ಉದಾರೀಕರಣ-ಖಾಸಗೀಕರಣ-ಜಾಗತೀಕರಣಗಳ ತ್ರಿವಳಿ ಇಂದು ಇಡೀ ಜಗತ್ತಿನ ಮುಂದೆ ಅಭಿವೃದ್ಧಿಯ ಹೊಸ ಮಾದರಿಯನ್ನೇ ಇರಿಸಿದೆ. ವಿಜ್ಞಾನ ತಂತ್ರಜ್ಞಾನಗಳು ನಿಸರ್ಗವನ್ನು ಕಬಳಿಸುವುದಕ್ಕೆ ಮನುಷ್ಯನಿಗೆ ಯಮಬಲವನ್ನು ತಂದುಕೊಟ್ಟಿವೆ. ಅದರ ಜತೆಜತೆಗೇ ಖಾಸಗೀಕರಣವೆಂಬುದಕ್ಕೆ ಅನಾದಿಕಾಲದಿಂದ ಮುಕ್ತವಾಗಿ ಎಲ್ಲರ ಬಳಕೆಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ದುಡ್ಡಿನ ಚೀಲಗಳಿಗೆ ತಟ್ಟೆಯಲ್ಲಿಟ್ಟು ಅರ್ಪಿಸುವುದು ಎನ್ನುವ ಅರ್ಥ ಕೂಡ ಸೇರಿಕೊಂಡಿದೆ!
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋsಯಂ ಕ್ಷೆಭರಹಿತಃ ಸಜ್ಜನಾಃ ಸಂತು ನಿರ್ಭಯಾಃ ||
ಎಂಬುದು ಸಂಸ್ಕೃತದ ಒಂದು ಉಕ್ತಿ. ಇಲ್ಲಿ ಯಾವೆಲ್ಲ ವಿಷಯಗಳನ್ನು ಒಂದೇ ಕಡೆ ಹೇಳಿದ್ದಾರೆ ಎಂಬುದನ್ನು ಗಮನಿಸಬೇಕು. ‘ಮಳೆ ಸಕಾಲದಲ್ಲಿ ಬರಲಿ ಮತ್ತು ಪೃಥ್ವಿ ಸಸ್ಯಶಾಲಿನಿಯಾಗಿರಲಿ’ ಎಂಬ ಮಾತುಗಳು ಇಲ್ಲಿ ಅಕ್ಕಪಕ್ಕದಲ್ಲೇ ಇವೆ. ಇವು ಪರಸ್ಪರ ಪೂರಕಗಳೂ ಹೌದು. ಅಂದರೆ ಸಕಾಲದಲ್ಲಿ ಮಳೆ ಬಂದರೆ ಪೃಥ್ವಿಯು ಸಸ್ಯಗಳಿಂದ ತುಂಬಿ ಹಸಿರುಕ್ಕುವಂತೆ ಇರುತ್ತದೆ; ಹಾಗೆಯೇ ಭೂಮಿ ಸಸ್ಯಶಾಲಿನಿಯಾಗಿದ್ದಾಗ ಸಕಾಲದಲ್ಲಿ ಮಳೆ ಬಂದು ಬೆಳೆ ಬೆಳೆದು ನಾಡಿನಲ್ಲಿ ಸುಭಿಕ್ಷ ನೆಲೆಸಿರುತ್ತದೆ; ಅದರಿಂದ ದೇಶ ಕ್ಷೆಭರಹಿತವಾಗಿರುತ್ತದೆ; ಹಾಗಿರುವಾಗ ಸಜ್ಜನರು ನಿರ್ಭಯರಾಗಿ ಇರಲೇಬೇಕಲ್ಲವೆ?
ಮನುಷ್ಯನು ಪ್ರಕೃತಿಯ ಮೇಲೆ ನಡೆಸುತ್ತಿರುವ ದೌರ್ಜನ್ಯ ಅತಿಯಾದುದಕ್ಕೆ ಪ್ರತೀಕವೆಂಬಂತೆ ಈಗೀಗ ಋತುಮಾನ ವ್ಯತ್ಯಾಸವಾದುದನ್ನು ಕಾಣುತ್ತಿದ್ದೇವೆ. ಮಲೆನಾಡಿನಲ್ಲೇ ಮಳೆಗಾಲವಿಲ್ಲ. ಜಲಾಶಯಗಳು ತುಂಬುತ್ತಿಲ್ಲ. ಜಗತ್ತಿನ ಬಿಸಿ ಏರುತ್ತಿದೆ. ಕೇವಲ ೧೦-೧೫ ವರ್ಷಗಳಲ್ಲೇ ಎದ್ದುಕಾಣುವ ವ್ಯತ್ಯಾಸಗಳು ನಮ್ಮ ಮುಂದೆ ನಡೆದುಹೋಗಿವೆ. ಇದು ಹೀಗೆಯೇ ಮುಂದುವರಿಯುವುದೆ? ಮುಂದುವರಿದರೆ ಹೇಗೆ? ಭೂಮಿ ಎಂಬ ಉಪಗ್ರಹದ ಮೇಲೆ ಮನುಷ್ಯನ ಅಸ್ತಿತ್ವದ ಕ್ಷಣಗಣನೆ ಆರಂಭವಾಗಿದೆಯೆ ಎಂದು ಚಿಂತಿಸುವಂತಾಗಿದೆ.
ಇದಕ್ಕೆ ಯಾರು, ಎಷ್ಟು ಕಾರಣ? ತನ್ನ ಪಾತ್ರವೇನಾದರೂ ಇದೆಯೆ ಎಂದು ಪ್ರತಿಯೊಬ್ಬನೂ ಯೋಚಿಸಿದರೆ ಉತ್ತರ ಸಿಗುವುದು ಕಷ್ಟವಿಲ್ಲ. ಕಾಡು-ತೊರೆ-ಹೊಳೆ-ಹಳ್ಳ ಮುಂತಾಗಿ ಆರೋಗ್ಯವಾಗಿ ಮುಂದುವರಿಯುವ ಒಂದು ವ್ಯವಸ್ಥೆಯನ್ನು ನಿಸರ್ಗ ಹೊಂದಿದೆ. ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂಮಿಗೀತ’ ಕವನದಲ್ಲಿ ಹೇಳುವಂತೆ ನಿಸರ್ಗದ ಅಸಹಜ ಸಂತಾನವೆನಿಸುವ ಮನುಷ್ಯ ಮಾಡುವ ಹಸ್ತಕ್ಷೇಪಗಳೇ ಸಮಸ್ಯೆಯ ಮೂಲ ಎಂಬಲ್ಲಿ ಸಂಶಯವಿಲ್ಲ. ೧೮ನೇ ಶತಮಾನದ ಕೈಗಾರಿಕಾಕ್ರಾಂತಿ ಮಾನವನ ಇತಿಹಾಸದಲ್ಲೊಂದು ದೊಡ್ಡ ತಿರುವು. ಅದು ಉಂಟುಮಾಡಿದ ದುರಾಶೆಯಿಂದ ಮನುಷ್ಯ ‘ಎಲ್ಲವೂ ಇರುವುದು ನನಗಾಗಿ’ ಎಂಬ ಧೋರಣೆಯಿಂದ ಸುತ್ತಲಿನ ಎಲ್ಲವನ್ನೂ ಮುಕ್ಕತೊಡಗಿದ್ದಾನೆ. ಉದಾರೀಕರಣ-ಖಾಸಗೀಕರಣ-ಜಾಗತೀಕರಣಗಳ ತ್ರಿವಳಿಯಂತೂ ಇಡೀ ಜಗತ್ತಿನ ಮುಂದೆ ಅಭಿವೃದ್ಧಿಯ ಹೊಸ ಮಾದರಿಯನ್ನೇ ಇರಿಸಿತು. ವಿಜ್ಞಾನ ತಂತ್ರಜ್ಞಾನಗಳು ನಿಸರ್ಗವನ್ನು ಕಬಳಿಸುವುದಕ್ಕೆ ಮನುಷ್ಯನಿಗೆ ಯಮಬಲವನ್ನು ತಂದುಕೊಟ್ಟವು. ಖಾಸಗೀಕರಣವೆಂಬುದಕ್ಕೆ ಅನಾದಿಕಾಲದಿಂದ ಮುಕ್ತವಾಗಿ ಎಲ್ಲರ ಬಳಕೆಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ದುಡ್ಡಿನ ಚೀಲಗಳಿಗೆ ತಟ್ಟೆಯಲ್ಲಿಟ್ಟು ಅರ್ಪಿಸುವುದು ಎನ್ನುವ ಅರ್ಥ ಕೂಡ ಸೇರಿಕೊಂಡಿತು.
ಮುಂಬಯಿ ಕಡಲತೀರದಲ್ಲಿರುವ ಎಸ್ಸಾರ್ನ ಪ್ರಧಾನ ಕಛೇರಿಯ ಬೃಹತ್ ಕಟ್ಟಡದ ಮೇಲೆ ಪ್ರತಿಭಟನಕಾರರು ದೊಡ್ಡ ಬ್ಯಾನರ್ ಇಳಿಬಿಟ್ಟರು.
ಅದರಂತೆ ೧೯೯೦ರ ದಶಕದ ಆರಂಭದಿಂದ ಅದೆಷ್ಟೋ ಉದ್ಯಮಪತಿಗಳು ದುಡ್ಡಿನ ಚೀಲದೊಂದಿಗೆ ಪ್ರಕೃತಿ ಈ ತನಕ ಎಲ್ಲೆಲ್ಲ ಅಚುಂಬಿತವಾಗಿ ಉಳಿದಿದೆ ಎಂಬುದನ್ನು ಹುಡುಕಿಕೊಂಡು ಹೊರಟರು; ತಮ್ಮ ರಾಕ್ಷಸಬಲದೊಂದಿಗೆ ಜಾಲಾಡಿದರು. ಸೂರ್ಯನ ಬೆಳಕೇ ನೆಲಮುಟ್ಟದ ದಟ್ಟ ಕಾಡಿದ್ದ ನೂರಾರು, ಸಾವಿರಾರು ಎಕ್ರೆ ಜಾಗದಲ್ಲಿ ಇಡೀ ಮಣ್ಣು ಅಡಿಮೇಲಾಗಿ ಹಿಂದಿನ ಒಂದು ಗಿಡವೂ ಉಳಿಯದ ರೀತಿಯಲ್ಲಿ ಜಗಜಗಿಸುವ ಕೈಗಾರಿಕಾ ಪಟ್ಟಣಗಳು ಮೇಲೆದ್ದು ನಿಂತವು. ಇದರಲ್ಲಿ ಭೂಮಿಯ ಒಳಗೆ ಲೋಹಗಳು, ಕಲ್ಲಿದ್ದಲು ಮುಂತಾದ ಸಂಪನ್ಮೂಲಗಳಿದ್ದ ಭಾಗಗಳಿಗೆ ಹೆಚ್ಚು ಅಪಾಯ. ಆ ರೀತಿಯಲ್ಲಿ ಶತಮಾನಗಳಿಂದ ದಟ್ಟಹಸಿರಿನ ತಾಣವಾಗಿದ್ದ ಛತ್ತೀಸ್ಗಢ, ಮಧ್ಯಪ್ರದೇಶದ ಭಾಗಕ್ಕೆ ಹೋದವರು ಎಸ್ಸಾರ್ ಗ್ರೂಪಿನ ಉದ್ಯಮಿ ಸಹೋದರು: ಶಶಿ ರುಯ್ಯಾ ಮತ್ತು ರವಿ ರುಯ್ಯಾ.
