ಭಾರತದ ವಿಷಯದಲ್ಲಿ ಚರ್ಚಿಲ್ರದ್ದು ಅತಿರೇಕದ ಹಾದಿ. ಭಾರತದ ಸಾಂವಿಧಾನಿಕ ಬದಲಾವಣೆ ಬಗ್ಗೆ ಅಸಹನೆ, ಗಾಂಧಿ ಬಗೆಗಿನ ದ್ವೇಷ, ದೇಶದ ರಾಷ್ಟ್ರೀಯ (ಸ್ವಾತಂತ್ರ್ಯ) ಚಳವಳಿಯ ಬಗ್ಗೆ ಸಿಟ್ಟು ‘ಹಿಂದು’ ಎಂದು ಗುರುತಿಸಲ್ಪಟ್ಟ ಎಲ್ಲದರ ಬಗೆಗೆ ದ್ವೇಷ – ಇವು ಚರ್ಚಿಲ್ ಸಾರ್ವಜನಿಕ ವ್ಯಕ್ತಿತ್ವದ ಪ್ರಮುಖ ದೌರ್ಬಲ್ಯಗಳಾಗಿದ್ದವು. ಆತನ ಜೀವನಚರಿತ್ರಕಾರರು ಆತನನ್ನು ‘ವಿಕ್ಟೋರಿಯಾ ಅಚ್ಚಿನ ಸಾಮ್ರಾಜ್ಯಶಾಹಿ’ ಎಂದು ಬಣ್ಣಿಸಿದ್ದಾರೆ; ಅದೇ ರೀತಿ ಬ್ರಿಟಿಷ್ ಸಾಮ್ರಾಜ್ಯದ ಪ್ರಧಾನ ಸಮರ್ಥಕ ಎಂದು ಕೂಡ ವಿಶ್ಲೇಷಿಸಿದ್ದಾರೆ. ಚರ್ಚಿಲ್ ಜನಾಂಗೀಯವಾದಿ (racist) ಅಲ್ಲವೆಂದು ಕೆಲವರು ವಾದಿಸಿ, ಆತನ ಪೂರ್ವಗ್ರಹವನ್ನು ಸಮರ್ಥಿಸಲು ಯತ್ನಿಸಿದ್ದಿದೆ. ಆದರೆ ಆ ವಾದ ನಿಲ್ಲುವುದಿಲ್ಲ. ಆತ ನಿಜವಾಗಿಯೂ ಜನಾಂಗೀಯವಾದಿ. ಆತನ ಕಾಲದ ಮಾನದಂಡದಿಂದ ಕೂಡ ಆತ ಜನಾಂಗೀಯವಾದಿ ಅಥವಾ ವರ್ಣದ್ವೇಷದ ಪ್ರತಿಪಾದಕನೇ.
ಕಳೆದ ೨೦ನೇ ಶತಮಾನದ ಬೆರಳೆಣಿಕೆಯ ಗಣ್ಯವ್ಯಕ್ತಿಗಳನ್ನು ಲೆಕ್ಕ ಹಾಕುವಾಗ ಅದರಲ್ಲಿ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಬಂದೇಬರುತ್ತಾರೆ. ಅದಕ್ಕೆ ಕಾರಣ ಒಂದು, ಅಂದು ಬಹುತೇಕ ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಬ್ರಿಟನ್ನ ರಾಜಕೀಯ ವ್ಯವಸ್ಥೆಯಲ್ಲಿ ಆತ ಸುದೀರ್ಘ ಕಾಲ ನಿರ್ಣಾಯಕ ಪಾತ್ರವನ್ನು ಹೊಂದಿದ್ದು. ಇನ್ನೊಂದು ಇದಕ್ಕಿಂತ ಪ್ರಮುಖ ಕಾರಣವೆಂದರೆ, ಇಡೀ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ ಎರಡನೇ ವಿಶ್ವ ಸಮರದಲ್ಲಿ (೧೯೩೯-೪೫) ಆತ ಬ್ರಿಟನ್ ನೇತೃತ್ವದ ಒಂದು ಗುಂಪಿನ ನಾಯಕತ್ವ ವಹಿಸಿ ಅಜೇಯವೆನಿಸಿದ ನಾಜಿ ಜರ್ಮನಿ ಮತ್ತದರ ನಾಯಕ ಹಿಟ್ಲರ್ನನ್ನು ಮಣಿಸಿದ್ದು. ಚರಿತ್ರೆಯ ಆ ಕಾಲಘಟ್ಟದಲ್ಲಿ ನಾಜಿ ಜರ್ಮನಿ, ಇಟಲಿಯ ದಮನಕಾರಿ ಫ್ಯಾನಿಸ್ಟ್ ವ್ಯವಸ್ಥೆ ಮತ್ತು ಇವುಗಳಿಗೆ ಬೆಂಬಲವಾಗಿ ನಿಂತ ಜಪಾನ್ನನ್ನು ನಿಯಂತ್ರಣಕ್ಕೆ ತರುವುದು ಸುಲಭದ ಮಾತಾಗಿರಲಿಲ್ಲ. ಒಂದು ವೇಳೆ ಯುದ್ಧದಲ್ಲಿ ಹಿಟ್ಲರ್ ಮೇಲುಗೈ ಸಾಧಿಸಿ ಮುಂದುವರಿದಿದ್ದಲ್ಲಿ ಜಗತ್ತಿನ ಪರಿಸ್ಥಿತಿ ಏನಾಗುತ್ತಿತ್ತೋ ಹೇಳುವುದು ಕಷ್ಟ.
ಕಪ್ಪು ಚುಕ್ಕೆ – ಭಾರತ ನೀತಿ
ಒಂದು ಪ್ರಬಲ ವ್ಯಕ್ತಿತ್ವವಾಗಿ ಕಾಣಿಸಿಕೊಂಡ ಚರ್ಚಿಲ್ರಲ್ಲಿ ಧನಾತ್ಮಕ ಗುಣಗಳು ಇದ್ದಂತೆಯೇ ಕೆಲವು ದೋಷ-ದೌರ್ಬಲ್ಯಗಳು ಕೂಡ ಇದ್ದವು. ಅದರಲ್ಲಿ ಮುಖ್ಯವಾದದ್ದು, ಒಂದು ಕಪ್ಪುಚುಕ್ಕೆ ಎನಿಸುವಂಥದು ಭಾರತದ ಬಗೆಗೆ ಆತ ಅನುಸರಿಸಿದ ನೀತಿ. ಮುಖ್ಯವಾಗಿ ೧೯೪೦-೪೫ರ ಅವಧಿಯಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದ ಚರ್ಚಿಲ್ ದಮನಕಾರಿ ಕ್ರಮಗಳಿಂದ ದೇಶದ ಸ್ವಾತಂತ್ರ್ಯ ಹೋರಾಟವನ್ನು ಮಟ್ಟಹಾಕಿದ್ದಲ್ಲದೆ, ಅಂತಿಮವಾಗಿ ಭಾರತದ ವಿಭಜನೆಗೂ ಕಾರಣನಾದ ವ್ಯಕ್ತಿ ಎನ್ನಬೇಕಾಗುತ್ತದೆ. ಚರ್ಚಿಲ್ ವ್ಯಕ್ತಿತ್ವದ ಸಮಗ್ರ ಚಿತ್ರಣವನ್ನು ನೀಡುವುದರ ಜೊತೆಗೆ ಭಾರತದ (ಬ್ರಿಟಿಷ್ ಇಂಡಿಯಾದ) ಬಗೆಗೆ ಆತನ ಕಾರ್ಯಸೂಚಿ ಏನಿತ್ತು? ಅದನ್ನು ಅನುಷ್ಠಾನಗೊಳಿಸುವಾಗ ಯಾವೆಲ್ಲ ಅನ್ಯಾಯಗಳು ನಡೆದವು? ಅದರಿಂದ ಭಾರತಕ್ಕೆ ಎಷ್ಟು ನಷ್ಟವಾಯಿತು ಎಂಬೆಲ್ಲ ವಿಷಯಗಳನ್ನು ಲೇಖಕ ಕಿಶನ್ ಎಸ್. ರಾಣಾ ತಮ್ಮ ಪುಸ್ತಕ ‘Churchill and India-Manipulation or Betrayal?’ (ಪ್ರ: Routledge-2022)ನಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ; ಅದಕ್ಕೊಂದು ಉದಾಹರಣೆಯಾಗಿ, ಕ್ರಿಪ್ಸ್ ಆಯೋಗದ ವೈಫಲ್ಯ ಮತ್ತು ೧೯೪೨ರ ಕ್ವಿಟ್ ಇಂಡಿಯಾ ಚಳವಳಿಯನ್ನು ದಮನಿಸಿದ ಕ್ರಮವನ್ನು ಉಲ್ಲೇಖಿಸಿದ್ದಾರೆ.
೧೯೪೨ರ ಏಪ್ರಿಲ್-ಮೇ ಹೊತ್ತಿಗೆ ಭಾರತಕ್ಕೆ ಭೇಟಿ ನೀಡಿದ ಬ್ರಿಟನ್ನ ಕ್ರಿಪ್ಸ್ ಆಯೋಗವು ವಿಫಲವಾಯಿತು. ಆಗಸ್ಟ್ ೮ರಂದು ಕಾಂಗ್ರೆಸ್ ಕ್ವಿಟ್ ಇಂಡಿಯಾ (ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ) ಚಳವಳಿಯನ್ನು ಆರಂಭಿಸಿತು. ಅದಕ್ಕೆ ಪೂರ್ವಭಾವಿಯಾಗಿ ಗಾಂಧಿ ಮತ್ತಿತರ ನಾಯಕರು ಸಾಕಷ್ಟು ಚರ್ಚಿಸಿದ್ದರು. ಆದರೆ ಬ್ರಿಟಿಷ್ ಸರ್ಕಾರ ಚಳವಳಿಯನ್ನು ಎದುರಿಸಿದ ಕ್ರಮ ವಿಲಕ್ಷಣವಾಗಿತ್ತು. ಕೆಲವು ತಾಸಿನೊಳಗೆ ಉನ್ನತ ನಾಯಕರು ಮಾತ್ರವಲ್ಲ; ಮಧ್ಯಮಮಟ್ಟದ ನಾಯಕರನ್ನು ಕೂಡ ಬಂಧಿಸಲಾಯಿತು. ಅವರನ್ನು ಪ್ರತ್ಯೇಕಿಸಿ ಬೇರೆಬೇರೆ ಕಡೆ ಸೆರೆಮನೆಯಲ್ಲಿಟ್ಟರು. ಆ ಮೂಲಕ ಪ್ರತಿಭಟನೆ ಮಾತ್ರವಲ್ಲ, ಮಾತುಕತೆಯ ಅವಕಾಶವನ್ನು ಕೂಡ ತಪ್ಪಿಸಲಾಯಿತು. ಎರಡೂ ಕಡೆಯವರು ರಾಜಿಗೆ ಮನಸ್ಸು ಮಾಡದೆ ಸೆಟೆದುಕೊಂಡು ಕುಳಿತರು. ಕಾಲ ಸರಿಯುತ್ತಿತ್ತು. ಅಂತಹ ಪರಿಸ್ಥಿತಿಯಿಂದ ಉಂಟಾದ ನಷ್ಟದ ಬಗ್ಗೆ ಭಾರತ ಈಗಲೂ ಚಿಂತಿಸುವAತಾಗಿದೆ; ಇದು ಚರ್ಚಿಲ್ ಕಾರ್ಯಶೈಲಿಗೊಂದು ಉದಾಹರಣೆ.
ವಿಫಲವಾದ ಕ್ರಿಪ್ಸ್ ಆಯೋಗ
ಎರಡನೇ ಮಹಾಯುದ್ಧದ ವೇಳೆ ಚರ್ಚಿಲ್ ಅಮೆರಿಕ ಅಧ್ಯಕ್ಷ ರೂಸ್ವೆಲ್ಟ್ ಅವರ ಜೊತೆ ನಿರಂತರ ನೇರ ಸಂಪರ್ಕದಲ್ಲಿದ್ದರು; ಹಲವು ವಿಷಯಗಳು ಇಬ್ಬರ ನಡುವಣ ನೇರ ವ್ಯವಹಾರವಾಗಿದ್ದವು. ಕ್ರಿಪ್ಸ್ ಆಯೋಗದ ವೈಫಲ್ಯದ ಬಳಿಕ ಚರ್ಚಿಲ್ “ಭಾರತದಲ್ಲಿ ರಾಷ್ಟ್ರೀಯ ಸರ್ಕಾರದ ಸ್ಥಾಪನೆಯಾದಲ್ಲಿ ಅವರು ಮಧ್ಯಪೂರ್ವದ ಕಡೆಯಿಂದ ಎಲ್ಲ ಸೇನೆಯನ್ನು ಕರೆದು ಜಪಾನ್ ಜೊತೆ ಕೈಜೋಡಿಸಬಹುದು. ಆಗ ಜಪಾನ್ ಸೇನೆ ಭಾರತದ ಮೇಲೆ ಮುಕ್ತವಾಗಿ ಪಶ್ಚಿಮಕ್ಕೆ ಬರಬಹುದು” ಎಂದು ಊಹಿಸಿದ್ದಿದೆ. ಆ ಮೂಲಕ ಭಾರತಕ್ಕೆ ಸ್ವಯಂ ಆಡಳಿತ ಅಥವಾ ಸ್ವಾತಂತ್ರ್ಯವನ್ನು ನಿರಾಕರಿಸುವುದು ಆತನ ಉದ್ದೇಶವಾಗಿತ್ತು. ಆದರೆ ಅಂದಿನ ಹಾಗೂ ಅನಂತರದ ಬೆಳವಣಿಗೆಗಳನ್ನು ನೋಡುವಾಗ ಅಂತಹ ಆತಂಕಕ್ಕೆ ಯಾವುದೇ ಪುರಾವೆ ಇಲ್ಲವೆಂದು ಗುರುತಿಸಲಾಗಿದೆ. ಗಾಂಧಿ ೧೯೪೨ರ ಮಧ್ಯಭಾಗದಲ್ಲಿ ಒಮ್ಮೆ ಮಾತ್ರ ‘ಜಪಾನ್ ಕಡೆಗೆ ತಿರುಗಬೇಕು’ ಎಂದಿದ್ದರು. ಅದು ಕ್ರಿಪ್ಸ್ ಆಯೋಗವು ವಿಫಲವಾದಾಗ ಬಂದ ಒಂದು ಪ್ರತಿಕ್ರಿಯೆ ಅಷ್ಟೆ. ಉಳಿದಂತೆ ದೇಶದ ಪ್ರಧಾನ ಚಳವಳಿಯಲ್ಲಿದ್ದ ಯಾರು ಕೂಡ ಜಪಾನ್ ಬಗ್ಗೆ ಸಹಾನುಭೂತಿ ತೋರಿಸಿರಲಿಲ್ಲ. ಏನಿದ್ದರೂ ಚರ್ಚಿಲ್ ಆ ಅಂಶವನ್ನು ಹಿಡಿದುಕೊಂಡು ಜಪಾನ್ ಬಗ್ಗೆ ಭಯ ಮೂಡಿಸಲು ಯತ್ನಿಸಿದರು.
ಯುದ್ಧದ ಸಾಮರ್ಥ್ಯದ ಹಿನ್ನೆಲೆಯಲ್ಲಿ ನೋಡಿದರೆ ಸುಭಾಷ್ಚಂದ್ರ ಬೋಸ್ ಅವರದ್ದು ಸುಮಾರು ೫೦ರಿಂದ ೭೦ ಸಾವಿರ ಯೋಧರ ಸಣ್ಣ ಸೈನ್ಯ. ಸಿಂಗಾಪುರ, ಮಲೇಷ್ಯಾ ಮತ್ತಿತರ ಕಡೆ ಜಪಾನ್ ಸೇನೆಗೆ ಸೆರೆಯಾದ ಭಾರತೀಯ ಯೋಧರು. ೧೯೪೨ರಲ್ಲಿ ಆಜಾದ್ ಹಿಂದ್ ಫೌಜ್(ಐಎನ್ಎ) ರಚನೆಯಾದ ಬಳಿಕ ಬೋಸ್ ಜಪಾನ್ ರೀತಿಯಲ್ಲೇ ಯುದ್ಧ ಮಾಡಿದರು. ೧೯೪೩ರಲ್ಲಿ ಅವರು ಜಪಾನ್ ಆಕ್ರಮಿತ ಆಗ್ನೇಯ ಏಷ್ಯಾಕ್ಕೆ ಬಂದಾಗ ಅದಕ್ಕೆ ಮಹತ್ತ್ವ ಬಂತು. ಆದರೆ ಸಮರಾಂಗಣದಲ್ಲಿ ಅವರಿಂದ ಹೆಚ್ಚಿನ ಸಾಧನೆ ಆಗಲಿಲ್ಲ ಎನ್ನುವ ಕಿಶನ್ ರಾಣಾ, ಏನಿದ್ದರೂ ನೇತಾಜಿ ಬೋಸ್ ದೇಶದ ಎಲ್ಲರಿಗೆ ದೊಡ್ಡ ಸ್ಫೂರ್ತಿಯಾದರು ಎಂದು ವಿಶ್ಲೇಷಿಸಿದ್ದಾರೆ. ೧೯೪೦ರ ಜನವರಿಯಲ್ಲಿ ಬ್ರಿಟಿಷರ ಕಲ್ಕತ್ತಾ ಸೆರೆಮನೆಯಿಂದ ತಪ್ಪಿಸಿಕೊಂಡು ಪರಾರಿಯಾದ ಬೋಸ್ ಅಫಘಾನಿಸ್ತಾನದವರೆಗೆ ರೈಲು, ರಸ್ತೆ ಮಾರ್ಗವಾಗಿ ಹೋಗಿ ರಷ್ಯಾ ಮಾರ್ಗವಾಗಿ ಜರ್ಮನಿಗೆ ತಲಪಿದರು. ಈ ಪ್ರಯಾಣದ ವೇಳೆ ಒಬ್ಬ ಮಾತ್ರ ಅವರ ಜೊತೆ ಇದ್ದ. ಸುಭಾಷ್ಚಂದ್ರರು ಫ್ಯಾಸಿಸ್ಟ್ ಅಲ್ಲ; ಹಿಟ್ಲರ್ ಅಭಿಮಾನಿಯೂ ಅಲ್ಲ. ಅವರಿಗೆ ಆತನ ನೆರವಲ್ಲದೆ ಬೇರೆ ಮಾರ್ಗ ಇರಲಿಲ್ಲ. ಅದಕ್ಕಾಗಿ ಹಿಂದೂ ಮಹಾಸಾಗರ ಮಾರ್ಗವಾಗಿ ಸಬ್ಮೆರಿನ್ನಲ್ಲಿ ಜಪಾನಿಗೆ ಹೋದರು.
ಭಾರತದ ಗೀಳು ಆರಂಭ
ವಿನ್ಸ್ಟನ್ ಚರ್ಚಿಲ್ನ ಭಾರತದ ಬಗೆಗಿನ ಆಸಕ್ತಿ (ಗೀಳು) ೧೮೯೬ರಷ್ಟು ಹಿಂದೆಯೇ ಆರಂಭವಾಯಿತು. ಅಶ್ವಪಡೆಯ ಓರ್ವ ಅಧಿಕಾರಿಯಾಗಿ ಭಾರತಕ್ಕೆ ಆಗಮಿಸಿದ. ೧೯೨೦ರ ದಶಕದಲ್ಲಿ ಆತನಿಗೆ ರಾಜಕೀಯ ಅಧಿಕಾರ ಲಭಿಸಿತು. ಬ್ರಿಟಿಷ್ ಸಾಮ್ರಾಜ್ಯದ ಅರೆಸ್ವಾತಂತ್ರ್ಯದ ಘಟಕ ಎಂಬ ನೆಲೆಯಲ್ಲಿ ಡೊಮಿನಿಯನ್ ಸ್ಥಾನ ನೀಡುವುದನ್ನು ಆತ ಆಗಲೇ ವಿರೋಧಿಸಿದ್ದ. ೧೯೨೯-೩೫ರ ಹೊತ್ತಿಗೆ ಭಾರತದ ಬಗೆಗಿನ ಆತನ ವಿರೋಧ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಆಗ ರೂಪಗೊಂಡ ಭಾರತ ಸರ್ಕಾರ ಕಾಯ್ದೆ-೧೯೩೫ನ್ನು (ಗವರ್ನ್ಮೆಂಟ್ ಆಫ್ ಇಂಡಿಯಾ ಆ್ಯಕ್ಟ್) ಆತ ಬಹಳಷ್ಟು ವಿರೋಧಿಸಿದ. ಆದರೆ ಆ ನಿಲವಿನಿಂದಾಗಿ ಆತನಿಗೇ ತುಂಬ ಹಾನಿಯಾಯಿತು. ೧೯೩೫ರ ಅನಂತರ ನಡೆದ ಚುನಾವಣೆಯಲ್ಲಿ ಬ್ರಿಟಿಷ್ ಸಚಿವ ಸಂಪುಟದಲ್ಲಿ ಚರ್ಚಿಲ್ಗೆ ಸ್ಥಾನ ಸಿಗಲಿಲ್ಲ. ಅದರಿಂದಾಗಿ ಪ್ರಧಾನಿ ಪಟ್ಟದಿಂದ ದೂರವೇ ಉಳಿಯಬೇಕಾಯಿತು. ೧೯೩೭-೩೯ರ ಅವಧಿಯಲ್ಲಿ ದುರ್ಬಲ ಪ್ರಧಾನಿ ಎನಿಸಿದ ನೆವಿಲ್ಲೆ ಚೆಂಬರ್ಲಿನ್ ಬದಲು ಚರ್ಚಿಲ್ ಪ್ರಧಾನಿಯಾಗಿದ್ದರೆ ಹಿಟ್ಲರ್ ಮತ್ತು ನಾಜಿ ಜರ್ಮನಿ ಒಂದು ದೊಡ್ಡ ಶಕ್ತಿಯಾಗಿ ಮೇಲೇಳುವುದನ್ನು ಆಗಲೇ ತಡೆಯಬಹುದಿತ್ತೆ – ಎನ್ನುವ ಪ್ರಶ್ನೆ ಉಳಿದುಕೊಂಡಿದೆ.
ಗಮನಸೆಳೆಯುವ ಒಂದು ಅಂಶವೆಂದರೆ, ಇತರ ವ್ಯವಹಾರಗಳನ್ನು ನೋಡುತ್ತಿದ್ದಾಗ ಮತ್ತು ಅಧಿಕಾರದಲ್ಲಿ ಇಲ್ಲದಾಗಲೂ ಭಾರತದ ವ್ಯವಹಾರದಲ್ಲಿ ಚರ್ಚಿಲ್ ಸಕ್ರಿಯನಾಗಿದ್ದ. ಮೇ ೧೯೪೦ರಿಂದ ಜುಲೈ ೧೯೪೫ರ ವರೆಗೆ ಆತ ಬ್ರಿಟನ್ ಪ್ರಧಾನಿಯಾಗಿದ್ದ ವೇಳೆ ಭಾರತದ ಸ್ವಾತಂತ್ರö್ಯ ಹೋರಾಟವು ತೀವ್ರವಾಗಿತ್ತು. ಚಳವಳಿಯ ನಾಯಕರ ಬಗ್ಗೆ ಚರ್ಚಿಲ್ ಪೂರ್ವಗ್ರಹ ಮತ್ತು ಆಳವಾದ ದ್ವೇಷವನ್ನು ಹೊಂದಿದ್ದುದು ಸ್ಪಷ್ಟವಾಗಿತ್ತು. ನಮ್ಮ ಹೋರಾಟದ ಬಗ್ಗೆ ಬ್ರಿಟಿಷ್ ಪ್ರಧಾನಿಯಾಗಿ ಅವರಿಗೆ ತಿರಸ್ಕಾರವಿತ್ತು. ಎಲ್ಲ ಕಾಲದಲ್ಲಿ ತನ್ನ ರಹಸ್ಯ ಕಾರ್ಯಸೂಚಿಯನ್ನು (hidden agenda) ಜಾರಿ ಮಾಡುತ್ತಿದ್ದುದು ಚರ್ಚಿಲ್ಗಿದ್ದ ಗೌರವಕ್ಕೆ ಚ್ಯುತಿ ತರುವ ವಿಷಯವಾಗಿತ್ತು. ಆತನ ಜೀವನ ಚರಿತ್ರಕಾರರು ಸೇರಿದಂತೆ ಹಲವು ಇತಿಹಾಸಕಾರರು ಇದನ್ನು ಅಲಕ್ಷಿಸುತ್ತಾ ಬಂದರೆಂದು ಲೇಖಕ ರಾಣಾ ಆಕ್ಷೇಪಿಸುತ್ತಾರೆ.
ಮುಖ್ಯವಾಗಿ ಭಾರತಕ್ಕೆ ಸಂಬಂಧಿಸಿ ಚರ್ಚಿಲ್ ಋಣಾಂಶವೇನೇ ಇದ್ದರೂ ಎರಡನೇ ಮಹಾಯುದ್ಧದ ವೇಳೆ ನಾಯಕತ್ವ ನೀಡಿದ್ದು ಸೇರಿದಂತೆ ಬ್ರಿಟನ್ಗೆ ಆತನ ಕೊಡುಗೆ ಗಣನೀಯವಾದುದು. ೧೯೦೮-೧೦ರ ಅವಧಿಯಲ್ಲಿ ಚರ್ಚಿಲ್ ಬೋರ್ಡ್ ಆಫ್ ಟ್ರೇಡ್ನ ಮುಖ್ಯಸ್ಥನಾಗಿ ಭಾರತದ ಮಾರುಕಟ್ಟೆ ಬಗೆಗೆ ಬಹಳಷ್ಟು ತಿಳಿದುಕೊಂಡ. ಆ ಕಾಲದಲ್ಲೇ ಆತ ಸಮಾಜ ಕಲ್ಯಾಣದ (social welfare) ಪರಿಕಲ್ಪನೆಯನ್ನು ಬೆಳೆಸಿಕೊಂಡಿದ್ದ; ಅದರ ಕೆಲವು ಚಿಂತನೆಗಳನ್ನು ಜರ್ಮನಿಯಿಂದ ಪಡೆದಿದ್ದ.
ಗೃಹ ಇಲಾಖೆ ಕಾರ್ಯದರ್ಶಿ
೧೯೧೦-೧೧ರಲ್ಲಿ ಚರ್ಚಿಲ್ ಬ್ರಿಟನ್ನ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಜೈಲುಗಳ ವ್ಯವಸ್ಥೆಯನ್ನು ಸುಧಾರಿಸಲು ಶ್ರಮಿಸಿದ. ಅಕ್ಟೋಬರ್ ೧೯೧೧ರಿಂದ ಸುಮಾರು ನಾಲ್ಕು ವರ್ಷಗಳ ಕಾಲ ಚರ್ಚಿಲ್ಗೆ ಬ್ರಿಟಿಷ್ ನೌಕಾಪಡೆಯ (ಅಡ್ಮಿರಲ್ಟ್ರಿ) ಮೊದಲ ಲಾರ್ಡ್ ಎಂಬ ಮಹತ್ತ್ವದ ಹುದ್ದೆ ಲಭಿಸಿತ್ತು. ಆಗ ಆತ ತೈಲಚಾಲಿತ ಸಮರನೌಕೆಗಳ ನಿರ್ಮಾಣ-ಬಳಕೆಗೆ ಒತ್ತು ನೀಡಿದ್ದು, ಮೊದಲ ಮಹಾಯುದ್ಧದ ವೇಳೆ ಅದು ಪ್ರಯೋಜನಕ್ಕೆ ಬಂತು. ಪ್ರಥಮ ಸೀಲಾರ್ಡ್ ಆಗಿ ಚರ್ಚಿಲ್ ‘ಲ್ಯಾಂಡ್ಶಿಪ್’ ಎನ್ನುವ ಮನ್ನಣೆಗೆ ಪಾತ್ರವಾದ ಶಸ್ತ್ರಸಜ್ಜಿತ ಟ್ಯಾಂಕ್ಗಳ ನಿರ್ಮಾಣ-ಬಳಕೆಗೆ ಕೂಡ ಅಡಿಪಾಯ ಹಾಕಿದ.
ಓರ್ವ ರಾಜಕೀಯ ಚಿಂತಕನಾಗಿ ಚರ್ಚಿಲ್ ಯೂರೋಪ್ ಮತ್ತು ಜಾಗತಿಕ ವ್ಯವಹಾರಗಳ ಪರಿಣತನೆನಿಸಿದ. ಮಿತ್ರರಾಷ್ಟ್ರಗಳು ಟರ್ಕಿ ಮಾರ್ಗವಾಗಿ ರಷ್ಯಾ ಜೊತೆ ಸೇರಿಕೊಳ್ಳುವಂತೆ ಮಾಡಿದ್ದು ಆತನ ಒಂದು ಸಾಧನೆ ಎನಿಸಿದೆ. ಆಗ ಆತ ಕೈಗೊಂಡ ಒಂದು ತಪ್ಪು ನಿರ್ಧಾರದ ಪರಿಣಾಮವಾಗಿ ೧೯೧೫ರಲ್ಲಿ ಡಚ್ಚಿ ಚಾನ್ಸೆಲರ್ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಮುಂದೆ ಸರ್ಕಾರದ ಪರವಾಗಿ ಒಂದನೇ ವಿಶ್ವಯುದ್ಧದಲ್ಲಿ ಭಾಗಿಯಾಗಿ (ಮೇ ೧೯೧೬ರ ವರೆಗೆ) ಒಂದು ಕಾಲಾಳು ಬೆಟಾಲಿಯನ್ನ ಕಮಾಂಡರ್ ಆದ.
ಜರ್ಮನ್ ಬಾಂಬ್ ಬಗ್ಗೆ ಎಚ್ಚರ
೧೯೨೫-೨೯ರ ಅವಧಿಯಲ್ಲಿ ಚರ್ಚಿಲ್ ಪಾಲಿಗೆ ಚಾನ್ಸಲರ್ ಆಫ್ ಎಕ್ಸ್ಚೆಕರ್ ಎನ್ನುವ ಸರ್ಕಾರೀ ಖಜಾನೆಯ ಹುದ್ದೆ ದೊರೆಯಿತು. ಅಲ್ಲಿ ಆತನ ಸಾಧನೆಯೆಂದರೆ ನೌಕಾಪಡೆಯ ವೆಚ್ಚದಲ್ಲಿ ಕಡಿತ ತಂದದ್ದು. ಆದರೆ ಅದರಿಂದ ದೇಶಕ್ಕೆ ಸಾಕಷ್ಟು ಹಾನಿಯಾಯಿತು; ಯುದ್ಧದ ವೇಳೆ ಬ್ರಿಟನ್ ನೌಕಾಪಡೆಗೆ ಹಿನ್ನಡೆಯಾಯಿತೆಂದು ಟೀಕೆ ಬಂತು. ೧೯೩೦ರ ದಶಕದಲ್ಲಿ ಅಧಿಕಾರದಿಂದ ಹೊರಗಿದ್ದಾಗ ಚರ್ಚಿಲ್ ತಂತ್ರಜ್ಞಾನದ ಬಗ್ಗೆ ಬಹಳಷ್ಟು ತಿಳಿದುಕೊಂಡ. ಹಿಟ್ಲರ್ ನೇತೃತ್ವದ ಜರ್ಮನಿಯನ್ನು ಎದುರಿಸಲು ಅದು ಬೇಕಿತ್ತು. ಭವಿಷ್ಯದಲ್ಲಿ ಜರ್ಮನಿ ವಿಮಾನದಿಂದ ಬಾಂಬ್ ಹಾಕುವ ಅಪಾಯವಿದೆ ಎಂದು ಆತ ೧೯೩೪ರಲ್ಲೇ ಎಚ್ಚರಿಸಿದ್ದ. ೧೯೩೫ರ ಬಳಿಕ ಚರ್ಚಿಲ್ ವಾಯುಪಡೆಗೆ ಸಂಬಂಧಿಸಿದ ಸಮಿತಿಯಲ್ಲಿದ್ದು, ವೈಮಾನಿಕ ಯುದ್ಧದಲ್ಲಿ ಬ್ರಿಟನ್ ಪಾರಮ್ಯ ಸಾಧಿಸಬೇಕೆಂದು ಆಗ್ರಹಿಸಿದ. ಅಂತಹ ಪ್ರಯತ್ನದ ಹೊರತಾಗಿಯೂ ಎರಡನೇ ಮಹಾಯುದ್ಧದಲ್ಲಿ ಬ್ರಿಟನ್ನ ಸಿದ್ಧತೆ ಸಾಕಾಗಲಿಲ್ಲ. ಹಿಟ್ಲರ್ ಮತ್ತು ನಾಜಿ ಜರ್ಮನಿಯ ಬಗ್ಗೆ ಆತ ಮುಂದಾಗಿಯೇ ಎಚ್ಚರಿಸಿದ್ದ ಎಂಬುದು ಗಮನಾರ್ಹ.
ಆಗ ಚರ್ಚಿಲ್ ಮತ್ತೆ ಸಂಪುಟಕ್ಕೆ ಸೇರುವ ಸಂದರ್ಭ ಬಂತು. ಸುಮಾರು ಒಂದು ದಶಕ ರಾಜಕೀಯ ಅಜ್ಞಾತವಾಸದಲ್ಲಿದ್ದ ಆತ ಮತ್ತೆ ನೌಕಾಪಡೆಯ ಮೊದಲ ಲಾರ್ಡ್ ಆಗಿ ಬಂದ. ಸೆಪ್ಟೆಂಬರ್, ೧೯೩೯ರಿಂದ ಸುಮಾರು ಒಂದು ವರ್ಷ ಆ ಹುದ್ದೆಯಲ್ಲಿದ್ದು, ಅನಂತರ ಪ್ರಧಾನಮಂತ್ರಿಯಾದ. ಎರಡನೇ ಮಹಾಯುದ್ಧದ ವೇಳೆ ಸೂಕ್ಷ್ಮ ನಿರ್ವಹಣೆಯ (ಮೈಕ್ರೋ ಮ್ಯಾನೇಜ್ಮೆಂಟ್) ಬಗೆಗಿನ ಚರ್ಚಿಲ್ ಒಲವು (ಪ್ಯಾಶನ್) ವಿಶೇಷವಾಗಿ ಕಂಡುಬಂತು. ‘ಈ ದಿನದ ಕೆಲಸ’ (Action this day) ಎನ್ನುವ ಸ್ಟಿಕ್ಕರ್ ಎಲ್ಲೆಡೆ ಕಾಣಿಸುತ್ತಿತ್ತು. ಅಸಹನೆ, ಪ್ಯಾಶನ್ ಹಾಗೂ ತನ್ನ ಮತ್ತು ಇತರರ ಬಗ್ಗೆ ಚಾಲಕಶಕ್ತಿ (ಡೈನಾಮಿಸಮ್) – ಹೀಗೆ ನಾಯಕತ್ವಕ್ಕೆ ಬೇಕಾದ ಅಂಶಗಳು ಚರ್ಚಿಲ್ನಲ್ಲಿ ಬೇಕಾದಷ್ಟಿದ್ದವು. ಎಲ್ಲ ಸಶಸ್ತ್ರ ಪಡೆಗಳವರಿಗೆ ಆತನ ಫೋನ್ ಕರೆಗಳು ನಿಗದಿತವಾಗಿ ಹೋಗುತ್ತಿದ್ದು, ಮುಂದೆ ಸಹೋದ್ಯೋಗಿಗಳು ಅದನ್ನು ನೆನಪಿಸಿಕೊಳ್ಳುತ್ತಿದ್ದರು. ತಾಜಾಸುದ್ದಿ, ತಳಮಟ್ಟದ ಸುದ್ದಿ – ಮಾಹಿತಿಗಳು ಆತನಿಗೆ ಬೇಕಿತ್ತು. ಅದು ಚರ್ಚಿಲ್ ನಾಯಕತ್ವ ಮತ್ತು ವರ್ಚಸ್ಸಿನ (ಚರಿಷ್ಮಾ) ಭಾಗವೇ ಆಗಿದ್ದವು. ಆ ಸಂಭಾಷಣೆಗಳು ಹೆಚ್ಚಾಗಿ ಕೆಬಿಓ (keep buggering on – ಶಾಲಾಮಕ್ಕಳ ಒರಟುಮಾತು) ಎಂದು ಕೊನೆಯಾಗುತ್ತಿದ್ದವು. ಫೀಲ್ಡ್ ಕಮಾಂಡರ್ಗಳಿಗೆ ಅದು ಅಭ್ಯಾಸವಾಗಿಬಿಟ್ಟಿತ್ತು.
ಅತಿರೇಕದ ಹಾದಿ
ಇದೆಲ್ಲದರ ನಡುವೆ ಭಾರತದ ವಿಷಯದಲ್ಲಿ ಚರ್ಚಿಲ್ರದ್ದು ಅತಿರೇಕದ ಹಾದಿ. ಭಾರತದ ಸಾಂವಿಧಾನಿಕ ಬದಲಾವಣೆ ಬಗ್ಗೆ ಅಸಹನೆ, ಗಾಂಧಿ ಬಗೆಗಿನ ದ್ವೇಷ, ದೇಶದ ರಾಷ್ಟ್ರೀಯ (ಸ್ವಾತಂತ್ರ್ಯ) ಚಳವಳಿಯ ಬಗ್ಗೆ ಸಿಟ್ಟು ‘ಹಿಂದು’ ಎಂದು ಗುರುತಿಸಲ್ಪಟ್ಟ ಎಲ್ಲದರ ಬಗೆಗೆ ದ್ವೇಷ – ಇವು ಚರ್ಚಿಲ್ ಸಾರ್ವಜನಿಕ ವ್ಯಕ್ತಿತ್ವದ ಪ್ರಮುಖ ದೌರ್ಬಲ್ಯಗಳಾಗಿದ್ದವು. ಆತನ ಜೀವನಚರಿತ್ರಕಾರರು ಆತನನ್ನು ‘ವಿಕ್ಟೋರಿಯಾ ಅಚ್ಚಿನ ಸಾಮ್ರಾಜ್ಯಶಾಹಿ’ ಎಂದು ಬಣ್ಣಿಸಿದ್ದಾರೆ; ಅದೇ ರೀತಿ ಬ್ರಿಟಿಷ್ ಸಾಮ್ರಾಜ್ಯದ ಪ್ರಧಾನ ಸಮರ್ಥಕ ಎಂದು ಕೂಡ ವಿಶ್ಲೇಷಿಸಿದ್ದಾರೆ. ಚರ್ಚಿಲ್ ಜನಾಂಗೀಯವಾದಿ (racist) ಅಲ್ಲವೆಂದು ಕೆಲವರು ವಾದಿಸಿ, ಆತನ ಪೂರ್ವಗ್ರಹವನ್ನು ಸಮರ್ಥಿಸಲು ಯತ್ನಿಸಿದ್ದಿದೆ. ಆದರೆ ಆ ವಾದ ನಿಲ್ಲುವುದಿಲ್ಲ. ಆತ ನಿಜವಾಗಿಯೂ ಜನಾಂಗೀಯವಾದಿ. ಆತನ ಕಾಲದ ಮಾನದಂಡದಿಂದ ಕೂಡ ಆತ ಜನಾಂಗೀಯವಾದಿ ಅಥವಾ ವರ್ಣದ್ವೇಷದ ಪ್ರತಿಪಾದಕನೇ.
ಸಂಬಂಧದ ೪ ಹಂತ
ಚರ್ಚಿಲ್ನ ಭಾರತ ಸಂಬಂಧದಲ್ಲಿ ನಾಲ್ಕು ಸ್ಪಷ್ಟವಾದ ಹಂತಗಳನ್ನು ಗುರುತಿಸಲಾಗಿದೆ; ಆತನ ನಡವಳಿಕೆ ಮತ್ತು ಕಾರ್ಯ (ಕೆಲಸ) ಎರಡರಲ್ಲೂ ಅದು ವ್ಯಕ್ತವಾಗಿತ್ತು. ಮೊದಲನೆಯದು ೧೮೯೬-೧೯೨೦ರ ಕಾಲಘಟ್ಟ. ಆಗ ಆತ ಒಬ್ಬ ರಮ್ಯ ಸಾಹಸಿಗ (romatic adventurer); ಅಲ್ಲಿ ಚರ್ಚಿಲ್ ಮೊದಲಿಗೆ ಓರ್ವ ಅಶ್ವಪಡೆ ಅಧಿಕಾರಿಯಾಗಿದ್ದ. ಭಾರತದ ಬಗೆಗಿನ ಚರ್ಚಿಲ್ ಎರಡನೇ ಹಂತ ೧೯೨೨ರಲ್ಲಿ ಆರಂಭವಾಗಿ ಎರಡನೇ ಮಹಾಯುದ್ಧದ ಆರಂಭದ (೧೯೩೯)ವರೆಗೆ ಮುಂದುವರಿಯಿತು. ಅದರಲ್ಲಿ ಮುಖ್ಯವಾದದ್ದು ಗವರ್ನ್ಮೆಂಟ್ ಆಫ್ ಇಂಡಿಯಾ ಆ್ಯಕ್ಟ್-೧೯೩೫ರ ಬಗೆಗೆ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಡೆದ ಸುದೀರ್ಘ ಕಾಲಾವಧಿಯ ಚರ್ಚೆ ಮತ್ತು ಅಂಗೀಕಾರ. ಆಗ ಚರ್ಚಿಲ್ ಭಾರತಕ್ಕೆ ಸ್ವಯಮಾಡಳಿತ ನೀಡುವ ಯಾವುದೇ ಸಾಂವಿಧಾನಿಕ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದು ಕಂಡುಬರುತ್ತದೆ.
ಚರ್ಚಿಲ್ ಬ್ರಿಟನ್ ಪ್ರಧಾನಿಯಾಗಿದ್ದ ಕಾಲವೇ (೧೯೪೦-೪೫) ಭಾರತದ ಜೊತೆಗಿನ ಆತನ ಸಂಬಂಧದ ಮೂರನೇ ಹಂತವೆಂದು ಪರಿಗಣಿತವಾಗಿದೆ. ಈ ಅವಧಿಯ ಬಗ್ಗೆ ಇತಿಹಾಸಕಾರರು, ವಿಶ್ಲೇಷಕರು ಹಾಗೂ ಇತರರು ಸಾಕಷ್ಟು ವಿವೇಚಿಸಿದ್ದಾರೆ. ಆದರೆ ಕೆಲವು ಬ್ರಿಟಿಷ್ ದಾಖಲೆಗಳ (ಅಧಿಕೃತ ಮತ್ತು ವೈಯಕ್ತಿಕ) ಬಗ್ಗೆ ಹೆಚ್ಚು ಅಧ್ಯಯನವಾಗಿಲ್ಲವೆಂದು ಕಿಶನ್ ರಾಣಾ ಗುರುತಿಸಿದ್ದಾರೆ. ಪ್ರಧಾನಿಯಾಗಿದ್ದ ಈ ಹಂತದಲ್ಲಿ ಚರ್ಚಿಲ್ನಿಂದ ಭಾರತದ ಬಗೆಗೆ ಕೆಲವು ದೀರ್ಘಾವಧಿ ಪರಿಣಾಮ ಬೀರಿದ ಘಟನೆಗಳು ಕೂಡ ನಡೆದವು.
ಅಂತಿಮವಾಗಿ ೧೯೪೫ರ ಅನಂತರ ನಾವು ಸಾಕಷ್ಟು ಮೆತ್ತಗಾದ ಚರ್ಚಿಲ್ನನ್ನು ಕಾಣುತ್ತೇವೆ. ಆಟ್ಲಿ ನೇತೃತ್ವದ ಲೇಬರ್ ಸರ್ಕಾರ ಮಾಡಿದ ರಾಷ್ಟ್ರ ವಿಭಜನೆಯಲ್ಲಿ ಚರ್ಚಿಲ್ ಜನರ ದೃಷ್ಟಿಯಿಂದ ಹೊರಗಿದ್ದ. ಆದರೆ ಭಾರತದ ಬಗೆಗಿನ ಆತನ ಮೂಲಭೂತ ದೃಷ್ಟಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಭಾರತದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳಾದಾಗ ಆತನಿಂದ “ನಾನು ನಿಮಗೆ ಹೇಳಲಿಲ್ಲವಾ?” ಎಂಬಂತಹ ಹೇಳಿಕೆಗಳು ಬಂದವು. ಅಂದರೆ ಭಾರತೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ; ಬ್ರಿಟನ್ ಹೊರಟುಹೋದ ಬಳಿಕ ಭಾರತ ಅವನತಿ ಹೊಂದುತ್ತದೆ ಎಂಬ ನಿಲವು. ಭಾರತದ ಬಗೆಗೆ ಆತನಲ್ಲಿ ಮೊದಲಿನಿಂದ ಯಾವೊಂದು ಕಥನವಿತ್ತು -ಅದನ್ನಾತ ಬದಲಿಸಲೇ ಇಲ್ಲ. ಸಾಮ್ರಾಜ್ಯದ ಸಂರಕ್ಷಣೆ ಚರ್ಚಿಲ್ಗೆ ಪರಮನಿಷ್ಠೆಯಾಗಿತ್ತು; ಅದು ಬ್ರಿಟನ್ನ ಭವಿಷ್ಯದ ರಕ್ಷಣೆ ಕೂಡ ಹೌದು.
೧೯೪೨ರಲ್ಲಿ ಉಂಟಾದ ಪೂರ್ವಭಾರತದ ಬರದಿಂದ ಸುಮಾರು ೩೦ ಲಕ್ಷ ಜನ ಮೃತಪಟ್ಟರು. ಆದರೆ ಸಾಮಾನ್ಯವಾಗಿ ಅದು ವಸಾಹತು ದೌರ್ಜನ್ಯವೆಂದು ಪ್ರಸ್ತಾಪಗೊಳ್ಳುವುದೇ ಇಲ್ಲ. ಅದೇ ರೀತಿ ಸುಮಾರು ಮೂರು ಶತಮಾನಗಳ ಕಾಲ ಬ್ರಿಟಿಷರು ನಡೆಸಿದ ಲೂಟಿ ಕೂಡ ಭಾರತ-ಬ್ರಿಟನ್ ಸಂಬಂಧದಲ್ಲಿನ ಪ್ರಮುಖ ಅಂಶವೆಂದು ದಾಖಲಾಗುವುದೇ ಇಲ್ಲ. ಬ್ರಿಟಿಷರು ಈ ವಸಾಹತಿನ ಮೇಲೆ ಎಸಗಿದ ಇತರ ಹಲವು ದೋಷ-ದೌರ್ಜನ್ಯಗಳು ಕೂಡ ಇವೆ. ಎದ್ದುಕಾಣುವ ಅಂಶವೆಂದರೆ ಹಲವು ಪ್ರಮುಖ ದಾಖಲೆಗಳೇ ನಾಪತ್ತೆಯಾಗಿವೆ ಎನ್ನುವ ಲೇಖಕರು, ತಾನು ಹಲವು ಘಟನೆಗಳನ್ನು ಬಯಲು ಮಾಡಿದೆ ಎಂದು ತಿಳಿಸಿದ್ದಾರೆ.
ಬಾಲ್ಯ, ವಿದ್ಯಾಭ್ಯಾಸ
ವಿನ್ಸ್ಟನ್ ಚರ್ಚಿಲ್ಗೆ ರಾಜಕೀಯ ಹಿನ್ನೆಲೆ ಇದೆಯೆ ಎಂದು ಕೇಳಿದರೆ ಇದೆಯೆಂದೇ ಹೇಳಬೇಕು. ಆತನ ತಂದೆ ಲಾರ್ಡ್ ರಾಂಡೋಲ್ಫ್ ಚರ್ಚಿಲ್ (೧೮೪೯-೯೫) ೧೮೭೪ರ ಚುನಾವಣೆಯಲ್ಲಿ ಗೆದ್ದು ಪಾರ್ಲಿಮೆಂಟಿಗೆ ಪ್ರವೇಶಿಸಿದ ಟೋರಿ ಪಕ್ಷದ ನಾಯಕ. ವಿನ್ಸ್ಟನ್ ಹಿರಿಯ ಮಗ. ಆತನಿಗೆ ಜಾಕ್ ಎಂಬ ಸಹೋದರನಿದ್ದ. ವಿನ್ಸ್ಟನ್ ಮೇಲೆ ತಂದೆ ತುಂಬಾ ಪ್ರಭಾವ ಬೀರಿದ್ದರು. ಆದರೆ ಅವರು ಅಕಾಲದಲ್ಲೇ ನಿಧನ ಹೊಂದಿದರು. ಈ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಎಲಿಜಬೆತ್ ಎವರೆಸ್ಟ್ ಎಂಬ ಓರ್ವ ಅವಿವಾಹಿತ ಮಹಿಳೆಯನ್ನು ನೇಮಿಸಿದ್ದರು. ಆದರೆ ಆಕೆ ಮುಂದೆ ಬಾಡಿಗೆ ತಾಯಿಯಾದ ಕಾರಣ ಆಕೆಯನ್ನು ವಜಾಗೊಳಿಸಿದರು. ಮರುವರ್ಷ ವಿನ್ಸ್ಟನ್ ತಂದೆ ನಿಧನ ಹೊಂದಿದರು. ಇದರ ಹೊರತಾಗಿಯೂ ಸುಮಾರು ಇಪ್ಪತ್ತು ವರ್ಷ ಎಲಿಜಬೆತ್ ವಿನ್ಸ್ಟನ್ಗೆ ಆತ್ಮೀಯಳಾಗಿದ್ದಳು.
ಮೊದಲ ಆರು ವರ್ಷ ಸೈಂಟ್ ಜಾರ್ಜ್ ಶಾಲೆಯಲ್ಲಿ ಓದಿದ ಬಾಲಕ ವಿನ್ಸ್ಟನ್, ಮುಂದಿನ ಏಳು ವರ್ಷ (೧೮೮೫-೯೨) ಪ್ರಸಿದ್ಧ ಹ್ಯಾರೋ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದನು. ಆತನ ಅಶಿಸ್ತಿಗಾಗಿ ಒಮ್ಮೆ ತಾಯಿ ತೀವ್ರವಾಗಿ ಬೈದರು; ಚರ್ಚಿಲ್ ಬುದ್ಧಿವಂತ ವಿದ್ಯಾರ್ಥಿ; ಆದರೆ ಕಲಿಕೆಯಲ್ಲಿ ನಿರಂತರತೆಯ ಕೊರತೆಯಿತ್ತು. ಚರ್ಚಿಲ್ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಮುಂದುವರಿಯಲಿಲ್ಲ ಎನ್ನುವುದು ಗಮನಸೆಳೆಯುವ ಅಂಶವಾಗಿದೆ. ಮುಂದೆ ಆತ ಸೇರಿದ್ದು ಸ್ಯಾಂಡ್ಹರ್ಸ್ಟ್ನಲ್ಲಿ ಮಿಲಿಟರಿ ಶಿಕ್ಷಣಕ್ಕೆ (೧೮೯೩). ಆತನ ಬಗ್ಗೆ ಸಿಟ್ಟಾದ ತಂದೆ ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಹಣ ಕೊಡುತ್ತಿರಲಿಲ್ಲವಂತೆ. ಅಶ್ವಪಡೆಯ ಅಧಿಕಾರಿ ಹುದ್ದೆಗೆ ಬೇಕಾದ ಶಿಕ್ಷಣ ಅಲ್ಲೇ ಪಡೆದ ಚರ್ಚಿಲ್ ಸ್ಯಾಂಡ್ಹರ್ಸ್ಟ್ನಲ್ಲಿ ಉತ್ತಮ ಪ್ರಯತ್ನವನ್ನೇ ನಡೆಸಿದ. ಮಗ ದಕ್ಷಿಣ ಆಫ್ರಿಕದಲ್ಲಿ (ಬ್ರಿಟನ್ ವಸಾಹತು) ಉದ್ಯೋಗಕ್ಕೆ ಸೇರಬೇಕೆಂಬುದು ತಂದೆಯ ಅಪೇಕ್ಷೆಯಾಗಿತ್ತು. ಏಕೆಂದರೆ ಇಂಗ್ಲೆಂಡ್ನಲ್ಲಿ ಸಿಗುವುದು ಕಷ್ಟವಿತ್ತು. ತಂದೆ ಸದಾ ತನ್ನ ಬಗ್ಗೆ ಅಸಮಾಧಾನವನ್ನೇ ಹೊಂದಿದ್ದರೂ ವಿನ್ಸ್ಟನ್ಗೆ ಅವರ ಮೇಲೆ ಅಪಾರ ಪ್ರೀತಿ-ಗೌರವ ಇತ್ತು. ತನ್ನ ಸಾಧನೆಯ ಬಗ್ಗೆ ತಂದೆ ಏನು ಹೇಳಬಹುದೆಂದು ಆತ ಸದಾ ಯೋಚಿಸುತ್ತಿದ್ದರಂತೆ! ಆದರೆ ಮಗ ಅಶ್ವಪಡೆ ಅಧಿಕಾರಿಯಾಗಿ ಭಾರತಕ್ಕೆ ಬರುವ (೧೮೯೬) ಮುನ್ನವೇ ತಂದೆ ಅಕಾಲವಾಗಿ ಮರಣ ಹೊಂದಿದರು.
ತಂದೆಯ ಪ್ರಭಾವ
ಬ್ರಿಟಿಷ್ ಸಾಮ್ರಾಜ್ಯದ ಬಗ್ಗೆ ವಿಕ್ಟೋರಿಯನ್ ದೃಷ್ಟಿಕೋನ ಏನಿತ್ತೋ ಅದು ರಾಂಡೋಲ್ಫ್ ಚರ್ಚಿಲ್ರದ್ದು ಕೂಡ ಆಗಿತ್ತು. ೧೯ನೇ ಶತಮಾನದ ಆ ದೃಷ್ಟಿ ಮಗನ ಮೇಲೆ ಗಾಢ ಪ್ರಭಾವ ಬೀರಿತ್ತು. ಕುತೂಹಲಕರ ಸಂಗತಿಯೆಂದರೆ, ರಾಂಡೋಲ್ಫ್ ಭಾರತಕ್ಕೆ ಭೇಟಿ ನೀಡಿದ್ದರು. ಡಿಸೆಂಬರ್ ೧೮೮೪ರಿಂದ ಸುಮಾರು ಐದು ತಿಂಗಳು ಆತ ಭಾರತದಲ್ಲಿದ್ದರು. ಆನೆ ಮೇಲೆ ಸವಾರಿ ಮಾಡಿದ್ದು, ನೇಪಾಳ ಗಡಿಯಲ್ಲಿ ಬೇಟೆಯಾಡಿ ಹುಲಿಯನ್ನು ಕೊಂದದ್ದು ಮುಂತಾಗಿ ಇಲ್ಲಿ ಕಂಡದ್ದು, ಮಾಡಿದ್ದನ್ನು ಆತ ಪತ್ರ ಬರೆದು ಹೆಂಡತಿಗೆ ತಿಳಿಸುತ್ತಿದ್ದರು. ಕೆಲವು ಸಮಯ ಆತ ಕೋಲ್ಕತ್ತಾದಲ್ಲಿ ವೈಸರಾಯ್ ಡಫರಿನ್ ಅತಿಥಿಯಾಗಿ ವಾಸ್ತವ್ಯವಿದ್ದರು. ಜೂನ್ ೧೮೮೫ರಿಂದ ಸುಮಾರು ಎಂಟು ತಿಂಗಳು ಆತ ಬ್ರಿಟನ್ನಲ್ಲಿ ಭಾರತ ವ್ಯವಹಾರ ಮಂತ್ರಿಯಾಗಿದ್ದರು.
ವಿನ್ಸ್ಟನ್ ಚರ್ಚಿಲ್ ತಂದೆ ವಾರಾಣಸಿಯಲ್ಲಿ ಒಂದು ದೊಡ್ಡ ಹಗರಣವನ್ನು ಬಯಲು ಮಾಡಿದ್ದರು. ಅದೆಂದರೆ ಪೊಲೀಸರು ಜಲವಾಹಕರನ್ನು (ಬೀಸ್ಟಿಗಳು) ಹಿಡಿದು ಗಲಭೆಪೀಡಿತ ವಾಯವ್ಯ ಗಡಿಪ್ರಾಂತಕ್ಕೆ ಕಳುಹಿಸುತ್ತಿದ್ದರು; ಅಲ್ಲಿಗೆ ಹೋದವರಿಗೆ ಸಾವು ಖಚಿತ ಎನ್ನುವ ಸ್ಥಿತಿಯಿತ್ತು. ಬ್ರಿಟಿಷ್ ಅಧಿಕಾರಿಗಳು ಸಾಮಾನ್ಯ ಜನರಿಂದ ದೂರ ಇರಬಾರದು ಎಂದು ಆತ ಹೇಳುತ್ತಿದ್ದರು. ಸ್ಥಳೀಯ ಜನರು (ಮೂಲನಿವಾಸಿಗಳು) ಇಂಗ್ಲೆಂಡ್ಗೆ ಹೋಗಿ ಅಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಲಿ ಎಂದು ಕೂಡ ಆತ ಬಯಸಿದ್ದರು. ಬ್ರಿಟಿಷ್ ಭಾರತ ಸರ್ಕಾರದ ಬಗ್ಗೆ ಸಮಗ್ರ ಸಂಸದೀಯ ತನಿಖೆ ನಡೆಯಬೇಕು ಎಂದಾತ ಹೇಳುತ್ತಿದ್ದರು. ಆ ಕಾಲಕ್ಕೆ ವಸಾಹತಿನ ಬಗ್ಗೆ ಇಂತಹ ಸಹಾನುಭೂತಿ ವಿಶೇಷವೇ; ವಿಕ್ಟೋರಿಯನ್ ಸಾಮ್ರಾಜ್ಯಶಾಹಿಯಿಂದ ಅದನ್ನು ನಿರೀಕ್ಷಿಸುವುದು ಕೂಡ ಅಸಂಭವವಿತ್ತು. ಆದರೆ ದುರದೃಷ್ಟವೆಂದರೆ, ಮಗನ ಚಿಂತನೆಯಲ್ಲಿ ಇಂತಹ ಅಂಶಗಳು ಬರಲೇ ಇಲ್ಲ. “೨೫ ಕೋಟಿ ಜನರಿರುವ ಒಂದು ದೇಶದಲ್ಲಿ ನಾವು ಇಂತಹ ಕ್ರಮಗಳನ್ನು ಕೈಗೊಳ್ಳಲೇಬೇಕು. ಏಕೆಂದರೆ ಭಾರತವಿಲ್ಲದೆ ಇಂಗ್ಲೆಂಡ್ ಒಂದು ರಾಷ್ಟ್ರವಾಗಿ ಉಳಿಯಲಾರದು” ಎಂದು ರಾಂಡೋಲ್ಫ್ ಚರ್ಚಿಲ್ ಭಾಷಣವೊಂದರಲ್ಲಿ ಹೇಳಿದ್ದರು. ಇದೊಂದು ಪ್ರಶಾಂತವಾದ ಬೃಹತ್ ದೇಶ ಎನ್ನುತ್ತ ಅವರಿದನ್ನು ‘ತೈಲದ ಒಂದು ವಿಶಾಲ ಹಾಳೆ’ (A wast sheet of oil) ಎಂದು ಆಗಾಗ ಬಣ್ಣಿಸುತ್ತಿದ್ದರು. ಅದೇ ರೀತಿ ಭಾರತವನ್ನು ‘ಜೂಯೆಲ್ ಆಫ್ ದಿ ಕ್ರೌನ್’ (ಕಿರೀಟದ ಅಮೂಲ್ಯ ಆಭರಣ) ಎಂದು ಹೊಗಳುತ್ತಿದ್ದರು. ಚರ್ಚಿಲ್ಗೆ ಈ ಎರಡು ಅಭಿಪ್ರಾಯಗಳು ಸದಾ ಇದ್ದವು.
ಭಾರತವಿಲ್ಲದೇ ಇಂಗ್ಲೆಂಡ್ ಇಲ್ಲ
ಬಹಳಷ್ಟು ಇತಿಹಾಸಕಾರರು ಸಾಮ್ರಾಜ್ಯಶಾಹಿಗೆ ಸಂಬಂಧಿಸಿ ಈ ಶಬ್ದಗಳ ಆಚೆಗೆ ನೋಡಲಿಲ್ಲ. ತಂದೆ ಚರ್ಚಿಲ್ರ ವಿಶ್ಲೇಷಣೆಯಲ್ಲಿ ಒಂದು ದೋಷವಿತ್ತು; ಅದೆಂದರೆ ಭಾರತದ ಈ ಪರಿಸ್ಥಿತಿಗೆ ಕಾರಣವೇನೆಂದು ತಿಳಿಯದೆ ಇದ್ದದು. ಐರೋಪ್ಯ ದೇಶಗಳು ದೂರದ ಈ ಏಷ್ಯಾ ದೇಶಗಳಿಗೆ ತಮ್ಮ ದುರಾಸೆಯ ಕಾರಣದಿಂದ ಮಿಲಿಟರಿ ತಂತ್ರಜ್ಞಾನವನ್ನು ತಂದದ್ದಲ್ಲವೆ? ಆ ಮೂಲಕ ಇಲ್ಲಿಯ ಅಶಾಂತಿಗೆ ಅವರೇ ಕಾರಣರಲ್ಲವೆ? ‘ತೈಲದ ವಿಶಾಲ ಹಾಳೆ’ಯನ್ನು ಕಲಕಿದ್ದು ಯಾರು? ಮೂರು ಶತಮಾನಗಳ ಕಾಲ ಅವರು ಭಾರತವನ್ನು ಲೂಟಿ ಮಾಡಿದರಲ್ಲವೆ? (ಅದರಲ್ಲಿ ಡಚ್, ಫ್ರೆಂಚ್, ಪೋರ್ಚುಗೀಸರು ಮತ್ತು ಬ್ರಿಟಿಷರ ನಡುವೆ ಸ್ಪರ್ಧೆಯೇ ಉಂಟಾಗಿತ್ತಲ್ಲವೆ?) ಮಗ ಚರ್ಚಿಲ್ ಕೂಡ ತಂದೆಯ ಈ ಮನಃಸ್ಥಿತಿಯಿಂದಲೇ ಯೋಚಿಸಿದ; ವಾಸ್ತವವನ್ನು ಅರಿಯಲು ಹೋಗಲಿಲ್ಲ. ಸಂಸ್ಕೃತಿ ಸಹಿತ ಭಾರತದಲ್ಲಾದ ಕಷ್ಟ-ನಷ್ಟಗಳಿಗೆ ತಾವು ಬಹಳಷ್ಟು ಕಾರಣ ಎಂದವರು ಯೋಚಿಸಲೇ ಇಲ್ಲ.
ಮೊಘಲರಿಗೆ ಹಡಗುಗಳ ಮಹತ್ತ್ವದ ಅರಿವು ಇರಲಿಲ್ಲ. ಅದರ ಫಲವಾಗಿ ಏಷ್ಯಾ ಮತ್ತು ಯೂರೋಪ್ಗಳ ಬಲಾಬಲವು ಸ್ಥಳಾಂತರಗೊಂಡಿತು. ಭಾರತ ಸೇರಿದಂತೆ ಏಷ್ಯಾದ ಹಲವೆಡೆ ಸ್ಥಳೀಯ ರಾಜರು ಕರಾವಳಿ ಭಾಗದ ಜಾಗವನ್ನು ವಿದೇಶೀಯರಿಗೆ ತುಂಬಾ ರಿಯಾಯಿತಿಯಲ್ಲಿ ನೀಡಿದರು. ಅದರಿಂದ ತಮ್ಮ ನಾಡಿನ ವ್ಯಾಪಾರವು ಅನ್ಯರ ಪಾಲಾಗಬಹುದೆಂಬ ಕಿಂಚಿತ್ ಜ್ಞಾನವೂ ಅವರಿಗೆ ಇರಲಿಲ್ಲ. ಇದರಿಂದ ಯೂರೋಪಿಗೆ ಲಾಭವಾಯಿತು; ಜಾಗ ಅವರ ಕೈಸೇರಿತು. ಆದರೆ ಚೀನಾ ಹಾಗೆ ಮಾಡಲಿಲ್ಲ. ಯೂರೋಪಿನವರಿಗೆ ರಿಯಾಯಿತಿಯನ್ನು ಕೊಡುವಾಗ ಬಿಗಿಹಿಡಿತವನ್ನು ಉಳಿಸಿಕೊಂಡಿತ್ತು. ಆದರೆ ಕ್ರಮೇಣ ಅವರು ಕೂಡ ಬಿಟ್ಟುಕೊಡಬೇಕಾಯಿತು.
ಭಾರತದ ಪರಿಸ್ಥಿತಿ
ವಿನ್ಸ್ಟನ್ ಚರ್ಚಿಲ್ ಭಾರತಕ್ಕೆ ಆಗಮಿಸುವ ಸ್ವಲ್ಪ ಮುನ್ನ, ಅಂದರೆ ೧೮೯೦ರ ಹೊತ್ತಿಗೆ ಬ್ರಿಟಿಷ್ ಭಾರತ (ರಾಜ್) ಬಹಳಷ್ಟು ಗಟ್ಟಿಯಾಗಿತ್ತು. ದೇಶವು ಎರಡು ಭಾಗವಾಗಿ ಒಡೆದಂತೆ ಕಾಣಿಸುತ್ತಿತ್ತು. ಅದರಲ್ಲಿ ಬ್ರಿಟಿಷ್ ಇಂಡಿಯ ಒಂದಾಗಿದ್ದು ಅಲ್ಲಿ ವೈಸರಾಯ್ ನೇರ ಆಡಳಿತವಿತ್ತು; ಅಲ್ಲಿ ಸವಿವರವಾದ ಆಡಳಿತ ವ್ಯವಸ್ಥೆ ಬ್ರಿಟನ್ನದೇ ಆಗಿತ್ತು. ಇನ್ನೊಂದು ಭಾಗದಲ್ಲಿ ಸುಮಾರು ೭೦೦ ಸಂಸ್ಥಾನಗಳ (ಇಂಡಿಯನ್ ಸ್ಟೇಟ್ಸ್) ರಾಜರ ಆಳ್ವಿಕೆಯಿತ್ತು. ಅವುಗಳನ್ನು ಭಾರತೀಯ ಸಂಸ್ಥಾನ(ಅರಸೊತ್ತಿಗೆ)ಗಳೆಂದು ಕರೆಯುತ್ತಿದ್ದರು. ಈ ಸಂಸ್ಥಾನಗಳಿಗೆ ಕೆಲಮಟ್ಟಿನ ಸ್ವಾಯತ್ತೆ ಇದ್ದರೂ ಕೂಡ ಅದರ ಮೇಲೆ ಬ್ರಿಟಿಷ್ ರೆಸಿಡೆಂಟ್ ಮತ್ತು ಏಜೆಂಟ್ ಜನರಲ್ ಮೂಲಕ ಬಿಗಿಯಾದ ನಿಯಂತ್ರಣವಿತ್ತು. ತಪ್ಪಿದ ಸಂಸ್ಥಾನಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರಗಿಸುತ್ತಿದ್ದರು. ರಾಜರು, ಮಹಾರಾಜರು, ನವಾಬರು, ಠಾಕೂರರು ಮುಂತಾದ ಆ ಅರಸರ ಮೇಲೆ ಕ್ರೌನ್ನ (ಬ್ರಿಟನ್ನ ರಾಜ ಅಥವಾ ರಾಣಿ) ಪಾರಮ್ಯ ಪ್ರಶ್ನಾತೀತವಾಗಿತ್ತು. ಈ ಪಾರಂಪರಿಕ ರಾಜರ (traditional-prince) ಸ್ತರ(ರ್ಯಾಂಕ್)ದ ಬದಲಾವಣೆ, ಅವರ ಗನ್ಸೆಲ್ಯೂಟ್, ಸನದು ಬದಲಾವಣೆ ಅಥವಾ ಅದನ್ನು ಅಮಾನತು ಮಾಡುವುದು, ಉತ್ತರಾಧಿಕಾರಿಯ ಬದಲಾವಣೆ -ಇದನ್ನೆಲ್ಲ ಬ್ರಿಟಿಷ್ ಆಳ್ವಿಕೆ ತನ್ನ ಇಷ್ಟದಂತೆ ಮಾಡುತ್ತಲೇ ಇತ್ತು.
ಜಗತ್ತಿನ ವಿವಿಧೆಡೆ ಇದ್ದ ಬ್ರಿಟಿಷರ ಇತರ ವಸಾಹತುಗಳಲ್ಲಿ ಬ್ರಿಟಿಷ್ ವಲಸಿಗರು (ಬ್ರಿಟಿಷ್ ನಾಗರಿಕರು) ಬಂದು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದರು. ಆದರೆ ಭಾರತದಲ್ಲಿ ಬ್ರಿಟಿಷರ ಸಂಖ್ಯೆ ಯಾವ ಕಾಲದಲ್ಲೂ ೭೦ ಸಾವಿರ ದಾಟಲಿಲ್ಲ. ಅದರಲ್ಲಿ ಬ್ರಿಟಿಷ್ ಸೈನ್ಯ, ರೈಲ್ವೆಯಂತಹ ವಿಶೇಷ ಸೇವೆಯ ಅಧಿಕಾರಿಗಳು, ಸಿಬ್ಬಂದಿ, ವ್ಯಾಪಾರಿಗಳು, ಬ್ರಿಟಿಷ್ ಕಂಪೆನಿಗಳ ಉದ್ಯೋಗಿಗಳು ಮುಂತಾದವರೆಲ್ಲ ಇದ್ದರು. ಅದಲ್ಲದೆ ಭಾರತೀಯರ ಸೇನೆ ಕೂಡ ಇತ್ತು. ಅದರಲ್ಲಿ ಒಂದನೇ ಮಹಾಯುದ್ಧದವರೆಗೆ ಎಲ್ಲ ಕಮಿಷನ್ಡ್ ಅಧಿಕಾರಿಗಳು ಬ್ರಿಟಿಷರೇ ಆಗಿದ್ದರು. ಬ್ರಿಟಿಷ್ ಮತ್ತು ಭಾರತೀಯ ಸೇನಾ ಘಟಕಗಳನ್ನು ಎಲ್ಲೂ ಮಿಶ್ರಣ ಮಾಡುತ್ತಿರಲಿಲ್ಲ. ಭಾರತೀಯ ಸೈನಿಕರನ್ನು ಒಳಗೊಂಡ ವಿಭಾಗವು ಇಂಡಿಯನ್ ಆರ್ಮಿ ಕಮಾಂಡ್ನ ಕೆಳಗಿತ್ತು; ಮತ್ತು ಅದರ ಕೇಂದ್ರವು ದೆಹಲಿಯಿಂದ ಒಂದು ರಾತ್ರಿ ಪ್ರಯಾಣದ ದೂರದ ಸಿಮ್ಲಾ(ಶಿಮ್ಲಾ)ದಲ್ಲಿತ್ತು.
‘ಅತ್ಯಂತ ಅಲಕ್ಷ್ಯ’
ವಸಾಹತು ಆಡಳಿತಗಾರರು ಭಾರತವನ್ನು ಯಾವ ರೀತಿ ನೋಡಿಕೊಂಡರು? ಅದನ್ನು ‘ಕೆಳಮಟ್ಟದ ಜನರ ಬಗ್ಗೆ ಅತ್ಯಂತ ಅಲಕ್ಷ್ಯ” ಎಂದರೆ ಸರಿಯಾದೀತು. ದೇಶದ ಮೇಲ್ವರ್ಗ (ಎಲೀಟ್ಗಳು)ದವರಿಗೆ ಸ್ವಲ್ಪಮಟ್ಟಿನ ಸಾಮಾಜಿಕ ಪ್ರವೇಶವಿತ್ತು. ದೇಶದ ರಾಜರು, ಮಹಾರಾಜರು, ಯುವರಾಜರಿಗೆ ಸೀಮಿತ ಸೌಜನ್ಯ ದೊರೆಯುತ್ತಿತ್ತು. ಆದರೆ ‘ವೆಲ್ವೆಟ್ನ ಕೈಗವಸಿನೊಳಗೆ ಕಬ್ಬಿಣದ ಕೈ’ ಸದಾ ಇರುತ್ತಿತ್ತು. ಆ ರೀತಿಯ ದೂರ ಇಡುವಿಕೆ ಮತ್ತು ದೃಢವಾದ ಐರೋಪ್ಯ ಪಾರಮ್ಯವು ರಾಜ್ನ ಕೊನೆಯ ನೂರು ವರ್ಷಗಳ ನೀತಿಯೇ ಆಗಿತ್ತು.
ಹಿಂದೆ ಇಂತಹ ನಡವಳಿಕೆ ಅಷ್ಟಾಗಿ ಇರಲಿಲ್ಲ. ಹೆಚ್ಚಿನ ವಸಾಹತು ದೊರೆಗಳು (ವಿದೇಶೀ ಪ್ರಜೆಗಳು), ವಿಶೇಷವಾಗಿ ೧೮೩೦ರವರೆಗೆ ಭಾರತೀಯ ಭಾಷೆಗಳನ್ನು ಕಲಿತರು. ನೃತ್ಯ ಸಂಗೀತ ಸಾಹಿತ್ಯಗಳ ಪೋಷಕರಾಗಿ ಅದರಿಂದ ಆಳವಾದ ಒಳನೋಟವನ್ನು ಪಡೆದರು. (ಇದರಲ್ಲಿ ಬಹಳಷ್ಟು ಮಿಷನರಿಗಳು, ಮತ ಪ್ರಚಾರಕರು ಎದ್ದು ತೋರುತ್ತಾರೆ.) ಆ ಪರಂಪರೆಯ ಸಣ್ಣ ಸಂಖ್ಯೆ ಬ್ರಿಟಿಷ್ ಪೌರಸೇವಕರಲ್ಲಿ ಅನಂತರವೂ ಮುಂದುವರಿಯಿತು.
೧೯ನೇ ಶತಮಾನದ ಆರಂಭದಲ್ಲಿ ಕೇಂಬ್ರಿಡ್ಜ್ ನ ಪ್ರೊ. ಮ್ಯಾಕ್ಸ್ಮುಲ್ಲರ್ ಮತ್ತಿತರರು ವೇದ, ಉಪನಿಷತ್ ಮತ್ತಿತರ ತತ್ತ್ವಶಾಸ್ತ್ರ (ಫಿಲಾಸಪಿ), ಮತಧರ್ಮ, ಗಣಿತ ಮೊದಲಾದ ವಿಷಯಗಳ ಗ್ರಂಥಗಳನ್ನು ಸಂಸ್ಕೃತ, ಪಾಳಿ ಭಾಷೆಗಳಿಂದ ಇಂಗ್ಲಿಷ್ಗೆ ಅನುವಾದಿಸಿದರು. ಅಮೆರಿಕದಲ್ಲಿ ಒಂದು ವರ್ಗ ಭಾರತದ ತತ್ತ÷್ವಶಾಸ್ತç ಹಾಗೂ ಮತಧರ್ಮದ ತತ್ತ್ವಗಳಿಂದ ತುಂಬಾ ಪ್ರಭಾವಿತವಾಯಿತು. ಅವರಿಂದ ಕೆಲವು ಗ್ರಂಥಗಳು ಕೂಡ ಬಂದವು. (ಉದಾ – ಎಮರ್ಸನ್ ಮತ್ತು ಥೋರೋ ಬರಹಗಳು.) ೨೦ನೇ ಶತಮಾನ ಬರುವ ಹೊತ್ತಿಗೆ ಕೌಟಿಲ್ಯನ ಅರ್ಥಶಾಸ್ತ್ರವು ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿತ್ತು. ಮ್ಯಾಕ್ಸ್ವೆಬರ್ ಮತ್ತಿತರರು ಅದನ್ನು ‘ಆಳ್ವಿಕೆ’ ಆಡಳಿತಗಳ ಮೇಲಿನ ಅತ್ಯಂತ ಪ್ರಾಚೀನ ಸಮಗ್ರ ಸಿದ್ಧಾಂತ’ ಎಂದು ಬಣ್ಣಿಸಿದರು.
ಆದರೆ ವಿನ್ಸ್ಟನ್ ಚರ್ಚಿಲ್ ಭಾರತದಲ್ಲಿ ಮೂರು ವರ್ಷ (೧೮೯೬-೯೯) ಇದ್ದಾಗ ಇದಾವುದನ್ನೂ ಗಮನಿಸಿದಂತೆ ತೋರುವುದಿಲ್ಲ. ಒಂದು ಬಗೆಯ ಜನಾಂಗೀಯ ವಿಭಜನೆಯಲ್ಲೇ ಆತ ಇದ್ದ ಎನಿಸುತ್ತದೆ. ಜನಾಂಗೀಯ ವಿಭಜನೆ ಬಗೆಗಿನ ಸರಿಯಾದ ಕಮೆಂಟ್ ಆಗ ಪ್ರಿನ್ಸ್ ಆಫ್ ವೇಲ್ಸ್ನಿಂದ (ಮುಂದೆ ಜಾರ್ಜ್ ಗಿ) ಬಂತು. ಆತ ೧೯೦೫-೦೬ರಲ್ಲಿ ಭಾರತಕ್ಕೆ ಆಗಮಿಸಿದ.
೧೮೫೭ರ ರಾಷ್ಟ್ರೀಯ ದಂಗೆ (ಮೊದಲ ಸ್ವಾತಂತ್ರ್ಯ ಸಮರ) ಬಳಿಕ ಬ್ರಿಟನ್ ತನ್ನ ಆಳ್ವಿಕೆಯನ್ನು ಬಹಳಷ್ಟು ಬಿಗಿಗೊಳಿಸಿತು. ಬ್ರಿಟಿಷರು, ಇತರ ಪಾಶ್ಚಾತ್ಯರು ಅದನ್ನು ‘ಭಾರತೀಯ ಮ್ಯುಟಿನಿ’ (ಸಿಪಾಯಿ ದಂಗೆ) ಎಂದು ಕರೆದರು. ಸ್ವಯಮಾಡಳಿತ ಅಥವಾ ಸ್ವಾತಂತ್ರ್ಯದ ಬಗೆಗಿನ ಭಾರತದ ಹೋರಾಟವು ೧೮೭೦ರ ಬಳಿಕ ವೇಗವನ್ನು ಪಡೆದುಕೊಂಡಿತು. ಅದರಲ್ಲಿ ರಾಜಾ ರಾಂಮೋಹನ ರಾಯ್, ದಯಾನಂದ ಸರಸ್ವತಿ ಮುಂತಾದವರು ಭಾರತೀಯ ಸಮಾಜದ ಸುಧಾರಣೆಗೆ ನಡೆಸಿದ ಚಳವಳಿ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಅರವಿಂದರು ಮತ್ತಿತರರು ರಾಷ್ಟ್ರೀಯ ಪುನರುಜ್ಜೀವನ ಮತ್ತು ಸ್ವಾತಂತ್ರ್ಯ ಎರಡಕ್ಕೂ ನಡೆಸಿದ ಪ್ರಯತ್ನಗಳು, ಗೋಪಾಲಕೃಷ್ಣ ಗೋಖಲೆ ಅವರು ವ್ಯವಸ್ಥೆಯ ಒಳಗೇ ಬದಲಾವಣೆ ಬರಬೇಕೆಂದು ಬಯಸಿ ಶ್ರಮಿಸಿದ್ದು, ಬಾಲಗಂಗಾಧರ ತಿಲಕರು ‘ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು’ ಎಂದು ಹೇಳಿ ಸ್ವಲ್ಪ ತೀವ್ರಗಾಮಿಯಾದ ದಾರಿಯನ್ನು ತುಳಿದದ್ದು – ಒಟ್ಟಾರೆಯಾಗಿ ಇವರೆಲ್ಲ ಜನತೆಯಲ್ಲಿ ಸ್ಫೂರ್ತಿಯನ್ನು ತುಂಬಿದ್ದು ಆ ಹೊತ್ತಿಗೆ ನಡೆದಿತ್ತು. ೧೮೮೫ರಲ್ಲಿ ಕಾಂಗ್ರೆಸ್ ಸ್ಥಾಪನೆಯಾಗಿ ಮಂದಗಾಮಿಯಾಗಿ ಚಳವಳಿಯನ್ನು ನಡೆಸುತ್ತಿತ್ತು.
೧೮೯೬ರಲ್ಲಿ ಬಾಂಬೆ, ಪುಣೆಗಳನ್ನು ಭೀಕರ ಪ್ಲೇಗ್ ರೋಗವು ಬಾಧಿಸಿದ ಅನಂತರ ವಿಶಾಲ ರಾಷ್ಟ್ರೀಯ ಚಳವಳಿಯು ವೇಗವನ್ನು ಪಡೆದುಕೊಂಡಿತು. ಅದರ ದಮನಕ್ಕೆ ಬ್ರಿಟಿಷರು ಕ್ರಮಕೈಗೊಂಡರು. ತಿಲಕರನ್ನು ಬಂಧಿಸಿದರು. ೧೮೯೮ರಲ್ಲಿ ಬಿಡುಗಡೆಯಾದ ಅನಂತರ ಅವರು ಸ್ವರಾಜ್ (ಸ್ವಾತಂತ್ರ್ಯ) ಬೇಡಿಕೆಯನ್ನು ಮುಂದಿಟ್ಟರು. ಒಟ್ಟಿನಲ್ಲಿ ಭಾರತದ ರಾಷ್ಟ್ರೀಯ ಕುದಿತ ಶುರುವಾಯಿತು. ಇತರ ಸೇನಾಧಿಕಾರಿಗಳ ಹಾಗೆಯೆ ವಿನ್ಸ್ಟನ್ ಚರ್ಚಿಲ್ಗೆ ಕೂಡ ಇವುಗಳ ಗೊಡವೆ ಇರಲಿಲ್ಲ; ಮುಂದೆ ಸಾಕಷ್ಟು ಸಮಯದವರೆಗೂ ಆತ ಹಾಗೆಯೆ ಇದ್ದ. ಅಂದು ಆತ ಭಾರತದಿಂದ ತನ್ನ ತಾಯಿ, ತಮ್ಮ ಮುಂತಾದವರಿಗೆ ಬರೆದ ಪತ್ರಗಳಲ್ಲಿ ಮೇಲಿನ ವಿದ್ಯಮಾನಗಳ ನೆರಳು ಕೂಡ ಕಾಣಿಸುವುದಿಲ್ಲವೆಂದು ವಿಶ್ಲೇಷಿಸಲಾಗಿದೆ.
ಭುಜ ಜಾರಿತು
ಯುವ ಸೇನಾಧಿಕಾರಿಯಾದ ಚರ್ಚಿಲ್ ಮತ್ತು ಆತನ ಪಡೆ ೧೮೯೬ರ ಅಕ್ಟೋಬರ್ನಲ್ಲಿ ಭಾರತಕ್ಕೆ ಬಂತು. ಪೋಲೋ ಆಟದ ಶೋಕಿಯಿದ್ದ ಚರ್ಚಿಲ್ ಮತ್ತು ಗೆಳೆಯರು ಪೋಲೋ ಕ್ಲಬ್ ಸ್ಥಾಪಿಸಲು ನಿರ್ಧರಿಸಿದರು. ಅದಕ್ಕೆ ಎಲ್ಲರೂ ಚಂದಾ ನೀಡಬೇಕಿತ್ತು. ಆದರೆ ಹಡಗಿನ ಮೂಲಕ ಭಾರತಕ್ಕೆ ಬರುವಾಗ ಚರ್ಚಿಲ್ಗೆ ವೈಯಕ್ತಿಕವಾಗಿ ಒಂದು ಆಘಾತವಾಯಿತು. ಹಡಗಿನಿಂದ ಇಳಿದು ದೋಣಿಯಲ್ಲಿ ದಡಕ್ಕೆ ಬರುವಾಗ ೪-೫ ಅಡಿ ಎತ್ತರದ ಅಲೆಗಳು ದೋಣಿಗೆ ಬಡಿದವು. ಆತ ಒಂದು ಕೈಯಲ್ಲಿ ದೋಣಿಯನ್ನು ಹಿಡಿದು ನೇತಾಡಬೇಕಾಯಿತು; ಅದರಿಂದ ಬಲ ಭುಜವೇ ಜಾರಿತು.
ಆದರೆ ಅದರಿಂದ ಯುವಕ ಚರ್ಚಿಲ್ ತನ್ನ ಚಟುವಟಿಕೆಗಳನ್ನು ಕಡಮೆ ಮಾಡಲಿಲ್ಲ. ಆಗಮಿಸಿದ ದಿನ ರಾತ್ರಿಯೇ ಬಾಂಬೆ ಗವರ್ನರ್ ಜೊತೆ ಭೋಜನಕೂಟವಿತ್ತು. ಚರ್ಚಿಲ್ ತನ್ನ ಅಭಿಪ್ರಾಯಗಳನ್ನು ಆಗಲೇ ಪ್ರಕಟಿಸುತ್ತಿದ್ದ. ಬೆಂಗಳೂರು ಆತನ ಉದ್ಯೋಗದ ಕೇಂದ್ರ. ಅಲ್ಲಿಗೆ ಹೋಗುವ ಮಧ್ಯೆ ಪುಣೆಯಲ್ಲಿ ಆತ ಹಲವು ಕುದುರೆಗಳನ್ನು ಖರೀದಿಸಿದ; ಹಿಂದಿನ ರೆಜಿಮೆಂಟ್ನ ಅಧಿಕಾರಿಗಳಿಂದ ಅವುಗಳನ್ನು ಖರೀದಿಸಲಾಗಿತ್ತು. ಅಲ್ಲಿ ತನ್ನ ಕೆಲವು ಆಪ್ತ ಸಿಬ್ಬಂದಿಯನ್ನೂ ಆತ ಆರಿಸಿಕೊಂಡ. ಚರ್ಚಿಲ್ ಉತ್ತಮ ರೈಡರ್ (ಕುದುರೆ ಸವಾರ) ಮತ್ತು ಶ್ರೇಷ್ಠಮಟ್ಟದ ಪೋಲೋ ಆಟಗಾರ ಆಗಿದ್ದ. ಬಲ ಭುಜವು ಜಾರಿದ್ದರೂ ಕೂಡ ಭಾರತದಲ್ಲಿ ಆತ ತನ್ನ ಈ ಬಗೆಯ ಕೌಶಲಗಳನ್ನು ಹರಿತಗೊಳಿಸಿಕೊಂಡ. ಕುದುರೆ ಸವಾರಿ, ಪೋಲೋ ಆಟಗಳಿಂದ ಪೆಟ್ಟು ಜಾಸ್ತಿಯಾಗದಂತೆ ಯಾವುದೋ ತಂತ್ರಗಳನ್ನು ಅನುಸರಿಸುತ್ತಿದ್ದ. ವರ್ಷಗಳ ಅನಂತರವೂ ಪಾರ್ಲಿಮೆಂಟಿನಲ್ಲಿ ಬಿರುಸಾದ ಭಾಷಣ ಮಾಡುವಾಗ ಕೈಗಳನ್ನು ಜೋರಾಗಿ ಅಲುಗಾಡಿಸಿದರೆ ಭುಜ ಮತ್ತೆ ಬೇರೆ ಕಡೆಗೆ ಜಾರುತ್ತಿತ್ತು (ರೀಡಿಸ್ಲೊಕೇಟ್).
ಭಾರತದ ಸಮಸ್ಯೆ: ಚಿಂತನೆ
ವೃತ್ತಿಜೀವನದ ಆರಂಭದ ಆ ದಿನಗಳಲ್ಲಿ ಚರ್ಚಿಲ್ ತನ್ನ ಸಮಯವನ್ನು ಹೇಗೆ ಕಳೆಯುತ್ತಿದ್ದ? ನವೆಂಬರ್ ೪, ೧೮೯೬ರಂದು ಬ್ರಿಟನ್ನಲ್ಲಿದ್ದ ತಾಯಿ ಲೇಡಿ ಜೆನ್ನಿಫರ್ ಸ್ಪೆನ್ಸರ್ ಚರ್ಚಿಲ್ ಅವರಿಗೆ ಬರೆದ ಪತ್ರದಲ್ಲಿ ಆತನದೊಂದು ದೂರಿತ್ತು: “ನಾನು ಭೇಟಿಯಾದ ಜನರೆಂದರೆ ಭಾರತದ ಪರಿಸ್ಥಿತಿಯ ಬಗ್ಗೆ ಏನೂ ಗೊತ್ತಿಲ್ಲದ ಸೈನಿಕರು ಹಾಗೂ ಇತರರು ಮಾತ್ರ” ಎಂದಾತ ಹೇಳಿದ. ಅಲ್ಲಿಂದ ಚರ್ಚಿಲ್ ತಾಯಿ ಜೊತೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡ. ಆಕೆ ಕೂಡ ಅದೇ ರೀತಿ ಸ್ಪಂದಿಸಿ ಉತ್ತರ ಬರೆಯುತ್ತಿದ್ದರು; ಆಗ ಆಕೆ ಅಲ್ಲಿ ಸಾಮಾಜಿಕ ಜೀವನದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರು. ವೃತ್ತಿಜೀವನದಲ್ಲಿ ಚರ್ಚಿಲ್ ವೇಗವಾದ ಬೆಳವಣಿಗೆಯನ್ನು ಕಂಡದ್ದರಲ್ಲಿ ತಾಯಿಯ ಪಾತ್ರ ತುಂಬಾ ಇದೆ.
ತಮ್ಮನಿಗೆ ಬರೆದ ಒಂದು ಪತ್ರದಲ್ಲಿ ವಿನ್ಸ್ಟನ್ ಚರ್ಚಿಲ್, ‘ಭಾರತವು ಅಮೆರಿಕಕ್ಕೆ ಪೂರ್ತಿ ಉಲ್ಟಾ’ ಎಂದು ಬರೆದಿದ್ದ. ಅಲ್ಲಿ ಅನಾಗರಿಕ (ಅನ್ಸಿವಿಲ್) ನೌಕರರಿದ್ದರೆ, ಭಾರತದಲ್ಲಿ ಸ್ಥಳೀಯ ಜನರೇ ನೌಕರರಾಗಿ ಸಿಗುತ್ತಾರೆ ಎಂದಾತ ತಿಳಿಸಿದ್ದ. ಭಾರತದ ನೈಜ ಸಮಸ್ಯೆಗಳೇನೆಂದು ಹೇಳುವವರು ಯಾರೂ ತನಗೆ ಸಿಕ್ಕಿಲ್ಲ ಎಂಬುದರ ಜೊತೆಗೆ, ತನ್ನ ರೆಜಿಮೆಂಟಲ್ಲದೆ ತನಗೆ ಗೊತ್ತಿದ್ದುದು ಮೂರು ಜನ ಮಾತ್ರ ಎಂದಾತ ಹೇಳಿದ್ದ. ಭಾರತದ ಪತ್ರಿಕೆಗಳ ಭಾಷೆ ಚೆನ್ನಾಗಿಲ್ಲ ಎಂಬುದು ಆಗ ಚರ್ಚಿಲ್ನ ಇನ್ನೊಂದು ದೂರು. ಈ ದೇಶ ಅಸಹ್ಯಕರ (abominable) ಎಂದು ಕೂಡ ಆತ ಪತ್ರದಲ್ಲಿ ಬರೆದಿದ್ದ.
ಅಂದಿನ ಸ್ಥಿತಿಯ ಬಗ್ಗೆ ಒಬ್ಬ ಇತಿಹಾಸಕಾರ ಹೀಗೆ ಹೇಳಿದ್ದಾನೆ: “ಬ್ರಿಟಿಷ್ ಸೈನಿಕರು ಸಾಮಾನ್ಯವಾಗಿ ಭಾರತದ ಸಿಪಾಯಿಗಳ ಜೊತೆ ಸೇರುವುದಿಲ್ಲ. ಅದೇ ಬ್ರಿಟಿಷರು ಇಲ್ಲಿಯ ತಮ್ಮ ಸೇವಕರು, ಸಣ್ಣ ವ್ಯಾಪಾರಿಗಳು ಮತ್ತು ಕೆಲವು ಕಲಾವಿದರು (ಕರಕುಶಲಕರ್ಮಿಗಳು) ಹೊರತಾಗಿ ಬೇರೆಯವರನ್ನು ಭೇಟಿಯಾಗುತ್ತಿರಲಿಲ್ಲ. ಅದರಿಂದಾಗಿ ಅವರಿಗೆ ಭಾರತದ ಸರಿಯಾದ ಚಿತ್ರ ಅರಿವಿಗೆ ಬರಲಿಲ್ಲ’ ಎಂದಿದ್ದ. ಭಾರತದ ಲೇವಾದೇವಿ (ಸಾಲ-ಬಡ್ಡಿ) ವ್ಯವಹಾರದ ಬಗ್ಗೆ ಉಲ್ಲೇಖಿಸಿದ ಚರ್ಚಿಲ್ ಇಲ್ಲಿ ತಿಂಗಳಿಗೆ ಶೇ. ೨ ಮಾತ್ರ ಬಡ್ಡಿ ವಸೂಲು ಮಾಡುತ್ತಾರೆಂದು ಆಶ್ಚರ್ಯ ವ್ಯಕ್ತಪಡಿಸಿದ್ದ. ಭಾರತದಲ್ಲಿ ಆತನಿಗೆ ಯಾವಾಗಲೂ ಹಣದ ಕೊರತೆಯಿತ್ತು. ಅದಕ್ಕೆ ಒಂದು ಕಾರಣವೆಂದರೆ ಪೋಲೋ ಆಟಕ್ಕಾಗಿ ತುಂಬಾ ಹಣ ಖರ್ಚು ಮಾಡುತ್ತಿದ್ದ; ಮತ್ತು ಹಣಕ್ಕಾಗಿ ತಾಯಿಗೆ ಪತ್ರ ಬರೆಯುತ್ತಿದ್ದ.
ಸ್ವಾಧ್ಯಾಯ ನಿಪುಣ
ಚರ್ಚಿಲ್ ಆಗ ಭಾರತದಲ್ಲಿದ್ದಾಗ ಬಹಳಷ್ಟು ಸ್ವಾಧ್ಯಾಯವನ್ನು (self-education) ಕೈಗೊಂಡ. ತುಂಬ ಓದುತ್ತಿದ್ದ. ಅಶ್ವಪಡೆ ಅಧಿಕಾರಿಯಾಗಿ ಆತನಿಗೆ ತುಂಬ ಸಮಯ ಸಿಗುತ್ತಿತ್ತು. ಆಗ ಆತ ಅಭಿಜಾತ ಗ್ರಂಥಗಳನ್ನು (ಕ್ಲಾಸಿಕ್ಸ್) ಓದಿದ. ಉತ್ತಮವಾಗ್ಮಿ (ಭಾಷಣಕಾರ) ಆಗಬೇಕೆನ್ನುವ ಉದ್ದೇಶದಿಂದ ಓದಿದ. ಉತ್ತಮ ವಾಗ್ಮಿ ಎನಿಸಲು ಬೇಕಾದ ಐದು ಗುಣಗಳನ್ನು ಚರ್ಚಿಲ್ ಗುರುತಿಸಿದ್ದು ಅವು ಹೀಗಿವೆ: ಶಬ್ದಗಳ ಉತ್ತಮ ಬಳಕೆ, ಅನುರಣನಗೊಳ್ಳುವ (sonorous) ವಾಕ್ಯಗಳು, ವಿಷಯಪೂರ್ಣವಾದ ವಾದ ಹಾಗೂ ಅದರ ಸರಿಯಾದ ಮಂಡನೆ, ಅನಾಲಜಿಯ ಬಳಕೆ – ಅಂದರೆ ಸ್ಥಾಪಿತ ಸತ್ಯವನ್ನು ಸರಳ ಭಾಷೆಯಲ್ಲಿ ಹೇಳುವುದು ಹಾಗೂ ಭಾಷಾ ವೈಭವದ ಮೂಲಕ ವಾದದ ಸಮಾರೋಪ. ಅಂತಹ ಭಾಷಣಕ್ಕೆ ಶಕ್ತಿಶಾಲಿಯಾದ ಬಹಿರ್ಮುಖಿ ವ್ಯಕ್ತಿತ್ವ ಬೇಕು ಎಂದು ಕೂಡ ಚರ್ಚಿಲ್ ಭಾವಿಸಿದ್ದ. ಮುಂದೆ ಚರ್ಚಿಲ್ ಭಾಷಣಗಳದ್ದೇ ಒಂದು ಮಟ್ಟ ಎನ್ನುವ ವಾತಾವರಣವಿತ್ತು.
ತಾನು ಯಾರು? ತಾನೇನು ಮಾಡಬಲ್ಲೆ? ತಾನೇನು ಆಗಬೇಕು ಎಂಬಂತಹ ಪ್ರಶ್ನೆಗಳಿಗೆ ಚರ್ಚಿಲ್ ಉತ್ತರ ಕಂಡುಕೊಂಡದ್ದು ಭಾರತದಲ್ಲಿ. ಆ ರೀತಿಯಲ್ಲಿ ಆತ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡ. ಆತನ ಜೊತೆ ಬೆಂಗಳೂರಿನಲ್ಲಿ ಸಾರ್ಜೆಂಟ್ ಮೇಜರ್ ಆಗಿದ್ದ ವ್ಯಕ್ತಿ ಮುಂದೆ ಚರ್ಚಿಲ್ ಬಗ್ಗೆ ಹೀಗೆ ನೆನಪಿಸಿಕೊಂಡಿದ್ದರು: “ಆತ ಒಬ್ಬ ಜೀವಂತ ವ್ಯಕ್ತಿ. ಎಲ್ಲರಿಗಿಂತ ಹೆಚ್ಚು ಬಿಡುವಿಲ್ಲದ (ಬ್ಯುಸಿ) ವ್ಯಕ್ತಿ. ನಾನೊಮ್ಮೆ ಅವನ ಬಂಗ್ಲೆಗೆ ಹೋದಾಗ ಅಲ್ಲಿ ಅವನ ಪುಸ್ತಕ, ಕಾಗದಗಳು ಮತ್ತು ಫೂಲ್ಸ್ಕ್ಯಾಪ್ ಕಾಗದದ ಹಾಳೆಗಳೆಲ್ಲ ಹರಡಿಕೊಂಡಿದ್ದವು. ಅದರಿಂದ ಆತ ಏನು ಮಾಡುತ್ತಾನೆಂದು ತಿಳಿಯಲಿಲ್ಲ.”
ಪೋಲೋ ಕ್ಲಬ್, ಗೆಳೆತನ
ಬೆಂಗಳೂರಿನ ರೆಜಿಮೆಂಟ್ನಲ್ಲಿ ಮೂರು ವರ್ಷ ಇದ್ದ ಚರ್ಚಿಲ್ ದೇಶಾದ್ಯಂತ ಸಂಚಾರ ಮಾಡಿದ. ಪೋಲೋ ಆಟದಿಂದಾಗಿ ಭಾರತದ ಹಲವು ರಾಜರ ಗೆಳೆತನ ಲಭಿಸಿತು. ಜೊತೆಗೆ ಭಾರತದಲ್ಲಿ ಆತನ ರಾಜಕೀಯ ಮಹತ್ತ್ವಾಕಾಂಕ್ಷೆಯು ರೂಪ ಪಡೆದುಕೊಂಡಿತು. ಅದೇ ಹೊತ್ತಿಗೆ ಭಾರತವನ್ನು ಹೇಗೆ ಆಳಬೇಕು ಎನ್ನುವ ಬಗೆಗಿನ ಆತನ ಚಿಂತನೆ ಕೂಡ ರೂಪ ಪಡೆದಿರಬೇಕು. “ಒಬ್ಬ ಲಿಬರಲ್ (ಉದಾರವಾದಿ) ಆಗಿ ನಾನು ಪಾರ್ಲಿಮೆಂಟನ್ನು ಪ್ರವೇಶಿಸುತ್ತೇನೆ. ಸುಯೆಜ್ನ (ಕಾಲುವೆ) ಪೂರ್ವದಲ್ಲಿ, ಪ್ರಜಾಪ್ರಭುತ್ವ ಸಾಧ್ಯ. ಭಾರತವನ್ನು ‘ಹಳೆಯ ತತ್ತ್ವ’ಗಳ ಪ್ರಕಾರವೇ ಆಳಬೇಕು” – ತಾಯಿಗೆ ಬರೆದ ಒಂದು ಪತ್ರದಲ್ಲಿ ಆತ ಹೇಳಿದ್ದ. ವಸಾಹತುಗಳು ಸಾಮ್ರಾಜ್ಯದ ರಕ್ಷಣಾವ್ಯವಸ್ಥೆಯೊಂದಿಗೆ (ಇಂಪೀರಿಯಲ್ ಡಿಫೆನ್ಸ್) ಒಕ್ಕೂಟ ಮಾದರಿಯಲ್ಲಿ (ಫೆಡರಲ್ ವ್ಯವಸ್ಥೆ) ಇರಬೇಕೆನ್ನುವುದು ಚರ್ಚಿಲ್ ಆಗ ಹೊಂದಿದ ಕಲ್ಪನೆಯಾಗಿತ್ತು.
ಆ ಅಭಿಪ್ರಾಯಗಳನ್ನು ಸೇರಿಸಿ ಆತ ವಿಶ್ಲೇಷಿಸಲಿಲ್ಲ. ಆದರೆ ಅದು ಬ್ರಿಟಿಷ್ ಸಾಮ್ರಾಜ್ಯ ಮತ್ತು ಭಾರತ ಎನ್ನುವ ಕಲ್ಪನೆಗೆ ರೂಪ ನೀಡಿತು. ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ರಾಜಕೀಯವಾಗಿ ತನಗೆ ಬಲ ಸಿಗುತ್ತದೆ ಎಂದು ಚರ್ಚಿಲ್ ನಂಬಿದ್ದ. ತನ್ನ ಸಾರ್ವಜನಿಕ ವರ್ಚಸ್ಸಿಗೆ ಅದರಿಂದ ಶಕ್ತಿ ತುಂಬುತ್ತದೆ; ಆ ಮೂಲಕ ಬ್ರಿಟನ್ನಲ್ಲಿ ಜನಪ್ರಿಯತೆ ಲಭಿಸುತ್ತದೆ ಎಂದಾತ ಭಾವಿಸಿದ್ದ. ಈ ನಡುವೆ ಭಾರತದಲ್ಲಿ ಆ ಹೊತ್ತಿನಲ್ಲಿ ಚರ್ಚಿಲ್ಗೆ ಪಮೇಲಾ ಲಿಟ್ಟನ್ ಎಂಬಾಕೆಯೊಂದಿಗೆ ಪ್ರೇಮಾಂಕುರವಾಯಿತು. ಆಕೆಯ ತಂದೆ ಹೈದರಾಬಾದ್ನಲ್ಲಿ ರೆಸಿಡೆಂಟ್ ಆಗಿದ್ದರು. ಆಕೆಗೆ ವಿವಾಹದ ಪ್ರಪೋಸ್ ಕೂಡ ಆಯಿತಾದರೂ ಸುಮಾರು ಮೂರು ವರ್ಷ ಆಗುವಾಗ ಆ ಪ್ರೇಮ ಪ್ರಕರಣ ಕೊನೆಗೊಂಡಿತು.
೧೮೯೯ರಲ್ಲಿ ಚರ್ಚಿಲ್ ಮತ್ತೊಮ್ಮೆ ಭಾರತಕ್ಕೆ ಆಗಮಿಸುವ ಸಂದರ್ಭ ಬಂತು. ಅದು ಪೋಲೋ ಆಟದ ಕೇಂದ್ರವೆನಿಸಿದ ಜೋಧಪುರದ ಪೋಲೋ ಚಾಂಪಿಯನ್ಶಿಪ್ಗಾಗಿ. ಮುಂದಿನ ತಿಂಗಳು (ಮಾರ್ಚ್) ಆತ ವೈಸರಾಯ್ ಲಾರ್ಡ್ ಕರ್ಜನ್ ಕೋರಿಕೆಯ ಮೇರೆಗೆ ಕಲ್ಕತ್ತಾಗೆ ಹೋಗಿ ವೈಸರಾಯ್ ಅತಿಥಿಯಾಗಿ ಅಲ್ಲಿ ಉಳಿದಿದ್ದ. ಅದೇ ಏಪ್ರಿಲ್ನಲ್ಲಿ ಕಮಿಷನ್ಗೆ ರಾಜೀನಾಮೆ ನೀಡಿ ಮುಂದಿನ ತಿಂಗಳು ಬ್ರಿಟನ್ಗೆ ವಾಪಸಾದ. ಸುಮಾರು ಮೂರು ವರ್ಷಗಳಲ್ಲಿ ಚರ್ಚಿಲ್ ಭಾರತದಲ್ಲಿದ್ದುದು ಸುಮಾರು ೨೨ ತಿಂಗಳು; ಮತ್ತು ಮೂರು ತಿಂಗಳು ಕಾಲ ಅಶಾಂತಿಪೀಡಿತ ಅಘಘಾನ್ ಗಡಿಪ್ರದೇಶದಲ್ಲಿದ್ದ. ಮುಂದೆ ಬಹಳಷ್ಟು ಸಲ ಚರ್ಚಿಲ್ ಚಟುವಟಿಕೆಗಳು ಭಾರತದ ವ್ಯಾಪ್ತಿಪ್ರದೇಶದೊಳಗೆ ಬರುತ್ತಲೇ ಇದ್ದವು.
ಗಾಂಧಿ ಮುಖಾಮುಖಿ
ಗಾಂಧಿ ಮತ್ತು ಚರ್ಚಿಲ್ ನಡುವೆ ಮುಂದೆ ಬಹಳಷ್ಟು ವಾದ-ವಿವಾದ, ಜಗಳಗಳಾದರೂ ಅವರ ಮೊದಲ ಮುಖಾಮುಖಿ (ಎನ್ಕೌಂಟರ್) ಗಾಂಧಿ ಅವರು ದಕ್ಷಿಣ ಆಫ್ರಿಕದಲ್ಲಿದ್ದ ಹೊತ್ತಿಗೇ ಆಯಿತು. ೧೮೯೪-೧೯೧೫ರ ಅವಧಿಯಲ್ಲಿ ದಕ್ಷಿಣ ಆಫ್ರಿಕದಲ್ಲಿದ್ದ ಗಾಂಧಿ ವಕೀಲಿ ವೃತ್ತಿ ಮತ್ತು ಸಾಮಾಜಿಕ ಹೋರಾಟ ಎರಡನ್ನೂ ಮಾಡುತ್ತಿದ್ದರು. ಅಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವರ ಅಸಹಕಾರ ಚಳವಳಿ ಸೆಪ್ಟೆಂಬರ್ ೧೧, ೧೯೦೬ರಂದು ಆರಂಭವಾಯಿತು. ಬೆರಳಚ್ಚಿನ ಗುರುತು ನೀಡುವುದು ಸೇರಿದಂತೆ ಅಲ್ಲಿ ಭಾರತೀಯರಿಗೆ ಹೊಸ ಕಾನೂನು ತಂದಾಗ ಗಾಂಧಿ ಅದನ್ನು ವಿರೋಧಿಸಿದರು; ಮತ್ತು ಅದೇ ಕಾರಣದಿಂದ ಗಾಂಧಿ-ಚರ್ಚಿಲ್ ನಡುವಣ ವೈಯಕ್ತಿಕ ಮುಖಾಮುಖಿಗೆ ದಾರಿಯಾಯಿತು.
ಪ್ರಸ್ತುತ ಏಷ್ಯಾಟಿಕ್ ಅರ್ಡಿನೆನ್ಸ್ ಅಂಗೀಕಾರವಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕದ ಚಳವಳಿಯ ನಾಯಕರು ಲಂಡನ್ಗೆ ನಿಯೋಗ ಹೋಗಿ ಅರ್ಡಿನೆನ್ಸ್ಗೆ ಒಪ್ಪಿಗೆ ಕೊಡಬೇಡಿ ಎಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿದರು. ನಿಯೋಗದಲ್ಲಿ ಗಾಂಧಿ ಅವರಿದ್ದು ವಸಾಹತುಗಳ ರಾಜ್ಯಾಂಗ ಕಾರ್ಯದರ್ಶಿಯ ಭೇಟಿಗೆ ಅವಕಾಶವನ್ನು ಕೇಳಿದರು. ೧೮೯೫-೯೯ರ ನಡುವೆ ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಎಲ್ಗಿನ್ ಆಗ ಆ ಹುದ್ದೆಯಲ್ಲಿದ್ದರು; ಮತ್ತು ಚರ್ಚಿಲ್ ತನ್ನ ಮೊದಲ ರಾಜಕೀಯ ಹುದ್ದೆಯಾದ ವಸಾಹತು ಕಚೇರಿಯ ಅಧೀನ ರಾಜ್ಯಾಂಗ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಆ ನಿಟ್ಟಿನಲ್ಲಿ ಆತ ನಿಯೋಗವನ್ನು ಸ್ವಾಗತಿಸಿದರು.
ನಿಯೋಗದ ಮನವಿಯನ್ನು ಕೇಳಿದ ಚರ್ಚಿಲ್ ಗಾಂಧಿ ಮತ್ತಿತರರೊಂದಿಗೆ ವಾದಿಸಿ, ಬ್ರಿಟಿಷ್ ಸರ್ಕಾರವು ಅರ್ಡಿನೆನ್ಸ್ಗೆ ಒಪ್ಪಿಗೆ ನೀಡಲು ನಿರಾಕರಿಸಿದರೆ ಟ್ರಾನ್ಸ್ವಾಲ್ ಸರ್ಕಾರವು ಮತ್ತಷ್ಟು ಬಿಗಿಯಾದ ಕಾನೂನನ್ನು ಜಾರಿ ಮಾಡಬಹುದು ಎಂದರು. ಅದಕ್ಕೆ ಗಾಂಧಿ, ಕಾನೂನು ಇನ್ನಷ್ಟು ಹಾಳಾಗಲು ಸಾಧ್ಯವಿಲ್ಲ. ಭವಿಷ್ಯವು ಅದರ ದಾರಿಯನ್ನು ಅದೇ ನೋಡಿಕೊಳ್ಳುತ್ತದೆ ಎಂದು ಉತ್ತರಿಸಿದರು. ಆಗ ಚರ್ಚಿಲ್ ತನಗೆ ಸಾಧ್ಯವಾದ ರೀತಿಯಲ್ಲಿ ನೆರವಾಗುವುದಾಗಿ ನಿಯೋಗಕ್ಕೆ ಭರವಸೆ ನೀಡಿದ.
ಭೇಟಿ ಸೌಹಾರ್ದಯುತವಾಯಿತೆಂದು ಗಾಂಧಿ ಭಾವಿಸಿದರು.
(ಸಶೇಷ)