ನಮ್ಮ ಸ್ವಾತಂತ್ರ್ಯಪ್ರಾಪ್ತಿಯ ಹಿಂದೆ ದೀರ್ಘಕಾಲದ ಸಂಘರ್ಷ ಇದೆ. ಅಪ್ರತಿಮ ದೇಶಭಕ್ತರು ಸವೆಸಿದ ಕಂಟಕಮಯ ದಾರಿ ಇದೆ. ತಮ್ಮ ಸರ್ವಸ್ವವನ್ನೂ ರಾಷ್ಟçಕ್ಕೆ ಅರ್ಪಿಸಿದ ಸಾವಿರಾರು ಬಲಿದಾನಿಗಳ ರಕ್ತತರ್ಪಣ ಇದೆ. ಆ ಇತಿಹಾಸವನ್ನು ನಾವು ಸ್ವಲ್ಪವಾದರೂ ತಿಳಿದುಕೊಂಡರೆ ಸ್ವಾತಂತ್ರ್ಯ ಎಷ್ಟು ಅಮೂಲ್ಯವಾದದ್ದು ಎನ್ನುವ ಮನವರಿಕೆ ನಮಗೆ ಆಗಬಹುದು.
ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭಾರತದ ಜನಮಾನಸದಲ್ಲಿ ಹೆಚ್ಚಿನ ಚೇತರಿಕೆಯುಂಟಾದುದಕ್ಕೆ ಹಲವು ಪ್ರಮುಖ ಪ್ರೇರಕ ಸನ್ನಿವೇಶಗಳನ್ನು ಗುರುತಿಸಬಹುದು. ಒಂದುಕಡೆ ೧೮೫೭ರ ಸ್ವಾತಂತ್ರ್ಯಸಂಘರ್ಷದ ಅವಿಸ್ಮರಣೀಯ ಹೆಜ್ಜೆ ಗುರುತುಗಳು; ಇನ್ನೊಂದುಕಡೆ ಶ್ರೀ ರಾಮಕೃಷ್ಣ ಪರಮಹಂಸರಿಂದ ಉಗಮಗೊಂಡು ಸ್ವಾಮಿ ದಯಾನಂದ ಸರಸ್ವತಿಯವರಲ್ಲಿ ಪ್ರಫುಲ್ಲಗೊಂಡ ಧಾರ್ಮಿಕ ಉನ್ಮೇಷ; ಮತ್ತೊಂದುಕಡೆ ಹಿಂದುತ್ವದ ಜೀವಂತಿಕೆಯನ್ನು ವಿಶ್ವಕ್ಕೇ ಪರಿಚಯಿಸಿದ ಸ್ವಾಮಿ ವಿವೇಕಾನಂದರ ದಿಗಂತವ್ಯಾಪಿ ಅಭಿಯಾನ – ಹೀಗೆ ನವೋತ್ಥಾನದ ಹಲವಾರು ಎಳೆಗಳು ಹುರಿಗೊಂಡಿದ್ದುದರಿಂದ ಇಪ್ಪತ್ತನೆಯ ಶತಮಾನದ ಆರಂಭದ ವೇಳೆಗೆ ಹಿಂದಿಗಿಂತ ಹೆಚ್ಚು ಚೈತನ್ಯಪೂರ್ಣ ಸ್ವಾತಂತ್ರ್ಯೋದ್ಯಮಕ್ಕೆ ಕಾಲವು ಪಕ್ವವಾಗಿತ್ತು. ಆಗ್ಗೆ ನಲವತ್ತು ವರ್ಷ ಹಿಂದೆ ಇದ್ದ, ಎಲ್ಲವನ್ನೂ ಸಮಾಜ ಸಹಿಸಿಕೊಳ್ಳುವ ಸ್ಥಿತಿ ಈಗ ಇರಲಿಲ್ಲ. ಕಾಂಗ್ರೆಸ್ಸಿನ ಆರಂಭದ ವರ್ಷಗಳ ಸೌಮ್ಯಪ್ರವೃತ್ತಿಯ ಬಗ್ಗೆ ಕಾಂಗ್ರೆಸ್ಸಿನೊಳಗಡೆಯೆ ಅಸಮಾಧಾನ ಮೂಡಿತ್ತು; ತೀವ್ರವಾದಿಗಳ ಎಂದರೆ ರಾಷ್ಟ್ರೀಯತಾವಾದಿಗಳ ಪ್ರಭಾವ ವೇಗವಾಗಿ ಹರಡತೊಡಗಿತ್ತು. ಕಾಂಗ್ರೆಸ್ಸಿನಾಚೆಗಂತೂ ಭೂಗತ ಕ್ರಾಂತಿಕಾರಿಗಳ ಚಟುವಟಿಕೆ ಸತತವಾಗಿ ನಡೆದಿತ್ತು.
೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಬಂಕಿಮಚಂದ್ರರು ಭಾರತಕ್ಕೆ ‘ವಂದೇ ಮಾತರಂ’ ಮಂತ್ರದೀಕ್ಷೆ ಕೊಟ್ಟರು. “Swadeshi was Vande Mataram in action” ಎಂದಿದ್ದ, ಥಿಯೊಡೋರ್ ಶೇ.
ಸ್ವಯಂ ವಿವೇಕಾನಂದರೇ ಹೇಮಚಂದ್ರ ಘೋಷ್ ಮತ್ತು ಸಂಗಡಿಗರ ಮೂಲಕ ೧೯೦೨ರಲ್ಲಿ ಕ್ರಾಂತಿ ಸಂಘಟನೆಯೊಂದನ್ನು ಹುಟ್ಟುಹಾಕಿಸಿದ್ದರು. ಅದರ ಅಧಿಕೃತ ಉದ್ಘಾಟನೆಯನ್ನು ಢಾಕಾದಲ್ಲಿ ಬ್ರಹ್ಮಬಾಂಧವ ಉಪಾಧ್ಯಾಯ ನೆರವೇರಿಸಿ ಅದಕ್ಕೆ ‘ಮುಕ್ತಿ ಸಂಘ’ ಎಂದು ಹೆಸರು ಕೊಟ್ಟಿದ್ದರು.
ದುಸ್ಸಾಹಸಕ್ಕೆ ನಾಂದಿ
ಹೀಗೆ ಸಿದ್ಧವಾಗಿದ್ದ ಪಟಾಕಿಗೆ ಬತ್ತಿಯಾದದ್ದು ವೈಸರಾಯ್ ಲಾರ್ಡ್ ಕರ್ಜನನ ಬಂಗಾಳ ವಿಭಜನೆಯ ದುಸ್ಸಾಹಸ. ೧೯೦೭ರೊಳಗಾಗಿಯೇ ಬಂಗಾಳದಿಂದ ಬಡೌದೆಯವರೆಗೆ, ಪಂಜಾಬಿನಿಂದ ಮದರಾಸಿನವರೆಗೆ ಕ್ರಾಂತಿಜಾಲ ಏರ್ಪಟ್ಟಿತು.
ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಸ್ವಾತಂತ್ರ್ಯದಾಹವನ್ನು ಮಿಕ್ಕ ಪ್ರಾಂತಗಳಿಗಿಂತ ಹೆಚ್ಚು ಪ್ರಖರವಾಗಿ ಪ್ರಕಟಿಸಿದ್ದವು ಮಹಾರಾಷ್ಟ್ರ ಮತ್ತು ಬಂಗಾಳ. ಆದ್ದರಿಂದ ಈ ಎರಡು ಪ್ರಾಂತಗಳನ್ನು ದುರ್ಬಲಗೊಳಿಸುವುದು ಆಗಿನ ವೈಸರಾಯಿಗಳಿಗೆ ಆದ್ಯತೆಯ ಸಂಗತಿಯಾಗಿತ್ತು.
ಏಪ್ರಿಲ್ ೧೯೦೨ರಲ್ಲಿ ಒಮ್ಮೆ ಗೃಹಕಾರ್ಯದರ್ಶಿಗೆ ಬರೆದ ಪತ್ರದಲ್ಲಿ “ಬಂಗಾಳ ತುಂಬಾ ದೊಡ್ಡ ಪ್ರಾಂತವಾಗಿದೆ. ಚಿಟಗಾಂವ್ ಮತ್ತು ಒರಿಸ್ಸಾಗಳನ್ನು ಏಕೆ ಬಂಗಾಳದಿಂದ ಬೇರ್ಪಡಿಸಬಾರದು? ಒರಿಸ್ಸಾ ಮತ್ತು ಬಿರಾರ್ಗಳನ್ನು ಮಧ್ಯಪ್ರಾಂತಕ್ಕೆ ಸೇರಿಸಬಹುದು” – ಎಂದಿದ್ದ, ಕರ್ಜನ್. ಇದಕ್ಕೆ ಅಧಿಕಾರಿಗಳ ಪ್ರತಿಕ್ರಿಯೆ ಅವನಿಗೆ ಅಚ್ಚರಿ ತಂದಿತು. ಪೊಲೀಸ್ ಕಮಿಷನರ್ ಆ್ಯಂಡ್ರೂ ಫ್ರೇಸರ್ ಮತ್ತು ಗೃಹಮಂತ್ರಿ ರಿಸ್ಲೇ ಈ ದಿಕ್ಕಿನ ವಿಭಜನೆಯ ಯೋಜನೆಯನ್ನು ಎಷ್ಟೋ ವರ್ಷ ಹಿಂದೆಯೇ ಸಿದ್ಧಪಡಿಸಿಕೊಂಡಿದ್ದರು! ಅದನ್ನು ಕಾರ್ಯಗತಗೊಳಿಸುವ ಸಾಹಸಿ ವೈಸರಾಯ್ನಿಗಾಗಿ ಕಾದು ಕುಳಿತಿದ್ದರು.
