಎ ಆಡಳಿತದ ಕೊನೆಯ ೫ ವರ್ಷಗಳಲ್ಲಿ ಒದಗಿಸಿರುವ ಮೊತ್ತಕ್ಕಿಂತ ೯ ಪಟ್ಟು ಅಧಿಕ ಅನುದಾನ ನೀಡಿದ್ದು, ರೈಲ್ವೇ ಆಧುನಿಕೀಕರಣಕ್ಕೂ ಅಭಿವೃದ್ಧಿಗೂ ಇದುವರೆಗೆ ನೀಡಿದ ಅನುದಾನದಲ್ಲಿಯೇ ಅಧಿಕವಾಗಿದ್ದು, ರಾಜ್ಯದ ೫೫ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸುವುದರೊಂದಿಗೆ, ದಕ್ಷಿಣಭಾರತದ ಪ್ರಥಮ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಮೈಸೂರು, ಬೆಂಗಳೂರು-ಚೆನ್ನೈ ನಡುವೆ ಒದಗಿಸಿದ್ದು, ರೈಲ್ವೆ ಲೈನ್ಗಳನ್ನೂ ಯುಪಿಎ ಅವಧಿಗಿಂತ ಎರಡುಪಟ್ಟು ಅಧಿಕಗೊಳಿಸಿದ್ದು, ಕೇಂದ್ರ ಮತ್ತು ರಾಜ್ಯ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಸಾಧನೆ.
ನಗರದ ಆವಶ್ಯಕತೆಗೆ ಅನುಗುಣವಾಗಿ, ೨೦೧೯ರಲ್ಲಿ ಮೋದಿಯವರಿಂದ ಶಂಕುಸ್ಥಾಪನೆಗೊಂಡ ಬೆಂಗಳೂರು ಏರ್ಪೋರ್ಟ್ ಟರ್ಮಿನಲ್-೨ ನಿರ್ಮಾಣ ಕಾಮಗಾರಿಯು ಕೇವಲ ೩ ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡು ಕಾರ್ಯಸೇವೆಗೆ ಅಣಿಯಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಿಗಳು ಉದ್ಘಾಟನೆಗೊಳಿಸಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಟರ್ಮಿನಲ್-೨ ಬೆಂಗಳೂರಿನ ಹೆಮ್ಮೆ ಎನ್ನುವುದು ವಿಶೇಷ.
ಬೆಂಗಳೂರಿನ ಸಾರ್ವಜನಿಕ ಸಂಚಾರವು ನಗರದ ಬಿಎಂಟಿಸಿ ಬಸ್ ಕೇಂದ್ರಿತವಾಗಿದ್ದು, ಇದಕ್ಕೆ ಪೂರಕವಾಗಿ ಕೇಂದ್ರಸರ್ಕಾರದ ಫೇಮ್ ಯೋಜನೆಯಡಿಯಲ್ಲಿ ನಗರಕ್ಕೆ ಪರಿಸರಸ್ನೇಹಿ ೧೫೦೦ ಬಸ್ಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒದಗಿಸಿದ್ದು, ಈಗಾಗಲೇ ೩೦೦ ಇಂತಹ ಬಸ್ಗಳು ನಗರದ ನಾಗರಿಕರ ಸೇವೆಯಲ್ಲಿವೆ.
ಬೆಂಗಳೂರು ಸಬ್ಅರ್ಬನ್ ರೈಲಿನ ಕುರಿತು ಕಳೆದ ೪೦ ವರ್ಷಗಳಿಂದ ಕೇವಲ ಪೊಳ್ಳು ಭರವಸೆಗಳನ್ನು ಕೇಳಿದ್ದ ಬೆಂಗಳೂರಿನ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿರವರ ನೇತೃತ್ವದ ಡಬಲ್ ಎಂಜಿನ್ ಸರ್ಕಾರವು ಕೇವಲ ೪೦ ತಿಂಗಳ ಅವಧಿಯಲ್ಲಿ ಈ ಯೋಜನೆ ಸಂಪೂರ್ಣ ಸಾಕಾರಗೊಳ್ಳುತ್ತಿರುವುದು ಗಮನಾರ್ಹ.
