ಕೆಲವು ಅಪರೂಪದ ಮಾಹಿತಿಗಳನ್ನು ಈ ಕಾದಂಬರಿ ದಾಖಲಿಸಿದೆ. ಅವುಗಳಲ್ಲಿ ಮುಖ್ಯವಾಗಿ ಕ್ರೈಸ್ತ ಮತಕ್ಕೆ ಸಂಬಂಧಿಸಿದ ವಿಚಾರಗಳು. ಮತಾಂತರಗೊಂಡ ಸ್ಥಳೀಯ ಕ್ರೈಸ್ತರಲ್ಲಿ ತಾವು ಬಿಟ್ಟು ಬಂದ ಧರ್ಮದ ಜಾತಿಗಳ ಭೇದಭಾವ ಪ್ರಜ್ಞೆ ಹಲವು ದಶಕಗಳ ಕಾಲ ಉಳಿದು ಕೆಲವು ಆಂತರಿಕ ಸಮಸ್ಯೆಗಳನ್ನು ಹುಟ್ಟುಹಾಕಿತ್ತು. ಅದನ್ನು ತಲ್ವಾಡಿಯವರೂ ದಾಖಲಿಸಿರುವುದು ಶ್ಲಾಘನೀಯವಾಗಿದೆ. ಅದರ ಕೆಲವು ಸಾಲುಗಳು ಹೀಗಿವೆ “ದೇವರ ದಯೆಯಿಂದ ಪಾದ್ರಿಗೆ ಒಳ್ಳೆಯದೇ ಆಗುತ್ತಿತ್ತು. ಜನರು ಹೆಚ್ಚು ಹೆಚ್ಚಾಗಿ ಚರ್ಚಿಗೆ ಸೇರಲು ಬರುತ್ತಿದ್ದರು. ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಅವರ ವಿಶ್ವಾಸ ಅಷ್ಟು ಗಟ್ಟಿಯಾಗಿಲ್ಲದಿದ್ದರೂ ಸಂಖ್ಯೆಯಲ್ಲಿ ಕ್ರೈಸ್ತರು ಹೆಚ್ಚಾಗತೊಡಗಿದರು. ತುಳು ಮಾತಾಡುವ ನಲ್ಕೆಯವರು, ಪರವರು, ಪೊಂಬದರು, ಮೊಗವೀರರು, ಬಿಲ್ಲವರು, ಕೊರಗರು ಹೀಗೆ ಅವರವರಲ್ಲೇ ಮೇಲುಕೀಳು ಜಾತಿಯವರು ಎಂಬ ನಂಬಿಕೆಯಿಂದ ಬದುಕುತ್ತಿರುವ ದಲಿತ ಜನಾಂಗದವರು ಕ್ರೈಸ್ತಮತಕ್ಕೆ ಆಗಾಗ ಬೇರೆಬೇರೆ ಕಾರಣಗಳಿಗೆ ಮತಾಂತರವಾಗುತ್ತಿದ್ದರು…”
ಡಾ. ಬಿ.ಎಸ್. ತಲ್ವಾಡಿಯವರು ಬರೆದ ‘ಕೆಂಪಿ ಮತ್ತು ಕೋರ್ಟಿ’ ಎಂಬ ಸುಮಾರು ೩೦೦ ಪುಟಗಳ ಕಾದಂಬರಿ (ಪ್ರಕಾಶಕರು: ಆರೆಂಜ್ ಬುಕ್ಸ್, ಬೆಂಗಳೂರು. ೨೦೨೨) ಬಹಳ ವಿಶಿಷ್ಟವಾದ ‘ಜೀವನಚರಿತ್ರಾತ್ಮಕವಾದ ಕಾದಂಬರಿ’ (ಬಯಾಗ್ರಫಿಕಲ್ ನಾವೆಲ್) ಪ್ರಕಾರಕ್ಕೆ ಸೇರುವ ಕಾದಂಬರಿ. ಒಟ್ಟಿನಲ್ಲಿ ನವಚಾರಿತ್ರಿಕ ಕಥನ ಸಾಹಿತ್ಯದ ಒಳಗೆಯೇ ಬರುವ ಒಂದು ಮಾದರಿ ಇದು. ಫಾ. ಕೋರ್ಟಿ (Fr. Faustine Corti) ಅವರು ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿ ಎಂಬ ಊರಿನಲ್ಲಿ ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಮಿಶನರಿ ಚಟುವಟಿಕೆ ನಡೆಸಿದ ವಿದೇಶೀ ಮಿಶನರಿ. ಇವರು ರೋಮನ್ ಕೆಥೋಲಿಕ್ ಮಿಶನರಿ ಎನ್ನುವುದು ಗಮನಾರ್ಹ.
ಆ ಕಾಲದಲ್ಲಿ ಪ್ರೊಟೆಸ್ಟೆಂಟರಾದ ಬಾಸೆಲ್ ಮಿಷನರಿಗಳ ಕೆಲಸ ಹೆಚ್ಚು ಪ್ರಸಿದ್ಧವಾಗಿತ್ತು. ಪೋರ್ಚುಗೀಸರಿಂದಾಗಿ ರೋಮನ್ ಕೆಥೋಲಿಕ್ ಪಂಥವು ದಕ್ಷಿಣಕನ್ನಡದಲ್ಲಿ ಮೊದಲೇ ಪ್ರಬಲವಾಗಿ ಬೆಳೆದಿತ್ತು. ಹಾಗಾಗಿ ಅವರು ಬ್ರಿಟಿಷರ ಕಾಲದಲ್ಲಿ ಮಿಶನರಿ ಚಟುವಟಿಕೆಗಳನ್ನು ಮುಂದುವರಿಸುವ ಅಗತ್ಯವಿರಲಿಲ್ಲವೇನೋ ಅನ್ನುವಂತೆ ಜನಾಭಿಪ್ರಾಯ ಇದೆ. ಬಾಸೆಲ್ ಮಿಷನರಿಗಳು ಪತ್ರಿಕೆಗಳು ಮತ್ತು ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಹೆಚ್ಚು ಪರಿಚಿತರು. (ಈ ಪುಸ್ತಕದ ಪ್ರಾರಂಭದಲ್ಲಿರುವ ‘ಈರಾರು ಪತ್ರಿಕೆ’ ಎಂಬ ಕೃತಿಯ ಅವಲೋಕನ ಬರಹವನ್ನು ಮತ್ತು ಮ್ಯೋಗ್ಲಿಂಗ್ ಬಗ್ಗೆ ಓದಿದರೆ ಈ ಮಾತು ಸ್ಪಷ್ಟವಾಗುವುದು). ಆದರೆ ರೋಮನ್ ಕೆಥೋಲಿಕ್ ಮಿಶನರಿಗಳು ಹೆಚ್ಚು ಪ್ರಚಾರವಿಲ್ಲದೆ ತಮ್ಮ ಕೆಲಸವನ್ನು ನಡೆಸುತ್ತಲೇ ಬಂದಿದ್ದರು ಎನ್ನುವುದು ಈ ಕಾದಂಬರಿಯ ಮೂಲಕ ತಿಳಿಯುತ್ತದೆ. ಉದಾಹರಣೆಗೆ ಫಾ. ಕೋರ್ಟಿಯವರ ಪ್ರಯತ್ನದಿಂದಾಗಿ ನಾರಾವಿಯಲ್ಲಿ ೧೯೧೨ರಲ್ಲಿ ೨೯೦ ಜನ ಕ್ರೈಸ್ತಮತವನ್ನು ಸ್ವೀಕರಿಸಿದರೆ ೧೯೧೩ರ ಹೊತ್ತಿಗೆ ೫೦೦ ಜನರು ಕ್ರೈಸ್ತರಾಗಿದ್ದರು ಎಂದು ಈ ಕಾದಂಬರಿಯಲ್ಲಿದೆ. ಮಂಗಳೂರಿನಲ್ಲಿ ರೋಮನ್ ಕೆಥೋಲಿಕ್ ಮಿಶನರಿಗಳ ಒಂದು ಸಂಕ್ಷಿಪ್ತ ಮಾಹಿತಿಯನ್ನು ಕೂಡ ತಲ್ವಾಡಿಯವರು ಚರಿತ್ರೆಯಂತೆಯೆ ಕಾದಂಬರಿಯಲ್ಲಿ ದಾಖಲಿಸಿದ್ದಾರೆ (ಅದರ ಕೆಲವು ಭಾಗಗಳನ್ನು ಈ ಲೇಖನದಲ್ಲಿ ಮುಂದೆ ಉಲ್ಲೇಖಿಸಲಾಗಿದೆ.) ಅದು ಕೂಡ ಈ ಕಾದಂಬರಿ ಒಂದು ನವಚಾರಿತ್ರಿಕ ಕಾದಂಬರಿ ಎನ್ನುವುದಕ್ಕೆ ಪೂರಕವಾಗಿದೆ.
ಲೇಖಕರು ಮೂಲತಃ ಚಾಮರಾಜನಗರ ಜಿಲ್ಲೆಯವರು. ಆದರೆ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಓಡಾಡಿದವರು, ವಿದ್ಯಾಭ್ಯಾಸ ಮಾಡಿದವರು. ಈ ಕಾದಂಬರಿಯ ಕಥಾನಾಯಕ ಕೋರ್ಟಿಯವರು ಒಬ್ಬ ಜೆಸುಯಿತ್ ಮಿಶನರಿ ಪಾದ್ರಿಯಾಗಿದ್ದರು. ಈ ಜೆಸುಯಿತರ ಬಗೆಗೆ ಲೇಖಕರ ಅಭಿಮಾನವನ್ನು ಅವರೇ ಮುನ್ನುಡಿಯಲ್ಲಿ ಹೀಗೆ ದಾಖಲಿಸಿದ್ದಾರೆ: “ನಾನು ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವಾಗಲೇ ಯೇಸುಸಭೆ (Society of Jesus) ಯವರ ಸಂಪರ್ಕಕ್ಕೆ ಬಂದೆ. ಅಂದಿನಿಂದಲೂ ಈ ಧಾರ್ಮಿಕಸಭೆಯ ಬಗ್ಗೆ ನನಗೆ ಅತೀವ ಕುತೂಹಲ-ವ್ಯಾಮೋಹ. ಈ ಸಭೆಯವರನ್ನು ಜೆಸ್ವಿಟ್ಸ್ (Jesuits) ಎಂದು ಅಡ್ಡ ಹೆಸರಿನಿಂದ ಕರೆಯುವುದು ರೂಢಿ. ಜೆಸ್ವಿಟ್ ಎನ್ನುವುದಕ್ಕೆ Cunning, Fox ಎಂದೆಲ್ಲ ಅರ್ಥವಿದೆ. ಸಂತ ಇಗ್ನೇಷಿಯಸ್ ಲೊಯೋಲ ಕ್ರೈಸ್ತ ಧರ್ಮದ ಪ್ರಗತಿಗೆ ಪೂರಕವಾಗಲೆಂದು ಈ ಧಾರ್ಮಿಕಸಭೆ(Religious Order)ಯನ್ನು ಸ್ಥಾಪಿಸಿದನು. ಅದು ೧೫೪೦ರಲ್ಲಿ ಪೋಪ್ನ ಅಂಗೀಕಾರ ಪಡೆದು ಅಧಿಕೃತವಾಗಿ ಸಾರ್ವತ್ರಿಕ ಧರ್ಮಸಭೆ(Universal Church)ಗೆ ತನ್ನ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಹಾಗಿರುವಾಗ ಜೆಸ್ವಿಟ್ ಎಂಬ ಅಡ್ಡಹೆಸರು ಯಾಕೆ ಬಂದಿತೆಂದು ನನಗೆ ಇಂದಿಗೂ ಕುತೂಹಲ! ಇದೊಂದು ಪುರುಷಪ್ರಧಾನ ಸಭೆಯಾಗಿದ್ದು ಸಾವಿರಾರು ಜನರು ಇದರ ಸದಸ್ಯರಾಗಿ ಮಾನವ ಕುಲಕೋಟಿಯ ಉದ್ಧಾರಕ್ಕೆ ಸಂನ್ಯಾಸಿಗಳಾಗಿ ಶ್ರಮಿಸುತ್ತಿದ್ದಾರೆ. ಈ ಕಾರಣದಿಂದ ಯೇಸುಸಭೆಯ ಬಗ್ಗೆ ಅತೀವ ವ್ಯಾಮೋಹ. ಒಂದು ದಿನ ನಾನೂ ಈ ಸಭೆಯ ಸದಸ್ಯನಾಗಿ ಪರರ ಸೇವೆಗೆ ತೊಡಗಬೇಕೆಂಬ ಹೇರಾಸೆಯಿಂದ ಆರಂಭದ ನೊವಿಶಿಯೇಟ್ನ ತರಬೇತಿಗೂ ಸೇರಿದೆ (೧೯೭೭). ಆದರೆ ನನ್ನ ದೈವದ ಕರೆ ಪರಿಪಕ್ವವಾಗಿಲ್ಲದ್ದರಿಂದ ಪ್ರಥಮ ಪ್ರತಿಜ್ಞಾವಿಧಿ ಸ್ವೀಕಾರಕ್ಕೂ ಮುನ್ನ ನೊವಿಶಿಯೇಟಿನಿಂದ ಹೊರಬಂದೆ. ಹಾಗಿದ್ದರೂ ಜೆಸ್ವಿಟ್ ಜೀವನಕ್ರಮದಿಂದ ಬೇರ್ಪಡಲು ನನಗೆ ಸಾಧ್ಯವಾಗಲೇ ಇಲ್ಲ. ಅಧಿಕೃತವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿ ಜೆಸ್ವಿಟ್ ಆಗದಿದ್ದರೂ ಅನಧಿಕೃತವಾಗಿ ನಾನು ಈಗಲೂ ಜೆಸ್ವಿಟ್ ಎಂದು ಹೇಳಲು ಅತೀವ ಹೆಮ್ಮೆ! ಜೆಸ್ವಿಟ್ ಮಿಶನರಿಗಳ ಬಗ್ಗೆ ಅಪಾರ ಒಲವು. ಅವರ ಸಾಹಸಮಯ ಬದುಕನ್ನು ತಿಳಿದುಕೊಳ್ಳಲು ಸದಾ ಹಪಹಪಿಸುತ್ತಿದ್ದೆ. …ಇವರ ವಿಚಾರಗಳನ್ನು Gleaningನಲ್ಲಿ ಓದಿ ಮಿಶನರಿಗಳ ಬಗ್ಗೆ ಅತೀವ ಗೌರವ ತಂದುಕೊಂಡೆ. ಅವರ ಧರ್ಮನಿಷ್ಠೆ, ತ್ಯಾಗ, ಬಲಿದಾನಗಳಿಂದ ಪ್ರೇರಿತನಾಗಿ ನಾನೂ ಅವರಂತೆ ಆಗಬೇಕು ಎಂದು ಆಸೆಪಟ್ಟೆ. ಕ್ರಮೇಣ Gleaningಗೆ ಬದಲಾಗಿ Restless for Christ ಎಂಬ ಐದಾರು ಸರಣಿಗಳನ್ನು ಕರ್ನಾಟಕ ಜೆಸ್ವಿಟ್ ವೈಸ್ ಪ್ರಾವಿನ್ಸ್ ಪ್ರಕಟಿಸಿತು. ಆಗ ನಾನು ಪ್ರಬುದ್ಧನಾಗಿದ್ದೆ ಮತ್ತು ನೊವಿಶಿಯೇಟಿಗೂ ಸೇರಿದ್ದೆ. ಅಲ್ಲಿ ಆ ಮಿಶನರಿಗಳನ್ನು ಕುರಿತು ಓದಿದೆನು… ಮತ್ತೆ ಓದಿದೆನು… ಮರಳಿ ಮರಳಿ ಓದಿದೆನು… ಆಗ ನನಗೆ ನಾರಾವಿ ಮಿಶನ್ನ ಸ್ಥಾಪಕ ಫಾ. ಫೌಸ್ಟಿನ್ ಕೋರ್ಟಿ ಬಗ್ಗೆ ವಿಶೇಷವಾದ ಕಾಳಜಿ ಮೂಡಿತು.
