ಕಳೆದ (೨೦೨೩) ವರ್ಷಾಂತ್ಯ ಅಕ್ಟೋಬರಿನಲ್ಲಿ ಹಾಮಾಸಿನ ಭಯೋತ್ಪಾದಕತೆಯನ್ನು ಖಂಡಿಸುವ ಮತ್ತು ಇಸ್ರೇಲ್ ದೇಶದ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಒಂದು ಠರಾವನ್ನು ಅಮೆರಿಕ ಮಂಡಿಸಿತು. ಆದರೆ ಭದ್ರತಾ ಸಮಿತಿಯ ಅನ್ಯ ಸದಸ್ಯರುಗಳಾದ ರಷ್ಯಾ ಮತ್ತು ಚೀಣಾ (ಪರ್ಯಾಯ ಸದಸ್ಯ ಯು.ಎ.ಇ. ಕೂಡಾ) ಆ ನಿರ್ಣಯವನ್ನು ನಿರಾಕರಿಸಿದವು. ಇನ್ನು ಯುಕ್ರೇನ್ ಕುರಿತ ನಿರ್ಣಯವನ್ನು ರಷ್ಯಾ ಬೆಂಬಲಿಸುವುದು ಅಸಾಧ್ಯದ ಮಾತಾಗಿದೆ. ಹೀಗೆ ನಾಮಮಾತ್ರಕ್ಕೆ ವೈಶ್ವಿಕ ಸಂಸ್ಥೆಯಾದರೂ ವಾಸ್ತವದಲ್ಲಿ ಭದ್ರತಾ ಸಮಿತಿಯು ಐದು ಕಾಯಂ ಸದಸ್ಯರಾಷ್ಟ್ರಗಳ ಸ್ವಹಿತಾಸಕ್ತಿ ಪ್ರತಿಪಾದಕ ವೇದಿಕೆಯಷ್ಟೆ ಆಗಿದೆಯೆಂಬುದನ್ನು ಅಲ್ಲಗಳೆಯಲಾಗದು.
ವಿವಿಧ ದೇಶಗಳನ್ನು ಒಳಗೊಂಡ ಜಟಿಲ ಸಂಘರ್ಷಗಳ ಉಪಶಮನಕ್ಕಾಗಿ ಏರ್ಪಟ್ಟಿರುವ ಜಾಗತಿಕ ವೇದಿಕೆ ವಿಶ್ವಸಂಸ್ಥೆ. ಈ ಉದ್ದೇಶಕ್ಕಾಗಿ ಇರುವ ಏಕೈಕ ಸಂಸ್ಥೆ ಅದು. ಹೆಸರಿಗೆ ಅದರ ಅತ್ಯುನ್ನತ ನಿರ್ಣಯಸ್ಥಾನ ಸರ್ವಸದಸ್ಯ ಸಭೆ (‘ಜನರಲ್ ಅಸೆಂಬ್ಲಿ’) ಆಗಿದ್ದರೂ ವ್ಯಾವಹಾರಿಕವಾಗಿ ಅದರ ಅಧಿಕಾರವಷ್ಟೂ ನಿಕ್ಷಿಪ್ತವಾಗಿರುವುದು ಅದರ ಅಂಗವಾದ ಭದ್ರತಾ ಸಮಿತಿಯಲ್ಲಿಯೆ (‘ಸೆಕ್ಯುರಿಟಿ ಕೌನ್ಸಿಲ್’ನಲ್ಲಿ). ಭದ್ರತಾ ಸಮಿತಿಯ ಕಾಯಂ ಸದಸ್ಯರು ಐದು ರಾಷ್ಟ್ರಗಳು (ಅಮೆರಿಕ, ಇಂಗ್ಲೆಂಡ್, ರಷ್ಯಾ, ಚೀಣಾ, ಫ್ರಾನ್ಸ್). ಅದಲ್ಲದೆ ಹತ್ತು ಪರ್ಯಾಯಾಧೀನ ರಾಷ್ಟ್ರಗಳು ಎಂದರೆ ಸರದಿಯ ಪ್ರಕಾರ ಹೆಚ್ಚುವರಿ ಸದಸ್ಯರಾಗಿ ಭಾಗವಹಿಸುವ ರಾಷ್ಟ್ರಗಳು ಇವೆ. ವಿಶ್ವಸಂಸ್ಥೆಯ ಒಟ್ಟು ಸದಸ್ಯಸಂಖ್ಯೆ ೧೯೩ ಇರುವುದರ ಹಿನ್ನೆಲೆಯಲ್ಲಿ ಭದ್ರತಾ ಸಮಿತಿ ಎಷ್ಟುಮಟ್ಟಿಗೆ ಪ್ರಾತಿನಿಧಿಕ ಎಂಬ ಚರ್ಚೆ ಬಹುಕಾಲದಿಂದ ನಡೆದಿದೆ. ಗಾತ್ರ, ಘನತೆ – ಎರಡೂ ದೃಷ್ಟಿಗಳಿಂದ ಹಿರಿದಾದ ಭಾರತ ಭದ್ರತಾ ಸಮಿತಿಯಲ್ಲಿ ಸೇರ್ಪಡೆಗೊಳ್ಳಬೇಕು ಎಂದು ಅನೇಕ ರಾಷ್ಟ್ರಗಳ ಬಹುಕಾಲದ ಅಭಿಪ್ರಾಯವಿದೆ. ಭದ್ರತಾ ಸಮಿತಿಯ ಸದಸ್ಯರ ವಿಶೇಷಾಧಿಕಾರವೆಂದರೆ ‘ವೀಟೋ’ ಎಂದರೆ ಅಸಮ್ಮತಿ. ಭದ್ರತಾ ಸಮಿತಿಯ ನಿರ್ಣಯಗಳು ಸರ್ವಾನುಮತಿಯವಾಗಿರಬೇಕೆಂಬ ಸಂಪ್ರದಾಯವಿದೆ. ಯಾವುದೊ ಒಂದು ರಾಷ್ಟ್ರ ‘ವೀಟೋ’ ಮಾಡಿದರೂ ಭದ್ರತಾ ಸಮಿತಿಯಲ್ಲಿ ನಿರ್ಣಯ ಮೂಡುವುದಿಲ್ಲ.
ಅಪೇಕ್ಷೆ, ಸಾಧನೆ
ಮೇಲಿನದು ರಚನೆಗೆ ಸಂಬಂಧಿಸಿದ್ದಾಯಿತು. ಈಗ ವಿಶ್ವಸಂಸ್ಥೆಯ ನಡವಳಿಯ ರೀತಿನೀತಿಗಳನ್ನು ಕಟಾಕ್ಷಿಸೋಣ. ಜಗತ್ತನ್ನೆಲ್ಲ ಕಾಡಿರುವ ಸಂಕೀರ್ಣ ಸಮಸ್ಯೆಗಳ ನಿರ್ವಹಣೆಯಲ್ಲಿ ವಿಶ್ವಸಂಸ್ಥೆಯ ಪಾತ್ರ ಅಪೇಕ್ಷಿತ ಮಟ್ಟದಲ್ಲಿದೆಯೆ ಎಂಬುದು ವರ್ಷಗಳುದ್ದಕ್ಕೂ ವಿವಿಧ ಸಂದರ್ಭಗಳಲ್ಲಿ ಚರ್ಚೆಗೊಳಪಟ್ಟಿದೆ.
ಈಗ್ಗೆ ಎರಡು ವರ್ಷ ಹಿಂದೆ ರಷ್ಯಾದಿಂದ ವಿಶ್ವಸಂಸ್ಥೆಯ ಇನ್ನೊಂದು ಸದಸ್ಯರಾಷ್ಟ್ರವಾದ ಯುಕ್ರೇನಿನ ಮೇಲೆ ಆಕ್ರಮಣ ನಡೆದು ಈಗಲೂ ಯುದ್ಧ ಮುಂದುವರಿದಿದೆ. ಅಲ್ಲಿಂದೀಚೆಗೆ ಇಸ್ರೇಲಿನ ಮೇಲೆ ಹಾಮಾಸ್ ಸಂಘಟನೆಯಿಂದ ವ್ಯಾಪಕ ದೌರ್ಜನ್ಯ ನಡೆದು ಅಪಾರ ಸಾವುನೋವುಗಳು ಆಗಿವೆ.
ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಇಂತಹ ಪ್ರಸಂಗಗಳ ಸಂದರ್ಭಗಳಲ್ಲಿ ವಿಶ್ವಸಂಸ್ಥೆಯ ಮಾಧ್ಯಸ್ಥ್ಯವು ನಿರೀಕ್ಷಿತ ಮಟ್ಟದಲ್ಲಿ ಸಾಫಲ್ಯ ಪಡೆದಿದೆಯೆಂದು ಹೇಳುವುದು ಕಷ್ಟ.
ಕಳೆದ (೨೦೨೩) ವರ್ಷಾಂತ್ಯ ಅಕ್ಟೋಬರಿನಲ್ಲಿ ಹಾಮಾಸಿನ ಭಯೋತ್ಪಾದಕತೆಯನ್ನು ಖಂಡಿಸುವ ಮತ್ತು ಇಸ್ರೇಲ್ ದೇಶದ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಒಂದು ಠರಾವನ್ನು ಅಮೆರಿಕ ಮಂಡಿಸಿತು. ಆದರೆ ಭದ್ರತಾ ಸಮಿತಿಯ ಅನ್ಯ ಸದಸ್ಯರುಗಳಾದ ರಷ್ಯಾ ಮತ್ತು ಚೀಣಾ (ಪರ್ಯಾಯ ಸದಸ್ಯ ಯು.ಎ.ಇ. ಕೂಡಾ) ಆ ನಿರ್ಣಯವನ್ನು ನಿರಾಕರಿಸಿದವು. ಇನ್ನು ಯುಕ್ರೇನ್ ಕುರಿತ ನಿರ್ಣಯವನ್ನು ರಷ್ಯಾ ಬೆಂಬಲಿಸುವುದು ಅಸಾಧ್ಯದ ಮಾತಾಗಿದೆ. ಹೀಗೆ ನಾಮಮಾತ್ರಕ್ಕೆ ವೈಶ್ವಿಕ ಸಂಸ್ಥೆಯಾದರೂ ವಾಸ್ತವದಲ್ಲಿ ಭದ್ರತಾ ಸಮಿತಿಯು ಐದು ಕಾಯಂ ಸದಸ್ಯರಾಷ್ಟ್ರಗಳ ಸ್ವಹಿತಾಸಕ್ತಿ ಪ್ರತಿಪಾದಕ ವೇದಿಕೆಯಷ್ಟೆ ಆಗಿದೆಯೆಂಬುದನ್ನು ಅಲ್ಲಗಳೆಯಲಾಗದು.
ಈ ಪ್ರವೃತ್ತಿಯಾದರೋ ಬಹಳ ಹಿಂದಿನಿಂದ ಇರುವುದೇ. ವಿಶ್ವಸಂಸ್ಥೆಯ ಪೂರ್ವಾವತಾರವಾದ ಲೀಗ್ ಆಫ್ ನೇಷನ್ಸ್ ಸಂರಚನೆ ವುಡ್ರೋ ವಿಲ್ಸನ್ನಿಂದ ಪ್ರವರ್ತಿತವಾಗಿತ್ತು. (ವಿಲ್ಸನ್ ೧೯೧೩-೧೯೨೧ರ ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದವರು.) ತನ್ನ ಸ್ವೀಯ ಇಚ್ಛೆಗೆ ವಿರುದ್ಧವಾಗಿ ಪ್ರಥಮ ಮಹಾಯುದ್ಧದಲ್ಲಿ ಅಮೆರಿಕವನ್ನು ಪ್ರವೇಶಗೊಳಿಸಿದ್ದ ಆತ; ಇಡೀ ಜಗತ್ತನ್ನು ಸಂಘರ್ಷಮುಕ್ತಗೊಳಿಸುವ ಕನಸನ್ನು ಕಂಡಿದ್ದ. ಆದರೆ ೧೯೩೦ರ ದಶಕದಲ್ಲಿ ಅಮೆರಿಕ ತನ್ನ ಹಿತಾಸಕ್ತಿಗೇ ಪ್ರಾಥಮ್ಯ ನೀಡತೊಡಗಿತು. ‘ಲೀಗ್’ ಸಂಘಟನೆಯಿಂದ ಅಮೆರಿಕವೇ ಹೊರಗುಳಿಯಿತು; ಆ ವೇದಿಕೆಯನ್ನು ಪ್ರಬಲ ರಾಷ್ಟ್ರಗಳು ಲಕ್ಷ್ಯಕ್ಕೇ ತೆಗೆದುಕೊಳ್ಳಲಿಲ್ಲ. ಮಂಚೂರಿಯವನ್ನು ಜಪಾನ್ ಆಕ್ರಮಿಸಿಕೊಂಡಿತು. ಇಟಲಿಯು ಇಥಿಯೋಪಿಯವನ್ನು (ಆಗ ‘ಅಬಿಸಿನಿಯ’) ಕಬಳಿಸಿತು. ನಾಟ್ಸಿ ಜರ್ಮನಿಯಂತೂ ಇಡೀ ಜಗತ್ತಿಗೇ ಲಗ್ಗೆಯಿಟ್ಟಿತು.
ಆ ಅನುಭವಗಳ ಹಿನ್ನೆಲೆಯಲ್ಲಿ ದ್ವಿತೀಯ ಯುದ್ಧೋತ್ತರ ವರ್ಷಗಳಲ್ಲಿ ಏರ್ಪಟ್ಟ ‘ನ್ಯೂ ಇಂಪ್ರೂವ್ಡ್’ ಸಂಘಟನೆಯೇ ಈಗಿನ ವಿಶ್ವಸಂಸ್ಥೆ. ಇದರ ಮುಖ್ಯ ಪೌರೋಹಿತ್ಯವನ್ನು ಅಮೆರಿಕ ಆರಂಭದಲ್ಲಿ ವಹಿಸಿಕೊಂಡಿತಾದ್ದರಿಂದ ಒಂದಷ್ಟು ಭರವಸೆ ಆರಂಭದಲ್ಲಿ ತಲೆದೋರಿತ್ತು. ಆದರೆ ‘ಶೀತಲ ಯುದ್ಧ’ ವರ್ಷಗಳಲ್ಲಿ ವಿಶ್ವಶಾಂತ್ಯಾಕಾಂಕ್ಷೆಗೆ ಹಿನ್ನಡೆಯಾಯಿತು. ೧೯೫೦ರಲ್ಲಿ ಉತ್ತರಕೊರಿಯ ದಕ್ಷಿಣಭಾಗದ ಮೇಲೆರಗಿದ ಸಂದರ್ಭದಲ್ಲಿ ದಕ್ಷಿಣಕೊರಿಯದ ಸ್ವಾಯತ್ತತೆಯನ್ನು ಬೆಂಬಲಿಸಿ ಅಮೆರಿಕ ಮತ್ತು ೧೪ ಅನ್ಯ ರಾಷ್ಟ್ರಗಳು ಸಂಘಟಿತವಾದಾಗ ರಷ್ಯಾ ದೇಶ ಈ ಜಾಗತಿಕ ವೇದಿಕೆಯನ್ನೇ ಬಾಯ್ಕಾಟ್ ಮಾಡಿತು.
ಹಲವು ಆಯಾಮಗಳು
ಒಂದೊಂದು ದೇಶದೊಳಗೇ ಹಿತಾಸಕ್ತಿಗಳ ತೀಕ್ಷ್ಣ ಧ್ರುವೀಕರಣ ಇರುವಾಗ ಇದು ಜಾಗತಿಕ ವೇದಿಕೆಯಲ್ಲಿ ಪ್ರತಿಫಲಿತವಾಗದಿದ್ದೀತೆ? ಈ ವಿದ್ಯಮಾನವನ್ನು ‘ನಾಗರಿಕತೆಗಳ ಸಂಘರ್ಷ’ ಎಂದೇ ಭಾವಿಸಿದರೆ ತಪ್ಪಾಗದೇನೊ.
ಈ ರಗಳೆಗಳೇನೇ ಇದ್ದರೂ ಅಂತರರಾಷ್ಟ್ರೀಯ ಸೌಹಾರ್ದದ ಅಪೇಕ್ಷ್ಯತೆಯನ್ನು ಯಾರೂ ಅಲ್ಲಗಳೆಯಲಾರರು.
ಇನ್ನೊಂದು ಆಯಾಮವೂ ಇದೆ. ರಾಷ್ಟ್ರ-ರಾಷ್ಟ್ರ ಸಂಘರ್ಷಗಳಿಂದಾಚೆಗೂ ಹಲವಾರು ಮುಖ್ಯ ಕ್ಷೇತ್ರಗಳಿಗೆ ವಿಶ್ವಸಂಸ್ಥೆಯಿಂದ ಶ್ಲಾಘನೀಯ ದೋಹದ ದೊರೆಯುತ್ತಿದೆ. ಉದಾಹರಣೆಗೆ ಟೆಲಿಸಂಪರ್ಕ, ಸಮುದ್ರಯಾನ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ. ಹೀಗೆ ಸಾರಾಸಗಟಾಗಿ ವಿಶ್ವಸಂಸ್ಥೆಯನ್ನು ತಿರಸ್ಕರಿಸುವುದು ಸಮುಚಿತವೆನಿಸದು.
ವಿವಿಧ ರಾಷ್ಟ್ರ ಪ್ರಾಯೋಜಿತ ಸೈನ್ಯದ ಬಲವೂ ಭದ್ರತಾ ಸಮಿತಿಗೆ ಇದೆ. ಈ ಆನುಕೂಲ್ಯವಿದ್ದೂ ವಿಷಮ ಸನ್ನಿವೇಶಗಳಲ್ಲಿ ಅದು ಸಾಕಷ್ಟು ಪ್ರಭಾವಶಾಲಿಯಾಗಿ ವರ್ತಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ದೌರ್ಬಲ್ಯದಿಂದ ಭಯೋತ್ಪಾದಕ ಸಂಘಟನೆಗಳು ಒಂದಷ್ಟು ಲಾಭ ಪಡೆದುಕೊಳ್ಳುತ್ತಿರುವುದನ್ನೂ ನಿರಾಕರಿಸಲಾಗದು.
ದೃಷ್ಟಿ ಭಿನ್ನತೆ
ಇದೀಗ ತೀವ್ರ ಸ್ವರೂಪ ಪಡೆದುಕೊಂಡಿರುವ ಇಸ್ರೇಲ್-ಹಾಮಾಸ್ ಘರ್ಷಣೆಯೂ ಮೇಲೆ ಪ್ರಸ್ತಾವಿಸಿದ ‘ನಾಗರಿಕತೆಗಳ ಸಂಘರ್ಷ’ ವಿದ್ಯಮಾನದ ನಿದರ್ಶನವೇ: ಇಸ್ರೇಲಿಗರ ದೃಷ್ಟಿಯಲ್ಲಿ ತಾವು ಮೊದಲಿಗೆ ಪ್ರಜೆಗಳು, ಅನಂತರ ಯಹೂದ್ಯರು. ಅರಬ್ ದೇಶಗಳಿಗಾದರೋ ಯಹೂದ್ಯರ ವಿರುದ್ಧ ಜೆಹಾದ್ ನಡೆಸುವುದು ‘ಪವಿತ್ರ’ ಕರ್ತವ್ಯ. ಹಾಮಾಸ್-ಹಿಜಬೊಲ್ಲಾಗಳನ್ನು ನಿಶ್ಶೇಷಗೊಳಿಸುವವರೆಗೆ ವಿರಮಿಸುವುದಿಲ್ಲವೆಂಬ ಇಸ್ರೇಲಿನ ನಿಲವಿನ ತಾತ್ತ್ವಿಕತೆಯನ್ನು ಅಲ್ಲಗಳೆಯುವುದು ಕಷ್ಟ. ಇಂತಹ ಸಂಕೀರ್ಣತೆಗಳಿಗೆ ಸ್ವೀಕರ್ಯ ಪರಿಹಾರ ಸೂಚಿಸುವುದರಲ್ಲಿ ವಿಶ್ವಸಂಸ್ಥೆಯು ಅಸಮರ್ಥವಾಗಿದೆಯೆಂದರೆ ಅದರ ಅಸ್ತಿತ್ವದ ಅರ್ಥವಂತಿಕೆಯೇ ಪ್ರಶ್ನಾರ್ಹವಾಗುತ್ತದೆ.
