‘ಕರೆದು ಬಂದವ ಅಭ್ಯಾಗತ, ಕರೆಯದೆ ಬಂದವ ಅತಿಥಿ’ ಎಂಬ ಪದವಿವರವೊಂದಿದೆ. ಆಮಂತ್ರಣದ ಮೇರೆಗೆ ಬಂದ ಅಭ್ಯಾಗತರನ್ನು ಎಷ್ಟು ಚೆನ್ನಾಗಿ ಉಪಚರಿಸಿದರೂ ಕಡಮೆಯೇ. ಅಂಥಲ್ಲಿ ಆಗಂತುಕನಾಗಿ ಬಂದ ಅತಿಥಿಯು ಸಾಕ್ಷಾತ್ ದೇವರೇ ಎಂಬುದು ಶ್ರದ್ಧೆ. ಆತಿಥ್ಯದ ಸ್ವರೂಪವನ್ನು ಈ ನೆಲೆಯಿಂದ ನೋಡಬೇಕು.
ಶಿರಸಿ ಸಮೀಪದ ಸ್ವರ್ಣವಲ್ಲೀ ಮಠದಲ್ಲಿ ಈಚೆಗೆ ಶಿಷ್ಯಸ್ವೀಕಾರ ಕಾರ್ಯಕ್ರಮ ನಡೆಯಿತಷ್ಟೆ. ಆ ಸಂದರ್ಭದಲ್ಲಿ ಅಲ್ಲಿಯ ಹಿರಿಯ ಗುರುಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಮಾತನಾಡುತ್ತ, ‘ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ’ ಎಂದು ಪುರಂದರದಾಸರು ಹೇಳಿದ್ದಾರೆ. ಮಠದ ಭಕ್ತರಾದ ಮಾತೆಯರು ಶಿಷ್ಯಸ್ವೀಕಾರ ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಆತಿಥ್ಯಕ್ಕಾಗಿ ‘ತುಪ್ಪದ ಕಾಲುವೆಯನ್ನು ಹರಿಸಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.
ಹಾಗೆಯೇ ಈ ಕಾರ್ಯಕ್ರಮಕ್ಕೆ ದೂರದ ಕಂಚಿಯಿಂದ ಹಿಡಿದು ಬೇರೆಬೇರೆ ಊರಿನ ಮಠದ ಯತಿಗಳು ಆಮಂತ್ರಿತರಾಗಿ ಬಂದಿದ್ದರು. ಅವರೆಲ್ಲರ ಬರವನ್ನು ಶ್ರದ್ಧೆಯಿಂದ ಉಲ್ಲೇಖಿಸುತ್ತ, ‘ಸಂತರ (ಶರಣರ) ಬರವೆಮಗೆ ಪ್ರಾಣ ಜೀವಾಳವಯ್ಯ’ ಎಂಬ ಬಸವಣ್ಣನ ಮಾತಿನಂತೆ ಈಯೆಲ್ಲ ಯತಿವರೇಣ್ಯರ ಆಗಮನವು ಆನಂದವನ್ನು ತಂದಿದೆ ಎಂದು ಭಾವುಕರಾಗಿ ಹೇಳಿದರು.
ಈ ಎರಡು ಮಾತುಗಳಲ್ಲಿ ಮಠದ ಮತ್ತಲ್ಲಿಯ ಭಕ್ತರ ಸಮರಸಪೂರ್ಣ ಆತಿಥ್ಯಭಾವ ಯಾವ ಎತ್ತರದ್ದು ಎಂದು ಗೊತ್ತಾದೀತು. ಹೇಳಿಕೇಳಿ ಅದು ಶಿರಸಿ ಸೀಮೆಯ ಮಠ. ಆತಿಥ್ಯಕ್ಕೆ ಮಲೆನಾಡು ಒಂದು ಎತ್ತರದಲ್ಲಿದ್ದರೆ ಶಿರಸಿ ಮತ್ತೊಂದು ಎತ್ತರದಲ್ಲಿದೆ. ತನ್ನ ವೈರಿಯ ಮನೆಯ ದಾರಿಕೇಳಿದ ದಾರಿಹೋಕನನ್ನೂ ಕರೆದು ಆತಿಥ್ಯ ಮಾಡುವಂಥ ಸಂಪನ್ನಸನ್ನಿವೇಶ ಇಂದಿಗೂ ಅಲ್ಲಿದೆ. ಅಂಥ ಜನರನ್ನು ಭಕ್ತರನ್ನಾಗಿ ಹೊಂದಿದೆ ಈ ಮಠ. ಅಲ್ಲಿ ಶಿಷ್ಯಸ್ವೀಕಾರದ ಸಂದರ್ಭದಲ್ಲಿ ಬಂದ ಜನರ ಸಂಖ್ಯೆ ಅಪಾರ, ಗೈದ ಆತಿಥ್ಯದ ಬಗೆ ಅತುಲನೀಯ.
