ಅಶುಚಿತ್ವವು ಸಂಬಂಧದ ಮೇಲೆ, ಕಾಲದ ಮೇಲೆ ಅವಲಂಬಿಸುತ್ತದೆ. ತೀರ ಹತ್ತಿರದ ಬಂಧುಗಳಿಗೆ ಮಮತೆ ಜಾಸ್ತಿ ಇರುವುದು ಸಹಜ. ಆದ್ದರಿಂದ ಅವರಿಗೆ ಹೆಚ್ಚು ಕಾಲ ಅಶುಚಿತ್ವ (೧೦ ದಿನಗಳು). ಮಿಕ್ಕವರಿಗೆ ಸಂಬಂಧ ದೂರವಾದಷ್ಟೂ ಮಮತೆಯ ತೀವ್ರತೆ ಕಡಮೆಯಾಗುತ್ತದೆ. ಅದನ್ನನುಸರಿಸಿಯೇ ಅವರಿಗೆ ಮೂರು ದಿನ, ಒಂದೂವರೆ ದಿನ, ಸ್ನಾನ ಇತ್ಯಾದಿ ತಾರತಮ್ಯ….. ‘ಅಘ’ ಎಂಬ ಶಬ್ದಕ್ಕೆ ಸಾರ್ಥಕ್ಯ ಹೇಗಾದರೂ ಕಲ್ಪಿಸಬೇಕೆಂದು ಯೋಚಿಸಿ ದೇಹಕ್ಕೇ ಅಶುಚಿತ್ವ ಅಥವಾ ದೋಷ ಬಂದಿದೆಯೆಂದು ಭಾವಿಸಿ ಈಗ ಅನುಸರಿಸುತ್ತಿರುವ ನಿಯಮಗಳನ್ನೆಲ್ಲಾ ವಿಧಿಸಿದಂತೆ ಕಾಣುತ್ತದೆ.
ಸಮೀಪದ ಬಂಧುಗಳು ಯಾರಾದರೂ ಮೃತರಾದರೆ ಅಥವಾ ಯಾರ ಮನೆಯಲ್ಲಾದರೂ ಮಗುವಿನ ಜನನವಾದರೆ ‘ಆಶೌಚ’ ಬರುತ್ತದೆ ಎಂದು ಹೇಳುತ್ತಾರೆ. ಮೃತರಾದಾಗ ಉಂಟಾದ ಆಶೌಚಕ್ಕೆ ಮೃತಾಶೌಚ (ಸತ್ತ ಸೂತಕ) ಎಂದೂ, ಮಗು ಹುಟ್ಟಿದಾಗ ಉಂಟಾಗುವ ಆಶೌಚಕ್ಕೆ ಜಾತಾಶೌಚ (ಜನನ ಸೂತಕ) ಎಂದೂ ಹೇಳುತ್ತಾರೆ. ತೀರ ಹತ್ತಿರದವರಿಗೆ (ತಂದೆ, ತಾಯಿ, ಅಣ್ಣ, ತಮ್ಮ ಇತ್ಯಾದಿ) ೧೦ ದಿನಗಳ ಆಶೌಚವೆಂದು, ಬಂಧುತ್ವ ದೂರವಾದಂತೆ ೩ ದಿನಗಳು, ಒಂದೂವರೆ ದಿನ (ಪಕ್ಷಿಣೀ) ಅಥವಾ ಕೇವಲ ಸ್ನಾನ ಎಂದೂ ಹೇಳುತ್ತಾರೆ. ಅಂದರೆ ಅಷ್ಟಷ್ಟು ಕಾಲ ಆಶೌಚವನ್ನು ಅನುಸರಿಸಿ (ಅದಕ್ಕೆ ‘ಅನುಷ್ಠಾನ’ ಎಂಬ ದೊಡ್ಡ ಪದವನ್ನೂ ಬಳಸುವುದುಂಟು) ಮುಗಿದಮೇಲೆ ಸ್ನಾನ ಮಾಡಿದರೆ ಆಶೌಚನಿವೃತ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆಶೌಚವಿದ್ದಾಗ ಆಶೌಚವಿಲ್ಲದವರನ್ನು ಸ್ಪರ್ಶಿಸಿಕೊಳ್ಳಬಾರದು, (ಅಕಸ್ಮಾತ್ ಸ್ಪರ್ಶಿಸಿದರೆ ಆಶೌಚವಿಲ್ಲದವರು ಸಚೇಲ ಸ್ನಾನ ಮಾಡಬೇಕು). ಆಶೌಚಕಾಲದಲ್ಲಿ ದೇವತಾರ್ಚನೆ, ವೇದಪಾರಾಯಣಗಳನ್ನು ಮಾಡಬಾರದು, ದೇವಾಲಯಕ್ಕೆ ಹೋಗಬಾರದು, ಯಾವ ವಿಧವಾದ ವೇದೋಕ್ತಕರ್ಮಗಳನ್ನೂ (ಶ್ರಾದ್ಧ ಕೂಡ) ಮಾಡಬಾರದು; ಆಶೌಚಿಯ ಮನೆಯಲ್ಲಿ ಆಶೌಚವಿಲ್ಲದವರು ಬಂದು ಊಟಮಾಡಬಾರದು, ಹೀಗೆಲ್ಲ ನಿಯಮ, ನಿಷೇಧಗಳನ್ನು ಇಟ್ಟುಕೊಂಡಿದ್ದಾರೆ.
ಆಶೌಚ ಎಂದರೇನು?
ಆಶೌಚವೆಂದರೇನು? ಆ ಸಮಯದಲ್ಲಿ ಮೇಲೆ ಹೇಳಿದ ವಿಧಿ, ನಿಯಮಗಳನ್ನು ಏಕೆ ಅನುಸರಿಸಬೇಕು? ಬಂಧುತ್ವದ ಮೇಲೆ ಆಶೌಚದ ಅವಧಿಯ ವ್ಯತ್ಯಾಸವೇಕೆ? – ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ. ಅವುಗಳಿಗೆ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳುವುದು ಪ್ರತಿಯೊಬ್ಬ ವಿವೇಕಿಯ ಕರ್ತವ್ಯ.
