ಮೂರುಸಾವಿರ ವರ್ಷಗಳ ಹಿಂದೆ ಮನುಷ್ಯ ಎಂತಹ ದೋಣಿ ಬಳಸಿದ್ದನೋ ಅದನ್ನೇ ಇಟ್ಟುಕೊಂಡೂ ಈ ದೂರವನ್ನು ಕ್ರಮಿಸಬಹುದು. ಬೇಕಾದರೆ ನಾನೇ ಮಾಡಿ ತೋರಿಸುತ್ತೇನೆ ಅದನ್ನು! ಎಂದು ಥಾರ್ ಹೇಳಿದಾಗ ಮನೆಯಲ್ಲಿ ಬಿರುಗಾಳಿ, ಸುನಾಮಿ ಒಟ್ಟಿಗೇ ಎದ್ದವು.
ನಾರ್ವೆಗೆ ಮರಳಿ ಬರುವ ಹೊತ್ತಿಗೆ ಅವನ ಮನಸ್ಸಿನಲ್ಲಿ ನಿರ್ಧಾರ ಗಟ್ಟಿಯಾಗಿಬಿಟ್ಟಿತ್ತು. ಅದನ್ನು ಕೇಳಿದ ಗೆಳೆಯರು ನಿನಗೆಲ್ಲೋ ಭ್ರಾಂತು ಎಂದರು. ಕಾಲೇಜಿನಲ್ಲಿ ಪಾಠ ಹೇಳಿದ್ದ ಪ್ರೊಫೆಸರುಗಳು, ಬಂಡೆಕಲ್ಲಿನ ಗಟ್ಟಿತನ ನೋಡಲು ಮಂಡೆ ಚಚ್ಚಿಕೊಳ್ಳುವುದು ಬುದ್ಧಿವಂತಿಕೆಯಲ್ಲ ಎಂದು ಕಿವಿಹಿಂಡಿ ಬುದ್ಧಿ ಹೇಳಿದರು. ಒಬ್ಬ ಹಿತೈಷಿ ನಿನ್ನ ಹೆಣದ ಮುಂದೆ ಅತ್ತುಕರೆಯುವ ತಂದೆ-ತಾಯಿಯರನ್ನು ನೆನಪಿಸಿಕೋ ಎಂದುಬಿಟ್ಟ. ಇನ್ನು ಮನೆಯವರಂತೂ ರಂಪರಾದ್ಧಾಂತ ಮಾಡಿ ಇವನನ್ನು ಕಟ್ಟಿಹಾಕಲು ನೋಡಿದರು. ಇವರೆಲ್ಲರ ಮಧ್ಯೆ ಹೆಂಡತಿ ಮಾತ್ರ ನಿನ್ನ ಎಲ್ಲ ಕೆಲಸ-ಕನಸು-ಸಾಧನೆಗಳಿಗೂ ಬೆಂಬಲವಾಗಿ ನಿಲ್ಲುವುದು ನನ್ನ ಧರ್ಮ. ನಿನ್ನ ಜೊತೆಗೆ ನಾನಿದ್ದೇನೆ. ಹೊರಡುವ ದಿನ ಶುಭ ಹಾರೈಸಿ ಕಳಿಸಿಕೊಡುತ್ತೇನೆ ಎಂದಳು! ಹಾಗೆ ಅವನು ಹೊರಟಿದ್ದಾದರೂ ಎಲ್ಲಿಗೆ ಎನ್ನುತ್ತೀರೋ? ನಿಮಗೆ ಸ್ವಲ್ಪ ಹಿನ್ನೆಲೆ ಕಥೆ ಹೇಳುತ್ತೇನೆ ಕೇಳಿ.
ಜಗತ್ತಿನ ಶೇಕಡಾ ೯೯ರಷ್ಟು ಸಾಮಾನ್ಯರಂತೆ ಸಹಜವಾಗಿ ಬದುಕಿಬಿಟ್ಟಿದ್ದರೆ ಥಾರ್ ಹೈರ್ಡಾಲ್ (Thor Heyerdahl) ಯಾವುದಾದರೂ ಕಾಲೇಜಲ್ಲಿ ಪ್ರಾಧ್ಯಾಪಕನಾಗಿ ಪಾಠ ಮಾಡುತ್ತ, ವರ್ಷಕ್ಕೊಮ್ಮೆ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಶೈಕ್ಷಣಿಕ ಪ್ರವಾಸದ ಹೆಸರಲ್ಲಿ ಕಾಡು-ಗುಡ್ಡ ಸುತ್ತಿ, ಹೆಚ್ಚೆಂದರೆ ಹಾತೆ-ಮಿಡತೆಗಳ ಮೇಲೆ ಒಂದೆರಡು ಪುಸ್ತಕ ಬರೆದು ನೀಗಿಕೊಳ್ಳಬಹುದಿತ್ತು. ಅವನು ಹುಟ್ಟಿದ್ದು ನಾರ್ವೆ ದೇಶದಲ್ಲಿ, ೧೯೧೪ರ ಅಕ್ಟೋಬರ್ ೬ರಂದು. ಓಸ್ಲೋ ವಿಶ್ವವಿದ್ಯಾಲಯದಲ್ಲಿ ಕಲಿತದ್ದು ಪ್ರಾಣಿಶಾಸ್ತ್ರ. ಕಾಲೇಜಿನಲ್ಲಿ ಜೀವಶಾಸ್ತ್ರ ಕಲಿತವರಿಗೆ ಸಹಜವಾಗಿ ಹುಟ್ಟುವ ಆಸಕ್ತಿಯಂತೆ, ಅವನಿಗೂ ಯಾವುದಾದರೂ ದೂರದೇಶದ ಪ್ರಾಣಿ-ಪಕ್ಷಿಗಳನ್ನು ನೋಡಿಕೊಂಡು ಬರಬೇಕು, ಅಲ್ಪಸ್ವಲ್ಪ ಅಧ್ಯಯನ ಮಾಡಬೇಕು ಎಂಬ ಆಸೆ ಮತ್ತು ಆಸಕ್ತಿಗಳೂ ಇದ್ದವು. ಸರಿ, ೧೯೩೬ರಲ್ಲಿ ಆಗಷ್ಟೇ ತನ್ನ ಕೈಹಿಡಿದಿದ್ದ ಬಾಳಸಂಗಾತಿಯನ್ನು ಜೊತೆಮಾಡಿಕೊಂಡು ನಾರ್ವೆಯಿಂದ ಅತಿದೂರದಲ್ಲಿತ್ತೆನ್ನಬಹುದಾದ ಫಟು ಹಿವ ಎಂಬ ದ್ವೀಪವನ್ನು ಕ್ಷೇತ್ರಕಾರ್ಯಕ್ಕಾಗಿ ಥಾರ್ ಆಯ್ಕೆ ಮಾಡಿಕೊಂಡ. ಈ ದ್ವೀಪ ಇದ್ದದ್ದು ಆಸ್ಟ್ರೇಲಿಯ ಮತ್ತು ದಕ್ಷಿಣ ಅಮೆರಿಕಗಳ ನಡುವೆ, ಬ್ರಹ್ಮಾಂಡ ಬಾಹುಗಳನ್ನು ಚಾಚಿ ಮೈಮರೆತು ಬಿದ್ದು ಗೊರಕೆ ಹೊಡೆಯುವಂತಿದ್ದ ಶಾಂತಸಾಗರವೆಂಬ ದೈತ್ಯನ ಎದೆಯಲ್ಲಿ. ಡಾರ್ವಿನ್ಕಾಲದಿಂದಲೂ ಯೂರೋಪಿನ ಬಯಾಲಜಿ ಪಂಡಿತರು ಈ ಭಾಗದ ದ್ವೀಪಗಳನ್ನೇ ಅಧ್ಯಯನಕ್ಕಾಗಿ ಆರಿಸಿಕೊಳ್ಳುವುದು ಫ್ಯಾಶನ್ ಎಂಬಂತೆ ಬೆಳೆದುಬಂದಿತ್ತು. ಇಲ್ಲಿರುವಷ್ಟು ವೈವಿಧ್ಯಮಯ ಜೀವಜಗತ್ತು ಬೇರೆಲ್ಲೂ ಕಾಣುವುದಕ್ಕೆ ಸಿಗುವುದಿಲ್ಲ ಎನ್ನುವುದೊಂದು ಕಾರಣ. ಹಾಗಾಗಿ ಥಾರ್, ಶಾಂತಸಾಗರದ ನಡುವೆ ಮೈಮುದುರಿ ಕೂತ ಪುಟ್ಟ ದ್ವೀಪವನ್ನು ಅಧ್ಯಯನಕ್ಕಾಗಿ ಆರಿಸಿಕೊಂಡದ್ದರಲ್ಲಿ ವಿಶೇಷವೇನೂ ಇರಲಿಲ್ಲ.
