ಭಾರತಕೇಂದ್ರಿತವಾಗಿ ಎಐ ಉಪಯೋಗದ ತಂತ್ರಾಂಶಗಳನ್ನು ಸೃಷ್ಟಿಸಬೇಕೆಂಬ ಹಲವು ಪ್ರಯತ್ನಗಳಾಗುತ್ತಿವೆ. ಉದಾಹರಣೆಗೆ, ಐಐಟಿ ಬಾಂಬೆಯು ಸೀತಾಮಹಾಲಕ್ಷ್ಮೀ ಹೆಲ್ತ್ ಕೇರ್ ಸಂಸ್ಥೆಯೊಂದಿಗೆ ಸೇರಿಕೊಂಡು ಹನೂಮಾನ್ (hanooman) ಎಂಬ ಸೃಜನಶೀಲ ಎಐ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ವೈದ್ಯರಿಗೆ ಆರೋಗ್ಯ ತಪಾಸಣೆ ಮಾಡುವುದಕ್ಕೇ ಸಮಯ ಸಾಕಾಗದ ಸ್ಥಿತಿ ಇರುವ ಭಾರತದಲ್ಲಿ, ರೋಗಿಯ ರೋಗಚರಿತ್ರೆಯ ಶಿಸ್ತುಬದ್ಧ ದಾಖಲೀಕರಣ ಕಷ್ಟಸಾಧ್ಯವಾಗಿರುವುದೊಂದು ವಾಸ್ತವ. ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ಮಾತುಗಳನ್ನೇ ಪರಿವರ್ತಿಸಿ, ರೋಗಿಯ ಆರೋಗ್ಯದಾಖಲೆಯ ಸಾರಸಂಗ್ರಹ ಮಾಡಿಡುವ ಉದ್ದೇಶ ಹನೂಮಾನ್ ಎಐ ತಂತ್ರಾಂಶದ್ದು.
ಗಮನಿಸಿ ನೋಡಿ. ಈ ಕೆಳಗೆ (ಪುಟ ೨೨) ಉದಾಹರಿಸಿದ ಯಾರೊಬ್ಬರೂ ಎಐ ಬಗ್ಗೆ ಕಾಲಹರಣಕ್ಕೆಂದು ಮಾತನಾಡಿದವರಲ್ಲ, ಮೇಲುಮೇಲಿಂದ ತಿಳಿದುಕೊಂಡವರೂ ಅಲ್ಲ. ತಂತ್ರಜ್ಞಾನ ವಲಯದಲ್ಲೇ ತೊಡಗಿಸಿಕೊಂಡವರು, ಹೂಡಿಕೆ ಮಾಡಿರುವವರು. ಅಷ್ಟಾಗಿಯೂ ಇವರೆಲ್ಲರ ಅಭಿಪ್ರಾಯಗಳು ಕೃತಕ ಬುದ್ಧಿಮತ್ತೆಯ ಬಗ್ಗೆ “ಇದಮಿತ್ಥಂ’’ ಎಂದು ಹೇಳುತ್ತಿಲ್ಲ. ಕೆಲವರಲ್ಲಿ ಎಐ ಕ್ರಾಂತಿಯ ಬಗ್ಗೆ ಅಪರಿಮಿತ ವಿಶ್ವಾಸವಿದೆ, ಇನ್ನು ಕೆಲವರಿಗೆ ಆತಂಕಗಳಿವೆ, ಹೆಚ್ಚಿನವರಿಗೆ ಆತಂಕಮಿಶ್ರಿತ ಧನಾತ್ಮಕ ಆಶಾಭಾವವಿದೆ.
ಇಂತಹದೊಂದು ಹಿನ್ನೆಲೆಯನ್ನು ಇಟ್ಟುಕೊಂಡೇ ಎಐ ಕ್ಷೇತ್ರದಲ್ಲಿ ಜಾಗತಿಕವಾಗಿ ಏನೆಲ್ಲ ಆಗುತ್ತಿವೆ, ಭಾರತವು ಈ ಸವಾಲನ್ನು ಹೇಗೆ ಎದುರಿಸುವುದಕ್ಕೆ ಹೊರಟಿದೆ, ಎಐ ಯಾವೆಲ್ಲ ಕ್ಷೇತ್ರಗಳಲ್ಲಿ ಪರಿವರ್ತನೆ ತರಬಲ್ಲದು, ಎಐ ಯುಗ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನಾವು ಯಾವೆಲ್ಲ ಎಚ್ಚರಿಕೆಗಳನ್ನು ಇಟ್ಟುಕೊಳ್ಳಬೇಕು ಎಂಬುದನ್ನೆಲ್ಲ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡೋಣ.
ಎಐ (AI) – ನಮ್ಮ ಕಣ್ಣೆದುರಿಗಿರುವ ಮಾದರಿಗಳು ಯಾವವು?
ಇಷ್ಟಕ್ಕೂ ಕೃತಕ ಬುದ್ಧಿಮತ್ತೆ (artificial Intelligence) ಎಂದರೆ ಏನು? – ಎಂದು ವ್ಯಾಖ್ಯಾನಕ್ಕೆ ಇಳಿಯುವುದಕ್ಕಿಂತ ಸುಲಭದ ಮಾರ್ಗ ಏನೆಂದರೆ, ಈಗ ನಮ್ಮ ಕಣ್ಣೆದುರಿಗೆ ಇರುವ ಜನರೇಟಿವ್ ಎಐ ಅರ್ಥಾತ್ ಸೃಜನಶೀಲ ಕೃತಕ ಬುದ್ಧಿಮತ್ತೆಯ ಉದಾಹರಣೆಗಳನ್ನು ನೋಡಿದರೆ ಅದರ ಹೊಳಹುಗಳು ಅರ್ಥವಾಗುತ್ತವೆ. ಒಂದು ನಿರ್ದಿಷ್ಟ ಕಮಾಂಡ್ ನೀಡಿದರೆ ಅಕ್ಷರ, ಚಿತ್ರ, ವಿಡಿಯೋ, ಆಡಿಯೋ ಮಾಧ್ಯಮದಲ್ಲಿ ವಿಷಯಸೃಷ್ಟಿ – ಇದರ ವ್ಯಾಪ್ತಿ. ಚಾಟ್ ಜಿಪಿಟಿ, ಕೊ ಪೈಲಟ್ ಇತ್ಯಾದಿಗಳು ಅಕ್ಷರ ಮಾದರಿಯಾದರೆ, ಇದೇ ಚಾಟ್ ಜಿಪಿಟಿಯ DALL. E2, ಹಾಗೂ ಅಡೋಬ್ ಫೈರ್ ಫ್ಲೈ – ಇವೆಲ್ಲ ನಿಮಗೆ ಎಂತಹ ಚಿತ್ರ ಬೇಕೆಂದು ಅಕ್ಷರ ಮೂಲಕ ವಿವರಿಸಿದರೆ ಅಂಥದ್ದನ್ನು ಸೃಷ್ಟಿಸುವ ತಾಣಗಳು.
ಉದಾಹರಣೆಗೆ, ನೀವು ಗೂಗಲ್ನ ಜೆಮಿನಿ ಎಂಬ ಕೃತಕ ಬುದ್ಧಿಮತ್ತೆ ಚಾಟ್ನಲ್ಲಿ ಹೀಗೆ ಕೇಳುತ್ತೀರಿ – “ಮಂಗಳ ಗ್ರಹದಲ್ಲಿ ಇರುವೆಯೊಂದು ಇಳಿದು ಸಂಶೋಧನಾ ನಿರತವಾಗಿರುವ ಚಿತ್ರ ಬಿಡಿಸಿಕೊಡು.’’ ಈ ಕಮಾಂಡ್ ಸಿಕ್ಕಿದ ಕ್ಷಣ ಅದು ಅದಾಗಲೇ ಅಂತರ್ಜಾಲದಲ್ಲಿರುವ ಇರುವೆ, ಮಂಗಳ ಗ್ರಹ, ಸ್ಪೇಸ್ ಸೂಟ್ – ಈ ಬಗೆಯ ಎಲ್ಲ ಚಿತ್ರಗಳನ್ನು ಅರೆಕ್ಷಣದಲ್ಲಿ ಓದಿಕೊಳ್ಳುತ್ತದೆ. ಹೀಗೆ ಮಿಲಿಯನ್ಗಟ್ಟಲೇ ಕಡತಗಳನ್ನು ಮಿಂಚಿನ ವೇಗದಲ್ಲಿ ಪರಿಶೀಲಿಸಿಕೊಂಡು, ಅಲ್ಲಿನ ಆಯಾಮಗಳನ್ನೆಲ್ಲ ಬಳಸಿಯೇ ನಿಮ್ಮ ಕಲ್ಪನೆಯ ಚಿತ್ರವೊಂದನ್ನು ಬರೆದುಕೊಡುತ್ತದೆ.
ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಸ್ (ಎಲ್ಎಲ್ಎಮ್) ಎಂದು ಕರೆಯಲಾಗುವ ತರ್ಕದಲ್ಲಿ ಯಂತ್ರವನ್ನು ಇದೇ ರೀತಿ ಕಲಿಕೆಗೆ ಹಚ್ಚಿಸಿ ಅದರಿಂದ ಕತೆ, ಕವಿತೆ ಬರೆಸುವ, ಲೆಕ್ಕಗಳನ್ನು ಮಾಡಿಸುವ ಹಲವು ಬಗೆಯ ಪ್ರಯೋಜನಗಳು ಈಗ ಜೆಮಿನಿ, ಕೊಪೈಲಟ್, ಚಾಟ್ ಜಿಪಿಟಿ ಮುಂತಾದವುಗಳ ಉಚಿತ ವರ್ಷನ್ಗಳಲ್ಲಿ ಲಭ್ಯ ಇವೆ. ಇವೇ ಉತ್ಪನ್ನಗಳ ಪಾವತಿ ಅವತರಣಿಕೆಗೆ ನೀವು ಹಣಕೊಟ್ಟರೆ ಅಲ್ಲಿ ಇದಕ್ಕಿಂತ ಹೆಚ್ಚಿನ ಸೃಜನಶೀಲ ಸಾಧ್ಯತೆಗಳು ನಿಮಗೆ ಸಿಗುತ್ತವೆ. ಅಂದರೆ, ಐದಾರು ಚಿತ್ರಗಳನ್ನು ಮರ್ಜ್ ಮಾಡಿ ಒಂದು ಹೊಸದನ್ನು ಸೃಷ್ಟಿಸುವುದು, ಅದಾಗಲೇ ಇರುವ ಚಿತ್ರಕ್ಕೆ ನಿಮಗೆ ಬೇಕಾದ ರೂಪಾಂತರಗಳನ್ನು ಎಐ ಮುಖಾಂತರ ಮಾಡಿಕೊಳ್ಳುವುದು, ಇಂಥ ಕೆಲಸಗಳನ್ನೆಲ್ಲ ಸಂಗ್ರಹಿಸಿ ಇಡುವುದಕ್ಕೆ ಜಾಗ ಇತ್ಯಾದಿಗಳನ್ನೆಲ್ಲ ಈ ಪೇಯ್ಡ್ ವರ್ಶನ್ ಕೊಡುತ್ತದೆ. ಒಪನ್ ಎಐನ ಸೊರಾದಂಥ ಉತ್ಪನ್ನಗಳು ಅದಾಗಲೇ ಕಮಾಂಡ್ ಆಧರಿಸಿ ಒಂದು ನಿಮಿಷದ ವಿಡಿಯೊ ಸೃಷ್ಟಿಸಿಕೊಡುವ ಸಾಮರ್ಥ್ಯ ಪ್ರದರ್ಶಿಸಿವೆಯಾದರೂ ಇವು ಸಾರ್ವಜನಿಕವಾಗಿ ಲಭ್ಯವಿಲ್ಲ.
ಹೀಗೆ ಧ್ವನಿಯಲ್ಲೋ, ಅಕ್ಷರದಲ್ಲೋ, ಚಿತ್ರದಲ್ಲೋ ಉತ್ತರಿಸುವ ಸಾಮರ್ಥ್ಯದಾಚೆಗೆ ಎಐನ ಪ್ರಯೋಜನ ಸಾಧ್ಯತೆಗಳಾದರೂ ಏನು? – ಎಂದು ನಿಮಗನಿಸಬಹುದೇನೋ. ಇದಕ್ಕೆ ಉದಾಹರಣೆಯಾಗಿ ಸ್ವಯಂಚಾಲಿತ ಎಲೆಕ್ಟ್ರಿಕ್ ಕಾರುಗಳ ಭವಿಷ್ಯದ ಚಿತ್ರಣ ನೋಡಬಹುದು. ಒಂದು ನಿರ್ದಿಷ್ಟ ಕಂಪೆನಿಯಿಂದ ಉತ್ಪಾದಿತ ಕಾರುಗಳೆಲ್ಲ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಬೀಜಿಂಗ್ನ ಯಾವುದೋ ರಸ್ತೆಯಲ್ಲಿ ಒಂದು ಸ್ವಯಂಚಾಲಿತ ಕಾರು ಅಪಘಾತಕ್ಕೆ ಒಳಗಾಯಿತೆಂದುಕೊಳ್ಳೋಣ. ಅದರೊಳಗಿನ ಎಐ ವ್ಯವಸ್ಥೆ ಆ ಅಪಘಾತ ಆಗಿದ್ದು ಹೇಗೆಂದು ತನಗೆ ಲಭ್ಯವಿರುವ ಎಲ್ಲ ಮಾಹಿತಿಗಳ ಮೇಲೆ ಲೆಕ್ಕಾಚಾರ ಕಟ್ಟುತ್ತದೆ. ರಸ್ತೆಯ ಒಂದು ಉಬ್ಬು ಇಂತಿಷ್ಟು ಸೆಂಟಿಮೀಟರ್ ಇದ್ದಿದ್ದರಿಂದ ಕಾರು ಆಯತಪ್ಪಿತು ಎಂದು ನಿರ್ಧರಿಸುತ್ತದೆ. ಅಲ್ಲದೆ, ಇಂಥ ಸನ್ನಿವೇಶದಿಂದ ಮುಂದೆ ತಪ್ಪಿಸಿಕೊಳ್ಳುವುದಕ್ಕೆ ಏನು ಮಾಡಬೇಕೆಂಬುದನ್ನು ಆ ಯಂತ್ರವೇ ವಿಶ್ಲೇಷಿಸಿ ಕಲಿತುಕೊಳ್ಳುತ್ತದೆ. ಅಷ್ಟೇ ಅಲ್ಲದೆ, ತನ್ನ ಜಾಲದ ಎಲ್ಲ ಕಾರುಗಳ ನರಮಂಡಲಕ್ಕೆ ಈ ಮಾಹಿತಿಯನ್ನು ರವಾನಿಸುತ್ತದೆ. ಹೀಗಾಗಿ, ಅದೇ ಕಾರಣಕ್ಕೆ ದೆಹಲಿಯಲ್ಲಿರುವ ಸ್ವಯಂಚಾಲಿತ ಕಾರು ಮುಂದೆಂದೋ ಅಪಘಾತವಾಗುವುದು ತಪ್ಪುತ್ತದೆ, ಏಕೆಂದರೆ ಯಂತ್ರವು ಅದರ ಉಪಾಯವನ್ನು ಕಲಿತುಬಿಟ್ಟಿದೆ.
ಇಂಥದೇ ಒಂದು ಯಂತ್ರಕಲಿಕೆ ಮತ್ತು ಸ್ವಯಂ-ನಿರ್ದೇಶನದ ಮಾದರಿಗಳನ್ನು ಚಪ್ಪಲಿ ತಯಾರಿಕೆಯಿಂದ ಹಿಡಿದು ಮನೆ ಕಟ್ಟುವವರೆಗೆ ಊಹಿಸಿಕೊಳ್ಳಿ. ಆಗ ಕೈಗಾರಿಕೆಯ ಮಟ್ಟದಲ್ಲಿ ಎಐನ ವ್ಯಾಪಕ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.
ಎಐ ಹೂಡಿಕೆ – ಇದು ಬಿಗ್ ಟೆಕ್ ಸಾಮ್ರಾಜ್ಯದ ಆಟ
ಸದ್ಯಕ್ಕಿರುವ ಚಿತ್ರಣದಂತೆ ಎಐ ಎಂಬುದು ದೈತ್ಯ ಟೆಕ್ ಕಂಪೆನಿಗಳಿಗೆ ಸಂಬಂಧಿಸಿರುವ ಆಟ. ಇದರರ್ಥ ಏನೆಂದರೆ, ಬೆಂಗಳೂರಿನಲ್ಲೋ ಅಥವಾ ಇನ್ನೆಲ್ಲೋ ಏಕಾಏಕಿ ಯಾವುದೋ ಪ್ರತಿಭೆ ದೊಡ್ಡದೊಂದು ಎಐ ಕಂಪೆನಿ ಕಟ್ಟಿಬಿಡುವ ಸಾಧ್ಯತೆ ಕಡಮೆ. ಏಕೆಂದರೆ ಈ ಇಡೀ ಪ್ರಕ್ರಿಯೆ ಎರಡು ಮುಖ್ಯ ಸಂಗತಿಗಳನ್ನು ಅಪೇಕ್ಷಿಸುತ್ತದೆ. ಅದೆಂದರೆ, ದಂಡಿ-ದಂಡಿಯಾದ ಹಣ ಹಾಗೂ ಅಪಾರ ಡಿಜಿಟಲ್ ಮಾಹಿತಿ. ಇವೆರಡೂ ಇರುವುದು ಗೂಗಲ್, ಮೈಕ್ರೋಸಾಫ್ಟ್, ಮೆಟಾ ಥರದ ಕಂಪೆನಿಗಳ ಕಡೆಯಲ್ಲಿ.
ಹೀಗಾಗಿಯೇ, ಸ್ಯಾಮ್ ಆಲ್ಟಮನ್ ನೇತೃತ್ವದ ಒಪನ್ ಎಐ ಎಂಬುದು ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಅತಿದೊಡ್ಡ ಮೌಲ್ಯಾಂಕನ ಹೊಂದಿರುವ (೮೬ ಬಿಲಿಯನ್ ಡಾಲರ್) ನವೋದ್ದಿಮೆಯಾಗಿ ಕಂಡರೂ, ಅದರಲ್ಲಿ ಹಣ ಹೂಡಿರುವವರು ಯಾರೆಂದು ಗಮನಿಸಿದರೆ – ಗೂಗಲ್, ಮೈಕ್ರೋಸಾಫ್ಟ್, ಎನ್ವಿಡಿಯಾ, ಅಮೆಜಾನ್, ಮೆಟಾ, ಕ್ವಾಲ್ಕಂ – ಹೀಗೆ ಉತ್ತರಗಳು ಸಿಗುತ್ತವೆ.