“೧೯೮೯ರಲ್ಲಿ ಕರ್ನಾಟಕ ಕ್ರೈಸ್ತರ ಇತಿಹಾಸ, ಕೃತಿಯನ್ನು ಬರೆದು ಪ್ರಕಟಿಸಿದೆ. ಅದರಲ್ಲಿ ‘ದಲಿತರ ಅಪೋಸ್ತಲ ಕೋರ್ಟಿ’ ಎಂದು ಎರಡು ಮೂರು ಪುಟಗಳನ್ನು (P ೧೩೯) ಬರೆದೆ. ಆಗ ಫಾ. ಕೋರ್ಟಿಯ ಬಗ್ಗೆ ಹೆಚ್ಚು ಮಾಹಿತಿಗಳನ್ನು ಕಲೆಹಾಕಿದೆ. ಅಲ್ಲದೆ ೧೯೯೨ರಲ್ಲಿ ನಾರಾವಿಯನ್ನು ನೋಡುವ ಭಾಗ್ಯವೂ ದೊರೆಯಿತು. ಅನಂತರ ೧೯೯೬ರಂದು ಮೂಡಿಗೆರೆಯಲ್ಲಿ ಬಿ. ಅಲ್ವಾರಿಸ್ ಎಂಬ ಪ್ರಾಥಮಿಕ ಶಾಲೆಯ ಉಪಾಧ್ಯಾಯರ ಪರಿಚಯವಾಯಿತು. ಆಗ ಅವರೊಡನೆ ನಾರಾವಿಯಲ್ಲಿದ್ದ ಅವರ ಮಗಳ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಬಂದಿದ್ದೆ. ೧೭-೦೫-೧೯೯೮ರಲ್ಲಿ ಫಾ. ಮಾರ್ಕ್ ವಾಲ್ಡರ್ ಮೂಡಬಿದ್ರೆಯಿಂದ ನನ್ನನ್ನು ನಾರಾವಿಗೆ ಕರೆದುಕೊಂಡು ಹೋಗಿದ್ದರು. ಅಂದು ಅಲ್ವಾರಿಸ್ ಬೀಗರು ಅಂಥೋಣಿ ಕ್ರೂಜ್ ನಾರಾವಿಯಲ್ಲಿ ಕೊರಗರ ಯುವತಿಯೊಬ್ಬಳ ಮೇಲೆ ಮೇಲುಜಾತಿಯ ಮೂವರು ಕಾಮಾಂಧರು ಅತ್ಯಾಚಾರ ಎಸಗಿದ ವಿಚಾರವಾಗಿ ತಿಳಿಸಿದ್ದರು. ಫಾ. ಕೋರ್ಟಿ ಅವರು ಸಂಧಾನಸೂತ್ರಗಳನ್ನು ಮಾಡಿದರೆಂದು, ಅದು ಕೈಮೀರಿದಾಗ ನ್ಯಾಯಾಲಯದ ಮೊರೆ ಹೋದರೆಂದು ಹೇಳಿದ್ದರು. ಈ ಪ್ರಸಂಗವನ್ನು ನಾರಾವಿಯ ಕ್ರೈಸ್ತರು ವಿವಿಧ ರೀತಿಯ ಕಥೆ ಕಟ್ಟಿ ಹೇಳಿರುವುದನ್ನೂ ಅನೇಕ ಸಾರಿ ನಾನು ಕೇಳಿಸಿಕೊಂಡಿದ್ದೆ. ಅದನ್ನು ಕಾನೂನು ಕ್ರಮಕ್ಕೆ ಒಳಪಡಿಸಿ ಈ ಕಾದಂಬರಿಗೆ ಹೊಸರೂಪವನ್ನು ಪ್ರಾಪ್ತವಾಗಿಸಿದ್ದೇನೆ… ಪಡುಬಿದ್ರಿಯ ಢಕ್ಕೆ ಬಲಿ, ನಾಗಮಂಡಲಗಳನ್ನು ಹತ್ತಿರದಿಂದ ನೋಡಿ ದಾಖಲಿಸಿದ್ದೇನೆ (೨.೩.೨೦೦೧). ಕಾಡ್ಯನಾಟ ಹಾಗೂ ಪಂಜುರ್ಲಿ ಭೂತ ಪ್ರದರ್ಶನಗಳನ್ನು ಅನೇಕ ಸಾರಿ ನೋಡಿದ್ದೇನೆ. ಕೆನರಾದ ಕೋಳಿ ಅಂಕ, ಕಂಬಳ, ಹುಲಿವೇಷಗಳನ್ನು ಬಹಳ ಸಾರಿ ನೋಡಿ ಕೆಲವು ಲೇಖನಗಳನ್ನು ಬರೆದಿದ್ದೇನೆ….
“ಫಾ. ಕೋರ್ಟಿ ಅವರ ಬಳಿ ಇದ್ದ ಕೆಂಪಿ ಎಂಬ ಕುದುರೆಯ ಸಾಹಸ ಕಥೆಗಳನ್ನು ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕೇಳಿದ್ದೆ. ಅಲ್ಲಲ್ಲಿ ಓದಿದ್ದೆ. ತುಂಬಿದ ಫಲ್ಗುಣಿ ನದಿಯಲ್ಲಿ ನೆರೆಯನ್ನೂ ಲೆಕ್ಕಿಸದೆ ತನ್ನ ಒಡೆಯನನ್ನು ಆಚೆ ದಡಕ್ಕೆ ಮುಟ್ಟಿಸಿದ್ದರಿಂದ ಕೋರ್ಟಿ ನ್ಯಾಯಾಲಯಕ್ಕೆ ಸಕಾಲದಲ್ಲಿ ಹೋಗಿ ಬಡ ದಲಿತರ ಪರವಾಗಿ ಕೇಸನ್ನು ಗೆದ್ದ ವಿಚಾರ ನನ್ನೊಳಗೆ ಜಾಗ್ರತಾವಸ್ಥೆಯಲ್ಲಿದ್ದು ಒಂದು ಕಾದಂಬರಿಯನ್ನು ಬರೆಯಬೇಕೆಂದು ಸದಾ ತುಡಿಯುತ್ತಿತ್ತು. ಬಹಳ ವರ್ಷಗಳ ನನ್ನ ಕನಸು ಈಗ ನನಸಾಗಿದೆ.”
“ಇದರಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ನನ್ನ ಮೊಮ್ಮಗನ ಪಾತ್ರ ಬಹಳಷ್ಟಿದೆ. ಫಾ. ಕೋರ್ಟಿಗೆ ಸಂಬಂಧಿಸಿದ ಐದಾರು ಪುಸ್ತಕಗಳನ್ನು ಮತ್ತು ಬೇರೆಬೇರೆ ಮೂಲಗಳಲ್ಲಿನ ಲೇಖನಗಳನ್ನೂ ಓದಿ ಸಮಗ್ರವಾಗಿ ರೆಕಾರ್ಡ್ ಮಾಡಿದ. Restless for Christ Series I, Among the Outcastes by Emmanuel Banfi S.J. ಮತ್ತು Burning Bush Vol II by Devadatta Kamath S.J. – ಈ ಕೃತಿಗಳಲ್ಲಿನ ಕೋರ್ಟಿ ಕುರಿತ ಲೇಖನಗಳು ತುಂಬಾ ಉಪಯೋಗಕ್ಕೆ ಬಂದವು. ಅಲ್ಲದೆ ಕೆಳಜಾತಿಯವರ ಮಿಶನ್ ಸ್ಥಾಪಿಸಿ ದುಡಿದ ಫಾ. ಗವಿರಾಗಿ, ಫಾ. ಕಮೀಜ ಮತ್ತು ಫಾ. ಜಿಯಾರೋ ಅವರುಗಳ ಜೀವನ ಚರಿತ್ರೆಯನ್ನು ಓದಿಸಿ ರೆಕಾರ್ಡ್ ಮಾಡಿಸಿದೆ. ಅಲ್ಲದೆ ಬಹಳ ಮುಖ್ಯವಾದ ವಿಚಾರಗಳನ್ನೂ ರೆಕಾರ್ಡ್ ಮಾಡಿಸಿಕೊಂಡು ಮತ್ತೆಮತ್ತೆ ಕೇಳಿಸಿಕೊಂಡೆ. ಹೀಗೆ ಫಾ. ಕೋರ್ಟಿಗೆ ಸಂಬಂಧಿಸಿದ ವಿಚಾರಗಳನ್ನು ಕಾದಂಬರಿಯ ಓಟಕ್ಕೆ ಎಟಕಿಸಿಕೊಂಡು ಒಟ್ಟಾರೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರದ ಹಾಗೆ ಕಾದಂಬರಿಯನ್ನು ರಚಿಸಿದ್ದೇನೆ.
“ಫಾ. ಕೋರ್ಟಿಯವರ ಜೀವನ ಚರಿತ್ರೆಯನ್ನು ಅನ್ನಿ ಫ್ರಾ. ಐ. ಫರಿಯಾಸ್ ಎಂಬುವವರು ೧೯೬೫ರಲ್ಲಿ ಬರೆದರು. ಅದನ್ನು ವೆನಿಸ್ನಲ್ಲಿ ಪ್ರಕಟಿಸಲಾಯಿತು. ೧೯೬೨ರಲ್ಲಿ ಸ್ಕೂಲ್ ಮಾಸ್ಟರ್ ರೆವರೆಂಡ್ ಗಾಸ್ಪರ್ ಪಿಂಟೊ ಕೋರ್ಟಿಯವರ ನಾರಾವಿ ಮಿಷನ್ ಕುರಿತು ಅಧಿಕೃತವಾದ ಕೃತಿಯೊಂದನ್ನು ಬರೆದಿದ್ದು, ಅದು ಕಾದಂಬರಿಯಂತೆ ಇದೆ ಎನ್ನಲಾಗಿದೆ. ೧೦೬೦ ಶೋಕಗೀತೆ (Elegy)ಗಳನ್ನೂ ಇದರಲ್ಲಿ ಅಳವಡಿಸಿದೆಯೆಂದು Among the Outcastesನ ಲೇಖಕ Emmanuel Banfi S.J. ಅವರು ಹೇಳಿದ್ದಾರೆ. ಫಾ. ಗಾಸ್ಪರ್ ಪಿಂಟೊ ಸ್ಥಳೀಯ ಮತಾಂತರ ಕ್ರೈಸ್ತರಾಗಿದ್ದು, ಮೂಡಬಿದ್ರಿಯ ಅಲಂಗಾರ್ ಶಾಲೆಯಲ್ಲಿ ಉಪದೇಶಿ ಹಾಗೂ ಸ್ಕೂಲ್ ಮಾಸ್ಟರ್ ಆಗಿದ್ದರು. ಆದ್ದರಿಂದ ಅವರು ಬರೆದಿರುವ ಫಾ. ಕೋರ್ಟಿಯ ಜೀವನಚರಿತ್ರೆಯಲ್ಲಿ ನೈಜವಾದ ಸ್ಥಳೀಯ ಮಾಹಿತಿಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಆದರೆ ನನಗೆ ಮೇಲಿನ ಎರಡೂ ಕೃತಿಗಳು ಲಭ್ಯವಾಗಲಿಲ್ಲ. ಈ ಕೃತಿಗಳೇನಾದರೂ ದೊರಕಿದ್ದರೆ ನನ್ನ ‘ಕೆಂಪಿ ಮತ್ತು ಕೋರ್ಟಿ’ ಕಾದಂಬರಿ ಬೇರೆಯ ರೂಪವನ್ನೇ ಪಡೆದುಕೊಳ್ಳುತ್ತಿತ್ತೋ ಏನೋ? ಅವುಗಳನ್ನು ನೋಡಬೇಕೆಂಬ ಕುತೂಹಲ ನನಗೆ ಈಗಲೂ ಇದೆ.”
ತಲ್ವಾಡಿಯವರ ‘ಕೆಂಪಿ ಮತ್ತು ಕೋರ್ಟಿ’ ಫಾದರ್ ಫೌಸ್ಟಿನ್ ಕೋರ್ಟಿ (೧೮೫೬-೧೯೨೬) ಎಂಬ ಜೆಸುಯಿತ್ ಮಿಶನರಿಯ ಜೀವನ ಚರಿತ್ರೆಯನ್ನು ಕಾದಂಬರಿಯ ರೂಪದಲ್ಲಿ ಹೇಳುವ ಕಾದಂಬರಿ. ಸುಮಾರು ನೂರೈವತ್ತು ವರ್ಷಗಳ ಹಿಂದೆ ಕ್ರೈಸ್ತ ಮಿಶನರಿಗಳು ತಮ್ಮ ಧರ್ಮಪ್ರಚಾರಕ್ಕಾಗಿ ಪಟ್ಟ ಪರಿಶ್ರಮ ಈ ಕೃತಿಯಲ್ಲಿ ದಾಖಲಾಗಿದೆ. ಕೋರ್ಟಿಯವರ ಸೇವೆಯಲ್ಲಿ ೧೮ ವರ್ಷಗಳ ಕಾಲ ತೊಡಗಿಕೊಂಡು ಅವರ ಪ್ರಾಣವನ್ನೂ ಕೆಲವೊಮ್ಮೆ ರಕ್ಷಿಸಿದ್ದ ಕೆಂಪಿ ಎಂಬ ಕುದುರೆಯ ಚರಿತ್ರೆಯೂ ಇದರಲ್ಲಿದೆ. ಇದರಲ್ಲಿರುವ ಕಥೆ ಮತ್ತು ಇತಿಹಾಸದ ವಿವರಗಳು ಸತ್ಯ ಘಟನೆಗಳ ವಿವಿಧ ಬಗೆಯ ನಿರೂಪಣೆಗಳನ್ನು ಆಧರಿಸಿವೆ ಎನ್ನುವುದು ಮೇಲಿನ ಮಾತುಗಳಲ್ಲಿ ಸೂಚಿಸಲ್ಪಟ್ಟಿದೆ. ಇನ್ನಷ್ಟು ವಿವರಗಳು ಸಿಕ್ಕಿದ್ದರೆ ಅದನ್ನು ಸೇರಿಸಿಕೊಳ್ಳುತ್ತಿದ್ದೆ ಎಂದು ಲೇಖಕರು ಹೇಳಿದ್ದಾರೆ.
ಈ ಕಥಾನಕದಲ್ಲಿ ಕೆಂಪಿಯ ಹಿಂದಿನ ಒಡೆಯ ಕಾಪು ಎಂಬ ಊರಿನ ಲಕ್ಷ್ಮೀನಾರಾಯಣ ಭಟ್ಟರ ಕುಟುಂಬದ ಚರಿತ್ರೆ ಇದೆ. ಇಲ್ಲಿ ಪಡುಬಿದ್ರಿಯ ಡಕ್ಕೆ ಬಲಿ ಇತ್ಯಾದಿ ಆಚರಣೆಗಳನ್ನೂ, ಮೇಲುವರ್ಗದವರ ವ್ಯಭಿಚಾರ, ಕೊಲೆ ಇತ್ಯಾದಿ ಚಟುವಟಿಕೆಗಳನ್ನೂ ಚಿತ್ರಿಸಲಾಗಿದೆ. ಆದರೆ ಲೇಖಕರು ಹಿಂದೂ-ಜೈನ ಇತ್ಯಾದಿ ಮೇಲುವರ್ಗದವರೆಲ್ಲ ಕೆಟ್ಟವರೆಂದು ಬಿಂಬಿಸದೆ ಸಮತೋಲನವನ್ನು ಕಾದುಕೊಂಡಿದ್ದಾರೆ: “ಲಕ್ಷ್ಮೀನಾರಾಯಣ ಭಟ್ಟರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಅವರ ಧರ್ಮಶ್ರದ್ಧೆ, ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಸಹಾನುಭೂತಿ, ತುಳಿಯಲ್ಪಟ್ಟ ಜನಗಳ ಬಗ್ಗೆ ಇದ್ದ ತಾಯಿತನದ ಕಾಳಜಿ, ಅನ್ಯಾಯವನ್ನು ಖಂಡಿಸುತ್ತಿದ್ದ ರೀತಿ ನಾರಾಯಣ ಭಟ್ಟರಿಗೆ ಗೌರವವನ್ನು ತಂದುಕೊಟ್ಟವು. ತಾವು ಮದುವೆಯಾದ ಸರಸ್ವತಿಯ ಕಾಲಗುಣದಿಂದ ಕುದುರೆ ವ್ಯಾಪಾರ ಹತ್ತಾರು ಪಾಲು ಕುದುರಿತು. ಬೇರೆಬೇರೆ ಕುದುರೆ ತಳಿಗಳನ್ನು ತಂದು ಬೆಳೆಸಿ ಮಾರತೊಡಗಿದರು. ಕುದುರೆ ಸಾಕಲೆಂದೇ ಅರಬ್ ಮೂಲದ ಕುದುರೆಶಾಸ್ತ್ರ ಪಂಡಿತನನ್ನು ಇರಿಸಿಕೊಂಡಿದ್ದರು. ಹತ್ತಿರದ ದೂರದ ಊರುಗಳ ಕುದುರೆಪ್ರಿಯರು ಭಟ್ಟರಿಂದ ಕುದುರೆ ಖರೀದಿಸುತ್ತಿದ್ದರು. ಕುದುರೆ ಖರೀದಿಸಿ ಅಲ್ಲಿಯೇ ಸವಾರಿ ಮಾಡಲು ತರಬೇತಿ ಪಡೆಯಲೂ ವ್ಯವಸ್ಥೆ ಮಾಡಿದ್ದರು. ಲಕ್ಷ್ಮೀನಾರಾಯಣ ಭಟ್ಟರು ತಮ್ಮ ಸುಂದರವಾದ ಹೆಂಡತಿ ಸರಸ್ವತಿಗಿಂತಲೂ ಹೆಚ್ಚಾಗಿ ಕುದುರೆಗಳನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಜನ ಅವರನ್ನು ಕುದುರೆ ಲಕ್ಷ್ಮೀನಾರಾಯಣ ಭಟ್ಟರು ಎಂದೇ ಕರೆಯತೊಡಗಿದರು”.
