ಪಡಿತರ, ಶೌಚಾಲಯ, ರಸ್ತೆ, ಗ್ಯಾಸ್ ಸಿಲಿಂಡರ್, ಬ್ಯಾಂಕ್ ಖಾತೆ ಇವನ್ನೆಲ್ಲ ಮೊದಲ ಅವಧಿ ಈಡೇರಿಸಿದ್ದರೆ ಎರಡನೇ ಅವಧಿಯಲ್ಲಿ ಜಲ ಜೀವನ ಮಿಷನ್ ಅನ್ನೋದು ಮನೆಮನೆಗೆ ನಲ್ಲಿ ಸಂಪರ್ಕ ಕೊಟ್ಟಿದೆ. ಮೋದಿ ನೇರ್ಪುಗೊಳಿಸಿದ ಮನೆಯಲ್ಲಿ ಬೆಳೆದ ಹೊಸ ಪೀಳಿಗೆ ಇನ್ನೂ ಹೆಚ್ಚಿನ ಆಕಾಂಕ್ಷೆಗಳಿಗೆ ಚಾಚಿಕೊಳ್ಳುವುದಕ್ಕೆ ಅನುವಾಗುವಂತೆ ಎಕ್ಸ್ಪ್ರೆಸ್ ಹೆದ್ದಾರಿಗಳಾಗಿವೆ, ಹೊಸ ವಿಮಾನನಿಲ್ದಾಣಗಳಾಗಿವೆ, ಆಧುನಿಕ ರೈಲುಗಳು ಹೆಚ್ಚಾಗುತ್ತಿವೆ, ನಿರ್ದಿಷ್ಟ ವಿಷಯಗಳಲ್ಲಿ ಉದ್ಯೋಗಗಳಿಗೆ ನೆರವಾಗುವಂತೆ ಕಾಲೇಜುಗಳು ಹೆಚ್ಚಿವೆ, ನಿಯಮಗಳ ಸಡಿಲಿಕೆಯ ಪೂರಕ ವಾತಾವರಣದಿಂದಾಗಿ ನವೋದ್ದಿಮೆಗಳಲ್ಲಿ ಯುವಕರ ಭವಿಷ್ಯ ಬೆಳಗುತ್ತಿದೆ…
ಮೋದಿ ಸರ್ಕಾರವು ಮೂರನೇ ಬಾರಿಗೆ ಜನಮತ ಎದುರಿಸಲು ಹೊರಟ ಸಂದರ್ಭದಲ್ಲಿ ಪ್ರಸ್ತುತವಾಗುವ ಪ್ರಶ್ನೆ – ಈ ಹತ್ತು ವರ್ಷಗಳಲ್ಲಿ ದೇಶದಲ್ಲಿ ಏನೇನಾಗಿದೆ?
ಇದಕ್ಕೆ ಉತ್ತರವಾಗಿ ಏನೆಲ್ಲವನ್ನೂ ಬರೆಯುತ್ತ ಹೋಗಬಹುದು. ಆದರೆ, ಅದು ಕೇವಲ ಮಾಹಿತಿಯ ಸ್ಫೋಟ ಎಂಬಂತಾಗಿಬಿಡಬಹುದು. ಇನ್ನೊಂದು ಅಪಾಯ ಎಂದರೆ, ಹತ್ತು ವರ್ಷಗಳ ಕಾರ್ಯಗಳ ಪಟ್ಟಿಯನ್ನು ಹಾಗೆಯೇ ಇಡುತ್ತ ಹೋದರೆ, ಅದರಲ್ಲಿ ಯಾವುದೋ ಬಿಟ್ಟುಹೋದ ಮಾಹಿತಿಯೇ ಹೆಚ್ಚಿನದ್ದೆನಿಸಬಹುದು. ಹೀಗಾಗಿ, ದೇಶವ್ಯಾಪ್ತಿಯಲ್ಲಿ ಈ ಪ್ರಶ್ನೆಯನ್ನು ಎದುರುಗೊಳ್ಳುವುದಕ್ಕೆ ಮುಂಚೆ, ಈ ಹತ್ತು ವರ್ಷಗಳ ಫಲಶ್ರುತಿಯನ್ನು ನಮ್ಮ ಮನಸಿನ ಚಕ್ಷುಗಳು ಸರಿಯಾಗಿ ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ ಅದನ್ನೊಂದು ಸಣ್ಣ ಚೌಕಟ್ಟಿಗೆ ಹೊಂದಿಸೋಣ.
ಮೋದಿ ಎಂಬ ‘ಮನೆ ಯಜಮಾನ’ನ ಮೌಲ್ಯಾಂಕನ!
ನಿಮ್ಮದೇ ಮನೆಯನ್ನು ಒಂದು ತಿಂಗಳ ಕಾಲ ಬಿಟ್ಟು ಹೋದರೆ, ತಿರುಗಿ ಬಂದಾಗ ನಿಮಗೆ ಸರಿಮಾಡಿಕೊಳ್ಳುವುದಕ್ಕೆ, ಮತ್ತೆಲ್ಲವನ್ನೂ ಸಂಯೋಜಿಸಿಕೊಳ್ಳುವುದಕ್ಕೆ ವಾರಗಳೇ ಹಿಡಿದುಹೋಗುತ್ತವೆ ಅಲ್ಲವೆ? ೨೦೧೪ರಲ್ಲಿ ನರೇಂದ್ರ ಮೋದಿ ಎಂಬ ವ್ಯಕ್ತಿ ಮನೆಯೊಂದರ ಯಜಮಾನನಾಗಿ ಜವಾಬ್ದಾರಿ ವಹಿಸಿಕೊಂಡರು ಎಂದುಕೊಂಡರೆ, ಅದಕ್ಕೂ ಮೊದಲು ಆ ಮನೆ ಹೇಗಿತ್ತು?
ಧೂಳು ಹಿಡಿದ ಮನೆಗೆ ಸ್ವಚ್ಛ ಭಾರತದ ಜೋಷ್ ಬಂತು. ಮುಂಜಾನೆ ಬೆಳಕು ಹರಿಯುವ ಮೊದಲು ಬಯಲಿನಲ್ಲಿ ನಿತ್ಯಕರ್ಮ ಮಾಡಬೇಕಿದ್ದ ಘನತೆರಹಿತ ಬಾಳನ್ನು ಬದಲಿಸುವುದಕ್ಕೆ ಸುಮಾರು ೧೦ ಕೋಟಿ ಮನೆಗಳಲ್ಲಾಯಿತು ಶೌಚಾಲಯ ನಿರ್ಮಾಣ. ಶೌಚ ಸಂಕಟವೇನೋ ತಪ್ಪಿತು… ಅರೇ ಅವಳೇಕೆ ಮೂಲೆಯಲ್ಲಿ ಕಣ್ಣು ಕೆಂಪಾಗಿಸಿಕೊಂಡು ಕುಳಿತಿದ್ದಾಳೆ? ಏಕೆಂದರೆ ಉರುವಲು-ಬೆರಣಿಗಳ ಹೊಗೆಯಲ್ಲವಳು ಕುಟುಂಬವನ್ನು ಸಲಹುತ್ತಿದ್ದಾಳೆ, ತನ್ನ ಆರೋಗ್ಯವನ್ನು ಬಲಿಗೊಟ್ಟು. ಮನೆಯ ಆ ವಾತಾವರಣವನ್ನೂ ಬದಲಾಯಿಸಲಾಯಿತು; ಮೋದಿಯ ಉಜ್ವಲಾ ಗ್ಯಾಸ್ ಸಿಲಿಂಡರ್. ಅರೇ.. ಮನೆಯೇನೋ ಇದೆ, ಆದರೆ ಪಕ್ಕಾ ಮನೆಯಲ್ಲ. ಈ ಚಿತ್ರಣ ಬದಲಿಸುವುದಕ್ಕೆ ಪ್ರವಾಹೋಪಾದಿಯಲ್ಲಿ ನಿರ್ಮಾಣವಾಗತೊಡಗಿದವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟಾಗಿ ೩ ಕೋಟಿಗೂ ಹೆಚ್ಚು ಮನೆಗಳು ಫಲಾನುಭವಿಗಳ ಬದುಕು ಬೆಳಗಿವೆ. ಅರೇ… ಮನೆಯಲ್ಲೇಕೆ ಕತ್ತಲೆ? ಬೆಳಕು ಬಯಸುವ ಯಾವ ಮನೆಯೂ ವಿದ್ಯುತ್ ಸಂಪರ್ಕದಿಂದ ವಂಚಿತವಾಗದಂತೆ ಸೌಭಾಗ್ಯ ಯೋಜನೆ ಖಾತ್ರಿಪಡಿಸಿತು. ಗಿರಿಕಂದರಗಳ ಮೇಲೆಲ್ಲ ಪ್ರಯಾಸದಿಂದ ಕಂಬ ನಿಲ್ಲಿಸಿ ಸರಬರಾಜಾಯಿತು ವಿದ್ಯುತ್. ಜೊತೆಗೂಡಿತು ಉಜಾಲಾ ಯೋಜನೆಯಲ್ಲಿ ಹೆಚ್ಚು ಬೆಳಕು ಮತ್ತು ಕಡಮೆ ವಿದ್ಯುತ್ ದರ ತರುವ ಎಲ್ಇಡಿ ಬಲ್ಬುಗಳನ್ನು ಕಡಮೆ ಬೆಲೆಯಲ್ಲಿ ಮನೆಗಳಿಗೆ ಒದಗಿಸುವ ಕ್ರಾಂತಿ. ಹೀಗೆಲ್ಲ ಸಂಪನ್ನಗೊಂಡ ಮನೆಗೆ ಸಾಗಲು ಬೇಕಲ್ಲವೇ ಹಾದಿ? ಅದಾಗಲೇ ಇದ್ದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ, ಪಾರದರ್ಶಕವಾಗಿ ಹಳ್ಳಿಗಳನ್ನು ಬೆಸೆಯಿತು, ಅದರ ಉತ್ಪನ್ನಗಳನ್ನು ವಿಶಾಲ ಜಗತ್ತಿಗೆ ತಲಪಿಸುವುದಕ್ಕೆ ಸರ್ವಋತು ರಸ್ತೆಯ ಬಂಧ ಬೆಸೆಯಿತು. ಮನೆ ಭೌತಿಕವಾಗಿ ಗಟ್ಟಿಯಾಯಿತಷ್ಟೆ.