ಚಾಟ್ ಜಿಪಿಟಿ ೩, ೪ ಎಂದೆಲ್ಲ ಸುಧಾರಿತ ಅವತರಣಿಕೆಗಳನ್ನು ನೋಡುತ್ತಿರುತ್ತೇವಲ್ಲ? ಪ್ರತಿಬಾರಿಯೂ ಇವಕ್ಕೆ ಬಿಲಿಯನ್ ಡಾಲರುಗಳ ಹಣ ವ್ಯಯವಾಗಿರುತ್ತದೆ. ಅಲ್ಲದೆ, ಜಗತ್ತೆಲ್ಲ ಗೂಗಲ್, ಮೈಕ್ರೋಸಾಫ್ಟ್, ಫೇಸ್ಬುಕ್-ಮೆಟಾವನ್ನು ನಿರಂತರವಾಗಿ ಬಳಸುತ್ತ ಬಂದಿರುವುದರಿಂದ ಅವರಲ್ಲಿಯೇ ಮಾಹಿತಿ ಸಮುದ್ರವೊಂದು ಸೃಷ್ಟಿಯಾಗಿದೆ. ಬೃಹತ್ ಭಾಷಾ ಮಾದರಿಗಳಲ್ಲಿ ಯಂತ್ರಗಳನ್ನು ಪಳಗಿಸುವುದಕ್ಕೆ ಈ ಮಾಹಿತಿಗಳೇ ಆಧಾರ.
ಈ ಎಲ್ಲ ಕಾರಣಗಳಿಂದ, ಎಐ ಎಂಬುದು ಬಿಗ್ ಟೆಕ್ ಕಂಪೆನಿಗಳಷ್ಟೇ ಆಡಬಹುದಾದ ಆಟ. ಇವು ಸೃಜಿಸುವ ಎಐ ಮಾದರಿಗಳನ್ನು ನಮ್ಮ ಉದ್ದಿಮೆ ಮತ್ತು ವೃತ್ತಿಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ಯೋಚಿಸಿ ಇತರರು ಲಾಭ ಪಡೆದುಕೊಳ್ಳಬಹುದೇ ಹೊರತು ಇದರ ಮೂಲ ವಿಸ್ತಾರದ ಆಟವು ತಂತ್ರಜ್ಞಾನ ದಿಗ್ಗಜ ಕಂಪೆನಿಗಳಷ್ಟೇ ಆಡಲು ಸಾಧ್ಯವಾಗುವಂಥದ್ದು.
ಈ ನಿಟ್ಟಿನಲ್ಲಿ ಕೆಲವು ಅಪಸ್ವರಗಳು ಎದ್ದಿವೆಯಾದರೂ ದೀರ್ಘಾವಧಿಯಲ್ಲಿ ಬಿಗ್ ಟೆಕ್ ವಿರುದ್ಧ ಸೆಣೆಸುವುದಕ್ಕೆ ಸಾಧ್ಯವಾಗುವ ಲಕ್ಷಣಗಳಿಲ್ಲ. ಉದಾಹರಣೆಗೆ, ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಹಲವು ಮಾಧ್ಯಮ ವೇದಿಕೆಗಳು ಮತ್ತು ಪ್ರಕಾಶನ ಸಂಸ್ಥೆಗಳು ಕೆಲವು ಎಐ ಉತ್ಪನ್ನಗಳ ವಿರುದ್ಧ ಧ್ವನಿ ಎತ್ತಿವೆ. ವಿಷಯವಿಷ್ಟು. ನೀವು ಯಾವುದೋ ಗಹನ ಪ್ರಶ್ನೆಯನ್ನು ಎಐಗೆ ಕೇಳಿರುತ್ತೀರಿ. ಅದು ಉತ್ತರ ರೂಪಿಸುವುದಕ್ಕೆ ಅಂತರ್ಜಾಲವನ್ನೆಲ್ಲ ತಡಕಾಡಿದಾಗ ಅದಕ್ಕೆ ಬೇಕಿದ್ದ ಸೂಕ್ತ ಉತ್ತರ ನ್ಯೂಯಾರ್ಕ್ಸ್ ಟೈಮ್ಸ್ ಪತ್ರಿಕೆಯ ವರದಿಯೊಂದರಲ್ಲಿ ಸಿಗುತ್ತದೆ ಎಂದುಕೊಳ್ಳೋಣ. ಅದನ್ನು ಬಳಸಿ ಎಐ ಚಾಟ್ ಮಾದರಿ ಉತ್ತರ ಹೇಳಿಬಿಡುತ್ತದೆ. ಆದರೆ ಈಗ ಆ ಮಾಧ್ಯಮ ವೇದಿಕೆ ಕೇಳುವ ಪ್ರಶ್ನೆ ಎಂದರೆ – ಇದು ಕಾಪಿರೈಟ್ ಉಲ್ಲಂಘನೆ ಹಾಗೂ ನಮ್ಮ ಆದಾಯಕ್ಕೆ ಹೊಡೆತ. ಏಕೆಂದರೆ, ಇದೇ ವರದಿಯನ್ನು ಓದುವುದಕ್ಕೆ ಚಂದಾದಾರರು ಹಣ ನೀಡಿರುತ್ತಾರೆ. ಆದರೆ ಎಐ ಚಾಟ್ ಅವತರಣಿಕೆ ಅದನ್ನೇ ತಾನು ಓದಿ ಜಾಹೀರಾಗಿಸಿದರೆ ತನ್ನ ಉದ್ಯಮಕ್ಕೆ ಹೊಡೆತ, ತನಗೇನೂ ಸಿಕ್ಕುವುದಿಲ್ಲ ಎಂಬುದು ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಗಳು ಮುಂದಿಡುತ್ತಿರುವ ವಾದ.
ಎಐನಲ್ಲಿ ಭಾರತದ ಸ್ಥಾನವೇನು?
ಗೂಗಲ್, ಮೈಕ್ರೋಸಾಫ್ಟ್ ಥರದ ದೈತ್ಯ ಟೆಕ್ ಕಂಪೆನಿಗಳು ಇಲ್ಲದ ಭಾರತದಲ್ಲಿ ಚಾಟ್ ಜಿಪಿಟಿ, ಜೆಮಿನಿಯಷ್ಟು ವಿಸ್ತಾರದ ಎಐ ಕಂಪೆನಿ ಹುಟ್ಟುವುದು ಕಷ್ಟದ ಮಾತು. ಹೀಗಾಗಿ ಭಾರತವು ಮೈಕ್ರೋಸಾಫ್ಟ್ ಮತ್ತು ಗೂಗಲ್ ಥರದ ಕಂಪೆನಿಗಳ ಜತೆ ಈ ವಿಷಯದಲ್ಲಿ ಸಹಯೋಗದ ಹಾದಿ ಹಿಡಿದಿದೆ. ಈ ಸಹಯೋ ‘ಆಡಳಿತದ ಎಐ’ ಮಾದರಿಯನ್ನು.
ಅದಾಗಲೇ ಭಾರತವು ಯುಪಿಐ, ಕೊವಿನ್, ಆಧಾರ್ ಇತ್ಯಾದಿಗಳ ಮೂಲಕ ಜಗತ್ತಿಗೇ ಮಾದರಿಯಾಗಬಲ್ಲ ಸಾರ್ವಜನಿಕ ಸೇವೆಗಳ ಡಿಜಿಟಲ್ ಆವೃತ್ತಿಯನ್ನು ಹೊಂದಿದೆ. ಸದ್ಯಕ್ಕೆ ಎಐನಲ್ಲಿ ಇದೇ ಜಾಡು ಮುಂದುವರಿಸುವ ಮಾರ್ಗವನ್ನು ಭಾರತ ಹಾಕಿಕೊಂಡಂತಿದೆ.
೨೦೨೪ರ ಮಾರ್ಚ್ನಲ್ಲಿ ಕೇಂದ್ರದ ಕ್ಯಾಬಿನೆಟ್ ೧೦,೩೭೧.೯೨ ಕೋಟಿ ರೂಪಾಯಿಗಳ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಿಷನ್’ಗೆ ಅನುಮೋದಿಸಿತು. ಭಾರತ-ಕೇಂದ್ರಿತ ಸಮಸ್ಯೆಗಳನ್ನು ಬಗೆಹರಿಸುವ ಎಐ ಮಾದರಿಗಳಿಗೆ ಈ ಹಣ ವ್ಯಯಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಆರೋಗ್ಯ, ಔಷಧ ಹುಡುಕಾಟ, ಕೃಷಿ, ಶಿಕ್ಷಣ ಈ ವಿಭಾಗಗಳಲ್ಲಿ ಭಾರತ-ಕೇಂದ್ರಿತ ಎಐ ಮಾದರಿಗಳನ್ನು ರಚಿಸುವುದಕ್ಕೆ ಕೇಂದ್ರಸರ್ಕಾರವು ನವೋದ್ದಿಮೆಗಳಿಗೆ ನೆರವಾಗಲಿದೆ.
ಏನೀ ಭಾರತ-ಕೇಂದ್ರಿತ ಎಐ ಮಾದರಿ ಎಂದರೆ? ಉತ್ತರಪ್ರದೇಶದ ಒಬ್ಬ ರೈತ ಕೇಳಬಹುದಾದ ಪ್ರಶ್ನೆಗೂ, ಕರ್ನಾಟಕದ ರೈತ ಕೇಳಬಹುದಾದ ಪ್ರಶ್ನೆಗೂ, ಕರ್ನಾಟಕದಲ್ಲಿಯೇ ಬಯಲುಸೀಮೆ ರೈತನ ಭಾಷೆ ಮತ್ತು ಪ್ರಶ್ನಾಧಾಟಿಗೂ, ಮಲೆನಾಡಿಗನದ್ದಕ್ಕೂ ವ್ಯತ್ಯಾಸಗಳಿವೆ. ಇದು ಕೃಷಿಗೆ ಸಂಬಂಧಿಸಿದ ಉದಾಹರಣೆ ಮಾತ್ರ. ಇದೇ ಸವಾಲು ಎಲ್ಲ ವಿಭಾಗಗಳಲ್ಲಿಯೂ ಇದೆ. ಇಲ್ಲೆಲ್ಲ ದೊಡ್ಡಮಟ್ಟದ ಮಾದರಿ ಸಂಗ್ರಹಿಸಿ ಅದರಲ್ಲಿ ಎಲ್ಲ ಸೂತ್ರಗಳನ್ನು ಯಂತ್ರವು ಅಭ್ಯಸಿಸಿ, ಅದಕ್ಕೆ ತಕ್ಕ ಪರಿಹಾರಗಳನ್ನು ಸೂಚಿಸುವ ನಿಟ್ಟಿನಲ್ಲಿ ಸೃಜನಾತ್ಮಕ ಕೃತಕ ಬುದ್ಧಿಮತ್ತೆ ತಂತ್ರಾಂಶಗಳನ್ನು ರೂಪಿಸಬೇಕಿದೆ. ಇಲ್ಲಿ ಭಾರತದ ನವೋದ್ದಿಮೆಗಳು ಯಶಸ್ವಿಯಾದರೆ, ಇವತ್ತು ಹಣಕಾಸು ತಂತ್ರಜ್ಞಾನದಲ್ಲಿ ಭಾರತದ ಯುಪಿಐ ವ್ಯವಸ್ಥೆಯ ಅಳವಡಿಕೆ ಬೇರೆ ದೇಶಗಳಿಗೆ ಹೇಗೆ ಹೋಗುತ್ತಿದೆಯೋ ಅಂಥಾದ್ದು ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಎಐ ಮಾದರಿಗಳಲ್ಲೂ ಆದೀತು.