ಕೆರಳಿದ ಆಸಕ್ತಿ
ಥಾರ್, ಫಟು ಹಿವ ದ್ವೀಪಕ್ಕೆ ಬಂದಿಳಿದ. ಮೊದಮೊದಲು ಅಲ್ಲಿನ ಹಾವು, ಕಪ್ಪೆ, ಮೀನು, ಮಿಡತೆ ಎನ್ನುತ್ತ ಹರಿದಾಡುವ, ಹಾರಾಡುವ, ಓಡುವ, ತೆವಳುವ ಸಕಲ ಜೀವರಾಶಿಯನ್ನೂ ಬೆರಗುಗಣ್ಣುಗಳಿಂದ ನೋಡುತ್ತ ನೋಟ್ ಮಾಡಿಕೊಳ್ಳುತ್ತಿದ್ದ. ಅವುಗಳ ಮಾದರಿಗಳನ್ನು ಸಂಗ್ರಹಿಸುತ್ತಿದ್ದ. ಕೆಲವೊಂದರ ದೇಹ ಸಿಗಿದು ಅನಾಟಮಿಯ ಅಧ್ಯಯನ ಮಾಡುತ್ತಿದ್ದ. ಜೀವ-ಜೀವಗಳ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ಪ್ರಯತ್ನಪಟ್ಟು ಜೀವವಿಕಾಸದ ಹಂತಗಳನ್ನು ಕಣ್ಣಾರೆ ಕಂಡು ಗುರುತಿಸಲು ತವಕಿಸುತ್ತಿದ್ದ. ಫೆಸಿಫಿಕ್ ಸಾಗರದ ಬೊಜ್ಜುಹೊಟ್ಟೆಯ ಮೇಲೆ ಪುಟ್ಟದೊಂದು ಹೊಕ್ಕುಳಿನಂತಿದ್ದ ಆ ದ್ವೀಪ ಹತ್ತಿರದ ಎಲ್ಲ ದೇಶಗಳಿಗಿಂದಲೂ ನಾಲ್ಕೈದು ಸಾವಿರ ಮೈಲಿ ದೂರದಲ್ಲಿತ್ತು! ಸುತ್ತಮುತ್ತ ಅದಕ್ಕೆ ಬಂಧುಬಾಂಧವರು ಎನ್ನಬಹುದಾದ ದೊಡ್ಡ ದೇಶಗಳು ಒಂದೂ ಇರಲಿಲ್ಲ. ಪಶ್ಚಿಮದಲ್ಲಿ ಬಹುದೂರದಲ್ಲಿ ಆಸ್ಟ್ರೇಲಿಯ, ನ್ಯೂ ಜ಼ೀಲ್ಯಾಂಡ್, ಆಗ್ನೇಯ ಏಷ್ಯದ ದೇಶಗಳು, ಚೀನಾ, ಜಪಾನ್, ರಷ್ಯ ಇದ್ದರೆ, ಇನ್ನೊಂದು ಭಾಗದಲ್ಲಿ ಕೆನಡ, ಉತ್ತರ ಮತ್ತು ದಕ್ಷಿಣ ಅಮೆರಿಕದ ಪಶ್ಚಿಮ ತೀರಗಳು ಇದನ್ನು ನೋಡುತ್ತಿದ್ದವು. ಫಟು ಹಿವದ ಸುತ್ತಮುತ್ತ ನೂರಾರು ಸಂಖ್ಯೆಯಲ್ಲಿ, ಬಾಣಲೆಯಲ್ಲಿ ಬಿದ್ದ ಬೂಂದಿಯ ಕಣಗಳಂತೆ ಇನ್ನಿತರ ದ್ವೀಪಗಳು ಕಣ್ಣುಬಿಟ್ಟಿದ್ದವು. ಈ ಜಾಗದ ಕಾಡುಬೆಟ್ಟಗಳನ್ನು ಅಲೆಯುತ್ತ ಪ್ರಾಣಿಗಳ ಅಧ್ಯಯನದಲ್ಲಿ ತೊಡಗಿದ್ದ ಥಾರ್ನಿಗೆ ಆಗೀಗ ಅಲ್ಲಿನ ಆದಿವಾಸಿಗಳ ಜೊತೆ ಬೆರೆಯುವ, ಅವರ ಜೀವನವಿಧಾನಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತಿತ್ತು. ಆಗೆಲ್ಲ ಅವನು ಅವರನ್ನು ವಿಜ್ಞಾನಿಯ ಸೂಕ್ಷ್ಮತೆಯಿಂದ ಗಮನಿಸುತ್ತಿದ್ದ. ಈ ಮೂಲನಿವಾಸಿಗಳು ಇಲ್ಲಿಗೆ ಎಲ್ಲಿಂದ ಬಂದರು? ಅಥವಾ ಇಲ್ಲೇ ಹುಟ್ಟಿ ಬೆಳೆದರೇ? ಜೀವವಿಕಾಸದ ಪಾಠಗಳಲ್ಲಿ, ಇಡೀ ಜಗತ್ತಿಗೆ ಜನವಸತಿ ಆಫ್ರಿಕದಿಂದ ಪ್ರಾರಂಭಿಸಿ ಗುಳೆಹೋಯಿತು ಎನ್ನುತ್ತಾರೆ; ಅದು ನಿಜವೇ? ಅಥವಾ ಜಗತ್ತಿನ ಅಲ್ಲಲ್ಲಿ ಜನರು ತಾವಾಗೇ ವಿಕಾಸವಾಗುತ್ತ ಹೋದರೆ? ಅವನ ತಲೆ ಗೊಂದಲದ ಹುತ್ತವಾಯಿತು. ಫಟು ಹಿವ ಮತ್ತು ಅದರ ಸುತ್ತಮುತ್ತಲಿನ ನೂರಾರು ಪುಟಾಣಿ ದ್ವೀಪಗಳ ಗುಚ್ಛವನ್ನು ಫ್ರೆಂಚ್ ಪಾಲಿನೇಷ್ಯ ಎಂದು ಕರೆಯುತ್ತಾರೆ. ಈ ದ್ವೀಪಗಳಲ್ಲಿರುವ ಜನ ಒಂದಾನೊಂದು ಕಾಲದಲ್ಲಿ ದೂರದ ಊರುಗಳಿಂದ ಬಂದದ್ದು ನಿಜವೇ ಆದರೆ, ಅವರು ನೂರಾರು ಅಲ್ಲ ಸಾವಿರಾರು ಮೈಲಿ ಅಂತರವನ್ನು ಜಲಮಾರ್ಗದಲ್ಲಿ ಕ್ರಮಿಸಿರಬೇಕು! ಹಾಗೆ ನೋಡಿದರೆ, ಈ ದ್ವೀಪಗುಚ್ಛ ಅತ್ತಲಿನ ಅಮೆರಿಕಕ್ಕಿಂತಲೂ ಇತ್ತಲಿನ ಏಷ್ಯಖಂಡಕ್ಕೇ ಹೆಚ್ಚು ಹತ್ತಿರ. ಹಾಗಾಗಿ, ಅವರು ಏಷ್ಯದ ಕಡೆಯಿಂದ ಬಂದು ಈ ದ್ವೀಪಗಳಲ್ಲಿ ಬಿಡಾರ ಹೂಡಿರುವ ಸಾಧ್ಯತೆಯೇ ಹೆಚ್ಚು ಎಂದು ಇತಿಹಾಸಜ್ಞರು ತರ್ಕಿಸಿದ್ದರು. ಅಲ್ಲದೆ, ಪ್ರಾಚೀನ ನಾಗರಿಕತೆಗಳೆಲ್ಲ ಏಷ್ಯ ಮೈನರ್ನಿಂದಲೇ ಶುರುವಾದವು ಎಂಬ ವಾದವೂ ಇತ್ತಲ್ಲ?
