ನಮ್ಮ ದೇಹವೆಂಬುದು ನಮ್ಮ ಹಕ್ಕೇ ಆಗಿರಬಹುದು. ಆದರೆ, ದೇಹದಾನವನ್ನೋ ಅಂಗದಾನವನ್ನೋ ಮಾಡುವ ಸಂಕಲ್ಪ ಕೈಗೊಂಡಾಗ ಅಂಥದೊಂದು ಪ್ರಜ್ಞಾವಂತಿಕೆ – ಪ್ರೌಢಿಮೆ ನಮಗಷ್ಟೇ ಸೀಮಿತವಾಗಿದ್ದರೆ ಸಾಲದು. ಮುಖ್ಯವಾಗಿ, ನಮ್ಮ ಕುಟುಂಬದವರನ್ನು – ಆಪ್ತವರ್ಗವನ್ನು ಈ ಬಗ್ಗೆ ಅಣಿಗೊಳಿಸಬೇಕಾಗುತ್ತದೆ….
ಕೆಲವು ಪದಗುಚ್ಛಗಳಿವೆ. ಅವನ್ನು ನಿರ್ದಿಷ್ಟ ಗುಂಪಿನೊಂದಿಗೆ ಮಾತ್ರ ಸಮೀಕರಿಸುವ ಪ್ರವೃತ್ತಿ ಬೆಳೆದುಬಂದಿದೆ. ಉದಾಹರಣೆಗೆ, ಮುನ್ನೋಟ, ಮುಂದುವರಿಯುವಿಕೆಯನ್ನು ಧ್ವನಿಸುವ ‘ಪ್ರಗತಿಪರ’ ಎಂಬ ಶಬ್ದ ಕೇಳಿದೊಡನೆ ಅದು ಎಡಪಂಥೀಯರಿಗೆ ಮಾತ್ರ ಸಂಬಂಧಿಸಿದ್ದು ಎಂದು ಮನಸಿಗೆ ಬಂದುಬಿಡುತ್ತದೆ. ಈ ಪದದೊಂದಿಗೆ ಹೊಂದಿಸಿಬರೆಯಬಹುದಾದ ಸೈದ್ಧಾಂತಿಕ ಗುಂಪುಗಳು, ವ್ಯಕ್ತಿಗಳೆಲ್ಲ ಕಣ್ಮುಂದೆ ಸುಳಿಯುತ್ತಾರೆ. ಯೂಜುಅಲ್ ಸಸ್ಪೆಕ್ಟ್ಸ್ ಎಂದು ಆಂಗ್ಲದಲ್ಲಿ ಸುಲಭವಾಗಿ ಕರೆಯುತ್ತಾರಲ್ಲ, ಹಾಗೆ.
ಸನಾತನವಾದ, ಮನುವಾದ ಅಂತೆಲ್ಲ ಒಂದಿಷ್ಟು ಶಬ್ದಗಳಿವೆ. ಸೈದ್ಧಾಂತಿಕ ಜಗಳಕ್ಕೆ ಕಾವು ಒದಗಿಸುವುದು ಬಿಟ್ಟರೆ ಅದರಾಚೆಗೆ ಈ ಶಬ್ದಗಳಿಗೂ ‘ಪ್ರಗತಿಪರ’ ಶಬ್ದಕ್ಕಿರುವಷ್ಟೇ ಒಜ್ಜೆ ಇದೆಯಷ್ಟೆ. ಆದರೆ ಇಲ್ಲೂ ಈ ಶಬ್ದಗಳನ್ನೆಲ್ಲ, ಇವುಗಳ ತೀರ ಆಳ ತಿಳಿಯದವರೂ, ಒಂದಿಷ್ಟು ಸಂಸ್ಥೆಗಳಿಗೋ ವ್ಯಕ್ತಿಗಳಿಗೋ ಸರಳವಾಗಿ ಸಮೀಕರಿಸಿಬಿಡಬಲ್ಲರು. ಆರೆಸ್ಸೆಸ್ ಈಕ್ವಲ್ಸ್ ಸಾಂಪ್ರದಾಯಿಕತೆ, ಸನಾತನ, ಮನುವಾದ ಎಂಬುದು ಚರ್ಚಾಪಟುಗಳ ನಡುವೆ ಯಾವತ್ತೂ ಚಾಲ್ತಿಯಲ್ಲಿರುವ ಸಮೀಕರಣ. ಈ ಸರಳ ಸಮೀಕರಣ ಕೆಲವೊಮ್ಮೆ ಇನ್ನಿಲ್ಲದಂತೆ ಅದುರಿಹೋಗುವುದುಂಟು. ತಮ್ಮ ಕೃತಿಗಳ ಮೂಲಕ ಸಂಪ್ರದಾಯಗಳನ್ನು ಖಡಕ್ಕಾಗಿ ಪ್ರಶ್ನಿಸಿದ, ಜೀವನದುದ್ದಕ್ಕೂ ಪ್ರಗತಿಪರ ಕಲ್ಪನೆಗೆ ಆತುಕೊಂಡಿದ್ದ ಯು.ಆರ್. ಅನಂತಮೂರ್ತಿಯವರ ಅಂತ್ಯಸಂಸ್ಕಾರವು ಧಾರ್ಮಿಕ ವಿಧಿಬದ್ಧವಾಗಿ ನಡೆಯಿತು. ಹಾಗಾಗುವುದು ಅವರದ್ದೇ ಕೊನೆಯ ಆಸೆಯಾಗಿತ್ತು ಅಂತಲೂ ಸುದ್ದಿಯಾಯಿತು. ಅರೇ, ಇದೆಂಥ ಪ್ರಗತಿಪರ ದೃಷ್ಟಿಕೋನ ಎಂಬ ಪ್ರಶ್ನೆಯನ್ನವರು ಬಿಟ್ಟುಹೋದರು.
