ಇಂದು ದೇಶದುದ್ದಕ್ಕೂ ಎಲ್ಲವನ್ನೂ ರಾಜಕೀಯ ಲಾಭದಿಂದ ನೋಡುವ, ಜಾತಿ-ಮತ, ಪಂಗಡಗಳನ್ನು ಚುನಾವಣಾ ಅಸ್ತ್ರವಾಗಿ, ಮತಬ್ಯಾಂಕುಗಳಾಗಿ ಬಳಸುವ, ದೀನ-ದಲಿತೋದ್ಧಾರದ ನೆಪದಲ್ಲಿ ಸ್ವಾರ್ಥಸಾಧಿಸಿಕೊಳ್ಳುವ, ರಾಷ್ಟ್ರದೇಳಿಗೆಯ ಸೋಗಿನಲ್ಲಿ ಲವಲೇಶವೂ ಸಾಮಾಜಿಕ ಕಳಕಳಿಯಿರದ ಮಂದಿಗಳೇ ಅಧಿಕವಾಗಿರುವ ಈ ಕಾಲದಲ್ಲೂ, ಸಮಾಜದ ಒಳಿತಿಗಾಗಿ ಚಿಂತಿಸುವ ಕೆಲವು ವ್ಯಕ್ತಿಗಳು ನಮ್ಮ ನಡುವೆ ಇರುವುದು ಈ ನೆಲದ ಪುಣ್ಯ…..
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೇಟೆಯ ಸಾಮ್ರಾಟ ಹೋಟೆಲಿನೆದುರು ಉತ್ತರಕ್ಕೆ ಹಾದುಹೋಗುವ ರಸ್ತೆಯಲ್ಲಿ ಸುಮಾರು ಒಂದು ಫರ್ಲಾಂಗ್ ಮುಂದೆ ರಸ್ತೆಯ ಬಲಭಾಗದಲ್ಲಿ ಸುಮಾರು ೩ ಎಕ್ರೆಗಳಷ್ಟು ಜಾಗದ ಸುತ್ತ ಹಾಕಿದ ಆವಾರದ ಬಾಗಿಲಲ್ಲಿ `ನೆಮ್ಮದಿ’ ಎಂಬ ಬರಹವನ್ನು ಹೊತ್ತ ಕಮಾನೊಂದು ನನ್ನ ಕುತೂಹಲ ಕೆರಳಿಸಿತು! ಪಕ್ಕದ ನಿವಾಸಿಯನ್ನು ವಿಚಾರಿಸಿದೆ. ಹತ್ತು ಹೆಜ್ಜೆ ಮುಂದೆ ಅದೇ ರಸ್ತೆಯ ಎಡದ ತಾರಸಿ ಕಟ್ಟಡದತ್ತ ಬೆಟ್ಟುಮಾಡಿ “ಓ ಅಲ್ಲಿ ವಿಚಾರಿಸಿ, ತಿಳಿಯುತ್ತೆ” ಎಂದ. ಆತನಿಗೆ ಧನ್ಯವಾದ ಸಲ್ಲಿಸಿ, ಅತ್ತ ಸಾಗಿದೆ. `ವೈಶಾಲಿ’ ಅಂಕಿತದ ಮನೆ ಕಣ್ಣಿಗೆ ಬಿತ್ತು. ಜಗಲಿಯೇರಿ ಕರೆಗಂಟೆ ಒತ್ತಿದೆ. ಕಿಟಕಿಯಿಂದ ಇಣುಕಿ, ಮುಗುಳ್ನಗೆಯ ಸ್ವಾಗತದೊಂದಿಗೆ ಹಿರಿಯರೊಬ್ಬರು ಬಾಗಿಲು ತೆರೆದರು. ಅವರಿಗೆ ನನ್ನ ಆಗಮನದ ಕಾರಣ ತಿಳಿಸಿದೆ. ಬಹುಸಂತಸದಿಂದ ಸಂಗಡ ಕರೆದೊಯ್ದರು. ಮನೆಯ ಮುಂದೆಯೇ `ನೆಮ್ಮದಿ’ ಗೋಚರಿಸಿದರೂ, ಪ್ರವೇಶದ್ವಾರದತ್ತ ಸಾಗಲು ಕೆಲವು ಹೆಜ್ಜೆ ಹಾಕುವುದು ಅನಿವಾರ್ಯವೇ ಸರಿ; ಅವರನ್ನನುಸರಿಸಿದೆ.
ದಾರಿಯುದ್ದಕ್ಕೂ, ಬಾಳಬಟ್ಟೆಯ ಸವಾಲುಗಳನ್ನು ಎದುರಿಸಿದ ಬಗೆಯ ಕೊಂಡಿಗಳನ್ನು ಎಳೆಎಳೆಯಾಗಿ ಹೀಗೆ ಬಿಚ್ಚಿಟ್ಟರು – “ಭಟ್ಟರೇ, ಮೂಲತಃ ನಾನು ಸಿದ್ದಾಪುರದ ಕೋಡ್ಸರದವ. ಅವಕಾಶದಿಂದ ವಂಚಿತನಾದ ನಾನು ಪಿ.ಯು.ಸಿ.ವರೆಗಿನ ಕಲಿಕೆಯಲ್ಲಿ ತೃಪ್ತನಾಗಬೇಕಾಯಿತು! ಹೊಟ್ಟೆಪಾಡಿಗಾಗಿ ಊರು ಬಿಟ್ಟು ಪಟ್ಟಣ ಸೇರಿದೆ. ಆಸರೆಯಿಲ್ಲದೆ ಅಲೆದೆ. ಅನಾಥನಂತೆ ಬೀದಿಯಲ್ಲಿದ್ದವನನ್ನು ತಮ್ಮವನೆಂದು ಕರೆದು, ಅನ್ನವಿಕ್ಕಿದವರು ದಿ| ಶ್ರೀಪಾದ ಹೆಗಡೆ ಕಡವೆ ಮತ್ತು ಕುಟುಂಬದವರು. ಖಾಸಾ ಸೋದರನಿಗಿಂತಲೂ ಹೆಚ್ಚಾಗಿ ಸಂಕಷ್ಟದಲ್ಲಿ ನೆರವಾದವರು ದಿ| ಜಿ.ಪಿ. ಹೆಗಡೆ ಬಪ್ಪನಳ್ಳಿ ಕುಟುಂಬದವರು. ನನ್ನ ಕನಸುಗಳೆಲ್ಲ ಸಾಕಾರಗೊಳ್ಳಲು ಸಕಾಲಿಕ ಸಹಾಯ, ಸಹಕಾರಾದಿಗಳನ್ನಿತ್ತವರು ಸುಹೃತ್ ದಿ| ಡಾ| ಎ.ಎನ್. ಪಟವರ್ಧನ್ ಮತ್ತು ಕುಟುಂಬ ದವರು. ಯಶಸ್ಸಿನ ರಂಗಕ್ಕೇರಿಸಿ ಮೆರೆಸಿದ ಈ ಹಿರಿಯರೆಲ್ಲರೂ ಪ್ರಾತಃಸ್ಮರಣೀಯರು!” (ಭಾವದುಂಬಿ ಬಂದ ಈ ಮಾತು ಹೃದಯಸ್ಪರ್ಶಿಯಾಗಿತ್ತು!)
ಸವಿನಂಟು
ವಿಶ್ವನಾಥ. ಪಿ. ಹೆಗಡೆ, ಕೋಡ್ಸರ – ಎಂಬುದು ಇವರ ಅಂಕಿತನಾಮ. ಆದರೆ ಜನಮಾನಸದಲ್ಲಿವರು `ವೈಶಾಲಿ!’ – ಹೀಗೇಕೆ? ವಿಸ್ಮಯದಿಂದ ಪ್ರಶ್ನಿಸಿದೆ. ಅದಕ್ಕವರು – ೧೯೭೫ರಲ್ಲಿ ನಾನು ಸಾಮ್ರಾಟದ ಆವರಣದಲ್ಲಿ `ವೈಶಾಲಿ’ ಎಂಬ ಒಂದು ಪುಟ್ಟ ಅಂಗಡಿ ಆರಂಭಿಸಿದೆ. ಅಲ್ಲಿ ನನ್ನ ವ್ಯಾಪಾರೋದ್ಯಮ ಚೆನ್ನಾಗಿಯೇ ನಡೆಯಿತು. ಚಿಕ್ಕ ಮಕ್ಕಳಿಂದ ಮುದುಕರ ತನಕ ಎಲ್ಲ ವಯೋಮಾನದವರೊಡನೆ ಸಂಪರ್ಕ. ಮಾನವೀಯ ಸಂಬಂಧಗಳ ಬಿಡಿಸಲಾಗದ ಬೆಸುಗೆ ಬಲವಾಗಿ ಬಿಗಿಯಿತು. ಕುಲ-ಜಾತಿ-ಮತ, ಮೇಲು-ಕೀಳು, ಬಡವ-ಬಲ್ಲಿದ ಇತ್ಯಾದಿ ಸಾಮಾಜಿಕ ಅಂತರ-ತಾರತಮ್ಯಗಳನ್ನು ಬದಿಗೆ ತಳ್ಳಿ ಜನಕೋರಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ವ್ಯಾಪಾರ “ಬರಿಯ ದುಡ್ಡು ಗಳಿಕೆಯ ದಂಧೆ” ಎಂಬ ಕಲ್ಪನೆಯೇ ಅಧಿಕವಾಗಿರುವ ಕಾಲದಲ್ಲಿ, ಅದಕ್ಕಿಂತ ಭಿನ್ನ ಮನೋಸಂಕಲ್ಪದಲ್ಲಿ, ಅನ್ಯೋನ್ಯ ಮಾನವೀಯ ಸಂಬಂಧಗಳನ್ನು ಬೆಸೆಯುವ, ಸಾತ್ತ್ವಿಕ ಸಮಾಜವನ್ನು ರೂಪಿಸುವ ಮನೋಭಾವನೆಯಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡು ಬೆಳೆದೆ. ಆರಂಭದಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಕೇಳಿಸಿಕೊಂಡೆ! ಅಂಥ ಸನ್ನಿವೇಶಗಳು ಎದುರಾದಾಗ ಕಡವೆ ದಿ| ಶ್ರೀಪಾದ ಹೆಗಡೆಯವರು “ಏ ಕೋಡ್ಸರ, ನಮ್ಮತ್ತ ಕಲ್ಲೆಸೆಯುವ ಮಂದಿ ಬಹಳವಿದ್ದಾರೆ. ತಿರುಗಿ ಕಲ್ಲೆಸೆಯ ಬೇಡ; ಅದೇ ಕಲ್ಲುಗಳಿಂದ ಮೆಟ್ಟಿಲನ್ನು ನಿರ್ಮಿಸಿಕೋ” ಎಂದು ಖಿನ್ನನಾದಾಗೆಲ್ಲ ಬೆನ್ನು ಸವರಿ ನನ್ನನ್ನು ಹುರಿದುಂಬಿಸಿದರು. ಇಂತಹ ಮಾತುಗಳಿಂದ ನಾನು ಬೆಳೆದೆ.
ಜನಮಾನಸಕ್ಕೆ `ವೈಶಾಲಿ’ ಕೇವಲ ಅಂಗಡಿ ವ್ಯವಹಾರಕ್ಕಿಂತ ಭಿನ್ನವಾದ ಸಾಂಸ್ಕೃತಿಕ ತಾಣ, ನೆಮ್ಮದಿಯ ಸ್ಥಳ, ನಿಃಶುಲ್ಕ ಮಾಹಿತಿ ಕೇಂದ್ರವೆನಿಸಿ, ಮೆಚ್ಚುಗೆಗೆ ಪಾತ್ರವಾಯಿತು. ಸಾಹಿತ್ಯ ಸಲ್ಲಾಪಗಳ ವೇದಿಕೆಯಾಗಿ, ಕಲಾವಿದರ ಸಂಗಮವೆನಿಸಿ, ಗಣ್ಯಾತಿಗಣ್ಯರ ಅಟ್ಟುಂಬಳವಾಗಿ, ಹಿರಿಯ ಹಿತೈಷಿಗಳ ಚಟುವಟಿಕೆಗಳ ಕೇಂದ್ರವಾಗಿ, ಜನರ ಬದುಕಿಗೆ ಹುರುಪು-ಉಲ್ಲಾಸಗಳನ್ನಿತ್ತು ಮುದ ನೀಡಿತು. ಎಳೆಯ ಮಕ್ಕಳಿಂದ ಮುದುಕರ ತನಕ ಎಲ್ಲರ ಕೋರಿಕೆಗೆ ತಕ್ಷಣವೇ ಸ್ಪಂದಿಸುವ ಸ್ವಭಾವ ಮೆಚ್ಚುಗೆಯಾಗಿ, ಅಭಿಮಾನಿಗಳ ಗೌರವದ ಕರೆ `ವೈಶಾಲಿ’ ಮೆರೆಯಿತು; ನಿಜನಾಮ ಮರೆಯಾಯಿತು!
“ವೈಶಾಲಿಗೆ ವಿದಾಯ ಹೇಳಿ, ಸಂವತ್ಸರಗಳೇ ಉರುಳಿದರೂ, ಆ ಹೆಸರೇ ಜನರ ಹೃದಯಸಿಂಹಾಸನದಲ್ಲಿ ಈಗಲೂ ಶಾಶ್ವತ! ಹೇಗಿದೆ ನೋಡಿ ವೈಶಾಲಿಯೊಂದಿಗಿನ ನನ್ನ ಸವಿನಂಟು!” – ಎನ್ನುವಾಗ ಭಾವಪೂರ್ಣವಾಗಿ ಅವರ ನಯನಗಳು ಹನಿಗೂಡಿದವು! ಶಿರಸಿಯ ಸುತ್ತಮುತ್ತ “ವೈಶಾಲಿ ಅವರು ಗೋತ್ತೇನ್ರಿ?” ಎಂದು ಯಾರನ್ನೇ ವಿಚಾರಿಸಿದರೂ, ತಟ್ಟನೆ ಅವರ ಕುರಿತು ಸಂಪೂರ್ಣ ಮಾಹಿತಿ ಸಿಗುತ್ತದೆ. ಪಾದರಸದಂಥ ಚಟುವಟಿಕೆಗಳಿಂದ ತಮ್ಮದೇ ಆದ ಛಾಪನ್ನು ಮೂಡಿಸಿ ಅವರು ಜನಮಾನಸದಲ್ಲಿ ನೆಲೆಯೂರಿದ್ದಾರೆ. ಅವರದು ಅಂತಹ ಲೋಹಚುಂಬಕ ವ್ಯಕ್ತಿತ್ವ! ವೃತ್ತಿ ಜೀವನದಲ್ಲಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ, ಇನ್ನೂ ಬೇಡಿಕೆ ಇರುವಾಗಲೇ ಬದುಕಿಗೆ ಆಸರೆಯಾದವರಿಗೆಲ್ಲ ಕೃತಜ್ಞತೆ ಸಮರ್ಪಿಸಿ `ವೈಶಾಲಿ’ಗೆ ವಿದಾಯ ಕೋರಿದ ಸಂತೃಪ್ತ ಜೀವನ ಅವರದು! ಮರೆ, ಮೋಸ, ವಂಚನೆ, ಕೊಂಕು-ಬಿಂಕಗಳ ಸುಳಿವಿರದ, ಹಮ್ಮು-ಬಿಮ್ಮುಗಳಿಂದ ಮುಕ್ತವಾದ ನಿಷ್ಕಲ್ಮಶ ಮುಗ್ಧ ಮಗುವಿನ ಹೃದಯದ, ಪಾರದರ್ಶಕ ಬದುಕನ್ನು ತನ್ನದಾಗಿಸಿಕೊಂಡ ಬೆರೆಳೆಣಿಕೆಯ ಅಪೂರ್ವ ವ್ಯಕ್ತಿಗಳ ಸಾಲಿನಲ್ಲಿ `ವೈಶಾಲಿ’ ಎಂದೆಂದೂ ಮರೆಯಾಗದ ಒಂದು ಹೆಸರು!