‘ಕರೆದು ಬಂದವ ಅಭ್ಯಾಗತ, ಕರೆಯದೆ ಬಂದವ ಅತಿಥಿ’ ಎಂಬ ಪದವಿವರವೊಂದಿದೆ. ಆಮಂತ್ರಣದ ಮೇರೆಗೆ ಬಂದ ಅಭ್ಯಾಗತರನ್ನು ಎಷ್ಟು ಚೆನ್ನಾಗಿ ಉಪಚರಿಸಿದರೂ ಕಡಮೆಯೇ. ಅಂಥಲ್ಲಿ ಆಗಂತುಕನಾಗಿ ಬಂದ ಅತಿಥಿಯು ಸಾಕ್ಷಾತ್ ದೇವರೇ ಎಂಬುದು ಶ್ರದ್ಧೆ. ಆತಿಥ್ಯದ ಸ್ವರೂಪವನ್ನು ಈ ನೆಲೆಯಿಂದ ನೋಡಬೇಕು.
ಅಭ್ಯಾಗತರನ್ನೂ ಅತಿಥಿಗಳನ್ನೂ ಒಂದೇ ಆಗಿ ನೋಡುವ ರೂಢಿ ಇದೀಗ ಬಲ ಪಡೆದುಬಿಟ್ಟಿದೆ. ಇದರಲ್ಲಿ ಗೌರವಿಸುವ ಇಲ್ಲವೇ ಉಪಚರಿಸುವ ನೆಲೆಯಲ್ಲಿ ಊನವೇನೂ ಉಂಟಾಗಿಲ್ಲ ಬಿಡಿ.
ಉಪಚಾರ ಮತ್ತು ಗೌರವ ಎಂಬ ಎರಡು ಸಂಗತಿಗಳಿವೆ ಇಲ್ಲಿ. ಲಾಗಾಯ್ತಿನಿಂದ ಇವೆರಡನ್ನೂ ಅನುಷ್ಠಿಸಿ ಅನುಭವವುಳ್ಳ ಸಮಾಜ ನಮ್ಮದು. ವಿಶೇಷ ಪ್ರಯತ್ನವೇನೂ ಈ ನಿಟ್ಟಿನಲ್ಲಿ ಇದಕ್ಕೆ ಬೇಡ ಅಂತನಿಸುವ ಮಾನಸಿಕತೆಯ ಸಮಾಜವಿದು. ಆದರೆ ವಿವರಗಳಿಗೆ ಹೋದಾಗ ಸೂಕ್ಷ÷್ಮತೆಯನ್ನು ತಟ್ಟಿದಾಗ ತೊಡಕೇನೆಂಬುದು ಅರಿವಿಗೆ ಬಂದೀತು.
ವೃತ್ತಿ, ಹವ್ಯಾಸ, ಆಸಕ್ತಿ ಇತ್ಯಾದಿ ಹತ್ತುಹಲವು ನಿಟ್ಟಿನಲ್ಲಿ ಸಮಾಜವು ತನ್ನೊಳಗೆ ವಿಂಗಡಗೊಳ್ಳುವುದು ಸಹಜ. ವಿಂಗಡಣೆಯಿಂದ ಆಪ್ತತೆಯೂ ನಿರ್ಮಾಣವಾಗಬಹುದು, ಸಾಂಸ್ಕೃತಿಕ ಆಯಾಮವೂ ದಕ್ಕಬಹುದು. ಇವು ವಿಂಗಡಣೆಯ ಸತ್ಫಲಗಳು. ವಿಂಗಡಣೆಯು ಪ್ರತ್ಯೇಕತೆಗೂ ಎಡೆಯಾಗಬಹುದು, ಭೇದಕ್ಕೂ ಎಡೆಯಾಗಬಹುದು. ಇವೆರಡೂ ವಿಂಗಡಣೆಯ ಅಪಸವ್ಯಗಳು. ಮನುಷ್ಯಪ್ರವೃತ್ತಿಯಲ್ಲಿ ಇಂಥ ಸತ್ಫಲ-ದುಷ್ಫಲಗಳೆರಡಕ್ಕೂ ವಿಪುಲ ಅವಕಾಶವಿದೆಯಾಗಿ ನಮ್ಮೀ ಸಮಾಜವು ಅವೆರಡನ್ನೂ ಅನುಭವವಾಗಿ ಸುದೀರ್ಘಕಾಲ ಈಸಿಬಂದಿದೆ. ಗೌರವ-ಉಪಚಾರಗಳಲ್ಲೂ ಇವುಗಳ ಪ್ರಭಾವವನ್ನು ಅಷ್ಟಿಷ್ಟು ಅನುಭವಿಸುತ್ತಲೇ ಇದೆ.
ಅಂದರೆ, ನಮ್ಮೀ ಸಮಾಜವು ಒಂದೆಡೆ ಸಂಸ್ಕಾರಸಂಪನ್ನವಾಗಿ ಬೆಳೆದುನಿಂತರೂ ಇನ್ನೊಂದೆಡೆ ಪ್ರತ್ಯೇಕತೆ-ಭೇದಗಳ ಸುಳಿಯಲ್ಲಿ ತನ್ನನ್ನು ಬಂಧಿಸಿಕೊಂಡಿರುವುದು ವಾಸ್ತವವೇ ಇದೆ.
ಭಾಷೆ, ಪ್ರದೇಶ, ಸಿದ್ಧಾಂತ ಇತ್ಯಾದಿ ನಾನಾ ನೆಲೆಗಳಲ್ಲಿ ಪ್ರತ್ಯೇಕತೆಯ ಅಪಸವ್ಯವು ವಕ್ಕರಿಸುತ್ತದೆ. ಅದನ್ನು ಮೀರುವ ಪ್ರಯತ್ನ ನಡೆದಾಗ ನಿಜ ಆತಿಥ್ಯ ನಡೆಯಲು ಸಾಧ್ಯ.
ಮೇಲಿನ ಶಿಷ್ಯಸ್ವೀಕಾರ ಕಾರ್ಯಕ್ರಮದಲ್ಲಿ ಅದ್ವೆöÊತಸಿದ್ಧಾಂತದ ಪೀಠಾಧಿಪತಿಗಳಾಗಿ ಗುರುಗಳು ತಮ್ಮ ಮಾತಿನಲ್ಲಿ ದ್ವೆöÊತಸಿದ್ಧಾಂತದ ಪುರಂದರದಾಸರನ್ನೂ ಉಲ್ಲೇಖಿಸಿದರು, ಬುದ್ಧಿಜೀವಿಗಳಿಂದ ವೇದವಿರೋಧಿ ಬ್ರಾಹ್ಮಣವಿರೋಧಿ ಎಂದೆಲ್ಲ ಹಣೆಪಟ್ಟಿಕಟ್ಟಿಸಿಕೊಂಡ ಬಸವಣ್ಣನನ್ನೂ ಉಲ್ಲೇಖಿಸಿದರು. ನಾವೊಂದು ಸಿದ್ಧಾಂತವನ್ನು ಬದುಕಿಯೂ ಅದನ್ನು ಮೀರಿ ನಿಲ್ಲಬಲ್ಲ ಸ್ಥಿತಿಗೆ ಗುರುಗಳ ಮಾತಿನ ಈ ಉಲ್ಲೇಖ ಮೇಲ್ಪಂಕ್ತಿಯಾಗಿ ನಿಲ್ಲುತ್ತದೆ.