ಆಶೌಚವೆಂದರೆ ಅಶುಚಿತ್ವ ಎಂದರ್ಥ. ಬಂಧುಗಳು ಮೃತಪಟ್ಟಾಗಲೋ, ಮಗು ಹುಟ್ಟಿದಾಗಲೋ ನಮಗೆ ಆಶೌಚ ಬಂದಿದೆ ಎಂದರೆ, `ನಾವು ಅಶುಚಿಯಾಗಿದ್ದೇವೆ’ ಎಂದರ್ಥ. ಶುಚಿತ್ವದಲ್ಲಿ ಎರಡು ತರಹ ಉಂಟು. ಅಂತಃಶುಚಿತ್ವ; ಬಹಿಃಶುಚಿತ್ವ. ಅಂತಶ್ಶುಚಿತ್ವವೆಂದರೆ ಮನಸ್ಸನ್ನು ಶುಚಿಯಾಗಿಟ್ಟುಕೊಳ್ಳುವುದು ಎಂದರೆ ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭಮೋಹಾದಿಗಳು ಇಲ್ಲದಿರುವುದು ಎಂದರ್ಥ. ಬಹಿಶ್ಶುಚಿತ್ವವೆಂದರೆ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವುದು. ಇವೆರಡರಲ್ಲಿ ಬಹಿಶ್ಶುಚಿತ್ವ ಸುಲಭ. ಶರೀರವನ್ನು ಸ್ನಾನಾದಿಗಳಿಂದ, ಸೋಪು ಮುಂತಾದುವುಗಳಿಂದ ಶುಚಿಗೊಳಿಸಿಕೊಂಡು, ಹೆಚ್ಚು ಮಾಲಿನ್ಯವಾಗದಂತೆ ಶುಚಿಯಾಗಿಟ್ಟುಕೊಳ್ಳಬಹುದು. ಒಂದು ವೇಳೆ ಪರಿಸರಮಾಲಿನ್ಯದಿಂದ ನಮ್ಮ ಶರೀರವು ಮಲಿನವಾದರೂ, ಪುನಃ ಸ್ನಾನಮಾಡಿ ಶುಚಿ ಮಾಡಿಕೊಳ್ಳಬಹುದು. ಆದರೆ ಅಂತಶ್ಶುಚಿತ್ವ ಬಹಳ ಕಷ್ಟವೆಂಬುದು ಅದರ ಲಕ್ಷಣದಿಂದಲೇ ಗೊತ್ತಾಗುತ್ತದೆ. ಕಾಮ, ಕ್ರೋಧಾದಿಗಳು ಮನಸ್ಸಿಗೆ ಸ್ವಭಾವಸಹಜವಾಗಿಯೇ ಇರುತ್ತವೆ. ಅವು ಇಂದ್ರಿಯಸ್ವಭಾವವೂ ಅಹುದು. ಅವುಗಳಿಂದ ಮುಕ್ತಗೊಂಡ ಮನಸ್ಸನ್ನು ಶುಚಿಗೊಳಿಸುವುದು ಸಾಮಾನ್ಯ ಕೆಲಸವಲ್ಲ. ಇದೇ ಅಲ್ಲವೆ ಪರಮಪುರುಷಾರ್ಥವಾದ ಮೋಕ್ಷಕ್ಕೆ ಸಾಧನ! ಸ್ನಾನ ಮಾಡಿದರೆ ದೇಹ ಶುಚಿಯಾಗುತ್ತದೆಯೇ ಹೊರತು ಮನಸ್ಸು ಶುಚಿಯಾಗುವುದೆಂತು? ಆ ದುರ್ಗುಣಗಳನ್ನು ಕರ್ಮ ಮಾಡುತ್ತಾ ಮಾಡುತ್ತಾ, ಇಲ್ಲದಂತೆ ಮಾಡುವುದೇ ಉಪಾಯ. ಅದು ಎಷ್ಟು ಕಷ್ಟವೆಂಬುದು ಪ್ರತಿಯೊಬ್ಬರಿಗೂ ಗೊತ್ತು.
ಆದರೆ ನಮ್ಮ ಆಶೌಚ ಆಚರಣೆಯ ನಿಯಮವಿಧಾನಗಳನ್ನು ನೋಡಿದರೆ ಎಲ್ಲವೂ ಬಹಿಶ್ಶುಚಿತ್ವಕ್ಕೇ ಸಂಬಂಧಪಟ್ಟಂತೆ ತೋರುತ್ತದೆ. ಆಶೌಚವಿಲ್ಲದವರು ಆಶೌಚಿಗಳನ್ನು ಸ್ಪರ್ಶಿಸಬಾರದು ಎಂದರೆ, ಆಶೌಚಿಗಳು ಹೊರಗಡೆ ಅಶುಚಿಯಾಗಿರುತ್ತಾರೆಂದು ಅರ್ಥ. ಸ್ಪರ್ಶದೋಷ ಶರೀರಕ್ಕೇ ಹೊರತು ಮನಸ್ಸಿಗಲ್ಲ. ಸ್ನಾನದಿಂದ ಆಶೌಚ ನಿವೃತ್ತಿಯಾಗುತ್ತದೆಂದು ಹೇಳಿದರೆ ಅದೂ ಶರೀರಕ್ಕೇ ಸಂಬಂಧಪಟ್ಟಿದ್ದೆ. ಸ್ನಾನದಿಂದ ಮಾನಸಿಕ ಅಶುಚಿತ್ವ ನಿವೃತ್ತಿಯಾಗುವುದು ಸಾಧ್ಯವಿಲ್ಲ. ಆಶೌಚಿಗಳ ಮನೆಯಲ್ಲಿ ಆಶೌಚವಿಲ್ಲದವರು ಊಟಮಾಡಬಾರದೆಂದರೆ, ಅವರು ಯಥಾಪ್ರಕಾರ ಮೈಲಿಗೆ(ಬಹಿಃ ಅಶುಚಿತ್ವ)ಯಾಗಿರುತ್ತಾರೆಂದರ್ಥ. ದೇವರನ್ನು ಮುಟ್ಟಬಾರದು, ದೇವಾಲಯಗಳಿಗೆ ಹೋಗಬಾರದು, ಮಡಿಯಾಗಿ ಮಾಡುವ ಶ್ರಾದ್ಧಾದಿ ಕೆಲಸಗಳನ್ನೂ ವೇದಪಾರಾಯಣಾದಿಗಳನ್ನೂ ಮಾಡಬಾರದು ಎಂದರೆ ಪುನಃ ‘ಮೈಲಿಗೆ’ ಎಂದರ್ಥ. ಮೈಲಿಗೆ ಎನ್ನುವುದು ಶರೀರಕ್ಕೆ ಸಂಬಂಧಪಟ್ಟ ಅಶುಚಿತ್ವ. ಹೀಗೆ ಯಾವ ರೀತಿಯಿಂದ ನೋಡಿದರೂ ಈಗ ಅನುಸರಿಸುತ್ತಿರುವ ಮೃತಾಶೌಚ, ಜಾತಾಶೌಚಗಳು ಶರೀರಕ್ಕೆ ಸಂಬಂಧಪಟ್ಟಿವೆ ಎಂಬುದು ನಿಶ್ಚಯವಾಗುತ್ತದೆ.