ಸರಿ. ಇದರಲ್ಲಿ ಸರ್ಕಾರದ ಮುಖ್ಯ ಕೆಲಸವೇನು? ಬೃಹತ್ ಭಾಷಾ ಮಾದರಿಗಳಲ್ಲಿ ಯಂತ್ರಗಳನ್ನು ತರಬೇತುಗೊಳಿಸಬೇಕಾದಾಗ ಅಲ್ಲಿ ದೊಡ್ಡಮಟ್ಟದ ಗಣಕ ಸಾಮರ್ಥ್ಯ ಬೇಕಾಗುತ್ತದೆ. ಸಾಮಾನ್ಯ ಕಂಪ್ಯೂಟರಿನ ಸಿಪಿಯು (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್) ವ್ಯವಸ್ಥೆಗೆ ಹೊರತಾದ ಜಿಪಿಯು (ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್) ಬೇಕಾಗುತ್ತದೆ. ಗೇಮಿಂಗ್ ಮತ್ತು ವಿಡಿಯೊ ಗಣಕಯಂತ್ರಗಳಿಗಿಂತ ಹೆಚ್ಚಿನ ಸಾಮರ್ಥ್ಯದ ಜಿಪಿಯು ಬೇಕಾಗುತ್ತದೆ.
ಈ ಬಗೆಯ ೧೦,೦೦೦ ಜಿಪಿಯುಗಳನ್ನು ಎಐ ವಿಭಾಗದಲ್ಲಿ ಕೆಲಸ ಮಾಡುವ ನವೋದ್ದಿಮೆಗಳ ಬಳಕೆಗೆ ನೀಡುವುದು ಸರ್ಕಾರದ ಪ್ರಮುಖ ಘೋಷಣೆ. ಅಲ್ಲದೆ ಲಾರ್ಜ್ ಲ್ಯಾಂಗ್ವೇಜ್ ಮಾಡೆಲಿಂಗ್ ಕಾರ್ಯಕ್ಕೆ ಬೇಕಾಗುವ ಮಾಹಿತಿಗಳಿಗೆ ಒಂದು ಸಾರ್ವತ್ರಿಕ ಮಾಹಿತಿಕೋಶ ರಚಿಸಿ ಅವುಗಳನ್ನು ಎಐ ಅಪ್ಲಿಕೇಶನ್ ತಯಾರಿಕೆಯಲ್ಲಿರುವ ನವೋದ್ದಿಮೆಗಳಿಗೆ ಲಭ್ಯವಾಗಿಸುವ ಜವಾಬ್ದಾರಿಯನ್ನೂ ಕೇಂದ್ರ ಹೊತ್ತಿದೆ.
ಭಾರತಕೇಂದ್ರಿತವಾಗಿ ಎಐ ಉಪಯೋಗದ ತಂತ್ರಾಂಶಗಳನ್ನು ಸೃಷ್ಟಿಸಬೇಕೆಂಬ ಹಲವು ಪ್ರಯತ್ನಗಳಾಗುತ್ತಿವೆ. ಉದಾಹರಣೆಗೆ, ಐಐಟಿ ಬಾಂಬೆಯು ಸೀತಾಮಹಾಲಕ್ಷ್ಮೀ ಹೆಲ್ತ್ ಕೇರ್ ಸಂಸ್ಥೆಯೊಂದಿಗೆ ಸೇರಿಕೊಂಡು ಹನೂಮಾನ್ (hanooman) ಎಂಬ ಸೃಜನಶೀಲ ಎಐ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ವೈದ್ಯರಿಗೆ ಆರೋಗ್ಯ ತಪಾಸಣೆ ಮಾಡುವುದಕ್ಕೇ ಸಮಯ ಸಾಕಾಗದ ಸ್ಥಿತಿ ಇರುವ ಭಾರತದಲ್ಲಿ ರೋಗಿಯ ರೋಗಚರಿತ್ರೆಯ ಶಿಸ್ತುಬದ್ಧ ದಾಖಲೀಕರಣ ಕಷ್ಟಸಾಧ್ಯವಾಗಿರುವುದೊಂದು ವಾಸ್ತವ. ವೈದ್ಯರು ಹಾಗೂ ಆರೋಗ್ಯ ವೃತ್ತಿಪರರ ಮಾತುಗಳನ್ನೇ ಪರಿವರ್ತಿಸಿ, ರೋಗಿಯ ಆರೋಗ್ಯದಾಖಲೆಯ ಸಾರಸಂಗ್ರಹ ಮಾಡಿಡುವ ಉದ್ದೇಶ ಹನೂಮಾನ್ ಎಐ ತಂತ್ರಾಂಶದ್ದು. ಇದನ್ನೇ ಮುಂದೆ ಶಿಕ್ಷಣ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳಬಹುದೆಂಬ ಯೋಚನೆ ಅಲ್ಲಿದೆ. ಇನ್ನೂ ಅಭಿವೃದ್ಧಿಯ ಹಂತದಲ್ಲಿರುವ ಈ ತಂತ್ರಾಂಶವು ಪ್ರಾರಂಭದಲ್ಲಿ ೧೧ ಭಾರತೀಯ ಭಾಷೆಗಳಲ್ಲಿದ್ದು ನಂತರ ಅದನ್ನು ೨೨ ಅಧಿಕೃತ ಭಾಷೆಗಳಿಗೂ ವಿಸ್ತರಿಸುವ ಉದ್ದೇಶ ಐಐಟಿ-ಬಿ ಅನ್ವೇಷಕರದ್ದು. ಇಂಥ ಪ್ರಯತ್ನಗಳಿಗೆಲ್ಲ ಭಾರತ ಸರ್ಕಾರ ಒದಗಿಸಲಿರುವ ಜಿಪಿಯು ವ್ಯವಸ್ಥೆ ಮುಂದಿನ ದಿನಗಳಲ್ಲಿ ವರದಾನವಾಗಲಿದೆ.
ಭಾರತದೊಂದಿಗೆ ಖಾಸಗಿ ಟೆಕ್ ದೈತ್ಯರೇಕೆ ಕೈಜೋಡಿಸುತ್ತಿದ್ದಾರೆ?
ಭಾರತದಲ್ಲಿರುವ ಭಾಷಾ ವೈವಿಧ್ಯವು ಎಐನ ಲಾರ್ಜ್ ಲ್ಯಾಗ್ವೇಜ್ ಮಾಡೆಲ್ಸ್ ಅಡಿ ಯಂತ್ರಗಳನ್ನು ತರಬೇತುಗೊಳಿಸುವುದಕ್ಕೆ ಭಿನ್ನ ಸವಾಲು ಒಡ್ಡುತ್ತದೆ. ಉದಾಹರಣೆಗೆ, ಯಾವುದೋ ಎಐ ಸಾಧನವನ್ನು ಕನ್ನಡಿಗನೊಬ್ಬ ಉಪಯೋಗಿಸಬೇಕೆಂದರೆ ಆ ವ್ಯಕ್ತಿ ಕನ್ನಡದಲ್ಲಿ ಕೊಡುವ ಕಮಾಂಡುಗಳು ಮತ್ತದರ ಭಾವತೀವ್ರತೆ ಇತ್ಯಾದಿಗಳನ್ನೆಲ್ಲ ಯಂತ್ರ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಅರ್ಥಮಾಡಿಕೊಳ್ಳುವುದಕ್ಕೆ ದೊಡ್ಡಮಟ್ಟದ ಸ್ಯಾಂಪಲ್ಗಳನ್ನು ಯಂತ್ರಕ್ಕೆ ಉಣಿಸಬೇಕಾಗುತ್ತದೆ.