ಹೀಗೆ ನೆಲೆ ಗಟ್ಟಿಗೊಳಿಸಿಕೊಂಡ ಸಾಮಾನ್ಯನು ಮತ್ತೆ ವಿಸ್ತಾರ ಪಡೆದುಕೊಳ್ಳಬೇಕೆಂದರೆ ವಿತ್ತ ಜಗತ್ತಿನೊಡನೆಯೂ ಬೆಸೆದುಕೊಳ್ಳಬೇಕಲ್ಲವೆ? ಆದರೆ ಬ್ಯಾಂಕುಗಳು ಅತಿ ಸಾಮಾನ್ಯರ ಪಾಲಿಗಿರಲಿಲ್ಲ. ಅನಾವರಣಗೊಂಡಿತು ಜನಧನ ಯೋಜನೆ. ಇವತ್ತಿಗೆ ೫೧ ಕೋಟಿ ಭಾರತೀಯರು ಈ ಮೂಲಕ ಬ್ಯಾಂಕ್ ಖಾತೆ ಹೊಂದುವಂತಾಗಿದೆ. ಮೊದಲೆಲ್ಲ ಸಾಮಾನ್ಯನ ಮನೆ ತಲಪಿಕೊಳ್ಳುವಷ್ಟರಲ್ಲಿ ಎಲ್ಲೋ ಸೋರಿಹೋಗುತ್ತಿದ್ದ ಹಣ ಈಗ ನೇರ ವರ್ಗಾವಣೆ ಮೂಲಕ ಒಂದು ಪೈಸೆಯೂ ವ್ಯತ್ಯಾಸವಾಗದಂತೆ ಖಾತೆಗೆ ಬಂದು ಬೀಳುವಂತಾಗಿದೆ. ಹೀಗೆಲ್ಲ ಕಳೆಗಟ್ಟಿರುವ ಮನೆಯು ಕಳೆಗುಂದುವುದಕ್ಕೆ ಮನೆ ಸದಸ್ಯರೊಬ್ಬರ ಅನಾರೋಗ್ಯ ಪ್ರಕರಣವೇ ಸಾಕಾಗಿಬಿಡುತ್ತದಲ್ಲವೆ! ಅಂಥ ಸಮಯದಲ್ಲಿ ಜತೆ ನಿಲ್ಲುವುದಕ್ಕೆ ಬಂತು ಆಯುಷ್ಮಾನ್ ಭಾರತ. ಬಿಪಿಎಲ್ ಕುಟುಂಬಕ್ಕೆ ೫ ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ವಿಮೆ. ಬಿಪಿ-ಶುಗರ್ ಥರದ ಕಾಯಿಲೆಗಳಿಗೆ ಮಾತ್ರೆ ತೆಗೆದುಕೊಳ್ಳುವುದಕ್ಕೆ ಪ್ರತಿ ತಿಂಗಳೂ ದೊಡ್ಡದೊಂದು ಮೊತ್ತ ವ್ಯಯಿಸಬೇಕಿದ್ದ ಸಾಮಾನ್ಯ ಮನೆಯೊಂದರ ಭಾರವನ್ನೀಗ ಇಳಿಸಿಬಿಟ್ಟಿವೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು.
ಪಡಿತರ, ಶೌಚಾಲಯ, ರಸ್ತೆ, ಗ್ಯಾಸ್ ಸಿಲಿಂಡರ್, ಬ್ಯಾಂಕ್ ಖಾತೆ ಇವನ್ನೆಲ್ಲ ಮೊದಲ ಅವಧಿಯಲ್ಲಿ ಈಡೇರಿಸಿದ್ದರೆ ಎರಡನೇ ಅವಧಿಯಲ್ಲಿ ಜಲ ಜೀವನ ಮಿಷನ್ ಅನ್ನೋದು ಮನೆಮನೆಗೆ ನಲ್ಲಿ ಸಂಪರ್ಕ ಕೊಟ್ಟಿದೆ. ಮೋದಿ ನೇರ್ಪುಗೊಳಿಸಿದ ಮನೆಯಲ್ಲಿ ಬೆಳೆದ ಹೊಸಪೀಳಿಗೆ ಇನ್ನೂ ಹೆಚ್ಚಿನ ಆಕಾಂಕ್ಷೆಗಳಿಗೆ ಚಾಚಿಕೊಳ್ಳುವುದಕ್ಕೆ ಅನುವಾಗುವಂತೆ ಎಕ್ಸ್ಪ್ರೆಸ್ ಹೆದ್ದಾರಿಗಳಾಗಿವೆ, ಹೊಸ ವಿಮಾನನಿಲ್ದಾಣಗಳಾಗಿವೆ, ಆಧುನಿಕ ರೈಲುಗಳು ಹೆಚ್ಚಾಗುತ್ತಿವೆ, ನಿರ್ದಿಷ್ಟ ವಿಷಯಗಳಲ್ಲಿ ಉದ್ಯೋಗಗಳಿಗೆ ನೆರವಾಗುವಂತೆ ಕಾಲೇಜುಗಳು ಹೆಚ್ಚಿವೆ, ನಿಯಮಗಳ ಸಡಿಲಿಕೆಯ ಪೂರಕ ವಾತಾವರಣದಿಂದಾಗಿ ನವೋದ್ದಿಮೆಗಳಲ್ಲಿ ಯುವಕರ ಭವಿಷ್ಯ ಬೆಳಗುತ್ತಿದೆ…
೨೦೧೪ರಲ್ಲಿ ಸ್ವಚ್ಛ ಭಾರತ ಎಂದು ಕಸಪೊರಕೆ ತೆಗೆದುಕೊಂಡಾಗಿನಿಂದ ಹಿಡಿದು ಡಿಜಿಟಲ್ ಕ್ರಾಂತಿಯಾಗುತ್ತಿರುವ ಈವರೆಗೆ ಭಾರತದ ಒಂದು ಸಾಮಾನ್ಯ ಮನೆಯನ್ನೇ ತೆಗೆದುಕೊಂಡರೆ ಅದು ಬಹುವಿಧದಲ್ಲಿ ಸಂಪನ್ನಗೊಂಡಿದೆ. ಬಿಜ್ಲಿ-ಸಡಕ್-ಪಾನಿ ಎಂಬ ಮೂಲ ಅಗತ್ಯಗಳೇ ಸ್ವಾತಂತ್ರ್ಯ ಸಿಕ್ಕ ನಂತರದ ಆರು ದಶಕಗಳಲ್ಲೂ ಪ್ರತಿಬಾರಿ ಚುನಾವಣೆಯ ವಿಷಯಗಳಾಗುತ್ತಿದ್ದವಷ್ಟೆ. ಆದರೆ, ಮೋದಿ ಈ ‘ಬೇಸಿಕ್ಸ್’ಗಳನ್ನು ಚುನಾವಣಾ ವಿಷಯವಾಗಿ ಉಳಿಸಿಯೇ ಇಲ್ಲ.
- ೮೦ ಕೋಟಿ – ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಉಚಿತ ಪಡಿತರ ಪಡೆಯುತ್ತಿರುವ ಭಾರತೀಯರು.
- ೧೧.೭೨ ಕೋಟಿ – ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣವಾಗಿರುವ ಶೌಚಾಲಯಗಳು.
- ೩ ಕೋಟಿ – ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರಗಳಲ್ಲಿ ನಿರ್ಮಾಣವಾದ ಮನೆಗಳು.
- ೧೦.೩೫ ಕೋಟಿ – ಉಜ್ವಲಾ ಉಚಿತ ಗ್ಯಾಸ್ ಸಂಪರ್ಕದಡಿ ಬರುವ ಫಲಾನುಭವಿಗಳು.
- ೧೪.೪೮ ಕೋಟಿ – ಜಲಜೀವನ ಅಭಿಯಾನದಡಿ ನಳ ಸಂಪರ್ಕ ಪಡೆದಿರುವ ಮನೆಗಳ ಸಂಖ್ಯೆ.
- ೫೨ ಕೋಟಿ – ದೇಶದಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಹೊಂದಿರುವವರ ಸಂಖ್ಯೆ.
- ೫೧.೯೩ ಕೋಟಿ – ಜನಧನ ಬ್ಯಾಂಕ್ ಖಾತೆ ಹೊಂದಿದವರು.
ಕೃಷಿ – ಮೋದಿ ಸರ್ಕಾರದ ನೋಟ ಭಿನ್ನ ಏಕೆ?
ಈ ವಿಚಾರದಲ್ಲಿ ಕೆಲವು ಟೀಕೆಗಳು ಬಂದಾವೇನೋ.
ಈ ಹತ್ತು ವರ್ಷಗಳಲ್ಲಿ ತಾನು ಹೇಳಿದ ಹಾಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಮೋದಿ ಸರ್ಕಾರಕ್ಕೆ ಆಯಿತೇ? ಅದೇಕೆ ಪಂಜಾಬ್ಕೇಂದ್ರಿತ ರೈತ ಪ್ರತಿಭಟನೆಗಳನ್ನು ಸರ್ಕಾರ ಎದುರಿಸಬೇಕಾಗಿ ಬಂತು? ಕೃಷಿ ಸುಧಾರಣಾ ಕಾನೂನು ತಿದ್ದುಪಡಿಗಳನ್ನು ಹಿಂದೆ ತೆಗೆದುಕೊಳ್ಳಬೇಕಾಗಿ ಬಂದಿದ್ದೇಕೆ? – ಇತ್ಯಾದಿ ಪ್ರಶ್ನೆಗಳು.
