ಒಂದಾದ ಮೇಲೊಂದು ಸಮನ್ಸ್ಗಳನ್ನು ಕಸವಾಗಿ ಕಂಡ ಕೇಜ್ರಿವಾಲ್ ಈಗ ತನ್ನ ಹೇಳಿಕೆಗೆ ಅವಕಾಶ ನೀಡಲಾಗಿಲ್ಲ ಎಂದು ದೂರುತ್ತಿದ್ದಾರೆ! ಈ ತಾಂತ್ರಿಕ ದೊಂಬರಾಟಗಳು ಸಾರ್ವಜನಿಕರನ್ನು ಆಯಾಸಗೊಳಿಸುತ್ತಿವೆ. ಸರಣಿ ಸಮನ್ಸ್ಗಳನ್ನೆಲ್ಲ ಗಾಳಿಗೆ ತೂರುತ್ತ ಬಂದ ಈತ ಈಗ ಜಾರಿ ನಿರ್ದೇಶನಾಲಯ ತನ್ನಲ್ಲಿ ಅನುದಾರವಾಗಿ ವರ್ತಿಸುತ್ತಿದೆ ಎಂದು ರಾಗ ತೆಗೆದಿದ್ದಾರೆ! ಕೇಜ್ರಿವಾಲ್ ಬಂಧನದ ಕಾರಣದಿಂದಾಗಿ ಅವರ ಬಗೆಗೆ ಸಾರ್ವಜನಿಕರಲ್ಲಿ ಸಹಾನುಭೂತಿಯ ಮಹಾಪೂರವೇನೂ ಹರಿಯಲಿಲ್ಲ. ಅವರನ್ನು ಬೆಂಬಲಿಸಿ ದಾಖಲೆಗಾಗಿ ಪ್ರತಿಭಟನೆ ಮಾಡಿದ ಹಲಕೆಲವರು ಅವರು ಸಾಕಿಕೊಂಡಿರುವ ಬಾಡಿಗೆ ಬಂಟರಷ್ಟೆ.
ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂಬ ಮಾತು ಆಗಾಗ ಕರ್ಣತಾಡಿತವಾಗುತ್ತಿರುತ್ತದೆ. ಈಚಿನ ದಿನಗಳಲ್ಲಿ ಆ ಸೂತ್ರದ ವ್ಯಾಪ್ತಿ ಹೆಚ್ಚಿದೆಯೆನಿಸುತ್ತಿದೆ. ಈಗ ಭ್ರಷ್ಟಾಚಾರವೂ ಪಾರದರ್ಶಕವಾಗಿಬಿಟ್ಟಿದೆ. ಇದನ್ನು ಸಾಧಿಸಿರುವವರು ೨೦೧೫ರಿಂದ ದೆಹಲಿಯ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್. ಇವರ ಭ್ರಷ್ಟಾಚಾರಗಳು ಎಲ್ಲರಿಗೂ ಕಣ್ಣಿಗೆ ಎದ್ದುಕಾಣುವಂತೆಯೇ ನಡೆದಿವೆ – ಸಂದೇಹಕ್ಕೆ ಅವಕಾಶವೇ ಇಲ್ಲದಂತೆ. ಹೀಗಿದ್ದೂ ಅವರಿಗೆ ದಂಡನೆಯಾಗದಿರುವುದನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಾಕಷ್ಟು ಬಲಯುತವಾಗಿಲ್ಲದುದರಿಂದ ಎಂದು ವಿಷಾದದಿಂದ ಗಮನಿಸಬೇಕಾಗಿದೆ.
For who would bear the
whips and scorns of time,
The oppressor’s wrong,
the law’s delay,
The insolence of office?
– ಎಂದು ಷೇಕ್ಸ್ಪಿಯರ್ ನಾಲ್ಕು ನೂರು ವರ್ಷ ಹಿಂದೆಯೇ ಪ್ರಲಾಪ ಮಾಡಿದ್ದ. ಈ ನಿಧಾನಗತಿಗೆ ತಾಂತ್ರಿಕ (ಮತ್ತು ರಾಜತಾಂತ್ರಿಕ) ಕಾರಣಗಳು ಇಲ್ಲದಿಲ್ಲ.