ವೃತ್ತಿಯಿಂದ ವಿ.ಪಿ. ಹೆಗಡೆ ಅವರಿಂದು ವಿರಮಿಸಿದ್ದರೂ, ಪ್ರವೃತ್ತಿ ಮಾತ್ರ ಇನ್ನೂ ಅವರೊಡನೆ ಸವಾಲು ಹಾಕುತ್ತಲೇ ಇದೆ! ಅರುವತ್ತರ ಗಡಿ ದಾಟಿ ಸಾಗಿದ್ದರೂ, ಕುಡಿಮೀಸೆಯ ಹದಿ ಹರೆಯದ ಯುವಕರನ್ನೂ ನಾಚಿಸುವ ಅವರ ಉತ್ಸಾಹ ಇನ್ನೂ ಅಚ್ಚರಿ ಮೂಡಿಸುವ ಪುಟಿದಿಕ್ಕುವ ಕಾರಂಜಿ!
ವಿಶಿಷ್ಟ ವಿದಾಯ
`ವೈಶಾಲಿ’ಗೆ ಅವರು ವಿದಾಯ ಕೋರಿದ ಬಗೆಯೂ ಅದೊಂದು ವಿಶಿಷ್ಟ ಸ್ವರೂಪದ್ದು! ಆ ಸಂದರ್ಭದಲ್ಲಿ ಅವರು ತಮ್ಮ ನೆಚ್ಚಿನ ಗ್ರಾಹಕ ಬಂಧುಗಳಿಗೆ ಕಳುಹಿಸಿದ ಕೃತಜ್ಞತಾ ಸೂಚಕ `ಕರಪತ್ರ’ಗಳನ್ನು ಇಲ್ಲಿ ಹಲವು ಮಂದಿ ದಸ್ತಾವೇಜಿನ ಕಡತಗಳಂತೆ ಜೋಪನವಾಗಿ ಸದಾ ಸಾದರ ಗೌರವಾಭಿಮಾನಪೂರ್ವಕ ಕಾಯ್ದುಕೊಂಡಿರುವುದನ್ನು ಗಮನಿಸಿದರೆ, ಶ್ರೀಸಾಮಾನ್ಯನೂ ಕೂಡ ಇವರ ಮೇಲಿರಿಸಿದ ವಿಶ್ವಾಸ, ಆತ್ಮೀಯ ಅಭಿಮಾನ ಹಾಗೂ ಮೆಚ್ಚಿಕೆಗಳ ಪ್ರತೀಕವಾಗಿ ಗೌರವಭಾವ ತಾನಾಗಿ ಮೂಡುತ್ತದೆ! ತಮ್ಮ ಅಭಿಮಾನಿಗಳಿಗೆ, ತನ್ನ ಬಾಳ ಸಂಕಷ್ಟದಲ್ಲಿ ಆಸರೆ ನೀಡಿದ ಹಿರಿಯರಿಗೆ ಹಾಗೂ ನೆಚ್ಚಿನ ಅಪಾರ ಗ್ರಾಹಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದ ಬಗೆ ಸರ್ವಾದರಣೀಯ, ಅನುಕರಣೀಯ ಆದರ್ಶಗಳಿಗೊಂದು ಮಾದರಿ! (ಕರಪತ್ರದ ಪೋಟೋ-Attachmenನಲ್ಲಿದೆ.)
`ವೈಶಾಲಿಯೇ ಸೂಕ್ತ ವ್ಯಕ್ತಿ’
ಬಹುಕಾಲದಿಂದ ಶಿರಸಿಯ ಪರಿಸರದ ಜನತೆಯನ್ನು ಬಲವಾಗಿ ಕಾಡುತ್ತಿದ್ದ ಸಮಸ್ಯೆ ಸುವ್ಯವಸ್ಥಿತ ರುದ್ರಭೂಮಿಯೊಂದರ ಕೊರತೆ. ಮನೆಮಂದಿಯ ಮಡಿದವರ ಅಂತ್ಯಕ್ರಿಯೆಗೆ ಸಮರ್ಪಕವಾದ ಸ್ಥಳವಿಲ್ಲದೆ, ಜನತೆ ಪರದಾಡುತ್ತಿದ್ದುದನ್ನು ಮನಗಂಡು ಮನನೊಂದ ದಿ| ಡಾ| ಎ.ಎನ್. ಪಟವರ್ಧನ ಅವರು ಈ ಕುರಿತು ಆಳವಾಗಿ ಚಿಂತಿಸಿ, ಇದನ್ನು ಕ್ರಿಯಾತ್ಮಕವಾಗಿ ಕಾರ್ಯಗತಗೊಳಿಸುವುದಕ್ಕೆ ಸಂಘಟನೆಯೊಂದನ್ನು ರೂಪಿಸುವ ಆವಶ್ಯಕತೆಯಿದೆಯೆಂದು ತಿಳಿದು, ವೈಶಾಲಿಯೇ ಇದಕ್ಕೆ ಸೂಕ್ತ ವ್ಯಕ್ತಿಯೆಂದು ನಿರ್ಧರಿಸಿ, ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಇವರಲ್ಲಿ ಸಲಹೆ ನೀಡಿದರಂತೆ. ಊರಹಿರಿಯರೂ, ಕೊಡುಗೈ ದಾನಿಗಳೂ ಆದ ಕಾಶೀನಾಥ ಮೂಡೆಯವರ ಗೌರವ ಅಧ್ಯಕ್ಷತೆಯಲ್ಲಿ, ವೈಶಾಲಿಯವರ ಕಾರ್ಯದರ್ಶಿತ್ವದಲ್ಲಿ, ಪ್ರಾ|| ಎ.ಕೆ. ಶಾಸ್ತ್ರೀ, ಪ್ರಾ|| ಕೆ.ವಿ. ಭಟ್ಟ ಮೊದಲಾದ ಏಳು ಮಂದಿ ಕ್ರಿಯಾಶೀಲರ ಸಾರಥ್ಯ ತಂಡದ ಪರಿಶ್ರಮದ ಫಲವಾಗಿ ಫಾರೆಸ್ಟ್ಖಾತೆ ಇವರ ಮನವಿಯನ್ನು ಮನ್ನಿಸಿ ಈ ಸತ್ಕಾರ್ಯದ ಅನುಷ್ಠಾನಕ್ಕಾಗಿ ಸುದೀರ್ಘಕಾಲದ ಭೋಗ್ಯ(ಲೀಸ್)ದ ಕರಾರಿನಲ್ಲಿ ಮೂರು ಎಕ್ರೆ ಜಾಗವನ್ನು ಮಂಜೂರು ಮಾಡಿತು. ಪರಿಣಾಮ “ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ” ಎಂಬ ಸಂಸ್ಥೆ ಉದಯವಾಯಿತು. ನೊಂದ ಜನತೆಯ ಬಹುದಿನದ ಕನಸು ನೆನಸಾಯಿತು. `ನೆಮ್ಮದಿ’ ತಲೆದೋರಿತು.
`ನೆಮ್ಮದಿ’ – ಎಷ್ಟು ಸ್ವಾರಸ್ಯಪೂರ್ಣ ಅರ್ಥಗರ್ಭಿತ ಸಾರ್ಥಕ ಅನ್ವರ್ಥ ಅಂಕಿತ! ಬಾಳಲ್ಲಿ ನೊಂದು ಬೆಂದು ಬಳಲಿ ಬೆಂಡಾದ ಜೀವಕ್ಕೆ ಮರಣವೇ `ನೆಮ್ಮದಿ’ಯ ತಾಣ! ಬಾಳಲ್ಲಿ ಸುಖ-ನೆಮ್ಮದಿಗಳು ಬರಿಯ ಬಿಸಿಲ್ಗುದುರೆಯಾಗಿದ್ದ ಜೀವಕ್ಕೆ ಮರಣವೇ ಮಹಾನವಮಿ ಯೆನಿಸುವುದು ಸಹಜ. ಈ ಹಂತದಲ್ಲಿ ಚರಮ ಗೌರವಕ್ಕೂ ಒಂದು ನೆಲೆಯಿಲ್ಲದೆ ಹೋದರೆ ಮತ್ತೆಲ್ಲಿಯ ನೆಮ್ಮದಿ ಅಲ್ಲವೇ? ಈ ಅರ್ಥದಲ್ಲಿ ಇಲ್ಲಿಯ ಬಡ ಜನತೆಗೆ ಈ ರುದ್ರಭೂಮಿ ಸಾರ್ಥಕ ಆಸರೆ!
ರಾಜ್ಯಕ್ಕೇ ಮಾದರಿಯಾದ ಸುವ್ಯವಸ್ಥಿತವಾದ ರುದ್ರಭೂಮಿ-`ನೆಮ್ಮದಿ’ ಅಚ್ಚುಕಟ್ಟಾಗಿ ಮೈವೆತ್ತಿದೆ! ರಾಜ್ಯದ ಕೆಲವು ನಗರಪಾಲಿಕೆಗಳು ಈಗಾಗಲೇ ಇಲ್ಲಿಗೆ ಆಗಮಿಸಿ, ಇದರಿಂದ ಪ್ರಭಾವಿತವಾಗಿವೆ! ಸಂಪರ್ಕದಿಂದ ಪ್ರೇರಣೆ ಪಡೆದಿವೆ! ಇದನ್ನು ನೋಡಿ ಮೆಚ್ಚಿ, ತಮ್ಮ ನಗರಗಳಲ್ಲಿಯೂ ಇಂಥ ಒಂದು ರುದ್ರಭೂಮಿಯ ನಿರ್ಮಾಣಕ್ಕೆ ಸಂಕಲ್ಪ ಮಾಡಿವೆ.
ವಿಶಾಲವಾದ `ನೆಮ್ಮದಿ’ಯ ಪ್ರಧಾನ ದ್ವಾರವನ್ನು ಪ್ರವೇಶಿಸಿದೊಡನೆ, ಗೇಟಿನ ಬಲ ಬದಿಗೆ ಕಾರ್ಮಿಕರ ವಸತಿ. ಅಲ್ಲೇ-
“ಮಾಡು ಇಲ್ಲವೇ ಮಡಿ
ಹಳೆಯದಾಯಿತು ಬಿಡಿ
ಮಡಿಯುವ ಮೊದಲೇ ಮಾಡಿ.”
ಎಂಬ ಭಿತ್ತಿ ಬರಹ ವೈಶಾಲಿಯವರ ಕರ್ತೃತ್ವ ಶಕ್ತಿಯನ್ನು ಸಾರುವ ಮುದ್ರಾವಾಕ್ಯವಾಗಿ ಭಾಸವಾಗುತ್ತದೆ!