ಈ ಯೋಜನೆಯ ಸುಳುಹು ಬಂದೊಡನೆ ಬಂಗಾಳದಲ್ಲಿ ಹೊಮ್ಮಿದ ಜನರ ಪ್ರತಿರೋದಕ್ಕೆ ಮಣಿದು ಕರ್ಜನ್ ತಾತ್ಕಾಲಿಕವಾಗಿ ಪ್ರಸ್ತಾವವನ್ನು ಹಿಂತೆಗೆದುಕೊಂಡರೂ, ರಹಸ್ಯ ಸಿದ್ಧತೆಗಳನ್ನೂ ಕುಟಿಲಕ್ರಮಗಳನ್ನೂ ಮುಂದುವರಿಸಿದ. ಢಾಕಾದ ನವಾಬ ಸಲೀಮುಲ್ಲಾನಿಗೆ ೧೪ ಲಕ್ಷ ರೂಪಾಯಿ ಸಾಲ ಕೊಟ್ಟು ಅವನನ್ನು ಬುಟ್ಟಿಗೆ ಹಾಕಿಕೊಂಡ; ಢಾಕಾವನ್ನು ಯೋಜಿತ ಹೊಸ ಪ್ರಾಂತದ ರಾಜಧಾನಿಯನ್ನಾಗಿ ಮಾಡಲು ಸಂಕಲ್ಪಿಸಿದ.
ಈ ಸನ್ನಿವೇಶದಲ್ಲಿ ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ಕೆಲಸದ ಕರ್ಣಧಾರರಾದವರು ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ್, ಬಿಪಿನ್ಚಂದ್ರಪಾಲ್ (ಲಾಲ್-ಬಾಲ್-ಪಾಲ್ ತ್ರಯ), ಅರವಿಂದ ಘೋಷ್, ನಿವೇದಿತಾ.
೧೯೦೬ರ ಕೋಲ್ಕತಾ ಕಾಂಗ್ರೆಸ್ ಅಧಿವೇಶನಕ್ಕೆ ತಿಲಕರು ಅಧ್ಯಕ್ಷರಾಗಬೇಕೆಂದು ಬಿಪಿನಚಂದ್ರಪಾಲ್ ಮುಂತಾದವರ ಆಗ್ರಹವಿತ್ತು. ಆದರೆ ಕಾಂಗ್ರೆಸ್ ಮುತ್ಸದ್ದಿಗಳು ಅದನ್ನು ತಂತ್ರಗಾರಿಕೆಯಿಂದ ನಿವಾರಿಸಿ ವೃದ್ಧ ದಾದಾಭಾಯಿ ನವರೋಜಿಯವರನ್ನು ಅಧ್ಯಕ್ಷಗಾದಿಯಲ್ಲಿ ಕೂರಿಸಿದರು. ದಾದಾಭಾಯಿಯವರು ವಿದೇಶೀ ವಸ್ತು ಬಹಿಷ್ಕಾರ, ಸ್ವದೇಶೀ ಉದ್ಯಮಗಳಿಗೆ ಪುರಸ್ಕಾರ, ರಾಷ್ಟ್ರೀಯ ಶಿಕ್ಷಣ – ಇವು ಅಲ್ಲಿಂದ ಮುಂದಕ್ಕೆ ಕಾಂಗ್ರೆಸ್ಸಿನ ಗುರಿಯಾಗಿರುವುದಾಗಿ ಘೋಷಿಸಿದರು.
ಕರ್ಜನ್ ಭಾರತದ ರಾಷ್ಟ್ರೀಯತಾಪರ ಸಂಘರ್ಷಕ್ಕೆ ಮರಣಾಂತಕ ಪೆಟ್ಟು ಕೊಡಬಯಸಿದ. ಇದರ ಪ್ರಮುಖ ಹೆಜ್ಜೆಯಾಗಿ ೧೯೦೫ರ ಅಕ್ಟೋಬರ್ ೧೬ರಿಂದ ವಂಗವಿಭಜನೆಯಾಗಲಿರುವ ಘೋಷಣೆ ಮಾಡಿದ. ಕೇವಲ ಹಿಂದೂಗಳಿಗೂ ಮುಸ್ಲಿಮರಿಗೂ ನಡುವೆ ಬಿರುಕನ್ನು ನಿರ್ಮಿಸುವುದಷ್ಟೆ ಈ ಕ್ರಮದ ಉದ್ದೇಶವಾಗಿರಲಿಲ್ಲ. ರಾಜಕೀಯದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ನಿಷೇಧಿಸಿದ ರಿಸ್ಲೆ ಸುತ್ತೋಲೆ, ‘ವಂದೇ ಮಾತರಂ’ ಘೋಷಣೆಗೆ ನಿಷೇಧ, ಪತ್ರಿಕೆಗಳ ಪ್ರಕಟಣೆಯ ಸ್ವಾತಂತ್ರ್ಯದ ಹರಣ – ಹೀಗೆ ಎಲ್ಲ ಮುಖಗಳಲ್ಲಿಯೂ ಭಾರತದ ಸಮಾಜದ ಮೇಲೆ ಆಂಗ್ಲ ಸರ್ಕಾರ ಸಮರ ಸಾರಿತು.
೧೯೦೫ರ ಅಂತ್ಯದಲ್ಲಿಯೇ ಕರ್ಜನ್ ನಿವೃತ್ತನಾಗಿ ಮಿಂಟೋ ವೈಸರಾಯ್ ಆಗಿ ಪದಾಧಿಷ್ಠಿತನಾದ ಮೇಲೆ ಪರಿಸ್ಥಿತಿ ತಿಳಿಗೊಳ್ಳಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಮಿಂಟೋ ಸ್ವಲ್ಪಮಟ್ಟಿಗೆ ಸಂಧಾನಕ್ಕೆ ಮನತೆತ್ತರೂ ಅವನೂ ವಂಗವಿಭಜನೆಗೆ ಪೂರ್ಣ ಬದ್ಧನಾಗಿದ್ದ. ಪ್ರತಿಭಟನಕಾರರ ಮೇಲೆ ದಮನವನ್ನು ಧಾರಾಳವಾಗಿಯೇ ಬಳಸಿದ. ದೇಶದೆಲ್ಲೆಡೆ ಪತ್ರಕರ್ತರೂ ಸೇರಿದಂತೆ ಅಸಂಖ್ಯ ರಾಷ್ಟçವಾದಿಗಳ ಮೇಲೆ ಮೊಕದ್ದಮೆಗಳನ್ನು ನಡೆಸಿ ಬಂಧಿಸಲಾಯಿತು.
* * *
ಪ್ರತಿಭಟನೆಯ ವಿಸ್ಫೋಟ
ಕಾಲದ ಕರೆಯನ್ನು ಮೊದಮೊದಲೇ ಗುರುತಿಸಿದ್ದವರು ರವೀಂದ್ರನಾಥ ಠಾಕೂರ್. ೧೯೦೪ರಲ್ಲಿಯೇ ಛತ್ರಪತಿ ಶಿವಾಜಿಯ ಬಗ್ಗೆ ಪ್ರೇರಣಾದಾಯಿ ಕವನ ಬರೆದಿದ್ದರು. ‘ಸ್ವದೇಶೀ ಸಮಾಜ’ ಮೊದಲಾದ ಪ್ರಬಂಧಗಳನ್ನು ಬರೆದರು.
ಆ ದಿನಗಳಲ್ಲಿ ಬಟ್ಟೆ, ಚಪ್ಪಲಿ, ಉಪ್ಪು, ಸಾಬೂನು, ಸೂಜಿ-ದಾರ – ಎಲ್ಲದರಲ್ಲೂ ವಿದೇಶೀ ಉತ್ಪನ್ನಗಳು ತುಂಬಿರುತ್ತಿದ್ದವು. ಆದರೆ ಒಂದು ‘ವಂದೇ ಮಾತರಂ’ ಘೋಷಣೆ ಈ ಎಲ್ಲ ವಸ್ತುಗಳಿಂದ ಸಮಾಜವನ್ನು ವಿಮುಖಗೊಳಿಸಿಬಿಟ್ಟಿತು.
ವಿದೇಶೀ ವಸ್ತುಗಳ ಬಾಯ್ಕಾಟ್ ಜಾರಿಗೆ ಬಂದ ಎರಡು-ಮೂರು ತಿಂಗಳೊಳಗೇ ಆಂಗ್ಲರಿಗೆ ಅದರ ಪರಿಣಾಮದ ಅರಿವಾಗತೊಡಗಿತು. ಸಗಟು ವ್ಯಾಪಾರಸ್ಥರು ವ್ಯಾಪಾರವಿಲ್ಲದೆ ಕುಸಿದರು. ವಿದೇಶೀ ಉಪ್ಪು-ಸಕ್ಕರೆ ಬಳಸಿದ ಭೋಜನಕೂಟಗಳಿಗೆ ಹೋಗಲು ಜನ ನಿರಾಕರಿಸಿದರು. ವಿದೇಶೀ ವಸ್ತುಗಳಾವುದಾದರೂ ಇದ್ದಲ್ಲಿ ಪುರೋಹಿತರು ತಾವು ಧಾರ್ಮಿಕ ಕಲಾಪ ನಡೆಸುವುದಿಲ್ಲವೆಂದರು. ವಿದೇಶೀ ಕಾಗದದ ಮೇಲೆ ಉತ್ತರ ಬರೆಯಬೇಕಾದಾಗ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬಹಿಷ್ಕರಿಸಿದರು. ವಿದೇಶೀ ಬಟ್ಟೆ ಧರಿಸಿ ಬೀದಿಯಲ್ಲಿ ಓಡಾಡಲು ಜನ ಹಿಂದೆಗೆದರು.