ಅಧಃಪಾತ
ಕೇಜ್ರಿವಾಲ್-ಪ್ರವರ್ತಿತ ಅಸಹ್ಯ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಂದೆರಡನ್ನು ಸ್ಮರಿಸುವುದಕ್ಕೆ ಮೊದಲು ಕೇಜ್ರಿವಾಲ್ ವ್ಯಕ್ತಿತ್ವದ ನೈತಿಕ ಅಧಃಪಾತಕ್ಕೆ ಕನ್ನಡಿ ಹಿಡಿಯುವ ಮತ್ತು ಸರ್ವವಿದಿತವೇ ಆಗಿರುವ ಒಂದೆರಡು ಜಾಹೀರು ಸಂಗತಿಗಳನ್ನು ನೆನೆಯಬಹುದು.
- ಭ್ರಷ್ಟಾಚಾರವಿರೋಧಿ ಆಂದೋಲನವನ್ನು ಉಪಕ್ರಮಿಸಿ ಇಡೀ ದೇಶದ ಗಮನಸೆಳೆದಿದ್ದ ದಿನಗಳಲ್ಲಿ ಕೇಜ್ರಿವಾಲ್ ಘೋಷಿಸಿದ್ದರು – ತಾವು ಎಂದೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಲಾಭದಾಯಕ ಸ್ಥಾನಗಳಿಂದ ದೂರ ಇರುತ್ತೇನೆ – ಎಂದು. ಅಣ್ಣಾ ಹಜಾರೆ, ಸಂತೋಷ್ ಹೆಗ್ಡೆಯಂತಹ ಹಲವಾರು ಮಂದಿ ಗಣ್ಯರ ಬೆಂಬಲ ಅವರಿಗೆ ಬಂದಿದ್ದುದು ಇದೇ ಕಾರಣದಿಂದ. ಇಂತಹ ಎಲ್ಲ ವಾಗ್ದಾನಗಳನ್ನೂ ಅವರು ಗಾಳಿಗೆ ತೂರಿದರು.
- ದೆಹಲಿಯ ಮುಖ್ಯಮಂತ್ರಿಯಾದೊಡನೆ ಕೇಜ್ರಿವಾಲ್ ಘೋಷಿಸಿದ್ದುದು – ತಾವು ಸರ್ಕಾರೀ ವಸತಿಸೌಲಭ್ಯಗಳನ್ನು ಬಳಸುವುದಿಲ್ಲ – ಎಂದು. ಸರ್ಕಾರೀ ವಸತಿಯನ್ನು ತಾನು ಬಳಸುವುದಿಲ್ಲವೆಂದು ಘೋಷಿಸಿದ್ದ ಕೇಜ್ರಿವಾಲ್ರ ಈಗಿನ ನಿವಾಸದ (ದೆಹಲಿ ನಡುಭಾಗದ ‘ಶೀಷ ಮಹಲ್’) ವೈಭವ ಯಾವ ಅರಮನೆಯದಕ್ಕಿಂತ ಕಡಮೆಯಿಲ್ಲ.
- ಸರ್ಕಾರೀ ವಾಹನಗಳನ್ನು ತಾವು ಬಳಸುವುದಿಲ್ಲ – ಎಂದೂ ಕೇಜ್ರಿವಾಲ್ ಘೋಷಿಸಿದ್ದರು. ಈಗ ಅವರು ಸಂಚರಿಸುವುದು ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್ ನೀಡಿರುವ ಲಗ್ಜುರಿ ವಿಮಾನದಲ್ಲಿ ಮಾತ್ರ.
- ನವೋದಿತ ಆಮ್ ಆದ್ಮಿ ಪಕ್ಷದಿಂದ ಅಣ್ಣಾ ಹಜಾರೆ ದೂರವಾದಲ್ಲಿ ತಾವೂ ದೂರ ಉಳಿಯುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಇಂತಹ ಯಾವುದೇ ಮಾತನ್ನು ಅವರು ಉಳಿಸಿಕೊಳ್ಳಲಿಲ್ಲ.
ಅಂದು, ಇಂದು
ಪಟ್ಟಿಯನ್ನು ಬೆಳೆಸಬಹುದು, ಅದು ಅನಾವಶ್ಯಕ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ: ಭ್ರಷ್ಟಾಚಾರವಿರೋಧಿ ಧ್ವನಿಯನ್ನೆಬ್ಬಿಸಿ ಹೆಸರು ಮಾಡಿದ ಕೇಜ್ರಿವಾಲ್ ಕೇವಲ ಐದಾರು ವರ್ಷಗಳಲ್ಲಿ ಸ್ವಯಂ ಭ್ರಷ್ಟತನದ ಹೊಸ ದಾಖಲೆಗಳನ್ನೇ ನಿರ್ಮಿಸಿರುವುದಲ್ಲದೆ ನ್ಯಾಯಾಂಗ ಸೂಚನೆಗಳನ್ನು ಧಿಕ್ಕರಿಸಿ ಭಂಡತನದ ಹೊಸ ದಾಖಲೆಗಳನ್ನೂ ಸೃಷ್ಟಿಸಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಜಾಹೀರಾತುಗಳನ್ನು ವಿತರಿಸುವುದರ ಮೂಲಕ ಮಾಧ್ಯಮಗಳ ಸಹಾನುಭೂತಿಯನ್ನು ಗಳಿಸುವ ಆಮ್ ಆದ್ಮಿ ಪಕ್ಷದ ಪ್ರಯಾಸಗಳನ್ನು ಕುರಿತು ಹೇಳುವ ಆವಶ್ಯಕತೆಯಿಲ್ಲ.
ಕೇಜ್ರಿವಾಲ್ ಅಪರಾಧಗಳಿಗೆ ದಂಡನೆ ಆದೀತೆ, ಯಾವಾಗ ಆದೀತು, ಎಷ್ಟು ಮಾತ್ರ ಆದೀತು – ಇವೆಲ್ಲ ಅನಿಶ್ಚಿತಗಳು. ಆದರೆ ಅವರ ಅಸೀಮ ಭ್ರಷ್ಟತೆಯಂತೂ ಜನತಾ ನ್ಯಾಯಾಲಯದ ಕಟಾಂಜನದಲ್ಲಿ ಸಂದೇಹಾತೀತವಾಗಿ ಸಾಬೀತುಗೊಂಡಿವೆ. ಒಂದು ವೇಳೆ ತಾಂತ್ರಿಕ ಸೂಕ್ಷ್ಮತೆಗಳ ಆಸರೆ ಪಡೆದು ಕೇಜ್ರಿವಾಲ್ ನುಣುಚಿಕೊಂಡರೂ ಅವರು ಗಳಿಸಿಕೊಂಡಿರುವ ಕಲಂಕ ಶಾಶ್ವತವಾಗಿ ಉಳಿಯುತ್ತದೆ. ನ್ಯಾಯವಾಗಿ ಜೈಲಿನಲ್ಲಿ ಇರಬೇಕಾಗಿದ್ದರೂ ನ್ಯಾಯಾಂಗೀಯ ದುರ್ಬಲತೆ-ಅಪರ್ಯಾಪ್ತತೆಗಳ ಲಾಭ ಪಡೆದು ರಾಜಾರೋಷವಾಗಿ ಮೆರೆಯುತ್ತಿರುವ ಮಹಾಶಯರಿಗೆ ನಮ್ಮಲ್ಲಿ ಕೊರತೆಯಿಲ್ಲ.
ಈಗ ಕೇಜ್ರಿವಾಲ್ ಭ್ರಷ್ಟತೆಯ ಒಂದೆರಡು ಪ್ರಮುಖ ಪ್ರಕರಣಗಳನ್ನು ಸಂಕ್ಷಿಪ್ತವಾಗಿ ಮೆಲುಕುಹಾಕೋಣ. ಬೆಳಕಿಗೆ ಬಾರದ ಪ್ರಕರಣಗಳೂ ಇದ್ದಾವು.
ಅಬ್ಕಾರಿ ನೀತಿಯ ಹಗರಣ
ಕೇಂದ್ರಸರ್ಕಾರದ ಬಳಿ ಇರುವ ಗಟ್ಟಿ ಸಾಕ್ಷ್ಯಗಳಂತೆ ಕೇಜ್ರಿವಾಲರೇ ನೇರವಾಗಿ ಸಂಚಾಲನೆ ಮಾಡಿರುವ ಒಂದು ಪ್ರಮುಖ ಪ್ರಕರಣ (೧೯೨೧-೨೨ರ) ‘ದೆಹಲಿ ಅಬ್ಕಾರಿ ಘೋಟಾ’. ತಮಗೆ ಹವಿರ್ಭಾಗ ದೊರೆಯುವಂತೆ ಮಾತನಾಡಿಕೊಂಡು ಆಯ್ದ ಸಗಟು ಮದ್ಯ ವ್ಯಾಪಾರಿಗಳಿಗೂ ಮಧ್ಯಸ್ಥಗಾರರಿಗೂ ಹೆಚ್ಚಿನ ಲಾಭ ಬರುವಂತೆ ದೆಹಲಿ ಅಬ್ಕಾರಿ ಧೋರಣೆಯನ್ನು ಕೇಜ್ರಿವಾಲ್ ರೂಪಿಸಿದರು. ಫಲಾನುಭವಿಗಳಲ್ಲಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರ ಪುತ್ರಿ (‘ಸೌತ್ ಗ್ರೂಪ್’ ಎಂಬ ಕಂಪೆನಿ ಸಮೂಹದ ಮಾಲಿಕರು) ಕೆ. ಕವಿತಾ ಮೊದಲಾದ ಹಲವರು ಇದ್ದಾರೆ. ಈ ವ್ಯವಹಾರದಿಂದ ಶೇಖರಿಸಿಕೊಂಡ ರೂ. ೧೦೦ ಕೋಟಿ ಹಣವನ್ನು ೨೦೨೨ರ ಗೋವಾ ಚುನಾವಣೆಯಲ್ಲಿ ತೊಡಗಿಸಲಾಗಿತ್ತು. ತಾವು ಪಡೆದ ಲಾಭಾಂಶಕ್ಕೆ ಪ್ರತಿಯಾಗಿ ಕೇಜ್ರಿವಾಲ್ ತಮಗೆ ಅನುಕೂಲರಾಗಿದ್ದ ಸಗಟು ಮದ್ಯ ವ್ಯಾಪಾರಿಗಳಿಗೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಮದ್ಯ ಮಾರಾಟ ಪರವಾನಗಿಗಳನ್ನು ವಿತರಿಸಿದರು. ಈ ಕುಟಿಲ ವ್ಯವಹಾರಸರಣಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಸಾವಿರ ಕೋಟಿ ನಷ್ಟವಾಗಿರಬಹುದೆಂಬುದನ್ನು ಊಹೆ ಮಾಡಬಹುದು.
ಮಾಮೂಲು ಪಲ್ಲವಿಯಂತೆ ವಿಪಕ್ಷಗಳು ‘ಇದೆಲ್ಲ ಕೇಜ್ರಿವಾಲರ ವಿರುದ್ಧದ ರಾಜಕೀಯ-ಪ್ರೇರಿತ ಆರೋಪಗಳು’ ಎಂದು ಈಗ ರಾಗ ಎಳೆದಿರುವುದು ಸಹಜ. ಆದರೆ ‘ಕೀಲಕ ವ್ಯಕ್ತಿಯಾದ ಕೇಜ್ರಿವಾಲರನ್ನೇಕೆ ವಿಚಾರಣೆಗೆ ಒಳಪಡಿಸಿಲ್ಲ?’ ಎಂದು ಸರ್ವೋಚ್ಚ ನ್ಯಾಯಾಲಯವೇ ೨೦೨೩ ಅಕ್ಟೋಬರಿನಷ್ಟು ಹಿಂದೆಯೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಕೇಜ್ರಿವಾಲ್ ನಡೆಸಿದ ದುರ್ವ್ಯವಹಾರಗಳು ಬೆಳಕಿಗೆ ಬಂದದ್ದು ೨೦೨೨ರಲ್ಲಿಯೇ – ಬಿ.ಜೆ.ಪಿ. ಪ್ರಮುಖ ಮಂಜಿಂದರ್ಸಿಂಗ್ ಸಿರ್ಸಾ ಅವರು ಅದನ್ನು ಸ್ಫೋಟ ಮಾಡಿ ರಾಜ್ಯಪಾಲ ವಿನಯ್ಕುಮಾರ್ ಸ್ಯಾಕ್ಸೆನಾ ಅವರ ಗಮನಕ್ಕೆ ತಂದಾಗ. ಅನಂತರವೇ ಸಿ.ಬಿ.ಐ. ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಗೆ ತೊಡಗಿದ್ದು.
ಅನ್ಯ ಅವ್ಯವಹಾರಗಳು
ಅಬ್ಕಾರಿ ಪ್ರಕರಣ ಕೇಜ್ರಿವಾಲ್-ಚಾಲಿತ ಭ್ರಷ್ಟಾಚಾರಗಳಲ್ಲಿ ಒಂದು ಮಾತ್ರ. ಬೇರೆಯೂ ಹಲವಾರಿವೆ. ನಿದರ್ಶನಕ್ಕೆ: ೨೦೧೭ರಷ್ಟು ಹಿಂದಿನಿಂದ ಕೇಜ್ರಿವಾಲ್ ಕೂಟವು ದೆಹಲಿಯ ಜಲ ನಿಗಮದ ಹೆಸರಿನಲ್ಲಿ ನಡೆಸಿರುವ ದುರ್ವ್ಯವಹಾರ ರೂ. ೩,೭೩೫ ಕೋಟಿಯಷ್ಟರದು. ನೀರಿನ ಟ್ಯಾಂಕರ್ ಮಾಫಿಯಾಗಳ ಜೊತೆ ಶಾಮೀಲಾಗಿ ಕೇಜ್ರಿವಾಲ್ ನಡೆಸಿದ ಅವ್ಯವಹಾರ ಅದು.
ತನ್ನ ಹೆಮ್ಮೆಯ ಸಾಧನೆಯೆಂದು ಕೇಜ್ರಿವಾಲ್ ಸರ್ಕಾರ ಕೊಚ್ಚಿಕೊಂಡಿದ್ದ ಆರೋಗ್ಯ ಸೇವಾ ಕ್ಷೇತ್ರದಲ್ಲಿಯೂ ಅಸ್ತಿತ್ವವಿಲ್ಲದ ಖೋಟಾ ಫಲಾನುಭವಿಗಳ ಹೆಸರುಗಳನ್ನು ನಮೂದಿಸಿ ಡಯಾಗ್ನಾಸ್ಟಿಕ್ ಕಂಪೆನಿಗಳ ಜೊತೆ ಕೇಜ್ರಿವಾಲ್ ಕೈ ಮಿಲಾಯಿಸಿ ಅಪಾರ ಹಣವನ್ನು ನುಂಗಿಹಾಕಿದ್ದಾರೆಂಬುದು ಪುರಾವೆಗೊಂಡಿದೆ.
ಈ ಎಲ್ಲ ಪ್ರಕರಣಗಳ ಬಗೆಗೆ ಸಮೂಲ ತನಿಖೆಯಾಗಬೇಕೆಂದು ಮೊದಲಿಗೆ ಹುಯಿಲೆಬ್ಬಿಸಿದ್ದ ವಲಯಗಳಲ್ಲಿ ಕಾಂಗ್ರೆಸ್ ಪಕ್ಷವೂ ಕೈಜೋಡಿಸಿತ್ತು. ಈಗ ಅದೇ ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಸಂಗಡಿಕೆ ಬೆಳೆಸಿಕೊಂಡಿರುವುದರಿಂದ ಕೇಜ್ರಿವಾಲ್ರನ್ನು ಬೆಂಬಲಿಸುತ್ತಿದೆ. ತತ್ತ್ವಹೀನ ನಂಟಸ್ತಿಕೆಗಳಿಗಾಗಿ ಕಾಂಗ್ರೆಸ್ ತುಂಬಾ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ. ಹೇಗಾದರೂ ಬಿ.ಜೆ.ಪಿ. ವಿರುದ್ಧ ಕೂಟವೊಂದನ್ನು ಘಟಿಸಲೆಳಸಿರುವ ಕಾಂಗ್ರೆಸಿನ ಲೆಕ್ಕಾಚಾರ ಅದರ ಬುಡಕ್ಕೇ ಮಾರಕವಾಗುತ್ತಿದೆ. ಕೇಜ್ರಿವಾಲರಾದರೋ ‘ಐ.ಎನ್.ಡಿ.ಐ.ಎ.’ ಕೂಟದಲ್ಲಿ ಕಾಂಗ್ರೆಸಿನ ನೇತೃತ್ವವನ್ನೇ ತಿರಸ್ಕರಿಸಿದ್ದಾರೆ.
ವಿಪಕ್ಷಗಳ ವರ್ತನೆ
ಭ್ರಷ್ಟಾಚಾರವಿರೋಧಿ ಅಭಿಯಾನದ ನೂತನ ಹರಿಕಾರರೆಂದು ಹೆಸರು ಗಳಿಸಿ ಐದಾರು ವರ್ಷಗಳೊಳಗೇ ಶಿಖರಪ್ರಾಯ ಭ್ರಷ್ಟತನಗಳ ಪ್ರವರ್ತಕರಾಗಿ ಅರವಿಂದ್ ಕೇಜ್ರಿವಾಲ್ ಹೊಮ್ಮಿದುದು ಈಚಿನ ಇತಿಹಾಸದ ಒಂದು ವಿಷಾದದ ಗಾಥೆ. ತಮ್ಮ ರಾಜಕೀಯ ಅಸಹಾಯತೆಗಳಿಂದಾಗಿ ಈಗ ಕೇಜ್ರಿವಾಲರ ಗುಣಗಾನ ಮಾಡುತ್ತ ಕೇಂದ್ರಸರ್ಕಾರದ ನ್ಯಾಯಾಂಗೀಯ ನಡೆಗಳ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ಮೊದಲಾದ ಹತಪ್ರಭ ಪಕ್ಷಗಳ ವರ್ತನೆಯೂ ಅಷ್ಟೆ ಅಸಹ್ಯ ಹುಟ್ಟಿಸುತ್ತಿದೆ. ‘The kingpin and key conspirator of the Delhi excise scam’ ಎಂಬ ಪ್ರಶಸ್ತಿಗೆ ಭಾಜನರಾಗಿರುವ ಕೇಜ್ರಿವಾಲ್ರ ಬೆಂಬಲಕ್ಕೆ ವಿಪಕ್ಷಗಳು ಧಾವಿಸಿರುವುದು ಕೇಜ್ರಿವಾಲರ ಅಪರಾಧಗಳಷ್ಟೆ ಗರ್ಹಣೀಯ ನಡವಳಿಯಾಗಿದೆ. ಕೇಜ್ರಿವಾಲ್ರ ಅವ್ಯವಹಾರಗಳ ಫಲಾನುಭವಿಯಾದ ‘ಸೌತ್ ಗ್ರೂಪ್’ ಪ್ರಮುಖರಾದ ಕೆ. ಕವಿತಾರಂತೂ ಕೇಜ್ರಿವಾಲ್ರ ಹಲವು ನಿಕಟವರ್ತಿಗಳಂತೆ (ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ, ಸಂವಹನಾಧಿಕಾರಿ ವಿಜಯ್ ನಾಯರ್, ಮಾಜಿ ಸಚಿವ ಸತ್ಯೇಂದ್ರ ಜೈನ್ ಇತ್ಯಾದಿ) ಈಗಾಗಲೆ ಸೆರೆಮನೆ ಸೇರಿದ್ದಾರೆ. ತಮ್ಮ ಅಕಾರ್ಯಗಳ ಸಾಕ್ಷ್ಯಗಳನ್ನು ಅದೃಶ್ಯವಾಗಿಸಲು ಕೇಜ್ರಿವಾಲ್ರ ಆಪ್ತ ಸಹಾಯಕ ಬಿ. ಭವ್ಕುಮಾರ್ ೧೭೦ ಫೋನ್ಗಳನ್ನು ಧ್ವಂಸ ಮಾಡಿರುವುದು ಸಾಕ್ಷ್ಯಪಟ್ಟಿದೆ. ಪಂಚಾಂಗ ಸುಟ್ಟರೆ ನಕ್ಷತ್ರಗಳು ಹೋದಾವೆ?
ಸಮಯಸಾರ್ಧಕತೆ
ಉರಿವ ಮನೆಯಲ್ಲಿ ಮೈ ಕಾಯಿಸಿಕೊಳ್ಳುವಂತೆ ಅಮೆರಿಕ-ಜರ್ಮನಿ ಸರ್ಕಾರಗಳು ಕೇಜ್ರಿವಾಲ್ರ ಪರ ಧ್ವನಿಯೆತ್ತಿರುವುದು ಅವುಗಳ ಸ್ವಭಾವಕ್ಕೆ ಅನುಗುಣವಾಗಿಯೆ ಇದೆ.
ಕೇಂದ್ರಸರ್ಕಾರ ತನ್ನನ್ನು ಕೊಲ್ಲಲು ಉದ್ದೇಶಿಸಿದೆ, ಬಂಧನದಲ್ಲಿ ತನ್ನ ಸ್ವಾಸ್ಥö್ಯಕ್ಕೆ ಗಮನ ನೀಡುತ್ತಿಲ್ಲ – ಮೊದಲಾದ ಕೇಜ್ರಿವಾಲರ ಹಳಸಲು ಅಪಲಾಪಗಳಂತೂ ಬಾಲಿಶ ಮಾತ್ರವಲ್ಲದೆ ಜುಗುಪ್ಸೆ ತರುತ್ತಿವೆ.
ಕೇಜ್ರಿವಾಲ್ರ ಅಕಾರ್ಯಗಳಿಂದಾಗಿ ಅವರದು ಮಾತ್ರವಲ್ಲದೆ ಉಳಿದ ಅನೇಕರ ನಿಜವಾದ ಬಣ್ಣವೂ ಬಯಲಾಗಿದೆ.
ಆದರೂ ಕಾಂಗ್ರೆಸ್ ನಂಟಸ್ತಿಕೆ ಮೊದಲಾದ ಆನುಕೂಲ್ಯಗಳನ್ನು ಬಳಸಿಕೊಂಡು ಕೇಜ್ರಿವಾಲ್ ಬೆಳೆಸಿಕೊಂಡಿರುವ ಪರಿವಾರ ಕಡಮೆಯದಲ್ಲ.
ಒಂದಾದ ಮೇಲೊಂದು ಸಮನ್ಸ್ಗಳನ್ನು ಕಸವಾಗಿ ಕಂಡ ಕೇಜ್ರಿವಾಲ್ ಈಗ ತನ್ನ ಹೇಳಿಕೆಗೆ ಅವಕಾಶ ನೀಡಲಾಗಿಲ್ಲ ಎಂದು ದೂರುತ್ತಿದ್ದಾರೆ! ಈ ತಾಂತ್ರಿಕ ದೊಂಬರಾಟಗಳು ಸಾರ್ವಜನಿಕರನ್ನು ಆಯಾಸಗೊಳಿಸುತ್ತಿವೆ. ಸರಣಿ ಸಮನ್ಸ್ಗಳನ್ನೆಲ್ಲ ಗಾಳಿಗೆ ತೂರುತ್ತ ಬಂದ ಈತ ಈಗ ಜಾರಿ ನಿರ್ದೇಶನಾಲಯ ತನ್ನಲ್ಲಿ ಅನುದಾರವಾಗಿ ವರ್ತಿಸುತ್ತಿದೆ ಎಂದು ರಾಗ ತೆಗೆದಿದ್ದಾರೆ!
ಕೇಜ್ರಿವಾಲ್ ಬಂಧನದ ಕಾರಣದಿಂದಾಗಿ ಅವರ ಬಗೆಗೆ ಸಾರ್ವಜನಿಕರಲ್ಲಿ ಸಹಾನುಭೂತಿಯ ಮಹಾಪೂರವೇನೂ ಹರಿಯಲಿಲ್ಲ. ಅವರನ್ನು ಬೆಂಬಲಿಸಿ ದಾಖಲೆಗಾಗಿ ಪ್ರತಿಭಟನೆ ಮಾಡಿದ ಹಲಕೆಲವರು ಅವರು ಸಾಕಿಕೊಂಡಿರುವ ಬಾಡಿಗೆ ಬಂಟರಷ್ಟೆ. ಪ್ರತಿಯಾಗಿ ಕೇಜ್ರಿವಾಲ್ರಿಗೆ ದಂಡನೆಯಾಗಲೇಬೇಕೆಂದು ಆಗ್ರಹಿಸಲು ಸೇರಿದ ಜನಸ್ತೋಮವೇ ದೊಡ್ಡದಾಗಿತ್ತು. ಅಪಾರ ಹಣ ನುಂಗಿಹಾಕಿರುವುದಕ್ಕೆ ಮಾತ್ರವಲ್ಲದೆ ನ್ಯಾಯಾಂಗದ ಬಗೆಗೆ ಔದಾಸೀನ್ಯ, ಸಮನ್ಸ್ ಗಳನ್ನು ಉದಾಸೀನ ಮಾಡಿರುವುದು ಮೊದಲಾದ ಅಕ್ಷಮ್ಯ ಅಪರಾಧಗಳಿಗೂ ಈ ಭ್ರಷ್ಟ ವ್ಯಕ್ತಿಗೆ ದಂಡನೆ ಸಲ್ಲಲೇಬೇಕು. ಹಾಗೆ ಆದಲ್ಲಿ ಮಾತ್ರ ದೇಶದ ನ್ಯಾಯಾಂಗವ್ಯವಸ್ಥೆಯ ಬಗೆಗೆ ಜನತೆಯ ವಿಶ್ವಾಸ ದೃಢಗೊಂಡೀತು