ಬದಲಾದ ಅಭಿಪ್ರಾಯ
ಥಾರ್, ಹಳೆ ದಾಖಲೆಗಳನ್ನು ಹುಡುಕಿದ. ತನಗೆ ಲಭ್ಯವಿದ್ದ ಜೀವಶಾಸ್ತ್ರದ ಪಾಠಗಳನ್ನೆಲ್ಲ ಮತ್ತೆ ಓದಿಕೊಂಡ. ಅಲ್ಲಿದ್ದ ಕಥೆಗಳ ಸಾರಾಂಶ ಇಷ್ಟೆ – ಮನುಷ್ಯನ ನಾಗರಿಕತೆ ಮಧ್ಯ ಏಷ್ಯದ ಒಂದು ಸಣ್ಣಭಾಗದಲ್ಲಿ ಹುಟ್ಟಿ ನಂತರ ಹರಡಿಕೊಂಡಿತು. ಅದು ಪೂರ್ವಾಭಿಮುಖವಾಗಿ ಭಾರತ, ಚೀನಾ, ರಷ್ಯ, ಮಂಗೋಲಿಯ, ಜಪಾನ್ಗಳಿಗೂ; ಅಲ್ಲಿಂದ ಮುಂದೆ ಆಗ್ನೇಯ ಏಷ್ಯದ ದೇಶಗಳಿಗೂ, ಅಲ್ಲಿಂದ ಆಚೆ ಚಾಚಿರುವ ಜಾವಾ ಸುಮಾತ್ರದಂತಹ ದ್ವೀಪಗಳಿಗೂ, ಮುಂದೆ ಆಸ್ಟ್ರೇಲಿಯ, ನ್ಯೂಗಿನಿ ಮುಂತಾದ ಭೂಭಾಗಗಳಿಗೂ ಹರಡಿ, ಕೊನೆಗೆ ಫ್ರೆಂಚ್ ಪಾಲಿನೇಷ್ಯದವರೆಗೂ ಹರಡಿಕೊಂಡಿತು. ಹಾಗಾಗಿ ಅಲ್ಲಿನ ಮೂಲನಿವಾಸಿಗಳೆಲ್ಲ ಮೂಲತಃ ಏಷ್ಯದವರೇ. ಆದರೆ, ಈ ವಾದಕ್ಕೆ ಪೂರಕವಲ್ಲದ ಹಲವಾರು ಸಂಗತಿಗಳನ್ನು ಥಾರ್ನಿಗೆ ತಾನುಳಿದುಕೊಂಡಿದ್ದ ದ್ವೀಪದಲ್ಲಿ ನೋಡುವ ಸನ್ನಿವೇಶಗಳು ಬಂದವು. ಫಟು ಹಿವದಲ್ಲಿ ವಾಸ ಮಾಡುತ್ತಿದ್ದ ಜನ ದಕ್ಷಿಣ ಅಮೆರಿಕದಲ್ಲಿ ಸಿಗುವಂಥಾದ್ದೇ ಸಿಹಿಗೆಣಸುಗಳನ್ನು ಬೆಳೆಯುತ್ತಿದ್ದರು. ಅಂತಹ ತರಕಾರಿಯನ್ನು ಬೆಳೆಯುವುದಾಗಲೀ ತಿನ್ನುವುದಾಗಲೀ ಆಗ್ನೇಯ ಏಷ್ಯದ ಪದ್ಧತಿ ಆಗಿರಲಿಲ್ಲ. ಆಳಕ್ಕೆ ಇಳಿಯುತ್ತ ಹೋದಂತೆ, ಆ ನಿವಾಸಿಗಳು ಬಳಸುವ ಹಲವು ಹೂವುಗಳು, ಔಷಧಿಗಳು ಅಮೆರಿಕದ ಸಂಸ್ಕೃತಿಯನ್ನು ಹೋಲುತ್ತವೆಯೇ ಹೊರತು ಏಷ್ಯದ ಪದ್ಧತಿಗಳಲ್ಲಿ ಸೇರಿಲ್ಲ ಎನ್ನುವುದನ್ನು ಥಾರ್ ಗಮನಿಸಿದ. ಹಳೇ ಅಮೆರಿಕದ ನಾಗರಿಕತೆಗಳ ಕಾಲದಲ್ಲಿ ಜನ ಪೂಜಿಸುತ್ತಿದ್ದ ಕಲ್ಲುಗಳಂಥದ್ದೇ ಶಿಲಾರಚನೆಗಳನ್ನು ಫಟು ಹಿವದ ಜನರೂ ಬಳಸುತ್ತಿದ್ದರು. ದೈಹಿಕ ಚರ್ಯೆಗಳಲ್ಲಿ ಮಾತ್ರವಲ್ಲ ಅವರು ನಡೆಸುವ ಹಲವು ಶಾಸ್ತ್ರವಿಧಿಗಳಲ್ಲಿ, ಕಟ್ಟುಪಾಡುಗಳಲ್ಲಿ ಅಮೆರಿಕದ ಇಂಕಾ ನಾಗರಿಕತೆಯ ಛಾಯೆಯೇ ಹೆಚ್ಚು ಕಾಣುತ್ತಿತ್ತು. ಒಂದು ದಿನ ಕಾಡುಜನರ ಜೊತೆ ಶಿಬಿರಾಗ್ನಿಯ ಬೆಂಕಿಯ ಬಳಿ ಕೂತು ರಾತ್ರಿ ಕಳೆಯುತ್ತಿದ್ದಾಗ, ಥಾರ್ನಿಗೆ ಅಲ್ಲಿನ ಹಿರಿಯನೊಬ್ಬ ಮಾತಿನ ಮಧ್ಯೆ ನಾವು ಬಂದಿದ್ದು ಮೂಡಣದ ಒಂದು ದೊಡ್ಡ ರಾಜ್ಯದಿಂದ ಮಗಾ! ನಮ್ ದೇವರು ಟಿಕಿ, ಅಲ್ಲಿಂದ ನಮ್ಮನ್ನು ಇಲ್ಲಿಗೆ ಕರಕೊಂಡು ಬಂದಾ! ಎಂದುಬಿಟ್ಟ.
