ಇತ್ತೀಚೆಗೆ ಯೂರೋಪಿನ ಹಲವೆಡೆಗಳಲ್ಲಿ (ಇಟಲಿ, ಹಾಲೆಂಡ್ ಇತ್ಯಾದಿ) ನಡೆದ ಚುನಾವಣೆಗಳಲ್ಲಿ ಮಿತವಾದಿ ಪಕ್ಷಗಳದೇ ಮೇಲುಗೈಯಾಗಿರುವುದನ್ನು ಆಕಸ್ಮಿಕವೆನ್ನಲಾಗದು. ಯೂರೋಪಿನ ಬಹುತೇಕ ದೇಶಗಳಲ್ಲಿ ವಲಸಿಗರ ಬಗೆಗೆ ಹಿಂದೆ ಇರುತ್ತಿದ್ದಷ್ಟು ಪ್ರಮಾಣದ ಗಡಸುತನ ಈಗ ಕಾಣುತ್ತಿಲ್ಲ. ಈ ಪರಿವರ್ತನೆ ಅರ್ಥಪೂರ್ಣವೆನಿಸುತ್ತದೆ.
ಭಾರತವೂ ಸೇರಿದಂತೆ ಜಗತ್ತಿನ ಅಧಿಕ ಭಾಗದ ಮೇಲೆ ಒಂದೊಮ್ಮೆ ಬಗೆಬಗೆಯ ತಂತ್ರಗಳ ಮತ್ತು ಹಲವೊಮ್ಮೆ ನೇರ ಆಕ್ರಮಣಗಳ ಮೂಲಕ ತನ್ನ ಸಾಮ್ರಾಜ್ಯಾಧಿಕಾರವನ್ನು ಸ್ಥಾಪಿಸಿದ್ದ ಯೂರೋಪ್ ಮೂಲೆಯ ಪುಟ್ಟ ದೇಶ ಇಂಗ್ಲೆಂಡ್. ಮಾವುತನ ಅಂಕುಶ ಆನೆಯಷ್ಟೆ ಗಾತ್ರದ್ದಾಗಬೇಕಿಲ್ಲವೆಂಬುದನ್ನು ಪುರಾವೆಗೊಳಿಸಿದ್ದು ಯೂರೋಪ್ ದೇಶಗಳ ವಿಸ್ತರಣೋದ್ಯಮೇತಿಹಾಸ. ಅದೆಲ್ಲ ಹಳೆಯ ಕಥೆಯೆನ್ನೋಣ, ಬಿಡಿ. ಅದೇನೇ ಇದ್ದರೂ ಹಲವು ಕಾರಣಗಳಿಂದ ಇಂಗ್ಲೆಂಡಿನ ವಿದ್ಯಮಾನಗಳಲ್ಲಿ ಭಾರತಕ್ಕೆ ಒಂದಷ್ಟು ಆಸಕ್ತಿ ಈಗಲೂ ಇಲ್ಲವೆನ್ನಲಾಗದು. ಈಚೆಗೆ ಭಾರತದ ‘ಅಳಿಯ’ ಇಂಗ್ಲೆಂಡಿನ ಪ್ರಧಾನಮಂತ್ರಿಯೂ ಆಗಿದ್ದರಷ್ಟೆ. ಆದರೆ ಸುನಾಕ್ ಪ್ರತಿನಿಧಿಸುತ್ತಿದ್ದ ಕನ್ಸರ್ವೆಟಿವ್ ಪಕ್ಷ ಈಗ ಪರಾಭವಗೊಂಡಿದೆ, ಲೇಬರ್ ಪಕ್ಷ ಗೆದ್ದಿದೆ. (ವೈಯಕ್ತಿಕವಾಗಿ ಸುನಾಕ್ ಆಯ್ಕೆಗೊಂಡಿದ್ದಾರೆನ್ನಿ.) ಗಣನೀಯ ಪ್ರಮಾಣದ (೨೯) ಭಾರತಮೂಲದವರು ಚುನಾವಣೆಯಲ್ಲಿ ಗೆಲವನ್ನು ಸಾಧಿಸಿರುವುದು ಗಮನಿಸಬೇಕಾದ ಸಂಗತಿ. ‘ಮಿತವಾದಿ ಪಕ್ಷ’ವೆಂದೇ ಹೆಸರಾದ ‘ರಿಫಾರ್ಮ್ ಯು.ಕೆ.’ ಪಕ್ಷವು ಹಿಂದೆಂದಿಗಿಂತ ಅಧಿಕ ಸ್ಥಾನಗಳನ್ನು ಗಳಿಸಿಕೊಂಡಿರುವುದೂ ಸ್ವಾರಸ್ಯಕರ.