ತರ್ಕದ ಮೂಸೆ
ಯಾರಾದರೂ ಮೃತರಾದರೆ – ಉದಾಹರಣೆಗೆ ನಮ್ಮ ತಂದೆ, ತಾಯಿಯೇ ಮೃತರಾದಾಗ – ನನಗೆ ೧೦ ದಿನ ಮೃತಾಶೌಚ. ಅವರು ತಂದೆ ತಾಯಿ. ಅವರು ಮೃತರಾದ ತಕ್ಷಣ ನನ್ನ ಶರೀರಕ್ಕೆ ಅಶುಚಿತ್ವ ಹೇಗೆ ಬರಲು ಸಾಧ್ಯ ಎಂಬುದು ವಿಚಾರಣೀಯ. ಅವರು ಸ್ವಂತ ತಂದೆ-ತಾಯಿ ನಿಜ. ಆದರೆ ಅವರು ಮೃತರಾದರೆ ನನ್ನ ದೇಹಕ್ಕೇನಾಯಿತು? ಅವರಿಗೇನಾದರೂ ಅಂಟುರೋಗಗಳಿದ್ದ ಪಕ್ಷದಲ್ಲಿ, ಅವರು ಜೀವಂತವಾಗಿರುವಾಗಲೇ, ಅವರ ಸೇವಾಶುಶ್ರೂಷೆ ಮಾಡುವಾಗ ನನಗೇನಾದರೂ ಆ ರೋಗ ಅಂಟಿಕೊಳ್ಳಬಹುದು (ಸರಿಯಾದ ಪೂರ್ವ ಎಚ್ಚರಿಕೆ ತೆಗೆದುಕೊಳ್ಳದಿದ್ದರೆ). ಅದು ಬಿಟ್ಟು ಅವರು ಸತ್ತ ಕೂಡಲೆ ನನಗೆ ಅಂಟಿಕೊಳ್ಳುತ್ತದೆಂದರೆ ಒಪ್ಪದ ಮಾತು. ಅದೂ ಅಲ್ಲದೆ ಅದು ಅಂಟುರೋಗವೇ ಆದರೆ ೧೦ ದಿನಗಳ ನಿಯಮಿತ ಅವಧಿಯಲ್ಲಿ ಹೋಗುತ್ತದೆಂದು ಯಾರೂ ಹೇಳಲು ಸಾಧ್ಯವಿಲ್ಲ. ಮತ್ತೆ ನನ್ನ ದೇಹ ಅಶುಚಿಯಾಗುವುದು ಹೇಗೆ? ಎಷ್ಟೇ ಅಶುಚಿಯಾದರೂ, ಚೆನ್ನಾಗಿ ಸ್ನಾನಮಾಡಿದರೆ ಕೂಡಲೆ ನಿವೃತ್ತಿಯಾಗಬೇಡವೆ? ೧೦ ದಿನಗಳ ಅವಧಿಗೆ ಏನರ್ಥ? ಅದೂ ಅಲ್ಲದೆ ೧೦ ದಿನ ಇದ್ದ ಅಶುಚಿತ್ವ ೧೧ನೇ ದಿನದ ಒಂದೇ ಸ್ನಾನದಿಂದ ನಿವೃತ್ತಿಯಾಗುವುದು ಹೇಗೆ ಸಾಧ್ಯ? ಎದುರಿಗಿಲ್ಲದೆ ಎಲ್ಲೋ ಬಹಳ ದೂರದಲ್ಲಿದ್ದರೂ ಕೇಳಿದ ತಕ್ಷಣ ಅಶುಚಿತ್ವ ಪ್ರಾಪ್ತವಾಗುತ್ತದೆನ್ನುತ್ತಾರೆ. ಅದೇನು ಗಾಳಿಯಲ್ಲಿ ಪ್ರಯಾಣಮಾಡಿ ನನ್ನ ದೇಹವನ್ನು ಗುರುತುಹಿಡಿದು ಆಕ್ರಮಿಸುತ್ತದೆಯೇ? ಅದೂ ಅಲ್ಲದೆ ಅವರ ಔರ್ಧ್ವದೈಹಿಕಕ್ರಿಯೆಗಳನ್ನು ಮಾಡುವಾಗ ದಿನಕ್ಕೆ ೬-೭ ಸ್ನಾನಗಳಾಗುತ್ತವೆ (ಸರಿಯಾಗಿ ಮಾಡಿದರೆ). ಆಗ ಶರೀರದಲ್ಲಿ ಯಾವ ರೀತಿ ಅಶುಚಿತ್ವ ನಿಲ್ಲಲು ಸಾಧ್ಯ? ನನ್ನ ಜ್ಞಾತಿಗಳಿಗೂ (ದಾಯಾದಿಗಳು) ೧೦ ದಿನ ಆಶೌಚ. ಅವರು ಕೆಲವರು ನನ್ನ ತಂದೆ-ತಾಯಿಯರನ್ನು ನೋಡಿಯೇ ಇರುವುದಿಲ್ಲ. ಎಲ್ಲೆಲ್ಲೋ ಇರುತ್ತಾರೆ. ಆದರೂ ಅವರು ೧೦ ದಿನದ ಆಶೌಚವನ್ನು ಅನುಭವಿಸಬೇಕು. ಈ ಬವಣೆ (ಇದು ಬವಣೆ ಅಂತಲೇ ಅನುಸರಿಸುವವರೆಲ್ಲರ ಅಂಬೋಣ)ಯನ್ನು ತಪ್ಪಿಸಿಕೊಳ್ಳಲು ೧೦ನೇ ದಿನ ರಾತ್ರಿ ತಿಳಿಸುವಂತೆ ಮೊದಲೇ ಹೇಳಿಟ್ಟಿರುತ್ತಾರೆ. ಹಾಗೆ ತಿಳಿಸಿದ ಮೇಲೆ, ಹೇಗೋ ಒಂದು ರಾತ್ರಿ ಆಶೌಚದ ಬವಣೆಯನ್ನನುಭವಿಸಿ, ೧೧ನೇ ದಿನ ಬೆಳಗ್ಗೆ ಸ್ನಾನಮಾಡಿ ನಿವೃತ್ತಿ ಮಾಡಿಕೊಳ್ಳುತ್ತಾರೆ. ಶಾರೀರಿಕ ಅಶುಚಿತ್ವವು ನಾವು ಮೃತಸಮಾಚಾರವನ್ನು ಕೇಳಲಿ ಬಿಡಲಿ, ತಕ್ಷಣ ಬಂದು ಅಂಟಿಕೊಳ್ಳಬೇಕು. ಅಶುಚಿತ್ವ ಬಂದಿರುವುದೇ ತಿಳಿಯದೆಂದು ನಟಿಸಿಕೊಂಡು, ೧೦ನೇ ರಾತ್ರಿ ಮಾತ್ರ ಅನುಭವಿಸುವುದು ಹೇಗೆ ನ್ಯಾಯ? ಹೇಗೆ ಸಮಂಜಸ? ನಮಗೆ ತಿಳಿಯದೆ ನಮ್ಮ ದೇಹಕ್ಕೆ ಅಶುಚಿತ್ವ ಅಂಟಿಕೊಳ್ಳಲು ಸಾಧ್ಯವಿಲ್ಲ. ಸ್ವಲ್ಪ ಬೆವರಾದರೂ ಅಸಹ್ಯಪಟ್ಟುಕೊಳ್ಳುವ ನಮಗೆ ೧೦ ದಿನಗಳ ಈ ಅಶುಚಿತ್ವ ಗೊತ್ತಾಗದಿರಲು ಹೇಗೆ ಸಾಧ್ಯ?
ಮಗ ಸಂನ್ಯಾಸಿಯಾಗಿದ್ದರೆ, ತಂದೆ-ತಾಯಿ ಮೃತರಾದರೂ, ಅವನಿಗೆ ಅಶುಚಿತ್ವವಿಲ್ಲ. ಹಾಗೆಯೇ ನನ್ನ ತಂದೆ ಸಂನ್ಯಾಸಿಯಾಗಿ ಸಮಾಧಿಸ್ಥರಾದರೂ, ಮಗನಾದ ನನಗೆ ಆಶೌಚವಿಲ್ಲ. ಇದು ಸಮಂಜಸವಲ್ಲ. ಏಕೆಂದರೆ ದೇಹಕ್ಕೆ ಅಶುಚಿತ್ವವಾದರೆ ಸಂನ್ಯಾಸಿಗೂ ಅಂಟಿಕೊಳ್ಳಬೇಕು. ತಂದೆ ಸಂನ್ಯಾಸಿಯಾಗಿ ಸತ್ತರೆ ಮಗನಿಗೂ ಅಂಟಿಕೊಳ್ಳಬೇಕು. ಸಂನ್ಯಾಸಿಯ ದೇಹಕ್ಕೂ, ನಮ್ಮ ದೇಹಕ್ಕೂ ಯಾವ ವ್ಯತ್ಯಾಸವೂ ಇಲ್ಲ. ವ್ಯತ್ಯಾಸವೇನಿದ್ದರೂ ಮಾನಸಿಕ. ಏಕೆಂದರೆ ಸಂನ್ಯಾಸವೆಂಬುದು ಮಾನಸಧರ್ಮ; ಶಾರೀರಿಕಧರ್ಮವಲ್ಲ. ಕಾಷಾಯವಸ್ತ್ರ, ದಂಡ, ಮುಂಡನಾದಿಗಳು ಕೇವಲ ಬಹಿರ್ಲಾಂಛನ. ಅವುಗಳಿಂದ ಶರೀರಕ್ಕೆ ಯಾವ ವ್ಯತ್ಯಾಸವೂ ಸಾಧ್ಯವಿಲ್ಲ.