ಇತ್ತ, ಜನರೂಢಿಯ ಸಂವಾದಗಳಲ್ಲಿ ಆರೆಸ್ಸೆಸ್ ಎಂದರೆ ಅದು ಧರ್ಮಗ್ರಂಥಗಳಲ್ಲಿ ಬರೆದಿದ್ದನ್ನು, ಸಾಂಪ್ರದಾಯಿಕವಾಗಿ ಆಚರಣೆಯಲ್ಲಿ ಸಾಗಿಬಂದಿರುವುದನ್ನು ಚ್ಯುತಿಯಿಲ್ಲದಂತೆ ಮುಂದುವರಿಸಿಕೊಂಡು ಹೋಗುವುದಕ್ಕೆ ಬದ್ಧವಾದ ಗುಂಪು. ಆದರೆ, ಇತ್ತೀಚೆಗೆ ಇಲ್ಲೂ ಒಂದು ಶಾಕ್. ಆಗಸ್ಟ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪ (೮೩) ತೀರಿಕೊಂಡರು. ಅವರ ಇಚ್ಛೆ ಇದ್ದಂತೆ, ಅಂತಿಮ ದರ್ಶನದ ನಂತರ, ದೇಹವನ್ನು ಕಿಮ್ಸ್ ಆಸ್ಪತ್ರೆಗೆ ನೀಡಲಾಯಿತು.
ಈಗಿನ ತಲೆಮಾರಿನ ಯಾರಾದರೂ ಇಂಥ ತೀರ್ಮಾನ ದೊಂದಿಗೆ ಇಹಲೋಕಯಾತ್ರೆ ಮುಗಿಸಿದ್ದರೆ ತೀರ ಚಿಂತನೆಗೇನೂ ಆಸ್ಪದವಿರುತ್ತಿರಲಿಲ್ಲವೇನೋ. ಈಗಿನವರು, ‘ಮಾಡರ್ನ್’ ಆಲೋಚನೆಗೆ ತೆರೆದುಕೊಂಡವರು ಎಂದುಕೊಂಡು ಬಿಡಬಹುದಿತ್ತು. ಆದರೆ, ಆರು ದಶಕಗಳ ಕಾಲ ಸಂಘದ ಪ್ರಚಾರಕರಾಗಿದ್ದ ಕೃಷ್ಣಪ್ಪ ಅವರು, ಬದುಕಿನುದ್ದಕ್ಕೂ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು, ಸಾವಿನ ನಂತರವೂ ತಮ್ಮ ದೇಹ ಉಪಯೋಗಕ್ಕೆ ಬರಲಿ ಎಂದು ಯೋಚಿಸಿದರಲ್ಲ? ಇದನ್ನು ಅವರ ವೈಯಕ್ತಿಕ ಕಸುವಿನ ಜತೆ, ಸಂಘಟನೆಯ ಅಂತಃಸತ್ತ್ವವೂ ಏನೆಂಬುದನ್ನು ಹೇಳುವ ವಿದ್ಯಮಾನವನ್ನಾಗಿ ಗ್ರಹಿಸಬಹುದು.
ಆದಾಗ್ಯೂ, ಹೇಗೆ ತಥಾಕಥಿತ ಪ್ರಗತಿಪರ ದೃಷ್ಟಿಕೋನವನ್ನು ಬೆಂಬಲಿಸಿಕೊಂಡಿದ್ದವರನ್ನೆಲ್ಲ ಅನಂತಮೂರ್ತಿಯವರ ಅಂತ್ಯಸಂಸ್ಕಾರದ ರೀತಿಯು ಮುಜುಗರಕ್ಕೆ ಸಿಲುಕಿಸಿತೋ, ಹಾಗೆಯೇ ಆರೆಸ್ಸೆಸ್ ಅನ್ನು, ಬಲಪಂಥವನ್ನು ಬೆಂಬಲಿಸುತ್ತೇವೆ ಎನ್ನುವ ಹೊರಗಿನ ಗುಂಪಿಗೂ ನ. ಕೃಷ್ಣಪ್ಪನವರ ದೇಹದಾನ ವಿದ್ಯಮಾನ ಅವ್ಯಕ್ತ ತಳಮಳವೊಂದನ್ನು ಕಟ್ಟಿಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ‘ಇದೇನಪ್ಪಾ? ಹಿರಿಯರು ಈ ಹಾದಿ ಹಿಡಿದರು. ಆದರೆ, ನಾವು ಸಂಸ್ಕಾರ – ಮೋಕ್ಷ ಹಿಂಗೆಲ್ಲ ಪರಿಕಲ್ಪನೆ ಇಟ್ಟುಕೊಂಡಿದೀವಲ್ಲ. ದೇಹದಾನ ಆದರ್ಶವಾದರೆ, ಅಪರಕ್ರಿಯೆ – ತಿಥಿಗಳಲ್ಲಿ ನಾವು ಕಂಡುಕೊಂಡ ಆದರ್ಶವನ್ನೇನು ಮಾಡೋಣ?’ – ಹೀಗೆಂದು ಬಲಪಂಥವನ್ನು ನೆಚ್ಚಿಕೊಂಡಿರುವ ಯಾರೂ ಬಹಿರಂಗವಾಗಿ ಕೇಳದಿದ್ದರೂ, ಕೆಲವರಲ್ಲಾದರೂ ಇಂಥ ಪ್ರಶ್ನೆ ಹುಟ್ಟಿದ್ದೀತು. ಹೀಗೆ ಕೇಳಿದರೆ, ಅದು ಹಿರಿಯರಿಗೆ – ಅವರು ಪಾಲಿಸಿದ ಆದರ್ಶಕ್ಕೆ ಅಗೌರವ ತೋರಿದಂತಾಗಿಬಿಡಬಹುದು ಎಂಬ ಹೆದರಿಕೆ ಹಲವರಲ್ಲಿ ಇದ್ದೀತು!
