ಈ ವರ್ಷ ನಡೆದ ಚುನಾವಣೆಯ ತರುವಾಯ ‘ಸ್ವಾತಂತ್ರ್ಯ ಹೋರಾಟಗಾರ’ ಕುಟುಂಬಗಳವರಿಗೆ ಸರ್ಕಾರೀ ನೌಕರಿಗಳಲ್ಲಿ ಶೇ. ೫೦ರಷ್ಟನ್ನು ಮೀಸಲಿಡಲು ಹಸೀನಾ ಉಜ್ಜುಗಿಸಿದ್ದು ಇತ್ತೀಚಿನ ವಿದ್ಯಾರ್ಥಿ ಆಂದೋಲನಗಳಿಗೆ ಸ್ಫೋಟಕವಾಯಿತು. ವಿರೋಧಪಕ್ಷವಾದ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿಯವರೂ ವಿದ್ಯಾರ್ಥಿ ನಾಯಕರೂ ಸೇರಿದಂತೆ ಎಲ್ಲರ ಮೇಲೂ ಹಸೀನಾ ಸೇನೆಯನ್ನು ಹರಿಯಬಿಟ್ಟರು. ಕಳೆದ ಆಗಸ್ಟ್ ೫ರ ವೇಳೆಗೆ ಮೃತರ ಸಂಖ್ಯೆ ೪೦೦ರಷ್ಟು ಆಗಿದ್ದಿತು. ಹೀಗೆ ಹಸೀನಾ ತಮ್ಮ ಪದಚ್ಯುತಿಯನ್ನು ತಾವೇ ತಂದುಕೊಂಡರು ಎನ್ನಿಸುತ್ತದೆ. ಕ್ರಮೇಣ ಸೇನೆಯೂ ಹಸೀನಾರವರ ಸ್ವೈರಾಚಾರದ ಆದೇಶಗಳನ್ನು ಪಾಲಿಸಲು ನಿರಾಕರಿಸತೊಡಗಿದ್ದವು.
ಕಳೆದ ಆಗಸ್ಟ್ ಮೊದಲ ವಾರದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರಕ್ರಾಂತಿಯ ಪರಿಣಾಮವಾಗಿ ೫ರಂದು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ನಿರ್ಗಮಿಸಿದ್ದಾದ ಮೇಲೆ ರಾಷ್ಟ್ರಾಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಸಂಸತ್ತನ್ನು ವಿಸರ್ಜಿಸಿ ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನುಸ್ರನ್ನು ಮಧ್ಯಂತರ ಪ್ರಧಾನಿಯನ್ನಾಗಿ ನೇಮಕ ಮಾಡಿದ್ದಾರೆ.
೧೯೭೧ರ ಬಾಂಗ್ಲಾ ವಿಮೋಚನಸಂಘರ್ಷದಲ್ಲಿ ಪಾಲ್ಗೊಂಡಿದ್ದವರ ಬಂಧುಗಳಿಗೂ ಅನುವಂಶಿಕರಿಗೂ ಸರ್ಕಾರೀ ನೌಕರಿಗಳಲ್ಲಿ ನೀಡತೊಡಗಿದ್ದ ಮೀಸಲಿನ ಪ್ರಮಾಣ ಹತ್ತಿರಹತ್ತಿರ ಶೇ.೫೬ಕ್ಕೆ ಮುಟ್ಟಿದ್ದುದರ ವಿರುದ್ಧ ನಡೆದಿದ್ದ ಆಂದೋಲನ ಮುಗಿಲು ಮುಟ್ಟಿದ್ದುದರ ಪರಿಣಾಮ ಈಗಿನ ವಿಷಮ ಸ್ಥಿತಿ. ಆಂದೋಲನವನ್ನು ಬಲಪ್ರಯೋಗದಿಂದ ನಿಯಂತ್ರಿಸಲು ಶೇಖ್ ಹಸೀನಾ ಯತ್ನಿಸಿ ವಿಫಲರಾದದ್ದು ಈಗಿನ ದುರವಸ್ಥೆಗೆ ಕಾರಣವಾಯಿತು. ಮುಂದಿನ ‘ಬೆಳವಣಿಗೆ’(?)ಗಳನ್ನು ಕಾದು ನೋಡೋಣ. ಪ್ರಮುಖವಾಗಿ ಶೇಖ್ ಮುಜೀಬುರ್ ರಹಮಾನರ ದಿಟ್ಟ ಹೋರಾಟದ ಫಲವಾಗಿ ಬಾಂಗ್ಲಾದೇಶವು ಪಾಕಿಸ್ತಾನದ ಕಬಂಧ ಬಾಹುಗಳ ಮುಷ್ಟಿಯಿಂದ ಮುಕ್ತಗೊಂಡು ಸ್ವತಂತ್ರ ದೇಶವಾದ ಐವತ್ತೆರಡು ವರ್ಷಗಳೊಳಗೇ ಮುಜೀಬರ ಪುತ್ರಿಯೇ ಆದ ಹಸೀನಾರ ಹಯಾಮಿನಲ್ಲಿಯೇ ತೀವ್ರ ಅಸ್ಥಿರತೆಯನ್ನು ಎದುರಿಸುತ್ತಿರುವುದು ವಿಷಾದಕರ.