ಭಾರತಕ್ಕೆ ಬಂದನಂತರ ಕೋರ್ಟಿಯವರನ್ನು ಮೊದಲು ಸೈಂಟ್ ಅಲಾಶಿಯಸ್ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡಲು ಸೂಚಿಸಿದ್ದ ಮಿಷನ್ನವರು ನಂತರ ಅವರ ಆಸೆಯಂತೆ ಮಿಷನ್ ಪಾದ್ರಿಯಾಗಿ ಕೆಲಸ ಮಾಡಲು ನಾರಾವಿಗೆ ಕಳುಹಿಸುತ್ತಾರೆ. ಮಲೆನಾಡಿನ ಅಂಚಿನಲ್ಲಿದ್ದ ಹಳ್ಳಿಪ್ರದೇಶವಾದ ನಾರಾವಿಯಲ್ಲಿ ಸೇವೆಸಲ್ಲಿಸಲಾರಂಭಿಸಿದ ಕೋರ್ಟಿಯವರು ಅಲ್ಲೊಂದು ಗುಡಿಸಲು ಕಟ್ಟಿಕೊಳ್ಳುತ್ತಾರೆ. ಆ ಕಾಲದಲ್ಲಿ ಕೆಲವು ಗಣ್ಯರು ಓಡಾಟಕ್ಕೆ ಕುದುರೆಗಳನ್ನು ಬಳಸುತ್ತಿದ್ದರು. ಕೋರ್ಟಿಯವರು ಮಿಷನ್ ಮುಖ್ಯಸ್ಥರ ಒಪ್ಪಿಗೆ ಪಡೆದು ತಮ್ಮ ಓಡಾಟಕ್ಕಾಗಿ ಕಾಪು ಲಕ್ಷ್ಮೀನಾರಾಯಣ ಭಟ್ಟರಿಂದ ಕೆಂಪಿ ಎನ್ನುವ ಕುದುರೆಯನ್ನು ಖರೀದಿಸುತ್ತಾರೆ. ನಾರಾವಿಯಲ್ಲಿ ಕೋರ್ಟಿಯವರು ಜೈನ, ಬಂಟ, ಬ್ರಾಹ್ಮಣ ಮುಂತಾದ ಮೇಲುವರ್ಗದವರನ್ನು ಮತಾಂತರಗೊಳಿಸಲು ಸಾಧ್ಯವಾಗದೆ ದಲಿತರ ಮತಾಂತರದಲ್ಲಿ ಯಶಸ್ಸು ಗಳಿಸುತ್ತಾರೆ. ‘ಮನ್ಸೆರ ಗುರು’ (ದಲಿತರ ಗುರು) ಎಂದು ಕರೆಯಿಸಿಕೊಳ್ಳುತ್ತಾರೆ.
ದಲಿತ ಯುವತಿಯೊಬ್ಬಳನ್ನು ಮೇಲುವರ್ಗದ ಯುವಕರು ಅತ್ಯಾಚಾರ ಮಾಡಿದಾಗ ಅವಳಿಗೆ ನ್ಯಾಯ ಕೊಡಿಸಲು ನ್ಯಾಯಾಲಯಕ್ಕೆ ಹೋಗಿ ಯಶಸ್ವಿಯಾಗುತ್ತಾರೆ. ಅತ್ಯಾಚಾರ ಮಾಡಿದವರಲ್ಲಿ ಇಬ್ಬರು ಜೈನ ಜಮೀನುದಾರ ಮನೆತನದ ಯುವಕರು, ಒಬ್ಬ ಬಂಟರವನು. ಫಾದರ್ ಕೋರ್ಟಿ ಕಾರ್ಕಳ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಶಿಕ್ಷೆ ಕೊಡಿಸುತ್ತಾರೆ. ಈ ಪ್ರಕರಣ ಹೈಕೋರ್ಟಿಗೂ, ಅಲ್ಲಿಂದ ಸುಪ್ರೀಂ ಕೋರ್ಟಿಗೂ ಹೋಗಿತ್ತು; ಮರಣದಂಡನೆ ಶಿಕ್ಷೆಯನ್ನು ತಪ್ಪಿಸಿಕೊಂಡು ಜೀವಾವಧಿಗೆ ಇಳಿಸಲು ಜಮೀನುದಾರ ಆದಿಬ್ರಹ್ಮಯ್ಯ ಬಹಳ ಖರ್ಚು ಮಾಡಬೇಕಾಯಿತು ಎಂದು ಕಾದಂಬರಿಯಲ್ಲಿದೆ. ಇದು ವಾಸ್ತವಕ್ಕೆ ದೂರವಾದುದು. ಭಾರತದಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಯಾದದ್ದು ೧೯೩೭ರಲ್ಲಿ. ಫಾ. ಕೋರ್ಟಿಯವರ ದೇಹಾಂತ್ಯ ೧೯೨೬ರಲ್ಲಿ. ಅಲ್ಲದೆ ಅತ್ಯಾಚಾರಕ್ಕೆ ಮರಣದಂಡನೆಯ ಶಿಕ್ಷೆ ಇತ್ತೆನ್ನುವುದಕ್ಕೆ ಆಧಾರವಿಲ್ಲ. ಈ ಪ್ರಕರಣವನ್ನು ರಾಜ್ಯಮಟ್ಟದ ಪತ್ರಿಕೆಗಳು ವರದಿ ಮಾಡಲಿಲ್ಲ, ಪತ್ರಿಕೆಗಳು ಮೇಲುವರ್ಗದ ಕೈಗೊಂಬೆಗಳು ಎನ್ನುವ ಅಭಿಪ್ರಾಯವನ್ನು ಕಾದಂಬರಿಯಲ್ಲಿ ಲೇಖಕರು ನೇರವಾಗಿ ಹೇಳುತ್ತಾರೆ. “ಇದು ನಾಗರಿಕ ಪ್ರಪಂಚ ತಲೆ ತಗ್ಗಿಸುವ ಕೆಲಸ ಎಂದು ಪತ್ರಿಕೆಗಳು ರಾಜ್ಯಮಟ್ಟದ ವರದಿ ಮಾಡುವ ಬದಲು ತೇಲಿಸಿ ಸತ್ಯವನ್ನು ಮರೆಮಾಚಿ ಸುದ್ದಿ ಮಾಡಿ ಕೈತೊಳೆದುಕೊಂಡವು. ಇದಕ್ಕೆ ಕಾರಣ ನಾರಾವಿಯ ಪ್ರಬಲ ಕೋಮಿನವರ ಮಸಲತ್ತು. ಪತ್ರಿಕಾರಂಗದಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ಆಗುವುದೇ ಹೀಗೆ!” (ಪುಟ ೯೧). ಇದೂ ಕೂಡ ಕಾಲವ್ಯತ್ಯಯ ದೋಷಕ್ಕೆ (ಅನಾಕ್ರೋನಿಸಮ್) ಒಂದು ಮಾದರಿ. ಆಗ ಇಲ್ಲಿ ದಿನಪತ್ರಿಕೆಗಳು ಇರಲಿಲ್ಲ.
ನಾರಾವಿಯಲ್ಲಿ ನಡೆಯುವ ಆಟಿ ಕಳಂಜ, ಪಂಜುರ್ಲಿ ಭೂತದ ಕೋಲ ಮುಂತಾದ ಆಚರಣೆಗಳನ್ನು ಚಿತ್ರಿಸಿ ಈ ಕಥಾನಕಕ್ಕೆ ಜೀವಂತಿಕೆಯನ್ನು ತರಲು ಲೇಖಕರು ಪ್ರಯತ್ನಿಸಿದ್ದಾರೆ. ಆದರೆ ಇವೆಲ್ಲವನ್ನು ದೂರದಲ್ಲಿ ನೋಡಿ, ತಮ್ಮ ಕಲ್ಪನೆಯನ್ನು ಮತ್ತು ಆಫ್ರಿಕದ ವೂಡೂ ಮುಂತಾದ ಆಚರಣೆಗಳ ಆಧಾರದಲ್ಲಿ ತಮ್ಮದೇ ಆದ ಚಿತ್ರವೊಂದನ್ನು ಕಟ್ಟಿಕೊಟ್ಟಿದ್ದಾರೆ. ತುಳುನಾಡಿನ ಕೋಲಕ್ಕೂ ಇಲ್ಲಿ ಚಿತ್ರಿತವಾಗಿರುವ ಅತಿರಂಜಿತ ಸನ್ನಿವೇಶಗಳಿಗೂ ಸಂಬಂಧವಿಲ್ಲ. ಮುಖ್ಯವಾಗಿ ಪಂಜುರ್ಲಿಯ ಕೋಲ ಮಾಡಿ ಫಾದರ್ ಕೋರ್ಟಿಯವರನ್ನು ಕೊಲ್ಲಲು ಭೂತವನ್ನು ಛೂಬಿಟ್ಟರು ಎನ್ನುವ ಅಭಿಪ್ರಾಯವನ್ನು ಕಾದಂಬರಿ ಹುಟ್ಟಿಸುತ್ತದೆ. ಆ ಸನ್ನಿವೇಶವನ್ನು ಕೆಲವು ವಿವರಣೆಗಳನ್ನು ಗಮನಿಸಿ.
“ತಮಟೆಗಳ ಶಬ್ದ ನಭೋಮಂಡಲವನ್ನು ಸೇರಿ ಮರುಧ್ವನಿಸುತ್ತಿತ್ತು! ಪರವರ ಕೆಲವರು ಕೊಂಬು ಕಹಳೆಗಳನ್ನು ಊದುತ್ತಿದ್ದರು. ಬಿಲ್ಲವರು ಮುಖ್ಯ ಭೂತಗಳ ಮುಖವಾಡ ಧರಿಸಿ ಮೈಕೈಗೆ ಕಪ್ಪು ಹಚ್ಚಿಕೊಂಡು ಸೊಂಟಕ್ಕೆ ತೆಂಗಿನ ಗರಿಗಳಿಂದ ಮಾಡಿದ ಕಾಸಾರವನ್ನು ಧರಿಸಿಕೊಂಡು ಈಗಾಗಲೇ ಕುಣಿಯಲು ಆರಂಭಿಸಿದ್ದರು. ಕೊರಗರಲ್ಲಿ ಕೆಲವರು ತಮ್ಮ ಭೂತಸಾನಗಳಲ್ಲಿದ್ದ ಭೂತಗಳನ್ನು ಮೈಯೇರಿಸಿಕೊಂಡು ನರ್ತನ ಮಾಡುತ್ತಿದ್ದರು. ಜನರು ಕೇಕೆ ಹಾಕುತ್ತ ತಮಟೆಯ ಶಬ್ದಕ್ಕೆ ಕುಣಿಯುತ್ತಿದ್ದರು…… ಇತ್ತ ಅವರು ಅಪ್ಪಣೆ ನೀಡಿದ್ದೇ ತಡ ಅತ್ತ ನಲಿಕೆಯ ನಾಲ್ಕು ಮಂದಿ ಢಮರುಗ ಬಾರಿಸುತ್ತ ಪಂಜುರ್ಲಿಯ ಸಾಹಸದ ಕಥೆಗಳನ್ನು ಹಾಡುತ್ತ ನರ್ತಿಸತೊಡಗಿದರು. ಅವರ ನರ್ತನದ ಹಿಂದೆಯೇ ಒಬ್ಬೊಬ್ಬ ಪಾತ್ರಿಯೂ ಬಿಳಿಯ ದೋತರ ಉಟ್ಟು ಬೆತ್ತಲೆ ಮೈಯಲ್ಲಿ ನಲ್ಕೆೆಯವರ ನರ್ತನ ಹಾಗೂ ಹಾಡಿಗೆ ತಕ್ಕಂತೆ ವಾಲುತ್ತ ನರ್ತಿಸತೊಡಗಿದರು. ತಮಟೆ ವಾಲಗಗಳ ಸದ್ದು ಜಾಸ್ತಿಯಾಯಿತು. ಕೊಂಬು-ಕಹಳೆಗಳು ಮೊಳಗಿದವು. ಕುಣಿಯುತ್ತ ಕುಣಿಯುತ್ತ ಪಾತ್ರಿಗಳು ಆವೇಶಭರಿತರಾದರು. ಮೈಕೈ ಆಡಿಸುತ್ತ ತಾವು ಹೋದಲ್ಲಿ ಬಂದಲ್ಲಿ ಬುಟ್ಟಿಗಳಲ್ಲಿ ತುಂಬಿಸಿಟ್ಟಿದ್ದ ಸಿಂಗಾರ ಎಂದರೆ ಹೊಂಬಾಳೆಯನ್ನು ಎತ್ತಿಕೊಂಡು ತಮ್ಮ ಹಣೆಗೆ ಉಜ್ಜಿಕೊಂಡು ಉದ್ರೇಕಿತರಾಗಿ ಭಾವಾವೇಶದಿಂದ ಕುಣಿಯತೊಡಗಿದರು. ಪಾತ್ರಿಗಳ ಆವೇಶಪೂರಿತ ಕೈಗಳಿಗೆ ಸಿಗದಂತೆ ನಲ್ಕೆಯವರು ಢಕ್ಕೆ ಬಡಿಯುತ್ತ ಹಾಡು ಹೇಳುತ್ತ ತಪ್ಪಿಸಿಕೊಳ್ಳುವುದನ್ನು ನೋಡುವುದೇ ಚಂದ. ಅದೊಂದು ಅಪರೂಪದ ದೃಶ್ಯ! ಹಾಗೆ ಮೈಮೇಲೆ ಪಂಜುರ್ಲಿ ಭೂತ ಪ್ರವೇಶವಾದ ವ್ಯಕ್ತಿಯ ಕೈಗೆ ಸಿಕ್ಕಬಾರದು ಎಂಬ ವಿವೇಕ ಢಕ್ಕೆಯವರಿಗಿತ್ತು. ಅವರು ಅನುಭವಸ್ಥರು, ಹಾಗೇನಾದರೂ ಸಿಕ್ಕಿಕೊಂಡರೆ ಭೂತ ಆವೇಶದಿಂದ ಸಿಕ್ಕಿದ ವ್ಯಕ್ತಿಯನ್ನು ರಕ್ತ ಕಾರುವಂತೆ ಮಾಡುತ್ತದೆ. ಅಂತಹ ಆವೇಶ ಪಾತ್ರಿಗಳಿಗೆ ಪ್ರಾಪ್ತವಾದಾಗ ಅವರ ಕೈಗೆ ಸಿಗುವಂತೆ ಮಾಡಿ ಅವರ ಹಿಡಿತದಿಂದ ಫಕ್ಕನೆ ನುಣುಚಿಕೊಳ್ಳುತ್ತಿದ್ದ ನಲ್ಕೆಯವರ ಚಾಕಚಕ್ಯತೆಯನ್ನು ಕಂಡು ಜನ ಹರ್ಷೋದ್ಘಾರ ತೆಗೆಯುತ್ತಿದ್ದರು. ಈ ಆವೇಶಪೂರಿತ ಕುಣಿತಗಳು ಬಹಳ ಕಾಲ ನಡೆದವು. ಮಧ್ಯರಾತ್ರಿಯ ಹೊತ್ತಿಗೆ ಮುಖ್ಯ ಪಾತ್ರಿ ಪಂಜುರ್ಲಿ ಭೂತ ಖಡ್ಗವನ್ನು ಎತ್ತಿಕೊಂಡು ಆವೇಶದಿಂದ ತನ್ನ ಕುಣಿತದ ವೃತ್ತದಲ್ಲಿ ದಾಟಿ ಹೊರನಡೆದ. ಹೊರಗೆ ಈ ಗಳಿಗೆಗೆಂದೇ ಕಾಯುತ್ತಿದ್ದ ಇತರ ಭೂತಗಳು ಆವೇಶದಿಂದ ನಡುಗತೊಡಗಿದವು. ತಮಟೆಯ ಸದ್ದು ಹೆಚ್ಚಾಯಿತು. ಕಹಳೆ ಮೊಳಗಿತು. ಖಡ್ಗೇಶ್ವರಿಯನ್ನು ಹಿಡಿದು ಹೊರಬಂದ ಪಾತ್ರಿ ಆದಿಬ್ರಹ್ಮಯ್ಯನವರ ಬಳಿಗೆ ಬಂದು “ಈ ಊರಿನಲ್ಲಿ ದೌರ್ಜನ್ಯ ಜಾಸ್ತಿಯಾಗುತ್ತಿದೆ…. ನನ್ನ ಪರಿವಾರ ಭೂತಗಳನ್ನು ಮೂಲೆ ಗುಂಪಾಗಿಸಿದ್ದಾರೆ. ಓ ಓ ಓ ಓ… ಇದನ್ನು ನಾನು ಸಹಿಸಲಾರೆ… ಎಲ್ಲಿದೆ ನನ್ನ ನೂರಾರು ಜನ ಪರಿವಾರ ಭೂತಗಳು? ಏನಾಗುತ್ತಿದೆ ಈ ಊರಿನಲ್ಲಿ? ಪರದೇಶಿ ಪಾದ್ರಿಯ ಹಾವಳಿ ಹೆಚ್ಚಾಗುತ್ತಿವೆ…. ಓ ಓ ಓ ಓ ಓ” ಎಂದು ಆವೇಶದಿಂದ ಸತ್ಯನಾರಾಯಣ ಹೋತ್ರಿ ಬಳಿಗೆ ಬಂದಿತು. ಅರ್ಚಕರು ತಕ್ಷಣ ಎಳನೀರು ಬಾಳೆಹಣ್ಣನ್ನು ಪಂಜುರ್ಲಿ ಖಡ್ಗೇಶ್ವರಿಗೆ ನೀಡಿದರು. ಬಾಳೆಹಣ್ಣನ್ನು ಸುಲಿದು ಕೊಟ್ಟರು. ಎಳನೀರು ಕೊಚ್ಚಿಕೊಟ್ಟರು. ಪಂಜುರ್ಲಿ ಭೂತ ತಣ್ಣಗಾಗಿ ಮತ್ತೆ ಕಂಪಿಸತೊಡಗಿತು. ವಾಲಗದವರು ವಾದ್ಯ ಮಾಡತೊಡಗಿದರು. ಅತ್ತ ನಲಿಕೆಯವರು ಉಳಿದ ಮೂವರು ಪಾತ್ರಿಗಳನ್ನು ಕುಣಿಸುತ್ತಲೇ ಇದ್ದರು.” (ಪುಟ ೧೦೯)
“ಪಿಲಿಚಾಮುಂಡಿ, ಬೊಬ್ಬರ್ಯ, ಕಲ್ಲುರ್ಟಿ, ಕಲ್ಕುಡ, ಹಾಯ್ಗುಳಿ, ಉಂಬಲ್ಲಿ, ಯಕ್ಷಿ, ಧೂಮಾವತಿ, ಬಬ್ಬುಸ್ವಾಮಿ, ಕೋರ್ದಬ್ಬು, ಕೊಡಮಣಿತ್ತಾಯ, ಜುಮಾವಿ, ಜಾರಂದಾಯ, ಸತ್ಯದೇವತೆ, ಮಂತ್ರದೇವತೆ, ಅಣ್ಣಪಂಜುರ್ಲಿ, ಚೌಡಿ, ಭಂಟ, ಲಕ್ಕೆಸಿರಿ, ಕಾರಂದಾಯ, ಮೈಯಂತಿ, ಹಿರಿಯಜ್ಜ ಭೂತಗಳು ಖಡ್ಗೇಶ್ವರಿ ಸ್ಥಾನದಿಂದ ೨೦೦-೩೦೦ ಮೀಟರ್ ದೂರದಲ್ಲೇ ಕುಣಿದು ಕುಪ್ಪಳಿಸಿದವು. ಆವೇಶದಿಂದ ನಡುಗಿದವು. ಎಲ್ಲವೂ ಒಮ್ಮೆಲೇ ಕೇಕೆ ಹಾಕಿದವು. ತಮ್ಮ ಆಹಾರವನ್ನು ಕೈಸನ್ನೆಯಲ್ಲೇ ಕೇಳಿದವು. ಅವುಗಳಿಗೆ ಮದ್ಯ ಮಾಂಸವನ್ನು ನೀಡಿ ತಣಿಸಲಾಯಿತು. ಒಂದೊAದೇ ಭೂತಗಳು ಬೆಳಗಾಗುವುದರೊಳಗೆ ತಮ್ಮತಮ್ಮ ಸ್ವಸ್ಥಾನಗಳಿಗೆ ಹೋಗಿ ಸೇರಿಕೊಂಡವು…. ಇಂತಹ ಅದ್ಧೂರಿಯ ಪಂಜುರ್ಲಿಭೂತ ಕೋಲ ನಾರಾವಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಲ್ಲ. ಈ ಬಾರಿ ಖಂಡಿತ ಮನೆರೆ ಗುರು ಫಾ. ಕೋರ್ಟಿ ಪಂಜುರ್ಲಿಯ ಕ್ರೋಧಕ್ಕೆ ಸಿಕ್ಕಿ ರಕ್ತ ಕಾರಿ ಸಾಯುತ್ತಾನೆ – ಎಂದು ಹೆಚ್ಚು ಜನರು ನಂಬಿದರು.” (ಪುಟ ೧೧೦). ಈ ಪಟ್ಟಿಯಲ್ಲಿ ಏಳೆಂಟು ಹೆಸರುಗಳು ಸರಿಯಾಗಿವೆ. ಇನ್ನು ಕೆಲವು ತಪ್ಪಾಗಿ ಮುದ್ರಿತವಾಗಿರಬಹುದು; ಉಳಿದವುಗಳು ಕೆಲವು ಕಾಲ್ಪನಿಕ ಹೆಸರುಗಳಾಗಿರಬಹುದು. ಒಂದು ದೈವದ ಕೋಲದಲ್ಲಿ ಹೀಗೆ ಹಲವಾರು ದೈವಗಳು ಹೊರಗೆ ಕುಣಿದಾಡುವ ಕ್ರಮವಿಲ್ಲ. ದೈವಾರಾಧನೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿದರೆ ಈ ಬಗ್ಗೆ ತಿಳಿಯಬಹುದು. ಈ ಕಾದಂಬರಿಯಲ್ಲಿ ಭೂತಾರಾಧನೆಗೆ ಸಂಬಂಧಿಸಿದ ವರ್ಣನೆ ಹಾಗೂ ಮಾಹಿತಿಗಳು ಸಂಪೂರ್ಣವಾಗಿ ತಪ್ಪು ಎಂದಷ್ಟೆ ಹೇಳಬಹುದು.
