ಸರಕಾರ, ಪೋಷಕರು ಶಿಕ್ಷಣಮಾಧ್ಯಮ ಕನ್ನಡ ಆಗುವಂತೆ ಮಾಡಲಾರರು ಎಂದುಕೊಳ್ಳುವಾಗ ಅಭಿಮಾನಿ ಕನ್ನಡಿಗರಿಗೆ ಹೊಸ ಆಸೆ ಮೂಡುವಂತೆ ಆದುದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತೃಭಾಷೆಯಲ್ಲಿನ ಶಿಕ್ಷಣದ ಪರವಾಗಿ ನಿರ್ಣಯ ಕೈಗೊಂಡ ಮೇಲೆ. ಇದನ್ನು ಅವರು ತಾರ್ಕಿಕ ಅಂತ್ಯ ಮುಟ್ಟುವಂತೆ ಮಾಡದೆ ಇರುವುದಿಲ್ಲ ಎಂಬ ಭಾವನೆ ಎಲ್ಲರಲ್ಲೂ ಇದೆ.
ರವೀಂದ್ರನಾಥ ಠಾಕೂರರು ‘ನಮ್ಮ ಶಾಲೆ ಒಂದು ಕಾರ್ಖಾನೆಯೇ ಸರಿ. ಹತ್ತೂವರೆಯಿಂದ ಶಿಕ್ಷಕರು ಮಾತನಾಡತೊಡಗಿದರೆ ಯಂತ್ರಗಳು ತಮ್ಮ ಕೆಲಸ ಮಾಡತೊಡಗುತ್ತವೆ, ನಾಲ್ಕೂವರೆಗೆ ಅವರು ಸಂಭಾಷಣೆ ನಿಲ್ಲಿಸಿದೊಡನೆ ಯಂತ್ರಗಳು ತಾವು ಕಲಿತ ಕೆಲವು ಪುಟಗಳೊಡನೆ ಮನೆಯ ಹಾದಿ ಹಿಡಿಯುತ್ತಾರೆ. ಕೆಲ ದಿನಗಳ ತರುವಾಯ ಚೀಟಿಯನ್ನು ಅವರ ಹಣೆಗೆ ಹಚ್ಚಲಾಗುತ್ತದೆ’ ಎನ್ನುತ್ತಾರೆ. ಅವರ ಪ್ರಕಾರ ಶಾಲೆಗಳು ಸಮಾಜದ ಸಮಗ್ರತೆಯ ಅಂಶವಾಗಿರದೆ ಹೊರಗಿನಿಂದ ಅದರ ಮೇಲೆ ತಂದು ಹೇರಿದವುಗಳಾಗಿವೆ. ಅವು ಕಲಿಸುವ ಅಭ್ಯಾಸಕ್ರಮಗಳು ರಸಹೀನವೂ ಕಲಿಯಲು ಕಷ್ಟಕರವೂ ಆಗಿದ್ದು, ಕಲಿತಮೇಲೆಯೂ ನಿರುಪಯೋಗಿಯಾಗಿವೆ. ಇಂಗ್ಲಿಷ್ ಮಾದರಿಗಳು ನಮ್ಮ ದೃಷ್ಟಿ ವಿಸ್ತಾರವನ್ನೆಲ್ಲ ಅಪಹರಿಸುವುದಲ್ಲದೆ ನಮ್ಮ ದೇಶ ಪಡೆದ ಸಿದ್ಧಿಗಳನ್ನೂ ಮಂಕುಗೊಳಿಸುತ್ತವೆ. ಠಾಕೂರರ, ಅಂತಹ ಇತರರ ಮಾತು, ಪ್ರಯೋಗಗಳಿಗೆ ಬೆಲೆ ನೀಡದೆ ಈ ಮಾದರಿಯನ್ನೆ ನಾವು ಉಳಿಸಿಕೊಂಡೆವು.
ಇದರ ಜೊತೆಯಲ್ಲಿ ಶಿಕ್ಷಣ ಮಾಧ್ಯಮವೂ ಇಂಗ್ಲಿಷ್ ಆಗಿದ್ದರೆ, ಮಗುವಿನ ಸಂಕಟಕ್ಕೆ ಹೊಸ ಆಯಾಮವೇ ದೊರೆಯುತ್ತದೆ. ಭಾಷೆ ಎಂಬುದು ಸಂವಹನದ ಮಾಧ್ಯಮ ಮಾತ್ರವೇ ಅಲ್ಲ, ಸಂಸ್ಕೃತಿ ಮತ್ತು ಮೌಲ್ಯಯುತ ವ್ಯವಸ್ಥೆಯನ್ನು ಪರಿಚಯಿಸುವ ಸಾಧನವಾಗಿದೆ. ತಾನು, ಸುತ್ತಲಿನವರು ಮಾತನಾಡುವ, ಭಾವಿಸುವ ಭಾಷೆಗಿಂತ ಭಿನ್ನವಾದ ಭಾಷೆಯನ್ನೂ, ಅದರಲ್ಲಿ ಹಲವು ವಿಷಯಗಳನ್ನೂ ಕಲಿಯಬೇಕಾದಾಗ ಮಗು ಅನುಭವಿಸುವ ಕಷ್ಟಕ್ಕೆ ಕೊನೆ ಇಲ್ಲ. ತಾನು ಏಕೆ ಇವನ್ನು ಕಲಿಯಬೇಕು ಎಂದು ಅರ್ಥವಾಗದ ಸಂದಿಗ್ಧತೆಯ ಜತೆ ತಾಯಿಯೂ ಸೇರಿ ಸುತ್ತಣ ಎಲ್ಲರೂ ಓದು ಓದು ಎಂದು ಒತ್ತಡ ಹಾಕುವುದು ಹಿಂಸೆ ಎನ್ನಿಸುತ್ತದೆ. ಮಾತೃಭಾಷೆಯ ನಿರಾಳತೆಯ ಸ್ವಾತಂತ್ರ್ಯವು ಮಗುವಿನಲ್ಲಿ ಆಸಕ್ತಿ, ಉತ್ಸಾಹ ಹಾಗೂ ಸಂಭ್ರಮಗಳನ್ನು ತಂದಿತ್ತರೆ, ಇಂಗ್ಲಿಷ್ ಅದನ್ನು ಮೌನಿ ಹಾಗೂ ದುಃಖಿಯನ್ನಾಗಿಸುತ್ತದೆ. ಕೆಲವು ಪಾಲಕರಂತೂ ಕನ್ನಡದ ಬಳಕೆಗೆ ಅವಕಾಶವೇ ಇಲ್ಲದಂತೆ ಮಾಡಿ, ಆ ಸ್ವಾತಂತ್ರ್ಯವನ್ನೆ ಕಿತ್ತುಕೊಳ್ಳುತ್ತಾರೆ.
ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಮಗುವಿಗೆ ಕಲಿಸುವುದು ನಿಂತಿದೆ. ‘ಮನೆಯೆ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರುವು; ಜನನಿಯಿಂದ ಪಾಠ ಕಲಿತ ಜನರೆ ಧನ್ಯರು’ ಎಂಬ ಸುಭಾಷಿತಕ್ಕೆ ಈಗ ಅರ್ಥವೇ ಉಳಿದಿಲ್ಲ. ಪ್ಲೇಹೋಂ, ನರ್ಸರಿಗಳೆಲ್ಲ ಈಗ ಇಂಗ್ಲಿಷ್ ಮಾಧ್ಯಮ ಎಂದು ಬೋರ್ಡ್ ಹಾಕಿಕೊಂಡಿವೆ! ತಾಯಿಗೆ ಇಂಗ್ಲಿಷ್ ಬರದಿದ್ದರೂ, ಮಗು ಅದರಲ್ಲಿ ಪ್ರವೀಣನಾಗಬೇಕೆಂದು ಎಲ್ಕೆಜಿಯಿಂದಲೇ ಟ್ಯೂಷನ್ಗೆ ಕಳಿಸುವ ಸಂಪ್ರದಾಯ ಬಂದುಬಿಟ್ಟಿದೆ. ತಾಯಿಯನ್ನೇ ಅವಲಂಬಿಸಿದ ಮಗು ಎಳೆತನದಲ್ಲೇ ಪರಕೀಯರ ದಬ್ಬಾಳಿಕೆಗೆ ಒಳಗಾಗಿ ಅಕ್ಷರವಿದ್ಯೆಯ ಬಗೆಗೆ, ಒತ್ತಡ ಹಾಕುವ ತಂದೆ-ತಾಯಿಯರ ಬಗೆಗೆ ದ್ವೇಷ ಬೆಳೆಸಿಕೊಳ್ಳುತ್ತದೆ. ಮುಂದೆ ಓದುವುದನ್ನೇ ಬಿಟ್ಟುಬಿಡುವ ದಂಗೆಯ ಮನೋಭಾವ ತಾಳುತ್ತದೆ. ಮಾನವ ತನ್ನ ಮೊದಲ ಐದು ವರ್ಷಗಳಲ್ಲೇ ಪರಿಸರದಿಂದ ಪ್ರತಿಶತ ತೊಂಬತ್ತೈದರಷ್ಟು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವನು; ಈ ಅವಧಿಯಲ್ಲಿ ಅವನ ಸುಪ್ತಮನಸ್ಸು ಕಂಡೀಷನ್ಡ್ ಆಗಿ, ಆ ರೂಢಿಯಾದ ಕಟ್ಟುಪಾಡುಗಳಿಗೊಳಪಟ್ಟು ಉಳಿದ ಜೀವನವನ್ನು ಕಳೆಯುವನು ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಐದು ವರ್ಷದ ವರೆಗೆ ನಮ್ಮ ಮಕ್ಕಳು ಹೇಗೆ ಬೆಳೆಯುತ್ತಾರೆ ಎಂಬುದನ್ನು ಪರಿಭಾವಿಸಿದರೆ, ನಮ್ಮ ಸಮಾಜ ಹೇಗೆ ಬದಲಾಗುತ್ತಿದೆಯಲ್ಲ ಎಂದು ದುಃಖವಾಗುತ್ತದೆ. ನರ್ಸರಿ ಶಾಲೆಗಳಲ್ಲಿ ಮಗುವನ್ನು ಕರೆತರುವ, ಕರೆದುಕೊಂಡುಹೋಗುವ ಅವಧಿ ಬಿಟ್ಟರೆ ಉಳಿದಂತೆ ಪೋಷಕರಿಗೆ ಪ್ರವೇಶವೇ ಇಲ್ಲ. ಕಾರಣ, ಬೆರಳು ಬಲಿತಿರದ ಮಕ್ಕಳಿಗೆ ಪೋಷಕರ ಒತ್ತಾಯದಂತೆ ಇಂಗ್ಲಿಷ್ ಬರವಣಿಗೆ ಕಲಿಸಲು ಘೋರ ಶಿಕ್ಷೆ ನೀಡಲಾಗುತ್ತಿರುತ್ತದೆ! ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರದಿರಲು ಇಂಗ್ಲಿಷ್ ನರ್ಸರಿ ಶಾಲೆಗಳೂ ಒಂದು ಕಾರಣ. ಎಳೆತನದಲ್ಲೆ ಅವು ಮಕ್ಕಳನ್ನು ಹಿಡಿದುಕೊಳ್ಳುತ್ತವೆ.
