ಹಿಂದೊಮ್ಮೆ ದ್ವಾಪರಯುಗದಲ್ಲಿ ದ್ರೋಣರ ಆವಾಸ ಸ್ಥಾನವಾಗಿದ್ದು, ಕುರುಕ್ಷೇತ್ರ ಯುದ್ದದ ಧರ್ಮಭೂಮಿಯಾಗಿದ್ದ, ಸತ್ಯ ಅಸತ್ಯಗಳ ದರ್ಶನ ಮಾಡಿಸಿದ್ದ ಹರಿಯಾಣಾದ ನೋವು ಮನಸ್ಸನ್ನು ಹೈರಾಣಾಗಿಸುತ್ತದೆ. ಕಾಶ್ಮೀರದ ಸಮಸ್ಯೆ ಮುಗಿದ ಮೇಲೆ, ಅಲ್ಲಿ ಕಲ್ಲು ತೂರಾಟ ನಿಂತಮೇಲೆ, ಪೊಲೀಸರನ್ನು, ಸೈನಿಕರನ್ನು ಬಡಿಯುವುದು, ಸ್ಮಾರಕಗಳಿಗೆ ಒದೆಯುವುದೆಲ್ಲ ಈಗೀಗ ಸದ್ದಡಗಿ ಮೂಲೆ ಸೇರಿದೆ, ಅಂತಲೇ ಅನೇಕರು ನಿರಾಳರಾಗಿದ್ದಾರೆ. ದುರದೃಷ್ಟ ಅಲ್ಲಿ ಕಡಮೆಯಾದರೇನಂತೆ ಇಲ್ಲೆಲ್ಲ ಮೊಳಕೆಯೊಡೆಯುತ್ತಿದೆ.
ಗುರುಗ್ರಾಮ ಭಾರತದ ಡಿಜಿಟಲ್ ರಾಜಧಾನಿಯಾಗುತ್ತಿದೆ ಎಂದಾಗ ಅವರೆಲ್ಲ ಉಬ್ಬಿಹೋಗಿದ್ದರು. ಅಳತೆಯಲ್ಲಿ ಭಾರತದ ಐವತ್ತಾರನೇ ನಗರವೇ ಆಗಿದ್ದರೂ ತಲಾ ಆದಾಯದಲ್ಲಿ ಮುಂಬೈಗಳಂತಹ ನಗರಿಗೆ ಸಡ್ಡು ಹೊಡೆದು, ಈ ನಗರ ದೇಶದ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದಾಗ ಜನರೆಲ್ಲ ಹಿರಿಹಿರಿ ಹಿಗ್ಗಿದ್ದರು. ಸಂಪತ್ತು ಹೊಂದುವಿಕೆಯಲ್ಲಿ ಈ ನಗರ ದೇಶದ ಎಂಟನೇ ಶ್ರೀಮಂತ ನಗರ. ಮೆಡಿಕಲ್ ಟೂರಿಸಂ ಇಂಡಸ್ಟ್ರಿಯನ್ನೇನಾದರೂ ಪರಿಗಣನೆಗೆ ತೆಗೆದುಕೊಂಡರೆ ಇಡೀ ದೇಶದಲ್ಲೇ ಈ ನಗರಕ್ಕೆ ಮೊದಲ ಸ್ಥಾನ. ಇನ್ನು ಕಂಪೆನಿಗಳ ವಿಷಯಕ್ಕೆ ಬರುವುದಾದರೆ ಎಷ್ಟೋ ಉದ್ಯಮಗಳಿಗೆ ಇದು ರಾಜಧಾನಿ. ಸ್ಟಾರ್ಟ್ಅಪ್ ಯೋಜನೆಗಳ ತವರೂರು. ಇಲ್ಲಿ ಟಿಸಿಲೊಡೆದ ಉದ್ಯಮ ಒಂದೋ ಎರಡೋ..! ಅಸಲಿಗೆ ಅದು ರೂಪಗೊಂಡ ಬಗೆಯೇ ಹಾಗೆ. ವಿಸ್ತೀರ್ಣದಲ್ಲಿ ಹರಿಯಾಣಾ, ದೇಶದ ಇಪ್ಪತ್ತೊಂದನೇ ರಾಜ್ಯವಾದರೂ ಇತರ ರಾಜ್ಯಗಳ ಅನೇಕ ಬೇಕುಗಳಿಗೆ ಅರ್ಜಿ ಹಿಡಿದು ನಿಲ್ಲಬೇಕಾದ ಸಮೃದ್ಧಿ ಇಲ್ಲಿದೆ. ಭೋರ್ಗರೆದು ಹರಿವ ಯಮುನೆ, ಕೂಗಳತೆ ದೂರದಲ್ಲಿರುವ ದೆಹಲಿ, ಹಸಿಹಸಿರು ಹೊಲಗಳು ಈ ರಾಜ್ಯವನ್ನು ಐಶ್ವರ್ಯದ ತೊಟ್ಟಿಲಲ್ಲಿಟ್ಟು ತೂಗುತ್ತಿವೆ. ಆದರೆ ಇದೇ ಹೊತ್ತಿನಲ್ಲಿ ರಾಜ್ಯದಲ್ಲಿ ದಂಗೆ ಸೃಷ್ಟಿಸಿ ಇಡೀ ಪರಿಸ್ಥಿತಿಯನ್ನು ಮಖಾಡೆ ಮಲಗಿಸುವ ಸಂಚುಗಳು ಒಂದೊಂದಾಗಿ ಬಹುಸಮಯದಿಂದ ರೂಪಗೊಳ್ಳುತ್ತಿದ್ದವು. ಕೆಲವರಂತೂ ಇದನ್ನೆಲ್ಲ ಮೊದಲೇ ಊಹಿಸಿ ಹರಿಯಾಣಾ ಮಿನಿ ಪಾಕಿಸ್ತಾನವಾಗಿ ಮಾರ್ಪಾಡಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿಯೂ ಇದ್ದರು. ದೆಹಲಿಯಲ್ಲಿ ದೋಖಾ ಮಾಡಿದ ಖದೀಮರು ಗಡಿ ದಾಟಿ ಹರಿಯಾಣಾದಲ್ಲಿ ನಿಶ್ಚಿಂತೆಯಿಂದ ಇರುತ್ತಾರೆ ಎಂದು ಆತಂಕ ತೋಡಿಕೊಂಡಿದ್ದರು. ಆದರೆ ಅವರಾರಿಗೂ ಹರಿಯಾಣಾದಲ್ಲಿ ಹಿಂದೂ ಸಮಾಜಕ್ಕೇ ಬಹುದೊಡ್ಡ ಖೆಡ್ಡಾ ತೋಡಲಾಗುತ್ತಿದೆ ಎಂಬುದರ ಅರಿವಿರಲಿಲ್ಲ. 2023 ಜುಲೈ 31ರಂದು ಹರಿಯಾಣಾದ ನೂಹ್ ಅಕ್ಷರಶಃ ಸುಟ್ಟು ಕರಕಲಾಗಿ ಹೋಯಿತು. ಮಾರನೆಯ ದಿನ ಹಿಂದೂ ಸಮಾಜಕ್ಕೆ ಆ ರಕ್ತದ ಕೋಡಿಯನ್ನು ಮೆತ್ತಲಾಯಿತು!
ಬರೋಬ್ಬರಿ 160 ಎಫ್.ಐ.ಆರ್, 393 ಜನರನ್ನು ದಸ್ತಗಿರಿ ಮಾಡಿರುವ ನೂಹ್ ದಂಗೆ ಪ್ರಕರಣದಲ್ಲಿ ಏಕಾಏಕಿ ಪೆಟ್ರೋಲ್ ಬಾಂಬ್ಗಳು, ಲೋಡುಗಟ್ಟಲೆ ಕಲ್ಲುಗಳು, ಮಾರಕಾಯುಧಗಳು, ಗಾಜಿನ ಬಾಟಲಿಗಳು, ಬಂದೂಕುಗಳು ದಿಗ್ದರ್ಶನ ಮಾಡಿದ್ದವು. 3000 ಗಾಜಿನ ಬಾಟಲ್ಗಳನ್ನು ದಾಸ್ತಾನು ಮಾಡಿ ಹಿಂದೂಗಳ -ಬ್ರಿಜ್ಮಂಡಲ ಯಾತ್ರೆಯ ಮೇಲೆಸೆಯಲಾಗಿತ್ತು. ಬಹುತೇಕ ಬಾಟಲ್ಗಳಿಗೆ ಪೆಟ್ರೋಲ್ ಕೂಡ ತುಂಬಲಾಗಿತ್ತು. ಅಚ್ಚರಿಯೆಂದರೆ ಇದೆಲ್ಲ ಪೂರ್ವನಿರ್ಧಾರಿತವಾಗಿರಲಿಲ್ಲ ಎಂದೇ ಜಗತ್ತಿಗೆ ತಿಳಿಹೇಳಲಾಯಿತು. ಖುದ್ದು ಎಸ್.ಪಿ. ನರೇಂದ್ರ ಬಿಜಾರ್ನಿಯಾ ಇದೇನು ಯೋಜಿತ ಸಂಚಲ್ಲವೆಂದು ಘಂಟಾಘೋಷವಾಗಿ ಹೇಳಿದರು. ದಾಖಲಾದ ಎಫ್.ಐ.ಆರ್. ಪ್ರಕಾರ ಸರಿಸುಮಾರು 900 ಜನರು ಉನ್ಮತ್ತರಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಹಾಕುತ್ತಿದ್ದರು. ಮೇವಾಟ್ನ ಗುಡ್ಡಗಳಿಂದ ತಂಡೋಪತಂಡವಾಗಿ ಅವರೆಲ್ಲ ನುಗ್ಗಿಬಂದರೆಂದು ಹೇಳಲಾಗುತ್ತಿದೆ. ಹಾಗೆ ನುಗ್ಗಿಬಂದವರಾರೂ ಮೇವಾಟ್ನವರು, ಗುರುಗ್ರಾಮದವರು ಅಥವಾ ನೂಹ್ ಜಿಲ್ಲೆಯವರಾಗಿರಲಿಲ್ಲ. ಅದರಲ್ಲಿ ಅಲಿಘಡದವರು, ಉತ್ತರಪ್ರದೇಶ ಮೂಲದವರು, ರಾಜಸ್ಥಾನದವರು ಸೇರಿಕೊಂಡಿದ್ದರು. ಹಿಂದೂಗಳ ಬ್ರಿಜ್ಮಂಡಲ ಯಾತ್ರೆಯಲ್ಲಿ ಅಲಿಘಡದವರಿಗೆ ಏನು ಕೆಲಸ? ರಾಜಸ್ಥಾನ ಉತ್ತರಪ್ರದೇಶದ ಮುಸಲ್ಮಾನರಿಗೆ ಇಲ್ಲೇನು ಕಸುಬು? ತಿಂಗಳುಗಳ ಮೊದಲೇ ವಾಟ್ಸಾಪ್ ಗ್ರೂಪ್ ರಚಿಸಿ ಭಕ್ತರ ತಂಡದೊಳಗೆ ಸೇರಿಕೊಳ್ಳಬೇಕೆಂದು ಫರ್ಮಾನು ಹೊರಡಿಸಿದವರ ಉದ್ದೇಶಗಳಾದರೂ ಏನಿತ್ತು?
ಸುತ್ತ ಗಿರಿಶಿಖರಗಳಿಂದ ಆವೃತವಾಗಿರುವ ನಾಲ್ಹಾರ್ನ ಮಹಾದೇವ ಮಂದಿರದ ‘ಬ್ರಿಜ್ಮಂಡಲ ಜಲಾಭಿಷೇಕ ಯಾತ್ರೆ’ಯನ್ನು ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ, ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಘಟನೆ ನಡೆದ ತರುವಾಯ ತಪ್ಪು ಮುಚ್ಚಿಕೊಳ್ಳಲು ಹೇಳಿಕೆ ಕೊಟ್ಟ ಹರಿಯಾಣಾ ಸರ್ಕಾರಕ್ಕೆ ಯಾತ್ರೆಯ ಓನಾಮಗಳೇ ತಿಳಿದಿರಲಿಲ್ಲ ಎನ್ನುವುದು ಖಾತರಿಯಾಯಿತು. ಯಾತ್ರೆಗೆ ಅನುಮತಿಯೇ ಇರಲಿಲ್ಲ ಎನ್ನುವ ಅವಿವೇಕದ ಹೇಳಿಕೆಯ ಮೊದಲು ಯಾತ್ರೆಯ ಬಗೆಗೆ ಸರ್ಕಾರ ಅಧ್ಯಯನ ಮಾಡಬೇಕಿತ್ತು. ಜಲಾಭಿಷೇಕ ಯಾತ್ರೆಯೇನು ಇವತ್ತು ನಿರ್ಣಯ ಮಾಡಿ ಮರುದಿವಸ ಕಾರ್ಯರೂಪಕ್ಕೆ ತಂದದ್ದಾಗಿರಲಿಲ್ಲ. ಪ್ರತಿ ವರ್ಷವೂ ಶ್ರದ್ಧಾಭಕ್ತಿಯಿಂದ ಯಾತ್ರೆ ನಡೆಯುತ್ತಿತ್ತು. ಹಾಗೆ ನೋಡುವುದಾದರೆ ಗುಪ್ತಚರ ಮೂಲಗಳಿಗೆ ಇಲ್ಲಿ ಗಲಾಟೆಯಾಗುವ ಎಲ್ಲ ಮಾಹಿತಿಗಳೂ ತಿಳಿದೇ ಇದ್ದವು. ಆದರೆ ಲೆಕ್ಕಾಚಾರ ಮೀರಿ ಹೊತ್ತಿ ಉರಿಯುತ್ತದೆ ಎನ್ನುವ ಅರಿವಿರಲಿಲ್ಲ – ಎನ್ನುವುದು ಸಾಮಾನ್ಯ ಜ್ಞಾನವಿಲ್ಲದವರ ಮೂರ್ಖತನದ ಹೇಳಿಕೆಯೇ ಸರಿ. ನಾಲ್ಹಾರ್ನ ನೂಹ್ನಲ್ಲಿರುವ ಮಂದಿರದಿಂದ ಹೊರಟು, ಜೀರಕ್ಷೇಶ್ವರ ಮಹಾದೇವ ಮಂದಿರವಾಗಿ, ಕೃಷ್ಣದೇಗುಲದ ಮುಖೇನ ಹಾದು ಪುನ್ಹಾನದ ಶೃಂಗೇಶ್ವರ ಮಹಾದೇವನ ಸನ್ನಿಧಾನದಲ್ಲಿ ಸಮಾಪನಗೊಳ್ಳುವ ಯಾತ್ರೆ ಇದಾಗಿತ್ತು. ಯಾತ್ರೆಯ ಮೊದಲ ತಂಡ ಜಟಿಯಾ ಮೊಹಲ್ಲಾದಿಂದ ಹೊರಟಿತ್ತು. ಈ ಯಾತ್ರೆಯನ್ನು ಮುನ್ನಡೆಸುತ್ತಿದ್ದ ಭಜರಂಗಿಯನ್ನೇ ಧ್ವಂಸ ಮಾಡಲಾಯಿತು. ಖೇಡ್ಲಾ ಮೋಡ್ನಲ್ಲಿ ಯಾತ್ರೆಯನ್ನೇ ನಿಲ್ಲಿಸುವ ಪ್ರಯತ್ನಗಳಾದವು.
ಎರಡನೇ ತಂಡ ಮೂಲಸ್ಥಾನ ಬಿಟ್ಟು ನಾಲ್ಹಾರ್ ಸಮೀಪಿಸಿ ಆಗಿತ್ತು. ಎರಡೂ ತಂಡಗಳ ಮೇಲೆ ಪ್ರತ್ಯೇಕ ದಾಳಿಯಾಗುತ್ತದೆ ಎಂದರೆ ಅದು ಪೂರ್ವನಿಯೋಜಿತ ಆಗಿರದೆ ಮತ್ತೇನಾಗಲು ಸಾಧ್ಯ? ಪೊಲೀಸ್ ಚೌಕಿಗಳನ್ನು ಮನಬಂದಂತೆ ಹುಡುಕಿ ಪುಡಿಗೈದಿದ್ದು ಮಾತ್ರವಲ್ಲ, ಬೆಂಕಿಗಾಹುತಿಯೂ ಮಾಡಿದ್ದರು. ಅವರ ಉದ್ದೇಶ ಜನರನ್ನು ಜೀವಂತ ಸುಡುವುದೇ ಆಗಿತ್ತು. ಗಲಭೆ ನಡೆಸಿದವರ ಕೆಲ ಮೊಬೈಲ್ ಸಂದೇಶಗಳು ಹೇಗಿದ್ದವೆಂದರೆ ಭಕ್ತರ ತಂಡದೊAದಿಗೆ ಸೇರಿಕೊಳ್ಳಬೇಕು, ಅಲ್ಲಿಂದಲೇ ಗಲಾಟೆ ಪ್ರಾರಂಭಿಸಬೇಕು ಎಂಬುದಾಗಿತ್ತು. ಹಾಗಿದ್ದರೆ “ಭಕ್ತರು ಬರೀ ಕೈಯಲ್ಲಿ ಬಂದಿರಲಿಲ್ಲ, ಮಾರಕಾಯುಧಗಳೊಂದಿಗೆ ಬಂದಿದ್ದರು, ಜಟಾಪಟಿಯನ್ನು ಹಿಂದೂಗಳೇ ಪ್ರಾರಂಭಿಸಿದರು” ಎನ್ನುವ ಹುಯಿಲು ಯಾಕೆ ಮಾಡಲಾಯಿತು? ಇದೆಲ್ಲದರಲ್ಲಿ ಒಂದಂತೂ ನೇರಾನೇರ ಸ್ಪಷ್ಟವಾಗುತ್ತಲೇ ಹೋಗುತ್ತಿದೆ. ಅದೇನೆಂದರೆ ಹಿಂದೂಗಳ ತಲೆಗೆ ಈ ದಳ್ಳುರಿಯನ್ನು ಕಟ್ಟುವ, ಅವರನ್ನೇ ಅದಕ್ಕೆ ದೋಷಿ ಮಾಡುವ ವ್ಯವಸ್ಥಿತ ಸಂಚು. ವಿಚಿತ್ರವೆಂದರೆ ಈಗ ಅದನ್ನೇ ಎಲ್ಲರೂ ನಂಬಿಬಿಟ್ಟಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ವಿತಂಡವಾದ ತಲೆಬುಡವಿಲ್ಲದ್ದಾಗಿದೆ. ಸುಟ್ಟು ಕರಕಲಾದ ಊರಿನಲ್ಲಿ ಊರುಕೊಳ್ಳೆ ಹೊಡೆದ ನಂತರ ಇಂಟರ್ನೆಟ್ ಸ್ಥಗಿತಗೊಳಿಸುವ ಸರ್ಕಾರ, ಅನುಮತಿಯಿಲ್ಲವೆಂದು ಹೇಳುವ ಇದೇ ಮಂತ್ರಿಮಾಗಧರೆಲ್ಲ, ಮೇವಾಟ್ನ ಹಿಂದೂಗಳಿಗೆ ನುಗ್ಗಿ ನುಗ್ಗಿ ಹೊಡೆಯುತ್ತೇವೆ ಎಂದು ಶಾಸನಸಭೆಯಲ್ಲಿ ಹೇಳಿದ್ದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ನನ್ನು ಏನೂ ಮಾಡಲಾಗಲಿಲ್ಲ. ಆತ ನಾಲಗೆ ಹರಿಯಬಿಟ್ಟಿದ್ದು ಗಲಾಟೆಯಾದ ದಿನವೇನೂ ಅಲ್ಲ ಬದಲಾಗಿ ಬಹುಹಿಂದೆಯೇ. ಹಾಗಾದ ಮೇಲೆ ಜುಲೈ 31ರ ಘಟನೆಗೆ ಹಿಂದುಗಳಾಗಲೀ, ಭಜರಂಗದಳ ನಾಯಕರಾಗಲೀ, ಗೋರಕ್ಷಾ ಪಡೆಯವರಾಗಲೀ ಹೇಗೆ ಹೊಣೆಗಾರರಾಗುತ್ತಾರೆ? ಅಷ್ಟೊಂದು ತೀವ್ರ ನಿಗಾ ಇರಿಸಿ ಕಾನೂನು ಮಾತನಾಡುವ ಈ ಮಹಾಶಯರಿಗೆ, ಮೇವಾಟ್ನಲ್ಲಿರುವ ನೂರು ಗ್ರಾಮಗಳು ಏಕೆ ಹಿಂದೂರಹಿತ ಆಗಿಹೋದವು ಎನ್ನುವುದಕ್ಕೆ ಕಾರಣಗಳಿಲ್ಲ. ಅಂಕಿಅಂಶಗಳೂ ಇಲ್ಲ. ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳವ ವ್ಯವಧಾನವೂ ಇಲ್ಲ. ಅಧ್ಯಯನವಂತೂ ಮೊದಲೇ ಇಲ್ಲ. ಯಾಕೆ 50ಕ್ಕಿಂತಲೂ ಅಧಿಕ ಗ್ರಾಮಗಳಲ್ಲಿ ಹಿಂದೂಗಳು 5%ಗೆ ಇಳಿದಿದ್ದಾರೆ, ಯಾಕೆ ಊರು ತೊರೆಯುತ್ತಿದ್ದಾರೆ ಎನ್ನುವುದರ ಅರಿವಿಲ್ಲ. ಕೇವಲ ಎರಡು ದಿನಗಳ ಮನು ಮಾನೇಸರ್ ವಾಟ್ಸಾಪ್ ವೀಡಿಯೋ ಈ ಪರಿಯ ಬಾಟಲ್ ದಾಸ್ತಾನಿಗೆ ಮತ್ತು ದಂಗೆಗೆ ಕಾರಣವಾಗುತ್ತದೆ ಎಂದು ವ್ಯವಸ್ಥೆ ಈ ಪಾಟಿ ನಂಬಿಸುವುದಾದರೆ ಅದನ್ನು ಒಪ್ಪಕೊಳ್ಳುವವನ ಬುದ್ದಿಗೆ ಸಿಡಿಲು ಬಡಿದಿರಬೇಕು ದಿಟ. ಪೊಲೀಸರನ್ನು ಕೊಲ್ಲುವ, ನಾಲ್ಹಾಡ್ ಬೆಟ್ಟಗಳಿಂದ ಗುಂಡು ಹಾರಿಸಿದ, ಗಾಜಿನ ಬಾಟಲ್ ತೂರಿದ, ಚೌಕಿ ಸುಟ್ಟವರೆಲ್ಲ ಕಾನೂನಿನ ಅಡಿಯಲ್ಲೇ ಬರುವುದಿಲ್ಲವೆ? ಅವರಿಗೇನಾದರೂ ವಿಶೇಷ ರಿಯಾಯಿತಿಗಳಿವೆಯಾ? ಅವರನ್ನು ಹೊರಗಿಟ್ಟು ನಡೆಸುವ ಮಾಧ್ಯಮದ ಚರ್ಚೆಗಳೇಕೆ ಪೂರ್ವನಿಯೋಜಿತ ಎಂದು ಭಾವಿಸಬಾರದು?
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ. “ನಿಮ್ಮ ಖಾತೆ ಸಕ್ರಿಯವಾಗಿಲ್ಲ”, “ಎಟಿಎಂ ಹೊಸತು ಬಂದಿದೆ”, “ಮ್ಯಾನೇಜರ್ ಮಾತನಾಡುವುದು” – ಎಂದೆಲ್ಲ ಸರ್ವೇಸಾಮಾನ್ಯ ಕರೆಗಳು ಬರುತ್ತಲೇ ಇರುತ್ತವೆ. ಹಾಗೋ ಹೀಗೋ ಸತ್ಯವೆಂದು ನಂಬಿ ಲಕ್ಷ, ಲಕ್ಷ ಕಳೆದುಕೊಂಡವರೂ ಮನೆಗೊಬ್ಬರಂತೆ ಇದ್ದಾರೆ. ಅಚ್ಚರಿಯೆಂದರೆ ಹೀಗೆ ಬರುವ ಕಾಲ್ಗಳ ಪೈಕಿ 90% ಕಾಲ್ಗಳು ಇದೇ ಹರಿಯಾಣಾದ ಮೇವಾತ್ನಿಂದ ಬರುತ್ತಿವೆ. ಅಸಲಿಗೆ ಹೀಗೆ ಬರುವ ಕಾಲ್ಗಳಿಂದ ದೇಪಿದವರ ಕುರಿತಾಗಿ ಪತ್ತೆಯೇ ಇರುವುದಿಲ್ಲ. ಪೊಲೀಸರಂತೂ ಇದರ ಬಗೆಗೆ ನಿರಾಸಕ್ತಿ ವಹಿಸುತ್ತಾರೆ. ಓಟಿಪಿ ಯಾಕೆ ಕೊಡುತ್ತೀರಿ ಎಂದೇ ದಬಾಯಿಸುತ್ತಾರೆ. ಒಂದರಿಂದ ಜಾಗೃತನಾದೆ ಎನ್ನುವಷ್ಟರಲ್ಲಿ ಈ ಸೈಬರ್ ಕ್ರೈಮ್ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎಂಬಂತೆ ತರಹೇವಾರಿ ರೂಪ ತಳೆದು ಬರುತ್ತಿರುತ್ತದೆ. ಟ್ರೇಸ್ ಆಗದ ಕೇಸುಗಳ ಬಗೆಗೆ ಭಾರೀ ಜನಾಕ್ರೋಶವೂ ಇದೆ. ಹೀಗೆ ರೋಸಿಹೋದ ದೂರುಗಳ ತರುವಾಯ ಅಂತಿಮವಾಗಿ ಹರಿಯಾಣಾ ಸರ್ಕಾರಕ್ಕೆ ಭಾರೀ ಪ್ರಮಾಣದ ಒತ್ತಡವೂ ಎದುರಾಗಿತ್ತು. ಕೊನೆಗೆ ಇದೇ ಏಪ್ರಿಲ್ನಲ್ಲಿ ಮೇವಾತ್ನಲ್ಲಿ ಭಾರೀ ಪ್ರಮಾಣದ ದಾಳಿಯೊಂದು ಸೈಬರ್ ಕ್ರಮಿನಲ್ಗಳ ಮೇಲೆ ನಡೆಯಿತು. ಅನೇಕರ ಬಂಧನವೂ ಆಗಿಹೋಯಿತು. ಈ ರೊಚ್ಚುಗಳು ಪೊಲೀಸ್ ಚೌಕಿ ಮೇಲೆ ತೀರಿಸಲ್ಪಡ್ತು ಎಂಬುದಾಗಿ ಒಂದು ವರದಿಯಿದೆ. ಈ ಬಗೆಗೆ ನಿಷ್ಕರ್ಷೆ ಎಲ್ಲೂ ಆಗಿಲ್ಲ. ಅಂದರೆ ಅಶಾಂತಿ, ಅರಾಜಕತೆ, ದಗಾಕೋರತನದಿಂದ ಇಲ್ಲಿನ ಜನ ದಂಧೆಯಲ್ಲಿ ತೊಡಗಿದ್ದಾರೆ ಎಂದರೆ ಇವರ ಸೊಕ್ಕು ಎಲ್ಲಿಯವರೆಗಿದ್ದಿರಬಹುದು?
ವಿಶ್ವ ಹಿಂದೂ ಪರಿಷತ್ ಸಂಘಟನೆ ಇಂತಹ ನೂರಾರು ಹೋರಾಟಗಳನ್ನು ರಾಷ್ಟಾçದ್ಯಂತ ನಿರಂತರವಾಗಿ ಸಂಘಟಿಸುತ್ತಲೇ ಇರುತ್ತದೆ. ಈ ನೆಲದ ಪರಂಪರೆ, ನಂಬಿಕೆ ಶ್ರದ್ಧೆಗಳಿಗೆ ಪೂರಕವಾಗಿ ಅದು ಹೋರಾಟ ನಡೆಸುತ್ತದೆ. ರಾಮೇಶ್ವರಂನಲ್ಲಿ ರಾಮಸೇತುವೇ ಇಲ್ಲ ಎಂದಾಗಲೂ ಅದು ಸಿಡಿದೆದ್ದು ಹೋರಾಟ ಮಾಡಿತ್ತು. ರಾಮಜನ್ಮಭೂಮಿಗೂ ಮುಂಚೂಣಿಯಲ್ಲಿ ನಿಂತು ಚಳವಳಿ ಮಾಡಿತ್ತು. ತಿರುಪತಿಯ ವಿವಾದ ಆದಾಗಲೂ ಅದು ಅಖಾಡಕ್ಕಿಳಿದಿತ್ತು. ಅದಕ್ಕೆ ಉತ್ತರ, ದಕ್ಷಿಣ, ಶೈವ, ವೈಷ್ಣವ, ಜಾತಿಪಂಥಗಳ ಸೀಮೆಗಳಿಲ್ಲ. ಆದರೆ ಈ ಜಿಹಾದಿ ಮಾನಸಿಕತೆಯ ಜನರು ಯಾತ್ರೆಯ ಉದ್ದೇಶವನ್ನೇ ಧ್ವಂಸಗೊಳಿಸಿದರು. ತಮ್ಮ ಹೊರತಾಗಿ ಯಾರೂ ಇರಬಾರದೆಂದು ದರ್ಪ ತೋರಿದರು. ನಿರಂತರ ಕಲ್ಲುತೂರಾಟ, ದಾಂಧಲೆ ಸೃಷ್ಟಿಸಿ ಪ್ರಾಣಹಾನಿಗೂ ಕಾರಣರಾದರು. ಹಾಗಾದರೆ ಈ ದೇಶದಲ್ಲಿ ದೇವರ ಆರಾಧನೆಗೂ ಈ ದೊಣ್ಣೆ ನಾಯಕರ ಅಪ್ಪಣೆ ಬೇಕಾ? ಯಾತ್ರೆ ಸಾಗುವ ಮಾರ್ಗ ಮಧ್ಯೆ ಅದೂ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಈ ಮತಾಂಧರ ಅನುಮತಿ ತೆಗೆದುಕೊಳ್ಳಬೇಕಾ? ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ಉಪವಾಸದ ವ್ರತ ಹಿಡಿದು, ವರ್ಷಾನುಗಟ್ಲೆ ಶುದ್ಧಾಚಾರದಿಂದಿದ್ದು, ಎತ್ತಿನ ಬಂಡಿ ಕಟ್ಟಿಕೊಂಡು ನೂರಾರು ಮೈಲಿ ಪಾದಯಾತ್ರೆ ಮಾಡಿ ತೀರ್ಥಕ್ಷೇತ್ರ ತಲಪುವವರ ಕಥೆಯೇನು? ತೀರ್ಥಕ್ಷೇತ್ರ ದರ್ಶನದ ವಿಷಯದಲ್ಲಿ ಈ ದೇಶಕ್ಕೆ ಒಂದು ಪರಂಪರೆಯೇ ಇದೆ. ಪಂಢರಾಪುರದ ವಿಠ್ಠೋಭಾ, ಶಬರಿಮಲೆಯ ಅಯ್ಯಪ್ಪಸ್ವಾಮಿ, ಅಮರನಾಥ, ವೈಷ್ಣೋದೇವಿ ಯಾತ್ರೆಗಳೆಲ್ಲ ಅನೇಕ ವರ್ಷಗಳಿಂದ ಅನೂಚಾನವಾಗಿ ನಡೆದುಬಂದಿವೆೆ. ಕಾಡುಮೇಡು ಅಲೆದು ದೇವನಾಮ ಸಂಕೀರ್ತನೆಯಲ್ಲಿ ಮುಳುಗಿರುವ ಜನರ ಮೇಲೆ ಹೀಗೆಲ್ಲ ಎರಗಲು ಇದೇನು ಪಾಕಿಸ್ತಾನ, ತಾಲೀಬಾನ್ ದೇಶವಾ?
ಹಿಂದೊಮ್ಮೆ ದ್ವಾಪರಯುಗದಲ್ಲಿ ದ್ರೋಣರ ಆವಾಸ ಸ್ಥಾನವಾಗಿದ್ದು, ಕುರುಕ್ಷೇತ್ರ ಯುದ್ದದ ಧರ್ಮಭೂಮಿಯಾಗಿದ್ದ, ಸತ್ಯ ಅಸತ್ಯಗಳ ದರ್ಶನ ಮಾಡಿಸಿದ್ದ ಹರಿಯಾಣಾದ ನೋವು ಮನಸ್ಸನ್ನು ಹೈರಾಣಾಗಿಸುತ್ತದೆ. ಕಾಶ್ಮೀರದ ಸಮಸ್ಯೆ ಮುಗಿದ ಮೇಲೆ, ಅಲ್ಲಿ ಕಲ್ಲು ತೂರಾಟ ನಿಂತಮೇಲೆ, ಪೊಲೀಸರನ್ನು, ಸೈನಿಕರನ್ನು ಬಡಿಯುವುದು, ಸ್ಮಾರಕಗಳಿಗೆ ಒದೆಯುವುದೆಲ್ಲ ಈಗೀಗ ಸದ್ದಡಗಿ ಮೂಲೆ ಸೇರಿದೆ ಅಂತಲೇ ಅನೇಕರು ನಿರಾಳರಾಗಿದ್ದಾರೆ. ದುರದೃಷ್ಟ ಅಲ್ಲಿ ಕಡಮೆಯಾದರೇನಂತೆ ಇಲ್ಲೆಲ್ಲ ಮೊಳಕೆಯೊಡೆಯುತ್ತಿದೆ. ಅದೆಲ್ಲ ಈ ದೇಶದಲ್ಲಿ ನಡೆಯುವುದಿಲ್ಲ ಎಂಬುದು ಅವರಿಗೂ ಗೊತ್ತಿದ್ದಂತಿಲ್ಲ. ಕುಳಿತ ರೆಂಬೆ ಕಡಿವವನಿಗೆ ಹೇಳಿದರೆ ಸಾಲುವುದಿಲ್ಲ. ಬಿದ್ದ ಮೇಲೆ ಸತ್ಯದರ್ಶನವಾಗುತ್ತದೆ. ಹಾಗಾಗಲು ಸರ್ಕಾರ ಮಾತ್ರ ನಿದ್ದೆ ಬಿಡಬೇಕು ಅಷ್ಟೆ. ನಾಡರಿಯದ ‘ನೂಹ್’ ನೋವು ನಮಗಾದರೂ ಅರ್ಥವಾಗಲಿ.