‘ವಂದೇ ಮಾತರಂ’ ಘೋಷಣೆ ಕೂಗಿದ್ದಕ್ಕಾಗಿ ರಂಗಪುರ ಶಾಲೆಗಳ ವಿದ್ಯಾರ್ಥಿಗಳಿಗೆ ತಲಾ ಐದೈದು ರೂಪಾಯಿ ಜುಲ್ಮಾನೆ ಹಾಕುವಂತೆ ಮ್ಯಾಜಿಸ್ಟ್ರೇಟ್ ಆದೇಶ ಕಳಿಸಿದ. ಊರಿನ ನಾಗರಿಕರು ಸಭೆ ಸೇರಿ ಆ ಶಾಲೆಗಳಿಗೇ ಬಹಿಷ್ಕಾರ ಹಾಕಿಬಿಟ್ಟರು.
೧೯೦೬ರಲ್ಲಿಯೇ ‘ರಾಷ್ಟ್ರೀಯ ಶಿಕ್ಷಣ ಪರಿಷದ್’ ರಚನೆಯಾಯಿತು. ಆಮೇಲೆ ಕ್ರಮಕ್ರಮವಾಗಿ ಬೆಂಗಾಲ್ ನ್ಯಾಶನಲ್ ಕಾಲೇಜ್ ಮೊದಲಾದ ದೇಶೀಯ ಶಿಕ್ಷಣ ಸಂಸ್ಥೆಗಳು ಎಲ್ಲೆಡೆ ಆರಂಭವಾಗತೊಡಗಿದವು.
ಜನರ ಶ್ರದ್ಧೆ ಜಾಗೃತವಾದರೆ ಏನೆಲ್ಲ ‘ಅಸಾಧ್ಯ’ಗಳು ‘ಸಾಧ್ಯ’ಗಳಾಗಿಬಿಡುತ್ತವೆ – ಎನ್ನಲು ಈ ಎಲ್ಲ ಬೆಳವಣಿಗೆಗಳು ಸಾಕ್ಷಿಯಾದವು.
ಜ್ವಾಲೆಯಾದ ಕಿಡಿ
೧೯೭೦ರ ಮೇ ತಿಂಗಳಲ್ಲಿ ವಿನಾಕಾರಣ ಲಾಲಾ ಲಜಪತರಾಯ್ರಂಥ ಗೌರವಾನ್ವಿತ ನಾಯಕರನ್ನು ಸರ್ಕಾರ ಗಡೀಪಾರು ಮಾಡಿದ್ದು ಮಂದಗಾಮಿಗಳೂ ಸೇರಿದಂತೆ ಎಲ್ಲರನ್ನೂ ಆಕ್ರೋಶಗೊಳಿಸಿತು. ಕೆಲವೇ ತಿಂಗಳುಗಳೊಳಗೆ ತಿಲಕರು, ಬಿಪಿನ್ಚಂದ್ರಪಾಲ್ – ಎಲ್ಲ ನಾಯಕರೂ ಸೆರೆ ಸೇರಿದರು. ಇನ್ನು ನಿಷ್ಕಿçಯರಾಗಿ ಉಳಿಯುವುದರಲ್ಲಿ ಅರ್ಥವಿಲ್ಲವೆನಿಸಿ ಕ್ರಾಂತಿಕಾರಿಗಳು ಸತ್ವರಗೊಂಡರು. ಫುಲ್ಲರನ ಮೇಲೆ ಮೂರು ಬಾರಿ ಹತ್ಯೆಯ ಯತ್ನಗಳು ನಡೆದವು; ಕರ್ಣಾವತಿಯಲ್ಲಿ ವೈಸರಾಯ್ ಮಿಂಟೋ ಕೊಲೆ ಪ್ರಯತ್ನ ನಡೆಯಿತು. ನಾಸಿಕದಲ್ಲಿ ಕಲೆಕ್ಟರನು ಕೊಲೆಗೀಡಾದ; ಲಂಡನ್ನಿನಲ್ಲಿ ಭಾರತ ವ್ಯವಹಾರ ಗೃಹ ಸಚಿವನಾಗಿದ್ದ ಮಾರ್ಲೆಯ ಕಾರ್ಯದರ್ಶಿಯೇ ಗುಂಡಿಗಾಹುತಿಯಾದ. ಈ ಪ್ರಮಾಣದ ಸಾಹಸಪ್ರವಣತೆ ಬ್ರಿಟಿಷ್ ಸರ್ಕಾರದ ನಿರೀಕ್ಷೆಗೆ ಮೀರಿದುದಾಗಿತ್ತು.
ನೋಡುನೋಡುತ್ತಿದ್ದಂತೆ ಕ್ರಿಯಾಶೀಲ ಸ್ವಾತಂತ್ರ್ಯಸಂಘರ್ಷ ಗರಿಗೆದರಿ ನಿಸ್ಸತ್ತ್ವ ಕಾಂಗ್ರೆಸಿನ ಕಲ್ಪನೆಗೂ ಮೀರಿ ಎಲ್ಲೆಡೆ ಹರಡಿತು. ಮ್ಯಾಜಿಸ್ಟ್ರೇಟ್ ಕಿಂಗ್ಸ್ಫರ್ಡ್ನ ಹತ್ಯಾ ಪ್ರಯತ್ನ (೩೦-೪-೧೯೦೮), ಅಲಿಪುರ ಬಾಂಬ್ ಪ್ರಕರಣ (೨-೫-೧೯೦೮), ಮದನಲಾಲ ಧಿಂಗ್ರಾನಿಂದ ಕರ್ಜನ್ ವೈಲಿಯ ಹತ್ಯೆ (೧-೭-೧೯೦೯), ನಾಸಿಕದ ಮ್ಯಾಜಿಸ್ಟ್ರೇಟ್ ಜಾಕ್ಸನನ ಹತ್ಯೆ (೨೧-೧೨-೧೯೦೯), ಗ್ವಾಲಿಯರ್, ಸಾತಾರಾ, ಹೌಡಾ, ಢಾಕಾ – ಹೀಗೆ ಎಲ್ಲೆಡೆ ಸಶಸ್ತç ಕ್ರಾಂತಿಯತ್ನಗಳು ಹರಡಿದವು.
೧೯೦೮ರಿಂದ ೧೯೧೪ರವರೆಗೆ ಆರು ವರ್ಷ ಕಾಲ ತಿಲಕರಿಗೆ ಸಶ್ರಮ ಕಾರಾಗೃಹವಾಸ ವಿಧಿಸಿ ಅವರನ್ನು ಬರ್ಮಾದ ಮಂಡಾಲೆಗೆ ಕಳಿಸಲಾಯಿತು.
ಹೊಸ ದರ್ಶನ
೧೯೦೮ರ ಮೇ ೨ರಂದು ಅರವಿಂದರೂ ಅಲಿಪುರ ಬಾಂಬ್ ಮೊಕದ್ದಮೆಯಲ್ಲಿ ಬಂಧಿತರಾದರು. ಮೊಕದ್ದಮೆಯಲ್ಲಿ ಚಿತ್ತರಂಜನ್ದಾಸ್ ಅರವಿಂದರ ಪರವಾಗಿ ವಾದ ಮಾಡಿದ್ದು, ಸರ್ಕಾರ ಅರವಿಂದರಿಗೆ ಒಂದು ವರ್ಷದ ಕಾರಾಗೃಹವಾಸವನ್ನಷ್ಟೇ ವಿಧಿಸಬೇಕಾಗಿ ಬಂದದ್ದು, ೧೯೦೯ರ ಮೇ ೬ರಂದು ಅವರು ಬಂಧವಿಮುಕ್ತರಾದದ್ದು – ಇವೆಲ್ಲ ಸುವಿದಿತ.
‘ವಂದೇ ಮಾತರಂ’ ಪತ್ರಿಕೆಯನ್ನು ಸರ್ಕಾರ ನಿಷೇಧಿಸಿದ್ದುದರಿಂದ ಅರವಿಂದರು ‘ಕರ್ಮಯೋಗಿನ್’ ಎಂಬ ಇಂಗ್ಲಿಷ್ ವಾರಪತ್ರಿಕೆಯನ್ನು ಆರಂಭಿಸಿ ಅದರ ಮೂಲಕ ತಮ್ಮ ಸ್ವರಾಜ್ಯಸಂದೇಶ ಪ್ರಸಾರ ಮಾಡತೊಡಗಿದರು. ಅವರ ‘ಉತ್ತರಪಾಡಾ ಭಾಷಣ’ (ಮೇ ೩೦, ೧೯೦೯) ಪ್ರಸಿದ್ಧವಾದ್ದು:
“I say no longer that nationalism is a creed, a religion, a faith; I say that it is the Dharma which for us is nationalism.”