ಜೀವವೈವಿಧ್ಯದ ತಾಣ
ಅಮಿಲಿಯಾ ಎಂಬುದು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳ ನಡುವಣ ಒಂದು ಹಳ್ಳಿ. ಎಸ್ಸಾರ್ನ ಭಯಕ್ಕೆ ಸಿಲುಕಿದ ಹಳ್ಳಿಗಳಲ್ಲಿ ಅದೂ ಒಂದು. ಅದರ ಒತ್ತಿನಲ್ಲಿರುವ ಮಹಾನ್ ಎಂಬ ಅರಣ್ಯದಲ್ಲಿ ಭಾರೀ ಕಲ್ಲಿದ್ದಲು ನಿಕ್ಷೇಪವಿದೆ ಎಂಬುದು ಪತ್ತೆಯಾಗಿದೆ. ಕೇಂದ್ರಸರ್ಕಾರ ೨೦೦೬ರ ಏಪ್ರಿಲ್ನಲ್ಲಿ ಅದನ್ನು ಎಸ್ಸಾರ್ ಮತ್ತು ಹಿಂಡಾಲ್ಕೋಗೆ ಜಂಟಿಯಾಗಿ ನೀಡಿತು. ಅಲ್ಲಿನ ಕಲ್ಲಿದ್ದಲು ಎತ್ತಿ ಅಲ್ಲೇ ಸ್ಥಾಪಿಸುವ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ತನ್ನು ಉತ್ಪಾದಿಸಬೇಕೆಂಬುದು ಒಪ್ಪಂದ. ೨೦೦೮ರ ಡಿಸೆಂಬರ್ ಹೊತ್ತಿಗೆ ಕಲ್ಲಿದ್ದಲು ನಿಕ್ಷೇಪದ ಬಗ್ಗೆ ಪರಿಸರಸಂಬಂಧಿ ಅನುಮತಿ ಸಿಕ್ಕಿತ್ತು. ಆದರೆ ಅರಣ್ಯಇಲಾಖೆಯ ಅನುಮತಿ ದೊರೆಯಲಿಲ್ಲ. ಏಕೆಂದರೆ ಮಹಾನ್ ಅರಣ್ಯ ಅತ್ಯಂತ ಶ್ರೀಮಂತ ಜೀವವೈವಿಧ್ಯದ ತಾಣ. ಸರ್ಕಾರದ ಅರಣ್ಯ ಸಲಹಾ ಸಮಿತಿ ೨೦೦೮ರ ಜುಲೈನಿಂದ ೨೦೦೯ರ ಡಿಸೆಂಬರ್ ನಡುವೆ ನಾಲ್ಕುಬಾರಿ ಸಭೆ ನಡೆಸಿದರೂ ಒಮ್ಮತ ಮೂಡಲಿಲ್ಲ. ಫೆಬ್ರುವರಿ ೨೦೧೦ರಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆ ಅದು ಗಣಿಗಾರಿಕೆಗೆ ಪ್ರಶಸ್ತವಾದ ಜಾಗವಲ್ಲ ಎಂಬ ಅಭಿಪ್ರಾಯ ನೀಡಿತು.
ಆಗ ರುಯ್ಯಾ ಸಹೋದರರು ಮತ್ತು ಹಿಂಡಾಲ್ಕೋದ ಕುಮಾರಮಂಗಲಮ್ ಬಿರ್ಲಾ ಕೇಂದ್ರದ ಯುಪಿಎ ಸರ್ಕಾರದ ಮೇಲೆ ಪ್ರಭಾವ ಬೀರಲು ಆರಂಭಿಸಿದರು. ಶಶಿ ರುಯ್ಯಾ ಪ್ರಧಾನಿ ಮನಮೋಹನಸಿಂಗ್ ಅವರಿಗೆ ಪತ್ರ ಬರೆದು, ಕೂಡಲೆ ಮಧ್ಯಪ್ರವೇಶಿಸಿ ಒಂದನೇ ಹಂತದ ಅರಣ್ಯ ಅನುಮತಿ ಕೊಡಿಸಿ ಎಂದರು. ಎಸ್ಸಾರ್ ವಿದ್ಯುತ್ಸ್ಥಾವರದ ಕಾಮಗಾರಿ ಶೇ. ೬೫ರಷ್ಟು ಮುಗಿದಿದೆ. ಕಲ್ಲಿದ್ದಲು ಶೀಘ್ರವೇ ಬೇಕು ಎಂದು ಒತ್ತಾಯಿಸಿದರು. ಪ್ರಧಾನಿ ಆ ಪತ್ರವನ್ನು ಪರಿಸರ ಸಚಿವ ಜೈರಾಮ್ ರಮೇಶ್ ಅವರಿಗೆ ಕಳುಹಿಸಿದರು. ಅವರು ಪ್ರಧಾನಿಗೆ ಈ ವಾದವನ್ನು ನಾನು ಒಪ್ಪಲಾರೆ. ಅವರ ಕಾಮಗಾರಿಗೆ ನಾವು ಹೊಣೆಯೆ? ಸಂಪುಟ ಸಭೆಗಳಲ್ಲೇ ನಾನಿದನ್ನು ವಿರೋಧಿಸಿದ್ದೆನಲ್ಲವೆ? ಎಂದು ಆಕ್ಷೇಪ ಸೂಚಿಸಿದರು.
೨೦೧೦ರ ಬೇಸಿಗೆಯಲ್ಲಿ ರುಯ್ಯಾಗಳು ಮತ್ತು ಕೇಂದ್ರಸರ್ಕಾರದ ನಡುವೆ ಬಿರುಸಿನ ಚಟುವಟಿಕೆ ನಡೆಯಿತು. ಶಶಿ ರುಯ್ಯಾ ಸಚಿವ ಜೈರಾಮ್ ರಮೇಶ್ರನ್ನು ಭೇಟಿಮಾಡಿದರು. ಮರುದಿನ ಪರಿಸರ ಸಚಿವರು ಪ್ರಧಾನಿಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಎಸ್ಸಾರ್ ಅವರಿಗೆ ಬೇರೊಂದು ಕಲ್ಲಿದ್ದಲು ಬ್ಲಾಕ್ ನೀಡುವ ಬಗ್ಗೆ ರಾಜಿಸೂತ್ರವನ್ನು ಸಿದ್ಧಪಡಿಸುತ್ತಿದ್ದೇನೆ. ಏಕೆಂದರೆ ಮಹಾನ್ ಬ್ಲಾಕನ್ನು ನೀಡಿದರೆ ಸಮಸ್ಯೆಗಳ ಸರಣಿ(ಪ್ಯಾಂಡೋರಾಸ್ ಬಾಕ್ಸ್)ಯನ್ನು ಮೈಮೇಲೆ ಎಳೆದುಕೊಂಡಂತೆ. ಏನಾದರೂ ಮಾಡಿ ಅದನ್ನು ತಡೆಯಬೇಕು ಎಂದು ತಿಳಿಸಿದರು. ಕೆಲವೇ ದಿನದಲ್ಲಿ ಪ್ರಧಾನಿಗೆ ಇನ್ನೊಂದು ಪತ್ರ ಬರೆದು, ಪ್ರಧಾನಿ ಸೂಚಿಸಿದರೆ ಮನಸ್ಸಿಲ್ಲದ ಮನಸ್ಸಿನಿಂದ ಅನುಮತಿ ನೀಡುವೆ ಎಂದು ಹೇಳಿದರು.
ಪ್ರಧಾನಿ ಕಛೇರಿ ಯತ್ನ
ಕೆಲವು ತಿಂಗಳ ಬಳಿಕ ಪ್ರಧಾನಿ ಕಛೇರಿ ಎಸ್ಸಾರ್ನವರಿಗೆ ಕಾಡು ಕೊಡಿಸುವ ಬಗ್ಗೆ ಅಂತರ ಇಲಾಖಾ ಪ್ರಯತ್ನವನ್ನು ನಡೆಸಿತು. ೨೦೧೦ ಆಗಸ್ಟ್ ೬ರಂದು ಪ್ರಧಾನಿಯ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದು, ಅದರಲ್ಲಿ ಕಂಪೆನಿಯವರು ೧) ನೆಲ-ಜಲಗಳಿಗೆ ಸಂಬಂಧಿಸಿ ಯಾವ ಹೊಂದಾಣಿಕೆ ಮಾಡಿಕೊಂಡಿದ್ದಾರೆ? ೨) ಪರಿಸರ ಅನುಮತಿ ಪಡೆದಿದ್ದಾರೆಯೆ? ೩) ಮುಖ್ಯ ಸ್ಥಾವರದ ಯಂತ್ರ ಖರೀದಿಗೆ ಬೇಡಿಕೆ ಮಂಡಿಸಲಾಗಿದೆಯೆ? ೪) ನಿವೇಶನದಲ್ಲಿ ಕಾಮಗಾರಿ ಆರಂಭವಾಗಿದೆಯೆ? ೫) ಸಾಕಷ್ಟು ವೆಚ್ಚ ಆಗಿದೆಯೆ ಅಥವಾ ವೆಚ್ಚಕ್ಕೆ ಕಮಿಟ್ ಆಗಿದ್ದಾರೆಯೆ? ೬) ಮೂರು ವರ್ಷದೊಳಗೆ ವಿದ್ಯುತ್ಸ್ಥಾವರ ಕಾರ್ಯಾರಂಭ ಮಾಡುವುದೆ? – ಎಂಬ ಆರು ಅಂಶಗಳ ಬಗ್ಗೆ ಚರ್ಚಿಸಲಾಯಿತು. ಅಂದರೆ ಬೇಗ ಮಂಜೂರಾತಿ ನೀಡುವುದೇ ಸಭೆಯ ಉದ್ದೇಶವಾದಂತಿತ್ತು. ಅಂತರ ಇಲಾಖಾ ಸಭೆಯ ಎಲ್ಲ ವಿವರಗಳು ಮುಂದೆ ಸೋರಿಕೆಯಾದ ಒಂದು ಇ-ಮೈಲ್ ಸಂದೇಶದಲ್ಲಿದ್ದವು; ಎಸ್ಸಾರ್ಗೆ ಅದು ಹೇಗೆ ಸಿಕ್ಕಿತೆಂಬುದು ಅಚ್ಚರಿಯ ವಿಷಯ.