ದೇಹದಾನ, ಅಂಗದಾನ ಮತ್ತು ದ್ವಂದ್ವ
ಇತ್ತೀಚೆಗೆ ಅಂಗದಾನ ಮತ್ತು ದೇಹದಾನಗಳ ಬಗ್ಗೆ ಚರ್ಚೆ – ಸಂವಾದಗಳು ಹೆಚ್ಚಾಗಿವೆ. ಸಾವಿನ ನಂತರ ತಮ್ಮ ದೇಹವು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಉಪಯೋಗವಾಗಲಿ ಎಂದು ದೇಹದಾನ ಮಾಡುತ್ತಾರೆ. ಅಂಗದಾನವೆಂದರೆ, ಮರಣಾನಂತರ ಸುಸ್ಥಿತಿಯಲ್ಲಿರಬಹುದಾದ ಕಣ್ಣು, ಲಿವರ್, ಹೃದಯ, ಕಿಡ್ನಿ ಇತ್ಯಾದಿಗಳನ್ನು ದಾನ ಮಾಡುವುದು. ಈ ಎಲ್ಲ ಅವಯವಗಳನ್ನು ತೆಗೆಯುವುದಕ್ಕೂ ಸಾವಿನ ನಂತರ ಇಂತಿಷ್ಟು ತಾಸುಗಳ ಒಳಗೆ ಎಂಬ ಬೇರೆ ಬೇರೆ ಕಾಲಮಿತಿ ಇರುತ್ತದೆ.
ಸಾವಿನ ನಂತರ ದೇಹದಾನ, ಸುಸ್ಥಿತಿಯಲ್ಲಿರುವ ಅಂಗಗಳ ದಾನ ಇವೆರಡೂ ಆಗಲಿ ಎಂದು ಸಂಕಲ್ಪ ಮಾಡಿರುವವರೂ ಇರುತ್ತಾರೆ. ಅಂಗದಾನವನ್ನಷ್ಟೇ ಮಾಡಿದ ಸಂದರ್ಭದಲ್ಲಿ, ಕರಾರು ಬರೆದಿಟ್ಟ ಅಂಗವನ್ನಷ್ಟೇ ತೆಗೆದುಕೊಂಡು, ದೇಹವನ್ನು ಅಂತಿಮ ಕ್ರಿಯೆಗಾಗಿ ಮರಳಿಸಲಾಗುತ್ತದೆ. ಈ ಹಂತದಲ್ಲೇ ನಮಗೆಲ್ಲ ಹಿಂಜರಿಕೆ ಕಾಡುವುದುಂಟು. ‘ಅಯ್ಯೋ, ನಮ್ಮ ಪ್ರೀತಿಪಾತ್ರರ ದೇಹ ಹಾಗೆಲ್ಲ ವಿರೂಪಗೊಂಡಿರುತ್ತದೆ. ಇದೆಲ್ಲ ಸಾಧುವೇ?’ ಅಂತ. ‘ಅಂಥದ್ದೇನೂ ಆಗುವುದಿಲ್ಲ. ಅಂಗ ಸ್ವೀಕರಿಸಿದ ನಂತರ ವಿರೂಪವಿಲ್ಲದ ಸ್ಥಿತಿಯಲ್ಲೇ ದೇಹವನ್ನು ಮರಳಿಸುತ್ತೇವೆ’ ಅಂತ ವೈದ್ಯಕ್ಷೇತ್ರದ ಪರಿಣತರೆಲ್ಲ ಆಗಾಗ ಹೇಳುತ್ತಲೇ ಇದ್ದರೂ ನಮಗೆ ಭಾವನೆ ಬಿಡಲೊಲ್ಲದು. ಹೀಗಿರುವಾಗ, ದೇಹದಾನದ ಸಂಕಲ್ಪಕ್ಕೆ ಗಟ್ಟಿತನವೇ ಬೇಕು; ಮಾಡುವವರಿಗೂ ಹಾಗೂ ಅವರ ಸುತ್ತಲಿನ ಸಂಬಂಧಿಕರಿಗೂ. ಹಾಗೆ ನೋಡಿದರೆ ಇದು ನಿಜವಾದ ಭವಬಂಧನ ಮುಕ್ತಿ! ಸಂಸ್ಕಾರವಿಧಿಗಳಿಲ್ಲದೇ ಆತ್ಮದ ಬಿಡುಗಡೆ ಹೇಗೆ? – ಎಂಬ ಪ್ರಶ್ನೆ, ಪ್ರೇತಾತ್ಮ-ಭೂತಾತ್ಮ ಇವೆಲ್ಲ ಶಂಕೆಗಳನ್ನು ದಾಟಿದ ನಿರ್ಭಯ – ನಿರ್ಲಿಪ್ತ ಉನ್ನತಿಯ ಹಂತಕ್ಕೆ ತಲಪಿದವರು ಮಾತ್ರವೇ ಇಂಥ ನಿರ್ಧಾರ ಕೈಗೊಳ್ಳಬಲ್ಲರು. ‘ಸತ್ತ ನಂತರ ಏನಿದೆ? ಮಣ್ಣಲ್ಲಿ ಮಣ್ಣಾಗುತ್ತೇವಷ್ಟೆ…’ ಇತ್ಯಾದಿ ಏನೇ ಫಿಲಾಸಫಿಯ ಮಾತನಾಡಿದರೂ, ಕೆಲವರಿಗಷ್ಟೇ ಇಂಥದೊಂದು ಆದರ್ಶ ಸಾಧ್ಯವಾಗುತ್ತದೆ.