ಇಲ್ಲಿಂದ ಅದೇ ಹಾದಿಯಲ್ಲಿ ಮುಂದೆ ಅವರ ಸಂಗಡ ನಾಲ್ಕು ಮಾರು ಸಾಗುತ್ತಿದ್ದಂತೆ `ನೆಮ್ಮದಿ ಕುಟೀರ’ ಎಂಬ ನಾಮಫಲಕವನ್ನು ಹೊತ್ತ ಸುಂದರ ಕಟ್ಟಡವೊಂದು ಗೋಚರವಾಯಿತು. ಮೇಲ್ನೋಟಕ್ಕೆ ಅದು ಬೆಂಗಳೂರು ಲಾಲ್ಬಾಗ್ನ ಗಾಜಿನಮನೆಯನ್ನು ಹೋಲುವಂತಿದ್ದರೂ, ಅಷ್ಟು ವಿಶಾಲವೇನಲ್ಲ. ಸುಮಾರು ನೂರಾರು ಮಂದಿ ಏಕಕಾಲಕ್ಕೆ ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿದೆ ಅದರ ಒಳವಿಭಾಗದ ವಾಸ್ತು ವಿನ್ಯಾಸ. ಪಕ್ಕದಲ್ಲೇ ಜೋಡಿಸಿದ ಆಸನಗಳು ಅಲ್ಲಿಯ ಸುವ್ಯವಸ್ಥೆಯನ್ನು ಮೌನವಾಗಿ ಸಾರುತ್ತವೆ! ಪ್ರತೀ ತಿಂಗಳ ಮೊದಲ ದಿನಾಂಕದಂದು ಇಲ್ಲಿ `ನಾವು ಮತ್ತು ನೀವು ಬಳಗ’ದ `ಮಾಸದ ಮಾತು’ ಕಾರ್ಯಕ್ರಮ ಜರಗುತ್ತದೆ. ಇದು ಯಾವುದೇ ಪದಾಧಿಕಾರಿಗಳಿಲ್ಲದ ಒಂದು ಅಸಂಘಟಿತ ಸಂಘಟನೆ. ಎಲ್ಲರೂ ಒಟ್ಟಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಚ್ಚುಕಟ್ಟಾಗಿ ನಡೆಸುತ್ತಾರೆ! ಅರುವತ್ತು ಮಂದಿ ತಪ್ಪದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಸಂಖ್ಯೆಯಲ್ಲಿ ಯಾವತ್ತೂ ಇಳಿಮುಖವಾಗದಿರುವುದು ಸಂಘಟನೆಯ ಹಿರಿಮೆಗಳಲ್ಲೊಂದು! ಇಲ್ಲಿ ಖರ್ಚು-ವೆಚ್ಚಗಳನ್ನು ಭಾಗವಹಿಸುವವರೆಲ್ಲರೂ ಸ್ಥಳದಲ್ಲೇ ನೀಡುವ ಕಾಣಿಕೆಗಳಿಂದ ಸರಿದೂಗಿಸಿಕೊಳ್ಳುತ್ತಾರೆ!
ಅನುಕರಣೀಯ ಹೆಚ್ಚುಗಾರಿಕೆ
`ಸಮಷ್ಟಿಯಲ್ಲಿ ಕರ್ತವ್ಯ ಪ್ರಜ್ಞೆ’ ಹಾಗೂ `ಸಾಮಾಜಿಕ ಹೊಣೆಗಾರಿಕೆಗಳ’ ಕುರಿತು ಸದಾ ಕಟ್ಟುನಿಟ್ಟಿನ ಕಾಳಜಿಯನ್ನು ಮೂಡಿಸುವಂತಹ ಶಿಕ್ಷಣವನ್ನು ನೀಡುತ್ತಿದೆ. ಹೀಗೆ ಇಲ್ಲಿ ಭಾಗವಹಿಸುವ ಪ್ರತಿಯೋರ್ವ ವ್ಯಕ್ತಿಗೂ ನಾಯಕತ್ವದ ತರಬೇತಿ ದೊರಕಿದಂತಾಗಿರುವುದು – ಈ ಸಂಘಟನೆಯ ಗುರುತಿಸಲರ್ಹವಾದ ಧನಾತ್ಮಕ ಗುಣವೇ ಸರಿ! ಇದರ ಹಿಂದೆ ವೈಶಾಲಿ ಹಾಗೂ ಸಂಗಡಿಗರ ಒಲವಿನ ಬಲವಿದೆ! ಸಾಮಾನ್ಯವಾಗಿ ಹೆಚ್ಚಿನ ಸಂಘಟನೆಗಳು ಸದಸ್ಯತನದ ಶುಲ್ಕ ದೊಂದಿಗೆ ದಾನಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಸಂಸ್ಥೆಯ ಖರ್ಚು-ವೆಚ್ಚಗಳಿಗೆ ವಿನಿಯೋಗಿಸಿ ಉಳಿದ ಹಣವನ್ನು ಬ್ಯಾಂಕಿನ ನಿರಖು ಠೇವಣಿಗಳಲ್ಲಿ ಇಡುಗಂಟಾಗಿರಿಸುವುದು ವಾಡಿಕೆ. ಆದರೆ ಈ ನಿಯಮಕ್ಕೆ ಈ ಸಂಘಟನೆ ಹೊರತಾಗಿದೆ! ಯಾವುದೇ ವಿಧದ ದೇಣಿಗೆಯಾಗಲೀ, ಸದಸ್ಯತನದ ಶುಲ್ಕ ಪಾವತಿಯಾಗಲೀ ಇಲ್ಲಿ ಕಾಣಸಿಗದು! ಮಾಸದ ಚಟುವಟಿಕೆಗಳು ಸಂಪನ್ನವಾದ ಬಳಿಕ ಆಗಮಿಸಿದ ಜನರು ಸ್ವಪ್ರೇರಣೆಯಿಂದ ನೀಡಿದ ಮೊತ್ತವನ್ನು ಕಾರ್ಯಕ್ರಮದ ಖರ್ಚು-ವೆಚ್ಚಕ್ಕೆ ಬಳಸಿ, ಉಳಿದಲ್ಲಿ, ಆ ಮೊತ್ತವನ್ನು ಸಾಮಾಜಿಕ ಸಮಸ್ಯೆಗಳ ಪರಿಹಾರ ನಿಧಿಗಳಿಗೆ ದೇಣಿಗೆಯಾಗಿ ನೀಡುವ ಮೂಲಕ ಸಮಾಜ ಸೇವೆಯಲ್ಲಿಯೂ ಭಾಗಿಯಾಗುವುದು ಈ ಸಂಸ್ಥೆಯ ಹೆಚ್ಚುಗಾರಿಕೆ! ಅನುಕರಣೀಯ!
