ಹಿಂದಿ ರಾಷ್ಟ್ರಭಾಷೆಯಾಗಿ ಸ್ಥಾನ, ಪ್ರಾದೇಶಿಕ ಅಸಮಾನತೆ, ರಾಜಕೀಯ ಮತ್ತು ಆಡಳಿತ ಪ್ರಾತಿನಿಧ್ಯ, ಸಂಪನ್ಮೂಲ ಹಂಚಿಕೆ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರ ಹಾಗೂ ದಕ್ಷಿಣ ರಾಜ್ಯಗಳ ನಡುವೆ ತಿಕ್ಕಾಟವಿರುವಂತೆ ಬಾಲಿವುಡ್ ಹಾಗೂ ಭಾರತದ ದಕ್ಷಿಣ ರಾಜ್ಯಗಳ ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್ಗಳ ನಡುವೆಯೂ ಬಹಳ ಹಿಂದಿನಿಂದಲೂ ತಿಕ್ಕಾಟ, ಅಸಹನೆಯೊಂದು ಇದ್ದೇ ಇದೆ. ಹಾಗೆಂದು, ವಾತಾವರಣ ತೀರಾ ಕಲುಷಿತಗೊಂಡಿದೆ ಎಂದರ್ಥವಲ್ಲ. ಆದರೆ ಕೆಲ ವರ್ಷಗಳಿಂದ ದಕ್ಷಿಣದಲ್ಲಿ ತಯಾರಾದ ಚಿತ್ರಗಳು ಉತ್ತರ ಭಾರತದಲ್ಲಿ ದಂಡಯಾತ್ರೆ ಮುಗಿಸಿಕೊಂಡು, ವಿಶ್ವದ ಮೂಲೆಮೂಲೆಗೂ ತಲಪಿದ ಮೇಲೆ ಈ ಅಸಹನೆ ಬಾಲಿವುಡ್ನಲ್ಲಿ ಕೊಂಚ ಜಾಸ್ತಿಯಾಗಿಯೇ ಕಾಣಿಸಿಕೊಂಡಿತು. ಬಾಲಿವುಡ್ಡನ್ನೇ ಭಾರತೀಯ ಚಿತ್ರರಂಗವೆಂದು ಬಿಂಬಿಸಿದ್ದು, ದಕ್ಷಿಣ ಚಿತ್ರರಂಗದ ದಿಗ್ಗಜ ನಟರು, ನಿರ್ದೇಶಕರು ಹಾಗೂ ಅತ್ಯುತ್ತಮ ಚಲನಚಿತ್ರಗಳನ್ನು ಉಪೇಕ್ಷಿಸಿದ್ದು, ಬಾಲಿವುಡ್ ಎಂದರೆ ರಾಷ್ಟ್ರೀಯ ಮತ್ತು ಕನ್ನಡ–ತಮಿಳು–ತೆಲುಗು–ಮಲಯಾಳಂ ಇವಕ್ಕೆಲ್ಲ `ರೀಜನಲ್ ಮಾರ್ಕೆಟ್’ ಎಂಬ ಹಣೆಪಟ್ಟಿ ಕಟ್ಟಿದ್ದು, ಇತ್ಯಾದಿ ಕಥನಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ಜೊಳ್ಳೆಂದು ಸಾಬೀತಾಗಿದೆ.
೨೦೨೨ರ ಏಪ್ರಿಲ್ ತಿಂಗಳಿನ ಕೊನೆಯ ವಾರದಲ್ಲಿ ಭಾರತದ ಉತ್ತರ ಹಾಗೂ ದಕ್ಷಿಣಭಾಗದ ಇಬ್ಬರು ಸ್ಟಾರ್ ನಟರ ನಡುವೆ ‘ಟ್ಟೀಟ್ ವಾರ್’ ಒಂದು ನಡೆಯಿತು. ಅಂದು ಕೆಜಿಎಫ್ ಚಾಪ್ಟರ್-೨ ಸಿನೆಮಾದ ಯಶಸ್ಸಿನ ಕಾರ್ಯಕ್ರಮವೊಂದರಲ್ಲಿ ‘ಪ್ಯಾನ್ ಇಂಡಿಯಾ’ ಚಿತ್ರಗಳ ಮಾತು ಬಂತು. ಆಗ ಕನ್ನಡದ ಖ್ಯಾತ ನಟ ಸುದೀಪ, “ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಹಿಂದಿಯವರೇ ತೆಲುಗು ತಮಿಳಿನ ಸಿನೆಮಾಗಳನ್ನು ಡಬ್ ಮಾಡಿಕೊಂಡು ಒದ್ದಾಡುತ್ತಿದ್ದಾರೆ ನಾವು (ಕನ್ನಡದವರು) ಕೇವಲ ಚಿತ್ರಗಳನ್ನು ಮಾಡುತ್ತಿದ್ದೇವೆ, ಅವು ಎಲ್ಲ ಕಡೆಯೂ ತಲಪುತ್ತಿವೆ” ಎಂದರು. ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬ ಮಾತು ಹಿಂದಿಯ ಮತ್ತೊಬ್ಬ ನಟ ಅಜಯ್ ದೇವಗನ್ ಅವರಿಗೆ ಸರಿ ಬರಲಿಲ್ಲ. ಅವರು ಸುದೀಪರನ್ನು ಟ್ಯಾಗ್ ಮಾಡಿ, “ನಿಮ್ಮ ಪ್ರಕಾರ ಹಿಂದಿ ರಾಷ್ಟ್ರಭಾಷೆ ಅಲ್ಲದಿದ್ದರೆ, ನೀವು ನಿಮ್ಮ ಮಾತೃಭಾಷೆಯ ಚಿತ್ರಗಳನ್ನು ಹಿಂದಿಯಲ್ಲೇಕೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ರಾಷ್ಟ್ರಭಾಷೆ ಆಗಿತ್ತು, ಆಗಿದೆ ಮತ್ತು ಆಗಿರಲಿದೆ” ಎಂದು ಹಿಂದಿಯಲ್ಲಿ ದೇವನಾಗರಿ ಲಿಪಿ ಬಳಸಿ ಟ್ವೀಟ್ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ, “ನಾನು ಯಾವ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಹೇಳಿದ್ದೇನೆ ಎಂದು ನೀವು ಅರ್ಥ ಮಾಡಿಕೊಂಡಂತಿಲ್ಲ. ನಾನು ನಿಮ್ಮನ್ನು ಮುಖತಃ ಭೇಟಿ ಮಾಡಿದಾಗ ನನ್ನ ಅಭಿಪ್ರಾಯವನ್ನು ವಿವರಿಸುತ್ತೇನೆ. ಯಾರನ್ನೂ ನೋಯಿಸುವ ಅಥವಾ ವಿವಾದ ಹುಟ್ಟುಹಾಕುವ ಉದ್ದೇಶ ನನಗಿಲ್ಲ” ಎಂದರು. ಮುಂದುವರಿದು ಮತ್ತೊಂದು ಟ್ಟೀಟ್ ಮಾಡಿದ ಸುದೀಪ, “ಅಜಯ್ ದೇವಗನ್ ಸರ್, ನೀವು ಹಿಂದಿ ಲಿಪಿಯಲ್ಲಿ ಕಳಿಸಿದ ಟ್ವೀಟ್ ನನಗರ್ಥವಾಯಿತು. ಯಾಕೆಂದರೆ ನಾವೆಲ್ಲರೂ ಹಿಂದಿಯನ್ನು ಗೌರವಿಸಿ, ಪ್ರೀತಿಸಿ, ಅದನ್ನು ಕಲಿತಿದ್ದೇವೆ… ಏನೂ ಅಂದುಕೊಳ್ಳಬೇಡಿ, ಆದರೆ ತಮಗೆ ನಾನು ಒಂದು ವೇಳೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಕಳಿಸಿದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು, ನಾವು ಕೂಡ ಭಾರತಕ್ಕೆ ಸೇರಿದವರಲ್ಲವೆ?’’ ಎಂದು ಟ್ವೀಟ್ ಮಾಡಿದರು. ಸುದೀಪರ ಈ ಟ್ವೀಟ್ಗೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಯಿತಲ್ಲದೆ, ನಟಿ ರಮ್ಯಾ, ಆಶಿಕಾ ರಂಗನಾಥ್, ನೀನಾಸಂ ಸತೀಶ್, ಮೇಘನಾ ಗಾಂವ್ಕರ್ ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುಂದೆ ಬಂದು ಬೆಂಬಲಿಸಿದರು. ಕೆಲವೇ ತಾಸುಗಳಲ್ಲಿ ಸುದೀಪ ಅವರ ಟ್ಟೀಟನ್ನು ಸುಮಾರು ಹನ್ನೆರಡೂವರೆ ಸಾವಿರ ಜನ ರಿಟ್ವೀಟ್ ಮಾಡಿದರು, ಸಾಲದೆಂಬಂತೆ #hindiisnotnationallanguage #nohindiimposition ಇತ್ಯಾದಿ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆದವು. “ಹೌದು, ನಾನು ನಿಮ್ಮನ್ನು ಅಪಾರ್ಥಮಾಡಿಕೊಂಡಿದ್ದೇನೆ, ನನಗೆ ಈಗ ವಿಷಯ ಅರ್ಥವಾಗಿದೆ’’ ಎಂದು ಅಜಯ್ ದೇವಗನ್ ಟ್ಟೀಟ್ ಮಾಡುವ ಮೂಲಕ ಈ ವಿವಾದ ಅಂತ್ಯವಾಯಿತು.
ಹಿAದಿ ರಾಷ್ಟ್ರಭಾಷೆಯಾಗಿ ಸ್ಥಾನ, ಪ್ರಾದೇಶಿಕ ಅಸಮಾನತೆ, ರಾಜಕೀಯ ಮತ್ತು ಆಡಳಿತ ಪ್ರಾತಿನಿಧ್ಯ, ಸಂಪನ್ಮೂಲ ಹಂಚಿಕೆ ವಿಷಯಗಳಿಗೆ ಸಂಬAಧಿಸಿದAತೆ ಉತ್ತರ ಹಾಗೂ ದಕ್ಷಿಣ ರಾಜ್ಯಗಳ ನಡುವೆ ತಿಕ್ಕಾಟವಿರುವಂತೆ ಬಾಲಿವುಡ್ ಹಾಗೂ ಭಾರತದ ದಕ್ಷಿಣ ರಾಜ್ಯಗಳ ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಮತ್ತು ಮಾಲಿವುಡ್ಗಳ ನಡುವೆ ಬಹಳ ಹಿಂದಿನಿAದಲೂ ತಿಕ್ಕಾಟ, ಅಸಹನೆಯೊಂದು ಇದ್ದೇ ಇದೆ. ಮೇಲೆ ಬರೆದ ಟ್ಟೀಟ್ ವಾರ್ ಈ ತಿಕ್ಕಾಟದ ಒಂದು ಸಣ್ಣ ಉದಾಹರಣೆ ಮಾತ್ರ. ಹಾಗೆಂದು, ವಾತಾವರಣ ತೀರಾ ಕಲುಷಿತಗೊಂಡಿದೆ ಎಂದರ್ಥವಲ್ಲ. ಆದರೆ ಕೆಲ ವರ್ಷಗಳಿಂದ ದಕ್ಷಿಣದಲ್ಲಿ ತಯಾರಾದ ಚಿತ್ರಗಳು ಉತ್ತರ ಭಾರತದಲ್ಲಿ ದಂಡಯಾತ್ರೆ ಮುಗಿಸಿಕೊಂಡು, ವಿಶ್ವದ ಮೂಲೆಮೂಲೆಗೂ ತಲಪಿದ ಮೇಲೆ ಈ ಅಸಹನೆ ಬಾಲಿವುಡ್ನಲ್ಲಿ ಕೊಂಚ ಜಾಸ್ತಿಯಾಗಿಯೇ ಕಾಣಿಸಿಕೊಂಡಿತು. ಬಾಲಿವುಡ್ಡನ್ನೇ ಭಾರತೀಯ ಚಿತ್ರರಂಗವೆಂದು ಬಿಂಬಿಸಿದ್ದು, ದಕ್ಷಿಣ ಚಿತ್ರರಂಗದ ದಿಗ್ಗಜ ನಟರು, ನಿರ್ದೇಶಕರು ಹಾಗೂ ಅತ್ಯುತ್ತಮ ಚಲನಚಿತ್ರಗಳನ್ನು ಉಪೇಕ್ಷಿಸಿದ್ದು, ಬಾಲಿವುಡ್ ಎಂದರೆ ರಾಷ್ಟ್ರೀಯ ಮತ್ತು ಕನ್ನಡ-ತಮಿಳು-ತೆಲುಗು-ಮಲಯಾಳಂ ಇವಕ್ಕೆಲ್ಲ ‘ರೀಜನಲ್ ಮಾರ್ಕೆಟ್’ ಎಂಬ ಹಣೆಪಟ್ಟಿ ಕಟ್ಟಿದ್ದು, ಇತ್ಯಾದಿ ಕಥನಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ಜೊಳ್ಳೆಂದು ಸಾಬೀತಾಗಿವೆ.
ಇದರ ನಡುವೆಯೇ ಬಾಲಿವುಡ್ ಹಾಗೂ ದಕ್ಷಿಣ ಚಲನಚಿತ್ರರಂಗದ ಮಧ್ಯೆ ಇರುವ ಹಲವು ದಶಕಗಳ ಸೌಹಾರ್ದಯುತ ಸಂಬಂಧವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಕಳೆದ ಹಲವು ದಶಕಗಳಲ್ಲಿ ಭಾರತದ ದಕ್ಷಿಣ ರಾಜ್ಯಗಳ ನಿರ್ದೇಶಕರು, ತಂತ್ರಜ್ಞರು ಬಾಲಿವುಡ್ಗೆ ಮಹೋನ್ನತ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ದಕ್ಷಿಣದ ಅನೇಕ ನಿರ್ದೇಶಕರು ಬಾಲಿವುಡ್ಗೆ ಹೋಗಿ ಅತ್ಯುತ್ತಮ ಹಿಂದಿ ಚಲನಚಿತ್ರಗಳನ್ನು ನಿರ್ದೇಶಿದ್ದಾರೆ. ಈ ಪರಂಪರೆ ಭಾರತಕ್ಕೆ ಸ್ವಾತಂತ್ರ್ಯಬಂದಾಗಿನಿಂದಲೇ ಆರಂಭವಾಗಿದೆ. ದಕ್ಷಿಣ ಭಾರತದ ಮೊದಲ ಮೂಕಿ ಸಿನೆಮಾ ಕೀಚಕ ವಧಂ (೧೯೧೮), ಟಾಕಿ ಸಿನೆಮಾಗಳಾದ ತಮಿಳಿನ ಕಾಳಿದಾಸ (೧೯೩೧), ತೆಲುಗಿನ ‘ಭಕ್ತ ಪ್ರಹ್ಲಾದ’ (೧೯೩೨), ಕನ್ನಡದ ‘ಸತಿ ಸುಲೋಚನ’ (೧೯೩೪), ಮಲೆಯಾಳಂನ ‘ಬಾಲನ್’ (೧೯೩೮) ನಿರ್ಮಾಣಗೊಳ್ಳುತ್ತಲೇ ದಕ್ಷಿಣ ರಾಜ್ಯಗಳ ನಿರ್ದೇಶಕರ ಗಮನ ಉತ್ತರ ರಾಜ್ಯಗಳ ಕಡೆ ಹರಿಯಿತು. ಜೆಮಿನಿ ಸ್ಟುಡಿಯೋಸ್ನ ಸುಬ್ರಹ್ಮಣ್ಯ ಶ್ರೀನಿವಾಸನ್ (ಎಸ್.ಎಸ್. ವಾಸನ್) ೧೯೪೮ರಲ್ಲಿಯೇ ಹಿಂದಿ ಚಿತ್ರ ಚಂದ್ರಲೇಖಾ ನಿರ್ಮಿಸಿ, ನಿರ್ದೇಶಿಸಿ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿದರು. ಚಂದ್ರಲೇಖಾ ಮೊದಲು ತಮಿಳಿನಲ್ಲಿ ನಿರ್ಮಾಣಗೊಂಡು, ಅನಂತರ ಹಿಂದಿಯಲ್ಲಿ ಕೆಲ ಬದಲಾವಣೆಗಳೊಂದಿಗೆ ಬಿಡುಗಡೆಗೊಂಡಿತು. ಅಷ್ಟೇ ಅಲ್ಲ, ಈ ತಮಿಳು ಚಿತ್ರ ಅಂತಾರಾಷ್ಟ್ರೀಯ ಮಟ್ಟಕ್ಕೂ ಪಸರಿಸಿತು. ೧೯೫೪ರಲ್ಲಿ ಜಪಾನಿನಲ್ಲಿ ಚಂದ್ರಲೇಖಾ ತೆರೆ ಕಾಣುವುದರೊಂದಿಗೆ, ಜಾಪನೀಸ್ ಭಾಷೆಯಲ್ಲಿ ಬಿಡುಗಡೆಗೊಂಡ ಮೊದಲ ತಮಿಳು ಚಿತ್ರ ಹಾಗೂ ಭಾರತದ ಎರಡನೇ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಯಿತು.
