ನವಾಬನ ಆಸ್ಥಾನದಲ್ಲೇ ಇದ್ದ ಮೀರ್ಜಾಫರ್ ಜೊತೆ ಬ್ರಿಟಿಷರ ವ್ಯವಹಾರ (ಡೀಲ್) ಆಗಲೇ ಆಗಿತ್ತು. ಕಲ್ಕತ್ತಾ ಕೌನ್ಸಿಲ್ ಆತನೊಂದಿಗೆ ಮೇ 19, 1757ರಂದು ಒಂದು ಒಪ್ಪಂದ ಮಾಡಿಕೊಂಡಿತ್ತು. ಮೀರ್ಜಾಫರ್ ಇಂಗ್ಲಿಷರ ಜೊತೆ ಸೇರಲು ತಾನು ಸದಾ ಸಿದ್ಧ ಎಂದು ಏಪ್ರಿಲ್ 26ರ ಪತ್ರದಲ್ಲಿ ತಿಳಿಸಿದ್ದ. ಪಿತೂರಿಯ ಬಗೆಗಿನ ಅಜ್ಞಾನ ಒಂದಾದರೆ, ಅದರ ಎದುರು ಏನನ್ನೂ ಮಾಡಲಾಗದ ಅಸಹಾಯ ಸ್ಥಿತಿಗೆ ನವಾಬ ತಲಪಿದ್ದನೇನೋ ಅನ್ನಿಸುತ್ತದೆ; ಭೇಟಿಗೆ ಅವಕಾಶ ಕೇಳಿ ಫ್ರೆಂಚ್ ಅಧಿಕಾರಿ ಲಾ ನವಾಬನ ಬಳಿ ಜನ ಕಳುಹಿಸಿದ್ದ (ಜೂನ್ 8). ಜೂನ್ 10ಕ್ಕೆ ನವಾಬ ಬರೆದ ಉತ್ತರ 19ರಂದು ಲಾ ಕೈಸೇರಿತು. ಯುದ್ಧಕ್ಕೆ ಕೇವಲ ನಾಲ್ಕು ದಿನಗಳಿದ್ದು ಭೇಟಿ ಇತ್ಯಾದಿಗೆ ಆಗ ತಡವಾಗಿತ್ತು.
ಒಬ್ಬ ಚಾಣಾಕ್ಷ ಸೇನಾನಿಯಾದ ಕರ್ನಲ್ ರಾಬರ್ಟ್ ಕ್ಲೈವ್ ಬಂಗಾಳದಲ್ಲಿ ತಾನು ಮುಂದೆ ಯಾವ ಬಗೆಯ ಕಾರ್ಯಾಚರಣೆಯನ್ನು ನಡೆಸಬೇಕೆನ್ನುವ ಚಿತ್ರಣವನ್ನು ಕಣ್ಣಮುಂದೆ ತಂದುಕೊಂಡನು. ದೂರದ ಯಾವುದೋ ಅಜ್ಞಾತ ಖಂಡದಿಂದ ಬಂದು ತನಗೆ ಏನೇನೂ ಗೊತ್ತಿಲ್ಲದ ಒಂದು ಭೂಖಂಡದಲ್ಲಿ, ಭಾಷೆ ತಿಳಿಯದ ಪ್ರದೇಶದಲ್ಲಿ ಕ್ರಮೇಣ ತನ್ನ ಬಲ ಮತ್ತು ಪ್ರಭಾವಗಳನ್ನು ಆತ ಹೆಚ್ಚಿಸಿಕೊಂಡ ರೀತಿ ಅಧ್ಯಯನಯೋಗ್ಯವಾಗಿದೆ.
ಕಂಪೆನಿಗೆ ಕ್ಲೈವ್ ಎಚ್ಚರ
ಕಂಪೆನಿಯ ಕಲ್ಕತ್ತಾ ಕೌನ್ಸಿಲ್ ಫ್ರೆಂಚರೊಂದಿಗೆ ಈವರೆಗೆ ಜಾರಿಯಲ್ಲಿದ್ದ ‘ಗಂಗಾ ಪ್ರದೇಶದ ತಾಟಸ್ಥö್ಯ’ವನ್ನು ನಿರಾಕರಿಸಿದರೆ ಅವರ (ಫ್ರೆಂಚರ) ಮೇಲೆ ಆಕ್ರಮಣ ನಡೆಸುವ ದಾರಿ ಸುಗಮವಾಗುತ್ತದೆ. ತಡ ಮಾಡಿದರೆ ಫ್ರೆಂಚರು ನವಾಬ ಸಿರಾಜುದ್ದೌಲನ ಜೊತೆ ಸೇರಿಕೊಳ್ಳುವ ಅಪಾಯವಿದೆ. ಈ ನಡುವೆ ಭಾರತದಲ್ಲಿ ಬ್ರಿಟಿಷ್ ನೌಕಾಪಡೆಯ ಮುಖ್ಯಸ್ಥನಾಗಿದ್ದ ರಿಯರ್ ಅಡ್ಮಿರಲ್ ವಾಟ್ಸನ್ ಜೊತೆಗೆ ಕ್ಲೈವ್ಗೆ ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದರಿಂದಾಗಿ ವಾಟ್ಸನ್ ಹಿಂದೆ ಸರಿದರೆ ಸಿರಾಜ್ ವಿರುದ್ಧದ ಮುಂದಿನ ಕಾರ್ಯಾಚರಣೆ ತನ್ನದೇ ಎಂದ ಕ್ಲೈವ್, ಫ್ರೆಂಚರು ಮತ್ತು ನವಾಬ ಸಿರಾಜ್ ಇಬ್ಬರನ್ನೂ ಒಟ್ಟಿಗೇ ಎದುರಿಸುವುದು ಕಷ್ಟ ಎಂದು ಹೇಳಿದ. ಸೇನೆ ತನ್ನ ಬಳಿಗೆ ಬೇಗ ಬರಬೇಕು; ಇಲ್ಲವಾದರೆ ದುರದೃಷ್ಟಕ್ಕೆ ತಾನು ಹೊಣೆ ಆಗುವುದಿಲ್ಲ ಎಂದು ಕೌನ್ಸಿಲ್ಗೆ ಸ್ಪಷ್ಟಪಡಿಸಿದ. ವಾಟ್ಸನ್ ಜಲಮಾರ್ಗವಾಗಿ ಬಂದು ಚಂದ್ರನಗರದ (ಚಂದ್ರ ನಾಗೋರ್) ಮೇಲೆ ದಾಳಿ ನಡೆಸಿದರೆ ಉತ್ತಮ; ಅದಕ್ಕೆ ಆತ ಒಪ್ಪದಿದ್ದರೆ ಕಂಪೆನಿಗೆ ಎದುರಾಗುವ ದುರದೃಷ್ಟಕ್ಕೆ ಆತನೇ ಹೊಣೆಯಾಗಬೇಕಾಗುತ್ತದೆ. ‘ನೆರವು ಸಕಾಲದಲ್ಲಿ ಬಂದರೆ ಮೊದಲು ಚಂದ್ರನಗರದ ಮೇಲೆ ಮತ್ತು ಅನಂತರ ನವಾಬನ ವಿರುದ್ಧ ಯುದ್ಧ ಮಾಡುವೆ; ಇಲ್ಲವಾದರೆ ಮದ್ರಾಸಿಗೆ ಮರಳುವೆ. ಏನು ಮಾಡಬೇಕೆಂದು ಕೂಡಲೆ ತಿಳಿಸಿ’ ಎಂದು ರಾಬರ್ಟ್ ಕ್ಲೈವ್ ಚೆಂಡನ್ನು ಕಂಪೆನಿಯ ಕಲ್ಕತ್ತಾ ಕೌನ್ಸಿಲ್ನ ಅಂಗಳಕ್ಕೆ ಹಾಕಿದ. ಆಗ ಕೌನ್ಸಿಲ್ ಚಂದ್ರನಗರದ ಮೇಲೆ ದಾಳಿ ನಡೆಸುವ ಬಗ್ಗೆ ತೀರ್ಮಾನಿಸಿ ಅದರಂತೆ ಕ್ಲೈವ್ಗೆ ಸೂಚನೆ ನೀಡಿತು.
ಮಾರ್ಚ್ 14, 1757ರಂದು ಆ ಕಾರ್ಯಾಚರಣೆ ಆರಂಭವಾಯಿತು. ಮೊದಲಿಗೆ ಫ್ರೆಂಚ್ ನೆಲೆ(ಸೆಟ್ಲ್ಮೆಂಟ್) ಯನ್ನು ಉಡಾಯಿಸಿದರು; ಮತ್ತು ಅವರ ಹಡಗುಗಳನ್ನು ಮುಳುಗಿಸಿದರು. ಆದರೆ ಈ ಯುದ್ಧ ಕ್ಲೈವ್ ನವಾಬನಿಂದ ಕಲ್ಕತ್ತಾವನ್ನು ಮರಳಿ ವಶಮಾಡಿಕೊಂಡAತೆ ಸುಲಭದ ತುತ್ತು (ವಾಕೋವರ್) ಆಗಿರಲಿಲ್ಲ. ಫ್ರೆಂಚರು ಹಲವು ದಿನ ದಾಳಿಯನ್ನು ಎದುರಿಸಿದರು. ಆದರೆ ಕೆಲವು ಫ್ರೆಂಚ್ ಅಧಿಕಾರಿಗಳು ಪಿತೂರಿ ನಡೆಸಿದ ಕಾರಣ ಫ್ರೆಂಚರ ಕೋಟೆಗೆ ನುಗ್ಗಲು ಕ್ಲೈವ್ ಸೇನೆಗೆ ಸುಲಭವಾಯಿತು. ಹಾಗಿದ್ದರೂ ಫ್ರೆಂಚರ ಮದ್ದುಗುಂಡು ಪಡೆ ಬ್ರಿಟಿಷ್ ನೌಕಾಪಡೆಯ ಹಡಗುಗಳಿಗೆ ತೀವ್ರ ಪ್ರತಿರೋಧವನ್ನು ಒಡ್ಡಿತು. ಶತ್ರುಪಡೆಯ ಪ್ರತಿದಾಳಿಯ ಬಗ್ಗೆ ಮಾಡಿದ ವರದಿಯಲ್ಲಿ ಅಡ್ಮಿರಲ್ ವಾಟ್ಸನ್ “ಕೋಟೆಯಲ್ಲಿ ಶತ್ರುಗಳು 40 ಯೋಧರನ್ನು ಕೊಂದು 70 ಜನರಿಗೆ ಗಾಯವುಂಟು ಮಾಡಿದರು. ಸತ್ತವರಲ್ಲಿ ಫಸ್ಟ್ ಲೆಫ್ಟಿನೆಂಟ್ ಸ್ಯಾಮುವೆಲ್ ಪರೋ ಮತ್ತು ಟೈರ್ಸ್ನ ಮಾಸ್ಟರ್ ಇದ್ದಾರೆ” ಎಂದು ತಿಳಿಸಿದ್ದ.
ಫ್ರೆಂಚ್ ಬೆದರಿಕೆ ಅಂತ್ಯ
ಚಂದ್ರನಗರವನ್ನು ಗೆದ್ದ ಬಳಿಕ ಈಸ್ಟ್ ಇಂಡಿಯಾ ಕಂಪೆನಿ ಬಂಗಾಳದ ಫ್ರೆಂಚ್ ಬೆದರಿಕೆಯನ್ನು ಪೂರ್ತಿ ತೊಡೆದುಹಾಕಲು ನಿರ್ಧರಿಸಿತು. ಚಂದ್ರನಗರದಿಂದ ಎರಡೂ ಕಡೆಯ ಉನ್ನತಾಧಿಕಾರಿಗಳು (ಬ್ರಿಟಿಷರ ಕಡೆಯಿಂದ ಕ್ಲೈವ್ ಮತ್ತು ವಾಟ್ಸನ್) ಚರ್ಚಿಸಿದ ಬಳಿಕ ಫೋರ್ಟ್ ವಿಲಿಯಂಗೆ (ಕಲ್ಕತ್ತಾ) ಹೀಗೆ ಬರೆದರು: “ಚಂದ್ರನಗರ ಕೋಟೆಯನ್ನು ವಿಲೇವಾರಿ ಮಾಡಿದರೆ ಕಂಪೆನಿ ಹಾಗೂ ದೇಶದ (ಬ್ರಿಟನ್) ಹಿತಾಸಕ್ತಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅದನ್ನು ನಾಶ ಮಾಡಬೇಕು. ನವಾಬ ಸಿರಾಜ್ ಇನ್ನೊಮ್ಮೆ ನಮ್ಮ ಕಡೆಗೆ ಕೈ ಮಾಡಿದರೆ ಅಥವಾ ಫ್ರೆಂಚರು ಆತನಿಗೆ ಸೇನಾ ನೆರವು ನೀಡುವುದಾದರೆ ನಿರ್ವಹಣೆಗೆ ನಮ್ಮ ಎರಡು ಗ್ಯಾರಿಸನ್ (ಸೇನಾ ವಿಭಾಗ) ಸಾಕು. ಮುಖ್ಯವಾಗಿ ಮೆಡ್ರಾಸ್ ಟ್ರೂಪ್ಸ್ ಮದ್ರಾಸಿಗೆ ವಾಪಸಾದ ಮೇಲೆ ಅಷ್ಟಿದ್ದರೆ ಸಾಕು. ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿದರೆ ಸಂತೋಷವಾಗುತ್ತದೆ.”
ಚಂದ್ರನಗರ ಕೋಟೆಯನ್ನು ನಾಶಮಾಡುವ ನಿರ್ಧಾರ ಮತ್ತು ಹೂಗ್ಲಿ ನದಿಯ ಉದ್ದಕ್ಕೂ ಫ್ರೆಂಚರಿಗೆ ಸೇರಿದ ಪ್ರದೇಶವನ್ನು ಸುತ್ತುವರಿಯುವುದನ್ನು ಸಮರ್ಥಿಸಿಕೊಂಡು ಕ್ಲೈವ್ ಲಂಡನ್ಗೆ ಪತ್ರ ಬರೆದ: “ಚಂದ್ರನಗರವನ್ನು ದ್ವೀಪ(ಗಂಗಾನದಿಯಿಂದಾದ ಪರ್ಯಾಯದ್ವೀಪ)ಗಳ ಕಣಜ ಎಂದು ತಿಳಿಯಲಾಗುತ್ತದೆ. ಅದು ಪಾಂಡಿಚೇರಿ, ಯೂರೋಪ್ ಮತ್ತು ಭಾರತಗಳ ವ್ಯಾಪಾರಕೇಂದ್ರವಾಗಿದ್ದು, ಅದು ನಾಶವಾದರೆ ಫ್ರೆಂಚ್ ಕಂಪೆನಿ ಮತ್ತು ದೇಶಗಳಿಗೆ ಬಲವಾದ ಏಟು ಬಿದ್ದಂತಾಗುತ್ತದೆ. ಈ ಸಮೃದ್ಧ ಕಾಲೊನಿಯನ್ನು ನಾಶ ಮಾಡಿದರೆ ಈಸ್ಟ್ ಇಂಡಿಯಾ ಕಂಪೆನಿಗೆ ಹಲವು ಪ್ರಯೋಜನಗಳಾಗುತ್ತವೆ.” ಆಗ ರಾಜಕೀಯ ಮತ್ತು ಯುದ್ಧ ಎಲ್ಲವೂ ವ್ಯಾಪಾರಕೇಂದ್ರಿತವಾಗಿದ್ದವೆಂದು ಸುದೀಪ್ ಚಕ್ರವರ್ತಿ ತಮ್ಮ ಅಪೂರ್ವ ಗ್ರಂಥ ‘Plassey’ಯಲ್ಲಿ ವಿವರಿಸಿದ್ದಾರೆ.
ಪ್ಲಾಸಿಯುದ್ಧದ ಪೂರ್ವಭಾವಿ ಸ್ಥಿತಿಯಲ್ಲಿ ಫ್ರೆಂಚರು ಬಂಗಾಳದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದರು ಎಂಬುದು ಗಮನಾರ್ಹ. ಅವರು ನವಾಬ ಸಿರಾಜ್ ಮತ್ತು ಬ್ರಿಟಿಷರ ನಡುವೆ ಸಮತೋಲನದಲ್ಲಿ (ಬ್ಯಾಲೆನ್ಸ್) ಹೋಗಲು ಪ್ರಯತ್ನಿಸುತ್ತಿದ್ದರು. ಅವರು ಸಿರಾಜ್ ಜೊತೆ ನಿಲ್ಲುತ್ತಾರೆಂಬುದು ಬ್ರಿಟಿಷರ ಕಲ್ಪನೆಯಾದರೆ ಹಾಗೇಕೆ ಮಾಡುತ್ತಿಲ್ಲ ಎಂಬುದು ನವಾಬನಿಗಿದ್ದ ಗೊಂದಲ. ಚಂದ್ರನಗರದ ಮೇಲಿನ ಬ್ರಿಟಿಷ್ ದಾಳಿಯನ್ನು ಆ ನಿಟ್ಟಿನಲ್ಲಿ ನೋಡಬೇಕು.
ಏನಿದ್ದರೂ ಕ್ಲೈವ್ ಮಾಡಿದ್ದು ಸರಿಯಾಗಿಯೇ ಇತ್ತು. ಹೊಸ ಪರಿಸ್ಥಿತಿಯಲ್ಲಿ ‘ಗಂಗಾನದಿ ಪ್ರದೇಶದ ತಾಟಸ್ಥ್ಯ’ಕ್ಕೆ ಅರ್ಥವಿಲ್ಲ ಎಂಬುದನ್ನು ಆತ ಕಂಡುಕೊಂಡ. ನವಾಬ ಸಿರಾಜ್ ವಿಷಯದಲ್ಲೂ ಅದು ಸರಿಯಾಗಿತ್ತು. “ಹೇರಲಾದ ತಾಟಸ್ಥ್ಯದಲ್ಲಿ ಎಂತಹ ಆತ್ಮವಿಶ್ವಾಸ ಇರಲು ಸಾಧ್ಯ? ಅಲಿವರ್ದಿಯಂತಹ ನವಾಬನ ಭಯದಿಂದ ಅದು ಚಾಲ್ತಿಯಲ್ಲಿತ್ತು. ಈಗಿನ ನವಾಬ ಸಿರಾಜನಿಗೆ ಅದು ಲಗಾವಾಗುವುದಿಲ್ಲ” ಎಂದಾತ ಹೇಳಿದ್ದ. ಸಿರಾಜನಿಗೆ ತಾಟಸ್ಥ್ಯದಿಂದ ಲಾಭವಾಗಲಿಲ್ಲ ಎಂಬುದು ಕೂಡ ನಿಜ. ರಾಬರ್ಟ್ ಕ್ಲೈವ್ ಮುಂಜಾವ ಹಠಾತ್ ದಾಳಿ ನಡೆಸಿದ್ದ. ಇದರ ಅನಂತರ ಫ್ರೆಂಚರು ಸಿರಾಜ್ ಜೊತೆ ವ್ಯವಹಾರದಲ್ಲಿ ತುಂಬ ಎಚ್ಚರ ವಹಿಸುತ್ತಿದ್ದರು. ಒಟ್ಟಿನಲ್ಲಿ ಅವರಿಗೆ ಬ್ರಿಟಿಷರ ವಿರೋಧ ಮತ್ತು ನವಾಬ ಸಿರಾಜನ ಸಂಶಯಗಳು ಎದುರಾದವು. ಫ್ರೆಂಚರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿರಬೇಕೆಂದು ಕೂಡ ಸಿರಾಜ್ ಸಂಶಯಪಟ್ಟಿದ್ದ. ಆದರೆ ಅಂಥದೇನೂ ಇರಲಿಲ್ಲ. ಪ್ಲಾಸಿ ಯುದ್ಧಕ್ಕೆ ಕೆಲವು ದಿನ ಹಿಂದಿನವರೆಗೂ ಆತ ಫ್ರೆಂಚರ ಸಂಪರ್ಕ ಮಾಡುತ್ತಲೇ ಇದ್ದ. ಹೀಗಿರುವಾಗ ಫ್ರೆಂಚರು ಮತ್ತು ಸಿರಾಜ್ ಇಬ್ಬರನ್ನೂ ಮಟ್ಟಹಾಕಬೇಕೆಂದು ಚಾಣಾಕ್ಷ ಕ್ಲೈವ್ ಕಂಡುಕೊಂಡ.
