ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯು ವಿಕೋಪಕ್ಕೆ ಹೋಗುತ್ತಿದೆ. ಶಾಲೆಗಳಲ್ಲಿ ಹಿಂದೂವಿರೋಧಿ ನೀತಿ, ಹಿಂದೂ ದೇವಾಲಯಗಳ ಮೇಲೆ ದಬ್ಬಾಳಿಕೆ, ರಾಮಮಂದಿರದ ವಿಚಾರದಲ್ಲಿ ನಡೆದುಕೊಂಡ ರೀತಿ, ರಾಷ್ಟ್ರೀಯವಾದಿಗಳ ಬಂಧನ, ವಕ್ತಾರರುಗಳ ಮೇಲೆ ಜಾತಿನಿಂದನೆಯ ಕೇಸ್ ದಾಖಲಿಸಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ – ಇವೆಲ್ಲ ತುಷ್ಟೀಕರಣದ ನೀತಿಗೆ ಭರಪೂರ ಪುರಾವೆಗಳನ್ನು ಒದಗಿಸುತ್ತಿವೆ. ವಿರೋಧಾಭಾಸಗಳನ್ನೇ ಮೈವೆತ್ತಿ ಸರ್ಕಾರ ನಡೆಸುವವರು ರಾಜ್ಯದ ಸಮೃದ್ಧಿಯ ಬಗೆಗೆ ಆಸ್ಥೆ ವಹಿಸುತ್ತಿಲ್ಲ. ಕೇವಲ ಗ್ಯಾರಂಟಿಗಳ ಮೂಲಕ ಜನತೆ ಸುಖವಾಗಿದ್ದಾರೆ ಎಂದು ಸರ್ಕಾರವೇನಾದರೂ ಪರಿಭಾವಿಸಿದ್ದರೆ ಅದಕ್ಕಿಂತ ಮಿಗಿಲಾದ ಅಮಾಯಕತೆ ಇಲ್ಲ.
ಪೌದನಪುರದ ಅರಸನ ಸಹನೆಯ ಕಟ್ಟೆಯೊಡೆದಿತ್ತು. ತಪ್ಪುಗಳ ಮೇಲೆ ತಪ್ಪೆಸಗುವವನ ಅಣ್ಣನೋ ತಮ್ಮನೋ ಬಂಧುವೋ ಯಾರಾದರೇನಂತೆ ಬಗ್ಗುಬಡಿದು ಬಿಡಬೇಕು ಎಂಬುದಾಗಿ ಆತ ದೃಢವಾಗಿ ಸಂಕಲ್ಪಿಸಿದ. ತನ್ನ ಆಯುಧಾಗಾರದಲ್ಲಿ ಹುಟ್ಟಿದ ಚಕ್ರರತ್ನ ಲೋಕವನ್ನೆಲ್ಲ ತನ್ನ ಬೊಕ್ಕಸಕ್ಕೆ ಹಾಕುತ್ತದೆ ಎನ್ನುವ ಸೊಕ್ಕು ಭರತೇಶ ಚಕ್ರವರ್ತಿಯನ್ನು ಇನ್ನಿಲ್ಲದೆ ಆವರಿಸಿತ್ತು. ಆದರೆ ತನ್ನನ್ನು ಯಾರೂ ಪ್ರಶ್ನೆ ಮಾಡಲಾರರೆನ್ನುವ ಆತನ ಅಹಂಕಾರವೇ ಆತನನ್ನು ಮುಳುಗಿಸಲು ಮುಹೂರ್ತವಿರಿಸುತ್ತಿತ್ತು. ಇತ್ತ ಬಾಹುಬಲಿಯೂ ಕೆರಳಿದ. ದೃಷ್ಟಿಯುದ್ಧ, ಮಲ್ಲಯುದ್ಧ, ಜಲಯುದ್ಧ ಮೊದಲಾದ ಯುದ್ಧಗಳಲ್ಲಿ ಎದುರಾದ ಭರತನನ್ನು ಬಾಹುಬಲಿ ಅನಾಯಾಸವಾಗಿ ಬಡಿದಟ್ಟಿ ಹಣ್ಣು ಮಾಡಿದ. ಹೀನಾಯ ಸೋಲು ಕಂಡ ಭರತೇಶ ಜರ್ಜರಿತನಾಗಿಹೋದ. ಸಿಟ್ಟು ಏರಿ ವಿಪರೀತವಾದದ್ದು ಬಾಹುಬಲಿಗೂ ಬೇಸರ ತರಿಸಿತು. ಕಡೆಗೊಮ್ಮೆ ಈ ರಾಜ್ಯ, ಅಧಿಕಾರ ಎಂಬುದೆಲ್ಲ “ಸೋದರರೊಳ್ ಸೋದರರಂ ಕಾದಿಸುವುದು, ಸುತನ ತಂದೆಯೊಳ್ ಬಿಡದುತ್ಪಾದಿಸುವುದು ಕೋಪಮನ್ ಅಳವು ಈ ದೊರೆತು ಎನೆ, ತೊಡರ್ವುದೆಂದು ರಾಜ್ಯಶ್ರೀಯೊಳ್” ಎಂದು ಸರ್ವವನ್ನೂ ಬಿಸುಟೆದ್ದು ವೈರಾಗಿಯಾಗಿ ಅಡವಿಗೆ ನಡೆದ. ಇದು ಭರತವರ್ಷದಲ್ಲಿ ಖುದ್ದು ತಮ್ಮ ಅಣ್ಣನನ್ನು ಪ್ರಶ್ನಿಸಿದ ಒಂದು ನಿದರ್ಶನ. ತಪ್ಪನ್ನು ಖಂಡತುAಡವಾಗಿ ವಿಮರ್ಶಿಸುವುದು ಈ ಮಣ್ಣಿಗೆ ಹೊಸತೇನಲ್ಲ.
ಪ್ರಹ್ಲಾದನೆನ್ನುವ ಪುಟ್ಟ ಬಾಲಕ ಹಿರಣ್ಯಕಶ್ಯಪನನ್ನೇ ಪ್ರಶ್ನಿಸಿ ಮೇಲೆ ಕೆಳಗೆ ಮಾಡಿದ್ದ. ಕಲಿಯುವ ಕಾಲದಲ್ಲಿ ಲವ-ಕುಶರೇ ಯಜ್ಞಾಶ್ವವನ್ನು ಬಂಧಿಸಿ ತಡೆದವರಿಗೆ ಮರುಪ್ರಶ್ನೆ ಎಸೆದಿದ್ದರು. ಇದೆಲ್ಲ ಪುರಾಣಗಳಲ್ಲಾದರೆ, ಅದರ ತರುವಾಯ ಹನ್ನೆರಡನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣ ಶರಣರೊಂದಿಗೆ ಸಮಾಜದ ಅನಿಷ್ಟಗಳನ್ನೇ ಪ್ರಶ್ನೆ ಮಾಡಿದ್ದರು. ಶಂಕರ, ಮಧ್ವ, ರಾಮಾನುಜರೆಲ್ಲ ಪ್ರಶ್ನೆ ಮಾಡದೆ ಸುಕಾಸುಮ್ಮನೆ ಯಾವುದನ್ನೂ ಒಪ್ಪಿದವರಲ್ಲ. ದೇಶದ ಪಾಲಿಗೆ ಕಂಟಕವಾಗಿದ್ದ ಸತಿಪದ್ಧತಿಯನ್ನು ಪ್ರಶ್ನಿಸಿ ರಾಜಾ ರಾಮಮೋಹನ್ರಾಯ್ ಸಮಾಜದ ಅಭಿವ್ಯಕ್ತಿಯೇ ಆಗಿಹೋದರು. ಸರ್ವಮಾನ್ಯ ಭೀಮರಾವ್ ಅಂಬೇಡ್ಕರರಂತೂ ತಲೆಮಾರುಗಳಿಂದ ಇದ್ದ ಪಿಡುಗಿನ ವಿರುದ್ಧ ಅಹೋರಾತ್ರಿ ಹೋರಾಡಿ ಇಡೀ ಸಮಾಜದ ಕಣ್ತೆರೆಸಿದರು, ಮಾತ್ರವಲ್ಲ ಸಾಮಾಜಿಕ ಸಮಾನತೆಯ ಉತ್ತರ ದೊರಕಿಸಿದರು. ಅಜ್ಞಾನದ ಪೊರೆಗಳನ್ನು ಕಿತ್ತು ಬಿಸುಟಿದ್ದರು.
ಇಂತಿಪ್ಪ ಘನತೆಯಿರುವ ಈ ಮಣ್ಣಿಗೆ ಪ್ರಶ್ನಾ ಮನೋಭಾವದ ಪಾಠ ಹೇಳ ಹೊರಟವರದೆಂತಹ ಭಂಡತನ?
ಬರೇ “ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ” ಎನ್ನುವ ಉಕ್ತಿಗಳನ್ನೇ ಬದಲಾಯಿಸಿ ಶಿಕ್ಷಣಕ್ಷೇತ್ರವನ್ನೇ ಮಾರ್ಪಾಡು ಮಾಡಿದ್ದೇವೆ ಎನ್ನುವ ಮಂತ್ರಿಮಾಗಧರೆಲ್ಲ ಗೆದ್ದಲುಹಿಡಿದು ಬೀಳುತ್ತಿರುವ ಸರಕಾರಿ ಶಾಲೆಗಳ ಕುರಿತಾಗಿ ಏಕೆ ದಿವ್ಯಮೌನ ತಳೆದಿದ್ದಾರೆ? ಏಕೋಪಾಧ್ಯಾಯ ಶಾಲೆಗಳ ಬಗೆಗೇಕೆ ಕಣ್ಣಿದ್ದೂ ಕುರುಡರಂತಿದ್ದಾರೆ? ಶೌಚಾಲಯಗಳೇ ಇಲ್ಲದಿರುವ ವರದಿಗಳೇಕೆ ಇವರ ಅವಗಾಹನೆಗೆ ತಲಪುತ್ತಿಲ್ಲ? ವಾಕ್ಯ ಸರಿಯಾಗಿ ಓದಿ ಮುಗಿಸಲು ಬಾರದವರು, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ನಾಲ್ಕು ಜನರಿಗೆ ಪ್ರೇರಣೆಯಾಗಬೇಕಿದ್ದ ಇಲಾಖಾ ಮಂತ್ರಿಯೇ “ನಾನಿನ್ನೂ ಪುಸ್ತಕಗಳನ್ನೇ ಓದಿಲ್ಲ” ಎನ್ನುವಲ್ಲಿಯವರೆಗೆ ಲಜ್ಜೆಗೆಟ್ಟು ಹೇಳಿಕೆ ನೀಡುತ್ತಾರೆಂದರೆ, ಶಿಕ್ಷಣ ಇಲಾಖೆಯನ್ನು ನೈಜವಾಗಿ ನಡೆಸುತ್ತಿರುವ ತೆರೆಯ ಹಿಂದಿನ ನಾಯಕರು ಯಾರು? ಬೋರ್ಡಿನಲ್ಲೋ ಫಲಕದಲ್ಲೋ ಬರೆದರಷ್ಟೇ ಸಾಕೇ? ಪ್ರಶ್ನೆಗೆ ಉತ್ತರದಾಯಿತ್ವ ಪಾರದರ್ಶಕವಾಗೇ ಇರಬೇಕಲ್ಲವೆ? ಸಾರ್ವಜನಿಕ ಆಸ್ಪತ್ರೆಗಳ ಮೇಲ್ಚಾವಣಿಗೆ ತಮ್ಮ ವಂಶದ ಹೆಸರನ್ನು ಅಚ್ಚು ಹಾಕಿದುದರ ಕುರಿತಾಗಿ ಮಹಾನುಭಾವರಿಗೆ ಉತ್ತರಿಸಲು ಇನ್ನೂ ವ್ಯವಧಾನಗಳಿಲ್ಲ. ಶಾಲೆಗಳಲ್ಲಿ ಹಿಂದೂ ದೇವರುಗಳ ನಿರಂತರ ಅವಹೇಳನವನ್ನು ಪ್ರಶ್ನಿಸದೆಯೇ ಈ ಸರ್ಕಾರದ ಕಾರ್ಯತಂತ್ರ ಸುಮ್ಮನಾಗಿದೆ. ಹಿಜಾಬು ಧರಿಸಿ ಪ್ರತ್ಯೇಕತೆ ಸಾರುವವರ, ನಮಾಜಿಗಾಗಿ ಸ್ಥಳ ಕೇಳುವವರ ಕುರಿತಾಗಿ ಇವರಿಗೆ ಯಾವ ಪ್ರಶ್ನೆಗಳೂ ಇಲ್ಲ. ಕೃಷ್ಣನಿಲ್ಲ, ನಾಗದೇವರುಗಳಿಲ್ಲ, ರಾಮ ಎನ್ನುವುದೊಂದು ಮಿಥ್ಯೆ ಎಂದೆಲ್ಲ ಹಳಿಯುವ, ಹುಂಡಿಯ ಕಾಸು ನಿಮ್ಯಾರದೂ ಅಲ್ಲ ಎನ್ನುವ ಸರ್ಕಾರದ ನಿಲವುಗಳ ಬಗೆಗೆ ಪ್ರಶ್ನೆ ಯಾರಿಂದ ಮಾಡಿಸೋಣ?
ಜಿದ್ದಿಗೆ ಬಿದ್ದಂತೆ ಬೋರ್ಡು ಬದಲಾಯಿಸಿದವರ ಕಾರ್ಯತತ್ಪರತೆಯೇ ಒಂದು ಬಹುದೊಡ್ಡ ಸೊನ್ನೆ ಆಗಿದೆ. ಇವರ ಪಾಲಿಗೆ ಪ್ರಶ್ನಿಸುವುದು ಎಂದರೆ ಬರೇ ವಿರೋಧಾಭಾಸಗಳ ಸಾಮ್ರಾಜ್ಯ ಸೃಷ್ಟಿಸುವುದು. ಅದರಾಚೆಗೆ ಅನುಷ್ಠಾನವಾಗಲಿ, ಸಮಸ್ಯೆಗೆ ಸ್ಪಂದಿಸುವ ಮಿಡಿತದ ಲವಲೇಶವಾಗಲಿ ಇವರ ಕ್ರಿಯೆಯಲ್ಲಿ ಕಾಣದು. ‘ಸಮಾಜವಾದಿ’, ‘ಉದಾರವಾದಿ’ ಮೊದಲಾದ ಕ್ಲೀಷೆಪ್ರಣೀತ ಬಿರುದುಗಳನ್ನು ದಿವಂಗತ ದೇವರಾಜ್ ಅರಸರ ಹೆಸರಿನಿಂದ ತನ್ನ ಹೆಸರಿಗೆ ಹೈಜಾಕ್ ಮಾಡಲು ಈಗಿನ ನಾಯಕಮಣಿಗಳು ಪ್ರಗತಿಪರರ, ವಿಚಾರವಾದಿ ಬುದ್ಧಿಜೀವಿಗಳ ಮುಖಾಂತರ ವ್ಯವಸ್ಥಿತವಾಗಿ ಪ್ಲಾö್ಯನ್ ಮಾಡಿದ್ದಾರೆಂಬುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನೇದಿನೇ ತುಷ್ಟೀಕರಣದ ನೀತಿಯು ವಿಕೋಪಕ್ಕೆ ಹೋಗುತ್ತಿದೆ. ಶಾಲೆಗಳಲ್ಲಿ ಹಿಂದೂವಿರೋಧಿ ನೀತಿ, ಹಿಂದೂ ದೇವಾಲಯಗಳ ಮೇಲೆ ದಬ್ಬಾಳಿಕೆ, ರಾಮಮಂದಿರದ ವಿಚಾರದಲ್ಲಿ ನಡೆದುಕೊಂಡ ರೀತಿ, ರಾಷ್ಟ್ರೀಯವಾದಿಗಳ ಬಂಧನ, ವಕ್ತಾರರುಗಳ ಮೇಲೆ ಜಾತಿನಿಂದನೆಯ ಕೇಸ್ ದಾಖಲಿಸಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ – ಇವೆಲ್ಲ ತುಷ್ಟೀಕರಣದ ನೀತಿಗೆ ಭರಪೂರ ಪುರಾವೆಗಳನ್ನು ಒದಗಿಸುತ್ತಿವೆ. ವಿರೋಧಾಭಾಸಗಳನ್ನೇ ಮೈವೆತ್ತಿ ಸರ್ಕಾರ ನಡೆಸುವವರು ರಾಜ್ಯದ ಸಮೃದ್ಧಿಯ ಬಗೆಗೆ ಆಸ್ಥೆ ವಹಿಸುತ್ತಿಲ್ಲ. ಬರೇ ಗ್ಯಾರಂಟಿಗಳ
ಮೂಲಕ ಜನತೆ ಸುಖವಾಗಿದ್ದಾರೆ ಎಂದು ಸರ್ಕಾರವೇನಾದರೂ ಪರಿಭಾವಿಸಿದ್ದರೆ ಅದಕ್ಕಿಂತ ಮಿಗಿಲಾದ ಅಮಾಯಕತೆ ಇಲ್ಲ.
ಗ್ಯಾರಂಟಿ ಯೋಜನೆಗಳ ಮೂಲಕ ದುಡ್ಡು ಕೊಟ್ಟುಬಿಟ್ಟರೆ ಬಡಜನರಿಗೆ, ರೈತಾಪಿ ವರ್ಗದವರ ಬದುಕು ಹಸನಾಗುತ್ತದೆ ಎಂದು ತುತ್ತೂರಿ ಊದುತ್ತಿರುವ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಜ್ಯಸರ್ಕಾರದ ಕಿಸಾನ್ ಸಮ್ಮಾನ್ ನಿಧಿಯನ್ನು ಏಕೆ ನಿಲ್ಲಿಸಿತು ಎಂಬುದಕ್ಕೆ ಉತ್ತರವೇ ಕೊಡುತ್ತಿಲ್ಲ. ದ್ವೇಷ ರಾಜಕಾರಣದ ಸಲುವಾಗಿ ರಾಜ್ಯಸರ್ಕಾರದಿಂದ ರೈತರಿಗೆ ನೇರ ಜಮೆಯಾಗುತ್ತಿದ್ದ ಎರಡು ಸಾವಿರ ರೂಪಾಯಿ ಏಕಾಏಕಿ ನಿಂತುಹೋಗಿದೆ. ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿರಿಸಿದ್ದ ೧೧,೧೫೦ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಕಸಿದುಕೊಂಡಿರುವುದು ಯಾವ ರೀತಿಯ ಸಬಲೀಕರಣವೆಂಬುದೇ ತಿಳಿಯುತ್ತಿಲ್ಲ. ಕೃಷಿಗೆಂದು ಮೀಸಲಿರಿಸುತ್ತಿದ್ದ ಹಣದಲ್ಲಿ ಪ್ರಸಕ್ತ ವರ್ಷದಲ್ಲಿ ೮೪೦ ಕೋಟಿ ರೂಪಾಯಿ ಕಡಿತಗೊಳಿಸಲಾಗಿದೆ. ಗ್ರಾಮೀಣಾಭಿವೃದ್ದಿಗೆ ಕೊಡಮಾಡುತ್ತಿದ್ದ ಹಣದಲ್ಲಿ ೭೫೯ ಕೋಟಿ ಈ ಸಾರಿ ಕಡಿತ ಮಾಡಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ನೀಡಲಾಗುತ್ತಿದ್ದ ಸಹಾಯಧನವೂ ಈ ಸರ್ಕಾರದಲ್ಲಿ ೧೧೭ ಕೋಟಿ ಕಡಮೆಯಾಗಿಹೋಗಿದೆ. ಅಂದರೆ ಈ ಸರ್ಕಾರಕ್ಕೆ ಶೋಷಿತವರ್ಗದ ಸಬಲೀಕರಣವಾಗಲಿ, ಮಹಿಳಾ ಉನ್ನತಿಯಾಗಲಿ, ಕೃಷಿಕ್ಷೇತ್ರದ ಬೆಳವಣಿಗೆಯಾಗಲಿ ದಿಟವಾಗಿ ಬೇಕಿಲ್ಲ; ಬದಲಾಗಿ ಪ್ರಚಾರ ವೈಭವಗಳಷ್ಟೇ ಬೇಕಾಗಿರುವುದು. ಹಣವನ್ನು ಅನಾಯಾಸವಾಗಿ ಚೆಲ್ಲುವುದರ ಬದಲಾಗಿ ಬಡಮಕ್ಕಳ ವ್ಯಾಸಂಗಕ್ಕಾದರೂ ವ್ಯಯಿಸಿದ್ದರೆ ಅದು ಕಾಲಾನುಕ್ರಮದಲ್ಲಿ ಸಮೃದ್ಧಿಯನ್ನು, ಉದ್ಯೋಗಸೃಷ್ಟಿಯನ್ನು ಯಥಾವತ್ತಾಗಿ ಆದಾಯವನ್ನಾದರೂ ರಾಜ್ಯಕ್ಕೆ ನೀಡುತ್ತಿತ್ತು. ಆದರೆ ಈ ಸರ್ಕಾರ ಕಲಿಯುವ ಮಕ್ಕಳ ಕಿಸೆಯಿಂದಲೇ ಹಣವನ್ನು ನೇರ ಕಸಿದಿದೆ. ದೂರದೃಷ್ಟಿಯ ಕೊರತೆಯೊಂದು ಇದ್ದರೆ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಈ ಸರ್ಕಾರದ ನೀತಿಯೇ ಸಾಕ್ಷಿ.
ದಿನ ಬೆಳಗಾದರೆ ರೈತಾಪಿ ವರ್ಗದವರ ಹೆಸರನ್ನು ಓಡಾಡಿಸುತ್ತಿರುವ ನಾಯಕರು ನೀರಾವರಿ ಇಲಾಖೆಗೆ ೨೫೦೦ ಕೋಟಿ ಅನುದಾನ ಕಡಿತಗೊಳಿಸಿದ್ದಾರೆ. ಒಂದೆಡೆ ರಾಜ್ಯದ ೨೩೬ ತಾಲೂಕುಗಳ ಪೈಕಿ ೨೨೩ ತಾಲೂಕುಗಳು ಬರಪೀಡಿತ ಎಂದು ಘೋಷಿಸಲ್ಪಟ್ಟಿದೆ. ಅದರಲ್ಲೂ ೧೯೬ ತಾಲೂಕುಗಳು ತೀವ್ರ ಬರಪೀಡಿತವಾಗಿವೆ. ರಾಜ್ಯದ ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ ಈಗಲೇ ಪ್ರಾರಂಭವಾಗಿದೆ. ಕುಡಿಯುವ ನೀರಿಗೆ ತತ್ವಾರವಾದ ಈ ಹೊತ್ತಿನಲ್ಲಿ ಕೃಷಿ ಚಟುವಟಿಕೆ, ಜಾನುವಾರುಗಳ ಸಾಕಣೆ ಮೊದಲಾದ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನೀರಿನ ಆಸರೆಯಾಗಿರುವ ಜಲಾಶಯಗಳು ಬತ್ತುತ್ತಿವೆ. ಸೂರ್ಯನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು ಬೆಳೆಗಳೆಲ್ಲ ಕರಕಲಾಗುತ್ತಿವೆ. ಬೆಳೆಹಾನಿಯೊಂದರಲ್ಲೇ ೩೫,೧೬೨ ಕೋಟಿಯಷ್ಟು ರಾಜ್ಯಕ್ಕೆ ನಷ್ಟವಾಗಿದೆ. ರೈತರ ಆತ್ಮಹತ್ಯೆಯಲ್ಲಂತೂ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಒಂದೆಡೆ ಹಣದ ಕೊರತೆ ಎಂದು ಅಲವತ್ತುಕೊಳ್ಳುವ ರಾಜ್ಯನಾಯಕರು ಕೋಟಿ ಕೋಟಿ ಹಣವನ್ನು ಕೃಷಿಗಾಗಲಿ ನೀರಾವರಿಗಾಗಲಿ ವ್ಯಯಿಸದೆ ಬಿಡಿಬೀಸಾಗಿ ಚೆಲ್ಲಿದ್ದಾರೆ. ನಾನಾ ಮೂಲಗಳಿಂದ ಸಂಗ್ರಹವಾದ ಅತ್ಯಮೂಲ್ಯ ತೆರಿಗೆ ವೃಥಾ ಪೋಲಾಗಿದೆ. ಬಿಟ್ಟಿಭಾಗ್ಯಗಳ ಪರಿಣಾಮ ಸಾವಿರಾರು ಕೋಟಿ ಹಣ ಸದ್ಬಳಕೆಯಾಗದೆ ನಿಜವಾದ ಸಮೃದ್ಧಿ ಎಂಬುದು ಮರೀಚಿಕೆ ಆಗಿದೆ. ವಿತಂಡವಾದದ ಪರಮಾವಧಿ ಎಲ್ಲಿಯವರೆಗೆ ಹೋಗಿದೆಯೆಂದರೆ ‘ಶಕ್ತಿಯೋಜನೆಯಿಂದ ದೇಗುಲಗಳಿಗೆ ಹಣ ಹೋಗುತ್ತಿದೆ, ಹಾಗಾಗಿ ಹುಂಡಿಯಿಂದಲೇ ಹಣವನ್ನು ವಾಪಾಸ್ ಪಡೆಯುತ್ತೇವೆ’ ಎಂಬುದಾಗಿ ‘ಸಮಜಾಯಿಷಿ’ ನೀಡಲಾಗುತ್ತಿದೆ. ಅಂದರೆ ಇದೂ ಒಂದು ರೀತಿಯಲ್ಲಿ ಹಾಲಿನ ಹಣವನ್ನು ಹಿಂಡಿಯಲ್ಲಿ ಕಸಿದಂತೆಯೇ ಅಲ್ಲವೆ? ಇವರಿಗೆ ಯಾರಾದರೂ ಈ ರೀತಿಯ ಹಣ ಹಂಚುವ ಯೋಜನೆಗಳನ್ನು ತನ್ನಿ ಎಂದು ಅಂಗಲಾಚಿದ್ದರೆ?
ತನ್ನ ಅಲ್ಪಾವಧಿ ಅಥವಾ ದೀರ್ಘಾವಧಿ ಬೆಳೆಗಳು ಕೈಗೆಟುಕುವ ಕಟಾವಿನ ಹೊತ್ತಿನಲ್ಲಿ ನೀರಿಗೆ ಹಾಹಾಕಾರ ಉಂಟಾದರೆ ರೈತರು ಸಾಲದ ಮೊರೆಹೊಗುವುದು ಸಾಮಾನ್ಯ. ಬ್ಯಾಂಕುಗಳಲ್ಲಿ ಸೊಸೈಟಿಗಳಲ್ಲಿ ಇಂದು ಸಾಲಕ್ಕಾಗಿ ಸರತಿ ನಿಲ್ಲುವ ಜನರಿಗೆ ಗಾಯದ ಮೇಲೆ ಬರೆ ಎಳೆದ ಅನುಭವ ಆಗುತ್ತಿದೆ. ಸಾಲ ಪಡೆಯಲು ತೆಗೆವ ಸ್ಟ್ಯಾಂಪ್ ಪೇಪರ್ ಅಂದರೆ ಮುದ್ರಾಂಕ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ. ೨೦ ರೂಪಾಯಿ ಇದ್ದ ಒಂದು ಸಣ್ಣ ಅಫಿಡವಿಟ್ ಇಂದು ೧೦೦ರ ಗಡಿಯಲ್ಲಿ ಲಂಗರು ಹಾಕಿದೆ ಅಂದರೆ ಬರೋಬ್ಬರಿ ನಾಲ್ಕುಪಟ್ಟು ಮುದ್ರಾಂಕ ಶುಲ್ಕ ಏರಿಕೆಯಾಗಿದೆ. ಸಾಮಾನ್ಯರ ಪಾಲಿನ ಪರಿಶ್ರಮದ ಹಣ ಈ ರೀತಿ ವ್ಯಯವಾದರೆ ಸಮೃದ್ಧಿ ಹೇಗೆ ಲಭಿಸುತ್ತದೆ? ಈ ಪ್ರಶ್ನೆಗಳನ್ನೆಲ್ಲ ಯಾವ ನಾಮಫಲಕದಲ್ಲಿ ಎಲ್ಲೆಲ್ಲಿ ಛಾಪಿಸಲಾಗುತ್ತದೆ?
೧೯೦೫ರಲ್ಲಿ ಬೆಂಗಳೂರು ಎಂದರೆ ಭಾರತದ ಪಾಲಿಗೆ ಅದೊಂದು ವಿಸ್ಮಯವೇ ಆಗಿತ್ತು. ಯಾಕೆಂದರೆ ಇಡೀ ದೇಶದಲ್ಲಿ ಮೊದಲ ಬಾರಿಗೆ ವಿದ್ಯುತ್ ಪ್ರಜ್ವಲಿಸಿದ ನಗರ ಬೆಂಗಳೂರು ಆಗಿತ್ತು. ಕೈಗಾರಿಕೆಗಳ ಮೆಚ್ಚಿನ ತಾಣ, ಉದ್ಯಾನಗಳ ನಗರಿ, ವಿಶಾಲವಾದ ಕೆರೆಗಳು, ವಾಸಿಸಲು ತಣ್ಣಗಿನ ಪ್ರಕೃತಿ – ಹೀಗೆ ಬೆಂಗಳೂರಿನ ವೈಶಿಷ್ಟ್ಯಗಳು ಅನೇಕ ಇದ್ದವು. ಕಂಪೆನಿಗಳ ಸ್ಥಾಪನೆಗೆ ಇಲ್ಲಿ ದುಂಬಾಲು ಬೀಳಲಾಗುತ್ತಿತ್ತು. ಆದರೆ ಇಂದು ಟೆಸ್ಲಾದಂತಹ ಒಂದು ಪ್ರತಿಷ್ಠಿತ ಸಂಸ್ಥೆ ಇಲ್ಲಿ ಘಟಕ ಸ್ಥಾಪನೆಗೆ ಮೀನಮೇಷ ಎಣಿಸುತ್ತಿದೆ. ನೀರಿನ ಸೌಲಭ್ಯ ಅಷ್ಟೊಂದು ದುಸ್ತರವಾಗಿದೆ. ಒಂದು ಕ್ಯಾನ್ನಲ್ಲಿಯೂ ದುಡ್ಡು ಹೊಡೆಯುವ ಪ್ರವೃತ್ತಿ ಆರಂಭವಾದರೆ ಇಲ್ಲಿಗೆ ಬರಲು ಯಾರಾದರೂ ಮನಸ್ಸು ಮಾಡುತ್ತಾರೆಯೆ? ರಾಜಕೀಯ ಪಕ್ಷವೊಂದು ಗೆದ್ದ ತಕ್ಷಣ ಬೆಂಗಳೂರಿನ ಪ್ರಮುಖ ಭಾಗದಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಬೀಳುತ್ತದೆ ಎಂದರೆ ಸರಕಾರದ ಮುತುವರ್ಜಿ, ಕಾನೂನು ಸುವ್ಯವಸ್ಥೆಯನ್ನು ಅದು ಕಾಪಾಡಿಕೊಂಡ ರೀತಿ ಯಾರಿಗಾದರೂ ಅರ್ಥವಾಗುತ್ತದೆ. ಇಂತಹ ಜಾಗದಲ್ಲಿ ಉದ್ಯಮದ ರಿಸ್ಕ್ ಯಾರಾದರೂ ತೆಗೆದುಕೊಳ್ಳಬಲ್ಲರೆ? ಆಳುವವರು ಪ್ರಶ್ನೆ ಮಾಡಿಕೊಳ್ಳಬೇಕು.
ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲ, ಜನಸಾಮಾನ್ಯರೂ ಮಾಡಬಹುದು, ಮಾಡಬೇಕು ಕೂಡ. ಆದರೆ ವಿವೇಕ ಎನ್ನುವುದು ಇರಬೇಕಷ್ಟೆ. ಪ್ರಶ್ನೆ ಮಾಡುವುದನ್ನಷ್ಟೇ ಕಲಿಸುವುದಲ್ಲ. ಉತ್ತರವಾಗುವುದನ್ನೂ ಕಲಿಸಬೇಕು. ಪ್ರಶ್ನೆ ಮಾಡಿದ ಬಾಹುಬಲಿ ಪ್ರಪಂಚಕ್ಕೆ ಶಾಶ್ವತ ಉತ್ತರವಾಗುಳಿದ. ಪ್ರಶ್ನೆ ಮಾಡಿ ಎದುರು ಹಾಕಿಕೊಂಡವರು ದೇಶಕ್ಕಂಟಿದ ಸರ್ವಾಧಿಕಾರವನ್ನೇ ಕಿತ್ತೊಗೆದಿದ್ದರು. ಇಂದು ವಿದ್ಯಾರ್ಥಿಗಳು ಮಾತ್ರವಲ್ಲ ದೇಶವೇ ಪ್ರಶ್ನೆ ಕೇಳುತ್ತಿದೆ. ಪ್ರಶ್ನಿಸಿದುದರ ಫಲವಾಗಿಯೇ ಕಾಶ್ಮೀರದ ತಲೆಬುಡವಿಲ್ಲದ ಮಾನ್ಯತೆ ರದ್ದಾಗಿ ಹೋದದ್ದು, ವಿಚಾರವಾದಿಗಳು ದಶಕಗಳಿಂದ ಮೊಕ್ಕಾಂ ಹೂಡಿದ್ದ ದೆಹಲಿ ಬಂಗಲೆಗಳು ಖಾಲಿಯಾದದ್ದು, ದೇಶದ ಸಂಪತ್ತು ಕೊಳ್ಳೆಹೊಡೆಯುವುದು ನಿಂತುಹೋಗಿದ್ದು, ರಾಮಮಂದಿರ ನಿರ್ಮಾಣವಾಗಿದ್ದು. ಹಾಗೆ ಪ್ರಶ್ನಿಸದೆ ಹೋಗಿದ್ದರೆ ಇಂದಿಗೂ ಮತಾಂತರದ ಫಂಡ್ಗಳು ಬರುತ್ತಲೇ ಇರುತ್ತಿದ್ದವು. ರಾಮ ಕೃಷ್ಣರು ಮಿಥ್ಯೆಯಾಗೇ ಉಳಿದುಬಿಡುತ್ತಿದ್ದರು. ಜ್ವಲಂತಗಳಿಗೆ ಕಾರ್ಯತತ್ಪರರಾಗಲು ಜನ ಆರಿಸಿರುವುದೇ ಹೊರತಾಗಿ ವಿತಂಡವಾದ ಹೂಡಲು ಅಲ್ಲ.
ಎಷ್ಟರವರೆಗೆ ವಿರೋಧಾಭಾಸಗಳಲ್ಲಿ ಬದುಕು ಸವೆಸುತ್ತೀರಿ? ಉತ್ತರದಾಯಿಗಳಾಗಿ ಬದುಕಿ ಸ್ವಲ್ಪ.