ಲಗುನ-ಮರಣವನುದಿನ
ಹೋಮ ಹೊಗೆಯುಕ್ಕುತಿದೆ ಸಪ್ತಪದಿ ತುಳಿಯಲಿಕೆ
ಧೂಮವಿಕ್ಕಿದೆ ಕೊಳ್ಳಿ ಸೂತಕವ ತೋರಲಿಕೆ ||೧||
ಸಿರಿಸೌಖ್ಯದಿಂ ಬಾಳಿರೆಂದಕ್ಕಿಯಿಕ್ಕುವರು
ಚಿರಶಾಂತಿ ಲಭಿಸಲೆನೆ ಬಾಯ್ಗಕ್ಕಿ ಹಾಕುವರು ||೨||
ಮೆರವಣಿಗೆ ಹೊರಟಿಹುದು ನಾಲ್ಚಕ್ರರಥದಲ್ಲಿ
ಮೆರೆಸುವರು ಶವವನ್ನು ನಾಲ್ಜನರ ಹೆಗಲಲ್ಲಿ ||೩||
ಖುಷಿಯಲ್ಲಿ ಹಾಕುವರು ನವಪುಷ್ಪಗಳ ಮಾಲೆ
ವ್ಯಸನ ಸೂಸಿಡುವರು ಸುಮಸರವ ಶವದ ಮೇಲೆ ||೪||
ಮಲಗುವರು ಕೋಣೆಯೊಳು ಒರುಜನ್ಮವೀಯಲಿಕೆ
ಮಲಗಿಪರು ಕುಳಿಯೊಳಗೆ ಮರುಜನ್ಮ ಪಡೆಯಲಿಕೆ ||೫||
ತಳ್ಕೈಸಿ ಕಳುಹೆ ವಧುವನು ಬಿಕ್ಕುತಳುತಿಹರು
ಬೀಳ್ಕೊಡಲು ಶವವನ್ನು ಕಂಬನಿಯ ಕರೆಯುವರು ||೬||
ಹರಿಯುತಿದೆ ಜನಜಂಗುಳಿಯು ಹುಚ್ಚುಹೊಳೆಯಂತೆ
ಹಿರಿಕಿರಿಯರೆನ್ನದಲೆ ಭೇದವೇನಿರದಂತೆ ||೭||
ನೋಡಿದಾಗಿವನೆರಡ ತುಸುಸಾಮ್ಯ ಕಂಡೊಡಂ
ಗಾಢವಿಹುದೈ ಭೇದ ತೋರುತತಿಜಂಜಡಂ ||೮||
ಇಂತೊಂದು ಶುಭಲಗುನ ಮತ್ತೊಂದಶುಭಮರಣ
ಸಂತಸದಿ ಸಂಕಟದಿ ಸಾಗುತ್ತಿದೆಯನುದಿನ ||೯||
— ಶ್ರೀ ಕುಮಾರನಿಜಗುಣ ಸ್ವಾಮಿಗಳು
ಲೇಖಕರು ಅಧ್ಯಾತ್ಮ ಸಾಧಕರು; ಕೊಳ್ಳೇಗಾಲ ಚಿಲುಕವಾಡಿಯ ನಿಜಗುಣ ಫೌಂಡೇಷನ್ಸ್ ಅಧ್ಯಕ್ಷರು ಹಾಗೂ ಕವಿಗಳು.
ನೀಲಿಬಾನಿನಂಗಳದಿ ಅರಳಿ ನಿಂತ ಮೋಡಗಳೆ…
ನೀಲಿಬಾನಿನಂಗಳದಿ ಅರಳಿ ನಿಂತ ಮೋಡಗಳೆ
ನನ್ನ ಭುವಿಗೆ ಮಳೆಯ ತನ್ನಿ |
ಉರಿ ಬಿಸಿಲ ಬೇಗುದಿಗೆ ಬೆಂದು ಬಳಲಿ ಬಸವಳಿದ
ಈ ಧರೆಯ ತಣಿಸ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||
ಬತ್ತ, ರಾಗಿ, ಜೋಳ, ಗೋದಿ, ಹುರುಳಿ, ತೊಗರಿ, ಹೆಸರುಕಾಳ
ಬಗ್ಗಡದಿ ಬಿತ್ತ ಬನ್ನಿ |
ತೇವಕಾವವು ಬೆಸೆದು ಹೊಸ ಸೃಷ್ಟಿ ಚಿಗುರು ಒಡೆದು
ಹೊಲಕೆಲ್ಲ ಹಸಿರು ತನ್ನಿ || ನನ್ನ ಭುವಿಗೆ ಮಳೆಯ ತನ್ನಿ ||
ಒಡೆದ ಏರಿಯ ಬೆಸೆದು ನೆಲದಾಳದ ಹೂಳು ತೆಗೆದು
ಕೆರೆ ಒಡಲ ತುಂಬ ಬನ್ನಿ |
ಕೋಡಿ ತೂಬಿನ ಕದವ ಬಾಡ ಬದುಕಿಗೆ ತೆರೆದು
ಹೊಸತನವನು ನೀಡ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||
ಬೆಟ್ಟ ಕಣಿವೆಯಾ ಕೊರೆದು ಹಳ್ಳ ತೊರೆಗಳ ಹೆಣೆದು
ಗಂಗೆಯಾಗಿ ಹರಿಯ ಬನ್ನಿ |
ನೈಜತೆಯ ರೂಪತಳೆದು ಜೀವಸಂಕುಲ ಪೊರೆದು
ಸಾಗರವ ಸೇರ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||
— ಪೆ|| ನಾರಾಯಣ ಶೆಣೈ ಕೆ.
ಲೇಖಕರು ತಂತ್ರಜ್ಞಾನ ಪ್ರೊಫೆಸರ್ ಹಾಗೂ ಪರಿಸರ ಚಳವಳಿ ಕಾರ್ಯಕರ್ತರು