ಮೊದಮೊದಲು ಥಾರ್ ಹೇಳಿದ್ದನ್ನು ಯಾರೂ ನಂಬುವ ಪರಿಸ್ಥಿತಿಯೇ ಇರಲಿಲ್ಲ. ಅವನು ಎಷ್ಟೆಲ್ಲ ಉದಾಹರಣೆಗಳನ್ನು ಕೊಟ್ಟು ಒಗ್ಗರಣೆ ಹಾಕಿ ಬರೆದರೂ ಅವನ ಸಿದ್ಧಾಂತವನ್ನು ನಂಬಿ ಪ್ರಕಟಿಸುವ, ಪುರಸ್ಕರಿಸುವ ಪತ್ರಿಕೆಗಳು ಇರಲೇ ಇಲ್ಲ. ಭೂಮಿಯ ಸುತ್ತ ಸೂರ್ಯ ತಿರುಗುತ್ತಾನೆ ಎಂದು ಯಾರಾದರೊಬ್ಬ ಹೊಸ ಥಿಯರಿ ಹಿಡಿದು ಬಂದರೆ ಎಂತಹ ಸ್ವಾಗತ ಸಿಗುತ್ತದೋ ಅಂತಹದ್ದೇ ಬಹುಮಾನ ಥಾರ್ ಹೈರ್ಡಾಲ್ನಿಗೂ ಸಿಕ್ಕಿತು. ಅಲ್ಲಯ್ಯ, ಆ ದ್ವೀಪಗಳು ಯಾವ ಊರಿಗೆ ಹತ್ತಿರ ಇರೋದು ಅನ್ನೋದನ್ನಾದರೂ ನೋಡಬಾರದ? ನೀನು ಹೇಳುವ ದಕ್ಷಿಣ ಅಮೆರಿಕಕ್ಕೂ ಅದಕ್ಕೂ ಇರುವ ಅಂತರವನ್ನು ನೋಡು. ಸುಮಾರು ನಾಲ್ಕೂವರೆ ಸಾವಿರ ಮೈಲಿ! ಅಷ್ಟೊಂದು ದೂರವನ್ನು ಆ ಪ್ರಾಚೀನ ಕಾಲದಲ್ಲಿ ಸ್ಟೀಮ್ ಇಂಜಿನ್ ಇಲ್ಲದೆ ದೋಣಿಗೀಣಿ ಬಳಸಿಕೊಂಡು ಬಂದರು ಎಂದರೆ ಯಾರಾದರೂ ನಗಲ್ವೇನಯ್ಯ? ಎಂದು ಗೆಳೆಯರು ಸಾಧ್ಯವಾದಷ್ಟು ಮನಃಪರಿವರ್ತನೆ ಮಾಡಿ ಥಾರ್ನನ್ನು ಸಹಜಸ್ಥಿತಿಗೆ ತರಲು ಯತ್ನಿಸಿದ್ದೂ ಆಯಿತು! ಯಾಕೆ ಸಾಧ್ಯವಿಲ್ಲ? ದಕ್ಷಿಣ ಅಮೆರಿಕದಿಂದ ಫ್ರೆಂಚ್ ಪಾಲಿನೇಷ್ಯಕ್ಕೆ ಹೋಗಲು ಸ್ಟೀಮ್ ಇಂಜಿನ್ ಇರೋ ಹಡಗು, ಡೀಸೆಲ್ ಇಂಜಿನ್ ಇರುವ ಬೋಟು ಇಂಥವೆಲ್ಲ ಯಾವುದೂ ಬೇಕಾಗಿಲ್ಲ. ಮೂರುಸಾವಿರ ವರ್ಷಗಳ ಹಿಂದೆ ಮನುಷ್ಯ ಎಂತಹ ದೋಣಿ ಬಳಸಿದ್ದನೋ ಅದನ್ನೇ ಇಟ್ಟುಕೊಂಡೂ ಈ ದೂರವನ್ನು ಕ್ರಮಿಸಬಹುದು. ಬೇಕಾದರೆ ನಾನೇ ಮಾಡಿ ತೋರಿಸುತ್ತೇನೆ ಅದನ್ನು! ಎಂದುಬಿಟ್ಟ ಥಾರ್. ಮನೆಯಲ್ಲಿ ಬಿರುಗಾಳಿ, ಸುನಾಮಿ ಒಟ್ಟಿಗೇ ಎದ್ದವು. ನಿನ್ನ ಹೆಣದ ಮುಂದೆ ಅಳುವ ಹೆತ್ತವರನ್ನು ನೆನೆಸಿಕೋ ಎಂದು ಗೆಳೆಯ ಹೇಳಿದ್ದು ಆಗಲೇ.
ಹಿಡಿದ ಹಠ
ಥಾರ್ ಹಠಮಾರಿ. ಜೊಗಟ. ಜಗಮೊಂಡ. ಆಗಬೇಕು ಅಂದರೆ ಆಗಲೇಬೇಕು, ಯಾಕಾಗೋದಿಲ್ಲ ಎನ್ನುವ ಮನುಷ್ಯ. ಸದಾ ಕೊತಕೊತ ಕುದಿವ ಬಿಸಿರಕ್ತದ ಪ್ರಾಣಿ. ಕುಡಿಯುವ ನೀರು ಮತ್ತು ಹೆಂಡ ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದ ಅಪ್ಪಯ್ಯನಿಗೆ ಇವನೊಬ್ಬನೇ ಮಗನಾದ್ದರಿಂದ, ಥಾರ್ನ ವಿಚಾರದಲ್ಲಿ ಕಾಳಜಿ-ಮಮತೆಗಳು ಸ್ವಲ್ಪ ಹೆಚ್ಚೇ ಸುರಿಯಲ್ಪಟ್ಟಿದ್ದವು. ಆದರೆ, ಅಂತಹ ಮಮಕಾರವನ್ನು ಥಾರ್ ಇಷ್ಟಪಡುತ್ತಿರಲಿಲ್ಲ. ಅವನೊಬ್ಬ ಸ್ವತಂತ್ರಜೀವಿ; ಸ್ವಚ್ಛಂದ ಹಕ್ಕಿ. ಅಪ್ಪ-ಅಮ್ಮನ ಕಾಳಜಿಯೆಂಬ ಬಂಧನ ತನ್ನ ಉಸಿರುಗಟ್ಟಿಸುತ್ತಿದೆ ಅನ್ನಿಸಿದಾಗ ಅವನು ಹೇಳದೆಕೇಳದೆ ಮನೆಯಿಂದ ಓಡಿಹೋಗಿಬಿಡುತ್ತಿದ್ದ! ಬಿರುಗಾಳಿ, ಅತಿವೃಷ್ಟಿಗಳಾದಾಗ ಮನೆಯಿಂದ ಹೊರಗೋಡಿ ನದಿ ಪಕ್ಕವೋ ಬೆಟ್ಟದ ತುದಿಯಲ್ಲೋ ಕೂರುತ್ತಿದ್ದ. ಮನೆಯಲ್ಲಿ ಗುಬ್ಬಚ್ಚಿಯಂತೆ ಬೆಚ್ಚಗೆ ಕೂರದಿದ್ದರೆ ನಾನೇನೂ ಸಾಯೋದಿಲ್ಲ ಎಂದು ಮನೆಯವರಿಗೆ ಮನವರಿಕೆ ಮಾಡಿಕೊಡಲೆಂದೇ ಹೊರಗಿನ ಬಯಲಲ್ಲಿ ಹಿಮದ ಮೇಲೆ ಮಲಗುತ್ತಿದ್ದ! ಇಂತಹ ವಿಚಿತ್ರಮಗುವನ್ನು ಸಂಭಾಳಿಸುವುದಾದರೂ ಹೇಗಪ್ಪಾ ಎಂದು ಹೆತ್ತವರಿಗೆ ಚಿಂತೆ ಹತ್ತಿಕೊಳ್ಳುತ್ತಿತ್ತು.
ಅಂತಹ ಥಾರ್, ಈಗ ದಕ್ಷಿಣ ಅಮೆರಿಕದಿಂದ ಹೊರಟು ನಾಲ್ಕೂವರೆ ಸಾವಿರ ಮೈಲಿ ಸಾಗರದಲ್ಲಿ ಕ್ರಮಿಸುತ್ತೇನೆ ಎಂದಾಗ ಯಾರಾದರೂ ಏನು ಹೇಳಬೇಕು? ನೀವು ಒಪ್ಪದಿದ್ದರೆ ಕತ್ತೇಬಾಲ, ನಾನು ಮಾಡುವುದನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿ ಥಾರ್ ಓಸ್ಲೋದಿಂದ ಪೆರುವಿಗೆ ಹೊರಟುನಿಂತ. ಜಗತ್ತಿನಲ್ಲಿ ಅವನ ಬೆಂಬಲಕ್ಕೆ ನಿಂತಿದ್ದವಳು ಅವನ ಹೆಂಡತಿ ಮಾತ್ರ! ಅವಳೊಡನೆ ಪೆರುವಿಗೆ ಬಂದಿಳಿದ ಥಾರ್, ತನ್ನ ಯೋಚನೆಯನ್ನು ಒಂದು ಜಾಹೀರಾತಿನಲ್ಲಿ ಬರೆದು ಪ್ರಚಾರ ಮಾಡಿದ. ಕೈಕಾಲು ಮತ್ತು ಮನಸ್ಸು ಗಟ್ಟಿಯಾಗಿರುವ, ನೂರಾರು ದಿನ ಸಮುದ್ರದ ನೀರಿನ ಮಧ್ಯೆ ಕಳೆಯಲು ತಯಾರಿರುವ, ಒಂದು ಹೊಸ ಸಿದ್ಧಾಂತವನ್ನು ಸತ್ಯವೆಂದು ತೋರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತಿಯಿರುವ ಮತ್ತು ಈಜಲು ಗೊತ್ತಿರುವ ಧೈರ್ಯಶಾಲಿಗಳು ಬೇಕಾಗಿದ್ದಾರೆ ಎಂಬ ಪ್ರಕಟಣೆ ಹೊರಬಿತ್ತು. ಇಷ್ಟೆಲ್ಲ ಕರಾರು ಹಾಕಿದ ಮಹರಾಯನಿಗೆ ಸ್ವತಃ ಈಜಲು ಬರುವುದಿಲ್ಲ ಎನ್ನುವ ಗುಟ್ಟು ಮಾತ್ರ ಯಾರಿಗೂ ಗೊತ್ತಿರಲಿಲ್ಲ! ಅಂತಹ ಜೀವಹೋಗುವ ಅಪಾಯ ಎದುರಾದರೆ, ಈಜು ಬಲ್ಲ ಸಂಗಡಿಗರು ತನ್ನನ್ನು ಈಚೆ ಎಳೆದು ಬದುಕಿಸುತ್ತಾರೆ ಎನ್ನುವುದು ಅವನ ಆಲೋಚನೆಯಾಗಿದ್ದಿರಬೇಕು! ಥಾರ್ನ ಅಜ್ಜಿಪುಣ್ಯಕ್ಕೆ ಅವನ ಕಂಡೀಷನ್ಗಳಿಗೆ ಸರಿಯಾಗಿ ಐದು ಜನ ಎಂಟೆದೆಯ ಭಂಟರು ಸಿಕ್ಕಿದರು. ಅವರನ್ನು ಕರೆದುಕೊಂಡು ಈಕ್ವೆಡಾರ್ ಎಂಬ ದೇಶದ ಕಾಡುಗಳಿಗೆ ಹೋಗಿ ಅಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಬಾಲ್ಸಾ ಎಂಬ ಮರದ ದಿಮ್ಮಿಗಳನ್ನು ತೆಗೆದುಕೊಂಡ. ಸುಮಾರು ಮೂರುಸಾವಿರ ವರ್ಷಗಳ ಹಿಂದೆ ಜನ ಸಮುದ್ರಕ್ಕೆ ಇಳಿಯಬೇಕಾದರೆ ಈ ಮರದ ದಿಮ್ಮಿಗಳನ್ನೇ ಬಳಸಿರಬೇಕು. ಯಾಕೆಂದರೆ ಸಾವಿರಾರು ವರ್ಷಗಳಿಂದ ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಮರ ಇದೊಂದೇ ಎನ್ನುವುದನ್ನು ಥಾರ್ ಅಧ್ಯಯನ ಮಾಡಿ ಖಚಿತಪಡಿಸಿಕೊಂಡಿದ್ದ. ಸರಿ, ಇನ್ನು ಅವುಗಳನ್ನು ಬಳಸಿ ದೋಣಿ ಕಟ್ಟುವುದು ಹೇಗೆ? ಗರಗಸ, ಉಳಿ, ಸುತ್ತಿಗೆ, ಮೊಳೆ – ಇವ್ಯಾವುವೂ ಇಲ್ಲದೆ; ಲೋಹಯುಗಕ್ಕೂ ಪೂರ್ವದ ಮನುಷ್ಯ ಹೇಗೆ ಕೆಲಸ ಮಾಡಿರಬಹುದೋ ಹಾಗೆಯೇ ದೋಣಿ ರಚಿಸಬೇಕೆಂದು ಕೂತ. ಬಾಲ್ಸಾ ಮರದ ಒಂಬತ್ತು ದಿಮ್ಮಿಗಳನ್ನು ಅಡ್ಡಕ್ಕೆ ಉದ್ದಕ್ಕೆ ಇಟ್ಟು ನಾರಿನ ಹಗ್ಗದಿಂದ ಅವುಗಳನ್ನು ಗಟ್ಟಿಯಾಗಿ ಬಿಗಿದು ‘ಶಿಲಾಯುಗದ ದೋಣಿ’ಯನ್ನು ನಿರ್ಮಿಸಲಾಯಿತು. ಈ ದೋಣಿಯಲ್ಲೇ ನಾವು ಶಾಂತಸಾಗರ ದಾಟಬೇಕು ಎಂದು ಹೇಳಿದಾಗ ಮಾತ್ರ ಸಹಪ್ರವಾಸಿಗಳಿಗೆ ಎದೆಬಡಿತ ನಿಂತಿರಬೇಕು!
ಯಾನದ ಆರಂಭ
ಕೊನೆಗೂ ಆ ೩೦ ಅಡಿ ಉದ್ದ, ೧೫ ಅಡಿ ಅಗಲದ ಪುಟ್ಟ, ಮರದ ದಿಮ್ಮಿಗಳ ದೋಣಿಯ ಮೇಲೆ ೧೯೪೭ರ ಏಪ್ರಿಲ್ ೨೮ರಂದು ಯಾನ ಪ್ರಾರಂಭವಾಯಿತು. ಪೆರುವಿನ ಕಲಾಒ ಎಂಬಲ್ಲಿಂದ ದೋಣಿ ನೆಲ ಬಿಟ್ಟು ನೀರಿಗಿಳಿಯಿತು. ಪ್ರಾಚೀನ ಮನುಷ್ಯರು ಹೇಗೆ ಪ್ರಯಾಣಿಸಿದರೋ ಹಾಗೆಯೇ ಕಡಲು ದಾಟಬೇಕೆಂದು ಹಠ ಹಿಡಿದಿದ್ದ ಥಾರ್ನ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಯಾನ ಹೊರಟವರಲ್ಲಿ ಹೆಚ್ಚುವರಿ ಎನ್ನಬಹುದಾದ ಯಾವ ಸಾಮಾನು-ಸೌಕರ್ಯಗಳೂ ಇರಲಿಲ್ಲ. ಯಾವ ಆಧುನಿಕ ಶಸ್ತ್ರಗಳನ್ನೂ ಅವರು ಇಟ್ಟುಕೊಂಡಿರಲಿಲ್ಲ! ಇಡೀ ಪ್ರಯಾಣದಲ್ಲಿ ಹತ್ತನೇ ಶತಮಾನದೀಚೆಗಿನ ವಸ್ತು ಎಂದು ಗುರುತಿಸಬಹುದಾದದ್ದು ಥಾರ್ ಬಳಿ ಇದ್ದ ರೇಡಿಯೋ ಮಾತ್ರ. ಇದನ್ನು ಅವರು ತಮ್ಮ ಪ್ರತಿದಿನದ ಪ್ರಯಾಣದ ವಿವರಗಳನ್ನು ಹೊರಜಗತ್ತಿಗೆ ತಿಳಿಸಲು ಬಳಸುತ್ತಿದ್ದರು. ಒಂದುವೇಳೆ ಅಪಾಯ ಎದುರಾದರೂ ಅವರನ್ನು ರಕ್ಷಿಸಲು ಜಗತ್ತಿನ ಬೇರೆ ಮೂಲೆಗಳಿಂದ ವಿಮಾನ ಅಥವಾ ಹಡಗುಗಳು ಧಾವಿಸಿಬರುವ ಸಾಧ್ಯತೆಯೂ ಇರಲಿಲ್ಲ! ಪ್ರಯಾಣದಲ್ಲಿ ಈ ಆರು ಜನರ ಬೇಸರ ಕಳೆಯಲು ಸ್ಪ್ಯಾನಿಶ್ ಮಾತಾಡುವ ಗಿಳಿಯೂ ಅವರ ಜೊತೆ ಯಾತ್ರೆ ಹೊರಟಿತ್ತು!
ದಾರಿ ಮಧ್ಯೆ ಎದುರಾದ ಗಂಡಾಂತರಗಳು ಒಂದೇ ಎರಡೇ? ಶಾಂತವಾಗಿದೆ ಎನ್ನಿಸುವ ಕಡಲು ಇದ್ದಕ್ಕಿದ್ದಂತೆ ಬುಸುಗುಡುತ್ತ ಚಂಡಮಾರುತಗಳನ್ನು ಎಬ್ಬಿಸಿಬಿಡುತ್ತಿತ್ತು. ಕೆಲವು ಸಲ ಶೀತಮಾರುತ ಬೀಸತೊಡಗಿತೆಂದರೆ ಒಂದೆರಡು ದಿನಗಳು ಕಳೆದರೂ ನಿಲ್ಲುವ ಸೂಚನೆಯನ್ನೇ ಕೊಡುತ್ತಿರಲಿಲ್ಲ. ಸಾಗರದ ನಡುಭಾಗದಲ್ಲಿ ಎಂತಹ ಹಡಗುಗಳನ್ನೂ ನುಂಗಿನೊಣೆಯುವ ಸುಳಿಗಳು ಮೊರೆಯುತ್ತಿದ್ದವು. ಕೆಲವು ದಿನ ದೋಣಿಯಲ್ಲಿ ಕೂತವರಿಗೆ ತಿನ್ನಲು ಏನೂ ಸಿಗದೆ ಉಪವಾಸ ಕೂಡಬೇಕಾಗುತ್ತಿತ್ತು. ಅದೃಷ್ಟ ನೆಟ್ಟಗಿದ್ದ ದಿನಗಳಲ್ಲಿ ರಾತ್ರಿಹೊತ್ತು ಹಾರುವ ಮೀನುಗಳು ಪುತಪುತನೆ ಬಂದು ದೋಣಿಯಲ್ಲಿ ಬಿದ್ದು ಮಿಸುಕಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದವು. ಆರು ಜನರಲ್ಲೇ ಒಬ್ಬ ಆವೊತ್ತು ಬಾಣಸಿಗನಾಗಿ ಉಳಿದವರಿಗೆ ರುಚಿಕಟ್ಟಾದ ಮೀನಿನ ಊಟ ಮಾಡಿ ಬಡಿಸುತ್ತಿದ್ದ. ಅವರ ಕೈಯಲ್ಲಿ ಜಿಪಿಎಸ್ ಬಿಡಿ, ದಿಕ್ಸೂಚಿ ಕೂಡ ಇರಲಿಲ್ಲವಾದ್ದರಿಂದ, ಒಂದೋ ಹಗಲು ಸೂರ್ಯನ ಚಲನೆಯನ್ನು ನೋಡಿ; ಇಲ್ಲವೇ ರಾತ್ರಿ ನಕ್ಷತ್ರಗಳ ಸ್ಥಾನ ಗಮನಿಸಿ ದಿಕ್ಕು ತಿಳಿಯಬೇಕಾಗಿತ್ತು. ಕೆಲವು ಸಲ, ಬಿರುಗಾಳಿಯೋ ಬೀಸುಗಾಳಿಯೋ ದೋಣಿಯ ದಿಕ್ಕು ತಪ್ಪಿಸಿ, ತಪ್ಪುದಾರಿಯಲ್ಲಿ ಒಂದೆರಡು ಮೈಲಿ ಓಡಿಸುತ್ತಿದ್ದದ್ದೂ ಉಂಟು. ಆಗೆಲ್ಲ, ಥಾರ್ ಮತ್ತು ಸಂಗಡಿಗರು ಗಾಳಿಯ ರುದ್ರಾವತಾರ ಶಮನವಾಗುವವರೆಗೂ ಕಾದು ಆಮೇಲೆ ದೋಣಿಯನ್ನು ವಾಪಸು ಚಲಾಯಿಸಿಕೊಂಡು ಬರಬೇಕಾಗುತ್ತಿತ್ತು. ಒಂದು ದಿನ ಈ ಸಾಹಸಿಗಳಲ್ಲಿ ಒಬ್ಬನಾಗಿದ್ದ ನಟ್ ಹೌಲಾಂಡ್ (Knut Hougland) ಎಂಬವನು ಕೈತೊಳೆಯಲಿಕ್ಕೆಂದು ದೋಣಿಯ ಅಂಚಲ್ಲಿ ಕೂತು ಕೆಳಗೆ ಬಗ್ಗಿದ್ದನಷ್ಟೆ; ಕೆಳಗೆ ನೀರಿನ ತಟ್ಟೆಯಲ್ಲಿ ಐದು ಅಡಿಗಳಷ್ಟು ಉದ್ದದ ದೊಡ್ಡ ಬೆಳ್ಳನೆ ಗರಗಸವೊಂದು ಕಿಸಕ್ಕನೆ ಅಲುಗಿದಂತಾಯಿತು. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲೇ ಆ ಉದ್ದನೆ ಗರಗಸ ನೀರಿಂದ ಹೊರಬಂದು ದೋಣಿಯತ್ತ ಚಾಚಿಕೊಂಡಿತು! ಉಗುರು ಕಿತ್ತ ಹುಲಿ ಬೇಟೆಗೆ ಹೊರಟಂತೆ, ಯಾವ ಕತ್ತಿ-ಕುಡುಗೋಲನ್ನೂ ಇಟ್ಟುಕೊಳ್ಳದೆ ಸಾಗರಕ್ಕೆ ಇಳಿದಿದ್ದ ಸಾಹಸಿಗಳಿಗೆ ಇದೊಂದು ತಿಮಿಂಗಿಲ ಗಾತ್ರದ ಶಾರ್ಕ್ಮೀನು ಎನ್ನುವುದನ್ನು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ. ಮೂವತ್ತು ಅಡಿ ಉದ್ದದ ಆ ದೈತ್ಯ ಶಾರ್ಕ್ಮೀನು, ದೇವರೇ ತಟ್ಟೆಯಲ್ಲಿ ಮುದ್ದೆ-ಸಾರು ಇಟ್ಟು ಊಟ ಕಳಿಸಿದರೆಂದು ಖುಷಿಯಾಗಿರಬೇಕು. ಒಂದೇ ಸವನೆ ದೋಣಿಯನ್ನು ಹಿಗ್ಗಾಮುಗ್ಗಾ ಎಳೆದಾಡಲು ಶುರುಮಾಡಿತು. ಸುಮಾರು ಒಂದು ಗಂಟೆ ಆ ದೈತ್ಯನೊಡನೆ ಏಗಿ ಇವರೂ ಸಾಕಷ್ಟು ಬೆವರಿಳಿಸಿದರು. ಕೊನೆಗೆ, ಅದಕ್ಕೆ ಈ ದೋಣಿಗಿಂತ ರುಚಿಕಟ್ಟಾದ ಬೇರಾವುದೋ ಭಕ್ಷ್ಯ ಸಿಕ್ಕಿರಬೇಕು; ಇವರನ್ನು ಬಿಟ್ಟು ಹೊರಟುಹೋಯಿತು. ನಡುದಾರಿಯಲ್ಲಿ ಹೀಗೆ ಕೃಷ್ಣಾರ್ಪಣವಾಗಲಿದ್ದ ಯಾತ್ರೆ ಆಮೇಲೆ ನಿರಾತಂಕವಾಗಿ ಮುಂದುವರಿಯಿತು.