ಸ್ವಯಂಕೃತಾಪರಾಧ
ಇಡೀ ಸಮಾಜವೇ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಎಷ್ಟು ಹಣವಾದರೂ ತೆತ್ತು ಸೇರಿಸಲು ತುದಿಗಾಲಿನಲ್ಲಿ ನಿಂತಿರುವಾಗ, ದೇವನೂರ ಮಹಾದೇವರವರಂತಹವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನಿರಾಕರಿಸಿ, ಕನ್ನಡ ಮಾಧ್ಯಮಕ್ಕಾಗಿ ದನಿ ಎತ್ತಿದರೆ ಏನು ಪ್ರಯೋಜನ? ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಒಡೆಯರುಗಳಾದ ಮಂತ್ರಿಗಳು ಹಲವರನ್ನು ಹೊಂದಿರುವ ಸರಕಾರ ಸುಮ್ಮನೆ ಪ್ರಚಾರಕ್ಕಾಗಿ ಕನ್ನಡ ಮಾಧ್ಯಮದ ಬಗ್ಗೆ ಮಾತನಾಡುತ್ತಿದೆಯೇನೋ ಅನ್ನಿಸುತ್ತದೆ. ೧೯೮೯ರಲ್ಲಿ ಕನ್ನಡ ಕಡ್ಡಾಯಕ್ಕೆ ಹೈಕೋರ್ಟು ಒಪ್ಪಿಗೆ ನೀಡಿತ್ತು; ೧೯೯೯ರಲ್ಲಿ ಸುಪ್ರೀಂಕೋರ್ಟು ಮಾತೃಭಾಷಾ ಮಾಧ್ಯಮ ಕಡ್ಡಾಯ ಎಂದು ತೀರ್ಪು ನೀಡಿತ್ತು. ಇವರು ಮಾಡಿದ್ದೇನು? ಸಿಬಿಎಸ್ಸಿ ಶಾಲೆಗಳನ್ನು ತೆಗೆಯಲು ಅನುಮತಿ ನೀಡಿದರು; ಕನ್ನಡಶಾಲೆ ಎಂದು ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ತರಗತಿ ನಡೆಸಿದರೆ ಮಾನ್ಯತೆ ರದ್ದು ಮಾಡಲಿಲ್ಲ. (ಮಾನ್ಯತೆ ರದ್ದು ಎಂದರೆ ಇಡೀ ಶಾಲೆಯ ಮಾನ್ಯತೆ ರದ್ದು ಮಾಡದೆ ಮೊದಲ ವರ್ಷಕ್ಕೆ ಮಕ್ಕಳನ್ನು ಸೇರಿಸುವಂತಿಲ್ಲ ಎಂದು ಕಾನೂನು ಮಾಡಿದ್ದರೆ ಸಾಕಿತ್ತು.) ಈಗ ಮಾತೃಭಾಷೆ – ರಾಜ್ಯಭಾಷೆಗಳ ಗೊಂದಲದಲ್ಲಿ ಸುಪ್ರೀಂಕೋರ್ಟು ಪೋಷಕರಿಗೆ ನೀಡಿದ ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆಯ ಹಕ್ಕು ಇವರಿಗೆಲ್ಲ ಒಳಗೊಳಗೇ ಖುಷಿ ತಂದಿರಬೇಕು. ಇತರ ರಾಜ್ಯಗಳ ಜತೆ ಚರ್ಚಿಸಿ, ಸ್ಥಳೀಯ ಭಾಷೆ ಮಾಧ್ಯಮವಾಗುವಂತೆ ರಾಷ್ಟ್ರೀಯ ನೀತಿ ರೂಪಿಸಿ, ಸಂವಿಧಾನ ತಿದ್ದುಪಡಿ ತರಲು ಒತ್ತಾಯಿಸುವುದನ್ನು ಬಿಟ್ಟು ಕಾನೂನು ಮಾಡಿದರೆ ಪ್ರಯೋಜನವೇನು? ಖಾಸಗಿ ಶಾಲೆಗಳವರು ನ್ಯಾಯಾಲಯದಲ್ಲಿ ಪ್ರಶ್ನಿಸಿ, ಯಥಾಸ್ಥಿತಿ ತರುವುದಿಲ್ಲವೆ? ಅನಂತರ ಕೋರ್ಟ್ ಆದೇಶ ನಮ್ಮನ್ನು ಕಟ್ಟಿಹಾಕಿದೆ ಎಂದು ಉತ್ತರನ ಪೌರುಷ ತೋರುವುದು ಸರಕಾರಕ್ಕೆ ಗೌರವ ತಾರದು.
ವಿದೇಶಗಳಲ್ಲಿ ಇರುವಂತೆ ನೆರೆಹೊರೆ ಶಾಲೆಯ ಕಲ್ಪನೆಯನ್ನು ಇಲ್ಲೂ ತಂದು, ಒಂದು ಶಾಲೆಗೆ ಇಷ್ಟು ಪ್ರದೇಶ ಎಂದು ನಿಗದಿ ಮಾಡಿ, ಅಲ್ಲಿನ ಮಕ್ಕಳು ಅದೇ ಶಾಲೆ ಸೇರಬೇಕೆಂದು ಕಡ್ಡಾಯ ಮಾಡಿ, ಸರಕಾರೀ ಶಾಲೆಗಳನ್ನು ಉಳಿಸುವ ಬದಲು ಮಕ್ಕಳ ಸಂಖ್ಯೆ ಕಡಮೆ ಆದೊಡನೆ ಮುಚ್ಚಲಾರಂಭಿಸಿದರು. ಮೂರು ವರ್ಷ ಓದಿ ಬರೆಯುವುದು ಕಡ್ಡಾಯ ಇಲ್ಲದಿರುವ ಕಲಿ-ನಲಿ ಯೋಜನೆ ಖಾಸಗಿ ಶಾಲೆಗಳಿಗೆ ಅನ್ವಯಿಸದೆ ಸರಕಾರೀ ಶಾಲೆಗಳ ಅಧೋಗತಿಗೆ ಕಾರಣರಾದರು. ಕನ್ನಡ ಮಾಧ್ಯಮಕ್ಕೆ ಸರಕಾರ ಕೊಟ್ಟ ಪ್ರೋತ್ಸಾಹ ಇದು.