ಈಗೊಬ್ಬ ರೈತ ಕನ್ನಡದಲ್ಲಿ ಯಾವುದೋ ಬೀಜಬಿತ್ತನೆ ಸಲಕರಣೆಯ ಬಗ್ಗೆ ವಿಚಾರಿಸಿದ ಎಂದಿಟ್ಟುಕೊಳ್ಳಿ. ಅದನ್ನು ಅರ್ಥಮಾಡಿಕೊಂಡು ಸರಿಯಾದ ದಿಕ್ಕು ತೋರಿಸುವಂಥ ಎಐ ಸಾಧನವು ಸರ್ಕಾರಕ್ಕೆ ತನ್ನ ಯೋಜನೆಗಳನ್ನು ಸರಿಯಾಗಿ ತಲಪಿಸಲು ನೆರವಾಗುತ್ತದೆ. ಅದೇ ರೈತ ನಾಳೆ ಅದೇ ಭಾಷೆಯಲ್ಲಿ ವಾಷಿಂಗ್ ಮಷಿನ್ ಬಗ್ಗೆಯೂ ಕನ್ನಡದಲ್ಲೇ ಎಐ ತಂತ್ರಾಂಶವೊಂದಕ್ಕೆ ತನ್ನ ಸ್ಮಾರ್ಟ್ಫೋನ್ ಆ್ಯಪ್ ಮೂಲಕ ಮಾಹಿತಿ ಕೇಳಿಯಾನು. ಇದಕ್ಕೆ ಮಾಹಿತಿ ಒದಗಿಸುವುದರಲ್ಲಿ ಖಾಸಗಿ ಕಂಪೆನಿಗಳ ವಾಣಿಜ್ಯಾತ್ಮಕ ಹಿತಾಸಕ್ತಿ ಇದೆ. ಹಾಗೆಂದೇ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಅಭಿವೃದ್ಧಿಗೆ ಭಾರತ ಸರ್ಕಾರದೊಂದಿಗೆ ಮೈಕ್ರೋಸಾಫ್ಟ್ ಥರದ ಕಂಪೆನಿಗಳು ಕೈಜೋಡಿಸಿವೆ.
ಫೆಬ್ರುವರಿ ೨೦೨೪ರಲ್ಲಿ ಎರಡು ದಿನಗಳ ಕಾಲ ನಡೆದ ಬಿಸಿನೆಸ್ ಸಮಿಟ್ ಒಂದರಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಹೇಳಿದ್ದೇನೆಂದರೆ – “ಭಾರತೀಯ ಸಮಾಜದ ಸಂರಚನೆ ಭಿನ್ನವಾಗಿರುವುದರಿಂದ ಇಲ್ಲಿ ಕೃತಕ ಬುದ್ಧಿಮತ್ತೆಯ ವಿನ್ಯಾಸಕ್ಕಿರುವ ಸವಾಲುಗಳು ಭಿನ್ನ. ಆದರೆ ಇಲ್ಲೊಂದು ವಿಸ್ತೃತ ಭಾಷಾ ಮಾದರಿ ಅಭಿವೃದ್ಧಿಪಡಿಸುವಲ್ಲಿ ಸಫಲವಾದರೆ ನಮಗದು ಜಾಗತಿಕವಾಗಿ ಸ್ಪರ್ಧಾತ್ಮಕ ಲಾಭವೊಂದನ್ನು ನೀಡುತ್ತದೆ.’’ ಇದನ್ನೇ ಸರಳವಾಗಿ ಹೇಳುವುದಾದರೆ, ನಾದೆಲ್ಲ ಮಾತಿನ ಅರ್ಥ – ಭಾರತದ ಸಂಕೀರ್ಣ ವ್ಯವಸ್ಥೆಯಲ್ಲಿ ಎಐ ಸಫಲವಾದರೆ ಜಗತ್ತಿನ ಮತ್ಯಾವುದೇ ಎಐ ಸಮಸ್ಯೆಯನ್ನು ಸುಲಭಕ್ಕೆ ಪರಿಹರಿಸುವ ಸಾಮರ್ಥ್ಯ ಬಂದುಬಿಡುತ್ತದೆ.
೨೦೨೨ರಲ್ಲಿ ಭಾರತ ಸರ್ಕಾರ ಭಾಷಿಣಿ ಯೋಜನೆಯ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಭಾರತೀಯ ಭಾಷೆಗಳಲ್ಲಿ ಧ್ವನಿ ಸಂಗ್ರಹ ಕಾರ್ಯ ಮಾಡಿದೆ. ಇದಕ್ಕೆ ಬೇರೆಬೇರೆ ಹಂತಗಳಲ್ಲಿ ಗೂಗಲ್, ಮೈಕ್ರೋಸಾಫ್ಟ್ ಇವೆಲ್ಲದರ ಸಹಭಾಗಿತ್ವವಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಎಐ ಮತ್ತು ರೊಬಾಟಿಕ್ ಟೆಕ್ನಾಲಜಿ ಪಾರ್ಕ್ ನೇತೃತ್ವದಲ್ಲಿ ಮೊದಲ ಹಂತದಲ್ಲಿ ೧೬,೦೦೦ ತಾಸುಗಳ ಧ್ವನಿ ಸಂಗ್ರಹವಾಗಿದೆ. ೫೮ ಭಿನ್ನ ಬಗೆಯ ಭಾಷೆ-ನುಡಿಗಟ್ಟುಗಳ ಮಾದರಿ ಇಲ್ಲಿದೆ. ಇವುಗಳ ಮೇಲೆಯೆ ಬೇರೆಬೇರೆ ಕಂಪೆನಿಗಳು ಎಐ ಅನ್ನು ತರಬೇತುಗೊಳಿಸಲಿಕ್ಕಿವೆ.
ಈ ಬೆರಗಿನ ಎಐ ಕಥಾನಕವನ್ನು ಸುಳ್ಳಾಗಿಸಬಲ್ಲ ಸಾಧ್ಯತೆಗಳಾವವು?
- ಗೋಲ್ಡಮನ್ ಸ್ಯಾಕ್ಸ್ ಪ್ರಸಿದ್ಧ ಜಾಗತಿಕ ಹೂಡಿಕೆ ಸಂಸ್ಥೆ. ಇದರ ಹೂಡಿಕೆ ಮತ್ತು ವಿತ್ತ ವರದಿಗಳು ಯಾವಾಗಲೂ ಸರಿ ಆಗಿವೆ ಎಂದೇನಿಲ್ಲ. ಆದರೆ ಹೂಡಿಕೆ ಮತ್ತು ಹಣಕಾಸು ವಲಯದಲ್ಲಿ ಈ ಸಂಸ್ಥೆಯ ಮಾತಿಗೊಂದು ಮಹತ್ತ್ವವಿದೆ. ಗೋಲ್ಡಮನ್ ಸ್ಯಾಕ್ಸ್ ಜೂನ್ ೨೫, ೨೦೨೪ರಂದು ೩೨ ಪುಟಗಳ ವರದಿಯೊಂದನ್ನು ಪ್ರಕಟಿಸಿದೆ. “ಜನರೇಟಿವ್ ಎಐ – ಖರ್ಚು ವಿಪರೀತ, ಪ್ರಯೋಜನ ಸೀಮಿತ” ಎಂಬರ್ಥದ ತಲೆಬರಹ ಹೊತ್ತಿರುವ ಅಧ್ಯಯನ ವರದಿ ಇದು. ಹಲವು ವಿಷಯ ಪರಿಣತರನ್ನು ಮಾತನಾಡಿಸಿ ತಯಾರಿಸಿರುವ ಈ ವರದಿ ಎತ್ತುತ್ತಿರುವ ಪ್ರಶ್ನೆಗಳನ್ನು ಸಾರಸಂಗ್ರಹವಾಗಿ ಹೀಗೆ ಪಟ್ಟಿ ಮಾಡಬಹುದು.
- ಮುಂದಿನ ಕೆಲವು ವರ್ಷಗಳಲ್ಲಿ ಎಐ ಔದ್ಯಮಿಕ ಪರಿಸರವು ೧ ಟ್ರಿಲಿಯನ್ ಡಾಲರುಗಳಷ್ಟು ಹೂಡಿಕೆ ಮುಟ್ಟಲಿದೆ. ಇಷ್ಟೆಲ್ಲ ಬಂಡವಾಳಕ್ಕೆ ತಕ್ಕನಾದ ಎಐ ಉತ್ಪನ್ನ ಯಾವುದೂ ಇನ್ನೂ ರೂಪಗೊಂಡಿಲ್ಲ.
- ಎಐ ಕಟ್ಟಿಕೊಡುವ ಸ್ವಯಂಚಾಲಿತ ವ್ಯವಸ್ಥೆಯು ಕೆಲವು ಹಂತಗಳಲ್ಲಿ ಉತ್ಪಾದಕತೆಯನ್ನು ಪರಿಣಾಮಕಾರಿಯಾಗಿಸಬಹುದಾದರೂ ಅದಕ್ಕೆ ಸುರಿಯುತ್ತಿರುವ ಹಣಕ್ಕೆ ತಕ್ಕ ಪ್ರತಿಫಲ ಅದಲ್ಲ. ಉದಾಹರಣೆಗೆ, ಅಂತರ್ಜಾಲ ವ್ಯಾಪಿಸಿದ ಹೊತ್ತಿನಲ್ಲಿ ಶುರುವಾಗ ಇ-ಕಾಮರ್ಸ್ ಎಂಬುದು ವಸ್ತುಗಳ ಬೆಲೆಯನ್ನು ಗಣನೀಯವಾಗಿ ತಗ್ಗಿಸಿತು. ಏಕೆಂದರೆ ಪುಸ್ತಕದಂಥ ವಸ್ತುಗಳನ್ನು ಮಾರುವುದಕ್ಕೆ ಆಯಾ ದೇಶಗಳ ಮೂಲೆಮೂಲೆಗಳಲ್ಲಿ ಅಂಗಡಿ ಹೊಂದುವ ಖರ್ಚಿಗಿಂತ ಅವನ್ನು ಅಂತರ್ಜಾಲ ಮುಖೇನ ವಿತರಿಸುವುದು ಕಡಮೆ ವೆಚ್ಚದ್ದು. ಇಂಥಹದೊಂದು ಸರಳ ಸಮೀಕರಣವನ್ನು ಎಐ ಕಂಡುಕೊಂಡಿಲ್ಲ.
- ಯಾವುದೇ ತಂತ್ರಜ್ಞಾನ ಪ್ರಾರಂಭದಲ್ಲಿ ದುಬಾರಿ ಆಗಿರುತ್ತದೆ, ನಂತರ ವೆಚ್ಚ ಕಡಮೆಯಾಗುತ್ತ ಬರುತ್ತದೆ ಎಂಬ ಲೆಕ್ಕಾಚಾರವು ಎಐ ವಿಚಾರದಲ್ಲಿ ನಿಜವಾಗಬೇಕೆಂದಿಲ್ಲ. ಏಕೆಂದರೆ, ಇಲ್ಲಿನ ಬೃಹತ್ ಮಾಹಿತಿ ವ್ಯವಸ್ಥೆ ನಿರ್ವಹಿಸುವುದಕ್ಕೆ ಬೇಕಾಗುವ ಚಿಪ್ಗಳು ಮೊದಲೇ ಕೊರತೆಯಲ್ಲಿವೆ ಹಾಗೂ ಎನ್ವಿಡಿಯಾದಂಥ ದೊಡ್ಡ ಕಂಪೆನಿಯೊAದರ ಏಕಸ್ವಾಮ್ಯದ ಸ್ಥಿತಿಯು ಭವಿಷ್ಯದಲ್ಲಿ ಸಹ ಎಐ ವೆಚ್ಚ ತಗ್ಗುತ್ತದೆ ಎಂದು ಹೇಳಲಾಗದಂತಿದೆ.
- ಇಡೀ ಜಗತ್ತು ಶಕ್ತಿ ಪೂರೈಕೆ ವಿಚಾರದಲ್ಲಿ ಕಠಿಣ ಸ್ಥಿತಿಯನ್ನೇ ಎದುರಿಸುತ್ತಿದೆ. ಅದರಲ್ಲೂ ಯೂರೋಪ್ ಅದಾಗಲೇ ವಿದ್ಯುತ್ ಪೂರೈಕೆಯ ವಿಷಯದಲ್ಲಿ ಅತಿ ದುಬಾರಿ ಬೆಲೆ ತೆರುತ್ತಿದೆ. ಇದೀಗ ತಲೆ ಎತ್ತುತ್ತಿರುವ ಎಐ ಪರಿಸರಕ್ಕೆ ದೊಡ್ಡದೊಡ್ಡ ಡೇಟಾ ಕೇಂದ್ರಗಳು ಬೇಕು ಹಾಗೂ ಇವು ದೊಡ್ಡಮಟ್ಟದಲ್ಲಿ ವಿದ್ಯುತ್ ಶಕ್ತಿಯನ್ನು ಬೇಡುತ್ತವೆ ಎಂಬುದು ಮತ್ತೊಂದು ದೊಡ್ಡ ಸವಾಲು.
ಗೋಲ್ಡಮನ್ ಸ್ಯಾಕ್ಸ್ ಅಂತಲ್ಲ, ಬಹಳಷ್ಟು ವಿಶ್ಲೇಷಕರಿಗೆ ಎಐ ವ್ಯವಸ್ಥೆ ಬೇಡುತ್ತಿರುವ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಅನುಮಾನದ ಪ್ರಶ್ನೆಗಳಿವೆ.
ಸಂದರ್ಶನವೊಂದರಲ್ಲಿ ಒಪನ್ ಎಐ ಸಂಸ್ಥಾಪಕ ಸ್ಯಾಮ್ ಆಲ್ಟಮನ್ ಹೇಳಿದ್ದರು – “ಕೃತಕ ಬುದ್ಧಿಮತ್ತೆಯ ಜಾಗತಿಕ ಪರಿಸರವನ್ನು ಗಟ್ಟಿಗೊಳಿಸಬೇಕು ಎಂದರೆ ಅದಕ್ಕೆ ಚಿಪ್ಗಳು ಬಹಳ ಮುಖ್ಯ. ಇವನ್ನು ಸೂಕ್ತ ಪ್ರಮಾಣದಲ್ಲಿ ಪೂರೈಸುವ ಜಾಲವೊಂದನ್ನು ಅಭಿವೃದ್ಧಿಪಡಿಸುವುದಕ್ಕೆ ನನಗೆ ಸುಮಾರು ೭ ಟ್ರಿಲಿಯನ್ ಡಾಲರುಗಳಷ್ಟು ಹಣ ಎತ್ತಬೇಕಾಗುತ್ತದೆ. ಹಲವು ಹಂತಗಳಲ್ಲಾದರೂ ಸರಿ, ಆ ವ್ಯಾಪ್ತಿಯ ಹಣವನ್ನು ಮಾರುಕಟ್ಟೆಯಿಂದ ಚಿಪ್ ಅಭಿವೃದ್ಧಿಗೆ ಪಡೆಯಬೇಕು.’’
ಮೊದಲಿಗೆ, ೭ ಟ್ರಿಲಿಯನ್ ಡಾಲರ್ ಎಂಬುದು ಎಷ್ಟು ದೊಡ್ಡ ಸಂಖ್ಯೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ಭವಿಷ್ಯದಲ್ಲಿ ೫ ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯಾಗುವ ಗುರಿ ಹಾಕಿಕೊಂಡಿದೆ. ಅಂದರೆ ಭಾರತದಂಥ ದೊಡ್ಡ ದೇಶ ಭವಿಷ್ಯದಲ್ಲಿ ತಲಪಬಹುದಾದ ಮಟ್ಟಕ್ಕಿಂತಲೂ ಮೇಲಿನದ್ದು ಸ್ಯಾಮ್ ಆಲ್ಟಮನ್ ಹೇಳುತ್ತಿರುವ ಸಂಖ್ಯೆ. ಜರ್ಮನಿ, ಗ್ರೇಟ್ ಬ್ರಿಟೇನ್ಗಳ ಜಿಡಿಪಿಗಿಂತ ದೊಡ್ಡ ಮೊತ್ತ ಇದು. ೨೦೨೩ರಲ್ಲಿ ಜಾಗತಿಕ್ ಚಿಪ್ ಉದ್ಯಮ ಗಳಿಸಿದ ಆದಾಯಕ್ಕಿಂತ ೧೩ ಪಟ್ಟು ಹೆಚ್ಚಿನದೆಂದು ಹೇಳಲಾಗುತ್ತಿದೆ ಈ ಮೊತ್ತ.
ಕೃತಕ ಬುದ್ಧಿಮತ್ತೆ ಪರಿಸರವನ್ನು ಗಟ್ಟಿಗೊಳಿಸುವ ಹಸಿವು ಹೆಚ್ಚುತ್ತಹೋದಂತೆ ಅದು ಕೇವಲ ಫಂಡ್ ಎತ್ತುವ ಪ್ರಯತ್ನಗಳಿಗಷ್ಟೇ ನಿಲ್ಲುವುದಿಲ್ಲ, ಯುದ್ಧಕ್ಕೂ ತೆಗೆದುಕೊಂಡು ಹೋಗಬಲ್ಲದು! ಹೇಗೆ ಎಂದಿರಾ?
ದೈತ್ಯ ಚೀನಾದ ಪದತಲದಲ್ಲಿರುವ ತೈವಾನ್ ಎಂಬ ದೇಶವೇ ಜಾಗತಿಕ ಸೆಮಿಕಂಡಕ್ಟರ್ ಮತ್ತು ಚಿಪ್ ಪೂರೈಕೆಜಾಲದ ಕೇಂದ್ರ. ಒಟ್ಟಾರೆ ಸೆಮಿಕಂಡಕ್ಟರ್ ವಿಭಾಗದಲ್ಲಿ ಜಾಗತಿಕ ಮಾರುಕಟ್ಟೆಯ ಶೇಕಡ ೫೬.೪ ಪಾಲನ್ನು ಇದು ಹೊಂದಿದೆ. ಅದರಲ್ಲೂ ಮುಂದುವರಿದ ತಂತ್ರಜ್ಞಾನಗಳಿಗೆ ಬೇಕಾದ ಚಿಪ್ ಶೇಕಡ ೯೦ರಷ್ಟು ಇಲ್ಲೇ ಉತ್ಪಾದನೆಯಾಗುತ್ತಿದೆ ಎಂಬುದೊಂದು ಅಂದಾಜು. ಎನ್ವಿಡಿಯಾ, ಮೆಟಾ, ಗೂಗಲ್, ಆ್ಯಪಲ್, ಒಪನ್ ಎಐ – ಹೀಗೆ ಎಲ್ಲ ತಂತ್ರಜ್ಞಾನ ದಿಗ್ಗಜ ಕಂಪನಿಗಳು ಅಮೆರಿಕದಲ್ಲೇ ಬೀಡುಬಿಟ್ಟಿದ್ದರೂ ‘ಚಿಪ್’ಗಾಗಿ ತೈವಾನ್ ಮೇಲೆಯೇ ಅವಲಂಬಿಸಿವೆ. ಹೀಗಾಗಿ ಕೃತಕ ಬುದ್ಧಿಮತ್ತೆ, ಕಲ್ಪಿತ ವಾಸ್ತವಗಳನ್ನು ಅಭಿವೃದ್ಧಿಗೊಳಿಸುವ ಏನೇ ಅದ್ಭುತ ನೀಲನಕ್ಷೆಗಳು ಇವರ ಬಳಿ ಇದ್ದರೂ ತೈವಾನ್ ಕಡೆಯಿಂದ ಚಿಪ್ ಬರದಿದ್ದರೆ ಆ ಕಾರ್ಯ ಮುಂದುವರಿಯುವುದಿಲ್ಲ. ಈ ಕೌಶಲ ಹಾಗೂ ನಿರ್ಮಾಣಕ್ಕೆ ಬೇಕಿರುವ ಪೂರಕ ವ್ಯವಸ್ಥೆಗಳನ್ನು ರಾತ್ರಿ-ಬೆಳಗಾಗುವುದರೊಳಗೆ ಮತ್ತೊಂದು ದೇಶ ತನ್ನದಾಗಿಸಿಕೊಳ್ಳಲಾರದು.