ಸನಾತನಧರ್ಮ ಮತ್ತು ರಾಷ್ಟ್ರೀಯತೆ ಎರಡೂ ಒಂದೇ – ಎಂಬ ಅವರ ಮಾತಿನ ಅರ್ಥ: ರಾಷ್ಟ್ರೀಯತೆ ಇರುವುದೇ ಸನಾತನಧರ್ಮದ ಉತ್ಥಾನಕ್ಕಾಗಿ ಎಂದು ಮತ್ತು ರಾಷ್ಟ್ರೀಯತೆಯಿಂದ ಪ್ರತ್ಯೇಕವಾಗಿದ್ದರೆ ಸನಾತನ ಧರ್ಮ ಉಳಿಯುವುದೇ ಇಲ್ಲ ಎಂದು.
ಬಂಗಾಳದಲ್ಲಿ ಬಿಪಿನ್ಚಂದ್ರಪಾಲ್ ಮತ್ತು ಅರವಿಂದರೂ, ಪಂಜಾಬಿನಲ್ಲಿ ಲಜಪತ್ರಾಯ್ರವರೂ, ಮಹಾರಾಷ್ಟ್ರದಲ್ಲಿ ಲೋಕಮಾನ್ಯ ತಿಲಕ್ರವರೂ ಸ್ವಾತಂತ್ರ್ಯೋದ್ಯಮಕ್ಕೆ ಜೀವಂತಿಕೆ ತುಂಬಿದಂತೆ ದಕ್ಷಿಣ ಭಾರತದಲ್ಲಿ ಸ್ವದೇಶೀ ‘ವಂದೇ ಮಾತರಂ’ ಆಂದೋಲನದ ಸಾರಥ್ಯ ವಹಿಸಿದವರು ಸುಬ್ರಹ್ಮಣ್ಯ ಭಾರತಿ, ವಿ.ಒ. ಚಿದಂಬರಂ ಪಿಳ್ಳೆ, ಸುಬ್ರಹ್ಮಣ್ಯ ಶಿವ. ಈ ಮೂವರೂ ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಹೋರಾಟದ ಕಣಕ್ಕೆ ಇಳಿದವರು. ಅಸೀಮ ಶೋಷಣೆ ನಡೆಸುತ್ತಿದ್ದ ಬ್ರಿಟಿಷರಿಗೆ ಸವಾಲೊಡ್ಡಿ ಸ್ವದೇಶೀ ಸ್ಟ್ರೀಮ್ ನ್ಯಾವಿಗೇಶನ್ ಕಂಪೆನಿಯನ್ನು ಸ್ಥಾಪಿಸಿದ ಚಿದಂಬರಂ ಪಿಳ್ಳೆಯವರ ವೀರಗಾಥೆ ಚರಿತ್ರಾರ್ಹ.
* * *
೧೯೧೦ರ ಅಂತ್ಯದ ವೇಳೆಗೆ ಸರ್ಕಾರವು ಹೇಗಾದರೂ ತಾನೇ ಸೃಷ್ಟಿಸಿಕೊಂಡಿದ್ದ ಗೊಂದಲದಿಂದ ಹೊರಬರಬೇಕೆಂದು ಬಯಸತೊಡಗಿತ್ತು. ಎಷ್ಟೇ ಪ್ರಬಲ ಸರ್ಕಾರಕ್ಕಾಗಲಿ ದಮನಧೋರಣೆಯನ್ನೇ ಅವಲಂಬಿಸಿ ತುಂಬಾ ದೀರ್ಘಕಾಲ ಮುನ್ನಡೆಯುವುದು ಹಿತವೆನಿಸದು; ಇರುಸುಮುರುಸು ತಪ್ಪಿದ್ದಲ್ಲ. ಭಾರತದ ಬಗ್ಗೆ ಸಹಾನೂಭೂತಿ ಇರದಿದ್ದ ಅಧಿಕಾರಿಗಳೂ ವಿಭಜನೆಯನ್ನು ರದ್ದುಮಾಡಬಹುದೆಂದು ಸಲಹೆ ಮಾಡತೊಡಗಿದ್ದರು.
೧೯೧೧ ಡಿಸೆಂಬರ್ ನಡುಭಾಗದಲ್ಲಿ ಇಂಗ್ಲೆಂಡಿನ ಸಾಮ್ರಾಟ ಪಂಚಮ ಜಾರ್ಜ್ ಭಾರತಕ್ಕೆ ಭೇಟಿ ನೀಡಿ ದೆಹಲಿ ದರ್ಬಾರಿನಲ್ಲಿ ವಂಗವಿಭಜನೆಯು ರದ್ದಾದ ಘೋಷಣೆ ಮಾಡಿದ.
ಕೂಟನೀತಿ
ಅದೇ ಸಮಯದಲ್ಲಿ ಮುಸ್ಲಿಮರನ್ನು ಸಾಂತ್ವನಗೊಳಿಸುವುದಕ್ಕಾಗಿ (ಜೊತೆಗೇ ಬಂಗಾಳದ ಜನರಿಗೆ ತೇಜೋಭಂಗ ಮಾಡುವುದಕ್ಕಾಗಿ) ದೇಶದ ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ಸ್ಥಳಾಂತರಿಸಿದ್ದು ಬ್ರಿಟಿಷರ ಕೂಟನೀತಿಗೆ ಮತ್ತೊಂದು ನಿದರ್ಶನ. ಹಿಂದೆ ಭಾರತದಲ್ಲಿ ಮುಸ್ಲಿಂ ಪ್ರಾಬಲ್ಯವಿದ್ದ ಕಾಲದಲ್ಲಿ ದೆಹಲಿ ರಾಜಧಾನಿಯಾಗಿತ್ತೆಂದು ಮುಸ್ಲಿಮರಿಗೆ ನೆನಪಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. ಸ್ಥಳಾಂತರಕ್ಕೆ ಮತ್ತೊಂದು ಕಾರಣವೆಂದರೆ – ಜನತೆಯ ಅತೃಪ್ತಿ ವಂಗಭಂಗದ ಬಗ್ಗೆ ಮಾತ್ರವಲ್ಲದೆ ಬ್ರಿಟಿಷ್ ಆಳ್ವಿಕೆಯ ಬಗ್ಗೆಯೇ ಇತ್ತೆಂದೂ, ವಂಗಭಂಗ ರದ್ದತಿಯಿಂದ ಜನರು ಶಾಂತವಾದಂತೆ ಕಂಡರೂ ಸಶಸ್ತ್ರ ಕ್ರಾಂತಿಕಾರಿಗಳ ಭೂಗತ ಚಟುವಟಿಕೆ ಸತತವಾಗಿ ನಡೆದಿರುವುದರಿಂದ ಅಧಿಕಾರಕೇಂದ್ರವನ್ನು ಆ ಪ್ರಭಾವಕ್ಷೇತ್ರದಿಂದ ದೂರವಿರಿಸಿದರೆ ಕ್ಷೇಮವೆಂದೂ ಸರ್ಕಾರಕ್ಕೆ ಈ ವೇಳೆಗೆ ಖಾತರಿಯಾಗಿತ್ತು.
೧೯೧೧ರ ನಂತರವೂ ಕ್ರಾಂತಿಕಾರಿಗಳ ಉರುಬು ಮಾತ್ರ ತಗ್ಗಲಿಲ್ಲ. ಬ್ರಿಟಿಷ್ ಪ್ರಭುತ್ವದ ನಿರ್ಲಕ್ಷ್ಯ, ಆಗಿನ ಮುಖ್ಯಧಾರೆಯ ನಾಯಕತ್ವದ ನಿರ್ವೀರ್ಯತೆ – ಎರಡೂ ಸಿದ್ಧಗೊಂಡಿದ್ದವು. ೧೯೧೨ರ ಡಿಸೆಂಬರ್ನಲ್ಲಿ ಲಾರ್ಡ್ ಹಾರ್ಡಿಂಗ್ ಮೆರವಣಿಗೆಯಲ್ಲಿ ವೈಭವದಿಂದ ದೆಹಲಿ ಪ್ರವೇಶಿಸುತ್ತಿದ್ದಾಗ ಅವನ ಮೇಲೆಯೆ ಬಾಂಬೆಸೆಯಲಾಯಿತು. ಅವನ ಪರಿವಾರದ ಹಲವರು ಸತ್ತರು; ಹಾರ್ಡಿಂಗ್ ಗಾಯಗೊಂಡ. ಸರ್ಕಾರವು ೧ ಲಕ್ಷ ರೂ. ಬಹುಮಾನ ಘೋಷಿಸಿದರೂ ಅಪರಾಧಿಗಳ ಪತ್ತೆಯಾಗಲಿಲ್ಲ.
ಭಾರತೀಯರ ರಾಷ್ಟ್ರವಾದಕ್ಕೆ ಪ್ರತಿಭಾರವಾಗಿ ಬ್ರಿಟಿಷ್ ಪ್ರಭುತ್ವ ಮುಸ್ಲಿಂ ಪ್ರತ್ಯೇಕತಾವಾದವನ್ನು ಎಬ್ಬಿಸಿ ನಿಲ್ಲಿಸಿತು. ೧೯೦೯ರಲ್ಲಿ ‘ಮಾರ್ಲೆ-ಮಿಂಟೋ ಸುಧಾರಣೆ’ ಎಂದು ಪ್ರಸಿದ್ಧವಾದ ಶಾಸನದ ಮೂಲಕ ಬೀಜಾರೋಪವಾದ ಪ್ರತ್ಯೇಕತಾವಾದ ಶಾಶ್ವತವಾಗಿ ಉಳಿದು ಬೆಳೆಯಿತು. ಅದರ ಅಂತಿಮ ಪರಿಣಾಮವೇ ೧೯೪೭ರಲ್ಲಿ ಆದ ದೇಶವಿಭಜನೆ ಮತ್ತು ಆಮೇಲಿನ ಕಾಲದಲ್ಲಿಯೂ ಸೆಕ್ಯುಲರಿಸ್ಮ್ ಹೆಸರಿನಲ್ಲಿ ಇವತ್ತಿನವರೆಗೂ ಮುಂದುವರಿದಿರುವ ಮುಸ್ಲಿಂ ತುಷ್ಟೀಕರಣ ಧೋರಣೆ.