ಹರಿಹರಪುರದ ಮಠದ ಕುಂಭಾಭಿಷೇಕದ ಸಂದರ್ಭದಲ್ಲಿ ಮಲೆನಾಡಿನ ತಾಲೂಕುಗಳ ತಥಾಕಥಿತ ದಲಿತರನ್ನು ಅವರ ಮನೆಗೆ ಹೋಗಿ ಮಠಕ್ಕೆ ಆಮಂತ್ರಿಸುವ ಕಾರ್ಯವನ್ನು ಅಲ್ಲಿನ ಗುರುಗಳು ನಡೆಸಿದ್ದರು. ಅಲ್ಲದೆ ಬಂದ ಎಲ್ಲ ಅತಿಥಿಗಳನ್ನೂ ಕಾಲುತೊಳೆದು ಅತ್ಯಂತ ಗೌರವದಿಂದ ಸ್ವಾಗತಿಸಲಾಗಿತ್ತು. ಜತೆಗೆ ಎಲ್ಲರಿಗೂ ಯಾವುದೇ ಭೇದವಿಲ್ಲದೆ ಭೋಜನವನ್ನೂ ಬಡಿಸಲಾಗಿತ್ತು.
ಈ ದೃಢಹೆಜ್ಜೆಯು ಭೇದವನ್ನು ಮೀರುವ ಒಂದು ಬಗೆಯಾಗಿ ಸಮಾಜಕ್ಕೆ ಮೇಲ್ಪಂಕ್ತಿಯಾಗಿದೆ.
ಇದು ಎಲ್ಲರ ಮನೆಗೂ ವಿಸ್ತರಿಸಬೇಕು. ಸಮಾಜದ ಮೂಲಭೂತ ಘಟಕವಲ್ಲವೇ ಅದು. ಮತ್ತು ಆತಿಥ್ಯವು ಚೆನ್ನಾಗಿ ನಡೆಯಲು ಅವಕಾಶವಿರುವುದು ಮನೆಯಲ್ಲಿಯೇ.
ಉಪಚಾರವಿದೆ, ಪ್ರತ್ಯೇಕತೆ-ಭೇದಾದಿ ನೆಲೆಯಲ್ಲಿ ಗೌರವವಿಲ್ಲ ಎಂಬ ಸ್ಥಿತಿಯು ಆತಿಥ್ಯದ ಎತ್ತರವನ್ನು ಗಳಿಸದು. ಗೌರವವಿದೆ, ಭೇದಾದಿಗಳ ಪರೋಕ್ಷ ಆಚರಣೆಯಾಗಿ ತಿನ್ನುಣ್ಣುವುದಕ್ಕೇನೂ ಸಿಗದು ಎಂಬ ಸ್ಥಿತಿಯು ಆತಿಥ್ಯದ ಸ್ಪಷ್ಟ ನಿರಾಕರಣೆಯೇ ಸರಿ.
ಎರಡರಲ್ಲಿಯೂ ತೋರುನೋಟಕ್ಕೆ ಸಾಮರಸ್ಯ ಇದ್ದಂತೆ ಕಾಣುತ್ತದೆ, ಆದರೆ ಸಾಮಾಜಿಕತೆಯೇ ಮಾಯವಾಗಿದೆ.
ಆತಿಥ್ಯದಲ್ಲಿ ಸಾಮಾಜಿಕ ಸಾಮರಸ್ಯವು ಕೊರತೆಯಾದರೆ ಅತಿಥಿ ದೇವರಾದಾನು ಎಂತು?
ಅಂಬೇಡ್ಕರ್, ಶಂಕರಾಚಾರ್ಯ, ಬಸವಣ್ಣ ಮುಂತಾದ ಮಹಾಪುರುಷರ ಭಾವಚಿತ್ರಗಳು ಸಮಾನಸ್ಥಾನವನ್ನು ಪಡೆಯುವ ಮನೆ, ಜಾತಿ ಇತ್ಯಾದಿ ಯಾವುದೇ ಭೇದವಿಲ್ಲದೆ ಸಮಾನಬಗೆಯಲ್ಲಿ ಎಲ್ಲರಿಗೂ ಸಹಭೋಜನದ ಆತಿಥ್ಯವೀಯುವ ಮನೆ ಸಾಮರಸ್ಯದ ಮನೆಯೆನಿಸೀತು. ಸಮರಸಸಮಾಜಕ್ಕೆ ಬುನಾದಿಯಾದೀತು.