ನಾವು ಜಪಾನ್ ಬಗ್ಗೆ ತಿಳಿದುಕೊಂಡದ್ದು ಬಹಳ ಕಡಮೆ. ಜಪಾನ್ ಒಂದು ಪುಟ್ಟ ದೇಶ. ಆದರೂ ಅದರ ಆತ್ಮಶಕ್ತಿ, ಕೆಚ್ಚೆದೆ, ಧೈರ್ಯಗಳು ಅಗಾಧ ಎಂದಷ್ಟೇ ತಿಳಿದಿದ್ದೆವು. ಒಂದು ಬಗೆಯಲ್ಲಿ ಜಪಾನ್ ಅಷ್ಟೇನೂ ಪರಿಚಿತನಲ್ಲದ ದೂರದ ಸಂಬಂಧಿಯಂತೆ ನಮಗೆ ಭಾಸವಾಗುತ್ತಿತ್ತು. ಈ ದೇಶದ ಬಗ್ಗೆ ತಿಳಿಯಲೇಬೇಕಿದ್ದ ಎಷ್ಟೋ ಸಂಗತಿಗಳನ್ನು ಇದುವರೆಗೂ ತೆರೆದುನೋಡುವ ಪ್ರಯತ್ನವನ್ನೇ ನಾವು ಮಾಡಿಲ್ಲವಲ್ಲ ಎನ್ನುವುದು ಅಚ್ಚರಿ ಹುಟ್ಟಿಸುವ ಸಂಗತಿ.
ತುಂಬ ಹಿಂದೆ ನಮ್ಮ ಶಾಲಾ ಪಾಠ್ಯದಲ್ಲಿ ಮಿನಮಾಟ ಎಂಬ ರೋಗದ ಬಗ್ಗೆ ಪಾಠ ಇತ್ತು. ಜಪಾನ್ ದೇಶದ ಸುತ್ತಲಿನ ಸಮುದ್ರ ಕಲುಷಿತವಾಗಿ ಅಲ್ಲಿದ್ದ ಮೀನುಗಳನ್ನು ತಿಂದು ಜನರಿಗೆ ಬರುತ್ತಿದ್ದ ಕಾಯಿಲೆಗೆ ಮಿನಮಾಟ ಎಂದು ಹೆಸರು. ಇನ್ನು, ಇತಿಹಾಸಪುಸ್ತಕ ತಿರುವಿಹಾಕಿದರೆ ಅಲ್ಲಿ ೧೯೪೫ರಲ್ಲಿ ಅಮೆರಿಕ ದೇಶ ಎರಡು ನ್ಯೂಕ್ಲಿಯರ್ ಬಾಂಬುಗಳನ್ನು ಜಪಾನಿನ ಹಿರೊಷಿಮ ಮತ್ತು ನಾಗಸಾಕಿಗಳ ಮೇಲೆ ಎತ್ತಿಹಾಕಿ ೫೦ ಸಾವಿರಕ್ಕೂ ಅಧಿಕ ಜನರನ್ನು ಕೊಂದ ಕತೆ ಬರೆದಿತ್ತು. ಮೊದಲು ಹಿರೊಷಿಮದ ಮೇಲೆ ಲಿಟಲ್ಬಾಯ್ ಎಂಬ ಹೆಸರಿನ ಈ ಬಾಂಬನ್ನು ಹಾಕಿದಾಗ ಒಂದೇ ಕ್ಷಣದಲ್ಲಿ ದೊಡ್ಡ ಅಣಬೆಯಂಥ ಆಕಾರದ ಹೊಗೆ ಎದ್ದು ಇಡೀ ನಗರವನ್ನೇ ಸುಟ್ಟು ಕರಕಲು ಮಾಡಿತಂತೆ. ಈ ಬಾಂಬುಗಳ ದೆಸೆಯಿಂದಾಗಿ ಅದುವರೆಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗೆ ವೀರಾವೇಶದಿಂದ ಹೋರಾಡುತ್ತಿದ್ದ ಜಪಾನ್ ಮಂಡಿಯೂರಿ ಶರಣಾಯಿತು. ಎರಡನೇ ಮಹಾಯುದ್ಧ ಅಂತೂ ಇಂತೂ ನಿಂತಿತು.
ಈ ಎರಡು ಕತೆಗಳನ್ನು ಹೊರತುಪಡಿಸಿ ನಾವು ಜಪಾನ್ ಬಗ್ಗೆ ತಿಳಿದುಕೊಂಡದ್ದು ಬಹಳ ಕಡಮೆ. ಜಪಾನ್ ಒಂದು ಪುಟ್ಟ ದೇಶ. ಆದರೂ ಅದರ ಆತ್ಮಶಕ್ತಿ, ಕೆಚ್ಚೆದೆ, ಧೈರ್ಯಗಳು ಅಗಾಧ ಎಂದಷ್ಟೇ ತಿಳಿದಿದ್ದೆವು. ಒಂದು ಬಗೆಯಲ್ಲಿ ಜಪಾನ್ ಅಷ್ಟೇನೂ ಪರಿಚಿತನಲ್ಲದ ದೂರದ ಸಂಬಂಧಿಯಂತೆ ನಮಗೆ ಭಾಸವಾಗುತ್ತಿತ್ತು. ಈ ದೇಶದ ಬಗ್ಗೆ ತಿಳಿಯಲೇಬೇಕಿದ್ದ ಎಷ್ಟೋ ಸಂಗತಿಗಳನ್ನು ಇದುವರೆಗೂ ತೆರೆದುನೋಡುವ ಪ್ರಯತ್ನವನ್ನೇ ನಾವು ಮಾಡಿಲ್ಲವಲ್ಲ ಎನ್ನುವುದು ಅಚ್ಚರಿ ಹುಟ್ಟಿಸುವ ಸಂಗತಿ.