ರವಿ ರುಯ್ಯಾ, ಶಶಿ ರುಯ್ಯಾ
ಸಭೆಯ ಬೆನ್ನಿಗೆ ರುಯ್ಯಾ ಪ್ರಧಾನಿಗೆ ಪತ್ರ ಬರೆದು, ಅಂತರ ಸಚಿವಾಲಯ ಸಮಿತಿಯು ಯೋಜನಾಸ್ಥಳಕ್ಕೆ ಭೇಟಿ ನೀಡಿದೆ. ಅಲ್ಲಿನ ಪ್ರಗತಿಯಿಂದ ಅದಕ್ಕೆ ತೃಪ್ತಿ ಆಗಿದೆ. ಅರಣ್ಯ ಮತ್ತು ಪರಿಸರ ಸಚಿವರಿಗೆ ತಾವು ಸೂಕ್ತ ಸೂಚನೆ ನೀಡಿ, ಅಗತ್ಯವಾದ ಅರಣ್ಯ ಇಲಾಖಾ ಮಂಜೂರಾತಿಯನ್ನು ಬೇಗ ಕೊಡಿಸಿದರೆ ತುಂಬ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಆದರೂ ಪರಿಸರ-ಅರಣ್ಯ ಸಚಿವಾಲಯವು ಒಪ್ಪಿಗೆ ನೀಡಲಿಲ್ಲ; ಬದಲಾಗಿ ವಿಶೇಷವಾಗಿ ರಚಿಸಲಾದ ಸಚಿವರ ಸಮಿತಿಗೆ ವಿಷಯವನ್ನು ಒಪ್ಪಿಸಿತು. ಅಂದಿನ (ಫೆಬ್ರುವರಿ ೨೦೧೧) ಹಣಕಾಸು ಮಂತ್ರಿ ಪ್ರಣಬ್ ಮುಖರ್ಜಿ ಸಮಿತಿಯ ಮುಖ್ಯಸ್ಥರು. ಎಸ್ಸಾರ್ ಮತ್ತು ಹಿಂಡಾಲ್ಕೋ ಇಬ್ಬರೂ ಪ್ರತ್ಯೇಕವಾಗಿ ಪ್ರಣಬ್ರಿಗೆ ಪತ್ರ ಬರೆದರು. ಸೋರಿಕೆಯಾದ ಒಂದು ಇ-ಮೈಲ್ನಿಂದ ತಿಳಿದುಬರುವ ಅಂಶವೆಂದರೆ ೨೦೧೧ ಇಡೀ ವರ್ಷ ಎಸ್ಸಾರ್ ನಿರ್ಧಾರ ಕೈಗೊಳ್ಳುವವರನ್ನು ಒಲಿಸುವ ಕೆಲಸ ಮಾಡಿತು. ಅವರ ಸ್ನೇಹಿತರು, ಕುಟುಂಬಿಕರಿಗೆ ಉದ್ಯೋಗ ಇತ್ಯಾದಿ ನೀಡಿತೆಂದು ‘ಕಾರವಾನ್'(ಆಗಸ್ಟ್ ೨೦೧೫ರ ಸಂಚಿಕೆ)ನ ತಮ್ಮ ಲೇಖನದಲ್ಲಿ ಕಿಶನ್ ಕೌಶಿಕ್ ವಿವರಿಸುತ್ತಾರೆ.
ಜುಲೈನಲ್ಲಿ ಕಂಪೆನಿಯ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಸುನೀಲ್ ಬಜಾಜ್ ಹಿರಿಯ ಉಪಾಧ್ಯಕ್ಷ ರಾಹುಲ್ ತನೇಜಾಗೆ ಪತ್ರ ಬರೆದು ಉಕ್ಕು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಯು.ಪಿ. ಸಿಂಗ್ ಅವರು ಕುಶಾಗ್ರಕುಮಾರ್ ಎಂಬವರಿಗೆ ಕೆಲಸ ಕೇಳಿದ್ದಾರೆಂದು ತಿಳಿಸುತ್ತಾ, ಅಭಿಷೇಕ್ ಅಗರ್ವಾಲ್ ಎಂಬವರ ವಿವರಗಳನ್ನು ಕೂಡ ಕಳಿಸಿದ್ದರು. ಅಗರ್ವಾಲ್ಗೆ ಒಳ್ಳೆಯ ಕೆಲಸ ಕೊಡಿಸುವಂತೆ ಶಿಫಾರಸು ಮಾಡಿದವರು ಅಂದಿನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದಶರ್ಮಾ ಅವರು. ಅದೇ ನವೆಂಬರ್ನಲ್ಲಿ ‘ತುಂಬ ಹಿರಿಯ ರಾಜಕಾರಣಿ’ಯೊಬ್ಬರ ಶಿಫಾರಸಿನ ಬಗ್ಗೆ ತಿಳಿಸಿದ್ದಾರೆ. ಅದು ಆಧ್ಯಾತ್ಮಿಕ ನಾಯಕರೊಬ್ಬರ ಮಗ ಸಂತೋಷ್ ರೆಡ್ಡಿ ಎಂಬಾತನ ಬಗ್ಗೆ. ಇದು ನಮಗೆ ತುಂಬ ಮುಖ್ಯ. ಸಂಬಂಧಪಟ್ಟ ಹಿರಿಯರು ಇವತ್ತು ಕೂಡ ಈ ಬಗ್ಗೆ ಕೇಳಿದರು. ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಬಜಾಜ್ ಒತ್ತಾಯಿಸಿದ್ದಾರೆ; ಆ ಹಿರಿಯರು ಪ್ರಣಬ್ ಮುಖರ್ಜಿ ಅವರೆಂಬುದು ಮುಂದಿನ ಇ-ಮೈಲ್ಗಳಿಂದ ಸ್ಪಷ್ಟವಾಗುತ್ತದೆ.
೨೦೧೨ ಮೇ ಒಂದರಂದು ಎಸ್ಸಾರ್ನ ಮುಖ್ಯ ಆಡಳಿತಾಧಿಕಾರಿ (ಸಿಇಓ) ಪ್ರಶಾಂತ್ ರುಯ್ಯಾ (ಶಶಿ ಅವರ ಪುತ್ರ) ಬಜಾಜ್ಗೆ ಕಳುಹಿಸಿದ ಇ-ಮೈಲ್ ಸಂದೇಶದಲ್ಲಿ ನಿನ್ನೆ ಹಣಕಾಸು ಮಂತ್ರಿಗಳ ಭೇಟಿ ಮಾಡಿದೆ. ಮಂತ್ರಿಗಳ ಸಮಿತಿ ಸಭೆಗೆ ಬೇಗ ದಿನ ನಿಗದಿ ಮಾಡಿ ಎಂದು ಕೇಳಿದೆ ಎಂದು ತಿಳಿಸಿದ್ದಾರೆ. ಬಜಾಜ್ ಪ್ರಣಬ್ರನ್ನು ಭೇಟಿ ಮಾಡಿದಾಗ ಅವರು ತಾವು ಅಪೇಕ್ಷಿಸಿದ್ದ ರೆಡ್ಡಿಯ ನೇಮಕಾತಿ ಇನ್ನೂ ಆಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರಂತೆ. ಮರುದಿನವೇ ನೇಮಕಾತಿ ಪತ್ರ ಸಿದ್ಧವಾಯಿತು. ಮೇ ೩೦ರಂದು ಸಚಿವರ ಸಮಿತಿ ಎಸ್ಸಾರ್ ಮತ್ತು ಹಿಂಡಾಲ್ಕೋಗೆ ಒಂದನೇ ಹಂತದ ಅರಣ್ಯ ಮಂಜೂರಾತಿಯನ್ನು ನೀಡಿತು. ಆಗ ಕಲ್ಲಿದ್ದಲು ಮಂತ್ರಿಯಾಗಿದ್ದವರು ಶ್ರೀಪ್ರಕಾಶ್ ಜೈಸ್ವಾಲ್. ಸಚಿವರ ಸಮಿತಿಯಲ್ಲಿ ಆತ ಕೂಡ ಇದ್ದರು. ಅವರು ಎಸ್ಸಾರ್ನಲ್ಲಿ ತಮ್ಮ ಕೆಲವರ ನೇಮಕಾತಿಗೆ ಶಿಫಾರಸು ಕೂಡ ಮಾಡಿದ್ದರು. ೨೦೧೩ರ ಜುಲೈನಲ್ಲಿ ಸುನೀಲ್ ಬಜಾಜ್ ಪ್ರಶಾಂತ್ ರುಯ್ಯಾರ ಓರ್ವ ನಿಕಟವರ್ತಿಗೆ ಪತ್ರ ಬರೆದು, ಜೈಸ್ವಾಲ್ರನ್ನು ಈಚೆಗೆ ಭೇಟಿ ಮಾಡಿದಾಗ ‘ತನ್ನ ಕ್ಷೇತ್ರದ ಕೆಲವರನ್ನು ಕಂಪೆನಿಗೆ ಸೇರಿಸಿಕೊಳ್ಳಿ’ ಎಂದು ಕೇಳಿದ್ದೆ. ‘ಆದರೂ ಮಾಡಿಲ್ಲ’ ಎಂದು ಬೇಸರ ಸೂಚಿಸಿದರು ಎಂದು ತಿಳಿಸಿದರು. ಉತ್ತರವಾಗಿ ಸಚಿವ ಜೈಸ್ವಾಲ್ರ ಕಡೆಯ ೮-೧೦ ಜನರ ನೇಮಕಾತಿಗೆ ಪ್ರಶಾಂತ್ ಒಪ್ಪಿದ್ದಾರೆ ಎಂದು ತಿಳಿಸಲಾಯಿತು. ಪ್ರಶಾಂತ್ ರುಯ್ಯಾ ಕೂಡಲೆ ಆ ಸಚಿವರನ್ನು ಭೇಟಿ ಮಾಡುವವರಿದ್ದರು. ಭೇಟಿಗೆ ಹೋಗುವಾಗ ಎಸ್ಸಾರ್ ಅಧಿಕಾರಿಗಳು ಮೂವರ ನೇಮಕಾತಿ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.
