ಪಾಶ್ಚಾತ್ಯ ಬಲಿಷ್ಠ ರಾಷ್ಟ್ರಗಳಿಗೆ ಚರ್ಚ್ ಅವುಗಳ ವಿದೇಶಾಂಗ ನೀತಿಯ ಒಂದು ಕೈಯಾಗಿ ವಸಾಹತುಶಾಹಿ ಯುಗದಿಂದಲೇ ಬಳಕೆಯಾಗುತ್ತಾ ಬಂದಿದೆ. ಜಗತ್ತಿನಲ್ಲಿಂದು ಕಂಡುಬರುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಪಿಡುಗು ಇಂದಿಗೂ ಬದಲಾಗದಿರುವುದು ಕಾಣಿಸುತ್ತದೆ. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ವೀಸಾ ಕೊಡುವುದಿಲ್ಲವೆಂದು ಟಾಂ ಟಾಂ ಮಾಡಿದ್ದಿರಬಹುದು, ಭಾರತದ ಅಭಿವೃದ್ಧಿ ಯೋಜನೆ ಅಥವಾ ಅಣುಶಕ್ತಿ ಸ್ಥಾವರಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಿರಬಹುದು, ಜಾಗತಿಕ ಕ್ರೈಸ್ತಜಾಲವು ಆಫ್ರಿಕದಿಂದ ಏಷ್ಯಾದ ವರೆಗೆ ಎಲ್ಲೆಡೆ ಅನಾಹುತ ಪರಂಪರೆಗಳನ್ನು ತರುತ್ತಲೇ ಇದೆ.
ಜಗತ್ತಿನ ಎಲ್ಲೇ ಇರಲಿ, ಚರ್ಚ್ಗೆ ಹಣದ ಕೊರತೆಯಂತೂ ಇಲ್ಲ; ಜೊತೆಗೆ ಪಾಶ್ಚಾತ್ಯ ಬಲಿಷ್ಠ ದೇಶಗಳ ಬೇಷರತ್ ಬೆಂಬಲ. ಅದನ್ನು ಧಾರಾಳ ಬಳಸಿಕೊಳ್ಳುವ ಈ ಜಾಗತಿಕ ಮತೀಯ ಉದ್ಯಮ ಜಗತ್ತಿನ ಯಾವುದೇ ಸರ್ಕಾರವಿರಲಿ ಅಥವಾ ಸಮಾಜವಿರಲಿ, ಅದನ್ನು ಉಧ್ವಸ್ತಗೊಳಿಸಲು ಹಿಂಜರಿಯುವುದಿಲ್ಲ. ಈ ಅಂಶದ ಬಗೆಗೆ ಭಾರತ ಈಗ ತುರ್ತಾಗಿ ಗಮನಹರಿಸಬೇಕಾಗಿದೆ.
ಈಶಾನ್ಯ ಭಾರತದಲ್ಲಿ
ಕಳೆದ ಸುಮಾರು ಆರು ದಶಕಗಳ ವಿದ್ಯಮಾನಗಳನ್ನು ಪರಿಶೀಲಿಸಿದರೆ ಎಲ್ಲೆಲ್ಲಿ ಕ್ರೈಸ್ತ ಮಿಷನರಿಗಳು ಪ್ರವೇಶಿಸಿ ಸಾಕಷ್ಟು ಜನರನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದಾರೋ, ಮತಾಂತರಿಸಿದ್ದಾರೋ, ಅಲ್ಲೆಲ್ಲ ಸಮಾಜವ್ಯವಸ್ಥೆಯಲ್ಲಿ ಏರುಪೇರಾಗಿ ಅಶಾಂತಿ ಸೃಷ್ಟಿಯಾಗಿದೆ. ಇತ್ತೀಚಿನ ಘೋರ ಉದಾಹರಣೆಯೆಂದರೆ ರುವಾಂಡದ ಜನಾಂಗಹತ್ಯೆ. ಬಹುತೇಕ ಇಡೀ ಈಶಾನ್ಯ ಭಾರತದ ಇಂದಿನ ಅವಸ್ಥೆ ಅದೇ ರೀತಿ ಇದೆ ಎಂದರೆ ತಪ್ಪಲ್ಲ. ಚರ್ಚ್ಪ್ರಾಯೋಜಿತ ಸಾಮಾಜಿಕ ಬಿಕ್ಕಟ್ಟುಗಳಿಂದ ಒಡಿಶಾ ನಿರಂತರವಾಗಿ ಕುದಿಯುತ್ತಲೇ ಇದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಸುಮಾರಾಗಿ ಅದೇ ಹಾದಿಯಲ್ಲಿವೆ.
ಕ್ರೈಸ್ತಮತಪ್ರಚಾರದ ಜಾಗತಿಕ ದುಷ್ಟಕೂಟ ಹಲವು ತಂತ್ರಗಳನ್ನು ಅನುಸರಿಸುತ್ತದೆ. ಅದರಲ್ಲಿ ಜಾಗತಿಕ ಮತ್ತು ಸ್ಥಳೀಯ ಎರಡೂ ನೆಲೆಗಳಲ್ಲಿ ಬಳಕೆಯಾಗುತ್ತಿರುವ ಒಂದು ಪರಿಣಾಮಕಾರಿ ತಂತ್ರವೆಂದರೆ ದೌರ್ಜನ್ಯ ಅಥವಾ ಉದ್ರೇಕದ ಸಾಹಿತ್ಯ (Atrocity Literature).
ಜಾಗತಿಕ ಕ್ರೈಸ್ತಜಾಲವು ಜನರನ್ನು ಕೆರಳಿಸುವಂತೆ ಅಥವಾ ಅವರಲ್ಲಿ ತಮ್ಮ ಮತದ ಬಗೆಗೆ ಕೀಳರಿಮೆ-ಅಪರಾಧಿ ಪ್ರಜ್ಞೆಯನ್ನು ಬೆಳೆಸುವುದು ಈ ಸಾಹಿತ್ಯದ ಮುಖ್ಯಲಕ್ಷಣ. ಅದರಲ್ಲಿ ಲಿಖಿತ, ಆಡಿಯೋ ಅಥವಾ ವಿಡಿಯೋ ಎಲ್ಲವೂ ಇದ್ದು, ಕ್ರೈಸ್ತೇತರ ಸಮಾಜಗಳ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಮತ್ತಿತರ ದೋಷಗಳನ್ನು ಹೆಕ್ಕಿ ಅಥವಾ ಕಲ್ಪಿಸಿ, ಅದಕ್ಕೆ ಬಣ್ಣಹಚ್ಚಿ ಬರೆಯುತ್ತದೆ ಅಥವಾ ವಿವರಿಸುತ್ತದೆ. ಅದರ ಮುಖ್ಯಲಕ್ಷಣಗಳು ಹೀಗಿರುತ್ತವೆ:
- ಈ ಸಮಾಜಗಳು ಹಿಂದುಳಿದಿರುತ್ತವೆ, ದಮನಕಾರಿ ಆಗಿರುತ್ತವೆ, ಹಾಗೂ ನಿರಂತರವಾಗಿ ಆಂತರಿಕ ಸಂಘರ್ಷದಲ್ಲಿರುತ್ತವೆ.