೧೯೧೪-೧೮ರ ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಶತ್ರುರಾಜ್ಯ ಜರ್ಮನಿಯೊಡನೆ ಟರ್ಕಿ ಕೈಜೋಡಿಸಿದ್ದುದರಿಂದ ಇಂಗ್ಲೆಂಡ್-ಟರ್ಕಿ ನಡುವೆ ಸಂಘರ್ಷವೇರ್ಪಟ್ಟು ಯುದ್ಧದಲ್ಲಿ ಮೇಲುಗೈಯಾದ ಇಂಗ್ಲೆಂಡ್, ಟರ್ಕಿಯ ಖಲೀಫ್ ಸ್ಥಾನವನ್ನು ರದ್ದುಗೊಳಿಸಿತು. ಸ್ವಯಂ ಟರ್ಕಿಯ ಜನರಿಗೇ ಖಲೀಫ್ ಬೇಡವಾಗಿದ್ದ. ವಾಸ್ತವವಾಗಿ ಅದಕ್ಕೂ ಹಿಂದೆಯೇ ಖಲೀಫ್ ಪದವಿ ಕೇವಲ ನಾಮಮಾತ್ರದ್ದಾಗಿಬಿಟ್ಟಿತ್ತು. ಬ್ರಿಟಿಷರ ಬಗ್ಗೆ ಇದ್ದ ವೈರದಿಂದ ಭಾರತದ ಮುಸ್ಲಿಮರು ಖಲೀಫನ ಪುನಃಸ್ಥಾಪನೆಗೆ ಆಗ್ರಹಿಸತೊಡಗಿದರು.
ನಿರಸನಗೊಳ್ಳದ ಭ್ರಮೆ
ಆಗತಾನೆ ಭಾರತದ ರಾಜಕಾರಣದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತಿದ್ದ ಗಾಂಧಿ ಆಲಿ ಸೋದರರ ಮತ್ತು ಮೌಲಾನಾ ಅಜಾದ್ ಅವರ ಪ್ರಚಾರದ ಪ್ರಭಾವಕ್ಕೆ ಸಿಕ್ಕಿ ಖಿಲಾಫತ್ ಆಂದೋಲನವನ್ನು ಕೈಗೆತ್ತಿಕೊಂಡರು. ಇದರಿಂದ ಇಲ್ಲಿಯ ಸ್ವಾತಂತ್ರ್ಯಾಂದೋಲನದಲ್ಲಿ ಮುಸ್ಲಿಮರು ಪಾಲ್ಗೊಳ್ಳುವಂತಾಗಲಿ ಎಂಬ ಅಂದಾಜಿನಿಂದ. ಇದರ ಪರಿಣಾಮ ದುರಂತಮಯವಾಯಿತು. ಕೇರಳದಲ್ಲಿ ಮೋಪ್ಲಾ ಬಂಡಾಯ ಮೊದಲಾದದ್ದೆಲ್ಲ ನಡೆದದ್ದು ಆಗಲೇ.
ಆ ಪೀಳಿಗೆಯ ಅಗ್ರಮಾನ್ಯ ಗಾಯಕ ವಿಷ್ಣು ದಿಗಂಬರ ಪಲುಸ್ಕರ್ ಅವರನ್ನು ೧೯೧೫ರಿಂದ ಪ್ರತಿವರ್ಷ ‘ವಂದೇ ಮಾತರಂ’ ಹಾಡುವುದಕ್ಕಾಗಿಯೇ ಕಾಂಗ್ರೆಸ್ ಅಧಿವೇಶನಗಳಿಗೆ ಆಹ್ವಾನಿಸಲಾಗುತ್ತಿತ್ತು. ಅದರ ಗಾಯನಕ್ಕೆ ೧೯೨೩ರ ಕಾಕಿನಾಡಾ ಅಧಿವೇಶನದ ಅಧ್ಯಕ್ಷ ಮಹಮ್ಮದ್ ಆಲಿ ಆಕ್ಷೇಪಿಸಿದ್ದು, ಪಲುಸ್ಕರರು ದಿಟ್ಟತನ ತೋರಿ ಆಗ್ರಹಪೂರ್ವಕ ‘ವಂದೇ ಮಾತರಂ’ ಹಾಡಿದ್ದು – ಇದೆಲ್ಲ ಪರಿಚಿತವಾದ ಘಟನೆ.
ಗಾಂಧಿ ೧೯೨೩ರ ಕಾಕಿನಾಡಾ ಕಾಂಗ್ರೆಸ್ ಅಧಿವೇಶನಕ್ಕೆ ಮಹಮ್ಮದ್ ಆಲಿಯನ್ನು ಅಧ್ಯಕ್ಷನನ್ನಾಗಿ ಮಾಡಿದರಷ್ಟೆ. ಯಾವುದೇ ಸಮ್ಮೇಳನದ ಅಧ್ಯಕ್ಷರು ಆ ಸಂಘಟನೆಯ ಸ್ವರೂಪಕ್ಕೆ ಪೂರ್ತಿ ೧೮೦0 ವಿಮುಖರಾಗಿ ನಡೆದುಕೊಳ್ಳುವುದು ವಿರಳ. ಪಲುಸ್ಕರರು ‘ವಂದೇ ಮಾತರಂ’ ಹಾಡುವುದಕ್ಕೆ ಅವರು ಆಕ್ಷೇಪಿಸಿದ್ದು – ಅದೆಲ್ಲ ಒಂದು ಭಾಗ. ಅದಕ್ಕೂ ಹೆಚ್ಚಾಗಿ – ಮಹಮ್ಮದ್ ಆಲಿ ತಮ್ಮ ಅಧ್ಯಕ್ಷಭಾಷಣದಲ್ಲಿ ಮಾತನಾಡಿದ್ದಾದರೂ ಏನು? ಹಿಂದಿನ ಮೂವ್ವತ್ತೇಳು ವರ್ಷಗಳಲ್ಲಿ ಕಾಂಗ್ರೆಸ್ ಯಾವುದನ್ನು ತನ್ನ ಆಧಾರಸಿದ್ಧಾಂತ ಎಂದು ಪ್ರತಿಪಾದಿಸಿತ್ತೋ ಅದನ್ನೇ ಮಹಮ್ಮದ್ ಆಲಿ ಪೂರ್ತಿ ಅಲ್ಲಗಳೆದರು! ‘ರಾಷ್ಟ್ರೀಯತೆ’ ಎಂಬ ತತ್ತ್ವವೇ ಸಾಮ್ರಾಜ್ಯಶಾಹಿಗೆ ದಾರಿ ಮಾಡುತ್ತದೆ, ಭಾರತದ ಸಂದರ್ಭದಲ್ಲಿ ರಾಷ್ಟ್ರೀಯತೆ ಎಂದರೆ ಹಲವು ಮತಗಳ ಒಂದು ಒಕ್ಕೂಟ – ಎಂಬ ಹೊಸ ಡೆಫಿನಿಷನ್ ಕೊಟ್ಟರು.
ಇಷ್ಟೆಲ್ಲ ಆದ ಮೇಲೂ ಗಾಂಧಿ ಮಹಮ್ಮದ್ ಆಲಿ, ಶೌಕತ್ ಆಲಿ ಅವರ ಸಂಗಡಿಕೆಯಿಂದ ಸ್ವಾತಂತ್ರ್ಯೋದ್ಯಮಕ್ಕೆ ಲಾಭವಿದೆ ಎಂಬ ತಮ್ಮ ಭ್ರಮೆಯನ್ನು ಬಿಡಲಿಲ್ಲ. ಖಿಲಾಫತ್ ಆಂದೋಲನದ ವಾತಾವರಣದ ಪ್ರಯೋಜನ ಪಡೆದುಕೊಂಡು, ಮೌಲವಿ ಸಾಹೇಬರು ಗಾಂಧಿಯವರ ಜ್ಯೇಷ್ಠಪುತ್ರ ಹರಿಲಾಲ್ ಗಾಂಧಿಯನ್ನೇ ಇಸ್ಲಾಮಿಗೆ ಮತಾಂತರ ಮಾಡಿದರು. ವಿವರ ವ್ಯಾಖ್ಯಾನದ ಆವಶ್ಯಕತೆಯಿಲ್ಲ.
