ಸಮುದ್ರವನ್ನೇ ನೋಡಿರದ ಮೊಮ್ಮಗ
ಊರಿಗೆ ಬಂದಾಗ ವಿನಂತಿಸಿದ
‘ತೋರಿಸಲು ಸಾಧ್ಯವೇ ಅಜ್ಜ ಸಮುದ್ರವ?’
ಸಾಕಷ್ಟು ಸಲ ಸಮುದ್ರ ನೋಡಿದ್ದ ನನ್ನಲ್ಲಿ
ಉತ್ಸಾಹ ಇರಲಿಲ್ಲ
ತಮಾಷೆಗೆ ತಂಬಿಗೆ ತುಂಬ ನೀರು ತುಂಬಿಸಿ
ಉಪ್ಪು ಸುರಿದು
‘ಇದೂ ಸಮುದ್ರವೇ!’ ಎಂದೆ.
ಯಾಕೆ ತಮಾಷೆ?
‘ನೋಡಿದ್ದನ್ನು ನೋಡಬಾರದೆಂದಿಯೆ ಮತ್ತೆ?’
ಎಂದು ಆತ ಒತ್ತಾಯಿಸಿದ್ದಕ್ಕೆ
ಸಮುದ್ರದ ಬಳಿ ಬಂದೆವು
ಅವನು ಸಮುದ್ರ ನೋಡಿ ಒಳಗೊಳ್ಳುತ್ತಿದ್ದ ಪರಿನೋಡಿ
‘ಅಹಾ! ಅಹಾ!’ ಅಂದೆ
ಆತ ಹಿಂದಿನಿಂದ ಬಂದು ಬಿಗಿದಪ್ಪಿ
‘ನೀವೂ ಸಮುದ್ರವೇ ಆಗಿದ್ದೀರಿ ಈಗ’
ಎಂದ.
ಅವನ ಇಡೀ ದೇಹ ಮತ್ತು ನನ್ನ ಮನಸ್ಸಿನಲ್ಲಿ
ಈಗ ಸಮುದ್ರ ಇದ್ದು
ಎಂಥ ಸಾಧ್ಯತೆಗಳಿವೆ ನೋಡಿದ್ದನ್ನೇ ಮತ್ತೆ ನೋಡುವಾಗ
ಎನ್ನುವುದು ಹೊಳೆಹೊಳೆದು
ಸಮುದ್ರವು ಸಮುದ್ರವೇ ಆಯಿತು.