ಜಪಾನ್ ಅಂದರೆ…
ಭಾರತಕ್ಕೆ ಹೋಲಿಸಿದರೆ ಜಪಾನ್, ಗಾತ್ರದಲ್ಲಿ ಮಧ್ಯಪ್ರದೇಶಕ್ಕಿಂತ ತುಸು ದೊಡ್ಡದು. ಜಪಾನ್ ಒಳಗೆ ಒಂಬತ್ತು ಕೇರಳಗಳನ್ನು ನಿಲ್ಲಿಸಬಹುದು. ಕೇರಳವನ್ನೇ ತುಸು ತಿರುಚಿಬಿಟ್ಟರೆ ಅದು ಜಪಾನ್ನ ನಕ್ಷೆಯನ್ನು ಹೋಲುತ್ತದೆ. ಆದರೆ ಇಲ್ಲಿನ ಜನಸಂಖ್ಯೆಯೋ ಅಗಾಧ. ಬೆಂಗಳೂರಿನ ಮೂರು ಪಟ್ಟು ದೊಡ್ಡದಾಗಿರುವ ಟೋಕಿಯೋ ನಗರದಲ್ಲಿ ಬೆಂಗಳೂರಿಗಿಂತ ಎರಡುಪಟ್ಟು ಜನರಿದ್ದಾರೆ. (ಅಂದರೆ, ಜನಸಾಂಧ್ರತೆ ಬೆಂಗಳೂರಿಗಿಂತ ಕಡಮೆ) ಇಲ್ಲಿ ಇಂಚಿಂಚು ಜಾಗಕ್ಕೂ ಚಿನ್ನದ ಬೆಲೆ. ಪುಟ್ಟ ಎಂಟು ಚದರಡಿಯ ಕೋಣೆಯಲ್ಲೇ ಮೇಜು, ಕುರ್ಚಿ, ಡೈನಿಂಗ್ ಟೇಬಲ್, ಅಡುಗೆಮನೆ ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ತೆರೆಯುವ, ಮಡಚುವ ಕಲೆ ಅವರಿಗೆ ಕರಗತ. ಜಪಾನೀಯರು ಕಬ್ಬಿನ ಜಲ್ಲೆಯನ್ನೂ ಎಸೆಯುವುದಿಲ್ಲ. ಹತ್ತು ರೂಪಾಯಿಯ ಕಬ್ಬು ಕೊಂಡು ರಸ ಹೀರಿ, ಜಲ್ಲೆಯಲ್ಲಿ ಹೂವೊಂದನ್ನು ಮಾಡಿ ಇಪ್ಪತ್ತು ರುಪಾಯಿಗೆ ಮಾರುತ್ತಾರೆ ಎಂಬ ದಂತಕತೆ ನಮ್ಮಲ್ಲಿ ಪ್ರಚಲಿತವಾಗಿತ್ತು. ಅದಕ್ಕೆ ತಕ್ಕಂತೆ ನಮ್ಮ ಕಣ್ಣಿಗೆ ಕಾಣಸಿಗುವ ಜಪಾನೀಯರು ತುಂಬ ನಾಜೂಕಾಗಿದ್ದು ಅವರ ಜಾಣವರ್ತನೆಗಳು ದಂತಕತೆಗಳ ಮೇಲೆ ನಮಗೆ ನಂಬಿಕೆ ಗಟ್ಟಿಯಾಗುವಂತಿದ್ದವು.
ಜಪಾನ್ ಅನ್ನು ಸೂರ್ಯ ಹುಟ್ಟುವ ದೇಶ ಎಂದು ಕರೆಯುವ ರೂಢಿ ಉಂಟು. ಅಲ್ಲಿನ ಬಾವುಟದ ಚಿಹ್ನೆಯೂ ಅದೇ. ಸೂರ್ಯನಿಗೆ ಅಲ್ಲಿ ನಿಪ್ಪೋನ್ ಎಂದು ಹೆಸರು. ಆ ಹೆಸರಿನ ಬ್ಯಾಟರಿಗಳು ಒಂದು ಕಾಲದಲ್ಲಿ ನಮ್ಮಲ್ಲಿ ಬಹಳ ಪ್ರಸಿದ್ಧವಾಗಿದ್ದವು. ಜಪಾನೀಯರು ಹಿಂದಿನಿಂದಲೂ ಸೂಕ್ಷ್ಮತನವನ್ನೂ ಜಾಣ್ಮೆಯನ್ನೂ ಬೇಡುವ ಕರಕೌಶಲದಲ್ಲಿ ಎತ್ತಿದ ಕೈ. ಎಲೆಕ್ಟ್ರಾನಿಕ್ ವಸ್ತುಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಣ್ಣದಾಗಿ ರೂಪಿಸಬೇಕು ಎನ್ನುವುದು ಅಲ್ಲಿನ ಹಲವು ಕಂಪೆನಿಗಳ ಧ್ಯೇಯ. ಸೋನಿ ಎಂಬ ಜಗತ್ಪ್ರಸಿದ್ಧ ಎಲೆಕ್ಟ್ರಾನಿಕ್ ವಸ್ತುಗಳ ಕಂಪೆನಿ ಹುಟ್ಟಿದ್ದು ಜಪಾನಿನಲ್ಲಿ. ಕಾರು ಎಂದರೆ ರಸ್ತೆಯನ್ನು ಮುಚ್ಚಿಹಾಕುವ ಗಜಗಾತ್ರದ ಬಂಡಿ ಎಂಬ ಕಲ್ಪನೆಯೇ ಬಲವಾಗಿದ್ದಾಗ ಜಪಾನಿನ ಸುಝುಕಿ ಎಂಬ ಕಂಪೆನಿ ಭಾರತದಲ್ಲಿ ಮಾರುತಿ ಉದ್ಯೋಗ್ ಸಂಸ್ಥೆಯ ಜೊತೆ ಕೈಜೋಡಿಸಿ ಮಾರುತಿ ೮೦೦ ಕಾರುಗಳನ್ನು ರಸ್ತೆಗಿಳಿಸಿತು. ಇಂದು ಭಾರತದ ಪ್ರತಿ ನೂರು ಕಿಲೋ ಮೀಟರ್ ರಸ್ತೆಯಲ್ಲಿ ಮೂರ್ನಾಲ್ಕು ಜಪಾನಿ ಕಂಪೆನಿಗಳ ಕಾರುಗಳನ್ನು ನೋಡಬಹುದು. ಟೊಯೊಟ, ಹೋಂಡಾ, ನಿಸ್ಸಾನ್, ಸುಝುಕಿ, ಮಿಟ್ಸುಬಿಷಿ, ಇಸುಝು, ಕವಾಸಾಕಿ, ಯಮಾಹಾ, ಮಾಜ್ದಾ – ಇವೆಲ್ಲ ಜಪಾನೀ ಆಟೊಮೊಬೈಲ್ ಕಂಪೆನಿಗಳೇ! ಜಪಾನೀಯರು ಪರಿಣತಿ ಸಾಧಿಸಿದ ಇನ್ನೊಂದು ಕ್ಷೇತ್ರವೆಂದರೆ ಕ್ಯಾಮೆರಗಳದ್ದು. ಲಕ್ಷಾಂತರ ಭಾರತೀಯರು ಪ್ರವಾಸಕ್ಕೆ ಹೊರಟಾಗೆಲ್ಲ ತಮ್ಮ ಹೆಗಲಲ್ಲಿ ಜೋತಾಡಿಸಿಕೊಂಡು ಹೋಗುವ ಕ್ಯಾನನ್, ಫೂಜಿಫಿಲ್ಮ್, ನಿಕಾನ್, ಒಲಿಂಪಸ್, ಪೆಂಟಾಕ್ಸ್, ಸಿಗ್ಮಾ, ಸೋನಿ, ಕೊನಿಕ, ಪ್ಯಾನಸೋನಿಕ್, ಸ್ಯಾನ್ಯೋ, ಯಾಷಿಕಾ – ಇವೆಲ್ಲವೂ ಜಪಾನ್ ಕಂಪೆನಿಗಳು. ಹಾಗಾಗಿ ಭಾರತದ ಪ್ರತಿಯೊಂದು ಮನೆಯಲ್ಲೂ ಒಂದಿಲ್ಲೊಂದು ಜಪಾನೀ ಉತ್ಪನ್ನ ಇದ್ದೇ ಇರುತ್ತದೆ ಎಂದು ಬೆಟ್ ಕಟ್ಟಬಹುದು!