ಖಿಲಾಫತ್ ಮೂಲಕ ಮಹಮ್ಮದ್ ಆಲಿ ತನ್ನ ಕೈಂಕರ್ಯ ಸಲ್ಲಿಸಿದ್ದಾದ ಮೇಲೆ ಇನ್ನೊಬ್ಬ ಮಹಮ್ಮದ್ ಆಲಿ ಮುಸ್ಲಿಂ ನಾಯಕನೆನಿಸಿ ಮುಸ್ಲಿಂಲೀಗಿನ ಮೂಲಕ ದೇಶವಿಭಜನೆಯ ಸಾಧನೆ ಮಾಡಿದರು – ಮಹಮ್ಮದ್ ಆಲಿ ಜಿನ್ನಾ. ಖಿಲಾಫತ್ ಆಂದೋಲನ ಎಷ್ಟೇ ಆತಾರ್ಕಿಕವಾಗಿದ್ದರೂ, ಭಾರತದ ನಾಯಕರನ್ನು ನಮಗೆ ಬೇಕಾದ ಹಾಗೆ ಬಗ್ಗಿಸಬಹುದು ಎಂಬುದಂತೂ ಮುಸ್ಲಿಮರಿಗೆ ಖಾತರಿಯಾಗಿತ್ತು.
ಪರ್ಯವಸಾನ
ಗಾಂಧಿ, ನೆಹರು, ಜಿನ್ನಾ – ಮೂವರೂ ಬ್ಯಾರಿಸ್ಟರುಗಳೇ. ಆದರೆ ವಕೀಲರಾಗಿ ಮತ್ತು ನಾಯಕರಾಗಿ ಗಾಂಧಿ ಮತ್ತು ನೆಹರು ಸಫಲತೆಯನ್ನು ಗಳಿಸಲಿಲ್ಲ. ಜಿನ್ನಾ ವಕೀಲರಾಗಿಯೂ ಸಫಲರಾದರು. ನಾಯಕರಾಗಿಯೂ ಸಫಲರಾದರು.
ವಿಭಜನೆಗೆ ಅವಕಾಶ ಕೊಟ್ಟು ಆ ಹಂತದಲ್ಲಿಯೇ ಎರಡು ಕೋಟಿ ಜನರ ವಿಸ್ಥಾಪನೆಗೂ ಇಪ್ಪತ್ತು ಲಕ್ಷ ಹಿಂದೂಗಳ ಮಾರಣಹೋಮಕ್ಕೂ ಗಾಂಧಿ ಮತ್ತು ನೆಹರು ಕಾರಣರಾದರು. ಆಮೇಲಾದ ಪರಿಣಾಮ ಪರಂಪರೆ ಗಣನೆಗೆ ಮೀರಿದ್ದು ಕೊಲೆಗಳೆಷ್ಟೋ, ಮಾನಭಂಗಗಳೆಷ್ಟೋ – ಲೆಕ್ಕಕ್ಕೇ ಸಿಗದಷ್ಟು.
೧೯೦೫ರಿಂದ ಆರಂಭವಾದ ಸ್ವದೇಶೀ ಆಂದೋಲನದಲ್ಲಿಯೂ ಆಮೇಲಿನ ದಶಕಗಳ ಸ್ವಾತಂತ್ರ್ಯ ಹೋರಾಟದಲ್ಲಿಯೂ ಬಂಕಿಮಚಂದ್ರರ ‘ವಂದೇ ಮಾತರಂ’ ಗೀತೆ ಮತ್ತು ಆ ಘೋಷಣೆಯ ಪಾತ್ರ ಬಹಳ ಮಹತ್ತ್ವದ್ದು. ಅಂಥ ಪ್ರೇರಣಾದಾಯಿ ಮಂತ್ರಸದೃಶ ಗೀತವನ್ನೂ ಗಾಂಧಿನೇತೃತ್ವದ ಕಾಂಗ್ರೆಸ್ ಮೂಲೆಗುಂಪು ಮಾಡಿತು.
ಆದರೆ ರಾಜಕೀಯ ವಲಯದಿಂದಾಚೆಗೆ ‘ವಂದೇ ಮಾತರಂ’ ಗೀತದ ಜನಪ್ರಿಯತೆ ಅಕ್ಷುಣ್ಣವಾಗಿ ಮುಂದುವರಿಯಿತು. ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರಿದ್ದ ನೇತಾಜಿಯವರ ಆಜಾದ್ ಹಿಂದ್ ಫೌಜಿನ ರಣಘೋಷವಾಗಿ ‘ವಂದೇ ಮಾತರಂ’ ಬಳಕೆಯಾಯಿತು. ೧೯೪೨-೪೪ರ ವರ್ಷಗಳಲ್ಲಿ ರೇಡಿಯೋ ಸೈಗಾನಿನಿಂದ ಬಿತ್ತರವಾಗುತ್ತಿದ್ದ ನೇತಾಜಿಯವರ ಸಂದೇಶ ಆರಂಭವಾಗುತ್ತಿದ್ದುದು ‘ವಂದೇ ಮಾತರಂ’ನಿಂದ.
೧೯೫೦, ಜನವರಿ ೨೬ರ ಗಣರಾಜ್ಯೋತ್ಸವಕ್ಕೆ ಮೊದಲು ಭಾರತದಾದ್ಯಂತ ಮಿಲಿಟರಿ ಮತ್ತು ಪೊಲೀಸ್ ಬ್ಯಾಂಡುಗಳು ‘ವಂದೇ ಮಾತರಂ’ ರಾಷ್ಟ್ರಗೀತವನ್ನು ಅತ್ಯುತ್ಸಾಹದಿಂದ ನುಡಿಸುತ್ತಿದ್ದವು. ಯಾರಿಗೂ ಕಷ್ಟವೆನಿಸುತ್ತಿರಲಿಲ್ಲ.
೧೯೪೮ರ ಫೆಬ್ರುವರಿ ೨೮ರಂದು ಬ್ರಿಟಿಷ್ ಸೇನೆಯ ಅಂತಿಮ ಕಂತು (First Battalion of the Somerset Light Infantry) ಭಾರತದಿಂದ ನಿರ್ಗಮಿಸುವಾಗ ಮುಂಬಯಿ ‘ಗೇಟ್ವೇ’ದಲ್ಲಿ ನಡೆದ ವಿದಾಯ ಸಮಾರಂಭದಲ್ಲಿ ಭಾರತದ ಮಿಲಿಟರಿ ಬ್ಯಾಂಡ್ ‘ಗಾಡ್ ಸೇವ್ ದಿ ಕಿಂಗ್’ ಗೀತೆಯನ್ನು ನುಡಿಸಿತು; ಬ್ರಿಟಿಷರ ಮಿಲಿಟರಿ ಬ್ಯಾಂಡ್ ‘ವಂದೇ ಮಾತರಂ’ ಗೀತೆಯನ್ನು ಸೊಗಸಾಗಿ ನುಡಿಸಿತು.
‘ವಂದೇ ಮಾತರಂ’ ಏಕೆ ಬೇಡವೆಂಬುದಕ್ಕೆ ನೆಹರು ಕೊಟ್ಟ ಕಾರಣ ಹಾಸ್ಯಾಸ್ಪದವಾಗಿತ್ತು. ಮಿಟಲಿರಿ ಬ್ಯಾಂಡಿನ ಸಂಗೀತರಚನೆಗೆ ‘ವಂದೇ ಮಾತರಂ’ಹೊಂದುವುದಿಲ್ಲವೆಂಬ ನೆಹರು ಆಕ್ಷೇಪಣೆಗೆ ಉತ್ತರವಾಗಿ ಸಂಗೀತ ಕಲಾನಿಧಿ ಕೃಷ್ಣರಾವ್ ಫುಲಂಬ್ರಿಕರ್ ಸಾರ್ವಜನಿಕವಾಗಿ ಘೋಷಣೆ ಮಾಡಿದರು. –
“ಯಾವುದೇ ಭಾರತೀಯ ಅಥವಾ ವಿದೇಶೀ ವಾದ್ಯಕ್ಕೆ ನಾನು ‘ವಂದೇ ಮಾತರಂ’ಗೀತವನ್ನು ಹೊಂದಿಸಿಕೊಡಬಲ್ಲೆ, ನನಗೆ ಅವಕಾಶ ಕೊಡಿ” – ಎಂದು. ಅವರನ್ನು ಭೇಟಿ ಮಾಡಲೂ ನೆಹರು ನಿರಾಕರಿಸಿದ್ದರು.
೧೯೦೫-೧೧ರಲ್ಲಿ ಒಂದು ಪ್ರಾಂತ ಒಡೆಯುವುದನ್ನು ವಿರೋಧಿಸಿ ದೇಶವ್ಯಾಪಿ ಚಳವಳಿ ನಡೆಯಿತು. ಅದಾದ ಮೂರೂವರೆ ದಶಕ ಕಳೆದ ಮೇಲೆ ಇಡೀ ದೇಶವನ್ನು ನಮ್ಮ ನಾಯಕರೇ ಇಬ್ಭಾಗ ಮಾಡಿದರು.
ಚಾಚಿದ ಕರಿನೆರಳು
ಹೋಗಲಿ, ವಿಭಜನೆಯ ಜೊತೆಗಾದರೂ ನೆಮ್ಮದಿಯುಂಟಾಯಿತೇ? – ಎಂದರೆ, ಇಲ್ಲ. ವಿಭಜನೆಯ ಕರಿನೆರಳಿನಿಂದ ಮುಕ್ಕಾಲು ಶತಮಾನವಾದ ಮೇಲೂ ನಾಡು ಹೊರಬರಲೇ ಇಲ್ಲ. ಕಳೆದು ಉಳಿದ, ಖಂಡವಾದ ಭಾರತದ ಉಳಿವೂ ಈಗ ಗ್ರಹಣಗ್ರಸ್ತವಾಗಿದೆ.