ಅಂದಿನಿಂದ ಆರಂಭವಾದ ದಕ್ಷಿಣ ರಾಜ್ಯಗಳ ನಿರ್ದೇಶಕರ ಈ ಬಾಲಿವುಡ್ ದಿಗ್ವಿಜಯದ ಪ್ರಯಾಣ ಇಂದಿಗೂ ಮುಂದುವರಿದಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಗಳ ನಿರ್ದೇಶಕರು ಬಾಲಿವುಡ್ ಮೀರಿ ಬೆಳೆದುನಿಂತು ಜಾಗತಿಕ ಚಿತ್ರರಂಗದಲ್ಲಿಯೇ ಮನ್ನಣೆ ಗಳಿಸುತ್ತಿದ್ದಾರೆ. ಪತ್ರಕರ್ತ ಹಾಗೂ ಚಿತ್ರರಂಗ ಕ್ಷೇತ್ರದ ಸಂಶೋಧಕ ಚೇತನ್ ನಾಡಿಗೇರ್ ಅವರು ದಾಖಲಿಸುವಂತೆ ಎಲ್.ವಿ. ಪ್ರಸಾದ್, ಬಿ.ಆರ್. ಪಂತುಲು, ಪುಟ್ಟಣ್ಣ ಕಣಗಾಲ್, ಶಂಕರ್ನಾಗ್, ಕಾಶೀನಾಥ್, ಎಸ್.ವಿ. ರಾಜೇಂದ್ರಸಿಂಗ್ ಬಾಬು, ರಾಮಗೋಪಾಲ ವರ್ಮ, ಮಣಿರತ್ನಂ, ಸಿ.ವಿ. ಶ್ರೀಧರ್, ಟಿ. ರಾಮರಾವ್, ಕೆ. ಪ್ರಕಾಶ್ರಾವ್, ದಾಸರಿನಾರಾಯಣರಾವ್, ಎಸ್. ರಾಮನಾಥನ್, ಎ. ಭೀಮ್ಸಿಂಗ್ ಸೇರಿದಂತೆ ಹಲವು ನಿರ್ದೇಶಕರು ಹಿಂದಿ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಚಿತ್ರಗಳಷ್ಟೇ ಅಲ್ಲ, ಆ ಚಿತ್ರಗಳ ಹಾಡುಗಳೂ ಸೂಪರ್ಹಿಟ್ಗಳಾದವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಹಿಂದಿ ಚಲನಚಿತ್ರ ೧೯೭೪ರ ಝೆಹರೀಲಾ ಇನ್ಸಾನ್ನ ‘ಓ ಹನ್ಸಿನಿ…ಮೇರಿ ಹನ್ಸಿನಿ… ಕಹಾಂ ಉಡ ಚಲೀ…’ ಹಾಡನ್ನಂತೂ ಕೇಳದವರೇ ಇಲ್ಲ.
ತಮ್ಮ ಕ್ಲಾಸಿಕ್ ಚಲನಚಿತ್ರಗಳಿಂದ ಹೊಸ ಟ್ರೆಂಡ್ ಸೃಷ್ಟಿಸಿದ್ದ ಪದ್ಮಿನಿ ಪಿಕ್ಚರ್ಸ್ನ ಬಡಗೂರು ರಾಮಕೃಷ್ಣ ಪಂತುಲು (ಬಿ.ಆರ್. ಪಂತುಲು), ಕನ್ನಡದ ಅನಂತರ ಹಿಂದಿಯಲ್ಲೂ ತಮ್ಮ ಸ್ಕೂಲ್ ಮಾಸ್ಟರ್ ನಿರ್ದೇಶಿಸಿದರು. ಅಷ್ಟೇ ಅಲ್ಲ, ಸುಹಾಗ್, ಅಮರ್ ಶಹೀದ್, ದಿಲ್ ತೇರಾ ದೀವಾನಾ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ಶಮ್ಮಿ ಕಪೂರ್, ಮಾಲಾ ಸಿನ್ಹಾ, ಮೆಹಮೂದ್, ಪ್ರಾಣ್ ನಟನೆಯ ‘ದಿಲ್ ತೇರಾ ದಿವಾನಾ’ ಚಿತ್ರವಂತೂ ಅದರ ಹಾಡು ಹಾಗೂ ನಟರ ನಟನೆಯಿಂದ ಹಿಟ್ ಆಯಿತು. ‘ದಿಲ್ ತೇರಾ ದಿವಾನಾ ಹೈ ಸನಮ್, ಮುಝೇ ಕಿತನಾ ಪ್ಯಾರ್ ಹೈ ತುಮಸೇ’ ಹಾಡುಗಳು ಇಂದಿಗೂ ಜನಪ್ರಿಯವಾಗಿರುವುದು ಬಿ.ಆರ್. ಪಂತುಲು ಅವರ ಸೃಜನಶೀಲತೆಗೆ ಸಾಕ್ಷಿ.
ಶಂಕರ್ನಾಗ್ ತಮ್ಮ ಮಿಂಚಿನ ಓಟವನ್ನು ೧೯೮೩ರಲ್ಲಿಯೇ ಹಿಂದಿಯಲ್ಲಿ ‘ಲಾಲಚ್’ ಹೆಸರಿನಲ್ಲಿ ನಿರ್ದೇಶಿಸಿದರು. ಲೋಕನಾಥ್ ಅವರ ಪಾತ್ರವನ್ನು ಹಿಂದಿಯ ಖ್ಯಾತ ವಿಲನ್ ಪ್ರಾಣ್ ನಿರ್ವಹಿಸಿದರೆ, ಅನಂತನಾಗ್ ಪಾತ್ರವನ್ನು ವಿನೋದ್ ಮೆಹ್ರಾ ನಿರ್ವಹಿಸಿದ್ದರು. ಕನ್ನಡದಲ್ಲಿ ಕಳ್ಳನ ಪಾತ್ರವನ್ನು ನಿರ್ವಹಿಸಿದ್ದ ಅನಂತನಾಗ್, ‘ಲಾಲಚ್’ನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ವಹಿಸಿದ್ದರು. ಕನ್ನಡದಲ್ಲಿ ದುಃಖಾಂತ್ಯ ಕಂಡಿದ್ದ ಮಿಂಚಿನ ಓಟಕ್ಕೆ ಹಿಂದಿಯಲ್ಲಿ ಮಾತ್ರ ಸುಖಾಂತ್ಯ ನೀಡಲಾಗಿತ್ತು.
ಇದೇ ವೇಳೆ ಕಾಶಿನಾಥ್ ತಮ್ಮ ಕನ್ನಡದ ಅನುಭವದಿಂದ ಹಿಂದಿಯಲ್ಲೂ ನಿರ್ದೇಶಿಸಿದರು. ಹಿಂದಿಯಲ್ಲಿ ಶೇಖರ್ ಸುಮನ್ ಹಾಗೂ ಪದ್ಮಿನಿ ಕೋಲ್ಹಾಪುರೆ ನಟಿಸಿದರು. ಬಾಲಿವುಡ್ನಲ್ಲಿ ಕೂಡ ಇದಕ್ಕೆ ಅನುಭವ ಎಂದೇ ಹೆಸರಿಡಲಾಗಿತ್ತು.
ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನೆಮಾಗಳಲ್ಲಿ ಎಸ್.ವಿ. ರಾಜೇಂದ್ರಸಿAಗ್ ಬಾಬು ನಿರ್ದೇಶನದ ಅಂಬರೀಷ್ ನಟನೆಯ ‘ಅಂತ’ ಕೂಡ ಒಂದು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಎಚ್.ಕೆ. ಅನಂತರಾವ್ ಅವರ ಕಥೆ ಆಧಾರಿತ ಸಿನೆಮಾ ಇದು. ಅಂಬರೀಷ್ಗೆ ರೆಬೆಲ್ಸ್ಟಾರ್ ಪಟ್ಟ ತಂದುಕೊಟ್ಟ, ಥಿಯೇಟರ್ಗಳಲ್ಲಿ ದಿನಕ್ಕೆ ೮ ರಿಂದ ೯ ಬಾರಿ ಪ್ರದರ್ಶನಗೊಂಡ, ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆಯಲು ಸುದೀರ್ಘ ಹೋರಾಟ ನಡೆಸಿದ, ವೆರೈಟಿ ಎಂಬ ಹಾಲಿವುಡ್ ವಾರಪತ್ರಿಕೆಯಲ್ಲಿ ವಿಮರ್ಶೆ ಪಡೆದುಕೊಂಡ, ೧೯೮೧ರಲ್ಲಿ ಬ್ಲಾಕ್ ಮಾರ್ಕೆಟ್ನಲ್ಲಿ ಒಂದು ಟಿಕೆಟ್ಗೆ ೫೦೦ ರೂಪಾಯಿಯಂತೆ ಮಾರಾಟವಾದ ಅಂತ ಚಿತ್ರ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿತು. ಇದು ಹಿಂದಿಯಲ್ಲಿ ‘ಮೇರೀ ಆವಾಝ್ ಸುನೋ’ ಎಂಬ ಶೀರ್ಷಿಕೆಯಲ್ಲಿ ತೆರೆಕಂಡಿತು. ಅಮಿತಾಭ್ ಬಚ್ಚನ್, ಅಂಬರೀಷ್ ಪಾತ್ರ ಮಾಡಬೇಕಾಗಿದ್ದುದು ಕಾರಣಾಂತರಗಳಿಂದ ತಪ್ಪಿಹೋಗಿ ಆ ಪಾತ್ರಕ್ಕೆ ಜಿತೇಂದ್ರ ಆಯ್ಕೆಯಾದರು. ಹಿಂದಿಯಲ್ಲೂ ಕೂಡ ರಾಜೇಂದ್ರಸಿಂಗ್ ಬಾಬು ಅವರ ‘ಮೇರೀ ಆವಾಜ್ ಸುನೋ’ ಸೂಪರ್ ಹಿಟ್ ಆಯಿತು. ಇಷ್ಟೇ ಅಲ್ಲ, ರಾಜೇಂದ್ರಸಿಂಗ್ ಬಾಬು ಅವರು ‘ಶರಾರಾ’, ‘ಮೇರಾ ಫೈಸ್ಲಾ’, ‘ಏಕ್ ಸೇ ಭಲೇ ದೋ’, ‘ಆಗ್ ಕಾ ದರಿಯಾ’ ಮುಂತಾದ ಹಿಂದಿ ಚಲನಚಿತ್ರಗಳನ್ನೂ ನಿರ್ದೇಶಿಸಿದರು. ಹೀಗೆ ಪಟ್ಟಿ ಮಾಡುತ್ತಹೋದರೆ ದಕ್ಷಿಣ ರಾಜ್ಯಗಳ ನಿರ್ದೇಶಕರ ಸಾಲುಸಾಲು ಹಿಂದಿ ಚಲನಚಿತ್ರಗಳು ಸಿಗುತ್ತವೆ.
ಇದು ಒಂದು ‘ದಂಡಯಾತ್ರೆ’ಯಾದರೆ, ಬಾಲಿವುಡ್ನ ಹೀರೋಗಳು ಕನ್ನಡ, ತಮಿಳು, ತೆಲುಗು ಚಿತ್ರಗಳ ಹಿಂದಿ ರಿಮೇಕ್ ಚಿತ್ರಗಳಲ್ಲಿ ನಟಿಸಿ ಖ್ಯಾತಿಯ ಉತ್ತುಂಗಕ್ಕೇರಿದ್ದನ್ನೂ ಗಮನಿಸಬಹುದು. ಜಿತೇಂದ್ರ ಅವರಂತೂ ದಕ್ಷಿಣ ಭಾಷೆಗಳ ರಿಮೇಕ್ನಲ್ಲಿ ನಟಿಸಿದ್ದೇ ಹೆಚ್ಚು. ಇವರಲ್ಲದೆ ಗೋವಿಂದಾ, ಅಕ್ಷಯಕುಮಾರ್, ಜಾನ್ ಅಬ್ರಹಾಂ, ಸಲ್ಮಾನ್ಖಾನ್, ಕರೀನಾಕಪೂರ್, ಅಜಯ್ ದೇವಗನ್, ಪ್ರಿಯಾಂಕಾ ಚೋಪ್ರಾ, ಇರ್ಫಾನ್ಖಾನ್, ಆಮೀರ್ಖಾನ್, ಅಕ್ಷಯ್ಖನ್ನಾ, ಶರ್ಮನ್ಜೋಷಿ, ವಿದ್ಯಾಬಾಲನ್ ಸೇರಿದಂತೆ ಅನೇಕ ಘಟಾನುಘಟಿ ನಾಯಕ-ನಾಯಕಿಯರು ರಿಮೇಕ್ ಚಲನಚಿತ್ರಗಳಲ್ಲಿ ನಟಿಸಿದವರೇ. ಇನ್ನು ಹಿಂದಿಯಲ್ಲಿ ರಿಮೇಕ್ ಆದ ಚಲನಚಿತ್ರಗಳನ್ನು ಗಮನಿಸಿದರೆ ‘ರೌಡಿ ರಾಥೋರ್’, ‘ಹೌಸ್ ಫುಲ್’, ‘ಬಾಡಿಗಾರ್ಡ್’, ‘ಸಿಂಗಂ’, ‘ಖಟ್ಟಾ ಮೀಠಾ’, ‘ಬಿಲ್ಲು ಬಾರ್ಬರ್’, ‘ವಾಂಟೆಡ್’, ‘ಘಜಿನಿ’, ‘ಮೇರೆ ಬಾಪ್ ಪಹ್ಲೇ ಆಪ್’, ‘ಢೋಲ್’, ‘ಭೂಲ್ ಭುಲೆಯ್ಯ’, ‘ಚುಪ್ ಚುಪ್ ಕೇ’, ‘ರೆಹನಾ ಹೈ ತೇರೇ ದಿಲ್ ಮೇಂ’, ‘ನಾಯಕ್’, ‘ಜಿಸ್ ದೇಶ್ ಮೇಂ ಗಂಗಾ ರೆಹತಾ ಹೈಂ’, ‘ಚಾಚಿ ೪೨೦’ – ಈ ಪಟ್ಟಿ ಉದ್ದವಾಗಿ ಬೆಳೆಯುತ್ತದೆ.
ಇಷ್ಟೆಲ್ಲ ಇದ್ದರೂ ದಕ್ಷಿಣಭಾರತದ ಚಲನಚಿತ್ರರಂಗವನ್ನು ‘ಪ್ರಾದೇಶಿಕ’ ಚಲನಚಿತ್ರವೆಂದೇ ಗುರುತಿಸಲಾಗುತ್ತಿತ್ತು. ರಾಜಕುಮಾರ್, ವಿಷ್ಣುವರ್ಧನ್, ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ಶಿವಾಜಿ ಗಣೇಶನ್ರಂತಹ ಲೆಜೆಂಡ್ ನಾಯಕರನ್ನೂ, ಪಂಢರಿಬಾಯಿ, ಬಿ. ಸರೋಜಾದೇವಿ, ಕಲ್ಪನಾ, ಲೀಲಾವತಿ ಸೇರಿದಂತೆ ಅನೇಕ ನಾಯಕಿಯರ ಸಾಧನೆಯ ಬಗ್ಗೆ ಹಲವು ವರ್ಷಗಳ ಕಾಲ ಬಾಲಿವುಡ್ ಜಾಣಕುರುಡನ್ನೇ ಪ್ರದರ್ಶಿಸಿತ್ತು.
ಆದರೆ ಕಳೆದ ಕೆಲ ವರ್ಷಗಳಲ್ಲಿ ದಕ್ಷಿಣ ರಾಜ್ಯಗಳ ಚಲನಚಿತ್ರಗಳ ನಾಗಾಲೋಟ ಇಡೀ ದೇಶವನ್ನೇ ಅಲ್ಲಾಡಿಸಿದೆ. ಬಾಕ್ಸ್ ಆಫೀಸಿನ ಕಲೆಕ್ಷನ್ ಇದಕ್ಕೆ ಒಂದು ಕಾರಣವಾದರೆ ವಿಭಿನ್ನ ಕಥಾವಸ್ತು, ಗಟ್ಟಿಯಾದ ಕಥಾಹಂದರ, ನೈಜತೆ ಹಾಗೂ ಕೃತ್ರಿಮತೆಯ ನಡುವೆ ಅಂತರವಿರದಷ್ಟು ನಿಜವೆನ್ನಿಸುವ ಗ್ರಾಫಿಕ್ಸ್, ಅತ್ಯುತ್ತಮ ನಟನೆ, ಅತ್ಯುತ್ತಮ ನಿರ್ದೇಶನ, ಸಂಗೀತ, ಹಾಡು ಎಲ್ಲವೂ ಈ ಯಶಸ್ಸಿಗೆ ಕಾರಣವಾಗಿವೆ.
‘ಬಾಹುಬಲಿ – ದ ಬಿಗಿನ್ನಿಂಗ್’, ‘ಬಾಹುಬಲಿ – ದ ಕನ್ಕ್ಲೂಷನ್’, ‘ಕೆಜಿಎಫ್ ಚಾಪ್ಟರ್-೧ ಮತ್ತು ೨’, ‘ಆರ್ಆರ್ಆರ್’, ‘ಪುಷ್ಪಾ – ದಿ ರೈಸ್’, ‘ಕಾಂತಾರ’ – ಚಲನಚಿತ್ರಗಳು ಜನಪ್ರಿಯವಾಗಿದ್ದಷ್ಟೆ ಅಲ್ಲ, ಬಾಕ್ಸ್ ಆಫೀಸಿನಲ್ಲಿ ದೊಡ್ಡ ಯಶಸ್ಸನ್ನು ಗಳಿಸಿದವು. ಕೋವಿಡ್ ನಂತರದ ಕಾಲಘಟ್ಟದಲ್ಲಿ ಪ್ರೇಕ್ಷಕರು ಮೊಬೈಲ್ನಲ್ಲಿಯೇ ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಜೋತುಬಿದ್ದು ಥಿಯೇಟರ್ಗಳಿಂದ ದೂರ ಸರಿದಾಗ, ಇವೇ ಕೆಲವು ಚಿತ್ರಗಳು ಜನರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆದವು. ಕಾಂತಾರದಂತಹ ಚಿತ್ರಗಳನ್ನು ಥಿಯೇಟರ್ಗಳಲ್ಲಿ ನೋಡಿಯೇ ರಸಾಸ್ವಾದ ಮಾಡಬೇಕು ಎಂದು ಪ್ರೇಕ್ಷಕರು ಮತ್ತೆ ಮಾತಾಡಿಕೊಳ್ಳುವಂತಾಯಿತು. ‘ಬಾಹುಬಲಿ ಕಟ್ಟಪ್ಪನನ್ನು ಯಾಕೆ ಕೊಂದ?’ ಎಂಬ ಪ್ರಶ್ನೆ ಎರಡನೇ ಭಾಗ ಬರುವವರೆಗೂ ಜನರ ಬಾಯಲ್ಲಿ ನಲಿಯಿತು. ಇದೇ ವೇಳೆ, ಬಾಲಿವುಡ್ನಲ್ಲಿ ಭಾರೀ ನಿರೀಕ್ಷೆಯೊಂದಿಗೆ ಬಂದ ‘ಜರ್ಸಿ’, ‘ಸತ್ಯಮೇವ ಜಯತೇ-೨’, ‘ಬಚ್ಚನ್ ಪಾಂಡೆ’, ‘ಝಿರೋ’ – ಮುಂತಾದ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ನೆಲಕಚ್ಚಿದವು. ಘಟಾನುಘಟಿ ನಾಯಕರ ಚಿತ್ರಗಳೇ ಒಂದು ವಾರವೂ ಓಡಲಿಲ್ಲ.
ಬಾಲಿವುಡ್ ಚಿತ್ರಗಳು ಈ ರೀತಿಯಾಗಿ ಮೊದಲೂ ಆಗೀಗ ನೆಲಕಚ್ಚುತ್ತಿದ್ದವು. ಆದರೆ ಅದು ಸಾಕಷ್ಟು ಸುದ್ದಿಯಾಗುತ್ತಿರಲಿಲ್ಲ. ಜೊತೆಗೆ ಬಾಲಿವುಡ್ನ ಭೌಗೋಳಿಕ ಮಾರುಕಟ್ಟೆ ವಿಶಾಲವಾಗಿದ್ದರಿಂದ ಹಾಗೂ-ಹೀಗೂ ಹಿಂದಿ ಚಲನಚಿತ್ರಗಳು ದುಡ್ಡು ಮಾಡಿಕೊಂಡು ಬಿಡುತ್ತಿದ್ದವು. ಆದರೆ ಅವೇ ಹಳೆಯ ಕಾಲದ ಪ್ರೇಮಕಥೆಗಳು, ನಾಯಕ-ಕೇಂದ್ರಿತ ಅಥವಾ ನಾಯಕಿಯ ಮೈಮಾಟವನ್ನು ಬಂಡವಾಳವಾಗಿಟ್ಟುಕೊಂಡು ಚಿತ್ರಮಾಡಿದ್ದು, ನಿರ್ದಿಷ್ಟ ನಿರ್ದೇಶಕರು, ನಿರ್ದಿಷ್ಟ ನಾಯಕ-ನಾಯಕಿಯರು ಸೇರಿ ರಿಂಗ್ ಮಾಡಿಕೊಂಡು ಚಿತ್ರಗಳನ್ನು ನಿರ್ಮಿಸಿದ್ದು (ಕಂಗಾನಾ ರಾಣಾವತ್ ಹಾಗೂ ಕರಣ್ ಜೋಹರ್ ಅವರ ನೆಪೊಟಿಸಂ ವಿವಾದ ನೆನಪಿರಬಹುದು.) ಎಲ್ಲವೂ ಬಾಲಿವುಡ್ಗೆ ಮುಳುವಾಯಿತು. ಇದೇ ವೇಳೆ ದಕ್ಷಿಣ ರಾಜ್ಯಗಳ ಚಿತ್ರಗಳಲ್ಲಿ ಹೊಸ ಹೊಸ ವಿಷಯವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದ ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾದ ಭೂತಕೋಲದಂತಹ ಸಂಪ್ರದಾಯ ‘ಕಾಂತಾರ’ ಕಾರಣದಿಂದಾಗಿ ಜಗತ್ತಿನ ಮೂಲೆಮೂಲೆ ತಲಪುವಂತಾಗಿದೆ. ‘ಆರ್ಆರ್ಆರ್’ ಚಿತ್ರ ಆಸ್ಕರ್ನಲ್ಲಿಯೂ ಸದ್ದುಮಾಡಿದೆ. ‘ಆಪರೇಷನ್ ಅಲಮೇಲಮ್ಮ’, ‘ಆಚಾರ್ ಆಂಡ್ ಕೋ’, ‘ಡೇರ್ ಡೆವಿಲ್ ಮುಸ್ತಫಾ’ದಂತಹ ಹೊಸ ಕಥಾಹಂದರದ ಚಿತ್ರಗಳು ಚಿತ್ರರಸಿಕರನ್ನು ರಂಜಿಸಿವೆ. ಇನ್ನು ದಕ್ಷಿಣಭಾಷೆಗಳಲ್ಲಿ ಮೂಡಿಬಂದ ಕಿರುಚಿತ್ರಗಳ ವಿಷಯವಸ್ತು, ಸಿನೆಮಾ ಶೈಲಿ, ಕಲೆ, ಸಂಗೀತದ ಕುರಿತು ಬರೆಯಹೊರಟರೆ ಅದು ಮತ್ತೊಂದು ದೀರ್ಘ ಲೇಖನವಾದೀತು.
ಭಾರತದ ದಕ್ಷಿಣ ರಾಜ್ಯಗಳ ಕುರಿತು ಇಷ್ಟೆಲ್ಲ ವಿವರ ನೀಡಿದ್ದರೂ ಹಲವು ವಿಷಯಗಳು – ಪ್ರಯೋಗಾತ್ಮಕ ಚಲನಚಿತ್ರಗಳು, ನಿರ್ದೇಶಕರು, ತಂತ್ರಜ್ಞರು ಇತ್ಯಾದಿ – ಓದುಗರ ಗಮನಕ್ಕೆ ಬಂದು ಇಲ್ಲಿ ಕಾಣದಿರಬಹುದು. (ಉದಾಹರಣೆಗೆ, ಹೊನ್ನವಳ್ಳಿಕೃಷ್ಣ, ಬ್ರಹ್ಮಾನಂದA ಅಂತಹವರು ಸಾವಿರಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವುದು, ಬಿರಾದಾರ್ ಅವರು ೫೦೦ ಚಿತ್ರಗಳಲ್ಲಿ ನಟಿಸಿರುವುದು, ಪಿ. ಶೇಷಾದ್ರಿಯವರಿಗೆ ನಿರಂತರವಾಗಿ ರಾಷ್ಟ್ರಪ್ರಶಸ್ತಿಗಳು ಒಲಿದಿರುವುದು ಇತ್ಯಾದಿ). ಇದಕ್ಕೆ ಕಾರಣ ಈ ಲೇಖನದ ಮಿತಿ ಹಾಗೂ ಲೇಖಕನ ಮಾಹಿತಿ ಕೊರತೆಯೇ ಹೊರತು, ಚಿತ್ರರಂಗದ ಸಾಧಕರ ಸಾಧನೆಯ ಕೊರತೆಯಲ್ಲ. ಹಾಗೆಯೇ ಈ ಲೇಖನದ ಉದ್ದೇಶ ಬಾಲಿವುಡ್ನ್ನಾಗಲಿ ಅಥವಾ ಇನ್ನಾವುದೇ ಚಿತ್ರರಂಗವನ್ನಾಗಲಿ ಕನಿಷ್ಠವೆಂದು ತೋರಿಸಿ, ದಕ್ಷಿಣ ರಾಜ್ಯಗಳ ಚಿತ್ರರಂಗವೇ ಶ್ರೇಷ್ಠ ಎಂದು ಸಾಧಿಸುವುದಲ್ಲ. ಬದಲಾಗಿ, ಸಾಧಿಸಿಯೂ ಗುರುತಿಸದಿರುವ ಕೆಲವರ ದುರುದ್ದೇಶಪೂರಿತ ನೆರೆಟಿವ್ಗಳನ್ನು ಸರಿದಾರಿಗೆ ತರುವ ಪ್ರಯತ್ನಮಾತ್ರವಾಗಿದೆ. ಬಾಲಿವುಡ್ನಲ್ಲಿ ಕೂಡ ‘ಕಠಲ್’, ‘12th ಫೇಲ್’, ‘ಸ್ಯಾಮ್ ಬಹಾದೂರ್’, ‘ಮಿಷನ್ ರಾಣಿಗಂಜ್’, ‘ಮಿಸೆಸ್ ಚ್ಯಾಟರ್ಜಿ’, ‘ದಿ ಕೇರಳ ಸ್ಟೋರಿ’, ‘ದಿ ವ್ಯಾಕ್ಸಿನ್ ವಾರ್’ನಂತಹ ಕಥೆ ಮತ್ತು ಕಲಾವಿದರ ಗಟ್ಟಿಯಾಗಿರುವ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹವಾಗಿದೆ. ಚಿತ್ರರಂಗವೆಂಬ ಈ ಬ್ರಹ್ಮಾಂಡ ಕಲಾನಿರ್ಮಿತಿಯಲ್ಲಿ ಮತ್ತಷ್ಟು ಮಗದಷ್ಟು ಮೊಗೆದಷ್ಟು ವಿನೂತನ ಚಿತ್ರಗಳು ಬಂದರೆ, ಚಿತ್ರರಸಿಕರಿಗೆ ಖುಷಿ, ನಟರು ತಂತ್ರಜ್ಞರಿಗೆ ತೃಪ್ತಿ, ನಿರ್ಮಾಪಕರಿಗೆ ಜೇಬು ಭರ್ತಿ. ಅಲ್ಲಿಗೆ ಮತ್ತೆ ರೋಲ್ ಕ್ಯಾಮರಾ ಆಕ್ಷನ್!