ಜ್ಞಾನಭಂಡಾರದಲ್ಲಿ ಗಾದೆಗಳ ಪಾತ್ರ ದೊಡ್ಡದು. ಹಾಗಾಗಿ ನಾವು ಅವುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಗಾದೆ, ಹೆಚ್ಚು ಬಳಕೆಯಲ್ಲಿರುವ ಗಾದೆ.
ಗಾದೆಗಳು ಹೇಗೆ ಹುಟ್ಟಿಕೊಂಡವು ಎನ್ನುವುದು ಕುತೂಹಲಕಾರಿ ಪ್ರಶ್ನೆ. ಕವಿತೆಗಳಂತೆ, ಕತೆಗಳಂತೆ, ಕಾದಂಬರಿಗಳಂತೆ ಯಾರೋ ಬರೆದು ಗಾದೆಗಳನ್ನು ಪ್ರಕಟಿಸಲಿಲ್ಲ. ಮನಸ್ಸನ್ನು ಸೆಳೆಯುವ ಒಂದು ಘಟನೆ ಸಂಭವಿಸಿದಾಗ, ಅದರ ಸಾರವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ, ಮಾತಲ್ಲಿ ಹಿಡಿದು, ನುಡಿದು ಚಾಲ್ತಿಗೆ ತರುವ ಒಂದು ಅದ್ಭುತ ಕ್ರಿಯಾಶಕ್ತಿ ನಮ್ಮ ಹಿರಿಯರಲ್ಲಿ ಇತ್ತು.
ಈ ಗಾದೆಯ ಹಿಂದೆ ಸಂಭವಿಸಿರಬಹುದಾದ ಘಟನೆಯನ್ನು ನಾವು ಊಹಿಸಿ ನೋಡೋಣ. ಒಬ್ಬ ಕುಂಬಾರ ಹಗಲೆಲ್ಲಾ ಬೆವರು ಸುರಿಸಿ ಮಡಕೆಗಳನ್ನು ತಯಾರಿಸಿಟ್ಟ. ಅವನು ವಿಶ್ರಮಿಸಿಕೊಳ್ಳುವಾಗ, ಗುಡಿಸಲಿನಿಂದ ಹೊರಬಂದ ಅವನ ಚಿಕ್ಕ ಹುಡುಗ ತನ್ನ ಕೈಯ್ಯಲ್ಲಿದ್ದ ದೊಣ್ಣೆಯನ್ನು ಬೀಸಿ ಅಲ್ಲಿದ್ದ ಮಡಕೆಯೊಂದನ್ನು ಒಡೆದು ಹಾಕುತ್ತಾನೆ. ಮಡಕೆ ಒಡೆದಾಗ ಕೇಳಿಸಿಕೊಂಡ ‘ಪಟ್’ ಎಂಬ ಶಬ್ದಕ್ಕೆ ಮಾರುಹೋಗಿ ಆ ಹುಡುಗ ದೊಣ್ಣೆ ಬೀಸಿ ಉಳಿದ ಮಡಕೆಗಳನ್ನು ಒಡೆದು ಹಾಕುತ್ತಾನೆ. ಆ ಸಮಯದಲ್ಲಿ ಶಾಲಾ ಮಾಸ್ತರನೊಬ್ಬ ಈ ಅನಾಹುತ ಕಂಡು ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂದು ಉದ್ಗರಿಸುತ್ತಾನೆ. ಈ ಮಾಸ್ತರ ತುಂಬಾ ಅನುಭವಸ್ಥ. ಚಿಂತಕನೂ ಹೌದು. ಮಾತಲ್ಲಿ ನಿಪುಣನೂ ಹೌದು. ಈ ಘಟನೆಯಲ್ಲಿ ಅವನು ಸಾರ್ವಜನಿಕ ಸತ್ಯವನ್ನು ಕಂಡು ಕೆಲವೇ ಪದಗಳಲ್ಲಿ ಅದನ್ನು ಸೆರೆಹಿಡಿಯುವ ಸಾಹಸ ಮಾಡುತ್ತಾನೆ.
