ಇದೀಗ ‘ಕರ್ನಾಟಕ’ ನಾಮಕರಣದ ಸುವರ್ಣೋತ್ಸವ ಆಚರಣೆಯ ಕಾರ್ಯಕ್ರಮಗಳ ಸುದ್ಧಿ ಕೇಳಿಬರುತ್ತಿದೆಯಷ್ಟೆ. ಈ ‘ಸುವರ್ಣ ಕರ್ನಾಟಕ’ ಸಂದರ್ಭದಲ್ಲಾದರೂ ಕರ್ನಾಟಕದ ಗಡಿಭಾಗಗಳ ಗಂಭೀರ ಸಮಸ್ಯೆಗಳ ಕಡೆಗೆ ತೀವ್ರ ಗಮನಹರಿದು ಫಲದಾಯಕ ಯೋಜನೆಗಳೂ ಕಾರ್ಯಗತಗೊಂಡಲ್ಲಿ ಗಡಿಭಾಗಗಳ ಜನರ ಬವಣೆಗಳು ಒಂದಷ್ಟುಮಟ್ಟಿಗೆ ನೀಗಿಯಾವು – ಎಂಬ ಭೂಮಿಕೆಯಲ್ಲಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.
– ಸಂಪಾದಕ
ಎಲ್ಲ ಕಡೆ, ಎಲ್ಲ ವಿಷಯಗಳಲ್ಲಿ, ಎಲ್ಲ ವ್ಯವಹಾರಗಳಲ್ಲಿ ಗಡಿಯ ವ್ಯವಹಾರ ಸ್ವಲ್ಪ ಕಷ್ಟವೇ. ಮೊದಲನೆಯದಾಗಿ ಅಲ್ಲಿ ತಕರಾರು ಇರಬಹುದು; ತಕರಾರು ಇದ್ದರೆ ಜಗಳವೂ ಇರುತ್ತದೆ. ಇನ್ನೊಂದು ಅಂಶವೆಂದರೆ ಗಡಿ ಅಂದರೆ ಅಂಚು. ಯಾವಾಗಲೂ ಮಧ್ಯದಲ್ಲಿ ಇರುವವರಿಗೆ ಇಲ್ಲದ ಸಮಸ್ಯೆಗಳು ಗಡಿಯಲ್ಲಿ ಇರುವವರಿಗೆ ಇರುತ್ತವೆ. ಅಂಚು ಆದ್ದರಿಂದ ಹೊರಗಿನವರ ದಾಳಿ ಇರಬಹುದು; ಹೊರಗಿನವರ ದಾಳಿ ಎಂದರೆ ರಕ್ಷಣೆಯ ಸಮಸ್ಯೆ.
ಕನ್ನಡನಾಡು ಅರ್ಥಾತ್ ನಮ್ಮ ಕರ್ನಾಟಕದ ಕುರಿತು ಹೇಳುವುದಾದರೆ 1956ರಲ್ಲಿ ದೇಶದಲ್ಲಿ ಭಾಷಾವಾರು ಪ್ರಾಂತ ರಚನೆಯಾಗುವಾಗ ಕೊಡು-ಕೊಳ್ಳುವ ವ್ಯವಹಾರ ನಡೆದಿದೆ. ಕನ್ನಡದ ಒಂದಷ್ಟು ನೆಲಗಳು ಪಕ್ಕದ ರಾಜ್ಯಗಳಿಗೆ ಸೇರಿಹೋಗಿವೆ; ಅಲ್ಲಲ್ಲಿ ಸ್ವಲ್ಪ ಅನ್ಯಭಾಷೆಯ ನೆಲಗಳು ನಮ್ಮ ರಾಜ್ಯಕ್ಕೆ ಸೇರಿರಲೂಬಹುದು. ಅದರ ಜೊತೆಗೆ ಇನ್ನೊಂದಿಷ್ಟು ಗಡಿಭಾಗಗಳು ನಿರ್ಮಾಣವಾಗಿವೆ. ವಾಸ್ತವವಾಗಿ ಅವು ನಮ್ಮ ನೆಲಗಳೇ. ಆದರೆ ಈ ಮೊದಲೇ ಹೇಳಿದಂತೆ ಅಲ್ಲಿ ಕೆಲವು ಸಮಸ್ಯೆಗಳಿವೆ; ಹೊರಗಿನವರು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಹೀಗಿರುವಾಗ ಅವರಿಗೆ ನಾಡಿನ ರಕ್ಷಣೆ, ಪ್ರೋತ್ಸಾಹಗಳು ಬೇಕಾಗುತ್ತವೆ. ಕನ್ನಡಕ್ಕೆ ತೊಂದರೆಯಾಗುವ ಸಂದರ್ಭಗಳಿದ್ದರೆ ಅವನ್ನು ಸರಿಪಡಿಸಬೇಕಾಗುತ್ತದೆ. ಅಂತಹ ರಕ್ಷಣೆ, ಪ್ರೋತ್ಸಾಹಗಳು ಇಲ್ಲವಾದರೆ ಮೂಕರೋದನವೇ ಗತಿ.
ಕರ್ನಾಟಕಕ್ಕೆ ಸಂಬಂಧಿಸಿ ಹೇಳುವುದಾದರೆ ಗಡಿಭಾಗದ ಎಲ್ಲ ತಾಲೂಕುಗಳಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳಿವೆ. ಮರಾಠಿ, ತೆಲುಗು, ಉರ್ದು, ಮಲೆಯಾಳಿ, ಕೊಂಕಣಿ ಹೀಗೆ ವಿವಿಧ ಭಾಷೆಗಳನ್ನಾಡುವ ಪ್ರದೇಶಗಳಲ್ಲಿ ಕನ್ನಡಿಗರ ಸಮಸ್ಯೆಗಳು ವಿಭಿನ್ನವಾಗಿರುವುದು ಕಂಡುಬಂದಿದೆ. ಅದರಲ್ಲಿ ಪ್ರಮುಖವಾದದ್ದು ಪ್ರಾದೇಶಿಕ ಅಸಮಾನತೆ ಅಥವಾ ಅಸಮತೋಲನ.
ಪ್ರತಿಯೊಂದು ಜಿಲ್ಲೆಯ ಗಡಿಭಾಗಗಳಲ್ಲಿ ಕೂಡ ಒಂದಲ್ಲ ಒಂದು ರೀತಿಯ ಸಂಕಟಗಳು ಎದುರಾಗಿದ್ದು, ಸರ್ಕಾರಗಳು ಆ ಬಗ್ಗೆ ಇದುವರೆಗೆ ಹೆಚ್ಚಿನ ಕಾಳಜಿ ತೋರಿಸಿಲ್ಲ. ಈ ವಿಷಯವಾಗಿ ಹಲವರು ಚಿಂತನೆ ನಡೆಸಿದ್ದಾರೆ; ಆಗಾಗ ವರದಿಯನ್ನು ಸಲ್ಲಿಸಿದ್ದಾರೆ. ವಿಶೇಷವಾಗಿ ಡಿ.ಎಂ. ನಂಜುಂಡಪ್ಪ ವರದಿ (ಜೂನ್ 2000), ಬರಗೂರು ರಾಮಚಂದ್ರಪ್ಪ ವರದಿ, ಚಂದ್ರಶೇಖರ ಪಾಟೀಲ ವರದಿ, ವಾಟಾಳ್ ನಾಗರಾಜ್ ವರದಿಗಳನ್ನು ಆಯಾಕಾಲದ ಸರ್ಕಾರಗಳಿಗೆ ಸಲ್ಲಿಸಲಾಗಿದೆ; ಸರ್ಕಾರಗಳು ಅವುಗಳನ್ನು ಅಂಗೀಕರಿಸಿದರೂ ಕೂಡ ಗಡಿನಾಡಿನ ನುಡಿ-ಸಂಸ್ಕೃತಿಗಳ ಬಗ್ಗೆ ಸರಿಯಾದ ಕಾಳಜಿ ವಹಿಸಿಲ್ಲ; ದಿಟ್ಟ ಕ್ರಮಗಳನ್ನಂತೂ ಕೈಗೊಳ್ಳಲೇ ಇಲ್ಲವೆಂದು ದೂರಲಾಗಿದೆ.
ಸರ್ಕಾರಗಳ ಈ ಅಲಕ್ಷ್ಯದಿಂದಾಗಿ ಗಡಿಭಾಗದ ಕನ್ನಡಿಗರು ಶಿಕ್ಷಣ-ಉದ್ಯೋಗಗಳಿಂದ ಮತ್ತು ತಮ್ಮದೇ ಆದ ಮಾತೃಭಾಷೆಯಲ್ಲಿ ಮಾತನಾಡುವುದರಿಂದ ವಂಚಿತರಾಗಿ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ತಾವು ಕನ್ನಡಿಗರೆಂದು ಹೇಳಿಕೊಳ್ಳಲೂ ಸಹ ಅಳುಕುವ ಪರಿಸ್ಥಿತಿ ಬಂದಿದೆ. ಮೂಲಭೂತ ಸೌಕರ್ಯಗಳಿಂದ ಸಕಲ ರೀತಿಯಲ್ಲೂ ವಂಚಿತರಾದ ಗಡಿಭಾಗದ ಕನ್ನಡಿಗರು ಕೀಳರಿಮೆಯಿಂದ ಕುಗ್ಗಿಹೋಗಿದ್ದಾರೆ; ರಸ್ತೆಯಂತಹ ಸಾಮಾನ್ಯ ಸೌಕರ್ಯದಲ್ಲೂ ಅವರು ಮಲತಾಯಿ ಧೋರಣೆಯನ್ನು ಅನುಭವಿಸುತ್ತಿದ್ದಾರೆ. ಅದಲ್ಲದೆ ಗಡಿಭಾಗಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಬಹುತೇಕ ತಾಲೂಕುಗಳಲ್ಲಿ ಸಭಾಭವನಗಳೂ ಇಲ್ಲ ಎಂದು ದೂರಲಾಗಿದೆ.