ಕೆಲವು ಅಪರೂಪದ ಮಾಹಿತಿಗಳನ್ನು ಈ ಕಾದಂಬರಿ ದಾಖಲಿಸಿದೆ. ಅವು ಮುಖ್ಯವಾಗಿ ಕ್ರೈಸ್ತ ಮತಕ್ಕೆ ಸಂಬಂಧಿಸಿದ ವಿಚಾರಗಳು. ಮತಾಂತರಗೊಂಡ ಸ್ಥಳೀಯ ಕ್ರೈಸ್ತರಲ್ಲಿ ತಾವು ಬಿಟ್ಟು ಬಂದ ಧರ್ಮದ ಜಾತಿಗಳ ಭೇದಭಾವ ಪ್ರಜ್ಞೆ ಹಲವು ದಶಕಗಳ ಕಾಲ ಉಳಿದು ಕೆಲವು ಆಂತರಿಕ ಸಮಸ್ಯೆಗಳನ್ನು ಹುಟ್ಟುಹಾಕಿತ್ತು. (ನಾ. ಡಿಸೋಜ ಅವರು ತಮ್ಮ ‘ಬಾಮಣ್’ ಕಾದಂಬರಿಯಲ್ಲಿ ಈ ವಸ್ತುವನ್ನು ಪರಿಶೀಲಿಸಿದ್ದಾರೆ). ಅದನ್ನು ತಲ್ವಾಡಿಯವರೂ ದಾಖಲಿಸಿರುವುದು ಶ್ಲಾಘನೀಯವಾಗಿದೆ. ಆ ಕೆಲವು ಸಾಲುಗಳು ಹೀಗಿವೆ: “ದೇವರ ದಯೆಯಿಂದ ಪಾದ್ರಿಗೆ ಒಳ್ಳೆಯದೇ ಆಗುತ್ತಿತ್ತು. ಜನರು ಹೆಚ್ಚು ಹೆಚ್ಚಾಗಿ ಚರ್ಚಿಗೆ ಸೇರಲು ಬರುತ್ತಿದ್ದರು. ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಅವರ ವಿಶ್ವಾಸ ಅಷ್ಟು ಗಟ್ಟಿಯಾಗಿಲ್ಲದಿದ್ದರೂ ಸಂಖ್ಯೆಯಲ್ಲಿ ಕ್ರೈಸ್ತರು ಹೆಚ್ಚಾಗತೊಡಗಿದರು. ತುಳು ಮಾತಾಡುವ ನಲ್ಕೆಯವರು, ಪರವರು, ಪೊಂಬದರು, ಮೊಗವೀರರು, ಬಿಲ್ಲವರು, ಕೊರಗರು – ಹೀಗೆ ಅವರವರಲ್ಲೇ ಮೇಲುಕೀಳು ಜಾತಿಯವರು ಎಂಬ ನಂಬಿಕೆಯಿಂದ ಬದುಕುತ್ತಿರುವ ದಲಿತ ಜನಾಂಗದವರು ಕ್ರೈಸ್ತಮತಕ್ಕೆ ಆಗಾಗ ಬೇರೆಬೇರೆ ಕಾರಣಗಳಿಗೆ ಮತಾಂತರವಾಗುತ್ತಿದ್ದರು. ಅವರ ಅನುಕೂಲಕ್ಕಾಗಿ ಚರ್ಚನ್ನು ವಿಸ್ತರಿಸಬೇಕಾಯಿತು. ದುರಂತ ಎಂದರೆ ಮೇಲು ಜಾತಿಯಿಂದ ಮತಾಂತರವಾದವರು ಮನ್ಸೆರೆ ಜೊತೆ ಕುಳಿತುಕೊಳ್ಳುತ್ತಿರಲಿಲ್ಲ. ಆದ್ದರಿಂದ ಚರ್ಚನ್ನು ವಿಸ್ತರಿಸಿದಾಗ ಎಡಬಲಗಳಲ್ಲಿ ಪೀಠಾಂಕಣಕ್ಕೆ ಸೇರಿಕೊಂಡಂತೆ ಬೇರೆ ಸ್ಥಳವನ್ನು ರೆಕ್ಕೆಗಳ ಆಕಾರದಲ್ಲಿ ಗುರುತಿಸಿ ಕಟ್ಟಬೇಕಾಯಿತು. ಭಂಟರು, ತೀರ ಬೆರಳೆಣಿಕೆಯಷ್ಟು ಜೈನರು ಬಾಮ್ಮೊಣ್ ಎಂಬ ಕೊಂಕಣಿ ಮಾತಾಡುವ ಕ್ರೈಸ್ತರು ಹಾಗೂ ಜೈನ ಮತಾಂತರಿಗಳು ಚರ್ಚಿನ ಒಳಗೆ ಕುಳಿತುಕೊಳ್ಳುತ್ತಿದ್ದರು. ಆರಂಭದಲ್ಲಿ ದಲಿತ ಮತಾಂತರಿಗಳು ಚರ್ಚಿನ ಹೊರಗೆ ಕುಳಿತುಕೊಳ್ಳುತ್ತಿದ್ದರು. ಅವರಿಗೆ ಸಲೀಸಾಗಿ ಪೀಠದಲ್ಲಿ ನಡೆಯುವ ಪೂಜೆ ಕಾಣಲಿ ಎಂದು ಅಗಲವಾದ ಬಾಗಿಲನ್ನು ಅಳವಡಿಸಲಾಗಿತ್ತು. ಕ್ರೈಸ್ತರಾಗುವ ಮೊದಲು ಮೇಲುಜಾತಿಯ ಜಮೀನುದಾರರ ಅಂಗಳದಲ್ಲಿ ಕುಳಿತುಕೊಳ್ಳುತ್ತಿದ್ದ ದಲಿತರು ಕ್ರೈಸ್ತರಾದ ಮೇಲೆ ಚರ್ಚಿನ ಹೊರಗೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯನ್ನು ಕಂಡು ಫಾ. ಕೋರ್ಟಿ ತುಂಬಾ ನೊಂದುಕೊಳ್ಳುತ್ತಿದ್ದರು. ಕ್ರಮೇಣ ಈ ಅಂತರ ಕಡಮೆ ಆಗುತ್ತದೆ ಎಂಬ ಭರವಸೆಯಿಂದ ತೃಪ್ತರಾದರು.
“ಅಲ್ಪಸಂಖ್ಯಾತ ಮೇಲುಜಾತಿಯ ಕ್ರೈಸ್ತರು ಚರ್ಚಿನ ಒಳಗೆ ಬಹುಸಂಖ್ಯಾತ ಕೆಳಜಾತಿಯ ಕ್ರೈಸ್ತರು ಚರ್ಚಿನ ಹೊರಗೆ. ಇದೆಂತಹ ನ್ಯಾಯ? ಕ್ರೈಸ್ತರಾದ – ಮೇಲುಜಾತಿಯವರು ಮೇಲಾಗಿಯೇ ಇರುತ್ತಾರೆ. ಕೆಳಜಾತಿಯವರು ಕೀಳಾಗಿಯೇ ಇರುತ್ತಾರೆ. ಯಾಕೆ ಈ ತಾರತಮ್ಯ? ಇದನ್ನು ಬದಲಾಯಿಸುವ ಮಾರ್ಗೋಪಾಯಗಳೇನು? – ಎಂದೆಲ್ಲ ಇತಿಹಾಸದ ಪ್ರಾಧ್ಯಾಪಕ ಫಾ. ಕೋರ್ಟಿಯ ಅಂತರಾತ್ಮ ಆತನನ್ನು ಸದಾ ಕಾಡುತ್ತಿತ್ತು. ನಿಜವಾಗಿಯೂ ಇದು ದಲಿತರ ಚರ್ಚು, ಇಲ್ಲಿ ದಲಿತರು ಒಳಗಿರಬೇಕು. ಮೇಲುಜಾತಿಯವರು ಹೊರಗಿರಬೇಕು. ಆದರೆ ಭಾರತದ ಜಾತಿಪ್ರಧಾನ ಸಮಾಜದಲ್ಲಿ ಮೇಲು-ಕೀಳು ರಕ್ತಗತವಾಗಿದ್ದು ಅದರ ನೆರಳಿನಲ್ಲಿಯೇ ಬಾಳಬೇಕಾಗಿದೆ…. ಕಾಲವು ಎಲ್ಲವನ್ನೂ ಸರಿಪಡಿಸುತ್ತದೆ. ‘ಕಾಲಾಯ ತಸ್ಮೈ ನಮಃ’ ಎಂಬ ಆರ್ಯೋಕ್ತಿ ಇದೆ. “ಟೈಮ್ ಈಸ್ ದಿ ಅಲ್ಟಿಮೇಟ್ ಹೀಲರ್” ಎಂದುಕೊಂಡು ಫಾ. ಕೋರ್ಟಿ ಹೊಲೆಯರೊಡನೆಯೇ ಗುರುತಿಸಿಕೊಳ್ಳಲು ಬಯಸಿದರು.” (ಪುಟ ೮೮-೮೯)
ಈ ಕಾದಂಬರಿಯಲ್ಲಿ ಕೋರ್ಟಿಯವರ ಜೀವನಚರಿತ್ರೆಯು ಚಿತ್ರಿತವಾಗಿದೆ. ಕಾದಂಬರಿಯು ಕೊನೆ ಕೊನೆಗೆ ಜೀವನಚರಿತ್ರೆಯ ಸ್ವರೂಪವನ್ನೇ ಪಡೆಯುತ್ತದೆ. ಫಾ. ಫೌಸ್ಟಿನ್ ಕೋರ್ಟಿ ಇಟಲಿ ಮೂಲದ ಸ್ವಿಡ್ಜರ್ಲ್ಯಾಂಡ್ನವರು. ಇವರು ೧೮೫೬ರಲ್ಲಿ ಸ್ವಿಡ್ಜರ್ಲ್ಯಾಂಡ್ನಲ್ಲಿ ಜನಿಸಿದ ಇಟಲಿ ಮೂಲದವರು. ಅವರ ಜೀವನದ ಪ್ರಮುಖ ಘಟನೆಗಳನ್ನು ಕಾದಂಬರಿಯ ಕೊನೆಗೆ ಅನುಬಂಧ ರೂಪದಲ್ಲಿ ಕೊಡಲಾಗಿದೆ. ನಂತರ ನಾರಾವಿಯಲ್ಲಿರುವ ಅವರ ಪ್ರತಿಮೆ, ವಸ್ತುಗಳ ಸಂಗ್ರಹಾಲಯ ಇತ್ಯಾದಿಗಳ ಚಿತ್ರಗಳನ್ನು ಕೊಡಲಾಗಿದೆ.
ಫಾ. ಫೌಸ್ಟಿನ್ ಕೋರ್ಟಿ ೧೮೭೫ರಲ್ಲಿ ಲವೆಲ್, ಫ್ರಾನ್ಸ್ನಲ್ಲಿ ಜೆಸುಯಿತ್ ಸಂಸ್ಥೆಯ ನೊವಿಶಿಯೇಟ್ಗೆ ಸೇರಿದರು. ಫಾ. ಪೆರಿನಿ ಜೊತೆಗೆ ೧೮೮೪ರಲ್ಲಿ ಮಂಗಳೂರಿಗೆ ಬಂದರು. ೧೮೮೫ ಜೆಪ್ಪು ಸೆಮಿನರಿಯಲ್ಲಿ ಕನ್ನಡ ಕಲಿತರು. ೧೮೮೬-೧೮೮೮ ಅಲೋಶಿಯಸ್ ಕಾಲೇಜಿನಲ್ಲಿ ಇತಿಹಾಸದ ಅಧ್ಯಾಪಕರಾಗಿದ್ದರು. ನಡುವೆ ಅವರನ್ನು ಕರ್ಸಿಯಾಂಗಿನಲ್ಲಿ ದೈವಶಾಸ್ತçವನ್ನು ಕಲಿಯಲು ಕಳುಹಿಸಲಾಯಿತು. ಅಲ್ಲಿಂದ ಬಂದವರು ೧೮೯೩ರಲ್ಲಿ ಮಂಗಳೂರು ಜಪ್ಪು ಸೆಮಿನರಿಯಲ್ಲಿ ಪ್ರೊಬೆಷನ್ನಲ್ಲಿದ್ದರು. ೧೮೯೪-೧೯೦೪ ಅವಧಿಯಲ್ಲಿ ಮತ್ತೊಮ್ಮೆ ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಮಿಷನರಿಯಾಗಿ ಕೆಲಸ ಮಾಡಲು ಅಗತ್ಯವೆಂದು ೧೯೦೪ರಲ್ಲಿ ಅವರಿಗೆ ಫಜೀರ್ನಲ್ಲಿ ತುಳು ಕಲಿಸಲಾಯಿತು. ಅವರು ನಾರಾವಿಯ ಮಿಶನ್ನಲ್ಲಿ ೧೯೦೫-೧೯೨೨ರವರೆಗೆ ಕರ್ತವ್ಯ ನಿರ್ವಹಿಸಿದರು. ಅವರಿಗೆ ೧೯೧೮ರಲ್ಲಿ ಕೈಸರ್ ಇ ಹಿಂದ್ ಬೆಳ್ಳಿಪದಕ ನೀಡಲಾಯಿತು (ಈ ಹೆಸರಿನ ಚಿನ್ನ ಅಥವಾ ಬೆಳ್ಳಿ ಅಥವಾ ಕಂಚಿನ ಶ್ರೇಣಿಯ ಪದಕಗಳನ್ನು ಬ್ರಿಟಿಷ್ ಚಕ್ರವರ್ತಿ ಭಾರತದವರಿಗೆ ನಾಗರಿಕ ಪ್ರಶಸ್ತಿಯಾಗಿ ೧೯೦೦ ರಿಂದ ೧೯೪೭ರವರೆಗೆ ನೀಡುತ್ತಿದ್ದ; ಈಗಿನ ಪದ್ಮಶ್ರೀ, ಪದ್ಮವಿಭೂಷಣ ಇತ್ಯಾದಿಗಳಂತೆ). ೧೯೨೨ರಲ್ಲಿ ಅನಾರೋಗ್ಯ ನಿಮಿತ್ತ ಸ್ವದೇಶಕ್ಕೆ ಹೋದ ಕೋರ್ಟಿ ಮತ್ತೊಮ್ಮೆ ನಾರಾವಿಗೆ ಬಂದು ಮಿಶನ್ ಕೆಲಸ ಮುಂದುವರಿಸಿದರು (೧೯೨೩-೧೯೨೬). ೧೯೨೬ರಲ್ಲಿ ಮಂಗಳೂರು ಕಂಕನಾಡಿ ಮುಲ್ಲರ್ ಆಸ್ಪತ್ರೆಯಲ್ಲಿ ಅವರು ಅನಾರೋಗ್ಯದಿಂದ ತೀರಿಕೊಂಡರು.
ಕೋರ್ಟಿಯವರ ವ್ಯಕ್ತಿತ್ವದ ಮತ್ತು ಕ್ರಿಯೆಗಳ ವಿಶ್ಲೇಷಣೆಯನ್ನು ಕೂಡ ಕಾದಂಬರಿಯ ಒಳಗಡೆ ಲೇಖಕರು ಮಾಡಿದ್ದಾರೆ. ಉದಾಹರಣೆಗೆ, “ಮಿಷನ್ ಸುಪೀರಿಯರ್ ಆಗಿದ್ದ ಫಾದರ್ ಆಲ್ಬಟ್ಟಿ ಬ್ರದರ್ ಎಲ್ ಸ್ಪಿನಲಿ ಎಂಬುವವರನ್ನು ನಾರಾವಿಗೆ ಕರೆತಂದು ಕೋರ್ಟಿಗೆ ಸಹಾಯಕರಾಗಿರುತ್ತಾರೆಂದು ಹೇಳಿದರು. ಫಾ. ಕೋರ್ಟಿ “ನನಗೆ ಬ್ರದರ್ಗಳು ಬೇಡವೇ ಬೇಡ” ಎಂದು ಆ ಬ್ರದರ್ ಮುಂದೆಯೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿಬಿಟ್ಟಿದ್ದರು. ಮುಂದೆ ಬ್ರ. ಸ್ಪಿನಲಿ ಕೇರಳಕ್ಕೆ ಹೋಗಿ ವಿನ್ಸಂಟ್ ಇಂಡಸ್ಟ್ರಿ ಕಟ್ಟಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಿದರಲ್ಲವೆ? ಹೀಗೆ ನಾರಾವಿ ಮಿಷನ್ ಕೇಂದ್ರದ ಮನ್ಸೆರೆ ಗುರು ಭೂತದ ವೈರಿ ಅನೇಕ ಸಲ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅಂದು ಬ್ರ. ಸ್ಪಿನಲಿಯನ್ನು ಸಹಾಯಕರನ್ನಾಗಿ ಸ್ವೀಕರಿಸಿದ್ದರೆ ನಾರಾವಿಯಲ್ಲೊಂದು ಇಂಡಸ್ಟ್ರಿ ಸ್ಥಾಪನೆಯಾಗುತ್ತಿತ್ತು. ಅಂದಿನ ಬ್ರಿಟಿಷ್ ಸರ್ಕಾರ ಫಾ. ಕೋರ್ಟಿಯ ಸಾಮಾಜಿಕ ಸೇವೆಯನ್ನು ಗುರುತಿಸಿ, ಜೀತಪದ್ಧತಿಯನ್ನು ನಿರ್ಮೂಲ ಮಾಡುವ ಮಹತ್ತರವಾದ ಕೆಲಸ ಮಾಡಿದ್ದೀರಿ. ದೀನದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದೀರಿ. ನಾರಾವಿಯ ಹತ್ತಿರವೇ ೧೦೦೦ ಎಕರೆ ಅರಣ್ಯಭೂಮಿಯನ್ನು ನಿಮಗೆ ದಾನವಾಗಿ ನೀಡುತ್ತೇವೆ. ನೀವು ಅದನ್ನು ಅಲ್ಲಿನ ಕೆಳಜಾತಿಯ ಅನಾಗರಿಕ ಬಡವರಿಗೆ ಹಂಚಿ ಅವರಿಗೆಂದೇ ಒಂದು ಸುಸಜ್ಜಿತ ಕಾಲೋನಿಯನ್ನು ನಿರ್ಮಾಣ ಮಾಡಿ ಎಂದು ಫಾದರ್ ಕೋರ್ಟಿಗೆ ವಿಧವಿಧವಾಗಿ ಹೇಳಿತು. ಫಾ. ಕೋರ್ಟಿ ನೋಡುತ್ತೇನೆ; ಯೋಚಿಸುತ್ತೇನೆ; ಮಿಷನ್ ಮುಖ್ಯಸ್ಥರ ಜೊತೆಗೆ ಸಮಾಲೋಚಿಸುತ್ತೇನೆ ಎಂದು ಕೇವಲ ಸಬೂಬು ಹೇಳಿ ಕೈ ತೊಳೆದುಕೊಂಡರು. ಇದು ನಾರಾವಿ ಮಿಷನ್ ದಲಿತ ಕ್ರೈಸ್ತರಿಗೆ ಅವರು ಮಾಡಿದ ಮಹಾಪರಾಧ! ಅಂದು ಕೋರ್ಟಿ ಸ್ವಲ್ಪ ಉದಾಸೀನ ಮಾಡದೆ ಭಾರತ ಸರ್ಕಾರದ ಸಲಹೆಯನ್ನು ಒಪ್ಪಿಕೊಂಡಿದ್ದರೆ, ಇಂದು ನಾರಾವಿಯ ದಲಿತ ಕ್ರೈಸ್ತರು ಒಂದು ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳಬಹುದಿತ್ತು. ಫಾ. ಕೋರ್ಟಿಗೂ ಒಂದು ಸವಾಲನ್ನು ಎದುರಿಸಿದಂತಾಗುತ್ತಿತ್ತು! ದೂರದೃಷ್ಟಿ ದೋಷದಿಂದ ಇಂತಹ ಅಸಂಬದ್ಧಗಳು ಘಟಿಸುತ್ತವೆ. ಭಾವಪ್ರಪಂಚ ಬೇರೆ, ವಾಸ್ತವಪ್ರಪಂಚ ಬೇರೆ. ಧರ್ಮವನ್ನು ಸಾಮಾಜಿಕ ಸ್ತರದಲ್ಲಿ ನಿಂತು ನೋಡದಿದ್ದರೆ ಹೀಗಾಗುತ್ತದೆ. ಕೋರ್ಟಿ ಅವರ ವಿಚಾರದಲ್ಲೂ ಆದದ್ದು ಇದೇನೆ.” (ಪುಟ ೨೪೩).
ಜೀವನಚರಿತ್ರೆಯನ್ನು ಕಾದಂಬರಿಯಾಗಿ ರಚಿಸುವ ಸವಾಲಿನ ಬಗ್ಗೆ ಲೇಖಕರು ಹೀಗೆ ಹೇಳಿದ್ದಾರೆ: “ಫಾ. ಫೌಸ್ಟಿನ್ ಕೋರ್ಟಿಯವರ ಜೀವನ ಚರಿತ್ರೆಯನ್ನೊಳಗೊಂಡದ್ದು ಈ ಕಾದಂಬರಿ. ಜೀವನಚರಿತ್ರೆಯೇ ಬೇರೆ, ಕಾದಂಬರಿಯ ನೆಲೆಯೇ ಬೇರೆ. ಈ ಎರಡನ್ನೂ ಸರಿದೂಗಿಸಿಕೊಂಡು ಫಾ. ಕೋರ್ಟಿಯ ಜೀವನಕ್ಕೆ ಸಂಬಂಧಿಸಿದ ಮುಖ್ಯವಾದ ಘಟನೆಗಳನ್ನು ಒಳಗೊಳಿಸಿ ಆತನ ವ್ಯಕ್ತಿತ್ವಕ್ಕೆ ಧಕ್ಕೆ ಬರದ ಹಾಗೆ ಕಾದಂಬರಿಯನ್ನು ನಡೆಸುವುದು ಕಷ್ಟದ ಕೆಲಸ. ಕೇವಲ ನೈಜ ವಿಚಾರಗಳನ್ನೇ ಬರೆದರೆ ಅದು ಜೀವನಚರಿತ್ರೆ ಆಗಿಬಿಡುವುದು. ಜೀವನಚರಿತ್ರೆಯನ್ನು ಕಾದಂಬರಿಯಾಗಿಸಿ ಓದುಗರ ಕುತೂಹಲವನ್ನು ಹಿಡಿದಿಡಲು ಅನೇಕ ಕಾಲ್ಪನಿಕ ವಿಚಾರಗಳನ್ನು ಕಾದಂಬರಿಯ ತಂತ್ರಕ್ಕೆ ಅಳವಡಿಸಬೇಕಾಗಿ ಬಂದಿತು. ಕೊರಗರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಅತಿಯಾಯಿತು ಎಂದು ಓದುಗರಿಗೆ ಅನ್ನಿಸಲೂಬಹುದು. ಆದರೆ ಕಾದಂಬರಿಯ ನೆಲೆಯಲ್ಲಿ ನಿಂತು ನೋಡಿದಾಗ ಅವು ತೀರಾ ಸಹಜವಾಗಿ ಕಾಣಿಸುತ್ತವೆ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಿದೆ. ಸಾಮೂಹಿಕ ಅತ್ಯಾಚಾರ ಮತ್ತು ಮೇಲುಜಾತಿಯವರ ದೌರ್ಜನ್ಯ ಅಂದು ಅತಿಯೆನ್ನುವಷ್ಟು ನಡೆಯುತ್ತಿದ್ದುದನ್ನು ಅಲ್ಲಿನ ಮತಾಂತರಿತ ಕ್ರೈಸ್ತರು ದುಃಖದಿಂದ ಹೇಳಿಕೊಂಡಿದ್ದಾರೆ. ಕಾಲ್ಪನಿಕ ಘಟನೆಗಳು ಕಥಾನಾಯಕನ ವ್ಯಕ್ತಿತ್ವಕ್ಕೆ ಪೋಷಕವಾಗಿದ್ದು, ವ್ಯಕ್ತಿಯ ಆತ್ಮಗೌರವವನ್ನು ಹೆಚ್ಚಿಸುವಂತೆ ಜಾಗ್ರತೆ ವಹಿಸಲಾಗಿದೆ. ನಾರಾವಿಯಲ್ಲಿ ಕೋರ್ಟಿಯ ವಿರುದ್ಧ ನಡೆಸುವ ಪಂಜುರ್ಲಿ ಭೂತಾರಾಧನೆ ಕಾರ್ಯಕ್ರಮಗಳು, ಅಲ್ಲಿನ ಶ್ರೀಮಂತ ಜಮೀನ್ದಾರರಾದ ಜೈನರು, ಭಂಟರು, ಬ್ರಾಹ್ಮಣರು, ಹೆಗ್ಗಡೆಗಳು, ಪಾದ್ರಿಯ ವಿರುದ್ದ ನಡೆಸುತ್ತಿದ್ದ ಹುನ್ನಾರಗಳು ಸ್ವಲ್ಪ ಹೆಚ್ಚಾಯಿತೆನ್ನಬಹುದು. ಫಾ. ಕೋರ್ಟಿಯ ಕಾಲದಲ್ಲಿ ಹೆಣ್ಣುಮಕ್ಕಳ ಮೇಲೆ ಅಂದಿನ ಪ್ರತಿಷ್ಠಿತ ಜಾತಿಯವರು ಬಲತ್ಕಾರವೆಸಗುತ್ತಿದ್ದುದರಲ್ಲಿ ಎರಡು ಮಾತಿಲ್ಲ. ಒಡೆಯರು, ಒಡೆಯರ ಮಕ್ಕಳ ದೌರ್ಜನ್ಯಕ್ಕೆ ದನಿ ಎತ್ತದೆ ಮೌನವಾಗಿ ಒಳಗೊಳಗೇ ನೊಂದು ಮಡಿದವರು ಅದೆಷ್ಟೋ ಜನರಿದ್ದಾರೆ. ಅಂತಹ ದೌರ್ಜನ್ಯಗಳು ಬೆಳಕಿಗೆ ಬಾರದೆ ಕತ್ತಲೆಯಲ್ಲಿ ಕಮರಿ ಹೋಗಬಾರದು ಎಂಬ ವಿಚಾರ ಸಮಾಜ ಸುಧಾರಕ ‘ಮನ್ಸೆರೆ ಗುರುವಿಗೆ’ (ಕೋರ್ಟಿ) ಇದ್ದಿರಲೇಬೇಕು. ಈ ಹಿನ್ನೆಲೆಯಲ್ಲಿ ಕೆಲವು ಕಾಲ್ಪನಿಕ ಘಟನೆಗಳನ್ನು ಪ್ರಸಕ್ತ ಕಾದಂಬರಿಯಲ್ಲಿ ತರಲಾಗಿದೆ. ಇದರ ನೈಜತೆಯನ್ನು ಪ್ರಶ್ನಿಸುತ್ತ ಕೋರ್ಟಿಯ ವ್ಯಕ್ತಿತ್ವಕ್ಕೆ ವಿರುದ್ಧವಾದುದು ಎಂದು ಓದುಗರು ಭಾವಿಸಬಾರದು. ಅವರ ವ್ಯಕ್ತಿತ್ವ ಅರಳುವುದೇ ಇಂತಹ ಘಟನೆಗಳಿಂದ.
“ಪ್ರಸಕ್ತ ಕಾದಂಬರಿಯನ್ನು ಸಾರ್ವತ್ರಿಕ ನೆಲೆಯಲ್ಲಿ ರಚಿಸಿರುವುದರಿಂದ, ಕೇವಲ ಕ್ರೈಸ್ತರಿಗೆ ಮಾತ್ರ ಬರೆದದ್ದು ಎಂದು ಕ್ರೈಸ್ತರು ತಿಳಿಯಕೂಡದು. ಬಹುಸಂಖ್ಯಾತ ಕ್ರೈಸ್ತೇತರ ಬಂಧುಗಳನ್ನು ಮನಸ್ಸಿನಲ್ಲಿರಿಸಿಕೊಂಡು ಬರೆದಿರುವುದರಿಂದ, ಅವರಿಗೆ ಅರ್ಥವಾಗಲಿ ಎಂದು ಕ್ರೈಸ್ತ ಪದಗಳಿಗೆ ಸಕಾರಾತ್ಮಕ ವಿವರಣೆಯನ್ನು ನೀಡುವ ಮೂಲಕ ಆ ವರ್ಗದ ಓದುಗರಿಗೆ ಹತ್ತಿರವಾಗುವಂತೆ ಶ್ರಮಿಸಲಾಗಿದೆ. ಕಾದಂಬರಿಯ ಓಟಕ್ಕೆ ಪಾದ್ರಿ ಒಬ್ಬರ ಜೀವನಚರಿತ್ರೆಯನ್ನು ಅಳವಡಿಸಿಕೊಂಡು ಬರೆಯುವುದು ಕಷ್ಟಸಾಧ್ಯ ಎಂದು ತಿಳಿದಿದ್ದರೂ ಅಂಥ ಒಂದು ಪ್ರಯತ್ನವನ್ನು ಇಲ್ಲಿ ಮೊದಲಬಾರಿಗೆ ಮಾಡಿದ್ದೇನೆ. ಈ ಬಗೆಯ ಕಾದಂಬರಿಗಳು ಕನ್ನಡದಲ್ಲೂ ಬಂದಿವೆ. ಇತರ ಭಾಷೆಗಳಲ್ಲೂ ಬಂದಿವೆ. ತ.ರಾ.ಸು. ಅವರ ಚಾರಿತ್ರಿಕ ಕಾದಂಬರಿಗಳು ನಮ್ಮ ಕಣ್ಣು ಮುಂದೆ ಇವೆ. ಆ ಕಾದಂಬರಿಗಳಲ್ಲೂ ಬಹಳಷ್ಟು ಅತಿರೇಕದ ವಿಚಾರಗಳಿವೆ. ಹಾಗಿದ್ದರೂ ಅವು ಕಥಾನಾಯಕನ ಚಾರಿತ್ರ್ಯವನ್ನಾಗಲಿ, ವ್ಯಕ್ತಿತ್ವವನ್ನಾಗಲಿ ಮುಕ್ಕುಗೊಳಿಸಿಲ್ಲ. ಹಾಗೆಯೆ ಪ್ರಸಕ್ತ ಕಾದಂಬರಿಯಲ್ಲಿ ದಲಿತರ ಅಪೋಸ್ತಲ ಫಾ. ಕೋರ್ಟಿಯನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದೇನೆ. ಅವರ ವ್ಯಕ್ತಿತ್ವವಿಕಸನಕ್ಕೆ ಬಳಸಿರುವ ಕೆಲವು ವಿಚಾರಗಳ ಸಾಧ್ಯಾಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ. ಉದಾಹರಣೆಗೆ ಫಾ. ಕೋರ್ಟಿ ಬ್ರಾಹ್ಮಣ ಸ್ನೇಹಿತನಿಂದ ಮಹಾಭಾರತದ ಗಂಗೆ, ಭೀಷ್ಮರ ಕತೆಯನ್ನು ಕೇಳುವುದು. ಮಹಾಭಾರತದ ಕತೆಯನ್ನು ಕೇಳುವುದು Pಚಿgಚಿಟಿ ಎಂದು ನಂಬಿದ್ದ ಕಾಲದಲ್ಲಿ ಕೋರ್ಟಿ ಹಾಗೆ ಕತೆ ಹೇಳಿಸಿ ಕೇಳಿದ್ದರೇ? – ಎಂದು ಕೆಲವು ಕರ್ಮಠ ಕ್ರೈಸ್ತರು ಪ್ರಶ್ನಿಸಬಹುದು. ಯಾಕೆ ಕೇಳಿರಬಾರದು? ಎಂಬುದು ನನ್ನ ಪ್ರಶ್ನೆ. ಕೋರ್ಟಿ ಹೇಳಿಕೇಳಿ ಇತಿಹಾಸದ ಪ್ರಾಧ್ಯಾಪಕ, ಅದರಲ್ಲೂ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆತ ರಾಮಾಯಣ, ಮಹಾಭಾರತಗಳ ಬಗ್ಗೆ ತಿಳಿದಿರಲೇಬೇಕು. ಕ್ರೈಸ್ತ ಪಾದ್ರಿ ಎಂಬ ಕಾರಣಕ್ಕೆ ಅದನ್ನು Pagan ಎಂದು ತಿಳಿದುಕೊಳ್ಳುವುದಾದರೆ – ಅದು ಮೂರ್ಖತನದ ಪರಮಾವಧಿ. ಇಂಡಿಯಾದ ಸಾಂಸ್ಕೃತಿಕ ಪ್ರಪಂಚವನ್ನು ತಿಳಿದುಕೊಳ್ಳುವುದು ವಿದೇಶೀ ಕ್ರೈಸ್ತ ಪಾದ್ರಿಗಳ ಧರ್ಮ. ಅಷ್ಟರಮಟ್ಟಿಗೆ ಉದಾರಿಯಾಗಿದ್ದ ಫಾ. ಕೋರ್ಟಿ ಎಂಬುದನ್ನು ತೋರಿಸಿಕೊಡಲು ಇಂತಹ ಪ್ರಸಂಗಗಳನ್ನು ಬೇಕೆಂದೇ ಕಾದಂಬರಿಗೆ ಎಳೆದು ತಂದಿದ್ದೇನೆ. ಇವು ಕೋರ್ಟಿಯ ವ್ಯಕ್ತಿ ವಿಕಸನಕ್ಕೆ ಪೂರಕವಾಗಿವೆಯೇ ಹೊರತು ಮಾರಕವಲ್ಲ.”
