ಧರ್ಮಪ್ರಕಾಶ ಎಸ್.ವಿ. ಶ್ರೀನಿವಾಸಶೆಟ್ಟರು ತಮ್ಮ ಪರಿಪೂರ್ಣ ವ್ಯಕ್ತಿತ್ವದಿಂದಾಗಿ ರಾಜ್ಯಸರ್ಕಾರ ನೀಡಿದ “ಜಸ್ಟಿಸ್ ಆಫ್ ಪೀಸ್’ ಎಂಬ ಬಹು ಅಪರೂಪವಾದ ಗೌರವಸ್ಥಾನದಿಂದ ಪುರಸ್ಕೃತರಾದವರು.
ಬೆಂಗಳೂರು ನಗರದ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಅವೆನ್ಯೂ ರಸ್ತೆಯಲ್ಲಿ ಕೃಷ್ಣರಾಜೇಂದ್ರ ಮಾರುಕಟ್ಟೆಯೆಡೆಗೆ ಸಾಗುವಾಗ ಬಲಗಡೆ ಕಾಂಪೌಂಡ್ ಒಳಗಡೆ ಕಾಣಸಿಗುವ ಹಳೇ ವಾಸ್ತುಶೈಲಿಯ ಮೂರಂತಸ್ತಿನ ಕಟ್ಟಡವೇ ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರ ಧರ್ಮಛತ್ರ. ಈ ಛತ್ರದ ಮೇಲ್ಭಾಗದಲ್ಲಿ
CHINTHALAPALLI VENKATAMUNIAH SETTY’S FREE BOARDING HOSTEL CHOULTRY. ESTD ೩-೧೨-೧೯೧೧’ ಎಂಬ ಬರಹವಿರುವ ಅಮೃತಶಿಲಾ ಫಲಕವನ್ನು ಈಗಲೂ ಕಾಣಬಹುದು.
ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರು ೧೮೬೮ರ ಆಗಸ್ಟ್ ೨೨ರಂದು ಆಗಿನ ಕೋಲಾರ ಜಿಲ್ಲೆ ಗೌರಿಬಿದನೂರು ಬಳಿಯ ಚಿಂತಲಪಲ್ಲಿ ಗ್ರಾಮದಲ್ಲಿ ಜನಿಸಿದರು. ಮುಂದೆ ಜೀವನೋಪಾಯಕ್ಕಾಗಿ ಬೆಂಗಳೂರು ನಗರದ ದೊಡ್ಡಪೇಟೆಗೆ ಆಗಮಿಸಿ ಸಣ್ಣಪ್ರಮಾಣದಲ್ಲಿ ತಮ್ಮ ಕುಲಕಸುಬಾದ ನೂಲಿನ ವ್ಯಾಪಾರವನ್ನು ಆರಂಭಿಸಿದರು. ೧೯೦೦ರ ವೇಳೆಗೆ ನೂಲಿನ ವ್ಯಾಪಾರದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಉತ್ತಮಗುಣಮಟ್ಟ ಮುಂತಾದವುಗಳಿಂದಾಗಿ ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರು ಬಹುಬೇಗ ದೊಡ್ಡಪೇಟೆಯ ಒಬ್ಬ ಪ್ರಮುಖ ವ್ಯಾಪಾರಸ್ಥರಾಗಿ ಎಲ್ಲ ವರ್ಗಗಳ ಪ್ರಮುಖರ ಸ್ನೇಹ ಹಾಗೂ ಅಭಿಮಾನಗಳನ್ನು ಗಳಿಸಿ ಗಣ್ಯವ್ಯಕ್ತಿಯೆನಿಸಿಕೊಂಡರು.