ವಿನೂತನ ಯೋಜನೆಗಳು
ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ, ತುಮಕೂರಿಗೆ ಎಚ್.ಎ.ಎಲ್. ಫ್ಯಾಕ್ಟರಿ, ಮೈಸೂರಿಗೆ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್, ಬೆಂಗಳೂರಿಗೆ ಬಹುಆಯಾಮದ ಲಾಜಿಸ್ಟಿಕ್ಸ್ ಪಾರ್ಕ್, ರಾಜ್ಯದ ೧೧ ಲಕ್ಷ ಕುಟುಂಬಗಳಿಗೆ ಪಿ.ಎಂ. ಆವಾಸ್ ಯೋಜನೆಯಲ್ಲಿ ಗೃಹ ನಿರ್ಮಾಣ, ೫೦ ಲಕ್ಷ ಫಲಾನುಭವಿಗಳಿಗೆ ಪಿ.ಎಂ. ಕಿಸಾನ್ ನಿಧಿಯಲ್ಲಿ ಪರಿಹಾರ ವಿತರಿಸಿದ್ದು ಗಮನಸೆಳೆದಿದೆ.
ರಾಜ್ಯ ಮತ್ತು ದೇಶದ ಸುರಕ್ಷತೆಗೆ ಕಂಟಕವಾಗಿದ್ದ ಪಿ.ಎಫ್.ಐ. ಮೇಲಿನ ೧೬೦೦ ಕೇಸ್ಗಳನ್ನು ಹಿಂದಿನ ಕಾಂಗ್ರೆಸ್ಸರ್ಕಾರ ಹಿಂಪಡೆದ ಪರಿಣಾಮ ದೇಶದಲ್ಲಿ ಹಿಂಸಾತ್ಮಕ ಕಾರ್ಯಗಳು ವೃದ್ಧಿಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರಸರ್ಕಾರವು, ನರೇಂದ್ರ ಮೋದಿ, ಅಮಿತ್ ಶಾ ಅವರ ದಿಟ್ಟ ನೇತೃತ್ವದಲ್ಲಿ ಪಿ.ಎಫ್.ಐ. ಅನ್ನು ಬಗ್ಗುಬಡೆದಿದ್ದು ಶ್ಲಾಘನೀಯ.
ಕರ್ನಾಟಕವು ದೇಶದ ಅತ್ಯಂತ ಪ್ರಗತಿಶೀಲ ರಾಜ್ಯವಾಗಿದ್ದು, ಅತಿ ಹೆಚ್ಚು ವಿದೇಶೀ ಬಂಡವಾಳ ಹೂಡಿಕೆಯನ್ನು ಆಕರ್ಷಿಸಬಲ್ಲ, ಹೆಚ್ಚು ಸ್ಟಾರ್ಟ್ಅಪ್, ಯೂನಿಕಾರ್ನ್ಗಳನ್ನು ಹೊಂದಿರುವ ಅಗ್ರಗಣ್ಯ ರಾಜ್ಯವಾಗಿದ್ದು, ಇದಕ್ಕೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ನಗರಕ್ಕೆ ಒದಗಿಸಿರುವ ಮೂಲಭೂತ ಸೌಕರ್ಯ, ಸಮರ್ಪಕ, ಜನಪರ ನೀತಿಗಳೇ ಕಾರಣ ಎಂಬುದು ಸ್ಪಷ್ಟವಿದೆ.
ಅಧಿಕ ಪ್ರಮಾಣದ ತೆರಿಗೆ ಹಂಚಿಕೆ
೨೦೧೪-೨೦೧೯ರವರೆಗೆ ಕೇಂದ್ರದಿಂದ ರಾಜ್ಯಕ್ಕೆ ನೀಡಲ್ಪಟ್ಟ ತೆರಿಗೆ ಪ್ರಮಾಣವು ೧.೩೫ ಲಕ್ಷ ಕೋಟಿ ಇದ್ದು, ೨೦೦೯-೨೦೧೪ಕ್ಕಿಂತ ಎರಡೂವರೆ ಪಟ್ಟು ಅಧಿಕ ಎಂಬುದು ಗಮನಾರ್ಹ. ೨೦೧೯-೨೦೨೪ರ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ ದೊರೆಯಲಿರುವ ತೆರಿಗೆ ಮೊತ್ತವು ೧.೫೮ ಲಕ್ಷ ಕೋಟಿಯಾಗಲಿದ್ದು, ಅದು ಇದುವರೆಗಿನ ಅತಿ ಹೆಚ್ಚಿನ ಪ್ರಮಾಣದ ಮೊತ್ತವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ೧೦ ವರ್ಷಗಳ ಕಾಲಾವಧಿಯ ತೆರಿಗೆ ಹಂಚಿಕೆಯು ೨.೯೩ ಲಕ್ಷ ಕೋಟಿ ರೂ. ಆಗಲಿದ್ದು, ಇದು ಯುಪಿಎ ೧ ಮತ್ತು ೨ರ ಎರಡೂ ಅವಧಿಗಿಂತಲೂ ಅಧಿಕ ಎಂಬುದು ವಿಶೇಷ. ೨೦೦೯-೨೦೧೪ರವರೆಗಿನ ಯುಪಿಎ ೨ನೇ ಅವಧಿಯಲ್ಲಿ ರಾಜ್ಯಕ್ಕೆ ದಕ್ಕಿರುವ ಅನುದಾನಕ್ಕಿಂತಲೂ, ಎರಡುಮೂರು ಪಟ್ಟು ಅಧಿಕ (೯೧,೩೭೪ ಕೋಟಿ ರೂ.ಗಳು) ಅನುದಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರವು ೨೦೧೪-೨೦೧೯ರ ಅವಧಿಯಲ್ಲಿ ರಾಜ್ಯಕ್ಕೆ ಒದಗಿಸಿದ್ದು, ೨೦೧೯-೨೦೨೩ರಲ್ಲಿ ಇದುವರೆಗೆ ೧.೧೭ ಲಕ್ಷ ಅನುದಾನವನ್ನು ಈಗಾಗಲೇ ಒದಗಿಸಿರುವುದು ಗಮನಾರ್ಹ.
೨೦೨೩-೨೪ರ ಅವಧಿಯ ಹೆಚ್ಚುವರಿ ಅನುದಾನದ ೧೮,೦೦೫ ಕೋಟಿ ರೂ. ಮೊತ್ತವನ್ನೂ ಕೂಡ ಇದರಲ್ಲಿ ಸೇರಿಸಿದರೆ ಅನುದಾನದ ಪೂರ್ಣ ಮೊತ್ತವು ೧.೩೫ ಲಕ್ಷ ಕೋಟಿ ರೂ. ಆಗಲಿದ್ದು, ಇದು ಯುಪಿಎ ೨ನೇ ಅವಧಿಗಿಂತ ೩ಪಟ್ಟು ಅಧಿಕವಾಗಲಿದ್ದು, ರಾಜ್ಯದ ಅಭಿವೃದ್ಧಿಯ ಬಗೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ.
ಜಗಜ್ಯೋತಿ ಬಸವೇಶ್ವರರ ಮಾದರಿ, ಭಾರತದ ಐತಿಹಾಸಿಕ ವಿಶೇಷಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಅತ್ಯಂತ ಮಹತ್ತ್ವದ್ದು. ಗಣತಂತ್ರದ ಕುರಿತಾಗಿ ಮ್ಯಾಗ್ನ ಕಾರ್ಟಾವನ್ನು ಉಲ್ಲೇಖಿಸುವ ವಿದೇಶೀ ಇತಿಹಾಸಕಾರರಿಗೆ ನಮ್ಮ ಕರ್ನಾಟಕದ ಜಗಜ್ಯೋತಿ ಬಸವೇಶ್ವರರು ೧೨ನೇ ಶತಮಾನದಲ್ಲಿಯೇ ಅನುಭವಮಂಟಪದ ಮೂಲಕ ಎಲ್ಲ ಜಾತಿ, ಪಂಗಡಗಳ, ಮಹಿಳೆಯರನ್ನು ಒಳಗೊಂಡ ಪ್ರಜಾಪ್ರಭುತ್ವ ಮಾದರಿ ಸ್ಥಾಪಿಸಿದ್ದನ್ನು ಹಲವಾರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾವಿಸಿ ವಿಶೇಷ ಗೌರವ ಒದಗಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಹೆಗ್ಗಳಿಕೆ. ಬಸವೇಶ್ವರರ ವಚನಗಳನ್ನು ವಿಶ್ವದ ಹಲವು ಭಾಷೆಗಳಲ್ಲಿ ಭಾಷಾಂತರಗೊಳಿಸಲು ಕೇಂದ್ರಸರ್ಕಾರ ಅನುದಾನವನ್ನು ಒದಗಿಸಿದೆ.