ಈ ಕಾದಂಬರಿಯ ಅಧ್ಯಾಯಗಳು: ಕುದುರೆ ಸಾಕಿದ ಭಟ್ಟರು, ಕುರುಸುಗುಡ್ಡದ ಮೇಲೆ ಮೂಡಿದ ಶಿಲುಬೆ, ಕೆಂಪಿ ನಾರಾವಿಗೆ ಬಂದದ್ದು, ಪಾದ್ರಿ ಮನೆಗೆ ಗುರುವನ ಪ್ರವೇಶ, ಅರೆಬೆತ್ತಲೆ ವಸ್ತçಸಂಹಿತೆ, ನಲ್ಕೆಯವರ ಆಟಿಕಳಂಜ, ಕೀಲುಕುದುರೆ ಒಂದು ಜನಪದ ಕಥೆ, ಸಿವ್ನಿ ಮೇಲೆ ನಡೆದ ಅತ್ಯಾಚಾರ, ಅತ್ಯಾಚಾರಿಗಳ ಹುಡುಕಾಟದಲ್ಲಿ, ಪಂಜುರ್ಲಿ ಭೂತದ ಭರವಸೆ, ಕಾಕತಾಳೀಯ ಘಟನೆ, ಎಲ್ಲರಿಗೂ ಎಲ್ಲವೂ ಆಗಿದ್ದ ಪಾದ್ರಿ, ದೇವರ ಮಕ್ಕಳು ಸರ್ವಸಮಾನರು, ಜೈನರು ಭಂಟರು ಒಂದಾದರು, ಫಾ. ಗವಿರಾಗಿಯ ಪ್ರವೇಶ, ಔದಾರ್ಯದ ಚಿಲುಮೆ ಫಾ. ಕೋರ್ಟಿ, ಯೇಸು ಶಿಷ್ಯರೂ ಗಂಗಾಪುತ್ರರೇ!, ಅಂಡಾಶಯದ ಊತ – ಅಜ್ಞಾತವಾಸ, ಕ್ಷಮಾಗುಣ ಸಂಪನ್ನ ಫಾ. ಕೋರ್ಟಿ, ಮನ್ಸೆರೆ ಗುರು ಪೋಯೆ, ತಾಯ್ನಾಡಿಗೆ ಹೋಗಿಬಂದ ಕೋರ್ಟಿ, ಎಡವಿದ ಚರ್ಚ್ ಚಟುವಟಿಕೆ, ಮನ್ಸೆರೆ ಗುರು ಭೂತದ ವೈರಿ ಅಸ್ತಂಗತ.
ಕಾದಂಬರಿ ನೀಡುವ ಕೆಲವು ಐತಿಹಾಸಿಕ ಮಾಹಿತಿಗಳು
ಈ ಕಾದಂಬರಿಯಲ್ಲಿ ಕರಾವಳಿಯ ರೋಮನ್ ಕೆಥೋಲಿಕ್ ಮಿಷನ್ಗಳ ಚರಿತ್ರೆ ಸೂಕ್ಷ್ಮವಾಗಿ ದಾಖಲಾಗಿದೆ: “……ಅಂದು ಕ್ರೈಸ್ತ ಮಿಷನರಿಗಳ ಚಟುವಟಿಕೆಯ ಕಾಲ. ಬ್ರಿಟಿಷರ ಆಳ್ವಿಕೆ. ಈಗಾಗಲೇ ಶತಮಾನಗಳ ಹಿಂದೆ ಪೋರ್ಚುಗೀಸರು ಗೋವಾವನ್ನು ವಶಪಡಿಸಿಕೊಂಡು ಅಲ್ಲಿ ಸ್ಥಳೀಯರನ್ನು ಕ್ರೈಸ್ತಧರ್ಮಕ್ಕೆ ಮತಾಂತರ ಮಾಡಿದ್ದರು. ಹಿಂದೂಗಳ ದೇವರುಗಳನ್ನು ನಾಶಪಡಿಸಿದ್ದರು. ಪ್ರತಿಷ್ಠಿತ ಬ್ರಾಹ್ಮಣ ಕುಟುಂಬಗಳನ್ನು ಹೆದರಿಸಿ, ಅವರಿಗೆ ಒಳ್ಳೆಯ ಕೆಲಸದ ಭರವಸೆ ನೀಡಿ ಪ್ರಚೋದಿಸಿ ಕ್ರೈಸ್ತರನ್ನಾಗಿ ಮಾಡಿದ್ದರು. ಕರಾವಳಿಯ ಮೀನುಗಾರರಿಗೆ ಯೇಸುಸಭೆಯ ಸ್ಥಾಪಕನಲ್ಲೊಬ್ಬನಾದ ಫ್ರಾನ್ಸಿಸ್ ಜೇವಿಯರ್ ಎಂಬ ಪಾದ್ರಿ ಕ್ರೈಸ್ತ ಮತವನ್ನು ಕುರಿತು ಉಪದೇಶಿಸಿ ಕ್ರೈಸ್ತಧರ್ಮಕ್ಕೆ ಸೇರಿಸಿದ್ದನು. ಆತ ಗೋವಾದ ಕ್ರೈಸ್ತಮತ ಪ್ರಚಾರಕರಲ್ಲೇ ಶ್ರೇಷ್ಠನೆನಿಸಿಕೊಂಡಿದ್ದನು. ಹೀಗಾಗಿ ಪೋರ್ಚುಗೀಸ್ ಆಡಳಿತ ಗೋವಾಕ್ಕೆ ಹೆಚ್ಚುಹೆಚ್ಚು ಯೇಸುಸಭೆಯ ಮಿಶನರಿಗಳನ್ನು ಬರಮಾಡಿಕೊಂಡಿತು. ಹೀಗೆ ಕ್ರೈಸ್ತ ಮತಪ್ರಚಾರಕ್ಕಾಗಿ ವಿದೇಶದಿಂದ ಬಂದ ಯೇಸುಸಭೆಯ ಮಿಶನರಿಗಳು ಗೋವಾದಲ್ಲಿ ತಮ್ಮದೇ ಆದ ಚರ್ಚನ್ನು, ಗುರುಮಠವನ್ನು ಸ್ಥಾಪಿಸಿದರು. ಅವರು ಗೋವಾದ ಗಡಿದಾಟಿ ಮಂಗಳೂರಿಗೂ ಕಾಲಿಟ್ಟರು. ಈಗಾಗಲೇ ಕೆನರಾ ಪ್ರಾಂತದಲ್ಲಿ ಪೋಪನ ಪ್ರತಿನಿಧಿಗಳು ತಮ್ಮಲ್ಲಿದ್ದ ಬೆರಳೆಣಿಕೆಯಷ್ಟು ಪಾದ್ರಿಗಳ ಸಹಾಯದಿಂದ ಕ್ರೈಸ್ತಧರ್ಮ ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದರು. ಅಂದು ಮಂಗಳೂರು ಧರ್ಮಪೀಠ ಕೇರಳದ ವೆರೊಪಲಿ ಪ್ರಾಂತಕ್ಕೆ ಒಳಪಟ್ಟು ಅಲ್ಲಿನ ಬಿಷಪರ ಅಧೀನದಲ್ಲಿತ್ತು. ಕಾರ್ಮಲೈಟ್ ಸಭೆಯವರು ಮಂಗಳೂರಿನ ಬೋಳಾರಿನಲ್ಲಿ ಇಗ್ರೇಜಾ ನೊಸ್ಸಾ ಸೆನ್ನೋರ ದೊ ರೊಸಾರಿಯೋ ದೆ ಮಂಗಳೂರೆ ಎಂಬ ಹೆಸರಿನಿಂದ ಪೋರ್ಚುಗೀಸರು ೧೫೬೮ರಲ್ಲಿ (೧೯೨೬ರಲ್ಲಿ ಎಂದು ಕಾದಂಬರಿಯಲ್ಲಿ ತಪ್ಪಾಗಿ ಮುದ್ರಿತವಾಗಿದೆ) ಕಟ್ಟಿದ ಚರ್ಚಿನಲ್ಲಿ ಉಳಿದುಕೊಂಡು ಮತಪ್ರಚಾರ ಮಾಡತೊಡಗಿದರು. ಕಾರ್ಮಲೈಟ್ ಸಭೆಯ ಸಭ್ಯನಾದ ಬಿಷಪ್ ಅಂತೋಣಿ ಮೈಖಲ್ ಮಂಗಳೂರು ಕ್ರೈಸ್ತಪೀಠದ ಬಿಷಪನಾಗಿ ಅಲ್ಲಿನ ಜನತೆಗೆ ನಿಃಸ್ವಾರ್ಥದಿಂದ ಸೇವೆ ಮಾಡಿದರೂ ಕುತಂತ್ರಿಗಳ ಹಾಗೂ ವಿಶ್ವಾಸಘಾತಕರ ದೆಸೆಯಿಂದಾಗಿ ಪೀಠತ್ಯಾಗ ಮಾಡಿದನು. ಆತನ ನಂತರ ಪೀಠಾಧಿಪತಿ ಆದ ಬಿಷಪ್ ಮೇರಿ ಇಫ್ರಾಮ್ನ ಆಳ್ವಿಕೆಯೂ ಫಲಪ್ರದವಾಗದೆ ಕೊನೆಗೆ ಯೇಸು ಸಭೆಯವರು ಮಂಗಳೂರಿನ ಕ್ರೈಸ್ತಪೀಠದ ಬಿಷಪರುಗಳಾದರು. ೧೮೫೫-೯೫ರ ಕಾಲದಲ್ಲಿ ಮಂಗಳೂರಿನ ಧರ್ಮಪೀಠ ಉಚ್ಛಾçಯ ಸ್ಥಿತಿಗೇರಿತ್ತು. ಇಟಲಿಯ ಜೆಸ್ವಿಟರು ಎಂದರೆ ಯೇಸು ಸಭೆಯವರು ತಂಡೋಪತಂಡವಾಗಿ ಮಂಗಳೂರಿಗೆ ಬಂದರು. ಸಂತ ಅಲೋಶಿಯಸ್ ಕಾಲೇಜನ್ನು ಸ್ಥಾಪಿಸುವ ಮೂಲಕ ಕರಾವಳಿಯಲ್ಲಿ ತಮ್ಮ ಮತಪ್ರಚಾರದ ಕಾರ್ಯವನ್ನು ವಿಸ್ತರಿಸಿದರು. ಜೆಪ್ಪು ಎಂಬಲ್ಲಿ ಸ್ಥಳೀಯ ಗುರು ತರಬೇತಿ ಕೇಂದ್ರ – ಸೈಂಟ್ ಜೋಸೆಫ್ ಸೆಮಿನರಿಯನ್ನು ಸ್ಥಾಪಿಸಿದರು. ಕೆನರದಾದ್ಯಂತ ಅನೇಕ ಮಿಷನ್ ಸ್ಟೇಷನ್ಗಳನ್ನು ತೆರೆದು ಬಡಬಗ್ಗರ, ದೀನದಲಿತರ, ತುಳಿಯಲ್ಪಟ್ಟವರ, ಅಸ್ಪöÈಶ್ಯರ ಸೇವೆ ಮಾಡುವ ಮೂಲಕ ಅವರನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸತೊಡಗಿದರು. ಅಂತಹ ಮಿಷನ್ಗಳಲ್ಲಿ ನಾರಾವಿ ಮಿಷನ್ ಕೂಡ ಒಂದು. ಈ ನಾರಾವಿ ಮಿಷನ್ನ ಮುಖ್ಯ ಕ್ಷೇತ್ರಪಾಲಕನೆಂದರೆ ಯೇಸು ಸಭೆಗೆ ಸೇರಿದ ಫಾದರ್ ಫೌಸ್ಟಿನ್ ಕೋರ್ಟಿ.”
ಫಾ. ಕೋರ್ಟಿ ಪ್ರಾರಂಭದಲ್ಲಿ ಐದು ವರ್ಷಗಳ ಕಾಲ ಮುಂದಿನ ಪ್ಯಾರಾದಲ್ಲಿ ಉಲ್ಲೇಖಿಸಿರುವ ಇಬ್ಬರು ಮಿಶನರಿಗಳಂತೆ ಹಿಂದೂ ಸಂನ್ಯಾಸಿಗಳಂತೆ ಕಾವಿಬಟ್ಟೆ ಧರಿಸುತ್ತಿದ್ದರಂತೆ. ನಂತರ ಬಿಳಿಯ ನಿಲುವಂಗಿಯನ್ನು ಧರಿಸಿಕೊಂಡು ವಿದೇಶೀ ಗುರುವಿನಂತೆಯೇ ವೇಷಧರಿಸಲಾರಂಭಿಸಿದ ಮೇಲೆ ಅವರ ಗೌರವ ಇಮ್ಮಡಿಯಾಯಿತಂತೆ. (ಪುಟ ೧೧೩).