ಈ ಜಾಗತಿಕ ಚಿಪ್ ಯುದ್ಧದಲ್ಲಿ ಅಮೆರಿಕವು ಗೆಲ್ಲದಂತೆ ಮಾಡುವುದಕ್ಕೆ ಚೀನಾದ ಎದುರಿಗಿರುವ ಒಂದೇ ಮಾರ್ಗವೆಂದರೆ, ಲಾಗಾಯ್ತಿನಿಂದ ತನ್ನದೇ ಭಾಗವೆಂದು ಪ್ರತಿಪಾದಿಸುತ್ತಿರುವ ತೈವಾನ್ ಮೇಲೆ ಆಕ್ರಮಣ ಮಾಡಿ ವಶಕ್ಕೆ ತೆಗೆದುಕೊಳ್ಳುವುದು. ಆ ಹಂತಕ್ಕೆ ಹೋದಾಗ ಅಮೆರಿಕದ ಮಧ್ಯಪ್ರವೇಶವೂ ಅನಿವಾರ್ಯ. ಹೀಗಾಗಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ತಂತ್ರಜ್ಞಾನದ ಅಭಿವೃದ್ಧಿಯ ಬಿಸಿ ಹೆಚ್ಚಿದಷ್ಟೂ ಅತ್ತ ತೈವಾನ್ ಯುದ್ಧಗ್ರಸ್ತವಾಗುವ ಎಲ್ಲ ಸಾಧ್ಯತೆಗಳಿವೆ.
ಹಾಗೇನೂ ಆಗದಿದ್ದರೂ, ಒಂದು ದೊಡ್ಡ ಚಿಪ್ ತಯಾರಿಕಾ ಕಾರ್ಖಾನೆ ದಿನಕ್ಕೆ ೧೦ ಮಿಲಿಯನ್ ಗ್ಯಾಲನ್ ನೀರು ಉಪಯೋಗಿಸುತ್ತದೆ. ಇದರ ಪ್ರಮಾಣ ಎಷ್ಟೆಂದರೆ ೩ ಲಕ್ಷ ಮನೆಗಳ ನೀರು ಪೂರೈಕೆ ಬೇಡಿಕೆ ಈಡೇರಿಸುವಷ್ಟು. ತಯಾರಿಕಾ ಪ್ರಕ್ರಿಯೆಯಲ್ಲಿ ಬಳಸುವ ಕೆಲವು ಅನಿಲಗಳು ಸಹ ಪರಿಸರಕ್ಕೆ ಹಾನಿ ಮಾಡುವಂಥವುಗಳೇ ಆಗಿವೆ.
ಇದೆಲ್ಲ ಮುಗಿದ ನಂತರ ಇವನ್ನು ಕಂಪ್ಯೂಟರುಗಳಲ್ಲಿ ಉಪಯೋಗಿಸಿ ಕೆಲಸ ಮಾಡುವ ಹಂತದಲ್ಲೂ ವಿದ್ಯುತ್ ಬಳಕೆ ಹೆಚ್ಚು. ಅಲ್ಲದೆ, ಎಐಗೆ ಪೂರಕ ಡೇಟಾ ಕೇಂದ್ರಗಳನ್ನು ಮಾಡಿಕೊಂಡಾಗ ಅವುಗಳನ್ನು ತಂಪಾಗಿರಿಸುವುದರಲ್ಲೂ ನೀರಿನ ಬಳಕೆ ಆಗುತ್ತದೆ. ವರದಿಯೊಂದರ ಪ್ರಕಾರ ಒಪನ್ ಎಐನ ಜಿಪಿಟಿ-೩ರ ಮಾದರಿ ೭೦ ಸಾವಿರ ಲೀಟರಿನಷ್ಟು ಹೆಚ್ಚುವರಿ ನೀರನ್ನು ಬಳಸಿಕೊಂಡಿತು. ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಹಂತದಲ್ಲಿ ಮೈಕ್ರೊಸಾಫ್ಟ್ ನೀರಿನ ಬಳಕೆ ಶೇ. ೩೪ರಷ್ಟು ಹೆಚ್ಚಾಗಿದೆ ಎಂದೂ ಅದೇ ವರದಿ ಹೇಳುತ್ತದೆ.
ಹೀಗೊಂದು ಸಮಗ್ರ ಚಿತ್ರಣವನ್ನು ಕಣ್ಮುಂದೆ ಇರಿಸಿಕೊಂಡಾಗ, ಇವತ್ತಿಗೆ ಬಹಳ ಆಕರ್ಷಕವಾಗಿ ಚಲಾವಣೆಯಲ್ಲಿರುವ ಎಐ, ಕೃತಕ ಬುದ್ಧಿಮತ್ತೆ ಎಂಬ ಪದಪುಂಜಗಳು ಸಂಪತ್ತು ಇಲ್ಲವೇ ವಿಪತ್ತು; ಹಾಗಲ್ಲದೆ ಬರಿದೇ ಉತ್ಪ್ರೇಕ್ಷೆ – ಹೀಗೆ ಏನು ಬೇಕಾದರೂ ಆಗಬಲ್ಲ ಸಾಧ್ಯತೆಗಳ ಹೊಸ್ತಿಲಿನಲ್ಲಿ ನಿಂತಿದೆ!
ಎಐ – ದಿಗ್ಗಜರ ಅನಿಸಿಕೆ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಲವು ಉದ್ದಿಮೆಗಳಲ್ಲಿ ಅನ್ವೇಷಣಾ ಬಲ ಹೆಚ್ಚಿಸಲಿದೆ, ಸಾಮಾನ್ಯ ಕಾರ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ಆತ ದೊಡ್ಡ ಸೃಜನಾತ್ಮಕ ಕಾರ್ಯಗಳಿಗೆ ಸಮಯ ವ್ಯಯಿಸಿಕೊಳ್ಳುವುದಕ್ಕೆ ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ. ಆದರೆ, ಯಂತ್ರಗಳಲ್ಲಿ ರೂಪುಗೊಳ್ಳುವ ಸೂಪರ್ ಇಂಟಲಿಜೆನ್ಸ್ ಎಂಬುದು ನಾಳೆ ಮನುಷ್ಯನ ಅಸ್ತಿತ್ವಕ್ಕೇ ಕುತ್ತು ತರುವ ಸಾಧ್ಯತೆ ಸಹ ಇದ್ದೇ ಇದೆ. ಹಲವು ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆಯೇ ಮಾಡುವ ಸಾಧ್ಯತೆ ಇರುವುದರಿಂದ ಮನುಷ್ಯರ ಪಾಲಿಗೆ ಉದ್ಯೋಗನಷ್ಟ ದೊಡ್ಡ ಸವಾಲಾಗಲಿದೆ. ಭವಿಷ್ಯದಲ್ಲಿ ಎಲ್ಲರಿಗೂ ಕನಿಷ್ಠ ಆದಾಯವೊಂದನ್ನು ಸರ್ಕಾರವೇ ಖಾತ್ರಿಗೊಳಿಸುವ ಯುನಿವರ್ಸಲ್ ಬೇಸಿಕ್ ಇನ್ಕಂ ವ್ಯವಸ್ಥೆ ಅನಿವಾರ್ಯವಾಗಲಿಕ್ಕಿದೆ.’’
– ಎಲಾನ್ ಮಸ್ಕ್, ಸಾಹಸಿ ಉದ್ಯಮಿ
ಮನುಷ್ಯ ಜೀವನದ ಉದ್ದೇಶ ಬೆಳಗ್ಗೆ ೯ರಿಂದ ಸಂಜೆ ೫ರವರೆಗೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಅಲ್ಲವೇ ಅಲ್ಲ. ಹಿಂದೆ ವಿದ್ಯುತ್ ಬಂದಾಗಲೂ ಆವರೆಗೆ ಪ್ರಮುಖ ನಗರಗಳಲ್ಲಿ ರಸ್ತೆ ಅಕ್ಕಪಕ್ಕ ದೊಂದಿ ಹಚ್ಚುವ ಕೆಲಸದಲ್ಲಿದ್ದವರು ತಮ್ಮ ಕೆಲಸ ಕಳೆದುಕೊಂಡರು, ಆದರೆ ಹೊಸ ಕೌಶಲಕ್ಕೆ ಹೊಂದಿಸಿಕೊಂಡರು. ಹಲವು ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಗಳನ್ನು ಹೆಚ್ಚಿಸಬಲ್ಲದು. ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಐ ಅಭಿವೃದ್ಧಿಗೊಳ್ಳುತ್ತ ಹೋಗಬಹುದಾದರೂ ಮಾನವ ಕುಲವನ್ನು ಅದು ತನ್ನು ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂಬುದು ಕತೆಗಳಲ್ಲಿ ಮಾತ್ರ ರುಚಿಸಬಹುದಾದ ಸಂಗತಿ.’’