ಗಡಿಭಾಗದ ಹಲವು ಜಿಲ್ಲೆಗಳಲ್ಲಿ ದಶಕಗಳಿಂದ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದೆ ಇರುವುದರಿಂದ ಆ ಭಾಗದ ಕೃಷಿಕರು ಬಡತನದಲ್ಲಿ ಸಿಲುಕಿದ್ದಾರೆ. ಅದೇ ರೀತಿ ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಆದರೆ ಪಕ್ಕದ ಕೆಲವು ರಾಜ್ಯಗಳಲ್ಲಿ ನೀರಾವರಿ ಯೋಜನೆಗಳನ್ನು ಸರ್ಕಾರಗಳು ತ್ವರಿತವಾಗಿ ಪೂರ್ಣಗೊಳಿಸಿದ್ದು, ಜನ ಅದರ ಪ್ರಯೋಜನವನ್ನು ಪಡೆದಿದ್ದಾರೆ. ಉದಾಹರಣೆಗೆ, ಮಂಜ್ರಾ ನದಿಯ ನೀರನ್ನು ಕರ್ನಾಟಕದವರು ಬಳಸಿಕೊಂಡಿಲ್ಲ. ಆದರೆ ನೆರೆಯ ಮಹಾರಾಷ್ಟ್ರದವರು 3-4 ದಶಕಗಳ ಹಿಂದೆಯೇ ಯೋಜನೆಯನ್ನು ಜಾರಿಗೊಳಿಸಿ ನೀರನ್ನು ಬಳಸಲು ಆರಂಭಿಸಿದರು. ಅದೇ ರೀತಿ ಕಾರಂಜಾ ಯೋಜನೆ ಕರ್ನಾಟಕದಲ್ಲಿ ಆಮೆಗತಿಯಲ್ಲಿ ಸಾಗಿದರೆ ಮಹಾರಾಷ್ಟ್ರದಲ್ಲಿ ಮೂರು ದಶಕಗಳ ಹಿಂದೆಯೇ ಪೂರ್ಣಗೊಂಡಿತ್ತು.
ರೈತರು ಬೆಳೆದ ಬೆಳೆಗೆ ಹಾಗೂ ಬೇರೆ ಹಲವು ಉತ್ಪನ್ನಗಳಿಗೆ ಮಹಾರಾಷ್ಟ್ರದಲ್ಲಿ ಕಡಮೆ ತೆರಿಗೆ ಇದ್ದು, ಕರ್ನಾಟಕದಲ್ಲಿ ಜಾಸ್ತಿಯಿದೆ. ಅದರಿಂದ ಗಡಿಭಾಗದ ಬಹಳಷ್ಟು ವ್ಯಾಪಾರಿಗಳು ತಮ್ಮ ವಹಿವಾಟನ್ನು ಪಕ್ಕದ ರಾಜ್ಯದಲ್ಲಿ ನಡೆಸುತ್ತಾರೆ. ಉದಾಹರಣೆಗೆ, ಅಥಣಿಯ ವ್ಯಾಪಾರಿಗಳು ತೆರಿಗೆಯ ಹೊರೆಯ ಕಾರಣದಿಂದ ತಮ್ಮ ವಹಿವಾಟನ್ನು ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಮೀರಜ್ನಂತಹ ಗಡಿ ತಾಲೂಕುಗಳಲ್ಲಿ ನಡೆಸುತ್ತಾರೆ.
ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳವರು ಪ್ರತಿ ಟನ್ ಕಬ್ಬಿಗೆ ಕರ್ನಾಟಕಕ್ಕಿಂತ ಜಾಸ್ತಿ ಹಣ ನೀಡುತ್ತಾರೆ. ಅದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುವ ಕಬ್ಬನ್ನು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಲಾಗುತ್ತದೆ. ಅದರಿಂದಾಗಿ ಆ ಭಾಗದ ಬಹಳಷ್ಟು ರೈತರ ಮನೆಮಾತು ಮರಾಠಿಯಾಗಿದೆ – ಎಂದು ಕೆಲವು ವರ್ಷಗಳ ಹಿಂದೆ ನಡೆದ ‘ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಜಾಥಾ’ ತನ್ನ ವರದಿಯಲ್ಲಿ ತಿಳಿಸಿತ್ತು. ಮುಖ್ಯಮಂತ್ರಿ ಚಂದ್ರು ಜಾಥಾದ ಪ್ರಧಾನ ಸಂಚಾಲಕರಾಗಿದ್ದರು.
ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಪಾವಗಡ ತಾಲೂಕು ಕೇವಲ ಕಲ್ಲುಬಂಡೆ ಗುಡ್ಡಗಳನ್ನು ಹೊಂದಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸುತ್ತದೆ; ಹಾಗೂ ಸಕಾಲಿಕ ಮಳೆಯನ್ನೇ ಕಾಣದ ಬೆಂಗಾಡಾಗಿದೆ. ಅಲ್ಲಿ ಸಾಂಪ್ರದಾಯಿಕ ಬೇಸಾಯವೇ ಹೆಚ್ಚಾಗಿದ್ದು, ಅಲ್ಲಿಯ ಹವಾಗುಣಕ್ಕೆ ಶೇಂಗಾ ಬೆಳೆ ಪ್ರಮುಖವಾಗಿದೆ. ರೈತರು ನಿರಂತರ ಅದನ್ನೇ ಬೆಳೆಯುವುದರಿಂದ ಮಣ್ಣು ಸತ್ತ್ವವನ್ನು ಕಳೆದುಕೊಂಡಿದೆ. ಮೇಲಿಂದ ಮೇಲೆ ಅಲ್ಲಿ ಬರಗಾಲ ಉಂಟಾಗುತ್ತಿದ್ದು, ಬಾವಿ-ಕೆರೆಗಳು ಬತ್ತಿವೆ; ಅಂತರ್ಜಲ ಕುಸಿದಿದೆ. ಫ್ಲೋರೈಡ್ಯುಕ್ತ ನೀರು ಬಳಸಿ ಜನ ವಿಕಲಾಂಗರಾಗುತ್ತಿದ್ದಾರೆ. ಹಸಿವು-ಬರಗಾಲಗಳಿಂದಾಗಿ ಅಲ್ಲಿ ನಕ್ಸಲೈಟ್ ಸಮಸ್ಯೆ ಕೂಡ ಬೆಳೆಯಿತು.
ಗಡಿಭಾಗದ ಸಾಕಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಇಲ್ಲದ ಸ್ಥಳಗಳು ಅಪರೂಪವಾಗಿವೆ. ಗಡಿಭಾಗದ ಹಳ್ಳಿಗಳ ಸಮೀಪದ ಆಸ್ಪತ್ರೆಗಳಿಲ್ಲದೆ ಜನರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಿದ್ದರೂ ಕೂಡ ಸರ್ಕಾರಗಳ ಅಲಕ್ಷ್ಯದಿಂದಾಗಿ ವೈದ್ಯರ ಕೊರತೆ, ಸಿಬ್ಬಂದಿಗಳ ಕೊರತೆ ಮತ್ತು ಔಷಧಿಗಳ ಕೊರತೆ ಬಾಧಿಸುತ್ತಿವೆ. ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ವೈದ್ಯರು ಮತ್ತು ಔಷಧಿಗಳ ಕೊರತೆಯಿಂದಾಗಿ ಜನ ಪಕ್ಕದ ಗೋವಾಕ್ಕೆ ಹೋದದ್ದೂ ಇದೆ.
ಗಡಿಭಾಗದಲ್ಲಿರುವ ಜಿಲ್ಲಾ ರಸ್ತೆಗಳೇ ಸಂಚಾರಕ್ಕೆ ಯೋಗ್ಯವಾಗಿಲ್ಲ. ಗ್ರಾಮೀಣ ಭಾಗದ ರಸ್ತೆಗಳ ಬಗ್ಗೆ ಕೇಳುವುದೇ ಬೇಡ. ಅದರಿಂದಾಗಿ ಅಲ್ಲಿ ಸಂಪರ್ಕ ಮತ್ತು ಸಂಬಂಧ ಕಷ್ಟವಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿದಿನ ಶಾಲೆಗೆ ಹೋಗಲು ಸಮಸ್ಯೆಯಾದರೆ, ಜನರಿಗೆ ತಮ್ಮ ಸಾಮಾನು ಸರಂಜಾಮು ಸಾಗಿಸಲು, ವ್ಯಾಪಾರ ವಹಿವಾಟು ನಡೆಸಲು ತೊಂದರೆಯಾಗಿದೆ. ಕಿಲೋಮೀಟರ್ಗಟ್ಟಲೆ ನಡೆದೇ ಹೋಗಬೇಕು. ಪರಿಣಾಮವಾಗಿ ಆ ಭಾಗದ ಅಭಿವೃದ್ಧಿ ಕುಂಠಿತವಾಗಿದೆ.
ಗಡಿಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆಗೆ ಹೋಗಲು, ಜಿಲ್ಲೆಯಲ್ಲೇ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಸಾರಿಗೆ ವ್ಯವಸ್ಥೆಯು ಶೋಚನೀಯ ಸ್ಥಿತಿಯಲ್ಲಿದೆ. ಎಲ್ಲಿಗಾದರೂ ಹೋಗಬೇಕೆಂದರೆ ದಿನದ ಬಹುತೇಕ ಸಮಯವನ್ನು ಬಸ್ಸಿಗಾಗಿ ಕಾಯುವುದರಲ್ಲಿಯೇ ಕಳೆಯುವ ಪರಿಸ್ಥಿತಿಯಿದೆ. ಈಗ ಹಲವೆಡೆ ರಿಕ್ಷಾಗಳು ಬಂದರೂ ಕೂಡ ಅವು ದುಬಾರಿಯಾದ ಕಾರಣ ಸಾಮಾನ್ಯ ಜನರಿಗೆ ಬಳಸಲು ಕಷ್ಟವಾಗಿದೆ.
ಗಡಿಭಾಗಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟಿದ್ದರೂ ಕೂಡ ಸರ್ಕಾರಗಳ ನಿರಾಸಕ್ತಿಯಿಂದಾಗಿ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲಾಗಿಲ್ಲ. ಅವುಗಳಿಂದ ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಅಭಿವೃದ್ಧಿಯನ್ನು ಸಾಧಿಸಿಲ್ಲ. ಆ ಕಾರಣದಿಂದ ನಿರುದ್ಯೋಗ, ಬಡತನಗಳು ಹಾಗೆಯೇ ಉಳಿದಿವೆ. ಉದಾಹರಣೆಗೆ, ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರಣ್ಯೋತ್ಪನ್ನಗಳಿಂದ ಕೈಗಾರಿಕೆಗಳನ್ನು ಬೆಳೆಸಬಹುದು. ವಿಜಯಪುರ, ಕಲಬುರಗಿ ಭಾಗದಲ್ಲಿ ಹೈನುಗಾರಿಕೆ, ಬೀದರ್ ಜಿಲ್ಲೆಯಲ್ಲಿ ಕುಸುರಿ ಕಲೆ ಉದ್ಯಮಗಳನ್ನು ಬೆಳೆಸಬಹುದು. ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆಯನ್ನು ಬಹಳಷ್ಟು ಗಡಿಭಾಗಗಳಲ್ಲಿ ಮಾಡಬಹುದು. ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಕುಡಿಬಿ ಜನಾಂಗದವರು ಬಹಳಷ್ಟು ವಾಸಿಸುತ್ತಿದ್ದಾರೆ. ಅಲ್ಲಿಯ ಅರಣ್ಯೋತ್ಪನ್ನಗಳನ್ನು ಬಳಸಿಕೊಂಡು ಕಾರ್ಖಾನೆಗಳನ್ನು ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಜನರ ಬಡತನ, ನಿರುದ್ಯೋಗಗಳನ್ನು ನಿವಾರಿಸಬಹುದೆಂದು ಸೂಚಿಸಲಾಗಿದೆ.
‘ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಜಾಥಾ’ ರಾಜ್ಯದ ಗಡಿಭಾಗದ ಸುಧಾರಣೆಯ ಬಗ್ಗೆ ಹಲವು ಸಲಹೆಗಳನ್ನು ನೀಡಿತ್ತು. ಅದರಲ್ಲಿ ಮುಖ್ಯವಾದ ಕೆಲವು ಹೀಗಿವೆ:
1) ಗಡಿಭಾಗದ ಎಲ್ಲ ತಾಂಡಾಗಳಿಗೆ ರಸ್ತೆ ಮತ್ತು ವಿದ್ಯುಚ್ಛಕ್ತಿಯನ್ನು ಒದಗಿಸಬೇಕು.
2) ನಾಗರಿಕರ ವೇದಿಕೆ (ಸಮಿತಿ) ಒಂದನ್ನು ರಚಿಸಿ, ಕನಿಷ್ಠ ಪಾಕ್ಷಿಕ ಅಥವಾ ಮಾಸಿಕ ಸಭೆ ಸೇರಿ ಜಿಲ್ಲೆಯ ಸಮಸ್ಯೆಗಳನ್ನು ಚರ್ಚಿಸಬೇಕು. ಅದರಲ್ಲಿ ಜನಪ್ರತಿನಿಧಿಗಳು ಭಾಗವಹಿಸಬೇಕು.
3) ಗಡಿಭಾಗದ ಸರ್ಕಾರೀ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಅದರಲ್ಲೂ ಪೊಲೀಸ್ ಮತ್ತು ಕೃಷಿ ಇಲಾಖೆ ಹುದ್ದೆಗಳನ್ನು ತುರ್ತಾಗಿ ತುಂಬಬೇಕು.
4) ಜಿಲ್ಲೆಯಲ್ಲಿ ಎಫ್.ಎಂ. ರೇಡಿಯೋ ಕೇಂದ್ರವನ್ನು ಸ್ಥಾಪಿಸುವ ಮೂಲಕ ಕನ್ನಡಪರ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು.
5) ಸುಸ್ಥಿರ ಅಭಿವೃದ್ಧಿ ಬಗ್ಗೆ ನೀಲನಕ್ಷೆ ತಯಾರಿಸಬೇಕು.
6) ಕಾಲಕಾಲಕ್ಕೆ ಅಧಿಕಾರಕ್ಕೆ ಬರುವ ಸರ್ಕಾರಗಳು ವಿಶೇಷ ಪ್ಯಾಕೇಜ್ಗಳನ್ನು ಘೋಷಿಸುತ್ತವೆ; ಆದರೆ ಅವುಗಳನ್ನು ಜಾರಿ ಮಾಡುವಲ್ಲಿ ಹಿಂದೆ ಬೀಳುತ್ತವೆ. ಇದು ಸರಿಯಾಗಬೇಕು. ಪ್ಯಾಕೇಜ್ಗಳನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತರುವ ಬಗ್ಗೆ ಕಾನೂನು ಮಾಡಬೇಕು.
7) ಬೀದರ್ ಜಿಲ್ಲೆಯಲ್ಲಿ ಪ್ರಮುಖವಾಗಿ ಉದ್ದು ಬೆಳೆಯಲಾಗುತ್ತದೆ. ಅದರ ಪ್ರೋತ್ಸಾಹಕ್ಕಾಗಿ ಉದ್ದು ಮಂಡಳಿಯನ್ನು ಸ್ಥಾಪಿಸಬೇಕು.
8) ಹೈನುಗಾರಿಕೆಗೆ ಹೆಚ್ಚು ಒತ್ತು ಕೊಡುವುದರೊಂದಿಗೆ ಹಾಲು ಉತ್ಪಾದನಾ ಒಕ್ಕೂಟಗಳನ್ನು ಸ್ಥಾಪಿಸಬೇಕು;
ಅದಲ್ಲದೆ ಜಾಗೃತಿ ಜಾಥಾ ರಾಜ್ಯದ ಗಡಿಭಾಗದ ಐದು ಪ್ರಮುಖ ಅಂಶಗಳ ಮಾಹಿತಿಯನ್ನು ಸಂಗ್ರಹಿಸಿ ಶಿಫಾರಸುಗಳನ್ನು ಮಾಡಿತ್ತು. ಅವುಗಳೆಂದರೆ –
1) ಆಡಳಿತದಲ್ಲಿ ಕನ್ನಡ
2) ಶಿಕ್ಷಣದಲ್ಲಿ ಕನ್ನಡ
3) ಉದ್ಯೋಗದಲ್ಲಿ ಕನ್ನಡ
4) ಪ್ರಾದೇಶಿಕ ಅಸಮತೋಲನ
5) ಗಡಿ ಸಮಸ್ಯೆ
ಆಡಳಿತದಲ್ಲಿ ಕನ್ನಡ
ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡದ ಬಳಕೆಯಾಗಬೇಕೆಂದು ನೂರಾರು ಆದೇಶಗಳನ್ನು ಹೊರಡಿಸಲಾಗಿದೆಯಾದರೂ ಗಡಿಭಾಗದಲ್ಲಿ ಪಂಚಾಯತಿ ಆಡಳಿತದಿಂದ ಹಿಡಿದು ತಾಲೂಕು, ಜಿಲ್ಲಾಮಟ್ಟದ ಎಲ್ಲ ಸಂಸ್ಥೆಗಳಲ್ಲಿ ಪರಭಾಷೆಯ ಪ್ರಭಾವವೇ ಎದ್ದುಕಾಣುತ್ತದೆ. ಅದೇ ರೀತಿ ನ್ಯಾಯಾಲಯಗಳಲ್ಲಿ, ಅರೆನ್ಯಾಯಾಂಗ ವ್ಯವಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ, ಅಂಚೆ ಹಾಗೂ ಖಾಸಗಿ ಉದ್ಯಮಗಳಲ್ಲಿ ಕೂಡ ಕನ್ನಡ ಭಾಷೆಯ ಬಳಕೆ ಶೇ. 10ಕ್ಕಿಂತ ಕಡಮೆಯಿದೆ; ಆದ್ದರಿಂದ ಆಯಾ ಗಡಿಪ್ರದೇಶದಲ್ಲಿ ಕನ್ನಡದ ಅಭಿವೃದ್ಧಿ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿಯನ್ನು ವಹಿಸಬೇಕು.
ಈ ಭಾಗದ ಮಠಾಧೀಶರು ಕನ್ನಡಾಭಿಮಾನಿಗಳು, ನಾಡು-ನುಡಿಯ ಬಗ್ಗೆ ಅರಿವು ಹೊಂದಿರುವವರು ಕನ್ನಡದ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಹಿಂದೆ ಪಾದಯಾತ್ರೆಗಳನ್ನು ಕೈಗೊಂಡು ಕನ್ನಡ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈಗ ಸರ್ಕಾರ ಅದರ ಮುಂದುವರಿಕೆಗೆ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಕನ್ನಡ ಭಾಷೆ ನಶಿಸಿ ಹೋಗುವುದರಲ್ಲಿ ಸಂಶಯವಿಲ್ಲ.
ಮಹಾರಾಷ್ಟ್ರ ಗಡಿಭಾಗದಲ್ಲಿ ಮರಾಠಿ ಭಾಷೆಯ ಪ್ರಾಬಲ್ಯ, ಆಂಧ್ರದ ಗಡಿಭಾಗದಲ್ಲಿ ತೆಲುಗಿನವರ ಪ್ರಾಬಲ್ಯ, ತಮಿಳುನಾಡಿನ ಗಡಿಯಲ್ಲಿ ತಮಿಳು, ಕೇರಳದ ಗಡಿಭಾಗದಲ್ಲಿ ಮಲೆಯಾಳಿ, ಗೋವಾ ಗಡಿಯಲ್ಲಿ ಕೊಂಕಣಿ ಭಾಷೆ – ಇವೆಲ್ಲವೂ ಕನ್ನಡದ ಮೇಲೆ ಸವಾರಿ ಮಾಡುವ ರೀತಿಯಲ್ಲಿ ಆಡಳಿತವನ್ನು ಆವರಿಸಿಕೊಂಡಿವೆ. ಅಲ್ಲಿಯ ಕನ್ನಡಿಗರು ತಮ್ಮ ಭಾಷೆ ಕನ್ನಡ ಎಂಬುದನ್ನೇ ಮರೆತಂತಿದ್ದಾರೆ.