ದೇಶದ ಅಖಂಡತೆ ಎನ್ನುವುದು ಕೇವಲ ಭಾವನಾತ್ಮಕ ವಿಷಯ ಅಲ್ಲ. ಅದು ನಮ್ಮ ಉಳಿವಿಗೇ ಆಧಾರಶಿಲೆಯಾಗಿರುವುದು. ರಾಷ್ಟ್ರೀಯತೆ ದೃಢವಾಗಿ ಇರದಿದ್ದರೆ ಯಾರೂ ಉಳಿಯುವುದಿಲ್ಲ, ಯಾವ ಅಧಿಕಾರವೂ ಉಳಿಯುವುದಿಲ್ಲ ಎಂಬ ಮನವರಿಕೆ ಕೂಡ ಇಲ್ಲದೆ ಈಗ ರಾಷ್ಟ್ರೀಯತೆಯನ್ನು ಉದಾಸೀನ ಮಾಡಲಾಗಿದೆ.
೧೯೪೭ರ ವಿಭಜನೆಯಿಂದ, ನೌಖಾಲಿಯಿಂದ, ಜಮ್ಮು-ಕಾಶ್ಮೀರ ನರಹತ್ಯೆಯಿಂದ, ಪಾಕ್ ಯುದ್ಧಗಳಿಂದ, ಅಮರನಾಥ ಯಾತ್ರಿಕರ ಕೊಲೆಯಿಂದ, ಸಂಸದ್ಭವನದ ಮೇಲಿನ ದಾಳಿಯಿಂದ, ಅಕ್ಷರಧಾಮ ದಾಳಿಯಿಂದ, ಸರಣಿ ಬಾಂಬ್ಸ್ಫೋಟಗಳಿಂದ, ಗೋಧ್ರಾ ಪ್ರಕರಣದಿಂದ, ದಶಕಗಳುದ್ದಕ್ಕೂ ನಡೆದಿರುವ ಭಯೋತ್ಪಾದಕ ಕಾರ್ಯಾಚರಣೆಗಳಿಂದ ನಾವು ಏನಾದರೂ ಪಾಠ ಕಲಿತೆವೆ? – ಎಂದು ಕೇಳಿಕೊಳ್ಳಬೇಕಾಗಿದೆ.
ಇವತ್ತಿನ ಪರಿಸ್ಥಿತಿಯನ್ನೂ ೧೯೦೫-೧೧ರ ವರ್ಷಗಳ ಧ್ಯೇಯವಾದವನ್ನೂ ಹೋಲಿಸಿದಾಗ ಕಾಣುವ ಚಿತ್ರ ಏನು?
ಅಂದೋ? –
ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು,
ನುಗ್ಗಿದುದು ಮುಂದೆ ಧೀರದಂಡು.
ಇಂದೋ?
ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ,
ನುಗ್ಗುತ್ತಿದೆ ಮಂದೆ ಹೇಡಿಹಿಂಡು!
ಯಾವುದೇ ರಾಜ್ಯವ್ಯವಸ್ಥೆ ಇರಲಿ, ಯಾವುದೇ ಪಕ್ಷ ಸರ್ಕಾರವೇ ಇರಲಿ, ದೇಶದ ಭದ್ರತೆಗೆ ಆದ್ಯತೆ ಸಲ್ಲಬೇಕು. ಆದರೆ ಇವತ್ತು ಭಯೋತ್ಪಾದಕರಿಗೆ ಬಿಡುವೇ ಇಲ್ಲ. ನಕ್ಸಲೀಯರು ಮನೆಬಾಗಿಲಿಗೇ ಬಂದಿದ್ದಾರೆ.
ವಿಪರಿಣಾಮ ಸರಣಿ
ಇಂದು ಎಲ್ಲವೂ ವ್ಯಾಪಾರೀ ರೀತಿಯ ಪರಿವರ್ತನೆಗೊಳಗಾಗಿದೆ. ದೇಶದ ಅಖಂಡತೆ – ಶ್ರದ್ಧಾರ್ಹವೇನಲ್ಲ. ರಾಷ್ಟ್ರೀಯತೆ – ಅದು ಕಾಲ್ಪನಿಕ ಅಷ್ಟೆ. ಬಹುಸಂಖ್ಯಾತರ ಹಿತ – ಇದಕ್ಕಿಂತ ಸೆಕ್ಯುಲರಿಸ್ಮ್ ಮಹತ್ತ್ವದ್ದು – ಎನ್ನುತ್ತಿದೆ ಕಾಂಗ್ರೆಸ್. ದೇಶದ ಭದ್ರತೆ – ಇದಕ್ಕಿಂತ ಅಧಿಕಾರಗ್ರಹಣ ಮುಖ್ಯ. ಈ ವಾತಾವರಣ ಇರುವುದರಿಂದ ಎಷ್ಟೇ ಘೋರ ವಿಕೃತಿಗಳೂ ಮಾಮೂಲೆನಿಸಿಬಿಡುತ್ತವೆ. ಕರ್ನಾಟಕ ಸರ್ಕಾರ ಶಾಲಾ ಪಠ್ಯಪುಸ್ತಕಗಳಿಂದ ಸಾವರಕರರ ಹೆಸರನ್ನು ತೆಗೆದುಹಾಕಲಾಗುತ್ತದೆ. ಕೇರಳ ಸರ್ಕಾರ ರಾಷ್ಟ್ರಗೀತೆಯಿಂದಲೇ ಗುಜರಾತಿನ ಹೆಸರನ್ನು ತೆಗೆದುಹಾಕುತ್ತದೆ.
ಮನ್ಸೂರ್ ಪಟೌಡಿ ಜಿಂಕೆಯನ್ನೂ ಹುಲಿಯನ್ನೋ ಬೇಟೆಯಾಡಿದ್ದು ಸುದ್ದಿಯಾಗುತ್ತದೆ. ಆದರೆ ಮನುಷ್ಯರನ್ನೇ ಬೇಟೆಯಾಡಿ ಕೊಲ್ಲುವ ಕೆಲಸವನ್ನು ನಕ್ಸಲೀಯರು ನಿರಂತರ ಮಾಡುತ್ತಿದ್ದಾರಲ್ಲ!
ಇವತ್ತು ಇಡೀ ದೇಶದ ಅರಣ್ಯಪ್ರದೇಶದಲ್ಲಿ ಶೇ.೧೯ರಷ್ಟು ನಕ್ಸಲೀಯರ ವಶದಲ್ಲಿದೆ. ಅರಣ್ಯವಾಸಿಗಳ ಕಣ್ಣಲ್ಲಿ ಸರ್ಕಾರಕ್ಕೂ ನಕ್ಸಲೀಯರಿಗೂ ನಡುವೆ ವ್ಯತ್ಯಾಸವೇ ಅಳಿಸಿಹೋಗಿದೆ. ಅರಣ್ಯಗಳ ಮಾಫಿಯಾಗಳು ನಕ್ಸಲೀಯರಿಗೆ ‘ಪ್ರೊಟೆಕ್ಷನ್ ಮನಿ’ ಕೊಟ್ಟು ತಮ್ಮ ದಂಧೆಯನ್ನು ಸಲೀಸಾಗಿ ನಡೆಸುತ್ತಿದ್ದಾರೆ.
ಸರ್ಕಾರಗಳ ಮೃದುಧೋರಣೆಯಿಂದ ಅಹಿಂದೂಕರಣ ಎಷ್ಟು ವೇಗವಾಗಿ ಸಾಗಿದೆ ಎನ್ನಲು ಪುರಾವೆಗಳ ಕೊರತೆಯಿಲ್ಲ.
ನಾವು ಪ್ರತಿದಿನ ದೇವರ ಪೂಜೆ ಮಾಡುವಾಗ ‘ಭರತವರ್ಷೇ ಭರತಖಂಡೇ’ ಎಂದು ಸಂಕಲ್ಪ ಹೇಳುತ್ತೇವೆ. ಆದರೆ ರಾಷ್ಟ್ರೀಯತೆಯನ್ನಾಗಲೀ ರಾಷ್ಟ್ರೀಯಗಡಿಗಳನ್ನಾಗಲೀ ಕ್ರೈಸ್ತರೂ ಮುಸಲ್ಮಾನರೂ ಒಪ್ಪುವುದೇ ಇಲ್ಲ! ಭಾರತವೂ ಹಿಂದಿದ್ದ ಸೋವಿಯತ್ ಒಕ್ಕೂಟದಂತೆ ಅಥವಾ ಯುಗೊಸ್ಲಾವಿಯದಂತೆ ಛಿದ್ರಗೊಂಡರೆ ಅದು ಕ್ರೈಸ್ತರ ಮತ್ತು ಮುಸಲ್ಮಾನರ ದೃಷ್ಟಿಯಲ್ಲಿ ಸಮಸ್ಯೆಯೇ ಅಲ್ಲ.
ನಾವು ಯಾವ ‘ಸೆಕ್ಯುಲರಿಸ್ಮ್’ ಕುರಿತು ಮೂರು ಹೊತ್ತು ಗಂಟಲು ಹರಿದುಕೊಳ್ಳುತ್ತೇವೋ ಅದನ್ನು ತಾತ್ತ್ವಿಕವಾಗಿ ಕೂಡ ಮುಸಲ್ಮಾನರಾಗಲಿ ಕ್ರೈಸ್ತರಾಗಲಿ ಒಪ್ಪುವುದಿಲ್ಲ.