ಅನಂತರದಲ್ಲಿ ಇವರಿಗೆ ತಮ್ಮ ಆರ್ಯವೈಶ್ಯ ಜನಾಂಗದವರು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮುಂತಾದ ವಲಯಗಳಲ್ಲಿನ ಅಭಿವೃದ್ಧಿಗಾಗಿ ಸಂಘಟಿತರಾಗುವುದು ಅತ್ಯವಶ್ಯವೆನಿಸಿತು. ಇದರಿಂದಾಗಿ ಆಗಿನ ಡೆಪ್ಯುಟಿ ಕಮಿಷನರ್ ಮಾರ್ಗಪುರಂ ಚಂಗಯ್ಯಶೆಟ್ಟಿಯವರ ಅಧ್ಯಕ್ಷತೆಯಲ್ಲಿ `ಆರ್ಯವೈಶ್ಯ ಮಹಾಸಭಾ’ ರೂಪುಗೊಂಡಿತು.
ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ಎಸ್.ವಿ. ಶ್ರೀನಿವಾಸಶೆಟ್ಟರ ‘ಶ್ರೀನಿವಾಸ ಮಹಲ್
೧೯೦೯ರಲ್ಲಿ ಈ ಮಹಾಸಭಾದ ಸದಸ್ಯರೆಲ್ಲರೂ ನಗರದಲ್ಲಿ ಒಂದೆಡೆ ಸೇರಿ ತಮ್ಮ ಸಮುದಾಯದ ಮಕ್ಕಳ, ಅದರಲ್ಲೂ ಹೊರಪ್ರದೇಶಗಳಿಂದ ಬೆಂಗಳೂರಿಗೆ ಬರುವವರ ವಿದ್ಯಾಭ್ಯಾಸಕ್ಕೆ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಚರ್ಚಿಸಿದರು. ಆಗ ದೂರದಿಂದ ನಗರಕ್ಕೆ ವಿದ್ಯೆಯನ್ನು ಅರಸಿ ಬರುವವರಿಗೆ ಇಲ್ಲಿ ವಸತಿ ಏರ್ಪಾಟು ಮಾಡುವುದು ಪ್ರಯಾಸದ ಕೆಲಸವೇ ಆಗಿತ್ತು. ಸ್ವತಃ ಹೆಚ್ಚು ಓದದೆ ಇದ್ದ ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರು ಜ್ಞಾನಾರ್ಜನೆಯ ಮಹತ್ತ್ವವನ್ನು ಅರಿತು ಜ್ಞಾನದಾನವೇ ಎಲ್ಲಕ್ಕಿಂತ ಶ್ರೇಷ್ಠ ದಾನವೆಂದು ಭಾವಿಸಿ ಮುಖ್ಯವಾಗಿ ತಮ್ಮ ಸಮುದಾಯದ ಶಿಕ್ಷಣಾರ್ಥಿಗಳಾಗಿ ಬರುವ ಮಕ್ಕಳಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಒದಗಿಸಲು ಮುಂದಾಗಿ ೧೯೧೦-೧೧ರಲ್ಲಿ ಈಗಿರುವ ಸ್ಥಳದಲ್ಲಿ ಕಟ್ಟಡವನ್ನು ನಿರ್ಮಿಸಿದರು. ೧೯೧೧ರ ಡಿಸೆಂಬರ್ ೧೧ರಂದು ಪ್ರಾರಂಭಗೊಂಡ ಈ ಉಚಿತ ವಿದ್ಯಾರ್ಥಿನಿಲಯ ಇಡೀ ಸಂಸ್ಥಾನದಲ್ಲೇ ಆರ್ಯವೈಶ್ಯ ಸಮುದಾಯದವರಿಗಾಗಿ ನಗರದಲ್ಲಿ ಪ್ರಾರಂಭಗೊಂಡ ಪ್ರಪ್ರಥಮ ವಿದ್ಯಾರ್ಥಿನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದ ಕೆಲವು ವರ್ಷಗಳಲ್ಲೇ ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರು ನಿಧನಹೊಂದಿದರು.