ಭಾರತದ ವಿಷಯಕ್ಕೆ ಬಂದರೆ: ವಿಶ್ವಸಂಸ್ಥೆಗೆ ೪೦ ಲಕ್ಷ ಡಾಲರಿನಷ್ಟು ದೇಣಿಗೆ ನೀಡುತ್ತಿರುವ ಭಾರತಕ್ಕೆ ಚೀಣಾ ಸದಾ ಅಡ್ಡಗಾಲು ಹಾಕುತ್ತಿರುತ್ತದೆ – ಕಾಶ್ಮೀರ ಮೊದಲಾದ ವಿಷಯಗಳ ಸಂದರ್ಭದಲ್ಲಿ. ನ್ಯಾಯವಾಗಿ ನರೇಂದ್ರಮೋದಿಯವರ ಇತಿಹಾಸಾರ್ಹ ಕ್ರಮಗಳಾದರೂ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಧೋರಣೆಯ ಮೇಲೆ ಸ್ವಲ್ಪವಾದರೂ ಪರಿಣಾಮ ಮಾಡಬೇಕಾಗಿತ್ತು. ಅದೂ ಆಗಿಲ್ಲ.
ಸಂರಚನೆ ಸುಧಾರಿಸಲಿ
ಸಂಗ್ರಹವಾಗಿ ಹೇಳಬೇಕೆಂದರೆ: ಒಂದು ಕಡೆ ವಿಶ್ವಸಂಸ್ಥೆಯ ಕಾಯಂ ಸದಸ್ಯಪಂಚಕದ ಸ್ವಾರ್ಥೈಕದೃಷ್ಟಿ, ಇನ್ನೊಂದು ಕಡೆ ಅರಬ್ ದೇಶಗಳ ರಕ್ತಪಿಪಾಸೆ – ಇವೇ ವಿಶ್ವಸಾಮರಸ್ಯಕ್ಕೆ ಹೆದ್ದನ(ಬ್ರೇಕ್)ಗಳಾಗಿರುವುದು. ವಿಶ್ವವೇದಿಕೆಯಲ್ಲಿ ವರ್ಷಗಳುದ್ದಕ್ಕೂ ನೆನೆಗುದಿಗೆ ಬಿದ್ದಿರುವ ವಿಷಯಗಳಿವೆ. ಕಾಯಂ ಸದಸ್ಯರಾಷ್ಟ್ರಗಳು ತಾವು ಅಷ್ಟು ಜಗದ್ರಾಷ್ಟ್ರಗಳ ಪ್ರತಿನಿಧಿಗಳೆಂಬುದನ್ನು ಮರೆತು ಖಾಸಗಿ ಕ್ಲಬ್ನಂತೆ ವ್ಯವಹರಿಸುತ್ತಿರುವುದೇ ಸಮಸ್ಯೆಯ ಮೂಲ.
ಅಂತಿಮ ಪರಿಹಾರವೆಂದರೆ ಭಾರತ ದೀರ್ಘಕಾಲದಿಂದ ಹೇಳುತ್ತ ಬಂದಿರುವಂತೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಂರಚನೆ ಹೆಚ್ಚು ಪ್ರಾತಿನಿಧಿಕವೂ ಸಮತೋಲಿತವೂ ಆಗುವುದು ಮಾತ್ರ. ೫೫ ದೇಶಗಳನ್ನೊಳಗೊಂಡ ಆಫ್ರಿಕ ಒಕ್ಕೂಟವು ಉ-೨೦ ಸಂಘಟನೆಯಲ್ಲಿ ಸೇರ್ಪಡೆಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಉ-೨೦ ಸಮಾವೇಶದಲ್ಲಿ ಪ್ರತಿಪಾದಿಸಿದುದು ಒಂದು ಸಮಯೋಚಿತ ಕ್ರಮವೆಂದು ಇಲ್ಲಿ ನೆನೆಯಬಹುದು.