ಈಗಿರುವ ಸಾಂಪ್ರದಾಯಿಕ ಮಾದರಿ ಹಾಗೂ ಸಬ್ಸಿಡಿಗಳ ಮೂಲಕ ದೀರ್ಘಾವಧಿಯಲ್ಲಿ ರೈತೋದ್ಧಾರ ಆಗದು ಎಂಬುದನ್ನು ಮನಗಂಡಿರುವ ಮೋದಿ ಸರ್ಕಾರ ಕೃಷಿಯನ್ನು ಉದ್ದಿಮೆ ಸ್ವರೂಪದಲ್ಲಿ, ಮಾರುಕಟ್ಟೆ ಶಕ್ತಿಯಾಗಿ ರೂಪಿಸುವುದಕ್ಕೆ ಶ್ರಮಿಸುತ್ತಿದೆ. ಶೇ. ೮೫ರಷ್ಟು ಸಣ್ಣ ಮತ್ತು ಮಧ್ಯಮ ವ್ಯಾಪ್ತಿಯ ರೈತರೇ ಇರುವ ಭಾರತದಲ್ಲಿ ವಿದೇಶೀ ಮಾದರಿಯ ವಿಸ್ತಾರದಲ್ಲಿ ಕಾರ್ಯತಂತ್ರ ಮಾಡಲಾಗದು. ಏಕೆಂದರೆ, ಅಲ್ಲಿ ಭೂಮಿ ಕೆಲವೇ ದೊಡ್ಡ ರೈತರ ಕೈಯಲ್ಲಿರುವುದರಿಂದ ಉದ್ದಿಮೆಯ ಸ್ಕೇಲ್ ತರುವುದು ಸುಲಭ. ನಮ್ಮ ಸಣ್ಣ ರೈತರನ್ನೆಲ್ಲ ಏಕೀಕೃತ ಶಕ್ತಿಯಾಗಿ ರೂಪಿಸುವುದಕ್ಕೆ ಎಪಿಎಂಸಿ ಹೊರತಾದ ಮಾರುಕಟ್ಟೆ ವ್ಯವಸ್ಥೆ ಬೇಕು. ಅದಕ್ಕೆಂದೇ ಕೃಷಿ ಕಾಯ್ದೆಗಳು ಬಂದಿದ್ದವು. ಆದರೆ, ಪಂಜಾಬ್-ಹರ್ಯಾಣಾ-ಉತ್ತರಪ್ರದೇಶದ ಕೆಲಭಾಗಗಳಲ್ಲಿ ಇದು ಸ್ಥಳೀಯ ಮಧ್ಯವರ್ತಿಗಳ ಮತ್ತು ಲೇವಾದೇವಿ ವ್ಯವಹಾರದವರ ಹಿಡಿತವನ್ನು ತಪ್ಪಿಸಿಬಿಡುತ್ತಾದ್ದರಿಂದ ಅವರು “ರೈತ ಪ್ರತಿಭಟನೆ’’ಯ ವ್ಯಾಖ್ಯಾನ ಸೃಷ್ಟಿಸಿ, ಒಂದು ಹಂತದಲ್ಲಿ ಸರ್ಕಾರವನ್ನು ಮಣಿಸಿದರು.
ರೈತನು ಕೇವಲ ಅನ್ನದಾತ ಆಗಿದ್ದರೆ ಸಾಲದು, ಶಕ್ತಿದಾತನೂ ಆಗಬೇಕಿದೆ ಎಂಬ ನಿಲವು ಮತ್ತು ಅದರ ಆಧಾರದಲ್ಲಿ ರೂಪಗೊಂಡಿರುವ ಕಾರ್ಯಕ್ರಮಗಳು ಮೋದಿ ಸರ್ಕಾರದ ಭಿನ್ನ ಹಾದಿ.
ಮೊದಲಿಗೆ, ಭಾರತದ ತುಂಡು ಕೃಷಿಭೂಮಿಯನ್ನು ಲಾಭದಾಯಕವಾಗಿಸುವುದಕ್ಕೆ ೨೦೨೦ರಲ್ಲಿ ಮೋದಿ ಸರ್ಕಾರ ಕಂಡುಕೊಂಡ ಪರಿಹಾರ ಎಂದರೆ ಕೃಷಿಕ್ಷೇತ್ರದ ‘ಉಬರೀಕರಣ’. ಉಬರ್ ಅಥವಾ ಒಲಾ ಹೇಗೆ ಆವರೆಗೆ ಇದ್ದ ಕಾರುಗಳನ್ನೇ ಒಂದು ಏಕೀಕೃತ ವ್ಯವಸ್ಥೆಗೆ ತಂದು ಗ್ರಾಹಕರನ್ನು ಸಂಪರ್ಕಿಸಿ ಬಿಸಿನೆಸ್ ಕಟ್ಟಿದವೋ ಅದೇ ಮಾದರಿಯಲ್ಲಿ ರೈತ ಉತ್ಪಾದಕ ಸಂಘಗಳ (ಎಫ್ಪಿಒ- ಫಾರ್ಮರ್ಸ್ ಪ್ರಾಡ್ಯೂಸ್ ಆರ್ಗನೈಸೇಷನ್) ರಚನೆಗೆ ೬,೮೬೫ ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಯಿತು. ಎಫ್ಪಿಒಗಳಿಗೆ ಸಾಲ ಸೌಲಭ್ಯಗಳನ್ನು ನೀಡುವುದಕ್ಕೆ ಹಣದ ವಿನಿಯೋಗವಾಗುತ್ತಿದೆ. ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ.
ಇಷ್ಟಕ್ಕೂ ಈ ಸಂಘಗಳು ಮಾಡುವುದೇನು? ಶೇ. ೮೬ರಷ್ಟು ಸಣ್ಣ ಮತ್ತು ಮಧ್ಯಮಮಟ್ಟದ ಕೃಷಿಕರೇ ಇರುವ ಭಾರತದಲ್ಲಿ ಯಾರೋ ಒಬ್ಬರಿಗೆ ತಮ್ಮ ಹೊಲದಲ್ಲಿ ಬಿತ್ತನೆಗೆ ಟ್ರಾಕ್ಟರ್ ತೆಗೆದುಕೊಳ್ಳುವುದೋ ಅಥವಾ ಇನ್ನಾವುದೋ ಉಳುಮೆ ಉಪಕರಣಗಳನ್ನು ತೆಗೆದುಕೊಳ್ಳುವುದಕ್ಕೆ ಹಣ ಹಾಕುವುದೋ ಕಷ್ಟವಾಗುತ್ತದೆ. ಒಂದು ಪ್ರಾಂತದಲ್ಲಿ ಅಂಥ ಎಲ್ಲ ಸಣ್ಣ ರೈತರಿಗೆ ಅನುಕೂಲಕ್ಕೆ ಬರುವ ಉಪಕರಣಗಳನ್ನು ಈ ಸಂಘಗಳು ತೆಗೆದುಕೊಳ್ಳುತ್ತವೆ. ಅದು ಎಲ್ಲರ ಪ್ರಯೋಜನಕ್ಕೆ ಬರುತ್ತದೆ. ಅಷ್ಟೇ ಅಲ್ಲ, ಮುಂದಿನ ಹಂತದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಿಸುವಿಕೆ, ಮೌಲ್ಯವರ್ಧನೆ ಇಂಥ ಆಯಾಮಗಳಲ್ಲೂ ರೈತ ಉತ್ಪಾದಕ ಸಂಘಗಳ ಸಾಂಘಿಕ ಶಕ್ತಿಯಿಂದ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮುಂದೆ ಮಾರುಕಟ್ಟೆ ಕಲ್ಪಿಸುವಾಗಲೂ ಎಫ್ಪಿಒಗಳಿಗೆ ಚೌಕಾಶಿ ಶಕ್ತಿ ಹೆಚ್ಚಿರುತ್ತದೆ.
೨೦೨೪ರ ಮಧ್ಯಾವಧಿ ಬಜೆಟ್ ಸೇರಿದಂತೆ, ಮೋದಿ ಸರ್ಕಾರದ ಯಾವುದೇ ಬಜೆಟ್ಟಿನಲ್ಲಿ ಕೃಷಿಯನ್ನು ಈಗಿನ ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ಮರುರೂಪಿಸುವ ಪ್ರಯತ್ನಗಳು ಕಾಣುತ್ತಬಂದಿವೆ. ಕೃಷಿಯಲ್ಲಿ ಈ ಬಾರಿ ಕೊಡುತ್ತಿರುವ ದುಡ್ಡು ಎಣ್ಣೆಬೀಜಗಳನ್ನು ಬೆಳೆಯುವ ರೈತರಿಗೆ ಹೆಚ್ಚಾಗಿ ಹೋಗುವ ಹಾಗೆ ಯೋಜಿಸಲಾಗಿದೆ. ಆತ್ಮನಿರ್ಭರ ಎಣ್ಣೆಬೀಜಗಳ ಅಭಿಯಾನ ಅಂತಲೂ ಅದಕ್ಕೆ ಹೆಸರು ಕೊಡಲಾಗಿದೆ. ದೇಶಕ್ಕೆ ಹಾಗೂ ರೈತರಿಗೆ ಇಬ್ಬರಿಗೂ ಪ್ರಯೋಜನಕರವಾಗುವ ವ್ಯಾವಹಾರಿಕ ಆಯಾಮ ಇದು. ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ ಇವತ್ತಿನ ಅಸ್ಥಿರ ಜಾಗತಿಕ ವ್ಯವಸ್ಥೆಯಲ್ಲಿ ಇದಕ್ಕಾಗಿ ದೊಡ್ಡ ಬೆಲೆಯನ್ನೇ ತೆರುತ್ತಿದೆ. ಶೇಂಗಾ, ಸಾಸಿವೆ, ಸೂರ್ಯಕಾಂತಿ ಇತ್ಯಾದಿಗಳನ್ನು ನಮ್ಮ ರೈತರೇ ಪರಿಣಾಮಕಾರಿ ತಂತ್ರಜ್ಞಾನಗಳನ್ನು ಬಳಸಿ ಬೆಳೆಯಲಿ ಎಂಬ ಇಂಗಿತ ಬಜೆಟ್ಟಿನದ್ದು. ಬೆಳೆವಿಮೆಯನ್ನು ಇದಕ್ಕೆ ಪೂರಕವಾಗಿಸುವ ಮಾತುಗಳನ್ನು ಆಯವ್ಯಯವು ಆಡಿದೆ. ರಾಜ್ಯಗಳಲ್ಲಿ ಇವು ಹೇಗೆಲ್ಲ ಅನುಷ್ಠಾನಗೊಳ್ಳಲಿವೆ ಎಂಬುದು ಮಾತ್ರ ಖಚಿತತೆ ಇಲ್ಲದ ವಿಷಯ.
ಬಜೆಟ್ಟಿನಲ್ಲಿ ವ್ಯಕ್ತವಾಗಿರುವ ಇನ್ನೊಂದು ವ್ಯಾವಹಾರಿಕ ಹೆಜ್ಜೆ ಎಂದರೆ ಗೃಹಬಳಕೆಗಾಗಿ ಪೈಪುಗಳ ಜಾಲದ ಮೂಲಕ ವಿತರಿಸುವ ನೈಸರ್ಗಿಕ ಅನಿಲದಲ್ಲಿ ಹಂತಹಂತವಾಗಿ ಕಡ್ಡಾಯವಾಗಿ ಬಯೋಗ್ಯಾಸ್ ಮಿಶ್ರಣ ಮಾಡುವ ಪ್ರಸ್ತಾವ. ಈ ಜೈವಿಕ ಅನಿಲ ಹೆಚ್ಚಾಗಿ ಬರುವುದು ಕೃಷಿತ್ಯಾಜ್ಯಗಳ ಸಂಸ್ಕರಣೆಯಿಂದಲೇ. ಹೀಗೆ ಜೈವಿಕತ್ಯಾಜ್ಯ ಒಟ್ಟುಹಾಕುವುದಕ್ಕೆ ಹಣಕಾಸು ಮತ್ತು ಯಂತ್ರಸಹಾಯಗಳನ್ನು ನೀಡುವುದಾಗಿ ಬಜೆಟ್ ಹೇಳುತ್ತಿದೆ.
ಕೃಷಿ ಅರ್ಥವ್ಯವಸ್ಥೆ ಎಂದಕೂಡಲೇ ಈಗಿರುವ ನೇಗಿಲು ಮತ್ತು ಚಿಂತೆಗಳನ್ನು ಒಟ್ಟೊಟ್ಟಿಗೇ ಹೊತ್ತ ರೈತನ ಚಿತ್ರವಲ್ಲ ಮುಂದೆ ಬರಬೇಕಾದದ್ದು. ಬದಲಿಗೆ, ನವೋದ್ದಿಮೆಯ ಹುಡುಗ-ಹುಡುಗಿಯರು ತಂತ್ರಜ್ಞಾನ ಮತ್ತು ಬ್ರಾಂಡಿಂಗ್ ಮೂಲಕ ಕೃಷಿ ಉತ್ಪನ್ನವನ್ನು ಹೊಸರೂಪದಲ್ಲಿ ಗ್ರಾಹಕರಿಗೆ ಮುಟ್ಟಿಸುವ ಚಿತ್ರ, ಮಹಿಳೆಯರು ಆಹಾರ ಸಂಸ್ಕರಣೆಯ ಹೊಸ ಯಂತ್ರವ್ಯವಸ್ಥೆಗಳನ್ನು ನಿಭಾಯಿಸುತ್ತಿರುವ ಚಿತ್ರ, ಅಂತರ್ಜಲ ಬರಿದಾಗಿಸುವ ನೀರಿನ ಬೇಡಿಕೆ ಬೆಳೆಗಳ ಬದಲಾಗಿ ಸಿರಿಧಾನ್ಯಗಳನ್ನು ಬೆಳೆಸುವುದಕ್ಕೆ ಪ್ರೋತ್ಸಾಹಿಸಿ ಅವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸ್ವಾಸ್ಥ್ಯದ ಬ್ರಾಂಡಿಂಗ್ ಜೊತೆಗೆ ಒಯ್ದಿಡುವ ಯುವಕರ ನವೋದ್ದಿಮೆಗಳ ಚಿತ್ರ, ಹಳ್ಳಿಯ ಒಟ್ಟು ಹೂವಿನ ಫಸಲನ್ನೆಲ್ಲ ಒಟ್ಟುಗೂಡಿಸಿ ದೊಡ್ಡ ವ್ಯಾಪ್ತಿಯಲ್ಲಿ ನಗರಗಳಿಗೆ ಅಲಂಕಾರದ ಹೂಗಳನ್ನು ಕಳುಹಿಸುವ ರೈತ ಉತ್ಪಾದಕ ಸಂಘದ ಚಿತ್ರ. – ಈ ಎಲ್ಲ ಪಾಸಿಟಿವ್ ಚಿತ್ರಣಗಳು ತೆರೆದುಕೊಳ್ಳುವ ಹಾಗೆ ಮೋದಿ ಸರ್ಕಾರ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
- ೧೧ ಕೋಟಿ – ವಾರ್ಷಿಕ ೬,೦೦೦ ರೂಪಾಯಿಗಳ ಪಿಎಂ ಕಿಸಾನ್ ಯೋಜನೆಯ ಹಣ ಪಡೆವ ರೈತರ ಸಂಖ್ಯೆ.
- ರೂ. ೧ ಲಕ್ಷ ಕೋಟಿ – ಕೃಷಿಯ ಮೂಲಸೌಕರ್ಯಾಭಿವೃದ್ಧಿ ನಿಧಿಯಲ್ಲಿರುವ ಹಣ.
- ರೂ. ೧.೩೩ ಲಕ್ಷ ಕೋಟಿ – ಪಿಎಂ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಸಂದಾಯವಾಗಿರುವ ಮೊತ್ತ.
- ರೂ. ೯೩,೦೬೮ ಕೋಟಿ – ೨೦೨೧-೨೬ರ ಅವಧಿಗೆ ಪಿಎಂ ಕೃಷಿ ಸಿಂಚಾಯಿ ಯೋಜನೆಗೆ ವ್ಯಯಿಸಿರುವ ಹಣ.
- ೫೧.೦೫% – ೨೦೧೪-೧೫ ಮತ್ತು ೨೦೨೧-೨೨ರ ಅವಧಿಯಲ್ಲಿ ಹಾಲು ಉತ್ಪಾದನೆಯಲ್ಲಾಗಿರುವ ಏರಿಕೆಯ ಪ್ರಮಾಣ.
- ೨೩೪ ಕೋಟಿ ಲೀಟರ್ – ೨೦೨೧-೨೨ರಲ್ಲಾದ ಎಥೆನಾಲ್ ದಾಸ್ತಾನು. ೨೦೧೩-೧೪ರಲ್ಲಿ ಈ ಪ್ರಮಾಣ ಕೇವಲ ೩೮ ಕೋಟಿ ಲೀಟರ್ ಆಗಿತ್ತು.
ಲಖ್ಪತಿ ದೀದಿಯರಿಂದ ಹಿಡಿದು ಮಹಿಳಾ ಮೀಸಲಿನವರೆಗೆ… ಮೋದಿ ಅವಧಿಯಲ್ಲಿ ಮಹಿಳೆ ಬಲಗೊಂಡ ಬಗೆ ಹೀಗೆ
೨೦೧೯-೨೧ರ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ದೇಶದೆದುರು ಒಂದು ಅಚ್ಚರಿಯ ಆನಂದಕರ ಬೆಳವಣಿಗೆಯನ್ನು ತೆರೆದಿಟ್ಟಿತು. ಸ್ವತಂತ್ರ ಭಾರತದಲ್ಲಿ ಅದೇ ಮೊದಲ ಬಾರಿಗೆ ಪ್ರತಿ ೧೦೦೦ ಪುರುಷರಿಗೆ ೧,೦೨೦ ಮಹಿಳೆಯರು ಇರುವ ಸಂಗತಿ ಈ ನೆಲಕ್ಕೆ ಮೆತ್ತಿದ್ದ ಹೆಣ್ಣು ಭ್ರೂಣಹತ್ಯೆಯ ಕಳಂಕವನ್ನು ಬಹುಮಟ್ಟಿಗೆ ತೊಡೆದುಹಾಕಿತು. ‘ಬೇಟೀ ಬಚಾವೊ, ಬೇಟೀ ಪಢಾವೊ’ ಎಂಬುದು ಕೇವಲ ಘೋಷಣೆಯಾಗಿರದೆ ಮೋದಿ ಸರ್ಕಾರದ ಬಹುದೊಡ್ಡ ಸಕಾರಾತ್ಮಕ ಜನಾಂದೋಲನವಾಗಿತ್ತೆಂಬುದನ್ನು ನಿರೂಪಿಸಿದ ವಿದ್ಯಮಾನ ಇದು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಭಾವನಾತ್ಮಕವಾಗಿ ಮಾತನಾಡಿಕೊಂಡು ಬಂದಿದ್ದ ಸಮಾಜ ಮತ್ತು ಸರ್ಕಾರಗಳು, ಹಾಗೆ ಹೆಣ್ಣು ಓದಲು ಹೋಗುವ ಶಾಲೆಯಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆಯೇ ಎಂಬುದನ್ನು ಗಮನಿಸಿರಲಿಲ್ಲ! ಅದೇ ಕಾರಣಕ್ಕೆ ಹುಡುಗಿಯರು ಅರ್ಧಕ್ಕೆ ಶಾಲೆ ಬಿಡುತ್ತಿದ್ದರು. ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡು ಸಂವೇದನೆ ಮೆರೆದ ಮೋದಿ ಸರ್ಕಾರ, ಎಲ್ಲ ಸರ್ಕಾರೀ ಶಾಲೆಗಳಲ್ಲಿ ಹುಡುಗಿಯರಿಗೆ ಪ್ರತ್ಯೇಕ ಶೌಚವ್ಯವಸ್ಥೆ ಕಲ್ಪಿಸಿತು. ಹತ್ತು ಕೋಟಿಗಳಷ್ಟು ಮನೆಬಳಕೆ ಶೌಚಾಲಯ ಕಟ್ಟಿಸಿದ್ದರಲ್ಲೂ ಇದೇ ಸಂವೇದನೆ ಕೆಲಸ ಮಾಡಿತು. ಮಹಿಳೆಯರ ಪಾಲಿಗೆ ಶೌಚಾಲಯ ಕೇವಲ ಮತ್ತೊಂದು ಸವಲತ್ತಲ್ಲ, ಅದು ಇಜ್ಜತ್ ಘರ್, ಘನತೆಯ ಮನೆ. ಹೊಗೆ ಕುಡಿಯುತ್ತ, ಉರುವಲು ಸಂಗ್ರಹಣೆಗೆಂದೇ ಶ್ರಮ ಮತ್ತು ಸಮಯ ವ್ಯಯಿಸುತ್ತಿದ್ದ ಮಹಿಳೆಗೆ ದೊರಕಿದ ಗ್ಯಾಸ್ ಸಂಪರ್ಕ ಕೇವಲ ಹೆಚ್ಚುವರಿ ಸೌಲಭ್ಯವಲ್ಲ. ಅವಳ ಆರೋಗ್ಯ ಮತ್ತು ಬದುಕಿನ ಗುಣಮಟ್ಟವನ್ನು ಎತ್ತರಿಸಿದ ವಿದ್ಯಮಾನ. ಕಾರ್ಪೋರೇಟ್ ವಲಯಕ್ಕೆ ಬಂದರೆ, ಅಲ್ಲಿ ದುಡಿವ ಮಹಿಳೆಗೆ ಸಂಬಳದ ಮಾತೃತ್ವ ರಜೆಯನ್ನು ೧೪ ವಾರಗಳಿಂದ ೨೬ ವಾರಗಳಿಗೆ ವಿಸ್ತರಿಸಿದ್ದರ ಹಿಂದೆಯೂ ಇದೇ ಸಂವೇದನೆ ಕೆಲಸ ಮಾಡಿದೆ. ಸಂಸತ್ತಿನಲ್ಲಿ ಬಲವಿರುವಾಗ ಅವೆಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆಯನ್ನು ಪಾಸು ಮಾಡಿಸಿದ್ದು ಮೋದಿ ಸರ್ಕಾರದ ಐತಿಹಾಸಿಕ ಸಾಧನೆಗಳಲ್ಲೊಂದು. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ. ೩೩ರ ಮಹಿಳಾ ಪ್ರಾತಿನಿಧ್ಯವನ್ನು ಇದು ಖಾತ್ರಿಪಡಿಸುತ್ತದೆ.
ಅದು ಮನೆ ಕೊಡುವ ಆವಾಸ್ ಯೋಜನೆ ಇದ್ದಿರಬಹುದು, ಗ್ಯಾಸ್-ಜನಧನ ಖಾತೆಗಳಿದ್ದಿರಬಹುದು. ಅಲ್ಲೆಲ್ಲ ಬಿಪಿಎಲ್ ಮಹಿಳೆಯನ್ನೇ ಮುಖ್ಯಸ್ಥೆಯನ್ನಾಗಿಸಲಾಗುತ್ತಿದೆ. ಹೀಗಾಗಿ ಅವರೆಲ್ಲ ಲಖ್ಪತಿ ದೀದಿಯರು.
- ೩.೧೮ ಕೋಟಿ – ಸುಕನ್ಯಾ ಸಮೃದ್ಧಿ ಖಾತೆಗಳು.
- ೨೭ ಕೋಟಿ – ಮಹಿಳೆಯರಿಗೆ ನೀಡಿರುವ ಮುದ್ರಾ ಯೋಜನೆಯ ಸಾಲಗಳ ಸಂಖ್ಯೆ.
- ೩.೯೪ ಕೋಟಿ – ಪಿಎಂ ಸುರಕ್ಷಿತ ಮಾತೃತ್ವ ಯೋಜನೆಯ ಅಡಿ ಹೆರಿಗೆಪೂರ್ವ ತಪಾಸಣೆಗಳ ಸಂಖ್ಯೆ.
- ೩.೦೩ ಕೋಟಿ – ಪಿಎಂ ಮಾತೃವಂದನೆ ಯೋಜನೆಯಲ್ಲಿ ಹಣ ಪಡೆದಿರುವ ಮಹಿಳೆಯರ ಸಂಖ್ಯೆ.
- ೨೭ ಕೋಟಿ – ಜನೌಷಧಿ ಕೇಂದ್ರದಲ್ಲಿ ಕೇವಲ ೧ ರೂಪಾಯಿಗೆ ವಿತರಿಸಲಾಗಿರುವ ಮುಟ್ಟಿನ ಪ್ಯಾಡುಗಳ ಸಂಖ್ಯೆ.
- ೨೦ ಕೋಟಿ – ಕೋವಿಡ್ ಕಾಲದಲ್ಲಿ ಹಣಸಹಾಯ ಪಡೆದ ಮಹಿಳೆಯರು.
- ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಸ್ಲೋಗನ್ ಅಲ್ಲ
ಅದು ಯಾವುದೇ ಪಕ್ಷವಿರಲಿ, “ನಾವು ದೀನ-ದಲಿತರು ಮತ್ತು ಹಿಂದುಳಿದವರ ಪರ’’ ಎಂದು ಹೇಳುತ್ತಿದಂತೆಯೆ ಅದು ಸವಕಲು ಎನ್ನಿಸಿಬಿಡುತ್ತದೆ. ಯಾಕೆಂದರೆ ಎಲ್ಲರೂ ಆ ಮಾತುಗಳನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಢಾಳಾಗಿ ಬಳಸುತ್ತಿದ್ದಾರೆ. ಈ ಮಾತು ನಿಜಕ್ಕೂ ಕೃತಿಯಾಗುವುದು ಹೇಗೆ? ಕೇವಲ ಸಾಮಾಜಿಕ ನ್ಯಾಯದ ಸಚಿವಾಲಯ ಬಜೆಟ್ ಹೆಚ್ಚಿಸಿದರೆ ದಲಿತೋದ್ಧಾರ ಆಗುವುದಾ? ತನ್ನೆಲ್ಲ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಈ ವರ್ಗದ ಒಳಗೊಳ್ಳುವಿಕೆ ಖಾತ್ರಿಪಡಿಸುತ್ತ ಮೋದಿ ಸರ್ಕಾರ ಈ ವಿಭಾಗದಲ್ಲಿ ಪರಿವರ್ತನೆಗಾಗಿ ಪ್ರಯಾಸಪಟ್ಟಿದೆ.
- ೬೦% – ಮೋದಿ ಸರ್ಕಾರದ ಸಚಿವರ ಪೈಕಿ ಎಸ್ಸಿ, ಎಸ್ಟಿ, ಮತ್ತು ಒಬಿಸಿ ವರ್ಗಗಳಿಗೆ ಸೇರಿದವರು.
- ೮೦% – ಪಿಎಂ ಕಿಸಾನ್ ಯೋಜನೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವರ್ಗದ ಫಲಾನುಭವಿ ರೈತರು.
- ೫೧% – ಸಣ್ಣ ವ್ಯಾಪಾರಕ್ಕೆ ನೀಡುವ ಮುದ್ರಾ ಸಾಲದ ಯೋಜನೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವರ್ಗದ ಫಲಾನುಭವಿಗಳ ಪಾಲು.
- ೫೮% – ಸರ್ಕಾರದ ವಿವಿಧ ವಿದ್ಯಾರ್ಥಿವೇತನಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವರ್ಗದ ಫಲಾನುಭವಿಗಳ ಪಾಲು.
- ರೂ. ೭೩೫೧ ಕೋಟಿ – ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಅಡಿ ಎಸ್ಸಿ, ಎಸ್ಟಿ ಸಮುದಾಯದ ಉದ್ಯಮಕರ್ತರಿಗೆ ಸಿಕ್ಕಿರುವ ಹಣ.
- ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ.
- ಡಾ. ಬಿ.ಆರ್. ಅಂಬೇಡ್ಕರರಿಗೆ ಸಂಬಂಧಿಸಿದ ಐದು ಕ್ಷೇತ್ರಗಳನ್ನು ಪಂಚತೀರ್ಥಗಳನ್ನಾಗಿ ಪರಿಗಣಿಸಿ ಅಭಿವೃದ್ಧಿಪಡಿಸಲಾಗಿದೆ.
ಜಗತ್ತಿನ ಯಾವ ಭಾಗದಲ್ಲಿ ನಿಂತರೂ ಭಾರತೀಯನಿಗೀಗ ಭರ್ಜರಿ ಐಡೆಂಟಿಟಿ
ಆಂತರಿಕ ಭದ್ರತೆ ಮತ್ತು ಸುರಕ್ಷತಾ ಭಾವ – ಇದು ಯಾವುದೇ ದೇಶದ ಅಗಾಧ ಅಮೂರ್ತಶಕ್ತಿ. ಅಂದರೆ, ನಾನು ಸುರಕ್ಷಿತ ಎನ್ನುವ ಭಾವನೆಯನ್ನು ಯಾವುದೇ ಮಾನದಂಡದಲ್ಲಿ ಇಂತಿಷ್ಟು ಎಂದು ಸಂಖ್ಯೆ ಇರಿಸಿ ಹೇಳಲಾಗದು. ಆದರೆ ಒಮ್ಮೆ ಈ ಭಾವ ಮೂಡಿದರೆ ಅದು ಆರ್ಥಿಕರಂಗದಲ್ಲಿ ಬೇಕಾದ ಎಲ್ಲ ಸಂಖ್ಯೆಗಳನ್ನು ತಂದುಬಿಡುತ್ತದೆ.
ಒಬ್ಬ ಅಮೆರಿಕದ ಪ್ರಜೆ ಜಗತ್ತಿನ ಯಾವ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಆ ದೇಶವು ಆತನನ್ನು ಮರಳಿ ಕರೆತರಬಲ್ಲದು ಎಂಬ ಇಮೇಜ್ ಒಂದನ್ನು ಹಾಲಿವುಡ್ ಸಿನೆಮಾಗಳು ನಮ್ಮಲ್ಲಿ ತುಂಬಿದ್ದವು. ಈ ಹತ್ತು ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನು ಅಂಥದೇ ಭಾವವನ್ನು ತನ್ನ ದೇಶದ ಬಗ್ಗೆ ಹೊಂದಿದ್ದಾನೆ. ಇದಕ್ಕೆ ಕಾರಣ ಸಿನೆಮಾ ಅಲ್ಲ, ಭಾರತದ ರಾಜತಾಂತ್ರಿಕತೆಯ ನೈಜ ಕಾರ್ಯಾಚರಣೆಗಳು. ಮೈಮೇಲೆ ಬಂದವರಿಗೆ ಖಂಡನೆಯ ಪತ್ರಗಳನ್ನು ಕಳಿಸಿಕೊಂಡಿರುವ ಕಾಲ ಮುಗಿಯಿತು, ಈಗೇನಿದ್ದರೂ ನುಗ್ಗಿ ಹೊಡೆಯುತ್ತೇವೆ ಎಂಬ ಭಾವವೂ ಜೊತೆಯಾಗಿದೆ. ತಾನು ಅತ್ತ ರಷ್ಯಾದ ಜೊತೆಗೂ ಸ್ನೇಹದಿಂದಿರಬಲ್ಲೆ; ಅಮೆರಿಕದ ಜೊತೆಯೂ ಬಾಂಧವ್ಯ ಗಟ್ಟಿಗೊಳಿಸಬಲ್ಲೆ; ಗಲ್ಫ್ ರಾಷ್ಟ್ರಗಳಲ್ಲೂ ಯೋಗವನ್ನು ಪ್ರವೇಶಿಸುವಂತೆ ಮಾಡಿ ಮಂದಿರವನ್ನೂ ಕಟ್ಟಬಲ್ಲೆ, ಅಂತೆಯೇ ಆಫ್ರಿಕಾ ಮತ್ತು ಆಗ್ನೇಯ ಏಷ್ಯದ ರಾಷ್ಟ್ರಗಳ ಜೊತೆ ನಿಂತು ಗ್ಲೋಬಲ್ ಸೌತ್ ಪರಿಕಲ್ಪನೆಯ ಮೂಲಕ ಅಮೆರಿಕ-ಯೂರೋಪ್-ಚೀನಾ-ರಷ್ಯಾಗಳನ್ನೆಲ್ಲ ಚೌಕಾಶಿ ಮೇಜಿಗೆ ಕರೆತರಬಲ್ಲೆ ಎಂಬುದನ್ನು ಭಾರತವು ಮಾತಿನಲ್ಲಲ್ಲದೇ ಕೃತಿಯಲ್ಲಿಟ್ಟು ತೋರಿಸಿದೆ.
- ೨.೯೭ ಕೋಟಿ – ವಂದೇ ಭಾರತ್ ಮತ್ತಿತರ ಉಪಕ್ರಮಗಳ ಮೂಲಕ ಕೋವಿಡ್ ಕಾಲದಲ್ಲಿ ಸಹಾಯ ಪಡೆದ ಪ್ರಯಾಣಿಕರ ಸಂಖ್ಯೆ.
- ೨೩,೦೦೦ – ಉಕ್ರೇನಿನಿಂದ ಭಾರತ ಪಾರು ಮಾಡಿ ತಂದ ಭಾರತೀಯರ ಸಂಖ್ಯೆ.
- ೩,೦೦೦ – ಆಪರೇಷನ್ ಕಾವೇರಿ ಮುಖಾಂತರ ಸುಡಾನಿನಿಂದ ರಕ್ಷಿಸಿ ತಂದ ಭಾರತೀಯರು.
- ೪೬ – ಸಿರಿಯಾದಲ್ಲಿ ಐಎಸ್ಐಎಸ್ ವಶದಲ್ಲಿದ್ದ, ಭಾರತ ಬಿಡಿಸಿಕೊಂಡು ಬಂದ ನರ್ಸ್ಗಳು.
- ೭,೦೦೦ – ಯುದ್ಧಸಂತ್ರಸ್ತ ಸಿರಿಯಾದಿಂದ ಭಾರತ ರಕ್ಷಿಸಿಕೊಂಡುಬಂದಂಥ ಪ್ರಜೆಗಳ ಸಂಖ್ಯೆ.
- ೪೭೪೮ – ಯೆಮೆನ್ ಸಂಘರ್ಷದಿಂದ ಪಾರು ಮಾಡಿಸಿ ತಂದ ಭಾರತೀಯರ ಸಂಖ್ಯೆ.
- ೧೯೬೨ – ಯೆಮೆನ್ ಸಂಘರ್ಷದಲ್ಲಿ ಭಾರತದ ಸಹಾಯದಿಂದ ಪಾರಾಗಿ ಬಂದ ೪೧ ದೇಶಗಳ ಪ್ರಜೆಗಳ ಒಟ್ಟಾರೆ ಸಂಖ್ಯೆ.
- ೧೨,೩೦ – ಭಾರತದ ಜಿ-೨೦ ಅಧ್ಯಕ್ಷೀಯ ವರ್ಷದಲ್ಲಿ ದೇಶದ ಬೇರೆ ಬೇರೆ ನಗರಗಳಲ್ಲಿ ನಡೆದ ಸಭೆಗಳಲ್ಲಿ ಪಾಲ್ಗೊಂಡಿದ್ದ, ಸುಮಾರು ೧೧೦ ದೇಶಗಳಿಂದ ಬಂದಿದ್ದ ಪ್ರತಿನಿಧಿಗಳು.
- ೨೯.೨ ಕೋಟಿ – ವ್ಯಾಕ್ಸಿನ್ ಮೈತ್ರಿ ಅಡಿಯಲ್ಲಿ ಭಾರತವು ನೂರಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿದ ಕೋವಿಡ್ ಲಸಿಕೆಗಳ ಸಂಖ್ಯೆ.
- ೩೩೪% – ಕಳೆದ ಐದು ವರ್ಷಗಳಲ್ಲಿ ಏರಿಕೆ ಕಂಡಿರುವ ರಕ್ಷಣಾ ಪರಿಕರಗಳ ರಫ್ತಿನ ಪ್ರಮಾಣ.
ಲಕ್ಷ್ಮಿಯನ್ನು ಆರಾಧಿಸುವ ನೆಲದಲ್ಲಿ ವಿತ್ತ ಜಗತ್ತು ರೂಪಗೊಳ್ಳುತ್ತಿರುವ ಬಗೆ
ಸಂಪತ್ತು ಸೃಷ್ಟಿಸುವವರನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸಿದ್ದ, ಉದ್ಯಮಿಗಳೆಂದರೆ ಧೂರ್ತರೇ ಆಗಿರುತ್ತಾರೆಂಬಂತೆ ರೂಪಗೊಂಡಿದ್ದ ಭಾರತದ ತಥಾಕಥಿತ ಸಮಾಜವಾದಿ ಧೋರಣೆಯಿಂದ ಜನಮಾನಸವನ್ನು ಹೊರಗೆಳೆದುತಂದಿದ್ದು ಮೋದಿ ಸರ್ಕಾರ. ನವೋದ್ದಿಮೆಗಳಿಗೆ, ಹೊಸ ಉದ್ಯಮ ಸಾಧ್ಯತೆಗಳಿಗೆ ಸ್ಟಾರ್ಟ್ ಅಪ್ ಇಂಡಿಯಾ – ಮೇಕ್ ಇನ್ ಇಂಡಿಯಾ ಥರದ ಕಾರ್ಯಕ್ರಮಗಳ ಮೂಲಕ ಶಕ್ತಿ ತುಂಬಿತು.
ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್ಐ- ಪ್ರೊಡಕ್ಶನ್ ಲಿಂಕ್ಡ್ ಇನ್ಸೆಂಟಿವ್) ಮೂಲಕ ಇವತ್ತು ಜಾಗತಿಕ ಕಂಪೆನಿಗಳು ಸಹ ಭಾರತದಲ್ಲೇ ಉತ್ಪಾದನಾ ಘಟಕ ತೆರೆಯುವಂತೆ ಮಾಡಿದೆ ಮೋದಿ ಸರ್ಕಾರ. ಮೊಬೈಲ್ ಫೋನ್, ಲ್ಯಾಪ್ಟಾಪ್, ವಾಹನ ತಯಾರಿಕೆ, ಔಷಧ ವಲಯ ಹೀಗೆ ಒಟ್ಟು ೧೪ ವಿಭಾಗಗಳಲ್ಲಿ ಪಿಎಲ್ಐ ಯೋಜನೆ ಜಾರಿಯಲ್ಲಿದೆ. ಈ ಬಗೆಯ ಉತ್ತೇಜನಗಳು ಎಂಥ ಪ್ರಭಾವ ಬೀರುತ್ತವೆ ಎಂಬುದಕ್ಕೆ ಮೊಬೈಲ್ ಫೋನ್ ಉತ್ಪಾದನೆ ವಿಭಾಗವನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ೨೦೧೪-೧೫ರಲ್ಲಿ ಭಾರತದಲ್ಲಿ ಉತ್ಪಾದನೆ ಆಗುತ್ತಿದ್ದ ಮೊಬೈಲ್ ಫೋನುಗಳ ಸಂಖ್ಯೆ ೬ ಕೋಟಿ. ೨೦೨೧-೨೨ರಲ್ಲಿ ಈ ಸಂಖ್ಯೆ ೩೧ ಕೋಟಿಯನ್ನು ದಾಟಿತ್ತು.
ಹೀಗೆ ಸಂಪತ್ತಿನ ಸೃಜನ ಒಂದೆಡೆಯಾದರೆ, ಅದಕ್ಕೆ ಬೇಕಾದ ತಂತ್ರಜ್ಞಾನ ಚೌಕಟ್ಟಿನ ನಿರ್ವಹಣೆಯಲ್ಲೂ ಭಾರತ ಮುಂದಿದೆ. ಉದಾಹರಣೆಗೆ, ಭಾರತದ ಸರ್ಕಾರೀ ಸ್ವಾಮ್ಯದ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದ ಯುಪಿಐ ವ್ಯವಸ್ಥೆ ಬೆರಳಂಚಿನಲ್ಲೇ ಪಾವತಿ ವ್ಯವಸ್ಥೆಯನ್ನು ತಂದಿರಿಸಿದೆ. ಈ ಮಾದರಿ ಅಮೆರಿಕದಂಥ ಮುಂದುವರಿದ ದೇಶದಲ್ಲೂ ಇಲ್ಲ. ಇನ್ನೊಂದೆಡೆ, ಭಾರತದ ರುಪೆ ಕಾರ್ಡ್ ಸಹ ಅದುವರೆಗೆ ಕಾರ್ಡ್ ಮಾರುಕಟ್ಟೆಯನ್ನು ಆಳಿಕೊಂಡಿದ್ದ ಮಾಸ್ಟರ್ ಕಾರ್ಡ್, ವೀಸಾಗಳಿಗೆ ಅಸ್ತಿತ್ವವೇ ಅಲುಗಾಡುವಂತೆ ಮಾಡಿದೆ.
- ೪೬% – ೨೦೨೨ರಲ್ಲಿ ಜಾಗತಿಕವಾಗಿ ಆದ ತತ್ ಕ್ಷಣದ ಡಿಜಿಟಲ್ ಪಾವತಿಗಳ ಪೈಕಿ ಭಾರತದ ಪಾಲು.
- ರೂ. ೨೭.೧ ಲಕ್ಷ ಕೋಟಿ – ಕೋವಿಡ್ ಕಾಲದಲ್ಲಿ ಅರ್ಥವ್ಯವಸ್ಥೆ ಉಳಿಸಿಕೊಳ್ಳುವುದಕ್ಕೆ ಭಾರತ ಸರ್ಕಾರ ಹರಿಸಿದ ಹಣ.
- ರೂ. ೬.೬೦ ಲಕ್ಷ ಕೋಟಿ – ವಸೂಲಾಗಿರುವ ಕೆಟ್ಟ ಸಾಲಗಳು.
- ೬೦ ಲಕ್ಷ – ಪಿಎಲ್ಐ ಯೋಜನೆಯು ೫ ವರ್ಷಗಳ ಅವಧಿಯಲ್ಲಿ ಸೃಜಿಸಲಿರುವ ಉದ್ಯೋಗಾವಕಾಶ.
- ೧೦೦+ – ೧ ಬಿಲಿಯನ್ ಡಾಲರುಗಳಿಗಿಂತ ಹೆಚ್ಚಿನ ಮೌಲ್ಯ ಸಾಧಿಸಿ ಯೂನಿಕಾರ್ನ್ ಎಂದು ಕರೆಸಿಕೊಂಡಿರುವ ನವೋದ್ದಿಮೆಗಳು.
- ರೂ. ೩.೬೩ ಲಕ್ಷ ಕೋಟಿ – ತುರ್ತು ಸಾಲ ಸೌಲಭ್ಯದ ಸವಲತ್ತಿನಡಿ ಸಣ್ಣ, ಸೂಕ್ಷ್ಮ, ಮಧ್ಯಮ ಕೈಗಾರಿಕೆಗಳಿಗೆ ಸಿಕ್ಕಿರುವ ಹಣ.
ಅಮೃತಕಾಲದಲ್ಲಿ ಸಾಂಸ್ಕೃತಿಕ ಸ್ವತ್ವದೆಡೆಗೆ ಭಾರತ
ಯಾವಾಗ ಒಂದುಮಟ್ಟಿಗಿನ ಹಣದ ಹರಿವು ಹಾಗೂ ಆರ್ಥಿಕ ಶಕ್ತಿ ಪ್ರಾಪ್ತವಾಗುತ್ತದೆಯೋ ಅಂಥ ಸಮಾಜವು ವಿಶ್ವಾಸವನ್ನು ತಾಳುತ್ತದೆ. ಆ ವಿಶ್ವಾಸವೇ ಕೀಳರಿಮೆಗಳನ್ನು ಮೆಟ್ಟಿ ತನ್ನತನದ ಬಗ್ಗೆ ಹೆಮ್ಮೆಯಿಂದ ಮುಂದುವರಿಯುವುದಕ್ಕೆ ಪ್ರೇರೇಪಿಸುತ್ತದೆ. ಭಾರತದ ವಿಚಾರದಲ್ಲಿ ಆಗಿರುವುದೂ ಅದೇ. ರಸ್ತೆ-ಮನೆ-ಶೌಚಾಲಯಗಳಂಥ ಬೇಸಿಕ್ ಸಂಗತಿಗಳನ್ನು ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲೇ ಸಾಕಾರಗೊಳಿಸುತ್ತ, ಭಾರತವನ್ನು ವಿದೇಶಗಳಿಗೂ ಕಣ್ಣು ಕುಕ್ಕುವ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತಲೇ ಭಾರತೀಯರಿಗೆ ತಮ್ಮ ಪರಂಪರೆ ಮತ್ತು ಸನಾತನ ಬಿಂದುಗಳ ಮೇಲೆ ಆತ್ಮವಿಶ್ವಾಸವನ್ನು ಪುನರುಜ್ಜೀವನಗೊಳಿಸಿತು. ದಶಕದ ಹಿಂದಿನವರೆಗೂ ಮೈಮೇಲೆ ನಮ್ಮ ಸನಾತನದ ಚಿಹ್ನೆಗಳನ್ನು ಧರಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಘೋಷಗಳನ್ನು ಹೇಳುವುದು “ಕೂಲ್’’ ಎಂದು ಕರೆಸಿಕೊಳ್ಳುವ ಸಂಗತಿಗಳಾಗಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿದೆ. ನಾವು ಶಾಲೆ-ಕಾಲೇಜು-ಆಧುನಿಕ ಸೇತುವೆ ಮತ್ತು ಕಟ್ಟಡಗಳನ್ನೂ ಕಟ್ಟುತ್ತೇವೆ, ಅಂತೆಯೇ ಭವ್ಯ ಶ್ರೀರಾಮಮಂದಿರವನ್ನೂ ಕಟ್ಟುತ್ತೇವೆ ಎಂಬ ಪ್ರಬುದ್ಧತೆಗೆ ಭಾರತ ಬಂದು ನಿಂತಿದೆ. ಭಾರತದ ಯುವ ಜನಾಂಗ ಸಹ ತಂತ್ರಜ್ಞಾನ-ಉದ್ದಿಮೆಗಳ ಜತೆಜತೆಗೆ ಅಯೋಧ್ಯೆ-ಕಾಶಿ-ಮಥುರಾಗಳ ಬಗ್ಗೆ, ಧ್ಯಾನ-ಯೋಗಗಳ ಬಗ್ಗೆಯೂ ಆಸಕ್ತಿ ತೋರುತ್ತಿದೆ.
- ೫೦೦ ವರ್ಷಗಳ ಬಳಿಕ ಅಯೋಧ್ಯೆಯ ಶ್ರೀರಾಮಜನ್ಮಸ್ಥಾನದಲ್ಲಿ ಭವ್ಯ ಮಂದಿರ.
- ಭವ್ಯ ಕಾಶಿ ವಿಶ್ವನಾಥ ಕಾರಿಡಾರ್ ಹಾಗೂ ಉಜ್ಜಯನಿ ಮಹಾಕಾಲ ಆವಾರ.
- ವಿದೇಶಗಳಿಗೆ ಕಳ್ಳಸಾಗಣೆಯಾಗಿದ್ದ ೨೩೧ಕ್ಕೂ ಹೆಚ್ಚು ಮೂರ್ತಿ-ಕೆತ್ತನೆಗಳೆಲ್ಲ ೨೦೧೪ರಿಂದೀಚೆ ಭಾರತಕ್ಕೆ ವಾಪಸ್.
- ರೂ. ೨೦೭ ಕೋಟಿ ವೆಚ್ಚದಲ್ಲಿ ಕೇದಾರನಾಥ ಮರು ಅಭಿವೃದ್ಧಿ.
- ರೂ. ೧,೫೮೬ ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಜಾಗಗಳ ಅಭಿವೃದ್ಧಿಗಾಗಿ ಪ್ರಸಾದ ಯೋಜನೆ.
- ಭಾರತದ ಹುತಾತ್ಮ ಯೋಧರಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ, ಪೊಲೀಸ್ ಹುತಾತ್ಮರಿಗಾಗಿ ರಾಷ್ಟ್ರೀಯ ಪೊಲೀಸ್ ಸ್ಮಾರಕ.
- ಸಿಖ್ ಶ್ರದ್ಧಾಳುಗಳಿಗೆ ಕರ್ತಾರಪುರ ಕಾರಿಡಾರ್ ನಿರ್ಮಾಣ.
ಎಷ್ಟೆಲ್ಲ ವಲಯ… ಏನೆಲ್ಲ ಸಾಧನಾ ಬಿಂದುಗಳು!
ಮೂಲಸೌಕರ್ಯಾಭಿವೃದ್ಧಿ, ಬಾಹ್ಯಾಕಾಶ, ಶಿಕ್ಷಣ, ಆರೋಗ್ಯ ಸೇವೆಗಳು, ಗ್ರೀನ್ ಹೈಡ್ರೋಜನ್-ಸೆಮಿಕಂಡಕ್ಟರ್ ಥರದ ನವ ತಂತ್ರಜ್ಞಾನ ವಲಯ… ಹೀಗೆ ಹಲವು ವಿಭಾಗಗಳಲ್ಲಿ ಅಂಕಿಅಂಶಗಳ ಸಮೇತ ಮೋದಿ ದಶಕದ ಸಾಧನೆಗಳನ್ನು ಪಟ್ಟಿ ಮಾಡಬಹುದು. ಪ್ರತಿಯೊಂದೂ ಪ್ರತ್ಯೇಕ ಲೇಖನವೇ ಆದೀತು. ಹೀಗಾಗಿ, ಈ ಕೊನೆಯ ಭಾಗದಲ್ಲಿ ಎಲ್ಲ ವಲಯಗಳ ಮಿಶ್ರಣವನ್ನು ಆಸಕ್ತಿಕರ ಬಿಂದುಗಳಲ್ಲಿ ಕಣ್ಣೆದುರು ತಂದುಕೊಳ್ಳೋಣ.
- ೨೦೧೪ರಲ್ಲಿ ೭೪ ವಿಮಾನನಿಲ್ದಾಣಗಳಿದ್ದವು. ಈಗದು ದ್ವಿಗುಣಗೊಂಡು ೧೪೮ ಆಗಿದೆ.
- ೨೦೧೪ರಲ್ಲಿ ೫ ನಗರಗಳಲ್ಲಿದ್ದ ಮೆಟ್ರೊ ಸಾರಿಗೆ ಈಗ ೨೦ ನಗರಗಳಿಗೆ ವಿಸ್ತರಿಸಿದೆ.
- ೨೦೧೪ರಲ್ಲಿ ೯೧,೨೮೭ ಕಿ.ಮೀ. ಇದ್ದಿದ್ದ ರಾಷ್ಟ್ರೀಯ ಹೆದ್ದಾರಿ, ೨೦೨೩ರಲ್ಲಿ ೧,೪೫,೧೫೫ ಕಿ.ಮೀ.ವರೆಗೆ ವಿಸ್ತರಿಸಿದೆ.
- ೨೦೧೪ರಿಂದೀಚೆಗೆ ೩.೨೮ ಲಕ್ಷ ಕಿ.ಮೀ. ಗ್ರಾಮೀಣ ರಸ್ತೆಗಳ ನಿರ್ಮಾಣವಾಗಿದ್ದು, ಶೇ. ೯೯ರಷ್ಟು ಗ್ರಾಮೀಣ ಭಾರತವೀಗ ರಸ್ತೆ ಹೊಂದಿದೆ.