ಲಕ್ಷ್ಮೀದೇವಮ್ಮನವರು
ಕೋಲಾರದಲ್ಲಿ ೧೯ನೇ ಶತಮಾನದ ಕೊನೆಯ ಭಾಗದಲ್ಲಿ ಆರ್ಯವೈಶ್ಯ ವಂಶಸ್ಥರಲ್ಲಿ ಪ್ರಸಿದ್ಧರಾಗಿದ್ದ ಎಸ್.ವಿ. ವೆಂಕಟಮುನಯ್ಯಶೆಟ್ಟಿ ಮತ್ತು ಶ್ರೀಮತಿ ಮುದ್ದಮ್ಮ ದಂಪತಿಗಳಿಗೆ ೧೮೯೯ರ ಮೇ ೧೪ರಂದು ಜನಿಸಿದ ಶ್ರೀನಿವಾಸಶೆಟ್ಟರು ಒಬ್ಬನೇ ಮಗ. ಇನ್ನೊಬ್ಬಳು ಹೆಣ್ಣುಮಗಳು. ಶ್ರೀನಿವಾಸಶೆಟ್ಟರು ಮಾಧ್ಯಮಿಕ ಶಾಲೆ ಓದುತ್ತಿದ್ದಾಗಲೇ ತಂದೆ ಮರಣಹೊಂದಿದರು. ಆಗ ತಾಯಿಯೊಂದಿಗೆ ಬೆಂಗಳೂರು ದೊಡ್ಡಪೇಟೆಗೆ ಆಗಮಿಸಿ ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರ ಮನೆಯಲ್ಲಿ ಎಲ್ಲರೂ ವಾಸಿಸತೊಡಗಿದರು. ಶ್ರೀನಿವಾಸಶೆಟ್ಟರು ಸುಲ್ತಾನಪೇಟೆಯ ಗಣಪತಿ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಹತ್ತಿ ನೂಲಿನ ವ್ಯಾಪಾರದಲ್ಲಿ ತೊಡಗಿದರು. ಇವರ ಹಿರಿಯ ಅಕ್ಕ ಲಕ್ಷ್ಮೀದೇವಮ್ಮನವರು ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರು ಪ್ರಾರಂಭಿಸಿದ್ದ ವಿದ್ಯಾರ್ಥಿನಿಲಯವನ್ನು ಎಲ್ಲರ ಬೆಂಬಲದಿಂದ ನಡೆಸಿಕೊಂಡು ಬಂದರು. ಆ ಕಟ್ಟಡವನ್ನು ೧೯೨೮ರ ವೇಳೆಗೆ ಕೆಡವಿಹಾಕಿ ಮೂರು ಅಂತಸ್ತಿನ ಕಟ್ಟಡವನ್ನು ಲಕ್ಷ್ಮೀದೇವಮ್ಮನವರು ನೂತನವಾಗಿ ನಿರ್ಮಿಸಿದರು. ತಳ ಅಂತಸ್ತಿನಲ್ಲಿ ಕಲ್ಯಾಣಮಂಟಪ, ಒಂದನೇ ಅಂತಸ್ತಿನಲ್ಲಿ ಸಭಾಮಂದಿರ, ಮೂರನೇ ಅಂತಸ್ತಿನಲ್ಲಿ ವಿದ್ಯಾರ್ಥಿನಿಲಯದ ಕಟ್ಟಡವನ್ನು ೧೯೩೦ರ ಮೇ ೨೧ರಂದು ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಉದ್ಘಾಟಿಸಿದರು. ಅನಂತರದಲ್ಲಿ ಲಕ್ಷ್ಮೀದೇವಮ್ಮನವರು ಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟರು ಪ್ರಾರಂಭಿಸಿದ್ದ ಸಮಾಜಸೇವಾಕಾರ್ಯಗಳ ಪರಂಪರೆಯನ್ನು ಲಕ್ಷಾಂತರ ರೂಪಾಯಿಗಳನ್ನು ದಾನ ಮಾಡುವುದರ ಮೂಲಕ ಮುಂದುವರಿಸಿದರು. ಆ ವೇಳೆಗಾಗಲೇ ನಗರದಲ್ಲಿ ವಾಣಿವಿಲಾಸ ಹೆರಿಗೆ ಆಸ್ಪತ್ರೆ ಪ್ರಾರಂಭವಾಗಿ ಬಹು ಪ್ರಸಿದ್ಧಿಹೊಂದಿತ್ತು. ಆ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ವಾರ್ಡ್ನ ಆವಶ್ಯಕತೆ ಇರುವುದನ್ನು ಗಮನಿಸಿದ ಲಕ್ಷ್ಮೀದೇವಮ್ಮನವರು ಆ ವಾರ್ಡ್ನ ಸುಂದರ ಶಿಲಾಕಟ್ಟಡ ನಿರ್ಮಾಣ, ಪೀಠೋಪಕರಣ ಮುಂತಾದವುಗಳಿಗಾಗಿ ಹಣವನ್ನು ಒದಗಿಸಿದರು.