ಮಂಡಿಯೂರಿದ ಸರ್ಕಾರ
ಎಸ್ಸಾರ್ ಕಂಪೆನಿ ವಿರುದ್ಧ ಅಮಿಲಿಯಾ ಹಳ್ಳಿ ಜನರ ಹೋರಾಟ
ಅರಣ್ಯ ಪ್ರದೇಶ ನೀಡಿಕೆಗೆ ಒಪ್ಪಿಗೆ ನೀಡಿದ ಸಚಿವರ ಸಮಿತಿಯ ಸಭೆ ‘ಮೊದಲೇ ಮುಂದುವರಿದು ಅನುಮತಿ ಕೇಳುವುದು’ (fait accompli) ಅರಣ್ಯ ಸಂರಕ್ಷಣ ಕಾಯ್ದೆಗೆ ವಿರುದ್ಧವಾದದ್ದು ಎನ್ನುವ ಪರಿಸರ ಸಚಿವರ ಆತಂಕವನ್ನು ತಳ್ಳಿಹಾಕಿತು. ಅದಲ್ಲದೆ ಆನಂದಶರ್ಮಾ ಅವರು ಯೋಜನಾ ವೆಚ್ಚದ ಶೇ. ೫ರಷ್ಟು ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಬಗ್ಗೆ ಖರ್ಚು ಮಾಡಬೇಕೆಂಬ ನಿಯಮವನ್ನು ಕೈಬಿಡಲು ಸಲಹೆ ಮಾಡಿದರು; ಎಲ್ಲ ಮಂತ್ರಿಗಳು ಅದಕ್ಕೆ ಒಪ್ಪಿದರು. ಮುಖ್ಯಸ್ಥ ಪ್ರಣಬ್ ಮುಖರ್ಜಿ ಅವರು ಸರ್ಕಾರ ಎಲ್ಲ ಅಂಶಗಳ ಬಗ್ಗೆ ಪೂರ್ಣ ದೃಷ್ಟಿಕೋನ ತಳೆದು ಯೋಜನೆ ವಾಣಿಜ್ಯಾತ್ಮಕವಾಗಿ ಲಾಭದಾಯಕವಾಗುವಂತೆ ನೋಡಿಕೊಳ್ಳಬೇಕು. ಏಕೆಂದರೆ ಅಂತಿಮ ಉತ್ಪನ್ನದ ಮೇಲೆ ಪರಿಣಾಮ ಆಗಬಾರದು ಎಂದು ಸೂಚಿಸಿದರು. ೧೨ನೇ ಪಂಚವಾರ್ಷಿಕ ಯೋಜನೆಯ ಪ್ರಾಜೆಕ್ಟ್ಗಳ ಆದ್ಯತೆಯ ಪಟ್ಟಿಯಲ್ಲಿ ಇವರ ಯೋಜನೆಗಳನ್ನು ಸೇರಿಸಬೇಕು ಎಂದು ಕೂಡ ಸಭೆ ಕಲ್ಲಿದ್ದಲು ಇಲಾಖೆಗೆ ನಿರ್ದೇಶನ ಮಾಡಿತು. ಇದಕ್ಕೆ ಒಂದು ವರ್ಷ ಮುನ್ನ ಜೈರಾಮ್ ರಮೇಶ್ರನ್ನು ಪರಿಸರ ಇಲಾಖೆಯಿಂದ ಆಚೆಗಿಟ್ಟು ಶ್ರೀಮತಿ ಜಯಂತಿ ನಟರಾಜ್ ಅವರನ್ನು ತರಲಾಗಿತ್ತು. ಆಕೆ ಒಂದು ಕಡತದಲ್ಲಿ ದಟ್ಟ ಅರಣ್ಯ ಭೂಮಿಯನ್ನು ಉದ್ದಿಮೆಗೆ ಕೊಡುವ ಬಗ್ಗೆ ಅರಣ್ಯ-ಪರಿಸರ ಸಚಿವಾಲಯ ತೀವ್ರ ಆಕ್ಷೇಪ ಸೂಚಿಸಿದಾಗಲೂ ಸಚಿವರ ಗುಂಪು ಆ ಬಗ್ಗೆ ನಿರ್ಧಾರ ಕೈಗೊಂಡಿತು ಎಂದು ಬರೆದಿರುವುದು ಬೆಳಕಿಗೆ ಬಂದಿದೆ. ಮಂಜೂರಾತಿ ತಡಮಾಡಿ ಉದ್ದಿಮೆದಾರರಿಗೆ ನಷ್ಟ ಉಂಟುಮಾಡುತ್ತಿದ್ದಾರೆಂದು ಆಕೆಯನ್ನು ಕೂಡ ಮನಮೋಹನ ಸಿಂಗ್ ಸರ್ಕಾರ ಅರಣ್ಯ-ಪರಿಸರ ಸಚಿವಾಲಯದಿಂದ ಆಚೆ ಹಾಕಿತು.
ಅಂದಿನ ಅರಣ್ಯ-ಪರಿಸರ ಸಚಿವ ಎಂ. ವೀರಪ್ಪ ಮೊಲಿ
ಆಗ ಬಂದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ. ಮೊಲಿ ಅವರ ನೇಮಕದಿಂದ ಎಸ್ಸಾರ್, ರಿಲಯನ್ಸ್ ಸೇರಿದಂತೆ ಬಹಳಷ್ಟು ಉದ್ಯಮಪತಿಗಳಿಗೆ ತುಂಬ ಸಂತೋಷವಾಯಿತು.
ಅಮಿಲಿಯಾದ ಮಟ್ಟಿಗೆ ತಾನೊಂದು ಬಗೆದರೆ ವಿಧಿ ಇನ್ನೊಂದು ಬಗೆಯಿತು ಎಂಬಂತಾಯಿತು. ಎಸ್ಸಾರ್ ಮತ್ತು ಯುಪಿಎ ಸರ್ಕಾರಗಳು ಬಹಳಷ್ಟು ತಂತ್ರಗಾರಿಕೆ ನಡೆಸಿ ಕಾಡು ನುಂಗಲು ಹಸಿರು ನಿಶಾನೆ ತೋರಿದರೂ, ಕಲ್ಲಿದ್ದಲು ಗಣಿಗಳ ಮಂಜೂರಾತಿಯೇ ಯುಪಿಎ ಸರ್ಕಾರದ ಒಂದು ಹಗರಣವಾಗಿ ಸುಪ್ರೀಂಕೋರ್ಟ್ ಕಲ್ಲಿದ್ದಲು ಬ್ಲಾಕ್ ನೀಡಿಕೆಯನ್ನು ವಜಾಗೊಳಿಸಿತು. ಅದರ ವಿರುದ್ಧ ಕಂಪೆನಿಯ ಹೋರಾಟ ಮುಂದುವರಿದಿದೆ; ಸರ್ಕಾರದ ಕೆಲವು ರಹಸ್ಯ ದಾಖಲೆಗಳು ಅವರ ಬಳಿ ಇವೆ ಎಂದು ಕೌಶಿಕ್ ಹೇಳುತ್ತಾರೆ.
ಇಂದಿನ ದೃಷ್ಟಿಯಲ್ಲಿ ನೋಡುವುದಾದರೆ ಛತ್ತೀಸ್ಗಢ ಒಂದು ದುರದೃಷ್ಟಶಾಲಿ ರಾಜ್ಯ. ಏಕೆಂದರೆ ದೇಶದ ಕಲ್ಲಿದ್ದಲು ಮತ್ತು ಕಬ್ಬಿಣದ ಅದಿರುಗಳ ಶೇ. ೨೦ರಷ್ಟು ಮತ್ತು ಸತು ಲೋಹದ ಎಲ್ಲ ಅದಿರು ಆ ರಾಜ್ಯದಲ್ಲೇ ಇವೆ. ಬಸ್ತಾರ್ ಮತ್ತು ದಾಂತೇವಾಡ ಜಿಲ್ಲೆಗಳು ಮಾವೋವಾದಿಗಳ (ನಕ್ಸಲ್) ಹಿಂಸೆಯಿಂದ ದೇಶದಲ್ಲಿ ಸುದ್ದಿ ಮಾಡುತ್ತಿರುವಾಗಲೇ ಸುಮಾರು ಒಂದು ದಶಕದಿಂದ ಎಸ್ಸಾರ್ನವರು ಅಲ್ಲೊಂದು ಉಕ್ಕು ಸ್ಥಾವರ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಜೊತೆಗೆ ಈಗಾಗಲೆ ಇರುವ ಉದ್ಯಮದ ಹಿತಾಸಕ್ತಿಯ ರಕ್ಷಣೆ ಕೆಲಸವೂ ಇದೆ. ದಾಂತೇವಾಡದ ಕಬ್ಬಿಣದ ಉಂಡೆ ಸ್ಥಾವರದಿಂದ ವಿಶಾಖಪಟ್ಣಕ್ಕೆ ಎಸ್ಸಾರ್ ಗುಂಪಿನ ೨೬೭ ಕಿ.ಮೀ. ಉದ್ದದ ಕೊಳವೆಮಾರ್ಗವಿದೆ. ಕನಿಷ್ಠ ನಾಲ್ಕು ಬಾರಿ ಮಾವೋವಾದಿಗಳು ಅವರ ಕೊಳವೆಮಾರ್ಗದ ಮೇಲೆ ದಾಳಿ ನಡೆಸಿದ್ದಾರೆ. ದಾಂತೇವಾಡದ ದುರ್ಲಿಯಲ್ಲಿ ಉಕ್ಕು ಸ್ಥಾವರವನ್ನು ಸ್ಥಾಪಿಸಲು ಎಸ್ಸಾರ್ನ ಪ್ರಯತ್ನ ಸಾಗಿದೆ.
ಆದಿವಾಸಿಗಳ ಪ್ರದೇಶ
ನಿಜವೆಂದರೆ, ಬಸ್ತಾರ್ ಪ್ರದೇಶ ಐದನೇ ಅನುಸೂಚಿಯದ್ದು. ಗ್ರಾಮಸಭೆಯ ಒಪ್ಪಿಗೆ ಇಲ್ಲದೆ ಆದಿವಾಸಿಯೇತರರು ಅಲ್ಲಿ ಜಮೀನು ಪಡೆಯುವಂತಿಲ್ಲ. ೨೦೦೫ರ ಜೂನ್-ಜುಲೈನಲ್ಲಿ ಬಸ್ತಾರ್ನಲ್ಲಿ ಉಕ್ಕು ಸ್ಥಾವರ ಸ್ಥಾಪಿಸುವ ಬಗ್ಗೆ ರಾಜ್ಯಸರ್ಕಾರ ಹಾಗೂ ಎಸ್ಸಾರ್ ಮತ್ತು ಟಾಟಾ ಗುಂಪಿನ ನಡುವೆ ಎರಡು ಒಪ್ಪಂದಗಳಾಗಿದ್ದವು. ಹಳ್ಳಿಗರ ಜಮೀನನ್ನು ಎಸ್ಸಾರ್ಗೆ ಕೊಡಿಸುವುದೇ ಕೆಲವು ಪುಢಾರಿಗಳ ದಂಧೆಯಾಯಿತು. ದುರ್ಲಿಯ ಸರಪಂಚ ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಮಹೇಂದ್ರ ಕರ್ಮ ಅವರಿಂದ ಹಣ ಪಡೆದು ಊರಿನ ಜನರ ನಕಲಿ ಸಹಿ ಹಾಕಿ ಜಮೀನಿನ ಪರಭಾರೆ ಮಾಡಿದ್ದ. ಗೊತ್ತಾದ ಆದಿವಾಸಿಗಳು ಅವನನ್ನು ಕೊಲ್ಲಲು ಮುಂದಾದಾಗ ಮಹೇಂದ್ರ ಆತನನ್ನು ಜಗದಲ್ಪುರದ ಹೊಟೇಲಲ್ಲಿ ಇರಿಸಿ ರಕ್ಷಣೆ ನೀಡಿದ. ದುರ್ಲಿ ಗ್ರಾಮಸಭೆಯನ್ನು ರದ್ದುಗೊಳಿಸಿ ಹೊಸ ಸಭೆ ಕರೆದರು. ಮಹೇಂದ್ರ ಕರ್ಮ ಅಲ್ಲಿ ನಿಂತು ಪಿಸ್ತೂಲು ತೋರಿಸಿ ಎಲ್ಲವನ್ನೂ ನಿರ್ದೇಶಿಸಿದ. ಹಿಂದೆ ಸಿಪಿಐನಲ್ಲಿದ್ದ ಆತ ಕಾಂಗ್ರೆಸಿಗೆ ಸೇರಿ ಪ್ರಮುಖ ವ್ಯಕ್ತಿಯಾದ. ೨೦೦೦-೦೪ರ ಅವಧಿಯಲ್ಲಿ ಆತ ಅಜಿತ್ ಜೋಗಿ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಯಾಗಿದ್ದ.