ಬೌದ್ಧಮತಕ್ಕೆ ನೆಲೆ ಕೊಟ್ಟ ದೇಶ
ಭಾರತ ಮತ್ತು ಜಪಾನ್ ದೇಶಗಳ ನಡುವೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳು ಶುರುವಾದದ್ದು ಕ್ರಿಸ್ತಶಕ ಆರನೇ ಶತಮಾನದಲ್ಲಿ. ಬೌದ್ಧ ದರ್ಶನದ ಪ್ರಚಾರಕನಾದ ಬೋಧಿಸೇನ ಎಂಬ ಸಂನ್ಯಾಸಿ ಕ್ರಿಸ್ತಶಕ ೭೩೬ರಲ್ಲಿ ಜಪಾನ್ ಪ್ರವೇಶಿಸಿದ. ಬೌದ್ಧಮತವನ್ನು ಪ್ರಚಾರ ಮಾಡಿ, ಕೊನೆಗೆ ೭೬೦ರಲ್ಲಿ ಅಲ್ಲಿಯೇ ತೀರಿಕೊಂಡ. ಬೋಧಿಸೇನ ನೆಟ್ಟ ಬೀಜ ಮೊಳಕೆಯೊಡೆದು ಗಿಡವಾಗಿ ಚಿಗುರಿ ಹೆಮ್ಮರವಾಗಿ ಬೆಳೆಯಿತು. ಜಪಾನ್ ದೇಶದ ಸಾಂಸ್ಕೃತಿಕ ಮತ್ತು ರಾಜಕೀಯ ಉತ್ಥಾನದಲ್ಲಿ ಬೌದ್ಧಮತದ ಪಾತ್ರ ಅತ್ಯಂತ ದೊಡ್ಡದು. ಜೊತೆಗೆ ಭಾರತದ ಯೋಗ, ಧ್ಯಾನ, ಸಂಸ್ಕೃತ-ಪಾಲಿ ಭಾಷೆಗಳು, ಇಲ್ಲಿನ ಪುರಾಣಗಳು, ಮಹಾಕಾವ್ಯಗಳು – ಎಲ್ಲವೂ ಜಪಾನ್ಗೆ ವಲಸೆ ಹೋದವು. ನಮ್ಮ ಸರಸ್ವತಿಯನ್ನು ಅಲ್ಲಿ ಬೆಂಜೈತೆನ್ ಎಂದು ಪೂಜಿಸಲಾಗುತ್ತದೆ. ಬ್ರಹ್ಮನನ್ನು ಬೊಂತೆನ್ ಎಂದೂ, ಯಮನನ್ನು ಎನ್ಮಾ ಎಂದೂ ಜಪಾನೀಯರು ಕರೆಯುತ್ತಾರೆ. ಭಾರತದಲ್ಲಿ ಹಿಂದೆ ದೇವಸ್ಥಾನಗಳ ಎದುರಿನ ಮುಖಮಂಟಪವನ್ನು ತೋರಣ ಎಂದು ಕರೆಯುತ್ತಿದ್ದರು. ಇದೇ ವಿನ್ಯಾಸ ಜಪಾನಿಗೆ ಹೋಗಿ `ತೋರಿ’ ಎಂಬ ಸ್ವಾಗತ ಗೋಪುರಗಳಾದವು. ನಮ್ಮ ಧ್ಯಾನವನ್ನು ಜಪಾನೀಯರು ಝೆನ್ ಎಂದು ಕರೆದು ಅದಕ್ಕೆ ತಮ್ಮದೇ ವಿಶಿಷ್ಟ ಅರ್ಥಗಳನ್ನು ಕಟ್ಟಿ ಬೆಳೆಸಿದರು. ಭಾರತದಲ್ಲಿದ್ದ ಯುದ್ಧಕಲೆ, ರಕ್ಷಣಾ ತಂತ್ರಗಳನ್ನು ಜಪಾನೀಯರು ಕರಾಟೆ ಎಂಬ ಹೊಸ ಹೆಸರಿನಲ್ಲಿ ಕಸಿ ಮಾಡಿದರು. ಹಾಗಾಗಿ ಒಂದರ್ಥದಲ್ಲಿ ಜಪಾನ್ ಭಾರತದ ಆತ್ಮದ ಒಂದು ಭಾಗವನ್ನು ತನ್ನದಾಗಿಸಿಕೊಂಡಿದೆ ಎನ್ನಬಹುದು.