- ಅಂತಹ ದೋಷ-ಸಂಘರ್ಷಗಳನ್ನು ತೊಲಗಿಸಿ, ಈ ಸಮಾಜವನ್ನು ಉದ್ಧರಿಸಲು ಬೇಕಾದ ಪರಿಕರ ಮತ್ತು ಮಾರ್ಗಗಳಿರುವುದು ಕ್ರೈಸ್ತಮತದಲ್ಲಿ ಮಾತ್ರ.
- ಈ ಮತಪ್ರಚಾರಕರ ಪವಿತ್ರಕಾರ್ಯಕ್ಕೆ ಬಲಿಷ್ಠ, ಶ್ವೇತವರ್ಣೀಯ ಕ್ರೈಸ್ತದೇಶಗಳು ರಾಜಕೀಯ ಮಧ್ಯಪ್ರವೇಶಮಾಡಿ ನೆರವಾಗಬೇಕು.
ಜಗತ್ತಿನ ಎಲ್ಲೇ ಇರಲಿ, ಚರ್ಚ್ಗೆ ಹಣದ ಕೊರತೆಯಂತೂ ಇಲ್ಲ; ಜೊತೆಗೆ ಪಾಶ್ಚಾತ್ಯ ಬಲಿಷ್ಠ ದೇಶಗಳ ಬೇಷರತ್ ಬೆಂಬಲ. ಅದನ್ನು ಧಾರಾಳ ಬಳಸಿಕೊಳ್ಳುವ ಈ ಜಾಗತಿಕ ಮತೀಯ ಉದ್ಯಮ ಜಗತ್ತಿನ ಯಾವುದೇ ಸರ್ಕಾರವಿರಲಿ ಅಥವಾ ಸಮಾಜವಿರಲಿ, ಅದನ್ನು ಉಧ್ವಸ್ತಗೊಳಿಸಲು ಹಿಂಜರಿಯುವುದಿಲ್ಲ. ಈ ಅಂಶದ ಬಗೆಗೆ ಭಾರತ ಈಗ ತುರ್ತಾಗಿ ಗಮನಹರಿಸಬೇಕಾಗಿದೆ.
ಮತಾಂತರವೇ ಗುರಿ
ಕ್ರೈಸ್ತೇತರ ರಾಷ್ಟ್ರಗಳ ಪೂರ್ತಿಯಾದ ಕ್ರಿಸ್ತೀಕರಣವೇ ಈ ದೌರ್ಜನ್ಯ ಅಥವಾ ಉದ್ರೇಕಸಾಹಿತ್ಯದ ಚರಮಗುರಿ. ಸಮಾಜದ ಒಳಗಣ ಮಿಷನರಿ ಚಟುವಟಿಕೆ ಮತ್ತು ದೌರ್ಜನ್ಯಸಾಹಿತ್ಯದ ಸೃಷ್ಟಿ ಏಕಕಾಲಕ್ಕೆ ಸಾಗುತ್ತಿರುತ್ತವೆ. ಈ ಸಾಹಿತ್ಯವು ಅವರ ಕಟ್ಟಾ ಮತಪ್ರಚಾರ ಸಾಹಿತ್ಯಕ್ಕೆ ಪೂರಕವೂ ಹೌದು; ಇದು ಅದರ ಜೊತೆಗಾರನೂ ಹೌದು.
ನಿಜವೆಂದರೆ, ಈ ದೌರ್ಜನ್ಯಸಾಹಿತ್ಯವು ಹೊಸದೇನೂ ಅಲ್ಲ. ಭಾರತ ಸೇರಿದಂತೆ ಜಗತ್ತಿನ ವಿವಿಧೆಡೆ ಇದಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವೇ ಇದೆ.
ಭಾರತದ ನೆಲದಲ್ಲಿ ಮೊದಲಾಗಿ ಕಾಲಿಟ್ಟ ಕ್ರೈಸ್ತ ಮತಪ್ರಚಾರಕರು ಬಹಳ ಶ್ರಮಪಟ್ಟು ಹಿಂದೂ ಸಮಾಜದ ಎಲ್ಲ ಅಂಗ-ಉಪಾಂಗಗಳ ಬಗ್ಗೆ ಅಧ್ಯಯನ ಮಾಡಿದರು. ಇಲ್ಲಿನ ಆಚಾರಗಳು, ಸಂಪ್ರದಾಯ, ಕಟ್ಟಳೆ, ಪರಂಪರೆ, ಈ ಸಮಾಜದ ನಾಯಕರು (ಹೀರೋಗಳು), ಭಾಷೆಗಳು, ವ್ಯಾಕರಣ, ಕಾನೂನುಗಳು, ಮಹಾಕಾವ್ಯಗಳು, ಗದ್ಯ, ಪದ್ಯ, ಗೊಂಬೆಯಾಟ, ಶಿಲ್ಪ, ಕಲೆ, ಚಿತ್ರಕಲೆ, ನೃತ್ಯ, ನಾಟಕ – ಹೀಗೆ ಈ ಸಮಾಜವನ್ನು ಒಂದಾಗಿ ಬೆಸೆದ ಎಲ್ಲವನ್ನೂ ಅವರು ಕಣ್ಣಿಟ್ಟು ಅಭ್ಯಾಸ ಮಾಡಿದರು. ಅನಂತರ ಅವರು ಹಿಂದೂ ಸಮಾಜದ ಬೇರುಗಳನ್ನು ಶಿಥಿಲಗೊಳಿಸುವಂತಹ ಬಗೆಬಗೆಯ ಕಾರ್ಯತಂತ್ರಗಳನ್ನು ಹೆಣೆದರು. ಆ ಸಮಾಜರೂಢಿಗಳು, ಆಚರಣೆಗಳು ಮುಂತಾದವನ್ನು ನೇರವಾಗಿ ನಿಂದಿಸುವುದರಿಂದ ಆರಂಭಿಸಿ, ಅವರ `ಬೇರುಗಳು’ ನಿಜವಾಗಿ ಇರುವುದು ಕ್ರೈಸ್ತಮತದಲ್ಲಿ ಎಂದು ತೋರಿಸುವ ವರೆಗಿನ ಎಲ್ಲವೂ ಅದರಲ್ಲಿದ್ದವು. ಇಂದು ನಾವು ನೋಡುವಾಗ ಅವರು ತಮ್ಮ ಕನಸಿನಲ್ಲೂ ಕಂಡಿರದಷ್ಟು ಯಶಸ್ವಿ ಆಗಿರುವುದನ್ನು ಕಾಣುತ್ತೇವೆ.
