ವಿವೇಕಿಗಳು, ಜ್ಞಾನಿಗಳು ಮೌನವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಮುನಿಗಳು, ಮಠಾಧಿಪತಿಗಳು ಮೌನವ್ರತವನ್ನು ಗಂಭೀರವಾಗಿ ಆಚರಿಸುತ್ತಾರೆ.
ಮನುಷ್ಯನಿಗೆ ಮಾತು ಬಹುದೊಡ್ಡ ವರದಾನ. ಮನಸ್ಸಿನಲ್ಲಿ ಉಂಟಾದ ಭಾವನೆಗಳನ್ನು, ವಿಚಾರಗಳನ್ನು ಹೊರಹಾಕಲು ಮಾತು ಒಂದು ಸಾಧನ. ಮಾತನಾಡಲು ಬಾರದವನನ್ನು ನಾವು `ಮೂಕ’ ಎಂದು ಕರೆಯುತ್ತೇವೆ. ಹುಟ್ಟು ಮೂಕನಾದವನು ತನ್ನ ಇಂಗಿತವನ್ನು ಸನ್ನೆಯಿಂದಲೇ ವ್ಯಕ್ತ್ತಪಡಿಸಬೇಕಾಗುತ್ತದೆ. ಅಂಥವನ ಮೌನದ ಪ್ರಶ್ನೆ ಈ ಗಾದೆಯಲ್ಲಿ ಇಲ್ಲ. ಮಾತನಾಡಲು ಬಂದೂ ಯಾವುದೋ ಒಂದು ಒಳಿತಿಗೋಸ್ಕರ ಮಾತನಾಡದೆ ಇರುವವನ ಮೌನದ ಪ್ರಶಂಸೆ ಇಲ್ಲಿದೆ.
ಹಿಂದಿನ ಕಾಲದಲ್ಲಿ ಓದಲು ಬರೆಯಲು ಬಲ್ಲವರು ಕಡಮೆ ಸಂಖ್ಯೆಯಲ್ಲಿದ್ದರು. ನೆಂಟಸ್ತಿಕೆಯ ಸಮಯದಲ್ಲಾಗಲೀ, ವ್ಯವಹಾರದ ಸಂದರ್ಭದಲ್ಲಾಗಲೀ ಮಾತೇ ಸಾಕಾಗಿತ್ತು. ‘ಮಾತು ಕೊಡುವುದು’ ಎಂದರೆ ಪ್ರಮಾಣ ಮಾಡುವುದು, ಒಪ್ಪಂದ ಮಾಡಿಕೊಳ್ಳುವುದು ಎಂಬ ಅರ್ಥದಲ್ಲಿ ಬಗೆಯಲಾಗುತ್ತಿತ್ತು. ಮಾತಿಗೆ ತಪ್ಪಿದವನನ್ನು ಸಮಾಜ ಕ್ಷಮಿಸುತ್ತಿರಲಿಲ್ಲ. ಈಗ ಟೊಳ್ಳು ಆಶ್ವಾಸನೆ ನೀಡುವುದು, ಮಾತಿಗೆ ತಪ್ಪುವುದು ಒಂದು ಘೋರ ಅಪರಾಧವಾಗಿ ಯಾರೂ ಎಣಿಸುವುದಿಲ್ಲ. ಜಾಹೀರಾತಿನ ವಿಷಯದಲ್ಲಂತೂ ವ್ಯಾಪಾರಿಗಳು ನೀಡುವ ಆಶ್ವಾಸನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವವ ಮೂರ್ಖನಾಗಿ ಕಾಣಿಸಿಕೊಳ್ಳುತ್ತಾನೆ.
ಮಗುವಿಗೆ ಮಾತು ಬಂದರೆ ತಂದೆ-ತಾಯಿಗೆ ತುಂಬಾ ಸಂತೋಷ. ಕ್ರಮೇಣ ಅದು ಮಾತನಾಡುವುದು ಜಾಸ್ತಿಯಾಗುತ್ತದೆ. “ಸಾಕೋ, ನಿಲ್ಸು ಎಂದು ಅದು ಗದರಿಸಿಕೊಳ್ಳಬೇಕಾಗುತ್ತದೆ. ಮಾತಿನಲ್ಲಿ ಮಿತಿ ಇರಬೇಕೆಂಬ ನಿಯಮವನ್ನು ನಾವು ಬಾಲ್ಯದಿಂದಲೇ ಪಾಲಿಸಲು ತೊಡಗುತ್ತೇವೆ. ದೊಡ್ಡವರಾಗುತ್ತಾ ಬೇರೆಯವರಿಗೆ ಬೇಸರವಾಗುವಂತಹ ಬೇರೆಯವರ ಮನಸ್ಸನ್ನು ನೋಯಿಸುವಂತಹ ಮಾತುಗಳನ್ನು ನಾವು ಕಡಮೆ ಮಾಡತೊಡಗುತ್ತೇವೆ. ತುಟಿ ಮಾತುಗಳ ಬದಲಾಗಿ ನಾವು ತೂಕದ ಮಾತುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡತೊಡಗುತ್ತೇವೆ.