ಭಾರತಕ್ಕೆ ಸಂಬಂಧಿಸಿದಂತೆ ಕನ್ಸರ್ವೆಟಿವ್ ಮತ್ತು ಲೇಬರ್ ಪಕ್ಷಗಳ ನಿಲವುಗಳ ನಡುವೆ ಹಿಂದಿನಿಂದ ಹಲವು ಭಿನ್ನತೆಗಳು ಇದ್ದವು. ನಿದರ್ಶನಕ್ಕೆ – ಕಾಶ್ಮೀರ ಸಮಸ್ಯೆಯನ್ನು ಕುರಿತು. ಅದರ ಬಗೆಗೆ ಜನಾಭಿಪ್ರಾಯ ಸಂಗ್ರಹ (‘ರೆಫೆರೆಂಡಮ್’) ನಡೆಯಲಿ ಎಂದು ಹಿಂದೆ ಲೇಬರ್ ಪಕ್ಷದ ಅಭಿಮತ ಇದ್ದಿತು. ಆದರೆ ಈಗ ಅಲ್ಲಿ ಯಾರೂ ಹಾಗೆ ಹೇಳುತ್ತಿಲ್ಲ, ಆ ಜಾಡಿನ ಚಿಂತನೆಯನ್ನು ಕೈಬಿಟ್ಟಿದ್ದಾರೆ. ಇತರ ವಿಷಯಗಳಲ್ಲಿಯೂ ಇಂತಹ ಭಂಗ್ಯಂತರವನ್ನು ಕಾಣುತ್ತಿದ್ದೇವೆ. ಉದಾಹರಣೆಗೆ: ರಿಷಿ ಸುನಾಕ್ ಅಧಿಕಾರಾವಧಿಯಲ್ಲಿ ಭಾರತ-ಇಂಗ್ಲೆಂಡ್ಗಳ ನಡುವಣ ಮುಕ್ತ ವಾಣಿಜ್ಯ ಒಡಂಬಡಿಕೆಯ (‘ಫ್ರೀ ಟ್ರೇಡ್ ಅಗ್ರಿಮೆಂಟ್’) ಬಗೆಗೆ ಸಮ್ಮತಿ ಹೊಮ್ಮಿತ್ತು. ಅದೇ ನಿಲವನ್ನು ನೂತನ ಪ್ರಧಾನಿ ಕೀರ್ ಸ್ಮಾರ್ಟರ್ ಕೂಡಾ ವ್ಯಕ್ತಪಡಿಸಿದ್ದಾರೆ.
ಹಿಂದಿನ ವರ್ಷಗಳಲ್ಲಿ ಲೇಬರ್ ಪಕ್ಷವು ಸೈದ್ಧಾಂತಿಕವಾಗಿ ಹೆಚ್ಚಿನಂಶಗಳಲ್ಲಿ ವಾಮವಾದಿ ಪ್ರಸ್ಥಾನಕ್ಕೆ ಅನುಗುಣವಾಗಿರುತ್ತಿತ್ತು. ಈಗ ಅದು ಮಧ್ಯಮಮಾರ್ಗದ ಕಡೆಗೆ ಪ್ರವಣತೆ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು.