ವಿಶ್ವಪ್ರಸಿದ್ಧ ಸಿನೆಮಾ ನಿರ್ದೇಶಕ ಅಕಿರಾ ಕುರೊಸಾವ
ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಸೇನೆಯ ಸ್ನೇಹ ಸಂಪಾದಿಸಿ ಭಾರತದ ರಾಷ್ಟ್ರೀಯ ಸೇನೆಯನ್ನು ಕಟ್ಟಿದವರು ನೇತಾಜಿ ಸುಭಾಸ್ ಚಂದ್ರ ಭೋಸ್. ಬೋಸರ ಆಜಾದ್ ಹಿಂದ್ ಫೌಜ್ ಮತ್ತು ಜಪಾನಿನ ಸೇನೆ ಜೊತೆಯಾಗಿ ಭಾರತದಲ್ಲಿ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸುವ ಸಂಕಲ್ಪ ಮಾಡಿದ್ದವು. ಆದರೆ ಮುಂದೆ ನಡೆದ ಹಲವು ಪಲ್ಲಟಗಳಿಂದಾಗಿ ಜಪಾನ್ ಏಷ್ಯದ ಹಲವು ದೇಶಗಳನ್ನು ಜಯಿಸುವ ಕನಸನ್ನು ಬಿಟ್ಟುಬಿಡಬೇಕಾಯಿತು. ಅಷ್ಟರಲ್ಲೇ ಬೋಸ್ರ ಅಕಾಲ ಕಣ್ಮರೆಯಿಂದಾಗಿ ಆಜಾದ್ ಹಿಂದ್ ಫೌಜ್ನ ಸೈನಿಕರು ದಿಕ್ಕೆಟ್ಟು ತಮ್ಮ ಯೋಜನೆಗಳನ್ನು ಕೈಬಿಡಬೇಕಾದ ಪರಿಸ್ಥಿತಿ ಬಂತು. ಎರಡನೇ ಮಹಾಯುದ್ಧ ಮುಗಿದ ಮೇಲೆ ಜಪಾನ್ ಅದುವರೆಗೆ ಮಾಡಿದ್ದ ರಾಜಕೀಯ ತಪ್ಪುಗಳನ್ನು ಎತ್ತಿತೋರಿಸಿ ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಲು ಹತ್ತು ಜನ ನ್ಯಾಯಾಧೀಶರ ಸಮಿತಿ ಮಾಡಲಾಯಿತು. ಆದರೆ, ಯುದ್ಧದಲ್ಲಿ ಜಪಾನ್ ಎಷ್ಟು ತಪ್ಪುಗಳನ್ನು ಮಾಡಿರಬಹುದೋ, ಅವನ್ನು ತೋರಿಸಿ ಶಿಕ್ಷೆ ವಿಧಿಸಲು ಕೂತ ದೇಶಗಳೂ ಅಷ್ಟೇ ತಪ್ಪುಗಳನ್ನು ಮಾಡಿವೆ; ಹಾಗಿರುವಾಗ ನಾವೆಲ್ಲ ಸಂಭಾವಿತರು ಎಂದು ಹೇಳಿ ಜಪಾನ್ ಮೇಲೆ ಮುಗಿಬೀಳುವುದು ಎಷ್ಟು ಸರಿ ಎಂದು ನ್ಯಾಯಾಧೀಶರ ತಂಡದಲ್ಲಿದ್ದ ರಾಧಾಬಿನೋದ್ ಪಾಲ್ ಎಂಬ ಭಾರತೀಯ ಆಕ್ಷೇಪ ಎತ್ತಿದರು. ಯುದ್ಧದಲ್ಲಿ ಸೋತು ಹೈರಾಣಾಗಿದ್ದ ಜಪಾನಿಗೆ ಪಾಲ್ ಅಭಯಹಸ್ತ ಕೊಟ್ಟರು ಎಂಬ ಕಾರಣಕ್ಕೆ ಅವರನ್ನು ಇಂದಿಗೂ ಜಪಾನ್ನಲ್ಲಿ ನೆನೆಯಲಾಗುತ್ತದೆ. ಟೋಕಿಯೋದಲ್ಲಿ ಪಾಲ್ ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. ಪಾಲ್ ಅವರ ಸಮಯೋಚಿತ ಮಾತು ಮತ್ತು ನಿರ್ಧಾರ, ಹದಗೆಟ್ಟಿದ್ದ ಭಾರತ ಮತ್ತು ಜಪಾನ್ ಸಂಬಂಧಗಳನ್ನು ಮತ್ತೆ ಬೆಸೆಯಿತು.
ಸ್ವಾತಂತ್ರ್ಯೋತ್ತರ ಭಾರತ ಜಪಾನ್ ಜೊತೆಗೆ ಕೊಡು-ಕೊಳ್ಳುವ ಪ್ರಕ್ರಿಯೆಯನ್ನು ಆಗಾಗ ನಡೆಸಿದ್ದುಂಟು. ಆದರೆ ಭಾರತಕ್ಕೆ ರಷ್ಯ, ಅಮೆರಿಕ, ಇಸ್ರೇಲ್ ಮುಂತಾದ ದೇಶಗಳ ಜೊತೆ ಇದ್ದ ಬಾಂಧವ್ಯ ಜಪಾನ್ನ ಜೊತೆ ಸಾಧ್ಯವಾಗಲಿಲ್ಲ. ಎರಡೂ ದೇಶಗಳು ಒಂದೇ ಸಂಸ್ಕೃತಿಯ ಹಿನ್ನೆಲೆ ಪಡೆದರೂ ಆತ್ಮೀಯವಾದ ಸ್ನೇಹ ಯಾಕೆ ಮೂಡಲಿಲ್ಲ ಎನ್ನುವುದು ಯಕ್ಷಪ್ರಶ್ನೆ. ನಾವು ಹತ್ತಿರದ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಅಥವಾ ದೂರದ ಇಸ್ರೇಲ್, ಅಮೆರಿಕ, ರಷ್ಯ, ಜರ್ಮನಿಗಳ ಬಗ್ಗೆ ತಿಳಿದಷ್ಟು ಜಪಾನ್ಅನ್ನು ಅರ್ಥ ಮಾಡಿಕೊಂಡಿಲ್ಲ. ಇಂಥ ಕಂದಕವನ್ನು ತುಸುಮಟ್ಟಿಗಾದರೂ ಮುಚ್ಚಿದ್ದು ಸಾಹಿತ್ಯ ಮತ್ತು ಸಿನೆಮಾ ಎನ್ನಬೇಕು. ಜಪಾನಿನ ಅಕಿರಾ ಕುರೊಸಾವ, ತಕಾಷಿ ಶಿಮಿಸು ಮುಂತಾದ ವಿಶ್ವಪ್ರಸಿದ್ಧ ಸಿನೆಮಾ ನಿರ್ದೇಶಕರನ್ನು ಭಾರತದ ಸಿನೆಮಾ ವಿದ್ಯಾರ್ಥಿಗಳು, ಅಕಡೆಮಿಕ್ ವಿದ್ವಾಂಸರು ಅಧ್ಯಯನ ಮಾಡಿದರು. ಹಾಗೆಯೇ ಭಾರತದ ಗುರುದತ್, ಸತ್ಯಜಿತ್ ರೇ ಜಪಾನಿನಲ್ಲಿ ಸಂಶೋಧನೆಯ ವಸ್ತುವಾದರು. ಭಾರತದ ಪಂಚತಂತ್ರ, ಜಾತಕ ಕತೆಗಳು ಅಲ್ಲಿಗೆ ಹೋದವು. ಅಲ್ಲಿನ ಟಾವೋ, ಝೆನ್ ಕತೆಗಳು ಇಲ್ಲಿಗೆ ಬಂದವು. ಭಾರತದ ಚೇತನ್ ಭಗತ್ ಈಗ ಜಪಾನಿಗೆ ಪುಸ್ತಕಗಳ ಮೂಲಕ ಹೋಗಿದ್ದಾನೆ. ಅಲ್ಲಿನ ಹರುಕಿ ಮುರಕಾಮಿ ಇಲ್ಲಿಗೆ ಪ್ರವೇಶಿಸಿದ್ದಾನೆ. ಕೊಡುಕೊಳ್ಳುವ ಬಾಂಧವ್ಯ ಮತ್ತೊಮ್ಮೆ ಹೊಸ ರೀತಿಯಲ್ಲಿ ಶುರುವಾಗಿದೆ ಎನ್ನಬಹುದು.