“ನಾರಾವಿಯ…… ಊರಿನಲ್ಲಿ ೧೮೯೦ರ ವೇಳೆಗೆ ಕ್ರೈಸ್ತ ಮಿಶನರಿಗಳು ಮತಪ್ರಚಾರ ಕಾರ್ಯ ಆರಂಭಿಸಿದ್ದರು. ಮೊದಮೊದಲು ಕ್ರೈಸ್ತಮಿಶನರಿಗಳು ನಾರಾವಿಯ ಬ್ರಾಹ್ಮಣರನ್ನು, ಜೈನರನ್ನು, ಭಂಟರನ್ನು ಗುರಿಯಾಗಿಸಿಕೊಂಡು ಶುಭಸಂದೇಶ ಪ್ರಚಾರಕ್ಕೆ ತೊಡಗಿದರು. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಈಗಾಗಲೇ ತಮಿಳುನಾಡಿನ ಮಧುರೆಯಲ್ಲಿ ಜೆಸ್ವಿಟ್ ಸಭೆಯವರು ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಹರಸಾಹಸ ಮಾಡಿ ಸ್ವಲ್ಪಮಟ್ಟಿಗೆ ಯಶ ಕಂಡಿದ್ದರು. ವಿಶೇಷವಾಗಿ ಫಾದರ್ ರಾಬರ್ಟ್ ದಿ ನೊಬಿಲಿ ಎಂಬವರು ಕಾವಿಧರಿಸಿ ವಿಭೂತಿ, ರುದ್ರಾಕ್ಷಿಗಳನ್ನು ಧರಿಸಿಕೊಂಡು ಹಿಂದೂ ಸಂನ್ಯಾಸಿಗಳಂತೆ ಇರತೊಡಗಿದರು. ಫಾ. ಬೆಸ್ಕಿ ವೀರಮಾಮುನಿವರ್ ಎಂಬ ಹೆಸರಿನಿಂದ ಆಶ್ರಮ ಜೀವನ ನಡೆಸುತ್ತ ಬ್ರಾಹ್ಮಣರ ಜೊತೆಗೆ ಸಂವಾದ-ಸಂಭಾಷಣೆಯಲ್ಲಿ ತೊಡಗಿ-ಅವರ ಧರ್ಮವಿಚಾರಗಳನ್ನು ಚರ್ಚಿಸಿ ಯೇಸುವಿನ ಶುಭಸಂದೇಶದ ಜೊತೆಗೆ ಹೋಲಿಸಿ ಕ್ರೈಸ್ತ ವೇದವೇ ಶ್ರೇಷ್ಠ ಎಂಬುದನ್ನು ಸಾಧಿಸಿ ತೋರಿಸಿದರು. ಅಲ್ಲದೆ ಮಾಂಸಾಹಾರವನ್ನು ತ್ಯಜಿಸಿ ಹಿಂದೂ ಮಠವಾಸಿ ಸಂನ್ಯಾಸಿಗಳಂತೆ ಜೀವನ ನಡೆಸಿದರು. ಪಂಡಿತಮಾನ್ಯರಿಂದ ತಮಿಳು ಕಲಿತು ತಮಿಳುಭಾಷಾ ಪಾಂಡಿತ್ಯವನ್ನು ಮೆರೆದರು. ಅಷ್ಟೇ ಅಲ್ಲ ‘ತೇಂಬವಣಿ’ ಎಂಬ ಮಹಾಕಾವ್ಯವನ್ನು ತಮಿಳಿನಲ್ಲಿ ಬರೆದರು. ಇದರ ಕಥಾನಾಯಕ ಯೇಸುವಿನ ಸಾಕುತಂದೆ ಜೋಸೆಫ್, ಇಡೀ ಕಾವ್ಯ ಯೇಸುಕ್ರಿಸ್ತನ ಜೀವನವನ್ನೊಳಗೊಂಡು, ಕ್ರೈಸ್ತ ತತ್ತ್ವ ವಿಚಾರವನ್ನು ಸವಿಸ್ತಾರವಾಗಿ ಬಿತ್ತರಿಸುತ್ತದೆ. ಫಾ. ರಾಬರ್ಟ್ ದಿ ನೊಬಿಲಿಯ ಆಶ್ರಮ ಜೀವನಕ್ರಮದಿಂದ ಪ್ರೇರಿತರಾಗಿ ಬ್ರಾಹ್ಮಣರು ಹಾಗೂ ಮೇಲುವರ್ಗದ ಜನರನ್ನು ಕ್ರೈಸ್ತರನ್ನಾಗಿಸಲು ೧೭ನೇ ಶತಮಾನದಲ್ಲಿ ಮಂಗಳೂರಿನ ಜೆಸ್ವಿಟರು ಮುಂದಾದರು. ಅವರಲ್ಲಿ ಪ್ರಮುಖನೆಂದರೆ ಫಾ. ಲಿಯೊನಾರ್ಡೊ ಚಿನ್ನಾಮಿ. ಈತ ಕಾವಿಯುಟ್ಟು ವಿಭೂತಿ ರುದ್ರಾಕ್ಷಿ ಧರಿಸಿಕೊಂಡು, ಕಮಂಡಲ ಹಿಡಿದುಕೊಂಡು ಅಪ್ಪಟ ಶಾಕಾಹಾರಿಯಾಗಿ ಶ್ರೀರಂಗಪಟ್ಟಣದಲ್ಲಿದ್ದುಕೊAಡು ‘ಮೈಸೂರು ಮಿಶನ್’ ಸ್ಥಾಪಿಸಿದನು (೧೬೪೮). ಫಾ. ಚಿನ್ನಾಮಿ ಮೊದಲು ಕೆನರಾ ಮಿಶನ್ನಲ್ಲಿ ಕೆಲಸ ಮಾಡಿ ಫಲಪ್ರದವಾಗದೆ ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ನಡೆದುಕೊಂಡೇ ಬಂದು, ಮೈಸೂರು ಮಿಶನ್ ಸ್ಥಾಪಿಸಿದನು. ಅದು ಸುಮಾರು ೧೫೦ ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಅನಂತರ ಫ್ರೆಂಚ್ ಫಾರಿನ್ ಮಿಶನ್ ಸಂಸ್ಥೆಗೆ ಅದನ್ನು ಬಿಟ್ಟುಕೊಡಲಾಯಿತು.
“ಮಿಶನರಿ ಕಾರ್ಯದಲ್ಲಿ ಸುಮಾರು ಇನ್ನೂರು ವರ್ಷಗಳ ಅನುಭವ ಇದ್ದ ಜೆಸ್ವಿಟರು ಮಂಗಳೂರಿನ ವ್ಯಾಪ್ತಿಗೆ ಬರುತ್ತಿದ್ದ ನಾರಾವಿ ಮತ್ತು ಇತರ ಗ್ರಾಮಗಳಲ್ಲಿ ಶುಭಸಂದೇಶವನ್ನು ಸಾರಲು ಆರಂಭಿಸಿದರು. ನಾರಾವಿಯ ಪ್ರಾಕೃತಿಕ ಸೌಂದರ್ಯ ಮತ್ತು ಅಲ್ಲಿನ ಜಮೀನುದಾರರ ಔದಾರ್ಯ, ಬ್ರಾಹ್ಮಣ ಜೈನರ ಆತಿಥ್ಯಗಳಿಗೆ ಮನಸೋತು ನಾರಾವಿಗೆ ಬಂದ ಜೆಸ್ವಿಟ್ ಮಿಶನರಿಗಳು ಆರಂಭದಲ್ಲಿ ಯಶ ಕಂಡರೂ ಆಮೇಲೆ ತಮ್ಮ ಗುರಿ ತಪ್ಪುತ್ತಿರುವುದನ್ನು ಕಂಡುಕೊAಡರು. ನಾರಾವಿಯಲ್ಲಿ ಮಿಶನ್ ಸ್ಟೇಷನ್ ಸ್ಥಾಪಿಸುವ ಮೊದಲು ನಾರಾವಿಗೆ ಆಗಾಗ ಬಂದು ಹೋಗತೊಡಗಿದರು. ಕ್ರಮೇಣ ನಾರಾವಿಯಲ್ಲಿ ಈಗಿರುವ ಚರ್ಚಿನ ಜಾಗದಲ್ಲಿ ಒಂದು ಗುಡಿಸಲನ್ನು ಹಾಕಿಕೊಂಡು ವಾರದಲ್ಲಿ ಎರಡು-ಮೂರು ದಿವಸಗಳು ಅಲ್ಲಿಯೇ ತಂಗಲು ಆರಂಭಿಸಿದರು. ಜೈನರ ಮನೆಗಳಿಗೆ ಹೋಗಿ ಮಾತಾಡಿಸಿಕೊಂಡು ಬರುತ್ತಿದ್ದರು. ಭಂಟರ ಮನೆಯ ಅಡಕೆ ಬಿಸಿಲಿಗೆ ಹರವಿದ ಅಂಗಳದಲ್ಲಿ ಅವರ ಸಮಸಮಕ್ಕೆ ಕುಳಿತು ಧರ್ಮದ ವಿಚಾರ ಮಾತಾಡುತ್ತಿದ್ದರು. ಬ್ರಾಹ್ಮಣರ ಹಜಾರಗಳಲ್ಲಿ ಕುಳಿತು ಅವರು ನಡೆಸುತ್ತಿದ್ದ ಪೂಜಾ ಕೈಂಕರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಚರ್ಚಿಸುತ್ತಿದ್ದರು. ಕೆಲವು ಬಾರಿ ಅಲ್ಲಿನ ಜನ ನಂಬಿಕೊಂಡು ಬಂದಿದ್ದ ದೇವರು, ಭೂತಗಳ ಬಗ್ಗೆ ತೀಕ್ಷ್ಣವಾಗಿ ಖಂಡಿಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಇದೇ ಕೆಲಸವನ್ನು ದಿನಗಟ್ಟಲೆ. ವಾರಗಟ್ಟಲೆ, ತಿಂಗಳುಗಟ್ಟಲೆ ತಾಳ್ಮೆಯಿಂದ ಮಾಡುತ್ತಿದ್ದರು. ಜೆಸ್ವಿಟರದು ನಿಧಾನವಾದ ನಡೆ. ‘ಮನ ಗೆದ್ದು ಮನೆ ಗೆಲ್ಲು’ ಎಂಬುದು ಇವರ ತತ್ತ್ವ, ಆದರೆ ಪ್ರೊಟೆಸ್ಟಂಟ್ ಮಿಶನರಿಗಳದು ಹಾಗಲ್ಲ. ಅವರದೇನಿದ್ದರೂ ನೇರವಾದ ನಡೆ.
“ಸಂತೆಗಳಲ್ಲಿ ಜಾತ್ರೆಗಳಲ್ಲಿ ಅವರು ನೇರವಾಗಿ ಹಿಂದೂ ದೇವರುಗಳ ಬಗ್ಗೆ ಅವಹೇಳನವಾಗಿ ಖಂಡಿಸಿ ಮಾತಾಡುತ್ತಿದ್ದರು. ನಿಮ್ಮ ಕೃಷ್ಣ ಕಳ್ಳಕೃಷ್ಣ ಹದಿನಾರು ಸಾವಿರ ಹೆಂಡತಿಯರ ವಿಟಗಾರ, ನಮ್ಮ ಕ್ರಿಸ್ತ ಸಾಧು, ಸಜ್ಜನ, ಕುರಿಮರಿಯ ಸ್ವಭಾವದವನು – ಎಂದು ಧೈರ್ಯವಾಗಿ ಹೇಳುತ್ತಿದ್ದರು. ಬ್ರಿಟಿಷ್ ಸರ್ಕಾರ ಅವರ ನೆರವಿಗೆ ಇರುತ್ತಿತ್ತು. ಬ್ರಿಟಿಷರು ಪ್ರೊಟೆಸ್ಟಂಟ್ ಕ್ರೈಸ್ತರಾದ್ದರಿಂದ ಅವರ ಮಿಶನರಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅಂತಹ ಕಾಲಘಟ್ಟದಲ್ಲಿ ಮತಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಜೆಸ್ವಿಟರು ಮಾತ್ರ ಅಳೆದು ತೂಗಿ ಹಿಂದೂಗಳ ವಿಗ್ರಹಾರಾಧನೆಯನ್ನು ಖಂಡಿಸುತ್ತಿದ್ದರು. ಪ್ರೊಟೆಸ್ಟಂಟರಿಗೆ ಕೇವಲ ದಮನೀಯ ದಲಿತರು ಗುರಿಯಾಗಿದ್ದರಿಂದ ಮತಾಂತರಕ್ಕೆ ಕ್ಷಿಪ್ರಗತಿಯನ್ನು ಅನುಸರಿಸುತ್ತಿದ್ದರು. ಹೊಲೆಯರು, ಕೊರಗರು ಆರಾಧಿಸುತ್ತಿದ್ದ ದೇವರು, ದೆವ್ವಗಳು, ಭೂತಗಳನ್ನು ನೇರವಾಗಿ ಖಂಡಿಸಿ ಅವರ ಕೀಳರಿಮೆ, ಅಸ್ಪೃಶ್ಯತೆಗಳನ್ನು ಮುಂದುಮಾಡಿ ಆ ಸಮಾಜದ ಬಹುತೇಕ ಜನರ ಮನಸ್ಸುಗಳನ್ನು ಸೂರೆಗೊಂಡಿದ್ದರು. ಜಾತಿ ಸಂಕರದ ಸಂಕೋಲೆಯ ಬಂಧನದಿಂದ ಬಿಡುಗಡೆಯಾದರೆ ಸಾಕೆಂಬ ಹೇರಾಸೆಯಿಂದ ಪ್ರಜ್ಞಾವಂತ ದಲಿತರು ಕ್ರೈಸ್ತಧರ್ಮದ ಕಡೆಗೆ ವಾಲುತ್ತಿದ್ದರು. ಒಮ್ಮೆ ಮೇಲುಜಾತಿಯವರನ್ನು ಕ್ರೈಸ್ತ ಧರ್ಮದ ತೆಕ್ಕೆಗೆ ತಂದರೆ, ದಲಿತರು, ಹಿಂದುಳಿದವರು, ತುಳಿಯಲ್ಪಟ್ಟವರು ತಾವೇ ಕ್ರೈಸ್ತರಾಗಲು ಮುಂದಾಗುತ್ತಾರೆಂಬ ನಂಬಿಕೆಯಿಂದ ಕೆಥೋಲಿಕ್ ಮಿಶನರಿಗಳು ಮೇಲುಜಾತಿಯವರನ್ನು ಮತಾಂತರಿಸಲು ಮುಂದಾದರು. ಆದರೆ ಅವರ ನಂಬಿಕೆ ಹುಸಿಯಾಯಿತು. ಕ್ರಮೇಣ ತಮ್ಮ ನಿಲವನ್ನು ಬದಲಾಯಿಸಿಕೊಳ್ಳಬೇಕಾಗಿ ಬಂದಿತು.
“ಕೆನರಾದ ಕ್ರೈಸ್ತರ ಒತ್ತಾಯದ ಮೇರೆಗೆ ಮಂಗಳೂರು ಡಯೋಸಿಸ್ನ ಆಡಳಿತವನ್ನು ಕಾರ್ಮಲೈಟ್ ಬಿಷಪರಿಂದ ಮುಕ್ತಗೊಳಿಸಿ ಜೆಸ್ವಿಟ್ ಸಂಘದವರಿಗೆ ರೋಮಿನ ಪೋಪ್ ಪೀಠ ವರ್ಗಾಯಿಸಿತು. ಈಗಾಗಲೇ ಮಂಗಳೂರು ಪೀಠದ ವಿಕಾರ್ ಅಪೋಸ್ತಲ್ ಆಗಿ ಆಡಳಿತ ನೋಡಿಕೊಳ್ಳುತ್ತಿದ್ದ ಇಟಲಿ ಮೂಲದ ಜೆಸ್ವಿಟ್ ನಿಕೊಲಸ್ ಮರಿಯಾ ಪಗಾನಿ ಅವರನ್ನು ೨೫-೧೦-೧೮೮೫ರಂದು ಬಿಷಪ್ ಪಟ್ಟ ನೀಡಿ ಡಯೋಸಿಸ್ನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಡಲಾಯಿತು. ಇವರ ಆಳ್ವಿಕೆಯ ನಂತರ ಮತ್ತೊಬ್ಬ ಇಟಲಿ ಮೂಲದ ಜೆಸ್ವಿಟ್ ಅಬುಂದಿಯಸ್ ಕವದೀನಿ ೧೮೯೦ರಲ್ಲಿ ಮಂಗಳೂರು ಡಯೋಸಿಸ್ನ ಎರಡನೆಯ ಜೆಸ್ವಿಟ್ ಬಿಷಪರಾದರು. ಇವರು ೧೪ ವರ್ಷಗಳ ಕಾಲ ಸೇವೆ ಮಾಡಿದರು. ಯಾರೋ ತಿಳಿಗೇಡಿಗಳು ಆಹಾರದಲ್ಲಿ ವಿಷ ಬೆರೆಸಿ ಇವರನ್ನು ಕೊಂದರು.” (ಪುಟ ೧೨೯)
ಇಲ್ಲಿ ಒಂದು ಟಿಪ್ಪಣಿ: ಮಂಗಳೂರು ಡಯೊಸಿಸಿನ ಕಾರ್ಮೆಲೈಟ್ ಬಿಷಪರು ಮೂವರು ಎಂದು ತಲ್ವಾಡಿಯವರು ಹೇಳುತ್ತಾರೆ. ಅವರು – ಬಿಷಪ್ ಬೆರ್ನಾರ್ಡಿನ್, ಬಿಷಪ್ ಮೈಖೇಲ್ ಅಂತೋಣಿ ಮತ್ತು ಬಿಷಪ್ ಮೇರಿ ಇಫ್ರಾಮ್ (ಪುಟ ೧೧೩). ಗೂಗಲ್ನಲ್ಲಿ ೧೭ನೆಯ ಶತಮಾನದ ಬಿಷಪ್ ಥಾಮಸ್ ಡಿಕಾಸ್ಟ್ರೋ (೧೬೭೪-೧೬೮೪) ಮೊದಲನೆಯ ಬಿಷಪ್ ಎಂದು ಗುರುತಿಸಲಾಗಿದೆ. ನಡುವಿನ ಖಾಲಿ ಅವಧಿಯ ವ್ಯವಸ್ಥೆ ಏನು ಎಂದು ತಿಳಿಯುವುದಿಲ್ಲ. ತಲ್ವಾಡಿಯವರು ಈ ಕುರಿತು ಅಧ್ಯಯನ ಮಾಡಿದವರಾದ ಕಾರಣ ಅವರ ಮಾಹಿತಿಗಳನ್ನು ಒಪ್ಪಿಕೊಳ್ಳಬಹುದು ಅನಿಸುತ್ತದೆ.