ವಿರೋಧಿಗಳನ್ನು ಮಣಿಸಲು ಎಸ್ಸಾರ್ ಹಣ ಸುರಿಯುತ್ತದೆ ಎಂಬುದು ಸಿಪಿಐ ಮಾಜಿ ವಿಧಾನಸಭಾ ಸದಸ್ಯ ಮನೀಷ್ ಕುಂಜಮ್ ಅವರ ಆರೋಪ. ಸುಮಾರು ಹತ್ತು ವರ್ಷಗಳ ಹಿಂದೆ ಆತ ಗ್ರಾಮಸಭೆಯ ಹಗರಣಗಳ ವಿರುದ್ಧ ಪ್ರತಿಭಟನೆ ಸಂಘಟಿಸಿದರು. ಅವರನ್ನು ತಡೆಯಲು ಎಸ್ಸಾರ್ ಯತ್ನಿಸಿತು. ಕಂಪೆನಿಯ ಓರ್ವ ಹಿರಿಯ ಪ್ರತಿನಿಧಿ ಅವರ ಮನೆಗೆ ಬಂದು ಪ್ರತಿಭಟನೆ ಬೇಡವೆಂದು ಒತ್ತಾಯಿಸುತ್ತಾ, ನಿಮಗೇನು ಬೇಕು? ಎಷ್ಟು ಬೇಕು? ಎಂದು ಕೇಳಿದ ಮತ್ತು ೫ ಕೋಟಿ ರೂ. ನೀಡಲು ಮುಂದೆ ಬಂದನಂತೆ. ಆದರೆ ಕುಂಜಮ್ ಪ್ರತಿಭಟನೆ ನಿಲ್ಲಿಸಲು ಒಪ್ಪಲಿಲ್ಲ.
ಆ ಭಾಗ ಮಾವೋವಾದಿಗಳ ಹಿಡಿತದಲ್ಲಿದ್ದರೂ ಸರ್ಕಾರ ಎಸ್ಸಾರ್ ಮತ್ತು ಟಾಟಾಗಳೊಂದಿಗೆ ವ್ಯವಹಾರ ಕುದುರಿಸಿತು. ಆ ಒಪ್ಪಂದ ಆಗುವಾಗ ನಕ್ಸಲರ ವಿರುದ್ಧ ಮಹೇಂದ್ರ ಕರ್ಮ ಸಂಘಟಿಸಿದ ಸಶಸ್ತ್ರ ಪಡೆ ಸಲ್ವಾ ಜುಡುಮ್ನ ಮೊದಲ ಕಾರ್ಯಾಚರಣೆ ನಡೆದಿತ್ತು. ೨೦೧೩ರಲ್ಲಿ ಮಾವೋವಾದಿ ಉಗ್ರರು ಕರ್ಮನನ್ನು ಕೊಂದರು; ಅದರಿಂದ ಎಸ್ಸಾರ್ನವರಿಗೆ ಸ್ವಲ್ಪ ಹಿನ್ನಡೆಯೂ ಆಯಿತು.
ಬಸ್ತಾರ್, ದಾಂತೇವಾಡ ಭಾಗದವರಿಗೆ ದೆಹಲಿಯ ತಮ್ಮ ಅತಿಥಿಗೃಹಗಳಲ್ಲಿ ಉತ್ತಮ ಆತಿಥ್ಯ ನೀಡುವುದು; ಅಲ್ಲಿ ತಿರುಗಾಟಕ್ಕೆ ಕಾರು ಒದಗಿಸುವುದು ಎಸ್ಸಾರ್ ತನ್ನ ಕೆಲಸ ಮಾಡಿಸಿಕೊಳ್ಳಲು ಬಳಸಿದ ಒಂದು ತಂತ್ರ. ಮಹೇಂದ್ರ ಕರ್ಮ ಕನಿಷ್ಠ ಒಂದು ಸಲ ದೆಹಲಿಯಲ್ಲಿ ಎಸ್ಸಾರ್ನವರ ಆತಿಥ್ಯ ಸ್ವೀಕರಿಸಿದ್ದಾರೆಂದು ಸೋರಿಕೆಯಾದ ಇ-ಮೈಲ್ಗಳಿಂದ ಬಹಿರಂಗಗೊಂಡಿದೆ. ಎಸ್ಸಾರ್ ಉಪಾಧ್ಯಕ್ಷ ರಾಜಮಣಿ ಕೃಷ್ಣಮೂರ್ತಿ ಅವರು ತನ್ನ ಸಹೋದ್ಯೋಗಿಗೆ (ಮಾರ್ಚ್, ೨೦೧೨) ಕಳುಹಿಸಿದ ಒಂದು ಸಂದೇಶದಲ್ಲಿ ಮಹೇಂದ್ರ ಕರ್ಮ ಅವರು ಪತ್ನಿ ಹಾಗೂ ಇತರ ಮೂವರು ಕಾಂಗ್ರೆಸ್ ನಾಯಕರೊಂದಿಗೆ ದೆಹಲಿಗೆ ಬರುತ್ತಿದ್ದಾರೆ; ಅವರಿಗೆ ಗೆಸ್ಟ್ಹೌಸ್ನಲ್ಲಿ ಎರಡು ಕೊಠಡಿ ಹಾಗೂ ಎರಡುದಿನ ಸಂಚಾರಕ್ಕೆ ಎರಡು ಕಾರುಗಳನ್ನು ಕೊಡಿ ಎಂದು ಸೂಚಿಸಿದ್ದರು.
ಮುಖ್ಯವಾಗಿ ಭೂಸ್ವಾಧೀನಕ್ಕಾಗಿ ಎಸ್ಸಾರ್ ಸ್ಥಳೀಯ ನಾಯಕರನ್ನು ಓಲೈಸುವ ಕೆಲಸ ಮಾಡುತ್ತಿತ್ತು. ಛತ್ತೀಸ್ಗಢ ಹೈಕೋರ್ಟ್ಗೆ ೨೦೦೯ರಲ್ಲಿ ಸಲ್ಲಿಸಿದ ಒಂದು ಅಫಿದವಿತ್ನಲ್ಲಿ ಎಸ್ಸಾರ್ ಭೂಸ್ವಾಧೀನ ಆಗುತ್ತಿದೆ. ಗ್ರಾಮಸ್ಥರಿಗೆ ವಿತರಣೆ ಮಾಡಲು ರಾಜ್ಯಸರ್ಕಾರಕ್ಕೆ ೨ ಕೋಟಿ ರೂ. ನೀಡುತ್ತಿದ್ದೇವೆ ಎಂದು ತಿಳಿಸಿತ್ತು.
ಜಮೀನು ಅಪಹರಣ
ಜಗದಲ್ಪುರದಿಂದ ೧೦೦ ಕಿ.ಮೀ. ದಕ್ಷಿಣಕ್ಕೆ ದುರ್ಲಿ ಇದ್ದರೆ ಮತ್ತೆ ೨೦ ಕಿ.ಮೀ. ದಕ್ಷಿಣಕ್ಕೆ ಬೈಲದಿಲಾ ಇದೆ. ಅಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ೧೯೬೮ರಿಂದಲೇ ಗಣಿಗಾರಿಕೆ ನಡೆಸುತ್ತಿದೆ. ಈಗ ಎಸ್ಸಾರ್ ಕಂಪೆನಿ ಅಲ್ಲಿ ಕಬ್ಬಿಣದ ಹುಡಿಯಿಂದ ಉಂಡೆ ತಯಾರಿಸಿ ಗುಜರಾತಿನ ಹಾಜಿರಾದ ತಮ್ಮ ಉಕ್ಕುಸ್ಥಾವರಕ್ಕೆ ಕಳುಹಿಸುತ್ತದೆ. ಆ ಪ್ರದೇಶದ ನೀರು ಹಾಳಾಗಿದೆ. ಸಮೀಪ ಹರಿಯುವ ಎರಡು ನದಿಗಳ ನೀರು ಕೆಂಪಾಗಿದೆ. ಆ ಭಾಗದ ಬುಡಕಟ್ಟು ಜನ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಕ್ಸಲೀಯರ ಬಾಂಬಿಗೆ ಈಚೆಗಷ್ಟೇ ಅಲ್ಲಿ ಐವರು ಪೊಲೀಸರು ಮೃತಪಟ್ಟರು. ಪುಲ್ಪಾರ್ ಪರಿಸರದ ಬುಡಕಟ್ಟು ಜನರಿಗೆ ಜಮೀನು ದಾಖಲೆಯಲ್ಲಿ ಅವರ ಹೆಸರಿಲ್ಲ. ಒಟ್ಟಾಗಿ ಕೆಲಸ ಮಾಡುತ್ತಾರೆ. ಅವರಲ್ಲಿ ಯಾರೋ ಒಬ್ಬನ ಹೆಸರಿನಲ್ಲಿ ಜಮೀನಿನ ದಾಖಲೆ ಇರುತ್ತದೆ. ತನ್ನ ಹೆಸರಿನಲ್ಲಿ ಜಮೀನಿದ್ದ ಒಬ್ಬಾತ ೨೦೦೭-೮ರಲ್ಲಿ ಅದನ್ನು ಎಸ್ಸಾರ್ನವರಿಗೆ ಮಾರಿ ನಾಪತ್ತೆಯಾಗಿದ್ದ. ವರ್ಷದ ಬಳಿಕ ಜನರಿಗೆ ಅದು ತಿಳಿಯಿತಂತೆ.