ನಾಯಕನೂ ಹೌದು, ಖಳನಾಯಕನೂ ಹೌದು
ಆಗಲೇ ಹೇಳಿದಂತೆ ಜಪಾನ್ ಮತ್ತು ಭಾರತದ ನಡುವೆ ಹತ್ತುಹಲವು ಬಗೆಯ ವ್ಯವಹಾರಗಳು ಇದ್ದರೂ ಆ ದೇಶ ದೂರದ ನೆಂಟನಷ್ಟೇ ಪರಿಚಿತ ಅಪರಿಚಿತ. ಭಾರತ ದೇಶವು ಅಮೆರಿಕ, ಯೂರೋಪ್ ದೇಶಗಳು, ರಷ್ಯಾ, ಚೀನಾ, ಬ್ರೆಜಿಲ್ ಇತ್ಯಾದಿ ದೇಶಗಳೊಂದಿಗೆ ಹೊಂದಿರುವ ಬಾಂಧವ್ಯಕ್ಕಿಂತ ಜಪಾನ್ ಜೊತೆ ಇದುವರೆಗೆ ಸಾಧಿಸಿದ್ದ ಸಂಬಂಧ ದುರ್ಬಲವಾಗಿತ್ತು. ಈ ಮಾತು ಜಪಾನ್ ಕಡೆಯಿಂದಲೂ ಸತ್ಯ. ಅಂದರೆ, ಜಪಾನ್ ದೇಶ ಜಗತ್ತಿನ ಉಳಿದವರ ಜೊತೆ ಇಟ್ಟುಕೊಂಡಿದ್ದ ಸಂಪರ್ಕಕ್ಕಿಂತ ಭಾರತದ ಜೊತೆಗಿನ ಸ್ನೇಹ-ಸಂಪರ್ಕಗಳು ತೆಳುವಾಗಿದ್ದವು. ಭಾರತದಲ್ಲಿ ವಾಸಿಸುವ ಬೇರೆ ದೇಶಿಕರಿಗಿಂತ ಜಪಾನೀಯರು ಕಡಮೆ! ಹಾಗೆಯೇ ೧೨.೬ ಕೋಟಿ ಜನಸಂಖ್ಯೆ ಇರುವ ಜಪಾನ್ನಲ್ಲಿರುವ ಭಾರತೀಯರ ಸಂಖ್ಯೆ ಎಷ್ಟು ಗೊತ್ತೆ? ಕೇವಲ ೨೨,೩೩೫! ೯೦ ಲಕ್ಷ ಇರುವ ಸ್ವೀಡನ್ನಲ್ಲೂ ಇಷ್ಟೇ ಸಂಖ್ಯೆಯ ಭಾರತೀಯರಿದ್ದಾರೆ. ಜಪಾನ್ ಭಾರತಕ್ಕೆ ಹತ್ತಿರವಾಗದಿರಲು ಇನ್ನೊಂದು ಕಾರಣವೆಂದರೆ, ಅದು ಭಾರತದ್ದು ಎನ್ನುವ ಯಾವುದನ್ನೆಲ್ಲ ಪಡೆಯಿತೋ ಅವನ್ನು ಪಡೆದಿದ್ದು ನೇರವಾಗಿ ಭಾರತದಿಂದಲ್ಲ; ಬದಲು ಚೀನಾ ಮತ್ತು ಕೊರಿಯಗಳಿಂದ. ನಮ್ಮಲ್ಲಿಂದ ಹೊರಹೋದ ಬೌದ್ಧಮತ ಚೀನಾದಲ್ಲಿ ಮೊದಲು ಹರಡಿ ಅಲ್ಲಿಂದ ಜಪಾನ್ಗೆ ಹೋಯಿತು. ತಮಗೆ ಹೀಗೆ ದಕ್ಕಿದ ಸಂಸ್ಕೃತಿಯನ್ನು ಜಪಾನೀಯರು ಹಾಗೇ ಬಳಸದೆ ಬದಲಾವಣೆ ಮಾಡಿಕೊಂಡರು. ಆದರೆ ಇವೆಲ್ಲವೂ ಮೂಲತಃ ಭಾರತದಿಂದ ಬಂದವು ಎಂಬ ತಿಳಿವಳಿಕೆ ಅವರಿಗಿತ್ತು. ಭಾರತವನ್ನು ಈಗಲೂ ಸಾಂಪ್ರದಾಯಿಕ ಜಪಾನೀಸ್ ಭಾಷೆಯಲ್ಲಿ ತೆಂಜಿಕು ಎಂದೇ ಕರೆಯಲಾಗುತ್ತದೆ. ಹಾಗೆಂದರೆ `ಸ್ವರ್ಗಸಮಾನ ಸ್ಥಳ’ ಎಂದು ಅರ್ಥ.
ವಿಶ್ವಪ್ರಸಿದ್ಧ ಸಿನೆಮಾ ನಿರ್ದೇಶಕ ತಕಾಷಿ ಶಿಮಿಸು
ಭಾರತದಲ್ಲಿ ಹುಟ್ಟಿಬೆಳೆದ ಬೌದ್ಧಮತ, ಪೂರ್ವ ಮತ್ತು ಆಗ್ನೇಯ ಏಷ್ಯಗಳಿಗೆ ನೆರಳಿನಂತೆ ಹರಡುತ್ತಹೋದರೂ ಭಾರತದಲ್ಲಿ ನೆಲೆ ಕಳೆದುಕೊಂಡಿತು. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ೮೦% ಹಿಂದೂಗಳಿದ್ದರೆ ೧೪% ಮುಸ್ಲಿಮರೂ ೨% ಕ್ರಿಶ್ಚಿಯನ್ನರೂ ಇದ್ದಾರೆ. ಬೌದ್ಧಮತೀಯರ ಸಂಖ್ಯೆ ೧%ಕ್ಕಿಂತಲೂ ಕಡಿಮೆ. ಭಾರತದಲ್ಲಿ ೯೦ ಲಕ್ಷ ಬೌದ್ಧರಿದ್ದಾರೆ ಅಷ್ಟೆ. ಭಾರತ ಮತ್ತು ಜಪಾನ್ಗಳ ಕೊಂಡಿ ಗಟ್ಟಿಯಾಗಿ ಬೆಸುಗೆ ಕೂಡದಿರುವುದಕ್ಕೆ ಇದೂ ಒಂದು ಕಾರಣ ಇರಬಹುದು. ಇನ್ನೊಂದು ಕಾರಣ – ಬ್ರಿಟಿಷರ ಪ್ರಾಬಲ್ಯದಿಂದಾಗಿ ವಿಶ್ವದಲ್ಲಿ ಬದಲಾದ ರಾಜಕೀಯ ಸಮೀಕರಣಗಳು ಜಪಾನ್-ಭಾರತಗಳನ್ನು ದೂರ ಇಟ್ಟವು. ಭಾರತದಲ್ಲಿ ೧೭೫೭ರ ಹೊತ್ತಿಗೆಲ್ಲ ಬ್ರಿಟಿಷರು ವಸಾಹತಿನ ಧ್ವಜ ಊರಿಯಾಗಿತ್ತು. ಮುಂದಿನ ಇನ್ನೂರು ವರ್ಷಗಳ ಕಾಲ ಅವರು ನಮ್ಮನ್ನು ಆಳಿದರು. ಹಾಗಾಗಿ ನಮ್ಮ ಮತ್ತು ಬ್ರಿಟಿಷರ ನಡುವಿನ ಭಾಷೆ-ರಾಜಕೀಯ-ಸಂಸ್ಕೃತಿಗಳ ವಿನಿಮಯದ ಪ್ರಮಾಣ ದೊಡ್ಡದು. ಆದರೆ, ಹದಿನೆಂಟನೆ ಶತಮಾನದಲ್ಲಿನ್ನೂ ಜಪಾನ್ ಹೊರಗಿನ ದೇಶಗಳಿಗೆ ಬಾಗಿಲು ತೆರೆದಿರಲಿಲ್ಲ. ೧೮೫೪ರಲ್ಲಿ ಅದು ಮೊತ್ತಮೊದಲ ಬಾರಿಗೆ ಹೊರಜಗತ್ತಿನ ಸಂಪರ್ಕಕ್ಕೆ ಬಂತು. ಆ ಬಳಿಕ ಅಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಅದ್ಭುತ ಮಟ್ಟದ್ದು. ೧೯೦೨ರಿಂದ ೧೯೨೨ರವರೆಗೆ ಅದು ಬ್ರಿಟಿಷರ ಮಿತ್ರದೇಶವೂ ಆಗಿತ್ತು.
೧೯೦೪-೦೫ರಲ್ಲಿ ನಡೆದ ರೂಸೋ-ಜಪಾನ್ ಯುದ್ಧಗಳಲ್ಲಿ ಜಪಾನೀಯರು ರಷ್ಯಾವನ್ನೂ ಆಕ್ರಮಣ ಮಾಡಿ ಮುಂದುವರಿದು ಯುರೋಪಿನ ಬಿಳಿಯರನ್ನು ಸೋಲಿಸಿಬಿಟ್ಟರು. ಸುತ್ತ ಸಾಗರವನ್ನು ಪಡೆದ ಜಪಾನ್ ನೌಕೆಗಳನ್ನು ಕಟ್ಟುವುದರಲ್ಲಿ, ನೀರಿನ ಮೇಲಿನ ಯುದ್ಧಗಳಲ್ಲಿ ಯೂರೋಪಿನ ಇತರ ದೇಶಗಳಷ್ಟೇ ಬಲಶಾಲಿಯಾಗಿತ್ತು. ಈ ಒಂದು ನಿರ್ಣಾಯಕ ಕದನದಲ್ಲಿ ಗೆದ್ದ ಸಂಭ್ರಮದಲ್ಲಿ ಜಪಾನೀಯರ ಆತ್ಮಸ್ಥೈರ್ಯ ಹತ್ತುಪಟ್ಟು ಹೆಚ್ಚಾಯಿತೆಂದು ಕಾಣುತ್ತದೆ. ಅವರು ಏಷ್ಯದ ಉಳಿದ ಭಾಗಗಳಲ್ಲೂ ಯೂರೋಪಿನ ವಸಾಹತುಗಳ ಜೊತೆ ಯುದ್ಧ ಮಾಡುತ್ತಾ ನಡೆದರು. ಜಪಾನಿನ ವಿಜಯ ಇಡೀ ಏಷ್ಯಾ ಖಂಡವನ್ನು ಬಡಿದೆಬ್ಬಿಸಿತು. ಯಾಕೆಂದರೆ ಅದುವರೆಗೂ ಏಷ್ಯನ್ನರಿಗೆ ತಾವು ಯೂರೋಪಿನ ಬಿಳಿಯರ ಜೊತೆ ಕಾದಾಡಿ ವಿಜಯಿಗಳಾಗುವ ಸಾಧ್ಯತೆ ಇದೆ ಎನ್ನುವುದೇ ಮರೆತುಹೋಗಿತ್ತು. ಆಧುನಿಕ ಜಗತ್ತಿನಲ್ಲಿ ಪರಂಗಿಗಳನ್ನು ಸೋಲಿಸಿದ ಮೊದಲ ಏಷ್ಯನ್ ದೇಶ ಎಂಬ ಹೆಮ್ಮೆ ಜಪಾನಿನದ್ದಾಯಿತು. ಈ ಗೆಲವು ಭಾರತದಲ್ಲಿ ಬಿಳಿಯರ ವಿರುದ್ಧ ಹೋರಾಡುತ್ತಿದ್ದ ಹಲವರ ರಟ್ಟೆಗಳನ್ನು ಗಟ್ಟಿ ಮಾಡಿತು ಎನ್ನಬಹುದು. ಗಾಂಧಿ, ಅವರು “ಬಡವ-ಬಲ್ಲಿದ ಎಂಬ ಭೇದ ಇಲ್ಲದೆ ಯಾವಾಗ ಜಪಾನಿನ ಪ್ರತಿ ಪ್ರಜೆಯೂ ಆತ್ಮಗೌರವ ಮುಖ್ಯ ಎಂದು ಮುಂದೆ ಬಂದನೋ ಆಗಲೇ ಆ ಪುಟಾಣಿ ದೇಶ ರಷ್ಯಾದಂತಹ ವಿಶಾಲವಾದ ರಾಷ್ಟ್ರಕ್ಕೂ ಕೆನ್ನೆಗೆ ಹೊಡೆಯುವುದು ಸಾಧ್ಯವಾಯಿತು. ಇಂದು ಆ ದೇಶದ ಧ್ವಜ ಪ್ರಪಂಚದ ಭೂಪಟದಲ್ಲಿ ಸ್ಥಾನ ಪಡೆದಿದೆ. ಆತ್ಮಗೌರವವನ್ನು ಕಾಪಾಡಿಕೊಳ್ಳುವುದನ್ನು ನಾವು ಜಪಾನೀಯರಿಂದ ಕಲಿಯಬೇಕಾಗಿದೆ” ಎಂದರು. “ಪಾಶ್ಚಾತ್ಯ ದೇಶಗಳ ತಂತ್ರಜ್ಞಾನಕ್ಕೆ ಸರಿಸಮ ನಿಲ್ಲುವ ತಂತ್ರಜ್ಞಾನವನ್ನು ಬಳಸಿ ಜಪಾನ್ ಅದೇ ಪಾಶ್ಚಾತ್ಯರ ಜೊತೆ ಹೋರಾಡಿ ಗೆದ್ದಿತು. ಈ ತಂತ್ರ ಎಲ್ಲ ಪೌರಸ್ತ್ಯ ದೇಶಗಳಲ್ಲೂ ಜನಪ್ರಿಯವಾಗಬೇಕಾಗಿದೆ. ಯೂರೋಪಿನ ಮಂದಿಯ ವಿರುದ್ಧ ಹೋರಾಡಿ ಗೆಲವು ಸಾಧಿಸಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಜಪಾನೀಯರು ಇಡೀ ಏಷ್ಯಾಕ್ಕೆ ಕೊಟ್ಟಿದ್ದಾರೆ” ಎಂದು ನೆಹರೂ ಹೇಳಿದರು.
ಏಷ್ಯಾದ ಉಳಿದ ದೇಶಗಳನ್ನೂ ಜಪಾನೀ ಪಡೆ ದಾಸ್ಯದಿಂದ ಬಿಡುಗಡೆ ಮಾಡಲಿದೆ ಎಂಬ ಆಶಾಭಾವ ಎಲ್ಲರಲ್ಲೂ ಹುಟ್ಟಲು ಶುರುವಾಗುತ್ತಿದ್ದಾಗಲೇ ಆ ಕನಸನ್ನು ಒಡೆಯುವ ಘಟನೆ ನಡೆಯಿತು. ೧೯೧೦ರಲ್ಲಿ ಅದು ಕೊರಿಯದ ಮೇಲೆ ದಾಳಿ ಮಾಡಿ ಶತ್ರುಗಳನ್ನು ಓಡಿಸಿದರೂ ಅತ್ಯಂತ ಅಮಾನವೀಯ ಹಿಂಸೆಯನ್ನು ಮೆರೆಯಿತು. ಮುಂದೆ ಜರ್ಮನಿಯಲ್ಲಿ ಹಿಟ್ಲರ್ ಯಾವ ಬಗೆಯ ಯಾತನಾಶಿಬಿರಗಳನ್ನು ತೆರೆದು ಯಹೂದ್ಯರನ್ನು ಬೆಂಕಿಯಲ್ಲಿ ಬೇಯಿಸಿದನೋ ಅದೇ ಬಗೆಯ ಹಿಂಸಾವಿನೋದವನ್ನು ಜಪಾನೀ ಸೈನಿಕರು ಆಡಿದರು. ಸಿಂಗಾಪುರದ ಕುಆನ್ ಯೂ ಎಂಬ ರಾಜಕೀಯ ಪಂಡಿತ ದ ಸಿಂಗಾಪೂರ್ ಸ್ಟೋರಿ ಎಂಬ ಕೃತಿಯಲ್ಲಿ ಈ ಕ್ರೌರ್ಯ, ಬೀಭತ್ಸಗಳನ್ನು ಹಸಿಹಸಿ ಭಾಷೆಯಲ್ಲಿ ವಿವರಿಸಿದ್ದಾನೆ. ಇದರಿಂದ ವಸಾಹತುಗಳಲ್ಲಿ ಬದುಕುತ್ತಿದ್ದ ಗುಲಾಮರಿಗೆ ಸ್ವಾತಂತ್ರ್ಯದ ಜೊತೆ ಅನುಭವಿಸಬೇಕಾದ ಹಿಂಸೆಗಿಂತ ಈಗಿರುವಂತೆ ದಾಸ್ಯದಲ್ಲಿರುವುದೇ ಒಳ್ಳೆಯದು ಎಂಬ ಅಭಿಪ್ರಾಯ ಮೂಡುವಂತಾಯಿತು. ಜಪಾನಿನ ದಾಢಸಿತನದಿಂದಾಗಿ ಕೆರಳಿದ ಪ್ರಮುಖ ರಾಷ್ಟ್ರ ಚೀನಾ. ತನ್ನ ಕಣ್ಣೆವೆಯಲ್ಲೇ ಕಣ್ಣುಬಿಟ್ಟು ಬೆಳೆಯುತ್ತಿರುವ ವೈರಿಯನ್ನು ಬಗ್ಗುಬಡಿಯಲು ಚೀನಾ ಮುಂದಾಯಿತು. ೧೯೩೭ರಿಂದ ೪೫ರವರೆಗೆ ಎಂಟು ವರ್ಷಗಳ ಕಾಲ ಚೀನಾ ಮತ್ತು ಜಪಾನ್ ಬಡಿದಾಡಿಕೊಂಡವು. ಭಾರತವನ್ನು ಪ್ರವೇಶಿಸಲು ಹೊರಟ ಜಪಾನ್ ಸೇನೆ ಕೊಹಿಮ ಮತ್ತು ಇಂಫಾಲ್ಗಳನ್ನು ಆಕ್ರಮಿಸಿ, ಕೊನೆಗೆ ಅಲ್ಲಿನ ಬೆಟ್ಟಗುಡ್ಡ ಕಣಿವೆಗಳಲ್ಲಿ ಹಿಂದೆ ಹೋಗಲಾಗದೆ ಮುಂದೆ ನುಗ್ಗಲಾಗದೆ ಏದುಸಿರುಬಿಡುವಂತಾಯಿತು. ಚೀನಾದ ಪ್ರತಿರೋಧ ತೀವ್ರವಾಗುತ್ತಿದ್ದಂತೆ ಜಪಾನ್ ಹಿಂದೆಗೆಯಿತು.