ಈಗ ಒಬ್ಬ ಸಾಮಾನ್ಯ ಹಿಂದುವನ್ನು ಕೇಳಿದರೆ ಆತ ಅಥವಾ ಆಕೆಗೆ ತನ್ನ ಧರ್ಮದ ಬಗೆಗಿನ ಸಾಕಷ್ಟು ವಿವರಗಳು ತಿಳಿದಿರುವುದಿಲ್ಲ; ಇನ್ನು ಧರ್ಮದ ಬಗ್ಗೆ ಏನಾದರೂ ಸ್ವಲ್ಪ ತಿಳಿದುಕೊಂಡಿರುವರಲ್ಲಿ ಹೆಚ್ಚಿನವರು `ಎಲ್ಲ ಧರ್ಮಗಳು ಸಮಾನ’ ಎಂದು ಭ್ರಮಿಸಿರುವ ವರ್ಗದವರು.
ಇದಕ್ಕಿಂತ ದೊಡ್ಡ ಸಮಸ್ಯೆಯೆಂದರೆ, ದೇಶದ ಸ್ವಾತಂತ್ರ್ಯೋತ್ತರ ರಾಜಕೀಯ ಮತ್ತು ಆರ್ಥಿಕ ನೀತಿಗಳು ಯಾವ ರೀತಿ ಇವೆಯೆಂದರೆ, ಇಡೀ ಹಿಂದೂ ಸಮಾಜ ಕ್ರೈಸ್ತರ ಮತಾಂತರಗಳಿಗೆ ಫಲವತ್ತಾದ ಭೂಮಿ ಎನಿಸಿದೆ. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಹಿಂದೂ ಸಮಾಜಕ್ಕೆ ಅಂತಹ ಮಾರಕ ಹೊಡೆತವನ್ನು ನೀಡಿದರು; ಹಿಂದೂಧರ್ಮದ ಬಗೆಗೆ ಸ್ವತಃ ಅಸಡ್ಡೆಯನ್ನು ಹೊಂದಿದ್ದ ಅವರು, ಮತ, ಕಾನೂನು ಮತ್ತು ಸಾಮಾಜಿಕ ಕ್ಷೇತ್ರ ಎಲ್ಲದರಲ್ಲೂ ಹಿಂದುಗಳಿಗೆ ಹಾನಿಯುಂಟುಮಾಡಿದರು. ಅವರ ಆರ್ಥಿಕ ನೀತಿಗಳಿಂದಾಗಿ ಕಡುಬಡವರ ಸಂಖ್ಯೆ ಏರುತ್ತ ಸಾಗಿ ಮಿಲಿಯಗಟ್ಟಲೆ ಹಿಂದುಗಳು ಕ್ರೈಸ್ತಮತಕ್ಕೆ ಮತಾಂತರಗೊಳ್ಳಲು ಕಾರಣವಾಯಿತು; ಅದೇ ವೇಳೆ ಕ್ರೈಸ್ತ ಮಿಷನರಿಗಳು ಬಡಹಿಂದುಗಳಿಗೆ ಹಣ, ಶಿಕ್ಷಣ, ಆರೋಗ್ಯಸೇವೆಗಳ ಆಮಿಷ ಒಡ್ಡುತ್ತಲೇ ಇದ್ದರು. ಇದನ್ನೆಲ್ಲ ನೆನಪಿಸುವಾಗ “ಹಸಿದ ಹೊಟ್ಟೆಗಳಿಗೆ ತತ್ತ್ವಶಾಸ್ತ್ರವನ್ನು ಬೋಧಿಸಲು ಅಸಾಧ್ಯ” ಎನ್ನುವ ಸ್ವಾಮಿ ವಿವೇಕಾನಂದರ ಮಾತು ನೂರಕ್ಕೆ ನೂರು ಸತ್ಯ ಎನಿಸದಿರದು.
ಈ ದೌರ್ಜನ್ಯಸಾಹಿತ್ಯಕ್ಕೆ ದೊರೆತ ಮೊದಲ ಮತ್ತು ಪರಿಣಾ ಮಕಾರಿ ಯಶಸ್ಸನ್ನು ಜಾತೀಯ ಕ್ಷೇತ್ರದಲ್ಲಿ ಗುರುತಿಸಬಹುದು. ಜಾತಿಯೆಂಬುದು, ವಿಶೇಷವಾಗಿ ಬ್ರಾಹ್ಮಣರು ನಡೆಸಿದ ಶೋಷಣೆ ಎಂದು ಹಿಂದೂ ಸಮಾಜವನ್ನು ಟೀಕಿಸುವುದು ಈಗ ತುಂಬ ಸುಲಭದ ಕೆಲಸವಾಗಿಬಿಟ್ಟಿದೆ; ಹಿಂದೂ ಸಮಾಜದ ಎಲ್ಲ ಅಂಶಗಳನ್ನು ನಕಾರಾತ್ಮಕವಾಗಿಯೇ ಕಾಣಲಾಗುತ್ತಿದೆ.
ಅ.ಭಾ. ಕ್ರೈಸ್ತ ಮಂಡಳಿ
ಉದಾಹರಣೆಗೆ, ಅಖಿಲ ಭಾರತ ಕ್ರೈಸ್ತ ಮಂಡಳಿಯು (ಎಐಸಿಸಿ) ಯಾವಾಗಲೂ ದಲಿತ್ ಫ್ರೀಡಂ ನೆಟ್ವರ್ಕ್ (ಡಿಎಫ್ಎನ್) ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ. ಈ ಡಿಎಫ್ಎನ್ ಆದರೋ ಶ್ವೇತವರ್ಣೀಯ ಕ್ರೈಸ್ತ ಮತಪ್ರಚಾರಕರು ನಡೆಸುವ ಒಂದು ಸಂಸ್ಥೆ. ಭಾರತದ ಜಾತಿವ್ಯವಸ್ಥೆಯ ಬಗ್ಗೆ ತಪ್ಪು ಕಲ್ಪನೆಯನ್ನು ನೀಡುವ ಅದು ಜಾತಿದೌರ್ಜನ್ಯಗಳೆಂದು ಬಹಳಷ್ಟು ಉತ್ಪ್ರೇಕ್ಷಿತ ವರದಿಗಳನ್ನು ನೀಡುತ್ತದೆ. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಜಾತಿವಿರೋಧಿ ಶಾಸನವು ಅಂಗೀಕಾರವಾಗುವಂತೆ ನೋಡಿಕೊಂಡದ್ದು ಡಿಎಫ್ಎನ್ನ ಇತ್ತೀಚಿನ `ಯಶಸ್ಸು’ ಎನಿಸಿದೆ. ವಸಾಹತುಶಾಹಿಯು ಜಾತಿಯನ್ನು ಹೇಗೆ ವ್ಯಾಖ್ಯಾನಿಸುತ್ತಿದ್ದಿತೋ ಈ ಶಾಸನ ಅದರಂತೆಯೇ ಇದೆ. ಜಾನ್ ದಯಾಳ್ ಎಂಬಾತ ಪ್ರಸ್ತುತ ಎಐಸಿಸಿಯ ಓರ್ವ ಪ್ರಮುಖ ಸದಸ್ಯನಾಗಿದ್ದು, ಆತನಿಗೆ ಭಾರತದ ವಿರುದ್ಧ ಕೆಲಸ ಮಾಡಿದ ಇತಿಹಾಸವೇ ಇದೆ.
ಕ್ರೈಸ್ತ ಮತಪ್ರಚಾರಕರು ತಮ್ಮ ಲಾಭಕ್ಕೆ ಬಳಸಿಕೊಂಡ ಇನ್ನೊಂದು ಕ್ಷೇತ್ರ ಹಿಂದೂ ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದ್ದು. ವಸಾಹತುಶಾಹಿಯ ಆರಂಭದ ದಿನಗಳಲ್ಲಿ ಮೂರ್ತಿಪೂಜೆ, ನಿಸರ್ಗಪೂಜೆಯಂತಹ ಆರಾಧನೆಗಳನ್ನು `ಮಹಿಳೆಯರು ಮತ್ತು ಮಕ್ಕಳನ್ನು ಹಿಂಸಿಸುವ ಸೈತಾನನ ಪೂಜೆ’ ಎಂದು ವ್ಯಾಖ್ಯಾನಿಸಿ ನಿಂದಿಸಿದ್ದಿದೆ. ಅದಕ್ಕೆ ಸರಿಯಾದ ಉತ್ತರ ನೀಡಿದವರು ಆನಂದ ಕೆಂಟಿಷ್ ಕುಮಾರಸ್ವಾಮಿ ಅವರು. ತಮ್ಮ ಕೃತಿಗಳಲ್ಲಿ ಅವರು ಚರ್ಚ್-ಪ್ರೇರಿತ ವ್ಯಾಖ್ಯಾನಗಳ ಹಿಂದಿರುವ ಕಿಡಿಗೇಡಿತನವನ್ನು ಬಯಲುಗೊಳಿಸಿದರು. (ಕೃತಿಗಳು – Status of Indian Women and Indian Images with Many Arms). ವೀಣಾ ಓಲ್ಡನ್ಬರ್ಗ್ ಅವರ Dowry Murder ನಲ್ಲಿ ಭಾರತದ ಸಂಸ್ಕೃತಿಯ ಮೇಲೆ ದೋಷಾರೋಪ ಮಾಡುವ ಸಲುವಾಗಿ ವರದಕ್ಷಿಣೆ ಹಿಂಸೆಗಳೆಂದು ಆರೋಪಿಸಿ ಉತ್ಪ್ರೇಕ್ಷಿತ ಹೇಳಿಕೆ ನೀಡುವಂತೆ ಬ್ರಿಟಿಷ್ ಅಧಿಕಾರಿಗಳು ಭಾರತೀಯರಿಗೆ ಪ್ರಚೋದನೆ ನೀಡಿದ ಸಂದರ್ಭಗಳ ವಿವರ ನೀಡಿದ್ದಾರೆ. ಇಂದಿನ ಉಗ್ರ ಸ್ತ್ರೀವಾದಿ ಸಾಹಿತ್ಯ ಮತ್ತು ನ್ಯಾಯಸಮ್ಮತವಲ್ಲದ ಮಹಿಳಾಪರ ಶಾಸನ ಅದೇ ವಾಮಮಾರ್ಗದ ಜಾಡಿನವು ಎನ್ನಬಹುದು.
ವಸಾಹತುಶಾಹಿ ಕಾಲದ ಆರಂಭದಿಂದಲೇ ಚರ್ಚ್ ಜಗತ್ತಿನ ಎಲ್ಲೆಡೆ ಕ್ರೈಸ್ತೇತರ ಸಂಸ್ಕೃತಿಗಳ ವಿರುದ್ಧ ಈ ಬಗೆಯ ದೌರ್ಜನ್ಯಸಾಹಿತ್ಯವನ್ನು ಪ್ರಯೋಗಿಸುತ್ತಾ ಬಂದುದನ್ನು ಗಮನಿಸಬಹುದು. ವಸಾಹತುಶಾಹಿ ಆರಂಭದ ದಿನಗಳಾದ ೧೭ನೇ ಮತ್ತು ೧೮ನೇ ಶತಮಾನಗಳಲ್ಲಿ ಅಮೆರಿಕ, ಆಫ್ರಿಕ ಮತ್ತು ಏಷ್ಯಾಗಳಿಗೆ ಹೋಗಿ ನೆಲೆಸಿದ ಯೂರೋಪಿನ ಜನ, ಆ ಪ್ರದೇಶಗಳ ಸ್ಥಳೀಯನಿವಾಸಿಗಳು ಅನಾಗರಿಕರು ಮತ್ತು ಕ್ರೂರಿಗಳಾಗಿದ್ದು, ದೈವಭೀರುಗಳಾದ ಕ್ರೈಸ್ತರಿಂದ ಅವರ ಸುಧಾರಣೆ ಆಗಬೇಕಾಗಿದೆ ಎನ್ನುವ ಚಿತ್ರಣ ನೀಡಿದರು.
ಅದಕ್ಕಾಗಿ ವಸಾಹತುಶಾಹಿಗಳು ಮತ್ತು ಮೂಲನಿವಾಸಿಗಳ ನಡುವೆ ಉಂಟಾದ ಘರ್ಷಣೆಗಳಿಗೆ ಅನಾಗರಿಕ ಮೂಲನಿವಾಸಿಗಳು ಮತ್ತು ಸುಸಂಸ್ಕೃತ ಕ್ರೈಸ್ತರ ನಡುವಣ ಘರ್ಷಣೆ ಎನ್ನುವ ವ್ಯಾಖ್ಯಾನ ನೀಡಿದರು; ಮೂಲನಿವಾಸಿಗಳ ಮೇಲೆ ಅವರು ನಡೆಸಿದ ದೌರ್ಜನ್ಯಗಳನ್ನು ಆ ರೀತಿಯಲ್ಲಿ ಸಮರ್ಥಿಸಿಕೊಂಡರು.
