ಬಂದು ಬಿದ್ದ ಆ ಫಲವತ್ತಾದ ಮಣ್ಣನ್ನು ಒಂದೊಮ್ಮೆ ಯಾರಾದರೂ ರೈತಾಪಿ ಮಂದಿ ಕೇಳಿದರೂ ಅವರು ಕೊಡಲಾರರು. ಏಕೆಂದರೆ ಅವರಿಗೀಗ ಮನೆಯಷ್ಟು ಕೃಷಿ ಮುಖ್ಯವಲ್ಲ. ಮಾತ್ರವಲ್ಲ, ತಮ್ಮ ಮನೆಯ ಪಂಚಾಂಗವನ್ನು ತುಂಬಿಸಲು ಬೇಕಾದ ಮಣ್ಣು ಸುಲಭ ಲಭ್ಯವಿರಲಿಲ್ಲ. ಇನ್ನು ನಗರಕೇಂದ್ರಿತ ಜೀವನಕ್ಕೆ ಒಗ್ಗಿಕೊಂಡಿದ್ದ ಅವರು ಆ ಮಣ್ಣನ್ನುಪಯೋಗಿಸಿ ಸ್ವತಃ ತಾವೇ ನಿಂತು ಕೃಷಿ ಮಾಡುವುದಂತೂ ತೀರಾ ಅವ್ಯಾವಹಾರಿಕವೇ ಆಗಿತ್ತು. ಈ ಹಿನ್ನೆಲೆಯಲ್ಲಿ ಫಲವತ್ತಾದ ಆ ಮಣ್ಣಿನ ಕುರಿತಾದ ಅವರ ಭಾವನೆಗಳು ಸ್ಮಶಾನವೈರಾಗ್ಯದಂತೆ ತಾತ್ಕಾಲಿಕವೂ ನಿಷ್ಪ್ರಯೋಜಕವೂ ಆಗಿದ್ದವು.
ಒಂದು ಮನೆ ಕಟ್ಟಲೆಂದು ಹೊರಟ ಅವರು ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರು. ಕೃಷಿ ಹಿನ್ನೆಲೆಯಿಂದ ಬಂದವರು. ಅಲ್ಲದೆ ಕೃಷಿಯ ಕುರಿತು ಮಾಹಿತಿ ಇದ್ದವರು ಕೂಡಾ. ಆದರೆ ಅವರ ಬದಲಾದ ಆರ್ಥಿಕ ವ್ಯವಸ್ಥೆಯಿಂದಾಗಿ ಹಳ್ಳಿಗೆ ವಿಮುಖರಾದರು. ಪೇಟೆ ಕಡೆಗೆ ಮುಖಮಾಡಿದರು.
ಅವರ ಮನೆಯ ಕಟ್ಟಡ ಕಾರ್ಯ ನಡೆಯುತ್ತಿತ್ತು. ನೀರು ನಿಲ್ಲುವ ಸ್ಥಳವದು. ಹಾಗಾಗಿ ಎತ್ತರಿಸಿಯೇ ಮನೆಯನ್ನು ಕಟ್ಟಬೇಕಿತ್ತು. ಪಂಚಾಂಗದ ಕೆಲಸ ನಡೆದಿತ್ತು. ಇದೀಗ ಪಂಚಾಂಗದೆತ್ತರಕ್ಕೆ ಒಳಗೆ ಮಣ್ಣು ತುಂಬಿಸುವ ಕೆಲಸ ಸಾಗುತ್ತಿತ್ತು.
ಐದಾರು ಲಾರಿಗಳು ಒಂದೇ ಸಮನೆ ಲೋಡು ಲೋಡು ಮಣ್ಣನ್ನು ತಂದು ಎರಚಿ ಹೋಗುತ್ತಿದ್ದುವು. ಅವರು ಒಮ್ಮೆ ಆ ದೃಶ್ಯ ನೋಡಿದರು. ಅಚ್ಚರಿಯನ್ನೂ ವಿಷಾದವನ್ನೂ ಜೊತೆಜೊತೆಯಾಗಿ ಅನುಭವಿಸಿದರು! ಆಗ ಅವರು ಉದ್ಗರಿಸಿದ್ದಿಷ್ಟು: “ಛೆ, ಎಂಥ ಫಲವತ್ತಾದ ಮಣ್ಣಿದು!”