ತಂದೆಯ ವಾರಸಿಕೆಯಾಗಿ ಹಸೀನಾರಿಗೆ ಅವಾಮಿ ಲೀಗಿನ ನಾಯಕತ್ವ ಪ್ರಾಪ್ತವಾಗಿತ್ತು. ೨೦೦೮ರಿಂದ ನಾಲ್ಕು ಚುನಾವಣೆಗಳಲ್ಲಿ ಗೆಲವನ್ನು ತಮ್ಮದಾಗಿಸಿಕೊಂಡಿದ್ದರು. ಕಳೆದೆರಡು ಚುನಾವಣೆಗಳಲ್ಲಿ ಶಂಕಾಸ್ಪದ ವಿಧಾನಗಳನ್ನು ಬಳಸಿದರೆಂದು ವ್ಯಾಪಕ ಟೀಕೆಗಳು ಇದ್ದವು. ಏನೇ ಆದರೂ ಆರಂಭದ ವರ್ಷಗಳಲ್ಲಿ ಜನತೆಯ ಮನಸ್ಸುಗಳಲ್ಲಿ ಹಸೀನಾ ಮೂಡಿಸಿದ್ದ ಸದ್ಭಾವನೆ ಕುಸಿಯುತ್ತಲೇ ಹೋಗಿ ಈ ವರ್ಷಾರಂಭದಿಂದ ಅಧೋಬಿಂದು ತಲಪಿತ್ತು; ಕ್ಷಿಪ್ರಕ್ರಾಂತಿಯನ್ನು ಅಕ್ಷತೆ ನೀಡಿ ಆಮಂತ್ರಿಸಿದಂತೆಯೆ ಆಗಿತ್ತು.
ಈ ವರ್ಷ ನಡೆದ ಚುನಾವಣೆಯ ತರುವಾಯ ‘ಸ್ವಾತಂತ್ರ್ಯ ಹೋರಾಟಗಾರ’ ಕುಟುಂಬಗಳವರಿಗೆ ಸರ್ಕಾರೀ ನೌಕರಿಗಳಲ್ಲಿ ಶೇ. ೫೦ರಷ್ಟನ್ನು ಮೀಸಲಿಡಲು ಹಸೀನಾ ಉಜ್ಜುಗಿಸಿದ್ದು ಇತ್ತೀಚಿನ ವಿದ್ಯಾರ್ಥಿ ಆಂದೋಲನಗಳಿಗೆ ಸ್ಫೋಟಕವಾಯಿತು. ವಿರೋಧಪಕ್ಷವಾದ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿಯವರೂ ವಿದ್ಯಾರ್ಥಿ ನಾಯಕರೂ ಸೇರಿದಂತೆ ಎಲ್ಲರ ಮೇಲೂ ಹಸೀನಾ ಸೇನೆಯನ್ನು ಹರಿಯಬಿಟ್ಟರು. ಕಳೆದ ಆಗಸ್ಟ್ ೫ರ ವೇಳೆಗೆ ಮೃತರ ಸಂಖ್ಯೆ ೪೦೦ರಷ್ಟು ಆಗಿದ್ದಿತು. ಹೀಗೆ ಹಸೀನಾ ತಮ್ಮ ಪದಚ್ಯುತಿಯನ್ನು ತಾವೇ ತಂದುಕೊಂಡರು ಎನ್ನಿಸುತ್ತದೆ. ಕ್ರಮೇಣ ಸೇನೆಯೂ ಹಸೀನಾರವರ ಸ್ವೈರಾಚಾರದ ಆದೇಶಗಳನ್ನು ಪಾಲಿಸಲು ನಿರಾಕರಿಸತೊಡಗಿತ್ತು.