ಹಾಗೆಯೇ ತಲ್ವಾಡಿಯವರು ಜೆಸ್ವಿಟ್ ಬಿಷಪರ ಪೈಕಿ ಪಗಾನಿಯವರು (೧೮೮೫-೧೮೯೫) ಮೊದಲಿಗರು ಎನ್ನುತ್ತಾರೆ. ಗೂಗಲ್ನಲ್ಲಿ ಕವದೀನಿಯವರಿಂದ ಮಂಗಳೂರು ಬಿಷಪರ ಪಟ್ಟಿ ಪ್ರಾರಂಭವಾಗುತ್ತದೆ; ಪಗಾನಿಯವರನ್ನು ಏಕೋ ಬಿಟ್ಟಿದ್ದಾರೆ. ಕವದೀನಿಯವರ ಕಾಲಾವಧಿ ೧೮೯೫-೧೯೧೦ ಎಂದಿದೆ. ತಲ್ವಾಡಿಯವರ ಸಾಹಿತ್ಯ ಕೃತಿಯು ಗೂಗಲ್ನಲ್ಲಿ ದೊರಕದ ಅಂಶಗಳನ್ನು ಕೊಡುವುದಕ್ಕೆ ಇದೊಂದು ಉದಾಹರಣೆಯಾಗಿದೆ. ನವಚಾರಿತ್ರಿಕ ಸಾಹಿತ್ಯ ಕೃತಿಗಳನ್ನು ಪರಿಶೀಲಿಸುವಾಗ ಇತಿಹಾಸದಲ್ಲಿ ದಾಖಲಾಗದ ಸಂಗತಿಗಳು ಸಾಹಿತ್ಯ ಕೃತಿಗಳಲ್ಲಿ ದೊರಕಬಹುದು ಎನ್ನುವ ಎಚ್ಚರಿಕೆಯಿಂದಲೂ ಪರಿಶೀಲಿಸುವುದು ಆವಶ್ಯಕ ಎನ್ನುವುದಕ್ಕಾಗಿ ಈ ಉದಾಹರಣೆಯನ್ನು ಕೊಡಲಾಗಿದೆ.
ವಿದೇಶೀ ಜೆಸ್ವಿಟರ ಕೊನೆಯ ಬಿಷಪ್ ಪೆರಿನಿಯವರು. ಇವರ ಬಗ್ಗೆ ಕಾದಂಬರಿ ಹೀಗೆ ಹೇಳುತ್ತದೆ: “ಬಿಷಪ್ ಪೆರಿನಿ ಇಟಲಿಯ ಮೊಡೆನೀಸ್ ಅಪೆನ್ನುನ್ಸ್ನ ಒಂದು ಮರೆತುಹೋದ ಕುಗ್ರಾಮ – ಬ್ರಾಂಡೋಲಾದಲ್ಲಿ ಜನಿಸಿದರು (೧೨-೧-೧೮೬೭). ಮಂಗಳೂರಿಗೆ ೨೨-೧೨-೧೮೯೦ರಂದು ಬಂದು ತಮ್ಮ ರೀಜೆನ್ಸಿಯ ಸಮಯದಲ್ಲಿ ಕಲಿಕೆಯನ್ನು ಮುಂದುವರಿಸಿದರು. ೧೮೯೪ರಲ್ಲಿ ದೈವಶಾಸ್ತç ಅಧ್ಯಯನಕ್ಕಾಗಿ ಇಟಲಿಗೆ ಹೋದರು….. ಮತ್ತೆ ಮಂಗಳೂರಿಗೆ ೧೩-೧೦-೧೮೯೯ರಂದು ಬಂದು ತಮ್ಮ ಅಂತಿಮ ಪ್ರತಿಜ್ಞೆಯನ್ನು ೨-೨-೧೯೦೧ರಂದು ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸ್ವೀಕರಿಸಿದರು. ೧-೧೨-೧೯೦೪ರಿಂದ ಅವರು ಅಲ್ಲಿನ ಮಿನಿಸ್ಟರ್, ಪ್ರೊಫೆಸರ್ ಮತ್ತು ರೆಕ್ಟರ್ ಆಗಿ ಕಾರ್ಯನಿರ್ವಹಿಸಿದರು….. ೧೭-೮-೧೯೧೦ರಂದು ಮಂಗಳೂರಿನ ಬಿಷಪ್ ಆಗಿ ಆಯ್ಕೆಯಾದರು. ೪-೧೨-೧೯೧೦ರಂದು ಮಂಗಳೂರಿನ ಏಳನೆಯ ಬಿಷಪರಾಗಿ ಅಭಿಷಿಕ್ತಗೊಂಡರು. ಇವರು ೧೯-೧೦-೧೯೨೩ರವರೆಗೆ ಎಂದರೆ ೧೩ ವರ್ಷಗಳ ಕಾಲ ಬಿಷಪರಾಗಿದ್ದರು. ನಂತರ ಇವರೇ ನೇತೃತ್ವ ವಹಿಸಿ ಮಂಗಳೂರು ಧರ್ಮಪೀಠವನ್ನು ಸ್ಥಳೀಯ ಡಯೋಸಿಸಿಯನ್ ಬಿಷಪರ ಆಳ್ವಿಕೆಗೆ ವಹಿಸಿಕೊಟ್ಟರು.
“೧೮೮೫ರಿಂದ ೧೯೨೨ರವರೆಗೆ ಸರಿಸುಮಾರು ೪೦ ವರ್ಷಗಳ ಕಾಲ ಜೆಸ್ವಿಟರು ಮಂಗಳೂರು ಧರ್ಮಪೀಠದಲ್ಲಿದ್ದುಕೊಂಡು ಆಡಳಿತ ನಡೆಸಿದರು. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರವನ್ನು ವಿಸ್ತರಿಸಿದರು. ಕೆನರಾ ಪ್ರಾಂತದ ಬಹುತೇಕ ಊರುಗಳಲ್ಲಿ ಮಿಶನ್ ಸ್ಥಾಪಿಸಿ ಕ್ರಿಸ್ತನ ಶುಭಸಂದೇಶ ಸಾರಲು ನೆರವಾದರು. ಬಿಷಪ್ ಪೂಜ್ಯ ಅಬುಂದಿಯಸ್ ಕವದೀನಿ ಅವರ ಕಾಲದಲ್ಲಿ ನಾರಾವಿ ಮಿಶನ್ ಸ್ಥಾಪನೆಯಾಗಿತ್ತು (೧೯೦೪). ೧೯೦೫ರಿಂದ ಪೂಜ್ಯ ಫಾ. ಫೌಸ್ಟಿನ್ ಕೋರ್ಟಿ ನಾರಾವಿಯಲ್ಲಿ ಕ್ರೈಸ್ತಧರ್ಮ ಬೋಧನೆಗೆ ತೊಡಗಿದರು.
“…. ಜೆಸ್ವಿಟ್ ಬಿಷಪರಾಗಿದ್ದ ಕೋಮಲ ಹೃದಯದ ಪೌಲ್ ಪೆರಿನಿ, ಮಂಗಳೂರು ಡಯಾಸಿಸನ್ನು ಸ್ಥಳೀಯ ಬಿಷಪರಿಗೆ ಬಿಟ್ಟುಕೊಟ್ಟಿದ್ದರು (೧೯೨೮). ಮಂಗಳೂರು ಧರ್ಮಕ್ಷೇತ್ರ ಆರಂಭವಾದ ದಿನದಿಂದ ಮೂವರು ಕಾರ್ಮಲೈಟ್ ವಿಷಪರು, ಮೂವರು ಜೆಸ್ವಿಟ್ ಬಿಷಪರು ಆ ಪ್ರಾಂತ್ಯವನ್ನು ಮುನ್ನಡೆಸಿದ್ದರು. ಕಾರ್ಮಲೈಟ್ ಮತ್ತು ಜೆಸ್ವಿಟರು ಧಾರ್ಮಿಕ ಸಭೆಯವರಾಗಿದ್ದರು. ಸ್ಥಳೀಯ ಡಯೊಸೀಸ್ ಗುರುಗಳು ನಾವು ಮಂಗಳೂರು ಪ್ರಾಂತವನ್ನು ಮುನ್ನಡೆಸಲು ಸಮರ್ಥರಿದ್ದೇವೆ. ನಮಗೆ ಡಯೋಸಿಸನ್ನು ಕೊಡಿ ಎಂದು ಪೋಪ್ಗೆ ಮನವಿ ಮಾಡುತ್ತಲೇ ಇದ್ದರು. ಬಿಷಪ್ ಪೆರಿನಿಯ ಅಭಿಪ್ರಾಯವನ್ನು ವ್ಯಾಟಿಕನ್ ಕೇಳಿತು. ಅದಕ್ಕೆ ಬಿಷಪ್ “ನಮ್ಮ ಸೆಮಿನರಿ ಅಧ್ಯಯನ ಸ್ಥಳೀಯರು ಬಿಷಪರಾಗುವಷ್ಟು ರೀತಿಯಲ್ಲಿ ಬೆಳೆಸಿದೆ” ಎಂದು ಉತ್ತರಿಸಿ, ತಾವೇ ಸ್ಥಳೀಯರಾಗಿದ್ದ ಫಾದರ್ ವಲೇರಿಯನ್ ಜೆ. ಡಿಸೋಜ ಅವರನ್ನು ಬಿಷಪರನ್ನಾಗಿ ಮಾಡಲು ಸೂಚಿಸಿದರು. ಅದರಂತೆ ೧೫-೪-೧೯೨೮ರಲ್ಲಿ ವಂದಿತ ವಲೇರಿಯನ್ ಮೊದಲ ಸ್ಥಳೀಯ ಡಯೋಸಿಸಿಯನ್ ಬಿಷಪರಾದರು.” (ಪುಟ ೧೩೦)
ಈ ಕಾದಂಬರಿಯು ಚರಿತ್ರೆಯನ್ನು ಕಾದಂಬರಿಯಾಗಿ ರಚಿಸುವ ವಿದ್ಯಮಾನವೇ ಪ್ರಧಾನವಾಗಿರುವ ಈ ನವಚಾರಿತ್ರಿಕ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿಯೇ ಪ್ರಕಟವಾಗಿರುವುದು ಆಶ್ಚರ್ಯಕರವಲ್ಲ. ಅದು ಈ ಚಳವಳಿಯ ಭಾಗವಾಗಿಯೇ ಬಂದಿದೆ.
ಒಂದು ಸಾಹಿತ್ಯ ಕೃತಿಯಾಗಿ ಈ ಕೃತಿಯನ್ನು ಪರಿಶೀಲಿಸಿದರೆ ಫಾ. ಕೋರ್ಟಿಯನ್ನು ಮುಗಿಸಿಬಿಡಲು ಭೂತಗಳನ್ನು ಎಬ್ಬಿಸುವ ಕಾರ್ಯಕ್ರಮವು ಅದ್ಭುತರಮ್ಯ ವಿದ್ಯಮಾನವಾಗಿ ಕಾದಂಬರಿಯನ್ನು ಹೆಚ್ಚು ರಸವತ್ತಾಗಿಸುತ್ತದೆ. ಆಗ ಭೂತಕೋಲವು ಹೀಗೆಯೇ ನಡೆಯುವುದು ಎನ್ನುವುದಕ್ಕೆ ಅಧ್ಯಯನಾಧಾರಿತ ಮಾಹಿತಿಗಳನ್ನು ಇಟ್ಟುಕೊಂಡು ತೌಲನಿಕವಾಗಿ ಪರಿಶೀಲಿಸುವುದು ಔಚಿತ್ಯವಲ್ಲ ಅನಿಸುತ್ತದೆ. ಜತೆಗೆ ಕಾದಂಬರಿಯ ದೋಷಗಳು ಎದ್ದು ಕಾಣಿಸುತ್ತವೆ. ಕಾದಂಬರಿಯಲ್ಲಿ ಸ್ಥಳೀಯರ ಪ್ರತಿನಿಧಿಯಾಗಿ ಕೋರ್ಟಿಯವರನ್ನು ವಿರೋಧಿಸಲು ಅಥವಾ ಬೆಂಬಲಿಸಲು ಒಂದು ಸಮರ್ಥವಾದ ಪಾತ್ರ ಇರಬೇಕಿತ್ತು; ಅಥವಾ ಎರಡು ಕಾರ್ಯಗಳನ್ನು ನಿರ್ವಹಿಸಲು ಪ್ರತ್ಯೇಕವಾದ ಪಾತ್ರಗಳು ಇರಬೇಕಿತ್ತು; ಅವರ ಬದುಕಿನ ಕ್ರಮವನ್ನು ಘಟನೆಗಳ ವರದಿಯ ಹಾಗಲ್ಲದೆ ನಾಟಕೀಯವಾಗಿ ಕಟ್ಟಿಕೊಡಬೇಕಿತ್ತು ಎಂಬ ಮಾತನ್ನು ಹೇಳಬಹುದು.
ಹೆಚ್ಚಿನವರಿಗೆ ಅಪರಿಚಿತವಾದ, ಆದರೆ ನಮ್ಮ ನಡುವೆಯೇ ಒಂದು ನೂರು ವರ್ಷಗಳ ಹಿಂದೆ ಇದ್ದ ಒಬ್ಬ ವಿದೇಶೀ ಮಿಶನರಿಯ ಬದುಕನ್ನು ಚಿತ್ರಿಸುವ ಕಾರಣಕ್ಕೆ ಈ ಕಾದಂಬರಿಯ ವಸ್ತು ನಮ್ಮ ಕುತೂಹಲವನ್ನು ಹೆಚ್ಚಿಸಿ ಓದಲು ಪ್ರೇರೇಪಿಸುತ್ತದೆ. ಅವನ ಜೊತೆಗೆ ಒಂದು ಕುದುರೆಯೂ ಇತ್ತು; ಆ ಕುದುರೆಯ ಸಾಹಸಗಳು, ಸ್ವಾಮಿಭಕ್ತಿಗಳು ಸ್ಥಳೀಯ ಐತಿಹ್ಯದ ಭಾಗವಾಗಿವೆ. ಒಡೆಯನ ಜತೆಗೆ ಕುದುರೆಯ ಮೂರ್ತಿಯನ್ನೂ ನಾರಾವಿ ಚರ್ಚಿನಲ್ಲಿ ಸ್ಥಾಪಿಸಲಾಗಿದೆ. ಇದರಿಂದಾಗಿ ಈ ಕಾದಂಬರಿಯ ಬಗ್ಗೆ ಆಸಕ್ತಿ ಹೆಚ್ಚಾಗಿ, ಓದುಗರು ಇದನ್ನು ಓದಿದ್ದಾರೆ. (ಇದೇ ವೇಳೆಗೆ ಕೋರ್ಟಿಗಿಂತಲೂ ಹೆಚ್ಚು ವರ್ಣರಂಜಿತವಾದ ಬದುಕನ್ನು ಬದುಕಿದ ದೊಡ್ಡ ಸಾಧಕರಾದ ಕೃಷ್ಣದೇವರಾಯ, ಟಿಪುö್ಪಸುಲ್ತಾನ್ ಮುಂತಾದವರ ಬಗ್ಗೆ ಈಗಾಗಲೇ ನಮಗೆ ತಿಳಿದಿರುವುದರಿಂದ ಅವರ ಕುರಿತಾದ ಮತ್ತೊಂದು ಐತಿಹಾಸಿಕ ಕಾದಂಬರಿ ಬಂದಾಗ ಜನ ಕುತೂಹಲದಿಂದ ಓದಲು ಬಯಸುವುದಿಲ್ಲ. ಅವರ ಬಗ್ಗೆ ಹೊಸ ಸಂಶೋಧನೆಗಳು ಕೃತಿಯಲ್ಲಿದ್ದರೆ ಆಸಕ್ತಿ ಹುಟ್ಟಬಹುದು; ಇಲ್ಲವೆ ಕಾದಂಬರಿಯು ಸಾಹಿತ್ಯಿಕವಾಗಿ ಉತ್ತಮ ಕಲಾಕೃತಿಯಾಗಿರಬೇಕು.) ಆದರೆ ‘ಕೆಂಪಿ ಮತ್ತು ಕೋರ್ಟಿ’ ಕಾದಂಬರಿಯು ಸಾಹಿತ್ಯ ಕೃತಿಯಾಗಿ ನಿರಾಸೆಯನ್ನೇ ಮೂಡಿಸುತ್ತದೆ. ನವಚಾರಿತ್ರಿಕ ಕಾದಂಬರಿಗಳಲ್ಲಿ ಯಶಸ್ವಿಯಾದ ಕಾದಂಬರಿಗಳು ಈ ಕುತೂಹಲ ಕೆರಳಿಸುವ ಚಾರಿತ್ರಿಕ ಅಂಶವನ್ನು ಹೊರತುಪಡಿಸಿಯೂ ಒಳ್ಳೆಯ ಕಥಾವಸ್ತು, ಸಂವಿಧಾನಗಳನ್ನು ಹೊಂದಿ ಉತ್ತಮ ಸಾಹಿತ್ಯ ಕೃತಿಗಳೂ ಆಗಿರುತ್ತವೆ. ನವಚಾರಿತ್ರಿಕ ವಿಮರ್ಶೆಯು ಒಂದು ಕಥಾವಸ್ತುವು ಹೇಗೆ ಸಂಕಥನವಾಗಿದೆ ಇತ್ಯಾದಿ ಅಂಶಗಳನ್ನು ಪರಿಶೀಲಿಸುತ್ತದೆ; ಜತೆಗೆ ಸಾಂಪ್ರದಾಯಿಕ ವಿಮರ್ಶೆಯ ಮಾನದಂಡಗಳ ಮೂಲಕ ಅದರ ಮೌಲ್ಯಮಾಪನವನ್ನು ಮಾಡುವುದು ಸೂಕ್ತವಾದೀತು.