ಇತ್ತೀಚೆಗೆ ಯೂರೋಪಿನ ಇತರೆಡೆಗಳಲ್ಲಿ (ಇಟಲಿ, ಹಾಲೆಂಡ್ ಇತ್ಯಾದಿ) ನಡೆದ ಚುನಾವಣೆಗಳಲ್ಲೂ ಮಿತವಾದಿ ಪಕ್ಷಗಳದೇ ಮೇಲುಗೈಯಾಗಿರುವುದನ್ನು ಆಕಸ್ಮಿಕವೆನ್ನಲಾಗದು. ಯೂರೋಪಿನ ಬಹುತೇಕ ದೇಶಗಳಲ್ಲಿ ವಲಸಿಗರ ಬಗೆಗೆ ಹಿಂದೆ ಇರುತ್ತಿದ್ದಷ್ಟು ಪ್ರಮಾಣದ ಗಡಸುತನ ಈಗ ಕಾಣುತ್ತಿಲ್ಲ. ಈ ಪರಿವರ್ತನೆಯೂ ಅರ್ಥಪೂರ್ಣವೆನಿಸುತ್ತದೆ. ಇದೀಗ ಅಮೆರಿಕದ ಅಧ್ಯಕ್ಷ ಸ್ಥಾನದ ಪ್ರಮುಖ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ರನ್ನೂ ಮಿತವಾದಿ ಧಾರೆಗೆ ಸಮೀಪಗತರೆನ್ನಬಹುದು.
ಬೇರೆ ದೇಶಗಳ ಮಾತು ಹಾಗಿರಲಿ. ಮೂಲಭೂತವಾದಿ ಧೋರಣೆಯದೆಂದೇ ಹೆಸರಾದ ಇರಾನ್ ದೇಶದಲ್ಲೂ ಈಚೆಗೆ ನಡೆದ ಚುನಾವಣೆಯಲ್ಲಿ ಮತೀಯ ವಲಯಗಳನ್ನೂ ಖೊಮೇನಿ ಅನುಯಾಯಿಗಳನ್ನೂ ಹಿಂದಿಕ್ಕಿ ‘ಸಂಸ್ಕರಣವಾದಿ’ ಧಾರೆಯ ಮಾಸೂದ್ ಪೆಜೆಷ್ಕಿಯಾನ್ ಮುನ್ನಡೆಯನ್ನು ಸಾಧಿಸಿರುವುದು ಎಲ್ಲರನ್ನೂ ಚಕಿತಗೊಳಿಸಿದೆ. ಮತದಾನದ ಪ್ರಮಾಣ ಹಿಂದಿಗಿಂತ ಹೆಚ್ಚಿರುವುದಕ್ಕೂ ‘ಹೊಸ ಅಲೆ’ಯ ಪ್ರಾಚುರ್ಯವೇ ಕಾರಣ ಎನ್ನಲಾಗಿದೆ. ಮತಪೆಟ್ಟಿಗೆಗೆ ಸೇರಿದ ಸುಮಾರು ಮೂರು ಕೋಟಿ ಮತಗಳಲ್ಲಿ ೧.೬೪ ಕೋಟಿಯಷ್ಟು ಮತಗಳನ್ನು ಪೆಜೆಷ್ಕಿಯಾನ್ ಅವರೇ ಬಗಲಿಗೆ ಹಾಕಿಕೊಂಡಿದ್ದಾರೆ. ಖೊಮೇನಿಯ ಅನುಚರ ಜಲೀಲಿ ಗಳಿಸಲಾಗಿರುವುದು ೧.೩೫ ಕೋಟಿ ಮತಗಳನ್ನು ಮಾತ್ರ. ಈ ಎಲ್ಲ ಜಾಗತಿಕ ಸನ್ನಿವೇಶಗಳ ಭೂಮಿಕೆಯಲ್ಲಿ ಇಂಗ್ಲೆಂಡಿನಲ್ಲಿ ಲೇಬರ್ ಪಕ್ಷದ ಮುನ್ನಡೆಯಾಗಿರುವುದನ್ನು ಅರ್ಥಯಿಸಬಹುದು.