ಹೊಸ ದಾಖಲೆ
ಒಟ್ಟು ೪೩೦೦ ನೌಟಿಕಲ್ ಮೈಲಿಗಳನ್ನು ಕ್ರಮಿಸಲು ಥಾರ್ನ ದೋಣಿ ೧೦೧ ದಿನಗಳನ್ನು ತೆಗೆದುಕೊಂಡಿತು. ಅಷ್ಟು ದೀರ್ಘ ಸಾಗರಯಾನ ಮಾಡಿ ಬಳಲಿ ಬೆಂದ ಬೆಂಡೇಕಾಯಿಯಾಗಿದ್ದ ನಾವಿಕರು ಕೊನೆಗೂ ಒಂದು ದಿನ ದೂರದಲ್ಲಿ ತಾಳೆಮರಗಳು ತೊನೆದಾಡುವುದನ್ನು ನೋಡಿ ಕುಣಿದು ಕುಪ್ಪಳಿಸಿದರು. ನೋಡಿದ್ದೇನೋ ಸರಿ, ಆದರೆ ಆ ಭೂಭಾಗವನ್ನು ಮುಟ್ಟಲಿಕ್ಕೇ ಮೂರ್ನಾಲ್ಕು ದಿನಗಳು ಬೇಕಾದವು. ದೂರದ ಪೆರುವಿನಿಂದ ಹೊರಟ ದೋಣಿ ಅಂತೂ ಇಂತೂ ಆ ವರ್ಷದ ಆಗಸ್ಟ್ ೭ರಂದು ಫ್ರೆಂಚ್ ಪಾಲಿನೇಷ್ಯ ದ್ವೀಪಸಮೂಹದ ಒಂದು ಭಾಗವಾಗ ತಹಿತಿ ಎಂಬ ದ್ವೀಪವನ್ನು ಮುಟ್ಟಿತು. ದಿನಕ್ಕೆ ಸರಾಸರಿ ೪೨.೫ ಮೈಲಿನಂತೆ ಕ್ರಮಿಸುತ್ತ ಒಟ್ಟು ನೂರೊಂದು ದಿನಗಳಲ್ಲಿ ೪೩೦೦ ನೌಟಿಕಲ್ ಮೈಲಿಗಳನ್ನು ಕ್ರಮಿಸಿ, ಅದೂ ಮೂರುಸಾವಿರ ವರ್ಷಗಳ ಹಿಂದೆ ಹೇಗಿತ್ತೋ ಅಂಥಾದ್ದೇ ಕಚ್ಚಾದೋಣಿಯಲ್ಲಿ ಸಾಗಿ, ಥಾರ್ ಹೈರ್ಡಾಲ್ ಹೊಸ ವಿಶ್ವದಾಖಲೆ ನಿರ್ಮಿಸಿದ. ದಕ್ಷಿಣ ಅಮೆರಿಕದ ಮೂಲಜನಾಂಗ ಇದೇ ಬಗೆಯ ಯಾತ್ರೆ ಮಾಡಿ ಆಸ್ಟ್ರೇಲಿಯದ ಪಕ್ಕದಲ್ಲಿರುವ ದ್ವೀಪಗಳಿಗೆ ವಲಸೆ ಬಂದಿರುವ ಸಾಧ್ಯತೆ ಇದೆ. ಇದೇ ಪುರಾವೆ ಎಂದು ಥಾರ್ ತನ್ನ ವಾದವನ್ನು ಬಲವಾಗಿ ಸಮರ್ಥಿಸಿಕೊಂಡ. ಇದು, ಆ ವಾದಕ್ಕೆ ಸಮರ್ಥನೆಯಾದೀತೇ ಹೊರತು ಪುರಾವೆಯಾಗುವುದಿಲ್ಲ. ಹೀಗೂ ನಡೆದಿರಬಹುದು ಎಂಬ ಸಾಧ್ಯತೆಗೆ ನಿನ್ನ ಯಾತ್ರೆ ಬಲ ಕೊಡುತ್ತದೆ ಹೊರತು, ಹೀಗೆಯೇ ನಡೆದಿರುತ್ತದೆ ಎಂದು ಖಚಿತವಾಗಿ ಹೇಳಲು ಈ ಉದಾಹರಣೆ ಸಾಕಾಗುವುದಿಲ್ಲ ಎಂದು ಇತಿಹಾಸತಜ್ಞರು ಹೇಳಿದರು. ಒಪ್ಪುವ ಮಾತೇ.
ತನ್ನ ಯಾತ್ರೆಯ ವಿಶೇಷಗಳನ್ನು ರಸವತ್ತಾಗಿ ವರ್ಣಿಸಿ ಥಾರ್, ‘ಕೊನ್-ಟಿಕಿ’ (Kon-Tiki) ಎಂಬ ಹೆಸರಿನ ಒಂದು ಪುಸ್ತಕ ಬರೆದ. ಅವನು ಪೆರುವಿನಿಂದ ತಹಿತಿಯವರೆಗೆ ಸಾಗಿದ ದೋಣಿಗೆ ಕೊನ್-ಟಿಕಿ (ಅಂದರೆ, ಟಿಕಿಯ ದೋಣಿ) ಎಂದು ನಾಮಕರಣ ಮಾಡಿದ್ದ. ಈ ಪುಸ್ತಕ ಕೆಲವೇ ವರ್ಷಗಳಲ್ಲಿ ಜಗತ್ಪ್ರಸಿದ್ಧವಾಗಿ ‘ಬೆಸ್ಟ್ ಸೆಲ್ಲರ್’ಗಳ ಪಟ್ಟಿಗೆ ಸೇರ್ಪಡೆಯಾಯಿತು. ಅವನು ಬಳಸಿದ್ದ ಕೊನ್-ಟಿಕಿಯನ್ನು ಜಾಗ್ರತೆಯಿಂದ ತೆಗೆದುಕೊಂಡು ಹೋಗಿ, ಓಸ್ಲೋದ ಸಂಗ್ರಹಾಲಯದಲ್ಲಿಡಲಾಯಿತು. ಥಾರ್ನ ಸಾಹಸಗಾಥೆಯಿಂದ ಪ್ರಭಾವಿತರಾದ ಹಾಲಿವುಡ್ನ ಮಂದಿ ‘ಕೊನ್-ಟಿಕಿ’ ಎಂಬ ಹೆಸರಲ್ಲೇ ಒಂದು ಡಾಕ್ಯುಮೆಂಟರಿಯನ್ನೂ ತೆಗೆದರು. ಅದಕ್ಕೆ ೧೯೫೧ರ ಆಸ್ಕರ್ ಪ್ರಶಸ್ತಿ ಕೂಡ ಬಂತು.
ಅರ್ಪಿತ ಬದುಕು
ಫ್ರೆಂಚ್ ಪಾಲಿನೇಷ್ಯದ ದ್ವೀಪಗಳಿಗೆ ಜನ ಬಂದದ್ದು ಅಮೆರಿಕದಿಂದಲೇ ಎಂಬ ವಾದವನ್ನು ಅವನು ಕೊನೆಯವರೆಗೂ ಸಾಧಿಸಿದ. ಕ್ರಿ.ಶ. ೫೦೦ರ ಸುಮಾರಿಗೆ ಮೊದಲ ತಂಡ ಬಂತು. ಇವರು ಪೆರುವಿನಲ್ಲಿ ಇಂಕಾ ನಾಗರಿಕತೆ ಬೆಳೆದುನಿಲ್ಲುವ ಮೊದಲೇ ಸಾಗರಯಾನ ಮಾಡಿ ಇತ್ತ ಬಂದವರು. ಅದಾಗಿ ಐನೂರು ವರ್ಷಗಳು ಕಳೆದ ಮೇಲೆ ಎರಡನೆ ಗುಂಪು ದಕ್ಷಿಣ ಅಮೆರಿಕದಿಂದ ಬಂತು ಎನ್ನುವುದು ಥಾರ್ನ ವಾದವಾಗಿತ್ತು. ಈ ಮಹಾಯಾನ ಮಾಡಿದ ಮೇಲೆ ಥಾರ್ ಸಂಪೂರ್ಣವಾಗಿ ಮನುಷ್ಯನಾಗರಿಕತೆಗಳ ಅಧ್ಯಯನಕ್ಕೆ ತನ್ನನ್ನು ಸಮರ್ಪಿಸಿಕೊಂಡ. ಹತ್ತುಹಲವು ಕೊನ್-ಟಿಕಿ ಬಗೆಯ ಯಾತ್ರೆಗಳನ್ನು ಆಯೋಜಿಸಿದ. ಅದುವರೆಗೆ ಇತಿಹಾಸತಜ್ಞರು ನಂಬಿದ್ದ ಹಲವು ನಂಬಿಕೆಗಳನ್ನು ಬುಡಮೇಲು ಮಾಡುವ ಪ್ರಯೋಗಗಳನ್ನು ನಡೆಸಿದ. ಉಳಿದವರು ಅಸಾಧ್ಯ ಎಂದು ಬದಿಗಿಟ್ಟದ್ದನ್ನು ಎತ್ತಿಕೊಂಡು ಸಾಧ್ಯ ಎಂದು ತೋರಿಸಿದ. ಈಸ್ಟರ್, ಗಲಾಪಗೋಸ್ ಮುಂತಾದ ದ್ವೀಪಗಳಲ್ಲಿ ನಾಗರಿಕತೆಯ ಬಗ್ಗೆ ಆಳವಾದ ಸಂಶೋಧನೆಗಳನ್ನು ಮಾಡಿದ. ಅಟ್ಲಾಂಟಿಕ್ ಮತ್ತು ಹಿಂದೂ ಸಾಗರಗಳಲ್ಲೂ ದೋಣಿ ನಡೆಸಿದ. ತನ್ನ ಸಂಶೋಧನೆಗಳ ಆಧಾರದಲ್ಲಿ ಅವನು ಬರೆದ ಮೂರ್ನಾಲ್ಕು ಪುಸ್ತಕಗಳು ಪ್ರಸಿದ್ಧಿ ಪಡೆದವು. ಅವನ ಯಾತ್ರೆಗಳನ್ನೇ ಆಧಾರವಾಗಿಟ್ಟುಕೊಂಡು ಹಲವು ಸಿನಿಮಾಗಳು ಬಂದವು. ೨೦೦೨ರ ಏಪ್ರಿಲ್ ೧೮ರಂದು ಮಿದುಳಿನ ಕ್ಯಾನ್ಸರಿಗೆ ಬಲಿಯಾಗಿ ಅಸುನೀಗುವವರೆಗೂ ಥಾರ್ ಆಲಸ್ಯ-ಆಯಾಸಗಳಿಂದ ವಿರಮಿಸಿದ್ದಕ್ಕೆ ದಾಖಲೆಯೇ ಇಲ್ಲ. ಸಾಯುವ ಒಂದು ವರ್ಷದ ಹಿಂದೆ, ತನ್ನ ೮೬ನೇ ವಯಸ್ಸಿನಲ್ಲೂ ಅವನು ತನ್ನದೊಂದು ಸಿದ್ಧಾಂತವನ್ನು ಸಾಬೀತುಪಡಿಸಲಿಕ್ಕಾಗಿ ಮಧ್ಯ ರಷ್ಯದ ಕೊರೆಯುವ ಚಳಿಯಲ್ಲಿ ಪಾದಯಾತ್ರೆ ಮಾಡಿಬಂದಿದ್ದ!
ಮನುಷ್ಯನ ನಾಗರಿಕತೆಯ ಕತೆ ಭರಪೂರ ಸಾಹಸ-ಸಾಧನೆಗಳು ತುಂಬಿದ ಆಕ್ಷನ್ ಸಿನಿಮಾ ಇದ್ದಹಾಗೆ. ಮನುಷ್ಯ ಯಾವತ್ತೂ ಸಮಸ್ಯೆಗಳಿಗೆ ಹೆದರಿಲ್ಲ; ಸಾಗರದಂತಹ ಸವಾಲನ್ನೂ ಎದುರಿಸಿ ಮುನ್ನಡೆದಿದ್ದಾನೆ. ಜಗತ್ತಿನ ತುಂಬ ಚೆದರಿಹೋಗಿರುವ ಮಾನವಜನಾಂಗವೇ ಇದಕ್ಕೆ ಸಾಕ್ಷಿ. ಸಾಹಸ ಮೆರೆಯಬೇಕು ಎನಿಸಿದಾಗ, ಅವನು ಯಾವುದನ್ನೂ ಲೆಕ್ಕಿಸದೆ ಮುನ್ನುಗ್ಗಿದ್ದಾನೆ. ಹಾಗೆ ಮುನ್ನುಗ್ಗಲು ಬೇಕಾದ ಯಾವುದೋ ಅಮೂರ್ತಶಕ್ತಿಯನ್ನು ಪ್ರಕೃತಿ ಮನುಷ್ಯನ ಗುಂಡಿಗೆಯಲ್ಲಿಟ್ಟಿದೆ ಎಂದು ಥಾರ್ ಹೇಳುತ್ತಿದ್ದ. ನಿಜ ಇರಬಹುದು; ಇಲ್ಲವಾದರೆ ಈಜು ಬರದಿದ್ದರೂ ಅಖಂಡ ಶಾಂತಸಾಗರದ ಮೇಲೆ ಮಹಾಯಾನ ಹೊರಡಲು ಅವನಿಗೆ ಪ್ರೇರಣೆ ಬಂದದ್ದೆಲ್ಲಿಂದ?
inspiring story