ಬೆಳಗಾವಿಯ ನಗರಪಾಲಿಕೆ ಬೆಳಗಾವಿ ಪ್ರದೇಶವೇ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯವನ್ನು ಅಂಗೀಕರಿಸಿದ್ದಿದೆ. ಇಲ್ಲಿ ಆಡಳಿತ ಎಷ್ಟರಮಟ್ಟಿಗೆ ಕನ್ನಡದಲ್ಲಿ ನಡೆಯುತ್ತಿದೆ ಎಂಬುದಕ್ಕೆ ನಗರಪಾಲಿಕೆಯ ಧೋರಣೆಯು ಉದಾಹರಣೆಯಾಗಬಲ್ಲದು. ಬೆಳಗಾವಿಯಲ್ಲಿ ಮರಾಠಿಗರ ಉಪಟಳ ಆಗಾಗ ಕೆದರುತ್ತದೆ. ಅದೇರೀತಿ ಬೋರೆಗಾಂವ್, ಶಿರದ್ಯಾಡ ಗ್ರಾಮ ಪಂಚಾಯತಿಗಳು, ನಿಪ್ಪಾಣಿ ತಾಲೂಕು ಪಂಚಾಯತಿ, ಖಾನಾಪುರ ಪುರಸಭೆ – ಇವೆಲ್ಲ ಮರಾಠಿಮಯವಾಗಿವೆ. ಅಲ್ಲಿಯ ಕನ್ನಡಿಗರು ಏನೂ ಮಾಡಲಾಗದ ಅಸಹಾಯಸ್ಥಿತಿಗೆ ತಲಪಿದ್ದಾರೆ. ಇದೇ ಪರಿಸ್ಥಿತಿ ಬೀದರ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡುಬಂದಿದೆ. ಕಲಬುರಗಿ ಜಿಲ್ಲೆಯ ಗಡಿಭಾಗದಲ್ಲಿ ಹಿಂದಿಯ ಪ್ರಾಬಲ್ಯವಾದರೆ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳ ಗಡಿ ತಾಲೂಕುಗಳಲ್ಲಿ ತೆಲುಗು ತನ್ನ ಸ್ವಾಮ್ಯವನ್ನು ಸ್ಥಾಪಿಸಿದೆ.
ಒಂದು ಸಮಾಧಾನದ ಅಂಶವೆಂದರೆ, ಸರ್ಕಾರೀ ಕಡತಗಳಲ್ಲಿ ಕನ್ನಡವನ್ನು ಬಳಸುತ್ತಿರುವುದು. ಈ ನಿಟ್ಟಿನಲ್ಲಿ ಸರ್ಕಾರದ ಅನೇಕ ಆದೇಶಗಳು ಕನ್ನಡದಲ್ಲಿ ಕಡತ ನಿರ್ವಹಣೆಗೆ ಪೂರಕ ಶಕ್ತಿಗಳಾಗಿ ಕೆಲಸ ಮಾಡುತ್ತಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಮಲೆಯಾಳಿ ಮತ್ತು ತಮಿಳರ ಪ್ರಭಾವ ಇದೆಯಾದರೂ ಕೆಲವು ಮಠಾಧಿಪತಿಗಳ ಮತ್ತು ಕನ್ನಡಪರ ಸಂಘಟನೆಗಳ ಶ್ರಮದಿಂದಾಗಿ ಕನ್ನಡ ಉಳಿದಿದೆ. ಕೊಡಗಿನಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಇದೆಯಾದರೂ ಅನೇಕ ಸಮಸ್ಯೆಗಳಿಂದಾಗಿ ಅಲ್ಲಿಯ ಜನತೆಯಲ್ಲಿ ಕರ್ನಾಟಕ ರಾಜ್ಯದ ಬಗ್ಗೆ ಅಸಮಾಧಾನವಿದೆ ಎನ್ನಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಲೆಯಾಳಿಗಳ ಪ್ರಭಾವ ಇದೆಯಾದರೂ ಅಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ಕನ್ನಡದ ಜೊತೆಗೆ ತುಳು ಮತ್ತು ಕೊಂಕಣಿ ಭಾಷೆಗಳು ಕೂಡ ಇದ್ದು ಭಾಷಾ ಸಾಮರಸ್ಯವಿದೆ. ಭಾಷಾವಾರು ರಾಜ್ಯ ರಚನೆಯ ಹೊತ್ತಿಗೆ ದಕ್ಷಿಣಕನ್ನಡ ಜಿಲ್ಲೆಯ ಒಂದು ಭಾಗವಾದ ಕಾಸರಗೋಡು ತಾಲೂಕನ್ನು ಕೇರಳಕ್ಕೆ ಸೇರಿಸಿದ್ದು ದೊಡ್ಡ ದುರಂತವೇ ಆಯಿತು. ಅಲ್ಲಿ ಕನ್ನಡ, ಕನ್ನಡಿಗರ ಪರಿಸ್ಥಿತಿ ಹೇಳತೀರದು. ಮಲೆಯಾಳಿ ಹೇರಿಕೆಯಿಂದ ಅಲ್ಲಿ ಕನ್ನಡವು ಅವನತಿಯತ್ತ ಸಾಗಿದೆ.
ಕಾರವಾರದಲ್ಲಿ ಕೆಲವೇ ಸಮಯದಲ್ಲಿ ಕೊಂಕಣಿ ಭಾಷೆ ಕನ್ನಡವನ್ನು ಇಲ್ಲವಾಗಿಸುವ ಅಪಾಯ ಕಂಡುಬಂದಿದೆ. ನಿರುದ್ಯೋಗ ಮತ್ತು ಮೂಲಸವಲತ್ತುಗಳ ಸಮಸ್ಯೆ ಅಲ್ಲಿಯ ಯುವಕರಲ್ಲಿ ಆಕ್ರೋಶ ಉಂಟುಮಾಡಿದೆ.
ಗಡಿಭಾಗದ ತಾಲೂಕುಗಳಲ್ಲಿ ಕನ್ನಡ ಚಲನಚಿತ್ರ, ಕನ್ನಡದ ಸಂಗೀತ ಮತ್ತು ನಾಟಕಗಳು ವಿರಳವಾಗಿ ಆಯಾ ಭಾಗದ ಪಕ್ಕದ ರಾಜ್ಯಗಳ ಭಾಷೆಯಾದ ಮರಾಠಿ, ತೆಲುಗು, ತಮಿಳು, ಮಲೆಯಾಳಂ ಹಾಗೂ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ; ಕನ್ನಡ ದಿನೇ ದಿನೇ ಅಪಾಯದಂಚಿಗೆ ಸರಿಯುತ್ತಿದೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಜನರೊಂದಿಗೆ ವ್ಯವಹರಿಸುವಾಗ ನೆರೆರಾಜ್ಯದ ಭಾಷೆಯಲ್ಲೇ ಮಾತನಾಡುತ್ತಾ ರಾಜ್ಯದ ಆಡಳಿತಭಾಷೆ ಕನ್ನಡವನ್ನು ಅಲಕ್ಷಿಸುತ್ತಿದ್ದಾರೆ. ‘ಆಡಳಿತದಲ್ಲಿ ಕನ್ನಡ’ಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಮತ್ತು ಪರಿಹಾರಗಳು ಹೀಗಿವೆ:
1) ಗಡಿಭಾಗದ ತಾಲೂಕು ಹಾಗೂ ಜಿಲ್ಲೆಗಳ ಕನ್ನಡ-ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಹುದ್ದೆಗಳು ಬಹಳಷ್ಟು ಖಾಲಿ ಇರುತ್ತವೆ. ಭರ್ತಿ ಮಾಡಿದ ಸ್ಥಾನಗಳ ಅಧಿಕಾರಿಗಳು ಶೀಘ್ರವಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗುವುದರಿಂದ ಇಲಾಖೆಯಲ್ಲಿ ಕನ್ನಡಕ್ಕೆ ಪ್ರೋತ್ಸಾಹದಾಯಕ ಕೆಲಸಗಳು ಆಗುವುದಿಲ್ಲ. ಆದ್ದರಿಂದ ವರ್ಗಾವಣೆಯಾದ ಸ್ಥಳಗಳಲ್ಲಿ ಕೆಲಸ ಮಾಡದಿರುವ ಅಧಿಕಾರಿಗಳ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು.
2) ಯಾವುದೇ ಅಧಿಕಾರಿ ತನ್ನ ಕಚೇರಿಯಲ್ಲಿ ಕನ್ನಡದಲ್ಲಿ ವ್ಯವಹರಿಸದಿದ್ದಲ್ಲಿ ಅಂತಹ ಅಧಿಕಾರಿಯ ಮೇಲೆ ಕ್ರಮಕೈಗೊಂಡು ದಂಡ ವಿಧಿಸಬೇಕು.
3) ವಚನ ಸಾಹಿತ್ಯದ ಮೂಲಕ ಕನ್ನಡಕ್ಕೆ ಶಕ್ತಿ ತುಂಬಿದ ಬಸವಣ್ಣನವರು ಆಡಳಿತ ನಡೆಸಿದ ಬಸವಕಲ್ಯಾಣದಲ್ಲಿ ಈಗ ಉರ್ದು, ಮರಾಠಿಗಳು ತೀವ್ರ ಪ್ರಭಾವ ಬೀರುತ್ತಿವೆ. ಈ ಅಪಾಯವನ್ನು ಸರ್ಕಾರ ಗುರುತಿಸಬೇಕು. ಬೀದರ್ ಪೊಲೀಸ್ ವಾಹನಗಳ ಮೇಲೆ ಮರಾಠಿ ಭಾಷೆಯಲ್ಲಿ ವಿವರ ಬರೆದದ್ದು ಕೂಡ ಇದೆ.
ಶಿಕ್ಷಣದಲ್ಲಿ ಕನ್ನಡ
ಗಡಿಭಾಗದ ಕನ್ನಡಿಗರಿಗೆ ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಕನ್ನಡದ ಅಭಿಮಾನ ಕಂಡುಬರುವುದಿಲ್ಲ. ಅದಕ್ಕೆ ಅವರು ನೀಡುವ ಕಾರಣಗಳು, ಕನ್ನಡ ಶಾಲೆಗಳಲ್ಲಿ ಕಂಡುಬರುವ ಶಿಕ್ಷಕರ ಕೊರತೆ, ಪೀಠೋಪಕರಣಗಳ ಕೊರತೆ, ಖಾಸಗಿ ಶಾಲೆಗಳ ದುಬಾರಿ ಶುಲ್ಕ ಇತ್ಯಾದಿ. ಆದರೆ ಪಕ್ಕದಲ್ಲಿ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಬೇರೆ ರಾಜ್ಯಗಳ ಗಡಿ ಪ್ರದೇಶದ ಶಾಲೆಗಳಲ್ಲಿ ಆಯಾ ಭಾಷೆಯ ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ, ಆಕರ್ಷಣೆ ನಮ್ಮಲ್ಲಿ ಕಂಡುಬರುವುದಿಲ್ಲ. ಇನ್ನು ಕೆಲವು ಕಡೆ ನಮ್ಮ ರಾಜ್ಯದಲ್ಲೇ ಇರುವ ಭಾಷಾ ಅಲ್ಪಸಂಖ್ಯಾತ ಶಿಕ್ಷಣಸಂಸ್ಥೆಗಳು ಅವರ ಭಾಷೆಯ ಬೆಳವಣಿಗೆಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿವೆ. ಅದಕ್ಕೆ ಹೋಲಿಸಿದರೆ ಕನ್ನಡ ಭಾಷೆಯ ಕಡೆಗೆ ಮತ್ತು ಕನ್ನಡದಲ್ಲಿ ಶಿಕ್ಷಣ ನೀಡುವ ಬಗ್ಗೆ ನಮ್ಮ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯ ಧೋರಣೆಯಿಂದ ಕನ್ನಡ ಕಲಿಕೆಗೆ ಹಿನ್ನಡೆಯಾಗಿದೆ.
ಅದಕ್ಕಾಗಿ ಸರ್ಕಾರ ಗಡಿಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಬೆಳಗಾವಿ ಮತ್ತು ಕಲಬುರಗಿ ಜಿಲ್ಲಾ ಗಡಿ ತಾಲೂಕುಗಳ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಎರಡರಿಂದ ಮೂರು ಕಿ.ಮೀ. ದೂರ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬಹಳಷ್ಟು ಪ್ರಾಥಮಿಕ ಶಾಲೆಗಳಲ್ಲಿ ನೀರು, ಶೌಚಾಲಯಗಳ ವ್ಯವಸ್ಥೆಯಿಲ್ಲ. ಇದೇ ರೀತಿಯ ಸಮಸ್ಯೆಗಳು ಪ್ರೌಢಶಾಲೆಗಳಲ್ಲೂ ಇವೆ. ಬೆಳಗಾವಿಯಂತಹ ಜಿಲ್ಲಾ ಕೇಂದ್ರದಲ್ಲೇ ಹಲವು ಪ್ರೌಢಶಾಲೆಗಳಿಗೆ ಸಮರ್ಪಕ ಕಟ್ಟಡಗಳಿಲ್ಲ. ಹೈದರಾಬಾದ್-ಕರ್ನಾಟಕ ಮತ್ತು ಮುಂಬಯಿ-ಕರ್ನಾಟಕದ ಗಡಿ ತಾಲೂಕುಗಳಲ್ಲಿ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದರೂ ಬಹಳಷ್ಟು ಹುದ್ದೆಗಳು ಖಾಲಿಯಿವೆ. ಪ್ರೌಢಶಾಲೆ ಶಿಕ್ಷಕರು ಕೂಡ ಗಡಿಪ್ರದೇಶದ ಹಳ್ಳಿಗಳನ್ನು ಬಿಟ್ಟು ಪಟ್ಟಣಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಕಾರಣ ಶಿಕ್ಷಕರ ಕೊರತೆ ಬಾಧಿಸುತ್ತದೆ.
ಇದರ ಜೊತೆಗೆ ಗಡಿಪ್ರದೇಶಗಳಲ್ಲಿ ವೃತ್ತಿಪರ ಶಿಕ್ಷಣಸಂಸ್ಥೆಗಳ ಕೊರತೆ ಎದ್ದುಕಾಣಿಸುತ್ತದೆ. ಹಾಗಾಗಿ ಗಡಿಭಾಗದ ಅನೇಕ ವಿದ್ಯಾರ್ಥಿಗಳು ಭವಿಷ್ಯ ನೀಡುವ ವೃತ್ತಿಪರ ಶಿಕ್ಷಣಕ್ಕಾಗಿ ಪರ ರಾಜ್ಯಗಳ ಶಾಲೆಗಳಿಗೆ ತೆರಳುತ್ತಾರೆ. ಅನೇಕ ಖಾಸಗಿ ಸಂಸ್ಥೆಗಳು ಕನ್ನಡ ಶಾಲೆಗಳನ್ನು ತೆರೆಯಲು ಸಿದ್ಧವಿದ್ದರೂ ಸರ್ಕಾರದಿಂದ ಅವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. 1987ರ ಅನಂತರ ಆರಂಭಗೊಂಡ ಖಾಸಗಿ ಶಾಲೆಗಳಿಗೆ ಖಾಯಂ ಅನುದಾನರಹಿತ ಶಾಲೆಗಳೆಂದು ಪರವಾನಗಿ ನೀಡುವ ಕ್ರಮವನ್ನು ಸರ್ಕಾರ ಅನುಸರಿಸಿದ ಕಾರಣ ಗಡಿಭಾಗದ ಶಾಲೆಗಳಿಗೆ ಕೂಡ ನಿರ್ವಹಣೆ ಕಷ್ಟವಾಯಿತು.
ರಾಜ್ಯದ 52 ಗಡಿ ತಾಲೂಕುಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಬಹಳಷ್ಟು ಕಡೆ ಕನ್ನಡ ಶಿಕ್ಷಕರೇ ಇರಲಿಲ್ಲ. ಇದನ್ನು ಸರಿಪಡಿಸಬೇಕು. ಭಾಷಾ ಅಲ್ಪಸಂಖ್ಯಾತರಲ್ಲಿ ಕನ್ನಡ ಭಾಷೆಯ ಬಗೆಗೆ ಒಲವು ಹೆಚ್ಚಿಸಲು ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು. ಕನ್ನಡ ಕಲಿತ ವಿದ್ಯಾರ್ಥಿಗೆ ರಾಜ್ಯದ ಯಾವುದೇ ಮೂಲೆಯಲ್ಲಾದರೂ ಆತ ಬಯಸುವ ಕಡೆ ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿದೆ.
ಗಡಿಯಾಚೆ ಇರುವ ಮತ್ತು ಗಡಿಗೆ ಹೊಂದಿಕೊಂಡಿರುವ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಕೊಡಬೇಕು. ಗಡಿಯಾಚೆ ಇರುವ ಕನ್ನಡ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳಬೇಕು. ಗಡಿಯಾಚೆ ಮತ್ತು ಹೊರನಾಡಿನಲ್ಲಿ ಕನ್ನಡಕ್ಕಾಗಿ ದುಡಿಯುತ್ತಿರುವ ವ್ಯಕ್ತಿ-ಸಂಸ್ಥೆಗಳಿಗೆ ಅಗತ್ಯವಾದ ನೆರವು ನೀಡಬೇಕು.
ಕರ್ನಾಟಕದ ಹೊರಗೆ ಯಾವುದೇ ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಅಥವಾ ಮೊದಲ ಭಾಷೆಯಾಗಿ ಕನ್ನಡವನ್ನು ಕಲಿತ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಪದವಿ ಅಥವಾ ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ಪ್ರವೇಶ ನೀಡುವ ಬಗ್ಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಬೇಕು. ಅದನ್ನು ಉಲ್ಲಂಘಿಸುವ ಶಿಕ್ಷಣಸಂಸ್ಥೆಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಜಾಗೃತಿ ಜಾಥಾ, ಗಡಿಭಾಗದ ಒಂದು ಕನ್ನಡ ಮಾಧ್ಯಮದ ಶಾಲೆ ಅಥವಾ ವಸತಿಶಾಲೆ ಯಾವ ರೀತಿ ಇರಬೇಕು ಎಂಬುದಕ್ಕೆ ಮಾದರಿಯಾಗಿ ಚಾಮರಾಜನಗರದ ದೀನಬಂಧು ಶಿಕ್ಷಣಸಂಸ್ಥೆಯನ್ನು ಗಮನಿಸಬಹುದು – ಎಂದು ತಿಳಿಸಿತ್ತು.
ಅದೇ ರೀತಿ ನಿಜಾಮರ ಕಾಲದಲ್ಲಿ ಉರ್ದು ಕಡ್ಡಾಯವಿದ್ದಾಗಲೂ ಹೊರಗಡೆ ಉರ್ದು ನಾಮಫಲಕವನ್ನು ಹಾಕಿ ಒಳಗಡೆ ಕನ್ನಡ ಭಾಷೆಯನ್ನು ಕಲಿಸುತ್ತಿದ್ದವರು ಭಾಲ್ಕಿ ಮಠದ ಪಟ್ಟದದೇವರು ಸ್ವಾಮಿಗಳು ಎಂದು ತಿಳಿಸಲಾಗಿದೆ.
ಉದ್ಯೋಗದಲ್ಲಿ ಕನ್ನಡ
‘ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಜಾಥಾ’ವು ಕಂಡುಕೊಂಡ ಪ್ರಕಾರ 46 ಗಡಿ ತಾಲೂಕುಗಳಲ್ಲಿ ಕನ್ನಡಿಗರಿಗೆ ಲಭ್ಯವಾಗಿರುವ ಉದ್ಯೋಗಾವಕಾಶಗಳು ಅಷ್ಟೇನೂ ತೃಪ್ತಿಕರವಾಗಿಲ್ಲ.
ಬಂಗಾರಪೇಟೆ ತಾಲೂಕಿನ ಸಾರ್ವಜನಿಕರ ಉದ್ದಿಮೆಯಲ್ಲಿ ಶೇ.30ರಷ್ಟು ಉದ್ಯೋಗಾವಕಾಶಗಳು ಕನ್ನಡೇತರರ ಪಾಲಾಗಿವೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸಾರ್ವಜನಿಕ ಉದ್ದಿಮೆಯಲ್ಲಿದ್ದ 1,500 ಹುದ್ದೆಗಳಲ್ಲಿ 1,000ದಷ್ಟು ಕನ್ನಡೇತರರ ಪಾಲಾಗಿದ್ದವು. ಇನ್ನು ಖಾಸಗಿ ಕಂಪೆನಿಯ 3,000 ಹುದ್ದೆಗಳಲ್ಲಿ ಕನ್ನಡಿಗರಿಗೆ ಸಿಕ್ಕಿದ್ದು 1,000 ಮಾತ್ರ. ಅದಕ್ಕೆ ಮುಖ್ಯ ಕಾರಣವೆಂದರೆ, ಹೊರರಾಜ್ಯದವರು ಆ ಪ್ರದೇಶದಲ್ಲಿ ಹೆಚ್ಚಾಗಿದ್ದು ಸ್ವಜನ ಪಕ್ಷಪಾತದಿಂದಾಗಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗ ದೊರೆತಿಲ್ಲ.
ವಿರಾಜಪೇಟೆ ಮತ್ತು ಕಾರವಾರದ ಖಾಸಗಿ ಉದ್ದಿಮೆಗಳಲ್ಲಿ ಶೇ. 30ಕ್ಕೂ ಹೆಚ್ಚಿನ ಜನ ಕನ್ನಡೇತರರು. ಇದೇ ರೀತಿ ಬಳ್ಳಾರಿ ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಕನ್ನಡಿಗರಿಗೆ ಸೂಕ್ತ ಉದ್ಯೋಗಾವಕಾಶ ದಕ್ಕದೆ ಉತ್ತರಭಾರತದ ಕನ್ನಡೇತರರ ಪಾಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಕನ್ನಡಿಗರಿಗೆ ಕೆಳಹಂತದ ಉದ್ಯೋಗಗಳು ಮಾತ್ರ ಸಿಕ್ಕಿವೆ; ಮೇಲ್ದರ್ಜೆಯ ಹುದ್ದೆಗಳು ಅನ್ಯಭಾಷಿಗರ ಪಾಲಾಗಿವೆ.
ಕಾರವಾರ ತಾಲೂಕಿನಲ್ಲಿ ಪ್ರಾರಂಭಿಸಿದ ಕೇಂದ್ರಸರ್ಕಾರದ ಉದ್ದಿಮೆಗಳಲ್ಲಿ ಕನ್ನಡಿಗರನ್ನು ಉದ್ಯೋಗಕ್ಕೆ ಪರಿಗಣಿಸುತ್ತಿಲ್ಲ. ಮೂರು ಮತ್ತು ನಾಲ್ಕನೇ ದರ್ಜೆಯ ಹುದ್ದೆಗಳಿಗಾದರೂ ಕನ್ನಡಿಗರನ್ನು ನೇಮಿಸಬೇಕು; ಗುತ್ತಿಗೆ ರೂಪದಲ್ಲಿ ಮಾಡುವ ಇತರ ನೇಮಕಗಳಿಗೆ ಕನ್ನಡಿಗರನ್ನೇ ತೆಗೆದುಕೊಳ್ಳಬೇಕು. ಈ ರೀತಿ ಆಗುವುದಕ್ಕೆ ಕಾರಣ ಅಲ್ಲಿ ನಡೆಯುವ ಯಾವುದೇ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ನಲ್ಲೇ ಇರುತ್ತವೆ; ಆದ್ದರಿಂದ ಇನ್ನುಮುಂದೆ ಪ್ರಶ್ನೆಪತ್ರಿಕೆಗಳು ಕನ್ನಡದಲ್ಲೇ ಇರುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು – ಎಂದು ಜಾಗೃತಿ ಜಾಥಾ ಸೂಚಿಸಿತ್ತು. ಗುಡಿಕೈಗಾರಿಕೆಗಳು ಮತ್ತು ಕುಲಕಸುಬುಗಳನ್ನು ಆಧರಿಸಿದ ಸಣ್ಣಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಬಹಳಷ್ಟು ಯುವಕರು ಗೋವಾ ರಾಜ್ಯಕ್ಕೆ ವಲಸೆ ಹೋಗುವುದನ್ನು ತಪ್ಪಿಸಬಹುದು; ಈಗ ಅಲ್ಲಿಯ ಅನೇಕ ಯುವಕರು ಪ್ರತಿದಿನ ಕಾರವಾರದಿಂದ ಪಣಜಿಯಂತಹ ದೂರದ ಊರುಗಳಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ಅದಲ್ಲದೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ಸರ್ಕಾರ ಸೂಕ್ತ ಯೋಜನೆಗಳನ್ನು ರೂಪಿಸಿದರೆ ಬಹಳಷ್ಟು ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತವೆ ಎಂದು ಸೂಚಿಸಲಾಗಿದೆ.
ಗಡಿಭಾಗದ ಎಲ್ಲ ತಾಲೂಕುಗಳಲ್ಲಿರುವ ಕೇಂದ್ರಸರ್ಕಾರದ ಉದ್ದಿಮೆಗಳು ಹಾಗೂ ಕಚೇರಿಗಳಲ್ಲಿ ಉನ್ನತ ಸ್ಥಾನದ ಬಹುತೇಕ ಹುದ್ದೆಗಳು ಅನ್ಯಭಾಷಿಕರ ಪಾಲಾಗಿವೆ; ಅವರು ಕೆಳಹಂತದ ಹುದ್ದೆಗಳಿಗೆ ತಮ್ಮವರನ್ನೇ ನೇಮಿಸುವ ಕಾರಣ ಕನ್ನಡಿಗರಿಗೆ ಯಾವುದೇ ಹಂತದ ಉದ್ಯೋಗ ಸಿಗುತ್ತಿಲ್ಲ. ಹಿಂದುಳಿದ ಜಿಲ್ಲೆಯಾದ ಬೀದರ್ನಲ್ಲಿ ಉದ್ಯೋಗಾವಕಾಶ ಪಡೆಯಲು ಸಹಕಾರಿಯಾದ ಕನ್ನಡ ಮಾಧ್ಯಮ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಏಕೆಂದರೆ ಜಿಲ್ಲೆಯ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರ ಸಂಖ್ಯೆ ಅರ್ಧದಷ್ಟೂ ಇಲ್ಲ ಎಂದು ಆಕ್ಷೇಪಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ-ಸಂಸ್ಕೃತಿಗಳು ಜೀವಂತವಾಗಿ ಇರಬೇಕಾದರೆ ಸರ್ಕಾರ ಸಾಂಸ್ಕೃತಿಕವಾಗಿ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಒಂದು ಭಾಷೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ನಡೆದಾಗ ಸಹಜವಾಗಿಯೇ ಆ ಭಾಷೆಯ ವಿಚಾರದಲ್ಲಿ ಆಸಕ್ತಿ ಮತ್ತು ಅಭಿಮಾನಗಳು ಮೂಡುತ್ತವೆ. ಕನ್ನಡ ನಾಡಿನಲ್ಲಿ ಸಾಂಸ್ಕೃತಿಕ ಸಂಪತ್ತು ವಿಪುಲವಾಗಿದ್ದರೂ ಇಲ್ಲಿಯತನಕ ಅದರ ಸವಿಯನ್ನು ನಾವು ಕೆಲವೇ ಭಾಗಗಳಲ್ಲಿ ಉಣಬಡಿಸುತ್ತಿದ್ದೇವೆ. ಹೀಗಾಗಿ ಗಡಿಭಾಗಗಳಲ್ಲಿ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕು, ಅದಕ್ಕಾಗಿ,
1) ಗಡಿಪ್ರದೇಶದಲ್ಲಿ ನಿರಂತರವಾಗಿ ಕನ್ನಡ ನಾಟಕ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಗಡಿ ತಾಲೂಕುಗಳಲ್ಲಿ ಅದಕ್ಕೆ ಬೇಕಾದ ಭವನಗಳನ್ನು ನಿರ್ಮಿಸಬೇಕು; ಅಲ್ಲಿ ಉತ್ತಮವಾದ ಗ್ರಂಥಾಲಯ ವ್ಯವಸ್ಥೆ ಇರಬೇಕು.
2) ಗಡಿಭಾಗದಲ್ಲಿರುವ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಬೇಕು. ಗಡಿಭಾಗಗಳಿಗೆ ನಾಟಕ ತಂಡಗಳನ್ನು ಕಳುಹಿಸಿಕೊಟ್ಟು, ಅವರಿಗೆ ಹೆಚ್ಚಿನ ಸಂಭಾವನೆ ನೀಡಬೇಕು. ಆ ಪ್ರದೇಶದಲ್ಲಿ ವೃತ್ತಿರಂಗಭೂಮಿಯನ್ನು ನಡೆಸಲು ಬಯಸುವ ನಾಟಕ ತಂಡಗಳಿಗೆ ಉಚಿತವಾಗಿ ವಿದ್ಯುತ್, ನೀರು ಮತ್ತು ಜಾಗವನ್ನು ನೀಡಬೇಕು.
3) ಗಡಿಭಾಗಗಳಲ್ಲಿ ನಾಮಫಲಕ(ಬೋರ್ಡ್)ಗಳು ಕಟ್ಟುನಿಟ್ಟಾಗಿ ಕನ್ನಡದಲ್ಲಿರುವಂತೆ ಮಾಡಬೇಕು; ಅನ್ಯಾಯವಾಗಿ ಕೇರಳಕ್ಕೆ ಸೇರಿರುವ ಕಾಸರಗೋಡು ಭಾಗದಲ್ಲಿ ಕನ್ನಡ ನಾಮಫಲಕಗಳೇ ಕಾಣಿಸುವುದಿಲ್ಲ. ಗಡಿಭಾಗದ ಸರ್ಕಾರಿ ಕಟ್ಟಡಗಳ ಮೇಲೆ ಕನ್ನಡ ಧ್ವಜ ಮತ್ತು ರಾಷ್ಟ್ರಧ್ವಜವನ್ನು ಹೊರತುಪಡಿಸಿ ಬೇರೆ ಯಾವುದೇ ಧ್ವಜಗಳು ಹಾರಾಡಬಾರದು.
4) ಗಡಿಪ್ರದೇಶದಲ್ಲಿ ಪ್ರಕಟವಾಗುವ ಕನ್ನಡ ಪತ್ರಿಕೆಗಳಿಗೆ ಸರ್ಕಾರ ಹೆಚ್ಚು ಜಾಹೀರಾತುಗಳನ್ನು ನೀಡಬೇಕು. ಅಲ್ಲಿಯ ಪ್ರಕಾಶಕರು ಮುದ್ರಿಸುವ ಪುಸ್ತಕಗಳನ್ನು ಖರೀದಿಸಲು ಮತ್ತು ಹಂಚಲು ವಿಶೇಷ ವ್ಯವಸ್ಥೆಯನ್ನು ಮಾಡಬೇಕು.
5) ಗಡಿಭಾಗಗಳಲ್ಲಿ ಕನ್ನಡ ಸಾಹಿತ್ಯದ ಚಟುವಟಿಕೆಗಳನ್ನು ಹೆಚ್ಚಿಸಲು ಸರ್ಕಾರ ಸಮ್ಮೇಳನ, ಸಮಾವೇಶ ಮುಂತಾದವುಗಳನ್ನು ಗಡಿಭಾಗದಲ್ಲಿಯೇ ಏರ್ಪಡಿಸುವುದು ಉತ್ತಮ. ಕನ್ನಡ ರಾಜ್ಯೋತ್ಸವದ ದಿನ (ನವೆಂಬರ್ 1) ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳ ಮೇಲೆ ಕನ್ನಡಧ್ವಜವನ್ನು ಹಾರಿಸಬೇಕು. ಕನ್ನಡಧ್ವಜ ಹಾರಿಸುವುದು ಮತ್ತು ನಾಡಗೀತೆ ಹಾಡುವುದು ಶಾಲಾಮಕ್ಕಳ ಮಟ್ಟಕ್ಕೆ ಮಾತ್ರ ಎನ್ನುವ ಭಾವನೆ ಹೋಗಬೇಕು. ಕನ್ನಡ-ಸಂಸ್ಕೃತಿ ಇಲಾಖೆ ಅಕಾಡೆಮಿಗಳು ಗಡಿಭಾಗದಲ್ಲಿ ಹೆಚ್ಚು ಕಾರ್ಯಕ್ರಮ ಆಯೋಜಿಸಬೇಕು.
6) ಗಡಿಭಾಗದ ಎಲ್ಲ ಶಿಕ್ಷಣಸಂಸ್ಥೆಗಳಲ್ಲಿ ಕನ್ನಡ ರಾಷ್ಟ್ರಕವಿಗಳ, ಜ್ಞಾನಪೀಠ ಪುರಸ್ಕೃತರ ಮತ್ತು ಪ್ರಮುಖ ಕವಿ-ಸಾಹಿತಿಗಳ ಭಾವಚಿತ್ರಗಳನ್ನು ಹಾಕಬೇಕು.
7) ಗಡಿಭಾಗದಲ್ಲಿ ಸಂಚರಿಸುವ ಬಸ್ಸುಗಳು ಮತ್ತು ಸರ್ಕಾರೀ ವಾಹನಗಳ ಮೇಲೆ ಮತ್ತು ಒಳಗೆ ಸಾಧ್ಯವಾದ ಕಡೆಯಲ್ಲಿ ಸರ್ವಜ್ಞ, ಬಸವಣ್ಣ, ಕನಕದಾಸ, ವಚನಕಾರರು ಮತ್ತು ದಾಸರ ವಚನ-ಪದದ ಸಾಲುಗಳನ್ನು ಬರೆಸಬೇಕು.
8) ಗಡಿಭಾಗಗಳಲ್ಲಿ ಕನ್ನಡ ನಾಟಕ ತರಬೇತಿ, ಸಂಗೀತ ತರಬೇತಿಗಳಿಗೆ ವ್ಯವಸ್ಥೆ ಮಾಡಬೇಕು.
ಹಕ್ಕೊತ್ತಾಯಗಳು
ಮುಖ್ಯಮಂತ್ರಿ ಚಂದ್ರು ನೇತೃತ್ವದ ‘ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಜಾಥಾ’ ಪ್ರಕಟಿಸಿದ ‘ಗಡಿ ಕನ್ನಡಿಗರ ಕಥೆ-ವ್ಯಥೆ’ ಪುಸ್ತಕದ ಸಂಪಾದಕರಾಗಿ ಬಿ.ಟಿ. ಲಲಿತಾನಾಯಕ್, ಗೊ.ರು. ಚನ್ನಬಸಪ್ಪ, ಕೆ.ವಿ. ನಾಗರಾಜಮೂರ್ತಿ, ಕನ್ನಡಕಟ್ಟೆ ಕೆ.ಎಸ್. ನಾಗರಾಜ್, ಎಂ.ಎಚ್. ಶ್ರೀಧರ್ ಹಾಗೂ ಬಿ. ಸುರೇಶ ಅವರು ಕಾರ್ಯನಿರ್ವಹಿಸಿದ್ದರು. ಜಾಥಾ ಸರ್ಕಾರದ ಮುಂದೆ ಮಂಡಿಸಿದ ಹಕ್ಕೊತ್ತಾಯಗಳು ಹೀಗಿವೆ:
1) ರಾಜ್ಯದಲ್ಲಿ ಈಗ ಇರುವ ವಿವಿಧ ಪ್ರದೇಶಾಭಿವೃದ್ಧಿ ಮಂಡಳಿಗಳ ಮಾದರಿಯಲ್ಲೇ ಗಡಿನಾಡು ಅಭಿವೃದ್ಧಿ ಮಂಡಳಿಯನ್ನು ರಚಿಸಿ, ಆ ಮಂಡಳಿಗೆ ನಿರ್ದಿಷ್ಟ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು.
2) ಗಡಿಭಾಗದ ನಾನಾ ಇಲಾಖೆಗಳಲ್ಲಿ, ಅದರಲ್ಲೂ ಶಾಲೆಗಳಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು.
3) ಗಡಿಪ್ರದೇಶದ ಅಭಿವೃದ್ಧಿಗಾಗಿಯೇ ವಿಶೇಷ ಸಮಗ್ರ ಯೋಜನೆಗಳನ್ನು ರೂಪಿಸಿ ನೆರವು ಒದಗಿಸಬೇಕು; ಮತ್ತು ವಿಶೇಷ ಆರ್ಥಿಕ ವಲಯಗಳನ್ನು ರಚಿಸಬೇಕು.
4) ಗಡಿಭಾಗದ ರೈತರು ಇಲ್ಲಿಯ ಹೆಚ್ಚಿನ ತೆರಿಗೆ, ಸಾಲಸೌಲಭ್ಯದ ಕೊರತೆ ಮುಂತಾದ ಕಾರಣಗಳಿಂದ ತಮ್ಮ ಉತ್ಪನ್ನಗಳ ಮಾರಾಟಕ್ಕೆ ನೆರೆರಾಜ್ಯಗಳಿಗೆ ಕೊಂಡೊಯ್ಯುವುದನ್ನು ತಡೆಯಬೇಕು; ಸಮಸ್ಯೆಗಳನ್ನು ಪರಿಹರಿಸಬೇಕು.
5) ಗಡಿಭಾಗಗಳಲ್ಲಿ ಯೋಜಿಸಿರುವ, ಆದರೆ ಸ್ಥಗಿತಗೊಂಡಿರುವ ಅಥವಾ ನಿಧಾನಗತಿಯಲ್ಲಿ ಸಾಗುತ್ತಿರುವ ರಸ್ತೆ, ನೀರಾವರಿ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
6) ಈಗ ಕೈಗಾರಿಕೆ-ಉದ್ಯಮಗಳು ಕಿಕ್ಕಿರಿದಿರುವ ಬೆಂಗಳೂರು ಇತ್ಯಾದಿ ನಗರಗಳಿಗೆ ಬದಲಾಗಿ ಗಡಿಭಾಗದ ಜಿಲ್ಲೆಗಳಲ್ಲಿ ಸ್ಥಳೀಯ ಸಂಪನ್ಮೂಲ ಮತ್ತು ಕಚ್ಚಾವಸ್ತು ಆಧಾರಿತ ಉದ್ಯಮಗಳನ್ನು ಸ್ಥಾಪಿಸಬೇಕು; ಪ್ರವಾಸೋದ್ಯಮ ಕೇಂದ್ರಗಳನ್ನು ಬಲಪಡಿಸಬೇಕು.
7) ರಾಜ್ಯದಲ್ಲಿ ಈಗಾಗಲೆ ಸಮೀಕ್ಷೆ ನಡೆದಿರುವ ರೈಲು ಮಾರ್ಗಗಳ ನಿರ್ಮಾಣ ಕಾರ್ಯವನ್ನು ಬೇಗ ಜಾರಿ ಮಾಡುವಂತೆ ಕೇಂದ್ರಸರ್ಕಾರದ ಮೇಲೆ ಒತ್ತಡ ತರಬೇಕು.
8) ಗಡಿಭಾಗದ ಶಾಲೆ, ಆಸ್ಪತ್ರೆ, ರಸ್ತೆಗಳ ದುರವಸ್ಥೆಯನ್ನು ನಿವಾರಿಸಬೇಕು.
9) ಗಡಿಭಾಗದ ಬಹುತೇಕ ಜಿಲ್ಲೆ-ತಾಲೂಕುಗಳಲ್ಲಿ ಬಸ್ ತಂಗುದಾಣ, ಸಾರ್ವಜನಿಕ ಶೌಚಾಲಯ ಮೊದಲಾದ ಸಾಮಾನ್ಯ ಸೌಲಭ್ಯಗಳೇ ಇಲ್ಲದೆ ಜನ ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕು.
10) ಗಡಿಭಾಗದ ಪಂಚಾಯತಿ, ರಾಜ್ಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಮೊದಲಾದವುಗಳ ಆಡಳಿತ ವ್ಯವಹಾರದಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಬೇಕು; ತಪ್ಪಿದರೆ ಕ್ರಮಕೈಗೊಳ್ಳಬೇಕು.
11) ಗಡಿಭಾಗದ ಜನರೊಡನೆ ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ನೇರಸಂಪರ್ಕ ಇರಿಸಿಕೊಂಡು, ಕುಂದುಕೊರತೆ ನಿವಾರಿಸುವ ಬಗ್ಗೆ ಕಾಲಬದ್ಧವಾದ ನಿಯಮ ರೂಪಿಸಬೇಕು.
12) ಗಡಿಭಾಗದ ಎಲ್ಲ ಸರ್ಕಾರೀ ಇಲಾಖೆಗಳಿಗೆ ಕನ್ನಡ ಬಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ನೇಮಕ ಅಥವಾ ವರ್ಗ ಮಾಡಬೇಕು; ನೇಮಕಗೊಂಡವರು ಕನಿಷ್ಠ ಐದು ವರ್ಷ ಅಲ್ಲಿ ಕೆಲಸ ಮಾಡಬೇಕು.
13) ಗಡಿಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಸಲುವಾಗಿ ಸಾರ್ವಜನಿಕ (ಸರ್ಕಾರೀ) ಮತ್ತು ಖಾಸಗಿ ಕೈಗಾರಿಕೋದ್ಯಮಗಳನ್ನು ಅಲ್ಲಿ ಸ್ಥಾಪಿಸಬೇಕು.
14) ಅಂತರರಾಜ್ಯ ವಲಸೆಯು ಒಂದು ಗಂಭೀರ ಸಮಸ್ಯೆಯಾಗಿದ್ದು, ಅದರ ಪರಿಹಾರಕ್ಕೆ ರಾಷ್ಟ್ರೀಯ ನೀತಿಯೊಂದನ್ನು ಘೋಷಿಸುವಂತೆ ಕೇಂದ್ರಸರ್ಕಾರವನ್ನು ಒತ್ತಾಯಿಸಬೇಕು.
15) ಗಡಿಭಾಗದ ಎಲ್ಲ ಶಾಲೆಗಳಿಗೆ ಅಗತ್ಯವಿರುವ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಪೀಠೋಪಕರಣ ಇತ್ಯಾದಿಗಳನ್ನು ಒದಗಿಸಬೇಕು. ಅಗತ್ಯವಾದ ವಸತಿಶಾಲೆ, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕು.
16) ರಾಜ್ಯದ ಹೊರಗಿನ ಶಾಲೆ-ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯದಲ್ಲಿ ಹೆಚ್ಚಿನ ಶಿಕ್ಷಣ, ಉದ್ಯೋಗ ಪಡೆಯಲು ಅವಕಾಶವಾಗುವಂತೆ ಆಡಳಿತಾತ್ಮಕ ನೀತಿ-ನಿಯಮಗಳನ್ನು ರೂಪಿಸಬೇಕು. ವೃತ್ತಿ ಶಿಕ್ಷಣದಲ್ಲಿ ಗಡಿಭಾಗದ ಕನ್ನಡ ವಿದ್ಯಾರ್ಥಿಗಳಿಗೆ ಮೀಸಲು ಸೌಲಭ್ಯ ಕಲ್ಪಿಸಬೇಕು.
17) ಗಡಿಪ್ರದೇಶದ ಶಿಕ್ಷಣ ಮೇಲ್ವಿಚಾರಣೆ ಮತ್ತು ಸುಧಾರಣೆಯನ್ನು ನೋಡಿಕೊಳ್ಳಲು ಪ್ರತ್ಯೇಕವಾದ ಒಂದು ಶಿಕ್ಷಣ ವಲಯವನ್ನು ನಿರ್ಮಿಸಿ, ಅದಕ್ಕೆ ಉನ್ನತದರ್ಜೆಯ ಅಧಿಕಾರಿಯನ್ನು ನೇಮಿಸಬೇಕು.
18) ಗಡಿ ಪ್ರದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ ಸಂಬಂಧದ ಶಿಕ್ಷಣ, ತರಬೇತಿ ಸೌಲಭ್ಯಗಳನ್ನು ಒದಗಿಸಬೇಕು.
19) ಗಡಿಭಾಗದ ಕನ್ನಡ ಶಾಲೆಗಳಿಗೆ ಉತ್ತೇಜನ ನೀಡಬೇಕು. ಆ ನಿಟ್ಟಿನಲ್ಲಿ ‘ಶಾಶ್ವತ ಅನುದಾನ ರಹಿತ’ದಂತಹ ಶರತ್ತುಗಳಿಗೆ ಅದರಿಂದ ವಿನಾಯಿತಿ ನೀಡಬೇಕು. ಅದೇ ರೀತಿ ಕನ್ನಡದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇತ್ಯಾದಿ ಒದಗಿಸಬೇಕು.
20) ಕನ್ನಡೇತರ ಭಾಷೆಯವರು ಕನ್ನಡದ ನೆಲದಲ್ಲಿ ನಿಂತು ಕನ್ನಡ ನಾಡು, ನುಡಿ ಮತ್ತು ಜನರ ಗೌರವಕ್ಕೆ ಅಥವಾ ಭಾಷಾಬಾಂಧವ್ಯಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು.
21) ವಿವಿಧ ಕ್ಷೇತ್ರಗಳ ಪ್ರಶಸ್ತಿ ನೀಡಿಕೆ ಮತ್ತಿತರ ಸಂದರ್ಭಗಳಲ್ಲಿ ಗಡಿಭಾಗದ ಪ್ರತಿಭಾನ್ವಿತ ಸಾಹಿತಿ-ಕಲಾವಿದರು ಮತ್ತು ಸಾರ್ವಜನಿಕ ಸೇವಾಕರ್ತರಿಗೆ ಸೂಕ್ತ ಮನ್ನಣೆ ದೊರಕಿಸಬೇಕು. ಅದೇ ರೀತಿ ಸರ್ಕಾರದ ಶಾಸನಬದ್ಧ ಸಂಸ್ಥೆಗಳಿಗೆ ನಾಮಕರಣ ಮಾಡುವಾಗ ಗಡಿಪ್ರದೇಶದವರಿಗೆ ತಪ್ಪದೆ ಪ್ರಾತಿನಿಧ್ಯ ನೀಡಬೇಕು.
22) ಗಡಿಭಾಗದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣವಾಗಬೇಕು.
23) ಗಡಿಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿ ಈಗಾಗಲೇ ಸರ್ಕಾರದ ಮುಂದಿರುವ ಮಹಾಜನ ವರದಿ, ಡಿ.ಎಂ. ನಂಜುಂಡಪ್ಪ ವರದಿ, ಸರೋಜಿನಿ ಮಹಿಷಿ ವರದಿ, ಚಂದ್ರಶೇಖರ ಪಾಟೀಲ ವರದಿ, ವಾಟಾಳ್ ನಾಗರಾಜ್ ವರದಿ ಹಾಗೂ ಬರಗೂರು ರಾಮಚಂದ್ರಪ್ಪ ವರದಿಗಳ ಅನುಷ್ಠಾನಕ್ಕೆ ಸರ್ಕಾರ ಕೂಡಲೆ ಕಾರ್ಯೋನ್ಮುಖವಾಗಬೇಕು.
ಜಾಗೃತಿ ಜಾಥಾ ಸಮಿತಿಯು ಹಕ್ಕೊತ್ತಾಯಗಳನ್ನು ಒಳಗೊಂಡ ಈ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ ವರ್ಷಗಳೇ ಸಂದರೂ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ ಎಂಬುದಕ್ಕೆ ಗಡಿಭಾಗದ ಜನರಿಂದ ಆಗಾಗ ಕೇಳಿಬರುವ ಆಕ್ರೋಶಭರಿತ ಮಾತುಗಳೇ ಪುರಾವೆಯಾಗುತ್ತವೆ. ನಂಜುಂಡಪ್ಪ ವರದಿ, ಸರೋಜಿನಿ ಮಹಿಷಿ ವರದಿಗಳ ಬಗ್ಗೆ ಈಗಲೂ ನಾವು ಆಗಾಗ ಕೇಳುತ್ತೇವಲ್ಲವೆ? ಅಂದಿನಿಂದ ಇಂದಿನ ತನಕ ರಾಜ್ಯದಲ್ಲಿ ಸರ್ಕಾರಗಳು ಬದಲಾದುದನ್ನು ಬಿಟ್ಟರೆ ಹೆಚ್ಚೇನೂ ಆದಂತಿಲ್ಲ. ಕಾಲಾನುಕ್ರಮವಾದ ಕೆಲವು ಬದಲಾವಣೆ, ಪ್ರಗತಿಗಳು ಆಗಿರಬಹುದಷ್ಟೆ. ಆದ್ದರಿಂದ ಪ್ರಸ್ತುತ ರಾಜ್ಯೋತ್ಸವದ ವೇಳೆ ಇನ್ನೊಮ್ಮೆ ಅವುಗಳನ್ನೆಲ್ಲ ನೆನಪಿಸಿಕೊಳ್ಳಬಹುದು.
ಬಸವಣ್ಣನ ಊರಿನಲ್ಲಿ ಕನ್ನಡವೇ ಮಾಯ
ಬಸವಕಲ್ಯಾಣವು ಕರ್ನಾಟಕದ ಸಾಮಾಜಿಕ ಕ್ರಾಂತಿಯ ಹರಿಕಾರ, ವಚನ ಸಾಹಿತ್ಯದ ಮೇರುಪುರುಷ ಬಸವಣ್ಣನವರು ಆಡಳಿತ ನಡೆಸಿದಂತಹ ಊರು. ಕನ್ನಡ ನುಡಿ ಕನ್ನಡ ಗಡಿ ಜಾಗೃತಿ ಜಾಥಾ ಅಲ್ಲಿಗೆ ಭೇಟಿ ನೀಡಿದಾಗ ಕನ್ನಡವು ಮಾಯವಾಗುತ್ತಿರುವ ಪರಿಸ್ಥಿತಿಯನ್ನು ಕಂಡು ಆಘಾತ ಉಂಟಾಯಿತು. ಎಲ್ಲಿ ನೋಡಿದರೂ ಉರ್ದು ಮತ್ತು ಮರಾಠಿಯ ಮಾತುಗಳು ಕಿವಿಗೆ ಅಪ್ಪಳಿಸಿದವು. ಅಲ್ಲಿ ಕನ್ನಡ ಕಾರ್ಯಕ್ರಮಕ್ಕೆ ಜನ ಬರುವುದು ಕಷ್ಟವೆಂದು ಸ್ಥಳೀಯ ಸಂಘಟಕರು ಮೊದಲೇ ತಿಳಿಸಿದ್ದರಂತೆ. ಮರಾಠಿ ಮತ್ತು ಉರ್ದು ಭಾಷೆಗಳು ಅಲ್ಲಿ ಆಡಳಿತ ಹಾಗೂ ವ್ಯವಹಾರದಲ್ಲಿ ಹೆಚ್ಚಾಗಿ ಬಳಕೆಯಾಗಿ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತ ಬಂದಿರುವುದು ಜಾಥಾದವರ ಗಮನಕ್ಕೆ ಬಂತು. ಅದಕ್ಕಾಗಿ ಸರ್ಕಾರ ಅಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದರಂತೆ.