ಸ್ವತಂತ್ರ ಭಾರತದಲ್ಲಿ ಸುದೀರ್ಘ ಕಾಲ ಜೀವಂತವಾಗಿದ್ದ ಒಂದು ಹಗರಣವೆಂದರೆ ಅದು ಬೊಫೋರ್ಸ್ ಫಿರಂಗಿ ಖರೀದಿಗೆ ಸಂಬAಧಿಸಿದ ಹಗರಣ; ಅದನ್ನು ‘ಹಗರಣಗಳ ರಾಜ’ ಎಂದು ಬಣ್ಣಿಸಲಾಗುತ್ತದೆ. ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ಹಗರಣವಾದ ಕಾರಣ ಇದರಲ್ಲಿ ದೇಶದ ಭದ್ರತೆಯ ಅಂಶ ಕೂಡ ಅಡಕವಾಗಿದೆ. ಈ ಹಗರಣದಲ್ಲಿ ಭಾಗಿಯಾದವರು ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವುದು ಮತ್ತು ಯರ್ಯಾರನ್ನೋ ಬಲಿಪಶುಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರೂ ಕೂಡ ಸಂಶಯದ ಮುಳ್ಳು ಯಾವಾಗಲೂ ಗಾಂಧಿ ಕುಟುಂಬದತ್ತಲೇ ತಿರುಗಿ ನಿಲ್ಲುತ್ತಿತ್ತು. ನೆಹರು-ಗಾಂಧಿ ಕುಟುಂಬದ ಹಗರಣಗಳ ಕಡೆಗೆ ಒಮ್ಮೆ ದೃಷ್ಟಿ ಹರಿಸುವುದಾದರೆ ನೆಹರು ಅಧಿಕಾರದ ವೇಳೆ ಅನೇಕ ಹಗರಣಗಳು ಬೆಳಕಿಗೆ ಬಂದಿದ್ದವು. ಕೃಷ್ಣ ಮೆನನ್ ಅವರ ಜೀಪು ಹಗರಣ, ಮುಂಧ್ರಾ ಶೇರು ಹಗರಣ, ಜಯಂತಿ ಶಿಪ್ಪಿಂಗ್ ಹಗರಣ ಮುಂತಾದವು ಆಗ ಬೆಳಕಿಗೆ ಬಂದವು. ಅವುಗಳಲ್ಲಿ ಭಾಗಿಯಾದರೆನ್ನಲಾದ ಮೆನನ್, ಟಿ.ಟಿ. ಕೃಷ್ಣಮಾಚಾರಿ ಅವರನ್ನು ನೆಹರು ಹಿಂದಿನಂತೆಯೇ ಗೌರವದಿಂದ ನಡೆಸಿಕೊಂಡರು.
ರಾಜಕೀಯ ಅಧಿಕಾರದ ರುಚಿ ನೋಡಿದ ಮೇಲೆ ಕಾಂಗ್ರೆಸ್ಸಿಗರ ತಲೆ ತಿರುಗಿದೆ. ಶಾಸಕರು ಮತ್ತು ರಾಜಕಾರಣಿಗಳು ಗಾಳಿ ಬಂದಂತೆ ತೂರಿಕೊಳ್ಳುತ್ತಿದ್ದಾರೆ. ಇವರು ಹಣ ಸಂಪಾದಿಸಿಕೊಳ್ಳುತ್ತಿರುವುದಷ್ಟೆ ಅಲ್ಲ, ನ್ಯಾಯಾಂಗದ ಮೇಲೂ ಪ್ರಭಾವ ಬೀರುತ್ತ ಅಪರಾಧಿಗಳ ರಕ್ಷಣೆಗೆ ಬರುತ್ತಿದ್ದಾರೆ. ಇಂತಹ ಹೊಲಸು ರಾಜಕಾರಣಿಗಳ ಆಡಳಿತದಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುವುದು ಸಾಧ್ಯವಿಲ್ಲ.”
ಇದು ಆಂಧ್ರಪ್ರದೇಶದ ಕೊಂಡಾ ವೆಂಕಟಪ್ಪಯ್ಯ ಎಂಬ ಗಣ್ಯರು ಗಾಂಧಿ ಅವರಿಗೆ ಬರೆದ ಪತ್ರದಿಂದ ಆರಿಸಿದ ಸಾಲುಗಳು. ಗಾಂಧಿಯವರ ಕಾಲದಲ್ಲೇ ಕಾಂಗ್ರೆಸ್ ಈ ರೀತಿ ಕೆಡಲು ಆರಂಭವಾಗಿತ್ತು. ಪಕ್ಷದಲ್ಲಿ ಭ್ರಷ್ಟ ಮುಖಂಡರಿದ್ದರು. ಗಮನಿಸಿದರೆ ಈಗಿನ ಮತ್ತು ಆಗಿನ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯಲ್ಲಿ ಏನೂ ವ್ಯತ್ಯಾಸವಿಲ್ಲ ಎಂಬುದು ತಿಳಿಯುತ್ತದೆ. ಕೇಂದ್ರವಿರಲಿ, ರಾಜ್ಯವಿರಲಿ, ಕಾಂಗ್ರೆಸ್ ಎಲ್ಲೇ ಅಧಿಕಾರ ನಡೆಸಲಿ; ಭ್ರಷ್ಟಾಚಾರವು ಕಟ್ಟಿಟ್ಟ ಬುತ್ತಿ. ಕ್ರಮೇಣ ಅವು ಬೃಹತ್ ಹಗರಣಗಳ ರೂಪ ಪಡೆದುಕೊಳ್ಳುತ್ತಿದ್ದುದನ್ನು ನಾವು ಕಾಣುತ್ತೇವೆ. ಅಂತಹ ರಾಜಕಾರಣಿಗಳ ಆಡಳಿತದಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುವುದು ಸಾಧ್ಯವಿಲ್ಲ – ಎನ್ನುವ ಮಾತಂತೂ ಇಂದು ನೂರಕ್ಕೆ ನೂರು ಸತ್ಯ ಎಂಬುದು ಅಡಿಗಡಿಗೆ ನಮ್ಮ ಗಮನಕ್ಕೆ ಬರುತ್ತದೆ. ಈ ಪ್ರವೃತ್ತಿ ಇಂದು ಎಷ್ಟು ಬೆಳೆದಿದೆಯೆಂದರೆ ಸಣ್ಣ ಹಗರಣಗಳು ಯಾರ ಗಮನಕ್ಕೂ ಬರುವುದಿಲ್ಲ; ಅಥವಾ ಬಂದರೂ ಜನ ಬಹುಬೇಗ ಅವನ್ನು ಮರೆತುಬಿಡುವ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಎನ್ಡಿಎ ಸರ್ಕಾರವನ್ನು ಯಾವುದೇ ಕಳಂಕವಿಲ್ಲದೆ ನಡೆಸಿದ ಪರಿಯನ್ನು ಗಮನಿಸಿದರೆ ಈ ವ್ಯತ್ಯಾಸ ತಿಳಿಯುತ್ತದೆ.
ಆದರೆ ಸುಳ್ಳು ಹೇಳುವುದರಲ್ಲಿ ನಿಷ್ಣಾತರಾದ ಮತ್ತು ಅದನ್ನು ಪದೇಪದೇ ಹೇಳಿ ಸತ್ಯವಾಗಿಸುವ ಚಾಕಚಕ್ಯತೆಯುಳ್ಳ ಕಾಂಗ್ರೆಸ್ ನಾಯಕರು ಕರ್ನಾಟಕದ ಕಳೆದ ಬಿಜೆಪಿ ಸರ್ಕಾರದ ಮೇಲೆ ‘೪೦ ಪರ್ಸೆಂಟ್ ಸರ್ಕಾರ’ವೆಂದು ದೊಡ್ಡ ಪ್ರಚಾರಾಂದೋಲನವನ್ನೇ ನಡೆಸಿದರು. ಅದನ್ನು ಹಿಡಿದು ಮುಖ್ಯಮಂತ್ರಿಯವರ (ಬೊಮ್ಮಾಯಿ) ವೈಯಕ್ತಿಕ ನಿಂದನೆಗೂ ಇಳಿದರು. ರಾಜ್ಯದಲ್ಲಿ ಅವರು ಅಧಿಕಾರಕ್ಕೆ ಬರುವಲ್ಲಿ ಈ ಪ್ರಚಾರಾಂದೋಲನ ಪಾತ್ರ ಇದ್ದೇ ಇದ್ದೀತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವರು ತಮ್ಮ ಕಾರ್ಯವಿಧಾನವನ್ನೇನಾದರೂ ಬದಲಿಸಿಕೊಂಡರೆ? ಇಲ್ಲವೇ ಇಲ್ಲ. ಬಹುಶಃ ಬರುವ ಲೋಕಸಭಾ ಚುನಾವಣೆಯ ಖರ್ಚಿಗೆ ಹಣ ಸಂಗ್ರಹಿಸುವ ಕಾರ್ಯ ಕರ್ನಾಟಕದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಬಗ್ಗೆ ವರದಿಗಳಿವೆ. ಈ ಸಂಗ್ರಹ ಕಾರ್ಯದಲ್ಲಿ ಹೆಸರು ಗಳಿಸಿದವರಂತೂ ಬಹಳ ವೇಗವಾಗಿಯೇ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆನ್ನಬಹುದು.
ಈ ವಿಷಯವೇನೂ ಕತ್ತಲಲ್ಲಿ ಉಳಿದಿಲ್ಲ. ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗುವಾಗ ರಾಜ್ಯದ ಗುತ್ತಿಗೆದಾರರ ಸಂಘದಿಂದ ‘ಇದು ಕೂಡ ಶೇಕಡಾ ೪೦ರ ಸರ್ಕಾರ’ ಎಂಬ ಆರೋಪ ಬಂದಿದೆ. ಆರೋಪ ಮಾಡಿದ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ‘ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ’ ಎನ್ನುವ ಮಾತನ್ನು ಕೂಡ ಹೇಳಿದ್ದಾರೆ. ಅಂದರೆ ವಿರೋಧಪಕ್ಷದಲ್ಲಿದ್ದಾಗ ಪ್ರಚಾರಾಂದೋಲನದ ನೇತೃತ್ವ ವಹಿಸಿದ ಸಿದ್ದರಾಮಯ್ಯ ಅವರು ಈಗ ಯಾವ ಸ್ಥಿತಿಯಲ್ಲಿ ಇದ್ದಾರೆಂಬುದು ಅರ್ಥವಾಯಿತಲ್ಲವೆ? ಇದರಲ್ಲಿ ದೊಡ್ಡ ಸಂದೇಶ ಕೂಡ ಇದೆ: “ಬೇರೆಯವರು ಭ್ರಷ್ಟಾಚಾರ ಮಾಡಿದರೆ ಅದು ತಪ್ಪು, ಅಪರಾಧ. ನಾವು ಮಾಡಿದರೆ ತಪ್ಪಲ್ಲ; ಅದನ್ನು ಯಾರೂ ಪ್ರಶ್ನಿಸುವ ಗೋಜಿಗೆ ಹೋಗಬಾರದು” ಎಂದಲ್ಲವೆ ಇದರ ಅರ್ಥ? ಕಾಂಗ್ರೆಸ್ ಪಕ್ಷದಲ್ಲಿ ನೆಹರು ಅವರ ಕಾಲದಿಂದ ಅನೂಚಾನವಾಗಿ ನಡೆದುಕೊಂಡು ಬಂದುದನ್ನು ಪಕ್ಷಕ್ಕೆ ಹೊರಗಿನಿಂದ ಬಂದವರಾದ ಸಿದ್ದರಾಮಯ್ಯ ಕೂಡ ಮೈಗೂಡಿಸಿಕೊಂಡಿದ್ದಾರೆಂದು ನಾವು ಸಮಾಧಾನ ತಾಳಬಹುದು ಅಷ್ಟೆ.
ಡಿಕೆಶಿ ಶೈಲಿ
ಇನ್ನು ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗೆಗೆ ಹೇಳುವುದೇ ಬೇಡ. ಅವರ ಮುಂದೆ ಭ್ರಷ್ಟಾಚಾರದ ಆರೋಪ ಬಂದರೆ “ಹೌದು; ಏನೀಗ? ಭ್ರಷ್ಟಾಚಾರ ಅಷ್ಟು ದೊಡ್ಡ ಅಪರಾಧವೆ?” ಎಂದವರು ಪ್ರತಿಪ್ರಶ್ನೆ ಹಾಕಬಹುದು; ಮತ್ತು ಭ್ರಷ್ಟಾಚಾರದ ಆರೋಪ ಮಾಡಿದವರಿಂದ ಅವರ ಹೇಳಿಕೆಗೆ ತಿದ್ದುಪಡಿ ತರಿಸಬಹುದು. ಆಗ “ಬಿಜೆಪಿ ಆಡಳಿತದ ಕಾಲದಲ್ಲಿ ರಾಜಕಾರಣಿಗಳು ಲಂಚ (ಕಮಿಷನ್) ಕೇಳಿದರೆ ಈಗ ಅಧಿಕಾರಿಗಳು ಕೇಳುತ್ತಿದ್ದಾರೆ” ಎಂಬಂತಹ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಬಹುದು. ಇದರ ಅರ್ಥ ಏನು? ರಾಜಕಾರಣಿಗಳ ಬದಲಾಗಿ ಅಧಿಕಾರಿಗಳು ಲಂಚ ವಸೂಲು ಮಾಡಿದರೆ ಜನರಿಗೇನು ಲಾಭ? ಅಂತಿಮವಾಗಿ ಈ ಹಣ ಹೋಗಿ ಸೇರುವುದು ಬಹುತೇಕ ಒಂದೇ ಕಡೆಗಲ್ಲವೆ – ಎಂಬಂತಹ ಪ್ರಶ್ನೆಗಳು ಉಳಿದುಬಿಡುತ್ತವೆ. ರಾಜಕೀಯ ನಾಯಕರ ಇಂತಹ ಹೇಳಿಕೆಗಳಿಂದ ಒಂದು ಉದ್ದೇಶವಂತೂ ನೆರವೇರುತ್ತದೆ; ಅದೆಂದರೆ ಮತದಾರ ಜನತೆಯನ್ನು ದಾರಿತಪ್ಪಿಸುವುದು. ಈಚಿನ ಒಂದು ಸುದ್ದಿಯೆಂದರೆ, ತಮ್ಮ ವಿರುದ್ಧ ಮಾಡಲಾದ ೪೦ ಪರ್ಸೆಂಟ್ ಆರೋಪಕ್ಕೆ ಸಂಬಂಧಿಸಿ ಬಿಜೆಪಿಯವರು ಕೆಲವು ಕಾಂಗ್ರೆಸ್ ನಾಯಕರ ವಿರುದ್ಧ ಕ್ರಿಮಿನಲ್ ದಾವೆ ಹೂಡಿದ್ದಾರೆ.
ದೇಶದ ಭದ್ರತೆಗೆ ಅಪಾಯ
ಸ್ವಾತಂತ್ರ್ಯದ ಆರಂಭದಿಂದಲೇ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರವನ್ನು ಪೋಷಿಸುತ್ತ ಬಂದುದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಅದರಲ್ಲಿ ದೇಶದ ಭದ್ರತೆಗೇ ಅಪಾಯ ಒಡ್ಡುವಂತಹ ಹಗರಣಗಳು ಕೂಡ ಇದ್ದವು. ರಷ್ಯಾದ ಗುಪ್ತಚರ ಸಂಸ್ಥೆ ಕೆ.ಜಿ.ಬಿ. ಮೂಲಕ ನಡೆದ ಹಗರಣವು ಆ ವರ್ಗಕ್ಕೆ ಸೇರುತ್ತದೆ. ಕೆ.ಜಿ.ಬಿ. ಹಿರಿಯ ಅಧಿಕಾರಿ ಮಿಟ್ರೋಖಿನ್ ನಿವೃತ್ತಿಯ ಅನಂತರ ತನ್ನ ಹಿಂದಿನ ಕಡತದಲ್ಲಿದ್ದ ಒಂದು ಬೃಹತ್ ಭ್ರಷ್ಟಾಚಾರ ಪ್ರಕರಣವನ್ನು ಬಯಲು ಮಾಡಿದ. ಭಾರತದ ರಾಜಕಾರಣಿಗಳ ನೀಚ ಕಾರ್ಯವನ್ನು ತಿಳಿಸುವ ಅದು ‘ಮಿಟ್ರೋಖಿನ್ ಪತ್ರಾಗಾರ’ (Archives) ಎಂದು ಪರಿಚಿತವಾಗಿದೆ. ‘ಉತ್ಥಾನ’ದಲ್ಲಿ ಪ್ರಕಟವಾದ ಪ್ರಸ್ತುತ ಲೇಖನವು ಲೇಖಕ ಗೋಪಾಲರಾವ್ ಹೇಜೀಬ್ ಅವರ ಗ್ರಂಥ ‘ಮಂಥನ’ದಲ್ಲೂ ಸೇರ್ಪಡೆಯಾಗಿದೆ.
(ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು).
ವಿದೇಶೀ ಗುಪ್ತಚರ ಸಂಸ್ಥೆಗಳು, ಮುಖ್ಯವಾಗಿ ಕೆ.ಜಿ.ಬಿ. ದೇಶದ ರಾಜಕಾರಣಿಗಳನ್ನು ಖರೀದಿಸುವ ಸ್ಥಿತಿಯಲ್ಲಿತ್ತು “It seemed the entire country was for sale” ಎಂದು ಮಿಟ್ರೋಖಿನ್ ಉದ್ಗರಿಸಿದ್ದಾನೆ. ಆತನ ಪುಸ್ತಕದಿಂದ ದೇಶದ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಯಿತು. ಸ್ವಾತಂತ್ರ್ಯದ ಮೊದಲ ವರ್ಷಗಳಲ್ಲಿದ್ದು ಪೂಜನೀಯರೆನಿಸಿದ್ದ ಹಲವರು ಗಾಂಧಿ ಟೋಪಿ ಧರಿಸಿದ ಠಕ್ಕರು; ಅಧಿಕಾರಕ್ಕಾಗಿ ಯಾವ ಅನೈತಿಕ ವ್ಯವಹಾರವನ್ನೂ ಕೂಡ ಮಾಡಬಲ್ಲವರು ಎಂದು ವಿಶ್ಲೇಷಿಸಲಾಗಿದೆ.
೧೯೯೦ರ ದಶಕದ ಆರಂಭದಲ್ಲಿ ಸೋವಿಯತ್ ರಷ್ಯಾದ (ಯು.ಎಸ್.ಎಸ್.ಆರ್.) ರಾಜಕೀಯ ವ್ಯವಸ್ಥೆ ಕುಸಿಯಿತು; ಮತ್ತು ಅವರ ಕಮ್ಯೂನಿಸ್ಟ್ ಸಿದ್ಧಾಂತಗಳು ಸೋತುಹೋದವು. ಅನಂತರ ಅಲ್ಲಿಯ ಆರ್ಥಿಕ-ರಾಜಕೀಯ ಚಿಂತನೆಗಳು ಬದಲಾದವು. ಕಾಶ್ಮೀರದ ವಿಷಯದಲ್ಲಿ ರಷ್ಯಾ ಭಾರತ ಪರ ಧೋರಣೆ ತಳೆದಿತ್ತು; ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ರಷ್ಯಾ ನಾಯಕರಾದ ಖ್ರುಶ್ಚೇವ್ ಮತ್ತು ಬುಲ್ಗಾನಿನ್ ಹೇಳಿದರು. ಸ್ನೇಹ ಸಂಪಾದನೆಯ ಜೊತೆಗೆ ರಷ್ಯಾದಿಂದ ದೇಶದ ರಾಜಕಾರಣಿಗಳು ಭಾರೀ ಪ್ರಮಾಣದ ಲಂಚ ಪಡೆದಿದ್ದು, ಆ ವಿವರಗಳು ಮಿಟ್ರೋಖಿನ್ ಪತ್ರಾಗಾರ-೨ರಲ್ಲಿವೆ. ಮೂಲತಃ ರಷ್ಯನ್ ಭಾಷೆಯಲ್ಲಿದ್ದ ಅದು ಅನಂತರ ಇಂಗ್ಲಿಷ್ನಲ್ಲಿ ಪ್ರಕಟಗೊಂಡಿತು.
ಮಿಟ್ರೋಖಿನ್ ವರದಿ ಸುಳ್ಳಿನ ಕಂತೆ ಎಂದು ಭಾರತದ ಕಮ್ಯೂನಿಸ್ಟರು ವ್ಯಾಖ್ಯಾನಿಸಿದರು. ಆದರೆ ಸತ್ಯ ಅಷ್ಟರಲ್ಲೇ ಹೊರಗೆ ಬಂದಿತ್ತು. ಒಂದು ಕಾಲದಲ್ಲಿ ಭಾರತದ ರಾಜಕಾರಣವನ್ನು ಕೆ.ಜಿ.ಬಿ. ನಿಯಂತ್ರಿಸುತ್ತಿದ್ದುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಸಮಾಜವಾದದ ಅಮಲಿನಲ್ಲಿದ್ದ ದೇಶದ ಬುದ್ಧಿಜೀವಿಗಳು ಕೆ.ಜಿ.ಬಿ.ಯ ಕೈಗೊಂಬೆಗಳಂತೆ ವರ್ತಿಸುತ್ತಿದ್ದರು.
ಮಿಟ್ರೋಖಿನ್ ಪತ್ರಾಗಾರ-೨ ಕೆ.ಜಿ.ಬಿ. ನಡೆಸುತ್ತಿದ್ದ ಚಟುವಟಿಕೆಗಳನ್ನು ವಿವರಿಸಿದೆ. ರಷ್ಯಾ ‘ಹಣ ಕೊಟ್ಟು ಖರೀದಿಸಿದ ರಾಜಕಾರಣಿಗಳಲ್ಲಿ ಭಾರತೀಯರೇ ಮೊದಲಿಗರು’ ಎನ್ನುವ ಆಘಾತಕಾರಿ ಅಂಶ ಪತ್ರಾಗಾರದಲ್ಲಿದೆ. ಮುಂದೆ ಕೆ.ಜಿ.ಬಿ. ಕಾಂಗ್ರೆಸ್ ನಾಯಕಿ ಇಂದಿರಾಗಾಂಧಿ ಅವರನ್ನು ಬಹುತೇಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತೆಂದು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್ ಚುನಾವಣಾ ನಿಧಿಗೆ ದೊಡ್ಡ ಮೊತ್ತ ಕೊಡಲು ಆರಂಭಿಸಿದ ಕೆ.ಜಿ.ಬಿ. ಕ್ರಮೇಣ ದೇಶದ ರಾಜ್ಯವ್ಯವಸ್ಥೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
ಪಕ್ಷಗಳು ವಶಕ್ಕೆ
ಭಾರತವ ಕಮ್ಯೂನಿಸ್ಟರು ತಮ್ಮನ್ನು ಸೋವಿಯತ್ ರಷ್ಯಾದ ಜೊತೆ ಗುರುತಿಸಿಕೊಳ್ಳುತ್ತಿದ್ದರು. ಅದರಲ್ಲೂ ಪಕ್ಷವು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ (ಸಿಪಿಐ-ಎಂ) ಮತ್ತು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಎಂದು ವಿಭಜನೆಗೊಂಡ ಬಳಿಕ ಸಿಪಿಐ ಬಹುತೇಕ ರಷ್ಯಾದ ಹಿಡಿತಕ್ಕೆ ಸಿಲುಕಿತ್ತು; ಅದೇ ರೀತಿ ಸಿಪಿಐ-ಎಂ ಚೀನಾದ ನಿಯಂತ್ರಣದೊಳಗಿತ್ತು. ಮುಂದೆ ಇವು ಬಹಳಷ್ಟು ಬೇರೆಬೇರೆ ದಾರಿ ಹಿಡಿದುದನ್ನು ಕಾಣಬಹುದು. ಸಿಪಿಐ ಕಾಂಗ್ರೆಸ್ಸಿಗೆ ಸಮೀಪವಾಗುತ್ತಾ ಹೋಯಿತು; ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ (೧೯೭೫-೭೭) ಸಿಪಿಐ ಕಾಂಗ್ರೆಸ್ ಜೊತೆಗಿದ್ದರೆ ಸಿಪಿಐ-ಎಂ ತುರ್ತುಪರಿಸ್ಥಿತಿಯನ್ನು ವಿರೋಧಿಸುವವರ ಜೊತೆಗಿತ್ತು. ಕೆ.ಜಿ.ಬಿ. ದೇಣಿಗೆಯನ್ನು ಧಾರಾಳವಾಗಿ ಪಡೆದ ಸಿಪಿಐ ಅದರ ಕೈಗೊಂಬೆ(ಹಸ್ತಕ)ಯಂತೆ ನಡೆದುಕೊಳ್ಳುತ್ತಿತ್ತು. ೧೯೭೧ರಲ್ಲಿ ಕೆ.ಜಿ.ಬಿ. ಕಾಂಗ್ರೆಸ್ ಚುನಾವಣಾ ನಿಧಿಗೆ (ಅಂದಿನ) ೨ ಲಕ್ಷ ರೂ. ನೀಡಿತ್ತು; ಮತ್ತು ಕಾಂಗ್ರೆಸ್ನ ಒಳಗುಟ್ಟು ತಿಳಿಯಲು ಒಬ್ಬ ಮುಖಂಡನಿಗೆ ಪ್ರತಿವರ್ಷ ೧ ಲಕ್ಷ ರೂ. ನೀಡುತ್ತಿತ್ತೆಂದು ಮಿಟ್ರೋಖಿನ್ ದಾಖಲಿಸಿದ್ದಿದೆ. ಎರಡು ರೂ.ಗೆ ಒಂದು ಗೋಣಿಚೀಲ ತುಂಬ ಪುಸ್ತಕ ಕೊಡುತ್ತಿದ್ದ ಕಮ್ಯೂನಿಸ್ಟ್ ಪಕ್ಷದ ಸಾಹಿತ್ಯ, ಕಿರುಹೊತ್ತಿಗೆ, ಕರಪತ್ರ ಮುಂತಾದವುಗಳ ಪ್ರಕಟಣೆಗೆ ಕೆ.ಜಿ.ಬಿ. ಉದಾರ ದೇಣಿಗೆ ಕೊಡುತ್ತಿತ್ತು.
ತುರ್ತುಪರಿಸ್ಥಿತಿಗೆ ಬೆಂಬಲ
ಚುನಾವಣಾ ಅಕ್ರಮದ ಕಾರಣದಿಂದ ಸಂಸತ್ ಸದಸ್ಯತ್ವ ಮತ್ತು ಅದರೊಂದಿಗೆ ಪ್ರಧಾನಿ ಹುದ್ದೆಯನ್ನು ಕಳೆದುಕೊಳ್ಳುವ ಸಂದರ್ಭ ಬಂದಾಗ ಇಂದಿರಾಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿ(ಎಮರ್ಜೆನ್ಸಿ)ಯನ್ನು ಹೇರಿದರು; ಕೆ.ಜಿ.ಬಿ. ತಡವಿಲ್ಲದೆ ಅದನ್ನು ಸ್ವಾಗತಿಸಿತು. ಸಿಪಿಐ ಅದಕ್ಕಾಗಿ ಇಂದಿರಾ ಅವರನ್ನು ಹೊಗಳಿತು. ನಕ್ಸಲ್ ನಾಯಕ ಚಾರು ಮಜುಂದಾರ್ ಕೂಡ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ. ಇಂದಿರಾಗಾಂಧಿ ಅವರ ವೈಭವೀಕರಣಕ್ಕೆ ಆಗ ಕೆ.ಜಿ.ಬಿ. ತುಂಬ ಹಣ ಖರ್ಚು ಮಾಡಿತೆನ್ನಲಾಗಿದೆ. ಆಗ ಕಾಂಗ್ರೆಸ್ ಬಹುತೇಕ ರಷ್ಯಾದ ನಿಯಂತ್ರಣದಲ್ಲಿತ್ತು; ಮತ್ತು ಭಾರತದ ಕಮ್ಯೂನಿಸ್ಟ್ ಚಳವಳಿಗೆ ರಷ್ಯಾ ತುಂಬಾ ನೆರವು ನೀಡಿತು.
ಸ್ವಾತಂತ್ರ್ಯದ ಮೊದಲ ದಶಕದಿಂದಲೇ ಸೋವಿಯತ್ ರಷ್ಯಾ ಭಾರತದ ಮೇಲೆ ಹೊಂದಿದ್ದ ಪ್ರಭಾವವನ್ನು ಐ.ಎ. ಬೆನೆಡಿಕ್ಟೋವ್ ಎಂಬಾತ ವಿವರಿಸಿದ್ದಾರೆ; ಅದರಲ್ಲಿ ಕಮ್ಯೂನಿಸ್ಟರ ಬಗೆಗಿನ ವಿವರಗಳು ಕೂಡ ಇವೆ. ಪ್ರಥಮ ಪ್ರಧಾನಿ ನೆಹರು ರಷ್ಯಾ ಮೂಲದ ಕಮ್ಯೂನಿಸಮ್ ಬಗ್ಗೆ ತುಂಬಾ ಒಲವು ಹೊಂದಿದ್ದರು. ಅವರು ದೇಶದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಆರಂಭಿಸಿದ್ದರಲ್ಲಿ ಸೋವಿಯತ್ ರಷ್ಯಾದ ಅನುಕರಣೆಯನ್ನು ಗುರುತಿಸಲಾಗಿದೆ. ೧೯೫೯ ಮತ್ತು ೧೯೬೨ರ ಶೀತಲ ಸಮರದ (ಅಮೆರಿಕ-ರಷ್ಯಾ) ಅಂಗವಾಗಿ ಕೆ.ಜಿ.ಬಿ. ಗುಪ್ತವರದಿಯನ್ನು ತಯಾರಿಸಿದ್ದು, ಅದರಲ್ಲಿ ಭಾರತದ ರಾಜಕಾರಣದಲ್ಲಿ ಕೆ.ಜಿ.ಬಿ. ನಿರ್ವಹಿಸಿದ ಪಾತ್ರದ ವಿವರ ಸಿಗುತ್ತದೆ; ಅದು ಒಬ್ಬ ಸ್ವಾಭಿಮಾನಿ ಭಾರತೀಯನು ತಲೆತಗ್ಗಿಸುವಂತೆ ಮಾಡುತ್ತದೆಂದು ಲೇಖಕರು ಟೀಕಿಸಿದ್ದಾರೆ.
ಮಂತ್ರಿ, ಸಂಸದರಿಗೆ ರಷ್ಯಾ ಹಣ
ಸಿಪಿಐ ಕಾರ್ಯದರ್ಶಿ ಭೂಪೇಶ್ಗುಪ್ತ ೧೯೬೭ರ ಚುನಾವಣೆಯ ಖರ್ಚಿಗೆ ರಷ್ಯಾದಿಂದ ಹಣ ಕೇಳಿದ್ದರು; ಮತ್ತು ಹಣ ನೀಡಿದ ಬಗ್ಗೆ ಪಕ್ಷದ ಗುಪ್ತಸಭೆಯಲ್ಲಿ ರಷ್ಯಾದವರನ್ನು ಹೊಗಳಿದ್ದರೆಂದು ಬೆಳಕಿಗೆ ಬಂದಿದೆ. ಭಾರತೀಯ ಜಾಗ್ರತದಳದ ಮಾಜಿ ಸಹನಿರ್ದೇಶಕ ಮಾಲೈ ಕೃಷ್ಣಧರ್ ಅವರು “ನಾಲ್ವರು ಕೇಂದ್ರ ಮಂತ್ರಿಗಳು ಮತ್ತು ೧೦-೧೨ ಜನ ಸಂಸತ್ಸದಸ್ಯರು ರಷ್ಯಾದಿಂದ ನಿಯಮಿತವಾಗಿ ಹಣ ಪಡೆಯುತ್ತಿದ್ದರೆಂದು ನನ್ನ ಪರಿಶ್ರಮದ ಶೋಧನೆ ಮತ್ತು ಬೇಹುಗಾರಿಕೆಯನ್ನು ಗ್ರಹಿಸುವ ಸೂಕ್ಷ್ಮಬುದ್ಧಿಯಿಂದ ಖಾತ್ರಿಯಾಗಿದೆ” ಎಂದು ಒಮ್ಮೆ ಹೇಳಿದ್ದರು. ಮುಂಬಯಿಯ ಓರ್ವ ಪತ್ರಕರ್ತ ಕೂಡ ಕೆ.ಜಿ.ಬಿ.ಯಿಂದ ಹಣ ಪಡೆಯುತ್ತಿದ್ದರೆಂದು ಕೃಷ್ಣಧರ್ ಬಹಿರಂಗಪಡಿಸಿದ್ದರು.
ಕೆ.ಜಿ.ಬಿ.ಗೆ ಆ ಹೊತ್ತಿಗೆ ಭಾರತದಲ್ಲೊಂದು ಆಶ್ರಿತರ ಪಡೆಯೇ ಇತ್ತು. ಕಾಂಗ್ರೆಸ್ ಅಲ್ಲದೆ ಕೆಲವು ಸಂಘಟನೆಗಳು, ಮಾಧ್ಯಮಗಳು ರಷ್ಯಾದಿಂದ ಹಣ ಪಡೆಯುತ್ತಿದ್ದವು. ಲೇಖಕರು, ಕವಿಗಳು, ಕಲಾವಿದರು, ಪ್ರಾಧ್ಯಾಪಕರು ಕೂಡ ಹಣ ಪಡೆಯುತ್ತಿದ್ದರು. ಕೆಲವು ಲೇಖಕರು, ಬುದ್ಧಿಜೀವಿಗಳು ಆಗಾಗ ರಷ್ಯಾಕ್ಕೆ ಭೇಟಿ ನೀಡುತ್ತಿದ್ದರು. ಅದನ್ನು ಸಂಘಟಿಸುವ ಸಂಸ್ಥೆಗಳಿದ್ದವು (ಅವುಗಳಿಗೆ ಸಂಸ್ಕೃತಿಯ ಮುಖವಾಡವೂ ಇತ್ತು). ಒಬ್ಬ ಸಿಪಿಐ-ಎಂ ಮುಖಂಡರಿಗೆ ರಷ್ಯಾದ ಜೊತೆ ಆಕ್ಷೇಪಾರ್ಹ ಸಂಬಂಧವಿದ್ದು, ಅದನ್ನು ಪ್ರಧಾನಿ ಇಂದಿರಾ ಅವರ ಗಮನಕ್ಕೆ ತಂದಾಗಲೂ ಆಕೆ ಮೌನವಾಗಿದ್ದರೆಂದು ಧರ್ ದಾಖಲಿಸಿದ್ದಾರೆ. ಕೃಷ್ಣಧರ್ ಯಾರಿಗೋ ಇಷ್ಟವಾಗಲಿಲ್ಲ ಎನಿಸುತ್ತದೆ. ಕೆ.ಜಿ.ಬಿ. ಅಧಿಕಾರಿಗಳು ಕೇಂದ್ರಸರ್ಕಾರಕ್ಕೆ ಅವರ ಬಗ್ಗೆ ಹೇಳಿ ವರ್ಗಾವಣೆ ಮಾಡಿಸಿದರು.
ತುರ್ತುಪರಿಸ್ಥಿತಿಯನ್ನು ಹೇರುವ ಮುನ್ನ ಇಂದಿರಾಗಾಂಧಿಯವರು ದೇಶದ ಸಮಸ್ಯೆ ಮತ್ತು ಅಶಾಂತಿಗಳ ಹಿಂದೆ ವಿದೇಶೀ ಕೈವಾಡ ಇದೆ ಎಂದು ದೂರುತ್ತಿದ್ದರು; ಇದಕ್ಕೆಲ್ಲ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಕಾರಣ ಎಂದು ಕೂಡ ಒಮ್ಮೆ ಆಕೆ ದೂಷಿಸಿದ್ದರು. ಸಿಐಎ ಕೂಡ ಕಾಂಗ್ರೆಸ್ಗೆ ಹಣ ನೀಡಿತ್ತು ಎನ್ನುವ ವರದಿಯಿದೆ. ಕಮ್ಯೂನಿಸ್ಟರು ಇದನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಂಡದ್ದು ಕೂಡ ಇದೆ. ಮಿಟ್ರೋಖಿನ್ ವರದಿಯನ್ನು ಅಲ್ಲಗಳೆದ ಕಮ್ಯೂನಿಸ್ಟರು “ಕಮ್ಯೂನಿಸ್ಟರು ಕೆ.ಜಿ.ಬಿ.ಯಿಂದ ಹಣ ಪಡೆದರೆ ಕಾಂಗ್ರೆಸ್ನವರು ಸಿಐಎದಿಂದ ಪಡೆದಿದ್ದಾರೆ. ಇದರಲ್ಲಿ ತಪ್ಪೇನಿದೆ?” ಎಂದೊಮ್ಮೆ ಕೇಳಿದ್ದರು. ಅಪರಾಧಿಗಳ ಸಂಖ್ಯೆ ಹೆಚ್ಚಿದ್ದಾಗ ಅವರು ಮಾಡಿದ್ದು ಅಪರಾಧ ಎನಿಸುವುದಿಲ್ಲ, ಅಲ್ಲವೆ? ಇಂತಹ ವಿತಂಡವಾದಗಳಲ್ಲಿ ಕಮ್ಯೂನಿಸ್ಟರು ಅಗ್ರಗಣ್ಯರೆಂಬುದಕ್ಕೆ ಬೇರೆ ಪುರಾವೆ ಬೇಡ. ಅಂದರೆ ಕಾಂಗ್ರೆಸ್ಸಿಗರು ಮತ್ತು ಕಮ್ಯೂನಿಸ್ಟರು ಸಮಾನ ಅಪರಾಧಿಗಳು.
ತೃತೀಯ ಜಗತ್ತಿನಲ್ಲಿ ಕೆ.ಜಿ.ಬಿ.ಯ ಜಾಲವನ್ನು ವಿಸ್ತರಿಸಲು ಭಾರತವು ಜಿಗಿತ ಫಲಕ (launching pad) ಆಗಬೇಕೆಂಬುದು ಕಮ್ಯೂನಿಸ್ಟರ ಅಪೇಕ್ಷೆಯಾಗಿತ್ತು. ಕಾಂಗ್ರೆಸ್ ಮುಖಂಡ, ಸಚಿವ ವಿ.ಕೆ. ಕೃಷ್ಣ ಮೆನನ್ ತಮ್ಮ ಚುನಾವಣಾ ವೆಚ್ಚಕ್ಕೆ ಕೆ.ಜಿ.ಬಿ.ಯಿಂದ ಹಣ ಪಡೆದಿದ್ದರೆಂದು ಮಿಟ್ರೋಖಿನ್ ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೆನನ್ ರಷ್ಯಾದಿಂದ ಕಳಪೆ ಶಸ್ತ್ರಾಸ್ತ್ರ ಮತ್ತು ವಿಮಾನಗಳನ್ನು ಖರೀದಿಸಿದ್ದರು.
ಇನ್ನು ಸಿಪಿಎಂನವರು ಕೂಡ ಏನೂ ಕಡಮೆಯಿಲ್ಲ. ದೇಶಪ್ರೇಮಕ್ಕೆ ಅವರಲ್ಲಿ ಜಾಗವಿಲ್ಲ ಎಂದರೂ ಕೂಡ ಸಲ್ಲುತ್ತದೆ; ಅದರ ಮುಂದಿನ ಹೆಜ್ಜೆ ದೇಶದ್ರೋಹ. ಚೀನಾ ಬೆಂಬಲಿಗರಾದ ಕಮ್ಯೂನಿಸ್ಟರು ಚೀನಾ ಅಧ್ಯಕ್ಷನನ್ನು ತಮ್ಮ ಅಧ್ಯಕ್ಷ ಎಂದದ್ದಿದೆ; ಅದೇ ರೀತಿ ಚೀನಾದ ಸೇನೆಯನ್ನು ಅವರು ‘ಮುಕ್ತಿ ಸೇನೆ’ (ಲಿಬರೇಶನ್ ಆರ್ಮಿ) ಎಂದು ಕರೆಯುತ್ತಾರೆ. ಯಾರ ಮುಕ್ತಿ ಎಂಬ ಪ್ರಶ್ನೆಯ ಉತ್ತರ ನಿಗೂಢ!
ಹಗರಣಗಳ ರಾಜ – ಬೊಫೋರ್ಸ್
ಸ್ವತಂತ್ರ ಭಾರತದಲ್ಲಿ ಸುದೀರ್ಘ ಕಾಲ ಜೀವಂತವಾಗಿದ್ದ ಒಂದು ಹಗರಣವೆಂದರೆ ಅದು ಬೊಫೋರ್ಸ್ ಫಿರಂಗಿ ಖರೀದಿಗೆ ಸಂಬಂಧಿಸಿದ ಹಗರಣ; ಅದನ್ನು ‘ಹಗರಣಗಳ ರಾಜ’ ಎಂದು ಬಣ್ಣಿಸಲಾಗುತ್ತದೆ. ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ಹಗರಣವಾದ ಕಾರಣ ಇದರಲ್ಲಿ ದೇಶದ ಭದ್ರತೆಯ ಅಂಶ ಕೂಡ ಅಡಕವಾಗಿದೆ. ಈ ಹಗರಣದಲ್ಲಿ ಭಾಗಿಯಾದವರು ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವುದು ಮತ್ತು ಯರ್ಯಾರನ್ನೋ ಬಲಿಪಶುಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರೂ ಕೂಡ ಸಂಶಯದ ಮುಳ್ಳು ಯಾವಾಗಲೂ ಗಾಂಧಿ ಕುಟುಂಬದತ್ತಲೇ ತಿರುಗಿ ನಿಲ್ಲುತ್ತಿತ್ತು.
ನೆಹರು-ಗಾಂಧಿ ಕುಟುಂಬದ ಹಗರಣಗಳ ಕಡೆಗೆ ಒಮ್ಮೆ ದೃಷ್ಟಿ ಹರಿಸುವುದಾದರೆ ನೆಹರು ಅಧಿಕಾರದ ವೇಳೆ ಅನೇಕ ಹಗರಣಗಳು ಬೆಳಕಿಗೆ ಬಂದಿದ್ದವು. ಕೃಷ್ಣ ಮೆನನ್ ಅವರ ಜೀಪು ಹಗರಣ, ಮುಂಧ್ರಾ ಶೇರು ಹಗರಣ, ಜಯಂತಿ ಶಿಪ್ಪಿಂಗ್ ಹಗರಣ ಮುಂತಾದವು ಆಗ ಬೆಳಕಿಗೆ ಬಂದವು. ಅವುಗಳಲ್ಲಿ ಭಾಗಿಯಾದರೆನ್ನಲಾದ ಮೆನನ್ ಮತ್ತು ಟಿ.ಟಿ. ಕೃಷ್ಣಮಾಚಾರಿ ಅವರನ್ನು ನೆಹರು ಹಿಂದಿನಂತೆಯೇ ಗೌರವದಿಂದ ನಡೆಸಿಕೊಂಡರು.
ಇಂದಿರಾ ಕಾಲದಲ್ಲಿ
ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ಅನೇಕ ಹಗರಣಗಳು ಸ್ಫೋಟಗೊಂಡವು. ಬಲಾತ್ಕಾರದ ಹಣ ವಸೂಲಿಗೆ ಅವರು ಹೊಸಹೊಸ ವಿಧಾನಗಳನ್ನು ಕಂಡುಹಿಡಿದರು. ಅದರಲ್ಲಿ ಸಂಜಯಗಾಂಧಿ ತಾಯಿಗೆ ನೆರವಾದರು.
ಉದ್ಯಮಿಗಳು, ವ್ಯಾಪಾರಿಗಳು, ಕಟ್ಟಡ ನಿರ್ಮಾತೃಗಳು (ರಿಯಲ್ ಎಸ್ಟೇಟ್ನವರು) ಮುಂತಾದವರಿಂದ ವಸೂಲಿ ಮಾಡುವಲ್ಲಿ ಸಂಜಯ್ ನಿಷ್ಣಾತ ಎನಿಸಿದರು; ಆಗ ತುರ್ತುಪರಿಸ್ಥಿತಿಯೂ ಕೂಡಿ ಬಂತು. ವಿದೇಶಗಳ ಜೊತೆಗಿನ ವ್ಯವಹಾರಗಳಲ್ಲಿ ಕಮಿಷನ್ ಹೇಗೆ ಪಡೆಯಬೇಕೆಂದು ಆತ ಮಂತ್ರಿಗಳಿಗೆ, ಹಿರಿಯ ಅಧಿಕಾರಿಗಳಿಗೆ ಸಲಹೆ-ಸೂಚನೆ ಕೊಡುತ್ತಿದ್ದರು. ಆ ರೀತಿಯಲ್ಲಿ ಸಂಜಯಗಾಂಧಿ ಪಕ್ಷದ ಚುನಾವಣಾ ನಿಧಿಗೆ ಅಪಾರ ಹಣ ಸಂಗ್ರಹಿಸಿದರು. ರಾಜತಾಂತ್ರಿಕರಾಗಿದ್ದ ಬಿ.ಕೆ. ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಆ ಕುರಿತು ಹೇಳಿದ್ದಾರೆ.
ವಿಮಾನ ಬಿದ್ದು ಸಂಜಯ್ ಅಕಾಲ ಮರಣಕ್ಕೆ ಗುರಿಯಾದಾಗ ಆತ ಸಂಗ್ರಹಿಸಿದ ಹಣದ ವಿಷಯದ ಪ್ರಶ್ನೆ ಅಣ್ಣ ರಾಜೀವ್ಗಾಂಧಿ ಅವರ ಮುಂದೆ ಬಂತು. ಅದಕ್ಕೆ ರಾಜೀವ್ “ಪಕ್ಷದ ಕಪಾಟಿನಲ್ಲಿ ಕೇವಲ ಇಪ್ಪತ್ತು ಲಕ್ಷ ರೂ. ಇದೆ. ಇನ್ನು ಆತ ಯಾವುದೇ ಲೆಕ್ಕಪತ್ರ ಇಡದೆ ಕೋಟಿಗಟ್ಟಲೆ ರೂ. ಸಂಗ್ರಹಿಸಿದ್ದ” ಎಂದು ಉತ್ತರಿಸಿದರಂತೆ. ವಿದೇಶಗಳೊಂದಿಗೆ ಭಾರತ ಆಮದು-ರಫ್ತು ವ್ಯವಹಾರ ನಡೆಸಿದಾಗ (ಒಪ್ಪಂದ) ಕಾಂಗ್ರೆಸ್ ರಾಜಕಾರಣಿಗಳು ಕಮಿಷನ್ ರೂಪದಲ್ಲಿ ಅಪಾರ ಹಣ ಪಡೆಯುತ್ತಿದ್ದರೆಂದು ಮುಂದೆ ರಾಷ್ಟ್ರಪತಿಯಾದ ಆರ್. ವೆಂಕಟರಾಮನ್ ಅವರೇ ಹೇಳಿದ್ದಾರೆ.
ಶಸ್ತ್ರಾಸ್ತ್ರ ಖರೀದಿ
ಲಂಚ ಹೊಡೆಯುವವರಿಗೆ ಶಸ್ತ್ರಾಸ್ತ್ರ ಖರೀದಿಯು ಹೇಳಿ ಮಾಡಿಸಿದ ಕ್ಷೇತ್ರ ಎಂದರೆ ತಪ್ಪಲ್ಲ. ಕಾರಣವೆಂದರೆ, ಒಂದು ಆ ಕ್ಷೇತ್ರಕ್ಕೆ ಬಹುದೊಡ್ಡ ಮೊತ್ತ ಮೀಸಲಾಗಿರುತ್ತದೆ. ಇನ್ನೊಂದು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯವಾದ ಕಾರಣ ಗೌಪ್ಯತೆಯ ಹೆಸರಿನಲ್ಲಿ ವ್ಯವಹಾರವನ್ನು ಬಚ್ಚಿಡಲು ತುಂಬ ಅವಕಾಶಗಳಿರುತ್ತವೆ. ವಿದೇಶಗಳೊಂದಿಗೆ ವ್ಯಾಪಾರ-ವ್ಯವಹಾರ ನಡೆಸುವಾಗ ಭಾರತ ಸರ್ಕಾರ ರಹಸ್ಯ ಒಪ್ಪಂದಗಳನ್ನು ಮಾಡಿಕೊಂಡು ಕಮಿಷನ್ ಪಡೆಯುತ್ತದೆ ಎಂಬ ಮಾತು ಸಾಕಷ್ಟು ಪ್ರಚಲಿತವಿತ್ತು. ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವಾಗ ವಿದೇಶೀ ಕಂಪೆನಿಗಳು ಕಮಿಷನ್ (ಲಂಚ) ಪ್ರಮಾಣದ ಬಗ್ಗೆ ಒಪ್ಪಂದ ಮಾಡಿಕೊಳ್ಳುತ್ತವೆ ಎಂಬ ಮಾತು ಕೂಡ ಕೇಳಿಬರುತ್ತಿತ್ತು. ಜರ್ಮನ್ ವ್ಯಾಪಾರಿಗಳು ಭಾರತಕ್ಕೆ ತಮ್ಮ ಶಸ್ತಾçಸ್ತçಗಳನ್ನು ಮಾರುವಾಗ ಶೇ.೫-೧೦ರಷ್ಟು ಕಮಿಷನ್ ನೀಡುತ್ತಾರೆಂದು ಆ ರಾಷ್ಟ್ರದ ರಕ್ಷಣಾಧಿಕಾರಿಗಳೇ ಹೇಳಿದ್ದಿದೆ. ಎಚ್ಡಿಡಬ್ಲ್ಯು ಸಬ್ಮೆರಿನ್ ಮಾರಾಟದ ವೇಳೆ ಜರ್ಮನಿ ಭಾರತದ ಅಧಿಕಾರಿಗಳಿಗೆ ಕಮಿಷನ್ ನೀಡಿತೆನ್ನಲಾಗಿದೆ.
ಈ ಸಂಬಂಧವಾಗಿ ವಿದೇಶೀಯರಲ್ಲಿ ಭಾರತದ ಬಗ್ಗೆ ತಿರಸ್ಕಾರದ ಭಾವನೆ ಇದ್ದುದು ಸಹಜವೇ ಆಗಿತ್ತು. “ಭಾರತದ ರಾಜಕಾರಣಿಗಳು ದೇಶಪ್ರೇಮಿಗಳಲ್ಲ. ಹಣಕ್ಕಾಗಿ ತಮ್ಮ ಗೌರವ-ಪ್ರತಿಷ್ಠೆಗಳನ್ನು ಮಾರಿಕೊಳ್ಳುವವರು” ಎನ್ನುವ ಭಾವನೆ ವಿದೇಶೀ ವಲಯಗಳಲ್ಲಿ ಬಹುಕಾಲ ಪ್ರಚಲಿತವಿತ್ತು. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳಂತೆ ಭಾರತದ ರಾಜಕಾರಣಿಗಳೊಂದಿಗೆ ಕೂಡ ಲಂಚದ ಪೀಠಿಕೆಯಿಂದಲೇ ವ್ಯವಹಾರದ ಮಾತುಕತೆಯನ್ನು ಆರಂಭಿಸಬೇಕು ಎನ್ನುವುದು ಹಲವರ ಅನುಭವವಾಗಿತ್ತು.
ಮನಸ್ಸಿಲ್ಲದ ಮನಸ್ಸಿನಿಂದ ರಾಜಕೀಯಕ್ಕೆ ಬಂದು ತಾಯಿಯ ಹಠಾತ್ ಮರಣದಿಂದ ತಮ್ಮ ೪೦ನೆಯ ವಯಸ್ಸಿನಲ್ಲಿ ಪ್ರಧಾನಿ ಪಟ್ಟಕ್ಕೇರಿದ ರಾಜೀವ್ಗಾಂಧಿ ಅವರು ಆರಂಭದಲ್ಲಿ ಧವಳ ಚಾರಿತ್ರ್ಯಕ್ಕೆ (ಕ್ಲೀನ್ ಇಮೇಜ್) ಹಂಬಲಿಸಿದಂತೆ ತೋರುತ್ತದೆ. ಆದರೆ ಅದು ಹೆಚ್ಚು ಕಾಲ ನಡೆಯಲಿಲ್ಲ. ಆಡಳಿತದ ಮೇಲೆ ಹಿಡಿತ ಸಾಧಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕ್ರಮೇಣ ಅವರ ನಿವಾಸವು ಲಂಚ-ಕಮಿಷನ್ಗಳನ್ನು ನಿರ್ಧರಿಸುವ ಕೇಂದ್ರವಾಯಿತೆಂದು ಸಂಪುಟ ಕಾರ್ಯದರ್ಶಿಯಾಗಿದ್ದ ಬಿ.ಜಿ. ದೇಶಮುಖ್ ತಮ್ಮ ಆತ್ಮಕಥನದ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ. ಸೋನಿಯಾ ಬಂಧುಗಳು, ರಾಜೀವ್ ಅವರ ಮಾವ ಅವರೆಲ್ಲ ಕಮಿಷನ್ ಏಜೆಂಟರ ಪಾತ್ರ ನಿರ್ವಹಿಸಿ ಭ್ರಷ್ಟಾಚಾರದ ಉದ್ದಗಲಗಳನ್ನು ಹೆಚ್ಚಿಸಿದರೆಂದು ಆರೋಪಿಸಲಾಗಿದೆ.
‘ರಾ’ (ಆರ್ಎಡಬ್ಲ್ಯು) ನಿರ್ದೇಶಕ ಜೋಶಿ ಅವರು ಕೂಡ ರಾಜೀವ್ ಅವರಿಂದ ಗುಪ್ತ ವ್ಯವಹಾರಗಳು ನಡೆಯುತ್ತಿದ್ದವು ಎಂದಿದ್ದಾರೆ.
ವಿ.ಪಿ. ಸಿಂಗ್ ರಾಜೀನಾಮೆ
ಬೊಫೋರ್ಸ್ ಹಗರಣದ ಕಾರಣದಿಂದ ಹಣಕಾಸು ಸಚಿವ ವಿ.ಪಿ. ಸಿಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬೊಫೋರ್ಸ್ ತೋಪುಗಳ ಮಾರಾಟದ ಸಂಬಂಧ ೧೩ ಲಕ್ಷ ಡಾಲರ್ ಕಮಿಷನ್ ನೀಡಲಾಯಿತೆಂದು ಸ್ವೀಡನ್ನ ಪತ್ರಿಕೆ ಮತ್ತು ರೇಡಿಯೊ ಬಯಲು ಮಾಡಿದವು. ಕ್ವಾಟ್ರೋಕ್ಕಿಗೆ ೧೯೮೬ ಸೆಪ್ಟೆಂಬರ್ನಲ್ಲಿ ೭೩.೨೩ ಲಕ್ಷ ಡಾಲರ್ ನೀಡಿದ್ದು ಬೆಳಕಿಗೆ ಬಂತು. ಕಮಿಷನ್ ಹಣವನ್ನು ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದಾರೆಂದು ಕೂಡ ಆ ಪತ್ರಿಕೆಗಳು ಬರೆದವು. ಹಿಂದುಜಾ ಸಹೋದರರು ಈ ವ್ಯವಹಾರದ ದಲ್ಲಾಳಿಗಳಾಗಿದ್ದರು. ಸ್ವಿಸ್ ಬ್ಯಾಂಕಿನಲ್ಲಿದ್ದ ಅವರ ಖಾತೆಗಳ ಹೆಸರು Lotus, Tulip ಹಾಗೂ Mont Blane ಎಂಬುದಾಗಿ. ಬೆಳಕಿಗೆ ಬಂದ ಹಗರಣದ ಬಗ್ಗೆ ಕೇಂದ್ರ ಸಂಪುಟದಲ್ಲಿ ಚರ್ಚಿಸಿ, ಸ್ವೀಡನ್ ಪತ್ರಿಕೆಗಳು ಅಸತ್ಯ, ನಿರಾಧಾರ ಮತ್ತು ಕುಚೋದ್ಯದ ವರದಿಗಳನ್ನು ಪ್ರಕಟಿಸಿವೆ ಎಂದು ಅವಿರೋಧವಾಗಿ ನಿರ್ಣಯಿಸಲಾಯಿತು. ಹೀಗೆ ತನಿಖೆಗೆ ಮುನ್ನವೇ ರಾಜೀವ್ಗಾಂಧಿ ‘ನಿರಪರಾಧಿ’ ಎಂದು ಘೋಷಿಸಿದರು.
ಜೆಪಿಸಿ ತನಿಖೆ
ಹಗರಣವು ಸ್ಫೋಟಗೊಳ್ಳುತ್ತಲೇ ವಿರೋಧಪಕ್ಷಗಳು ಗುಲ್ಲೆಬ್ಬಿಸಿದವು. ಆಗ ಪ್ರಧಾನಿ ರಾಜೀವ್ಗಾಂಧಿ ಪ್ರಕರಣದ ತನಿಖೆಗೆ ಸಮ್ಮತಿಸಿದರು. ಬಿ. ಶಂಕರಾನAದ ಅವರ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಯಾಯಿತು; ಸಮಿತಿಯಲ್ಲಿ ಒಂದೆರಡು ಜನ ವಿರೋಧಪಕ್ಷದ ಸದಸ್ಯರು ಕೂಡ ಇದ್ದರು. ತನಿಖೆಯ ನಾಟಕ ಆರಂಭಗೊAಡಿತು. ಏನೇ ಆದರೂ ರಾಜೀವ್ಗಾಂಧಿ ಈ ಖರೀದಿ ವ್ಯವಹಾರದಲ್ಲಿ ನಿರಪರಾಧಿ ಎಂದು ಪ್ರಮಾಣೀಕರಿಸುವುದೇ ಗುರಿ. ಬೊಫೋರ್ಸ್ ಕಂಪೆನಿಯ ತಂಡ ಭಾರತಕ್ಕೆ ಬಂದು ಜೆಪಿಸಿ ಮುಂದೆ ಕಮಿಷನ್ ಪಡೆದ ದಲ್ಲಾಳಿಗಳ ಹೆಸರು ಬಹಿರಂಗಗೊಳಿಸಲಿ ಎಂದು ಆಹ್ವಾನಿಸಲಾಯಿತು. ಆದರೆ ಅವರು ಬರಲಿಲ್ಲ. ಅನಂತರ ಕಮಿಷನ್ ಪಡೆದವರನ್ನು ಸರ್ಕಾರ ಬಂಧಿಸಬಾರದು ಎಂಬ ಶರತ್ತಿನ ಮೇರೆಗೆ ಅದು ಯಾರಿಗೆ ಸಂದಾಯವಾಗಿದೆ ಎಂದು ಹೇಳುವುದಕ್ಕೆ ಕಂಪೆನಿಯ ತಂಡ ಒಪ್ಪಿತು. ನಿರೀಕ್ಷಿತ ರೀತಿಯಲ್ಲಿ ರಾಜೀವ್ಗಾಂಧಿ ಅವರು ನಿರ್ದೋಷಿ ಎಂದು ಸಮಿತಿಯ ಅಧ್ಯಕ್ಷ ಶಂಕರಾನಂದ ಘೋಷಿಸಿದರು. ಈ ವರದಿಯ ಬಗ್ಗೆ ಭಿನ್ನಾಭಿಪ್ರಾಯ ನೀಡಿದ ಓರ್ವ ಸಂಸದನನ್ನು ಅಧ್ಯಕ್ಷ ಶಂಕರಾನಂದರು ಅಲಕ್ಷಿಸಿದರು. ಅಲ್ಲಿಗೆ ಒಂದು ಹಂತ ಮುಗಿಯಿತು.
೧೯೮೭-೮೮ರಲ್ಲಿ ಚಿತ್ರಾ ಸುಬ್ರಹ್ಮಣ್ಯಮ್ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಬೊಫೋರ್ಸ್ ಹಗರಣದ ಬಗ್ಗೆ ಸರದಿ ವರದಿಗಳನ್ನು ಪ್ರಕಟಿಸಿದಾಗ ದೊಡ್ಡ ಸುದ್ದಿಯಾಯಿತು. ಸ್ವೀಡನ್ನ ಅಧಿಕಾರಿಗಳಾಗಲಿ ಅಥವಾ ಬೊಫೋರ್ಸ್ ಕಂಪೆನಿಯಾಗಲಿ ಅದನ್ನು ನಿರಾಕರಿಸಲಿಲ್ಲ. ಬಿಡ್ ಸಲ್ಲಿಸಿದ್ದ ಫ್ರಾನ್ಸ್ನ ಸೊಫಮಾ ಕಂಪೆನಿಯನ್ನು ಬದಿಗೊತ್ತಿ ತರಾತುರಿಯಲ್ಲಿ ಬೊಫೋರ್ಸ್ಗೆ ಗುತ್ತಿಗೆ ನೀಡಲಾಗಿತ್ತು. ಬಿ.ಜಿ. ದೇಶಮುಖ್ ಅವರು ಹಿಂದುಜಾ ಅವರ ಬಳಿ ಬೊಫೋರ್ಸ್ ಬಗ್ಗೆ ಕೇಳಿದಾಗ, “ದಲ್ಲಾಳಿಗಳ ಹೆಸರು ಬಹಿರಂಗವಾದರೆ ರಾಜೀವ್ಗಾಂಧಿಯವರ ಸರ್ಕಾರ ಪೇಚಿಗೆ ಸಿಲುಕುತ್ತದೆ” ಎಂದು ಗೋಪಿ ಹಿಂದುಜಾ ಹೇಳಿದರಂತೆ. ತಮಗೆ ಸಂಬಂಧಪಟ್ಟ ವಿಷಯವಲ್ಲವೆಂದು ಹಿಂದುಜಾ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದರೆನ್ನುವ ಆರೋಪ ಕೂಡ ಇದೆ. ಆಗಿನ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್ ಮತ್ತು ಮಧ್ಯವರ್ತಿ ವಿನ್ ಚಡ್ಡಾ ಕೂಡ ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯಿತ್ತು.
ರಾವ್ ಕಾಲದ ಹಗರಣಗಳು
ಪಿ.ವಿ. ನರಸಿಂಹರಾವ್ ಪ್ರಧಾನಿಯಾದ ಮೇಲೆ (೧೯೯೧) ಕೂಡ ಭ್ರಷ್ಟಾಚಾರದ ಹಗರಣಗಳು ಮುಂದುವರಿದವು. ಹರ್ಷದ್ ಮೆಹ್ತಾ ಶೇರು ಹಗರಣ, ಹವಾಲಾ ಹಗರಣ, ಯೂರಿಯಾ ಹಗರಣ ಮತ್ತು ಸರ್ಕಾರವನ್ನು ಉಳಿಸಿಕೊಳ್ಳಲು ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಸಂಸತ್ಸದಸ್ಯರನ್ನು ಖರೀದಿಸಿದ ಹಗರಣಗಳು ಆ ಕಾಲದ ಪ್ರಮುಖ ಹಗರಣಗಳೆನಿಸಿದವು. ನರಸಿಂಹರಾಯರಿಗೆ ತಾನು ಒಂದು ಕೋಟಿ ರೂ. ನೀಡಿದೆ ಎಂದು ಹರ್ಷದ್ ಮೆಹ್ತಾ ಹೇಳಿಕೆ ನೀಡಿದಾಗಲೂ ನರಸಿಂಹರಾವ್ ತಮ್ಮ ಮೌನವನ್ನು ಮುರಿಯಲಿಲ್ಲ. ಜೊತೆಗೆ ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿದ್ದ ಬೊಫೋರ್ಸ್ ಹಗರಣವನ್ನು ಮುಚ್ಚಿಹಾಕಲು ಅವರು ಸಾಕಷ್ಟು ತಂತ್ರಗಾರಿಕೆ ನಡೆಸಿದರು; ಅದರಂತೆ ಸ್ಪೀಡನ್ ಸರ್ಕಾರಕ್ಕೆ ಪತ್ರ ಬರೆದು ಬೊಫೋರ್ಸ್ ತನಿಖಾ ಸಂಸ್ಥೆಗಳಿಗೆ ಸಹಕಾರ ಕೊಡಬಾರದೆಂದು ವಿನಂತಿಸಿದರೆಂದು ತಿಳಿದುಬಂದಿದೆ. ಆ ಪತ್ರವನ್ನು ಸ್ವೀಡಿಷ್ ಸರ್ಕಾರಕ್ಕೆ ಕೊಡುವಾಗ ಗುಟ್ಟು ರಟ್ಟಾಯಿತು; ಹೂತ ಶವವನ್ನು ಮೇಲೆತ್ತಿದ್ದಾಗ ದುರ್ನಾತ ಹಬ್ಬುವಂತೆ ಎಲ್ಲರ ಗಮನ ಸೆಳೆಯಿತೆಂದು ಗೋಪಾಲರಾವ್ ಹೇಜೀಬ್ ವಿವರಿಸಿದ್ದಾರೆ.
ನಿವೃತ್ತ ಸಂಪುಟ ಕಾರ್ಯದರ್ಶಿ ಬಿ.ಜಿ. ದೇಶಮುಖ್ ಅವರು ತಮ್ಮ ‘A Cabinet Secretary Looks Back’ ಪುಸ್ತಕದಲ್ಲಿ ಬೊಫೋರ್ಸ್ ಹಗರಣದ ಯಾವುದೇ ವಿವರಗಳನ್ನು ಮಾರೆಮಾಚಿಲ್ಲ. ಅವರ ಪ್ರಕಾರ ಸೋನಿಯಾಗಾಂಧಿಯವರ ತಂದೆ ಹಾಗೂ ಅವರ ಕುಟುಂಬಿಕರು ಈ ಹಗರಣದ ಫಲಾನುಭವಿಗಳು; ಮತ್ತು ಒಮ್ಮೆ ಅವರಿಗೆ ೨.೫೦ ಲಕ್ಷ ಡಾಲರ್ ಹಣ ಸಂದಾಯವಾಗಿದೆ. ಸಂಪುಟ ಕಾರ್ಯದರ್ಶಿಗೆ ಎಲ್ಲ ವಿಷಯಗಳು ತಿಳಿಯಬೇಕು; ಆದರೆ ಈ ವಿವರಗಳನ್ನು ತನ್ನಿಂದ ಮರೆಮಾಚಲಾಗಿತ್ತು ಎಂದವರು ಹೇಳಿದ್ದಾರೆ. ರಾಜೀವ್ಗಾಂಧಿಯವರ ಮೂವರು ಭದ್ರತಾ ಸಿಬ್ಬಂದಿಗಳಿಗೆ ಇಟಲಿಯಲ್ಲಿ ತರಬೇತಿ ಕೊಡಿಸಿದ ವೆಚ್ಚವೆಂದು ಆ ಹಣವನ್ನು ಪಡೆದುಕೊಳ್ಳಲಾಗಿತ್ತು. “ಪ್ರಧಾನಿ ರಾಜೀವ್ ನಿವಾಸಕ್ಕೆ ಯಾರಾರೋ ವಿದೇಶೀಯರು ಬಂದು ಗೌಪ್ಯ ವ್ಯವಹಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಪ್ರಧಾನಿ ನಿವಾಸವು ಅವ್ಯವಹಾರ ಮತ್ತು ಭ್ರಷ್ಟಾಚಾರಗಳ ಕೇಂದ್ರವಾಗಿತ್ತು” ಎಂದು ದೇಶಮುಖ್ ನೇರವಾಗಿಯೇ ಹೇಳಿದ್ದಾರೆ.
ಇಟಲಿ ಮೂಲದ ಒಟ್ಟೇವಿಯೋ ಕ್ವಾಟ್ರೋಕ್ಕಿ ಮತ್ತು ಹಿಂದುಜಾ ಸಹೋದರರು ಈ ಹಗರಣದಲ್ಲಿ ಕೋಟ್ಯಂತರ ರೂ. ಕಮಿಷನ್ ಪಡೆದಿದ್ದಾರೆ. ದೊಡ್ಡವರನ್ನು ಶಿಕ್ಷಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಮರ್ಥವಾಗಿಲ್ಲ; ಅವರನ್ನು ತಜ್ಞರು ಮತ್ತು ಪ್ರತಿಭಾವಂತರಾದ ವಕೀಲರು ರಕ್ಷಿಸುತ್ತಾರೆ ಎನ್ನುವ ನಮ್ಮ ಸಾರ್ವಕಾಲಿಕ ಸತ್ಯವನ್ನು ಪುಸ್ತಕ ತೆರೆದಿಟ್ಟಿದೆ. ಕೇವಲ ೪೮ ಗಂಟೆಗಳಲ್ಲಿ ಅಂದಿನ ಕೇಂದ್ರ ಸಂಪುಟವು ಬೊಫೋರ್ಸ್ ವ್ಯವಹಾರಕ್ಕೆ ಒಪ್ಪಿಗೆ ಕೊಟ್ಟಿದ್ದೇಕೆ ಎಂದು ಪ್ರಶ್ನಿಸುವ ಹೇಜೀಬ್, ರಾಜೀವ್ಗಾಂಧಿಯವರು ಈಗ ಇಲ್ಲವಾದ್ದರಿಂದ ಬೊಫೋರ್ಸ್ ಹಗರಣದ ಚರ್ಚೆ ಸೂಕ್ತವಲ್ಲ ಎನ್ನುವ ಸಿದ್ಧಾಂತವು ಅಪಾಯಕಾರಿ ಎಂದು ಅಭಿಪ್ರಾಯಪಡುತ್ತಾರೆ ಮತ್ತು ಚರ್ಚೆ ನಡೆಯಬೇಕೆಂದು ಆಗ್ರಹಿಸುತ್ತಾರೆ.
ಹಗರಣದ ರಜತೋತ್ಸವ
೨೦೦೭ರ ಜೂನ್ ತಿಂಗಳಿನ ಲೇಖನದಲ್ಲಿ ಅವರು ಬೊಫೋರ್ಸ್ ಹಗರಣದ ತನಿಖೆ ಈಗ ರಜತೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳುತ್ತಾರೆ. ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ವಾಟ್ರೋಕ್ಕಿಯನ್ನು ರಕ್ಷಿಸಿದರೆ ಸೋನಿಯಾಗಾಂಧಿ ಅವರನ್ನು ರಕ್ಷಿಸಿದ ಹಾಗಾಗುತ್ತದೆ ಎನ್ನುವ ಭಾವನೆ ಕಾಂಗ್ರೆಸ್ನಲ್ಲಿದೆ. ಬೊಫೋರ್ಸ್ ಹಗರಣದ ಪೂರ್ಣ ಸ್ವರೂಪವನ್ನು ತಿಳಿಯಬೇಕಿದ್ದರೆ ಸೋನಿಯಾಗಾಂಧಿ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂದು ಸ್ವೀಡಿಷ್ ತನಿಖೆಗಾರ ಸ್ಟೆನ್ ಲಿಂಡ್ಸ್ಟ್ರೋಮ್ ಹೇಳಿದ್ದರು. ನಾಟಕ-ಸಿನೆಮಾಗಳಂತೆ ಕ್ವಾಟ್ರೋಕ್ಕಿ ಮತ್ತು ಸೋನಿಯಾ ಹಗರಣದ ನಾಯಕ-ನಾಯಕಿಯರು ಎಂಬ ಮಾತು ಕೂಡ ಬಂತು. ಸೋನಿಯಾ ಕ್ವಾಟ್ರೋಕ್ಕಿ ದಂಪತಿಯ ಸ್ನೇಹಿತೆ. ಕ್ವಾಟ್ರೋಕ್ಕಿ ರಾಜೀವ್ಗಾಂಧಿಯವರ ಸ್ನೇಹಕ್ಕೆ ಬಂದ ಪರಿಣಾಮವಾಗಿ ಈ ಹಗರಣ ನಡೆದಿದೆ. ಎ.ಬಿ. ಬೊಫೋರ್ಸ್ ಕಂಪೆನಿ ಕ್ವಾಟ್ರೋಕ್ಕಿಯ ಮೂಲಕವೇ ತನ್ನ ವ್ಯವಹಾರ ನಡೆಸಿತ್ತು. ಕಂಪೆನಿ ಆತನಿಗೆ ದಲ್ಲಾಳಿಯ ಹಣ ನೀಡಿದ್ದು ಕೂಡ ಬಯಲಾಗಿದೆ. ಒಟ್ಟಿನಲ್ಲಿ ರಾಜೀವ್ಗಾಂಧಿ ಬೊಫೋರ್ಸ್ ಹಗರಣದ ಮುಖ್ಯ ಆರೋಪಿಯಾಗಿ ಕಂಡುಬರುತ್ತಾರೆ. ಹಗರಣವನ್ನು ಮುಚ್ಚಿ ಹಾಕಲು ಅವರು ಪ್ರಯತ್ನಿಸಿದ್ದು ಗುಟ್ಟಾಗಿ ಉಳಿದಿಲ್ಲ.
ಚಂದ್ರಶೇಖರ್ ಅವರು ಕಾಂಗ್ರೆಸ್ ಬೆಂಬಲದ ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿದ್ದ ವೇಳೆ ಕೂಡ ಬೊಫೋರ್ಸ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಿತು. “ಈ ಹಗರಣದಲ್ಲಿ ಯಾವುದೇ ಹುರುಳಿಲ್ಲ” ಎಂದು ಸಾಲಿಸಿಟರ್ ಜನರಲ್ ಕೆಟಿಎಸ್ ತುಳಸಿ ಅವರು ದೆಹಲಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ಆಗ ಸಿಬಿಐ ಅಧಿಕಾರಿ ಕೆ. ಮಾಧವನ್ ಅವರು, ಸರ್ಕಾರಿ ವಕೀಲರು ಸುಳ್ಳು ಹೇಳುತ್ತಿದ್ದಾರೆಂದು ನ್ಯಾಯಾಲಯದ ಗಮನಕ್ಕೆ ತಂದರು. ಅದೇ ಕಾರಣಕ್ಕೆ ಮಾಧವನ್ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.
ಸೋನಿಯಾ ಆಸಕ್ತಿ
೧೯೯೬ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಕಂಡುಬಂದಾಗ ಸೀತಾರಾಂ ಕೇಸರಿ ಅವರನ್ನು ಬದಿಗೊತ್ತಿ ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆಯಾದರು ಮತ್ತು ಸಿಬಿಐ ಮೇಲೆ ಪ್ರಭಾವ ಬೀರಿ ಬೊಫೋರ್ಸ್ ತನಿಖೆ ಮಂದಗತಿಯಲ್ಲಿ ಸಾಗುವಂತೆ ಪ್ರಯತ್ನಿಸಿದರು. ಪ್ರತಿಪಕ್ಷ ನಾಯಕಿಯಾದ ಬಳಿಕ ಅವರು ಕ್ವಾಟ್ರೋಕ್ಕಿ ರಕ್ಷಣೆಗೆ ಆದ್ಯತೆ ನೀಡಿದರು. ೨೦೦೪ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂತು. ೨೦೦೫ರ ಕೊನೆಯ ಹೊತ್ತಿಗೆ ಕ್ವಾಟ್ರೋಕ್ಕಿ ಲಂಡನ್ನ ಬ್ಯಾಂಕಿನಲ್ಲಿಟ್ಟಿದ್ದ ದೊಡ್ಡ ಮೊತ್ತ ತೊಂದರೆಗೆ ಸಿಲುಕಿತು. ಡಿಸೆಂಬರ್ನಲ್ಲಿ ಸರ್ಕಾರ ಅಡಿಶನಲ್ ಸಾಲಿಸಿಟರ್ ಜನರಲ್ ಅವರನ್ನು ಅಲ್ಲಿಗೆ ಕಳುಹಿಸಿ, ಬ್ಯಾಂಕಿನಲ್ಲಿಟ್ಟಿದ್ದ ಹಣದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ಹಣ ಬಿಡುಗಡೆಗೆ ಕ್ರಮಕೈಗೊಂಡಿತು. ಆದರೆ ಕ್ವಾಟ್ರೋಕ್ಕಿ ಬ್ಯಾಂಕಿನಲ್ಲಿರಿಸಿದ್ದ ಆ ಹಣಕ್ಕೂ ಬೊಫೋರ್ಸ್ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಲು ಅವರ ಕಾನೂನು ತಜ್ಞರು ಮರೆಯಲಿಲ್ಲ.
೨೦೦೭ರಲ್ಲಿ ಯಾವುದೋ ಪ್ರಕರಣದ ಸಂಬಂಧ ಕ್ವಾಟ್ರೋಕ್ಕಿ ಅರ್ಜೆಂಟೀನಾದಲ್ಲಿ ಬಂಧಿತನಾದ. ವಿಚಾರಣೆಗೆ ಸಂಬಂಧಿಸಿ ಭಾರತದಲ್ಲಿ ಆತನ ಅಗತ್ಯವಿತ್ತು. ಆದರೆ ಸರ್ಕಾರ ಅರ್ಜೆಂಟೀನಾದಲ್ಲಿ ಆತ ಬಂಧನಕ್ಕೊಳಗಾದ ಮಾಹಿತಿಯನ್ನು ಸಂಸತ್ತಿಗೆ ತಿಳಿಸಲೇ ಇಲ್ಲ.
ಸಿಬಿಐ ಕಣ್ಣುಮುಚ್ಚಾಲೆ
ಅದಲ್ಲದೆ ಸಿಬಿಐ ಕ್ವಾಟ್ರೋಕ್ಕಿಯನ್ನು ಹೊರತುಪಡಿಸಿ ಇತರ ಆರೋಪಿಗಳನ್ನು ಮಾತ್ರ ತಮಗೆ ಹಸ್ತಾಂತರಿಸುವಂತೆ ಆರ್ಜೆಂಟೀನಾ ಸರ್ಕಾರವನ್ನು ಕೇಳಿತು. ಸಿಬಿಐ ತಂಡ ಬ್ಯೂನಸ್ ಐರಿಸ್ನಲ್ಲಿ ಠಿಕಾಣಿ ಹೂಡಿದ್ದರೂ ಕೂಡ ಅಗತ್ಯ ಕ್ರಮಕೈಗೊಳ್ಳಲಿಲ್ಲ. ಮಾತ್ರವಲ್ಲ, ಕ್ವಾಟ್ರೋಕ್ಕಿಯನ್ನು ಬಂಧಿಸಲು ಇಂಟರ್ಪೋಲ್ಗೆ ಸಂದೇಶ ಕಳುಹಿಸಿರುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿದರು; ಹಾಗೂ ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ಪ್ರತಿಗಳನ್ನು ಇಂಟರ್ಪೋಲ್ ಕಚೇರಿಗೆ ಕಳುಹಿಸಿರುವುದಾಗಿ ಹೇಳಿದರು. ಫೆಬ್ರುವರಿ ೭, ೨೦೦೭ರಂದು ಕ್ವಾಟ್ರೋಕ್ಕಿ ಬಂಧನವಾದ ಕೂಡಲೇ ಆತನನ್ನು ಬಿಡಬಾರದೆಂದು ಆರ್ಜೆಂಟೀನಾ ಅಧಿಕಾರಿಗಳಿಗೆ ಸಿಬಿಐ ಸೂಚಿಸಿತ್ತು ಎಂದು ಸುಪ್ರೀಂಕೋರ್ಟಿಗೆ ತಿಳಿಸಲಾಯಿತು.
ಆದರೆ ನಿಜವೆಂದರೆ, ಆರ್ಜೆಂಟೀನಾದಲ್ಲಿ ಕ್ವಾಟ್ರೋಕ್ಕಿ ಬಂಧನವಾದೊಡನೆ ಆತನ ಹಸ್ತಾಂತರಕ್ಕೆ (ಗಡೀಪಾರು) ಸಿಬಿಐ ಪ್ರಯತ್ನಿಸಲೇ ಇಲ್ಲ. ಭಾರತ-ಆರ್ಜೆಂಟೀನಾ ನಡುವೆ ಗಡೀಪಾರು ಒಪ್ಪಂದ ಆಗಿಲ್ಲ ಎಂದು ಕೂಡ ಸಿಬಿಐ ಹೇಳಿತು; ಅಲ್ಲಿ ಕೂಡ ದಾರಿ ತಪ್ಪಿಸುವ ಉದ್ದೇಶವಿದೆ. ಈ ದೇಶಗಳ ನಡುವೆ ೧೯೪೭ರಿಂದಲೇ ಗಡೀಪಾರು ಒಪ್ಪಂದವಿತ್ತು ಎಂದು ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಲೋಕಸಭೆಗೆ ತಿಳಿಸಿದರು. ಬಂಧನವಾದ ಮೇಲೆ ವಾರಗಟ್ಟಲೆ ಸಿಬಿಐ ಅದನ್ನು ಲೋಕಸಭೆಗೆ ತಿಳಿಸಿರಲಿಲ್ಲ. ಅದನ್ನು ವಿರೋಧಪಕ್ಷಗಳು ಟೀಕಿಸಿದವು.
ಹೀಗೆ ಗುಟ್ಟು ಮಾಡಿದ್ದಕ್ಕೆ ಕಾರಣ ಇಲ್ಲದಿಲ್ಲ. ಕಾನೂನಿನ ಪ್ರಕಾರ ಅಲ್ಲಿ ಬಂಧನವಾಗಿ ೩೦ ದಿನದೊಳಗೆ ಆತನನ್ನು ಭಾರತಕ್ಕೆ ಕರೆತರಬೇಕಿತ್ತು; ಮತ್ತು ನ್ಯಾಯಾಲಯಕ್ಕೆ ತಿಳಿಸಬೇಕಿತ್ತು. ಇನ್ನೊಂದೆಡೆ ಇಟಲಿ ಕ್ವಾಟ್ರೋಕ್ಕಿ ಬಿಡುಗಡೆಗೆ ಪ್ರಯತ್ನಿಸಿತು. ಆ ದೇಶದ ಇಟಲಿ ರಾಯಭಾರಿ ಅಲ್ಲಿಯ ಸರ್ಕಾರಕ್ಕೆ ಪತ್ರ ಬರೆದು “ಕ್ವಾಟ್ರೋಕ್ಕಿ ಇಟಲಿಯ ಗೌರವಸ್ಥ ನಾಗರಿಕರಾಗಿದ್ದು, ಅವರು ದೇಶಕ್ಕೆ ದೊಡ್ಡ ಕೊಡುಗೆ ಸಲ್ಲಿಸಿದ್ದಾರೆ. ಆತನನ್ನು ಜನ ‘ನೈಟ್’ (Knight) ಎಂದು ಗೌರವಿಸುತ್ತಾರೆ” ಎಂದು ಪ್ರಭಾವ ಬೀರಲು ಯತ್ನಿಸಿದ.
ಕ್ವಾಟ್ರೋಕ್ಕಿಗೆ ಅನುಕೂಲ
ಇನ್ನೊಂದೆಡೆ ಹಗರಣದ ಆರೋಪಿ ಕ್ವಾಟ್ರೋಕ್ಕಿಗೆ ಆರ್ಜೆಂಟೀನಾದಲ್ಲಿ ಅನುಕೂಲಕರ ವಾತಾವರಣ ಕೂಡ ಇತ್ತು. ಅಲ್ಲಿ ಇಟಲಿಯ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ; ಮತ್ತು ಪ್ರಭಾವ ಕೂಡ ಜಾಸ್ತಿ ಇದೆ. ಭಾರತ ಸರ್ಕಾರವಂತೂ ಆತನ ವಶಕ್ಕೆ ಪ್ರಯತ್ನಿಸಲಿಲ್ಲ; ಸಿಬಿಐ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಸಾಧ್ಯ. ಯುಪಿಎ ಸರ್ಕಾರ ಅವರ ಕೈಗಳನ್ನು ಕಟ್ಟಿಹಾಕಿದಂತಿತ್ತು. ಆರ್ಜೆಂಟೀನಾದಲ್ಲಿ ಆತನ ಬಂಧನವಾಗಿ ಅನೇಕ ದಿನಗಳವರೆಗೆ ಅದು ಸುದ್ದಿ ಮಾಧ್ಯಮದಲ್ಲಿ ಬಾರದಂತೆ ಸರ್ಕಾರದ ಕಡೆಯಿಂದ ನೋಡಿಕೊಂಡರು. ವಿದೇಶಾಂಗ ಖಾತೆ ರಾಜ್ಯ ಸಚಿವ ಆನಂದ ಶರ್ಮಾ ಅವರು “ಕ್ವಾಟ್ರೋಕ್ಕಿ ಬಂಧನಕ್ಕೆ ಸರಿಯಾದ ಕಾರಣವಿಲ್ಲ. ಬಂಧನಕ್ಕೆ ಆಜ್ಞೆ ೧೯೮೭ರವರೆಗೆ ಮಾತ್ರ ಇತ್ತು” ಎನ್ನುವ ಹೇಳಿಕೆಯನ್ನು ನೀಡುವ ಭಂಡತನವನ್ನು ಕೂಡ ತೋರಿಸಿದರು; ಮಲೇಷ್ಯಾದಲ್ಲಿ ಅವರ ಬಂಧನವಾದ ಅನಂತರ ಪುನಃ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಿದ್ದಿಲ್ಲ ಎಂದೂ ಅವರು ಹೇಳಿದರು. ಇಟಲಿ ಸರ್ಕಾರವಂತೂ ಕ್ವಾಟ್ರೋಕ್ಕಿಯನ್ನು ಬಂಧಿಸಲೇ ಇಲ್ಲ.
ಭ್ರಷ್ಟಾಚಾರವು ನಮ್ಮ ರಾಜಕೀಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವಾಗ ಬೊಫೋರ್ಸ್ ಹಗರಣಕ್ಕೆ ಏಕೆ ಅಷ್ಟೊಂದು ಮಹತ್ತ÷್ವ ಎಂದು ಕೇಳಿದವರಿದ್ದಾರೆ. ಕಾರಣ ಸ್ಪಷ್ಟ; ಇದರಲ್ಲಿ ಪ್ರಧಾನಿಯೇ ಭಾಗಿಯಾಗಿದ್ದರು. ಭಾರತದ ಮಧ್ಯವರ್ತಿಗಳಿಗೆ ೫ ಕೋಟಿ ರೂ. ನೀಡಲಾಯಿತೆಂದು ೧೯೮೭ರಲ್ಲಿ ಬೊಫೋರ್ಸ್ ಕಂಪೆನಿ ಹೇಳಿದ್ದು, ಅಲ್ಲಿಯ ರೇಡಿಯೋದಲ್ಲಿ ಪ್ರಸಾರವಾಯಿತು. ಪ್ರಧಾನಿ ರಾಜೀವ್ ಗಾಬರಿಗೊಂಡು “ನಮ್ಮ ಕುಟುಂಬದರ್ಯಾರೂ ಭ್ರಷ್ಟಾಚಾರಿಗಳಲ್ಲ. ನಾವು ಯಾರೂ ಬೊಫೋರ್ಸ್ ಕಂಪೆನಿಯಿಂದ ಹಣ (ಲಂಚ) ಪಡೆದಿಲ್ಲ” ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದರು. ಆಗ ಕಂಪೆನಿಯವರು “ಭಾರತಕ್ಕೆ ಬಂದು ಕಮಿಷನ್ ಪಡೆದವರ ಹೆಸರು ಹೇಳುತ್ತೇವೆ” ಎಂದರು. ಅದಕ್ಕೆ ರಾಜೀವ್ “ಕಂಪೆನಿಯವರು ಭಾರತಕ್ಕೆ ಬರುವುದು ಬೇಡ” ಎಂದು ಸೂಚಿಸಿದರು. ಆಗ ಸೋನಿಯಾಗಾಂಧಿ, ಅವರ ಕುಟುಂಬಿಕರು, ಸ್ನೇಹಿತರು ಬೊಫೋರ್ಸ್ನ ಕಮಿಷನ್ ಪಡೆದಿರಬಹುದೆನ್ನುವ ದಟ್ಟವಾರ್ತೆ ಹಬ್ಬಿತು.
ರಾಜೀವ್ ಅನಂತರ ಪ್ರಧಾನಿ ನರಸಿಂಹರಾವ್ ಅವರು ಕಂಪೆನಿಯ ಮೇಲೆ ಪ್ರಭಾವ ಬೀರಿ ಹಗರಣದ ತನಿಖೆಯು ವೇಗವಾಗಿ ನಡೆಯದಂತೆ ನೋಡಿಕೊಂಡರು. ಇಟಲಿ ಪ್ರಧಾನಿ ೨೦೦೭ರ ಫೆಬ್ರುವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಕ್ವಾಟ್ರೋಕ್ಕಿ ಪ್ರಕರಣದ ಬಗ್ಗೆ ಯಾರೂ ಮಾತನಾಡಲಿಲ್ಲ. ಆತನಿಗೆ ಸಂಬಂಧಿಸಿ ಗಡೀಪಾರು ಒಪ್ಪಂದವನ್ನು ಕೂಡ ಮಾಡಿಕೊಳ್ಳಲಿಲ್ಲ. ದೆಹಲಿಯಲ್ಲಿದ್ದ ಕ್ವಾಟ್ರೋಕ್ಕಿ ಪುತ್ರ ಮಾಸಿವೋ ‘ಭಾರತದ್ದು ಭ್ರಷ್ಟ ರಾಜ್ಯವ್ಯವಸ್ಥೆ’ ಎಂದು ಹೇಳುವ ಉದ್ಧಟತನವನ್ನು ಕೂಡ ಪ್ರದರ್ಶಿಸಿದ್ದ.
ಕ್ವಾಟ್ರೋಕ್ಕಿ ಬಚಾವೋ
ಇಟಲಿ ಪ್ರಜೆ ಕ್ವಾಟ್ರೋಕ್ಕಿಯ ರಕ್ಷಣೆಗಾಗಿ ಏನೆಲ್ಲ ಪ್ರಯತ್ನಗಳು, ತಂತ್ರ-ಪ್ರತಿತAತ್ರಗಳು ನಡೆದವೆಂಬುದು ಈಗಾಗಲೆ ಸ್ಪಷ್ಟವಾಗಿದೆ. ಅದು ಕ್ವಾಟ್ರೋಕ್ಕಿ ಬಚಾವೋ ಆಂದೋಲನದ ಸ್ವರೂಪವನ್ನೇ ಪಡೆದಿತ್ತು. ಆತ ಯಾರು? ಅವನಿಗೆ ಅಷ್ಟು ಮಹತ್ತ್ವ ಪ್ರಾಪ್ತವಾದದ್ದು ಹೇಗೆ? ಇಡೀ (ಭಾರತ) ಸರ್ಕಾರ ಆತನ ರಕ್ಷಣೆಗೆ ನಿಂತದ್ದೇಕೆ – ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಬೊಫೋರ್ಸ್ ಹಗರಣವು ಜಾಗತಿಕ ಹಗರಣಗಳ ಸಾಲಿನಲ್ಲಿ ಸ್ಥಾನ ಪಡೆದಿದೆ (ಉದಾ-ವಾಟರ್ಗೇಟ್). ಕ್ವಾಟ್ರೋಕ್ಕಿ ರಕ್ಷಣೆಗೆ ಕಾಂಗ್ರೆಸ್ ಕಟಿಬದ್ಧವಾಗಿತ್ತು. ಆತ ಇಟಲಿಯ ಮಿಲಾನ್ನ ಕಂಪೆನಿ ಸ್ಯಾಮ್ಪ್ರೊಗೆಟ್ಟಿಯ ಪ್ರತಿನಿಧಿಯಾಗಿದ್ದ. ಮೊದಲು ಚಾರ್ಟರ್ಡ್ ಅಕೌಂಟೆಂಟ್ ಆಗಿ ಚೆನ್ನೈಗೆ ಬಂದು ತಳವೂರಿದ್ದ. ಇಟಲಿಯವನಾದ ಕಾರಣ ಸೋನಿಯಾ ಮತ್ತು ರಾಜೀವ್ಗಾಂಧಿ ಅವರಿಗೆ ನಿಕಟವರ್ತಿಯಾದ. ರಾಜೀವ್ ಮರಣಾನಂತರ ಸೋನಿಯಾ ಅವರಿಗೆ ತೀರ ಹತ್ತಿರದ ಸಲಹೆಗಾರನಾದ. ವಿವಿಧ ಕಂಪೆನಿಗಳ ಪ್ರತಿನಿಧಿಯಾಗಿ ತಂತ್ರಜ್ಞಾನ, ಉದ್ಯಮಗಳ ಮ್ಯಾನೇಜ್ಮೆಂಟ್, ಕಟ್ಟಡನಿರ್ಮಾಣ ಮುಂತಾದವುಗಳಲ್ಲಿ ಸರ್ಕಾರದ ಗುತ್ತಿಗೆ ಪಡೆದು ಭಾರೀ ಹಣ ಸಂಪಾದಿಸಿದ. ತೈಲಾಗಾರಗಳಿಗೆ ಸಿಬ್ಬಂದಿ ಒದಗಿಸುತ್ತಿದ್ದ. ಅನಿಲ ಸಂಸ್ಕರಣ, ರಾಸಾಯನಿಕ-ರಸಗೊಬ್ಬರ ಉತ್ಪಾದನೆ, ಪೈಪ್ಲೈನ್ ಮುಂತಾದವುಗಳ ಗುತ್ತಿಗೆದಾರನಾಗಿಯೂ ಹೆಸರು ಮಾಡಿದ. ಶಸ್ತ್ರಾಸ್ತ್ರ ಉತ್ಪಾದನೆ, ವ್ಯವಹಾರಗಳಲ್ಲಿ ಪರಿಣತಿ ಇಲ್ಲದಿದ್ದರೂ ಇರುವಂತೆ ಸೋಗು ಹಾಕುತ್ತಿದ್ದ. ರಾಜೀವ್ ಪ್ರಧಾನಿಯಾಗಿದ್ದಾಗ ಯಾವುದೇ ಹೊತ್ತಿಗೆ ಆತನಿಗೆ ಪ್ರಧಾನಿ ನಿವೇಶಕ್ಕೆ ಪ್ರವೇಶವಿತ್ತು. ಪ್ರಧಾನಿಯ ಮೇಲೆ ಪ್ರಭಾವ ಬೀರುವವನೆಂದು ಅಧಿಕಾರಿಗಳು ಗೌರವ ಕೊಡುತ್ತಿದ್ದರು. ಆತನನ್ನು ಕಂಡೊಡನೆ ಮಂತ್ರಿಗಳು ಆಸನದಿಂದೆದ್ದು ಸ್ವಾಗತಿಸುತ್ತಿದ್ದರು. ರಾಮಚಂದ್ರ ರಥ್ ಎನ್ನುವ ಸಚಿವರ ಕಚೇರಿಗೆ ಆತ ನುಗ್ಗಿದಾಗ ‘ಗೆಟ್ಔಟ್’ ಎಂದರು. ಅವರ ಮಂತ್ರಿಗಿರಿ ಮತ್ತೆ ಹೆಚ್ಚು ಕಾಲ ಉಳಿಯಲಿಲ್ಲ. ಸೋನಿಯಾಗಾಂಧಿ ಅವರ ಮೇಲೆ ಪ್ರಭಾವ ಬೀರಿ ಕ್ವಾಟ್ರೋಕ್ಕಿ ರಸಗೊಬ್ಬರದ ಗುತ್ತಿಗೆಯನ್ನು ಪಡೆದುಕೊಂಡಿದ್ದ.
೪೧೦ ಫಿರಂಗಿ
ಪ್ರಧಾನಿ ರಾಜೀವ್ ಅವರ ಅತಿ ಮುಖ್ಯ ಕಡತಗಳನ್ನು ಆತ ನೋಡುತ್ತಿದ್ದ. ಉನ್ನತಾಧಿಕಾರಿಗಳ ನೇಮಕದಲ್ಲಿ ಕ್ವಾಟ್ರೋಕ್ಕಿ ಕೈವಾಡ ಇರುತ್ತಿತ್ತು. ಸಂಪುಟದಲ್ಲಿ ಚರ್ಚಿಸುವ ವಿಷಯ ಆತನಿಗೆ ಮೊದಲೆ ತಿಳಿದಿರುತ್ತಿತ್ತು. ಸ್ಯಾಮ್ಪ್ರೊಗೆಟ್ಟಿ ಅಲ್ಲದೆ ಬೇರೆ ಕೆಲವು ಕಂಪೆನಿಗಳ ಮಧ್ಯವರ್ತಿ ಆಗಿ ಕೂಡ ಆತ ಗುತ್ತಿಗೆ ಪಡೆದು ಅಪಾರ ಕಮಿಷನ್ ಗಳಿಸುತ್ತಿದ್ದ. ಆ ಹಣವನ್ನು ವಿದೇಶೀ ಬ್ಯಾಂಕ್ಗಳಿಗೆ ವರ್ಗಾಯಿಸುತ್ತಿದ್ದ. ಭಾರತದ ಭ್ರಷ್ಟ ವ್ಯವಸ್ಥೆಯ ಲಾಭ ಪಡೆದು ಅಪಾರ ಹಣ ಗಳಿಸಿದ ವಿದೇಶೀಯರಲ್ಲಿ ಕ್ವಾಟ್ರೋಕ್ಕಿ ಅಗ್ರಗಣ್ಯ ಎನಿಸಿದ್ದಾನೆ.
೧೭ ಸಾವಿರ ಕೋಟಿ ರೂ.ಗಳ ಆಧುನಿಕ ಫಿರಂಗಿ ಸರಬರಾಜು ಕಂಪೆನಿಯ ಸಿಇಓ ಮಾರ್ಟಿನ್ ಆರ್ಡ್ಬೋ ತನ್ನ ಡೈರಿಯಲ್ಲಿ ಕ್ವಾಟ್ರೋಕ್ಕಿಯನ್ನು ಕ್ಯೂ ಎಂದು ಗುರುತಿಸಿ, ಈತ ನಿಗೂಢ ವ್ಯಕ್ತಿ ಎಂದಿದ್ದಾರೆ. ಸ್ಯಾಮ್ಪ್ರೊಗೆಟ್ಟಿ ಕಂಪೆನಿಯ ಜೊತೆಗೆ ಭಾರತ ಒಟ್ಟು ೩೦ ಸಾವಿರ ಕೋಟಿ ರೂ.ಗಳ ವಿವಿಧ ಒಪ್ಪಂದ ಮಾಡಿಕೊಂಡಿತ್ತು. ಪೈಪ್ಲೈನ್ ಗುತ್ತಿಗೆಯನ್ನು ಫ್ರೆಂಚ್ ಕಂಪೆನಿಗೆ ನೀಡಿದ ಕಾರಣ ಆತ ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ರಾಜೀನಾಮೆ ಕೊಡುವಂತೆ ಮಾಡಿದ್ದ. ಎಲ್ಲ ಗುತ್ತಿಗೆಗಳನ್ನು ಸ್ಯಾಮ್ಪ್ರೊಗೆಟ್ಟಿಗೆ ನೀಡುವಂತೆ ಪ್ರಧಾನಿ ರಾಜೀವ್ಗಾಂಧಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಪೆಟ್ರೋಲಿಯಂ ಸಚಿವ ನವಲ್ಕಿಶೋರ್ ಶರ್ಮಾ, ಅರುಣ್ ನೆಹರು ಮುಂತಾದವರು ಕ್ವಾಟ್ರೋಕ್ಕಿ ಹಿತಾಸಕ್ತಿಯನ್ನು ಅಲಕ್ಷಿಸಿದ ಕಾರಣ ಹುದ್ದೆ ಕಳೆದುಕೊಳ್ಳಬೇಕಾಯಿತು.
ದೇಶದ ‘ಹಗರಣಗಳ ತಾಯಿ’ ಎನಿಸಿದ ಬೊಫೋರ್ಸ್ ವ್ಯವಹಾರದಲ್ಲಿ ೧೪೩೭ ಕೋಟಿ ರೂ.ಗಳಿಗೆ ೪೧೦ ಫಿರಂಗಿಗಳನ್ನು ಖರೀದಿಸಲು ನಿರ್ಧರಿಸಲಾಗಿತ್ತು (ಮಾರ್ಚ್ ೧೯೮೬). ೧೩ ತಿಂಗಳ ಬಳಿಕ ಸ್ವೀಡಿಷ್ ಕಂಪೆನಿ ಈ ವ್ಯವಹಾರದಲ್ಲಿ ಲಂಚ ನೀಡಲಾಗಿದೆ ಎಂದು ಹೇಳಿತು. ಆಗ ರಕ್ಷಣಾಖಾತೆ ರಾಜ್ಯ ಮಂತ್ರಿ ಅರುಣಸಿಂಗ್ ಮತ್ತು ಸೇನಾ ದಂಡನಾಯಕ ಸುಂದರ್ಜೀ ಈ ವ್ಯವಹಾರ ಬೇಡ ಎಂದರು. ಆದರೆ ಪ್ರಧಾನಿ ರಾಜೀವ್ ವ್ಯವಹಾರ ನಿಲ್ಲಿಸಲು ನಿರಾಕರಿಸಿದರು; ಅದರ ಹಿಂದೆ ಕ್ವಾಟ್ರೋಕ್ಕಿ ಇದ್ದ.
ಸಿಬಿಐ ಮಾರ್ಟಿನ್ ಆರ್ಡ್ಬೋ, ವಿನ್ ಚಡ್ಡಾ ಮತ್ತು ಹಿಂದುಜಾ ಸಹೋದರರ ವಿರುದ್ಧ ವಿಚಾರಣೆ ನಡೆಸಿತು. ಭ್ರಷ್ಟಾಚಾರದಿಂದ ಕೋಟ್ಯಂತರ ರೂ. ಗಳಿಸಿದ ಕ್ವಾಟ್ರೋಕ್ಕಿ ಯಾವ ಶಿಕ್ಷೆಗೂ ಗುರಿಯಾಗದೆ ಸುರಕ್ಷಿತವಾಗಿ ತನ್ನ ದೇಶಕ್ಕೆ ಮರಳಿದ ನಮ್ಮ ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳು ಆತನನ್ನು ಶಿಕ್ಷಿಸಲು ಅಸಮರ್ಥವಾದವು. ೧೯೯೩ ಜುಲೈನಲ್ಲಿ ಆತ ಭಾರತದಿಂದ ತೆರಳಿದ.
ಮುಚ್ಚಿಹಾಕುವ ಕಸರತ್ತು
ಖ್ಯಾತ ನ್ಯಾಯವಾದಿ ಹಾಗೂ ಮುಂದೆ ಕೇಂದ್ರ ಸಚಿವರಾದ ದಿ| ಅರುಣ್ ಜೇಟ್ಲಿ “ಬೊಫೋರ್ಸ್ ಪ್ರಕರಣದ ಇತಿಹಾಸವೆಂದರೆ ಮುಚ್ಚಿಹಾಕುವ (cover-up) ಯತ್ನದ ಇತಿಹಾಸ” ಎಂದು ಹೇಳಿದ್ದರು. ಯುಪಿಎ ಸರ್ಕಾರ ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸಿತು. ಸರ್ಕಾರ ಮತ್ತು ಕಾನೂನು ಮಂತ್ರಿ ಎಚ್.ಆರ್. ಭಾರದ್ವಾಜ್ ವಿಶೇಷ ಆಸಕ್ತಿ ವಹಿಸಿ ಕ್ವಾಟ್ರೋಕ್ಕಿ ನಿರಪರಾಧಿ ಎಂದು ತೀರ್ಮಾನಿಸಿದರು. ೨೦೦೫ರಲ್ಲಿ ಲಂಡನ್ ಬ್ಯಾಂಕಿನಲ್ಲಿ ಕ್ವಾಟ್ರೋಕ್ಕಿ ಹಣ ನಿರ್ಬಂಧಕ್ಕೆ ಗುರಿಯಾದಾಗ ಅದನ್ನು ಬಿಡಿಸಿಕೊಟ್ಟವರು ಸರ್ಕಾರಿ ವಕೀಲ ಬಿ. ದತ್ತಾ ಅವರು. ಕ್ವಾಟ್ರೋಕ್ಕಿ ತಕ್ಷಣ ತನ್ನ ಖಾತೆಯಿಂದ ೨೧ ಕೋಟಿ ರೂ. ತೆಗೆದು ಬೇರೆ ಬ್ಯಾಂಕ್ಗಳಿಗೆ ವರ್ಗಾಯಿಸಿದ. ಆಗ ಕಾನೂನು ಮಂತ್ರಿ ಭಾರದ್ವಾಜ್ “ಕ್ವಾಟ್ರೋಕ್ಕಿ ನಿರಪರಾಧಿಯಾಗಿದ್ದಾರೆ. ಯಾರ ವಿರುದ್ಧ ಸಾಕ್ಷಿ-ಪುರಾವೆ ಇಲ್ಲವೋ ಅವರ ಹಣದ ಮುಟ್ಟುಗೋಲು ಸರಿಯಲ್ಲ” ಎಂದು ಸಮರ್ಥಿಸಿಕೊಂಡಿದ್ದರು. ಸಿಬಿಐ ಅಧಿಕಾರಿಗಳನ್ನು ಬಿಟ್ಟು ದತ್ತಾ ಒಬ್ಬರೇ ಏಕೆ ಇಂಗ್ಲೆಂಡಿಗೆ ಹೋದರು ಎಂಬ ಪ್ರಶ್ನೆ ಆಗ ಕೇಳಿ ಬಂದಿತ್ತು.
‘ನಿರುಪಯೋಗಿ ಸಜ್ಜನ’ ಎಂದು ಖ್ಯಾತರಾದ ಎರಡು ಅವಧಿಯ ಪ್ರಧಾನಿ ಡಾ. ಮನಮೋಹನ್ಸಿಂಗ್ ಬೊಫೋರ್ಸ್ ಹಗರಣದ ತನಿಖಾ ಸಂಸ್ಥೆಗಳನ್ನು ನಿಯಂತ್ರಿಸಿ ಕ್ವಾಟ್ರೋಕ್ಕಿಗೆ ರಕ್ಷಣೆ ನೀಡಿದರು, ಆ ಮೂಲಕ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಕೂಡ ರಕ್ಷಿಸಿದರು. ಲಂಡನ್ ಬ್ಯಾಂಕಿನಲ್ಲಿದ್ದ ಕ್ವಾಟ್ರೋಕ್ಕಿ ಹಣ ಬೊಫೋರ್ಸ್ ಲಂಚದ ಹಣವೆಂದು ಗೊತ್ತಾದರೂ ಡಾ. ಸಿಂಗ್ ಮತ್ತು ಭಾರದ್ವಾಜ್ ಸಿಬಿಐ ಮೇಲೆ ಪ್ರಭಾವ ಬೀರಿ ಆ ಹಣ ಕ್ವಾಟ್ರೋಕ್ಕಿಗೆ ದಕ್ಕುವಂತೆ ಮಾಡಿದರು. “ಕ್ವಾಟ್ರೋಕ್ಕಿಗೆ ಆ ಹಣ ಎಲ್ಲಿಂದ ಬಂತು? ಮತ್ತು ಹಣವನ್ನು ಯಾರು ವರ್ಗಾಯಿಸಿದರು ಎಂಬುದಕ್ಕೆ ಪುರಾವೆ ಇಲ್ಲವೆಂದು” ಸರ್ಕಾರೀ ವಕೀಲ ದತ್ತಾ ಹೇಳಿದಾಗ ಸಿಬಿಐ ಅಧಿಕಾರಿಗಳಿಗೆ ಸರ್ಕಾರದ ಮೃದುಧೋರಣೆ ಅರ್ಥವಾಯಿತು.
ಎಷ್ಟೇ ಸತ್ಯಸಂಗತಿ ಬಯಲಾದರೂ ಸೋನಿಯಾಗಾಂಧಿ ತಾನು ಮತ್ತು ಕ್ವಾಟ್ರೋಕ್ಕಿ ನಿರಪರಾಧಿಗಳೆಂದು ವಾದಿಸುವುದನ್ನು ನಿಲ್ಲಿಸಲಿಲ್ಲ. ಕ್ವಾಟ್ರೋಕ್ಕಿ ಬಚಾವ್ ಆಂದೋಲನ ಯಶಸ್ವಿಯಾಯಿತು. ಭಾರತ ಅಪರಾಧಿಗಳನ್ನು ಶಿಕ್ಷಿಸದ ‘ಕಳಪೆಮಟ್ಟದ ರಾಷ್ಟ್ರ’ (ಬನಾನಾ ರಿಪಬ್ಲಿಕ್) ಎಂಬ ಹೆಸರನ್ನು ಹೊರಬೇಕಾಯಿತು.
ಇರಾಕ್ ತೈಲ ಹಗರಣ
ಭಾರತದಲ್ಲಿ ಭ್ರಷ್ಟಾಚಾರವು ಈ ಮಟ್ಟಕ್ಕೆ ಬೆಳೆದ ಹಿನ್ನೆಲೆಯೇನು ಎಂಬುದನ್ನು ಪರಿಶೀಲಿಸಿದರೆ ಸಾರ್ವಜನಿಕ ಜೀವನದಲ್ಲಿ ಅಂತಹ ಪ್ರಕರಣಗಳು ನಡೆದು ತಮ್ಮ ಮುಂದೆ ಬಂದಾಗ ನಮ್ಮ ನಾಯಕರು ಹೇಗೆ ನಡೆದುಕೊಂಡರು ಎಂಬುದರಿಂದಲೇ ಅದು ನಿರ್ಧಾರವಾಯಿತೆಂದು ತಿಳಿಯುತ್ತದೆ. ಸ್ವಾತಂತ್ರ್ಯದ ಆರಂಭದಲ್ಲಿ ದೇಶದ ಮುಖಂಡರು ಸಾಕಷ್ಟು ಪ್ರಾಮಾಣಿಕರಾಗಿದ್ದರೂ ಕೂಡ ಚುನಾವಣಾ ವೆಚ್ಚಕ್ಕೆ ಹಣ ಬೇಕಿತ್ತು. ಅದಕ್ಕೆ ಉದ್ಯಮಿಗಳು ಮತ್ತು ವ್ಯಾಪಾರಿಗಳಿಂದ ಹಣ ಸಂಗ್ರಹಿಸಿದರು. ಕಾಂಗ್ರೆಸ್ ನಿಧಿಗೆ ಹಣ ಕೊಟ್ಟವರು ತಮ್ಮ ಅಪ್ರಾಮಾಣಿಕ ವ್ಯವಹಾರಗಳಿಗೆ ಸರ್ಕಾರದ ಸಮ್ಮತಿ ಕೇಳಿದರು. ಭ್ರಷ್ಟಾಚಾರದ ಗಂಗೋತ್ರಿ ಅದೇ. ಹಾಗೆ ಹಣ ತರಬಲ್ಲವರು ಪಕ್ಷದಲ್ಲಿ ಪ್ರಭಾವಿಗಳೆನಿಸಿದರು. ಮುಂದೆ ಎರಡನೇ ಹಂತದ ಮುಖಂಡರು ಕೂಡ ಚುನಾವಣಾನಿಧಿಗೆ ಧನ ಸಂಗ್ರಹ ಮಾಡಿದರು. ಇಂದಿರಾಗಾಂಧಿಯವರು ಪ್ರಧಾನಿಯಾದ ಮೇಲೆ ಈ ಬಗೆಯ ಸಂಗ್ರಹ ಹೆಚ್ಚಿನ ವೇಗವನ್ನು ಪಡೆದುಕೊಂಡಿತು. ಇಂದಿರಾ-ಸಂಜಯಗಾಂಧಿ ಸಂಗ್ರಹದ ವಿಧಾನವನ್ನು ಮಾಜಿ ಸಂಪುಟ ಕಾರ್ಯದರ್ಶಿ ಬಿ.ಜಿ. ದೇಶಮುಖ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ವಸೂಲಿಯ ಲಕ್ಷಣಗಳು ಕೂಡ ಇದ್ದವು. ಇಂದಿರಾ ೧೯೮೦ರಲ್ಲಿ ಮತ್ತೆ ಪ್ರಧಾನಿಯಾದಾಗ ಸುಧಾರಿತ ಕ್ರಮಗಳನ್ನು ತಂದರು. ಶಸ್ತ್ರಾಸ್ತ್ರ ಖರೀದಿ ವೇಳೆ ಕಮಿಷನ್ ಪಡೆಯುವುದು, ಶೇರು, ಹವಾಲಾ ಮುಂದಿನ ಆಯಾಮಗಳಾದವು.
‘ಆಹಾರಕ್ಕಾಗಿ ತೈಲ’
೧೯೯೦ರಲ್ಲಿ ವಿಶ್ವಸಂಸ್ಥೆ ಇರಾಕ್ನ ನಾಯಕ ಸದ್ದಾಂಹುಸೇನ್ರ ಕೆಲವು ಅಪರಾಧಗಳಿಗಾಗಿ ಅದರ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿತು. ಐದು ವರ್ಷಗಳಾದ ಬಳಿಕ ಅದನ್ನು ಸ್ವಲ್ಪ ಸಡಿಲಿಸಿ ತೈಲ ಮಾರಾಟದಿಂದ ಬರುವ ಲಾಭವನ್ನು ಆಹಾರಧಾನ್ಯಗಳ ಖರೀದಿಗೆ ಬಳಸಲು ಅನುಮತಿ ನೀಡಿತು. ಅದೇ ‘ಆಹಾರಕ್ಕಾಗಿ ತೈಲ’. ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಕೋಫಿ ಅನ್ನಾನ್ ಮತ್ತು ‘ಆಹಾರಕ್ಕಾಗಿ ತೈಲ’ ಕಾರ್ಯಕ್ರಮದ ಆಡಳಿತಗಾರ ಬಿನಾನ್ ಸೇವಾನ್ ಇದರಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ಲಕ್ಷಣ ಕಂಡುಬಂದಾಗ ಹಗರಣದ ಸ್ವರೂಪ ತಿಳಿಯಲು ತನಿಖಾ ಆಯೋಗವನ್ನು ನೇಮಿಸಿದರು. ಸೆಪ್ಟೆಂಬರ್ ೨೮, ೨೦೦೫ರಂದು ಪ್ರಕಟಿಸಿದ ವರದಿಯಲ್ಲಿ ಆಯೋಗ ‘ಆಹಾರಕ್ಕಾಗಿ ತೈಲ’ ಹಗರಣದಲ್ಲಿ ಸದ್ದಾಂ ಹುಸೇನ್ ೧೮೦ ಕೋಟಿ ಡಾಲರ್ ದುರುಪಯೋಗ ಮಾಡಿದ್ದಾಗಿ ಆರೋಪಿಸಿತು.
ನಟವರಸಿಂಗ್ ಪಾತ್ರ
ಕೆಲವು ವ್ಯಕ್ತಿಗಳು, ಸಂಸ್ಥೆಗಳು, ರಾಜಕೀಯ ಪಕ್ಷಗಳು ಸದ್ದಾಂ ಜೊತೆ ವ್ಯವಹಾರ ನಡೆಸಿ ಲಾಭ ಮಾಡಿಕೊಂಡಿದ್ದರು. ಅದರಲ್ಲಿ ಭಾರತದ ವಿದೇಶಾಂಗ ವ್ಯವಹಾರ ಸಚಿವ ನಟವರಸಿಂಗ್ ಕೂಡ ಇದ್ದರು. ೨೦೦೧ರಲ್ಲಿ ಸದ್ದಾಂ ನಟವರಸಿಂಗ್ಗೆ ೪೦ ಲಕ್ಷ ಬ್ಯಾರೆಲ್ ತೈಲ ನೀಡಿದ್ದ. ಅದರಲ್ಲಿ ಕಾಂಗ್ರೆಸ್ ‘ಗುತ್ತಿಗೆರಹಿತ ಫಲಾನುಭವಿ’ಯಾಗಿತ್ತು. ಪಕ್ಕಾ ಕಾಂಗ್ರೆಸ್ಸಿಗರಾದ ನಟವರಸಿಂಗ್ ಇಂದಿರಾಗಾಂಧಿ ರಾಜೀವ್ ಮತ್ತು ಸೋನಿಯಾ ನಿಷ್ಠರು. ಇಂದಿರಾಗಾಂಧಿ ಅವರು ಒಮ್ಮೆ ನಟವರಸಿಂಗ್ಗೆ “ಕೇವಲ ಖಾದಿ ಕುರ್ತಾ ಪೈಜಾಮ, ನೆಹರು ಜಾಕೆಟ್ನಿಂದ ನೀವು ಪಕ್ಕಾ ರಾಜಕಾರಣಿ ಆಗುವುದಿಲ್ಲ. ರಾಜಕೀಯದಲ್ಲಿ ಯಶಸ್ವಿ ಆಗಬೇಕಾದರೆ ದಪ್ಪ ಚರ್ಮ ಕೂಡ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದ್ದರು. ಹೀಗೆ ಆತ ಪರಿಪೂರ್ಣ ರಾಜಕಾರಣಿಯಾದರು; ಹಿಂದೆ ಅವರು ಉನ್ನತ ಸರ್ಕಾರೀ ಅಧಿಕಾರಿಯಾಗಿದ್ದವರು.
‘ಆಹಾರಕ್ಕಾಗಿ ತೈಲ’ ಬಗೆಗಿನ ವೋಲ್ಕರ್ ವರದಿ ಬಂದ ಮೇಲೆ ಅದನ್ನು ಎದುರಿಸಲು ನಟವರಸಿಂಗ್ ಅವರಿಗೆ ಕಷ್ಟವಾಯಿತು. ಆದರೂ ಸಂಭಾವಿತರಂತೆ ಮುಖವಾಡ ಧರಿಸಿಕೊಂಡಿದ್ದರು. ಅವರ ಮಗ ಜಗತ್ಸಿಂಗ್ ಕೂಡ ಈ ಹಗರಣದಲ್ಲಿ ದೊಡ್ಡ ರೀತಿಯಲ್ಲಿ ಭಾಗಿಯಾದರು. ವೋಲ್ಕರ್ ವರದಿ ಬಂದ ಹಿನ್ನೆಲೆಯಲ್ಲಿ ನಟವರಸಿಂಗ್ ರಾಜೀನಾಮೆ ನೀಡಲಿಲ್ಲ. ಅಷ್ಟರಮಟ್ಟಿಗೆ ಇಂದಿರಾ ಅವರ ಉಪದೇಶ (ದಪ್ಪ ಚರ್ಮ ಬೆಳೆಸುವುದು) ಕೆಲಸ ಮಾಡಿರಬಹುದು. ಪಕ್ಷದ ಒಳಗಿನಿಂದ ಒತ್ತಡ ಬಂದ ಕಾರಣ ಖಾತೆ ರಹಿತ ಮಂತ್ರಿಯಾದರು. ಮತ್ತೆಯೂ ಆಗ್ರಹ ಬಂದ ಮೇಲೆ ೨೦೦೫ ಡಿಸೆಂಬರ್ನಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು.
ನಟವರಸಿಂಗ್ ಪುತ್ರ ಜಗತ್ಸಿಂಗ್ ಮತ್ತು ಆತನ ಗೆಳೆಯ ಅಂದಾಲೀಬ್ ಸೆಹಗಲ್ ಸದ್ದಾಂ ಹುಸೇನ್ಗೆ ಭಾರೀ ಕಮಿಷನ್ ನೀಡಿ ತೈಲ ವ್ಯವಹಾರವನ್ನು ನಡೆಸಿದರು. ಗಳಿಸಿದ ಹಣವನ್ನು ಜಗತ್ಸಿಂಗ್ ತಂದೆಯ ಸಹಕಾರದಿಂದ ಜೋರ್ಡಾನ್ ಬ್ಯಾಂಕಿನಲ್ಲಿ ಇರಿಸಿದನೆಂದು ಬಿಜೆಪಿ ಮುಖಂಡ ಡಾ. ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದರು. ಕಾಂಗ್ರೆಸ್ ಪ್ರತಿನಿಧಿಯಾಗಿ ಇರಾಕಿಗೆ ಎರಡು ಬಾರಿ ಭೇಟಿ ನೀಡಿದ್ದ ನಟವರಸಿಂಗ್, “ನಮ್ಮ ಇರಾಕ್ ಭೇಟಿಗೂ ‘ಆಹಾರಕ್ಕಾಗಿ ತೈಲ’ ಹಗರಣಕ್ಕೂ ಸಂಬಂಧವಿಲ್ಲ” ಎಂದು ಹೇಳಲು ಮರೆಯಲಿಲ್ಲ. ಏನಿದ್ದರೂ ಸದ್ದಾಂ ತೈಲ ಕೋಟಾವನ್ನು ವಿತರಿಸುವಾಗ ವಿಶೇಷ ಕೃಪೆಗೆ ಪಾತ್ರರಾದವರಲ್ಲಿ ನಟವರಸಿಂಗ್ ಒಬ್ಬರೆಂಬುದು ಸ್ಪಷ್ಟ. ಅದರ ಜೊತೆಗೆ ಕಾಂಗ್ರೆಸ್ ಕೂಡ ಇದೆ.
ಸಚಿವ ನಟವರಸಿಂಗ್ ಹಗರಣದ ಫಲಾನುಭವಿ ಎಂದು ಗೊತ್ತಾದರೂ ಕೂಡ ಪ್ರಧಾನಿ ಮನಮೋಹನ್ಸಿಂಗ್ ಕ್ರಮಕೈಗೊಳ್ಳಲಿಲ್ಲ. ಬದಲಾಗಿ ಆತ ನಿರಪರಾಧಿ, ಸಾಚಾ ಮನುಷ್ಯ ಎಂದು ಸರ್ಟಿಫಿಕೇಟ್ ನೀಡಿದರು. ಹಾಗಾದರೆ ಪಾಠಕ್ ತನಿಖಾ ಆಯೋಗವನ್ನು ನೇಮಿಸಿದ್ದೇಕೆ? ಅಂದರೆ ಇಲ್ಲಿ ಡಾ. ಸಿಂಗ್ ಅವರೇ ದೂರುದಾರ ಮತ್ತು ಅವರೇ ನ್ಯಾಯಾಧೀಶ ಎಂದಾಯಿತು. ವಿರೋಧ ಪಕ್ಷಗಳು ಪ್ರತಿಭಟಿಸದಿದ್ದರೆ ಇರಾಕ್ ತೈಲ ಹಗರಣವು ಮುಚ್ಚಿಹೋಗುತ್ತಿತ್ತು ಎಂದು ‘ಮಂಥನ’ದ ಹೇಜೀಬ್ ಲೇಖನ ಅಭಿಪ್ರಾಯಪಟ್ಟಿದೆ. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕಾದ್ದನ್ನು ಜಗತ್ಸಿಂಗ್ ತಾನೇ ಇಟ್ಟುಕೊಂಡ ಸಂಶಯ ಕೂಡ ಇದೆ. “ಯಾರೇ ಲಂಚ ಪಡೆದದ್ದು ಸಾಬೀತಾದರೂ ಅವರ ವಿರುದ್ಧ ಕ್ರಮ ನಿಶ್ಚಿತ” ಎಂದು ಡಾ| ಸಿಂಗ್ ಗುಡುಗಿದರು. ವಾರದ ಬಳಿಕ ಮೌನ ಮುರಿದು, ತನಿಖೆ ನಡೆಸಿ ಸತ್ಯವನ್ನು ತಿಳಿಯುವುದಾಗಿ ಪ್ರಕಟಿಸಿದರು. ಮೂಲ ಯಾವುದೇ ಇರಲಿ; ಲಂಚದ ಹಣ ದೊರೆತಾಗ ಕಾಂಗ್ರೆಸ್ಸಿಗರು, ಅವರ ಕುಟುಂಬಿಕರು ಹೇಗೆ ವರ್ತಿಸುತ್ತಾರೆ ಎಂಬುದಕ್ಕೆ ಕೂಡ ಇರಾಕ್ ತೈಲ ಹಗರಣವು ಉದಾಹರಣೆ ಆದಂತಿದೆ.
ಭ್ರಷ್ಟಾಚಾರ ಮತ್ತು ಹಗರಣಗಳ ಅಡಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದರೂ ಕಾಂಗ್ರೆಸ್ ನಾಯಕರು ಇತರರ ಕಡೆಗೆ ಬೆರಳು ತೋರಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಭ್ರಷ್ಟಾಚಾರ ನಡೆಸಿಯೂ ಸಿಕ್ಕಿಬೀಳದಿರುವುದು, ಗುರುತೇ ಸಿಗದಂತೆ ಸಾಕ್ಷ್ಯನಾಶ ಮಾಡುವುದು, ಎಲ್ಲ ಆಗಿ ವಿಚಾರಣೆ ನಡೆದರೂ, ಶಿಕ್ಷೆಯೇ ಆದರೂ ಏನೂ ಆಗಿಲ್ಲವೆಂಬಂತೆ ನಡೆದುಕೊಳ್ಳುವುದು ಈ ಶತಮಾನ ದಾಟಿದ ಪಕ್ಷದ ಮಂದಿಗೆ ನೀರು ಕುಡಿದಷ್ಟು ಸುಲಭ ಎಂಬುದನ್ನು ಒಪ್ಪಿಕೊಳ್ಳಲೇಬೇಕು!
ಪಡೆದ ಲಂಚ ತಿಳಿದ ಕಾರ್ಯದರ್ಶಿಯ ಕೊಲೆ
ಹಗರಣಗಳನ್ನು ಮುಚ್ಚಿಹಾಕುವುದರಲ್ಲಿ ಚಾಣಾಕ್ಷರಾದ ಕಾಂಗ್ರೆಸ್ಸಿಗರು ಆರೋಪ ಹೊತ್ತವರಿಗೆ ರಕ್ಷಣೆ ನೀಡುವುದರಲ್ಲೂ ಸಿದ್ಧಹಸ್ತರು. ಯುಪಿಎ ಸರ್ಕಾರದಲ್ಲಿ ಕಲ್ಲಿದ್ದಲು ಸಚಿವರಾಗಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಶಿಬು ಸೊರೇನ್ ಅವರ ಮೇಲೆ ಕೊಲೆ ಆರೋಪ ಸಾಬೀತಾಗಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು (ನವೆಂಬರ್, ೨೦೦೬). ತನ್ನ ಕಾರ್ಯದರ್ಶಿ ಶಶಿಧರ ಝಾ ಅವರನ್ನು ಕೊಲೆಗೈದ ಆರೋಪ ಅವರ ಮೇಲೆ ಬಂದಿತ್ತು. ನರಸಿಂಹರಾವ್ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಯಾದಾಗ ಶಿಬು ಸೊರೇನ್ ಮತ್ತಿತರರು ಭಾರೀ ಮೊತ್ತ ಪಡೆದು ಅವಿಶ್ವಾಸದ ವಿರುದ್ಧ ಮತ ಹಾಕಿದ್ದರು. ಕೊಲೆ ಆರೋಪ ಸಾಬೀತಾದಾಗ ಶಿಬು ಇತರ ನಾಲ್ವರ ಜೊತೆ ತಿಹಾರ್ ಜೈಲು ಸೇರಿದರು. ತನ್ನ ಭ್ರಷ್ಟ ವ್ಯವಹಾರಗಳೆಲ್ಲ ತಿಳಿದಿದ್ದ ಕಾರ್ಯದರ್ಶಿಯನ್ನು ಕೊಲೆಗೈಯುವ ಹಾದಿಯನ್ನು ಆತ ತುಳಿದಿದ್ದರು. ೧೯೯೩ರಲ್ಲಿ ರಾವ್ ಸರ್ಕಾರವನ್ನು ಉಳಿಸಲು ಆತ ಭಾರೀ ಲಂಚ ಪಡೆದಿದ್ದರು; ಮುಂದಿನ ವರ್ಷ ಕಾರ್ಯದರ್ಶಿಯ ಕೊಲೆ ನಡೆಯಿತು.
ಶಿಬು ಸೊರೇನ್ ಕೃತ್ಯ ತಿಳಿದಿದ್ದರೂ ಮನಮೋಹನಸಿಂಗ್ ಆತನನ್ನು ಸಂಪುಟದಲ್ಲಿ ಸೇರಿಸಿಕೊಂಡಿದ್ದರು. ಅದರ ಫಲಶ್ರುತಿ ಎಂಬಂತೆ ಕೊಲೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಸಹೋದ್ಯೋಗಿಯ ರಾಜೀನಾಮೆಯನ್ನು ಪಡೆಯಬೇಕಾಯಿತು.