ಭಾಷೆ ಎಂದರೆ ಸಂಸ್ಕೃತಿ ಎಂಬುದು, ಭಾಷೆಯ ಅಳಿವು ಹೊಸ ತಲೆಮಾರಿನ ಸಂಸ್ಕೃತಿಯ ಅಳಿವಿಗೆ ಕಾರಣ ಎಂಬುದು, ತಮ್ಮ ಮಗು ಸ್ಪರ್ಧೆಯಲ್ಲಿ ಅವಕಾಶವಂಚಿತ ಆಗಬಾರದು ಎಂದು ಹಪಾಪಿಸುತ್ತಿರುವ ಪೋಷಕರಿಗೆ ಅರ್ಥವಾಗದು. ಕೌಶಲಗಳನ್ನು ಬೆಳೆಸಿಕೊಳ್ಳದೆ ಮಾಹಿತಿಗಳು ಮಾತ್ರ ನೆನಪಿದ್ದರೆ ಸಾಕೆನ್ನುವ ಅಂಕಗಳಿಕೆಯ ಸ್ಪರ್ಧೆಯ ಹುಚ್ಚಿನ ಪ್ರಸಕ್ತ ಶಿಕ್ಷಣದ ಬಗ್ಗೆ ಇವರು ವಿಚಾರ ಮಾಡುವುದಿಲ್ಲ. ಅನುದಾನ ಪಡೆಯದ ಶಾಲೆಗಳ ನಿರಂಕುಶ ಸ್ವಾತಂತ್ರ್ಯ, ಅದನ್ನು ಅವು ಹಲವು ರೀತಿಯಲ್ಲಿ ಹಣ ಮಾಡಲು ಬಳಸುವುದು ಇವರ ಗಮನಕ್ಕೆ ಬರುವುದಿಲ್ಲ. ದಕ್ಷಿಣದ ಎಲ್ಲ ರಾಜ್ಯಗಳಲ್ಲೂ ಖಾಸಗಿ ಇಂಗ್ಲಿಷ್ ಶಾಲೆಗಳು ಜೋರಾಗಿ ನಡೆಯುತ್ತಿದ್ದು, ರಾಜ್ಯಭಾಷೆಯ ಶಾಲೆಗಳು ಸೊರಗಿದ ಸರ್ಕಾರೀ ಶಾಲೆಗಳಾಗಿ ಜೀವ ಹಿಡಿದುಕೊಂಡಿವೆ. ಕಂಪ್ಯೂಟರ್ ಶಿಕ್ಷಣವಂತೂ ನೂರಕ್ಕೆ ನೂರರಷ್ಟು ಇಂಗ್ಲಿಷ್ ಆಗಿದೆ. ಚಿಂತನಶಕ್ತಿಗೆ ಮಾತೃಭಾಷೆಯೆ ಭದ್ರ ಬುನಾದಿ ಎನ್ನುವುದನ್ನು ಪೋಷಕರಿಗೆ ಹೇಳಲು ಪ್ರಯತ್ನ ನಡೆದಿಲ್ಲ. ಮಾತೃಭಾಷೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಸರ್ಕಾರದ ಯೋಚನೆ ಜನರನ್ನು ಸೆಳೆಯಬಹುದಾದರೂ ಅನುಷ್ಠಾನಕ್ಕೆ ಬಂದಿಲ್ಲ. ಬಂದರೂ, ಬಡವರಿಗೊಂದು ಶಿಕ್ಷಣ, ಶ್ರೀಮಂತರಿಗೊಂದು ಎನ್ನುವ ಪರಿಸ್ಥಿತಿ ಬದಲಾಗದು.
ಪ್ರೈಮರಿ ಹಂತದಲ್ಲಿ ಮೂಲಭೂತ ಸಂವಹನೆ ಕಲಿಯುವಾಗ ಅಪರಿಚಿತ ಭಾಷೆ ಇರಬಾರದು. ಮಿಡ್ಲ್ಸ್ಕೂಲ್ ಹಂತದಲ್ಲಿ ಆಲೋಚನಾ ಶಕ್ತಿ ಬೆಳೆಯಬೇಕಾದರೆ ಸುತ್ತಣ ಪರಿಸರದ ರಾಜ್ಯಭಾಷೆ ಸೂಕ್ತ. ಇಂಗ್ಲಿಷ್ಅನ್ನು ಒಂದು ಭಾಷೆಯಾಗಿ ಕಲಿಸಬಹುದು. ಉನ್ನತ ವಿಜ್ಞಾನ ಗಣಿತ ಕಲಿಸುವ ಹೈಸ್ಕೂಲಿನಲ್ಲಿ ಬಿಡಿಸಿ ಹೇಳಿ ಅರ್ಥಮಾಡಿಸಲು ನಮ್ಮ ಭಾಷೆ ಸೂಕ್ತ.
ಚಿಗುರಿದ ಆಸೆ
ಸರಕಾರ, ಪೋಷಕರು ಶಿಕ್ಷಣಮಾಧ್ಯಮ ಕನ್ನಡ ಆಗುವಂತೆ ಮಾಡಲಾರರು ಎಂದುಕೊಳ್ಳುವಾಗ ಅಭಿಮಾನಿ ಕನ್ನಡಿಗರಿಗೆ ಹೊಸ ಆಸೆ ಮೂಡುವಂತೆ ಆದುದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತೃಭಾಷೆಯಲ್ಲಿನ ಶಿಕ್ಷಣದ ಪರವಾಗಿ ನಿರ್ಣಯ ಕೈಗೊಂಡ ಮೇಲೆ. ಇದನ್ನು ಅವರು ತಾರ್ಕಿಕ ಅಂತ್ಯ ಮುಟ್ಟುವಂತೆ ಮಾಡದೆ ಇರುವುದಿಲ್ಲ ಎಂಬ ಭಾವನೆ ಎಲ್ಲರಲ್ಲೂ ಇದೆ.
ರಾಜಕಾರಣಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆಗಳು, ಪತ್ರಿಕೆಗಳು, ಮಾಧ್ಯಮಗಳವರು ಎಲ್ಲರೂ ಕನ್ನಡ ಮಾಧ್ಯಮದ ಬಗ್ಗೆ ಜನ ಚಳುವಳಿಯನ್ನೇ ನಡೆಸಬೇಕು ಎಂಬ ಅಭಿಪ್ರಾಯಕ್ಕೆ ಬರುತ್ತಿದ್ದಾರೆ. ಆಯ್ಕೆಯ ಹಕ್ಕು ಇರುವ ಪೋಷಕರನ್ನೆ ಉದ್ದೇಶಿಸಿ ಯಾರೂ ಕಾರ್ಯಕ್ರಮ ಹಾಕಿಕೊಂಡಂತಿಲ್ಲ. ಮೊದಲನೆಯದಾಗಿ ಮೈಸೂರಿನ ಚಿಂತಕ-ಲೇಖಕರ ಬಳಗ ಮಂಥನ ಖ್ಯಾತ ಸಾಹಿತಿ ಡಾ|| ಎಸ್. ಎಲ್. ಭೈರಪ್ಪ ಅವರೊಂದಿಗೆ ತಮ್ಮ ಮಗುವನ್ನು ಪ್ರಾಥಮಿಕ ಶಾಲೆಗೆ ಸೇರಿಸಬೇಕಾಗಿರುವ ಯುವ ದಂಪತಿಗಳ ಸಂವಾದ ಸಭೆಯೊಂದನ್ನು ಎಪ್ರಿಲ್ ೧೯ರಂದು ಭಾನುವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆಸಿತು.
ಡಾ|| ಭೈರಪ್ಪನವರು ಕೊಪ್ಪದ ಬಳಿ ಕಾಡಿನಲ್ಲಿ ಇರುವ ಪ್ರಬೋಧಿನೀ ಗುರುಕುಲದಲ್ಲಿ ಇರುವ ಸಂಪೂರ್ಣ ವಿದ್ಯಾಭ್ಯಾಸದ ಕಲ್ಪನೆಯನ್ನು ಸಭೆಯ ಮುಂದಿಟ್ಟರು. ನಿಷ್ಠೆ, ಶಕ್ತಿ, ಪ್ರತಿಭೆ ಇರುವ ಉಪಾಧ್ಯಾಯರ ಜತೆಗೇ ವಾಸಿಸಿ, ಉಣ್ಣುವ ಈ ಗುರುಕುಲದಲ್ಲಿ ಎಲ್ಲ ಕೆಲಸಗಳನ್ನೂ ವಿದ್ಯಾರ್ಥಿಗಳೇ ಮಾಡುತ್ತಾರೆ. ಅವರಿಗೆ ಜೀವನ ಕಲೆಯ ಎಲ್ಲ ಆಯಾಮಗಳೂ ಗೊತ್ತಾಗಿ, ಆಸಕ್ತಿ ಉಂಟಾಗುತ್ತದೆ. ಸಂಗತವಾಗಿಲ್ಲದ ಪಠ್ಯಕ್ಕಿಂತ ಜೀವನದಲ್ಲಿ ಬರುವ ಪಾಠ ಹೆಚ್ಚು ಆಳವಾಗಿ ಪರಿಣಾಮ ಬೀರಿ,
ಹೈಸ್ಕೂಲಿನಲ್ಲಿರುವ ತಮ್ಮ ವಯಸ್ಸಿನ ಮಕ್ಕಳಿಗಿಂತ ಹೆಚ್ಚಿನ ಮಟ್ಟದ ವಿಜ್ಞಾನ, ಗಣಿತ ಅವರಿಗೆ ಬರುತ್ತದೆ. ಕಲಿಕೆಯ ಕ್ರಮದಿಂದ ಚುರುಕು ಬರುತ್ತದೆ. ಎಲ್ಲರೂ ಸಂಸ್ಕೃತ, ಇಂಗ್ಲಿಷ್ನಲ್ಲಿ ಮಾತನಾಡಬಲ್ಲರು. ಸರಕಾರೀ ಶಾಲೆಗಳಲ್ಲಿ ಶಿಸ್ತು ಇಲ್ಲ; ಸ್ವಾವಲಂಬನೆ ಕಲಿಸುವ ಈ ಶಾಲೆಯಲ್ಲಿ ಇದೆ. ಆಧುನಿಕ ಶಿಕ್ಷಣದಿಂದ ಮಕ್ಕಳು ಕೈಬಿಟ್ಟುಹೋಗ್ತಾರೆ ಎಂದು ಭಯಪಡುವ ಕೃಷಿಕರು ದವಸ ಧಾನ್ಯ ನೀಡಿ ಮಕ್ಕಳನ್ನು ಇಲ್ಲಿ ಬಿಡುತ್ತಾರೆ. ಇಂತಹ ಪರ್ಯಾಯವಾದ ಶಿಕ್ಷಣ ಚಳುವಳಿಗಳು ಬರಬೇಕು. ನೀಟಾಗಿ ತಮ್ಮ ಡ್ರೆಸ್ ಕೊಳೆ ಆಗದಂತೆ ಅವಲಂಬನೆ ಕಲಿತು, ತಾಯಿ ಕಾಯಿಲೆ ಬಿದ್ದರೆ ನೋಡಿಕೊಳ್ಳಲು ಆಗದ, ಇಂಜಿನಿಯರಿಂಗ್ ಕಲಿತರೂ ಸಣ್ಣ ರಿಪೇರಿ ಬಾರದ, ಜೀವನದಿಂದ ದೂರಾದ ಶಿಕ್ಷಣವನ್ನು ಅರ್ಥವಾಗದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಭವಿಷ್ಯವಿದೆ ಎನ್ನುವುದು ಶುದ್ಧ ಸುಳ್ಳು. ಭಾಷೆ ಕಲಿಯಲು ಅಕ್ಷರ ವಿದ್ಯೆಯೇ ಬೇಕಿಲ್ಲ. ವಿದ್ಯೆಯೆ ಇಲ್ಲದ ಗೈಡ್ಗಳು ನಮಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ.