ಪದ್ಮ ಪ್ರಶಸ್ತಿಗಳಿಗೆ ಅರ್ಹ ಕನ್ನಡಿಗರ ಆಯ್ಕೆ
ಬಹುಶಃ ೨೦೧೪ಕ್ಕೂ ಮುಂಚೆ ಪದ್ಮ ಪ್ರಶಸ್ತಿಗಳ ಆಯ್ಕೆಗೆ ನಡೆದ ಲಾಬಿಗಳನ್ನು ಸಂಪೂರ್ಣ ಹತ್ತಿಕ್ಕಿ ನಿಜವಾದ ಅರ್ಹ ಸಾಧಕರನ್ನು ಗುರುತಿಸಿ ಸನ್ಮಾನ ನೀಡಿದ್ದು ಅನುಕರಣೀಯ. ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ, ಹಣ್ಣುಗಳನ್ನು ಮಾರಿ ದಿನಕ್ಕೆ ಕೇವಲ ೧೫೦ ರೂ. ಗಳಿಸಿ ತನ್ನ ಊರಿನಲ್ಲಿ ಶಾಲೆ ನಿರ್ಮಿಸಿರುವ ಹರೇಕಳ ಹಾಜಬ್ಬರಂತಹ ಸಾಧಕರು, ಸಾಹಿತ್ಯಕ್ಷೇತ್ರದಲ್ಲಿ ಅನುಪಮ ಸಾಧನೆಗೈದಿರುವ ಎಸ್.ಎಲ್. ಭೈರಪ್ಪ, ಏಕಾಂಗಿಯಾಗಿ ಸುರಂಗಗಳನ್ನು ತೋಡಿ ನೀರಿನ ಚಿಲುಮೆ ಉಕ್ಕಿಸಿ ಬರಡುಭೂಮಿಯಲ್ಲಿ ಕೃಷಿ ಮಾಡಿದ ಸಾಧನೆಗೆ ಅಮೈ ಮಹಾಲಿಂಗ ನಾಯಕ, ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗೆ ಬಿ.ಎಂ. ಹೆಗ್ಡೆ, ೧ ಲಕ್ಷ ಸಸಿ ನೆಟ್ಟು ಪರಿಸರಸಂರಕ್ಷಣೆಯಲ್ಲಿ ಪ್ರಮುಖ ಸಾಧನೆಗೈದಿರುವ ಹಾಲಕ್ಕಿ ತುಳಸೀಗೌಡ, ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆಯ ಸಂಪಾದಕರಾಗಿರುವ ಕೆ.ವಿ. ಸಂಪತ್, ಅತ್ಯಂತ ಕಡಮೆ ದರದಲ್ಲಿ ರೈತರ ಉಪಕರಣಗಳನ್ನು ತಯಾರಿಗೊಳಿಸಿ ಕೃಷಿಕ್ಷೇತ್ರದಲ್ಲಿ ವಿನೂತನ ಸಾಧನೆಗೆ ಪಾತ್ರರಾಗಿರುವ ಧಾರವಾಡದ ಅಬ್ದುಲ್ ಸಾಬ್ ನಡಕಟ್ಟಿನ್, ಗಮಕಕ್ಕೆ ತಮ್ಮದೇ ರೀತಿಯಲ್ಲಿ ನ್ಯಾಯ ಒದಗಿಸಿದ ಶಿವಮೊಗ್ಗದ ಎಚ್.ಆರ್. ಕೇಶವಮೂರ್ತಿಗಳು ಸೇರಿದಂತೆ ಇನ್ನೂ ಅನೇಕ ಎಲೆಮರೆ ಕಾಯಿಯಂತಹ ಪ್ರತಿಭೆಗಳನ್ನು ಹುಡುಕಿ ಪ್ರಶಸ್ತಿ ನೀಡಿರುವುದು ಕನ್ನಡಿಗರು ಹೆಮ್ಮೆಪಡುವ ವಿಷಯ.
ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಿರುವ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಬಹುದಿನಗಳ ಬೇಡಿಕೆಯಾಗಿದ್ದ ಎನ್ಐಎ ಕಚೇರಿ ಸ್ಥಾಪನೆ, ಐಟಿಬಿಟಿ, ಸಿಲಿಕಾನ್ಸಿಟಿ ಎನಿಸಿರುವ ಬೆಂಗಳೂರಿನಲ್ಲಿ ಅಮೆರಿಕಾ ದೂತವಾಸ ಕಚೇರಿ ಪ್ರಾರಂಭದ ಬೇಡಿಕೆಯನ್ನು ಕೇಂದ್ರಸರ್ಕಾರ ಈಡೇರಿಸಿರುವುದು ಗಮನಾರ್ಹ. ಬ್ಯಾಂಕಿಂಗ್ ಮತ್ತು ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿರುವುದು – ಇವೆಲ್ಲ ಅಭೂತಪೂರ್ವ. ಮೋದಿ ಸರ್ಕಾರದ ಸಾಧನೆ.
ಹಂಪಿ ರಥದ ಚಿತ್ರ ನೋಟುಗಳಲ್ಲಿ ಮುದ್ರಣ
ಸನಾತನ ಪರಂಪರೆಯ ರಕ್ಷಣೆಗೆ ವಿಜಯನಗರ ಸಾಮ್ರಾಜ್ಯದ ಕೊಡುಗೆ ಅದ್ವಿತೀಯ. ಹಂಪಿ ಕಲ್ಲಿನ ರಥದ ಚಿತ್ರ ನೋಟುಗಳಲ್ಲಿ ಮುದ್ರಿಸುವ ಮೂಲಕ ಆ ಸಾಮ್ರಾಜ್ಯದ ಘನತೆಯನ್ನು ಎತ್ತಿಹಿಡಿದಿದ್ದು ಮೋದಿ ಸರ್ಕಾರದ ಕೊಡುಗೆ. ಇಂತಹ ಇನ್ನೂ ಹತ್ತುಹಲವು ಕಾರ್ಯಗಳ ಮೂಲಕ ಕರ್ನಾಟಕದ ಪ್ರಗತಿಗೆ ಪೂರಕವಾದ ಕ್ರಮಗಳನ್ನು ಬಿಜೆಪಿ ಸರ್ಕಾರ ಕೈಗೊಂಡಿರುವುದು ಇತಿಹಾಸಾರ್ಹ.
ಹಿಂದಿನ ಕೆಲ ದಶಕಗಳಲ್ಲಿ ತ್ವರಿತವಾಗಿ ಬದಲಾಗುತ್ತಿದ್ದ ಜಾಗತಿಕ ಟ್ರೆಂಡ್ಗಳಿಗೆ ಅನುಗುಣವಾಗಿ ಭಾರತವು ಬದಲಾಗಿದ್ದಿಲ್ಲ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಅಭಿವೃದ್ಧಿಯು ಮಂದಗತಿಯಲ್ಲಿ ಸಾಗುತ್ತಿತ್ತು. ಇದನ್ನು ಪಾದರಸದಂತೆ ಚುರುಕಾಗಿಸಿದ ಹೆಗ್ಗಳಿಕೆ ಮೋದಿ ಸರ್ಕಾರದ್ದು. ತಳಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಮೋದಿ ಸರ್ಕಾರವು ಭಾರತವನ್ನು ಅಭಿವೃದ್ಧಿಗೊಳಿಸಿದ ರೀತಿಯು ಬೆರಗುಮೂಡಿಸುವಂಥದ್ದು. ಭಾರತದ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆ ನೀಡಬಲ್ಲ ಕರ್ನಾಟಕದ ಸಮಗ್ರ, ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಸರ್ವರೀತಿಯಲ್ಲಿಯೂ ನರೇಂದ್ರ ಮೋದಿ ಸರ್ಕಾರ ಅನುವು ಮಾಡಿಕೊಟ್ಟಿದ್ದು, ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಸರ್ಕಾರವನ್ನು ಅಧಿಕಾರಕ್ಕೆ ತರುವುದು ನೂರಕ್ಕೆ ನೂರರಷ್ಟು ಸತ್ಯ.
(ಲೇಖಕರು: ಸಂಸದರು, ಬೆಂಗಳೂರು ದಕ್ಷಿಣ, ಮತ್ತು
ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು)