ಸಂವಿಧಾನವೆಂದರೆ ವಕೀಲನ ದಸ್ತಾವೇಜಿನ ಬರಿಯ ಹಾಳೆಗಳಲ್ಲ, ಅದು ಚಲಿಸುತ್ತಿರುವ ಜೀವಂತ ವಾಹನ. ಅದರ ಚೈತನ್ಯ ಆ ಕಾಲಘಟ್ಟದ ಚೈತನ್ಯವೂ ಆಗಿರುತ್ತದೆ’’ ಎನ್ನುವ ಡಾ. ಬಿ.ಆರ್. ಅಂಬೇಡ್ಕರ್ರ ಮಾತುಗಳು ಎಷ್ಟು ಅರ್ಥಪೂರ್ಣ ಎಂದರೆ ಪ್ರಸ್ತುತ ಭಾರತ ಆ ಮಾತುಗಳ ಸಾಕ್ಷಾತ್ಕಾರ ಎಂಬಂತೆ ಕಂಗೊಳಿಸುತ್ತಿದೆ.
ಹೆಚ್ಚೇನು ದೂರದ ಉದಾಹರಣೆ ಬೇಕಿಲ್ಲ. ಪಕ್ಕದ ಪಾಕಿಸ್ತಾನದಲ್ಲಿ ಈ ಕಂತಿನಲ್ಲಿ ರಾಷ್ಟ್ರಾಧ್ಯಕ್ಷ ಆಗಿದ್ದಾತ ಉಳಿದ ಸಮಯ ಜೈಲಿನಲ್ಲಿ ಕೊಳೆತು ಕಾಲ ಕಳೆಯುತ್ತಾನೆ. ಅಧಿಕಾರವೊಂದು ಕೈತಪ್ಪಿದರೆ ನಸುಕೇರುವ ಮುಂಚೆಯೇ ಊರು ಬಿಡುತ್ತಾನೆ ಅಥವಾ ಜೈಲಿನಲ್ಲಿ ಕೈದಿಯಾಗಿರುತ್ತಾನೆ. ಪ್ರಪಂಚದ ಮೂಲೆಯ ಯಾವುದೋ ಊರಿನಲ್ಲಿ ಅಂಡಲೆಯುತ್ತಾನೆ. ಅಲ್ಲಿನ ಐದನೇ ಪ್ರಧಾನಿ ಹುಸೇನ್ ಶಾಹೀದ್ ಸುಹ್ರಾವಾರ್ದಿಯನ್ನು ೧೯೬೨ರಲ್ಲಿಯೇ ಸೇನಾಧ್ಯಕ್ಷ ಅಯೂಬ್ಖಾನನಿಗೆ ಸಹಾಯ ಮಾಡಲಿಲ್ಲವೆಂದು ಜೈಲಿಗೆ ದಬ್ಬಲಾಗಿತ್ತು. ಜುಲ್ಫೀಕರ್ ಅಲಿ ಭುಟ್ಟೋ ಅಧ್ಯಕ್ಷಪೀಠವೇರಿ ಇಳಿದ ತಕ್ಷಣ ನೇಣುಗಂಬಕ್ಕೆ ಹಾಕಿ ಅಲ್ಲಿನ ಮಿಲಿಟರಿ ವ್ಯವಸ್ಥೆ ಕುಣಿದಾಡಿಬಿಟ್ಟಿತ್ತು. ಎರಡೆರಡು ಬಾರಿ ಪ್ರಧಾನಿಯಾಗಿ ಅಧಿಕಾರ ಚಲಾಯಿಸಿದ್ದ ಬೆನೆಜಿರ್ ಭುಟ್ಟೋ ಕಂಬಿ ಎಣಿಸುವುದನ್ನು ಯಾರಿಂದಲೂ ತಪ್ಪಿಸಲಾಗಲಿಲ್ಲ. ಜಾಣತನದಿಂದ ತಾನೊಂದು ಚಿಕಿತ್ಸೆಗೆ ತೆರಳುತ್ತೇನೆಂದು ದೇಶ ಬಿಟ್ಟ ಮಾಜಿ ಪ್ರಧಾನಿ ನವಾಜ್ ಶರೀಫ್ ಲಂಡನ್ನಿಗೆ ಪಲಾಯನ ಮಾಡಿ ಮತ್ತೆ ಪಾಕ್ ಕಡೆ ತಲೆಹಾಕಿಯೂ ಮಲಗಲಿಲ್ಲ. ಅಧಿಕಾರ ಸಿಕ್ಕಿದರೆ ಮರಳಿ ಬರುತ್ತೇನೆ ಎನ್ನುವ ನವಾಜ್ ಶರೀಫ್ಗೆ ಅಧಿಕಾರ ಹೋದಾಗ ಜೀವಂತ ಇರುತ್ತೇನೆ ಎನ್ನುವ ಯಾವ ಖಾತರಿಯೂ ಇರಲಿಲ್ಲ. ಪರ್ವೇಜ್ ಮುರ್ರಫ್ನಂತಹ ವ್ಯಕ್ತಿ ಬದುಕಿದೆಯಾ ಬಡಜೀವ ಎಂದು ಕಾಲಿಗೆ ಬುದ್ಧಿ ಹೇಳಿದ್ದು, ಇಮ್ರಾನ್ಖಾನ್ ಗುಂಡೇಟು ತಿಂದು ಬಂಧನಕ್ಕೊಳಗಾಗಿ ಪಡಿಪಾಟಲು ಪಡುತ್ತಿರುವುದು ನಮ್ಮ ಕಾಲಘಟ್ಟದಲ್ಲಿಯೇ ನಡೆಯುತ್ತಿದೆ. ಸರಹದ್ದು ಕಾದು ದೇಶದ ಪರಮಾಧಿಕಾರ ರಕ್ಷಿಸಬೇಕಿದ್ದ ಅಯೂಬ್ಖಾನ್, ಯಾಹ್ಯಾಖಾನ್, ಜಿಯಾಉಲ್ಹಕ್, ಪರ್ವೇಜ್ ಮುರ್ರಫ್ರಂತಹ ದಂಡನಾಯಕರುಗಳು ಚುನಾಯಿತ ಸರ್ಕಾರಗಳನ್ನು ದಿಂಡುರುಳಿಸಿ ಪಾರಮ್ಯ ಮೆರೆದಿದ್ದು, ಅಧಿಕಾರಕ್ಕಾಗಿ ಮುಗಿಬಿದ್ದಿದ್ದು, ಪಾಕಿಸ್ತಾನದ ರಾಜಕೀಯ ದೊಂಬರಾಟಕ್ಕೆ ಹಿಡಿದ ಕೈಗನ್ನಡಿ. ದೇಶ ರಚನೆಯಾದ ತರುವಾಯ ಪಾಕ್ ಆಡಳಿತದ ಅರ್ಧಭಾಗ ಸೇನೆಯೇ ತನ್ನ ಹೆಸರಿಗೆ ಬರೆಸಿಕೊಂಡಿದೆ. ಅರಾಜಕತೆ ಎಂದರೆ ಏನು ಎಂಬುದಕ್ಕೆ ಪಾಕಿಸ್ತಾನ ಒಂದು ಸ್ಪಷ್ಟ ಉದಾಹರಣೆ.
ಮಹಾಭಾರತದ ಒಂದು ಶ್ಲೋಕ ಹೀಗಿದೆ: “ಲೋಕರಂಜನಂ ಏವ ಅತ್ರ ರಾಜಧರ್ಮಃ ಸನಾತನ ಸತ್ಯಸ್ಯ ರಕ್ಷಣಂ ಚೈವ ವ್ಯವಹಾರಸ್ಯ ಚರ್ಯವಃ” ಹೇಳುವುದೇನೆಂದರೆ, ಜನರನ್ನು ಅಂದರೆ ಪ್ರಜೆಗಳನ್ನು ಸಂತೋಷವಾಗಿರಿಸುವುದು, ಸತ್ಯದೊಂದಿಗೆ ನಿಲ್ಲುವುದು ಮತ್ತು ಸರಳ ನಡವಳಿಕೆಯನ್ನು ಅಭ್ಯಾಸ ಮಾಡುವುದು ಇದು ರಾಜಧರ್ಮವಾಗಬೇಕು ಎನ್ನುವುದಾಗಿದೆ. ಭಾರತದ ಸಂವಿಧಾನ ಎನ್ನುವುದು ಜನಸಾಮಾನ್ಯನನ್ನು ಸುಖಿಯಾಗಿರಿಸುವ ನಿಟ್ಟಿನಲ್ಲಿ ಅಭೂತಪೂರ್ವ ಕೊಡುಗೆಗಳನ್ನು ನೀಡಿದೆ. ಸತ್ಯದೊಂದಿಗೆ ನಿಲ್ಲುವ ಪರಿಪಾಟಿಗಳನ್ನು ಯಾವತ್ತೂ ತನ್ನ ಹೆಗ್ಗಳಿಕೆ ಎಂದೇ ಪರಿಗಣಿಸಿ ಕೆಲಸ ಮಾಡುತ್ತಿದೆ. ರಾಜಧರ್ಮ ಎಂದರೆ ಸರಳ ನಡವಳಿಕೆಗಳನ್ನು ಅಭ್ಯಾಸ ಮಾಡಿಸುವುದು ಎನ್ನುವ ಭೂಮಿಕೆಯಡಿ ಇಲ್ಲಿನ ಸಂವಿಧಾನ ಜನಸಾಮಾನ್ಯರಿಗೆ ಅಧಿಕಾರ ನೀಡಿದೆ. ಒಂದು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಾಗ ಅನೇಕ ಸವಾಲುಗಳು ಎದುರಾಗುತ್ತವೆ. ಅಧಿಕಾರ ಹಂಚಿಕೆ ಸಾಮಾನ್ಯರಿಗೆ ಆದರೆ ಅದರ ಸಫಲತೆ ಎಷ್ಟರಮಟ್ಟಿಗೆ ಸಾಧ್ಯ ಎನ್ನುವ ಕಳವಳವೂ ಎದುರಾಗುತ್ತದೆ. ‘ರಾಜಧರ್ಮದ ಪರಿಪಾಲನೆ’ ಎನ್ನುವ ಪರಿಕಲ್ಪನೆಯಲ್ಲಿ ಸರಳ ನಡವಳಿಕೆಗಳನ್ನು ಅಭ್ಯಾಸ ಮಾಡಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಭಾರತದ ಸಂವಿಧಾನ ಅನಾಯಾಸವಾಗಿ ಅದನ್ನು ಸಾಧಿಸಿ ತೋರಿಸಿದೆ ಎನ್ನುವುದೇ ಇದರ ಹೆಗ್ಗಳಿಕೆ.
ರಾಜಧರ್ಮದ ಮಾತು ಬಂದಾಗ ಈ ನೆಲ ಅನೇಕ ಮೇಲ್ಪಂಕ್ತಿಗಳನ್ನು ಜಗತ್ತಿಗೆ ನೀಡಿದೆ. ಒಬ್ಬ ವ್ಯಕ್ತಿಯ ನೈಜ ಸ್ವಭಾವ ಅರಿಯಲು ಆತನಿಗೆ ಅಧಿಕಾರ ಅಥವಾ ಸಂಪತ್ತನ್ನು ನೀಡಿ ಪರೀಕ್ಷಿಸಬೇಕು ಎನ್ನುವ ಮಾತಿದೆ. ಆದರೆ ಅದನ್ನು ನೀಡಿದಾಗ ಜಗತ್ತಿನಲ್ಲೇ ನಡೆಯದ ವ್ಯತಿರಿಕ್ತಗಳು ಭಾರತದಲ್ಲಿ ನಡೆದುಹೋಗಿವೆ.
ಸೋದರರೊಳ್ ಸೋದರರಂ
ಕಾದಿಸುವುದು ಸುತನ ತಂದೆಯೊಳ್ ಬಿಡದು
ತ್ಪಾದಿಸುವುದು ಕೋಪಮನ್ ಅಳವು
ಈ ದೊರೆತು ಎನೆ, ತೊಡರ್ವುದೆಂದು ರಾಜ್ಯಶ್ರೀಯೊಳ್
ಮಲ್ಲಯುದ್ಧ, ದೃಷ್ಟಿಯುದ್ಧ, ಜಲಯುದ್ಧಗಳ ತರುವಾಯ ದೊರೆತ ರಾಜ್ಯ, ಮಕಾಡೆ ಮಲಗಿದ ಅಣ್ಣ ಅರ್ಥಾತ್ ಭರತಚಕ್ರವರ್ತಿಯ ಕಡೆಗೆ ದೃಷ್ಟಿಹರಿಸುತ್ತ ಬಾಹುಬಲಿ ಹೇಳಿದ ಮಾತುಗಳಿವು. ರಾಜಪ್ರಭುತ್ವ ಎಂಬುದು ಸಹೋದರರನ್ನೇ ಎದುರಾಳಿಗಳನ್ನಾಗಿಸುತ್ತದೆ. ತಂದೆ ಮಕ್ಕಳೆನ್ನುವ ಮಾನವ ಸಂಬಂಧಗಳನ್ನೇ ಪಕ್ಕಕ್ಕಿರಿಸಿ ಬಡಿದಾಡಿಸಿಹಾಕುತ್ತದೆ. ಹಾಗಾಗಿ ಇವಾವುದೂ ಬೇಡ – ಎಂದು ಕೈಗೆ ಬಂದ ಅಧಿಕಾರ ತ್ಯಜಿಸಿ ವೈರಾಗ್ಯಮೂರ್ತಿಯಾದ ಬಾಹುಬಲಿಯ ಕತೆಗೆ ಸಾಕ್ಷಿಯಾದ ಭೂಮಿಯಿದು. ಅದೇ ರೀತಿಯಲ್ಲಿ ಕಳಿಂಗದ ಅಶೋಕ ಮಹಾರಾಜ ಯುದ್ಧದ ತರುವಾಯ ಬದಲಾದದ್ದೂ ಕೂಡ ಇಲ್ಲಿನ ಇತಿಹಾಸದಲ್ಲಿ ದಾಖಲಾಗಿದೆ. ‘ರಾಜಧರ್ಮ’ ಎನ್ನುವ ಪರಿಕಲ್ಪನೆ ಭಾರತದ ಪಾಲಿಗೆ ಅತ್ಯಂತ ವಿಶೇಷ. ಒಬ್ಬ ರಾಜನಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಔನ್ನತ್ಯ, ಅಂತೆಯೇ ಒಬ್ಬ ಪ್ರಜಾಪಾಲಕನಾಗಿ ಹೇಗಿರಬಾರದೆನ್ನುವ ಹೇಯತನ ಇವೆರಡರ ಪರಿಚಯವನ್ನೂ ಭಾರತದ ಕೆಲ ಕಾಲಘಟ್ಟಗಳು ಮಾಡಿವೆ. ಅರವಟ್ಟಿಗೆ, ಛತ್ರ, ದೀನರಿಗೆ ಆಸರೆಯಾಗಿ ನಿಂತ ರಾಜಮಹಾರಾಜರುಗಳ ಪರಂಪರೆ ಒಂದೆಡೆಯಾದರೆ ದೇವಸ್ಥಾನಗಳನ್ನು ಕೊಳ್ಳೆಹೊಡೆದು, ವಿಗ್ರಹಗಳನ್ನು ಕಡಿದು ತುಂಡರಿಸಿ, ಮೂರ್ತಿಗಳ ಭಂಜನೆ ಮಾಡಿದವರ ಕ್ರೌರ್ಯಗಳೂ ಇಲ್ಲಿನ ಆಡಳಿತದ ಪರಿಚಯ ನೀಡಬಲ್ಲುದು. ಅಂಬೇಡ್ಕರ್ ಹೇಳಿದಂತೆ ಸಂವಿಧಾನ ಆಯಾಯ ಕಾಲಘಟ್ಟದ ಚೈತನ್ಯದ ಅನಾವರಣ ಮಾಡಬಲ್ಲುದು.
೧೯೪೬ ನವೆಂಬರ್ ೨೬ರಂದು ಅಂಗೀಕರಿಸಿ, ಜನವರಿ ೨೬, ೧೯೫೦ರಂದು ಜಾರಿಗೆ ಬಂದ ನಮ್ಮ ಸಂವಿಧಾನ ಬದಲಾದ ಕಾಲಘಟ್ಟದಲ್ಲಿ ೪೭೦ ವಿಧಿಗಳು, ೨೫ ಭಾಗಗಳು, ೧೨ ಅನುಚ್ಛೇದಗಳನ್ನು ಹೊಂದಿದೆ. ನಾವು ಹೊಂದಿರುವ ಸಂವಿಧಾನ ಅತ್ಯಂತ ವಿಸ್ತಾರವಾದ ಮತ್ತು ಕಾಲಾನುಕ್ರಮದ ಬದಲಾವಣೆಗಳಿಗೆ ತೆರೆದುಕೊಂಡಿರುವ ಒಂದು ಬೃಹತ್ ಸಂರಚನೆ. ೧೧೮ ತಿದ್ದುಪಡಿಗಳನ್ನು ಹೊಂದಿದ ಈ ವ್ಯವಸ್ಥೆ ಪ್ರಪಂಚದ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತಲೂ ದೀರ್ಘವಾಗಿರುವಂತಹ ಹೆಗ್ಗಳಿಕೆ ಹೊಂದಿದೆ. ಬ್ರಿಟನ್, ಅಮೆರಿಕಾ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಮೊದಲಾದ ದೇಶಗಳ ಸಾಂವಿಧಾನಿಕ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಉದಾತ್ತವಾದ ಭಾರತೀಯತೆಗೆ ಒಗ್ಗುವ ಅನೇಕ ಸಂಗತಿಗಳನ್ನು ಭಾರತದ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು. ಕೆ.ಎಂ. ಮುನ್ಶಿ, ಮಹಮ್ಮದ್ ಸಾದುಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಬಿ.ಎಲ್. ಮಿಟ್ಟಲ್, ಟಿ.ಟಿ. ಕೃಷ್ಣಮಾಚಾರಿ, ಡಿ.ಪಿ. ಖೈತಾನ್, ಬಿ.ಎನ್. ರಾವ್ – ಅವರನ್ನೊಳಗೊಂಡ ಕರಡು ರಚನಾ ಸಮಿತಿಗೆ ಅಧ್ಯಕ್ಷರಾದವರು ಡಾ. ಬಿ.ಆರ್. ಅಂಬೇಡ್ಕರ್ರವರು. ಭಾರತದ ಸೌಭಾಗ್ಯ ಎಂದರೆ ಪ್ರಪಂಚದ ಎಲ್ಲ ಗುಣಾತ್ಮಕತೆಗಳನ್ನು ಪೇರಿಸಿದ ನಂತರ ಭಾರತಕ್ಕೆ ನೈಜವಾಗಿ ಪೀಯೂಷವೇ ಒಲಿಯಿತು. ಅತ್ಯಂತ ಶ್ರೇಷ್ಠವಾದ ಜನತಂತ್ರ ರಾಷ್ಟ್ರವನ್ನು ಕಟ್ಟುವ ನಿಟ್ಟಿನಲ್ಲಿ ಸಂವಿಧಾನ ನೀಡಿದ ಕೊಡುಗೆಯನ್ನು ದೇಶ ನಿತ್ಯ ಸ್ಮರಿಸಬೇಕು.
ಪ್ರತಿ ಐದು ಕಿ.ಮೀ.ಗೊಂದರಂತೆ ಭಾರತದ ಭಾಷೆಯ ಸೊಗಡು ಬದಲಾಗುತ್ತದೆ ಎನ್ನುವ ಮಾತಿದೆ. ಭಿನ್ನ ಭಿನ್ನ ಭಾಷೆ, ಆಚಾರ, ವಿಚಾರ, ಪ್ರಾಂತ, ಬುಡಕಟ್ಟು, ಜೀವನಕ್ರಮಗಳನ್ನು ಹೊಂದಿರುವ ದೇಶದಲ್ಲಿ ಸಾಮಾಜಿಕ ನ್ಯಾಯಗಳನ್ನು ಒದಗಿಸುವಿಕೆ ಅತ್ಯಂತ ಸವಾಲಿನ ಕೆಲಸ. ಆದರೆ ಭಾರತೀಯರು ಎಲ್ಲ ಸವಾಲುಗಳನ್ನು ಮೀರಿ ಸಂವಿಧಾನದ ಆಶೋತ್ತರಗಳನ್ನು ಭರಪೂರ ಯಶಸ್ವಿಗೊಳಿಸಿದರು. ರಾಜಪ್ರಭುತ್ವವೇ ಜೀವಾಳವಾಗಿದ್ದ ದೇಶದಲ್ಲಿ ಸಹಜ ರೀತಿಯ ಜೀವನದ ಅನುಷ್ಠಾನ ಅಷ್ಟು ಸುಲಭವಾಗಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. ರಾಜಧರ್ಮಗಳ ಪಾಲನೆಯ ಹೆಸರಿನಲ್ಲಿ, ಹುಕುಂ ಪಾಲಿಸುವ ಭರದಲ್ಲಿ, ಮಂತ್ರಿಮಾಗಧರ ಕಟ್ಟಪ್ಪಣೆಗಳಲ್ಲಿ ಜನಸಾಮಾನ್ಯ ಪ್ರತಿ ಸಾರಿ ಹೆಣಗುತ್ತಿದ್ದ. ಆದರೆ ಬದಲಾದ ಕಾಲಘಟ್ಟದಲ್ಲಿ ಜನಸಾಮಾನ್ಯನೇ ರಾಜಧರ್ಮ ರೂಪಿಸುವ ಕೆಲಸ ಮಾಡುತ್ತಿದ್ದಾನೆ ಎಂದರೆ ಅದೊಂದು ವಿಸ್ಮಯವೇ ಸರಿ. ಸಂವಿಧಾನ ನಡೆಸಿದ ಕ್ರಾಂತಿ ಯಾವ ಯುದ್ಧಕ್ಕೂ ಕಡಮೆಯಿಲ್ಲ. ಭಾರತದ ಚಿತ್ರಣ ಇಂದು ಸಂಪೂರ್ಣವಾಗಿ ಬದಲಾಗಿದೆ. ಕೂಲಿ ಕಾರ್ಮಿಕ, ರೈತ, ಜಾತಿ ಪಂಥಗಳ ಭೇದವೇ ಇಲ್ಲದಂತೆ ಮೇಲೆದ್ದು ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಿದ್ದಾನೆ. ದೇಶದ ಪರಮೋಚ್ಚ ಹುದ್ದೆಗಳನ್ನು ಕೂಡ ಜನಸಾಮಾನ್ಯ ಯಾವುದೇ ಹಿನ್ನೆಲೆ ಇರದಾಗ್ಯೂ ಅಲಂಕರಿಸುತ್ತಿದ್ದಾನೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಸಂವಿಧಾನದ ಚೈತನ್ಯ ಆ ಕಾಲಘಟ್ಟದ ಚೈತನ್ಯ ಎಂಬುದು ಹೆಜ್ಜೆಹೆಜ್ಜೆಗೂ ಸಾಕಾರವಾಗುತ್ತಿದೆ. ಪ್ರಜಾಪ್ರಭುತ್ವ ಇಲ್ಲಿನ ಚುನಾವಣೆ, ಸಾಮಾಜಿಕ ಮನ್ನಣೆ, ಜಗತ್ತಿನ ವಿಶ್ವಾಸ ಗಳಿಸುತ್ತಿದೆ. ಬೆರಗು ಮೂಡಿಸುತ್ತಿದೆ ಮಾತ್ರವಲ್ಲ, ಅನೇಕರು ಈಗ ಭಾರತವನ್ನು ಅನುಕರಿಸತೊಡಗಿದ್ದಾರೆ.
ಜನವರಿ ೨೬ನ್ನು ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ಹೇಗೆ ಕತ್ತಲಿನಲ್ಲಿರುವಾತ ಬೆಳಕಿಗೆ ಹಂಬಲಿಸುತ್ತಾನೋ ಅದೇ ರೀತಿ ಸುತ್ತಮುತ್ತಲಿನ ದೇಶಗಳ ಅರಾಜಕತೆ, ಅನಾಗರಿಕತೆ, ವ್ಯಕ್ತಿಸ್ವಾತಂತ್ರ್ಯದ ಹರಣ, ರಾತೋರಾತ್ರಿ ನಡೆಯುವ ಅಧಿಕಾರಕೇಂದ್ರಿತ ಘೋಟಾಳಗಳ ಮಧ್ಯೆ ನಮ್ಮನ್ನು ಕಲ್ಪಿಸಿಕೊಂಡರೆ ನಮಗೊದಗಿದ ಸೌಭಾಗ್ಯದ ಪರಿಚಯವಾಗುತ್ತದೆ. ಈ ದೇಶದಲ್ಲಿ ಆಶ್ರಯಕ್ಕಾಗಿ ಗುಳೆ ಹೊರಡುವ ಆವಶ್ಯಕತೆಯಿಲ್ಲ. ಕ್ವೆಟಾ ಪ್ರಾಂತದ ಜನ ಘೋಷಿಸಿಕೊಂಡಂತೆ ನಾವು ನಡೆದಾಡುವ ಮೃತದೇಹಗಳು ಎನ್ನುವ ಹಲುಬುವಿಕೆ ಇಲ್ಲ. ಕೈಚೆಲ್ಲಿ ಕುಳಿತು ಬಿಡುವ ಅಸಹಾಯಕತೆಗಳಿಲ್ಲ, ಇಲ್ಲೇ ಹುಟ್ಟಿ ದೇಶದ ನಾಗರಿಕರಾಗಿಯೂ ಮತದಾನಕ್ಕೆ ಅವಕಾಶ ಸಿಗಲಿಲ್ಲ ಎಂದು ಕೊರಗುವ ಪ್ರಮೇಯವೂ ಇಲ್ಲ. ಸಾಧಿಸುವ ಛಲವಿದ್ದಾತನಿಗೆ ಅತಿ ಉನ್ನತ ಹುದ್ದೆ ಏರುವ ಅವಕಾಶಗಳು ಎಂದಿಗೂ ಮುಕ್ತವೇ ಆಗುಳಿದಿವೆ. ಹೋರಾಟ, ಹಕ್ಕುಗಳ ಪ್ರತಿಪಾದನೆಗೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಾಗಿಲ್ಲ. ಶಾಸಕಾಂಗ, ಕಾರ್ಯಾಂಗದಲ್ಲಿ ತೃಪ್ತಿಯಾಗದಿದ್ದರೆ ನ್ಯಾಯಾಂಗದ ಬಾಗಿಲು ಬಡಿಯುವ ಮತ್ತು ಯಾರ ಒತ್ತಡವನ್ನು ಕೂಡ ಮೆಟ್ಟಿ ಮಣ್ಣಾಗಿಸುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ನಮ್ಮಷ್ಟು ಅದೃಷ್ಟಶಾಲಿಗಳು ಜಗತ್ತಿನಲ್ಲಿ ಎಲ್ಲಿಯೂ ಸಿಗಲಾರರು. ಸಂವಿಧಾನವೆಂಬ ಸಂರಚನೆಗೆ ಧನ್ಯವಾದ ಹೇಳಿದಷ್ಟೂ ಕಡಮೆಯೇ.
೧೯೪೬ ನವೆಂಬರ್ ೨೬ರಂದು ಅಂಗೀಕರಿಸಿ, ಜನವರಿ ೨೬, ೧೯೫೦ರಂದು ಜಾರಿಗೆ ಬಂದ ನಮ್ಮ ಸಂವಿಧಾನ ಬದಲಾದ ಕಾಲಘಟ್ಟದಲ್ಲಿ ೪೭೦ ವಿಧಿಗಳು, ೨೫ ಭಾಗಗಳು, ೧೨ ಅನುಚ್ಛೇದಗಳನ್ನು ಹೊಂದಿದೆ. ನಾವು ಹೊಂದಿರುವ ಸಂವಿಧಾನ ಅತ್ಯಂತ ಸುವಿಸ್ತಾರವಾದ ಮತ್ತು ಕಾಲಾನುಕ್ರಮದ ಬದಲಾವಣೆಗಳಿಗೆ ತೆರೆದುಕೊಂಡಿರುವ ಒಂದು ಬೃಹತ್ ಸಂರಚನೆ. ೧೧೮ ತಿದ್ದುಪಡಿಗಳನ್ನು ಹೊಂದಿದ ಈ ವ್ಯವಸ್ಥೆ ಪ್ರಪಂಚದ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತಲೂ ದೀರ್ಘವಾಗಿರುವಂತಹ ಹೆಗ್ಗಳಿಕೆ ಹೊಂದಿದೆ. ಬ್ರಿಟನ್, ಅಮೆರಿಕಾ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಮೊದಲಾದ ದೇಶಗಳ ಸಾಂವಿಧಾನಿಕ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಉದಾತ್ತವಾದ ಭಾರತೀಯತೆಗೆ ಒಗ್ಗುವ ಅನೇಕ ಸಂಗತಿಗಳನ್ನು ಭಾರತದ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು.