ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವ ಮಾತನ್ನು ಒಪ್ಪಿಕೊಂಡು ಮುಂದುವರಿಯೋಣ. ಇನ್ನು ಮೋದಿಯವರ ಬಗೆಗೆ ಹೇಳುವುದಾದರೆ ಅವರು ಅಂದಿನಿಂದ ಇಂದಿನವರೆಗೂ ಒಂದೇ ರೀತಿ ಇದ್ದಾರೆ. ಮಿತಿಯಿಲ್ಲದ ಒಬ್ಬ ರಾಷ್ಟ್ರಭಕ್ತನಾಗಿ, ರಾಷ್ಟ್ರಸೇವಕನಾಗಿ ರಾಷ್ಟ್ರಕ್ಕೆ ತನ್ನ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದ್ದಾರೆ. ಭಾರತೀಯ ಜನತಾಪಕ್ಷಕ್ಕೆ ಸಂಬಂಧಪಟ್ಟು ಹೇಳುವುದಾದರೆ ಅವರೊಬ್ಬ ಅಪ್ರತಿಮ ಸಂಘಟಕನಾಗಿ ಕಾಣುತ್ತಾರೆ; ಕ್ರಮೇಣ, ಮುಖ್ಯವಾಗಿ ಅವರು ಪ್ರಧಾನಿಯಾದ ಅನಂತರ ಪಕ್ಷವನ್ನು ತಮಗೆ ವಿಶಿಷ್ಟವಾದ ರೀತಿಯಲ್ಲಿ ಬೆಳೆಸಿದ್ದಾರೆ; ಆ ರೀತಿಯಲ್ಲಿ ಹೊಸದಾಗಿ ರೂಪಗೊಂಡ ಬಿಜೆಪಿಗೆ ಅವರೇ ಶಿಲ್ಪಿಯಾಗಿದ್ದಾರೆ.
ಆಳಾಗಬಲ್ಲವನು ಆಳುವನು ಅರಸಾಗಿ
– ಸರ್ವಜ್ಞ
ಮುಂಬರುವ ಲೋಕಸಭಾ ಚುನಾವಣೆಗೆ (೨೦೨೪) ಸಂಬಂಧಿಸಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾ ಪಕ್ಷಗಳ ಮೈತ್ರಿಯ ಪ್ರಸ್ತಾವವೊಂದು ಮುಂದೆ ಬಂದಿದೆ. ಈ ಮೈತ್ರಿಯ ಸ್ವರೂಪ ಮತ್ತು ಸೀಟು ಹಂಚಿಕೆಯ ಬಗೆಗಿನ ವಿವರಗಳು ಪ್ರಕಟವಾಗಿಲ್ಲವಾದರೂ ಮೈತ್ರಿ ಆಗುವುದು ಬಹುತೇಕ ಖಚಿತವೆನಿಸಿದೆ. ಆ ಹಿನ್ನೆಲೆಯಲ್ಲಿ ಜೆಡಿಎಸ್ ಪರಮೋಚ್ಚ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಒಂದು ಹೇಳಿಕೆ ಬಂದಿದೆ. ಹಿಂದೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಅನಂತರ ಪ್ರಧಾನಿಯಾಗಿರುವ ಮೋದಿ ಬೇರೆ ಬೇರೆ ಎಂದು ಹಿರಿಯ ಗೌಡರು ಹೇಳಿದ್ದಾರೆಂದು ವರದಿಯಾಗಿದೆ.
ಅವರದ್ದು ಜಾತ್ಯತೀತ ಜನತಾದಳವಲ್ಲವೆ? ಮೋದಿ ಅವರು ಕೋಮುವಾದಿಯಾಗಿದ್ದರೆ ಜೆಡಿಎಸ್ನವರಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಗುಜರಾತ್ ಮುಖ್ಯಮಂತ್ರಿ ಮೋದಿ ಆ ರೀತಿ (ಕೋಮುವಾದಿ) ಇದ್ದರು, ಆದರೆ ಈಗ ಬದಲಾಗಿದ್ದಾರೆ, ಆದ್ದರಿಂದ ಮೈತ್ರಿ ಸಮರ್ಥನೀಯ – ಎಂಬುದು ಈ ಮಾತಿನ ಸಾರಾಂಶ. ಇದರ ಬಗ್ಗೆ ಹೆಚ್ಚಿನ ವಿವರ ಅಗತ್ಯವಿಲ್ಲ. ದೇಶದ ಮಾಧಮಗಳ ದೊಡ್ಡ ವಿಭಾಗ, ಮುಖ್ಯವಾಗಿ ಇಂಗ್ಲಿಷ್ ಪತ್ರಿಕೆಗಳು ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಯಾವ ರೀತಿ ಚಿತ್ರಿಸಿದ್ದವು ಎಂಬುದನ್ನು ಜನತೆ ಮರೆತಿಲ್ಲ. ರೈಲಿಗೆ ಬೆಂಕಿ ಹಾಕಿ ಅಯೋಧ್ಯೆಯಿಂದ ಬರುತ್ತಿದ್ದ ೫೯ ಜನ ಕರಸೇವಕರನ್ನು ಗುಜರಾತಿನ ಗೋಧ್ರಾದಲ್ಲಿ ಜೀವಂತ ಸುಟ್ಟುಹಾಕಿದರು. ಅದರ ಬೆನ್ನಿಗೆ ಗುಜರಾತಿನಲ್ಲಿ ಜನರ ಆಕ್ರೋಶ ಮುಗಿಲುಮುಟ್ಟಿತು. ಹಿಂದೂ-ಮುಸ್ಲಿಂ ಎರಡೂ ಕಡೆ ಜೀವಹಾನಿಗಳಾದವು. ಆಗ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ. ರೈಲಿಗೆ ಬೆಂಕಿ ಹಾಕಿ ನರಮೇಧ ನಡೆಸಿ ಹತ್ಯಾಕಾಂಡಕ್ಕೆ ಚಾಲನೆ ನೀಡಿದವರಿಗಿಂತ ಮುಖ್ಯಮಂತ್ರಿಯೇ ದೊಡ್ಡ ಅಪರಾಧಿಯಾದರು. ಗಲಭೆಯನ್ನು ಅವರು ತಡೆಯಲಿಲ್ಲ; ಆ ಮೂಲಕ ಅಪಾರ ಜೀವಹಾನಿಗೆ ಕಾರಣವಾದರೆನ್ನುವ ಕಪೋಲಕಲ್ಪಿತ ಆರೋಪವೇ ಬಹುಜನರ ಸ್ವೀಕಾರಕ್ಕೆ ಅರ್ಹವೆನಿಸಿತು. ಅದಕ್ಕೆ ಅಂದಿನ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ, ತೀಸ್ತಾ ಸೇಟಲ್ವಾಡ್ರಂತಹ ಸುಳ್ಳು ಕೇಸು ನಿಪುಣರು ತಮ್ಮ ಕೊಡುಗೆಯನ್ನು ಧಾರಾಳ ನೀಡಿದರು. ಸತ್ಯ ತಿಳಿಯಲು ಶ್ರಮ ವಹಿಸುವುದಕ್ಕಿಂತ ಮಾಧ್ಯಮಗಳು, ವಿರೋಧಿ ರಾಜಕಾರಣಿಗಳು ಕೊಡುವ ಸುಳ್ಳನ್ನು ಅಕ್ಷರಶಃ ನಂಬುವುದು ಸುಲಭವಲ್ಲವೆ?
ಅಪೂರ್ವ ರಾಷ್ಟ್ರಸೇವಕ
ಹಾಗೆ ನಂಬಿದವರಲ್ಲಿ, ನಂಬುವುದರ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಶ್ರಮಿಸಿದವರಲ್ಲಿ ಮಾಜಿ ಪ್ರಧಾನಿಯೂ ಇದ್ದಾರೆಂದು ನಾವು ಒಪ್ಪಿಕೊಳ್ಳಬೇಕಲ್ಲವೆ? ಇರಲಿ, ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವ ಮಾತನ್ನು ಒಪ್ಪಿಕೊಂಡು ಮುಂದುವರಿಯೋಣ. ಇನ್ನು ಮೋದಿಯವರ ಬಗೆಗೆ ಹೇಳುವುದಾದರೆ ಅವರು ಅಂದಿನಿಂದ ಇಂದಿನವರೆಗೂ ಒಂದೇ ರೀತಿ ಇದ್ದಾರೆ. ರಾಜಿಯಿಲ್ಲದ ಒಬ್ಬ ರಾಷ್ಟ್ರಭಕ್ತನಾಗಿ, ರಾಷ್ಟ್ರಸೇವಕನಾಗಿ ರಾಷ್ಟ್ರಕ್ಕೆ ತನ್ನ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಪಟ್ಟು ಹೇಳುವುದಾದರೆ ಅವರೊಬ್ಬ ಅಪ್ರತಿಮ ಸಂಘಟಕನಾಗಿ ಕಾಣುತ್ತಾರೆ; ಕ್ರಮೇಣ, ಮುಖ್ಯವಾಗಿ ಅವರು ಪ್ರಧಾನಿಯಾದ ಅನಂತರ ಪಕ್ಷವನ್ನು ತಮಗೆ ವಿಶಿಷ್ಟವಾದ ರೀತಿಯಲ್ಲಿ ಬೆಳೆಸಿದ್ದಾರೆ; ಆ ರೀತಿಯಲ್ಲಿ ಹೊಸದಾಗಿ ರೂಪಗೊಂಡ ಬಿಜೆಪಿಗೆ ಅವರೇ ಶಿಲ್ಪಿಯಾಗಿದ್ದಾರೆ.
ಗುಜರಾತಿನಲ್ಲಿ ಕೇಶೂಭಾಯಿ ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದು, ಶಂಕರಸಿಂಗ್ ವಘೇಲಾ ಅವರು ಮುಖ್ಯಮಂತ್ರಿಯ ವಿರುದ್ಧ ಬಂಡಾಯವೆದ್ದಾಗ ಅಲ್ಲಿ ಬಣಗಳ ಜಗಳ ಮತ್ತಷ್ಟು ಬೆಳೆಯುವುದು ಬೇಡವೆಂದು ಪಕ್ಷದ ನಾಯಕರು ಮೋದಿ ಅವರನ್ನು ದೆಹಲಿಗೆ ಕರೆತಂದು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಕೆಲವು ರಾಜ್ಯಗಳ ಹೊಣೆಯನ್ನು ವಹಿಸಿದರು. ಅದರಂತೆ ಮೋದಿ ಅವರು ಹರ್ಯಾಣಾ, ಪಂಜಾಬ್ ಮತ್ತು ಹಿಮಾಚಲಪ್ರದೇಶಗಳಲ್ಲಿ ಪಕ್ಷವನ್ನು ಕಟ್ಟಬೇಕಿತ್ತು. ಹಿಮಾಚಲಪ್ರದೇಶದಲ್ಲಿ ಪಕ್ಷ ಸಾಕಷ್ಟು ಗಟ್ಟಿಯಾಗಿತ್ತು. ಪಂಜಾಬ್ನಲ್ಲಿ ಬಿಜೆಪಿ ಅಕಾಲಿದಳದ ಮೈತ್ರಿಯಲ್ಲಿದ್ದರೆ ಹರ್ಯಾಣಾದಲ್ಲಿ ಕೆಲಸ ಸವಾಲಾಗಿತ್ತು. ದೊಡ್ಡ ಪ್ರಾದೇಶಿಕ ನಾಯಕರಾದ ಬನ್ಸೀಲಾಲ್ ಮತ್ತು ಓಂಪ್ರಕಾಶ್ ಚೌಟಾಲಾ ಅವರ ಎದುರು ಪಕ್ಷವನ್ನು ಕಟ್ಟಬೇಕಿತ್ತು. ಜಾತಿ ರಾಜಕೀಯವು ಆಳವಾಗಿದ್ದು, ಅದನ್ನು ಸರಿಪಡಿಸುವುದು ಅಸಂಭವ ಎಂಬಂತಿತ್ತು.
ಹರ್ಯಾಣಾದಲ್ಲಿ ಸಂಘಟನೆ
ಮೋದಿ ಅಲ್ಲಿ ಪಕ್ಷದ ರಾಜ್ಯ ನಾಯಕರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯತಂತ್ರಗಳನ್ನು ಸೂಚಿಸಿದರು. ಬನ್ಸೀಲಾಲ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರದಲ್ಲಿ ಭಾಗಿಯಾದರು. ಅದು ಹೆಚ್ಚು ಕಾಲ ನಡೆಯಲಿಲ್ಲ. ಮತ್ತೆ ಚೌಟಾಲಾರೊಂದಿಗೆ ಮೈತ್ರಿ ಮಾಡಿಕೊಂಡರು; ಅದು ಕೂಡ ಹೆಚ್ಚು ಕಾಲ ಬಾಳಲಿಲ್ಲ. ಈ ಮೈತ್ರಿಗಳಿಂದ ಅವರಿಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಪಕ್ಷಕ್ಕೆ ನೆಲೆ ನಿರ್ಮಿಸಬೇಕಿತ್ತು ಮತ್ತು ಅದನ್ನೊಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ನಿಲ್ಲಿಸಬೇಕಿತ್ತು. ಅದು ಈಡೇರಿತೆನ್ನಬಹುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕರ್ತರನ್ನು ಸಂಘಟಿಸಿದರು; ಮತ್ತು ಜಾತಿಪ್ರಾಬಲ್ಯವನ್ನು ತಗ್ಗಿಸಿದರು. ಓರ್ವ ಕಾರ್ಗಿಲ್ ಹುತಾತ್ಮನ ಪತ್ನಿಯನ್ನು ವೋಟಿಗೆ ನಿಲ್ಲಿಸಿದರು; ಅಂಥದೇ ಬೇರೆ ಬೇರೆ ಕ್ರಮಗಳ ಮೂಲಕ ವಿಭಿನ್ನ ಸಾಮಾಜಿಕ ಹಿನ್ನೆಲೆಯ ಬಹಳಷ್ಟು ಯುವಜನರನ್ನು ಪಕ್ಷಕ್ಕೆ ತಂದರು. ರಾಜ್ಯ ಮಾತ್ರವಲ್ಲ, ಜಿಲ್ಲಾಮಟ್ಟದಲ್ಲಿ ಕೂಡ ಪಕ್ಷಕ್ಕೆ ಸ್ವಂತ ಕಟ್ಟಡ, ಕಚೇರಿ ಇರಬೇಕು ಮುಂತಾಗಿ ಮೂಲ ಸವಲತ್ತನ್ನು ಬೆಳೆಸಲು ಕ್ರಮಕೈಗೊಂಡರು. ಹೊಸಬರಿಗೆ ತರಬೇತಿ ಏರ್ಪಡಿಸಿದರು; ಕಂಪ್ಯೂಟರೀಕರಣ ನಡೆಸಿದರು. ಮುಖ್ಯವಾಗಿ ಆರೆಸ್ಸೆಸ್ ಹಿನ್ನೆಲೆ ಇಲ್ಲದವರಿಗೆ ತರಬೇತಿ ಅಗತ್ಯವಾಗಿತ್ತು. ತರಬೇತಿಯಿಂದ ಅವರಲ್ಲಿ ಶಿಸ್ತು, ಮೌಲ್ಯಗಳು ಬಂದವು. ಮೋದಿ ಅವರ ಪ್ರಕಾರ ತರಬೇತಿಯು ಒಂದು ವಿಜ್ಞಾನವಾಗಿದ್ದು, ಅದರಿಂದ ಜನರ ಮನಸ್ಸು ರೂಪಿತವಾಗುತ್ತದೆ. ಒಂದು ಸಂಘಟನೆಯನ್ನು ಕಟ್ಟುವಲ್ಲಿ ಅದು ಅನಿವಾರ್ಯ ಅಂಶವಾಗಿದೆ.
ಹರ್ಯಾಣಾದಲ್ಲಿ ಮೋದಿ ಅವರ ಕ್ರಮಗಳು ಶೀಘ್ರವೇ ಫಲ ನೀಡದಿದ್ದರೂ ೨೦೧೪ರ ವಿಧಾನಸಭಾ ಚುನಾವಣೆಯಲ್ಲಿ ಫಲ ಕಾಣಿಸಿತು. ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿತು. ಮೋದಿ ಅವರು ತಮ್ಮ ಒಲವಿನಂತೆ ಜಾತಿಪ್ರಾಬಲ್ಯವನ್ನು ನಿರಾಕರಿಸಿ ಪಂಜಾಬಿ ಖತ್ರಿ ಮನೋಹರ್ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಆರಿಸಿದರು. ಅದರಿಂದ ಹಲವರಿಗೆ ಆಶ್ಚರ್ಯವಾಯಿತು. ಏನಿದ್ದರೂ ಸಾಂಪ್ರದಾಯಿಕ ‘ಬುದ್ಧಿವಂತಿಕೆ’ಗೆ ಹೊರತಾದುದನ್ನು ಮಾಡುವುದು ಮೋದಿ ಅವರಿಗೆ ಇಷ್ಟದ ಕೆಲಸ. ಎಚ್ಚರದ ಯೋಜನೆಯ ಮೂಲಕ ಅವರು ಅದನ್ನು ಮಾಡುತ್ತಾರೆ.
ಹಿಮಾಚಲದಲ್ಲಿ
ಹಿಮಾಚಲಪ್ರದೇಶದಲ್ಲಿ ಕೂಡ ಮೋದಿ ಬಿಜೆಪಿಯನ್ನು ದೊಡ್ಡ ರೀತಿಯಲ್ಲಿ ಬೆಳೆಸಿದರು. ಅದು ಹರ್ಯಾಣಾದಂತಲ್ಲ. ಪಕ್ಷಕ್ಕೆ ಅಲ್ಲಿ ಅನುಕೂಲಕರ ವಾತಾವರಣವಿತ್ತು. ಅದು ಎರಡು ಪಕ್ಷಗಳ ವ್ಯವಸ್ಥೆಯಲ್ಲಿ ನಡೆಯುವ ರಾಜ್ಯವಾಗಿದ್ದು, ಕಾಂಗ್ರೆಸ್-ಬಿಜೆಪಿಗಳು ಒಂದಾದ ಮೇಲೊಂದು ಅಧಿಕಾರಕ್ಕೆ ಬರುತ್ತಿದ್ದವು. ತುರ್ತುಪರಿಸ್ಥಿತಿಯ ಅನಂತರ ಶಾಂತಕುಮಾರ್ ಪ್ರಶ್ನಾತೀತ ನಾಯಕರಾಗಿದ್ದು, ಜನಸಂಘವು ಸೇರಿ ರಚನೆಯಾದ ಜನತಾಪಕ್ಷದ ಮುಖ್ಯಮಂತ್ರಿಯಾಗಿ ೧೯೮೦ರವರೆಗೆ ಅಧಿಕಾರ ನಡೆಸಿದರು. ಬಳಿಕ ಕಾಂಗ್ರೆಸ್ ಸರ್ಕಾರ ರಚಿಸಿತು. ಆಡ್ವಾಣಿ ರಥಯಾತ್ರೆಯಿಂದ ಬಿಜೆಪಿ ಮತ್ತೆ ಬಲಶಾಲಿಯಾಗಿ ಅಧಿಕಾರಕ್ಕೆ ಬಂತು. ಬಾಬರಿ ಕಟ್ಟಡದ ಪತನದ ಅನಂತರ ಪ್ರಧಾನಿ ನರಸಿಂಹರಾವ್ ವಜಾಗೊಳಿಸಿದ ಸರ್ಕಾರಗಳಲ್ಲಿ ಹಿಮಾಚಲಪ್ರದೇಶವೂ ಸೇರಿತ್ತು (ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳು ಇತರ ರಾಜ್ಯಗಳು).
ಮೋದಿ ಬರುವ ಮುನ್ನ ಶಾಂತಕುಮಾರ್ ಅಲ್ಲಿಯ ದೊಡ್ಡ ನಾಯಕರಾಗಿದ್ದು, ವಾಜಪೇಯಿಯವರಿಗೂ ಆಡ್ವಾಣಿಯವರಿಗೂ ನಿಕಟವಾಗಿದ್ದರು. ರಾಜ್ಯದಲ್ಲಿ ಪ್ರವಾಸ ಮಾಡಿದ ಮೋದಿ ನಾಯಕತ್ವದಲ್ಲಿ ಯಥಾಸ್ಥಿತಿ ಮುಂದುವರಿದರೆ ಪಕ್ಷ ಬೆಳೆಯುವುದಿಲ್ಲ ಎಂದು ಕಂಡುಕೊಂಡರು. ಪಕ್ಷದ ತಳಪಾಯವನ್ನು ವಿಸ್ತರಿಸಲು ಯುವಕರ ಒಂದು ಗುಂಪನ್ನು ಕಟ್ಟಿದರು. ಹಳಬರಿಗೆ ಇದರಿಂದ ನೋವಾಯಿತು. ಜಿಲ್ಲಾ ಕಚೇರಿಗಳಿಗೆ ಸ್ವಂತ ಕಟ್ಟಡ ಮಾಡಲು ಇಲ್ಲಿಯೂ ಕ್ರಮಕೈಗೊಂಡರು. ಅಲ್ಲಿ ಕಂಪ್ಯೂಟರ್, ಮುಂದೆ ಇಂಟರ್ನೆಟ್ ಬಂತು. ಮೊದಲಿಗೆ ಇಂತಹ ಕಾರ್ಪೊರೇಟ್ ಮಾದರಿಯ ವ್ಯವಸ್ಥೆಗೆ ಹಲವರು ವ್ಯಂಗ್ಯವಾಡಿದರಾದರೂ ಮುಂದೆ ಅದೇ ವ್ಯವಸ್ಥೆ ಎಲ್ಲೆಡೆ ಬಂತು. ಒಂದೇ ಸಲಕ್ಕೆ ರಾಜ್ಯದಲ್ಲಿ ಹಲವು ನಾಯಕರು ತಯಾರಾಗಿ ಪ್ರೇಂಕುಮಾರ್ ಧುಮಾಲ್ ಅವರು ಶಾಂತಕುಮಾರ್ ಅವರಿಗೆ ಬದಲಿ ಆದರು. ೧೯೯೮ರ ಅಸೆಂಬ್ಲಿ ಚುನಾವಣೆಯಲ್ಲಿ ೬೮ ಸದಸ್ಯರ ಸದನದಲ್ಲಿ ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ತಲಾ ೩೧ ಸ್ಥಾನಗಳು ಲಭಿಸಿದವು. ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆಯನ್ನು ಕಂಡ ಮೋದಿ ರಾತ್ರೋರಾತ್ರಿ ನಿವಾರಿಸಿ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದರು. ಮುಖ್ಯಮಂತ್ರಿಯಾದ ಧುಮಾಲ್ ಪೂರ್ತಿ ಐದು ವರ್ಷ ಸರ್ಕಾರ ನಡೆಸಿದರು.
ಅನಂತರ ಮೋದಿ ಅವರನ್ನು ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆಗ ಮೋದಿ ಅವರು ಪಕ್ಷ ಮತ್ತು ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಆರೋಗ್ಯಕರ ಸಂಬಂಧದ ಬಗ್ಗೆ ಶ್ರಮಿಸಿದರು. ಆಗ ಸರ್ಕಾರಕ್ಕೆ ಸ್ವದೇಶೀ ಜಾಗರಣ ಮಂಚ್ ಹಾಗೂ ಆರೆಸ್ಸೆಸ್ಗಳೊಂದಿಗೆ ಸ್ವಲ್ಪ ಘರ್ಷಣೆಯ ವಾತಾವರಣವಿತ್ತು. ಆ ಸನ್ನಿವೇಶದಲ್ಲಿ ಮೋದಿ ಸಮತೋಲನದ (ಬ್ಯಾಲೆನ್ಸ್) ಸೂಕ್ಷ್ಮ ಕೆಲಸವನ್ನು ನಿರ್ವಹಿಸಿದರು. ಪಕ್ಷದ ಕಾರ್ಯಕರ್ತರ ತರಬೇತಿಯಂತೂ ನಿರಂತರವಾಗಿತ್ತು.
ಈ ನಡುವೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ವಿಸ್ತರಣೆ ದೊಡ್ಡ ಸವಾಲಾಗಿತ್ತು. ಅದು ವಾಜಪೇಯಿ, ವಿಜಯರಾಜೇ ಸಿಂಧಿಯಾ ಮುಂತಾದ ಪಕ್ಷದ ದೊಡ್ಡ ನಾಯಕರ ಸಂಬಂಧವಿದ್ದ ರಾಜ್ಯ. ಅಲ್ಲಿ ಹಿರಿಯ ನಾಯಕ ಕುಶಾಭಾವು ಠಾಕ್ರೆ ಅವರು ಪಕ್ಷವನ್ನು ಕಟ್ಟಿದ್ದರು. ೧೯೯೮ರ ವಿಧಾನಸಭಾ ಚುನಾವಣೆಯ ವೇಳೆ ಮಧ್ಯಪ್ರದೇಶವನ್ನು ವಿಭಜಿಸಿ ಛತ್ತೀಸ್ಗಢ ಎಂಬ ಹೊಸ ರಾಜ್ಯವನ್ನು ರಚಿಸಲಾಯಿತು. ಮೋದಿ ಆಗ ಆ ಎರಡೂ ರಾಜ್ಯಗಳಲ್ಲಿ ಹೊಸ ನಾಯಕರನ್ನು ಸಿದ್ಧಪಡಿಸಿದರು. ಮೋದಿ ಒಂದು ವೋಟಿನಿಂದ ಎರಡು ರಾಜ್ಯ ಎಂಬ ಘೋಷಣೆಯನ್ನು ಚಲಾವಣೆಗೆ ತಂದರು. ಆಗ ದಿಗ್ವಿಜಯಸಿಂಗ್ ಗೆದ್ದು ಎರಡನೇ ಬಾರಿಗೆ ಮುಖ್ಯಮಂತ್ರಿ ಆದರು. ಆದರೆ ಬಿಜೆಪಿ ಬಹಳಷ್ಟು ಬಲಶಾಲಿಯಾಯಿತು; ಮತ್ತು ಶಿವರಾಜಸಿಂಗ್ ಚೌಹಾಣ್, ರಮಣಸಿಂಗ್, ಉಮಾಭಾರತಿ ಮುಂತಾದ ಹೊಸ ತಲೆಮಾರಿನ ನಾಯಕರು ರೂಪಗೊಂಡರು. ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂತು.
ಹೊರಗಿನವರ ಸೇರ್ಪಡೆ
ಗಮನಿಸಬೇಕಾದ ಒಂದು ಅಂಶವೆಂದರೆ, ಪಕ್ಷವನ್ನು ಕಟ್ಟುವಲ್ಲಿ ಕುಶಾಭಾವು ಠಾಕ್ರೆ ಅವರು ಆರೆಸ್ಸೆಸ್ ಮೇಲೆ ಹೆಚ್ಚು ಆಧರಿಸಿದ್ದರು; ಆದರೆ ಮೋದಿ ಸ್ವತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯವರಾದರೂ ಪಕ್ಷದ ಸಂಘಟನೆಯಲ್ಲಿ ಹೊರಗಿನ ಪ್ರಭಾವಿಗಳ ಕಡೆಗೆ ಕೂಡ ಕಣ್ಣಿಡುತ್ತಾ ಬಂದಿದ್ದಾರೆ. ಎಂದಿದ್ದಾರೆ ಪ್ರಸಿದ್ಧ ಪತ್ರಕರ್ತ ಅಜಯಸಿಂಗ್ (ನೋಡಿ – The Architect of the New BJP). ಆರೆಸ್ಸೆಸ್ ಪ್ರಚಾರಕರನ್ನು ಕರೆತಂದು ಪಕ್ಷಕ್ಕೆ ಮಾರ್ಗದರ್ಶನ ಕೊಡಿಸುವುದು ಒಂದು ಕ್ರಮವಾದರೆ, ಮೋದಿಯವರು ಸಂಘದ ಹೊರಗಿನ ಪ್ರಭಾವಿಗಳನ್ನೂ ಜೊತೆಗೂಡಿಸಿಕೊಂಡರು. ಆ ಮೂಲಕ ಹೆಚ್ಚು ಜನರಿಗೆ ತಲಪುವುದು ಸಾಧ್ಯವಾಯಿತು. ಮೂಲತಃ ಇದು ಕಾಂಗ್ರೆಸ್ನ ಕ್ರಮವಾಗಿತ್ತು; ಜನಸಂಘ (ಮತ್ತು ಅನಂತರ ಬಿಜೆಪಿ) ಆ ಕ್ರಮವನ್ನು ಅನುಸರಿಸುತ್ತಿರಲಿಲ್ಲ. ಆ ಕ್ರಮದಿಂದ ಪಕ್ಷವು ಕಾಂಗ್ರೆಸ್ನಂತೆ ಆಗುತ್ತದೆಂದು ಸಂಘದವರು ಆಕ್ಷೇಪಿಸಿದರು. ಕಾಂಗ್ರೆಸ್ ಎಂದರೆ ರಾಜಕೀಯದ ದುಷ್ಟಶಕ್ತಿಗಳಿಗೂ ಮಣೆ ಹಾಕುವಂಥದು ಎನ್ನುವ ಹಳಬರ ಅಭಿಪ್ರಾಯ ಸ್ವಲ್ಪಮಟ್ಟಿಗೆ ನಿಜವಾದರೂ, ಪಕ್ಷವು ಸೀಮಿತವಾಗಬಾರದೆಂದು ಮೋದಿ ವಾದಿಸಿದರು.
ಮೋದಿ ಅವರ ಈ ಚಿಂತನೆಯನ್ನು ವಾಜಪೇಯಿ, ಆಡ್ವಾಣಿ ಅವರು ಒಪ್ಪಿದರು. ಅವರೇ ಅಂತಹ ಹಲವರನ್ನು ಪಕ್ಷಕ್ಕೆ ತಂದರು. ಅದರಲ್ಲಿ ಹಿಂದೆ ಸಂಘಪರಿವಾರದ ಟೀಕಾಕಾರರಾಗಿದ್ದವರು ಕೂಡ ಇದ್ದರು. ಪಕ್ಷವನ್ನು ಬೆಳೆಸುವುದಕ್ಕೆ ಈ ಕ್ರಮಗಳ ಜೊತೆಗೆ ಒಬ್ಬ ಜನಪ್ರಿಯ ನಾಯಕನ ಭಾರೀ ಸಾಧ್ಯತೆಯನ್ನು ಮೋದಿ ತಿಳಿದುಕೊಂಡರು. ತಮ್ಮ ಆರಂಭದ ಅಧ್ಯಾತ್ಮದ ಹುಡುಕಾಟದ ಅಲೆದಾಟ ಮತ್ತು ಸಂಘದ ಪ್ರಚಾರಕ್ ಆಗಿ ಅದನ್ನವರು ಕಂಡುಕೊಂಡಿದ್ದರು. ಅದಕ್ಕಾಗಿ ಜನರ ಆಶೋತ್ತರಗಳ ಪ್ರತೀಕ ಆಗಬೇಕು; ಭಾರತದ ಐತಿಹಾಸಿಕ ಸಂದರ್ಭದಲ್ಲೂ ಅದನ್ನವರು ಕಂಡರು. ಅಂತಹ ತಾಂತ್ರಿಕ ಬಲವನ್ನು ಪ್ರದರ್ಶಿಸುವವರು ಜನರ ಚಿಂತನೆಯಲ್ಲಿ ಜಾಗ ಪಡೆದುಕೊಳ್ಳುತ್ತಾರೆ ಎಂಬುದು ಅವರ ಗಮನಕ್ಕೆ ಬಂದಿತ್ತು. ಗುಜರಾತಿನ ಮುಖ್ಯಮಂತ್ರಿಯಾದಾಗ ಮೋದಿ ಈ ಅಂಶಗಳಿಗೆ ಗಮನಕೊಟ್ಟರು. ಅದರಿಂದ ಪಕ್ಷ ಅದ್ಭುತವಾಗಿ ಬೆಳೆಯಿತು; ಗುಜರಾತ್ ಬಿಜೆಪಿಯ ಭದ್ರಕೋಟೆ ಆಯಿತು. ಕಾಂಗ್ರೆಸ್ ಪಕ್ಷಕ್ಕೆ ಹಿಂದೆ ಅಲ್ಲಿ ಭದ್ರವಾದ ತಳಪಾಯ ಇದ್ದರೂ ಕೂಡ ಕ್ರಮೇಣ ಅದು ಕ್ಷೀಣಿಸುತ್ತಹೋಯಿತು.
ಮುಖ್ಯಮಂತ್ರಿಯಾಗಿ ಮೋದಿ
ಗುಜರಾತಿನಿಂದ ದೂರವಿದ್ದ ಮೋದಿ ಅವರನ್ನು ೨೦೦೧ರಲ್ಲಿ ಆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಹುಡುಕಿಕೊಂಡು ಬಂತು. ಜನವರಿ ೨೬ರಂದು ಸಂಭವಿಸಿದ ಭಾರೀ ಭೂಕಂಪದಿಂದ ಸಾವಿರಾರು ಜನ ಮೃತಪಟ್ಟರು. ಪರಿಹಾರಕಾರ್ಯ ದೊಡ್ಡ ರೀತಿಯಲ್ಲಿ ಆಗಬೇಕಿತ್ತು. ಅದರಲ್ಲಿ ಭ್ರಷ್ಟಾಚಾರವಾಯಿತೆನ್ನುವ ಆರೋಪ ಬಂತು. ಭ್ರಷ್ಟಾಚಾರವನ್ನು ತಡೆಯುವಲ್ಲಿ ಕೇಶೂಭಾಯಿ ಸರ್ಕಾರ ಅಸಮರ್ಥವೆನಿಸಿತು. ಅನಾರೋಗ್ಯವೂ ಅವರನ್ನು ಬಾಧಿಸುತ್ತಿತ್ತು. ಆ ಆರೋಪಗಳು ಸಾಬೀತಾಗದಿದ್ದರೂ ಬಿಜೆಪಿಗೆ ಕಳಂಕ ಬಂತು. ಕಳಂಕವನ್ನು ದೂರ ಮಾಡಿ ಪರಿಸ್ಥಿತಿಯನ್ನು ಸರಿಪಡಿಸಲು ನೇರವಾಗಿ ಮೋದಿ ಅವರನ್ನು ಅಲ್ಲಿಗೆ ಕಳುಹಿಸಲಾಯಿತು. ಮರುವರ್ಷ ರಾಜ್ಯದ ವಿಧಾನಸಭಾ ಚುನಾವಣೆಯಿತ್ತು.
ಸಮಾಜ, ರಾಜಕೀಯ ಮತ್ತು ಪಕ್ಷದ ಸಂಘಟನೆಯ ವಿಷಯದಲ್ಲಿ ನರೇಂದ್ರ ಮೋದಿ ಅವರದ್ದು ಅಗಾಧ ತಿಳಿವಳಿಕೆ. ಆದರೆ ಅವರಿಗೆ ಸರ್ಕಾರವನ್ನು ನಡೆಸುವ ಅನುಭವ ಇರಲಿಲ್ಲ. ಅಲ್ಲಿ ಪಕ್ಷವು ಸಂಘಟನೆ ಮತ್ತು ಸ್ಫೂರ್ತಿಯ ವಿಷಯದಲ್ಲಿ ದುರ್ಬಲವಾಗಿತ್ತು. ಅದುವರೆಗೆ ಪಕ್ಷದ ಸಂಘಟನೆಯಲ್ಲಿ ಪಳಗಿದ್ದ ಅವರ ಮುಂದೆ ಈಗ ಆಡಳಿತದ ಸವಾಲು ಎದುರಾಗಿತ್ತು. ಆಡಳಿತ ಅಥವಾ ಆಳ್ವಿಕೆ (governance) ಸುಲಭವಿರಲಿಲ್ಲ. ಆದರೂ ಕ್ರಮೇಣ ಪಕ್ಷದ ಸಂಘಟಕ ಮೋದಿ ಆಡಳಿತಗಾರ ಮೋದಿಯಾಗಿ ಬದಲಾದರು.
ಆಡಳಿತದ ಕಲಿಕೆ
ಅದು ಸಂಕೀರ್ಣ ವಿಷಯ ಎಂಬುದು ಗೊತ್ತಿತ್ತು. ಆದರೆ ಹೊಸ ವಿಷಯವನ್ನು ಕಲಿಯುವುದರಲ್ಲಿ ಅವರು ಚಾಣಾಕ್ಷ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಇಲಾಖಾ ಉನ್ನತಾಧಿಕಾರಿಗಳು ಹೇಳಿದ್ದನ್ನು ಮೋದಿ ಎಚ್ಚರದಿಂದ ಕೇಳುತ್ತಿದ್ದರು. ಕಡತಗಳನ್ನು ಹೇಗೆ ಓದಬೇಕು ಮತ್ತು ಹೇಗೆ ಟಿಪ್ಪಣಿ ಹಾಕಬೇಕೆಂಬುದನ್ನು ಅವರು ಓರ್ವ ಹಿರಿಯ ಅಧಿಕಾರಿಯಿಂದ ಕಲಿತರಂತೆ. ಜನರ ಅಗತ್ಯದ ಸವಾಲಿಗೆ ಸ್ಪಂದಿಸುವಲ್ಲಿ ಇಡೀ ಆಡಳಿತಯಂತ್ರದ ಅಧಿಕಾರಶಾಹಿಯ ಕೊರತೆ ಏನೆಂಬುದು ಅವರಿಗೆ ಅರ್ಥವಾಯಿತು. ಗುಜರಾತಿನಲ್ಲಿ ಆಗ ಹಲವು ಹಿನ್ನಡೆಗಳು ಕಾಣಿಸುತ್ತಿದ್ದವು. ಬರ ಮತ್ತು ಭೂಕಂಪಗಳು ಜನರ ಆತ್ಮವಿಶ್ವಾಸವನ್ನು ಕಸಿದಿದ್ದವು. ರಾಜಕೀಯ ನಾಯಕತ್ವದ ಜಡತೆಯಿಂದಾಗಿ ಆಡಳಿತಯಂತ್ರವು ಅವ್ಯವಸ್ಥೆಗೆ ಸಿಲುಕಿತ್ತು. ಸಂಘಟಕನಾಗಿ ಪಳಗಿದ ಅವರಿಗೆ ರಾಜ್ಯದ ಸಾಮಾಜಿಕ ಮನಶ್ಶಾಸ್ತ್ರವು ತಿಳಿದಿತ್ತು. ಆ ಹಿನ್ನೆಲೆಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ರೀತಿಯಲ್ಲಿ ಸರ್ಕಾರದ ಯೋಜನೆಗಳನ್ನು ರೂಪಿಸತೊಡಗಿದರು.
೨೦೦೨ರ ಫೆಬ್ರುವರಿಯಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಮತ್ತು ಅನಂತರದ (ಗುಜರಾತ್) ಗಲಭೆಗಳು ಮೋದಿ ಅವರ ಅಭಿವೃದ್ಧಿಯ ಅಭಿಯಾನಕ್ಕೆ ತಡೆಯೊಡ್ಡಿದವು. ಗೋಧ್ರಾ ಮತ್ತು ಗೋಧ್ರೋತ್ತರ ಘಟನೆಗಳಿಂದ ಗುಜರಾತಿನ ಪ್ರತಿಷ್ಠೆಗೆ ಕಳಂಕ ಬಂದಿತ್ತು. ಮೋದಿ ಸಂಘದಿಂದ ಬಂದವರಾದ ಕಾರಣ ಸೆಕ್ಯುಲರಿಸಂನ ಸವಾಲು ಬಂತು; ಮತ್ತು ಭಾರತದ ಪರಿಕಲ್ಪನೆಗೆ ಆ ಘಟನೆಗಳು ಹೊಂದುವುದಿಲ್ಲ ಎಂಬ ಮಾತುಗಳು ಬಂದವು. ಮೋದಿ ಆ ಟೀಕೆಗಳಿಗೆ ಉತ್ತರಿಸುವ ಬದಲು ತಮ್ಮ ಭವಿಷ್ಯದ ರಾಜಕೀಯ ಯೋಜನೆಗೆ ಅನುಗುಣವಾಗಿ ಬ್ರಾಂಡ್ ಗುಜರಾತ್ನ್ನು ರೂಪಿಸಿದರು. ರಾಜ್ಯದ ಆಡಳಿತಯಂತ್ರದಲ್ಲಿ ಪಕ್ಷದ ಕಾರ್ಯಕರ್ತರು ಕೂಡ ಭಾಗಿಯಾಗುವಂತೆ ಅದನ್ನು ರೂಪಿಸಿ ತನ್ನ ರಾಜಕೀಯ ಗುರಿಯತ್ತ ಮುಖಮಾಡಿದರು.
ಈಗ ಗುಜರಾತ್ ಬಿಜೆಪಿಗೆ ಅನುಕೂಲವಾದ ರಾಜ್ಯ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ನಿಜವಾಗಿ ಹಾಗಲ್ಲ. ಗಾಂಧಿ ಹತ್ಯೆಯ ಕಾಲದಿಂದಲೇ ಈ ರಾಜ್ಯದ ಕಾಂಗ್ರೆಸೇತರ ನಾಯಕರನ್ನು ಅನುಮಾನದಿಂದ ಕಾಣಲಾಗಿತ್ತು. ಬಿಜೆಪಿ ನಗರಕೇಂದ್ರಿತ ಪಕ್ಷ ಎನ್ನುವ ಭಾವನೆ ಕೂಡ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ತಡೆಯಾಗಿತ್ತು. ಬಿಜೆಪಿ ಜನರ ಸಾಮಾನ್ಯ ಮೌಲ್ಯಗಳಿಗೆ ಹೊರತೆಂಬ ಭಾವನೆ ಕೂಡ ಇತ್ತು. ಗುಜರಾತಿನಲ್ಲಿ ಬಿಜೆಪಿಯ ಬೆಳವಣಿಗೆಗಾಗಿ ಹೊಸ ವಿಧಾನದ ಬಗ್ಗೆ ಮೋದಿ ಸಂಘದ ಪ್ರಚಾರಕ್ ಆಗಿದ್ದಾಗಲೇ ಹುಡುಕುತ್ತಿದ್ದರು. ಆಗ ಅವರಿಗೆ ಪಕ್ಷದ ಸಾಮಾಜಿಕ ಮಿತಿಯು ಅರ್ಥವಾಯಿತು. ಜನಸಮುದಾಯದ ನಡುವೆ ಆ ಮಿತಿಯನ್ನು ಕೂಡ ದೂರಮಾಡಬೇಕಿತ್ತು.
ಸಂಘದಿಂದ ಎರವಲು
೧೯೮೭ರಲ್ಲಿ ಮೋದಿ ಆರೆಸ್ಸೆಸ್ನಿಂದ ಬಿಜೆಪಿಗೆ ಬಂದರು. ಅವರ ಕಾರ್ಯವಿಧಾನದಿಂದ ಪಕ್ಷದ ಸಾಮಾಜಿಕ ತಳಪಾಯವು ಬೆಳೆಯಿತು; ಮತ್ತು ಬೆಳೆಯುತ್ತಲೇ ಇದೆ. ಮುಖ್ಯಮಂತ್ರಿಯಾಗಿ ಮೋದಿ ಉತ್ತಮ ಆಡಳಿತಗಾರನಲ್ಲದೆ, ಪಕ್ಷದ ಯಶಸ್ವಿ ಸಂಘಟಕನಾಗಿಯೂ ಬೆಳೆದರು. ಅವರು ರೂಪಿಸಿದ ಸರ್ಕಾರದ ಯೋಜನೆಗಳು ಪಕ್ಷದ ಕಾರ್ಯಕ್ರಮಗಳ ಜೊತೆ ಹೊಂದಿಕೊಂಡವು. ಅದರಿಂದ ಹೊಸ ಕಾರ್ಯತಂತ್ರವು ಬಂದು ಜನರ ಮನಸ್ಸಿನಲ್ಲಿ ಚೆನ್ನಾಗಿ ಕುಳಿತಿತು. ಆ ರೀತಿಯಲ್ಲಿ ಗುಜರಾತ್ ಮಾದರಿ ತಯಾರಾಯಿತು. ಅದು ಬಿಜೆಪಿಯ ಸಾಂಪ್ರದಾಯಿಕ ಮಾದರಿಯಿಂದ ಭಿನ್ನವಾದದ್ದು. ಇಡೀ ರಾಜ್ಯದಲ್ಲಿ ಅವರು ಬದ್ಧರಾದ ಕಾರ್ಯಕರ್ತರ ತಂಡವನ್ನು ಕಟ್ಟಿದರು. ಅವರು ಕಿಂಚಿದ್ ಭಿನ್ನ ಸಾಮಾಜಿಕ ಹಿನ್ನೆಲೆ(ಸ್ತರ)ಯಿಂದ ಬಂದವರು. ಹೊಸ ಕಾರ್ಯಕರ್ತರನ್ನು ಸಾಂಪ್ರದಾಯಿಕ ಸಂಘದ ನಾಯಕತ್ವದ ಜೊತೆ ಜೋಡಿಸಲು ಅವರು ರಾಜ್ಯಾದ್ಯಂತ ತರಬೇತಿ ಶಿಬಿರಗಳನ್ನು ಏರ್ಪಡಿಸಿದರು. ತರಬೇತಿ ಒಂದು ವಿಜ್ಞಾನ ಎಂದು ತಮ್ಮ ನಿಕಟವರ್ತಿಗಳೊಂದಿಗೆ ಅವರು ಆಗಾಗ ಹೇಳುತ್ತಾರಂತೆ. ಗುಜರಾತಿನಲ್ಲಿ ಸರ್ಕಾರೀ ನೌಕರರಿಗೆ ಕೂಡ ತರಬೇತಿ ಶಿಬಿರಗಳನ್ನು ನಡೆಸಿದರು. ಹೀಗೆ ಮೋದಿ ಮುಖ್ಯಮಂತ್ರಿಯಾಗಿದ್ದ ೧೩ ವರ್ಷಗಳಲ್ಲಿ ಗುಜರಾತಿನಲ್ಲೊಂದು ಮಾದರಿ ಸಿದ್ಧವಾಯಿತು. ಅದು ದೇಶಾದ್ಯಂತ ಸುದ್ದಿಯಾಯಿತು; ಚರ್ಚೆಗೊಳಗಾಯಿತು.
ಗುಜರಾತಿನಲ್ಲಿ ಮೂರು ವಿಧಾನಸಭಾ ಚುನಾವಣೆಗಳು (೨೦೦೨, ೨೦೦೭ ಮತ್ತು ೨೦೧೨) ಮೋದಿ ಅವರ ನೇತೃತ್ವದಲ್ಲಿ ನಡೆದು ಬಿಜೆಪಿ ಜಯಗಳಿಸಿತು. ಒಳ್ಳೆಯ ಆಡಳಿತವು ಕೆಟ್ಟ ರಾಜಕಾರಣ (ಒಳ್ಳೆಯ ಆಡಳಿತ ಕೊಟ್ಟವರು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ) ಎಂಬುದನ್ನು ಮೋದಿ ಸುಳ್ಳು ಮಾಡಿದರು. ರಾಷ್ಟ್ರಮಟ್ಟದ ಅವರ ರಾಜಕೀಯ ಪ್ರಯಾಣಕ್ಕೆ ಇದೇ ತಳಪಾಯವಾಯಿತು.
೨೦೧೪ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಡಾ. ಮನಮೋಹನ್ಸಿಂಗ್ ಅವರ ಕಾಂಗ್ರೆಸ್ ಸರ್ಕಾರ ದಶಕವನ್ನು ಪೂರೈಸಿತ್ತು. ಆಗ ಮೋದಿ ಹೊಸ ಆಶೆಯಾಗಿ ಮೂಡಿಬಂದರು. ಕಾಂಗ್ರೆಸ್ ಆಡಳಿತ ಭ್ರಷ್ಟ ಮತ್ತು ಅಪ್ರಯೋಜಕ ಎಂದು ಜನಮಾನಸಕ್ಕೆ ಬಂದಿತ್ತು. ಡಾ. ಸಿಂಗ್ ಅವರು ಪ್ರಧಾನಿಯಾಗಿದ್ದರೂ ಕೂಡ ನಾಯಕನಾಗಿ ಅವರಿಗೆ ಪಕ್ಷದಲ್ಲಿ ವಿಶೇಷ ಮನ್ನಣೆ ಇರಲಿಲ್ಲ. ಅದು ೧೦ ಜನಪಥ್ (ಸೋನಿಯಾಗಾಂಧಿ ಅವರ ನಿವಾಸ)ನ ಅನುಬಂಧದಂತಿತ್ತು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಗಟ್ಟಿ (ಗಂಡು) ನಾಯಕತ್ವವನ್ನು ನೀಡಿದರು.
ಅಧಿಕಾರಕ್ಕೆ ಏರುವಲ್ಲಿ ಮೋದಿ ಅವರಿಗೆ ಪಕ್ಷದ ಒಳಗೆ ಮತ್ತು ಹೊರಗಿನಿಂದ ವಿರೋಧ ಇದ್ದೇ ಇತ್ತು. ಪಕ್ಷದ ಒಳಗಿನ ತಡೆಗಳನ್ನು ಅವರು ಸುಲಭದಲ್ಲಿ ದೂರಮಾಡಿಕೊಂಡರು. ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿ ದೇಶಾದ್ಯಂತ ಬಹುಸಂಖ್ಯೆಯ ರ್ಯಾಲಿಗಳನ್ನು ಅವರು ನಡೆಸಿದಾಗಲೇ ನಾಯಕತ್ವ ಅವರ ಕಡೆಗೆ ಸರಿದಿತ್ತು ಎಂದರೆ ತಪ್ಪಲ್ಲ. ಆದರೆ ಇಡೀ ದೇಶದ ಜನರ ಬೆಂಬಲ ಪಡೆಯುವ ಹಾದಿ ಸುಗಮ ಆಗಬಹುದೇ ಎಂಬ ಪ್ರಾಮಾಣಿಕ ಸಂದೇಹ ಇದ್ದೇ ಇತ್ತು. ಈಗಾಗಲೆ ಗಮನಿಸಿದಂತೆ ೨೦೦೨ ಗುಜರಾತ್ ಗಲಭೆಗೆ ಸಂಬಂಧಿಸಿ ಸೆಕ್ಯುಲರಿಸ್ಟರು ಮಾತ್ರವಲ್ಲ; ಉದಾರವಾದಿಗಳು ಕೂಡ ಅವರನ್ನು ದೋಷಮುಕ್ತಗೊಳಿಸಲು ಇಷ್ಟಪಡುತ್ತಿರಲಿಲ್ಲ; ಎನ್ಡಿಎ ಒಳಗಿನಿಂದಲೇ ಅಂತಹ ವಿರೋಧ ಇತ್ತು. ಉದಾಹರಣೆಗೆ, ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ಬಂಡೆದ್ದು ಎನ್ಡಿಎಯಿಂದ ಹೊರಗೆ ಹೋದರು.
ಪ್ರಧಾನಿ ಅಭ್ಯರ್ಥಿ ಎಂದು ಒಬ್ಬರನ್ನು ಬಿಂಬಿಸಿದ್ದು ಸರಿಯೇ ಎಂಬ ಸಂದೇಹ ಹಲವರಿಗಿತ್ತು. ಒಬ್ಬ ವ್ಯಕ್ತಿಯನ್ನು ಪಕ್ಷಕ್ಕಿಂತ ಮಿಗಿಲಾಗಿ ತೋರಿಸುವುದು ಸರಿಯೆ ಎಂಬ ಪ್ರಶ್ನೆಯಿತ್ತು. ಸಂಘಪರಿವಾರದೊಳಗೆ ಮೋದಿ ಅವರ ವೈಯಕ್ತಿಕ ವರ್ಚಸ್ಸು ದೊಡ್ಡಮಟ್ಟದಲ್ಲಿದ್ದು ಅದನ್ನು ಪಕ್ಷ ಬಳಸಿಕೊಳ್ಳಬೇಕೆಂಬ ಭಾವನೆಯೂ ಇದ್ದೇ ಇತ್ತು. ಪರಿಸ್ಥಿತಿಯನ್ನು ತನ್ನ ಪರವಾಗಿ ತಿರುಗಿಸಿಕೊಳ್ಳುವ ಯಾವುದೇ ಅವಕಾಶವನ್ನು ಮೋದಿ ಬಿಡುವವರಲ್ಲ.
ಅಪಕಲ್ಪನೆಗಳು ಛಿದ್ರ
೨೦೧೪ರ ಲೋಕಸಭಾ ಚುನಾವಣೆಯ ಫಲಿತಾಂಶವು ಅವರ ಅಸಾಮಾನ್ಯ ಸಂಘಟನಾ ಕೌಶಲಕ್ಕೆ ನಿದರ್ಶನವಾಗಿತ್ತು. ಅವರ ಆಕರ್ಷಕ ವ್ಯಕ್ತಿತ್ವ, ಜನಸಂಪರ್ಕ ಕೌಶಲಗಳು ಮತದಾರರಿಗೆ ಮೋಡಿ ಮಾಡಿದ್ದವು. ಈ ವಿಷಯವು ಬಿಜೆಪಿ ಬಗೆಗಿನ ಹಲವು ಅಪಕಲ್ಪನೆಗಳನ್ನು ಚಿಂದಿಮಾಡಿತ್ತು. ಮುಖ್ಯವಾಗಿ,
೧) ಬಿಜೆಪಿ ಮೇಲ್ಜಾತಿಯವರ ಮತ್ತು ನಗರಕೇಂದ್ರಿತ ಪಕ್ಷ.
೨) ಉತ್ತರಭಾರತದಿಂದ ಆಚೆಗೆ ಬೆಳೆಯುವಲ್ಲಿ ಅದಕ್ಕೆ ಮಿತಿಗಳಿವೆ.
೩) ಪ್ರಾದೇಶಿಕ ಪಕ್ಷಗಳು ಬಲಶಾಲಿ ಆಗಿರುವ ರಾಜ್ಯಗಳಲ್ಲಿ
ಎದುರಾಗುವ ಸವಾಲನ್ನು ಜಯಿಸಲು ಅದಕ್ಕೆ ಅಸಾಧ್ಯ.
೨೦೧೪ರ ಚುನಾವಣಾ ಫಲಿತಾಂಶದಲ್ಲಿ ಪಕ್ಷವು ಜಾತಿಯ ತಡೆಗೋಡೆಗಳನ್ನು ಮೀರಿತ್ತು; ನಗರ-ಗ್ರಾಮಾಂತರ ಪ್ರದೇಶಗಳ ಮಿತಿಯನ್ನು ದಾಟಿ ಎಲ್ಲರಿಗೆ ಸ್ವೀಕಾರಾರ್ಹ ಆಗಿತ್ತು. ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಪಕ್ಷ ಬೆಳೆದರೂ ಕೂಡ ಪ್ರಾದೇಶಿಕ ಪಕ್ಷಗಳು ಇರುವ ಕಡೆ ಸುಲಭ ಇರಲಿಲ್ಲ. ಅಲ್ಲಿ ಪಕ್ಷದ ಬಲ ಮತ್ತು ದೌರ್ಬಲ್ಯ ಎರಡೂ ಜಾಹೀರಾದವು. ಮತ್ತು ಬಲಶಾಲಿ ಆಗಿರುವಲ್ಲಿ ಕಾರ್ಯಕರ್ತರು ಜಡವಾಗದಂತೆ ಎಚ್ಚರ ವಹಿಸಿದರು.
ಆಗ ಪಕ್ಷದ ಅಧ್ಯಕ್ಷರಾಗಿದ್ದ ರಾಜನಾಥ್ಸಿಂಗ್ ಅವರು ಗೃಹಮಂತ್ರಿಯಾದ ಕಾರಣ ಅಮಿತ್ ಶಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕರೆತರಲಾಯಿತು. ಅಮಿತ್ ಶಾ ಗುಜರಾತ್ನಲ್ಲಿ ತುಂಬ ಕಾಲ ಮೋದಿ ಅವರ ಜೊತೆಗೆ ಇದ್ದವರು. ಅವರು ಕೂಡ ಗುಜರಾತ್ ಮಾದರಿಯಲ್ಲಿ ಪಕ್ಷದ ಕಾರ್ಯಕ್ರಮಗಳು ಸರ್ಕಾರದ ಯೋಜನೆಗಳೊಂದಿಗೆ ಹೊಂದಿಕೊಳ್ಳುವಂತೆ ಜೋಡಿಸಿದರು. ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಹಲವು ರಾಜ್ಯಗಳಲ್ಲಿ ಬಿಜೆಪಿ ಜಯಿಸಿತು.
ಬಿಹಾರದಲ್ಲಿ ನಿತೀಶ್ಕುಮಾರ್ ಮತ್ತೆ ಬಿಜೆಪಿಯ ಜೊತೆ (ಎನ್ಡಿಎ) ಬಂದರು. ತಮಿಳುನಾಡಿನಲ್ಲಿ ಎಡಿಎಂಕೆ ಬಿಜೆಪಿ ಜೊತೆ ಕೈಜೋಡಿಸಿತು.
ಸ್ವಂತ ಬಹುಮತದ ಸರ್ಕಾರ
ಹಿಂದೆ ಕಾಂಗ್ರೆಸ್ ದಶಕಗಳ ಕಾಲ ರಾಷ್ಟ್ರಮಟ್ಟದಲ್ಲಿ ಸುಭದ್ರ ಸರ್ಕಾರ ರಚಿಸಿದ್ದ ರೀತಿಯಲ್ಲೇ ಮೋದಿ ಅವರು ಕೂಡ ಸ್ವಂತ ಬಹುಮತದೊಂದಿಗೆ ಸುಭದ್ರ ಸರ್ಕಾರವನ್ನು ರಚಿಸಿಕೊಂಡಿದ್ದಾರೆ. ಈ ನಾಟಕೀಯ ಬದಲಾವಣೆ ಒಂದು ದಿನದಲ್ಲಿ ಬಂದುದಲ್ಲ. ಸಂಘಪರಿವಾರವು ದೇಶದಲ್ಲಿ ಬಲಶಾಲಿಯಾದ ರಾಜಕೀಯ ವ್ಯವಸ್ಥೆಯನ್ನು ಕಟ್ಟಲು ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ಆದರೆ ಅದನ್ನು ಸಾಧಿಸುವ ಅದೃಷ್ಟವಂತರು ಮೋದಿ ಅವರಾದರು. ಅವರ ಮೇಲ್ಮುಖದ ಸಾಧನೆ ಮತ್ತು ಸಂಘಟನಾ ಕೌಶಲಗಳು ದೇಶದ ರಾಜಕೀಯ ಇತಿಹಾಸದ ನಿರ್ಣಾಯಕ ಅಂಶಗಳಾದವು. ಒಂದು ಕಾಲದಲ್ಲಿ ಅಸಂಭವ ಎನಿಸಿದ್ದನ್ನು ಸಾಧಿಸಲು ಅವರಿಗೆ ಸಾಧ್ಯವಾಯಿತು.
ಮೋದಿ ಅವರ ರಾಜಕೀಯ ಮತ್ತು ಸಿದ್ಧಾಂತದ (ಐಡಿಯಾಲಜಿ) ಬಗ್ಗೆ ಬಹಳಷ್ಟು ಜನ ಬರೆದಿದ್ದಾರೆ; ಚರ್ಚಿಸಿದ್ದಾರೆ. ಹಿಂದುತ್ವ ಮತ್ತು ಆರ್ಥಿಕ ಅಭಿವೃದ್ಧಿಯ ಕ್ರಮದಿಂದ (ಕೆಲವರು ಅದನ್ನು ಮೋದಿತ್ವ ಎನ್ನುತ್ತಾರೆ) ಇದು ಸಾಧ್ಯವಾಯಿತೆಂದು ಒಂದೇ ಬೀಸಿನಲ್ಲಿ ಒರಟಾಗಿ ಬರೆದವರಿದ್ದಾರೆ. ಆದರೆ ಇಂತಹ ಸ್ಥೂಲ ವಿಶ್ಲೇಷಣೆಗಳು ಮೋದಿ ಅವರು ಅನುಸರಿಸಿದ ನಾಜೂಕಿನ ಕಾರ್ಯವಿಧಾನವನ್ನು ಅಲಕ್ಷಿಸುತ್ತವೆ. ಪಕ್ಷದ ತಳಪಾಯವನ್ನು ವಿಸ್ತರಿಸಿದ್ದು ಮತ್ತು ಆ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲಪಲು ಪ್ರಧಾನಿ ಮೋದಿ ಅವರು ಅನುಸರಿಸಿದ ಕಾರ್ಯವಿಧಾನವು ವಿಶೇಷವಾಗಿ ಅಧ್ಯಯನಯೋಗ್ಯವಾಗಿದೆ.
ಅವರ ಕ್ರಮ ಹಲವು ಸಲ ಹಳೆಯ ಪಠ್ಯಪುಸ್ತಕದ್ದಿರಬಹುದು. ಆದರೆ ಹೆಚ್ಚು ಶಿಸ್ತು ಮತ್ತು ಬದ್ಧತೆಯಿಂದ ಅದನ್ನವರು ಜಾರಿ ಮಾಡಿದರು. ಇದು ಎಷ್ಟೊಂದು ಪ್ರಭಾವಿಯೆಂದರೆ ಇವರು ಕಂಡುಹಿಡಿದ ಕ್ರಮಗಳನ್ನು – ಗೊತ್ತಿದ್ದೋ ಗೊತ್ತಿಲ್ಲದೆಯೋ ಗೊತ್ತಿಲ್ಲ – ಇವರ ವಿರೋಧಿಗಳೇ ಅನುಕರಿಸಿದ್ದಿದೆ. ಪಕ್ಷವನ್ನು ಕಟ್ಟುವಲ್ಲಿ ಮೋದಿ ಅವರು ಅನುಸರಿಸಿದ ಕಾರ್ಯವಿಧಾನದ ದಾಖಲೀಕರಣವು ಈ ಕ್ಷೇತ್ರದವರಿಗೆ ಮಾತ್ರವಲ್ಲ; ಅಧ್ಯಯನಕ್ಕೊಳಪಡಿಸುವ ವಿದ್ವಾಂಸರಿಗೂ ಪ್ರಯೋಜನಕಾರಿ ಆಗಬಹುದೆಂದು ಅಭಿಪ್ರಾಯಪಡಲಾಗಿದೆ.
ಅಧಿಕಾರ ಸ್ವೀಕಾರದ ಸಂಭ್ರಮ
ಇಂಗ್ಲಿಷ್ನಲ್ಲಿ ‘Well begun is half done’ ಎನ್ನುವ ಒಂದು ಮಾತಿದೆ. ಒಂದು ಕೆಲಸವನ್ನು ಚೆನ್ನಾಗಿ ಆರಂಭಿಸಿದರೆ ಅರ್ಧ ಕೆಲಸ ಮುಗಿದಂತೆ ಎಂಬುದು ಅದರ ತಾತ್ಪರ್ಯ. ೨೦೧೪ರ ಮೇ ಕೊನೆಯಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರವು ಅದೇ ರೀತಿಯಲ್ಲಿತ್ತು. ಮೇ ೨೦ರಂದು ರಾಷ್ಟ್ರಪತಿಭವನಕ್ಕೆ ಹೋಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಅಧಿಕಾರ ಸ್ವೀಕಾರಕ್ಕೆ ಮೋದಿ ಅವಕಾಶ ಕೇಳಿದರು. ಆಗಲೇ ಬಿಜೆಪಿಯ ಸಂಸದೀಯ ಪಕ್ಷ ಮತ್ತು ಎನ್ಡಿಎಗಳು ಅವರನ್ನು ನಾಯಕನನ್ನಾಗಿ ಒಪ್ಪಿಕೊಂಡಿದ್ದವು. ಪ್ರಮಾಣವಚನಕ್ಕೆ ನೆರೆಯ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಕರೆಯಬೇಕೆಂದು ರಾಷ್ಟ್ರಪತಿ ಅವರಲ್ಲಿ ಹೇಳಿದಾಗ ಅನುಭವಿ ರಾಜತಂತ್ರಜ್ಞರಾದ ಅವರು ತಲೆದೂಗಿ ಒಪ್ಪಿಗೆ ಸೂಚಿಸಿದರು. ಹೊಸ ಸರ್ಕಾರವು ನೆರೆಯ ದೇಶಗಳ ಸ್ನೇಹವನ್ನು ನಿರೀಕ್ಷಿಸುತ್ತದೆ ಎಂಬ ಸೂಚನೆಯನ್ನು ನೀಡುವುದು ಮೋದಿ ಅವರ ಉದ್ದೇಶವಾಗಿತ್ತು. ಅದರಲ್ಲಿ ನಮ್ಮ ಶತ್ರುಸ್ಥಾನದಲ್ಲಿದ್ದ ಪಾಕಿಸ್ತಾನ ಮತ್ತು ತಮಿಳರ ಸಮಸ್ಯೆಗೆ ಸಂಬಂಧಿಸಿ ವೈಮನಸ್ಯ ಹೊಂದಿದ್ದ ಶ್ರೀಲಂಕಾ ಕೂಡ ಇದ್ದವು. ಆದರೂ ಮೋದಿ ಸಂಬಂಧವನ್ನು ಹೊಸದಾಗಿ ಆರಂಭಿಸುವ ನಿರೀಕ್ಷೆಯಿಂದ ಎಲ್ಲರನ್ನೂ ಕರೆದರು. ಮೈತ್ರಿ ಇದ್ದರೂ ಸ್ವಂತ ಬಹುಮತದಿಂದ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸೇತರ ಪ್ರಧಾನಿಯಾಗಿ ಆ ಆಮಂತ್ರಣಕ್ಕೆ ಮಹತ್ತ್ವ ಕೂಡ ಇತ್ತು. ಪಾಕಿಸ್ತಾನದ ನವಾಜ್ ಶರೀಫ್ ಸೇರಿ ಎಲ್ಲ ನಾಯಕರು ಆಗಮಿಸಿದರು.
ಚುನಾವಣಾ ಪ್ರಚಾರದ ವೇಳೆ ವಿದೇಶೀ ಪತ್ರಿಕೆಗಳು ಸೇರಿದಂತೆ ಇಂಗ್ಲಿಷ್ ಮಾಧ್ಯಮಗಳು ಬಿಜೆಪಿ ನಾಯಕ ಮೋದಿ ಅವರನ್ನು ಜಗಳಗಂಟ, ಮೈತ್ರಿ-ಹೊಂದಾಣಿಕೆಗಳಿಗೆ ಪರ ಆದವರಲ್ಲ ಎಂದೆಲ್ಲ ಚಿತ್ರಣವನ್ನು ಕೊಟ್ಟಿದ್ದವು. ಸಾರ್ಕ್ ನಾಯಕರನ್ನು ಆಹ್ವಾನಿಸಿದ್ದು ಅದಕ್ಕೆ ಪೂರ್ತಿ ವಿಭಿನ್ನವಾಗಿತ್ತು. ಬಿಜೆಪಿ ಪಾಕಿಸ್ತಾನದ ವಿಷಯದಲ್ಲಿ ಹಳೆಯ ಬಿಗುನೀತಿಯನ್ನು ಅನುಸರಿಸುತ್ತದೆ ಎಂಬುದು ಕೂಡ ಇಲ್ಲಿ ಸುಳ್ಳಾಯಿತು.
ಈ ಬಗೆಯ ಆಮಂತ್ರಣದಲ್ಲಿ ಹೊಸ ಪ್ರಧಾನಿ ಮೋದಿ ಅವರ ಸಂಘಟನಾ ಕೌಶಲ ಕೂಡ ಕಂಡುಬಂತು. ತಮ್ಮ ಬಗ್ಗೆ ಹೊಸ ಇಮೇಜ್ (ಪ್ರತಿಷ್ಠೆ) ರೂಪಿಸುವ ಅವಕಾಶವನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದರು. ಮುಂದೆ ಅತ್ಯಂತ ಯಶಸ್ವಿಯಾದ ಅವರ ವಿದೇಶಾಂಗ ನೀತಿಯ ಚಿಹ್ನೆ ಇಲ್ಲಿ ಆರಂಭದಲ್ಲೇ ಕಂಡುಬಂತು ಎಂದು ಕೂಡ ಇದನ್ನು ವಿಶ್ಲೇಷಿಸಬಹುದು. ಹೀಗೆ ಮೋದಿ ಒಂದೇ ಏಟಿಗೆ ಹಲವು ಕೆಲಸಗಳನ್ನು ಮಾಡಿಬಿಟ್ಟಿದ್ದರು. ಮನಮೋಹನ್ಸಿಂಗ್ ಸರ್ಕಾರದ ಅಲಕ್ಷ್ಯದಿಂದಾಗಿ ನೆರೆಯ ದೇಶಗಳು ಮುನಿಸಿಕೊಂಡಿದ್ದರೆ, ಇನ್ನು ಕೆಲವನ್ನು ಚೀನಾ ವಿವಿಧ ತಂತ್ರಗಳಿಂದ ತನ್ನ ಕಡೆಗೆ ಸೆಳೆದಿತ್ತು. ಆ ಹಿನ್ನೆಲೆಯಿಂದ ನೋಡಿದಾಗ ಮೋದಿ ಅವರ ಕೌಶಲ ಮತ್ತು ಸಾಧನೆಗಳ ಮಹತ್ತ್ವದ ಅರಿವಾಗುತ್ತದೆ;
ಪಕ್ಷದೊಳಗೆ ನಿಷ್ಠೆ
ಆ ಹೊತ್ತಿಗೆ ಪಕ್ಷದ ಜಾಲ ಮೋದಿ ಅವರು ಅಪೇಕ್ಷಿಸಿದ ರೀತಿಯಲ್ಲಿ ನಡೆಯುವಂತೆ ಸ್ಥಿತಿಸ್ಥಾಪಕ ಗುಣವನ್ನು ಪಡೆದುಕೊಂಡಿತ್ತು. ಅದಕ್ಕೆ ಮೊದಲು ಕೆಲವು ಹಿರಿಯ ಅನ್ಯ ನಾಯಕರಲ್ಲಿ ನಿಷ್ಠೆ ಹೊಂದಿದ್ದವರು ಮೋದಿ ಏನು ಮಾಡುತ್ತಿದ್ದಾರೆಂದು ಅರ್ಥೈಸಿಕೊಂಡು ನಿಷ್ಠೆಯನ್ನು ಬದಲಿಸಿ ಸಂದರ್ಭಕ್ಕೆ ಸಜ್ಜಾದರು. ಮತ್ತೆ ಹಿಂದಿನಂತೆ ಪಕ್ಷದ ಗುರಿಗೆ ಹೊಂದುವಂತೆ ಆಡಳಿತದ ಗುರಿಯನ್ನು ಮೋದಿ ಸಂಯೋಜಿಸಿದರು. ಹಿಂದೆ ಪ್ರಧಾನಿಯಾಗಿದ್ದ ಹಿರಿಯ ನಾಯಕ ವಾಜಪೇಯಿ ಅವರಿಗೆ ಇದು ಕಷ್ಟವಿತ್ತು. ಮೈತ್ರಿಯಲ್ಲಿದ್ದ ಹಲವು ಪಕ್ಷಗಳ ಆಶಯದಂತೆ ನಡೆಯುವ ಅಗತ್ಯ ಒಂದಾದರೆ ಸಂಘಪರಿವಾರದ ಒಳಗಿದ್ದ ಸ್ವದೇಶೀ ಜಾಗರಣ ಮಂಚ್ (ಎಸ್ಜೆಎಂ) ಮತ್ತು ಕಾರ್ಮಿಕ ಸಂಘಟನೆ ಬಿಎಂಎಸ್ಗಳು ಸರ್ಕಾರದ ವಿರುದ್ಧ ಧ್ವನಿಯನ್ನು ಹೊರಹಾಕುತ್ತಿದ್ದವು.
ಪ್ರಧಾನಿಯಾಗಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಪಕ್ಷದ ಕಾರ್ಯಕರ್ತರ ಒಗ್ಗಟ್ಟು ಕೂಡ ಸಾಧಿತವಾಯಿತು. ಪಕ್ಷದ ಅಧ್ಯಕ್ಷ ರಾಜ್ನಾಥ್ಸಿಂಗ್ ಅವರು ಹೊಸ ಸರ್ಕಾರದಲ್ಲಿ ಗೃಹ ಸಚಿವರಾದಾಗ ಉತ್ತರಪ್ರದೇಶದಲ್ಲಿ ಪಕ್ಷದ ಉಸ್ತುವಾರಿ ವಹಿಸಿದ್ದ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ಅಧ್ಯಕ್ಷರಾದರು. ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಉತ್ತರಪ್ರದೇಶದಲ್ಲಿನ ವಿಜಯಕ್ಕಾಗಿ ಶಾ ಅವರನ್ನು ಹೊಗಳಿದರು. ರಾಜ್ಯದ ೮೦ ಸ್ಥಾನಗಳಲ್ಲಿ ಬಿಜೆಪಿ (ಮಿತ್ರರ ಸಹಿತ) ೭೩ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡು ಇತರ ಪಕ್ಷಗಳಿಗೆ ಮಾರಕ ಏಟು ನೀಡಿತ್ತು; ಮತ್ತು ಪಕ್ಷದ ಬಹುಮತಕ್ಕೆ ದೊಡ್ಡ ಕೊಡುಗೆ ನೀಡಿತ್ತು. ಪಕ್ಷವು ಸರ್ಕಾರದ ನೀತಿಗಳಿಗೆ ನಿಕಟವಾಗಿ ಕೆಲಸ ಮಾಡಬೇಕೆನ್ನುವ ಸಂದೇಶ ಅಲ್ಲಿ ಸ್ಪಷ್ಟವಾಗಿತ್ತು. ಹೊಸ ಸರ್ಕಾರ ಮತ್ತು ಪಕ್ಷದ ಆದ್ಯತೆಗಳೇನು ಎಂಬುದನ್ನು ಇನ್ನೊಮ್ಮೆ ಮೋದಿ ಅವರ ಗುಜರಾತ್ ಅನುಭವವೇ ನಿರ್ಧರಿಸಿತು. ಅಮಿತ್ ಶಾ ಗುಜರಾತಿನಲ್ಲಿ ಮೋದಿ ಅವರಿಗೆ ನಿಕಟವಾಗಿ (ಗೃಹಮಂತ್ರಿಯಾಗಿ) ಕೆಲಸ ಮಾಡಿದ್ದವರು; ಮತ್ತು ಪಕ್ಷ ಹಾಗೂ ಸರ್ಕಾರಗಳು ಹೇಗೆ ಜೊತೆಯಾಗಿ ಕೆಲಸ ಮಾಡಬೇಕೆಂಬುದನ್ನು ಬಲ್ಲವರು.
ಪಕ್ಷ–ಸರ್ಕಾರ ಜೋಡಿ
ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರಗಳು ಹೊಂದಾಣಿಕೆಯಿಂದ ದುಡಿದ ಕಾರಣದಿಂದ ದೇಶದಲ್ಲಿ ಪಕ್ಷವು ದೊಡ್ಡ ರೀತಿಯಲ್ಲಿ ವಿಸ್ತರಣೆಗೊಂಡಿತು. ಹಿಂದೆ ಜನರನ್ನು ಒಳಗೊಳ್ಳುವಲ್ಲಿ ಬಿಜೆಪಿಯ ಅನುಭವ ಭಿನ್ನವಾಗಿತ್ತು. ೧೯೯೦ರಲ್ಲಿ ಹಿರಿಯ ನಾಯಕ ಆಡ್ವಾಣಿ ಅವರು ಆಯೋಧ್ಯೆಯ ರಾಮ ಜನ್ಮಭೂಮಿ ರಥಯಾತ್ರೆಯನ್ನು ಹಮ್ಮಿಕೊಂಡ ಘಟನೆ ಅತಿದೊಡ್ಡ ಜನಸಮುದಾಯದ (mass) ಸಂಘಟನೆ ಅಥವಾ ಕ್ರೋಡೀಕರಣ ಆಗಿದ್ದುದು ನಿಜ. ಆದರೆ ಅದರಲ್ಲಿ ಎಲ್ಲರನ್ನೂ ಒಳಗೊಳ್ಳುವ (inclusive) ಒಂದು ಲಕ್ಷಣ ಇರಲಿಲ್ಲ. ಒಂದೆಡೆ ಅದರಲ್ಲಿ ಮತೀಯ ಅಥವಾ ಧಾರ್ಮಿಕ ಬಣ್ಣವಿದ್ದು, ಕೆಲವು ಸಾಮಾಜಿಕ ವರ್ಗಗಳನ್ನು ಅದು ಮತೀಯ ಅಥವಾ ರಾಜಕೀಯ ಕಾರಣಕ್ಕೆ ಹೊರಗಿಟ್ಟಿತ್ತು.
ಪಟೇಲ್ ಪ್ರತಿಮೆಯ ಸ್ಥಾಪನೆ
ಮೋದಿ ಅವರ ಅನುಭವ ಹಾಗೂ ನಡೆಗಳು ಸ್ವಭಾವತಃ ವಿಭಿನ್ನ ಆದಂಥವು. ರಾಷ್ಟ್ರಮಟ್ಟದಲ್ಲಿ ಅದು ಮೊದಲ ಬಾರಿಗೆ ಅನಾವರಣಗೊಂಡಿತು. ೨೦೧೩ರಲ್ಲಿ ಗುಜರಾತಿನ ನರ್ಮದಾ ಅಣೆಕಟ್ಟಿನ ಬಳಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರ ಬೃಹತ್ ವಿಗ್ರಹವನ್ನು (ಏಕತಾ ಮೂರ್ತಿ) ಸ್ಥಾಪಿಸುವ ಯೋಜನೆಯನ್ನು ಮೋದಿ ಹಮ್ಮಿಕೊಂಡರು. ಅದಕ್ಕೆ ದೇಶದ ರೈತರಿಂದ ಕೃಷಿಯ ಕಬ್ಬಿಣದ ಉಪಕರಣಗಳನ್ನು ಕೇಳಿದಾಗ ಅದೊಂದು ದೊಡ್ಡ ಜನಾಂದೋಲನದ ರೂಪವನ್ನು ಪಡೆದುಕೊಂಡಿತ್ತು. ಅಮೆರಿಕದ ಲಿಬರ್ಟಿ ವಿಗ್ರಹಕ್ಕಿಂತಲೂ ಹೆಚ್ಚು ಎತ್ತರದ ಅದು ಬಹುದೊಡ್ಡ ರಾಜಕೀಯ ಪ್ರಸ್ತಾವನೆ (ಮಂಡನೆ) ಎನಿಸಿತು; ಗೊಂದಲದ ಒಂದು ಪ್ರಯತ್ನವಾಗಿ ಉಳಿಯಲಿಲ್ಲ.
ಮೋದಿ ಆಗ ರಾಷ್ಟ್ರೀಯ ಮಟ್ಟದಲ್ಲಿ ಇಲ್ಲದಿದ್ದರೂ ಪಕ್ಷದ ಕಾರ್ಯಕರ್ತರಲ್ಲದೆ ದೇಶಾದ್ಯಂತ ತಮ್ಮ ಅಭಿಮಾನಿಗಳನ್ನು (ಮತ್ತು ಪಟೇಲ್ ಅಭಿಮಾನಿಗಳನ್ನು) ಈ ಯೋಜನೆಯ ಮೂಲಕ ಸಂಘಟಿಸಿದರು. ನಿರ್ಮಿಸಿದ ೧೮೨ ಮೀಟರ್ ಎತ್ತರದ ವಿಗ್ರಹದಲ್ಲಿ ಕರಗಿಸಿದ ಕೃಷಿ ಉಪಕರಣಗಳ ಪಾಲು ದೊಡ್ಡದಿತ್ತು. ತಮ್ಮ ಕೊಡುಗೆ ನೀಡಿದ ದೇಶದ ೫ ಲಕ್ಷಕ್ಕೂ ಮಿಕ್ಕಿ ಹಳ್ಳಿಗಳ ಹೆಸರುಗಳ ಪಟ್ಟಿಯನ್ನು ಭವಿಷ್ಯಕ್ಕೆ ದಾಖಲೆಯಾಗಿ ಅದೇ ನಿವೇಶನದಲ್ಲಿ ಹೂಳುವ ಕಾರ್ಯಕ್ರಮ ಕೂಡ ಇತ್ತು. ಇಡೀ ಯೋಜನೆ ಅದ್ವಿತೀಯವಾಗಿದ್ದು, ದೇಶದಲ್ಲಿ ಜನಾಂದೋಲನಕ್ಕೊಂದು ಪಾಠದಂತಿತ್ತು. ಲಿಬರ್ಟಿ ವಿಗ್ರಹವನ್ನು ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ತಜ್ಞರು ವೃತ್ತಿಪರವಾಗಿ, ಕೌಶಲಪೂರ್ಣವಾಗಿ ನಿರ್ಮಿಸಿದ್ದರೆ ಪಟೇಲ್ ವಿಗ್ರಹ ಕೂಡ ಅಪಾರ ಶ್ಲಾಘನೆಗೆ ಪಾತ್ರವಾಯಿತು; ಪ್ರವಾಸಿಕೇಂದ್ರವೇ ಆಗಿ ಆದಾಯವನ್ನೂ ತಂದಿತು. ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದ ಮೋದಿ ಅವರ ಈ ಆಂದೋಲನವು ದೇಶದ ಬಹುತೇಕ ಎಲ್ಲ ಹಳ್ಳಿಗಳನ್ನು ಭಾಗೀದಾರರನ್ನಾಗಿ ಮಾಡಿತು. ತಮ್ಮ ಕೃಷಿ ಉಪಕರಣಗಳನ್ನು ಕೊಟ್ಟವರು ಇದರೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದರು. ಮೋದಿ ಸಾರ್ವಜನಿಕ ಜೀವನದಲ್ಲಿ ಇಂತಹ ಸಂಘಟನೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಸರ್ಕಾರ ಮತ್ತು ಪಕ್ಷವನ್ನು ಒಳಗೊಂಡು ಮಾಡುವಲ್ಲಿ ಅವರ ಒಂದು ಸ್ಪಷ್ಟ ವಿನ್ಯಾಸವನ್ನು ಅಲ್ಲಿ ಗುರುತಿಸಬಹುದು.
ಮೇಲ್ನೋಟಕ್ಕೆ ಕಂಡರೆ ಇದರಲ್ಲಿ, ಅಂದರೆ ಸರ್ಕಾರ ಮತ್ತು ಆಳುವ ಪಕ್ಷಗಳ ಜೋಡಿಯಲ್ಲಿ ವಿಶೇಷವೇನೂ ಕಾಣಿಸುವುದಿಲ್ಲ. ಆದರೆ ಭಾರತದಲ್ಲಿ ಇದರ ಪ್ರಯೋಗ ಅಷ್ಟಾಗಿ ನಡೆದಿಲ್ಲ. ಬಿಜೆಪಿಯ ಹಿಂದಿನ ಕೇಂದ್ರಸರ್ಕಾರಗಳು ಅಥವಾ ಪಕ್ಷದ ರಾಜ್ಯಸರ್ಕಾರಗಳು ಬೇರೆಯೇ ಅನುಭವ ಹೊಂದಿದ್ದವು. ಆ ಪರಂಪರೆ ಶುರುವಾದದ್ದು ಕಾಂಗ್ರೆಸ್ನಿಂದ. ಅಲ್ಲಿ ಪಕ್ಷವು ಸರ್ಕಾರದಿಂದ ಪ್ರತ್ಯೇಕ ಆಗಿರುವುದಕ್ಕೆ ಒತ್ತು ನೀಡುತ್ತಿದ್ದರು. ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷ ಕೂಡ ಸ್ವತಂತ್ರ ಪಾಲಿಟ್ಬ್ಯೂರೋಗೆ ಒತ್ತು ನೀಡುತ್ತಿದೆ. ಕೆಲವು ಸಲ ಈ ಎರಡು ವಿಭಾಗಗಳ ಉದ್ದೇಶವೇ ವಿಭಿನ್ನ ಆಗಿರುತ್ತದೆ. ಸರ್ಕಾರ ಮತ್ತು ಆಳುವ ಪಕ್ಷಗಳ ಕೆಲವು ನಾಯಕರು ಪರಸ್ಪರ ಆಂತರಿಕ ವಿರೋಧಿಗಳಂತೆ ಇರುವುದೂ ಇದೆ. ಅದನ್ನೊಂದು ತಂತ್ರದಂತೆ ಕೂಡ ಬಳಸುವುದಿದೆ. ಸರ್ಕಾರದ ಬಗ್ಗೆ ಪಕ್ಷದ ಒಳಗಿನವರೇ ವಿಭಿನ್ನ ಅಭಿಪ್ರಾಯವನ್ನು ನೀಡಿದಾಗ ಪ್ರತಿಪಕ್ಷಗಳಿಗೆ ಅದನ್ನು ಬಂಡವಾಳ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಪಕ್ಷದ ಕಾರ್ಯಸೂಚಿ (ಅಜೆಂಡಾ)ಯನ್ನು ಆಳುವ ವಿಭಾಗ(ಸರ್ಕಾರ)ದಿಂದ ಬೇರೆ ಇರಿಸಿಕೊಳ್ಳುವುದು ಸುರಕ್ಷಿತ ಎಂದು ಕೂಡ ಹೇಳಬಹುದು.
ಒಳವಿರೋಧದ ತಂತ್ರ
ಆದರೆ ಬಲಿಷ್ಠ ನಾಯಕರಿರುವ ಆಳುವ ಪಕ್ಷಗಳು ಈ ವಿಧಾನವನ್ನು ಅನುಸರಿಸುವುದಿಲ್ಲ. ಪರಸ್ಪರ ವಿರೋಧವಿರುವ ವ್ಯವಸ್ಥೆಯಿಂದ ಆಂತರಿಕ ಪ್ರಜಾಪ್ರಭುತ್ವವು ಬೆಳೆಯುತ್ತದೆ ಎಂದವರು ವಾದಿಸುತ್ತಾರೆ. ಇಂತಹ ಕೆಲವು ಅನುಕೂಲಗಳಿದ್ದರೂ ಬಣ ರಾಜಕೀಯ ಮತ್ತು ದ್ವಂದ್ವಗಳಿಗೆ ಅದು ದಾರಿಯಾಗುತ್ತದೆ. ಸರ್ಕಾರದ ಕೆಲಸ ನಿಧಾನವಾಗುತ್ತದೆ. ಮೋದಿ ಅವರು ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ಯಾವಾಗಲೂ ಎರಡೂ ವಿಭಾಗಗಳನ್ನು ಒಟ್ಟಾಗಿ ಇರಿಸಿಕೊಳ್ಳುವ ಮೂಲಕ ಉತ್ತಮ ಆಡಳಿತವನ್ನು ನೀಡುತ್ತಾ ಬಂದಿದ್ದಾರೆ.
ಈ ರೀತಿಯಲ್ಲಿ ಮೋದಿ ಅವರ ಬಿಜೆಪಿ ದೇಶವನ್ನು ಆಳುವಷ್ಟೇ ಮಹತ್ತ್ವವನ್ನು ಪಕ್ಷ ಕಟ್ಟುವುದಕ್ಕೂ ನೀಡುತ್ತಾ ಬಂದಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ೨೦೧೪ರಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲೂ ಇದು ಸ್ಪಷ್ಟವಾಯಿತು. ಆಗ ಅಂಗೀಕರಿಸಿದ ರಾಜಕೀಯ ನಿರ್ಣಯವು ಹೀಗಿತ್ತು: “ಈ ಚುನಾವಣೆಯಲ್ಲಿ ಪಕ್ಷಕ್ಕೊಂದು ಪಾಠವಿದೆ. ಒಬ್ಬ ಜನಪ್ರಿಯ ನಾಯಕ ಮತ್ತು ಭಾವನೆಯ ಅಲೆಗಳು ಪಕ್ಷವು ಗಟ್ಟಿಯಿದ್ದಾಗ ಮತ್ತು ಸ್ಥಳೀಯ ನಾಯಕತ್ವವು ಕ್ರಿಯಾಶೀಲವಾಗಿದ್ದಾಗ ಮಾತ್ರ ವೋಟುಗಳಾಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವುದು ಅಗತ್ಯ ಮತ್ತು ಅದು ನಮ್ಮ ಜವಾಬ್ದಾರಿಯಾಗಿದೆ” (ಆಗಸ್ಟ್ ೯, ೨೦೧೪).