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವಚಿಂತಲಪಲ್ಲಿ ವೆಂಕಟಮುನಯ್ಯಶೆಟ್ಟಿ ಉಚಿತ ವಿದ್ಯಾರ್ಥಿನಿಲಯ
ತಮ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ ಇವರು ಮಾಡಿದ ದಾನಧರ್ಮಗಳನ್ನು ಗಮನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಲಕ್ಷ್ಮೀದೇವಮ್ಮನವರಿಗೆ ಸಕಲ ಮರ್ಯಾದೆಗಳೊಂದಿಗೆ ದಸರಾ ದರ್ಬಾರಿನಲ್ಲಿ `ಧರ್ಮಪರಾಯಣೆ’ ಎಂಬ ಬಿರುದನ್ನಿತ್ತು ಗೌರವಿಸಿದರು. ಈ ಗೌರವವನ್ನು ಪಡೆದ ಒಂದು ವರ್ಷದಲ್ಲೇ, ಆಸ್ಪತ್ರೆ ಉದ್ಘಾಟನೆ ಆಗುವ ಮುಂಚೆಯೇ, ೧೯೩೫ರಲ್ಲಿ ಲಕ್ಷ್ಮೀದೇವಮ್ಮನವರು ದೈವಾಧೀನರಾದರು. ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಲಕ್ಷ್ಮೀದೇವಮ್ಮನವರ ಸಹೋದರರಾದ ಎಸ್.ವಿ. ಶ್ರೀನಿವಾಸಶೆಟ್ಟರಿಗೆ ಕೆಲವು ದಿನಗಳನಂತರ ಒಂದು ಸಂತಾಪಸೂಚಕ ಪತ್ರವನ್ನು ಬರೆದು, “ಶ್ರೀಮತಿ ಲಕ್ಷ್ಮೀದೇವಮ್ಮನವರ ನಿಧನದಿಂದ ಮೈಸೂರು ಸಂಸ್ಥಾನವು ಒಬ್ಬ ಮಹಾನ್ ಸಮಾಜಸೇವಾಕರ್ತೆಯನ್ನು ಹಾಗೂ ಒಬ್ಬ ಶ್ರೇಷ್ಠ ಮಹಿಳೆಯನ್ನು ಕಳೆದುಕೊಂಡಿತು” ಎಂದರು. ೧೯೩೬ರಲ್ಲಿ ಮಿರ್ಜಾರವರು ವಾಣಿವಿಲಾಸ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಈ ಆಸ್ಪತ್ರೆಯನ್ನು ಎಸ್.ವಿ. ಶ್ರೀನಿವಾಸಶೆಟ್ಟರ ಮತ್ತು ಪುರಪ್ರಮುಖರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.
ಎಸ್.ವಿ. ಶ್ರೀನಿವಾಸಶೆಟ್ಟರು
ಮುಂದುವರಿಯುತ್ತಿರುವ ಎಸ್.ವಿ. ಶ್ರೀನಿವಾಸಶೆಟ್ಟರ ಪರಂಪರೆ – ಎಸ್.ವಿ.ಎಸ್. ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀಕಾಂತಮ್ಮ, ಮಗ ಎಸ್.ವಿ. ಸುಬ್ರಹ್ಮಣ್ಯಗುಪ್ತ, ಸೊಸೆ ಅನುಪಮ ಗುಪ್ತ, ಮೊಮ್ಮಗಳು ಈಶಾನಿ ಗುಪ್ತ ಹಾಗೂ ಮೊಮ್ಮಗ ಅಗಸ್ತ್ಯ ಗುಪ್ತ
ವಿದ್ಯಾರ್ಥಿನಿಲಯ, ಮಕ್ಕಳ ಆಸ್ಪತ್ರೆ ಮುಂತಾದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಅಮೂಲ್ಯವಾದ ಸೇವಾಯೋಜನೆಗಳನ್ನು ಮುಂದುವರಿಸುವ ಈ ಕುಟುಂಬದ ಪರಂಪರೆಯನ್ನು ಅನಂತರದಲ್ಲಿ ಅಪಾರ ವ್ಯಾಪಾರ, ವ್ಯವಹಾರದಿಂದಾಗಿ ಪ್ರಸಿದ್ಧಿ ಹೊಂದಿದ ಶ್ರೀನಿವಾಸಶೆಟ್ಟರು ಮತ್ತಷ್ಟು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಾ, ಬೆಂಗಳೂರು ನಗರದ ಬೆಳವಣಿಗೆಯಲ್ಲಿ ಮುಖ್ಯಪಾತ್ರ ವಹಿಸಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ (೧೯೩೯-೧೯೪೫) ಅಗತ್ಯ ಆಹಾರಧಾನ್ಯದ ಬೆಲೆಗಳು ಗಗನಕ್ಕೇರಿ ಜನರು ಕೊಳ್ಳಲಾಗದೆ ಪರಿತಪಿಸುತ್ತಿದ್ದರು. ಈ ಬವಣೆಯನ್ನು ಕಂಡ ಶ್ರೀನಿವಾಸಶೆಟ್ಟರು ವ್ಯಾಪಾರಮಳಿಗೆಗಳಲ್ಲಿ ಆಹಾರಧಾನ್ಯವನ್ನು ಕೊಂಡು ಸಾಮಾನ್ಯಜನರ ಕೈಗೆಟಕುವಂತೆ ಅವೆನ್ಯೂ ರಸ್ತೆಯಲ್ಲಿನ ತಮ್ಮ ವಿದ್ಯಾರ್ಥಿನಿಲಯದಲ್ಲೇ ಅಂಗಡಿಯನ್ನು ತೆರೆದು ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಹಾಗೂ ನಗರದ ಪ್ರಮುಖ ವ್ಯಕ್ತಿಯಾಗಿದ್ದ ಕೆ.ವಿ. ಅನಂತರಾಮನ್ ಅವರ ಕೈಯಿಂದ ಬಡವರಿಗೆ ವಿತರಣೆಯ ಏರ್ಪಾಟು ಮಾಡಿಸಿದರು.
ಈ ವಿದ್ಯಾರ್ಥಿನಿಲಯದ ಸನಿಹದಲ್ಲಿ ವೈಶ್ಯಬ್ಯಾಂಕನ್ನು ಸ್ಥಾಪಿಸಿ ೧೯೩೦-೧೯೫೯ರವರೆಗೆ ಆ ಬ್ಯಾಂಕ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು; ಮುಂದೆ ನಗರದಲ್ಲಿ ೨೭ಕ್ಕೂ ಹೆಚ್ಚು ಶಾಖೆಗಳು ಪ್ರಾರಂಭವಾಗುವುದಕ್ಕೆ ಕಾರಣರಾದರು. ನಗರದ ವಾಣಿವಿಲಾಸ ರಸ್ತೆಯಲ್ಲಿರುವ ವಾಸವಿ ಧರ್ಮಶಾಲೆಯನ್ನು ಸ್ಥಾಪಿಸಿದರು. ೧೯೫೦ರವರೆಗೂ ವೈಶ್ಯಜನಾಂಗದವರ ಶುಭಕಾರ್ಯಗಳಿಗೆ, ಸಭೆ-ಸಮಾರಂಭಗಳಿಗೆ ಸೂಕ್ತವಾದ ಧರ್ಮಶಾಲೆಯೊಂದಿರಲಿಲ್ಲ. ೧೯೪೮ರ ಮಾರ್ಚ್ ಏಳರಂದು `ರಾಮವಿಲಾಸ’ ಎಂಬ ಹೆಸರಿನ ಕಟ್ಟಡ ಬಹಿರಂಗ ಹರಾಜಿಗೆ ಬಂತು. ಈ ಸ್ಥಳ ಧರ್ಮಶಾಲೆ ನಿರ್ಮಿಸುವುದಕ್ಕೆ ಅನುಕೂಲವಾಗಿದೆಯೆಂದು ಭಾವಿಸಿದ ಕೆಲವು ವೈಶ್ಯ ಮಹನೀಯರ ನೈತಿಕ ಬೆಂಬಲದೊಂದಿಗೆ ಆ ಸ್ವತ್ತನ್ನು ೯೩,೦೦೦ ರೂ.ಗಳಿಗೆ ಪಡೆದರು. ಅನಂತರ ಹಲವಾರು ಮಂದಿ ವೈಶ್ಯರಿಂದ ಧನಸಹಾಯ ಪಡೆದು ಅವರ ಜನಾಂಗದವರಷ್ಟೇ ಅಲ್ಲದೆ ಸಾರ್ವಜನಿಕರಿಗೂ ಅನುಕೂಲವಾಗುವಂತಹ ಕಲ್ಯಾಣ ಮಂಟಪವನ್ನು ನಿರ್ಮಿಸಿದರು. ಪ್ರಸ್ತುತ ಇದು `ವಾಸವಿ ಕನ್ವೆನ್ಷನ್ ಸೆಂಟರ್ ಆಗಿದೆ. ೧೯೫೧ರಲ್ಲಿ ತಮ್ಮ ಹುಟ್ಟೂರಾದ ಕೋಲಾರದ ದೊಡ್ಡಪೇಟೆಯಲ್ಲಿ ಶಾರದಾಂಬಾ ಧರ್ಮಶಾಲೆಯನ್ನು ಶ್ರೀನಿವಾಸಶೆಟ್ಟರು ನಿರ್ಮಿಸಿದರು.
ದಿವಾನ್ ಮಿರ್ಜಾ ಇಸ್ಮಾಯಿಲ್ ಎಸ್.ವಿ. ಶ್ರೀನಿವಾಸಶೆಟ್ಟರ ‘ಶ್ರೀನಿವಾಸ ಮಹಲ್ನಲ್ಲಿ ಭೋಜನ ಸ್ವೀಕರಿಸುತ್ತಿರುವುದು
ಎಸ್.ವಿ. ಶ್ರೀನಿವಾಸಶೆಟ್ಟರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಹಲವಾರು ಪ್ರಮುಖ ನಿರ್ಧಾರಗಳಿಗೆ ಕಾರಣರಾದರು. ಉದಾಹರಣೆಗೆ ೧೯೪೦ರ ದಶಕದಲ್ಲಿ ಮಿನರ್ವಾ ವೃತ್ತದಿಂದ ಪುರಭವನದವರೆಗೆ ಇದ್ದ ಕುಂಬಾರಗುಂಡಿ ರಸ್ತೆ ಬಹುಕಿರಿದಾಗಿತ್ತು. ಇವರ ಪ್ರಯತ್ನದಿಂದ ಈ ರಸ್ತೆ ವಿಸ್ತಾರಗೊಂಡಿತು. ಅದೇ ಇಂದಿನ ಜೆ.ಸಿ. ರಸ್ತೆ (ಜಯಚಾಮರಾಜೇಂದ್ರ ರಸ್ತೆ). ಶ್ರೀನಿವಾಸಶೆಟ್ಟರು ನಗರದ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿದ್ದರು, ಹಲವಾರು ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿದ್ದರು; ಹೀಗೆ ಅವರ ಧರ್ಮಕಾರ್ಯಗಳ ವ್ಯಾಪ್ತಿ ಅತ್ಯಂತ ವಿಶಾಲವಾಗಿತ್ತು. ಇವರ ಈ ಎಲ್ಲಾ ಸಮಾಜಾಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಜಯಚಾಮರಾಜ ಒಡೆಯರ್ ಅವರು ೧೯೪೯ರಲ್ಲಿ ಇವರಿಗೆ `ಧರ್ಮಪ್ರಕಾಶ’ ಎಂಬ ಬಿರುದನ್ನು ನೀಡಿ ಸನ್ಮಾನಿಸಿದರು.