ಪ್ರೈಮರಿ ಹಂತದಲ್ಲಿ ಮೂಲಭೂತ ಸಂವಹನೆ ಕಲಿಯುವಾಗ ಅಪರಿಚಿತ ಭಾಷೆ ಇರಬಾರದು. ಮಿಡ್ಲ್ಸ್ಕೂಲ್ ಹಂತದಲ್ಲಿ ಆಲೋಚನಾ ಶಕ್ತಿ ಬೆಳೆಯಬೇಕಾದರೆ ಸುತ್ತಣ ಪರಿಸರದ ರಾಜ್ಯಭಾಷೆ ಸೂಕ್ತ. ಇಂಗ್ಲಿಷ್ಅನ್ನು ಒಂದು ಭಾಷೆಯಾಗಿ ಕಲಿಸಬಹುದು. ಉನ್ನತ ವಿಜ್ಞಾನ ಗಣಿತ ಕಲಿಸುವ ಹೈಸ್ಕೂಲಿನಲ್ಲಿ ಬಿಡಿಸಿ ಹೇಳಿ ಅರ್ಥಮಾಡಿಸಲು ನಮ್ಮ ಭಾಷೆ ಸೂಕ್ತ. (ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲದ ಭಾಷೆಯಲ್ಲಿ ಕಲಿಸ ಹೊರಟರೆ ಉರು ಹೊಡೀತಾರೆ, ಅಷ್ಟೆ – ಇದು ವಿದ್ಯೆಯನ್ನು ಸಾಯಿಸಿದಂತೆ.) ಕನ್ನಡದಲ್ಲಿ ಬಿಡಿಸಿ, ಅರ್ಥ ಮಾಡಿಸಿ ಸ್ಪಷ್ಟಗೊಳಿಸಿ ಅನಂತರ ಇಂಗ್ಲಿಷ್ನಲ್ಲೂ ಹೇಳುವ ಕ್ರಮದಿಂದ ಭಾಷೆಯ ಮೇಲೆ ಹಿಡಿತ ಬಂದು, ಮುಂದೆ ಇಂಗ್ಲಿಷ್ ಮೀಡಿಯಂಗೆ ಹೋದಾಗ ಸಮಸ್ಯೆ ಆಗುವುದಿಲ್ಲ.
ಪೋಷಕರ ಆತಂಕಗಳು
ಪ್ರಶ್ನೋತ್ತರ ಸಮಯದಲ್ಲಿ ಬಂದ ಪ್ರಶ್ನೆಗಳು ಪೋಷಕರ ಆತಂಕವನ್ನು ಎತ್ತಿ ತೋರಿಸುವಂತಿದ್ದುವು; ಭೈರಪ್ಪನವರ ಉತ್ತರಗಳನ್ನು ಆವರಣದಲ್ಲಿ ನೀಡಲಾಗಿದೆ: ಕನ್ನಡ ಶಾಲೆಗೆ ಸೇರಿಸಿ, ಸುತ್ತಲಿನ ಸಮಾಜ ಎದುರಿಸುವ ಬಗೆ ಹೇಗೆ? (ನಿಜವಾಗಿ ಕಷ್ಟ. ಮನಸ್ಸಿನಲ್ಲಿ ನಿರ್ಧರಿಸಿ ಗಟ್ಟಿಯಾಗಿ.) ಆಂಗ್ಲ ಮಾಧ್ಯಮದ ಮಕ್ಕಳನ್ನು ನೋಡಿ ನಮ್ಮ ಮಕ್ಕಳು ಹೀನೈಕೆ ಪಡುವುದಿಲ್ಲವೆ? (ಪಾಠ ಚೆನ್ನಾಗಿ ಅರ್ಥ ಮಾಡಿಕೊಳ್ಳೋದು ಮುಖ್ಯ; ನೀನು ಉದ್ಧಾರವಾಗಬೇಕು ಅಂತ ನಮ್ಮ ಆಸಕ್ತಿ ಎಂದು ಹೇಳಿ. ಮುಚ್ಚುಮರೆ ಬೇಡ.) ಕನ್ನಡ ಮಾಧ್ಯಮದಲ್ಲಿ ಬಿಕಾಂ ಓದಿದ ನನಗೆ ಇಂಗ್ಲಿಷ್ನಲ್ಲಿ ಮಾತನಾಡಲು ಬರುವುದಿಲ್ಲ. ಇಂಗ್ಲಿಷ್ನಲ್ಲಿ ಅರ್ಜಿ ಬರೆಯದೆ ಅವಕಾಶ ತಪ್ಪಿತು. ನನ್ನ ಮಕ್ಕಳಿಗೂ ಹಾಗೆ ಆದರೆ? (ನಿಮ್ಮ ಮೇಷ್ಟ್ರು ಆಗ ಇಂಗ್ಲಿಷ್ನಲ್ಲೂ ಹೇಳಿಕೊಡಬೇಕಿತ್ತು. ಆಗ ಬಂದಿರೋದು. ಇಂಗ್ಲಿಷ್ನಲ್ಲಿ ಹೇಳದ ಮಡಿವಂತ ಕನ್ನಡ ಮಾಧ್ಯಮ ಇರಬಾರದು. ಅತಿ ಮಡಿ ಬೇಡ. ಇಂಗ್ಲಿಷ್ನಲ್ಲಿ ತಿಳಿಯಿರಿ, ಕನ್ನಡದಲ್ಲಿ ಬರೆಯಿರಿ. ಮಕ್ಕಳು ಉತ್ತರವನ್ನು ಕನ್ನಡದಲ್ಲಿ ಬರೆಯಬೇಕು. ನಿತ್ಯ ವ್ಯವಹಾರದ ಇಂಗ್ಲಿಷ್ ಕಷ್ಟವಲ್ಲ, ತಿಂಗಳಲ್ಲಿ ಕಲಿಯಬಹುದು.) ಕನ್ನಡ ಚಿಂತಕರ ಮಕ್ಕಳೂ ಆಂಗ್ಲ ಮಾಧ್ಯಮದಲ್ಲಿ ಓದುತ್ತಾರೆ? (ಮೊಮ್ಮಕ್ಕಳ ಶಿಕ್ಷಣದಲ್ಲಿ ನಮ್ಮ ಮಾತು ನಡೆಯುವುದಿಲ್ಲ.) ಜಾಗತಿಕ ಸ್ಪರ್ಧೆಯಲ್ಲಿ ನಾವು ಹಿಂದೆ ಉಳಿಯುವುದಿಲ್ಲವೆ? (ಈಗ ಹಿಂದುಳಿದಿಲ್ಲವೆ? ಜಗತ್ತಿನ ೨೦೦ ಉನ್ನತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮ್ಮ ಯಾವ ವಿಶ್ವವಿದ್ಯಾಲಯವೂ ಇಲ್ಲ. ವಿದೇಶಗಳಲ್ಲಿ ಇಂಗ್ಲಿಷ್ ಪುಸ್ತಕ ರೆಫರ್ ಮಾಡುತ್ತಾರೆ, ತಮ್ಮ ಭಾಷೆಯಲ್ಲೆ ಕಲಿಸುತ್ತಾರೆ. ಚಿಂತನೆ ನಡೆಯೋದು ಮಾತೃಭಾಷೆಯಲ್ಲಿ. ಅನುವಾದ ಮಾಡಿ ಇಂಗ್ಲಿಷ್ನಲ್ಲಿ ನಾವು ಹೇಳುವಂತೆ ಅಲ್ಲಿ ಈ ಎರಡು ಬಗೆ ಇಲ್ಲ. ಇಂಗ್ಲಿಷ್ ಮಾಧ್ಯಮದಿಂದ ನಾವು ಜಾಗತಿಕ ಮಟ್ಟ ಮುಟ್ಟಿಲ್ಲ. ಆಲೋಚನಾ ಶಕ್ತಿ ಬೆಳೆಸಿದ ಮೇಲೆ ಇಂಗ್ಲಿಷ್ ಕಲಿಯಲಿ. ಜಾಗತಿಕ ಮಟ್ಟ ಮುಟ್ಟೋದು ಚಿಂತನಾ ಶಕ್ತಿಯಿಂದ, ಮಾಧ್ಯಮದಿಂದ ಅಲ್ಲ.) ಇಂಗ್ಲಿಷ್ ಪ್ರೌಢಿಮೆ ಗಳಿಸಲು ಕಷ್ಟವಾಗುವುದಿಲ್ಲವೆ? (ಇಂಗ್ಲಿಷ್ನಲ್ಲೂ ಹೇಳುವ ಕನ್ನಡ ಮಾಧ್ಯಮ – ಮಡಿವಂತಿಕೆ ಬೇಡ. ಹಳೆ ವಿದ್ವಾಂಸರಿಗೆ ಇಂಗ್ಲಿಷ್ನಲ್ಲೂ ಪ್ರಭುತ್ವ ಇತ್ತು, ಕಡೆಗಣಿಸಿರಲಿಲ್ಲ. ಇಂಗ್ಲಿಷ್ನಲ್ಲಿ ತಿಳಿಯಿರಿ, ಕನ್ನಡದಲ್ಲಿ ಬರೆಯಿರಿ.) ಮುಂದಿನ ಎಂಬಿಬಿಎಸ್ನಂತಹ ವಿದ್ಯಾಭ್ಯಾಸಕ್ಕೆ ತೊಂದರೆ ಆಗೋದಿಲ್ಲವೆ? (ಅಲ್ಲಿ ಲ್ಯಾಟಿನ್ ಗ್ರೀಕ್ ಉಪಯೋಗಿಸಿ ಹೇಳ್ತಾರೆ. ಅವರಿಗೂ ಪೂರ್ತಿ ಅರ್ಥವಾಗಿರಲ್ಲ, ನಮಗೂ ಆಗಲ್ಲ. ಕನ್ನಡದಲ್ಲಿ ವಿವರಿಸಿದ್ದರೆ ಅರ್ಥವಾಗೋದು. ಮೆಕ್ಯಾನಿಕ್ ಇಂಜಿನ್ ಭಾಗಗಳಿಗೆ ತನ್ನದೇ ಭಾಷೆ ಉಪಯೋಗಿಸ್ತಾನೆ. ಪ್ರಾಯೋಗಿಕತೆ ಬೇಕು.) ಮಾತೃಭಾಷೆಯಂತೆ ಇಂಗ್ಲಿಷೂ ಅನಿವಾರ್ಯವಲ್ಲವೆ? (ಎರಡನ್ನೂ ಮಡಿವಂತಿಕೆ ಮಾಡದೆ ಉಪಯೋಗಿಸಿ.) ಐಟಿ ಯುಗದಲ್ಲಿ ಅನಾಥಜೀವಿ ಅನ್ನಿಸೋದಿಲ್ಲವೆ? (ಐಟಿಯಲ್ಲಿ ಭಾಷೆ ಬಹಳ ಕಡಮೆ. ಎಲ್ಲ ಶಾಸ್ತ್ರಗಳಲ್ಲೂ ಮೇಲ್ಮಟ್ಟಕ್ಕೆ ಹೋದಾಗ ಗಣಿತ ಭಾಷೆಯೇ ಸೂತ್ರ ರೂಪದಲ್ಲಿ ಬರುತ್ತೆ. ತಂತ್ರ ಮುಖ್ಯವಾಗುತ್ತೆ.) ಕನ್ನಡ ಶಾಲೆಗಳು ಕಡಮೆ. ಪಾಠಪ್ರವಚನ ಸ್ಥಿತಿ ಶೋಚನೀಯ. ಗುಣಮಟ್ಟದ ಶಿಕ್ಷಕರ ಕೊರತೆ. (ಅರ್ಥ ಮಾಡಿಸುವ ಶಕ್ತಿ ಅಧ್ಯಯನದಿಂದ ಬರುತ್ತೆ. ಯೋಗ್ಯರು