ಜಮೀನನ್ನು ಮಾರುವ ಬಗ್ಗೆ ಗ್ರಾಮಸಭೆಯನ್ನೇ ನಡೆಸದೆ ಊರಿನ ಜಮೀನು ಎಸ್ಸಾರ್ ಸ್ಟೀಲ್ ಇಂಡಿಯಾ ಹೆಸರಿಗೆ ರಿಜಿಸ್ತ್ರಿ ಆಗಿತ್ತು ಎಂಬುದು ಪುಲ್ಪಾರ್ನ ಮುಗ್ಧಜನರ ದೂರು. ೨೦೦೯ರಲ್ಲಿ ಕಂಪೆನಿಯ ಜನ ಪುಲ್ಪಾರ್ಗೆ ಬಂದಾಗ ಸ್ಥಳೀಯ ಜನ ಪ್ರತಿಭಟಿಸಿದರು; ಎಸ್ಸಾರ್ ಸಿಬ್ಬಂದಿಯನ್ನು ತಡೆದರು. ಆದರೆ ೨೦೦ ಎಕ್ರೆ ಇದ್ದಕ್ಕಿದ್ದಂತೆ ಕಂಪೆನಿಯ ಹೆಸರಿಗೆ ಸೇರಿಹೋಗುವುದನ್ನು ತಡೆಯಲು ಅವರಿಗೆ ಸಾಧ್ಯವಾಗಲೇ ಇಲ್ಲ. ಕಂಪೆನಿಯವರು ಜಮೀನಿಗೆ ಗುರುತು ಹಾಕಲು ಬರುವವರಿದ್ದರು. ಆಗ ಸ್ಥಳದಲ್ಲಿದ್ದ ಕಿಶನ್ ಕೌಶಿಕ್ ಮತ್ತೆ ಪ್ರತಿಭಟಿಸುವಿರಾ? ಎಂದು ಕೇಳಿದಾಗ ಒಬ್ಬಾತ ಪ್ರತಿಭಟಿಸಿದರೆ ಪೊಲೀಸರು ನಕ್ಸಲ್ ಎಂದು ಬಂಧಿಸುತ್ತಾರೆ ಎಂದರಂತೆ. ಆ ಭಾಗದಲ್ಲಿ ಮಾವೋವಾದಿ ಅಥವಾ ಮಾವೋಪರ ವ್ಯಕ್ತಿ ಎಂದು ಬಂಧಿಸುವುದು ಮಾಮೂಲಂತೆ. ಇನ್ನೊಂದೆಡೆ ನಕ್ಸಲೀಯರು ‘ಸರ್ಕಾರದ ಮಾಹಿತಿದಾರ’ರೆಂದು ಜನರನ್ನು ಗುಂಡು ಹಾರಿಸಿ ಕೊಲ್ಲುತ್ತಾರೆ; ಅಲ್ಲಿ ಜನರಿಗೆ ಅಭ್ಯಾಸವಾದ ಮಾತು: ಬದುಕಬೇಕಿದ್ದರೆ ಯಾರ ತಂಟೆಗೂ ಹೋಗಬಾರದು. ಇದು ನಮ್ಮ ಗ್ರಾಮೀಣ ಭಾರತ! ಅವರು ನೆಲೆಯಾದ ಜಮೀನನ್ನು ಯಾರೋ ಕಸಿದುಕೊಂಡು ಅತಂತ್ರರಾಗುವಾಗ ಪ್ರತಿಭಟಿಸಲೂ ಸಾಧ್ಯವಾಗದ ಸ್ಥಿತಿ.
ಸ್ಥಳೀಯ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಆದಿವಾಸಿಗಳನ್ನು ಅತಂತ್ರಸ್ಥಿತಿಗೆ ತಳ್ಳಿ ಎಸ್ಸಾರ್ನಂತಹ ಕಂಪೆನಿಗೆ ಏಕೆ ಪರವಾಗಿದ್ದಾರೆ ಎಂಬುದಕ್ಕೆ ಧಾರಾಳ ಪುರಾವೆ ಸಿಗುತ್ತದೆ. ಮುಖ್ಯಮಂತ್ರಿ ರಮಣಸಿಂಗ್ ಅವರ ಮಾಜಿ ಮುಖ್ಯ ಕಾರ್ಯದರ್ಶಿ ದೆಹಲಿಗೆ ಹೋದಾಗ ಎಸ್ಸಾರ್ ಅತಿಥಿಗೃಹದಲ್ಲಿ ಅವರಿಗೆ ‘ಉತ್ತಮ’ ರೂಮ್ ಮತ್ತು ಕಾರು ನೀಡಿ ಸತ್ಕರಿಸಲಾಯಿತು. ಬಸ್ತಾರ್ನ ಕಮಿಷನರ್ ಡಿ.ಸಿ. ಮಿಶ್ರ ಅವರಿಗೂ ದೆಹಲಿಯಲ್ಲಿ ಕಂಪೆನಿ ಅಂಥದೇ ಉಪಚಾರ ನೀಡಿತ್ತು. ಆತ ಎಸ್ಸಾರ್ನ ಸಿಎಸ್ಆರ್ ಕೆಲಸ, ಸುಕ್ಮಾ ಮತ್ತು ದಾಂತೇವಾಡಗಳ ನಡುವೆ ಹಣ ಹಂಚುವುದು ಇದಕ್ಕೆಲ್ಲ ಪ್ರಮುಖ ವ್ಯಕ್ತಿ.
೨೦೧೩ರ ಜುಲೈನಲ್ಲಿ ಛತ್ತೀಸ್ಗಢ ಜೈಲು ಡಿಜಿಪಿ ಗಿರಿಧಾರಿ ನಾಯಕ್ರಿಂದ ಆರು ಮಂದಿ ವಿದ್ಯಾರ್ಥಿಗಳಿಗಾಗಿ ೨ ಲಕ್ಷ ರೂ.ಗಳ ಒಂದು ಬೇಡಿಕೆ ಬರುತ್ತದೆ. ಅದರ ಕುರಿತು ಕಂಪೆನಿಯ ಹಿರಿಯ ಅಧಿಕಾರಿ ರಾಜಮಣಿ ಕೃಷ್ಣಮೂರ್ತಿ ಹೀಗೆ ಹೇಳುತ್ತಾರೆ: ನಾವಿದನ್ನು ಮಾಡಲೇಬೇಕು. ಆತ ಬರುವ ಜನವರಿಯಲ್ಲಿ ಛತ್ತೀಸ್ಗಢದ ಡಿಜಿಪಿ ಆಗುತ್ತಾರೆ; ಮತ್ತು ಅವರಿಗೆ ಇನ್ನೂ ಏಳು ವರ್ಷ ಸರ್ವೀಸಿದೆ. ಅದಲ್ಲದೆ ನಾಯಕ್ ದೆಹಲಿಯಲ್ಲೂ ಉಪಚಾರ ಪಡೆದಿದ್ದರು. ಆತ ರಾಜ್ಯ ಡಿಜಿಪಿ ಆಗಲಿಲ್ಲ ಎಂಬುದು ಬೇರೆ ಮಾತು.
ನಕ್ಸಲರಿಗೆ ‘ರಾಯಲ್ಟಿ’
ಸರ್ಕಾರಿ ಮಂದಿಯನ್ನು ಉಪಚರಿಸಿದಂತೆಯೇ ಎಸ್ಸಾರ್ ಮಾವೋವಾದಿಗಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾ ಬಂದಿದೆ. ಅವರಿಗೆ ‘ರಕ್ಷಣಾ ಮೊತ್ತ’ ನೀಡಿರಲೇಬೇಕು. ಏಕೆಂದರೆ ಪುಲ್ಪಾರ್ ಮಾರ್ಗವಾಗಿ ವಿಶಾಖಪಟ್ಣಕ್ಕೆ ಹೋಗುವ ಉಂಡೆಸಾಗಾಟದ ಕೊಳವೆಮಾರ್ಗ ಅವರಿಗೆ ಬಹಳ ಮುಖ್ಯವಾದದ್ದು. ಗುತ್ತಿಗೆದಾರರು ಮತ್ತು ಬಸ್ತಾರ್ನ ಎನ್ಜಿಓಗಳ ಮೂಲಕ ಹಣ ನೀಡಿರಬೇಕೆಂದು ನಂಬಲಾಗಿದೆ. ಕಂಪೆನಿ ಅದನ್ನು ನಿರಾಕರಿಸುತ್ತಾ ಬಂದರೂ ಯಾರೂ ನಂಬುವವರಿಲ್ಲ. ೨೦೧೦ರ ಜನವರಿ ವೇಳೆಗೆ ವಿಕಿಲೀಕ್ಸ್ನಲ್ಲಿ ಎಸ್ಸಾರ್ನ ಓರ್ವ ಹಿರಿಯ ಪ್ರತಿನಿಧಿ ಮಾವೋವಾದಿಗಳಿಗೆ ದೊಡ್ಡ ಮೊತ್ತ ನೀಡಿದ್ದಾರೆ ಎನ್ನುವ ಒಂದು ಮಾಹಿತಿ ಪ್ರಕಟವಾಯಿತು.
ದೆಹಲಿಯ ಪ್ರಾಧ್ಯಾಪಕಿ ನಂದಿನಿ ಸುಂದರ್ ೨೦೧೧ರಲ್ಲಿ ಒಂದು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದರು. ಒಡಿಸ್ಸಾದ ಓರ್ವ ಮಾವೋವಾದಿ ನಂದಿನಿ ಅವರಲ್ಲಿ ಎಸ್ಸಾರ್ನ ಓರ್ವ ಹಿರಿಯ ಅಧಿಕಾರಿ ತಮ್ಮ ಕೊಳವೆಮಾರ್ಗದ ಬಗ್ಗೆ ಒಂದು ಮನವಿ ಮಾಡಿಕೊಂಡರೆಂದು ತಿಳಿಸಿದನಂತೆ. ಇಲ್ಲಿ ನೀವೇ ಸ್ಥಳೀಯ ಸರ್ಕಾರ ಆಗಿರುವುದರಿಂದ ನಾವು ಸರ್ಕಾರಕ್ಕೆ ಪಾವತಿಸುವಂಥದೇ ರಾಯಲ್ಟಿಯನ್ನು ನಿಮಗೂ ಕೊಡುತ್ತೇವೆ ಎಂದು ಎಸ್ಸಾರ್ ಅಧಿಕಾರಿ ಹೇಳಿದರಂತೆ. ಸರ್ಕಾರಕ್ಕೆ ನೀಡುವ ರಾಯಧನ ಟನ್ನಿಗೆ ೨೭ ರೂ.; ಟನ್ ಅದಿರಿನ ಹುಡಿಯ ಮಾರುಕಟ್ಟೆ ದರ ೫೬೦೦ ರೂ. ಕಂಪೆನಿಗೆ ಅದು ಹೊರೆಯಲ್ಲವೆಂದು ಒಪ್ಪಿಕೊಂಡು ಪಾವತಿಸುತ್ತಿದ್ದಾರೆಂದು ನಂಬಲಾಗಿದೆ. ಎಸ್ಸಾರ್ನವರು ಮಾವೋವಾದಿಗಳಿಗೆ ನಿಗದಿತವಾಗಿ ಹಣ ನೀಡುವುದನ್ನು ಮಾಜಿ ಡಿಜಿಪಿ ವಿಶ್ವರಂಜನ್ ಕೂಡ ದೃಢಪಡಿಸಿದ್ದಾರೆ.
ಎಸ್ಸಾರ್ನಿಂದ ನಕ್ಸಲೀಯರಿಗೆ ಹಣ ನೀಡಿದರೆಂದು ಎಸ್ಸಾರ್ ಸ್ವೀಲ್ನ ಜನರಲ್ ಮ್ಯಾನೇಜರ್ ಡಿ.ವಿ.ಸಿ.ಎಸ್. ಶರ್ಮ ಅವರನ್ನು ೨೦೧೧ರ ಸೆಪ್ಟೆಂಬರ್ನಲ್ಲಿ ಛತ್ತೀಸ್ಗಢ ಪೊಲೀಸರು ಬಂಧಿಸಿದರು; ಓರ್ವ ಗುತ್ತಿಗೆದಾರ ಮತ್ತು ಪತ್ರಕರ್ತನ ಮೂಲಕ ಹಣ ನೀಡಿದರೆನ್ನುವುದು ಆರೋಪ. ಬಂಧನವಾಗುತ್ತಲೇ ಎಸ್ಸಾರ್ ವತಿಯಿಂದ ಕಂಪೆನಿಯ ಘನತೆ-ಗೌರವಕ್ಕೆ ಕುಂದುತರುವಂತಹ ಆರೋಪಗಳನ್ನು ಮಾಡಲಾಗುತ್ತಿದೆ; ನಾವು ಕಾನೂನು ಮೀರುವವರಲ್ಲ ಎನ್ನುವ ಹೇಳಿಕೆ ನೀಡಲಾಯಿತು. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಆರೋಪಿಗಳು ಜಾಮೀನು ಪಡೆದು ಹೊರಗಿದ್ದಾರೆ. ಎಸ್ಸಾರ್ನ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ(ಪಿಐಎಲ್)ಯೊಂದನ್ನು ಹೂಡಿರುವ ದೆಹಲಿಯ ಪ್ರಸಿದ್ಧ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಪ್ರಕಾರ, ಪ್ರಸ್ತುತ ಗುತ್ತಿಗೆದಾರ(ಬಿ.ಕೆ. ಲಾಲಾ)ನ ಬಳಿ ಎಸ್ಸಾರ್ನ ಉನ್ನತ ಅಧಿಕಾರಿಗಳ ಬಗ್ಗೆ ಬಹಳಷ್ಟು ಸಾಕ್ಷ್ಯಗಳಿವೆ (ಆತ ಅಪ್ರೂವರ್ ಆಗಿದ್ದಾನೆ). ಎಸ್ಸಾರ್ನ ಉನ್ನತ ಸ್ಥಾನದವರು ಸಿಕ್ಕಿಬೀಳುವ ಭಯವಿದೆ.
