‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ ತಗಲಲಿಲ್ಲ. ಆದರೆ ಚಂದ್ರ ಭೂಗೋಳದ ಬೇರೆಬೇರೆ ಭಾಗಗಳಿಂದ ನೋಡಿದಾಗ ಬೇರೆಬೇರೆ ರೀತಿ ಕಾಣಿಸುತ್ತಾನೆ ಎಂದು ನಮಗೆ ಶಾಲೆಯಲ್ಲಿ ಕಲಿಸಿರಲಿಲ್ಲ. ನಾನು ಎಲ್ಲೂ ಓದಿರಲೂ ಇಲ್ಲ. ಈ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದರೂ ಸ್ಪಷ್ಟ ಮಾಹಿತಿ ಎಲ್ಲೂ ಸಿಗಲಿಲ್ಲ. ಆದರೂ ಅಲ್ಲಿ ಇಲ್ಲಿ ಸಿಕ್ಕಿದಷ್ಟನ್ನು ಒಂದುಗೂಡಿಸಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕೆಲವೊಮ್ಮೆ ನಮಗೆ ತೀರಾ ಪರಿಚಿತರಾದ ವ್ಯಕ್ತಿಯೊಬ್ಬರನ್ನು ಬೇರೆ ಊರಿನ ಯಾವುದಾದರೂ ಸಮಾರಂಭದಲ್ಲಿ ಕಂಡಾಗ ಅವರ ಗುರುತೇ ಸಿಗದಂತಾಗುವುದಿದೆ. ನಮ್ಮ ಮನಸ್ಸು ನಿತ್ಯದ ಪರಿಸರಕ್ಕೆ ಮಾತ್ರ ಅವರನ್ನು map ಮಾಡಿಕೊಂಡಿರುವುದು ಇದಕ್ಕೆ ಕಾರಣವಾಗಿರುತ್ತದೆ. ಕೆಲವು ಸಲ ಅವರು ವಾಡಿಕೆಗಿಂತ ಬೇರೆ ದಿರಸು ಧರಿಸಿರುವುದೂ ಗೊಂದಲ ಮೂಡಿಸುತ್ತದೆ. ನನಗೂ ಹಾಗೆಯೆ ಆಯಿತು. ಅಮೆರಿಕದ ಸ್ಯಾನ್ ಹೋಸೆಯಲ್ಲಿರುವ ಮಗಳ ಮನೆಯಲ್ಲಿ ಕೆಲವು ದಿನಗಳ ವಾಸ್ತವ್ಯಕ್ಕೆಂದು ಬಂದು ಸಂಜೆಯ ಹೊತ್ತು ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸಾಗುತ್ತಿರುವಾಗ ಎದುರಿಗೆ ಆಗಸದಲ್ಲಿ ಫಳಫಳನೆ ಹೊಳೆಯುತ್ತಿದ್ದ ಹುಣ್ಣಿಮೆ ಚಂದ್ರನ ಗುರುತೇ ನನಗೆ ಸಿಗಲಿಲ್ಲ! ಸೂಕ್ಷ್ಮವಾಗಿ ಗಮನಿಸಿದಾಗ ಆತನಿಗೆ ಶಶಿ ಅಥವಾ ಶಶಾಂಕನೆಂಬ ಹೆಸರು ಬರಲು ಕಾರಣವಾದ ಮೊಲದ ಆಕೃತಿ ಸುಮಾರು ೯೦ ಡಿಗ್ರಿ ಬಲಕ್ಕೆ ತಿರುಗಿ ನನ್ನ ಕಣ್ಣುಗಳಿಗೆ ಮೋಸ ಮಾಡಿದ್ದು ಅರಿವಾಯಿತು. ಕವಿ ನಿ.