ಕುಟೀರದ ಮುಂಭಾಗದಲ್ಲಿ ಅನತಿದೂರದಲ್ಲಿ ಸುಸಜ್ಜಿತವಾದ ರುದ್ರಭೂಮಿ ಗೋಚರಿಸುತ್ತದೆ. ಅಲ್ಲಿ ಸಿಮೆಂಟು ಶೀಟುಗಳು ಮೇಲ್ಕಾಪಾಗಿ [ಛಾವಣಿ] ಹೊದಿಸಿ ಸಾಕಷ್ಟು ವಿಶಾಲವಾಗಿ ನಿರ್ಮಿಸಿದ ದಹನ ವೇದಿಕೆಗಳಿವೆ. ಏಕಕಾಲದಲ್ಲಿ ಮೂರು ಕಳೇಬರಗಳನ್ನು ದಹಿಸಲು ಅನುಕೂಲವಾಗುವಂತೆ, ಮೂರು ಪ್ರತ್ಯೇಕ ದಹನ ವೇದಿಕೆಗಳನ್ನು ಇಲ್ಲಿ ನಿರ್ಮಿಸಿದ್ದಾರೆ. ಇವೆಲ್ಲವೂ ಕಬ್ಬಿಣದಿಂದ ನಿರ್ಮಿತವಾಗಿದ್ದು, ದಹನಾನಂತರ ಅಸ್ಥಿ ಸಂಚಯನಕ್ಕೆ ಅನುಕೂಲವಾಗುವಂತೆ ಇದರ ಒಳರಚನೆಯಿದೆ. ಶವದ ಅಚ್ಛಾದನೆಗೆ ವಸ್ತ್ರ, ಸಾಗಣೆಗೆ ಅವಶ್ಯವಾದ ಚಟ್ಟ, ದಹನಕ್ಕೆ ಬೇಕಾದ ಕಟ್ಟಿಗೆ, ಬೆಂಕಿಯನ್ನೊಯ್ಯಲು ಹೊಸ ಮಣ್ಣಿನ ಮಡಿಕೆ ಇತ್ಯಾದಿ ದಹನ ಕ್ರಿಯೆಗೆ ಅತ್ಯವಶ್ಯವಾದ ಎಲ್ಲ ಸಾಮಗ್ರಿಗಳ ಜತೆಗೆ ಅಪೇಕ್ಷಿಸಿದರೆ, ಪುರೋಹಿತರ ವ್ಯವಸ್ಥೆಯಲ್ಲದೆ, ಶವ ಸಾಗಣೆಗೆ ವಾಹನದ ವ್ಯವಸ್ಥೆಯನ್ನೂ ಕನಿಷ್ಠ ದರದಲ್ಲಿ ಒದಗಿಸಲಾಗುತ್ತಿದೆ! ಸಮಾಜದ ಅತೀ ಬಡಜನತೆಗೂ ಈ ಸೇವೆ ಸುಲಭದಲ್ಲಿ ದೊರಕಲೆಂಬ ಸದುದ್ದೇಶದಿಂದ ಈ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು `ನೆಮ್ಮದಿ’ ಸರ್ವಋತುವಿಗೂ ಸೂಕ್ತವಾದ ರುದ್ರಭೂಮಿಯೆನಿಸಿದೆ. ಅವ್ಯಾಹತವಾಗಿ ಜಡಿಮಳೆಯೇ ಸುರಿದರೂ, ಯಾವುದೇ ಆತಂಕವಿಲ್ಲದೆ ದಹನಸಂಸ್ಕಾರ ವಿಧಿಗಳನ್ನು ನೆಮ್ಮದಿಯಲ್ಲಿ ಸಾಂಗವಾಗಿ ಪೂರೈಸುವಂತೆ `ನೆಮ್ಮದಿ’ ಸುಸಜ್ಜಿತವಾಗಿದೆ.
ಮೂರು ಎಕ್ರೆಯ ಹಿತ್ತಿಲಲ್ಲಿ, ಎಂಟು ಗುಂಟೆಯಷ್ಟು ಜಾಗ ರುದ್ರಭೂಮಿಗೆ ಮೀಸಲಾದರೆ, ಉಳಿದ ಭಾಗದಲ್ಲಿ ಸ್ಪಲ್ಪ ಭಾಗದಲ್ಲಿ ತೆಂಗು, ಮತ್ತೆ ಬಹುಭಾಗದಲ್ಲಿ ಅತಿ ಬೇಗ ಬೆಳೆದು ಮರವಾಗುವ ಅಕೇಶಿಯಾ ಹಾಗೂ ಸ್ಥಳೀಯ ವೃಕ್ಷ ತಳಿಗಳನ್ನು ನೆಟ್ಟು ಬೆಳೆಸುವುದರ ಮೂಲಕ ಶವ ದಹನ ಸಂಸ್ಕಾರಕ್ಕೆ ಬೇಕಾದ ಕಟ್ಟಿಗೆಯ ವಿಚಾರದಲ್ಲೂ ಸ್ವಾವಲಂಬನೆಯ ಗುರಿ ಸಾಧಿಸಿದ್ದಾರೆ! ಇದರಿಂದಾಗಿ ಕಟ್ಟಿಗೆಗಾಗಿ ಡಿಪೋಗಳಿಗೆ ಅಲೆದಾಡುವ ಪ್ರಮೇಯವೇ ಇಲ್ಲ! ಅಷ್ಟೇ ಅಲ್ಲ; ಸರ್ವ ಋತುಗಳಿಗೂ ಅನುಕೂಲವಾಗುವಂತಿದೆ ಇದರ ರಚನಾ ವಿನ್ಯಾಸ! ಆದರೆ ದಹನ ವೇದಿಕೆಗಳ ಮೇಲೆ ಹಾಸಿದ ಸಿಮೆಂಟು ಶೀಟುಗಳು ಸಾಕಷ್ಟು ಎತ್ತರದಲ್ಲಿರದೆ, ಅಗ್ನಿಯ ಕೆನ್ನಾಲಿಗೆಯ ಹೊಡೆತಕ್ಕೆ ಸಿಲುಕಿ, ಅವುಗಳು ಜರ್ಝರಿತವಾಗ ತೊಡಗಿವೆ. ಸದ್ಯವೇ ಅವುಗಳನ್ನು ಇನ್ನಷ್ಟು ಎತ್ತರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವುದರೊಂದಿಗೆ, ಮುಂದಿನ ಪೀಳಿಗೆಗೂ ನೆಮ್ಮದಿಯಿಂದ ಈ ರುದ್ರಭೂಮಿಯನ್ನು ಶಾಶ್ವತವಾಗಿ ಬಳಸಿ ಕೊಳ್ಳುವಂತಾಗಲು, ಯೋಜನೆಯ ನೀಲಿನಕ್ಷೆಯೊಂದು ಸಿದ್ಧವಾಗಿದೆ. ಮಹತ್ವಾಕಾಂಕ್ಷೆ ಹಾಗೂ ದೂರದೃಷ್ಟಿಗಳಿಂದ ಕೂಡಿದ ಈ ಯೋಜನೆಯ ಯಶಸ್ಸಿಗೆ ಶಿರಸಿ ಪರಿಸರದ ನಾಗರಿಕರು ಕೈಜೋಡಿಸಿ ಸಹಕರಿಸುವರೆಂಬ ಅಚಲ ನಂಬಿಕೆ ವೈಶಾಲಿಯವರದು. ಅವರ ಈ ಸತ್ಸಸಂಕಲ್ಪ ಶೀಘ್ರ ಯಶಸ್ಸನ್ನು ಪಡೆದು ದೇಶಕ್ಕೇ ಮಾದರಿಯಾಗಲಿ.
ಇಂದು ದೇಶದುದ್ದಕ್ಕೂ ಎಲ್ಲವನ್ನೂ ರಾಜಕೀಯ ಲಾಭದಿಂದ ನೋಡುವ, ಜಾತಿ-ಮತ, ಪಂಗಡಗಳನ್ನು ಚುನಾವಣಾ ಅಸ್ತ್ರವಾಗಿ, ಮತಬ್ಯಾಂಕುಗಳಾಗಿ ಬಳಸುವ, ದೀನ-ದಲಿತೋದ್ಧಾರದ ನೆಪದಲ್ಲಿ ಸ್ವಾರ್ಥ ಸಾಧಿಸಿಕೊಳ್ಳುವ, ರಾಷ್ಟ್ರದೇಳಿಗೆಯ ಸೋಗಿನಲ್ಲಿ ಲವಲೇಶವೂ ಸಾಮಾಜಿಕ ಕಳಕಳಿಯಿರದ ಮಂದಿಗಳೇ ಅಧಿಕವಾಗಿರುವ ಈ ಕಾಲದಲ್ಲೂ, ಸಮಾಜದ ಒಳಿತಿಗಾಗಿ ಚಿಂತಿಸುವ ಇಂಥ ಕೆಲವು ವ್ಯಕ್ತಿಗಳು ನಮ್ಮ ನಡುವೆ ಆರೋಗ್ಯಕರವಾಗಿ ಉಸಿರಾಡುತ್ತಿರುವುದು ಈ ನೆಲದ ಪುಣ್ಯ! ಜಾಹೀರಾತುಗಳಿಂದ ದೂರವಾದ ಆಡಂಬರವಿರದ, ಸರಳ ಜೀವನದ, ಉದಾತ್ತ ಚಿಂತನದ, ನಿಷ್ಕಪಟ ಸ್ವಭಾವದ ಬಿಚ್ಚುಮನದ, ಪರೋಪಕಾರಿ ಜೀವನಶೈಲಿಯ ವೈಶಾಲಿ ಅವರ ವ್ಯಕ್ತಿತ್ವ ಇಂದಿನ ಸಾಮಾಜಿಕ ಬದುಕಿಗೊಂದು ದಾರಿದೀಪ!?