ಒಮ್ಮೊಮ್ಮೆ ತೂಕದ ಮಾತಿಗೂ ತುಕ್ಕು ಹಿಡಿಯಬಹುದು, ಗ್ರಹಣ ಬಡಿಯಬಹುದು. ನಮ್ಮ ಸ್ವಾಭಾವಿಕವಾದ ಮಾತನ್ನು ತಿರುಚಿ ಅಪಾರ್ಥ ಕಲ್ಪಿಸಿ ರಾದ್ಧಾಂತ ಮಾಡುವವರು ಇರುತ್ತಾರೆ. ಸ್ವಲ್ಪ ಸಿಕ್ಕರೆ ಸಾಕು ಅದನ್ನೇ ಬ್ಲೋಅಪ್ ಮಾಡಿ ಪ್ರಚಾರಗಳಿಸುವ ಮಾಧ್ಯಮದವರು ಇರುತ್ತಾರೆ. ಎದುರಾಳಿಗಳು ಇರುತ್ತಾರೆ. ಆದುದರಿಂದ ಸಂದರ್ಭ ಸರಿಯಿಲ್ಲವೆಂದಾಗ, ಮಾತನಾಡಿ ಪ್ರಯೋಜನವಿಲ್ಲ ಎಂದಾಗ, “ಇತ್ತ ದರಿ, ಅತ್ತ ಪುಲಿ” ಎನ್ನುವಂತಹ ಸಂಕಟ ಸ್ಥಿತಿಯಲ್ಲಿದ್ದಾಗ ನಾವು ತುಂಬ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಗ ನಾವು ಮೌನವಾಗಿರುವುದೇ ಲೇಸು ಎಂಬ ಉಪದೇಶ ಈ ಗಾದೆಯಲ್ಲಿದೆ. ಬಾಳಲ್ಲಿ ಮಾತನಾಡುವುದು ಎಷ್ಟು ಮುಖ್ಯವೋ ಅದಕ್ಕಿಂತ ಸಂದರ್ಭಾನುಸಾರ ಮೌನವಹಿಸುವುದು ಹೆಚ್ಚು ಮುಖ್ಯ ಎನಿಸುತ್ತದೆ.
ಹಾಗಾಗಿ ವಿವೇಕಿಗಳು, ಜ್ಞಾನಿಗಳು ಮೌನವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಮುನಿಗಳು, ಮಠಾಧಿಪತಿಗಳು ಮೌನವ್ರತವನ್ನು ಗಂಭೀರವಾಗಿ ಆಚರಿಸುತ್ತಾರೆ. ಗಾಂಧಿಯವರು ಮೌನವನ್ನು ಕೇವಲ ತಂತ್ರವಾಗಿ ಬಳಸದೆ, ಆತ್ಮಶೋಧನೆಗೊಂದು ಮಾರ್ಗವಾಗಿ ಪರಿವರ್ತಿಸಿಕೊಂಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಪ್ರಜಾಪ್ರಭುತ್ವದಲ್ಲಿ ಮಾತಿಗೆ ತುಂಬ ಮಹತ್ತ್ವವಿದೆ. ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶ ನೀಡಬೇಕು, ಅವರ ಸಲಹೆಗಳನ್ನು ಶಾಂತವಾಗಿ ಕೇಳಿಸಿಕೊಂಡು ಅನಂತರ ಪ್ರತಿಕ್ರಿಯಿಸುವ ಗುಣ ನಾವು ಬೆಳೆಸಿಕೊಳ್ಳಬೇಕು. ಮಾತುಕತೆ ಎನ್ನುವುದು ಕಚ್ಚಾಟವಾಗಬಾರದು, ಕೇವಲ ದೋಷಾರೋಪಣೆಯಾಗಬಾರದು. ಮಾತಲ್ಲಿ ಶಿಸ್ತು ಇಲ್ಲದ ಪ್ರಜಾಪ್ರಭುತ್ವ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಸಂಸಾರದಲ್ಲಿ ಶಾಂತಿ ನೆಲೆಸಲು ಜಾಣನಾದವನು ಮೌನದಿಂದ ತನ್ನ ತಾಯಿಯನ್ನೂ, ಹೆಂಡತಿಯನ್ನೂ ತೂಗಿಸಿಕೊಂಡು ಹೋಗುವಂತೆ, ದೇಶವನ್ನು ಒಂದುಗೂಡಿಸಿ ಸಮರ್ಥವಾಗಿ ನಡೆಸಿಕೊಂಡು ಹೋಗುವ ನಾಯಕನ ಆವಶ್ಯಕತೆ ನಮಗಿದೆ.
ಮಾತನ್ನು ಕುರಿತ ಇನ್ನೊಂದು ಗಾದೆ ನಮ್ಮಲ್ಲಿದೆ. “ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು”. ನಾವೆತ್ತಿಕೊಂಡಿರುವ ಗಾದೆಯಲ್ಲಿ ಉಪದೇಶವಿದ್ದರೆ, ಈ ಗಾದೆಯಲ್ಲಿ ವ್ಯಂಗ್ಯವಿದೆ, ಎಚ್ಚರಿಕೆ ನೀಡಲಾಗಿದೆ. ಮಾತು ಮಿತವಾಗಿರಬೇಕು, ಹಿತವಾಗಿರಬೇಕು ಎನ್ನುವುದು ಎರಡು ಗಾದೆಗಳಲ್ಲೂ ಪ್ರಕಟವಾಗಿದೆ.
ದೇಹ – ದೇವಾಲಯ
ನಿನ್ನು ನೀವೇ ತೆಲಿಯ ರಾ – ನೀಲೋ ವುನ್ನದಿ ದ್ಯಾವರಾ – ನಿನ್ನನ್ನು ನೀನೇ ತಿಳಿ.. ನಿನ್ನೊಳಗೆ ಇದ್ದಾನೆ ದೇವರು ಎನ್ನುತ್ತಾರೆ ಕೈವಾರ ತಾತಯ್ಯನವರು.