– ನವಲ್ ರವಿಕಾಂತ, ವಿಶ್ವಮಾನ್ಯ ಹೂಡಿಕೆದಾರ
ಕೃತಕ ಬುದ್ಧಿಮತ್ತೆಗೂ ಈ ಹಿಂದಿನ ಅಚ್ಚರಿಯ ತಂತ್ರಜ್ಞಾನಗಳಿಗೂ ದೊಡ್ಡದೊಂದು ವ್ಯತ್ಯಾಸವಿದೆ. ಅಣ್ವಸ್ತ್ರ ಬಹಳ ದೊಡ್ಡ ತಂತ್ರಜ್ಞಾನ. ಆದರದು ತಾನು ಯಾವ ನಗರದ ಮೇಲೆ ಹೋಗಿ ಸ್ಫೋಟಿಸಿಕೊಳ್ಳಬೇಕು ಅಂತ ತಾನೇ ನಿರ್ಧರಿಸುವುದಿಲ್ಲ. ಆದರೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಡಿಯಲ್ಲಿ ತಮಗೆ ಉಣಿಸಿದ ಮಾಹಿತಿಗಳನ್ನು ಬಳಸಿಕೊಂಡು ಯಂತ್ರಗಳು ತಾವೇ ಕಲಿಯುತ್ತವೆ, ತಾನು ಸುಧಾರಿಸಬೇಕಿರುವ ಮಾರ್ಗವನ್ನೂ ತಾವೇ ನಿರ್ಧರಿಸುತ್ತವೆ. ಇದೊಂದು ಸೂಪರ್ ಇಂಟಲಿಜೆನ್ಸ್ ಹುಟ್ಟಿಗೆ ಕಾರಣವಾಗಿ ಮುಂದೊಂದು ದಿನ ಮಾನವ ಬುದ್ಧಿಮತ್ತೆಯನ್ನು ಮೀರಿಸುವ ಸಾಧ್ಯತೆ ಇಲ್ಲವೆಂದು ಹೇಳಲಾಗದು. ಎಐನಿಂದ ಮಾನವನ ಉದ್ಯೋಗ ನಷ್ಟಗಳು ಪಕ್ಕಾ. ಈವರೆಗಿನ ಆಧುನಿಕ ಆವಿಷ್ಕಾರಗಳು ಶ್ರಮವಹಿಸುವ ಬ್ಲೂಕಾಲರ್ ಉದ್ಯೋಗಕ್ಕೆ ಆತಂಕ ಒಡ್ಡಿದ್ದವು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ವೈಟ್ ಕಾಲರ್ ಉದ್ಯೋಗಗಳ ಅಸ್ತಿತ್ವಕ್ಕೆ ಕುತ್ತು ತಂದಿದೆ.’’
-ಯುವಲ್ ನೊಹಾ ಹರಾರಿ,
ಇತಿಹಾಸಕಾರ ಮತ್ತು ಜನಪ್ರಿಯ ಕೃತಿಕಾರ
ಐಟಿಯಲ್ಲಿ ಎಐ ಪ್ರಾರಂಭಿಕವಾಗಿ ಉದ್ಯೋಗನಷ್ಟ ಉಂಟುಮಾಡುತ್ತದೆ. ಆದರೆ ಇನ್ನೂ ಉನ್ನತ ಕೆಲಸಗಳಿಗೆ ಕೌಶಲ ತುಂಬುವುದರ ಮೂಲಕ ಕಾರ್ಯಪಡೆಯನ್ನು ಬೇರೆಯದಕ್ಕೆ ಬಳಸಿಕೊಳ್ಳಬಹುದು. ಎಲ್ಲ ಹೊಸ ನಮೂನೆ ಕೆಲಸಗಳು ಬಂದಾಗಲೂ ಹಳೆ ಕೆಲಸಗಳು ಅಪ್ರಸ್ತುತವಾಗಿವೆ, ಉದ್ಯೋಗ ನಷ್ಟವಾಗಿದೆ. ಆದರದು ತಾತ್ಕಾಲಿಕ. ಹೊಸದನ್ನು ಜನ ಕಲಿಯುತ್ತಾರೆ. ಶಿಕ್ಷಣ, ಆರೋಗ್ಯಸೇವೆ, ಕೃಷಿಗಳಲ್ಲಿ ಎಐ ಸಕಾರಾತ್ಮಕ ಪರಿವರ್ತನೆ ತರಬಲ್ಲದು.’’
-ನಂದನ ನಿಲೇಕಣಿ, ತಂತ್ರಜ್ಞ ಹಾಗೂ ಆಧಾರ್ ವ್ಯವಸ್ಥೆಯ ಶಿಲ್ಪಿ
ಎಐ ಕಾರಣದಿಂದ ಭವಿಷ್ಯದಲ್ಲಿ ಕೋಡಿಂಗ್ ಮತ್ತು ಪ್ರೊಗ್ರಾಮಿಂಗ್ ಎಂಬುದು ಮನುಷ್ಯನ ಪಾಲಿಗೆ ದೊಡ್ಡ ವಿದ್ಯೆಯಾಗಿಯೇನೂ ಉಳಿದುಕೊಳ್ಳುವುದಿಲ್ಲ. ನಿಮಗೆ ಸರಳ ಭಾಷೆಯಲ್ಲೇ ಉತ್ತಮ ಪ್ರಾಂಪ್ಟ್ ಮಾಡುವುದು ಸಿದ್ಧಿಸಿಕೊಂಡರೆ ನೀವೂ ಪ್ರೊಗ್ರಾಮರ್ ಆದಂತೆಯೇ. ನಿಮಗೆ ಬೇಕಾದ ಚಿತ್ರವೊಂದರ ಖಚಿತ ವಿವರಣೆ ಕೊಟ್ಟರೆ ಎಐ ಸಾಧನಗಳು ನಿಮಗದನ್ನು ಬಿಡಿಸಿಕೊಡುತ್ತವೆ. ಪ್ರೊಗ್ರಾಮಿಂಗ್-ಮುಕ್ತ ಸೃಷ್ಟಿಗೆ ಒಪನ್ ಎಐನ ಸೊರಾ ಉತ್ತಮ ಉದಾಹರಣೆ. ಸ್ಪಷ್ಟ-ಸಂಕ್ಷಿಪ್ತ ವಿವರಣೆ ಕೊಟ್ಟರೆ ಅದಕ್ಕೆ ತಕ್ಕ ಚಿಕ್ಕ ವಿಡಿಯೊವನ್ನು ಸೃಷ್ಟಿಸಿಕೊಡುತ್ತದೆ. ನಿಮಗದು ಪವಾಡಸದೃಶ ಎನಿಸಿದರೂ ಅದಕ್ಕೆ ಬೇಕಾದ ಪ್ರೊಗ್ರಾಮಿಂಗ್ ಅನ್ನು ಎಐ ಬರೆದುಕೊಂಡಿರುವುದರಿಂದ ಆ ಸೃಷ್ಟಿ ಸಾಧ್ಯವಾಯಿತು. ಕೆಲವೇ ಸೆಕೆಂಡುಗಳಲ್ಲಿ ಆಗುವ ಈ ಪರಿಣಾಮವನ್ನು ಸೃಷ್ಟಿಸುವುದಕ್ಕೆ ಈ ಹಿಂದೆ ಮನುಷ್ಯರು ಹಲವು ತಾಸುಗಳನ್ನು ವ್ಯಯಿಸಿ ಪ್ರೋಗ್ರಾಮಿಂಗ್ ಬರೆಯಬೇಕಿತ್ತು.’’
-ಜೆನ್ಸೆನ್ ಹುವಾಂಗ್, ಎನ್ವಿಡಿಯಾ ಸಿಇಒ
ಚೀನಾದ್ದೇನು ಕತೆ?
ಎಐ ಕಂಪನಿಗಳೆಲ್ಲ ಪಾಶ್ಚಾತ್ಯ ಜಗತ್ತಿನವೇ ಹೆಚ್ಚು ಉಲ್ಲೇಖವಾಗುತ್ತಿರುವುದು ಏಕೆಂದರೆ ಎಐ ಅಭಿವೃದ್ಧಿಗೆ ಬೇಕಿರುವ ಸೂಕ್ಷ್ಮ ಸೆಮಿಕಂಡಕ್ಟರ್ ಚಿಪ್ ಪೂರೈಕೆಯು ಚೀನಾಕ್ಕೆ ಆಗದಂತೆ ಈವರೆಗೆ ಅಮೆರಿಕ ನೋಡಿಕೊಂಡಿದೆ. ಹಾಗಂತ ಚೀನಾ ಸುಮ್ಮನೇ ಕುಳಿತಿಲ್ಲ. ಅದು ತನ್ನದೇ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿರುವ ವರದಿಗಳಿವೆ. ಎರ್ನಿ ಬಾಟ್ ಎಂಬುದು ಅಲ್ಲಿ ಚಾಟ್ ಜಿಪಿಟಿಗೆ ಪರ್ಯಾಯವಾಗಿ ಎದ್ದುನಿಲ್ಲುತ್ತಿರುವ ಎಐ ತಂತ್ರಾಂಶ. ಅಲ್ಲಿನ ಅಲಿಬಾಬಾ ಕಂಪನಿ ಕ್ವೆನ್ ೨ ಎಂಬ ಎಲ್ ಎಲ್ ಎಂ ಮಾದರಿಯನ್ನು ಹುಟ್ಟುಹಾಕಿದೆ. ಇದನ್ನು ಜರ್ಮನ್ ಮತ್ತು ಅರೇಬಿಕ್ ಭಾಷೆಯಲ್ಲೂ ಪ್ರಯೋಗಿಸಿದ್ದು ಅಲ್ಲೆಲ್ಲ ಭಾಷಾ ಪ್ರಯೋಗ, ತಾರ್ಕಿಕತೆ ಇತ್ಯಾದಿ ಅಂಶಗಳಲ್ಲಿ ತನ್ನ ತಂತ್ರಾಂಶ ಅದ್ಭುತವಾಗಿ ಕೆಲಸ ಮಾಡಿರುವುದಾಗಿ ಅಲಿಬಾಬಾ ಹೇಳಿಕೊಂಡಿದೆ. ಟಿಕ್ಟಾಕ್ ಮಾತೃಸಂಸ್ಥೆ ಬೈಟ್ ಡಾನ್ಸ್ ಸಹ ತನ್ನದೇ ಸಂವಾದಮಾದರಿಯ ಕೃತಕ ಬುದ್ಧಿಮತ್ತೆ ಉತ್ಪನ್ನ ದೌಬಾವೊ ಎಂಬುದನ್ನು ಆಗಸ್ಟಿನಲ್ಲಿ ಬಿಡುಗಡೆಗೊಳಿಸಿದ್ದು ಅದು ಚೀನಾದಲ್ಲಿ ತ್ವರಿತ ಜನಪ್ರಿಯತೆ ಪಡೆಯುತ್ತಿದೆ.