ಈ ವ್ಯಾಖ್ಯಾನಗಳು ಕ್ರಮೇಣ ಮುಖ್ಯಧಾರೆಗೆ ಸೇರಿಕೊಂಡು `ಆರ್ಯರ ದಾಳಿ’ ಸಿದ್ಧಾಂತ, `ಬಿಳಿ ಮನುಷ್ಯನ ಹೊರೆ’ (White Man’s Burden) ಮುಂತಾದ ವರ್ಣದ್ವೇಷದ ಸಿದ್ಧಾಂತಗಳನ್ನು ಬೆಂಬಲಿಸಿದವು; ಅವರು ನಡೆಸಿದ ವಸಾಹತುಶಾಹಿಗೆ ಇದು ಸಮರ್ಥನೆ ಕೂಡ ಆಗಿತ್ತು. ಏಕೆಂದರೆ ಅವರು ತುಳಿತಕ್ಕೊಳಗಾದ ದ್ರಾವಿಡರನ್ನು ಆರ್ಯರಿಂದ `ರಕ್ಷಿಸಲು’ ಬಂದವರಾಗಿದ್ದರು.
ದಮನಕ್ಕೀಡಾದ ಮೂಲನಿವಾಸಿಗಳನ್ನು ಒಂದೆಡೆ ಕ್ರೂರಿಗಳೆಂದು ಚಿತ್ರಿಸಿದ ಪಾಶ್ಚಾತ್ಯ ವಸಾಹತುಶಾಹಿಗಳು, ಇನ್ನೊಂದೆಡೆ ವರ್ಣದ್ವೇಷ, ಸ್ತ್ರೀದ್ವೇಷ (Misogyny) ಹಾಗೂ ಗುಲಾಮಗಿರಿಯಂತಹ ತಮ್ಮ ಹುಳುಕುಗಳನ್ನು ಸರಿಪಡಿಸಿಕೊಳ್ಳಬಹುದಾದ ಪುಟ್ಟ ದೋಷಗಳೆಂದು ಅಡಗಿಸಿಟ್ಟರು. ಮುಂದೆ ವಸಾಹತುಶಾಹಿಯ ಸಮರ್ಥಕರಿಗೆ ಕನ್ನಡಿ ಹಿಡಿದು ಅವರ ಹುಳುಕುಗಳು ಯಾವ ಸ್ವರೂಪದವೆಂದು ಮನದಟ್ಟು ಮಾಡಿದಾಗಲೂ ಅವರು `ಅದನ್ನೆಲ್ಲ ಸರಿಪಡಿಸಬಹುದು’ ಎನ್ನುತ್ತಾ, ದಲಿತರು ಮತ್ತು ಬುಡಕಟ್ಟು ಜನರಿಗೆ ಸಂಬಂಧಿಸಿ ಚರ್ಚ್ ಹೇಳಿದ್ದನ್ನೇ ತುತ್ತೂರಿ ಊದುತ್ತಾ ಹೋದರು.
ಕಿಸುಬಾಯಿದಾಸರು
ಡಿಎಫ್ಎನ್ ಮತ್ತು ಎಐಸಿಸಿ (ಅ.ಭಾ. ಕ್ರಿಶ್ಚಿಯನ್ ಕೌನ್ಸಿಲ್)ಗಳು ಬಹಳಷ್ಟು ಸಂದರ್ಭಗಳಲ್ಲಿ `ಹಾಡಿದ್ದನ್ನೇ ಹಾಡಿದ ಕಿಸುಬಾಯಿದಾಸ’ ಎಂಬಂತೆ ಭಾರತದಲ್ಲಿ ಆರ್ಯರ ಉತ್ತರಾಧಿಕಾರಿಗಳು ದಲಿತರನ್ನು ಅಳಿಸಿಹಾಕುತ್ತಿದ್ದಾರೆನ್ನುವ ಅತಿರಂಜಿತ ಚಿತ್ರವನ್ನು ನೀಡುತ್ತಿರುತ್ತಾರೆ. ಅದಕ್ಕೊಂದು ಉದಾಹರಣೆ ಕಾಂಚಾ ಇಳ್ಳಯ್ಯ ಎಂಬ ಲೇಖಕ. ಭಾರತ ದಲಿತರನ್ನು ಹಿಂಸಿಸುವ ಫ್ಯಾಸಿಸ್ಟ್ ದೇಶ ಎಂಬುದು ಆತನ ಸಿದ್ಧಾಂತ. ಅಂಗನ ಚಟರ್ಜಿ, ಗಾಯಿಲ್ ಓಮ್ವೆಲ್ಟ್, ವಿ.ಟಿ. ರಾಜಶೇಖರ್, ವಿಜಯಪ್ರಸಾದ್ ಅವರೆಲ್ಲ ಅದೇ ಕಿಸುಬಾಯಿದಾಸರ ಸಾಲಿಗೆ ಸೇರುತ್ತಾರೆ. ಈ ವಿಕೃತ ಬುದ್ಧಿಜೀವಿಗಳು ಕಾರುವ ವಿಷ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ವೀಕೃತವಾಗಿ, ಎಡಾಲಸ್ ಟೌನ್ಸ್ನಂತಹ ಅಮೆರಿಕದ ಕಾಂಗ್ರೆಸ್ ಸದಸ್ಯರು ಭಾರತವನ್ನು `ಕ್ರೂರಿಯಾದ ಪುರೋಹಿತ ಪ್ರಭುತ್ವ’ ಎಂದು ಹೇಳುತ್ತಿದ್ದಾರೆ.
ಕಳೆದ ಸುಮಾರು ೪೦೦ ವರ್ಷಗಳಲ್ಲಿ ಈ ದೌರ್ಜನ್ಯಸಾಹಿತ್ಯವು ಕಥೆ, ನಾಟಕ, ಚಲನಚಿತ್ರಗಳೊಳಗೂ ಪ್ರವೇಶಿಸಿಬಿಟ್ಟಿದೆ. `ಬಿಳಿ ಮನುಷ್ಯನ ಹೊರೆ’ಯಂತಹ ಸಿದ್ಧಾಂತಗಳು ಯಾವ ಮಟ್ಟಕ್ಕೆ ಬೆಳೆದಿವೆ ಎಂದರೆ ತಮ್ಮನ್ನು ನಾಗರಿಕರನ್ನಾಗಿ ಮಾಡಿದುದಕ್ಕಾಗಿ ವಸಾಹತುಗಳ ಜನ ವಸಾಹತುಶಾಹಿಗಳಿಗೆ ಕೃತಜ್ಞರಾಗಿದ್ದಾರೆ ಎಂದು ಹೇಳುತ್ತಿವೆ.