ಹೀಗೆ ಯಾವ್ಯಾವ ದೃಷ್ಟಿಕೋನದಿಂದ ನೋಡಿದರೂ ಸತ್ತಾಗ (ಅಥವಾ ಹುಟ್ಟಿದಾಗ) ಬರುವ ಅಶುಚಿತ್ವವು ದೈಹಿಕವಲ್ಲ ಎಂಬುದು ನಿಶ್ಚಯವಾಗುತ್ತದೆ. ದೈಹಿಕವಲ್ಲದಿದ್ದ ಮೇಲೆ ಅದು ಮಾನಸಿಕವಾಗಿರಬೇಕು. ಮಾನಸಿಕವಾದ ಅಶುಚಿತ್ವ ಬರುವುದೆಂದರೇನು? ಈಗಾಗಲೇ ನಮ್ಮ ಮನಸ್ಸೆಲ್ಲ ಅಶುಚಿಯಾಗಿಯೇ ಇದೆಯಲ್ಲ ಎಂಬ ಪ್ರಶ್ನೆ ಏಳುತ್ತದೆ.
ಇಲ್ಲಿ ಪರಮಪೂಜ್ಯ ಶಂಕರಭಗವತ್ಪಾದರ ಚರಿತ್ರೆಯಲ್ಲಿ ಬರುವ ಒಂದು ಕಥೆ ಅತ್ಯಂತ ಪ್ರಸ್ತುತವಾಗಿರುತ್ತದೆ. ಅವರು ಕಾಶಿಯಲ್ಲಿ ಶಿಷ್ಯರ ಜತೆಯಲ್ಲಿ ರಸ್ತೆಯಲ್ಲಿ ಹೋಗುತ್ತಿರುವಾಗ ಒಬ್ಬ ಚಂಡಾಲನು ತನ್ನ ನಾಯಿಗಳೊಡನೆ ಅವರೆದುರಿಗೆ ಬರುತ್ತಾನೆ. (ಸಾಕ್ಷಾತ್ ವಿಶ್ವನಾಥನೇ ಚಂಡಾಲರೂಪದಲ್ಲಿ ಬಂದನೆಂದು ಕಥೆ, ಇರಲಿ.) ಆಗ ಅವತ್ತಿನ ಸಮಾಜದ ರೂಢಿಯಂತೆ ‘ದೂರ ಹೋಗು’ ಎನ್ನುತ್ತಾರೆ. ಅದಕ್ಕುತ್ತರವಾಗಿ ಆ ಚಂಡಾಲನು ಕೇಳುತ್ತಾನೆ – “ಅನ್ನಮಯಾದನ್ನಮಯಂ ಅಥವಾ ಚೈತನ್ಯಮೇವ ಚೈತನ್ಯಾತ್| ದ್ವಿಜವರ ದೂರೀಕರ್ತುಂ ಕಿಂ ವಾ ವಾಞ್ಛಸಿ ಬ್ರೂಹಿ ಗಚ್ಛಗಚ್ಛೇತಿ|| (ದ್ವಿಜವರ್ಯನೇ! ದೂರ ಹೋಗು, ದೂರ ಹೋಗು ಎಂದು ಹೇಳುತ್ತಿರುವೆಯಲ್ಲಾ! ನಿನ್ನ ಅನ್ನಮಯವಾದ ಶರೀರದಿಂದ ನನ್ನ ಈ ಅನ್ನಮಯವಾದ ಶರೀರವನ್ನು ದೂರ ಹೋಗು ಎಂದು ಹೇಳುತ್ತಿರುವೆಯಾ, ಅಥವಾ ನಿನ್ನಲ್ಲಿರುವ ಚೈತನ್ಯ(ಆತ್ಮ)ದಿಂದ ನನ್ನ ಚೈತನ್ಯವನ್ನು ದೂರ ಹೋಗು ಎಂದು ಹೇಳುತ್ತಿರುವೆಯಾ?)
ಪ್ರಶ್ನೆ ಕೇಳಿ ಆಚಾರ್ಯರು ದಿಗ್ಭ್ರಮೆಗೊಂಡು ತಕ್ಷಣ ಉತ್ತರಿಸುತ್ತಾರೆ:
ಜಾಗ್ರತ್ಸ್ವಪ್ನಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತ ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೀ | ಸೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚತ್ ಚಾಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ||
(ಬ್ರಹ್ಮನಿಂದ ಹಿಡಿದು ಇರುವೆಯವರೆಗೂ ಎಲ್ಲಾ ಶರೀರದಲ್ಲಿಯೂ, ಜಾಗ್ರತ್, ಸ್ವಪ್ನ, ಸುಷುಪ್ತ್ಯಾವಸ್ಥೆಗಳಲ್ಲಿ ಯಾವ ಒಂದೇ ಆತ್ಮಚೈತನ್ಯವು ಪ್ರಕಾಶಿಸುತ್ತದೆಯೋ, ಅದೇ ನಾನು, ಕಣ್ಣಿಗೆ ಕಾಣುವ ದೃಶ್ಯವಸ್ತುವಾದ ಶರೀರಾದಿಗಳಲ್ಲ ಎಂಬ ದೃಢಪ್ರಜ್ಞೆಯು ಯಾರಿಗುಂಟೋ, ಅವನು ಚಂಡಾಲನಾಗಲಿ, ದ್ವಿಜನಾಗಲಿ, ನನಗೆ ಗುರು ಎಂಬುದು ನನ್ನ ಮನೋನಿಶ್ಚಯ.)
ಅಂದರೆ ದ್ವಿಜನ, ಚಂಡಾಲನ ಶರೀರಗಳು ಒಂದೇ. ಒಂದರಿಂದ ಒಂದನ್ನು ದೂರ ಹೋಗೆಂದು ಹೇಗೆ ಹೇಳುವುದು? ಹಾಗೆಯೇ ಇಬ್ಬರ ಶರೀರದಲ್ಲಿರುವ (ಎಲ್ಲಾ ಶರೀರಗಳಲ್ಲಿರುವ) ಆತ್ಮಚೈತನ್ಯವೂ ಒಂದೇ. ಅದನ್ನು ದೂರ ಹೋಗೆಂದು ಹೇಗೆ ಹೇಳುವುದು? ಆದರೆ ನಮ್ಮ ಅಜ್ಞಾನದಲ್ಲಿ ಶರೀರವನ್ನೇ ಆತ್ಮವೆಂದು ಮನಸ್ಸು ವ್ಯವಹಾರ ಮಾಡುತ್ತಿದೆ. ಮನಸ್ಸಿನ ಅಶುಚಿತ್ವದಿಂದ ಶರೀರವನ್ನು ದೂರ ಹೋಗೆಂದು ಹೇಳುತ್ತಿದ್ದೇವೆ. ಈ ಅಜ್ಞಾನವೆಂಬ ಅಶುಚಿತ್ವವು, ಜ್ಞಾನ ಬರುವವರೆಗೂ ಇದ್ದೇ ಇರುತ್ತದೆ. ಪರಮ ಪುರುಷಾರ್ಥವಾದ ಮೋಕ್ಷವೆಂದರೆ ಈ ಮಾನಸಿಕ ಅಶುಚಿತ್ವ (ಅಜ್ಞಾನ) ನಿವಾರಣೆಯೇ ಅಲ್ಲವೆ?