ಜನಸಂಘದ ನಾನಾಜಿ ದೇಶಮುಖ್ ಅವರೂ ದೇಹದಾನ ಮಾಡಿದ್ದರು. ಪಶ್ಚಿಮ ಬಂಗಾಳದ ಎಡಪಂಥೀಯ ಪ್ರಖರ ನಾಯಕ ಜ್ಯೋತಿ ಬಸು ಅವರದ್ದೂ ದೇಹದಾನ. ಹಾಗೆ ನೋಡಿದರೆ ಒಂದು ಸಂಘಟನೆಯಾಗಿ ಆರೆಸ್ಸೆಸ್ ಇಂಥದೊಂದು ಯೋಚನೆಗೆ ಯಾವತ್ತೋ ತೆರೆದುಕೊಂಡಿರುವುದು ಹಾಗೂ ದೇಹದಾನದ ಮಹತ್ತ್ವವನ್ನು ಸ್ಪಷ್ಟವಾಗಿ ಮನಗಂಡಿರುವುದು ತಿಳಿಯುತ್ತದೆ.
ಪಟ್ನಾದಲ್ಲಿ ಜುಲೈ ೨೦೧೩ರ ಗುರುಪೂರ್ಣಿಮೆ ಸಮಾರಂಭ ವೊಂದರಲ್ಲಿ ಬಿಜೆಪಿಯ ೬೮ ಸದಸ್ಯರು ಮರಣಾನಂತರ ತಮ್ಮ ದೇಹದಾನವಾಗಲಿ ಎಂಬ ಉಯಿಲು ಬರೆದು, ತಮ್ಮ ಕುಟುಂಬದ ಸಮಕ್ಷದಲ್ಲಿ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರಿಗೆ ನೀಡಿದ್ದನ್ನು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿತ್ತು. ಹಾಗೆ ದೇಹದಾನದ ಕರಾರು ಸಲ್ಲಿಸಿದವರಲ್ಲಿ ಸುಶೀಲ್ ಕುಮಾರ್ ಮೋದಿಯವರೂ ಒಬ್ಬರು. ಸರಸಂಘಚಾಲಕರು ‘ದೇಹದಾನದ ಸಂಕಲ್ಪ ಬಹಳ ಶ್ರೇಷ್ಠವಾದದ್ದು. ಅಂಗದಾನವಷ್ಟೇ ಅಲ್ಲದೆ ಮಾನವಕುಲಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದೇಹದಾನ ಮಾಡುವುದು ಉತ್ತಮ ಕಾರ್ಯ’ ಎಂದಿದ್ದರು. ಅದೇ ಸಭೆಯಲ್ಲಿ, ದೆಹಲಿ ವಿವಿಯ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷರು – ‘ಪ್ರತಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ದೇಹ ಅಭ್ಯಾಸಕ್ಕೆ ಬೇಕು. ಈಗ ೩೫ ವಿದ್ಯಾರ್ಥಿಗಳಿಗೆ ಒಂದು ದೇಹ ಲಭ್ಯವಿದೆ’ ಎಂದಿದ್ದರು.
ಇನ್ನು, ಅಂಗದಾನದ ವಿಷಯಕ್ಕೆ ಬಂದರೂ ಇಂಥದೇ ಪ್ರಮಾಣದಲ್ಲಿ ಅಗತ್ಯದ ಅಂಕಿ-ಅಂಶಗಳು ಎದುರಾಗುತ್ತವೆ. ಅಪೊಲೊ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಅವರು ಬರೆದ ಲೇಖನವೊಂದರಲ್ಲಿ ಹರವಿಟ್ಟಿದ್ದ ಅಂಶಗಳು ಹೀಗಿದ್ದವು: ಭಾರತದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ ೦.೦೮ ಮಂದಿಯಷ್ಟೇ ಅಂಗದಾನಕ್ಕೆ ಮುಂದಾಗುತ್ತಿದ್ದಾರೆ. ಪ್ರತಿವರ್ಷ ಸುಮಾರು ೫೦ ಸಾವಿರ ಭಾರತೀಯರು ಬದಲಿ ಹೃದಯದ ಆವಶ್ಯಕತೆ ಎದುರಿಸುತ್ತಾರೆ. ಆದರೆ ವರ್ಷಕ್ಕೆ ಬದಲಿ ಹೃದಯ ಜೋಡಣೆ ಆಗುವ ಸಂಖ್ಯೆ ೧೦-೧೫ ಮಾತ್ರ. ಕರುಳು ಕಸಿಗೂ ಇಷ್ಟೇ ಪ್ರಮಾಣದ ಜನ ಪ್ರತಿವರ್ಷ ಕಾಯುತ್ತಿರುತ್ತಾರೆ. ಆದರೆ ಈಗಿರುವ ಅಂಗದಾನದ ಪ್ರಮಾಣಕ್ಕೆ ೭೦೦ ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆಗಳಷ್ಟೇ ಸಾಧ್ಯ.