ರೇ. ಹಿರೇಮಠ ಅವರ ‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ ತಗಲಲಿಲ್ಲ. ಆದರೆ ಚಂದ್ರ ಭೂಗೋಳದ ಬೇರೆಬೇರೆ ಭಾಗಗಳಿಂದ ನೋಡಿದಾಗ ಬೇರೆಬೇರೆ ರೀತಿ ಕಾಣಿಸುತ್ತಾನೆ ಎಂದು ನಮಗೆ ಶಾಲೆಯಲ್ಲಿ ಕಲಿಸಿರಲಿಲ್ಲ. ನಾನು ಎಲ್ಲೂ ಓದಿರಲೂ ಇಲ್ಲ. ಈ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದರೂ ಸ್ಪಷ್ಟ ಮಾಹಿತಿ ಎಲ್ಲೂ ಸಿಗಲಿಲ್ಲ. ಆದರೂ ಅಲ್ಲಿ ಇಲ್ಲಿ ಸಿಕ್ಕಿದಷ್ಟನ್ನು ಒಂದುಗೂಡಿಸಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಗೋಲಾರ್ಧಗಳಲ್ಲಿ ವ್ಯತ್ಯಾಸ
ಇಲ್ಲಿರುವ ಚಿತ್ರವನ್ನು ನೋಡಿದರೆ ಭೂಮಧ್ಯ ರೇಖೆಯ ಗುಂಟ ಭೂಮಿಯನ್ನು ಸುತ್ತುವ ಚಂದ್ರನಲ್ಲಿರುವ ಮೊಲದ ಆಕೃತಿ ಹುಣ್ಣಿಮೆಯಂದು ಉತ್ತರ ಗೋಲಾರ್ಧದಲ್ಲಿ ಇರುವವರಿಗೆ ೯೦ ಡಿಗ್ರಿ ಬಲಕ್ಕೆ ತಿರುಗಿದಂತೆಯೂ, ದಕ್ಷಿಣ ಗೋಲಾರ್ಧದಲ್ಲಿರುವವರಿಗೆ ೯೦ ಡಿಗ್ರಿ ಎಡಕ್ಕೆ ತಿರುಗಿದಂತೆಯೂ ಕಾಣಿಸುವುದನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಬಹುದು. ಇವೆರಡರ ಮಧ್ಯೆ ಭೂಮಧ್ಯರೇಖೆಗೆ ಸಮೀಪ ಇರುವ ಭಾರತದಂಥ ದೇಶಗಳಲ್ಲಿ ಸಹಜವಾಗಿಯೇ ನೇರವಾಗಿ ಕುಳಿತ ಮೊಲದ ಆಕೃತಿ ಕಾಣುತ್ತದೆ. ಇನ್ನೊಂದು ಚಿತ್ರ ಇದನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತದೆ.
ಶುಕ್ಲಪಕ್ಷ ಮತ್ತು ಕೃಷ್ಣಪಕ್ಷದ ಅರ್ಧ ಚಂದ್ರ ಬಿಂಬ ಕಾಣಿಸುವ ರೀತಿಯಲ್ಲೂ ಉತ್ತರ ಗೋಲಾರ್ಧ ಮತ್ತು ದಕ್ಷಿಣ ಗೋಲಾರ್ಧಕ್ಕೆ ವ್ಯತ್ಯಾಸವಿರುತ್ತದೆ. ಉತ್ತರ ಗೋಲಾರ್ಧದವರು ಭೂಮಧ್ಯ ರೇಖೆ ಕಡೆ ಅಂದರೆ ದಕ್ಷಿಣಕ್ಕೆ ಮುಖ ಮಾಡಿದರೆ ಪೂರ್ವ ಎಡಕ್ಕಿರುತ್ತದಲ್ಲವೇ. ಹೀಗಾಗಿ ಭೂಮಧ್ಯರೇಖೆಯ ಮೇಲಿರುವ ಶುಕ್ಲಪಕ್ಷದ ಚಂದ್ರಬಿಂಬ ಆ ಆಕಾರದಲ್ಲಿ ಕಾಣಿಸತೊಡಗಿ ಹುಣ್ಣಿಮೆಯ ದಿನ O ಆಗಿ ನಂತರ C ಆಕಾರ ತಾಳಿ ಕ್ಷೀಣಿಸುತ್ತಹೋಗುತ್ತದೆ (DOC).
ತದ್ವಿರುದ್ಧವಾಗಿ ದಕ್ಷಿಣ ಗೋಲಾರ್ಧದವರು ಭೂಮಧ್ಯ ರೇಖೆಯ ಮೇಲಿರುವ ಚಂದ್ರನ ಕಡೆ ಅಂದರೆ ಉತ್ತರಕ್ಕೆ ಮುಖ ಮಾಡಿದಾಗ ಪೂರ್ವ ಬಲಕ್ಕೆ ಇರುತ್ತದೆ. ಹೀಗಾಗಿ ಅಲ್ಲಿ ಶುಕ್ಲಪಕ್ಷದ ಚಂದ್ರ C ಆಕಾರದಲ್ಲಿ ವೃದ್ಧಿಸುತ್ತ ಹೋಗಿ ಹುಣ್ಣಿಮೆಯಂದು O ಆಗಿ ಆಮೇಲೆ D ಆಕಾರದಲ್ಲಿ ಕ್ಷೀಣಿಸುತ್ತ ಸಾಗುತ್ತಾನೆ. (COD)
ಚಂದ್ರ ಈ ರೀತಿ ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿ ಗೋಚರಿಸುವುದರಿಂದ ಅವರವರಿಗೆ ಕಾಣಿಸಿದಂತೆ ಆತನನ್ನು ಅಭಿವ್ಯಕ್ತಿಸುವುದು ಸಹಜ. ನಮ್ಮಲ್ಲಿ ನೆಟ್ಟಗೆ ಕುಳಿತ ಮೊಲದ ಆಕೃತಿಯನ್ನು ಹೊಂದಿದ ಚಂದ್ರ ಜನಮಾನಸದಲ್ಲಿ ನೆಲೆಯಾಗಿದ್ದರೆ ಭೂಗೋಳದ ಉತ್ತರ ಭಾಗದಲ್ಲಿರುವ ಅಮೆರಿಕ ಮುಂತಾದೆಡೆ ಚಂದ್ರನೆಂದರೆ ಮುಖ ಮೇಲೆ ಮಾಡಿದಂತಿರುವ ಮೊಲವುಳ್ಳ ಆಕೃತಿಯುಳ್ಳ ಗೋಳ. NASA ಸಂಸ್ಥೆಯ ಚಿತ್ರಗಳಲ್ಲಿ, ಮಾಡೆಲ್ಗಳಲ್ಲಿ ಇಂಥ ಚಂದ್ರನೇ ಕಾಣಿಸಿಕೊಳ್ಳುವುದನ್ನು ಗಮನಿಸಬಹುದು.
ಚಂದ್ರನ ಮೊಲದ ಕಥೆಗಳು
ಚಂದ್ರನ ಮೈಮೇಲೆ ಶಶ ಅಂದರೆ ಮೊಲದ ಆಕೃತಿಯನ್ನು ಗುರುತಿಸಿ ನಮ್ಮಲ್ಲಿ ಪುರಾತನಕಾಲದಿಂದಲೂ ಶಶದ ಚಿಹ್ನೆಯುಳ್ಳವನು ಎಂಬರ್ಥದಲ್ಲಿ ಶಶಾಂಕ ಹಾಗೂ ಶಶವನ್ನು ಹೊಂದಿದವನು ಎಂಬರ್ಥದಲ್ಲಿ ಶಶಿ ಎಂದು ಆತನನ್ನು ಕರೆಯಲಾಗುತ್ತದೆ. ಶಶವನ್ನು ಹೊಂದಿದ ಶಶಿಯನ್ನು ಧರಿಸಿದ ಈಶ್ವರ ಶಶಿಧರ ಅಥವಾ ಶಶಿಶೇಖರ.
ಜಾತಕ ಕಥೆಯೊಂದರ ಪ್ರಕಾರ ಒಮ್ಮೆ ಬೋಧಿಸತ್ವನು ಮೊಲವಾಗಿ ಜನ್ಮ ತಾಳಿದ್ದನು. ಆ ಮೊಲಕ್ಕೆ ಒಂದು ಮಂಗ, ಒಂದು ನರಿ ಮತ್ತು ಒಂದು ನೀರು ನಾಯಿ ಸ್ನೇಹಿತರಾಗಿದ್ದವು. ಒಮ್ಮೆ ಅವೆಲ್ಲವೂ ತಮ್ಮ ಪ್ರಿಯ ಆಹಾರವನ್ನು ಯಾಚಕರಿಗೆ ದಾನ ಮಾಡಿ ಪುಣ್ಯ ಸಂಪಾದಿಸಬೇಕೆಂದು ಯೋಚಿಸಿದವು. ಅದರಂತೆ ಮಂಗ ಕೆಲವು ಮಾವಿನಹಣ್ಣುಗಳನ್ನು, ನರಿ ಒಂದು ಹಲ್ಲಿ ಮತ್ತು ಎಲ್ಲಿಂದಲೋ ಕದ್ದ ಒಂದು ಗಡಿಗೆ ಮೊಸರನ್ನು ಮತ್ತು ನೀರುನಾಯಿ ಕೆಲವು ಮೀನುಗಳನ್ನು ಸಿದ್ಧಪಡಿಸಿ ತಂದವು. ಆದರೆ ಮೊಲ ತನ್ನ ಆಹಾರವಾದ ಹಸಿರು ಹುಲ್ಲು ಭಿಕ್ಷೆ ನೀಡಲು ಯೋಗ್ಯವಾಗಲಾರದೆಂದು ಯೋಚಿಸಿ ತನ್ನ ಮಾಂಸವನ್ನೇ ಸಮರ್ಪಿಸಲು ನಿರ್ಧರಿಸಿತು. ಪರೀಕ್ಷಿಸುವುದಕ್ಕಗಿ ಇಂದ್ರ ಸಂನ್ಯಾಸಿಯ ವೇಷಧರಿಸಿ ಮೊಲವಿದ್ದಲ್ಲಿಗೆ ಬಂದ. ಧೃಢನಿರ್ಧಾರ ತಾಳಿದ್ದ ಮೊಲ ತನ್ನ ಮಾಂಸವನ್ನು ಭಿಕ್ಷೆಯಾಗಿ ಸ್ವೀಕರಿಸುವಂತೆ ಸಂನ್ಯಾಸಿಗೆ ಹೇಳಿ ಚಿತೆ ಸಿದ್ಧಪಡಿಸಿ ಧಗಧಗ ಉರಿಯುತ್ತಿದ್ದ ಉರಿಗೆ ಹಾರಿತು. ಇಂದ್ರನ ಕೃಪೆಯಿಂದ ಚಿತೆಯ ಉರಿ ಮಂಜಿನಂತೆ ತಣ್ಣಗಾಯಿತು. ಮೊಲದ ಬಲಿದಾನದ ಕಥೆ ಯುಗಯುಗಗಳವರೆಗೆ ಎಲ್ಲರಿಗೂ ನೆನಪಿನಲ್ಲುಳಿಯುವ ಸಲುವಾಗಿ ಇಂದ್ರ ಚಂದ್ರನ ಮೇಲೆ ಮೊಲದ ಆಕಾರವೊಂದನ್ನು ಕೆತ್ತಿದ.
ಜಪಾನ್ ಹಾಗೂ ಚೀನಾ ದೇಶದವರೂ ಆತನಲ್ಲಿ ಮೊಲವನ್ನೇ ಕಾಣುತ್ತಾರಂತೆ. ಜಪಾನೀಯರ ಪ್ರಕಾರ ಚಂದ್ರನಲ್ಲಿರುವ ಮೊಲ ಮೋಚಿ ಎಂಬ ಕೇಕ್ ತಯಾರಿಸಲು ಅಕ್ಕಿ ಕುಟ್ಟುತ್ತಿರುತ್ತದೆ. ಶರತ್ಕಾಲದಲ್ಲಿ ಆಚರಿಸಲ್ಪಡುವ ಸಾಂಪ್ರದಾಯಿಕ ಚಂದ್ರೋತ್ಸವದಲ್ಲಿ ಅವರು ಮೊಲದಾಕೃತಿಯ ಸಿಹಿತಿಂಡಿ ತಯಾರಿಸುವುದಿದೆಯಂತೆ. ಚೀನೀಯರ ನಂಬಿಕೆಯಂತೆ ಅಮೃತದ ಗುಟುಕೊಂದನ್ನು ಕದ್ದು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಂದ್ರಲೋಕಕ್ಕೆ ಪಲಾಯನ ಮಾಡಿ ಬಂದ ಹೆಂಗಸೊಬ್ಬಳಿಗಾಗಿ ಆ ಮೊಲ ಗಿಡಮೂಲಿಕೆಗಳನ್ನು ಕುಟ್ಟುತ್ತಿದೆ. ಸಾವಿರಾರು ವರ್ಷ ಕಳೆದರೂ ಭೂಮಿಗೆ ಬರಲೊಲ್ಲದ ಆ ಹೆಂಗಸು ಮೊಲದೊಂದಿಗೆ ಅಲ್ಲೇ ಇರಲು ಬಯಸಿದ್ದಾಳಂತೆ. ಪೆರು ದೇಶದವರಿಗೆ ಚಂದ್ರನಲ್ಲಿ ಕಾಣಿಸುವುದು ಹಗ್ಗದ ಮೂಲಕ ಮೇಲೇರಿ ಹೋದ ಒಂದು ನರಿ. ನರಿಯೊಡನೆ ಚಂದ್ರನನ್ನೇರಲು ಹೋದ ಮೋಲ್ ಎಂಬ ಜಾತಿಯ ಇಲಿಯೊಂದು ಹಗ್ಗದಿಂದ ಜಾರಿ ಕೆಳಗೆ ಬಿತ್ತಂತೆ. ಹೀಗಾಗಿ ಇತರರ ಮೂದಲಿಕೆಯಿಂದ ತಪ್ಪಿಸಲು ಆ ಜಾತಿಯ ಇಲಿಗಳು ಇಂದಿಗೂ ಬಿಲ ಬಿಟ್ಟು ಹೊರಗೆ ಬರುವುದಿಲ್ಲವಂತೆ. ಕೆಲವು ಅಮೆರಿಕನ್ ಮೂಲ ನಿವಾಸಿಗಳ ಪ್ರಕಾರ ಚಂದ್ರನಲ್ಲಿ ವಾಸವಾಗಿರುವ ತುಂಟ ಪ್ರಾಣಿಯೊಂದು ಆತನ ವೃದ್ಧಿ ಮತ್ತು ಕ್ಷಯಗಳಿಗೆ ಕಾರಣ. ಇನ್ನೊಂದು ಅಮೆರಿಕನ್ ಕತೆ ಪ್ರಕಾರ ಅಲ್ಲಿರುವ ಓರ್ವ ಹೆಂಗಸು ಚಂದ್ರನಿಗಾಗಿ ಹಣೆಪಟ್ಟಿಯನ್ನು ನೇಯ್ದಾಗ ಆತ ವೃದ್ಧಿಸುತ್ತಾನೆ. ಆದರೆ ಆಕೆಯ ಬೆಕ್ಕು ಆ ನೇಯ್ಗೆಯನ್ನು ಬಿಡಿಸಿದಾಗ ಆತ ಮತ್ತೆ ಕ್ಷೀಣಿಸತೊಡಗುತ್ತಾನೆ.
ಸೂರ್ಯ ಮತ್ತು ಭೂಮಿಯ ನಡುವೆ ನೇರವಾಗಿ ಚಂದ್ರ ಬಂದಾಗ ಸೂರ್ಯಗ್ರಹಣ, ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುವುದು, ಭೂಮಿ ಸೂರ್ಯನನ್ನು ಸುತ್ತುವ ಕಕ್ಷೆ ಮತ್ತು ಚಂದ್ರ ಭೂಮಿಯನ್ನು ಸುತ್ತುವ ಕಕ್ಷೆಯ ಪಾತಳಿಗಳ ನಡುವೆ ೫ ಡಿಗ್ರಿ ಕೋನ ಇರುವುದರಿಂದ ಪ್ರತೀ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಗ್ರಹಣ ಸಂಭವಿಸದಿರುವುದು, ಚಂದ್ರ ತನ್ನ ಸುತ್ತ ಒಂದು ಸುತ್ತು ತಿರುಗುವ ಅವಧಿ (ಚಂದ್ರನ ದಿನ) ಮತ್ತು ಆತ ಭೂಮಿಯ ಸುತ್ತ ಸುತ್ತುವ ಅವಧಿ (ಚಂದ್ರನ ವರ್ಷ) ಒಂದೇ ಅಂದರೆ ೨೭.೩ ದಿನ ಆಗಿರುವುದರಿಂದ ನಾವು ಯಾವಾಗಲೂ ಆತನ ಒಂದೇ ಪಾರ್ಶ್ವವನ್ನು ನೋಡುತ್ತಿರುವುದು, ಚಂದ್ರ ಭೂಮಿಯನ್ನು ಸುತ್ತುತ್ತಿರಬೇಕಾದರೆ ಭೂಮಿಯೂ ಸೂರ್ಯನ ಸುತ್ತ ತನ್ನ ಪ್ರಯಾಣದಲ್ಲಿ ಸ್ವಲ್ಪ ಮುಂದೆ ಹೋಗಿರುವುದರಿಂದ ಚಂದ್ರನ ಪರಿಭ್ರಮಣ ತುಸು ದೀರ್ಘವಾಗಿ ೨೯.೫ ದಿನಗಳು ತಗಲುವುದು, ಈ ೨೯.೫ ದಿನಗಳನ್ನು ೩೦ ತಿಥಿಗಳಾಗಿ ವಿಭಜಿಸಿ ಚಾಂದ್ರಮಾನ ತಿಂಗಳುಗಳ ಪರಿಕಲ್ಪನೆ ಆಗಿರುವುದು, ಸುಮಾರು ೩೫೪ ದಿನಗಳ ಚಾಂದ್ರಮಾನ ವರ್ಷವನ್ನು ೩೬೫.೨೫ ದಿನಗಳ ಸೌರ ವರ್ಷದೊಡನೆ ತಾಳೆ ಮಾಡಲು ಅಧಿಕಮಾಸ ಮತ್ತು ಬಲು ಅಪರೂಪಕ್ಕೊಮ್ಮೆ ಕ್ಷಯ (ಕ್ಷೀಣ) ಮಾಸಗಳ ವ್ಯವಸ್ಥೆ ಇರುವುದು – ಇವೆಲ್ಲ ಗೊತ್ತಿರುವ ವಿಚಾರಗಳೇ.
ಚಂದ್ರ ಪೂರ್ವ ದಿಗಂತದ ಒಂದೇ ಬಿಂದುವಿನಲ್ಲಿ ಉದಯಿಸುತ್ತಾನೆಯೇ?
ಚಂದ್ರನ ಮುಖಪಲ್ಲಟದ ಕುರಿತಾದ ಮಾಹಿತಿಯ ಹುಡುಕಾಟದಲ್ಲಿ ನನ್ನ ಬಹುಕಾಲದ ಒಂದು ಜಿಜ್ಞಾಸೆಗೂ ಉತ್ತರ ಸಿಕ್ಕಿತು. ದಕ್ಷಿಣಾಯನ ಮತ್ತು ಉತ್ತರಾಯಣಗಳಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುವ ಬಿಂದು ಬದಲಾಗುತ್ತ ಹೋಗುವ ವಿಚಾರ ಸರ್ವವಿದಿತ. ಇದೇ ರೀತಿ ಚಂದ್ರನೂ ತಾನು ಪೂರ್ವ ದಿಗಂತದಲ್ಲಿ ಉದಯಿಸುವ ಬಿಂದುಗಳನ್ನು ಬದಲಾಯಿಸುತ್ತಾನೆಯೇ ಎಂಬ ಪ್ರಶ್ನೆಗೆ ಎಲ್ಲೂ ನನಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ. ದಿನನಿತ್ಯ ಚಂದ್ರೋದಯವನ್ನು ವೀಕ್ಷಿಸುವುದು ಕಾರ್ಯಸಾಧ್ಯವಲ್ಲದಿದ್ದರೂ ಹುಣ್ಣಿಮೆಗಳ ದಿನವಾದರೂ ಯಾವುದಾದರೂ ಸ್ಥಿರ ವಸ್ತುವಿನೊಂದಿಗೆ ಚಂದ್ರೋದಯ ಸ್ಥಾನವನ್ನು ಹೋಲಿಸಿ ನೋಡಬೇಕೆಂಬ ನನ್ನ ಪ್ರಯತ್ನವೂ ಸಫಲವಾಗಿರಲಿಲ್ಲ.
ಅಂತರ್ಜಾಲದ ಕೃಪೆಯಿಂದ ಈಗ ಸೂರ್ಯ-ಚಂದ್ರರು ದಿನನಿತ್ಯ ಪೂರ್ವ ದಿಗಂತದ ಯಾವ ಬಿಂದುವಿನಲ್ಲಿ ಉದಯಿಸುತ್ತಾರೆ ಎಂಬ ಮಾಹಿತಿ ಸುಲಭವಾಗಿ ಸಿಗುತ್ತದೆ. ಇದನ್ನು ಎಂಬ ಮಾಪನದ ಮೂಲಕ ಗುರುತಿಸುತ್ತಾರೆ. ಉತ್ತರ ದಿಕ್ಕನ್ನು ೦ ಡಿಗ್ರಿ, ಪೂರ್ವವನ್ನು ೯೦ ಡಿಗ್ರಿ, ದಕ್ಷಿಣವನ್ನು ೧೮೦ ಡಿಗ್ರಿ ಮತ್ತು ಪಶ್ಚಿಮವನ್ನು ೨೭೦ ಡಿಗ್ರಿ ಎಂದು ಪರಿಗಣಿಸಿ ದಿಗಂತದ ಯಾವುದೇ ಬಿಂದುವು ಉತ್ತರದ ೦ ಡಿಗ್ರಿಯಿಂದ ಎಷ್ಟು ಡಿಗ್ರಿ ಕೋನದಲ್ಲಿದೆ ಎಂಬುದನ್ನು ಆ ಬಿಂದುವಿನ azimuth ಎನ್ನಲಾಗುತ್ತದೆ. ಈ ಲೆಕ್ಕದ ಪ್ರಕಾರ ಈಶಾನ್ಯದ azimuth ೪೫ ಡಿಗ್ರಿ, ಪೂರ್ವದ azimuth ೯೦ ಡಿಗ್ರಿ, ಆಗ್ನೇಯದ azimuth ೧೩೫ ಡಿಗ್ರಿ.
ವರ್ಷದ ೩೬೫ ದಿನಗಳ ಸೂರ್ಯೋದಯ ಮತ್ತು ಚಂದ್ರೋದಯದ azimuth ಬಿಂದುಗಳನ್ನು ಪಟ್ಟಿ ಮಾಡುವುದು ಕಾರ್ಯಸಾಧುವಲ್ಲದ್ದರಿಂದ ಪ್ರಾತಿನಿಧಿಕವಾಗಿ ೨೦೨೩ರ ಎಲ್ಲ ಹುಣ್ಣಿಮೆ ಮತ್ತು ಅಮಾವಾಸ್ಯೆಗಳ azimuth ದತ್ತಾಂಶವನ್ನು ಕಲೆಹಾಕಿ ಒಂದು ಟೇಬಲ್ ತಯಾರಿಸಿದೆ.
ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಸೂರ್ಯ ಮತ್ತು ಚಂದ್ರ ಪೂರ್ವ ದಿಗಂತದಲ್ಲಿ ಉದಯಿಸಿದ ಬಣ್ಣದ ಹಿನ್ನೆಲೆ ಇರುವ ಸಾಲುಗಳು ಹುಣ್ಣಿಮೆ ಮತ್ತು ಬಣ್ಣರಹಿತವಾದವು ಅಮಾವಾಸ್ಯೆಯ ದತ್ತಾಂಶಗಳು. ಇದರಲ್ಲಿ ಆಯಾ ದಿನ ಸೂರ್ಯ ಮತ್ತು ಚಂದ್ರ ಪೂರ್ವ ದಿಗಂತದ ಯಾವ ಬಿಂದುವಿನಲ್ಲಿ ಉದಯಿಸಿದರು ಎಂದು ತಿಳಿಯುತ್ತದೆ. ೯೦ಕ್ಕಿಂತ ಕಡಮೆ azimuth ಇದ್ದರೆ ಪೂರ್ವದಿಂದ ಎಡಕ್ಕೆ ಅಂದರೆ ಈಶಾನ್ಯದತ್ತ ಹಾಗೂ ೯೦ಕ್ಕಿಂತ ಹೆಚ್ಚಿದ್ದರೆ ಪೂರ್ವದಿಂದ ಬಲಕ್ಕೆ ಆಗ್ನೇಯದತ್ತ ಎಂದರ್ಥ. ಇದರ ಪ್ರಕಾರ ಸೂರ್ಯನು ಜೂನ್ ತಿಂಗಳಲ್ಲಿ ಅತಿ ಹೆಚ್ಚು ಈಶಾನ್ಯದತ್ತ ಮತ್ತು ದಶಂಬರ ತಿಂಗಳಲ್ಲಿ ಅತಿ ಹೆಚ್ಚು ಆಗ್ನೇಯದತ್ತ ಸರಿದದ್ದು ಗೊತ್ತಾಗುತ್ತದೆ. ಚಂದ್ರನು ಜುಲೈ ತಿಂಗಳಲ್ಲಿ ಅತಿ ಹೆಚ್ಚು ಆಗ್ನೇಯದತ್ತ ಮತ್ತು ದಶಂಬರದಲ್ಲಿ ಈಶಾನ್ಯದತ್ತ ಸರಿದದ್ದೂ ಗೊತ್ತಾಗುತ್ತದೆ.
ಈ ದತ್ತಾಂಶಗಳನ್ನು ಆಧರಿಸಿ ರಚಿಸಿದ ಗ್ರಾಫ್ ನೋಡಿದರೆ ಇನ್ನಷ್ಟು ವಿವರಗಳು ಸ್ಪಷ್ಟವಾಗುತ್ತವೆ.
ಇದರಲ್ಲಿ ಕೆಂಪು ಬಣ್ಣದ ಬಿಂದುಗಳನ್ನು ಜೋಡಿಸುವ ಗೆರೆ ಸೂರ್ಯೋದಯದ ಸ್ಥಾನ ಬದಲಾದುದನ್ನೂ ಹಸುರು ಬಣ್ಣದ zigzag ಗೆರೆ ಚಂದ್ರೋದಯದ ಸ್ಥಾನ ಬದಲಾಗುತ್ತ ಹೋದುದನ್ನು ತೋರಿಸುತ್ತದೆ. ಹುಣ್ಣಿಮೆ ಚಂದ್ರ ಬಿಳಿಯಲ್ಲೂ ಅಮಾವಾಸ್ಯೆಯ ಚಂದ್ರ ಕಪ್ಪಿನಲ್ಲೂ ಕಾಣಿಸುತ್ತಿದ್ದಾನೆ.
ಹುಣ್ಣಿಮೆಯ ಚಂದ್ರ ಜನವರಿಯಿಂದ ಮಾರ್ಚ್ವರೆಗೆ ಸೂರ್ಯೋದಯ ಸ್ಥಾನಕ್ಕಿಂತ ಈಶಾನ್ಯದಲ್ಲಿ ಉದಯಿಸಿದ್ದಾನೆ. ಕ್ರಮೇಣ ಸೂರ್ಯ-ಚಂದ್ರರ azimuth ಅಂತರ ಕಡಮೆಯಾಗುತ್ತ ಹೋಗಿ ಏಪ್ರಿಲ್ ತಿಂಗಳಿಂದ ಸೂರ್ಯೋದಯ ಸ್ಥಾನದ ಆಚೆ ಕಡೆ ಆಗ್ನೇಯಕ್ಕೆ ದಾಟಿದ್ದಾನೆ. ಜುಲೈಯಲ್ಲಿ ಅತಿ ಹೆಚ್ಚು ಅಂತರವಿದ್ದು ಮತ್ತೆ ಕಮ್ಮಿ ಆಗುತ್ತ, ಸೆಪ್ಟೆಂಬರ್ ಆಗುವಾಗ ವಿರುದ್ಧ ದಿಕ್ಕಿನಲ್ಲಿ ಸೂರ್ಯೋದಯ ಸ್ಥಾನಕ್ಕಿಂತ ಈಶಾನ್ಯದಲ್ಲಿ ಉದಯಿಸತೊಡಗಿದ್ದಾನೆ. ಅಂದರೆ ಈ ಕಡೆಯಿಂದ ಆ ಕಡೆಗೆ ದಾಟುವಾಗ ಮಾರ್ಚ್ ಮತ್ತು ಏಪ್ರಿಲ್ ಹಾಗೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಾತ್ರ ಹುಣ್ಣಿಮೆ ಚಂದ್ರ ಸೂರ್ಯೋದಯ ಸ್ಥಾನದ ಆಸುಪಾಸಿನಲ್ಲಿ ಉದಯಿಸಿದ್ದು.
ಕಪ್ಪುಬಣ್ಣದ ಅಮಾವಾಸ್ಯೆ ಚಂದ್ರನನ್ನು ಗಮನಿಸಿದರೆ ಪ್ರತಿಸಲ ಆತ ಸೂರ್ಯೋದಯ ಸ್ಥಾನದ ಸಮೀಪದಲ್ಲೇ ಉದಯಿಸಿದ್ದು ತಿಳಿಯುತ್ತದೆ. ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಜನವರಿಯಿಂದ ಮೇವರೆಗೆ ಸೂರ್ಯನಿಗಿಂತ ಒಂದಷ್ಟು ಆಗ್ನೇಯದ ಕಡೆಗೆ ಹಾಗೂ ಮತ್ತೆ ನವೆಂಬರ್ವರೆಗೆ ಸೂರ್ಯನಿಗಿಂತ ಈಶಾನ್ಯದ ಕಡೆಗೆ ಜರಗಿದ್ದು ತಿಳಿಯುತ್ತದೆ. ದಶಂಬರದಲ್ಲಿ ಮತ್ತೆ ಸೂರ್ಯನಿಗಿಂತ ಆಗ್ನೇಯದಲ್ಲಿ ಉದಯಿಸುತ್ತಾನೆ. ಸೂರ್ಯೋದಯ ಸ್ಥಾನದ ಸಮೀಪದಲ್ಲೇ ಉದಯಿಸಿದರೂ ಪ್ರತಿ ಅಮಾವಾಸ್ಯೆಯಂದು azimuthನಲ್ಲಿ ಕೆಲವು ಡಿಗ್ರಿಗಳ ವ್ಯತ್ಯಾಸ ಇರುವುದನ್ನು ನೋಡಬಹುದು. ಒಂದು ವೇಳೆ ಎರಡೂ azimuth ಒಂದೇ ಇದ್ದು ಉದಯ ಸಮಯವೂ ಒಂದೇ ಆಗಿದ್ದರೆ ಆ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಸಂಭವಿಸುತ್ತದೆ.
ಅರಿಯಲು ಪ್ರಯತ್ನಿಸಿದಷ್ಟು ಹೊಸಹೊಸ ಕೌತುಕಗಳು ಪ್ರಕೃತಿಯಲ್ಲಿ ಕಾಣಿಸುತ್ತವೆ.