ಹೌದು; ಅದು ಭತ್ತ, ಕಬ್ಬು, ಅಡಕೆ ಎಲ್ಲವನ್ನೂ ಬೆಳೆಯಲು ಅನುಕೂಲವಾದ ಫಲವತ್ತಾದ ಮಣ್ಣಾಗಿತ್ತು. ಆ ಮಣ್ಣನ್ನು ನೋಡಿ ಅವರಿಗೆ ಆಸೆಯಾಯಿತು. ತಮ್ಮ ಕೃಷಿಬದುಕು ನೆನಪಾಯಿತು. ಮನಸ್ಸಿನೊಳಗೆ, ಆ ಮಣ್ಣಿನಲ್ಲಿ ಏನೇನು ಕೃಷಿ ಬೆಳೆಯಬಹುದು ಎಂಬ ಲೆಕ್ಕ ಪ್ರಾರಂಭವಾಯಿತು.
ಆದರೆ ಮಣ್ಣಿನ ಕುರಿತಾದ ಅವರ ಪ್ರೀತಿ, ಲೆಕ್ಕಾಚಾರ ಎಲ್ಲವೂ ‘ಸ್ಮಶಾನ ವೈರಾಗ್ಯ’ದಂತಿತ್ತು. ಏಕೆಂದರೆ ಮನಸ್ಸಿಗೆ ಬಂದ ಈ ಭಾವನೆಗಳನ್ನು ಈಗ ಕೃತಿಗಿಳಿಸುವ ದಾರಿಯಿಂದ ಸರಿದು ಅವರು ತುಂಬಾ ದೂರ ಬಂದಿದ್ದರು. ಹಿಂದೆ ಹೋಗಲಾರದಷ್ಟು ದೂರ ಬಂದಿದ್ದರು.
ಬಂದು ಬಿದ್ದ ಆ ಫಲವತ್ತಾದ ಮಣ್ಣನ್ನು ಒಂದೊಮ್ಮೆ ಯಾರಾದರೂ ರೈತಾಪಿ ಮಂದಿ ಕೇಳಿದರೂ ಅವರು ಕೊಡಲಾರರು. ಏಕೆಂದರೆ ಅವರಿಗೀಗ ಮನೆಯಷ್ಟು ಕೃಷಿ ಮುಖ್ಯವಲ್ಲ. ಮಾತ್ರವಲ್ಲ, ತಮ್ಮ ಮನೆಯ ಪಂಚಾಂಗವನ್ನು ತುಂಬಿಸಲು ಬೇಕಾದ ಮಣ್ಣು ಸುಲಭ ಲಭ್ಯವಿರಲಿಲ್ಲ. ಇನ್ನು ನಗರಕೇಂದ್ರಿತ ಜೀವನಕ್ಕೆ ಒಗ್ಗಿಕೊಂಡಿದ್ದ ಅವರು ಆ ಮಣ್ಣನ್ನುಪಯೋಗಿಸಿ ಸ್ವತಃ ತಾವೇ ನಿಂತು ಕೃಷಿ ಮಾಡುವುದಂತೂ ತೀರಾ ಅವ್ಯಾವಹಾರಿಕವೇ ಆಗಿತ್ತು. ಈ ಹಿನ್ನೆಲೆಯಲ್ಲಿ ಫಲವತ್ತಾದ ಆ ಮಣ್ಣಿನ ಕುರಿತಾದ ಅವರ ಭಾವನೆಗಳು ಸ್ಮಶಾನವೈರಾಗ್ಯದಂತೆ ತಾತ್ಕಾಲಿಕವೂ ನಿಷ್ಪ್ರಯೋಜಕವೂ ಆಗಿದ್ದವು.
ಕೃಷಿಗೆ ಉಪಯೋಗವಾಗಬೇಕಿದ್ದ ಫಲವತ್ತಾದ ಮಣ್ಣು ಮನೆಪಾಲಾಯಿತು. ಮನೆ-ಕೆಲಸ ನಿರಾತಂಕವಾಗಿ ಮುಂದುವರಿಯಿತು.
ಒಂದೆಡೆ ಫಲವತ್ತಾದ ಮಣ್ಣು ತನ್ನ ಜಾಗ ಬಿಟ್ಟು ಕೃಷಿಯ ಸಾಧ್ಯತೆಯಿಂದ ಮುಕ್ತವಾಯಿತು. ಇನ್ನೊಂದೆಡೆ ಅದೇ ಮಣ್ಣು ಕಟ್ಟಡದ ಪಂಚಾಂಗವಾಗಿ ತಳಪಾಯವನ್ನು ಸೇರಿತು.
ಕೃಷಿಯ ಹಿನ್ನೆಲೆ ಮತ್ತು ಸಂವೇದನೆ ಎರಡೂ ಇದ್ದುದರಿಂದ ಆ ಪೂರ್ವಕೃಷಿಕರಿಗೆ ಫಲವತ್ತಾದ ಮಣ್ಣು ನೋಡಿ ಅದರಲ್ಲೊಂದು ಕೃಷಿಸಾಧ್ಯತೆಯನ್ನು ಊಹಿಸಲು ಸಾಧ್ಯವಾಯಿತು. ಜೊತೆಗೆ ಕೃಷಿಕಾರ್ಯವು ಸಾಧ್ಯವಾಗದಿದ್ದುದಕ್ಕಾಗಿ, ಬದಲಾಗಿ ಆ ಮಣ್ಣು ಅದರ ಉತ್ತಮ ಸಾಧ್ಯತೆಯ ವಿಪರೀತ ದಾರಿಯಲ್ಲಿ ಬಳಕೆಯಾಗುತ್ತಿರುವುದಕ್ಕಾಗಿ ಅವರ ಕೃಷಿಮನಸ್ಸು ಒಂದು ಕ್ಷಣ ತಲ್ಲಣಗೊಂಡಿತು.
ಅವರು ಒಂದಾನೊಂದು ಕಾಲದಲ್ಲಿ ಕೃಷಿಕರಾಗಿದ್ದುದು ಈ ದೃಷ್ಟಿಯಿಂದ ಸಾರ್ಥಕವಾಯಿತು.
ಸೂಕ್ಷ್ಮಸಂವೇದನೆಯೊಂದು ತಾತ್ಕಾಲಿಕವಾಗಿಯಾದರೂ ಒಂದು ಮನಸ್ಸನ್ನು ಆರ್ದ್ರಗೊಳಿಸುವ ಇಂಥ ಸಂದರ್ಭಗಳೇ ಒಂದು ಭರವಸೆ.
ಒಂದು ಕಾಲದಲ್ಲಿ ಹಳ್ಳಿಗೆ ರಸ್ತೆಯಾದಾಗ ಸಂಭ್ರಮಪಟ್ಟ ಮನಸ್ಸುಗಳು, ಮುಂದೆ ಮುಂಪೀಳಿಗೆ ನಗರಕ್ಕೆ ವಲಸೆಹೋಗಲು ಅದುವೇ ರಹದಾರಿಯಾದಾಗ ಮರುಗಿದ್ದಿದೆ. ರಸ್ತೆಯಾಯಿತು, ಹಳ್ಳಿ ಬೆಳೆಯಿತು. ತರಕಾರಿ, ದವಸಧಾನ್ಯಗಳನ್ನು ಹಳ್ಳಿಯಿಂದ ನಗರಕ್ಕೆ ಸಾಗಿಸಲು ಸುಲಭವಾಯಿತು. ಹಳ್ಳಿಗೆ ಬೇಕಾದುದನ್ನು ನಗರದಿಂದ ತರಲೂ ಅದು ಬಳಕೆಯಾಯಿತು. ಮುಂದಿನ ಚಿತ್ರಣವಾಗಿ ಹಳ್ಳಿಯಲ್ಲಿ ಕೃಷಿಮಾಡಬೇಕಾದ ಕೈಗಳು ಆಕರ್ಷಕ ಉದ್ಯೋಗಕ್ಕಾಗಿ ನಗರ ಸೇರಿಕೊಳ್ಳಲೂ ಅದೇ ರಸ್ತೆಗಳು ಸಹಾಯಕ್ಕೊದಗಿದವು!
ಹಳ್ಳಿಗಳು ವಿಕಾಸಗೊಳ್ಳಲು ಸಹಾಯಕವಾದ ರಸ್ತೆಗಳೇ; ಕೃಷಿಮಾಡುವ ಕೈಗಳನ್ನು ನಗರಕ್ಕೊಯ್ಯಲು ಸಹಾಯಮಾಡಿ, ಬರಿಯ ವೃದ್ಧರೇ ಇರುವಂತಾಗಿ ಹಳ್ಳಿಗಳು ಬಿಕೋ ಎನ್ನುವಂತೆ ಮಾಡುವಲ್ಲಿಯೂ ಸಹಾಯಕವಾದುವು.
ಇಲ್ಲಿ ರಸ್ತೆಯನ್ನೊಂದು ಪ್ರತೀಕವಾಗಿಯಷ್ಟೆ ಕಂಡರೆ ಸಾಕು.
ಈಗ ಮುಂದುವರಿದ ಹೆಜ್ಜೆ ಏನಿರಬಹುದು ಎಂದು ಕುತೂಹಲದಿಂದ ಕಾದರೆ ಕಾಣುತ್ತಿರುವ ದೃಶ್ಯ ಇದು; ಹಳ್ಳಿಯಿಂದ ಕೃಷಿಯೋಗ್ಯ ಮಣ್ಣು ನಗರಗಳ, ಇನ್ನಿತರ ಅಭಿವೃದ್ಧಿ ಯೋಜನೆಗಳ ಪಾಲಾಗುತ್ತಿದೆ.
ಹಿಂದೆ ಕೃಷಿಸಂಸ್ಕೃತಿಯ ಭಾಗವಾಗಿ ಒಂದು ನಂಬಿಕೆಯಿತ್ತು; ಹೊಲವನ್ನು ಕೃಷಿಮಾಡದೆ ಹಡೀಲುಬಿಟ್ಟರೆ ಅದು ಕೇಡು. ಮನೆಯಲ್ಲಿ ಜನರ ಕೊರತೆಯೋ, ಆರ್ಥಿಕ ಸಂಕಷ್ಟವೋ, ಇನ್ನಿತರ ತೊಂದರೆಯೋ ಏನೇ ಇದ್ದರೂ ಕೂಡಾ ಯೇನಕೇನ ಪ್ರಯತ್ನಿಸಿ ಕೃಷಿಮಾಡಿಯೇ ತೀರುವುದೆಂದು ಹರಸಾಹಸಪಟ್ಟು ಕೃಷಿಕರು ಈ ಕೇಡಿನಿಂದ ಪಾರಾಗಲೆತ್ನಿಸುತ್ತಿದ್ದರು.
ಸಂಸ್ಕೃತಿಯೊಂದು ಪರಂಪರೆಯಾಗಿ ಮುಂದುವರಿಯಬೇಕಿದ್ದರೆ, ಮುಂಪೀಳಿಗೆಗೆ ಸಂವಹನಗೊಳ್ಳಬೇಕಿದ್ದರೆ ಇಂಥ ನಂಬಿಕೆಗಳು ಅವಶ್ಯವೇ ಇರಬೇಕು.
ಇಂಥ ಅದೆಷ್ಟೋ ನಂಬಿಕೆಗಳು ನಮ್ಮ ಬದುಕನ್ನು ಸಮೃದ್ಧಗೊಳಿಸಿದ್ದವು, ನೆಮ್ಮದಿಯಿಂದಿರಿಸಿದ್ದವು. ಇವುಗಳನ್ನು ಮೂಢನಂಬಿಕೆಯೆಂಬ ಒಂದೇ ಏಟಿಗೆ ವಿನಷ್ಟಗೊಳಿಸುವ ಕೆಲಸವನ್ನು ಆಧುನಿಕ ಶಿಕ್ಷಣ ಅತ್ಯಂತ ಯಶಸ್ವಿಯಾಗಿ ಮಾಡಿತು. ಭಾರೀ ಜ್ಞಾನ ನೀಡುವೆನೆಂದು ಮರೀಚಿಕೆ ಹುಟ್ಟಿಸಿದ ಅದೇ ಶಿಕ್ಷಣ ಹಳ್ಳಿಯನ್ನು ಬರಿದುಮಾಡುವಲ್ಲಿಯೂ ತನ್ನ ಕೊಡುಗೆಯನ್ನು ನೀಡಿತು.
ಜನರನ್ನು ಬರಿದಾಗಿಸಿದ ವ್ಯವಸ್ಥೆ, ಇದೀಗ ಕೃಷಿಕ್ಷೇತ್ರವನ್ನೇ ಬರಿದಾಗಿಸುತ್ತಿದೆಯಲ್ಲ! ಮುಂದಿನ ಸರದಿ ಯಾವುದರದ್ದೋ?