ಈಗ್ಗೆ ಹತ್ತೊಂಬತ್ತು ವರ್ಷ ಹಿಂದೆ (ಮೇ ೨೦೦೫) ಇಟಲಿಯ ಬಾರಿ ಎಂಬೆಡೆ ೧೫೦೦೦ ಯಾತ್ರಿಕರಿದ್ದ ‘ಸ್ಪೆಷಲ್ ಮಾಸ್’ನಲ್ಲಿ ಪೋಪ್ ಬೆನೆಡಿಕ್ಟ್ ಹೇಳಿದರು:
“From a spiritual point of view, the world in which we live, so often marked by runway consumerism, religious indifference and by secularism…. can seem a desert.”
– (Economic Times) ೩೦.೫.೨೦೦೫
ಇಂಥ ಧೋರಣೆಗಳು ದೇಶದ ಅಖಂಡತೆಗೆ ಘಾತಕವೆಂಬುದೂ ಸ್ವಯಂಸಿದ್ಧ. ಸಮಾಜದ ಮುಖ್ಯಧಾರೆಯಿಂದ ಮುಸ್ಲಿಮರನ್ನು ದೂರ ಸರಿಸುವಂತ ನೀತಿಗಳನ್ನು ಕಾಂಗ್ರೆಸ್ ಸರ್ಕಾರಗಳು ರಾಜಕೀಯ ಲಾಭಕ್ಕೋಸ್ಕರ ಜಾರಿ ಮಾಡುತ್ತಿವೆ.
ಎಲ್ಲಿಯವರೆಗೆ ಪಕ್ಷಗಳು ಮತಗಳಿಕೆಗಾಗಿ ‘ಅಲ್ಪಸಂಖ್ಯಾತ’ರ ಪ್ರತ್ಯೇಕತಾಭಾವನೆಯನ್ನು ಬೆಳೆಸಿ ಅವರಿಗೆ ವಿಶೇಷ ಹಕ್ಕುಗಳನ್ನೂ ಸವಲತ್ತುಗಳನ್ನು ತೆರಿಗೆ ವಿನಾಯಿತಿಗಳನ್ನು ಆರಕ್ಷಣೆಗಳನ್ನು ಕೊಡುತ್ತಿರುತ್ತವೋ ಅಲ್ಲಿಯವರೆಗೆ ಅವರ ಅರಾಷ್ಟ್ರೀಯ ಮನೋಭಂಗಿ ಮುಂದುವರಿಯುತ್ತದೆ.
೧೮೫೭ರ ಸ್ವಾತಂತ್ರ್ಯ ಯುದ್ಧ ಸೈನಿಕ ನೆಲೆಯಲ್ಲಿ ನಡೆಯಿತು. ಎರಡನೆ ಸ್ವಾತಂತ್ರ್ಯ ಯುದ್ಧ ಬೀದಿಗಳಲ್ಲಿ ನಡೆಯಿತು. ಈಗ ಚಾಲೂ ಇರುವ ಮೂರನೆಯ ಸ್ವಾತಂತ್ರ್ಯ ಯುದ್ಧ ಮಾನಸಿಕ-ಬೌದ್ಧಿಕ ಸ್ತರದಲ್ಲಿ ನಡೆಯಬೇಕಾಗಿದೆ. ತುಷ್ಟೀಕರಣ ಎನ್ನುವುದು ಒಂದು ವ್ಯಾಪಾರವಷ್ಟೆ. “ನೀವು ನಮಗೆ ವೋಟ್ ಕೊಡಿ. ನಾವು ನಿಮಗೆ ಈ ಸವಲತ್ತುಗಳನ್ನು ಕೊಡುತ್ತೇವೆ.” ಇಂಥ ಕೊಡು-ಕೊಳ್ಳುವ ವ್ಯವಹಾರಗಳಿಂದ ರಾಷ್ಟçವನ್ನು ಕಟ್ಟುವುದಾಗಲಿ ಉಳಿಸಿಕೊಳ್ಳುವುದಾಗಲಿ ಸಾಧ್ಯವಿಲ್ಲ. ಆಜಾದ್ ಹಿಂದ್ ಫೌಜನ್ನು ವಹಿಸಿಕೊಂಡಾಗ (೫ ಜುಲೈ ೧೯೪೩) ನೇತಾಜಿ ಹೇಳಿದ್ದೇನು?
“I can offer you nothing except hunger, thirst, privation, forced marches and death. But if you follow me in life and death… I shall lead you to victory and freedom.”
ರಾಷ್ಟ್ರೀಯತೆಗೆ ಅಸ್ತಿಭಾರ ಹಾಕಬಲ್ಲುದು ಅಂಥ ಅಸ್ಖಲಿತ ನಿಷ್ಠೆ ಮಾತ್ರ.
ಸೌಜನ್ಯದ ಸೀಮೆ
ಗುಜರಾತ್ ಕಲೆಕ್ಟರ್ ಬರೋಡಕ್ಕೆ ಬಂದಿದ್ದರು. ಅದಕ್ಕೆ ಮೊದಲು ಅವರು ಅಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಜನರ ಪರಿಚಯ ಬಹಳ ಹಿಂದಿನಿಂದ ಇತ್ತು. ಬಂದ ಕಾರ್ಯಗಳೆಲ್ಲಾ ಮುಗಿದ ಮೇಲೂ ಅವರು ಕಚೇರಿಯಲ್ಲೆ ಯಾರಿಗಾಗಿಯೋ ಕಾಯುತ್ತ ಕುಳಿತಿದ್ದರು. ಆದರೆ ಅವರು ಇನ್ನೂ ಬಂದಿರಲಿಲ್ಲ. ಕೊನೆಗೆ ಪಕ್ಕದಲ್ಲಿದ್ದವನನ್ನು ಕರೆದು “ಇಲ್ಲಿ ಶಂಕರಭಾಯಿ ಎಂಬ ಹೆಸರಿನ ಒಬ್ಬ ಗುಮಾಸ್ತೆ ಇದ್ದರಲ್ಲಾ. ಅವರು ಎಲ್ಲಿದ್ದಾರೆ?” – ಎಂದು ಕೇಳಿದರು. “ಅವರಿಗೆ ರಿಟೈರ್ ಆಯಿತು” ಎಂದು ಅವನು ಹೇಳಿದ. “ನಾನು ಕೇಳಿದೆನೆಂದು ಹೇಳಿ ಅವರನ್ನು ಕರೆದುಕೊಂಡು ಬನ್ನಿ.” “ಅವರಿಗೆ ತುಂಬ ಕಾಯಿಲೆಯಾಗಿದೆ. ಹಾಸಿಗೆಯಿಂದ ಮೇಲೇಳಲೂ ಶಕ್ತಿ ಇಲ್ಲ.” ಇದನ್ನು ಕೇಳಿ ಕಲೆಕ್ಟರ್ ಆ ಕ್ಷಣ ಶಂಕರಭಾಯಿಯನ್ನು ಕಾಣಲು ತಾವೇ ಹೊರಟರು.
ಕಲೆಕ್ಟರನ್ನು ನೋಡಿದ ಶಂಕರಭಾಯಿ ಹಾಸಿಗೆಯಿಂದ ಮೇಲೇಳಲು ಪ್ರಯತ್ನಿಸಿದರು. ಅವರನ್ನು ಪುನಃ ಹಾಸಿಗೆಯ ಮೇಲೆ ಮಲಗಿಸುತ್ತ ಅಧಿಕಾರಿಯು “ಕ್ಷಮಿಸಿ, ನನಗೆ ನಿಮ್ಮ ಅನಾರೋಗ್ಯದ ವಿಷಯ ತಿಳಿದಿರಲಿಲ್ಲ. ಇಲ್ಲದಿದ್ದರೆ ಮೊದಲೇ ಬಂದುಬಿಡುತ್ತಿದ್ದೆ” ಎಂದರು. “ನೀವು ಊರಿಗೆ ಬಂದಿರುವ ವಿಚಾರ ತಿಳಿದಾಗಿನಿಂದಲೂ ಮನಸ್ಸು ನಿಮ್ಮನ್ನು ಕಾಣಲು ಹಾತೊರೆಯುತ್ತಿದೆ. ಈ ಕಾಯಿಲೆಯಿಂದಾಗಿ ಅಸಹಾಯಕನಾಗಿದ್ದೇನೆ” ಎಂದು ಗದ್ಗದಿತರಾಗಿ ನುಡಿದರು ಶಂಕರಭಾಯಿ.
ಅದಕ್ಕೆ ಅವರು ನೀವು “ಕಾಯಿಲೆಯಿಂದಾಗಿ ಬರಲಾಗಲಿಲ್ಲ. ಆದರೆ ನಾನು ದೃಢಕಾಯನಾಗಿದ್ದೂ ನಿಮ್ಮ ಭೇಟಿಗೆ ಬರಲಿಲ್ಲವೆಂದರೆ ಇದು ಅಕ್ಷಮ್ಯವೇ ಸರಿ” ಎಂದು ತುಂಬ ಪೇಚಾಡಿಕೊಂಡರು.
ಆ ಕಲೆಕ್ಟರ್ ಮತ್ತಾರೂ ಅಲ್ಲ, ಗುಜರಾತಿ ಸಾಹಿತ್ಯದ ಪ್ರಖ್ಯಾತ ಸಾಹಿತಿ ರಮಣಲಾಲ ವಸಂತಲಾಲ ದೇಸಾಯಿ.