ಸಂಘರ್ಷಗಳು ಬಹು-ಆಯಾಮಿ
ರಷ್ಯಾ-ಯುಕ್ರೇನ್ ಸಮರದ ಬಗೆಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ತಾರ್ಕಿಕ ನಿಲವನ್ನು ತಳೆಯಬೇಕಾಗಿರುವುದು ವಿಶ್ವಶಾಂತಿಯ ದೃಷ್ಟಿಯಿಂದ ಮಾತ್ರವಲ್ಲ; ರಷ್ಯಾದ ಮೇಲೆ ಅಮೆರಿಕ ‘ಸ್ಯಾಂಕ್ಷನ್’ ಗಳನ್ನು ಹೇರಿರುವುದರಿಂದಾಗಿ ಅದರ ಅಡ್ಡಪರಿಣಾಮ ಬಡದೇಶಗಳ ಆಹಾರಭದ್ರತೆ, ಆರ್ಥಿಕತೆ, ಇಂಧನ ವ್ಯವಸ್ಥೆ ಮೊದಲಾದ ಹಲವಾರು ಕ್ಷೇತ್ರಗಳ ಮೇಲೂ ಆಗುತ್ತಿದೆಯೆಂಬುದನ್ನು ಗಮನಿಸಬೇಕು.
ಜಾಗತಿಕ ವೇದಿಕೆಯಲ್ಲಿ ಬಡದೇಶಗಳ ಪ್ರಮಾಣಬದ್ಧ ಪ್ರಾತಿನಿಧ್ಯ ಇರಬೇಕೆಂದು ಭಾರತ ಪದೇ ಪದೇ ಆಗ್ರಹಿಸುತ್ತ ಬಂದಿರುವುದಕ್ಕೆ ಇದೂ ಒಂದು ಪ್ರಬಲ ಕಾರಣ.
ಕುಂಠಿತ ಪ್ರತಿಮೆ
ವಾಸ್ತವದಲ್ಲಿ ನಿವಾರಣೀಯಗಳಾಗಿದ್ದ ಎಷ್ಟೋ ಪ್ರಮುಖ ಯುದ್ಧಗಳ ಸಂದರ್ಭಗಳಲ್ಲಿ ವಿಶ್ವಸಂಸ್ಥೆ ಮೂಕಸಾಕ್ಷಿಯಾಗುಳಿದದ್ದು ಅದರ ಪ್ರತಿಮೆಯನ್ನು ಮುಕ್ಕಾಗಿಸಿದೆಯೆಂದು ಹೇಳಬೇಕಾಗಿದೆ. ಉದಾಹರಣೆಗಳು: ವಿಯಟ್ನಾಂ, ಇರಾಕ್, ಬೋಸ್ನಿಯ-ಸೆರ್ಬಿಯ, ಭಾರತ-ಪಾಕಿಸ್ತಾನ, ಸೌದಿ-ಯೆಮೆನ್, ಅಜರ್ಬೈಜಾನ್-ಆರ್ಮೇನಿಯ… ಈ ಪಟ್ಟಿ ದೊಡ್ಡದಿದೆ. ಹೀಗೆ ತನ್ನ ಅಸ್ತಿತ್ವಕ್ಕೆ ಪ್ರಮುಖ ಅಸ್ತಿಭಾರವನ್ನೇ ವಿಶ್ವಸಂಸ್ಥೆ ಉಳಿಸಿಕೊಳ್ಳಲಾಗಿಲ್ಲ – ಎಂಬ ಟೀಕೆ ನಿರಾಧಾರವಲ್ಲ.