ಅಪವಾದವೇ ಇಲ್ಲ ಎಂಬಂತೆ ದೌರ್ಜನ್ಯಸಾಹಿತ್ಯವು ಎಲ್ಲ ಸಂದರ್ಭಗಳಲ್ಲೂ ಏಕಮುಖಿಯಾದದ್ದು. ಸ್ಥಳೀಯ ಹಿಂದುಗಳಿಂದ ವಿರೋಧ ಬಂದಾಗ ಸಂಘರ್ಷಕ್ಕೆ ಕಾರಣವಾಗುವ ಕ್ರೈಸ್ತರ ಮತಾಂತರ ಚಟುವಟಿಕೆಗಳನ್ನು ಅದು ಅಪರಾಧವೆಂದು ಪರಿಗಣಿಸುವುದೇ ಇಲ್ಲ. ಬದಲಾಗಿ ಹಿಂದುಗಳ ವಿರೋಧವೇ ಅಪರಾಧವೆಂದು ಅಂತಾರಾಷ್ಟ್ರೀಯ ಮಾಧ್ಯಮ ಮತ್ತಿತರ ವೇದಿಕೆಗಳಲ್ಲಿ ಬಿಂಬಿಸುತ್ತದೆ; ಹಿಂದೂ ಫ್ಯಾಸಿಸಮ್ ಎನ್ನುತ್ತದೆ ಹಾಗೂ ಅಸಹಾಯರಾದ ಕ್ರೈಸ್ತರ ವಿರುದ್ಧ ಸರ್ಕಾರಿ ಪ್ರಾಯೋಜಿತ ಹಿಂಸೆ ಎಂದು ಟೀಕಿಸುತ್ತದೆ.
ಈ ವಂಚಕ `ದೌರ್ಜನ್ಯಸಾಹಿತ್ಯ’ಕ್ಕೊಂದು ಶ್ರೇಷ್ಠ ದುಷ್ಟ ಉದಾಹರಣೆಯೆಂದರೆ, ಒಡಿಶಾದ ಕಂಧಮಾಲ್ನಲ್ಲಿ ನಡೆದ ೮೦ ವರ್ಷ ವಯಸ್ಸಿನ ಸ್ವಾಮಿ ಲಕ್ಷ್ಮಣಾನಂದರ ಹತ್ಯೆಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಿದ ರೀತಿ. ಕ್ರೈಸ್ತ ಮತಪ್ರಚಾರಕರ ಸೂಚನೆಯ ಮೇರೆಗೆ ಮಾವೋವಾದಿಗಳು ಅವರನ್ನು ಕೊಂದಿದ್ದರು; ಆದರೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಚಾರ ನಡೆದದ್ದು ಒಡಿಶಾದಲ್ಲಿ ಹಿಂದುಗಳು ಕ್ರೈಸ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬುದಾಗಿ.
`ಘರ್ ವಾಪಸೀ’ (ಮರಳಿ ಮಾತೃಧರ್ಮಕ್ಕೆ)ಯನ್ನು ಖಂಡಿಸುವ ರೂಪದಲ್ಲಿ ಇಂದು ಅಂಥದೇ ವಂಚಕಸಾಹಿತ್ಯ ಒಂದಷ್ಟು ತಯಾರಾಗುತ್ತಿದೆ. ಬಲಾತ್ಕಾರ ಅಥವಾ ವಂಚನೆ ಅಥವಾ ಎರಡೂ ಸೇರಿ ಕ್ರೈಸ್ತ ಮತ ಅಥವಾ ಇಸ್ಲಾಂಗೆ ಮತಾಂತರಗೊಂಡವರನ್ನು ಕೆಲವು ಹಿಂದೂ ಗುಂಪುಗಳು ಮರಳಿ ಹಿಂದೂಧರ್ಮಕ್ಕೆ ಸೇರಿಸಿಕೊಳ್ಳುತ್ತಿರುವುದು ಇವರ ಕಣ್ಣಿನಲ್ಲಿ ದೊಡ್ಡ ಅಪರಾಧವಾಗಿಬಿಟ್ಟಿದೆ.
ಗುಜರಾತ್ ಗಲಭೆ
ಕಂಧಮಾಲ್ ಘಟನೆಗೆ ಸಂಬಂಧಿಸಿ ಬಂದ ಕ್ರೈಸ್ತ ಮತಪ್ರಚಾರಕರ ಸಾಹಿತ್ಯ ಒಂದು ಬಗೆಯ ವಂಚಕಸಾಹಿತ್ಯವಾದರೆ ಇದಕ್ಕಿಂತ ಮಿಗಿಲಾದದ್ದು ಇನ್ನೊಂದಿದೆ; ಅದು ೨೦೦೨ರ ಗುಜರಾತ್ ಗಲಭೆಗೆ ಸಂಬಂಧಿಸಿದ್ದು. ಆ ವಿಚಾರಸರಣಿ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಖ್ಯಾತ ಅಂಕಣಕಾರ ರಾಜೀವ್ ಶ್ರೀನಿವಾಸನ್ `ಗುಜರಾತ್ ಗಲಭೆ ಗುಡಿಕೈಗಾರಿಕೆ’ (Gujarat Riots Cottage Industry) ಎನ್ನುವ ನುಡಿಗಟ್ಟನ್ನೇ ತಯಾರಿಸಿದ್ದರು. ಈ `ಗುಡಿಕೈಗಾರಿಕೆ’ಯ ಸದಸ್ಯನಾಗಿರದ ಅಥವಾ ಅದರಿಂದ ಪ್ರಯೋಜನ ಪಡೆಯದಿದ್ದ ಯಾವುದೇ ಅಂಕಣಕಾರ, ವಿದ್ವಾಂಸ, ವಿಶ್ಲೇಷಣಕಾರ, ಲೇಖಕ, ಮಾಧ್ಯಮ ಸಂಸ್ಥೆ, ಚಲನಚಿತ್ರ ನಿರ್ಮಾಪಕ, ನಾಟಕಕಾರ, ಮನಃಶಾಸ್ತ್ರ ವಿಶ್ಲೇಷಕ, ಕವಿ, ಹೋರಾಟಗಾರ, ಎನ್ಜಿಓ (ಸರ್ಕಾರೇತರ ಸಂಸ್ಥೆ) ಮುಲ್ಲಾ ಹಾಗೂ ಮತಪ್ರಚಾರಕ ಇಲ್ಲ ಎಂದರೆ ತಪ್ಪಲ್ಲ.
ಆ `ಕೈಗಾರಿಕೆ’ ಓರ್ವ ವ್ಯಕ್ತಿಗೆ ಮಸಿಬಳಿಯುವ ಒಂದಂಶದ ಕಾರ್ಯಕ್ರಮವನ್ನು ಹೊಂದಿತ್ತು; ಆ ವ್ಯಕ್ತಿಯೇ ಇಂದಿನ ಪ್ರಧಾನಿ. ಅಂತಾರಾಷ್ಟ್ರೀಯ ವಿಚಾರಸಂಕಿರಣ, ಉಪನ್ಯಾಸಮಾಲೆ ಎಲ್ಲವುಗಳಿಗೂ ಭಾರತದ ಮೇಲೆ ಹೇಳಿದ ವ್ಯಕ್ತಿಗಳು ಧಾರಾಳವಾದ ವಿಷಯವನ್ನು ಪೂರೈಸುತ್ತಿದ್ದರು; ಅದು ಅಲ್ಲಿಂದ ಪಾಶ್ಚಾತ್ಯ ದೌರ್ಜನ್ಯಸಾಹಿತ್ಯಕ್ಕೆ ರವಾನೆಯಾಗುತ್ತಿತ್ತು. ಅಂತಹ ನಿರಂತರ ಪ್ರಯತ್ನಗಳಿಂದ ಹಲವು ಪರಿಣಾಮಗಳಾಗಿರಬಹುದು; ಅವುಗಳಲ್ಲಿ ಒಂದೆಂದರೆ (ಅಂದಿನ) ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡುವುದಿಲ್ಲವೆಂದು ಘೋಷಿಸಿಕೊಂಡದ್ದು.
ಸಾರ್ವಭೌಮತೆಗೆ ಧಕ್ಕೆ
ಆ ಹೊತ್ತಿಗೆ ಫ್ರೆಂಚ್ ವಿದ್ವಾಂಸ ಕ್ರಿಸ್ಟೋಫೆ ಜಾಫರ್ಲಟ್ ಎಂಬಾತ ಗುಜರಾತ್ ಗಲಭೆ ಬಗ್ಗೆ ಪಾಶ್ಚಾತ್ಯ ಮಾಧ್ಯಮಕ್ಕೆ ಭಾರೀ ಪ್ರಮಾಣದ ದೌರ್ಜನ್ಯಸಾಹಿತ್ಯವನ್ನು ಪೂರೈಸಿದ್ದ. ಅದಕ್ಕಿಂತ ಕೆಡುಕಿನ ಅಂಶವೆಂದರೆ, ಭಾರತೀಯ ಕ್ರೈಸ್ತ ಲಾಬಿಯ ಪ್ರಮುಖ ಸದಸ್ಯರು ಮತ್ತವರ ಸಹವರ್ತಿಗಳು (ಭಾರತೀಯ ಪ್ರಜೆಗಳೆಂದು ಪ್ರತ್ಯೇಕ ಹೇಳಬೇಕಿಲ್ಲ) ಸಾಂವಿಧಾನಿಕವಾಗಿ ಚುನಾಯಿತರಾದ ಓರ್ವ ಮುಖ್ಯಮಂತ್ರಿಯ ವಿರುದ್ಧ ವಿದೇಶೀ ನೆಲದಲ್ಲಿ ಯುಎಸ್ಸಿಐಆರ್ಎಫ್ ಮುಂದೆ ಸಾಕ್ಷ್ಯ ಹೇಳಿದರು. ಈ ಲಾಬಿ (ಒತ್ತಡ ಗುಂಪು)ಯ ಸದಸ್ಯರಲ್ಲಿ ಜಾನ್ ದಯಾಳ್, ಫಾದರ್ ಸಿಡ್ರಿಕ್ ಪ್ರಕಾಶ್, ತೀಸ್ತಾ ಸೇಟಲ್ವಾಡ್, ಕಮಲಮಿತ್ರ ಚಿನಾ ಮತ್ತು ಜಾನ್ ಪ್ರಭುದಾಸ್ ಸೇರಿದ್ದಾರೆ. ಇದು ಸಾಲದೆಂಬಂತೆ ೨೦೧೩ರಲ್ಲಿ ಭಾರತದ ಸಂಸತ್ತಿನ ೬೫ ಮಂದಿ ಸದಸ್ಯರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದು ನರೇಂದ್ರ ಮೋದಿ ಅವರ ವೀಸಾದ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡವೆಂದು ಒತ್ತಾಯಿಸಿದರು. ಒಟ್ಟಿನಲ್ಲಿ ೨೦೦೨ರ ಗುಜರಾತ್ ಗಲಭೆಗೆ ಸಂಬಂಧಿಸಿ ನಡೆದ ಈ ಚಟುವಟಿಕೆಗಳು ಈ ಜನರಿಗೆ ಭಾರತದ ಸಾರ್ವಭೌಮತೆಯ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ ಎಂಬುದನ್ನು ಸಾಬೀತುಪಡಿಸಿದವು; ಮತ್ತು ರಾಷ್ಟ್ರದ ಭದ್ರತೆಗೆ ಕ್ರೈಸ್ತ ಲಾಬಿ ಯಾವ ರೀತಿಯಲ್ಲಿ ಬೆದರಿಕೆಯನ್ನು ಒಡ್ಡಬಹುದು ಎಂಬುದನ್ನು ಕೂಡ ತೋರಿಸಿಕೊಟ್ಟವು.
ಇದೇ ವೇಳೆ ಇಂದಿನ ದೌರ್ಜನ್ಯಸಾಹಿತ್ಯದ ಇನ್ನೊಂದು ಅಪಾಯಕಾರಿ ಮುಖವನ್ನು ಕೂಡ ನಾವು ಗಮನಿಸಬೇಕು; ದೇಶದ ಕೆಲವು ಕ್ರೈಸ್ತ ಗುಂಪುಗಳು ಪಶ್ಚಿಮದ ತಮ್ಮ ಪ್ರಾಯೋಜಕರ ದೌರ್ಜನ್ಯಸಾಹಿತ್ಯಕ್ಕೆ ನಿಯಮಿತವಾಗಿ ವಸ್ತುವನ್ನು ಒದಗಿಸುತ್ತಿವೆ. ಅದಲ್ಲದೆ ಎಐಸಿಸಿ, ಜಾಗತಿಕ ಕ್ರೈಸ್ತ ಮತಪ್ರಚಾರಜಾಲದ ಭಾರತೀಯ ಕೈಯಾಗಿ ಕೆಲಸ ಮಾಡುತ್ತಿದೆ. ಬಹಳಷ್ಟು ರಾಜಕೀಯ ಪ್ರಭಾವವಿರುವ ಅಮೆರಿಕ ಮೂಲದ ಕೆಲವು ಪ್ರಧಾನಧಾರೆಯ ಚಿಂತಕರು ಈ ವಿಷಯ ಬಳಸಿ ಅಮೆರಿಕ ಸರ್ಕಾರದ ಭಾರತೀಯ ನೀತಿಯ ಮೇಲೆ ಪ್ರಭಾವ ಬೀರುತ್ತಿರುವುದು ಆತಂಕಕಾರಿಯಾಗಿದೆ.