ಅಭಿವ್ಯಕ್ತಿ ವೈವಿಧ್ಯ
ಈಗ ಪ್ರಸ್ತುತ ಆಶೌಚವೂ ಮನಸ್ಸಿಗೇ ಹೊರತು ದೇಹಕ್ಕಲ್ಲ ಎಂಬುದು ನಿಶ್ಚಯವಾಗುತ್ತದೆ. ದೇಹದ ಅಶುಚಿತ್ವ ಅಥವಾ ಮಾಲಿನ್ಯ, ಸ್ನಾನಾದಿಗಳಿಂದ ನಿವೃತ್ತಿ ಮಾಡಿಕೊಳ್ಳಬಹುದಾದ್ದರಿಂದ, ದೇಹಕ್ಕೆ ಅಶುಚಿತ್ವ, ಅದು ಅಸ್ಪೃಶ್ಯ ಎಂದು ಹೇಳುವುದು ಸರ್ವಥಾ ತಪ್ಪು. ಈ ದೇಹಾತ್ಮ ಭ್ರಮೆಯೇ ಮನಸ್ಸಿನ ಅಶುಚಿತ್ವ. ಅದು ನಮ್ಮಲ್ಲಿ ನಾನಾವಿಧವಾಗಿ ಅಭಿವ್ಯಕ್ತಿಗೊಳ್ಳುತ್ತದೆ. ನಾನು ಎಂಬ ಅಹಂಕಾರ, ನನ್ನದು ನನ್ನವರು ಎಂಬ ಮೋಹ, ನಾನು ಸುಖಗಳನ್ನು ಅನುಭವಿಸಬೇಕೆಂಬ ಕಾಮ, ಐಶ್ವರ್ಯದ, ವಿದ್ಯೆಯ ಮದ, ಸಂಗ್ರಹಿಸುತ್ತಲೇ ಇರಬೇಕೆಂಬ ಲೋಭ, ಇತರರನ್ನು ಕಂಡರೆ ಮಾತ್ಸರ್ಯ, ಅವ್ಯಕ್ತವಾದ ಭಯ, ಋಜುತ್ವ ಇಲ್ಲದಿರುವುದು, ಕ್ರೌರ್ಯ, ಹಿಂಸಾಚರಣೆ ಹೀಗೆ ನೂರಾರು ಸಹಸ್ರಾರು ಮುಖಗಳಾಗಿ ಅಭಿವ್ಯಕ್ತವಾಗುತ್ತವೆ. ಇವೆಲ್ಲವೂ ಮನಸ್ಸಿನ ಅಶುಚಿತ್ವವೇ. ಇವುಗಳನ್ನು ಕಡಮೆಮಾಡಿಕೊಳ್ಳುತ್ತಾ ನಿವಾರಣೆ ಮಾಡಿಕೊಳ್ಳುವುದೇ ಅಧ್ಯಾತ್ಮಮಾರ್ಗದಲ್ಲಿ ಮುಖ್ಯಸಾಧನೆ.
ಹೀಗೆ ಯಾವಾಗಲೂ ಅನೇಕವಾಗಿ ಅಶುಚಿಯಾಗಿಯೇ ಇರುವ ಮನಸ್ಸಿಗೆ ಯಾರಾದರೂ ಮೃತರಾದಾಗ, ಅಥವಾ ಹುಟ್ಟಿದಾಗ ಅಶುಚಿತ್ವ ಬರುತ್ತದೆಂದರೆ ಏನರ್ಥ? – ಎಂದು ವಿಚಾರ ಮಾಡಬೇಕು. ನಮ್ಮ ಮನಸ್ಸಿಗೆ ಈಗ ಇರುವ ಅಶುಚಿತ್ವ ಸಾಮಾನ್ಯವಾಗಿರುವುದರಿಂದ ಅದರ ಅರಿವೇ ನಮಗೆ ಇಲ್ಲದೆ ಹೋಗಿದೆಯೆಂದು ಹೇಳಬಹುದು. ಈ ಅಶುಚಿತ್ವಕ್ಕೆ ಮುಖ್ಯ ಕಾರಣ ನಾನು, ಮತ್ತು ನನ್ನದು (ಅಹಂ, ಮಮ) ಎಂಬ ತಪ್ಪುಭಾವನೆಗಳು. ಅದಕ್ಕೇ ವೇದಾಂತಸಾಧನೆಯಲ್ಲಿ ಪ್ರಧಾನವಾಗಿ ಈ ‘ಅಹಂ, ಮಮ’ ಎಂಬೆರಡನ್ನು ತೊಲಗಿಸಬೇಕು ಎನ್ನುವುದರಲ್ಲಿಯೇ ಪ್ರಯತ್ನ.
ನಮ್ಮ ಆತ್ಮೀಯರೆ, ಪ್ರಿಯರಾದ ಬಂಧುಗಳು ಮೃತರಾದಾಗ ಆ ವಿಯೋಗವನ್ನು ಸಹಿಸಿಕೊಳ್ಳಲಾರದೆ ವಿಪರೀತ ವ್ಯಥೆಪಡುತ್ತೇವೆ. ಎಷ್ಟೋ ಬಾರಿ ಯಾವ ಕೆಲಸವನ್ನೂ ಮಾಡಲು ತೋಚದೆ ತಲೆಯ ಮೇಲೆ ಕೈಹೊತ್ತು ಕೂರುತ್ತೇವೆ. ಕಣ್ಣೀರಿನಲ್ಲಿ ಕೈತೊಳೆಯುತ್ತೇವೆ. ಹುಚ್ಚುಹುಚ್ಚಾಗಿ ಆಡುತ್ತೇವೆ. ಈ ಅತಿರೇಕಕ್ಕೆಲ್ಲ ಕಾರಣ ಮೃತರ ಬಗ್ಗೆ ಇದ್ದ ನಮ್ಮ ಮಮತೆ; ನನ್ನವರು ಎಂಬ ಮೋಹ. ಅವರು ಜೀವಂತವಿದ್ದಾಗಲೂ ಮಮತೆ ಇರುತ್ತದೆ. ಸತ್ತಾಗ ವಿಯೋಗವನ್ನು ತಡೆದುಕೊಳ್ಳಲಾರದೆ, ಮಮತೆಯು ನಾನಾರೂಪವಾಗಿ ಅಭಿವ್ಯಕ್ತಗೊಳ್ಳುತ್ತದೆ. ಮೊದಲು ಇದ್ದಾಗಲೂ ಮಮತೆಯು ಮಾನಸಿಕ ಅಶುಚಿಯೇ! ಈಗ ಮೃತರಾದಾಗ ಮಮತೆಯು ವಿಪರೀತವಾಗುವುದರಿಂದ ಹೆಚ್ಚು ಅಶುಚಿಯೆಂದು ಹೇಳಬಹುದು. ಈ ಮಾನಸಿಕಾಶೌಚದ ಆಧಿಕ್ಯವನ್ನೇ ಮೃತಾಶೌಚ ಎಂದು ಹೇಳಬೇಕು. ಹಾಗೆಯೇ ನಮಗೆ ಮಕ್ಕಳು ಹುಟ್ಟಿದಾಗಲೂ ಮಮತೆಯಿಂದ ಸಂತೋಷಾಧಿಕ್ಯ ಉಂಟಾಗುತ್ತದೆ. ಅದೂ ಅಶುಚಿಯೇ. ಆದರೂ ಇದು ಮೃತಾಶೌಚದಷ್ಟು ತೀವ್ರವಾಗಿರುವುದಿಲ್ಲ. ಇದರಿಂದಲೋ ಏನೋ ಜಾತಾಶೌಚದಲ್ಲಿ ಮೃತಾಶೌಚದಷ್ಟು ನಿರ್ಬಂಧಗಳನ್ನಿಟ್ಟುಕೊಂಡಿಲ್ಲ!