ಶಿಕ್ಷಕರಾಗಬೇಕು. ಅರಿವು ಶಾಲೆಯಂತಹ ಸಂಸ್ಥೆಗಳು ತಮ್ಮ ಪ್ರಯೋಗಗಳನ್ನು ಪ್ರಚಾರ ಮಾಡಬೇಕು. ಆಕರ್ಷಣೆ ಹುಟ್ಟುವಂತೆ ಪಾಠ ಮಾಡಬೇಕು. ಶಿಕ್ಷಣ ಉದ್ಯಮವಾಗಿದೆ; ವ್ಯವಸ್ಥೆ ಮಾಧ್ಯಮದ ಪರ ನಿಂತಿದೆ. ಏಕಸ್ವಾಮ್ಯ ಹೋಗೋತನಕ ಶಿಕ್ಷಣ ಬದಲಾಗುವುದಿಲ್ಲ.) ಸರ್ಕಾರ ಏನೂ ಮಾಡುವುದಿಲ್ಲವಾ? (ಶಿಕ್ಷಣ ಉದ್ಯಮವಾಗಿರೋದು ಕರ್ನಾಟಕದ ಸಂಕಟ. ಕೋರ್ಟಿಗೆ ಹೋದರೆ ಪೋಷಕರ ಆಯ್ಕೆ ಹಕ್ಕು ಅಂತ ತೀರ್ಪು ಬಂತು. ಪೋಲಿಯೋ ಹನಿ ಹಾಕಿಸೋದು ಆಯ್ಕೆ, ಸ್ಕೂಲಿಗೆ ಸೇರಿಸೋದು ಆಯ್ಕೆ ಅಂತ ಚಳುವಳಿ ಮಾಡಿದರೆ ಒಪ್ಪುತ್ತಾ? ತಜ್ಞರ ಅಭಿಪ್ರಾಯ ಏಕೆ ಕೋರ್ಟ್ ಗಮನಿಸಲಿಲ್ಲ? ಸರ್ಕಾರಗಳು ನಿಯಮಿಸಿದ ಕಮಿಷನ್ನುಗಳ ಮಾತನ್ನು ಏಕೆ ಗಮನಿಸಲಿಲ್ಲ? ಪೋಷಕರ ಮನಸ್ಸು ಸಂಪೂರ್ಣ ಕಲುಷಿತವಾಗಿದೆ. ಕಾರಣ ಯಾರು?)
ಪೋಷಕರ ಇಂತಹ ಸಭೆಗಳು ಪ್ರತಿ ಊರಿನಲ್ಲೂ ನಡೆದರೆ ಮಾಧ್ಯಮದ ಬಗ್ಗೆ ಎಚ್ಚರ ಮೂಡಬಹುದು. ಕನ್ನಡ ಶಾಲೆಗಳು ಈ ಬಗ್ಗೆ ಪ್ರಯತ್ನ ನಡೆಸಬೇಕು. ಹಿಂದೆ ಶಾಲಾ ಉಪಾಧ್ಯಾಯರು ಮಗುವಿಗೆ ಐದು ವರ್ಷವಾದಾಗ ಮನೆಗೆ ಬಂದು, ಅದರ ತಂದೆಯವರ ಹತ್ತಿರ ಮಾತನಾಡಿ, ಶಾಲೆಗೆ ಸೇರಿಸಲೇ ಬೇಕೆಂದು ಒತ್ತಾಯಿಸಿ, ಅವರೇ ಕರೆದುಕೊಂಡು ಹೋಗಿ ಸೇರಿಸಿ, ನಿಯಮಿತವಾಗಿ ಬಾರದಿದ್ದರೆ, ಪುನಃ ಬಂದು, ಕಾರಣ ತಿಳಿದು, ತೊಂದರೆ ಪರಿಹರಿಸಿ, ಶಾಲೆಗೆ ಬರುವಂತೆ ಮಾಡುತ್ತಿದ್ದರು. ಆ ಕ್ರಮ ಈಗ ತಪ್ಪಿಹೋಗಿರುವಂತೆ ಕಾಣುತ್ತದೆ. ಪ್ರಚಾರದ ಈ ಯುಗದಲ್ಲಿ, ಪ್ರಚಾರವಿಲ್ಲದಿದ್ದರೆ ಶಾಲೆಗಳೂ ವಿದ್ಯಾರ್ಥಿಗಳಿಲ್ಲದೆ ಸೊರಗುತ್ತವೆ. ಹಳ್ಳಿ ಶಾಲೆ ಶಿಕ್ಷಕರು ದೀರ್ಘ ಪ್ರಯಾಣ ಮಾಡಬೇಕಿದ್ದರೂ ನಗರದಿಂದಲೇ ಬಂದು ಹೋಗುತ್ತಾರೆ. ಜನರ ಪರಿಚಯಕ್ಕೆ ಸಮಯವೆಲ್ಲಿ? ಪ್ರಶ್ನೋತ್ತರದಲ್ಲಿ ಕನ್ನಡ ಶಾಲೆಗಳೇ ಕಡಮೆ ಎಂಬ ಅಭಿಪ್ರಾಯ ಇರುವುದನ್ನು ಗಮನಿಸಿ. ಸಂಖ್ಯೆ ಕಡಮೆ ಖಂಡಿತ ಇಲ್ಲ, ಇವು ತಮ್ಮ ಅಸ್ತಿತ್ವವನ್ನು ಸಮಾಜದ ಎದುರು ಸ್ಥಾಪಿಸುವಲ್ಲಿ ಸೋತಿವೆ.
ಕನ್ನಡ ಮಾಧ್ಯಮವು ಈಗಿನ ಮಕ್ಕಳಿಗೆ ಅತ್ಯವಶ್ಯಕ, ಇದೇ ಮುಂದುವರಿಸಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