ಮೋದಿಯವರು ಹೇಳುವಂತೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಹೀಗಾಗಿ ೨೦೧೪ರ ನಂತರ ದೇಶದ ಪ್ರಧಾನಿಗಳು ಅಲ್ಲಿಗೆ ೭೦ ಬಾರಿ ಭೇಟಿ ಕೊಟ್ಟಿದ್ದರೆ ಅವರ ಮಂತ್ರಿಮಂಡಲದ ಸಚಿವರು ೬೮೦ ಬಾರಿ ಭೇಟಿ ಕೊಟ್ಟಿದ್ದಾರೆ.
ದೆಹಲಿಯ ಮಂತ್ರಿಮಂಡಲವನ್ನು ಈಶಾನ್ಯ ರಾಜ್ಯದ ಆಗುಹೋಗುಗಳ ಜೊತೆ ಒಂದುಗೂಡಿಸಲು ಮೋದಿಯವರು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಸಹಾಯ ಪಡೆದಿದ್ದಾರೆ.
ಕಳೆದ ಒಂದು ದಶಕದ ಮೋದಿಯವರ ಆಡಳಿತಾವಧಿಯಲ್ಲಿ ಸಂಪೂರ್ಣವಾಗಿ ರೂಪಾಂತರಗೊಂಡ ಭಾರತದ ಪ್ರದೇಶಗಳೆಂದರೆ ಈಶಾನ್ಯ ರಾಜ್ಯಗಳು. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ (ಸಪ್ತ ಸಹೋದರಿಯರು) ಹಾಗೂ “ಸಹೋದರ” ಸಿಕ್ಕಿಂ – ಇವು ಆ ಎಂಟು ರಾಜ್ಯಗಳು. ಇಷ್ಟು ಕಾಲ ದಿಲ್ಲಿಯಲ್ಲಿದ್ದ ಸರ್ಕಾರಗಳಿಂದ ದೂರವಾಗಿದ್ದ ಈ ರಾಜ್ಯಗಳಲ್ಲಿ ಬೆಳವಣಿಗೆಯೇ ಇರಲಿಲ್ಲ. ಆದರೆ ೨೦೧೪ರ ನಂತರ ಈ ಈಶಾನ್ಯ ಭಾರತವು ಹಲವಾರು ಕ್ಷೇತ್ರಗಳಲ್ಲಿ (ಮೂಲಭೂತ ಸೌಕರ್ಯ, ಸಾರಿಗೆ, ಸಂಪರ್ಕ, ಡಿಜಿಟಲ್ ಇನ್ಫ್ರಾ, ಕೃಷಿ, ಯೂತ್ ಡೆವಲಪ್ಮೆಂಟ್ ಮೊದಲಾದ) ಬೆಳವಣಿಗೆಯನ್ನು ಕಾಣತೊಡಗಿವೆ. ಹತ್ತು ವರ್ಷಗಳ ಹಿಂದೆ ಮೋದಿಯವರು ಮೊದಲ ಬಾರಿಗೆ ಪ್ರಧಾನಿಯಾದಾಗ ಅವರ ಗಮನ ಸೆಳೆದಿದ್ದು ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಕೆಲಸ. ಅಲ್ಲಿಂದ ಇಲ್ಲಿಯ ತನಕ ಭಾರತದ ಈಶಾನ್ಯ ಭಾಗವು ಪ್ರಧಾನಮಂತ್ರಿಗಳ ನೆರವಿನಿಂದ ಹತ್ತು ಹಲವಾರು ಮೊದಲುಗಳನ್ನು ಕಂಡಿದೆ. ಹಾರ್ನ್ಬಿಲ್ ಫೆಸ್ಟಿವಲ್ ಎನ್ನುವುದು ನಾಗಾಲ್ಯಾಂಡಿನ ಒಂದು ಪ್ರಸಿದ್ಧ ವಾರ್ಷಿಕ ಸಾಂಸ್ಕೃತಿಕ ಹಬ್ಬ. ಅದಕ್ಕೆ ದೇಶದ ಎಲ್ಲ ಭಾಗಗಳಿಂದ ಜನರು ಬರುತ್ತಾರೆ. ಮೋದಿಯವರು ಪ್ರಧಾನಿಯಾದ ಮೊದಲ ವರ್ಷವೇ ಆ ಹಬ್ಬವನ್ನು ಉದ್ಘಾಟಿಸಿ ಈಶಾನ್ಯ ರಾಜ್ಯಗಳ ಕುರಿತು ತಮಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಪ್ರಧಾನಿಯೊಬ್ಬರು ಈ ಹಬ್ಬವನ್ನು ಉದ್ಘಾಟಿಸಿದ್ದು ಅದೇ ಮೊದಲಾಗಿತ್ತು. ಮೋದಿಯವರಿಂದ ನಂತರದ ದಿನಗಳಲ್ಲಿ ಅಲ್ಲಿಯ ಜನತೆಗೆ ಸಿಗುವ ಕಾಳಜಿಗೆ ಇದೊಂದು ಸಂಕೇತವಾಗಿತ್ತು. ಅಲ್ಲಿಂದ ಶುರುವಾಗಿ ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ನಡೆದ ಸರ್ವತೋಮುಖ ಬೆಳವಣಿಗೆಯು ಭಾರತದ ಈಶಾನ್ಯ ಭಾಗದ ನಾಲ್ಕೂವರೆ ಕೋಟಿ ಜನರಲ್ಲಿ ತಮ್ಮ ನೆಲದ ಕುರಿತು ಒಂದು ಸಕಾರಾತ್ಮಕ ಒಲವನ್ನು ಹೆಚ್ಚಿಸುವಂತೆ ಮಾಡಿದೆ.
ಈಶಾನ್ಯ ರಾಜ್ಯಗಳು “ದಿಲ್ಲಿ ಸೇ ದೂರ್ ನಹೀ, ನಾ ದಿಲ್ ಸೇ ದೂರ್” ಎನ್ನುವ ಮೋದಿಯವರ ಮಾತು ಅಕ್ಷರಶಃ ನಿಜ. ಹತ್ತು ವರ್ಷಗಳಲ್ಲಿ ಮೋದಿಯವರು ಈಶಾನ್ಯ ರಾಜ್ಯಗಳಿಗೆ ಎಪ್ಪತ್ತು ಬಾರಿ ಭೇಟಿ ಕೊಟ್ಟಿದ್ದಾರೆ. ಇಂದು ಅಲ್ಲಿಯ ಎಂಟು ರಾಜ್ಯಗಳಲ್ಲಿ ಆರು ಕಡೆ ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳದ್ದೇ ಸರ್ಕಾರ. ಮುಂಚಿನ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಲ್ಲಿ ನಿಂತ ನೀರಾಗಿದ್ದ ಭಾರತದ ಈಶಾನ್ಯ ರಾಜ್ಯಗಳಿಗೆ ಮೋದಿಯವರ ನೇತೃತ್ವದ ಸರ್ಕಾರ ಒಂದು ವರವಾಗಿ ಬಂದಿದೆ. ಮೋದಿಯವರು ತಮ್ಮ ಬದುಕಿನ ಪಯಣದಲ್ಲಿ ದೇಶದ ಮೂಲೆಮೂಲೆಯನ್ನು ಸುತ್ತಿ ಅಲ್ಲಿ ನೆಲೆಸಿ ಬಂದವರು. ಬಹುಶಃ ಭಾರತದ ಅಸ್ಮಿತೆಯನ್ನು ಮೋದಿಯವರು ಅರ್ಥ ಮಾಡಿಕೊಂಡಷ್ಟು ಇನ್ಯಾರೂ ಮಾಡಿಕೊಂಡಿರಲಿಕ್ಕಿಲ್ಲ. ಅವರು ಅಧಿಕಾರಕ್ಕೆ ಬಂದ ಕೂಡಲೇ ‘ಲುಕ್ ಈಸ್ಟ್ ಪಾಲಿಸಿ’ಯನ್ನು ತಂದಿದ್ದರು, ಇಂದು ಅದೇ ‘ಆ್ಯಕ್ಟ್ ಈಸ್ಟ್ ಪಾಲಿಸಿ’ ಆಗಿದೆ. ಹಾಗಿದ್ದರೆ ಮೋದಿಯವರು ಕಂಡ ಅಷ್ಟಲಕ್ಷ್ಮಿಯರನ್ನು ಇನ್ನಿತರ ಪಕ್ಷದ ರಾಜಕಾರಣಿಗಳು ಏಕೆ ಅನಿಷ್ಟವಾಗಿ ಕಂಡಿದ್ದರು ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಇದಕ್ಕೆ ಒಂದು ಸುದೀರ್ಘ ಇತಿಹಾಸವಿದೆ.
ಮೋದಿಗೂ ಮುಂಚೆ ಬಹುಕಾಲ ಆಡಳಿತ ನಡೆಸಿದ ಪಕ್ಷಗಳಿಗೆ ಈಶಾನ್ಯ ಭಾರತದೆಡೆಗೆ ಆಸಕ್ತಿಯೇ ಇರಲಿಲ್ಲ. ಲುಟೆನ್ಸ್ ಲೋಕದಲ್ಲಿ ಮುಳುಗಿದ್ದ ಯುಪಿಎ ಸರ್ಕಾರದ ನಾಯಕರಿಗೆ ಈಶಾನ್ಯ ಭಾರತದ ರಾಜ್ಯಗಳು ಮಲತಾಯಿಯ ಮಕ್ಕಳಂತೆ ಕಂಡವು. ಈಶಾನ್ಯ ರಾಜ್ಯಗಳ ಅಭಿವೃದ್ಧಿಯನ್ನು ದಿಲ್ಲಿಯಿಂದ ಹಾಗೂ ‘ದಿಲ್’ನಿಂದ ದೂರ ಇಡಲಾಗಿತ್ತು. ಸ್ವಾತಂತ್ರ್ಯದ ನಂತರ ಬಂದ ಬಹುಪಾಲು ಕಾಂಗ್ರೆಸ್ ನಾಯಕರು ಅಲ್ಲಿ ಅಶಾಂತಿಯ ಬೆಂಕಿಯನ್ನು ಹಾಕಿ, ದಿಲ್ಲಿಯಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಈಶಾನ್ಯ ಭಾರತದ ಜನತೆಗೆ ಕಾಂಗ್ರೆಸ್ ಬಿಟ್ಟರೆ ಬೇರೆ ಪರ್ಯಾಯ ಇರಲಿಲ್ಲ. ಅವರ ಪರಿಸ್ಥಿತಿ ಶೋಚನೀಯವಾಗಿತ್ತು? ಈಶಾನ್ಯ ಭಾರತವನ್ನು ಕಡೆಗಣಿಸಿದ ನಾಯಕರೆಲ್ಲ ಜಾಣ ಕುರುಡರು! ‘ಹೇಗಾದರೂ ಅಲ್ಲಿಯ ಜನರು ತಮಗೆ ಮತ ಹಾಕುತ್ತಿದ್ದಾರಲ್ಲ! ಎಲ್ಲಿಯ ತನಕ ಮತ ಬರುತ್ತದೆಯೋ ಅಲ್ಲಿಯ ತನಕ ಚಿಂತೆ ಯಾಕೆ?’ ಎನ್ನುವ ಉಡಾಫೆ ಅವರಲ್ಲಿತ್ತು.
ಕಾಂಗ್ರೆಸ್ ಪಕ್ಷದ ಈ ಧೋರಣೆಯಿಂದಾಗಿ ಈಶಾನ್ಯ ಭಾರತದ ಎಂಟು ರಾಜ್ಯಗಳು ಸುಮಾರು ಆರೂವರೆ ದಶಕಗಳ ಕಾಲ ಸೊರಗಿದವು. ಈಶಾನ್ಯ ಭಾರತದ ಮೇಲೆ ಆದ ಅನ್ಯಾಯವನ್ನು ಅರ್ಥೈಸಲು, ಹೆಚ್ಚು ಬೇಕಿಲ್ಲ, ಮೂರು ಉದಾಹರಣೆಗಳು ಸಾಕು. ಮೊದಲನೆಯದು, ೧೯೬೨ರಲ್ಲಿ ನಡೆದ ಚೀನಾ ಹಾಗೂ ಭಾರತದ ಯುದ್ಧದ ಸಂದರ್ಭ. ಆ ಸಮಯದಲ್ಲಿ ಅರುಣಾಚಲ ಪ್ರದೇಶದ ಮೇಲೆ ಆದ ಅನ್ಯಾಯವನ್ನು ತಡೆಯಲು ಆಗಿನ ಪ್ರಧಾನಿ ನೆಹರು ಅವರು ಸಂಪೂರ್ಣವಾಗಿ ವಿಫಲರಾಗಿದ್ದರು. ನೆಹರು ಸರ್ಕಾರದ ಅಸಹಾಯಕತೆಯಿಂದಾಗಿ ಭಾರತದ ಹಲವಾರು ಪ್ರದೇಶಗಳು ಚೀನಾದ ಪಾಲಾದವು. ಅಲ್ಲಿಯ ಜನರನ್ನು ಚೀನಾದ ಸೈನಿಕರು ಬರ್ಬರವಾಗಿ ಹತ್ಯೆ ಮಾಡಿದರು. ಅಂದು ಉರಿಯುತ್ತಿದ್ದ ಆ ಬೆಂಕಿಯನ್ನು ಆರಿಸದೆ, ನೆಹರೂರವರು ಕೈಕಟ್ಟಿ ಕೂತಿದ್ದು ಪೂರ್ವನಿರ್ಧಾರಿತವೇ? – ಎನ್ನುವ ಪ್ರಶ್ನೆ ಇಂದಿಗೂ ಎಲ್ಲರನ್ನೂ ಕಾಡುವಂತಹದ್ದು.
ಎರಡನೆಯ ಉದಾಹರಣೆ, ಇಂದಿರಾಗಾಂಧಿಯವರ ಧೋರಣೆ. ನೆಹರೂರವರ ನಂತರ ಬಂದ ಇಂದಿರಾಗಾಂಧಿಯವರು ಭಾರತೀಯ ವಾಯುದಳವನ್ನು ಮಿಜೋರಾಂಗೆ ಕಳುಹಿಸಿ ಅಲ್ಲಿಯ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸಿದರು. ಬಂಡುಕೋರರ ಹೆಸರಿನಲ್ಲಿ ಆದ ಆ ದಾಳಿಯು ಅಲ್ಲಿದ್ದ ಅಮಾಯಕ ನಾಗರಿಕರಿಗೆ ವಿಪರೀತ ತೊಂದರೆ ಕೊಟ್ಟಿತು. ಇದು ದೇಶದ ಅಂದಿನ ಪ್ರಧಾನಿಗೆ ಈಶಾನ್ಯ ಭಾರತದ ಮೇಲಿನ ತಾತ್ಸಾರ ಭಾವನೆಯ ಒಂದು ಚಿತ್ರಣವಷ್ಟೇ. ಅವರ ಈ ಒಂದು ನಡೆಯಿಂದಾಗಿ ಮಿಜೋರಾಂನಲ್ಲಿ ಮುಂದಿನ ಎರಡು ದಶಕಗಳ ಕಾಲ ಅಶಾಂತಿ ಭುಗಿಲೆದ್ದಿತ್ತು.
ಮೂರನೆಯ ಉದಾಹರಣೆ ಯುಪಿಎ ಕಾಲಾವಧಿಯದ್ದು. ಮೋದಿಯವರು ಬರುವುದಕ್ಕೂ ಹಿಂದಿನ ಯುಪಿಎ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಯಾವ ರಾಜ್ಯಸಭಾ ಕ್ಷೇತ್ರದಿಂದ ಗೆದ್ದು ಬರುತ್ತಿದ್ದರು, ಗೊತ್ತೆ? ಆಸ್ಸಾಂನಿಂದ. ಅಚ್ಚರಿಯೆಂದರೆ ಈಶಾನ್ಯಭಾರತದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯವೇ ಸರಿ. ಅದರ ಕುರಿತಾಗಿ ಅವರು ಪರಿಣಾಮಕಾರಿ ಚರ್ಚೆಯನ್ನೂ ನಡೆಸಲಿಲ್ಲ! ಒಂದು ವರದಿಯ ಪ್ರಕಾರ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಚೀನಾ ಪಡೆಯು ೬೦೦ ಸಲ ಈಶಾನ್ಯ ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿತ್ತು. ಆದರೂ ಕೇಂದ್ರ ಸರ್ಕಾರಕ್ಕೆ ಅದನ್ನು ಎದುರಿಸುವ ಒಂದು ನಿರ್ದಿಷ್ಟ ಕಾರ್ಯನೀತಿ ಇರಲಿಲ್ಲ ಎನ್ನುವುದು ಗಾಬರಿಪಡುವಂತಹ ವಿಷಯ. ಆದರೆ ಮೋದಿ ಹಾಗಾಗಲು ಬಿಡಲಿಲ್ಲ. ತಾವು ಪ್ರಧಾನಿಯಾದ ದಿನದಿಂದಲೇ ಈಶಾನ್ಯ ರಾಜ್ಯಗಳನ್ನು ಬಿಗಿದಪ್ಪಿಕೊಂಡರು.
ಮೋದಿಯವರ ಕಾಲದಲ್ಲಿ ಈಶಾನ್ಯ ರಾಜ್ಯಗಳ ಬೆಳವಣಿಗೆಯು ಯಾರೂ ಲೆಕ್ಕಿಸದ ವೇಗದಲ್ಲಿ ನಡೆಯುತ್ತಿದೆ; ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿಯ ಜನರು ತಮ್ಮ ಬದುಕಿನಲ್ಲಿ ಕಂಡ ಅಭಿವೃದ್ಧಿಯ ಹತ್ತು ಮೊದಲುಗಳನ್ನು ನೋಡೋಣ.
೧. ಮೊದಲ ಬಾರಿಗೆ ಇಂದು ಈಶಾನ್ಯ ಭಾರತದ ಹಳ್ಳಿಹಳ್ಳಿಗೂ ವಿದ್ಯುತ್ ತಲಪಿದೆ. ಪ್ರಪ್ರಥಮ ಬಾರಿಗೆ ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಮೊಬೈಲ್ ಟವರ್ಗಳು ನಿಂತಿವೆ. ಎಲ್ಲೆಲ್ಲೂ 4G ಹಾಗೂ 5G ನೆಟ್ವರ್ಕ್ಗಳನ್ನು ಕಾಣಬಹುದು.
೨. ಸ್ವತಂತ್ರ ಭಾರತದಲ್ಲಿ ಈಶಾನ್ಯ ಭಾರತದ ತುತ್ತುದಿಯ ಗಡಿಪ್ರದೇಶದ ಗ್ರಾಮಗಳು ಕೂಡ ‘ವೈಬ್ರಂಟ್ ವಿಲೇಜ್’ಗಳ ಭಾಗವಾಗಿವೆ.
೩. ಇದೇ ಮೊದಲ ಸಲ ಹತ್ತು ವರ್ಷಗಳ ಅವಧಿಯಲ್ಲಿ ೫ ಲಕ್ಷ ಕೋಟಿ ರೂಪಾಯಿಗಳ ಕೇಂದ್ರ ಸರ್ಕಾರದ ನಿಧಿಯನ್ನು ಈಶಾನ್ಯ ಭಾರತದತ್ತ ಹರಿಸಲಾಗಿದೆ. ಇದರಿಂದಾಗಿ ಅಲ್ಲಿಯ ಪ್ರದೇಶಗಳು ‘Abandoned Region’ನಿಂದ ‘Abundant Region’ ಆಗಿ ಪರಿವರ್ತನೆ ಆಗುತ್ತಿವೆ.
೪. ಸುಮಾರು ಎಪ್ಪತ್ತು ವರ್ಷಗಳ ನಂತರ ಮೇಘಾಲಯಕ್ಕೆ ರೈಲಿನ ಭಾಗ್ಯ ದೊರಕಿದೆ. ಇದೇ ಮೊದಲ ಬಾರಿಗೆ ಭಾರತದ ರೈಲ್ವೇ ನಕ್ಷೆಯ ಮೇಲೆ ಮೇಘಾಲಯವು ವಿರಾಜಮಾನವಾಗಿದೆ.
೫. ಒಂದು ಶತಮಾನದ ನಂತರ ನಾಗಾಲ್ಯಾಂಡ್ನಲ್ಲಿ ಎರಡನೇ ರೈಲ್ವೇ ನಿಲ್ದಾಣವು ನಿರ್ಮಾಣಗೊಂಡಿದೆ.
೬. ಮಣಿಪುರದ ನಗರವೊಂದಕ್ಕೆ ಮೊದಲ ಸಲ ಸರಕು ಸಾಗಾಣಿಕೆಯ ರೈಲ್ವೆಯ ಪ್ರವೇಶವಾಗಿದೆ.
೭. ಈಶಾನ್ಯ ಭಾರತಕ್ಕೆ ಈ ಮೊದಲು ಒಂದು ಸೆಮಿ-ಹೈ-ಸ್ಪೀಡ್ ರೈಲು ಕೂಡ ಇರಲಿಲ್ಲ. ಮೋದಿ ಸರ್ಕಾರದ ಅವಧಿಯಲ್ಲಿ ಈಶಾನ್ಯ ನಾಡುಗಳ ನೆಲದಲ್ಲಿ ಸೆಮಿ-ಹೈ-ಸ್ಪೀಡ್ ರೈಲಿನ ಸ್ಪರ್ಶವಾಗಿದೆ.
೮. ಸಿಕ್ಕಿಂನಲ್ಲಿ ಪ್ರಪ್ರಥಮ ವಿಮಾನ ನಿಲ್ದಾಣದ ಕಾರ್ಯಾರಂಭವಾಗಿದೆ.
೯. ಅಗರ್ತಾಲಾದಲ್ಲಿ ಇಂಟರ್ನ್ಯಾಷನಲ್ ಇಂಟರ್ನೆಟ್ ಗೇಟ್ವೇ (ಐಐಜಿ) ನಿರ್ಮಿಸಲಾಗಿದೆ. ಭಾರತದಲ್ಲಿ ಇರುವ ಮೂರೇ ಮೂರು (ಇನ್ನೆರಡು – ಮುಂಬಯಿ ಹಾಗೂ ಚೆನ್ನೈನಲ್ಲಿದೆ) ಐಐಜಿಗಳಲ್ಲಿ ಇದೂ ಒಂದು.
೧೦. ಇಲ್ಲಿಯ ತನಕ ಸಂಪೂರ್ಣ ಈಶಾನ್ಯ ಭಾರತಕ್ಕೆ ಒಂದೇ ಒಂದು ಜಲಮಾರ್ಗವಿತ್ತು. ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಹೊಸ ಜಲಮಾರ್ಗಗಳು ಶುರುವಾಗಿವೆ.
ಈಗ ಮೋದಿಯವರ ಕಾಲದಲ್ಲಿ ಆದಂತಹ ಈಶಾನ್ಯ ಭಾರತದ ಬೆಳವಣಿಗೆಯನ್ನು ನಾಲ್ಕು ವಿಭಾಗಗಳಲ್ಲಿ ವಿಸ್ತಾರವಾಗಿ ಅವಲೋಕಿಸೋಣ.
೧. ಶಾಂತಿ ಮತ್ತು ಸೌಹಾರ್ದತೆ
ಒಂದು ಪ್ರದೇಶದ ಬೆಳವಣಿಗೆಗೆ ಮುಖ್ಯವಾಗಿ ಅಲ್ಲಿ ಬೇಕಾಗಿರುವುದು ಶಾಂತಿ ಹಾಗೂ ಸೌಹಾರ್ದತೆ. ಈಶಾನ್ಯ ಭಾರತದಲ್ಲಿ ಮಾವೋ ಭಯೋತ್ಪಾದಕರ, ದಂಗೆಕೋರರ ಹಾವಳಿ ಯಾವತ್ತೂ ಇದ್ದಿದ್ದೆ. ಆದರೆ ಮೋದಿ ಸರ್ಕಾರದ ಗುರಿ ಎಲ್ಲ ಬೆಳವಣಿಗೆಯ ಮುನ್ನವೂ ಅಲ್ಲಿ ಮೊದಲು ಶಾಂತಿಯ ಧ್ವಜವನ್ನು ಸ್ಥಾಪಿಸುವುದಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ, ಅನಗತ್ಯವಾದ ಒಂದೇ ಒಂದು ಮಿಲಿಟರಿ ಕಾರ್ಯಾಚರಣೆಯನ್ನು ಕೇಂದ್ರಸರ್ಕಾರ ಈಶಾನ್ಯ ಭಾರತದ ರಾಜ್ಯಗಳಲ್ಲಿ ನಡೆಸಿಲ್ಲ. ಕೇವಲ ಮಾತುಕತೆಯ ಮೂಲಕ ಶಾಂತಿ ಹಾಗೂ ಸಂಧಾನ ಸಾಧ್ಯ ಎಂದು ಮೋದಿಯವರು ತೋರಿಸಿಕೊಟ್ಟಿದ್ದಾರೆ. ಅದರ ಪರಿಣಾಮವಾಗಿ ಇಂದು ಅಲ್ಲಿ ಬಂಡಾಯದ ಸಂಖ್ಯೆ ೮೦% ಕಡಮೆ ಆಗಿದೆ. ೨೦೧೯ರಲ್ಲಿ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ ಅವರ ಜೊತೆ ಒಪ್ಪಂದ, ೨೦೨೦ರಲ್ಲಿ ಬ್ರೂ-ರಿಯಾಂಗ್ ಒಪ್ಪಂದ, ಕರ್ಬಿ ಒಪ್ಪಂದ ೨೦೨೧ರಲ್ಲಿ – ಹೀಗೆ ಹತ್ತು ವರ್ಷಗಳಲ್ಲಿ ಮುಖ್ಯವಾದ ಹನ್ನೊಂದು ಒಪ್ಪಂದಗಳಾಗಿವೆ. ಇವು ಅಂತರರಾಜ್ಯ ವಿವಾದಗಳಿಗೆ ಪೂರ್ಣವಿರಾಮ ಹಾಕಿವೆ.
ಕೇಂದ್ರಸರ್ಕಾರವು ನಿಯೋಜಿಸಿದ್ದ ಆರ್ಮ್ಡ ಫೋರ್ಸ್ ಸ್ಪೆಷಲ್ ಪರ್ಸ್ ಆ್ಯಕ್ಟ್ ನ (ಎಎಫ್ಎಸ್ಪಿಎ) ಅಸ್ಸಾಮಿನ ೬೦% ಭಾಗಗಳಿಂದ ಮುಕ್ತಗೊಳಿಸಿದೆ, ಮಣಿಪುರದಲ್ಲಿ ಆರು ಜಿಲ್ಲೆಗಳಲ್ಲಿನ ಕೇವಲ ಹದಿನೈದು, ಅರುಣಾಚಲ ಪ್ರದೇಶದ ಒಂದು ಪೊಲೀಸ್ ಠಾಣೆ ಮಾತ್ರ ಎಎಫ್ಎಸ್ಪಿಎಗೆ ಒಳಪಟ್ಟಿದ್ದರೆ ನಾಗಾಲ್ಯಾಂಡ್ ಅಂತೂ ಸಂಪೂರ್ಣವಾಗಿ ಮುಕ್ತವಾಗಿದೆ. ಇದು ಈಶಾನ್ಯ ಭಾರತದಲ್ಲಿ ನೆಲೆಯೂರಿರುವ ಶಾಂತಿಯ ಸೂಚಕ.
ಅಸ್ಸಾಂ ಹಾಗೂ ಮೇಘಾಲಯದ ೫೦ ವರ್ಷಗಳ ನಡುವಿನ ವಿವಾದ ಅರ್ಧ ಶತಮಾನಕ್ಕೂ ಹಳೆಯದು. ಈಗ ಅದು ಇತ್ಯರ್ಥವಾಗಿದೆ. ಅದೇ ರೀತಿಯ ಇನ್ನೊಂದು ವಿವಾದವು ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ಗಡಿಪ್ರದೇಶದಲ್ಲಿ ನಡೆಯುತ್ತಿತ್ತು. ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಅಲ್ಲಿಯ ಪ್ರಾದೇಶಿಕ ಮುಖಂಡರ ಜೊತೆ ಸೇರಿ ಎಲ್ಲರಿಗೂ ಒಪ್ಪಿಗೆ ಆಗುವಂತಹ ಒಂದು ಪರಿಹಾರ ಕಂಡುಕೊಂಡಿದ್ದಾರೆ. ಇದರಿಂದಾಗಿ ಅದರ ಸುತ್ತಮುತ್ತಲಿನ ೧೨೩ ಗ್ರಾಮಗಳಲ್ಲಿ ಇಂದು ಸಾಮಾಜಿಕ ನೆಮ್ಮದಿ ನೆಲೆಸಿದೆ. ಗಮನೀಯ ಅಂಶವೆಂದರೆ ಸರ್ಕಾರದ ಇಂತಹ ಅನೇಕ ಪ್ರಯತ್ನಗಳಿಂದ ಸುಮಾರು ೯,೫೦೦ ದಂಗೆಕೋರರು ಶಸ್ತಾçಸ್ತçಗಳನ್ನು ತ್ಯಾಗ ಮಾಡಿ ಭಾರತ ಸರ್ಕಾರಕ್ಕೆ ಶರಣಾಗಿದ್ದಾರೆ.
೨. ಅಷ್ಟಲಕ್ಷ್ಮೀಯರ ಮೇಲೆ ಮೋದಿಯವರ ಆಸ್ಥೆ
ಮೋದಿಯವರು ದೇಶದ ಈಶಾನ್ಯ ಭಾಗದ ಜನರಿಗೆ ‘ದಿಲ್ಲಿ ಅವರಿಂದ ಎಷ್ಟು ಹತ್ತಿರವಿದೆ’ ಎನ್ನುವ ಮಾತನ್ನು ಮತ್ತೆಮತ್ತೆ ನೆನಪಿಸುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಬೆಳವಣಿಗೆ ಆಗಬೇಕು ಅಂದರೆ ಅದಕ್ಕೆ ಮೊದಲು ನಾಗರಿಕರ ಆತ್ಮವಿಶ್ವಾಸವನ್ನು ಗೆಲ್ಲಬೇಕಾಗುತ್ತದೆ. ಇಂದು ಬಿಜೆಪಿಯು ಅಲ್ಲಿಯ ಜನರನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದೆ ಎನ್ನಬಹುದು. ಒಂದೂ ಸಂಸದ ಸ್ಥಾನವಿಲ್ಲದ ಜಾಗದಲ್ಲಿ ಇಂದು ಬಿಜೆಪಿ ಸರ್ಕಾರವಿದೆ. ಇದಕ್ಕಿಂತ ಉತ್ತಮವಾದ ಸಾಕ್ಷಿ ಯಾವುದು ಬೇಕು? ಈಗಿನ ಕೇಂದ್ರ ಸಚಿವರಲ್ಲಿ ಹಲವರು ಈಶಾನ್ಯ ಭಾರತದವರು. ಕೇಂದ್ರ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ತ್ರಿಪುರಾದ ಸಂಸದರಿಗೆ ಸ್ಥಾನ ದೊರಕಿದೆ. ಅಸ್ಸಾಮಿನ ಮುಖ್ಯಮಂತ್ರಿಯಾಗಿರುವ ಹಿಮಂತಾ ಬಿಸ್ವಾ ಅವರು ಬಿಜೆಪಿಯ ಅಖಿಲ ಭಾರತೀಯ ಮಟ್ಟದ ಮುಖ್ಯ ಪ್ರಚಾರಕರಲ್ಲಿ ಒಬ್ಬರು. ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ಆರು ರಾಜ್ಯಗಳನ್ನು ಬಿಜೆಪಿ ಹಾಗೂ ಅದರ ಮೈತ್ರಿ ಪಕ್ಷಗಳು ಆಳುತ್ತಿವೆ. ಇವೆಲ್ಲ ಅಲ್ಲಿಯ ಜನರಿಗೆ ಒಂದು ಹೊಸ ಉತ್ಸಾಹವನ್ನು ಕೊಟ್ಟು ಭಾರತದ ವಿಕಾಸದ ಪಯಣದಲ್ಲಿ ಜೊತೆಗೂಡುವಂತೆ ಪ್ರೇರೇಪಿಸುತ್ತದೆ.
ಮೋದಿಯವರು ಹೇಳುವಂತೆ ನಮ್ಮ ಈಶಾನ್ಯ ರಾಜ್ಯಗಳು ಭಾರತದ ಅಷ್ಟಲಕ್ಷ್ಮಿಗಳು. ಹೀಗಾಗಿ ೨೦೧೪ರ ನಂತರ ದೇಶದ ಪ್ರಧಾನಿಗಳು ಅಲ್ಲಿಗೆ ೭೦ ಬಾರಿ ಭೇಟಿ ಕೊಟ್ಟಿದ್ದರೆ, ಅವರ ಮಂತ್ರಿಮಂಡಲದ ಸಚಿವರು ೬೮೦ ಬಾರಿ ಭೇಟಿ ಕೊಟ್ಟಿದ್ದಾರೆ. ದೆಹಲಿಯ ಮಂತ್ರಿಮಂಡಲವನ್ನು ಈಶಾನ್ಯ ರಾಜ್ಯದ ಆಗುಹೋಗುಗಳ ಜೊತೆ ಒಂದುಗೂಡಿಸಲು ಮೋದಿಯವರು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಸಹಾಯವನ್ನು ಪಡೆದಿದ್ದಾರೆ. MDONER (The Ministry of Development of North Eastern Region) ಎಂಬ ಡಾಟಾ ಅನಾಲಿಟಿಕ್ಸ್ ಡ್ಯಾಷ್ಬೋರ್ಡ್ ಕೇಂದ್ರಸರ್ಕಾರದ ೧೧೨ ಸ್ಕೀಮ್ಗಳು ಹೇಗೆ ಕೆಲಸ ಮಾಡುತ್ತಿವೆ ಹಾಗೂ ಅದಕ್ಕೆ ಸಂಬಂಧಿಸಿದ ೫೫ ಮಂತ್ರಾಲಯದವರು ಹೇಗೆ ಯೋಜನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ಪ್ರತಿ ದಿನವೂ ಕಂಪ್ಯೂಟರ್ ಪರದೆಯ ಮೇಲೆ ತೋರಿಸುತ್ತದೆ. ಆ ಪಟ್ಟಿಯಲ್ಲಿ ಹಿಂದುಳಿದ ಜಿಲ್ಲೆಗಳು, ಗಡಿಭಾಗದ ಜಿಲ್ಲೆಗಳು ಹಾಗೂ ಆಕಾಂಕ್ಷೆಭರಿತ ಜಿಲ್ಲೆಗಳು ಎಂದು ಬೇರ್ಪಡಿಸಲಾಗಿದೆ. ಅದರ ಆಧಾರದ ಮೇಲೆ ಪ್ರತಿ ವಿಭಾಗದಲ್ಲೂ ಆಗುತ್ತಿರವ ಅಭಿವೃದ್ಧಿ ಕಾರ್ಯಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಹಾಗೆಯೇ ಈಶಾನ್ಯ ಸಂಪರ್ಕ ಪೋರ್ಟಲ್ ಎನ್ನುವ ಇನ್ನೊಂದು ಸಾಧನ. ಇದರ ಮೂಲಕ ಯಾವ ಮಂತ್ರಾಲಯದ ಮಂತ್ರಿಗಳು, ಅಧಿಕಾರಿಗಳು ಎಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದಾರೆ ಹಾಗೂ ಏನು ಮಾಡಿದರು ಎಂದು ನೋಡಬಹುದಾಗಿದೆ. ಇದು ಪ್ರಧಾನಮಂತ್ರಿ ಕಚೇರಿಗೂ ಲಭ್ಯವಿದೆ.
ಇವೆಲ್ಲದರಿಂದಾಗಿ ಕೇಂದ್ರಸರ್ಕಾರದ ಮೇಲೆ ಅಲ್ಲಿಯ ಜನಕ್ಕೆ ನಂಬಿಕೆ ಹೆಚ್ಚಾಗಿದೆ.
೩. ಮೂಲಭೂತ ಸೌಕರ್ಯಗಳ ಬೆಳವಣಿಗೆ
ಅ) ಭಾರತದ ವಿದೇಶೀ ವಹಿವಾಟಿನಲ್ಲಿ ಸುಮಾರು ಅರ್ಧದಷ್ಟು ಭಾಗ ಆಗ್ನೇಯ ಏಷ್ಯಾ ದೇಶಗಳೊಡನೆ ನಡೆಯುತ್ತದೆ. ಮೋದಿಯವರಿಗೆ ಈಶಾನ್ಯ ಭಾರತದಲ್ಲಿ ಆಗ್ನೇಯ ಏಷ್ಯಾದೊಡನೆ ಸೇರಿ ಬೆಳೆಯಬಹುದಾದ ಒಂದು ಅವಕಾಶದ ಹೆಬ್ಬಾಗಿಲು ಕಂಡಿತು. ಅದಕ್ಕಾಗಿ ಏನು ಮಾಡಬೇಕೋ ಅದನ್ನು ತನ್ನ ಮೊದಲ ಕಾಲಾವಧಿಯಲ್ಲೇ ಶುರುಮಾಡಿದ್ದರು. ಆಗ್ನೇಯ ಏಷ್ಯಾ ದೇಶಗಳೊಡನೆ ಸಂಪರ್ಕ ಏರ್ಪಡಿಸುವ ಸಲುವಾಗಿ ಇಂಡಿಯಾ-ಮಯನ್ಮಾರ್-ಥೈಲ್ಯಾಂಡ್ ತ್ರಿಕೋಣ ಪಥದ ನಿರ್ಮಾಣಕಾರ್ಯಕ್ಕೆ ಚಾಲನೆ ನೀಡಿದರು. ಇದು ರಸ್ತೆಯ ಮಾರ್ಗವಾಗಿದ್ದು ಆ ಮೂರೂ ದೇಶಗಳನ್ನು ಸೇರಿಸುತ್ತದೆ. ಈ ಯೋಜನೆಯಡಿಯಲ್ಲಿ ನಿರ್ಮಾಣ ಆಗಲಿರುವ ರಸ್ತೆಯ ಒಟ್ಟು ಉದ್ದ ೧೩೬೦ ಕಿ.ಮೀ.ಗಳು.
ಹಾಗೆಯೆ ಅಗರ್ತಾಲಾ-ಅಖಾವುರ ನಡುವಿನ ರೈಲು ಮಾರ್ಗ ಕೂಡ ಭಾರತ ಹಾಗೂ ಬಂಗ್ಲಾದೇಶದ ಸಂಪರ್ಕವನ್ನು ಬಿಗಿಗೊಳಿಸಲಿದೆ. ಇವೆರಡೂ ಯೋಜನೆಗಳು ಮೋದಿ ಸರ್ಕಾರದ ಸಮಯದಲ್ಲಿ ಶುರುವಾಗಿದ್ದು. ಅವುಗಳ ಕೆಲಸವು ಅತ್ಯಂತ ವೇಗವಾಗಿ ನಡೆಯುತ್ತಿವೆ. ಅದರಲ್ಲಿ ಎರಡನೆಯ ಯೋಜನೆಯಂತೂ ಈಗಾಗಲೇ ಪೂರ್ಣವಾಗಿದೆ. ಇವೆರಡೂ ಯೋಜನೆಗಳು ಸಂಪೂರ್ಣ ಮುಗಿದ ಮೇಲೆ ಈಶಾನ್ಯ ಭಾರತದ ದೆಸೆಯೇ ಬದಲಾಗಲಿದೆ.
ಆ) ಕಳೆದ ಹತ್ತು ವರ್ಷಗಳಲ್ಲಿ ಈಶಾನ್ಯ ಭಾರತದಲ್ಲಿನ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣವಾಗಿದೆ. ೨೦೧೪ರಲ್ಲಿ ೯ ವಿಮಾನ ನಿಲ್ದಾಣಗಳಿದ್ದವು; ಇಂದು ಅದು ೧೬ಕ್ಕೆ ತಲಪಿದೆ. ಅದೇ ರೀತಿಯಲ್ಲಿ ಈಶಾನ್ಯ ಭಾರತಕ್ಕೆ ಹಾರಾಡುವ ವಿಮಾನಗಳ ಸಂಖ್ಯೆಯಲ್ಲಿ ಅತ್ಯಂತ ಗಮನೀಯ ಏರಿಕೆಯನ್ನು ಕಾಣಬಹುದು. ಹತ್ತು ವರ್ಷಗಳ ಹಿಂದೆ ಒಟ್ಟೂ ೯೦೦ ವಿಮಾನಗಳು ಹಾರಾಡುತ್ತಿದ್ದರೆ ಈಗ ಅವುಗಳ ಸಂಖ್ಯೆ ೧೯೦೦ಕ್ಕೆ ಮುಟ್ಟಿದೆ.
ಇ) ಮೋದಿ ಸರ್ಕಾರ ಬಂದ ನಂತರವೇ ಕೆಲವು ಈಶಾನ್ಯ ರಾಜ್ಯಗಳನ್ನು ರೈಲ್ವೇ ಮಾರ್ಗ ಸ್ಪರ್ಶಿಸಿದೆ. ಈಶಾನ್ಯ ಭಾರತವನ್ನು ದೇಶದ ಇತರಭಾಗಗಳೊಂದಿಗೆ ಜೋಡಿಸುವ ಸಲುವಾಗಿ ಮೋದಿ ಸರ್ಕಾರ ೯೫ ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ೨೧ ಯೋಜನೆಗಳಿಗೆ ಚಾಲನೆ ನೀಡಿದೆ. ಇದರ ಪ್ರಕಾರ ಈಗಾಗಲೇ ಮಿಜೋರಾಂ, ಮೇಘಾಲಯ ಹಾಗೂ ಮಣಿಪುರದ ರಾಜಧಾನಿಗಳನ್ನು ಜೋಡಿಸಲಾಗಿದೆ, ಇನ್ನು ನಾಗಾಲ್ಯಾಂಡ್ನ್ನು ೨೦೨೬ರಲ್ಲಿ ಕೂಡಿಸುವ ಯೋಜನೆ ರೂಪಿಸಿದೆ.
ಈ) ಈಶಾನ್ಯ ರಾಜ್ಯಗಳಿಗೆ ಭಾರತದ ಇತರ ಭಾಗದೊಂದಿಗೆ ಜಲಮಾರ್ಗದ ಮೂಲಕ ಸಂಪರ್ಕ ಏರ್ಪಡಿಸಿದ್ದೂ ಕೂಡ ಮೋದಿ ಸರ್ಕಾರದ ಅವಧಿಯಲ್ಲಿಯೇ.
ಉ) ಇನ್ನು ಹೆದ್ದಾರಿಯ ವಿಷಯಕ್ಕೆ ಬಂದರೆ ಕಳೆದ ಒಂದು ದಶಕದಲ್ಲಿ ಈಶಾನ್ಯ ಭಾರತದ ಹೆದ್ದಾರಿಯ ವಿಸ್ತಾರ ೫೦% ಹೆಚ್ಚಾಗಿದೆ. ಈಗಲೂ ಸುಮಾರು ೮೨೦ ಕಿ.ಮೀ. ಉದ್ದದ ಆರು ದೊಡ್ಡ ಯೋಜನೆಗಳು ಚಾಲನೆಯಲ್ಲಿವೆ.
ಊ) ಬೊಗಿಬೀಲ್ ಬ್ರಿಡ್ಜ್, ಬೂಪೇನ್ ಹಜಾರಿಕಾ ಸೇತು, ೧೩,೦೦೦ ಅಡಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಿದ ಸೆಲಾ ಸುರಂಗಗಳು ಅಲ್ಲಿಯ ಜನರ ನಡುವೆ ಸಂಪರ್ಕವನ್ನು ಹೆಚ್ಚಿಸಿದೆ. ಸಂಪರ್ಕವು ಹೆಚ್ಚಾದಂತೆ ಆರ್ಥಿಕ ಪ್ರಗತಿಯೂ ವೃದ್ಧಿಸುತ್ತದೆ.
ಋ) ಒಂದು ಕಾಲದಲ್ಲಿ ಅರುಣಾಚಲ ಪ್ರದೇಶದ ಕೆಲವು ಭಾಗಗಳು ಭಾರತದ್ದೋ ಅಥವಾ ಚೀನಾದ್ದೋ ಎನ್ನುವ ಪ್ರಶ್ನೆಗಳು ಏಳುತ್ತಿದ್ದವು. ಇಂದು ಯಾರೂ ಆ ಪ್ರಶ್ನೆ ಮಾಡುವಂತಿಲ್ಲ. ಮೋದಿಯವರು ಹೇಳುವಂತೆ, ಅರುಣೋದಯ ಕಿರಣಗಳು ಮೊದಲು ತಲಪುವಂತೆ ಅಭಿವೃದ್ಧಿಯ ಯೋಜನೆಗಳು ಮೊದಲು ಅರುಣಾಚಲ ಪ್ರದೇಶವನ್ನು ತಲಪುತ್ತಿದೆ. ವಿಕ್ಷಿತ ಭಾರತ ಮಿಷನ್ ರೀತಿಯಲ್ಲಿಯೇ ಬಿಜೆಪಿ ಸರಕಾರದ ಹೊಸ ಯೋಜನೆ ವಿಕ್ಷಿತ ಈಶಾನ್ಯ ಮಿಷನ್. ಅದರ ಮೂಲಕ ೫೫ ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ಬೇರೆಬೇರೆ ಯೋಜನೆಗಳನ್ನು ಹಮ್ಮಿಕೊಂಡಿದೆ. ಉದಾಹರಣೆಗೆ ೩೫,೦೦೦ ಜನರಿಗೆ ವಸತಿ ಸೌಲಭ್ಯ ಹಾಗೂ ೪೫,೦೦೦ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ೧೨೫ ಹಳ್ಳಿಗಳಿಗೆ ಹೊಸ ರಸ್ತೆಗಳು ಹಾಗೂ ೧೫೦ ಹಳ್ಳಿಗಳಲ್ಲಿ ಹೊಸ ಪ್ರವಾಸೋದ್ಯಮದ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ. ಇದರಿಂದಾಗಿ ಅಲ್ಲಿಯ ಜನರ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಗೆ ಎಷ್ಟು ಅನುಕೂಲವಾಗಬಹುದು ಎಂಬುದನ್ನು ನಾವೇ ಯೋಚಿಸಬೇಕು.
೪. ಯುವಶಕ್ತಿ ಹಾಗೂ ಡಿಜಿಟಲ್
ಈಶಾನ್ಯ ಭಾರತ
೧. ಇಡೀ ಭಾರತವು ಡಿಜಿಟಲ್ಮಯವಾದ ಮೇಲೆ ಈಶಾನ್ಯ ಭಾರತವು ಹಿಂದಿದ್ದರೆ ಹೇಗೆ? ಹೀಗಾಗಿ ಡಿಜಿಟಲ್ ಇಂಡಿಯಾ ಅಂದರೆ ಅದರಲ್ಲಿ ಈಶಾನ್ಯ ಭಾರತವೂ ಕೂಡ ಸೇರಿದೆ. ಆ ಪ್ರದೇಶದಲ್ಲಿ 4G ಈಗಾಗಲೇ ಚಾಲನೆಯಲ್ಲಿದ್ದು ೫ಉ ಕಡೆಗೆ ಸಾಗುತ್ತಿದೆ.
೨. ಈಶಾನ್ಯ ಭಾರತದ ಮೂಲ ಆದಾಯ ಕೃಷಿ. ಆದರೆ ಅದನ್ನು ಅವರು ದೇಶದ ಉಳಿದ ರಾಜ್ಯಗಳ ಮಟ್ಟಕ್ಕೆ ವ್ಯಾಪಾರವಾಗಿ ಅಭಿವೃದ್ಧಿಪಡಿಸಲು ಆಗಿರಲಿಲ್ಲ. ಇದಕ್ಕೆ ಮೂಲಕಾರಣ ದುರ್ಬಲವಾದ ಸಂಪರ್ಕ ವ್ಯವಸ್ಥೆ. ಆದರೆ ಡಿಜಿಟಲ್ ಹಾಗೂ ಸಾರಿಗೆ ಸಂಪರ್ಕವು ಹೆಚ್ಚಾಗುತ್ತಿದ್ದಂತೆ ಕೃಷಿ ವ್ಯಾಪಾರವೂ ಹೆಚ್ಚಿದೆ. ಕಳೆದ ಆರು ವರ್ಷಗಳಲ್ಲಿ ಕೃಷಿ ವಸ್ತುಗಳ ರಫ್ತು ೮೫% ಹೆಚ್ಚಿದೆ. ಆಯಿಲ್ ಪಾಮ್ ಮಿಷನ್ ಕೂಡ ಒಂದು ಅದ್ಬುತ ಯೋಜನೆ.
೩. ಯುವಜನತೆಯ ಭವಿಷ್ಯವನ್ನು ಕೇಂದ್ರದಲ್ಲಿಟ್ಟುಕೊಂಡು ೧೪,೦೦೦ ಕೋಟಿ ರೂಪಾಯಿಗಳನ್ನು ಈಶಾನ್ಯ ಭಾರತದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಾಗಿಡಲಾಗಿದೆ. ಮಣಿಪುರದಲ್ಲಿ ಭಾರತದ ಮೊತ್ತಮೊದಲ ಸ್ಫೋರ್ಟ್ಸ್ ಯುನಿವರ್ಸಿಟಿಯನ್ನು ಸ್ಥಾಪಿಸಲಾಗಿದೆ. ಎಂಟು ರಾಜ್ಯಗಳಲ್ಲಿ ಇಂದು ಇನ್ನೂರು ಖೇಲೋ ಇಂಡಿಯಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭಾರತದ ಒಟ್ಟು ಸ್ಟಾರ್ಟ್ ಅಪ್ ಪರಿಸರದಲ್ಲಿ ೪೦೦೦ ಸ್ಟಾರ್ಟ್ಅಪ್ಗಳು ಈಶಾನ್ಯ ರಾಜ್ಯಗಳಿಂದ ಬಂದಿರುವಂತಹದ್ದು.
ಈ ಎಲ್ಲ ಕಾರಣಗಳು ಇಂದು ಭಾರತದ ಈಶಾನ್ಯ ರಾಜ್ಯಗಳನ್ನು ಬಲಪಡಿಸಿವೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಮುಂದೆ ಹೋದಂತೆ ಇವರ ಪಾತ್ರ ಗಣನೀಯವಾಗುವುದರಲ್ಲಿ ಎರಡು ಮಾತಿಲ್ಲ. ಒಂದು ನಾಯಕನ ದೂರದೃಷ್ಟಿ, ಆಸ್ಥೆ, ಪರಿಶ್ರಮವು ಹೇಗೆ ಅನಿಷ್ಟವೆನಿಸಿಕೊಂಡು ಮೂಲೆಗುಂಪಾಗಿದ್ದ ಪ್ರದೇಶವನ್ನು ಅಷ್ಟಲಕ್ಷ್ಮಿಯಾಗಿ ಪರಿವರ್ತಿಸಬಹುದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.