ಅರ್ಥವ್ಯಾಪ್ತಿ
ಈ ಅಧಿಕವಾದ ಅಶುಚಿತ್ವವು ಸಂಬಂಧದ ಮೇಲೆ, ಕಾಲದ ಮೇಲೆ ಅವಲಂಬಿಸುತ್ತದೆ. ತೀರ ಹತ್ತಿರದ ಬಂಧುಗಳಿಗೆ ಮಮತೆ ಜಾಸ್ತಿ ಇರುವುದು ಸಹಜ. ಆದ್ದರಿಂದ ಅವರಿಗೆ ಹೆಚ್ಚು ಕಾಲ ಅಶುಚಿತ್ವ (೧೦ ದಿನಗಳು). ಮಿಕ್ಕವರಿಗೆ ಸಂಬಂಧ ದೂರವಾದಷ್ಟೂ ಮಮತೆಯ ತೀವ್ರತೆ ಕಡಮೆಯಾಗುತ್ತದೆ. ಅದನ್ನನುಸರಿಸಿಯೇ ಅವರಿಗೆ ಮೂರು ದಿನ, ಒಂದೂವರೆ ದಿನ, ಸ್ನಾನ ಇತ್ಯಾದಿ ತಾರತಮ್ಯ. ಈ ೧೦ ದಿನಗಳ ಅವಧಿ ಹೇಗೆ ನಿಶ್ಚಯಿಸಿದ್ದಾರೆ ಎಂದು ಕೇಳಬಹುದು. ಅದೊಂದು Arbitrary ನಂಬರ್. ಅದಕ್ಕೆ ಯಾವ ಕಾರಣವನ್ನೂ ಕೊಡಲು ಬರುವುದಿಲ್ಲ. ಸಾಮಾನ್ಯವಾಗಿ ಈ ಮಮತೆಯಿಂದ ಉಂಟಾದ ದುಃಖ ಸತ್ತ ದಿವಸದಿಂದ ಕಡಮೆಯಾಗುತ್ತಾ ಬಂದು ೧೦ ದಿನಗಳಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆಂದು ಊಹಿಸಿ ೧೦ ದಿನಗಳನ್ನು ವಿಧಿಸಿದ್ದಾರೆ. ಕೆಲವರಿಗೆ ೧ ತಿಂಗಳು, ೯ ತಿಂಗಳು, ಒಂದು ವರ್ಷ ಕೂಡ ಇರಬಹುದು. ಅವೆಲ್ಲ exceptional caseಗಳು. ಸಾಮಾನ್ಯ ಜನಕ್ಕೆ ೧೦ ದಿನಗಳೆಂದು ಇಟ್ಟುಕೊಂಡಿದ್ದಾರೆ. ಹಾಗೆಯೇ ದೂರದ ಬಂಧುಗಳಿಗೂ ೩ ದಿನ, ಒಂದೂವರೆ ದಿನಗಳ ಗಡುವನ್ನು ಕೊಟ್ಟಿದ್ದಾರೆ. ಹಾಗಾದರೆ ಹತ್ತಿರ ಇಲ್ಲದೆ, ಮಮತೆಯೇ ಇಲ್ಲದಿದ್ದರೆ (ಜ್ಞಾತಿಗಳಾಗಿರಬಹುದು, ಆದರೆ ಸಂಬಂಧವೇ ಇಟ್ಟುಕೊಳ್ಳದಿರಬಹುದು) ಅಶುಚಿತ್ವ ಇಲ್ಲವೇ ಅಂದರೆ ಖಂಡಿತ ಇಲ್ಲ, ಅಶುಚಿತ್ವವೆನ್ನುವುದು ಆಯಾಯಾ ವ್ಯಕ್ತಿಗೆ ಸಂಬಂಧಪಟ್ಟದ್ದು. ಅವನಿಗೆ ಮಾನಸಿಕ ಅನುಭವವಾಗಬೇಕು. ಇಲ್ಲದಿದ್ದರೆ ಬೇಕಿಲ್ಲ. ಅದಕ್ಕೇ ತಾನೇ ದೂರದ ಬಂಧುಗಳಿಗೆ ಅವಧಿ ಕಡಮೆ ಮಾಡಿರುವುದು!
ಇದೇ ನ್ಯಾಯವನ್ನಿಟ್ಟುಕೊಂಡು, ಮೃತರ ಹೆಸರು ಕೇಳಿದ ಮೇಲೇ ಅಶುಚಿತ್ವ ಎಂಬುದನ್ನೂ ಸಮರ್ಥಿಸಬಹುದು. ಯಾರು ಎಂಬುದು ತಿಳಿದಮೇಲೆ ತಾನೇ ನಮ್ಮ ಮನಸ್ಸು ಮಮತೆಯಿಂದ ದುಃಖಕ್ಕೆ ಒಳಗಾಗುತ್ತದೆ! ಮೃತರ ಸ್ವರೂಪ ಜ್ಞಾನವೇ ಇಲ್ಲದಿರುವಾಗ ಮಮತೆ ಬಾಧಿಸುವುದು ಹೇಗೆ? ಅಶುಚಿತ್ವ ಎಲ್ಲಿಂದ ಬಂತು?
ಮಾನಸಿಕ ಅಶುಚಿತ್ವವು ಸ್ನಾನದಿಂದ ನಿವೃತ್ತಿಯಾಗುವುದಿಲ್ಲ ನಿಜ. ಆದರೆ ೧೦ ದಿನಗಳಾದ ಮೇಲೆ ಮಮತೆಯಿಂದ ಅಧಿಕವಾಗಿದ್ದ ಮಮತೆಯ ತೀವ್ರತೆ ಕಡಮೆಯಾದಾಗ, ಕಡಮೆಯಾಗಿದೆಯೆಂಬುದನ್ನು ತೋರಿಸಲೋಸುಗ ಸ್ನಾನ. ಸಂಧ್ಯಾವಂದನೆಯಲ್ಲಿ ಆಪೋಹಿಷ್ಠಾ ಎಂಬ ಮಂತ್ರ ಹೇಳಿ ಪ್ರೋಕ್ಷಣೆ ಮಾಡಿಕೊಂಡ ಹಾಗೆ. ಪ್ರೋಕ್ಷಣೆ ಮಾಡಿಕೊಂಡ ನೀರಿನಿಂದ ನಾವು ಪವಿತ್ರವಾಗುವುದಿಲ್ಲ(ಪಾವಿತ್ರ್ಯವು ಮನಸ್ಸಿಗೆ ಸಂಬಂಧಪಟ್ಟಿದ್ದು. ದೈಹಿಕಪಾವಿತ್ರ್ಯವು ಸ್ನಾನದಿಂದ ಸಿದ್ಧವಾಗಿರುತ್ತದೆ). ಮಂತ್ರೋಚ್ಚಾರಣೆ ಮಾಡಿ ಅರ್ಥಾನುಸಂಧಾನದಿಂದ ಅಂತಃಕರಣ ಪವಿತ್ರವಾಗುತ್ತದೆ. ಆ ಪಾವಿತ್ರ್ಯದ್ಯೋತಕವೇ ತೀರ್ಥಪ್ರೋಕ್ಷಣೆ. ಉದಕಶಾಂತಿಯಲ್ಲಿಯೂ ತೀರ್ಥಪ್ರೋಕ್ಷಣೆ ಇದೇ ರೀತಿ. ಆದ್ದರಿಂದ ಮಮತೆಯೇ ಇಲ್ಲದಿರುವವನು ಆಶೌಚವನ್ನು ಅನುಸರಿಸಬೇಕಾದ್ದೂ ಇಲ್ಲ. ಸ್ನಾನಮಾಡಬೇಕಾದ್ದೂ ಇಲ್ಲ (ನಿತ್ಯ ಸ್ನಾನ ಬೇರೆ; ಆಶೌಚನಿವೃತ್ತಿಯಾಯಿತು ಎಂದು ಮಾಡಬೇಕಾದ್ದಿಲ್ಲ).