ಸದಸ್ಯತ್ವ ಅಭಿಯಾನ
ದೇಶದಲ್ಲಿ ಯಾವುದೇ ಒಂದು ಪಕ್ಷಕ್ಕೆ ಕಳೆದ ಮೂರು ದಶಕಗಳಲ್ಲಿ ಇಂತಹ ಬೆಂಬಲವು ಸಿಕ್ಕಿರಲಿಲ್ಲ. ಅದು ಪಕ್ಷವನ್ನು ಬಲಪಡಿಸಲು ಅತ್ಯಂತ ಪ್ರಶಸ್ತ ಕಾಲವಾಗಿತ್ತು. ರಾಜಕೀಯ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಹೊಸ ವಿಜಯದ ಕಡೆಗೆ ಆಕರ್ಷಿತರಾಗಿದ್ದರು. ಆಗ ಮೋದಿ ಮತ್ತು ಅಮಿತ್ ಶಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಮಾರ್ಚ್ ೨೦೧೫ರಲ್ಲಿ ಪಕ್ಷಕ್ಕೆ ಹೊಸ ಪ್ರಾಥಮಿಕ ಸದಸ್ಯರ ಸೇರ್ಪಡೆಯ ಬಗ್ಗೆ ಶಾ ಕರೆ ನೀಡಿದರು. ಅದಕ್ಕೆ ಪ್ರತಿಕ್ರಿಯೆ ನಿರೀಕ್ಷೆಗಿಂತ ಉತ್ತಮವಾಗಿತ್ತು. ವಾರದೊಳಗೆ ಮೊದಲೇ ಇದ್ದ ಪಟ್ಟಿಗೆ ಸುಮಾರು ಒಂದು ಕೋಟಿ ಹೆಸರುಗಳು ಸೇರಿದವು. ಆ ತಿಂಗಳ ಕೊನೆಯ ಹೊತ್ತಿಗೆ ಪಕ್ಷ ಒಟ್ಟು ೮.೮೦ ಕೋಟಿ ನೋಂದಾಯಿತ ಸದಸ್ಯರನ್ನು ಹೊಂದಿತ್ತು. ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರಿರುವ ರಾಜಕೀಯ ಪಕ್ಷ ಎನ್ನುವ ಆಚರಣೆಯನ್ನೂ ಬಿಜೆಪಿ ನಡೆಸಿತು. ಅದರೊಂದಿಗೆ ಬಿಜೆಪಿ ಚೀನಾದ ಕಮ್ಯೂನಿಸ್ಟ್ ಪಕ್ಷವನ್ನೂ ಹಿಂದೆ ಹಾಕಿತ್ತು.
೨೦೧೯ರ ಲೋಕಸಭಾ ಚುನಾವಣೆಯ ವಿಜಯದ ಅನಂತರ ಬಿಜೆಪಿ ಅಂಥದೇ ಇನ್ನೊಂದು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿತು. ಆಗ ಮತ್ತೆ ಏಳು ಕೋಟಿ ಜನ ಬಿಜೆಪಿ ಸದಸ್ಯರಾದರು. ಒಟ್ಟು ಸದಸ್ಯರ ಸಂಖ್ಯೆ ೧೮ ಕೋಟಿಗೇರಿತು. ಅಂದರೆ ದೇಶದ ಜನಸಂಖ್ಯೆಯ ಶೇ.೧೩ಕ್ಕಿಂತ ಸ್ವಲ್ಪ ಜಾಸ್ತಿ ಜನ ಪಕ್ಷದ ಸದಸ್ಯರಾಗಿದ್ದರು. ಜಗತ್ತಿನ ಎಂಟು ದೇಶಗಳನ್ನು ಬಿಟ್ಟರೆ ಇತರ ಯಾವುದೇ ದೇಶದಲ್ಲಿ ಇಷ್ಟೊಂದು ಜನಸಂಖ್ಯೆ ಇಲ್ಲವೆಂದು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು. ಸಂಖ್ಯೆಯ ನಿಖರತೆಯ ಬಗ್ಗೆ ಚರ್ಚೆ ಇರಬಹುದಾದರೂ ಒಟ್ಟಾರೆ ಸ್ಥಿತಿಯನ್ನು ಇದು ತೋರಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಇದರೊಂದಿಗೆ ಪಕ್ಷದ ಆದಾಯ ಅದಕ್ಕೆ ಬರುವ ದಾನ-ದೇಣಿಗೆ ಕೂಡ ಏರುತ್ತಿದೆ. ೨೦೧೨-೨೦೧೩ರಲ್ಲಿ ೩೨೪.೧೬ ಕೋಟಿ ರೂ. ಇದ್ದ ಪಕ್ಷದ ಆದಾಯ ಮುಂದಿನ ವರ್ಷ ೬೭೩.೧೮ ಕೋಟಿಗೇರಿತು. ೨೦೧೪-೨೦೧೫ರಲ್ಲಿ ಪಕ್ಷದ ಆದಾಯ ೯೭೦.೪೩ ಕೋಟಿ ಇದ್ದುದು ೨೦೧೯-೨೦೨೦ರಲ್ಲಿ ೩,೬೨೩.೨೮ ಕೋಟಿಗೇರಿತ್ತು.
ಸಾಮಾನ್ಯವಾಗಿ ರಾಜಕೀಯ ಪಕ್ಷಗಳಿಗೆ ಮೊದಲಿಗೆ ಗಟ್ಟಿಯಾದ ಸಿದ್ಧಾಂತವಿದ್ದು, ಮತ್ತೆ ಅದು ತೆಳು(dilute)ವಾಗುತ್ತಾ ಹೋಗುತ್ತದೆ. ಒಂದು ಗುಂಪಿನ ಆಚೆಗೆ ಸ್ವೀಕಾರಾರ್ಹವಾಗಲು ಅಥವಾ ಅಧಿಕಾರದ ಗಳಿಕೆಗಾಗಿ ಅದು ಅಗತ್ಯವಾಗಿರಬಹುದು. ದೇಶದ ಹೆಚ್ಚಿನ ಪ್ರಮುಖ ಪಕ್ಷಗಳಿಗೆ ಇದೇ ಅವಸ್ಥೆ ಆಗಿದೆ. ಬಿಜೆಪಿ ದೇಶದಲ್ಲಿ ೧೯೯೦ರ ದಶಕದಲ್ಲಿ ಮಿತ್ರಪಕ್ಷಗಳ ನೇತೃತ್ವ ವಹಿಸಿ ಅಧಿಕಾರಕ್ಕೆ ಬಂದಿತ್ತು. ಸರ್ಕಾರವನ್ನು ಗಟ್ಟಿ ಮಾಡಲು ಮಿತ್ರಪಕ್ಷಗಳನ್ನು ಸೇರಿಸುತ್ತ ಹೋಗಬೇಕಾಯಿತು.
ಆಗ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (Common Minimum Programme) ಮುಂತಾದ ಹೆಸರಿನಲ್ಲಿ ಪಕ್ಷದ ಸಿದ್ಧಾಂತವನ್ನು ತೆಳು ಮಾಡಬೇಕಾಯಿತು; ಅಥವಾ ಪಕ್ಕಕ್ಕಿಡಲೂಬೇಕಾಯಿತು (ಅಮಾನತು). ಆದರೆ ಮೋದಿ ಅವರ ನಾಯಕತ್ವದಲ್ಲಿ ಪಕ್ಷ ಅಧಿಕಾರದ ಪೀಠವನ್ನು ಏರುವ ಸಂದರ್ಭದಲ್ಲಿ ಸಿದ್ಧಾಂತವನ್ನು ಬದಿಗೆ ಸರಿಸುವ ಅಗತ್ಯ ಬೀಳಲಿಲ್ಲ; ಪಕ್ಷಕ್ಕೆ ಸ್ವಂತ ಬಹುಮತವಿದ್ದುದೇ ಅದಕ್ಕೆ ಕಾರಣ. ಅಧಿಕಾರಕ್ಕೆ ಬರುವಾಗ ಅವರಿಗೆ ಪಕ್ಷದ ಸಿದ್ಧಾಂತವನ್ನು ಗಟ್ಟಿಗೊಳಿಸುವುದಕ್ಕೆ ಕೂಡ ಅವಕಾಶ ಇತ್ತೆಂದರೆ ತಪ್ಪಲ್ಲ.
(ಸಶೇಷ)
ಅಯೋಧ್ಯೆ ರಥಯಾತ್ರೆಯ ಸಾರಥಿ
ಅದು ೧೯೯೦-೯೧ರ ಸಮಯ. ಅಂದಿನ ಬಿಜೆಪಿ ಅಧ್ಯಕ್ಷ ಡಾ. ಮುರಳಿ ಮನೋಹರ ಜೋಶಿ ಅವರು ಉತ್ತರಪ್ರದೇಶ ರಾಜ್ಯಾದ್ಯಂತ ಏಕತಾಯಾತ್ರೆಯನ್ನು ನಡೆಸುತ್ತಿದ್ದರು. ಆಗ ಯಾತ್ರೆಯ ಉಸ್ತುವಾರಿ (ಎಸ್ಕಾರ್ಟ್) ಕೆಲಸ ಮಾಡುತ್ತಿದ್ದ ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರು ತಮ್ಮ ಪರಿಚಯದ ಓರ್ವ ಪತ್ರಕರ್ತರಲ್ಲಿ ಮೆಲುದನಿಯಲ್ಲಿ ನರೇಂದ್ರ ಮೋದಿ ಎನ್ನುವ ಓರ್ವ ವ್ಯಕ್ತಿ ಈ ಯಾತ್ರೆಯ ನಿರ್ವಹಣೆಯನ್ನು ಅಸಾಮಾನ್ಯವಾದ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರಂತೆ. ಆಗ ಕಲ್ಯಾಣಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಜೋಶಿ ಅವರೊಂದಿಗಿದ್ದ ವಾಹನಗಳ ಭದ್ರತೆಯ ಒಳ ಆವರಣವನ್ನು ಪ್ರವೇಶಿಸುವುದಕ್ಕೆ ಎಸ್ಕಾರ್ಟ್ ಡ್ಯೂಟಿ ಮಾಡುತ್ತಿದ್ದ ಪೊಲೀಸರಿಗೆ ತುಂಬ ಕಷ್ಟವಿತ್ತು. ಅವರ ಸ್ವಯಂಸೇವಕರು ಭಯಂಕರ ಜನರಾಗಿದ್ದು (ಜಚಿಡಿeಜeviಟs) ಅವರು ತಮ್ಮ ಮಾರುತಿ ವ್ಯಾನ್ಗಳನ್ನು ಯಾವ ರೀತಿ ಓಡಿಸುತ್ತಾರೆಂದರೆ ಜೋಶಿ ಅವರಿದ್ದ ವಾಹನದ ಬಳಿ ಹೋಗುವುದು ಅಸಂಭವವೇ ಸರಿ ಎಂದು ಕೂಡ ಆ ಎಸ್ಪಿ ಹೇಳಿದ್ದರು.
ಮೋದಿ ಅವರು ಏಕತಾಯಾತ್ರೆಯನ್ನು ಸಂಘಟಿಸಿದ ರೀತಿ ಭದ್ರತಾ ಸಂಸ್ಥೆಗಳಲ್ಲಿ ಅಚ್ಚರಿ ಮೂಡಿಸಿತ್ತು. ಅವರ ಮೈಕ್ರೋಮ್ಯಾನೇಜ್ಮೆಂಟ್ಗೆ (ಸೂಕ್ಷ್ಮ ನಿರ್ವಹಣೆ) ನಿಕಟವಾದ ನಿಯಂತ್ರಣಗಳು ಪಕ್ಷದ ಕಾರ್ಯಕರ್ತರಲ್ಲಿ ಸ್ಫೂರ್ತಿಯನ್ನು ತುಂಬಿದ್ದು ಅವರು ತಮ್ಮ ಪಾಲಿನ ಕೆಲಸವನ್ನು ಗಡಿಯಾರದ ಮುಳ್ಳಿನಂತೆ ಮಾಡಿ ಮುಗಿಸುತ್ತಿದ್ದರು. ಜೋಶಿ ಅವರಿದ್ದ ವಾಹನದೊಂದಿಗೆ ಹೋಗುತ್ತಿದ್ದ ವಾಹನಗಳ ಚಾಲಕರಿಗೆ ಆಡಿಯೋ ಟೇಪ್ನಲ್ಲಿದ್ದ ಸೂಚನೆಗಳನ್ನು ಕರಾರುವಾಕ್ಕಾಗಿ ಪಾಲಿಸುವ ಮತ್ತು ಇತರರಿಗೆ ದಾಟಿಸುವ ಅಭ್ಯಾಸ ಚೆನ್ನಾಗಿತ್ತು. ಸ್ವಯಂಸೇವಕರು ಫ್ಯಾಕ್ಸ್ ಮೆಷಿನ್ಗಳನ್ನು ತಮ್ಮೊಂದಿಗೆ ಒಯ್ದಿದ್ದರು (ಆಗ ಇಂಟರ್ನೆಟ್ ಇರಲಿಲ್ಲ); ಆ ಮೂಲಕ ಪಕ್ಷದ ಕಚೇರಿಗಳು ಹಾಗೂ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕ ಸಾಧ್ಯವಿತ್ತು. ಅಂತಹ ಅಪೂರ್ವ ಸಂಘಟಕ ಮೋದಿ ಅವರಾಗಿದ್ದು, ಎಲ್.ಕೆ. ಆಡ್ವಾಣಿ ಅವರ ರಥಯಾತ್ರೆಗಳಿಗೂ ಅವರೇ ಸಂಘಟಕರಾಗಿದ್ದರು.