ಗುಪ್ತವಾರ್ತೆಗಳ ಪಾತ್ರ
ಪ್ಲಾಸಿ ಯುದ್ಧದ ಸಂದರ್ಭದಲ್ಲಿ ಗೂಢಚರರು ಮತ್ತು ಗುಪ್ತವಾರ್ತೆಗಳ ಪಾತ್ರ ಮುಖ್ಯವಾಗಿತ್ತು. ರಾಬರ್ಟ್ ಕ್ಲೈವ್ಗೆ ನಿರ್ಧಾರಗಳನ್ನು ಕೈಗೊಳ್ಳಲು ಗುಪ್ತವಾರ್ತೆಗಳು ಸಹಕಾರಿಯಾದುದನ್ನು ಗಮನಿಸಬಹುದು. ಅದರಿಂದ ಅಡ್ಮಿರಲ್ ವಾಟ್ಸನ್ ಮತ್ತು ಕಲ್ಕತ್ತಾ ಕೌನ್ಸಿಲ್ ಮೇಲೆ ಒತ್ತಡ ಉಂಟಾಯಿತು. ಕ್ಲೈವ್ ಲಂಡನ್ ದೊರೆಯ ಆಸ್ಥಾನಕ್ಕೆ ಬರೆದ ಒಂದು ಪತ್ರದಲ್ಲಿ ಈ ಅಂಶಗಳಿವೆ: “ನವಾಬ ಸಿರಾಜ್ ಫ್ರೆಂಚರಿಗೆ ಬರೆದ ಕೆಲವು ಪತ್ರಗಳು ನನ್ನ ಕೈ ಸೇರಿವೆ. ನಾವು ಆತನನ್ನು ಏಕೆ ಪದಚ್ಯುತಗೊಳಿಸಬೇಕೆಂಬುದನ್ನು ಈ ಪತ್ರಗಳಿಂದ ತಿಳಿಯಬಹುದು. ಹಲವು ಪತ್ರಗಳು ಫ್ರೆಂಚ್ ಕಂಪೆನಿಗೆ ಬರೆದವಾದರೆ ಒಂದು ಪಾಂಡಿಚೇರಿಯ (ಫ್ರೆಂಚ್) ಕಮಾಂಡರ್ಗೆ ಬರೆದದ್ದು. ಇದು ಬ್ರಿಟಿಷರೊಂದಿಗೆ ಮಾಡಿಕೊಂಡ ಅಲಿಘರ್ ಒಪ್ಪಂದದಿಂದ ಕೆಲವೇ ದಿನಗಳ ಅನಂತರ (ಫೆಬ್ರುವರಿ ಉತ್ತರಾರ್ಧದಲ್ಲಿ) ಬರೆದದ್ದು. ಆದ್ದರಿಂದ ಹೂಗ್ಲಿ ಮೂಲಕ ಚಂದ್ರನಗರಕ್ಕೆ ದಾಳಿ ಮಾಡುವುದು ಅವಶ್ಯ” ಎಂದಾತ ಹೇಳಿದ್ದ.
ಮಾರ್ಚ್ ಮಧ್ಯದ ಹೊತ್ತಿಗೆ ಸಿರಾಜ್ ಫ್ರೆಂಚರಿಗೆ ಇನ್ನೊಂದು ಪತ್ರ ಬರೆದ. ಆಗ ಕ್ಲೈವ್ ಮತ್ತು ಫ್ರೆಂಚರ ನಡುವೆ ಘರ್ಷಣೆ ಆರಂಭವಾಗಿತ್ತು. ಅದರಲ್ಲಿ ಫ್ರೆಂಚ್ ಸೇನಾಧಿಕಾರಿ ಡಿಬಸ್ಸಿ ಚಂದ್ರನಗರದ ಕಮಾಂಡರ್ ನೆರವಿಗಾಗಿ ಬರುತ್ತಿದ್ದು, ಒರಿಸ್ಸಾ (ಒಡಿಶಾ) ಬಳಿ ಇರುವ ಸುದ್ದಿಯಿತ್ತು. “ನಮ್ಮ ನಾಯಬರು, ಸುಬಾಗಳೆಲ್ಲ ನಿಮಗೆ ನೆರವು ನೀಡುತ್ತಾರೆ” ಎಂದು ಕೂಡ ಅದರಲ್ಲಿತ್ತು. ದೊರೆತ ಮೂರನೇ ಪತ್ರ ಮಾರ್ಚ್ ಕೊನೆಯ ಹೊತ್ತಿಗೆ ಬರೆದದ್ದು. ಆಗ ಬ್ರಿಟಿಷ್ ಸೇನೆ ಫ್ರೆಂಚರನ್ನು ಸೋಲಿಸಿ ಚಂದ್ರನಗರವನ್ನು ಆಕ್ರಮಿಸಿ ಮುಗಿದಿತ್ತು. ಅದು ಸಿರಾಜ್ ಡಿ ಬಸ್ಸಿಗೆ ಬರೆದದ್ದು. ಅದರಲ್ಲಿ “ನೀವು (ಒರಿಸ್ಸಾದ) ಇಚ್ಛಾಪುರಕ್ಕೆ ಬಂದದ್ದು ತಿಳಿಯಿತು. ಇದರಿಂದ ನನಗೆ ಸಂತೋಷವಾಗಿದೆ. ನೀವು ಇಲ್ಲಿಗೆ ಬಂದೊಡನೆ ಭೇಟಿಯಾಗೋಣ. ಇಂಗ್ಲಿಷರ ಬಗ್ಗೆ ಏನು ಬರೆಯಲಿ? ಸುಮ್ಮನೆ ಜಗಳ ತೆಗೆದು ರೆನಾಲ್ಟ್ ಅವರ ಫ್ಯಾಕ್ಟರಿಯನ್ನು ವಶಪಡಿಸಿಕೊಂಡರು. ನಿಮ್ಮ ಚಂದ್ರನಗರದ ಮುಖ್ಯಸ್ಥ ಲಾ ಅವರೊಂದಿಗೆ ಜಗಳಾಡುವುದಕ್ಕೆ ಕಾಯುತ್ತಿದ್ದಾರೆ. ಇದರಲ್ಲಿ ನಾನು ಮಧ್ಯೆ ಪ್ರವೇಶಿಸಿ ಅವರ ಚಟುವಟಿಕೆಗಳನ್ನು ಬಂದ್ ಮಾಡುವೆ. ನೀವು ಬಾಲಸೋರ್ಗೆ ಬಂದಾಗ ನಿಮ್ಮ ನೆರವಿಗೆ ಲಾ ಅವರನ್ನು ಕಳುಹಿಸುತ್ತೇನೆ” ಎಂದಾತ ಸಂದೇಶ ಕಳುಹಿಸಿದ್ದ.
ಇದಕ್ಕೆ ಬೇರೆ ವ್ಯಾಖ್ಯಾನವೂ ಇದೆ. ನವಾಬ ಸಿರಾಜ್ ಹುಚ್ಚನಂತೆ ಬ್ರಿಟಿಷರನ್ನು ಅವರ ನೆಲದಲ್ಲೇ ಎದುರಿಸಬೇಕೆಂದು ಕಲ್ಕತ್ತಾ ಕಡೆಗೆ ಹೋದ; ಪ್ಲಾಸಿಯಲ್ಲಿ ಅವರನ್ನು ಎದುರಿಸಿದ. ಆದರೆ ಬ್ರಿಟಿಷರು ಅಷ್ಟರಲ್ಲಿ ಹೂಗ್ಲಿ ಪ್ರದೇಶದಲ್ಲಿ ಫ್ರೆಂಚರನ್ನು ಸೋಲಿಸಿ ಆಗಿತ್ತು. ಬ್ರಿಟಿಷರ ಪೂರೈಕೆ ಮಾರ್ಗವನ್ನು (ಸಪ್ಲೈ ರೂಟ್) ಕತ್ತರಿಸುವುದಕ್ಕೆ ಆತ ಆದ್ಯತೆ ನೀಡಬೇಕಿತ್ತು; ಅಥವಾ ಬ್ರಿಟಿಷರಿಗೆ ಆಹಾರಪದಾರ್ಥ ಸಿಗದಂತೆ ತನ್ನ ಪ್ರಜೆಗಳನ್ನು ಅವರ ವಿರುದ್ಧ ಪ್ರಚೋದಿಸಬೇಕಿತ್ತು. ಹಾಗೆ ಮಾಡಿದ್ದರೆ ಅವರು ಕೆಲವೇ ತಿಂಗಳಲ್ಲಿ ಕಲ್ಕತ್ತಾವನ್ನು ಬಿಟ್ಟು ಓಡುತ್ತಿದ್ದರು ಎನ್ನುವ ಒಂದು ಅಭಿಪ್ರಾಯವಿದೆ. ಆದರೆ ಕ್ಲೈವ್ ಮತ್ತು ವಾಟ್ಸನ್ರಂತಹ ಜೋಡಿಯ ಮುಂದೆ ಇಂತಹ ಕ್ರಮ ಸಾಧ್ಯವಿತ್ತೇ ಎನ್ನುವ ಪ್ರಶ್ನೆ ಇದ್ದೇ ಇದೆ; ಇದೆಲ್ಲ ‘ರೆ’ಗಳ ವಿಷಯ.
ದರ್ಬಾರ್ ಬ್ರಿಟಿಷ್ ಪರ
ಯೂರೋಪಿನ ಏಳು ವರ್ಷಗಳ ಯುದ್ಧದ ಕಾರಣದಿಂದ ಬ್ರಿಟಿಷರು ಬಂಗಾಳದಲ್ಲಿ ಫ್ರೆಂಚರ ಮೇಲೆ ಆಕ್ರಮಣ ಮಾಡದೆ ಬಿಡುತ್ತಿರಲಿಲ್ಲ ಎನ್ನುವುದು ಒಪ್ಪತಕ್ಕ ಮಾತು. ಬ್ರಿಟಿಷರು ಕಲ್ಕತ್ತಾವನ್ನು ಸಿರಾಜ್ನಿಂದ ವಾಪಸು ತೆಗೆದುಕೊಂಡ ಬೆನ್ನಿಗೇ (ಜನವರಿ 1757) ಬಂಗಾಳದಲ್ಲಿ ಯುದ್ಧ ಶುರುವಾಯಿತು. ಫ್ರೆಂಚರ ಪರವಾಗಿ ರೆನಾಲ್ಟ್ ಸಿರಾಜ್ ಜೊತೆ ಒಪ್ಪಂದ ಮಾಡಿಕೊಳ್ಳುವ ಆತಂಕ ಕೂಡ ಇತ್ತು. ಒಂದು ಮಾತು ಈ ರೀತಿ ಕೂಡ ಇದೆ – ಬ್ರಿಟಿಷರು ತಮ್ಮ ಉಡುಗೊರೆ ಮತ್ತು ಸುಳ್ಳುಗಳ ಮೂಲಕ ಮುರ್ಷಿದಾಬಾದ್ನ ದರ್ಬಾರನ್ನು ಬಹುತೇಕ ಪೂರ್ತಿ ಭ್ರಷ್ಟಗೊಳಿಸಿದ್ದರು ಎಂಬುದಾಗಿ. ನಿಜವೆಂದರೆ, ನವಾಬ ಸಿರಾಜ್ನನ್ನು ಹೊರತುಪಡಿಸಿ ಇಡೀ ದರ್ಬಾರ್ ಇಂಗ್ಲಿಷರ ಪರ ಎಂಬಂತಿತ್ತು. ಒಟ್ಟಿನಲ್ಲಿ ಬ್ರಿಟಿಷರಿಗೆ ನವಾಬನ ಪದಚ್ಯುತಿ ಅನಿವಾರ್ಯವಾಗಿತ್ತು; ಮತ್ತು ಬಂಗಾಳದಲ್ಲಿ ಫ್ರೆಂಚರು ಬ್ರಿಟಿಷರಿಗೆ ನಿಜವಾದ ಸವಾಲು ಆಗಿರಲಿಲ್ಲ.
ಈ ನಡುವೆ ನವಾಬನ ಮೇಲೆ ಪ್ರಭಾವ ಬೀರುವ ಫ್ರೆಂಚರ ಪ್ರಯತ್ನ ವಿಫಲವಾಯಿತು. ಅದಕ್ಕೆ ಕಾರಣ ಸೇಠ್ಗಳು; ಮತ್ತು ಆಸ್ಥಾನದ ಬಹಳಷ್ಟು ಜನ ನವಾಬನ ವಿರುದ್ಧದ ಪಿತೂರಿಯಲ್ಲಿ ಭಾಗಿಗಳಾಗಿದ್ದರು. ಬ್ರಿಟಿಷರು ಮೀರ್ ಜಾಫರ್ ಮತ್ತು ಪ್ರಮುಖ ಅಮೀರರಿಗೆ ಬಲೆ ಬೀಸಿದ್ದರು. ಅಜ್ಜ ಅಲಿವರ್ದಿ ಕಾಲದ ಹೆಚ್ಚಿನ ಮಂತ್ರಿಗಳು ಸಿರಾಜ್ಗೆ ವಿರುದ್ಧವಾಗಿದ್ದರು. ಅವನ ದುರಹಂಕಾರ ಮತ್ತು ಸಿಟ್ಟಿನ ವರ್ತನೆ ಅದಕ್ಕೆ ಕಾರಣ. ನವಾಬ ತಾನು ಬರೆಸಿದ ಪತ್ರಗಳನ್ನು ಓದುತ್ತಿರಲಿಲ್ಲ; ಇತರ ಮೂರ್ (ಮುಸ್ಲಿಂ ರಾಜರು)ಗಳಂತೆ ಆತ ಕೂಡ ತನ್ನ ಪತ್ರಗಳಿಗೆ ಸಹಿ ಹಾಕುತ್ತಿರಲಿಲ್ಲ. ಇದರಿಂದಾಗಿ ಆತ ಕಳುಹಿಸಿದ ಸಂದೇಶಗಳಲ್ಲೇ ಪಿತೂರಿ ನಡೆದಿರಲೂಬಹುದು.
ಬಂಗಾಳದಲ್ಲಿ ಬ್ರಿಟಿಷರಿಗೆ ದೊರೆತ ಯಶಸ್ಸಿನಲ್ಲಿ ಸೇಠ್ಗಳೇ ಮೆಕಿಯಾವೆಲ್ಲಿಗಳೆಂದು (ಸೂತ್ರಧಾರರು) ಅಭಿಪ್ರಾಯಪಡಲಾಗಿದೆ. ಫ್ರೆಂಚರು ಸೇಠ್ಗಳಲ್ಲಿ ನೆರವು ಕೇಳಿದಾಗ ಫ್ರೆಂಚ್ ಕಂಪೆನಿಯಿಂದ ತಮಗೆ (ಹಣ) ಬಾಕಿಯಿದೆ ಎನ್ನುವ ಕಾರಣವನ್ನು ಮುಂದೊಡ್ಡಿ ಅದಕ್ಕೆ ನಿರಾಕರಿಸಿದ್ದರು. ಮುಖ್ಯವಾಗಿ ಅವರು (ಸೇಠ್ಗಳು) ಇನ್ನೊಬ್ಬ ನವಾಬನನ್ನು ಅಧಿಕಾರಕ್ಕೆ ತರಲು ಬಯಸಿದ್ದರು. ‘ಈ ಕುರಿತು ಮಾತನಾಡಬಾರದು’ ಎಂದು ಹೇಳುತ್ತಿದ್ದರು. ಉದ್ಯಮಿ ಉಮಾಚಂದ್ ಅಲ್ಲಿ ಇಂಗ್ಲಿಷರ ಏಜೆಂಟ್ ಆಗಿದ್ದ.
ಫ್ರೆಂಚರ ಎಲ್ಲ ಆಸ್ತಿಯನ್ನು ನಿಮಗೆ ಕೊಡಿಸುತ್ತೇನೆಂದು ರಾಬರ್ಟ್ ಕ್ಲೈವ್ ಸೇಠ್ಗಳಿಗೆ ಭರವಸೆ ನೀಡಿದ್ದ. ಫ್ರೆಂಚರಿಂದ ಬ್ಯಾಂಕರ್ಗಳಿಗೆ ಬಾಕಿ ಇದ್ದುದು ಅದಕ್ಕೆ ಕಾರಣ; ಮತ್ತು ಫ್ರೆಂಚರು ಕಷ್ಟದಲ್ಲಿದ್ದರು. ಈ ಯುವಕನಿಗೆ (ಸಿರಾಜ್) ತನ್ನ ಮೇಲೆ ನಿಯಂತ್ರಣವಿಲ್ಲ. ನಡತೆಯಲ್ಲಿ ದೃಢತೆಯಿಲ್ಲ. ಹೇರಮ್ (ಅಂತಃಪುರ)ನಲ್ಲಿ ಹೆಂಡಂದಿರು ಮತ್ತು ಸೇವಕಿಯರ ನಡುವೆ ಇದ್ದಾಗ ಏನು ಹೊಳೆಯಿತೋ ಅದನ್ನು ಮಾಡುವುದೇ ಅವನ ಸ್ವಭಾವ ಎಂಬ ಮಾತು ಎಲ್ಲೆಡೆ ಕೇಳುತ್ತಿತ್ತು.
ಸಂಧಾನ ಯತ್ನ
ಒಟ್ಟಿನಲ್ಲಿ ಬ್ರಿಟಿಷ್-ಫ್ರೆಂಚ್ ಘರ್ಷಣೆ ಅನಿವಾರ್ಯ ಎಂಬಂತಿತ್ತು. ಬ್ರಿಟಿಷ್-ಫ್ರೆಂಚ್ ಎರಡೂ ಕಡೆಯ ಪ್ರತಿನಿಧಿಗಳನ್ನು ಸಿರಾಜ್ ದರ್ಬಾರಿಗೆ ಕರೆದ. ಸಂಜೆ ದರ್ಬಾರಿಗೆ ಬ್ರಿಟಿಷರ ಕಡೆಯಿಂದ ಅವರ ಫ್ಯಾಕ್ಟರಿ ಮುಖ್ಯಸ್ಥ ವಾಟ್ಸ್ ಬಂದರೆ ಫ್ರೆಂಚರ ಕಡೆಯಿಂದ ಮುಖ್ಯಾಧಿಕಾರಿ ಲಾ ಬಂದಿದ್ದ. ಇಬ್ಬರಿಗೂ ತಟಸ್ಥ ಆಗಿರುವಂತೆ ಹೇಳಿದ ನವಾಬ ಶಾಂತಿಯ ಪ್ರತಿಜ್ಞೆ ಮಾಡುವಂತೆ ಸೂಚಿಸಿದ. ಅಡ್ಮಿರಲ್ ವಾಟ್ಸನ್ಗೆ ಪತ್ರ ಬರೆಯಿರಿ ಎಂದು ಹೇಳುವ ಮೂಲಕ ವಾಟ್ಸ್ ಜಾಣತನದಿಂದ ತಪ್ಪಿಸಿಕೊಂಡ. ಆಗ ಸಿರಾಜ್ ಸಿಟ್ಟಿಗೆದ್ದು “ಅದೇಕೆ? ಹಾಗಾದರೆ ನಾನು ಯಾರು?” ಎಂದು ಅಬ್ಬರಿಸಿದ. ಅದರ ಬೆನ್ನಿಗೇ ಆಸ್ಥಾನದಲ್ಲಿದ್ದ ಎಲ್ಲರೂ “ನಾವು ನವಾಬರ ಆದೇಶವನ್ನು ಪಾಲಿಸುತ್ತೇವೆ” ಎಂದು ಬೊಬ್ಬೆ ಹಾಕಿದರು.
ಇದರಿಂದ ಪರಿಣಾಮವೇನೂ ಆಗಲಿಲ್ಲ. ಸಿರಾಜ್ಗೆ ಅಡ್ಮಿರಲ್ ವಾಟ್ಸನ್ ಪತ್ರ ತಲಪುವ ಮುನ್ನವೇ ಕ್ಲೈವ್ ಮತ್ತು ವಾಟ್ಸನ್ ಚಂದ್ರನಗರದ ಮೇಲೆ ದಾಳಿ ನಡೆಸಿದ್ದರು. ಮಾರ್ಚ್ 15ರಂದು ಲಾ ನವಾಬ ಸಿರಾಜ್ ಬಳಿ ಹೋಗಿ ಬ್ರಿಟಿಷರು ದಾಳಿ ನಡೆಸಿದ್ದಾರೆಂದು ಹೇಳಿದಾಗ ಆತ ಆದೇಶ-ಪ್ರತಿ ಆದೇಶಗಳ ಗೊಂದಲದಲ್ಲಿದ್ದ. ಅದೇ ದಿನ ಫ್ರೆಂಚರು ಬ್ರಿಟಿಷ್ ಸೈನಿಕರ ಮುಂದುವರಿಕೆಯನ್ನು ತಡೆದಿದ್ದಾರೆನ್ನುವ ಸುದ್ದಿ ಬಂತು. ಸಿರಾಜ್ ತನ್ನ ಸೈನ್ಯಕ್ಕೆ ಹೊರಡುವಂತೆ ಆದೇಶ ಮಾಡಿ, ಕೂಡಲೆ ಅದು ವಾಪಸಾಗುವಂತೆ ಇನ್ನೊಂದು ಆದೇಶ ಹೊರಡಿಸಿದ. ಮರುದಿನ ಫ್ರೆಂಚರು ಹಿಂದೆ ಸರಿದು ಕೋಟೆಯನ್ನು ಸೇರಿಕೊಂಡರು ಎನ್ನುವ ವಾರ್ತೆ ಬಂತು. ಅಂದರೆ ಕೋಟೆಯನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದರ್ಥ. ಇದು ಸೋಲಿನ ಮುನ್ಸೂಚನೆಯೂ ಹೌದು. ಮತ್ತೆ ಫ್ರೆಂಚರು ಶತ್ರುಸೈನ್ಯವನ್ನು ತಡೆಹಿಡಿದಿದ್ದಾರೆಂಬ ಸುದ್ದಿ ಕೂಡ ಬಂತು.
ಕೈಕಟ್ಟಿ ಕುಳಿತ ಸಿರಾಜ್
ಹೀಗೆ ಬ್ರಿಟಿಷರಿಂದ ಚಂದ್ರನಗರದ ಮುತ್ತಿಗೆಯ ವೇಳೆ ಉದ್ದಕ್ಕೂ ಮುರ್ಷಿದಾಬಾದ್ನಲ್ಲಿ ನಿಯಂತ್ರಿತ ಗೊಂದಲವಿತ್ತು. ತನ್ನ ನಡೆಗೆ ನವಾಬ ಸಿರಾಜ್ ನೀಡಿದ ಸಮರ್ಥನೆಯೆಂದರೆ ಸೈನ್ಯವು ಮುರ್ಷಿದಾಬಾದ್ನಿಂದ ಚಂದ್ರನಗರಕ್ಕೆ ಹೋಗಲು ಕೆಲವು ವಾರ ಬೇಕು; ಅದೇ ವೇಳೆ ದಾಳಿಕೋರ ಬ್ರಿಟಿಷರಿಗೆ ಅದು ತುಂಬ ಹತ್ತಿರ. ಫ್ರೆಂಚರ ಮೈತ್ರಿ ಮುಂದೆ ಸಹಕಾರಿ ಆಗಬಹುದು; ಆದರೆ ಚಂದ್ರನಗರದ ಪತನದ ಬಳಿಕ ಅವರ ಮೈತ್ರಿಯಿಂದ ಯಾವುದೇ ಪ್ರಯೋಜನ ಆಗಲಾರದು. ಇನ್ನು ಹೂಗ್ಲಿ ಸಮೀಪದ ಏಕೈಕ ಕೋಟೆಯೆಂದರೆ ಕಟ್ವಾ. ಅದು ಪ್ಲಾಸಿಯಿಂದ ಒಂದು ದಿನದ ಪ್ರಯಾಣದಷ್ಟು ದೂರದಲ್ಲಿತ್ತು.
ಚಂದ್ರನಗರದ ಸೋಲಿನ ಅನಂತರ ಬ್ರಿಟಿಷರು ಮುರ್ಷಿದಾಬಾದ್ ಕಡೆಗೆ ಹೋಗುವುದು ನಿಶ್ಚಿತ ಎಂಬ ವಾದವನ್ನು ಮುಂದಿಟ್ಟು ಫ್ರೆಂಚ್ ಕಂಪೆನಿ ಮುಖ್ಯಸ್ಥ ಲಾ ಕ್ಲೈವ್- ವಾಟ್ಸನ್ ತಡೆಯ ಬಗ್ಗೆ ಪ್ರಯತ್ನವನ್ನು ಮುಂದುವರಿಸಿದ. ಆತ ಬರೆದ ಪತ್ರವನ್ನು ಬ್ರಿಟಿಷ್ ಕಂಪೆನಿಯ ವಾಟ್ಸ್ ವಶಪಡಿಸಿಕೊಂಡ. ಬ್ರಿಟಿಷ್ ಸೈನ್ಯ ನೇರವಾಗಿ ಮುರ್ಷಿದಾಬಾದ್ಗೆ ಬರುತ್ತದೆಂದು ಹೇಳಿ ಲಾ ನವಾಬನ ಸಹಕಾರ ಕೇಳಿದ್ದ; ಮತ್ತು ತಮ್ಮ ಫ್ಯಾಕ್ಟರಿಗೆ ಹೆಚ್ಚಿನ ಭದ್ರತೆ ಏರ್ಪಡಿಸುವ ಬಗ್ಗೆ ಅನುಮತಿಯನ್ನು ಕೇಳಿದ್ದ.
ಆದರೆ ಯುವ ನವಾಬ ಸಿರಾಜ್ ಮಾಡಿದ್ದೇ ಬೇರೆ. “ನೀವು (ಫ್ರೆಂಚರು) ಹೇಳಿದ ಹಾಗೆ ಮಾಡಿದರೆ ಈಗಿನ ಸ್ಥಿತಿಯಲ್ಲಿ ಬ್ರಿಟಿಷರು ನಮ್ಮ-ನಿಮ್ಮ ಇಬ್ಬರ ಮೇಲೂ ಏರಿ ಬರುತ್ತಾರೆ. ಆಗ ರಕ್ಷಣೆ ಅಸಾಧ್ಯ” ಎಂದಾತ ಹೇಳಿದ. ಅದಕ್ಕಾಗಿ ಲಾ ಫ್ಯಾಕ್ಟರಿಯನ್ನು ಸಿರಾಜ್ಗೆ ಒಪ್ಪಿಸಲು ನಿರ್ಧರಿಸಿದ. ಕೆಲವು ಶಸ್ತ್ರಾಸ್ತ್ರಗಳು, ಆಹಾರಪದಾರ್ಥ, ಸ್ವಲ್ಪ ಹಣವನ್ನು ತೆಗೆದುಕೊಂಡು ಫ್ಯಾಕ್ಟರಿಯನ್ನು ನವಾಬನಿಗೆ ಒಪ್ಪಿಸಿದ. ಲಾನನ್ನು ಶರಣಾಗತನನ್ನಾಗಿ ಮಾಡಿಸಲು ಬ್ರಿಟಿಷರು ನವಾಬನ ಮೇಲೆ ಒತ್ತಡವನ್ನು ತಂದರು. ಅದು ನಡೆಯಲಿಲ್ಲ; ಆದರೆ ಬ್ರಿಟಿಷರ ಕೈ ಮೇಲಾಗುವುದು ನಿಶ್ಚಯವಾದಾಗ ಲಾ ಊರು ಬಿಡಲು ನಿರ್ಧರಿಸಿದ.
ಇನ್ನೊಂದೆಡೆ ವಾಟ್ಸ್ ಪ್ಲಾಸಿ ಪಿತೂರಿಯನ್ನು ಚಾಲ್ತಿಯಲ್ಲಿಟ್ಟು ಮುಂದುವರಿಸಿದ. ಈಸ್ಟ್ ಇಂಡಿಯಾ ಕಂಪೆನಿಯವರು ಕಾಸಿಂಬಜಾರ್ನಲ್ಲಿ ತಮ್ಮ ಸೈನ್ಯವನ್ನು ಬೆಳೆಸುತ್ತಹೋದರು. ಸೈನ್ಯ ಬಿಟ್ಟು ಫ್ರೆಂಚ್ ಪಡೆಗೆ ಸೇರುವವರೆಂದು ನಟನೆ ಮಾಡುತ್ತ ತುಂಬ ಸೈನಿಕರು ನವಾಬನ ಕಡೆಯಿಂದ (ಮೂರಿಷ್ಕ್ಯಾಂಪ್) ಈಚೆಗೆ ಬಂದರು; ಅವರನ್ನು ಯಾರೂ ತಡೆಯಲಿಲ್ಲವಂತೆ!
ಈ ನಡುವೆ ಲಾ ಫ್ರೆಂಚ್ ಫ್ಯಾಕ್ಟರಿ ಬಳಿಯ ಮಾಹಿತಿಯನ್ನು ಸಂಗ್ರಹಿಸುತ್ತಲೇ ಇದ್ದ. ಆಗ ಬ್ರಿಟಿಷರು ಶಸ್ತಾçಸ್ತç ಸಹಿತ ನದಿಯ ಮೇಲ್ಭಾಗಕ್ಕೆ ಬರುತ್ತಿದ್ದಾರೆನ್ನುವ ಸುದ್ದಿ ಸಿರಾಜ್ ಮತ್ತು ಲಾ ಇಬ್ಬರಿಗೂ ಆಘಾತ ನೀಡಿತು. ಆತಂಕಗೊAಡ ಸಿರಾಜ್ ಎಲ್ಲಿಗೂ ಹೋಗದಿರುವಂತೆ ಲಾಗೆ ಸೂಚಿಸಿದ. ಏಪ್ರಿಲ್ 13ರಂದು (1757) ತನ್ನ ದರ್ಬಾರಿಗೆ ಬರುವಂತೆ ಸಿರಾಜ್ ಫ್ರೆಂಚರಿಗೆ ಹೇಳಿದ. ಅಂದು ಪೂರ್ವಾಹ್ನ ಅಲ್ಲಿಗೆ ಹೊರಟ ಫ್ರೆಂಚ್ ಮುಖ್ಯಾಧಿಕಾರಿ ಲಾ ಅಪರಾಹ್ನ 2 ಗಂಟೆ ದಾಟಿದರೂ ತಾನು ಬಾರದಿದ್ದರೆ ತನ್ನ ರಕ್ಷಣೆಯ ಬಗ್ಗೆ 40 ಜನ ಸೈನಿಕರನ್ನು ಕಳುಹಿಸಿ ಎಂದು ತಮ್ಮವರಿಗೆ ಹೇಳಿದ್ದ. ಲಾ ಅಲ್ಲಿಗೆ ತಲಪುವಾಗ ಸಿರಾಜ್ ತನ್ನ ಬೆಳಗಿನ ಸಭೆ ಮುಗಿಸಿ, ಮಧ್ಯಾಹ್ನದ ಹೇರಮ್ ಕೂಟದಲ್ಲಿದ್ದ. ಲಾನನ್ನು ಒಂದು ಕಡೆ ಕೂರಿಸಿದರು; ಮಧ್ಯಾಹ್ನದ ಊಟ ಬಂತು (ಅದು bad dinner ಆಗಿತ್ತಂತೆ).
ಸಂಧಾನವೆ, ಹೇರಿಕೆಯೆ?
ಸಂಜೆ 5 ಗಂಟೆಯಾದರೂ ನವಾಬನ ಸುಳಿವಿಲ್ಲ. ಏಕೆ ಕರೆಸಿದ್ದು ಎನ್ನುವ ಬಗ್ಗೆ ಲಾ ಬಹಳ ಕಷ್ಟಪಟ್ಟು ಒಬ್ಬ ಅಧಿಕಾರಿಯಿಂದ (ಅರ್ಜ್ಬೇಗಿ) ಉತ್ತರ ಪಡೆದುಕೊಂಡ. ಫ್ರೆಂಚ್ ಫ್ಯಾಕ್ಟರಿಯಲ್ಲಿ ಸೇನಾ ಸಿಬ್ಬಂದಿಯ ಸಂಖ್ಯೆ ಬೆಳೆಯುತ್ತಿದೆ ಎಂದು ಬ್ರಿಟಿಷರಿಂದ ನಿರಂತರ ದೂರುಗಳು ಬಂದಿವೆ. ಆದ್ದರಿಂದ ಲಾ ಮತ್ತು ವಾಟ್ಸ್ ಇಬ್ಬರನ್ನೂ ಕರೆಯಿಸಿ ಪರಸ್ಪರ ಸಂಬಂಧವನ್ನು ಸರಿಮಾಡೋಣವೆಂದು ನವಾಬರು ಹೇಳಿದ್ದಾರೆ – ಎಂದು ಆ ಅಧಿಕಾರಿ ತಿಳಿಸಿದ. ಜೊತೆಗೆ ನವಾಬನ ಅಧಿಕಾರಿ “ನವಾಬರಿಗೆ ನಿಮ್ಮ ನಡತೆಯಿಂದ ತುಂಬ ಸಮಾಧಾನವಾಗಿದೆ. ಅವರು ನಿಮಗೆ ಒಳಿತನ್ನು ಹಾರೈಸಿದ್ದಾರೆ” ಎನ್ನುವ ಒಂದು ಪ್ರೋತ್ಸಾಹಕ ನುಡಿಯನ್ನು ಕೂಡ ಆತ ಫ್ರೆಂಚ್ ಅಧಿಕಾರಿ ಲಾಗೆ ತಿಳಿಸಿದ.
ಬ್ರಿಟಿಷ್ ಅಧಿಕಾರಿ ವಾಟ್ಸ್ ಲಾನನ್ನು ಕರೆದಾಗಲೇ ತನ್ನನ್ನು ಕರೆದ ಬಗ್ಗೆ ಕೋಪವನ್ನು ಪ್ರಕಟಿಸಿದ. ಆದರೆ ಅಲ್ಲಿ ಸಿರಾಜ್ ಇರಲಿಲ್ಲ. ವಾಟ್ಸ್ ಜೊತೆ ಸೇಠ್ಗಳ ಏಜೆಂಟ್ ಇದ್ದ. ಕುಶಲೋಪರಿ ಆದ ಮೇಲೆ ಒಬ್ಬ ದಿವಾನ ಲಾನನ್ನು ನೇರವಾಗಿ ಕೇಳಿದ: “ನಿಮಗೆ ವಾಟ್ಸ್ಗೆ ಹೇಳುವುದಕ್ಕೆ ಏನಾದರೂ ಇದೆಯೆ?” ಎಂಬುದಾಗಿ. ಅದಕ್ಕೆ ಲಾ ಯಾವುದೇ ಉತ್ತರವನ್ನು ನೀಡಲಿಲ್ಲ.
ಆತನ ಅಭಿಪ್ರಾಯ ಏನೆಂಬ ಬಗ್ಗೆ ವಾಟ್ಸ್ಗೆ ಯಾವುದೇ ಸಂದೇಹ ಇರಲಿಲ್ಲ. ಆತ ಲಾ ಬಳಿ ನೇರವಾಗಿ “ನಿಮ್ಮ ಫ್ಯಾಕ್ಟರಿಯನ್ನು ನನಗೆ ಒಪ್ಪಿಸಿ ಕಲ್ಕತ್ತಾಗೆ ಮರಳುವಿರಾ? ನಿಮ್ಮನ್ನು ಹಿಂದಿನಂತೆಯೇ ಚಂದ್ರನಗರದ ಗೌರವಾನ್ವಿತ ವ್ಯಕ್ತಿಯಾಗಿ (gentleman) ನೋಡಿಕೊಳ್ಳುತ್ತೇವೆ. ಇದು ನವಾಬರ ಮನದಿಚ್ಛೆ” ಎಂದು ತಿಳಿಸಿದ. ಅದಕ್ಕೆ ನಿರಾಕರಿಸಿದ ಲಾ “ನನ್ನ ಘನತೆ-ಗೌರವಗಳ ವಿಷಯ ನೆನಪಿರಲಿ. ನಾನು ಮತ್ತು ನನ್ನ ಸಹೋದ್ಯೋಗಿಗಳು ಯಾರ ಅಡಿಯಾಳುಗಳೂ ಅಲ್ಲ; ಮುಕ್ತ ಜನರಾಗಿದ್ದೇವೆ. ಒಂದು ವೇಳೆ ನಾನು ಶರಣಾಗುವುದಾದರೆ ಫ್ರೆಂಚ್ ಫ್ಯಾಕ್ಟರಿಯನ್ನು ನವಾಬ ಸಿರಾಜ್ ಅವರಿಗೆ ಒಪ್ಪಿಸುವೆ” ಎಂದು ಕಡ್ಡಿ ಮುರಿದಂತೆ ಹೇಳಿದ. ನಿರೀಕ್ಷಿತವೆಂಬಂತೆ ಅದು ಲಾಗೆ ಇಷ್ಟವಾಗಲಿಲ್ಲ.
ಸಿಡಿದೆದ್ದ ಫ್ರೆಂಚ್ ಅಧಿಕಾರಿ
ಆಗ ಅಲ್ಲಿದ್ದ ಕೆಲವು ಆಸ್ಥಾನಿಕರು ಲಾನನ್ನು ಬದಿಗೆ ಕರೆದು “ನವಾಬರು ಇಂಗ್ಲಿಷರ ಜೊತೆ ಸೌಹಾರ್ದಭಾವ (good understanding)ದಲ್ಲಿ ಇರಲು ಬಯಸುವುದರಿಂದ ನೀವಿದನ್ನು ಒಪ್ಪಿಕೊಳ್ಳುವುದನ್ನು ಬಯಸುತ್ತಾರೆ” ಎಂದು ತಿಳಿಸಿದರು. ಆಗ ಲಾ ಒಮ್ಮೆಲೇ ಸಿಡಿದು ಗಟ್ಟಿಯಾಗಿ ನಿಂತು, ತಾನು ಕಾಸಿಂಬಜಾರ್ನಲ್ಲಿ ಉಳಿದುಕೊಂಡು ಬ್ರಿಟಿಷರ ಮಹತ್ತ್ವಾಕಾಂಕ್ಷಿಯೋಜನೆಗಳನ್ನು ದಿಟ್ಟವಾಗಿ ವಿರೋಧಿಸುವುದಾಗಿ ಹೇಳಿದ. ಆಗ ಆಸ್ಥಾನಿಕರು “ಸರಿ, ಸರಿ. ನೀವೇನು ಮಾಡಬಲ್ಲಿರಿ? ನೀವು ಸುಮಾರು ನೂರು ಜನ ಯೂರೋಪಿಯನ್ನರು. ನವಾಬರಿಗೆ ನಿಮ್ಮ ಆವಶ್ಯಕತೆ ಇಲ್ಲ. ನೀವು ಜಾಗ ಬಿಡಬೇಕಾಗುತ್ತದೆ. ಆದ್ದರಿಂದ ನೀವು ವಾಟ್ಸ್ ನೀಡಿದ ಆಫರ್ನ್ನು ಒಪ್ಪಿಕೊಳ್ಳುವುದೇ ಕ್ಷೇಮ” ಎಂದು ಸಮಾಧಾನಪಡಿಸಲು ಯತ್ನಿಸಿದರು.
ಅನಂತರ ಒಬ್ಬ ಆಸ್ಥಾನಿಕ ವಾಟ್ಸ್ ಜೊತೆ ಚರ್ಚಿಸಿ ಬಳಿಕ ನವಾಬನ ಬಳಿಗೆ ಹೋದ. ಲಾ ಅಲ್ಲೇ ಇದ್ದ. ಅನಂತರ ಅಧಿಕಾರಿ (ಅರ್ಜ್ಬೇಗಿ), ಸೇಠ್ನ ಏಜೆಂಟ್, ಬ್ರಿಟಿಷರ ಕೆಲವು ಏಜೆಂಟರು ಹಾಗೂ ಆಸ್ಥಾನದ ಕೆಲವು ಅಧಿಕಾರಿಗಳು ಫ್ರೆಂಚ್ ಅಧಿಕಾರಿಯ ಬಳಿಗೆ ಬಂದು “ವಾಟ್ಸ್ ಹೇಳುವ ರೀತಿಯಲ್ಲೇ ನೀವು ನಡೆದುಕೊಳ್ಳಬೇಕೆಂದು ನವಾಬರು ಆದೇಶ ಮಾಡಿದ್ದಾರೆ” ಎಂದು ತಿಳಿಸಿದರು. ಲಾ ಅದಕ್ಕೆ ಪ್ರತಿಭಟಿಸಿ ನವಾಬರ ಭೇಟಿಗೆ ಅವಕಾಶವನ್ನು ಕೇಳಿದ. ಆಗ ಗುಂಪು “ನವಾಬರು ನಿಮ್ಮನ್ನು ಕಾಣಲು ಇಷ್ಟಪಡುವುದಿಲ್ಲ” ಎಂದು ಹೇಳಿತು. ಅದಕ್ಕೆ ಲಾ “ನನ್ನನ್ನು ಕರೆದವರು ನವಾಬ ಸಿರಾಜ್ ಅವರು. ಅವರನ್ನು ಕಾಣದೆ ನಾನು ಇಲ್ಲಿಂದ ಕದಲುವುದಿಲ್ಲ” ಎಂದು ದೃಢವಾಗಿ ಹೇಳಿದ.
ಅದಕ್ಕೆ ಮೊದಲೇ ಲಾ ಕಡೆಯ ಸೈನಿಕರು ಅಲ್ಲಿಗೆ (ಮುರ್ಷಿದಾಬಾದ್) ಬಂದಿದ್ದರು. ಹೊರಗೆ ಆತನನ್ನು ಕಾಣದೆ ಅರಮನೆಗೆ ಬಂದರು. ಮುಂದಿನ ಮಾತುಗಳು ಸೇಠ್ಗಳ ದೃಷ್ಟಿಯಿಂದ ಮುಖ್ಯ. ಅರ್ಜ್ಬೇಗಿಗೆ ಇದರಿಂದ ಏನಾಗುವುದೆಂದು ಗೊತ್ತಿಲ್ಲ. “ಹಾಗಾದರೆ ನಾವು ಈ ವಿಷಯದಲ್ಲಿ ಅಮುಖ್ಯರಾ?” ಎಂದಾತ ಕೇಳಿದ. ಅದಕ್ಕೆ ಲಾ ತಾನು ಮಾತನಾಡುವುದು ನವಾಬರಲ್ಲಿ ಮಾತ್ರ ಎಂದು ಪುನರುಚ್ಚರಿಸಿದ. ಅಲ್ಲಿಗೆ ಗುಂಪು ಮರಳಿತು. ಇಬ್ಬರೇ ಮಾತನಾಡುವುದಕ್ಕೆ ಸಿರಾಜ್ ಒಪ್ಪಿದ. ಇದೆಲ್ಲದರಿಂದ ತಿಳಿಯುವ ಅಂಶವೆAದರೆ, ಆ ಹೊತ್ತಿಗಾಗಲೆ ಸಿರಾಜ್ನ ಆಸ್ಥಾನದಲ್ಲಿ ಮತ್ತು ಅವನ ಮೇಲೆ ಬ್ರಿಟಿಷರ ಪ್ರಭಾವ ದಟ್ಟವಾಗಿತ್ತು. ಕ್ಲೈವ್ ಬಂಗಾಳದ ತನ್ನ ಮೊದಲ ಯುದ್ಧದಲ್ಲಿ ಕಲ್ಕತ್ತಾವನ್ನು ನವಾಬನಿಂದ ವಾಪಸು ತೆಗೆದುಕೊಂಡ ಬಳಿಕ ಈ ಬದಲಾವಣೆಯನ್ನು ಗುರುತಿಸಬಹುದಿತ್ತು. ಇಂಗ್ಲಿಷರಿಂದ ಹೂಗ್ಲಿ ಪ್ರದೇಶದ ವಶ ಮತ್ತು ಚಂದ್ರನಗರದ ಫ್ರೆಂಚ್ ನೆಲೆಯ ವಿಜಯದ ಬಳಿಕ ಬದಲಾವಣೆ ಸ್ಪಷ್ಟವಾಯಿತು.
ಫ್ರೆಂಚರ ಕೈಬಿಟ್ಟ ನವಾಬ
ಲಾ ನವಾಬನಿಗೆ ಸೆಲ್ಯೂಟ್ ಮಾಡಿದಾಗ ಆತ ಅದನ್ನು ಉದಾರವಾಗಿ ಮರಳಿಸಿದ. ಲಾ ಕುಳಿತೊಡನೆ ಆತನಿಗೆ ‘ನಾಚಿಕೆಯಾಗುವಂತೆ’ ಸಿರಾಜ್ ಹೇಳಿದ: “ಒಂದೋ (ಇಲ್ಲವೇ) ನೀನು ವಾಟ್ಸ್ನ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕು; ಅಥವಾ ಆತನ (ವಾಟ್ಸ್ ನ) ಪ್ರದೇಶಗಳನ್ನು ಬಿಟ್ಟುಕೊಡಬೇಕು. ನಾನೀಗ ಇಂಗ್ಲಿಷರಿಂದ ಕಷ್ಟಪಡುತ್ತಿರುವುದಕ್ಕೆ ನಿನ್ನ ದೇಶ ಕಾರಣ. ನಿನಗಾಗಿ ನಾನು ನನ್ನ ಇಡೀ ದೇಶವನ್ನು ತೊಂದರೆಗೆ ಸಿಲುಕಿಸಲಾರೆ. ನಿಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಶಕ್ತಿ ನಿಮ್ಮಲ್ಲಿಲ್ಲ. ಇದನ್ನು ನೀವು ಒಪ್ಪಿಕೊಳ್ಳಬೇಕು. ನಾವು ನಿಮ್ಮ ನೆರವು ಕೇಳಿದಾಗೆಲ್ಲ ನೀವು ನಿರಾಕರಿಸಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. (ಕಲ್ಕತ್ತಾವನ್ನು ವಾಪಸು ತೆಗೆದುಕೊಂಡ ಬಳಿಕ ಕ್ಲೈವ್ ಮತ್ತು ವಾಟ್ಸನ್ ಹೂಗ್ಲಿ ನದಿಯಲ್ಲಿ ಮೇಲ್ಭಾಗಕ್ಕೆ ಬಂದಾಗ ಫ್ರೆಂಚ್ ಕೌನ್ಸಿಲ್ ಸಹಾಯ ನೀಡಲು ನಿರಾಕರಿಸಿತ್ತು.) ಆದ್ದರಿಂದ ನೀವೀಗ ನನ್ನ ಸಹಾಯವನ್ನು ನಿರೀಕ್ಷಿಸುವಂತಿಲ್ಲ” ಎಂದು ಸುದೀರ್ಘ ಭಾಷಣವನ್ನೇ ಮಾಡಿದ.
ಆಗ ಲಾ “ವಾಟ್ಸ್ ಹೇಳಿದಂತೆ ನಡೆದುಕೊಂಡರೆ ನನಗೆ ಅಗೌರವವಾಗುತ್ತದೆ” ಎಂದು ಬೇಸರದಿಂದ ಹೇಳಿ ಸುಮ್ಮನಾದ. ಸಿರಾಜ್ ಮತ್ತೆ ಏನಾದರೂ ಹೇಳಿ ಎಂದಾಗ ಲಾ “ಅಂದರೆ ನಾನು ನನ್ನ ಶತ್ರುಗಳ ಕೈಗೆ ಬೀಳಬೇಕೆಂಬುದು ನಿಮ್ಮ ಅಪೇಕ್ಷೆಯೆ?” ಎಂದು ಪ್ರಶ್ನಿಸಿದ. ಆಗ ನವಾಬ “ಇಲ್ಲ, ಇಲ್ಲ. ನಿಮಗೆ ಇಷ್ಟವಾದ ದಾರಿಯಲ್ಲಿ ಹೋಗಿ. ದೇವರು ನಿಮಗೆ ಸರಿಯಾದ ದಾರಿ ತೋರಿಸಲಿ” ಎಂದು ಮಾತನ್ನು ಮುಗಿಸಿದ. ಲಾ ಮೇಲೆದ್ದು ಗೌರವಸೂಚಕವಾಗಿ ನೀಡಿದ ವೀಳ್ಯವನ್ನು (ವೀಳ್ಯದೆಲೆ ಸಹಿತ) ತೆಗೆದುಕೊಂಡ.
ನಾಟಕ ಅಲ್ಲಿಗೆ ಮುಗಿಯಲಿಲ್ಲ. ಅಂದರೆ ಇಲ್ಲಿ ಸಿರಾಜ್ ನವಾಬನಾಗಿ ಬಲ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಂಡಂತೆ ಹಾಗೂ ಭವಿಷ್ಯದಲ್ಲಿ ಬಂದುದನ್ನು ಸ್ವೀಕರಿಸುವವನಂತೆ ಕಾಣಿಸುತ್ತದೆ. ವಿಶೇಷವಾಗಿ ಲಾ ಎಚ್ಚರಿಸಿದ ಪಿತೂರಿಯ ವಿಷಯದಲ್ಲಿ ಕೂಡ ಅದು ನಿಜ. ಲಾ ಕೊನೆಯಲ್ಲಿ ಹೇಳಿದ್ದು: “ಇನ್ನೊಮ್ಮೆ ನನ್ನನ್ನು ಕರೆಯುವಿರಾ? ನಿಜವೆಂದರೆ ಇದೇ ನಮ್ಮ ಕೊನೆಯ ಭೇಟಿ ಆಗಬಹುದು. ನನ್ನ ಮಾತನ್ನು ನೆನಪಿಡಿ. ಇನ್ನೊಮ್ಮೆ ನಾವು ಭೇಟಿ ಆಗುವುದಿಲ್ಲ; ಅದು ಅಸಂಭವ.”
ಬಳಿಕ ಫ್ರೆಂಚ್ ಮುಖ್ಯಾಧಿಕಾರಿ ಲಾ ಅಲ್ಲಿಂದ ಹೊರಟ. ಅದೇ ದಿನ ನವಾಬ ಸಿರಾಜುದ್ದೌಲ ರಾಬರ್ಟ್ ಕ್ಲೈವ್ಗೊಂದು ಪತ್ರ ಬರೆದ. ಅದರಲ್ಲಿ “ನಾನು ಲಾನನ್ನು ನಗರದಿಂದ (ಮುರ್ಷಿದಾಬಾದ್) ಹೊರಗೆ ಕಳುಹಿಸಿದೆ; ಮತ್ತು ಆತನಿಗೆ ಅಲ್ಲಿ ಅವಕಾಶ ನೀಡಬೇಡಿ ಎಂದು ಪಾಟ್ನಾದ ನಾಯಿಬ(ಗವರ್ನರ್)ನಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದ್ದ. ಹೊರಡುವಾಗ ಲಾಗೆ ನವಾಬ 10 ಸಾವಿರ ರೂ. ಕೊಟ್ಟು ಕಳುಹಿಸಿದ್ದ. ವಾಟ್ಸ್ ಕಡೆಯಿಂದಲೂ ಕ್ಲೈವ್ನಿಗೆ ಲಾ ನಿರ್ಗಮನದ ಬಗೆಗಿನ ವರದಿ ಹೋಯಿತು. ಪಿತೂರಿ ನಡೆಸುವ ವಿಷಯದಲ್ಲಿ ವಾಟ್ಸ್ ಅತ್ಯಂತ ಸಮರ್ಥನಾಗಿದ್ದು, ಪ್ಲಾಸಿ ಯುದ್ಧದ ಅನಂತರ ಕ್ಲೈವ್ ಆತನನ್ನು ಹೊಗಳಿ ಲಂಡನ್ಗೆ ಪತ್ರ ಬರೆದಿದ್ದ. ಅದರಲ್ಲಿ (ನವಾಬನ) “ದರ್ಬಾರ್ನಲ್ಲಿ ಮತ್ತು ಫ್ರೆಂಚರ ಪತನದಲ್ಲಿ ವಾಟ್ಸ್ನ ಸೇವೆ ತುಂಬಾ ದೊಡ್ಡದು” ಎಂದಿತ್ತು.
ಬಹಿರಂಗ ಪಿತೂರಿ
ಆ ಹೊತ್ತಿಗೆ ನವಾಬ ಸಿರಾಜ್ನ ವಿರುದ್ಧ ಪಿತೂರಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿತ್ತು. ಪ್ಲಾಸಿ ಯುದ್ಧದ ಅನಂತರ ಸೆಪ್ಟೆಂಬರ್ 4ರಂದು ಫ್ರೆಂಚ್ ಅಧಿಕಾರಿ ರೆನಾಲ್ಟ್ ಚಂದ್ರನಗರದಿAದ ಭಾರತದಲ್ಲಿ ಹಿಂದೆ ಸೇನಾಧಿಕಾರಿಯಾಗಿದ್ದ ಡೂಪ್ಲೆಗೆ ಒಂದು ಪತ್ರ ಬರೆದಿದ್ದ. ಅದರಲ್ಲಿ “ಇಲ್ಲಿ ಪಿತೂರಿಯು ಬಹಿರಂಗವಾಗಿಯೇ ನಡೆಯಿತು. ಮೂರ್ಗಳು (ಮುಸ್ಲಿಂ ರಾಜರು), ಬ್ರಿಟಿಷರು ಇಬ್ಬರೂ ಅದನ್ನು ಮಾಡಿದರು. ಇಂಗ್ಲಿಷ್ ಸೆಟ್ಲ್ಮೆಂಟ್ಗಳಲ್ಲಿ ಇದಲ್ಲದೆ ಬೇರೆ ಯಾವುದೇ ವಿಷಯದ ಕುರಿತು ಜನ ಮಾತನಾಡುತ್ತಿರಲಿಲ್ಲ. ಎಲ್ಲ ಕಡೆ ಈ ಗಲಾಟೆ ಇದ್ದರೂ ಸಾಕಷ್ಟು ಗೂಢಚರರಿದ್ದ ನವಾಬನಿಗೆ ಇದು ತಿಳಿದೇ ಇರಲಿಲ್ಲ.” ಆತನ ಬಗೆಗೆ ಜನರಲ್ಲಿ ಎಷ್ಟೊಂದು ದ್ವೇಷ ಇತ್ತೆಂಬುದು ಇದರಿಂದ ತಿಳಿಯುತ್ತದೆ.
ನವಾಬನ ಆಸ್ಥಾನದಲ್ಲೇ ಇದ್ದ ಮೀರ್ಜಾಫರ್ ಜೊತೆ ಬ್ರಿಟಿಷರ ವ್ಯವಹಾರ (ಡೀಲ್) ಆಗಲೇ ಆಗಿತ್ತು. ಕಲ್ಕತ್ತಾ ಕೌನ್ಸಿಲ್ ಆತನೊಂದಿಗೆ ಮೇ 19, 1757ರಂದು ಒಂದು ಒಪ್ಪಂದ ಮಾಡಿಕೊಂಡಿತ್ತು. ಮೀರ್ಜಾಫರ್ ಇಂಗ್ಲಿಷರ ಜೊತೆ ಸೇರಲು ತಾನು ಸದಾ ಸಿದ್ಧ ಎಂದು ಏಪ್ರಿಲ್ 26ರ ಪತ್ರದಲ್ಲಿ ತಿಳಿಸಿದ್ದ. ಪಿತೂರಿಯ ಬಗೆಗಿನ ಅಜ್ಞಾನ ಒಂದಾದರೆ, ಅದರ ಎದುರು ಏನನ್ನೂ ಮಾಡಲಾಗದ ಅಸಹಾಯ ಸ್ಥಿತಿಗೆ ನವಾಬ ತಲಪಿದ್ದನೇನೋ ಅನ್ನಿಸುತ್ತದೆ; ಭೇಟಿಗೆ ಅವಕಾಶ ಕೇಳಿ ಫ್ರೆಂಚ್ ಅಧಿಕಾರಿ ಲಾ ನವಾಬನ ಬಳಿ ಜನ ಕಳುಹಿಸಿದ್ದ (ಜೂನ್ 8). ಜೂನ್ 10ಕ್ಕೆ ನವಾಬ ಬರೆದ ಉತ್ತರ 19ರಂದು ಲಾ ಕೈಸೇರಿತು. ಯುದ್ಧಕ್ಕೆ ಕೇವಲ ನಾಲ್ಕು ದಿನಗಳಿದ್ದು ಭೇಟಿ ಇತ್ಯಾದಿಗೆ ಆಗ ತಡವಾಗಿತ್ತು.
ಕಟ್ವಾ ಕೋಟೆ ವಶ
ಸಿರಾಜ್ ಸೇನೆಯ ಭದ್ರಕೋಟೆ ಎನಿಸಿದ್ದ ಕಟ್ವಾ ಕೋಟೆಯನ್ನು ಬ್ರಿಟಿಷರು ತಮ್ಮ ಬಗಲಿಗೆ ಹಾಕಿಕೊಂಡರು. ಅದು ಪ್ಲಾಸಿಗೆ ದೂರವಲ್ಲ. ಹೊಸದಾಗಿ ನೇಮಕಗೊಂಡ ಮೇಜರ್ ಕೂಟ್ಗೆ ಕ್ಲೈವ್ ಕಟ್ವಾವನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿದ; ಸಿರಾಜ್ ಸೇನೆ ಅಲ್ಲಿಗೆ ಬರುವ ಒಂದು ದಿನ ಮೊದಲು ಈ ಆದೇಶ ಹೊರಟಿತ್ತು. 200 ಜನ ಐರೋಪ್ಯ ಯೋಧರು ದೋಣಿಗಳಲ್ಲಿ ಅಲ್ಲಿಗೆ ಹೋದರು. ಅವರ ಬಳಿ ಬಂದೂಕು, ಮದ್ದುಗುಂಡುಗಳಿದ್ದವು. ಜೊತೆಗೆ 500 ಸಿಪಾಯಿಗಳಿದ್ದರು.
ಸೈನ್ಯವು ಹೊರಟು ಕಟ್ವಾದ ಹೊರವಲಯಕ್ಕೆ ಹೋಗುವಷ್ಟರಲ್ಲಿ ಸಿರಾಜ್ನ ಪಡೆ ಹೊರವಲಯವನ್ನು ಬಿಟ್ಟು ಕೋಟೆಯೊಳಗೆ ಸೇರಿಕೊಂಡಿತು. ಕಮಾಂಡರ್ ಮಾಣಿಕ್ಚಂದ್ ನೇತೃತ್ವದ ಅಶ್ವಪಡೆಯನ್ನು ನಿರೀಕ್ಷಿಸಲಾಗಿತ್ತು.
ಕೂಟ್ ನೇತೃತ್ವದ ಸೈನ್ಯ ಬಂದದ್ದು ಗೊತ್ತಾಗಿ ಕೋಟೆಯ ಒಳಗಿನಿಂದ ಗುಂಡು ಹಾರಾಟ ಶುರುವಾಯಿತು. ಕೂಟ್ ಸೈನ್ಯವನ್ನು ಹಿಂಭಾಗದ ಪಟ್ಟಣಕ್ಕಿಂತಲೂ ಹಿಂದೆ ಸರಿಸಿದ. ಅವನಿಗೆ ಮತ್ತೆ ಸೇನೆಯ ಸಂಘಟನೆ ಕಷ್ಟವಾಯಿತು. ಜೂನ್ 19ರ ಬೆಳಗ್ಗೆ ಆತ ಶಾಂತಿ ಧ್ವಜದೊಂದಿಗೆ ಕಟ್ವಾದ ಫೌಜದಾರನಿಗೆ ಸಂದೇಶವನ್ನು ಕಳುಹಿಸಿದ: “ನವಾಬನ ದೌರ್ಜನ್ಯದ ವಿರುದ್ಧ ನೆರವಾಗಲು ನಾವು ಸ್ನೇಹಿತರಂತೆ ಬಂದಿದ್ದೇವೆ. ಇದಕ್ಕೆ ಬೆಲೆ ಕೊಡದಿದ್ದರೆ ದಾಳಿ ಮಾಡುತ್ತೇವೆ” ಎಂದು ಅದರಲ್ಲಿತ್ತು.
ಕೊನೆಗೆ ಕೂಟ್ ಭೀಕರ ದಾಳಿ ನಡೆಸಿದ. ಸಿಪಾಯಿಗಳು ದಕ್ಷಿಣದಿಂದ ಮತ್ತು ಐರೋಪ್ಯರು ಉತ್ತರದಿಂದ ಯುದ್ಧ ನಡೆಸಿದರು. ಸಣ್ಣ ಯುದ್ಧದ ಅನಂತರ ಫೌಜದಾರನ ಕಡೆಯವರು ಶಸ್ತಾçಸ್ತç ಬಿಟ್ಟು ಪಲಾಯನಗೈದರು. ಅಪರಾಹ್ನ 2 ಗಂಟೆಯ ಹೊತ್ತಿಗೆ ಕ್ಲೈವ್ ಕಟ್ವಾ ಕೋಟೆಯಲ್ಲಿ ಸೇನಾಧಿಕಾರಿ ಕೂಟ್ ಜೊತೆ ಸೇರಿಕೊಂಡ. ಪ್ಲಾಸಿ ಯುದ್ಧವು ಸಮೀಪವಾಗುವ ಆ ಹೊತ್ತಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳು ಮತ್ತು ಸೈನಿಕರು ತುಂಬ ಖುಷಿಯಲ್ಲಿದ್ದರು. ಆಗ ಕೆಲವರಿಗೆ ಯುದ್ಧದಲ್ಲಿ ನವಾಬ ಸಿರಾಜ್ ಸೋತಂತೆ ಕನಸು ಕೂಡ ಬಿತ್ತಂತೆ! ಅಂತಹ ಸನ್ನಿವೇಶದಲ್ಲಿ ಒಮ್ಮೆ ರಾಬರ್ಟ್ ಕ್ಲೈವ್ ಕ್ಯಾಂಪಿನಿAದ ಸ್ವಲ್ಪ ದೂರದಲ್ಲಿ ಒಂದು ಮರದ ಕೆಳಗೆ ಕುಳಿತು ಗಾಢವಾದ ಯೋಚನೆಯಲ್ಲಿದ್ದ. ತಾನು ಈಗ ಸೋತರೆ ಇಡೀ ಬ್ರಿಟನ್ನೇ ಸೋತಂತೆ ಎಂದ ಆತ ಯೋಚಿಸುತ್ತಿದ್ದ. ಬಂಗಾಳದ ಜನತೆಯ ದುರದೃಷ್ಟವೆಂದರೆ ಒಬ್ಬ ಜೂಬೊನ್ (ಯವನ-ಸಿರಾಜುದ್ದೌಲ)ನ ಕ್ರೌರ್ಯವನ್ನು ತಡೆಯಲಾರದೆ ಅವರು ಇನ್ನೊಬ್ಬ ವಿದೇಶೀಯನಲ್ಲಿ (ಕ್ಲೈವ್) ಆಶ್ರಯ ಕೇಳುವ ಪರಿಸ್ಥಿತಿಗೆ ಸಿಲುಕಿದ್ದರು.
ಸಿರಾಜ್, ಅಡ್ಮಿರಲ್ ವಾಟ್ಸನ್ ಮತ್ತು ರಾಬರ್ಟ್ ಕ್ಲೈವ್ ನಡುವೆ ಬಹಳಷ್ಟು ಪತ್ರಗಳು ಆಚೀಚೆ ಸಂಚರಿಸುವ ಮೂಲಕ ಪ್ಲಾಸಿ ಯುದ್ಧವು ಸಮೀಪವಾಗುತ್ತಿದೆ ಎನ್ನುವ ಸೂಚನೆಯನ್ನು ನೀಡಿದವು. ಪ್ರಮುಖ ಪಿತೂರಿಗಾರ ಮೀರ್ಜಾಫರ್ ಈ ವ್ಯವಹಾರದ ಕೇಂದ್ರವಾಗಿದ್ದ. ಬದಿಯಲ್ಲಿ (ವಿಂಗ್ಸ್) ರಾ ದುರ್ಲಭ್ ಮತ್ತು ಯಾರ್ ಲತೀಫ್ ಕೂಡ ಇದ್ದರು. ಯಾರ್ ಲತೀಫ್ ಮೊದಲು ನವಾಬಗಿರಿ ತನಗೆ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ. ಅದು ತಪ್ಪಿ ಮೀರ್ಜಾಫರ್ನತ್ತ ಹೋಯಿತು. ಕಂಪೆನಿ ಮತ್ತು ಬ್ರಿಟನ್ ಸರ್ಕಾರಗಳು ದಾಖಲೆಗೆ ತಮ್ಮ ಹೆಸರನ್ನು ಸೇರಿಸಿದವು; ಅವರ ಪರವಾಗಿ ಕ್ಲೈವ್ ಸಹಿ ಹಾಕಿದ್ದ. ಪಿತೂರಿಯ ವೇಳೆ ಸೇಠ್ಗಳು ಸಕ್ರಿಯರಾಗಿದ್ದರು. ಸಿರಾಜ್ನ ದೊಡ್ಡಮ್ಮ ಘಸೇಟಿ ಬೇಗಮ್ ಮತ್ತು ಉದ್ಯಮಿ ಉಮಾಚಂದ್ ಕೂಡ ಇದ್ದರು. ಆದರೆ ಕ್ಲೈವ್ಗೆ ಉಮಾಚಂದ್ನಲ್ಲಿ ವಿಶ್ವಾಸ ಇರಲಿಲ್ಲ. ಮೀರ್ಜಾಫರ್ ಜೊತೆ ಮಾತುಕತೆಯನ್ನು ಆತ ಉಮಾಚಂದ್ ಮೂಲಕ ನಡೆಸಿದ್ದು ನಿಜ. ಆದರೆ ಅವನೊಬ್ಬ ಬ್ಲಾಕ್ಮೈಲರ್ ಎಂಬAತೆ ನೋಡುತ್ತಿದ್ದ. ಆತ ಪಿತೂರಿಯನ್ನು ನವಾಬ ಸಿರಾಜ್ಗೆ ಹೇಳಿ 30 ಲಕ್ಷ ರೂ. ಕೇಳಬಹುದು ಎನ್ನುವ ಸಂದೇಹವಿತ್ತು. ಏನಿದ್ದರೂ ಕ್ಲೈವ್ ಮತ್ತು ಕಲ್ಕತ್ತಾದ ಕೌನ್ಸಿಲ್ ತಂತ್ರಗಾರಿಕೆಯಲ್ಲಿ ಉಮಾಚಂದ್ನನ್ನು ಹಿಂದೆ ಹಾಕಿದವು.
ಬಿಳಿ, ಕೆಂಪು ಒಪ್ಪಂದ
ಒಪ್ಪಂದದಲ್ಲಿ ಉಮಾಚಂದ್ ತನಗೆ ಪಾವತಿ ಆಗಬೇಕಾದ ಹಣವನ್ನು ಸೇರಿಸಲು ಪ್ರಯತ್ನಿಸಿದ. ಕ್ಲೈವ್ ಬಿಳಿಕಾಗದ ಮತ್ತು ಕೆಂಪುಕಾಗದದ ಮೇಲೆ ಒಪ್ಪಂದದ ಎರಡು ಪ್ರತಿಗಳನ್ನು ಮಾಡಿಕೊಂಡಿದ್ದ. ಬಿಳಿಕಾಗದದ್ದು ನಿಜವಾದದ್ದು. ಅದರಲ್ಲಿ ಉಮಾಚಂದ್ಗೆ ಹಣ ಕೊಡುವ ವಿಷಯ ಇರಲಿಲ್ಲ. ಕೆಂಪುಕಾಗದದ ಪ್ರತಿಯಲ್ಲಿ ಆ ಅಂಶ ಇತ್ತು. ಬಿಳಿ, ಕೆಂಪು ಒಪ್ಪಂದಗಳಿಗೆ ಮೇ 19ರಂದು ಸಹಿ ಬಿತ್ತು. ಕೂಡಲೆ ಅದನ್ನು ಸಹಿ ಹಾಕುವ ಸಲುವಾಗಿ ಮೀರ್ಜಾಫರ್ಗೆ ಕಳುಹಿಸಿದರು. ಒಪ್ಪಂದವು ದೃಢ(ಸಾಚಾ)ವಾಗಲು ಸಹಿಯು ಅಗತ್ಯವಾಗಿತ್ತು. ಕೆಂಪುಕಾಗದದ ಒಪ್ಪಂದಕ್ಕೆ ಸಹಿ ಹಾಕಲು ಅಡ್ಮಿರಲ್ ವಾಟ್ಸನ್ ನಿರಾಕರಿಸಿದ. ವಾಟ್ಸನ್ ಮತ್ತು ಕ್ಲೈವ್ನ ಭಿನ್ನ ನಿಲವುಗಳಲ್ಲಿ ಇದೊಂದು. ಫ್ರೆಂಚರ ಮೇಲೆ ದಾಳಿ ನಡೆಸುವಲ್ಲಿ ಕೂಡ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು; ಅವರ ನಡುವಣ ಇನ್ನೊಂದು ವಿವಾದ ಯುದ್ಧದ ಅನಂತರದ ಲೂಟಿಯ ವಸ್ತುಗಳನ್ನು ಹಂಚಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದ್ದು. ಕೆಂಪುಕಾಗದದ ಮೇಲೆ ಸಹಿ ಹಾಕಲು ವಾಟ್ಸನ್ ನಿರಾಕರಿಸಿದ ಕಾರಣ ಕ್ಲೈವ್ ಬೇರೊಬ್ಬರ ಸಹಿ ಹಾಕಿಸಿದ್ದ!
ಮುರ್ಷಿದಾಬಾದ್ನಲ್ಲಿ ಕಂಪೆನಿಯ, ಅಂದರೆ ಪಿತೂರಿಯ ಕಣ್ಣೂ ಕಿವಿಯೂ ಆಗಿದ್ದವನು ವಾಟ್ಸ್. ಸಿರಾಜ್ ಪ್ಲಾಸಿಗೆ ತನ್ನ ಸೈನ್ಯವನ್ನು ಹೊರಡಿಸುವ ವೇಳೆ ವಾಟ್ಸ್ ಮುರ್ಷಿದಾಬಾದ್ನಿಂದ ತಪ್ಪಿಸಿಕೊಳ್ಳಬೇಕಿತ್ತು. ಏಕೆಂದರೆ ಆತನ ಮೇಲೆ ನವಾಬನ ನಿಗಾ ಇತ್ತು. ಅದಕ್ಕಾಗಿ ಬೇಟೆಗೆ ಹೋಗುವುದಾಗಿ ಹೇಳಿ ತಪ್ಪಿಸಿಕೊಳ್ಳಬೇಕು; ಮತ್ತು ಮರಳಬಾರದು ಎಂದು ತೀರ್ಮಾನಿಸಲಾಗಿತ್ತು. ಆತ ಡೀಲನ್ನು ಮುಗಿಸಿದ. ಪ್ಲಾಸಿ ಯುದ್ಧಕ್ಕೆ ಮುನ್ನ ಮಾಡಿಕೊಂಡ ಆ ಕೊನೆಯ ರಹಸ್ಯ ಡೀಲ್ ಮೀರ್ಜಾಫರ್ ಮನೆಯಲ್ಲಿ ಮೀರ್ಜಾಫರ್ ಮತ್ತು ವಾಟ್ಸ್ ನಡುವೆ ನಡೆಯಿತು. ಅಲ್ಲಿಗೆ ವಾಟ್ಸ್ ಪಲ್ಲಕ್ಕಿಯಲ್ಲಿ ಪರ್ದಾಧಾರಿ ಮಹಿಳೆಯಾಗಿ ಬಂದಿದ್ದ. ಆ ಮೂಲಕ ಇದೊಂದು ಪಿತೂರಿ ಎಂಬುದನ್ನು ಖಚಿತವಾಗಿ ಹೇಳುವಂತಿತ್ತು.
ಬAಗಾಳದ ಆ ಭಾಗದಲ್ಲಿ ಫ್ರೆಂಚರನ್ನು ನಾಶ ಮಾಡುವುದು ಅಥವಾ ಅವರನ್ನು ಪೂರ್ತಿಯಾಗಿ ನಿಯಂತ್ರಣಕ್ಕೆ ಒಳಪಡಿಸುವುದು, ಆ ದಾರಿಯಲ್ಲಿ ವ್ಯಾಪಾರಕ್ಕೆ ಮತ್ತು ಒಟ್ಟಾರೆಯಾಗಿ ಈಸ್ಟ್ ಇಂಡಿಯಾ ಕಂಪೆನಿಗೆ (ಜಾನ್ ಕಂಪೆನಿ) ಅಡ್ಡಿಯಾದ ನವಾಬನನ್ನು (ಆತ ಫ್ರೆಂಚರಿಗೆ ಪರವಾಗಿದ್ದ ಕಾರಣ) ದೂರ ಮಾಡುವುದು ಮೇಲಿನ ಒಪ್ಪಂದದ ಉದ್ದೇಶವಾಗಿತ್ತು. ಈ ನಡುವೆ ಒಂದು ಪ್ರಮುಖ ದಾಖಲೆಗೆ ಮೀರ್ಜಾಫರ್ನ ಸಹಿ ಹಾಕಿಸುವ ಮೂಲಕ ಬಂಗಾಳದ ದೊಡ್ಡ ಬಹುಮಾನಕ್ಕೆ ಆತನನ್ನು ಪಾತ್ರನನ್ನಾಗಿ ಮಾಡಲಾಯಿತು. ಆ ಮೂಲಕ ಮೀರ್ಜಾಫರ್ ಪ್ಲಾಸಿಯ ಕೊನೆಯ ಆಟದ ನಿಯಂತ್ರಕ (ನಿರ್ಣಾಯಕ)ನಾದ. ಇನ್ನೊಂದು ರೀತಿಯಲ್ಲಿ ಆತ ರಾಬರ್ಟ್ ಕ್ಲೈವ್ಗೆ ಆತಂಕಕಾರಿಯಾಗಿದ್ದರೆ, ಮೀರ್ಜಾಫರ್ ಕೂಡ ಅದೇ ಸ್ಥಿತಿಯಲ್ಲಿದ್ದ.
ಪ್ರತಿ ದಿನ ಪತ್ರ
ಮುರ್ಷಿದಾಬಾದ್ನಲ್ಲಿದ್ದ ಮೀರ್ಜಾಫರ್ಗೆ ಕ್ಲೈವ್ ಪ್ರತಿದಿನ ಪತ್ರ ಬರೆಯುತ್ತಿದ್ದ. ಆತ ಆಗ ಉತ್ತರ ಬರೆದದ್ದು ಒಂದು ಮಾತ್ರ (ಜೂನ್ 17). ಇದರಿಂದ ಹೊರಬರುವ ಸಂದೇಶವು ಸ್ಪಷ್ಟವಾದದ್ದು; ನವಾಬನ ವಿರುದ್ಧ ಇಂಗ್ಲಿಷರಿಗೆ ನೆರವಾಗುವುದಿಲ್ಲವೆಂದು ತೋರಿಸುವುದು ಆತನಿಗೆ ಜೀವದಷ್ಟೇ ಮುಖ್ಯವಾಗಿತ್ತು.
ಈ ನಡುವೆ ಬಂಗಾಳದಲ್ಲಿ ಜೂನ್ 18ಕ್ಕೆ ಮಳೆಗಾಲ ಬಂತು; ಯುದ್ಧಕ್ಕೆ ಕೇವಲ ಐದು ದಿನಗಳಿದ್ದವು. ಮರುದಿನ ಕಟ್ವಾ ಕೋಟೆ ಕಂಪೆನಿಯ ವಶಕ್ಕೆ ಬಂತು. ಮಳೆಯ ಹೊಡೆತದ ಕಾರಣದಿಂದಾಗಿ ಕಟ್ವಾ ಸಮೀಪವಿದ್ದ ಡೇರೆಗಳನ್ನು ತೆಗೆದು ಪಟ್ಟಣದಲ್ಲಿ ಆಶ್ರಯ ಪಡೆಯುವಂತೆ ಕಟ್ವಾದ ಹೀರೋ ಮೇಜರ್ ಕೂಟ್ ಆದೇಶ ಹೊರಡಿಸಿದ. 1760ರ ವಾಂಡಿವಾಶ್ ಯುದ್ಧದ ಹೀರೋ ಕೂಡ ಆದ ಕೂಟ್ ಮುಂದೆ ಭಾರತದಲ್ಲಿ ಬ್ರಿಟಿಷ್ ಸೇನೆಯ ಮಹಾದಂಡನಾಯಕನಾಗಿ (ಕಮಾಂಡರ್-ಇನ್-ಚೀಫ್) ಕಾರ್ಯನಿರ್ವಹಿಸಿದ.
ಜೂನ್ 19ರಂದು ಕ್ಲೈವ್ ಕಟ್ವಾದಿಂದ ಕಲ್ಕತ್ತಾದ ಫೋರ್ಟ್ ವಿಲಿಯಂನ ಪಾರ್ಲಿಮೆಂಟರಿ ಸೆಲೆಕ್ಟ್ ಕಮಿಟಿಗೆ ಪತ್ರ ಬರೆದ. ಮೀರ್ಜಾಫರ್ಗೆ ತೊಂದರೆ ಆಗದಿರಲೆಂದು ಮೊಘಲ್ ಚಕ್ರವರ್ತಿಯ ವಜೀರ್ ಸಹಿತ ಸಂಭಾವ್ಯ ಮಿತ್ರರಿಗೆಲ್ಲ ಪತ್ರ ಹೋಯಿತು. ಅದರಲ್ಲಿ ಕ್ಲೈವ್ ಹೀಗೆ ಹೇಳಿದ: “ಕಟ್ವಾ ಪಟ್ಟಣ ಮತ್ತು ಕೋಟೆಯ ವಶಕ್ಕೆ ಇಬ್ಬರನ್ನು ಕಳುಹಿಸಿದೆ. ಮೀರ್ಜಾಫರ್ ನಮಗೆ ದ್ರೋಹ ಬಗೆಯಬಹುದೆ – ಎಂಬ ಸಂದೇಹವಿದೆ. ಆತ ಹೊರಗೆ ಬಂದು ನಮ್ಮನ್ನು ಸೇರಿಕೊಳ್ಳುವ ಬಗ್ಗೆ ಕೊನೆಯ ಪ್ರಯತ್ನವನ್ನು ನಡೆಸುತ್ತಿದ್ದೇನೆ. ಆತನ ಉದ್ದೇಶದ ಪ್ರಾಮಾಣಿಕತೆಯ ಬಗ್ಗೆ ಪುರಾವೆ ಒದಗಿಸಲು ಹೇಳಿದ್ದೇನೆ. ಪ್ಲಾಸಿಯನ್ನು ಸೇನೆ ಸೇರುವ ಸ್ಥಳವೆಂದು ನಿರ್ಧರಿಸಿದ್ದೇನೆ. ನಾವು ನದಿಯನ್ನು ದಾಟುವುದಿಲ್ಲ. ನಮ್ಮ ಸೇನೆಗೆ ಹಾನಿಯಾಗದಂತಹ ಎಚ್ಚರ ಅವಶ್ಯ. ಇಂದಿನ ಪರಿಸ್ಥಿತಿ ದೂರವಾಗಬೇಕಾದರೆ ಕ್ರಾಂತಿ ಆಗುವುದು ಅನಿವಾರ್ಯ. ನಮ್ಮ ಬಳಿ ಬೇಕಾದಷ್ಟು ಧಾನ್ಯದ ಸಂಗ್ರಹವಿದೆಯೆAದು ಹೇಳಿದ್ದಾರೆ. 300-375 ಟನ್ ದಾಸ್ತಾನಿದ್ದರೆ ಮಳೆಗಾಲವನ್ನು ದಾಟಬಹುದು; ಮತ್ತು ನವಾಬನನ್ನು ಮಣಿಸಬಹುದು. ಮೀರ್ಜಾಫರ್ ನಮಗೆ ಸಹಾಯ ನೀಡದಿದ್ದರೆ ಏನು ಮಾಡಬಹುದೆಂದು ನಿಮ್ಮ ಸಲಹೆ ಕೊಡಿ” ಎನ್ನುವ ನೇರಮಾತುಗಳನ್ನು ಕ್ಲೈವ್ ಮಂಡಿಸಿದ.
ಮೀರ್ಜಾಫರ್ ತಂತ್ರ
ಜೂನ್ 20ರಂದು ಇಂಗ್ಲಿಷರಿಗೆ ಒಂದು ಸುದ್ದಿ ಬಂತು. ಅದು ಮೀರ್ಜಾಫರ್ನ ಪಿತೂರಿಯೆ, ಅದರ ಬಹಿರಂಗವೆ – ಎಂಬ ಪ್ರಶ್ನೆ ಉಂಟಾಗಿತ್ತು. ಇಂಗ್ಲಿಷರ ಸಂದೇಶವಾಹಕ ಮೀರ್ ಜಾಫರ್ ಮತ್ತವನ ಮಗ ಮಿರಾನ್ನನ್ನು ಅವರ ಅರಮನೆಯಲ್ಲಿ ಭೇಟಿ ಮಾಡಿದ್ದ. ಆಗ ಅಲ್ಲಿಗೆ ಕೆಲವರು ಬಂದರು. ಆಗ ಮಿರಾನ್ “ನಿನ್ನ ತಲೆ ಕಡಿಯುತ್ತೇನೆ. ನದಿ ದಾಟಿದ ಎಲ್ಲ ಇಂಗ್ಲಿಷರ ತಲೆ ಕಡಿಯುತ್ತೇನೆ” ಎಂದು ಅಬ್ಬರಿಸಿದನಂತೆ. ಅದೇ ದಿನ ಸಂಜೆ ಮೀರ್ಜಾಫರ್ನಿಂದ ಎರಡು ಪತ್ರಗಳು ಬಂದವು; ಒಂದು ರಾಬರ್ಟ್ ಕ್ಲೈವ್ಗೆ, ಇನ್ನೊಂದು ಕ್ಲೈವ್ ಶಿಬಿರದಲ್ಲಿದ್ದ ಆತನ (ಮೀರ್ಜಾಫರ್ನ) ಪ್ರತಿನಿಧಿ ಉಮರ್ ಬೇಗ್ಗೆ.
ಕ್ಲೈವ್ಗೆ ಬರೆದ ಪತ್ರದಲ್ಲಿ ತಾನು ಜೂನ್ 19ರಂದು ಮುರ್ಷಿದಾಬಾದ್ ಬಿಡುತ್ತಿದ್ದೇನೆ ಎಂದಿತ್ತು. ತನ್ನ ಟೆಂಟ್ ನವಾಬನ ಸೇನೆಯ ಎಡ ಮತ್ತು ಬಲಭಾಗದಲ್ಲಿರುತ್ತದೆ. ಸೇನೆಯನ್ನು ಸೇರಿಕೊಂಡ ಮೇಲೆ ಇನ್ನಷ್ಟು ಗುಪ್ತಮಾಹಿತಿಗಳನ್ನು ಕಳುಹಿಸುತ್ತೇನೆ. ಹಿಂದೆ ಅಂತಹ ಮಾಹಿತಿಗಳನ್ನು ಕಳುಹಿಸಲು ಸಾಧ್ಯವಾಗಿರಲಿಲ್ಲ. ಸಿಕ್ಕಿಬೀಳುವ ಭಯವಿತ್ತು – ಎಂದು ಮೀರ್ಜಾಫರ್ ತಿಳಿಸಿದ್ದ. ಪತ್ರಗಳನ್ನು ತಡೆಯುವ ಸಲುವಾಗಿ ನವಾಬ ಸಿರಾಜ್ ಎಲ್ಲ ಮಾರ್ಗಗಳಲ್ಲಿ ಕಾವಲುಭಟರನ್ನು ಹಾಕಿದ್ದ. ಗುಟ್ಟಾಗಿಡುವ ಸಲುವಾಗಿ ಪತ್ರದಲ್ಲಿ ಮೀರ್ಜಾಫರ್ ರಾಬರ್ಟ್ ಕ್ಲೈವ್ಗೆ ‘ಸಾಬುರ್ ಜಂಗ್ ಬಹಾದುರ್’ ಎಂದು ಬರೆದಿದ್ದ (ಅದು ಕ್ಲೈವ್ಗೆ ಅರ್ಕಾಟ್ ನವಾಬನಿಂದ ಸಿಕ್ಕಿದ ಬಿರುದಾಗಿತ್ತು). “ನಿಮ್ಮ ಪತ್ರಗಳು ನನಗೆ ತೆರೆದೇ ಬರುತ್ತವೆ. ನಮ್ಮ ವ್ಯವಹಾರಗಳು ಬಹಿರಂಗ ಆಗುವ ತನಕ ನೀವು ತುಂಬಾ ಜಾಗೃತರಾಗಿರಬೇಕು” ಎಂದು ಕೂಡ ಈ ದೇಶದ್ರೋಹಿ ಪಿತೂರಿಗಾರ ಕ್ಲೈವ್ಗೆ ತಿಳಿಸಿದ್ದ. ಕ್ಲೈವ್ಗೆ ಪತ್ರ ಸಂಕ್ಷಿಪ್ತವೆನಿಸಿತು; ಹೆಚ್ಚಿನ ಭರವಸೆ ಕೊಡಲಿಲ್ಲ. ಯುದ್ಧದಲ್ಲಿ ನಾನೇನು ಮಾಡುವೆ, ನೀವೇನು ಮಾಡಬೇಕು ಮುಂತಾದ ವಿವರಗಳು ಅದರಲ್ಲಿಲ್ಲ ಎಂಬುದು ಚಾಣಾಕ್ಷ ಸೇನಾನಿ ಕ್ಲೈವ್ನ ತಕರಾರು.
ಸಹಾಯ ಯಾಚನೆ
ಕ್ಲೈವ್ ಯುದ್ಧಕ್ಕೆ ಸಹಾಯವಾಗುವಂತೆ ಕೇಳಿ ಬರ್ದ್ವಾನ್ನ ರಾಜನಿಗೆ ಪತ್ರ ಬರೆದ. ಆತನಿಗೆ ಸಿರಾಜ್ ಬಗ್ಗೆ ಬೇಸರವಿತ್ತು. ಬೀರಭೂಮ್ನ ನವಾಬನಿಗೂ ಪತ್ರ ಬರೆದ. ಆತ ಕಂಪೆನಿಯ ಜೊತೆ ಸ್ನೇಹವನ್ನು ತೋರಿಸಿದ್ದ. ಈ ಇಬ್ಬರಿಂದಲೂ ಕ್ಲೈವ್ ಕುದುರೆಸವಾರರ ಪಡೆ (ಅಶ್ವಪಡೆ)ಯನ್ನು ಕೇಳಿದ್ದ. “ಕಟ್ವಾ ಕೋಟೆ ನನ್ನ ವಶವಾಯಿತು. ಇನ್ನೂರು ಅಥವಾ ಮುನ್ನೂರು ಕುದುರೆಸವಾರರನ್ನು ಕಳುಹಿಸು. ನಿನ್ನ ರಾಜ್ಯಕ್ಕೆ ಹಾನಿಯಾಗಲು ಬಿಡುವುದಿಲ್ಲ. ನಿನ್ನ ಮೇಲೆ ಕಲೆಕ್ಟರನ್ನು ನೇಮಿಸುವುದಿಲ್ಲ. ನೀನು ಕಳುಹಿಸುವ ಅಶ್ವಪಡೆಯ ಚಾರ್ಜನ್ನು ಸರ್ಕಾರ (ಗವರ್ನ್ಮೆಂಟ್) ಪಾವತಿಸಲಿದೆ” ಎಂದು ಕ್ಲೈವ್ ತಿಳಿಸಿದ್ದ.
ಆ ಹೊತ್ತಿಗೆ ರಾಬರ್ಟ್ ಕ್ಲೈವ್ಗೆ ಯುದ್ಧ ಯಾವಾಗ ಶುರು ಆಗುವುದೆಂದು ತಿಳಿದಿರಲಿಲ್ಲ. ಆಗ ಆತ ಮಾಡುತ್ತಿದ್ದ ಕೆಲಸ ಸೇನೆಯನ್ನು ಬೆಳೆಸುವುದು; ಕಂಪೆನಿಯ ಸ್ನೇಹಿತರನ್ನು ಸಂಪರ್ಕಿಸಿ ಸಹಕಾರ ಕೇಳುವುದು; ನವಾಬನ ವಿರುದ್ಧ ದ್ವೇಷವನ್ನು ಹೆಚ್ಚಿಸುವುದು. ಯುವನವಾಬನ ವಿರುದ್ಧ ಮೈತ್ರಿಕೂಟವನ್ನು ರಚಿಸಲು ಸಾಧ್ಯವಾಗುತ್ತದೆಯೆ ಎಂಬುದು ಆತನಿಗೆ ಗೊತ್ತಿಲ್ಲ. ಏಕೆಂದರೆ ಆತನ ಹಿಂದಿನ ಕರ್ನಾಟಕ ಯುದ್ಧದ ಅನುಭವದ ಪ್ರಕಾರ, ಯಶಸ್ಸಿನ ಬಗ್ಗೆ ಸಂಶಯವಿದ್ದಾಗ ಇಂದೋಸ್ತಾನದ ರಾಜರು ಕೈಜೋಡಿಸುವುದಿಲ್ಲ.
ಜೂನ್ 21ರಂದು (1757) ಕ್ಲೈವ್ ಇಪ್ಪತ್ತು ಜನ ಅಧಿಕಾರಿಗಳ ವಾರ್ ಕೌನ್ಸಿಲ್ ಸಭೆ ಕರೆದ. ಆತನ ಮುಂದೆ ಕೆಲವು ಮಾತ್ರ ದಾರಿಗಳಿದ್ದವು. ಅವು ಮುಖ್ಯವಾಗಿ,
1) ಸೂಚನೆ ಕೊಡಿ ಎಂದು ಕಂಪೆನಿಯ ಕಲ್ಕತ್ತಾ ಕೌನ್ಸಿಲ್ಗೆ ಕೇಳುವುದು.
2) ಸೇನೆಯು ಕೂಡಲೆ ನದಿಯನ್ನು ದಾಟಿ ಕಾಸಿಂಬಜಾರಿಗೆ ಹೋಗಿ ನವಾಬನ ಸೇನೆಯ ಮೇಲೆ ದಾಳಿ ನಡೆಸುವುದು.
3) ಮಳೆಗಾಲ ಮುಗಿಯುವ ತನಕ ಕಟ್ವಾ ಕೋಟೆಯಲ್ಲಿ ಉಳಿದುಕೊಳ್ಳುವುದು. ಅಲ್ಲಿ ಹತ್ತು ಸಾವಿರ ಜನಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ಧಾನ್ಯಸಂಗ್ರಹವಿತ್ತು.
ಸದಾ ಸಿದ್ಧವಿರುವ ಮರಾಠಿ ಅಶ್ವಪಡೆಯ ನೆರವನ್ನು ಕೇಳುವ ವಿಚಾರ ಕೂಡ ಕ್ಲೈವ್ ಮುಂದೆ ಬಂದಿತ್ತು. ಮದ್ರಾಸಿಗೆ ಕ್ಲೈವ್ ಬರೆದ ಒಂದು ಪತ್ರದಲ್ಲಿ “ನಮ್ಮ ಸ್ನೇಹವನ್ನು ಬಯಸಿ ಮರಾಠರ ನಾನಾನಿಂದ ಪತ್ರ ಬಂದಿತ್ತು. ಒಂದೂವರೆ ಲಕ್ಷ ಮರಾಠಾ ಯೋಧರ ಜೊತೆ ಬರುವುದಾಗಿ ಆತ ಹೇಳಿದ್ದ. ನಾವು ಸಮುದ್ರದಲ್ಲಿ ಫ್ರೆಂಚರನ್ನು ಎದುರಿಸಿದರೆ ನೆಲದಲ್ಲಿ ಮರಾಠರು ನೋಡಿಕೊಳ್ಳುತ್ತಾರೆ” ಎಂದು ಹೇಳಿದ್ದ.
ಫೋರ್ಟ್ ವಿಲಿಯಂನ ಪಾರ್ಲಿಮೆಂಟರಿ ಸೆಲೆಕ್ಟ್ ಕಮಿಟಿಗೆ ಕ್ಲೈವ್ ಜೂನ್ 21ರಂದು ಎರಡು ಪತ್ರಗಳನ್ನು ಬರೆದ. ಮೊದಲ ಪತ್ರದಲ್ಲಿ “ಇಂದು ವಾರ್ಕೌನ್ಸಿಲ್ನ ಸಭೆ ನಡೆಯಿತು. ದೇಶದ ಒಂದು ಶಕ್ತಿಯ (ಮರಾಠರು) ನೆರವನ್ನು ಪಡೆದು ನವಾಬನ ವಿರುದ್ಧ ಯುದ್ಧ ನಡೆಸುವುದು ಸರಿಯೆ ಎಂಬ ಬಗ್ಗೆ ಚರ್ಚಿಸಿದೆವು. ಮೀರ್ಜಾಫರ್ನ ಸಹಕಾರಕ್ಕಾಗಿ ನಾನು ಕಾಯುತ್ತಿದ್ದೇನೆ” ಎಂದು ತಿಳಿಸಿದ್ದ. ಕಂಪೆನಿಯ ಸಿರಾಜ್ ಉಚ್ಚಾಟನೆ ಕಾರ್ಯಕ್ರಮದಲ್ಲಿ ಮೀರ್ಜಾಫರ್ ತಟಸ್ಥನಾಗಿರುವುದು ಅಥವಾ ಇಂಗ್ಲಿಷರ ಜೊತೆ ಸೇರಿಕೊಳ್ಳುವುದು, ಗಾಜಿಯುದ್ದೀನ್ ಖಾನ್ ಹಾಗೂ ಮರಾಠರ ನೆರವು ಪಡೆಯುವುದು, ಮೀರ್ಜಾಫರ್ನನ್ನು ಬೆದರಿಕೆಯ ಪಣವಾಗಿಟ್ಟು ಸಿರಾಜ್ ಜೊತೆ ಸಂಧಾನ ಮಾಡಿಕೊಳ್ಳುವುದು – ಹೀಗೆ ವಿವಿಧ ಸಾಧ್ಯತೆಗಳ ಚಿಂತೆಯಲ್ಲಿ ಕ್ಲೈವ್ ಮುಳುಗಿಹೋಗಿದ್ದ. ಅಂದರೆ ಆತ ನವಾಬ ಸಿರಾಜ್ನಷ್ಟೇ ಚಿಂತೆಯಲ್ಲಿದ್ದ.
ಸೆಲೆಕ್ಟ್ ಕಮಿಟಿಗೆ ಬರೆದ ಎರಡನೇ ಪತ್ರದಲ್ಲಿ ಕ್ಲೈವ್ “ಮೀರ್ಜಾಫರ್ ನನ್ನ ಪತ್ರಕ್ಕೆ ಉತ್ತರ ಬರೆಯಲಿಲ್ಲ. ಆತ ತಟಸ್ಥ ಆಗಿರಬಹುದೆ? ಅದನ್ನು ಖಚಿತಪಡಿಸಿಕೊಳ್ಳಬೇಕೆ? ನವಾಬನ ಸೈನ್ಯ 8000 ಯೋಧರನ್ನು ದಾಟದು. ಈಗ ನವಾಬನಿಗೆ ಉಂಟಾಗಿರುವ ಭಯ ದೊಡ್ಡದು. ಆತ ನಮಗೆ ಗೌರವಪೂರ್ಣ ಶಾಂತಿಯನ್ನೂ ಕೊಡಬಹುದು. ಏಕೆಂದರೆ ಚಂದ್ರನಗರ ಪತನದ ಬಳಿಕ ಆತನಲ್ಲಿ ಭಯ ಹೆಚ್ಚಿರಬಹುದು. ನಾವು ಗಾಜಿಯುದ್ದೀನ್ ಖಾನ್ ಅಥವಾ ಮರಾಠರನ್ನು ಕರೆಯಬಹುದೆ? ಇಂತಹ ನಿರ್ಣಾಯಕ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕೆಂದು ನಿಮ್ಮ ಭಾವನೆ ಎಂಬುದನ್ನು ತಿಳಿಸಿ” ಎಂದು ವಿನಂತಿಸಿದ್ದ. ಇದರ ನಡುವೆ ಯುದ್ಧ ಬಾಗಿಲಿಗೆ ಬಂದು ನಿಂತಿತ್ತು.
ಮಾವಿನತೋಟದಲ್ಲಿ ಸೇನೆ
ಮಾರ್ಚ್ 22ರಂದು ಏನಾಯಿತೆನ್ನುವ ಬಗ್ಗೆ ಸ್ವಲ್ಪ ಗೊಂದಲವಿದೆ. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಬ್ರಿಟಿಷ್ ಸೇನೆ ಗಂಗಾನದಿಯನ್ನು ದಾಟಿತೆನ್ನುವುದು ಒಂದು ವಿವರಣೆ. ಜೂನ್ 3ನೇ ವಾರ ಗಂಗಾ-ಹೂಗ್ಲಿ ನದಿಗಳು ತುಂಬಿ ಹರಿಯುತ್ತವೆ. ನದಿ ದಡವೆಲ್ಲ ಕೆಸರು, ಹುಲ್ಲು, ಕಳೆ, ಕಸಕಡ್ಡಿ. ಕ್ಲೈವ್ನ ಸೈನ್ಯ 3 ಕಿ.ಮೀ. ಗಿಂತ ಸ್ವಲ್ಪ ಜಾಸ್ತಿ ಮುಂದೆ ಹೋಗಿ, ಹಿಂದೆ ಇದ್ದವರು ಬಂದು ಸೇರಿಕೊಳ್ಳುವುದಕ್ಕಾಗಿ ಅಲ್ಲಿ ಸ್ವಲ್ಪ ಹೊತ್ತು ನಿಂತಿತು. ಪುನಃ ಸಂಚಾರವನ್ನು ಆರಂಭಿಸಿದ್ದು ಅಪರಾಹ್ನ 4 ಗಂಟೆಗೆ; ಆಗ ಲಕ್ಷ ಬಾಗ್ವರೆಗೆ ಹೋದರು. ಪ್ಲಾಸಿಯ ತೋಪು ಅಥವಾ ಮಾವಿನತೋಟ ಅಲ್ಲೇ ಇತ್ತು. ಅದು ಸುಮಾರಾಗಿ ತ್ರಿಕೋನಾಕಾರದ ಜಾಗ. ಸುತ್ತ ಮಣ್ಣಿನ ದಂಡೆ ಕಟ್ಟಲಾಗಿತ್ತು; ಮಧ್ಯರಾತ್ರಿಯ ಹೊತ್ತಿಗೆ ಇಂಗ್ಲಿಷ್ ಸೇನೆ ಅಲ್ಲಿಗೆ ತಲಪಿತು.
ಆದರೆ ಕ್ಲೈವ್ ಹೇಳುವುದು ಬೇರೆ. ಜೂನ್ 22ರಂದು ಸಂಜೆ ಮೀರ್ಜಾಫರ್ ಪತ್ರ ಬರುವವರೆಗೆ ತಮ್ಮ ಸೈನ್ಯ ನದಿಯನ್ನು ದಾಟಲಿಲ್ಲ. ಸಂಜೆ 5 ಗಂಟೆಗೆ ದಾಟಿದೆವು ಎಂದಾತ ಹೇಳಿದ್ದಾನೆ. ಒಟ್ಟಿನಲ್ಲಿ ಅಂದು ಆತ ಭಾರೀ ಒತ್ತಡದಲ್ಲಿದ್ದುದ್ದು ನಿಜ. ಅಂದು ಕ್ಲೈವ್ ಮೀರ್ಜಾಫರ್ಗೆ ಎರಡು ಪತ್ರಗಳನ್ನು ಬರೆದ. ಒಂದು ಪತ್ರವನ್ನು ಮೀರ್ಜಾಫರ್ನ ಸಂದೇಶ ಬರುವ ಮುನ್ನ ಬರೆದರೆ, ಇನ್ನೊಂದನ್ನು ಸಂದೇಶ ಬಂದ ಅನಂತರ ಬರೆದ.
ಮೊದಲ ಪತ್ರದಲ್ಲಿ “ನಿನ್ನಿಂದಾಗಿ ನಾನು ಎಲ್ಲದರ ರಿಸ್ಕ್(ಅಪಾಯ)ನಲ್ಲಿದ್ದೇನೆ. ಇಂದು ಸಂಜೆ ನದಿಯನ್ನು ದಾಟುತ್ತೇನೆ. ಪ್ಲಾಸಿಯಲ್ಲಿ ನೀನು ನನ್ನ ಜೊತೆ ಸೇರಿಕೊಳ್ಳುವುದಾದರೆ ಅರ್ಧ ದಾರಿಗೆ ಬಂದು ನಿನ್ನನ್ನು ಎದುರುಗೊಳ್ಳುತ್ತೇನೆ. ಆಗ ನಾನು ನಿನಗಾಗಿ ಯುದ್ಧ ಮಾಡುವುದೆಂದು ನವಾಬನ ಇಡೀ ಸೈನ್ಯಕ್ಕೆ ತಿಳಿಯುತ್ತದೆ. ಅದು ನಿನಗೆ ಸುರಕ್ಷಿತವೆ? ಗೌರವವೆ? ನಾನು ನಿನಗೆ ನೀಡುವ ಖಚಿತ ಭರವಸೆಯೆಂದರೆ, ನೀನು ಈ ಪ್ರಾಂತಗಳ ಸುಬಾ ಆಗುವಿ. ಇಷ್ಟು ಕೆಲಸ ಮಾಡಲು ಕೂಡ ನಿನಗೆ ಅಸಾಧ್ಯವಾದರೆ ತಪ್ಪು ನನ್ನದಲ್ಲ. ಆಗ ನಾನು ನವಾಬನ ಜೊತೆ ಶಾಂತಿ (ಸಂಧಾನ) ಮಾಡಿಕೊಳ್ಳುವುದಕ್ಕೆ ನೀನು ಒಪ್ಪಿಗೆ ನೀಡಬೇಕು; ಮತ್ತು ನನ್ನ-ನಿನ್ನ ನಡುವೆ ಏನು ನಡೆದಿದೆ ಎಂಬುದು ಬೆಳಕಿಗೆ ಬರುವುದೇ ಇಲ್ಲ. ನಾನು ನನ್ನ ಯಶಸ್ಸು ಮತ್ತು ಹಿತಗಳನ್ನು ಎಷ್ಟು ಬಯಸುತ್ತೇನೋ ನಿನ್ನದನ್ನು ಅಷ್ಟೇ ಬಯಸುತ್ತೇನೆ ಎಂಬುದಕ್ಕಿAತ ಹೆಚ್ಚೇನು ಹೇಳಲಿ” ಎಂದು ಬರೆಯಲಾಗಿತ್ತು. ಅದಕ್ಕೆ ಮೀರ್ಜಾಫರ್ನ ಉತ್ತರ ಬಂತು. ಅದನ್ನು ನೋಡಿ ಕ್ಲೈವ್ ಮತ್ತೆ ಬರೆದ. ಅದರಲ್ಲಿ ‘ನವಾಬನ ಜೊತೆ ಒಪ್ಪಂದ ಮಾಡಿಕೊಳ್ಳುವೆ’ ಎಂಬುದಾಗಿ ಇನ್ನೊಮ್ಮೆ ಬೆದರಿಕೆ ಹಾಕಲಾಗಿತ್ತು.
ಸವಿವರ ಪಿತೂರಿ
ಯುದ್ಧಕ್ಕೆ ಬ್ರಿಟಿಷರು ಅಂತಿಮ ಸಿದ್ಧತೆಯನ್ನು ಮಾಡಿಕೊಂಡರು. ಅದರಂತೆ ಮೊದಲಿಗೆ ಅನಾರೋಗ್ಯದವರನ್ನು ಕಟ್ವಾ ಕೋಟೆಯಲ್ಲಿ ಇರಿಸಲಾಯಿತು. ಜೂನ್ 22ರ ಬೆಳಗ್ಗೆ ಸೇನೆಯು ನದಿಯನ್ನು ದಾಟಲು ಆರಂಭಿಸಿತು; ಅಪರಾಹ್ನ 4 ಗಂಟೆಯ ಹೊತ್ತಿಗೆ ಎಲ್ಲರೂ ದಾಟಿದರು. ಆ ಹೊತ್ತಿಗೆ ಮೀರ್ ಜಾಫರ್ನ ಇನ್ನೊಂದು ಪತ್ರ ಬಂತು. ಅದನ್ನು ರಸ್ತೆಯ ಮಾರ್ಗದಲ್ಲಿ ಕಳುಹಿಸಲಾಗಿತ್ತು. ಅದರಲ್ಲಿ ನವಾಬ ಮಂಕರಾದಲ್ಲಿದ್ದಾನೆ (ಜೂನ್ 19). ಕಾಸಿಂಬಜಾರ್ನಿAದ 6 ಮೈಲು ದಕ್ಷಿಣದ ಆ ಜಾಗದಲ್ಲಿ ಇಂಗ್ಲಿಷರು ನವಾಬನ ಸೈನ್ಯದ ಮೇಲೆ ದಾಳಿ ಮಾಡಬೇಕೆಂಬುದು ಮೀರ್ಜಾಫರ್ನ ಅಪೇಕ್ಷೆಯಾಗಿತ್ತು – ಎಂದಿತ್ತು. ಗಂಗಾನದಿ ನಿರ್ಮಿಸಿದ ದ್ವೀಪದಂತಹ ಆ ಜಾಗದಲ್ಲಿ ನೆಲದ ಮೂಲಕ ಹಠಾತ್ ಸುತ್ತುವರಿದು ಆಕ್ರಮಣ ಮಾಡುವುದಕ್ಕೆ ಅನುಕೂಲವಿತ್ತು. ಜೂನ್ 22ರಂದು ಅಪರಾಹ್ನ ಕ್ಲೈವ್ ಕೈಸೇರಿದ ಪತ್ರವನ್ನು ಮೀರ್ಜಾಫರ್ ಗಾಬರಿಯಿಂದಲೇ ಬರೆದಿದ್ದ: “ನೀವು ಕಟ್ವಾ ಕೋಟೆಯನ್ನು ವಶಪಡಿಸಿಕೊಂಡ ಬಗ್ಗೆ ತುಂಬ ಸಂತೋಷವಾಯಿತು. ಭಾನುವಾರ ನಾನು ನಗರದಿಂದ ಹೊರಟೆ. ಅಮ್ಮೊನಿ ಗಂಗೆಯಲ್ಲಿ ಒಂದು ದಿನ ನಿಂತೆ. ನನ್ನ ಜನ ಅಲ್ಲಿಗೆ ಬಂದು ಸೇರಿಕೊಂಡರು. ನವಾಬ ಇಂದು ತರಕಾಪುರದಿಂದ ಸೈನ್ಯವನ್ನು ಹೊರಡಿಸಿದ. ಮಂಕರಾದಲ್ಲಿ ಸೇತುವೆ ಬಳಿ ಶಿಬಿರ ಹೂಡಿದ್ದಾನೆ. ನಾನು ನಾಳೆ ನನ್ನ ಬೆಂಬಲಿಗರೊಂದಿಗೆ ಹೊರಡುತ್ತೇನೆ. ಸ್ವಲ್ಪ ದೂರ ಎಡದಲ್ಲಿ ನನ್ನ ವಿಭಾಗ (ಕ್ವಾಟರ್ಸ್) ಇರುತ್ತದೆ. ಮಂಕರಾದಲ್ಲೇ ಇರಬೇಕೆಂಬುದು ನವಾಬನ ಅಪೇಕ್ಷೆ. ಆದ್ದರಿಂದ ನೀವು ಎಷ್ಟು ಬೇಗ ಆಕ್ರಮಣ ಮಾಡುವಿರೋ ಅಷ್ಟು ಒಳ್ಳೆಯದು. ಆತನಿಗೆ ಸೇನೆಯನ್ನು ವಿನ್ಯಾಸಗೊಳಿಸಲು (ಡಿಸೈನ್ ಮಾಡಲು) ಸಮಯ ಇರಬಾರದು. ನೀವೀಗ ಡಿಸೈನ್ ಮಾಡುತ್ತಿದ್ದೀರೆಂದು ಭಾವಿಸುತ್ತೇನೆ; ವಿಳಂಬ ಸಲ್ಲದು. ನೀವು ಸಮೀಪ ಬಂದಾಗ ನಾನು ನಿಮ್ಮೊಂದಿಗೆ ಸೇರಿಕೊಳ್ಳಲು ಸಾಧ್ಯವಾಗುತ್ತದೆ. 200 ಅಥವಾ 300 ಜನ ಸಮರ್ಥ ಯೋಧರನ್ನು (ಫೈಟಿಂಗ್ ಮೆನ್) ನೀವು ಕಾಸಿಂಬಜಾರ್ ಕಡೆಗಿನ ಮೇಲಿನ ರಸ್ತೆಯಲ್ಲಿ ಕಳುಹಿಸಿದರೆ ನವಾಬನ ಸೈನಿಕರು ಅವರಾಗಿಯೇ ಹಿಂದೆ ಸರಿಯುತ್ತಾರೆ. ಆಗ ಯುದ್ಧದಲ್ಲಿ ಕಷ್ಟ ಇರುವುದಿಲ್ಲ. ಸೇನೆಯ ಸಮೀಪ ಬಂದಾಗ ನಾನು ಖಾಸಗಿಯಾಗಿ ಎಲ್ಲ ಗುಪ್ತ ಮಾಹಿತಿಗಳನ್ನು ಕೊಡಲಿದ್ದೇನೆ. ನೀವು ಯುದ್ಧ ಮಾಡುವ ಬಗ್ಗೆ ನನಗೆ ಮುಂದಾಗಿ ತಿಳಿಸಿ” ಎಂದು ಸೂಚಿಸಿದ; ಇದು ಮೀರ್ ಜಾಫರ್ನ ಪಿತೂರಿಯ ಒಂದು ಉತ್ಕೃಷ್ಟ ಮಾದರಿ!
ಅದಕ್ಕೆ ರಾಬರ್ಟ್ ಕ್ಲೈವ್ ಕೂಡಲೆ ಉತ್ತರಿಸಿದ: ಸಂಜೆ 6 ಗಂಟೆಯ ಹೊತ್ತಿಗೆ; ಆಗ ಅವರು ಗಂಗಾ ನದಿಯನ್ನು ದಾಟುತ್ತಿದ್ದರು: “ನಿನ್ನ ಪತ್ರವನ್ನು ನೋಡಿದ ಮೇಲೆ ಈಗ ಕೂಡಲೆ ಪ್ಲಾಸಿಗೆ ಹೋಗಲು ತೀರ್ಮಾನಿಸಿದ್ದೇನೆ; ಇದಕ್ಕೆ ಉತ್ತರಿಸಿ” ಎಂದು ಅದರಲ್ಲಿತ್ತು. ಮರುದಿನ ಬೆಳಗ್ಗೆ 6 ಮೈಲು ಮುಂದುವರಿಯುವುದು; ಮೀರ್ಜಾಫರ್ ಅಲ್ಲಿ ತನ್ನ ಜೊತೆ ಸೇರಿಕೊಳ್ಳದಿದ್ದರೆ ನವಾಬನ ಜೊತೆ ಸಂಧಾನ ಎಂದು ಆ ಹೊತ್ತಿಗೂ ಕ್ಲೈವ್ ಯೋಚಿಸಿದ್ದ. ಜೂನ್ 23ರಂದು ನವಾಬನ ಸೈನ್ಯ ಯುದ್ಧಕ್ಕೆ ಅಣಿಯಾಗಿ ಬಂತು. ಅದೇ ಯುದ್ಧದ ದಿನ.
ನಿಯಂತ್ರಣ ದೂರದಿಂದ
ಯುದ್ಧದಲ್ಲಿ ಮೊದಲಿಗೆ ಬ್ರಿಟಿಷರಿಗೆ ಸೋಲಾಗಬಹುದು ಎಂಬಂತೆ ತೋರುತ್ತಿತ್ತು. ಕ್ಲೈವ್ ಮತ್ತವನ ಸೈನ್ಯ ಪ್ಲಾಸಿಗೆ ಬರುವಾಗ ಸಿರಾಜ್ನ ಸೈನ್ಯ ಮೊದಲೇ ಬಂದು ಗಟ್ಟಿಯಾಗಿ ತಳವೂರಿತ್ತು. ಮೀರ್ಜಾಫರ್ನ ಪತ್ರ ಹೇಳಿದಂತೆ ಯುದ್ಧ ಅಲ್ಲದಿದ್ದರೂ ಘರ್ಷಣೆ ನಿರೀಕ್ಷಿತವಾಗಿತ್ತು. ಸಿರಾಜ್ ಮಂಕರಾದಿಂದಲೇ ಯುದ್ಧವನ್ನು ನಡೆಸುತ್ತಿದ್ದ. ಇಂಗ್ಲಿಷ್ ಸೇನೆ ಕೂಡಲೆ ಮಾವಿನತೋಟವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆಗ ಅವರಿಗೆ ನಿರಂತರ ತಮ್ಮಟೆ (ಡ್ರಮ್) ಶಬ್ದವನ್ನು ಕೇಳಿ ಆಶ್ಚರ್ಯವಾಯಿತು. ಕೊನೆಗೆ ಭಾರತೀಯ ಸೇನಾಶಿಬಿರದಲ್ಲಿ ರಾತ್ರಿ ವೇಳೆ ಡ್ರಮ್ ಬಾರಿಸುವುದು ಮಾಮೂಲೆಂದು ತಿಳಿಯಿತು. ನವಾಬನ ಸೈನ್ಯದಿಂದ ತಾವು ಒಂದು ಮೈಲಿಯೊಳಗೆ (1.6 ಕಿ.ಮೀ.) ಇದ್ದೇವೆಂದು ಕೂಡ ತಿಳಿಯಿತು. ಕಟ್ವಾ ಕೋಟೆಯನ್ನು ಗೆದ್ದ ಬ್ರಿಟಿಷರು ಕೂಡಲೆ ಮುಂದುವರಿಯಬಹುದೆAದು ಸಿರಾಜ್ ಮಂಕರಾದಲ್ಲೇ ನಿಲ್ಲಲು ನಿರ್ಧರಿಸಿದ್ದ. ಅವರು ಅಷ್ಟೊಂದು ಚುರುಕಾಗಿಲ್ಲ ಎಂದು ತಿಳಿದ ಬಳಿಕ ನಿಧಾನವಾಗಿ ಸೇನಾ ಸಂಚಲನ ನಡೆಸಿ ಇಂಗ್ಲಿಷರಿಗಿಂತ 12 ತಾಸು ಮೊದಲು ಪ್ಲಾಸಿಯನ್ನು ತಲಪಿದ್ದ.
ಪ್ಲಾಸಿಗೆ ತಲಪಿದ ರಾಬರ್ಟ್ ಕ್ಲೈವ್ಗೆ ಸುಮಾರು 6,000 ಸಿಬ್ಬಂದಿಯಿದ್ದ ನವಾಬನ ಮುಂಚೂಣಿ ಸೇನೆ ಬ್ರಿಟಿಷ್ ಕ್ಯಾಂಪಿನ ಮೂರು ಮೈಲಿಯೊಳಗೆ ಇದೆ ಎಂದು ತಿಳಿಯಿತು. ಇದು ಕ್ಲೈವ್ ಕೆಳಗಿದ್ದ ಸೇನೆಗಿಂತ 1,000ದಷ್ಟು ಜಾಸ್ತಿ. ಕ್ಲೈವ್ ಸೂಚನೆಯ ಪ್ರಕಾರ ಅವನ ಸೈನ್ಯ ತುಂಬ ಎಚ್ಚರ ವಹಿಸುತ್ತಿತ್ತು. 200 ಐರೋಪ್ಯರು, 300 ಸಿಪಾಯಿಗಳು, ಮತ್ತು ಎರಡು ಫಿರಂಗಿಗಳಿದ್ದ ವಿಭಾಗವನ್ನು ಆತ ‘ಪ್ಲಾಸಿಹೌಸ್’ನಲ್ಲಿ ಇರಿಸಿದ್ದ. ಅದು ಮಾವಿನತೋಟದಲ್ಲಿ ಆತ ಮಾಡಿಕೊಂಡಿದ್ದ ಪ್ರಧಾನ ಕೇಂದ್ರ. ಮಾವಿನತೋಟವು ಉತ್ತರ-ದಕ್ಷಿಣಕ್ಕೆ ಸುಮಾರು 800 ಗಜ (730 ಮೀ.) ಉದ್ದವಿದ್ದು, ಅಗಲ 300 ಗಜದಷ್ಟಿತ್ತು. (275 ಮೀ.) ಮಾವಿನ ಮರಗಳು ಸರಿಯಾದ ಸಾಲಿನಲ್ಲಿದ್ದವು. ತೋಟದ ಸುತ್ತ ಕಾವಲಿಗೆ ಸಿಪಾಯಿಗಳನ್ನು ಹಾಕಿದ್ದರು. ಇಂಗ್ಲಿಷರಿಗೆ ಅದು ಉತ್ತಮ ಲೊಕೇಶನ್ (ಸ್ಥಳ) ಆಗಿತ್ತು. ಸುತ್ತ ಕುರುಚಲು ಗಿಡಗಳಿದ್ದವು. ಸುಮಾರು 45 ಮೀ. ದೂರದಲ್ಲಿದ್ದ ಗಂಗಾನದಿಯು ಕುದುರೆ ಗೊರಸಿನ ಆಕಾರದಲ್ಲಿ ಸುಮಾರು ಮೂರು ಮೈಲು ಪರಿಧಿಯ(ಸುತ್ತಳತೆ) ಪರ್ಯಾಯದ್ವೀಪವನ್ನು ನಿರ್ಮಿಸಿತ್ತು.
ನವಾಬನ ಸೈನ್ಯದಲ್ಲಿದ್ದ ಫ್ರೆಂಚ್ ಫಿರಂಗಿದಾರರು ಕ್ಲೈವ್ ಪಡೆಯ ಮೇಲೆ ಗುಂಡುಹಾರಿಸಲು ಸಜ್ಜಾಗಿದ್ದರು. ಪ್ಲಾಸಿಹೌಸ್ನಲ್ಲಿದ್ದ ಕ್ಲೈವ್ ಬೆವರುತ್ತಿದ್ದ. ಪಿತೂರಿಗಾರರ ಭರವಸೆಗಳು ಈಡೇರುವುದನ್ನು ಕಾಯುತ್ತಿದ್ದ. ಮೀರ್ಜಾಫರ್ ಮುಖ್ಯ ಪಿತೂರಿಗಾರನಾದರೆ ರಾ ದುರ್ಲಭರಾಮ್ ಮತ್ತು ಯಾರ್ ಲತೀಫ್ ಕೂಡ ಈ ಸಾಲಿನಲ್ಲಿದ್ದರು. ರಾ ದುರ್ಲಭ್ ಇಂಗ್ಲಿಷರ ಕಡೆ ಸೇರಲು ಕಾಯುತ್ತಿದ್ದ. ಆತನನ್ನು ನವಾಬ ಯುದ್ಧಕಾಲದ ಕ್ಯಾಂಪ್ನ ಸಿದ್ಧತೆಗೆ ಕಳುಹಿಸಿದ್ದ. ತನಗೆ ನೀಡಿದ ಆದೇಶವನ್ನು ಜಾರಿ ಮಾಡುವವನಂತೆ ಆತ ನಟಿಸುತ್ತಿದ್ದ. ಆದರೆ ನಿಜವಾಗಿ ಮಾಡುತ್ತಿದ್ದುದೇ ಬೇರೆ. ಬ್ರಿಟಿಷರ ಜೊತೆ ಖಾಸಗಿ ಒಪ್ಪಂದವನ್ನು ಮಾಡಿಕೊಂಡಿದ್ದ ರಾ ದುರ್ಲಭ್, ತನ್ನ ಕೆಳಗಿನ ಅಧಿಕಾರಿಗಳನ್ನು ಕೂಡ ಇಂಗ್ಲಿಷ್ ಸೈನ್ಯಕ್ಕೆ ಸೇರಿಸುವುದರಲ್ಲಿ ನಿರತನಾಗಿದ್ದ.
ಶಿಬಿರದಲ್ಲಿ ಒಬ್ಬಂಟಿ
ಇತ್ತ ನವಾಬ ಸಿರಾಜ್ ಕ್ಯಾಂಪಿನಲ್ಲಿ ಏನು ನಡೆಯುತ್ತಿತ್ತು? ಯುದ್ಧದ ಸಮಯವೆಂದರೆ ಅಪಾಯದ ಸಮಯವೆಂಬಂತೆ ಅದು ಸಮೀಪವಾದಂತೆ ನವಾಬನ ವರ್ತನೆ ವಿಚಿತ್ರವಾಗುತ್ತಹೋಯಿತು. ಆತ ಶಿಬಿರಕ್ಕೆ ಆಗಮಿಸಿದ ದಿನ ಸಂಜೆ ಟೆಂಟ್ನಲ್ಲಿ ಕುಳಿತಿದ್ದ. ಆಗ ಅವನ ಒಬ್ಬೊಬ್ಬರೇ ಸೇವಕರು ಪ್ರಾರ್ಥನೆಗೆ ಹೋದರು; ಆತ ಒಬ್ಬಂಟಿಯಾದ. ಆಗ ಯಾವನೋ ಒಬ್ಬ (ಗೊತ್ತಿಲ್ಲದೆ ಅಥವಾ ಕದಿಯುವ ಉದ್ದೇಶದಿಂದ) ಅಲ್ಲಿಗೆ ಬಂದ. ಅವನನ್ನು ಗುರುತಿಸಿದ್ದು ನವಾಬನೇ. ಒಂದು ರೀತಿ ಭಯಗೊಂಡವನಂತೆ ಸೇವಕರನ್ನು ಕರೆಯುತ್ತ, “ಅವರು ನನ್ನನ್ನು ಸಾಯಿಸುವುದು ನಿಶ್ಚಿತ” ಎಂದು ಕೂಗಿಕೊಂಡ.
ಇದು ನಾಟಕೀಯ ದಾಖಲೆ ಇರಬಹುದು. ಆದರೆ ನವಾಬನ ಸುತ್ತ ವಿಷಯಗಳು ಹತಾಶೆಯ ಹರಿತವನ್ನು ತಲಪಿದ್ದು ನಿಜ. ಆತನ ಯುದ್ಧದ ಯೋಜನೆ ಚೆನ್ನಾಗಿದ್ದುದರಲ್ಲಿ ಸಂಶಯವಿಲ್ಲ. ಆದರೆ ಮೀರ್ಜಾಫರ್ ಅಂಥವರನ್ನು ಸುತ್ತ ಇಟ್ಟುಕೊಂಡು ಯುದ್ಧದಲ್ಲಿ ಜಯ ಗಳಿಸಲು ಸಾಧ್ಯವೆ? ಆ ವಿದ್ಯಮಾನ ಈಗಾಗಲೆ ನಗೆಪಾಟಲಿಗೆ ಗುರಿಯಾಗಿತ್ತು. ಕ್ಲೈವ್ನಂತೆ ನವಾಬ ಕೂಡ ಖಡ್ಗದ ಬಾಯಿಯ ಮೇಲೆ ನಿಂತಂತಹ ಪರಿಸ್ಥಿತಿಯಲ್ಲಿದ್ದ. ವಿಶೇಷವೆಂದರೆ ಇವನ ಬಳಿ ಪಿತೂರಿಗಾರರ ಸಮೂಹವೇ ಇತ್ತು.
ಕಲ್ಕತ್ತಾದಿಂದ ಕ್ಲೈವ್ ನದಿಯ ಮೂಲಕ ಮೇಲ್ಗಡೆ ಬರುತ್ತಿದ್ದಾನೆಂದು ಸಿರಾಜ್ ತುಂಬ ಆತಂಕಗೊಂಡಿದ್ದ. ಮೀರ್ಜಾಫರ್ ಬಳಿಗೆ ತನ್ನ ಅಜ್ಜಿ ಶರ್ಫ್ ಉನ್ನೀಸಾರವರನ್ನು ಕಳುಹಿಸಿ ಆತನ ಹಿಂದಿನ ತಪ್ಪುಗಳನ್ನು ಕ್ಷಮಿಸುವುದಾಗಿ ಹೇಳಿದ. ಅದರಿಂದ ಏನೂ ಪರಿಣಾಮವಾಗಲಿಲ್ಲ. ಆತ ಆಕೆಯ ಮಾತು ಕೇಳಲಿಲ್ಲ. ಏಕೆಂದರೆ ಆತ ಸಿರಾಜ್ನ ಮಾತು-ಕೃತಿ ಎರಡನ್ನೂ ನಂಬುತ್ತಿರಲಿಲ್ಲ. ಅದಲ್ಲದೆ ಅಷ್ಟರೊಳಗೆ ಪ್ಲಾಸಿ ಪಿತೂರಿ ತುಂಬ ಮುಂದೆ ಹೋಗಿತ್ತು. ಮೀರ್ಜಾಫರ್ ನವಾಬಗಿರಿಯ ಕನಸು ಕಂಡು ತುಂಬ ಅದರ ಸಮೀಪ ಹೋಗಿದ್ದ. ಹೀಗೆ ಇವರೆಲ್ಲ ಸಿರಾಜ್ ಪ್ರತಿಸ್ಪರ್ಧಿಗಳು.
ಅಂತಿಮವಾಗಿ ನವಾಬ ಸಿರಾಜ್ ಬ್ರಿಟಿಷ್ ಸೈನ್ಯವನ್ನು ಎದುರಿಸುವ ಹಂತಕ್ಕೆ ಬಂದಿದ್ದ. ಆತನಿಗೆ ಜಾಸ್ತಿ ಸಂಖ್ಯೆಯ ಸೈನಿಕರಿದ್ದರೂ ಕೆಳಮಟ್ಟದ ನಿರ್ವಹಣೆಯಿಂದ ಪತನದತ್ತ ಹೋಗುತ್ತಿದ್ದನೆಂದು ವ್ಯಾಖ್ಯಾನಿಸಲಾಗಿದೆ. ಮನಸ್ಸಿಲ್ಲದ ಮನಸ್ಸಿನಿಂದ ಆತ ಅರಮನೆಯನ್ನು ಬಿಟ್ಟು ಸೇನೆಯ ಜೊತೆ ಹೊರಟಿದ್ದ. ಮೀರ್ ಮದನ್, ರಾಜ್ದಾ ಮೋಹನ್ಲಾಲ್ ಮತ್ತಿತರರು ಅವನ ಜೊತೆ ಇದ್ದರು. ಮೀರ್ ಮದನ್ ಪತ್ನಿಯ ಜೊತೆ ಸಿರಾಜ್ಗೆ ಗೆಳೆತನವಿತ್ತು; ಆತ ಮೀರ್ಜಾಫರ್ ಉಚ್ಚಾಟನೆಗೆ ಪ್ರಯತ್ನಿಸುತ್ತಿದ್ದ. “ಮೀರ್ಜಾಫರ್ ಪ್ರಚೋದನೆಯ ಮೇರೆಗೆ ಇಂಗ್ಲಿಷರು ಮುಂದೆ ಬರುತ್ತಿದ್ದಾರೆ; ಅವನನ್ನೇ ಮೊದಲು ಕೊಲ್ಲಬೇಕು. ಅನಂತರ ಇಂಗ್ಲಿಷರಿಗೆ ನದಿಯ ಈಚೆ ಬರಲು ಧೈರ್ಯ ಇರುವುದಿಲ್ಲ” ಎಂದು ಬಂದೂಕುಪಡೆಯ ಸೂಪರಿಂಟೆಂಡೆಂಟ್ ಕೂಡ ಆಗಿದ್ದ ಮೀರ್ ಮದನ್ ಹೇಳುತ್ತಿದ್ದ. ಇದು ಸಿರಾಜ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮೋಹನ್ಲಾಲ್ ಸಿರಾಜ್ನ ಹೊಸ ದಿವಾನ.
ಮರುದಿನ ಸಿರಾಜ್ ದೌಡ್ಪುರಕ್ಕೆ ಹೋದಾಗ ಇಂಗ್ಲಿಷರು ಕಟ್ವಾಕ್ಕೆ ಬೆಂಕಿ ಹಚ್ಚಿದರು. ಆಗ ಮೋಹನ್ಲಾಲ್ ಸಿರಾಜ್ ಬಳಿ “ನೀನು ನನ್ನನ್ನು ನಾಶ ಮಾಡಿದೆ. ನನ್ನ ಮಕ್ಕಳು ಅನಾಥರಾದರು. ಮೀರ್ಜಾಫರ್ ಮತ್ತು ರಾÊ ದುರ್ಲಭ್ರನ್ನು ಕಟ್ವಾ ಔಟ್ಪೋಸ್ಟ್ನಿಂದ ಉಚ್ಚಾಟಿಸದಿದ್ದರೆ ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ” ಎಂದು ಗೋಗರೆದ. ಇದಕ್ಕೆಲ್ಲ ಕಿವುಡನಾಗದೆ ನವಾಬ ಸಿರಾಜನಿಗೆ ಬೇರೆ ಮಾರ್ಗ ಇರಲಿಲ್ಲ.
(ಸಶೇಷ)
ಸಿರಾಜ್; ಕವಿ ಕೊಟ್ಟ ಚಿತ್ರ
ಸಿರಾಜುದ್ದೌಲ ಮತ್ತು ಪ್ಲಾಸಿಯುದ್ಧಕ್ಕೆ ಸಂಬಂಧಿಸಿ ಕವಿ ನಬೀನಚಂದ್ರನ ಒಂದು ಕಥೆ ಹೀಗಿದೆ: “ನವಾಬ ಸಿರಾಜ್ ಪ್ಲಾಸಿಯ ತನ್ನ ವೈಭವದ ಟೆಂಟ್ನಲ್ಲಿ ಒಬ್ಬನೇ ಕುಳಿತಿದ್ದ. ಆಗ ಒಬ್ಬ ರಾಕ್ಷಸ ಅಲ್ಲಿಗೆ ಬಂದ. ಒಬ್ಬ ಎಂದರೆ ಒಬ್ಬನೇ ಅಲ್ಲ. ಸುತ್ತ ಸುಂದರ ಸ್ತ್ರೀಯರಿದ್ದಾರೆ – ಸುಮಾರು ಒಂದು ನೂರರಷ್ಟು. ನವಾಬನ ಖುಷಿಗಾಗಿ ಅವರು ಹಾಡುತ್ತಿದ್ದಾರೆ. ಕೆಲವರು ಅರೆನಗ್ನರಾದವರು ಪಾಪಿ ನವಾಬನ ಅಪೇಕ್ಷೆಯ ಈಡೇರಿಕೆಗಾಗಿ ಕುಣಿಯುತ್ತಿದ್ದಾರೆ. ಚಿನ್ನದ ಪಾತ್ರೆಗೆ ಮದ್ಯವನ್ನು ಸುರಿಯುತ್ತಿದ್ದಾರೆ. ಸುರಿ, ಕುಡಿ; ಸುರಿ, ಕುಡಿ – ಎಂಬ ವರಸೆ ನಡೆಯುತ್ತಿದೆ. ‘ನೃತ್ಯ ಮುಂದುವರಿಯಲಿ. ಯುದ್ಧಕ್ಕೇನು, ಅದು ಕಾಯುತ್ತದೆ; ಇದು ನಡೆಯಲಿ’ ಎಂಬ ಸೂಚನೆ ಕೇಳಿಬರುತ್ತಿದೆ. ಆದರೆ ಸಂಶಯಗಳು ಸಿರಾಜ್ನನ್ನು ಬಿಡಲಿಲ್ಲ: “ನಾನೊಬ್ಬ ಫೂಲ್ (ಮೂರ್ಖ). ಮೀರ್ಜಾಫರ್ನ ದ್ರೋಹ ತಿಳಿದ ಬಳಿಕವೂ ಇಟ್ಟುಕೊಂಡು ತಪ್ಪು ಮಾಡಿದೆ; ಅವನ ಮಾತನ್ನು ನಂಬಿದೆ. ಕ್ಲೈವ್ನ ಭರವಸೆಯ ಸಂದೇಶದಿಂದ ಶಾಂತನಾದ ನಾನೊಬ್ಬ ಫೂಲ್. ಇಂಗ್ಲಿಷರು ಸುಳ್ಳುಗಾರರ ಒಂದು ಜನಾಂಗ ಎಂಬುದು ಯಾರಿಗೆ ಗೊತ್ತಿತ್ತು? ಅಂತಹ ವಂಚಕರ (ಕನ್ನಿಂಗ್) ಒಂದು ಜನಾಂಗ ಇರಲು ಸಾಧ್ಯವೆ? ಜನ ಮಾತಿನಲ್ಲಿ ನಿನ್ನೊಂದಿಗಿದ್ದು ಕೃತಿಯಲ್ಲಿ ನಿನ್ನ ವಿರುದ್ಧ ಆದರೆ? ಅವರ ಭರವಸೆಗಳು ಹಗಲುಗನಸಾಯಿತೆ? ಈಗ ನಾನು ಎಲ್ಲಿಗೆ ಹೋಗಲಿ? ಏನು ಮಾಡಲಿ?” ಎಂದಾತ ಕಿರುಚಿದ.
ಮತ್ತೆ ಜೋರಾಗಿ ಪುನಃ ಅದನ್ನೇ ಮಾಡಿದ. ಮಾತನ್ನು ಮುಂದುವರಿಸಿ “ಹೇಗಾದರೂ ನಾನು ನಾಳೆಗೆ ಉಳಿದರೆ ಮೀರ್ ಜಾಫರ್ ಮತ್ತು ಉಳಿದೆಲ್ಲ ದೇಶದ್ರೋಹಿಗಳಿಗೆ ಸರಿಯಾದ ಉತ್ತರ ಕೊಡುತ್ತೇನೆ. ಅವರು ಮತ್ತವರ ಕುಟುಂಬದವರನ್ನು ಕೊಂದುಹಾಕುತ್ತೇನೆ. ಅವರ ಎದುರೇ ಅವರ ಮಹಿಳೆಯರನ್ನು ಅಪವಿತ್ರಗೊಳಿಸುತ್ತೇನೆ. ಅವರ ಹೆಂಡಿರು-ಮಕ್ಕಳನ್ನು ಕಡಿದುಹಾಕುತ್ತೇನೆ. ಅವರ ತಂದೆ ಮತ್ತವರ ಗಂಡಂದಿರ ರಕ್ತ ಅವರ ಹೃದಯಕ್ಕೆ ಹೋಗುತ್ತದೆ. ಅದರಿಂದ ಅವರ ಬಂಡಾಯ ಶಮನ ಆಗುತ್ತದೆ. ಮತ್ತೆ ಅವರ ಮೇಲೆ ನಮ್ಮ ಕೆಲಸ; ಮೊದಲು ಕಣ್ಣು ಕೀಳುವುದು…. ಏನಿದ್ದರೂ ಕನಿಷ್ಠ ಅಷ್ಟಾದರೂ ನಿಜವಾದೀತು” ಎಂದಾತ ಕಿರುಚುತ್ತಾನೆ.