ಇದೇ ರೀತಿ ಸಂನ್ಯಾಸಿಗೆ ತಂದೆ ತಾಯಿ ಸತ್ತರೂ ಆಶೌಚವಿಲ್ಲವೆಂದರೆ ಅವನು ಮಮತೆಯನ್ನೇ ತ್ಯಾಗ ಮಾಡಿರುತ್ತಾನೆಂದರ್ಥ(ಮಮತೆ ಇದೆಯೇ ಇಲ್ಲವೇ ಎಂಬುದನ್ನು ನಿಶ್ಚಯಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು). ಹಾಗೆಯೇ ತಂದೆ ಸಂನ್ಯಾಸ ತೆಗೆದುಕೊಂಡಿದ್ದರೆ ಮಗನಿಗೆ ಆಶೌಚವಿಲ್ಲವೆಂದರೆ, ಮಗನೂ ತಂದೆಯು ಜ್ಞಾನಿಯಾಗಿ ಮಮತೆಯನ್ನು ಬಿಟ್ಟಿರುವುದರಿಂದ ಬಹಳ ಉತ್ತಮ ಪದವಿಯನ್ನು ಪಡೆದಿದ್ದಾರೆಂದು ಸಂತೋಷಪಡಬೇಕೇ ಹೊರತು ದುಃಖಪಡಬೇಕಾದ್ದಿಲ್ಲ ಎಂದು ತೋರಿಸುವುದಕ್ಕೋಸ್ಕರ.
ಆಶೌಚದಲ್ಲಿ ಸಂಧ್ಯಾವಂದನೆ, ದೇವತಾರ್ಚನೆ ಇತ್ಯಾದಿಗಳನ್ನು ಮಾಡಕೂಡದು ಎಂಬ ನಿಷೇಧಕ್ಕೆ ಅರ್ಥವಿದೆ. ಆ ಕಾಲದಲ್ಲಿರುವ ಮಾನಸಿಕ ಸ್ಥಿತಿಯಲ್ಲಿ, ಮಾನಸಿಕ ನೈರ್ಮಲ್ಯಕ್ಕೋಸ್ಕರವೇ ಏರ್ಪಟ್ಟಿರುವ ಆ ಕರ್ಮಗಳನ್ನು ಮಾಡುವುದು ಹೇಗೆ? ಮಾಡಲು ಮನಸ್ಸು ಒಡಂಬಡುವುದೇ ಇಲ್ಲ. ಹಾಗೇ ಅವುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಬದಲು ಮಾಡಬಾರದೆಂದು ನಿಷೇಧಿಸಿಬಿಟ್ಟರು!
ನಿತ್ಯ ಅಗ್ನಿಹೋತ್ರ ಮಾಡುವವರು ಮಾಡಿಯೇ ತೀರಬೇಕಂತೆ; ಬೆಳಗ್ಗೆ, ಸಾಯಂಕಾಲ ಅಗ್ನಿಹೋತ್ರ ಮಾಡುವ ಸಮಯದಲ್ಲಿ ಅವರಿಗೆ ಆಶೌಚ ಇಲ್ಲವಂತೆ. ಮುಗಿದ ಕೂಡಲೆ ಪುನಃ ಅಗ್ನಿಹೋತ್ರ ಮಾಡುವವರೆಗೂ ಆಶೌಚನಿಯಮಗಳನ್ನು ಅನುಸರಿಸಬೇಕು. ಆಶೌಚವು ದೈಹಿಕವಾಗಿದ್ದರೆ ಅಗ್ನಿಹೋತ್ರ ಆರಂಭದಲ್ಲಿ ಹೋಗುವುದು ಹೇಗೆ? ಮುಗಿದಕೂಡಲೆ ಬರುವುದು ಎಂದರೇನು? ಮಾನಸಿಕ ಎಂದಿಟ್ಟುಕೊಂಡರೆ ಸಮರ್ಥಿಸಬಹುದು. ಅಗ್ನಿಹೋತ್ರವೆನ್ನುವುದು ವೇದೋಕ್ತವಾದ ನಿತ್ಯಕರ್ಮ. ಅದಕ್ಕೆ ದೊಡ್ಡ ಸ್ಥಾನ. ಆದ್ದರಿಂದ ಅದನ್ನು ಮಾಡುವ ಸಮಯದಲ್ಲಿ ಸ್ವಲ್ಪಕಾಲ ಮಮತೆಯನ್ನೂ, ಅದರಿಂದ ಉಂಟಾಗಿರುವ ದುಃಖವನ್ನೂ ಮರೆಯಬೇಕೆಂದರ್ಥ. ಅಗ್ನಿಹೋತ್ರದಂಥ ಉತ್ತಮ ಕರ್ಮವನ್ನು ಮಾಡುವಾಗ ಅದರ ಏಕಾಗ್ರತೆಯಲ್ಲಿ ಮಮತೆ, ದುಃಖಗಳು ಮರೆತುಹೋಗಬೇಕು – ಮರೆತುಹೋಗುತ್ತವೆ.
ಹಾಗೇ ಶ್ರಾದ್ಧ ಆರಂಭಿಸಿಬಿಟ್ಟಿದ್ದರೆ, ವಿಷಯ ತಿಳಿದರೂ ಆಶೌಚವಿಲ್ಲ. ಶ್ರಾದ್ಧ ಮುಗಿದ ಕೂಡಲೆ ಬಂದು ಸೇರಿಕೊಳ್ಳುತ್ತದಂತೆ! ದೈಹಿಕವಾದರೆ ಇದು ಹೇಗೆ ಸಾಧ್ಯ? ಮಾನಸಿಕ ಎಂದಿಟ್ಟುಕೊಂಡರೆ ಪುನಃ ಸಮರ್ಥಿಸಬಹುದು. ಶ್ರಾದ್ಧದಂತಹ ಪಿತೃಗಳಿಗೆ ಮಾಡುವ ಯಜ್ಞದಲ್ಲಿ ನಿರತನಾಗಿರುವಾಗ ಬಂಧುಗಳ ಮೃತಿಯಿಂದ ಉಂಟಾಗುವ ದುಃಖ ಬಾಧಿಸಬಾರದು. ಬಾಧಿಸುವುದಿಲ್ಲ.
ಅನುಕೂಲಶಾಸ್ತ್ರ
ಇದೇ ರೀತಿ ವಿವಾಹ, ಉಪನಯನಗಳನ್ನು ಏರ್ಪಡಿಸಿರುವಾಗ ಆಶೌಚ ಸಂಭವಿಸಿದರೆ, ನಾಂದೀಶ್ರಾದ್ಧ ಮಾಡಿಬಿಟ್ಟಿದ್ದರೆ ನಿಲ್ಲಿಸಬೇಕಾದ್ದಿಲ್ಲ ಎಂದು ಹೇಳುತ್ತಾರೆ. ಇದು ಸೌಕರ್ಯಾರ್ಥವಾಗಿ ಮಾಡಿಕೊಂಡಿರುವ ನಿಯಮ. ವಿವಾಹದಂಥ ದೊಡ್ಡ ಸಮಾರಂಭವನ್ನು ನಿಲ್ಲಿಸಬೇಕಾದರೆ ಎಷ್ಟು ಕಷ್ಟ! ಸ್ವಲ್ಪ ವಿನಾಯಿತಿ ಕೊಟ್ಟಿದ್ದಾರೆ. ಕೆಲಸವನ್ನು ಮುಂದುವರಿಸಬೇಕು. ಆಶೌಚವು ದೈಹಿಕವೇ ಆಗಿದ್ದರೆ, ನಾಂದೀ ಮಾಡಿದ್ದರೆ ಬಾಧಿಸುವುದಿಲ್ಲ ಎಂದು ಹೇಳುವುದು ಆಭಾಸ. ಆದ್ದರಿಂದ ಈ ಆಶೌಚವೆಂಬುದು ಮಾನಸಿಕವೇ ಹೊರತು ದೈಹಿಕವಲ್ಲ. ಮೃತಿಯಿಂದ ಮನಸ್ಸಿನ ಅಶುಚಿತ್ವ ಹೆಚ್ಚಾಗದಿದ್ದರೆ ಆಶೌಚವೇ ಇಲ್ಲ. ಸುಮ್ಮಸುಮ್ಮನೆ ಎಲ್ಲಾ ಕರ್ಮಗಳನ್ನು ಮಾಡುವುದನ್ನು ಬಿಟ್ಟು, ಸ್ಪರ್ಶಾಸ್ಪರ್ಶಗಳೆಂದು ಒದ್ದಾಡುವುದು ಮೌಢ್ಯವೆಂದು ಹೇಳದೆ ವಿಧಿಯಿಲ್ಲ.