- ೫೦ ವರ್ಷಗಳ ಹಿಂದೆ ಕೇರಳದ ಕೊಲ್ಲಂ ಬೈಪಾಸ್ ರಸ್ತೆ ಯೋಜಿತವಾಗಿತ್ತು. ಅನುಷ್ಠಾನಕ್ಕೆ ಮೋದಿ ಸರ್ಕಾರವೇ ಬರಬೇಕಾಯಿತು.
- ೧೯೯೭ರಲ್ಲಿ ಬ್ರಹ್ಮಪುತ್ರಾ ನದಿ ಮೇಲೆ ಯೋಜಿಸಿದ್ದ ರಸ್ತೆ-ರೈಲು ಸೇತುವೆಯನ್ನು ಮೋದಿ ಸರ್ಕಾರ ಬಂದು ಪೂರೈಸಿತು.
- ೨೦೦೦ರಲ್ಲಿ ಯೋಜಿಸಲಾಗಿದ್ದ ಅಟಲ್ ಸುರಂಗ ಮಾರ್ಗವನ್ನು ಸಮುದ್ರಮಟ್ಟದಿಂದ ೧೦,೦೦೦ ಅಡಿಗಳ ಮೇಲೆ ಮೋದಿ ಸರ್ಕಾರವು ಸಾಕಾರಗೊಳಿಸಿತು.
- ೧.೯೮ ಲಕ್ಷ ಗ್ರಾಮ ಪಂಚಾಯತಿಗಳನ್ನು ಆಪ್ಟಿಕಲ್ ಫೈಬರ್ ಜಾಲದ ಮೂಲಕ ಸಂಪರ್ಕಿಸಲಾಗಿದೆ.
- ರೈಲ್ವೆಯಲ್ಲಿ ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲುಗಳು ಪ್ರಯಾಣದ ಕಲ್ಪನೆಗೆ ಹೊಸ ಮೆರುಗು ಕೊಟ್ಟಿವೆ.
- ಮಾರ್ಚ್ ೨೦೧೯ರಿಂದ ಹಿಡಿದು ೩೪ ತಿಂಗಳುಗಳವರೆಗೆ ಭಾರತದಲ್ಲಿ ಒಂದೇ ಒಂದು ರೈಲು ಅವಘಡದ ಪ್ರಾಣಹಾನಿಯೂ ಘಟಿಸಿರಲಿಲ್ಲ. ಅಪಘಾತ ತಡೆಗೆ ಕವಚ್ ಎಂಬ ತಂತ್ರಜ್ಞಾನ ವ್ಯವಸ್ಥೆ ಸಾಕಾರವಾಗುತ್ತಿದೆ.
- ಮೋದಿ ದಶಕದಲ್ಲಿ ಸೇರ್ಪಡೆಯಾಗಿರುವ ವೈದ್ಯವ್ಯವಸ್ಥೆಗೆ ಸೇರ್ಪಡೆಯಾಗಿವೆ, ೧೫ ಹೊಸ ಏಮ್ಸ್ ಹಾಗೂ ೨೨೫ ವೈದ್ಯ ಕಾಲೇಜುಗಳು.
- ೨೦೧೪ರಿಂದೀಚೆಗೆ ೬೯,೬೬೩ ವೈದ್ಯ ಸೀಟುಗಳು ಹೆಚ್ಚುವರಿಯಾಗಿವೆ.
- ೨೦೧೪ರಲ್ಲಿ ಭಾರತವು ಸುಗಮ ಬಿಸಿನೆಸ್ ಸೂಚ್ಯಂಕದಲ್ಲಿ ೧೪೨ನೇ ಸ್ಥಾನದಲ್ಲಿತ್ತು. ೨೦೧೯ರಲ್ಲಿ ೬೩ನೇ ಸ್ಥಾನಕ್ಕೆ ಬಂದಿದೆ.
- ೨೦೨೨-೨೩ರ ಹಣಕಾಸು ವರ್ಷದಲ್ಲಿ ಭಾರತವು ರಫ್ತು ಮಾಡಿದ್ದ ವಸ್ತುಗಳ ಮೌಲ್ಯ ೪೪೮ ಬಿಲಿಯನ್ ಡಾಲರ್. ಇದು ಪಾಕಿಸ್ತಾನದ ಒಟ್ಟು ಜಿಡಿಪಿ ಮೌಲ್ಯಕ್ಕಿಂತ (೩೫೦ ಬಿಲಿಯನ್ ಡಾಲರ್) ಅಧಿಕ.
- ೨೦೧೪ರಲ್ಲಿ ಭಾರತದಲ್ಲಿದ್ದ ಸ್ಟಾರ್ಟಪ್ಗಳ ಸಂಖ್ಯೆ ೩೫೦. ೨೦೨೨-೨೩ರಲ್ಲಿ ನವೋದ್ದಿಮೆಗಳ ಸಂಖ್ಯೆ ಬರೋಬ್ಬರಿ ೯೦,೦೦೦!
- ಶೇ. ೭೬ರಷ್ಟು ಇಳಿಕೆ ಕಂಡಿವೆ, ಈಶಾನ್ಯ ರಾಜ್ಯಗಳ ಬಂಡುಕೋರ ಚಟುವಟಿಕೆಗಳು ಈ ಒಂದು ದಶಕದಲ್ಲಿ.
- ೨೦೧೪ರ ಸ್ಥಿತಿಗೆ ಹೋಲಿಸಿದರೆ ಭಾರತದ ಸೌರಶಕ್ತಿ ಉತ್ಪಾದನೆ ಸಾಮರ್ಥ್ಯ ಬರೋಬ್ಬರಿ ಶೇ. ೨೩೦೦ರಷ್ಟು ಏರಿಕೆ ಕಂಡಿದೆ.
- ೨೦೧೪ರಲ್ಲಿ ತೈಲ-ಕಲ್ಲಿದ್ದಲು ಹೊರತಾದ ನವೀಕೃತ ಇಂಧನ ಮೂಲಗಳ ಸಾಮರ್ಥ್ಯ ೭೬.೩೮ ಗಿಗಾವ್ಯಾಟ್. ಕಳೆದ ಒಂಭತ್ತು ವರ್ಷಗಳಲ್ಲಿ ಅದು ೧೭೨ ಗಿಗಾವ್ಯಾಟ್ ಸಾಮರ್ಥ್ಯಕ್ಕೆ ವಿಸ್ತಾರವಾಗಿದೆ.
- ಖೇಲೊ ಇಂಡಿಯಾ, ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಇತ್ಯಾದಿ ಕಾರ್ಯಕ್ರಮಗಳ ಮೂಲಕ ೨೦೨೦ರ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತ ಉತ್ಕೃಷ್ಟ ಸಾಧನೆ ತೋರಿತು.
- ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆಗೆ ಬೇಕಾದಂತೆ ಭಾರತದ ಯುವಪೀಳಿಗೆಯನ್ನು ಕೌಶಲಯುಕ್ತರನ್ನಾಗಿ ಮಾಡಲಿದೆ.
- ಉಪಕರಣಗಳಿಂದ ಹಿಡಿದು ವಿತರಣೆವರೆಗೆ ೫ಜಿ ವಿಭಾಗದಲ್ಲಿ ಎಲ್ಲವನ್ನೂ ದೇಶೀಯವಾಗಿ ಸಾಧಿಸಿರುವ ದೇಶ ಭಾರತ.
- ಚಂದ್ರನ ದಕ್ಷಿಣಧ್ರುವದಲ್ಲಿ ಶೋಧನಾ ಯಂತ್ರ ಇಳಿಸಿದ ಜಗತ್ತಿನ ಏಕೈಕ ದೇಶ ಭಾರತ. ಒಂದೇ ಉಡ್ಡಯನದಲ್ಲಿ ೧೦೪ ಉಪಗ್ರಹಗಳನ್ನು ನಭಕ್ಕೇರಿಸಿಯೂ ವಿಶ್ವದಾಖಲೆ ಬರೆದಿದೆ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ.
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಭಾರತವನ್ನು ಮುನ್ನಡೆಸಬೇಕಾದ, ಹವಾಮಾನ ಬದಲಾವಣೆಯ ಜಾಗತಿಕ ಸವಾಲಿನಲ್ಲಿ ಭಾರತದ ಪರವಾಗಿ ಜಗತ್ತಿದೆ. ದಿಗ್ದರ್ಶನ ಮಾಡಬೇಕಿರುವ, ಪಾಶ್ಚಾತ್ಯರ ವಸಾಹತುಶಾಹಿ ಹಾಗೂ ಚೀನಾದ ಏಕಚಕ್ರಾಧಿಕಾರದ ಮಾದರಿಗಳಿಗೆ ಭಿನ್ನವಾಗಿ ಭಾರತ ಮಾದರಿ ನಿರ್ಮಿಸಬೇಕಿರುವ, ಜಗತ್ತಿಗೆ ಯೋಗ, ಆಧ್ಯಾತ್ಮ, ಪೋಷಕಾಂಶಯುಕ್ತ ಸಿರಿಧಾನ್ಯಗಳನ್ನು ಉಣಿಸಬೇಕಿರುವ ಯುಗದ ಬಾಗಿಲಲ್ಲಿ ನಿಂತಿರುವ ಹೊತ್ತಿನಲ್ಲಿ ಬಂದಿದೆ ಭಾರತದ ಲೋಕ ಸಮರ. ಜನರ ನಿರ್ಧಾರ ಹೇಗಿರಲೆಂಬುದಕ್ಕೆ ಈ ದಶಕದ ಮೋದಿ ಹಾದಿಯೇ ಉತ್ತರ.
(ಪತ್ರಕರ್ತ. ಪ್ರಚಲಿತ ವಿದ್ಯಮಾನ, ಅಂತಾರಾಷ್ಟ್ರೀಯ ಆರ್ಥಿಕ ರಾಜಕೀಯ, ನವ ತಂತ್ರಜ್ಞಾನಗಳು ಈ ಎಲ್ಲ ವಿಭಾಗಗಳಲ್ಲಿ ಕಥನಕಾರ)