ಅನಂತರದಲ್ಲಿ ತಮ್ಮ ಪರಿಪೂರ್ಣ ವ್ಯಕ್ತಿತ್ವದಿಂದಾಗಿ ರಾಜ್ಯಸರ್ಕಾರ ನೀಡಿದ “ಜಸ್ಟಿಸ್ ಆಫ್ ಪೀಸ್’ ಎಂಬ ಬಹು ಅಪರೂಪವಾದ ಗೌರವಸ್ಥಾನದಿಂದ ಪುರಸ್ಕೃತರಾದರು. ಈ ನಂತರ ಶ್ರೀನಿವಾಸಶೆಟ್ಟರ ಹೆಸರಿನ ಜೊತೆ `ಜೆ.ಪಿ.’ ಎಂದು ಸೂಚಿಸಲಾಗುತ್ತಿತ್ತು. ಹೀಗೆ ೬೮ ವರ್ಷಗಳ ತುಂಬುಜೀವನವನ್ನು ನಡೆಸಿದ ಎಸ್.ವಿ. ಶ್ರೀನಿವಾಸಶೆಟ್ಟಿ, ಜೆ.ಪಿ.,ಯವರು ೧೯೬೭ರ ಸೆಪ್ಟೆಂಬರ್ ೧೪ರಂದು ದೈವಸಾನ್ನಿಧ್ಯ ಪಡೆದರು.
ಇವರು ೧೯೩೩ರಲ್ಲಿ ವಿಶ್ವೇಶ್ವರಪುರದ ವಾಸವಿದೇವಸ್ಥಾನದ ರಸ್ತೆಯಲ್ಲಿ ಅರಮನೆಯಂತಹ ಸುಂದರವಾದ ಬಂಗಲೆಯನ್ನು ನಿರ್ಮಿಸಿ ಅದಕ್ಕೆ `ಶ್ರೀನಿವಾಸ ಮಹಲ್ ಎಂದು ಹೆಸರಿಟ್ಟರು. ರಾಜಗಾಂಭೀರ್ಯದಿಂದ ಕೂಡಿರುವ ಈ ಕಟ್ಟಡ ಇಂದು ಇಡೀ ಬೆಂಗಳೂರಿನಲ್ಲಿರುವ ಕೆಲವೇ ಕೆಲವು ಭವ್ಯ ಕಟ್ಟಡಗಳಲ್ಲೊಂದಾಗಿದೆ. ಎಸ್.ವಿ. ಶ್ರೀನಿವಾಸಶೆಟ್ಟರ ಶ್ರೀಮಂತಿಕೆ ಹಾಗೂ ಸೌಂದರ್ಯಪ್ರಜ್ಞೆಯ ಪ್ರತೀಕವಾದ ಈ ಶ್ರೀನಿವಾಸ ಮಹಲಿನಲ್ಲಿ ಇಂದು ಅವರ ಕುಟುಂಬದವರು ವಾಸವಾಗಿದ್ದಾರೆ.
(ಆಧಾರ:Dharmaprakasha S.V. Srinivasa Setty, J.P., A source of Inspiration for Generations to Come. By Suresh Moona.)
Comments are closed.