ಅಂತಹ ಬಹಳಷ್ಟು ಸಂಸ್ಥೆಗಳು ಅಮೆರಿಕದಲ್ಲಿವೆ; ಅದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅಲ್ ಖೈದಾದ ಹಿಂದೂ ಆವೃತ್ತಿ ಎನ್ನುವ ರ್ಯಾಂಡ್ (ಆರ್ಎಎನ್ಡಿ) ಕಾರ್ಪೋರೇಷನ್ ಕೂಡ ಸೇರಿದೆ.
ಉಪಸಂಹಾರ
ಒಟ್ಟಿನಲ್ಲಿ ಹೇಳುವುದಾದರೆ, ಪ್ರಸ್ತುತ ದೌರ್ಜನ್ಯಸಾಹಿತ್ಯವನ್ನು ಹಿಂದೆ ಕೇವಲ ಕ್ರೈಸ್ತ ಮಿಷನರಿ (ಪಾದ್ರಿ)ಗಳು ಉತ್ಪಾದಿಸುತ್ತಿದ್ದು, ಬ್ರಿಟಿಷ್ ವಸಾಹತುಶಾಹಿ ಆಡಳಿತ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿತ್ತು. ಅದರ ಬದಲಾದ ಇಂದಿನ ರೂಪ ಈ ಕೆಳಗಿನಂತಿದೆ:
- ವಿದೇಶೀಯರು ಅದನ್ನು ಈಗ ಬಹುದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದಾರೆ. ಜಾಗತಿಕ ಕ್ರೈಸ್ತ ಮತಪ್ರಚಾರ ಜಾಲದ ಪರವಾಗಿ ಅದು ಸೃಷ್ಟಿಯಾಗಿ ಬಗೆಬಗೆಯಲ್ಲಿ ಬಳಕೆಯಾಗುತ್ತಿದೆ.
- ಹೊಸದಾಗಿ ಮತಾಂತರಗೊಂಡವರು ಹಾಗೂ ಇತರರು ಸೇರಿದಂತೆ ಭಾರತೀಯ ಕ್ರೈಸ್ತರಿಂದಲೂ ಅದು ಬಹುದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿದೆ; ಅವರಲ್ಲಿ ವಿದೇಶದಲ್ಲಿರುವವರೂ ಇದ್ದಾರೆ; ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕೂಡ ಇದ್ದಾರೆ ಮತ್ತು ಕೆಲವರು ಮತಪ್ರಚಾರ ಸಂಸ್ಥೆಗಳಿಂದ ಅಥವಾ ಎನ್ಜಿಓಗಳಿಂದ ಸಂಬಳ ಪಡೆಯುವವರು ಕೂಡ ಆಗಿದ್ದಾರೆ.
- ಕೆಲವು ಎನ್ಜಿಓಗಳು, ಶಿಕ್ಷಣಸಂಸ್ಥೆಗಳು, ಧಾರ್ಮಿಕ ದತ್ತಿ ಮತ್ತು ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ನಿಜವಾದ ಕೆಲವು ಹಿಂದುಗಳು ಕೂಡ ಅಂತಹ ಸಾಹಿತ್ಯವನ್ನು ರಚಿಸಿಕೊಡುತ್ತಿದ್ದಾರೆ. ಅವು ಕ್ರೈಸ್ತ ಮತಪ್ರಚಾರದ ಒಂದು ಮುಖದಂತೆ ಕೆಲಸ ಮಾಡುತ್ತಿವೆ.
- ಕೆಲವು ಹಿಂದು ಸಂಘಟನೆಗಳು ಮತ್ತು ಮಾಧ್ಯಮಗಳು ಕೂಡ ಸತ್ಯವನ್ನು ಮರೆಮಾಚುವ ಕೆಲಸವನ್ನು ಮಾಡುತ್ತವೆ. ಚರ್ಚ್ ನಡೆಸುವ ಹಿಂಸಾಚಾರ, ಚರ್ಚ್ಗಳಲ್ಲಿ ನಡೆಯುವ ಮಕ್ಕಳ ವ್ಯಾಪಕ ದುರ್ಬಳಕೆಯಂತಹ ವಿಷಯಗಳು ಹೊರಗೆ ಬರುವುದೇ ಇಲ್ಲ. ಉದ್ಯೋಗದ ಪದೋನ್ನತಿ, ಹಣ, ಕೀರ್ತಿ, ಪ್ರಭಾವ ಮತ್ತಿತರ ಆಮಿಷಗಳಿಗೆ ಈ ನಿಟ್ಟಿನಲ್ಲಿ ಹಿಂದುಗಳು ಕೂಡ ಗುರಿಯಾಗುತ್ತಿದ್ದಾರೆ.
ಕೊನೆಯದಾಗಿ ಈ ದೌರ್ಜನ್ಯಸಾಹಿತ್ಯದ ಮುಖವಾಡವನ್ನು ನಾವು ಕಳಚಲೇಬೇಕು. ಭಾರತದ ನಾಗರಿಕತೆ ಎಂದರೆ ಹಿಂದೂಧರ್ಮ ಅಥವಾ ಹಿಂದುತ್ವ. ಅದರ ಮೇಲೆ ದೌರ್ಜನ್ಯ ನಡೆಸುವುದೇ ಆ ಸಾಹಿತ್ಯದ ಗುರಿ. ಅದನ್ನು ನಾವು ಸರಿಯಾಗಿ ಗುರುತಿಸಲೇಬೇಕು ಮತ್ತು ಸೂಕ್ಷ್ಮರೀತಿಯಲ್ಲಿ ನಡೆಯುವ ವಂಚನೆಗಳನ್ನು ತಡೆಯಬೇಕು. ತಡೆಯದಿದ್ದಲ್ಲಿ ಆಗುವ ಹಾನಿಗೆ ನಾವೇ ಕಾರಣರಾಗುತ್ತೇವೆ.
ಭಾವಾನುವಾದ:
ಎಚ್. ಮಂಜುನಾಥ ಭಟ್