ಅಲ್ಲಿಂದ ಮುಂದಕ್ಕೆ ೪೫ರಲ್ಲಿ ಜಪಾನ್ನ ಮೇಲೆ ಅಮೆರಿಕ ನ್ಯೂಕ್ಲಿಯರ್ ಬಾಂಬ್ ಹಾಕಿದ್ದು, ಅದೆರಡು ವರ್ಷಗಳ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದೇ ಕಾಲಘಟ್ಟದಲ್ಲಿ ನಡೆದ ಎರಡು ಪ್ರಮುಖ ಸಂಗತಿಗಳು. ಒಂದು ರೀತಿಯಲ್ಲಿ ಎರಡೂ ದೇಶಗಳು ಒಟ್ಟೊಟ್ಟಿಗೆ ಮರುಹುಟ್ಟು ಪಡೆದವು ಎನ್ನಬಹುದು. ಆದರೆ ಇವೆರಡು ದೇಶಗಳ ನಡುವೆ ಅಷ್ಟೇನೂ ಸಹಕಾರ ತತ್ತ್ವ ಬೆಳೆದಂತೆ ಕಾಣುವುದಿಲ್ಲ. ವಿಶ್ವ ರಾಜಕೀಯ ರಂಗದಲ್ಲಿ ಜಪಾನ್ ಮತ್ತು ಭಾರತ ಪರಸ್ಪರ ವಿರುದ್ಧ ಸಿದ್ಧಾಂತಗಳನ್ನು ಪ್ರತಿಪಾದಿಸದೆ ಇದ್ದರೂ ಕೈಮಿಲಾಯಿಸುವ ಹಂತಕ್ಕೆ ಬರಲಿಲ್ಲ. ಹಿರೊಷಿಮ ದುರಂತದ ನಂತರ ಜಪಾನ್ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಬೇಕೆಂದು ಜಗತ್ತನ್ನು ಕೇಳಿಕೊಂಡಿದೆ. ಇದಕ್ಕೆ ಈಗಾಗಲೇ ಹಲವು ದೇಶಗಳು ಸ್ವಯಂಸ್ಫೂರ್ತಿಯಿಂದ ಮುಂದೆ ಬಂದು ಸಹಿ ಹಾಕಿದ್ದರೂ ಭಾರತವಿನ್ನೂ ಸಹಿ ಹಾಕಿಲ್ಲ. “ಅಣ್ವಸ್ತ್ರವನ್ನು ಯಾವ ದೇಶದ ಮೇಲೂ ನಾವಾಗಿ ಪ್ರಯೋಗಿಸುವುದಿಲ್ಲ. ಆದರೆ ಅಣ್ವಸ್ತ್ರಗಳನ್ನೆಲ್ಲ ನಿಶ್ಶಸ್ತ್ರೀಕರಣಗೊಳಿಸುವುದು ಕಷ್ಟಸಾಧ್ಯ. ಮಗ್ಗುಲಲ್ಲಿ ಪರಮವೈರಿಗಳನ್ನು ಕಟ್ಟಿಕೊಂಡು ನಿರಾಯುಧರಾಗುವುದು ಆಗದ ಮಾತು” – ಇದು ಭಾರತದ ನಿಲುವು. ಇದುವರೆಗಿನ ಇತಿಹಾಸದಲ್ಲಿ ಜಪಾನ್ ಒಂದೇ ಅಣ್ವಸ್ತ್ರದ ಏಟು ತಿಂದಿರುವ ರಾಷ್ಟ್ರ. ಹಾಗಾಗಿ, ಅದು ಇಂತಹ ಮಾತುಗಳಿಗೆ ಪೂರ್ತಿಯಾಗಿ ತಲೆಯಾಡಿಸುವುದಿಲ್ಲ. ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿದರು ಎಂಬ ಕೋಪದಲ್ಲಿ ಜಪಾನ್ ನಮ್ಮ ದೇಶದ ಜೊತೆಗೆ ಎಲ್ಲ ಮಾತುಕತೆಗಳನ್ನೂ ಮುರಿದುಕೊಂಡಿತ್ತು. ಈಗಲೂ ಅಷ್ಟೇ, ಭಾರತವೇನಾದರೂ ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಆ ಕ್ಷಣದಲ್ಲೇ ನಾವು ಅವರ ಜೊತೆಗಿನ ಎಲ್ಲ ಸಂಬಂಧಗಳನ್ನೂ ಕಡಿದುಕೊಳ್ಳುತ್ತೇವೆ ಎಂದು ಜಪಾನ್ ರಾಜಕೀಯ ನಾಯಕರು ಹೇಳುತ್ತಾರೆ. ಹಾಗಾಗಿ, ನಮ್ಮಿಬ್ಬರ ಸಂಬಂಧ ಹಗ್ಗದ ಮೇಲಿನ ನಡಿಗೆಯಷ್ಟೇ ನಾಜೂಕು ಮತ್ತು ಸಂಕೀರ್ಣ.
super, its worthy to read n gud information
ಜಪಾನ್ ಬಗ್ಗೆ ನಿಮ್ಮ ವಿವರಣೆ ಚನ್ನಾಗಿದೆ
Good information I got sir
It’s good