ಇಷ್ಟಾಗಿಯೂ ಆದರ್ಶ ಮೆರೆಯುವ ಮುನ್ನ…
ಇವಕ್ಕೆಲ್ಲ ಉಪಾಯವೆಂದರೆ ಹೆಚ್ಚು ಜನ ದೇಹದಾನ- ಅಂಗದಾನಕ್ಕೆ ಮುಂದಾಗುವುದು, ಅಲ್ಲವೆ? ಆ ನಿಟ್ಟಿನಲ್ಲಿ ನ. ಕೃಷ್ಣಪ್ಪ, ಜ್ಯೋತಿ ಬಸು ಮುಂತಾದವರ ಉದಾಹರಣೆಯನ್ನು ಪ್ರಚುರಪಡಿಸಿ ಸಾಧ್ಯವಾದಷ್ಟೂ ಜನರನ್ನು ದೇಹದಾನಕ್ಕೆ ಸಜ್ಜುಗೊಳಿಸೋಣ ಎಂಬ ಉತ್ತರ ಬರಬಹುದು.
ಒಳ್ಳೆಯದೇ. ಆದರೆ ತುಸು ನಿಧಾನಿಸಿ!
ಏಕೆ ಗೊತ್ತೇ? ದೇಹದಾನವೆಂಬುದು ಕೇವಲ ಮಾಡುವ ವ್ಯಕ್ತಿಗಷ್ಟೇ ಸಂಬಂಧಿಸಿದ ಸಂಗತಿ ಅಲ್ಲ. ಅಲ್ಲಿಯವರೆಗೆ ಆ ಜೀವಕ್ಕೆ ಆತುಕೊಂಡಿದ್ದ ಸಂಬಂಧಿಕರು, ಆಪ್ತರು ಎಲ್ಲರನ್ನೂ ಒಳಗೊಂಡ ಒಂದು ಮನೋಭೂಮಿಕೆಯೇ ಅಲ್ಲಿ ವಿಸ್ತರಿಸಿರುತ್ತದೆ. ಮರಣ ಸಂಭವಿಸುತ್ತಲೇ ಅದೊಂದು ಕೊಳೆತುಹೋಗಲನುವಾಗುವ ವಸ್ತುವೇ ಆಗಿದ್ದಿರಬಹುದು. ಭೌತಶಾಸ್ತ್ರದ ಪ್ರಾಕ್ಟಿಕಲ್ ಸತ್ಯ ಅದೇನೇ ಇದ್ದಿರಬಹುದು. ಆದರೆ ಒಂದಿಡೀ ಜೀವಿತದಲ್ಲಿ ಅವರ ಸುತ್ತಲಿನವರು ಬೆಳೆಸಿಕೊಂಡುಬಂದ ಭಾವನಾತ್ಮಕ ಸತ್ಯ? ಅದನ್ನು ಅಷ್ಟು ಸುಲಭಕ್ಕೆ ಹೇಗೆ ಕಡೆಗಣಿಸುವುದು? ಆ ದೃಷ್ಟಿಯಲ್ಲಿ ನೋಡಿದಾಗ ಹಂತ-ಹಂತಗಳಲ್ಲಿ ತೆರೆದುಕೊಳ್ಳುವ ಅಂತಿಮಕ್ರಿಯೆ, ಆ ಸಂದರ್ಭದಲ್ಲಿ ಮಿತ್ರರು-ಶತ್ರುಗಳೆಲ್ಲ ಒಂದುಗೂಡುವುದು, ಹನ್ನೆರಡನೇ ದಿನ, ವಾರ್ಷಿಕ ವಿಧಿ, ಆ ಸಂದರ್ಭದಲ್ಲಿ ಸತ್ತವರಿಗೆ ಇದು ಇಷ್ಟವಾಗಿತ್ತು ಎಂದು ಆ ಬಗೆಯ ಪದಾರ್ಥ ಮಾಡಿ ನೆನಪಿಸಿಕೊಳ್ಳುವುದು – ಇದಾವುದಕ್ಕೂ ವಿಜ್ಞಾನದ ಬೆಂಬಲ ಇಲ್ಲದೇ ಹೋಗಿರಬಹುದು, ಆದರೆ ಮನೋವೈಜ್ಞಾನಿಕ ತೂಕ ವೊಂದಿದೆ. ಈ ಎಲ್ಲ ಕ್ರಿಯೆಗಳ ಮೂಲಕ ಸತ್ತವನಿಗೆ ಸದ್ಗತಿ ಸಿಗು ತ್ತದೆ ಎಂಬ ಮಾತನ್ನು ಪಕ್ಕಕ್ಕಿರಿಸೋಣ. ಆದರೆ, ಆತನ ಸುತ್ತಲಿನ ಮಂದಿ ಅವನ ಸಾವು, ಅನುಪಸ್ಥಿತಿಯಿಂದ ಹಂತ-ಹಂತವಾಗಿ ಹೊರಗೆ ಬರಲಿಕ್ಕಿರುವ ಸೈಕಾಲಜಿ ಆಟಗಳು ಈ ಎಲ್ಲ ಶ್ರದ್ಧೆಗಳು!