ಬಾಂಗ್ಲಾದೇಶದ ವಿದ್ಯಮಾನಗಳು ಭಾರತಕ್ಕೂ ತೀವ್ರ ಆತಂಕವನ್ನು ತಂದೊಡ್ಡಿವೆ. ಭಾರತದೊಳಕ್ಕೆ ಬಾಂಗ್ಲಾ ನುಸುಳುಕೋರರಿಂದಾಗುವ ಸಮಸ್ಯೆಗಳ ವಿಷಯ ಒತ್ತಟ್ಟಿಗಿರಲಿ. ಭಾರತದ ಭದ್ರತಾನೀತಿಯ ಮೇಲೂ ಬಾಂಗ್ಲಾ ಅಸ್ಥಿರತೆಯು ಅಡ್ಡಪರಿಣಾಮ ಬೀರುವುದು ನಿಶ್ಚಿತ. ಹಲವು ವರ್ಷಗಳಿಂದ ಉಭಯ ದೇಶಗಳ ನಾಯಕರ ನಡುವೆ ಸೌಹಾರ್ದ ಏರ್ಪಟ್ಟಿತ್ತು. ಇದು ವ್ಯೂಹಾತ್ಮಕವೂ ಆಗಿತ್ತು. ಬಾಂಗ್ಲಾದೇಶದಲ್ಲಿ ಹಸೀನಾರ ನಾಯಕತ್ವ ನಡೆದಿರುವವರೆಗೆ ಭಾರತಕ್ಕೆ ವ್ಯತಿರಿಕ್ತವಾದ ಶಕ್ತಿಗಳ ವ್ಯವಹಾರಗಳಿಗೆ ಬಾಂಗ್ಲಾದೇಶದಲ್ಲಿ ಹೆಚ್ಚಿನ ಅವಕಾಶಗಳು ಇರಲಾರವೆಂದು ಭಾರತ ಭರವಸೆಯಿಂದಿರಬಹುದಾಗಿತ್ತು. ನಿದರ್ಶನಕ್ಕೆ: ಪಾಕಿಸ್ತಾನಜನ್ಯ ಜೆಹಾದಿ ಪಡೆಗಳ ದುಸ್ಸಾಹಸಗಳಿಗೆ ಅವಕಾಶ ನೀಡದೆ ಹಸೀನಾ ನಿಯಂತ್ರಣ ತಂದಿದ್ದರು; ಜಮಾತ್-ಇ-ಇಸ್ಲಾಮಿಗೆ ನಿಷೇಧ ಹೇರಿದ್ದರು. ಚೀಣಾ ‘ಬೆಲ್ಟ್-ರೋಡ್’ ಯೋಜನೆಗೆ ಸಂಬಂಧಿಸಿದಂತೆಯೂ ಭಾರತದ ವಿಷಯದಲ್ಲಿ ಸಹಾನುಭೂತಿಯನ್ನು ಹಸೀನಾ ಕುಂಠಿತಗೊಳಿಸಿಕೊಳ್ಳಲಿಲ್ಲ; ಸ್ಪಂದನಶೀಲರಾಗಿದ್ದರು. ಈ ವಾಸ್ತವಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸ್ಥಿತ್ಯಂತರದಿಂದ ಭಾರತದ ಭದ್ರತಾನೀತಿಗೆ ಒಂದಷ್ಟು ಹಾನಿಯಾಗುವ ಸಂಭವ ಇಲ್ಲವೆನ್ನಲಾಗದು. ಮುಂದೆ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆದಾಗ ಒಂದು ವೇಳೆ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿಯದು ಮೇಲುಗೈಯಾದರಂತೂ ಭಾರತಕ್ಕೆ ಭಾರಿ ತಲೆನೋವೇ ಆಗುತ್ತದೆ. ಏಕೆಂದರೆ ಆ ಪಾರ್ಟಿಯ ಗಾಢ ನಂಟಸ್ತಿಕೆ ಇರುವುದು ಇಸ್ಲಾಮೀ ಸಂಘಟನೆಗಳೊಡನೆ. ಬಾಂಗ್ಲಾದೇಶದ ೧೭ ಕೋಟಿ ಜನಸಂಖ್ಯೆಯಲ್ಲಿ ಶೇ. ೮ರಷ್ಟು ಹಿಂದೂಗಳು. ಬಿ.ಎನ್.ಪಿ. ಅಧಿಕಾರಕ್ಕೆ ಬಂದಲ್ಲಿ ಅಲ್ಲಿಯ ಹಿಂದೂಗಳ ಸ್ಥಿತಿ ಹದಗೆಡುವ ಸಂಭವ ತಪ್ಪಿದ್ದಲ್ಲ. ಮುಂದೆ ಅಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸದ್ಯೋಭವಿಷ್ಯದಲ್ಲಿ ಹಸೀನಾವಿರೋಧಿ ಧೋರಣೆಗಳ ಪ್ರಾಚುರ್ಯವನ್ನು ನಿರೀಕ್ಷಿಸಬಹುದಾಗಿದೆ. ತಾತ್ಪರ್ಯ: ಅತಂತ್ರವಾಗಿರುವುದು ಬಾಂಗ್ಲಾದೇಶ ಮಾತ್ರವಲ್ಲ, ಭಾರತ ಕೂಡಾ.