ಈ ಗಾದೆಯಲ್ಲಿ ಅವನು ಕಂಡ ಸತ್ಯ ಯಾವುದು ಎಂಬುದನ್ನು ಮೊದಲು ನೋಡೋಣ. ಒಳ್ಳೆಯದನ್ನು ಮಾಡುವುದು ಕಷ್ಟ. ಕೆಟ್ಟದ್ದನ್ನು ಮಾಡುವುದು, ಹಾಳುಮಾಡುವುದು ಸುಲಭ. ಸೃಷ್ಟಿ ಮಾಡುವುದು ಕಷ್ಟಮಾತ್ರವಲ್ಲ, ಅದಕ್ಕೆ ಸಾಕಷ್ಟು ಸಮಯಾವಕಾಶ ಬೇಕು. ನಾಶ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ.
ಜನನವನ್ನು ತೆಗೆದುಕೊಳ್ಳೋಣ. ಅದಕ್ಕೆಷ್ಟು ತಯಾರಿ ಬೇಕು. ಪರಿಶ್ರಮ ಬೇಕು, ಕಾಲವೂ ಬೇಕು. ಮಗು ಹುಟ್ಟುವ ಮುಂಚೆ ಅದು ಒಂಭತ್ತು ತಿಂಗಳು ತಾಯಿಯ ಗರ್ಭದಲ್ಲಿ ಬೆಳೆಯಬೇಕಾಗುತ್ತದೆ. ಮರಣದ ಸಮಯದಲ್ಲಿ ಪ್ರಾಣ ಥಟ್ಟನೆ ಹೋಗಿಬಿಡುತ್ತದೆ. ಅದೇ ರೀತಿ ಹೊಲ ಗದ್ದೆ, ಮನೆ ಮಠಗಳ ನಿರ್ಮಾಣಕ್ಕೆ ಶ್ರಮ ಬೇಕು, ಕಾಲಾವಕಾಶವೂ ಬೇಕು. ಪ್ರವಾಹದಿಂದ ಕೊಚ್ಚಿಕೊಂಡು ಹೋಗಲು ಹೆಚ್ಚಿನ ಸಮಯ ಬೇಕಿಲ್ಲ. ಈ ಬಗೆಯ ಸೃಷ್ಟಿ ಮತ್ತು ನಾಶ ಪ್ರಕೃತಿನಿರ್ಮಿತ. ಇದನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಮಾನವನಿರ್ಮಿತ ನಾಶವನ್ನು ತಡೆಗಟ್ಟಬಹುದು. ಮಾಡಿದ ಮಡಕೆಗಳನ್ನು ಮಗುವಿನ ಕೋಲಿಗೆ ಸಿಲುಕಿ ಪುಡಿಯಾಗದಂತೆ ರಕ್ಷಿಸಿ ಇಟ್ಟುಕೊಳ್ಳಬಹುದು.
ನಾವೆತ್ತಿಕೊಂಡಿರುವ ಗಾದೆಯಲ್ಲಿ ನಾಲ್ಕೇ ನಾಲ್ಕು ಪದಗಳಿವೆ. ಮೊದಲೆರಡು ಪದಗಳು ನಿರ್ಮಾಣಕ್ಕೆ ಸಂಬಂಧಪಟ್ಟವು. ಕೊನೆಯೆರಡು ಪದಗಳು ನಾಶಕ್ಕೆ ಸಂಬಂಧಪಟ್ಟವು. ಪುಟ್ಟದಾಗಿ ಹೇಳಲು ಅಥವಾ ಸೂಚಿಸಲು ನಾವು ರೂಪಕಗಳನ್ನು ಬಳಸುತ್ತೇವೆ. ನಮ್ಮ ಗಾದೆಯಲ್ಲಿ ಕುಂಬಾರ ಕ್ರಿಯಾಶಕ್ತಿಯ ರೂಪಕ, ದೊಣ್ಣೆ ನಾಶಕಾರಕ ರೂಪಕ. ಈ ಗಾದೆಯ ಸ್ವಾರಸ್ಯ ಇರುವುದು – ಇದರ ಧ್ವನಿಯಲ್ಲಿರುವ ಅಣಕದಲ್ಲಿ (ಐರನಿ), ಇದರ ರಚನೆಯಲ್ಲಿರುವ ತೂಗುತೊಲೆಯಾಟ (See – Saw)ದಲ್ಲಿ.?
THANKs sir for a wonderful essay on this topic.It helped me to complete my project.
i never knew how to write an essay when any proverbs are given and this gave me an idea to think
it was very informative
Tq so much sir for my.kids study it helped lot