‘ನಿಮ್ಮಾತ್ಮ ಸ್ವರ್ಗಕ್ಕೆ ಹೋಗಲಿ, ಭೂಮಿಯಲ್ಲಿರುವವರಿಗೆ ದೇಹದಾನ ಮಾಡಿಹೋಗಿ’ ಎಂಬ ಒಂದೇ ವಾಕ್ಯದಿಂದ ನೀವು ಎಲ್ಲರಿಗೂ ಅಂತ್ಯಸಂಸ್ಕಾರದ ಪ್ರಕ್ರಿಯೆಯಲ್ಲಿರುವ ಮನೋವಿಶ್ಲೇಷಣೆಯ ಆಯಾಮದ ನೆಮ್ಮದಿಯೊಂದನ್ನು ಕೊಡಲಾರಿರಿ. ಇನ್ನೊಬ್ಬರ ಬಾಳು ಬೆಳಗಬಲ್ಲ ದೇಹ – ಅವಯವಗಳನ್ನು ಸುಡದೇ, ಮಣ್ಣು ಮಾಡದೇ ಕಾಪಿಡುವುದರಲ್ಲಿ ಮೌಲ್ಯವಿದೆ ಎಂಬುದು ಎಷ್ಟು ಸತ್ಯವೋ, ಮೃತನ ಕುಟುಂಬ – ಬಂಧುವರ್ಗವನ್ನು ಆಚರಣೆಗಳ ಆಂತರ್ಯದಲ್ಲಿರುವ ಸೈಕಾಲಜಿಯ ಪ್ರಕ್ರಿಯೆಯೊಂದರಿಂದ ದೂರವಿರಿಸಿ, ಆ ಶೂನ್ಯವನ್ನು ತುಂಬದೇ ಹೋದರೆ – ಅತ್ತ ಇನ್ನೊಬ್ಬ ಮಾನವ ಜೀವಿಯ ದೈಹಿಕ ನ್ಯೂನತೆ ತುಂಬುವ ಭರದಲ್ಲಿ, ಇತ್ತ ಸುತ್ತಲಿನವರ ಮಾನಸಿಕ ಆರೋಗ್ಯ ಹದಗೆಟ್ಟುಬಿಟ್ಟೀತು ಎಂಬುದೂ ಅಷ್ಟೇ ಸತ್ಯ. ಅವಯವ-ಅಧ್ಯಯನದ ಉದ್ದೇಶ ಈಡೇರಿಕೆಯಲ್ಲಿ ಸತ್ತುಹೋದವರನ್ನು ಬಳಸಿಕೊಳ್ಳುವುದು ಮೌಲ್ಯಯುತ ಎಂಬುದಕ್ಕೆ ಎರಡು ಮಾತಿಲ್ಲವಾದರೂ, ಬದುಕಿಯೇ ಇರುವ ಆತನ ಬಳಗದವರ ಮಾನಸಿಕ ಆರೋಗ್ಯ ಕಾಪಾಡುವ ಕೆಲಸವೂ ಮನುಕುಲದ ಉದ್ಧಾರದಲ್ಲಿ ಬಹಳ ಮೌಲ್ಯದ ಮಾರ್ಗವೇ.
ಆದರ್ಶಕ್ಕೂ ಮೊದಲಿರಲಿ ಸಿದ್ಧತೆ
ದೇಹದಾನ-ಅಂಗದಾನಗಳ ಬಗ್ಗೆ ವೈದ್ಯಕೀಯ ವಲಯ – ಮಾಧ್ಯಮ – ಸೆಲೆಬ್ರಿಟಿ ವಲಯಗಳಲ್ಲಿ ಇತ್ತೀಚೆಗೆ ಚರ್ಚೆ ಹೆಚ್ಚಾಗಿದೆ. ಎಲ್ಲರೂ ಈ ದಾನಪ್ರಕ್ರಿಯೆಯ ಪರಿಧಿಗೆ ಬಂದು ಆದರ್ಶ ಮೆರೆಯಬೇಕು ಎಂದೇ ಎಲ್ಲ ಪ್ರಚಾರ ಕಾರ್ಯಕ್ರಮಗಳೂ ದೊಡ್ಡ ಧ್ವನಿಯಲ್ಲಿ ಹೇಳುತ್ತಿವೆ. ದೇಹದಾನ-ಅಂಗದಾನಗಳು ತುಂಬ ಪವಿತ್ರ ಕಾರ್ಯಗಳೆಂಬುದರಲ್ಲಿ ಅನುಮಾನವಿಲ್ಲ. ಆದರೆ ಈ ಬಗ್ಗೆ ಪ್ರಚಾರ ಮಾಡುತ್ತ, ಇದರ ಸಿದ್ಧತೆ ಬಗ್ಗೆ ಹೇಳುವಲ್ಲಿ ಯಾರೂ ಅಷ್ಟಾಗಿ ಗಮನ ಕೊಡುತ್ತಿಲ್ಲ. ನಮ್ಮ ದೇಹವೆಂಬುದು ನಮ್ಮ ಹಕ್ಕೇ ಆಗಿರಬಹುದು. ಆದರೆ, ದೇಹದಾನವನ್ನೋ ಅಂಗದಾನವನ್ನೋ ಮಾಡುವ ಸಂಕಲ್ಪ ಕೈಗೊಂಡಾಗ ಅಂಥದೊಂದು ಪ್ರಜ್ಞಾವಂತಿಕೆ – ಪ್ರೌಢಿಮೆ ನಮಗಷ್ಟೇ ಸೀಮಿತವಾಗಿದ್ದರೆ ಸಾಲದು. ಮುಖ್ಯವಾಗಿ, ನಮ್ಮ ಕುಟುಂಬದವರನ್ನು – ಆಪ್ತವರ್ಗವನ್ನು ಈ ಬಗ್ಗೆ ಅಣಿಗೊಳಿಸಬೇಕು. ಸತ್ತ ನಂತರ ನಮ್ಮ ದೇಹವನ್ನು ಏನೇ ಮಾಡಿದರೂ ನಮಗೇನೂ ಅನುಭವಕ್ಕೆ ಬರುವುದಿಲ್ಲವೆನ್ನಿ. ಆದರೆ ಇನ್ನೂ ಇಲ್ಲೇ ಇರುವ ನಮ್ಮವರೆನಿಸಿಕೊಂಡವರಿಗೆ ಒಂದಿಷ್ಟು ಭಾವನೆಗಳಿರುತ್ತವೆ. ಅವರಿಗೆ ನಮ್ಮನ್ನು ‘ಕಳುಹಿಸಿಕೊಡಬೇಕಿರುವ’ ಅಗತ್ಯವಿದ್ದಿರುತ್ತದೆ. ಅದವರ ಮಾನಸಿಕ ತುರ್ತು. ಹೀಗಾಗಿ ಇಂಥ ದಾನಪ್ರಕ್ರಿಯೆಗಳಿಗೆ ಒಳಗಾಗುವವರು ಕುಟುಂಬವರ್ಗದವರೊಂದಿಗೆ ಊಟದ ಮೇಜಿನಲ್ಲೋ, ಬಿಡುವಿನ ಮಾತಿನಲ್ಲೋ ಈ ಬಗ್ಗೆ ಚಿಂತನೆಗೆ ಹಚ್ಚಿ, ಮಾನಸಿಕವಾಗಿ ಅವರನ್ನು ಸಿದ್ಧಗೊಳಿಸಬೇಕು. ನಾವು ಯಾವುದನ್ನು ಪವಿತ್ರ ಎಂದುಕೊಂಡಿದ್ದೇವೋ ಅಂಥ ಭಾವನೆ ಅವರಲ್ಲೂ ತಕ್ಕಮಟ್ಟಿಗೆ ಮೂಡುವಂತೆ ಹಂತ ಹಂತವಾಗಿ ಪ್ರಯತ್ನಿಸುವ ಜವಾಬ್ದಾರಿಯೊಂದಿರುತ್ತದೆ.
ಅಂತಿಮಸಂಸ್ಕಾರ ಎಂಬ ಭಾವನೆಯನ್ನು ಇನ್ನಿಲ್ಲದಂತೆ ತೊಡೆದುಹಾಕುವುದಕ್ಕೆ ಅಸಾಧ್ಯ ಎನಿಸಿದವರಿಗೆ ಮೃತ ವ್ಯಕ್ತಿಯ ಕೂದಲನ್ನು ಕೊಡುವಂಥ ಕೆಲವು ರೂಢಿಗಳನ್ನು ಹಲವು ಆಸ್ಪತ್ರೆಗಳು ಇರಿಸಿಕೊಂಡಿವೆ. ವೈಚಾರಿಕ ಚರ್ಚೆಗಳು ಏನೇ ಇರಲಿ, ಇಲ್ಲಿ ನಂಬಿಕೆ ಮತ್ತು ಭಾವನೆಗಳ ಸಮತೋಲನ ಕಾಪಾಡಿಕೊಳ್ಳುವುದೂ ತುಂಬ ಮುಖ್ಯವೆನಿಸುತ್ತದೆ. ಕೊನೆಗೂ… ನಾವು ಶ್ರಾದ್ಧವನ್ನೋ, ದಫನ – ಮತ್ತಿನ್ನೆಂತಹದೋ ಸಂಸ್ಕಾರವನ್ನೋ ಮಾಡುವುದು ಆ ಮೂಲಕ ಒಡಮೂಡುವ ಸಾರ್ಥಕ್ಯ ಮತ್ತು ನೆಮ್ಮದಿಗಾಗಿ. ಇದೇನೂ ಬೇಡ ಅಂತ ದೇಹವನ್ನು ದಾನಕ್ಕೆ ಬರೆದು ಹೋಗುವುದರಲ್ಲೂ ಇರುವುದು ಸಾರ್ಥಕ್ಯ ಮತ್ತು ನೆಮ್ಮದಿಯ ಹುಡುಕಾಟವೇ ಆಗಿದೆ. ಅವರವರ ಸ್ವರ್ಗದ ಪರಿಕಲ್ಪನೆ ಅವರವರಿಗೆ.
ಹೀಗೆಂದಾಗ, ಇಂಥ ಭಿನ್ನ ಭಿನ್ನ ಸ್ವರ್ಗದ ಪರಿಕಲ್ಪನೆಗಳನ್ನು ಎಷ್ಟು ಗಟ್ಟಿಯಾಗಿ ಬೆಳೆಸಿಕೊಳ್ಳುತ್ತೇವೆ ಎಂಬುದರ ಮೇಲೆ, ಅಲ್ಲಿ ಹೋಗಿ ತಲಪುವ ನಮ್ಮ ನಂಬಿಕೆಗೆ ಬಲ ಬರುತ್ತದೆ. ಬದುಕಿದ್ದಾಗ ತಂದೆ-ತಾಯಿಗೆ ಊಟ ಹಾಕದವ ಅವರ ತಿಥಿಯನ್ನು ಎಷ್ಟೇ ವಿಜೃಂಭಣೆಯಿಂದ ಮಾಡಿದರೂ ಅದಕ್ಕೆ ಅಷ್ಟಾಗಿ ‘ಪುಣ್ಯ’ದ ಮೊಹರು ಬೀಳುವುದಿಲ್ಲ. ಅಂತೆಯೇ ದೇಹದಾನ – ಅಂಗದಾನದ ಇತ್ತೀಚಿನ ಪರಿಕಲ್ಪನೆಗಳು ಈ ಕ್ಷಣಕ್ಕೆ ಪುಣ್ಯ- ಸಾರ್ಥಕ್ಯದ ಪರಿಕಲ್ಪನೆ ಹೊತ್ತಿರುವುದು ಹೌದಾದರೂ ಆ ನಂಬಿಕೆ ಬಲವಾಗಬೇಕಾದ ದಾರಿ ದೂರವಿದೆ. ‘ನಾನೇನೋ ಹೃದಯ – ಕಿಡ್ನಿ ಕೊಟ್ಟು ಹೋಗುತ್ತೇನೆ, ಅದು ಅಗತ್ಯವಿರುವವನಿಗೆ ಸಲ್ಲುತ್ತದೆ ಎಂಬುದೇನೋ ಹೌದು. ಆದರೆ ಅಗತ್ಯವಿರುವ ಶ್ರೀಮಂತನಿಗಷ್ಟೇ ಸಲ್ಲುತ್ತದೆ ಎಂಬುದೂ ಹೌದು. ಏಕೆಂದರೆ ನಮ್ಮ ದೇಶದ ಸಂದರ್ಭದಲ್ಲಂತೂ ಇಂಥ ದುಬಾರಿ ಬದಲಿ ಶಸ್ತ್ರಚಿಕಿತ್ಸೆಗಳನ್ನು ಶ್ರೀಮಂತ ಜೀವವಷ್ಟೇ ಹೊಂದಬಲ್ಲದು. ಹೀಗಿರುವಾಗ ಇಲ್ಲಿಯೂ ನೂರು ಪ್ರತಿಶತ ಸಾರ್ಥಕ್ಯವನ್ನು – ಸ್ವರ್ಗವನ್ನು ಕಂಡುಕೊಳ್ಳುವುದು ಹೇಗೆ?’ ಇಂಥ ಪ್ರಶ್ನೆಗಳನ್ನೆಲ್ಲ ಸುಮ್ಮನೆ ನೆಪಗಳೆಂದು ಬದಿಗೆ ತಳ್ಳಲಾಗದು.
ದೇಹದಾನ-ಅಂಗದಾನಗಳು ಕೇವಲ ಆದರ್ಶದ ಹುಚ್ಚಿನಿಂದಷ್ಟೇ ಪವಿತ್ರ ಎನಿಸದೇ, ಅವುಗಳ ಆಳ ಅರ್ಥಕ್ಕೆ ಜನರ ಮನಸ್ಸುಗಳನ್ನು ಬೆಸೆದು, ಹೊಸದೊಂದು ಸ್ವರ್ಗವನ್ನು ಕಟ್ಟುವ ಕನಸೊಂದು ಮೂಡಬೇಕಿದೆ.
ಒಳ್ಳೆಯ ಲೇಖನ. ಎರಡೂ ಪಂಥಗಳನ್ನು ಸರಿತೂಗಿಸಿ ಬರೆದಿದ್ದೀರಿ. ಆದರೆ “‘ನಾನೇನೋ ಹೃದಯ – ಕಿಡ್ನಿ ಕೊಟ್ಟು ಹೋಗುತ್ತೇನೆ, ಅದು ಅಗತ್ಯವಿರುವವನಿಗೆ ಸಲ್ಲುತ್ತದೆ ಎಂಬುದೇನೋ ಹೌದು. ಆದರೆ ಅಗತ್ಯವಿರುವ ಶ್ರೀಮಂತನಿಗಷ್ಟೇ ಸಲ್ಲುತ್ತದೆ ಎಂಬುದೂ ಹೌದು. ಏಕೆಂದರೆ ನಮ್ಮ ದೇಶದ ಸಂದರ್ಭದಲ್ಲಂತೂ ಇಂಥ ದುಬಾರಿ ಬದಲಿ ಶಸ್ತ್ರಚಿಕಿತ್ಸೆಗಳನ್ನು ಶ್ರೀಮಂತ ಜೀವವಷ್ಟೇ ಹೊಂದಬಲ್ಲದು. ಹೀಗಿರುವಾಗ ಇಲ್ಲಿಯೂ ನೂರು ಪ್ರತಿಶತ ಸಾರ್ಥಕ್ಯವನ್ನು – ಸ್ವರ್ಗವನ್ನು ಕಂಡುಕೊಳ್ಳುವುದು ಹೇಗೆ?” ಅನ್ನುವಲ್ಲಿ ನಾವು ಯೋಚಿಸಬೇಕಾದ್ದು ಬಡವ ಶ್ರೀಮಂತ ಅನ್ನುವುದನ್ನಲ್ಲ. ಒಂದು “ಜೀವ” ಉಳಿಸಿದ ಸಾರ್ಥಕ್ಯವನ್ನು… ಅದು ಬದವನಿಗೂ ಹೋಗಬಾರದು ಎಂದೇನಿಲ್ಲ. ಹೆಚ್ಚು ಹೆಚ್ಚು ದಾನಿಗಳು ಮುಂದೆ ಬಂದ ಹಾಗೆ ಸೇವಾಮನೋಭಾವವನ್ನೇ ಧ್ಯೇಯವಾಗಿರಿಸಿಕೊಂಡ ದಾನಿಗಳು ಧನದ ರೂಪದಲ್ಲಿ ಸಹಾಯಕ್ಕೆ ಬರುತ್ತಾರೆ. ಬಂದಿರುವ ಉದಾಹರಣೆಗಲ್ಗೂ ಬೇಕಾದಷ್ಟಿವೆ. ವೃತ್ತಪತ್ರಿಕೆಯಲ್ಲಿ ಬಂದ ಸುದ್ದಿ/ಮನವಿಯನ್ನು ಆಧರಿಸಿ ತುರ್ತು ವೈದ್ಯಕೀಯ ವೆಚ್ಚವನ್ನು ಭರಿಸಿಕೊಂಡವರು ಇಲ್ಲವೆಂದಲ್ಲ. ಕಾಲಕ್ರಮೇಣ ಈ ವೆಚ್ಚ ಕಡಿಮೆ ಆಗಬಹುದು. ದಾನಿಗಳು ಹೆಚ್ಚಾಗಬಹುದು ಅನ್ನುವ ಭರವಸೆ ಇಡೋಣ.
ಒಳ್ಳೆಯ ಲೇಖನ.