ನಮ್ಮದು ‘ಯುವಭಾರತ’ವೆಂದು ಹೆಮ್ಮೆಪಡುವುದು ತಪ್ಪಲ್ಲ. ಆದರೆ ಈ ಘೋಷಣೆಗೆ ಅಸ್ಥಿಭಾರ ಗಟ್ಟಿಯಾಗಿರಬೇಕಷ್ಟೆ. ೧೯೮೦ಕ್ಕೆ ಹೋಲಿಸಿದರೆ ನಮ್ಮ ಹಲವಾರು ರಾಜ್ಯಗಳಲ್ಲಿ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಈಗ ಇಳಿಮುಖವಾಗಿದೆ. ಆಗ ಇದ್ದ ಉತ್ಪಾದಕತೆಯ ಪ್ರಮಾಣ ಈಗ ಅರ್ಧದಷ್ಟು ಅಥವಾ ಅದಕ್ಕಿಂತ ಕಡಮೆಯಾಗಿದೆ. ಈ ಕಾರಣದಿಂದ ಈಗ ಇರುವ ಯುವಜನಪ್ರಮಾಣಾಧಿಕ್ಯ ೨೦೪೦ರಿಂದಾಚೆಗೆ ಉಳಿಯಲಾರದು – ಎಂಬುದು ಕಹಿಯೆನಿಸಿದರೂ ವಾಸ್ತವ. ಈಗಿನದೇ ಜಾಡು ಮುಂದುವರಿದಲ್ಲಿ ಈ (ಇಪ್ಪತ್ತೊಂದನೇ) ಶತಮಾನದ ಅಂತ್ಯದ ವೇಳೆಗೆ ನಮ್ಮ ದೇಶದಲ್ಲಿ ವಯಸ್ಸು ೮೦ ದಾಟಿದವರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ. ೩೭ರಷ್ಟು ಆಗಿರುತ್ತದೆ; ೨೦ರಿಂದ ೩೦ರ ವರೆಗಿನ ವಯಸ್ಸಿನವರ ಪ್ರಮಾಣ ಶೇ.೧೫.೫ಕ್ಕೆ ಕುಸಿದಿರುತ್ತದೆ.
ಕಳೆದ ಎಂದರೆ ಇಪ್ಪತ್ತನೇ ಶತಮಾನದ ನಡುಭಾಗದಲ್ಲಿ ಎಂದರೆ ೧೯೫೦ರ ಮತ್ತು ೧೯೬೦ರ ದಶಕಗಳಲ್ಲಿ ‘ಈಗಿನಂತೆ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಹೋದರೆ ಎಲ್ಲೆಡೆ ಆಹಾರಾದಿ ಜೀವನಸೌಕರ್ಯಗಳ ತೀವ್ರ ಕೊರತೆಯುಂಟಾಗಿ ಜನರ ಬದುಕು ದುರ್ಭರವಾಗುತ್ತದೆ’ ಎಂಬ ಜಾಡಿನ ಪಾಶ್ಚಾತ್ಯ-ಪ್ರವರ್ತಿತ ವಾದಗಳು ತೀವ್ರವಾಗಿ ಪ್ರಚಲನೆಗೊಂಡವು. ಇದರ ಅನುಸರಣೆಯಾಗಿ ವಿವಿಧ ದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣ ಯೋಜನೆಗಳು ಜಾರಿಯಾದವು.
ಹಲವು ವರ್ಷಗಳಿಗೊಮ್ಮೆ ಜನಸಂಖ್ಯಾಸ್ಫೋಟ, ಆಹಾರಾಭಾವ, ಜಲಾಭಾವ, ಪರಿಸರಸ್ವಾಸ್ಥ್ಯ, ಹೃದ್ರೋಗ, ಮಧುಮೇಹ, ಕರ್ಕರೋಗ – ಇಂತಹ ಯಾವುದಾದರೊಂದು ಹೊಸ ‘ಗುಮ್ಮ’ಗಳನ್ನೆಬ್ಬಿಸುವುದು ಪಾಶ್ಚಾತ್ಯರ (ಮತ್ತು ಅವರನ್ನು ಅನುಕರಿಸಿ ನಮ್ಮವರ) ಹವ್ಯಾಸವೇ ಆಗಿದೆ. ಹಾಗೆಂದು ಈ ಬೆರ್ಚುಗೊಂಬೆ ವಾದಗಳಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶ ಇಲ್ಲದಿಲ್ಲ. ಆದರೆ ಈ ಎಷ್ಟೊ ವಾದಗಳ ಹಿಂದೆ ಪರೋಕ್ಷ ಕಾರಣಗಳಿರುವುದನ್ನೂ ಅಲ್ಲಗಳೆಯಲಾಗದು. ಉದಾಹರಣೆಗೆ: ಬಡ ದೇಶಗಳಲ್ಲಿ ಇಂಗಾಲಾಮ್ಲ ವಿಸರ್ಜನೆಯಿಂದ ವಾಯುಮಾಲಿನ್ಯವಾಗುತ್ತದೆಂದು ಗೂಬೆ ಕೂಡಿಸುವ ಶ್ರೀಮಂತರಾಷ್ಟ್ರಗಳದೇ ಇಂಗಾಲಾಮ್ಲ ವಿಸರ್ಜನೆ ಬಡದೇಶಗಳದಕ್ಕಿಂತ ಬಹುಪಟ್ಟು ಅಧಿಕವಿದೆ, ಮತ್ತು ನಿಯಂತ್ರಣವನ್ನು ವಿರೋಧಿಸುತ್ತಿರುವವು ಅಮೆರಿಕ ಮೊದಲಾದ ಆಢ್ಯ ದೇಶಗಳೇ.
ಅದೆಲ್ಲ ಒತ್ತಟ್ಟಿಗಿರಲಿ. ಈಗ ಮುಖ್ಯ ವಿಷಯಕ್ಕೆ ಬರೋಣ.
ನಿಯಂತ್ರಣಾವೇಶ
ಒಂದು ಕುಟುಂಬಕ್ಕೆ ಮೂರು ಮಕ್ಕಳು ಪರ್ಯಾಪ್ತ ಎಂದು ಶುರುವಾಗಿ, ಆಮೇಲೆ ಅದು ಎರಡಕ್ಕೆ ಇಳಿಸಲ್ಪಟ್ಟು (‘ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ’), ಅಂತಿಮವಾಗಿ ಕುಟುಂಬಕ್ಕೆ ಒಂದೇ ಮಗು ಸಾಕು (‘ಮಿತ ಸಂಸಾರ, ಸುಖ ಸಂಸಾರ’) ಎಂಬವರೆಗೆ ಸರ್ಕಾರಪೋಷಿತ ಪ್ರಚಾರದ ಭರಾಟೆ ಸಾಗಿ ಅದಕ್ಕನುಗುಣವಾಗಿ ಪ್ರೋತ್ಸಾಹನ ಕ್ರಮಗಳೂ ಏರ್ಪಟ್ಟವು. ತುರ್ತುಪರಿಸ್ಥಿತಿಯ ದಿನಗಳಲ್ಲಿ ಇದು ಅತಿರೇಕಕ್ಕೆ ಹೋದದ್ದೂ ಕುಪ್ರಸಿದ್ಧವೇ ಆಗಿದೆ. ರಾಜ್ಯಗಳು ತಮ್ಮ ನಿಗದಿತ ‘ಗುರಿ’ ಸಾಧಿಸಿ ಆಗಿನ ಸರ್ವಾಧಿಕಾರಿ ಸರ್ಕಾರದ ಅಜೂಜುವಾರಿ ಮಾಡುವುದರಲ್ಲಿ ಸ್ಪರ್ಧೆಯನ್ನೇ ನಡೆಸಿದ್ದವು. ‘ರಾಜನಿಗಿಂತ ಹೆಚ್ಚು ನಿಷ್ಠ’ ಅಧಿಕಾರಿಗಳಿಗೆ ಕೊರತೆಯೇನಿಲ್ಲವಲ್ಲ.
ಇಷ್ಟೆಲ್ಲ ಜುಲುಮೆ ನಡೆದರೂ ಆದ ಸಾಧನೆ ಕಡಮೆಯೇ. ಏಕೆಂದರೆ ಸ್ವಭಾವತಃ ‘ಅತಿ ಸರ್ವತ್ರ ವರ್ಜಯೇತ್’ ಎಂಬ ಮನೋಧರ್ಮದವರೇ ಅಧಿಕವಾಗಿರುವ ದೇಶ ನಮ್ಮದು. ದೇಶದ ಬಹಳ ಕಡೆಗಳಲ್ಲಿ ಸರ್ಕಾರೀ ಧೋರಣೆಗೆ ಪ್ರತಿಭಟನೆಗಳು ವಿವಿಧ ಬಗೆಗಳಲ್ಲಿ ಹೊಮ್ಮಿದವು. ಇಂತಹ ಸನ್ನಿವೇಶದಲ್ಲಿ ಸರ್ಕಾರೀ ಬಲಾತ್ಕಾರ ಸಾಧ್ಯತೆಗೆ ಸಹಜ ಮಿತಿ ಇರುತ್ತದೆ.
ಆದರೆ ಪೂರ್ಣ ಸರ್ವಾಧಿಕಾರಿ ದೇಶಗಳ ಸ್ಥಿತಿ ಹಾಗಿಲ್ಲ. ಅಲ್ಲಿ ಸುಗ್ರೀವ ಶಾಸನ ಸಾಧ್ಯ.
ಅಸಮತೋಲ
೧೯೭೯-೮೦ರಿಂದೀಚೆಗೆ ಚೀನಾ ದೇಶ ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮವನ್ನು ಪ್ರಬಲವಾಗಿ ಅಮಲುಗೊಳಿಸಿತು. ಪರಿಣಾಮವಾಗಿ ಕಾಲು ಶತಮಾನದ ಅವಧಿಯಲ್ಲಿ ಚೀನಾದ ಜನಸಂಖ್ಯಾ ವಿನ್ಯಾಸದಲ್ಲಿ ತೀವ್ರ ಅಸಮತೋಲ ಉಂಟಾಯಿತು. ವೃದ್ಧರ ಸಂಖ್ಯೆ ಬೆಳೆಯಿತು, ತರುಣರ ಮತ್ತು ಮಧ್ಯವಯಸ್ಕರ ಪ್ರಮಾಣ ಇಳಿಮುಖವಾಗುತ್ತ ಸಾಗಿತು. ಶಕ್ತವಾಗಿ ದುಡಿಯುವ ಕೈಗಳೇ ಇರದಿದ್ದಾಗ ದೇಶದಲ್ಲಿ ಉತ್ಪಾದನೆ ಆಗುವುದು ಹೇಗೆ? ಈ ವಿಷಮ ಪರಿಸ್ಥಿತಿ ನಿರ್ಮಾಣವಾದ ಮೇಲೆ ಚೀನಾಕ್ಕೆ ತನ್ನ ಹಿಂದಿನ ಇಪ್ಪತ್ತೈದು-ಮೂವತ್ತು ವರ್ಷಗಳ ಅತಿರೇಕದ ಕುಟುಂಬನಿಯಂತ್ರಣ ಧೋರಣೆಯ ಆಭಾಸದ ಮನವರಿಕೆಯಾಯಿತು.
ಮುಂದಿನ ಎಂದರೆ ಇಪ್ಪತ್ತೆರಡನೇ ಶತಮಾನದ ಆರಂಭದ ವೇಳೆಗೆ ಚೀನಾ ಮೊದಲಾದ ದೇಶಗಳ ಜನಸಂಖ್ಯೆ ಈಗಿರುವುದರ ಅರ್ಧದಷ್ಟಕ್ಕೆ ಇಳಿಯಬಹುದು – ಎಂದು ಪ್ರತಿಷ್ಠಿತ ‘ಲ್ಯಾನ್ಸೆಟ್’ ಪತ್ರಿಕೆಯ ತಜ್ಞ ವಿಶ್ಲೇಷಣೆಯಿದೆ.
ಈಗಿನದೇ ಜಾಡು ಮುಂದುವರಿದರೆ ಈ (ಇಪ್ಪತ್ತೊಂದನೇ) ಶತಮಾನದ ಕೊನೆಯ ವೇಳೆಗೆ ಚೀನಾದ ಒಟ್ಟು ಜನಸಂಖ್ಯೆ ೬೦ರಿಂದ ೭೦ ಕೋಟಿಯಷ್ಟು ಕಡಮೆಯಾಗಿಬಿಡುತ್ತದೆ – ಎಂಬ ವಾಸ್ತವ ಎದುರಾಯಿತು. ಚೀನಾದ ಅಧಿನೇತ ಜಿನ್ಪಿಂಗ್ ‘ಇನ್ನು ಮುಂದೆ ಜನರು ಹೆಚ್ಚು ಮಕ್ಕಳನ್ನು ಪಡೆಯುವುದನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ’ ಎಂದು ಘೋಷಣೆ ಮಾಡಿದರು.
ಆದರೆ ಯಾವುದೇ ದೇಶದ ಜನಸಂಖ್ಯಾ ವಿನ್ಯಾಸ ರಾತ್ರೋರಾತ್ರಿ ಬದಲಾಗದು. ಸರ್ಕಾರ ನಿರ್ಧಾರ ಕೈಗೊಂಡರೆ ಅದರ ಪರಿಣಾಮ ಕೈಹತ್ತಲು ಹಲವು ದಶಕಗಳೇ ಬೇಕಾಗುತ್ತದೆ.
ಅನ್ಯಾನ್ಯ ದೇಶಗಳಲ್ಲಿ
ಚೀನಾ ಮಾತ್ರವಲ್ಲ, ಎಲ್ಲ ಸರ್ವಾಧಿಕಾರಿ ದೇಶಗಳ ಪಾಡೂ ಹೀಗೇ ಆಗಿದೆ. ರಷ್ಯದ ಅಧ್ಯಕ್ಷ ಪುಟಿನ್ ೧೯೯೦ರಿಂದೀಚೆಗೆ ಜನಸಂಖ್ಯೆ ಕುಸಿಯುತ್ತಹೋಗಿರುವುದಕ್ಕೆ ಗಮನ ಸೆಳೆದು ದೇಶದ ಮಹಿಳೆಯರನ್ನೇ ಸಂಬೋಧಿಸಿ ‘ದಯವಿಟ್ಟು ಹೆಚ್ಚು ಮಕ್ಕಳನ್ನು ಕೊಡಿರಿ’ ಎಂದು ವಿನಂತಿ ಮಾಡಿದ್ದಾರೆ. ಏಕಾಏಕಿ ಬದಲಾದ ತಮ್ಮ ನಿಲವನ್ನು ಸಮಾಜ ಸ್ವೀಕರಿಸಲು ಹಿಂಜರಿಯಬಹುದೆಂದು ಶಂಕಿಸಿ “ಹಿಂದೆ ಪ್ರತಿಕುಟುಂಬದಲ್ಲಿ ಸರಾಸರಿ ನಾಲ್ಕೈದು ಮಕ್ಕಳು ಇರುತ್ತಿದ್ದುದು ನಮ್ಮ ಸಮಾಜವನ್ನು ಬಲಿಷ್ಠವಾಗಿರಿಸಿತ್ತು” ಎಂದೆಲ್ಲ ಪ್ರಲೋಭನಕರ ಮಾತುಗಳನ್ನು ಆಡುತ್ತಿದ್ದಾರೆ. ಹಿಂದೆ ಎಂಟು ಹತ್ತು ಮಕ್ಕಳು ಇರುತ್ತಿದ್ದುದೂ ವಿರಳವಾಗಿರಲಿಲ್ಲ – ಎಂದು ಗತಕಾಲದ ನೆನಪನ್ನು ಮಾಡಿಕೊಟ್ಟಿದ್ದಾರೆ.
ಉತ್ತರಕೊರಿಯಾದ ಅಧ್ಯಕ್ಷ ಕಿಮ್ ಕೂಡಾ ಆ ದೇಶದ ಜನರಿಗೆ ಇದೇ ಸಂದೇಶವನ್ನು ನೀಡಿದ್ದಾರೆ. ದಕ್ಷಿಣಕೊರಿಯಾದ ನೇತಾರ ಯೂಸ್ನುಕ್ ಅವರೂ ಇದೇ ಪಲ್ಲವಿಯನ್ನು ಉಚ್ಚರಿಸಿದ್ದಾರೆ. ಅಲ್ಲಿ ಮದುವೆಗಳ ಪ್ರಮಾಣ ಶೇ.೧ರಷ್ಟು ಬೆಳೆದಿದ್ದರೆ, ವಿಚ್ಛೇದನಗಳ ಪ್ರಮಾಣ ಶೇ.೬ರಷ್ಟು ಆಗಿದೆ – ಮೊದಲಾದ ಕಾರಣಗಳನ್ನು ಗುರುತಿಸಲಾಗಿದೆ.
ಜಪಾನ್ ದೇಶವಂತೂ ‘ನಾವು ಮಕ್ಕಳನ್ನು ಪಡೆಯಲು ಉತ್ಸುಕರಾಗಿದ್ದೇವೆ’ ಎಂಬ ಸಂಕಲ್ಪವನ್ನು ಪ್ರಕಟಿಸಿದವರಿಗೇ ‘ಇನ್ಸೆನ್ಟಿವ್’ಗಳನ್ನು ಪ್ರಕಟಿಸಿದೆ.
ಭಾರತದ ಸ್ಥಿತಿ
ಮೇಲೆ ಉಲ್ಲೇಖಿಸಿದ ‘ಲ್ಯಾನ್ಸೆಟ್’ ಪತ್ರಿಕೆಯದೇ ವಿಶ್ಲೇಷಣೆಯಂತೆ ಜನಸಂಖ್ಯೆಯ ಕೊರತೆಯನ್ನು ಎದುರಿಸುತ್ತಿರುವ ದೇಶಗಳು ೨೩ರಷ್ಟಿದ್ದು ಅವುಗಳಲ್ಲಿ ಭಾರತವೂ ಸೇರಿದೆ.
ನಮ್ಮದು ‘ಯುವಭಾರತ’ವೆಂದು ಹೆಮ್ಮೆಪಡುವುದು ತಪ್ಪಲ್ಲ. ಆದರೆ ಈ ಘೋಷಣೆಗೆ ಅಸ್ಥಿಭಾರ ಗಟ್ಟಿಯಾಗಿರಬೇಕಷ್ಟೆ. ೧೯೮೦ಕ್ಕೆ ಹೋಲಿಸಿದರೆ ನಮ್ಮ ಹಲವಾರು ರಾಜ್ಯಗಳಲ್ಲಿ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಈಗ ಇಳಿಮುಖವಾಗಿದೆ. ಆಗ ಇದ್ದ ಉತ್ಪಾದಕತೆಯ ಪ್ರಮಾಣ ಈಗ ಅರ್ಧದಷ್ಟು ಅಥವಾ ಅದಕ್ಕಿಂತ ಕಡಮೆಯಾಗಿದೆ. ಈ ಕಾರಣದಿಂದ ಈಗ ಇರುವ ಯುವಜನಪ್ರಮಾಣಾಧಿಕ್ಯ ೨೦೪೦ರಿಂದಾಚೆಗೆ ಉಳಿಯಲಾರದು – ಎಂಬುದು ಕಹಿಯೆನಿಸಿದರೂ ವಾಸ್ತವ. ಈಗಿನದೇ ಜಾಡು ಮುಂದುವರಿದಲ್ಲಿ ಈ (ಇಪ್ಪತ್ತೊಂದನೇ) ಶತಮಾನದ ಅಂತ್ಯದ ವೇಳೆಗೆ ನಮ್ಮ ದೇಶದಲ್ಲಿ ವಯಸ್ಸು ೮೦ ದಾಟಿದವರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ. ೩೭ರಷ್ಟು ಆಗಿರುತ್ತದೆ; ೨೦ರಿಂದ ೩೦ರವರೆಗಿನ ವಯಸ್ಸಿನವರ ಪ್ರಮಾಣ ಶೇ. ೧೫.೫ಕ್ಕೆ ಕುಸಿದಿರುತ್ತದೆ.
ಯೂರೋಪಿನ ದೇಶಗಳು ಈಗಲೇ ಈ ವಿಷಮ ಸನ್ನಿವೇಶವನ್ನು ಎದುರಿಸುತ್ತಿವೆ. ಆ ದೇಶಗಳು ಒಟ್ಟು ರಾಷ್ಟ್ರೋತ್ಪನ್ನದ ಹತ್ತಿರ ಹತ್ತಿರ ಶೇ.೨ರಷ್ಟನ್ನು ವೃದ್ಧ-ಸಂಕ್ಷೇಮ ವ್ಯವಸ್ಥೆಗಳಿಗಾಗಿಯೇ ವ್ಯಯ ಮಾಡುತ್ತಿವೆ.
ಜನನಪ್ರಮಾಣದ ಇಳಿಕೆ; ಕಾರಣಗಳು
ಇದೀಗ ಜನನಪ್ರಮಾಣದ ವೃದ್ಧಿವೇಗ ಇಂಡೋನೇಶಿಯದಲ್ಲಿ ಶೇ.೨.೦ಕ್ಕೂ ಜಪಾನಿನಲ್ಲಿ ಶೇ.೧.೩ಕ್ಕೂ ಅಮೆರಿಕ-ರಷ್ಯಗಳಲ್ಲಿ ಶೇ.೧.೬ಕ್ಕೂ ಕುಸಿದಿದೆ.
ಅಮೆರಿಕದಲ್ಲಿ ೨೦೦೭ರ ಸ್ಥಿತಿಗೆ ಹೋಲಿಸಿದರೆ ಈಗ ಜನನಪ್ರಮಾಣ ಶೇ.೧೯ರಷ್ಟು ತಗ್ಗಿದೆ ಎಂದು ವರದಿಗಳಿವೆ.
ಜನನ ಪ್ರಮಾಣದ ವಾರ್ಷಿಕ ಹೆಚ್ಚಳ ಕನಿಷ್ಠಪಕ್ಷ ಶೇ.೨.೧ರಷ್ಟು ಇರುವುದು ದೇಶದ ಸ್ವಾಸ್ಥ್ಯದ ಲಕ್ಷಣವೆಂದು ಪರಿಗಣಿತವಾಗಿದೆ. ಭಾರತದ್ದು ಇದೀಗ ಶೇ.೨.೧ರಷ್ಟು ಇದ್ದರೂ ಅದು ಕ್ರಮೇಣ ತಗ್ಗುತ್ತಿದೆಯೆಂದು ಗಮನಿಸಲಾಗಿದೆ.
ಇಡೀ ಜಗತ್ತಿನಲ್ಲಿ ಈಚಿನ ವರ್ಷಗಳಲ್ಲಿ ಈ ದಿಶೆಯ ಪರಿವರ್ತನೆ ಏಕೆ ಆಗುತ್ತಿದೆಯೆಂದು ಜನಸಂಖ್ಯಾಶಾಸ್ತ್ರ ತಜ್ಞರು ವಿಶ್ಲೇಷಿಸತೊಡಗಿದ್ದಾರೆ. ಎದ್ದುಕಾಣುತ್ತಿರುವ ಪ್ರಮುಖ ಕಾರಣಗಳು ಸಾಮಾಜಿಕ ರೀತಿಯವು: ಸಂತಾನ ಬೇಡವೆಂದು ಒಂದು ವರ್ಗಕ್ಕೆ ಅನಿಸಿರುವುದು, ಸರ್ಕಾರಗಳ ಕಡೆಯಿಂದ ಕುಟುಂಬನಿಯಂತ್ರಣಕ್ಕೆ ಪ್ರೋತ್ಸಾಹನ, ಈಗಿನ ಜೀವನಶೈಲಿಯಿಂದಾಗಿಯೇ ಸಂತಾನೋತ್ಪಾದಕ ಸಾಮರ್ಥ್ಯ (ಫರ್ಟಿಲಿಟಿ ರೇಟ್) ತಗ್ಗಿರುವುದು, ತಡವಾಗಿ ಮದುವೆಯಾಗುತ್ತಿರುವುದು, ವಿಳಂಬ-ವಿವಾಹಿತರು ಮಿತಸಂಸಾರವು ಕ್ಷೇಮಕರವೆಂದು ಭಾವಿಸುವುದು, ಮಹಿಳೆಯರಿಗೆ ಉದ್ಯೋಗಾವಕಾಶಗಳು ವೃದ್ಧಿಸಿರುವುದು ಮತ್ತು ಇದರ ಪರಿಣಾಮವಾಗಿ ಅವರ ಮೇಲೆ ಕುಟುಂಬನಿರ್ವಹಣ ಭಾರ ಹೆಚ್ಚಾಗಿ ಬಿದ್ದಿರುವುದು, ವೃತ್ತಿ ಪ್ರಗತಿಗೆ ಮಕ್ಕಳ ಪಾಲನೆ-ಪೋಷಣೆ ಒಂದಷ್ಟುಮಟ್ಟಿಗೆ ಅಡ್ಡಿಯಾಗುತ್ತದೆಂಬ ಭಾವನೆ, ಉದ್ಯೋಗ ನಿಮಿತ್ತ ಬೇರೆ ಊರುಗಳಿಗೆ ಹೋಗಬೇಕಾದ ಅನಿವರ್ಯತೆ ಮತ್ತು ಇದು ಮಕ್ಕಳ ಶಿಕ್ಷಣ-ಪೋಷಣಾದಿಗಳ ಮೇಲೆ ಬೀರುವ ಪರಿಣಾಮ, ಈಚೆಗೆ ವಿವಾಹವಿಚ್ಛೇದನ ಪ್ರವೃತ್ತಿ ಹೆಚ್ಚಿರುವುದು ಮತ್ತು ವಿಚ್ಛೇದನಕ್ಕೆ ಮಕ್ಕಳು ಅಡ್ಡಿಯಾಗಲಿರುವುದು, ಶಿಕ್ಷಣಾದಿಗಳ ವೆಚ್ಚ ಮಿತಿಮೀರಿ ಬೆಳೆದಿರುವುದರಿಂದ ಮಕ್ಕಳ ಪೋಷಣೆ ಈಗ ಸುಲಭವಲ್ಲವೆಂಬ ವಾಸ್ತವ, ಹಿಂದೆ ಇದ್ದ ಕುಟುಂಬ-ಅಂತರ್ಗತ ಸೌಹಾರ್ದ-ಹೊಂದಾಣಿಕೆಗಳು ಈಗ ದುಷ್ಕರವಾಗಿರುವುದು, ಆರ್ಥಿಕತೆಗೆ ಸಂದಿರುವ ಪ್ರಾಧಾನ್ಯ – ಹೀಗೆ ಈಗಿನ ಆತಂಕಕಾರಿ ಸನ್ನಿವೇಶಕ್ಕೆ ಹಲವಾರು ಕಾರಣಗಳಿವೆ. ಅವೆಲ್ಲ ಗಂಭೀರ ವಿಷಯಗಳೆಂಬುದನ್ನು ಅಲ್ಲಗಳೆಯುವುದು ಕಷ್ಟ.
ಆದರೆ ಸಮೀಪದೃಷ್ಟಿಗೂ ದೂರದೃಷ್ಟಿಗೂ ನಡುವೆಯೂ ಸಮಸ್ಯೆಗಳಿಗೂ ಅಪೇಕ್ಷ್ಯತೆಗೂ ನಡುವೆಯೂ ಪ್ರಮಾಣಬದ್ಧತೆಯನ್ನು ಕಂಡುಕೊಂಡು ಕಾರ್ಯಗತಗೊಳಿಸುವುದೇ ವಿವೇಕದ ದಾರಿಯಾದೀತು. ಇದಕ್ಕೆ ಪರ್ಯಾಯವಿರದು.