ಮತ್ತೆ ನೂರಾರು ವರ್ಷಗಳಿಂದ ಈ ಅಭ್ಯಾಸ ಬಂದಿದೆಯಲ್ಲಾ! ನಿರ್ಣಯಸಿಂಧು, ಧರ್ಮಸಿಂಧು ಎಂಬ ಧರ್ಮಶಾಸ್ತ್ರಗ್ರಂಥಗಳನ್ನು ಬರೆದಿರುವ ಪ್ರಕಾಂಡಪಂಡಿತರೂ, ಆಶೌಚವನ್ನು ದೈಹಿಕವೆಂದೇ ನಿಶ್ಚಯಿಸಿ ವಿಸ್ತಾರವಾಗಿ ಬರೆದಿದ್ದಾರಲ್ಲಾ! – ಎಂದರೆ ಸ್ವಲ್ಪ ವಿಮರ್ಶೆಮಾಡಬೇಕು.
ನಮಗೆ ಈ ಔರ್ಧ್ವದೈಹಿಕಕ್ರಿಯೆಗಳಿಗೆ ಗೃಹ್ಯಸೂತ್ರಕಾರರಿಂದ ಆಪಸ್ತಂಭ ಬೋಧಾಯನ, ಭರದ್ವಾಜಾದಿಗಳೇ ಪ್ರಮಾಣ. ಅವರೆಲ್ಲರೂ ಪಿತೃಮೇಧ ಸೂತ್ರಗಳನ್ನು ಬರೆದಿದ್ದಾರೆ. ಅಲ್ಲೆಲ್ಲಿಯೂ ಈ ಆಶೌಚದ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಮರಣ ಸಂಭವಿಸಿದ ೧೦ನೇ ದಿನ ಶಾಂತಿಹೋಮ, ಆನಂದಹೋಮಗಳನ್ನು ವಿಧಿಸಿದ್ದಾರೆ. ಅವುಗಳಿಗೆ `ಅಘಾಪಹ್ನುತಿ ಹೋಮ’ (ಅಘವನ್ನು ಹೋಗಲಾಡಿಸುವ ಹೋಮ)ವೆಂದು ಹೆಸರು. ಸುಮಾರು ೧೩ ಹೋಮಗಳು ಬರುತ್ತವೆ. ಒಂದೊಂದರಲ್ಲಿಯೂ “ಅಪನಶ್ಶೋಶುದಘಮ್ ಸ್ವಾಹಾ” ಎಂದು ಬರುತ್ತದೆ. ಇದೊಂದು ಅಗ್ನಿಯ ಪ್ರಾರ್ಥನೆ. ಅಘಮ್ ಅಪಶೋಶುಚಾತ್ = ಅಘವನ್ನು ಹೋಗಲಾಡಿಸು ಎಂದು ಪ್ರಾರ್ಥನೆ. ಅಘ ಎಂದರೆ ಪಾಪ ಅಥವಾ ದೋಷ ಎಂದರ್ಥ. ತಂದೆಯೋ ತಾಯಿಯೋ ಬಂಧುಗಳೋ ಸತ್ತರೆ ಕರ್ತೃವಿಗೂ ಇತರ ಬಂಧುಗಳಿಗೂ ಪಾಪ ಅಥವಾ ದೋಷ ಬರುವುದು ಹೇಗೆ ಎಂದು ವಿಚಾರ ಮಾಡಿದರೆ, ಆ ಮೃತಿಯಿಂದ ಅವರಿಗೆ ಉಂಟಾಗುವ ಮಮತಾಧಿಕ್ಯವೇ ದೋಷವೆಂದು ಭಾವಿಸಿದ್ದಾರೆ. ಮಮತೆಯನ್ನು ಕಡಮೆಮಾಡಿಕೊಂಡು ಹೋಗು ವುದೇ ಜೀವನದಲ್ಲಿ ಮುಖ್ಯ ಸಾಧನೆಯೆಂದು ಹೇಳುವಾಗ ಮಮತೆಯನ್ನು ಹೆಚ್ಚುಮಾಡಿಕೊಳ್ಳುವುದು ದೋಷವೇ. ಅವರಾಗಿ ಮಾಡಿಕೊಳ್ಳದಿರಬಹುದು; ವಿಧಿವಶಾತ್ ಬಂದಿದೆ. ಹಾಗಾದರೂ ಮಮತೆಯಂತೂ ಜಾಸ್ತಿಯಾಯಿತಲ್ಲವೇ? ಅದು ಖಂಡಿತ ದೋಷ. ೧೦ ದಿನಗಳ ಅವಧಿಯಲ್ಲಿ ಅದರ ವೇಗ ಕಡಮೆಯಾಗುತ್ತದೆ ಎಂಬ ಅಭಿಪ್ರಾಯದಿಂದ ೧೦ನೇ ದಿನ ಅಘ ಅಥವಾ ದೋಷ ನಿವೃತ್ತಿಯಾಯಿತು ಎಂದು ಅಗ್ನಿಯನ್ನು ಪ್ರಾರ್ಥಿಸಿ ಹೋಮವನ್ನು ಹೇಳಿದ್ದಾರೆ.
ಪ್ರಾಯಃ ಸೂತ್ರಕಾರರ ಕಾಲವಾದ ಮೇಲೆ ಬಂದವರಿಗೆ ಈ ಅಘ ಎಂಬ ಶಬ್ದದ ತಾತ್ಪರ್ಯ ತಿಳಿಯದಿದ್ದಿರಬೇಕು. ಯಜಮಾನ ಸತ್ತದ್ದರಿಂದ ಮಕ್ಕಳಿಗೆ ಬಂಧುಗಳಿಗೆ ಪಾಪ ಅಥವಾ ದೋಷ ಯಾವುದು ಎಂಬುದು ತಿಳಿಯದೆ ಹೋಗಿದೆ. ಮಮತೆ, ಅದರಿಂದ ಉಂಟಾಗುವ ದುಃಖವೇ ದೋಷ ಎಂಬ ಆಧ್ಯಾತ್ಮಿಕ ಸತ್ಯ ಅವರುಗಳಿಗೆ ಗೋಚರವಾಗದಿದ್ದಿರಬೇಕು. ‘ಅಘ’ ಎಂಬ ಶಬ್ದಕ್ಕೆ ಸಾರ್ಥಕ್ಯ ಹೇಗಾದರೂ ಕಲ್ಪಿಸಬೇಕೆಂದು ಯೋಚಿಸಿ ದೇಹಕ್ಕೇ ಅಶುಚಿತ್ವ ಅಥವಾ ದೋಷ ಬಂದಿದೆಯೆಂದು ಭಾವಿಸಿ ಈಗ ಅನುಸರಿಸುತ್ತಿರುವ ನಿಯಮಗಳನ್ನೆಲ್ಲಾ ವಿಧಿಸಿದಂತೆ ಕಾಣುತ್ತದೆ.
ವಸ್ತುನಿಷ್ಠಾ ((objective) ಗುಣದಿಂದ ವಿಷಯಗಳನ್ನು ವಿಮರ್ಶಿಸಿ ತೀರ್ಮಾನಕ್ಕೆ ಬರುವುದು ವಿದ್ವಜ್ಜನರಿಗೆ ಬಿಟ್ಟದ್ದು.