ಒಂದು ಪ್ರತಿಭಟನೆ
ಮುಂಬಯಿ ಕಡಲತೀರದ ಬೃಹತ್ ಕಟ್ಟಡದಲ್ಲಿ ಎಸ್ಸಾರ್ನ ಪ್ರಧಾನ ಕಛೇರಿಯಿದೆ. ಅದರ ೨೦ನೇ ಮಹಡಿಯಲ್ಲಿ ಶಶಿ ಮತ್ತು ರವಿ ರುಯ್ಯಾ ಇರುತ್ತಾರೆ. ಜನವರಿ ೨೨, ೨೦೧೪ರಂದು ಮಧ್ಯಾಹ್ನ ೧ ಗಂಟೆಯ ಹೊತ್ತಿಗೆ ಒಂದು ವಿಶಿಷ್ಟ ಪ್ರತಿಭಟನೆಗೆ ಆ ಬೃಹತ್ ಕಟ್ಟಡ ಸಾಕ್ಷಿಯಾಯಿತು. ಆರು ಜನ ಕೆಲಸಗಾರರು ಕಟ್ಟಡದ ಮೇಲೆ ದೊಡ್ಡ ಬಿಳಿ ಬ್ಯಾನರ್ ಹಾಕಿದರು. ಅದರಲ್ಲಿ We ಞiಟಟ ಜಿoಡಿesಣs – ಇssಚಿಡಿ ಎಂದು ಬರೆದಿತ್ತು. ಜೊತೆಗೆ ಅಂದಿನ ಪ್ರಧಾನಿ ಮನಮೋಹನಸಿಂಗ್ ಮತ್ತು ಪರಿಸರ ಸಚಿವ ಎಂ. ವೀರಪ್ಪ ಮೊಲಿ ಅವರ ಚಿತ್ರಗಳೂ ಇದ್ದವು; ೭೨ ಅಡಿ ಉದ್ದ, ೩೬ ಅಡಿ ಅಗಲದ ಬೃಹತ್ ಬ್ಯಾನರ್. ಅದನ್ನು ಹಾಕುತ್ತಲೇ ಸುಮಾರು ೫೦ ಜನ ಪ್ರತಿಭಟನಕಾರರು ಸ್ಥಳದಲ್ಲಿ ಹಾಜರಾದರು. ಅದರಲ್ಲಿ ಸುಮಾರು ೩೦ ಜನ ಗ್ರೀನ್ಪೀಸ್ನವರಾದರೆ ಉಳಿದವರು ಮಧ್ಯಪ್ರದೇಶದ ಮಹಾನ್ ಅರಣ್ಯದ ಸಮೀಪದ ಮಹಾನ್ ಸಂಘರ್ಷ ಸಮಿತಿಯ ಸದಸ್ಯರು. ಕಂಪೆನಿಯ ಕ್ಲೀನಿಂಗ್ ಬಗ್ಗೆ ನೇಮಿಸಿದವರೇ ಬ್ಯಾನರ್ ಇಳಿಬಿಟ್ಟಿದ್ದರು. ನಕಲಿ ಕೂಲಿಯಾಳುಗಳಾದ ಅವರು ಗ್ರೀನ್ಪೀಸ್ ಸದಸ್ಯರೆಂದು ಮತ್ತೆ ತಿಳಿಯಿತು; ಅವರನ್ನು ಬಂಧಿಸಲಾಯಿತು.
ಮದ್ರಾಸಿನಲ್ಲಿ ಆರಂಭ
ರುಯ್ಯಾಗಳದ್ದು ಒಂದು ತಲೆಮಾರಿಗಿಂತ ಸ್ವಲ್ಪ ಅಧಿಕ ಸಮಯದಲ್ಲಿ ಬೆಳೆದ ಉದ್ಯಮ ಸಂಸ್ಥೆ. ಶಶಿ ಮತ್ತು ರವಿ ಅವರ ತಂದೆ ನಂದಕಿಶೋರ್ ರುಯ್ಯಾ ಮದ್ರಾಸಿನಲ್ಲಿ ನೆಲೆಸಿದ ಓರ್ವ ಮಾರ್ವಾಡಿ. ಈ ಸೋದರರು ಅಲ್ಲೇ ಬೆಳೆದವರು; ತಮಿಳು ಚೆನ್ನಾಗಿ ಮಾತನಾಡುತ್ತಾರೆ. ನಂದಕಿಶೋರ್ ೧೯೫೬ರಲ್ಲಿ ಕಬ್ಬಿಣದ ಅದಿರಿನ ರಫ್ತು ಆರಂಭಿಸಿದರು. ಹತ್ತು ವರ್ಷಗಳ ನಂತರ ಅವರಿಗೆ ಮದ್ರಾಸ್ ಹಡಗುಕಟ್ಟೆ(ಡಾಕ್)ಯಲ್ಲಿ ಕಬ್ಬಿಣದ ಅದಿರಿನ ಸ್ಟಿವೆಡೋರ್ ಗುತ್ತಿಗೆ ಸಿಕ್ಕಿತು. ೧೯೬೯ರಲ್ಲಿ ಅದನ್ನು ಮಕ್ಕಳು ವಹಿಸಿಕೊಂಡರು. ಆ ಹೊತ್ತಿಗೆ ಕಂಪೆನಿ ಶಿಪ್ಪಿಂಗ್ ಕೂಡ ಆರಂಭಿಸಿತ್ತು.
೧೯೯೧ರ ಹೊತ್ತಿಗೆ ಸೋದರರು ಉಕ್ಕಿನ ವ್ಯವಹಾರ ಆರಂಭಿಸಿದರು. ತೈಲಾಗಾರ (ರಿಫೈನರಿ), ವಿದ್ಯುತ್ ಉತ್ಪಾದನೆಗೆ ನುಗ್ಗಲು ಸಿದ್ಧರಾದರು. ಈ ಬೃಹತ್ ಉದ್ಯಮಗಳಲ್ಲದೆ ನಿರ್ಮಾಣ, ಇಂಜಿನಿಯರಿಂಗ್, ಮೂಲ ಸವಲತ್ತು, ಚಿಲ್ಲರೆ ವ್ಯಾಪಾರಗಳಿಗೂ ಪ್ರವೇಶಿಸಿದರು. ೨೦೧೧ವರೆಗೆ ವೊಡಾಫೋನ್ (ಹಿಂದೆ ಹಚ್) ಮೊಬೈಲ್ ಜಾಲದ ಭಾರತದ ದೊಡ್ಡ ಪಾಲುದಾರರಾಗಿದ್ದರು. ಅಂತಾರಾಷ್ಟ್ರೀಯ ಹೂಡಿಕೆದಾರರಾಗಿ ದೇಶದ ಬ್ಯಾಂಕ್ಗಳಿಂದ ದೊಡ್ಡ ಸಾಲ ಎತ್ತಿ ಭಾರೀ ವಿಸ್ತರಣೆ ಮಾಡಿದರು. ಆದರೆ ಅದು ತಿರುಗುಬಾಣವಾಯಿತು. ೨೦೦೦ದ ಹೊತ್ತಿಗೆ ಬೃಹತ್ ಸಾಲದ ಸುಳಿಗೆ ಸಿಲುಕಿದರು. ೨೦೦೩ರ ಫೆಬ್ರುವರಿಯ ಹೊತ್ತಿಗೆ ಗ್ರೂಪ್ನ ಸಾಲ ೧೩,೮೦೦ ಕೋಟಿ ರೂ. ಎಂದು ‘ಬಿಸಿನೆಸ್ ಟುಡೇ’ ವರದಿ ಮಾಡಿತ್ತು. ಎಚ್ಚರ ವಹಿಸಿದ್ದು ಕಡಮೆ ಆಯಿತೋ ಅಥವಾ ಆತ್ಮವಿಶ್ವಾಸ ಜಾಸ್ತಿ ಆಯಿತೋ ಕಂಪೆನಿ ಹಲವು ಸಮಸ್ಯೆಗಳಲ್ಲಿ ಸಿಲುಕಿರುವುದು ನಿಜ. ಇದು ಅವರ ವ್ಯವಹಾರಸಂಬಂಧಿ ನಡವಳಿಕೆಗಳ ಮೇಲೂ ಪ್ರಭಾವ ಬೀರಿದೆ.
ಹಾಜಿರಾದಲ್ಲಿ ಎಸ್ಸಾರ್ ಗುಂಪಿನ ಉಕ್ಕು ರಫ್ತು ಘಟಕ
ಕಂಪೆನಿ ಬ್ಯಾಂಕ್ಗಳ ಜೊತೆ ಹೇಗೆ ವ್ಯವಹರಿಸುತ್ತದೆ ಎಂಬುದಕ್ಕೆ ವಾಜಪೇಯಿ ಸರ್ಕಾರದ ಕಾಲದ ಒಂದು ಸಂದರ್ಭವನ್ನು ಉದಾಹರಿಸಬಹುದು. ೧೯೯೯ರ ಹೊತ್ತಿಗೆ ಎಸ್ಸಾರ್ಗೆ ತನ್ನ ಸಾಲಗಳ ಬಡ್ಡಿ ಕಟ್ಟಲು ಸಾಧ್ಯವಾಗಲಿಲ್ಲ. ಎಸ್ಬಿಐ, ಐಡಿಬಿಐ ಮುಂತಾಗಿ ಹಲವು ಬ್ಯಾಂಕ್ಗಳು ಬೆನ್ನಹತ್ತಿದ್ದವು. ಸರ್ಕಾರದ ನೆರವು ಕೋರಿದಾಗ ವಿಷಯ ಆಗಿನ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರ ಬಳಿಗೆ ಬಂತು. ಅವರು ಹಿರಿಯ ಅಧಿಕಾರಿಯೊಬ್ಬರನ್ನು ಕರೆದು ‘ಏನಾದರೂ ಪರಿಹಾರ ಹುಡುಕಿ’ ಎಂದರು. ಆಗ ಅವರು ತುಂಬ ಕಷ್ಟದಲ್ಲಿದ್ದರು. ಹಲವೆಡೆ ಧೀರೂಭಾಯಿ ಅಂಬಾನಿ ಅಡ್ಡಗಾಲಿಟ್ಟಿದ್ದರು. ಜಾಮ್ನಗರದ ರಿಫೈನರಿ ಕೆಲಸ ಮಾಡುತ್ತಿರಲಿಲ್ಲ. ಉಕ್ಕು ತಯಾರಿಯೂ ಹಿನ್ನಡೆಯಲ್ಲಿತ್ತು. ರಿಫೈನರಿಯನ್ನು ಮಾರಿದರೆ ಒಂದಷ್ಟು ಹಣ ಬರುತ್ತದೆ; ಅದನ್ನು ಬ್ಯಾಂಕ್ಗಳಿಗೆ ಪಾವತಿಸಿದರೆ ಮತ್ತೆ ಸಾಲ ಸಿಗಬಹುದು ಎನ್ನುವ ಪುನರ್ವ್ಯವಸ್ಥೆ ಪ್ರಸ್ತಾವ ಮುಂದಿಟ್ಟಾಗ ಹಣಕಾಸು ಸಚಿವ ಯಶವಂತ ಸಿನ್ಹಾ ಒಪ್ಪಿದರು.
ಶಶಿ ರುಯ್ಯಾ ಅದಕ್ಕೆ ಆಕ್ಷೇಪಿಸಿ, ಇದು ಧೀರೂಭಾಯಿ ಹೇಳುವ ಪರಿಹಾರದಂತಿದೆ; ನನ್ನ ಬಿಜಿನೆಸ್ ಬರ್ಖಾಸ್ತು ಮಾಡಲು ಹೇಳುತ್ತಿದ್ದೀರಿ ಎಂದರು. ನನಗೆ ಇನ್ನೂ ಹಣ ಬೇಕು. ಅದಕ್ಕೆ ವ್ಯವಸ್ಥೆ ಮಾಡಿ ಎಂದಾಗ ಅಧಿಕಾರಿ ಅದಕ್ಕೆ ನೀವು ರಾಜಕಾರಣಿಗಳ ಬಳಿ ಹೋಗಬೇಕಷ್ಟೆ ಎಂದು ಸೂಚಿಸಿದರು. ಎಸ್ಬಿಐ ಅಧಿಕಾರಿಯೊಬ್ಬರು ವಿದೇಶದಲ್ಲಿರುವ ಹಣ ತರಿಸುವಂತೆ ಹೇಳಿದ್ದನ್ನು ಉಲ್ಲೇಖಿಸಿದ ಸರ್ಕಾರದ ಉನ್ನತಾಧಿಕಾರಿ ಶಶಿಯವರ ಬಳಿ ವಿದೇಶದಲ್ಲಿ ಎಷ್ಟು ಹಣ ಇದೆ ಎಂದು ಕೇಳಿದರು. ನಿಮ್ಮ ಊಹೆ ಹೇಳಿ ಎಂದಾಗ ೨೦ ಕೋಟಿ ರೂ. ಎಂದರೆ ಶಶಿ ರುಯ್ಯಾ ನನ್ನನ್ನು ಕೀಳಾಗಿ ಕಾಣುತ್ತಿದ್ದೀರಿ ಎಂದು ತಮ್ಮ ಕಂಪೆನಿಗಳ ಪಟ್ಟಿ ಒಪ್ಪಿಸಿ ವಿದೇಶದಲ್ಲಿ ನನ್ನ ಬೆಲೆ ಕನಿಷ್ಠ ೧೫೦ ಕೋಟಿ ಎಂದರು. ಈಗ ಕೂಡ ಕಂಪೆನಿಯ ಸ್ಥಿತಿ ಉತ್ತಮವಾಗಿಯೇನೂ ಇಲ್ಲ. ಸಾಲನೀಡಿದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಎಸ್ಸಾರ್ ಬಗ್ಗೆ ಸದಭಿಪ್ರಾಯ ಇಲ್ಲ ಎನ್ನಲಾಗಿದೆ. ಆದರೆ ಸಮಸ್ಯೆ ಅವರಿಗಲ್ಲ, ಬೇರೆಯವರಿಗೆ. ಇಂದು ಬಹುತೇಕ ಅಕ್ಷರಶಃ ಸತ್ಯವಾಗಿರುವ ಪ್ರಸಿದ್ಧ ಮಾತೇ ಇದೆಯೆಲ್ಲ: ಬ್ಯಾಂಕಿನಿಂದ ೧೦೦ ರೂ. ಸಾಲ ಪಡೆದರೆ ಅದು ನಿಮ್ಮ ಸಮಸ್ಯೆ; ೧೦ ಕೋಟಿ ತೆಗೆದುಕೊಂಡರೆ ಅದು ಬ್ಯಾಂಕಿನ ಸಮಸ್ಯೆ.
ಎರಡು ಹಗರಣಗಳು
ಯುಪಿಎ ಸರ್ಕಾರವನ್ನು ನಡುಗಿಸಿದ ಎರಡೂ ಬೃಹತ್ ಭ್ರಷ್ಟಾಚಾರದ ಹಗರಣಗಳಲ್ಲಿ ಎಸ್ಸಾರ್ನ ಹೆಸರು ಬಂದಿದೆ; ಅವು ಕಲ್ಲಿದ್ದಲು ಹಗರಣ ಮತ್ತು ೨-ಜಿ ಹಗರಣ. ಕಲ್ಲಿದ್ದಲು ಹಗರಣದಿಂದಾಗಿ ಎಸ್ಸಾರ್ ಮಹಾನ್ ಯೋಜನೆಯಿಂದ ಹೊರಬೀಳಬೇಕಾಯಿತು. ೨-ಜಿ ಹಗರಣದಲ್ಲಿ ಲೂಪ್ ಕಂಪೆನಿ ಇತ್ತೆಂದು ನಂಬಲಾಗಿದೆ. ೨೦೦೮ರಲ್ಲಿ ಅದಕ್ಕೆ ೨೧ ಟೆಲಿಕಾಂ ಲೈಸನ್ಸ್ಗಳು ಸಿಕ್ಕಿದ್ದವು. ಲೂಪ್ನ ಪ್ರಾಯೋಜಕರಲ್ಲಿ ರುಯ್ಯಾ ಸೋದರರ ಸಹೋದರಿ ಕಿರಣ್ ಮತ್ತು ಭಾವ ಈಶ್ವರೀಪ್ರಸಾದ್ ಖೇತಾನ್ ಇದ್ದಾರೆ. ೨೦೧೧ರಲ್ಲಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಸಿಬಿಐ ಲೂಪ್ ಒಂದು ಫ್ರಂಟ್ ಕಂಪೆನಿ. ಅದರಲ್ಲಿ ಎಸ್ಸಾರ್ ಶೇ. ೧೦ಕ್ಕೂ ಹೆಚ್ಚಿಗೆ ಪಾಲು ಹೊಂದಿದೆ. ರವಿ ರುಯ್ಯಾ, ಶಶಿ ಅವರ ಎರಡನೇ ಮಗ ಅಂಶುಮಾನ್ ರುಯ್ಯಾ, ಕಿರಣ್ ಮತ್ತು ಈಶ್ವರೀ ಪ್ರಸಾದ್ ಖೇತಾನ್, ಹಾಗೂ ಎಸ್ಸಾರ್ನ ವಿಕಾಸ್ ಶರಾಫ್ ಇದ್ದಾರೆ. ಎರಡು ಗುಂಪುಗಳು ಜೊತೆಯಾಗಿರುವ ನಿಜ ಸಂಗತಿಯನ್ನು ಅಕ್ರಮವಾಗಿ ಮುಚ್ಚಿಡಲಾಗಿದೆ ಎಂದು ಆರೋಪಿಸಿದೆ.
ವೊಡಾಫೋನ್ ಮೂಲಕ ೨೨ ಲೈಸನ್ಸ್ಗಳನ್ನು ಬಗಲಿಗೆ ಹಾಕಿಕೊಂಡ ಎಸ್ಸಾರ್ (ವೊಡಾಪೋನ್ನಲ್ಲಿ ಎಸ್ಸಾರ್ನ ಪಾಲು ಶೇ. ೩೩) ಲೂಪ್ ಮೂಲಕ ಕೂಡ ಬಿಡ್ ನಡೆಸಿದೆ. ಅದು ನಿಯಮಬಾಹಿರ. ೩-ಜಿಗೆ ಅರ್ಜಿ ಹಾಕುವಾಗ ಎಸ್ಸಾರ್ ಲೂಪ್ನಲ್ಲಿ ತನ್ನ ಪಾಲು ಶೇ. ೨.೧೫ ಮಾತ್ರ (ಅಷ್ಟಕ್ಕೆ ಅನುಮತಿಯಿದೆ) ಎಂದು ಹೇಳಿತ್ತು. ಆದರೆ ಅದು ಸುಳ್ಳು. ೨೦೦೮ರ ಆಗಸ್ಟ್ನಲ್ಲಿ ಈ ಬಗ್ಗೆ ಮೊದಲಾಗಿ ದೂರು ಬಂತು. ಟೆಲಿಕಾಂ ಇಲಾಖೆ ತನಿಖೆಗಾಗಿ ಅದನ್ನು ಕಂಪೆನಿ ವ್ಯವಹಾರಗಳ ಇಲಾಖೆಗೆ ಒಪ್ಪಿಸಿತು; ಇದು ದೂರನ್ನು ಮೊಳಕೆಯಲ್ಲೇ ಚಿವುಟಿಹಾಕುವ ತಂತ್ರ. ೨೦೦೯ರ ಕೊನೆಯ ಹೊತ್ತಿಗೆ ಎಸ್ಸಾರ್ ಆ ಬಗ್ಗೆ ತುಂಬ ತಲೆಕೆಡಿಸಿಕೊಂಡದ್ದು ಕಾಣಿಸುತ್ತದೆ. ವಿಷಯವನ್ನು ಅನುಷ್ಠಾನ ನಿರ್ದೇಶನಾಲಯ(ಇ.ಡಿ)ದಲ್ಲಿ ಮುಚ್ಚಿಹಾಕಬೇಕು; ಅಲ್ಲಿಂದ ಅನುಕೂಲಕರ ವರದಿ ಬರುವಂತೆ ಮಾಡಬೇಕು ಅಥವಾ ಟೆಲಿಕಾಂ ಇಲಾಖೆಯಿಂದ ಪ್ರಧಾನಿಗೆ ಅನುಕೂಲಕರ ಉತ್ತರ ಹೋಗಬೇಕೆಂದು ಕಂಪೆನಿಯ ಉನ್ನತಾಧಿಕಾರಿಗಳು ಬಹಳ ಶ್ರಮ ವಹಿಸಿದ್ದರು.
ಟೆಲಿಕಾಂ ಇಲಾಖೆಯ ಓರ್ವ ಅಧಿಕಾರಿ ಎಸ್ಸಾರ್ಗೆ ಶೋಕಾಸ್ ನೋಟೀಸು ನೀಡಬೇಕೆಂದು ನಿರ್ಧರಿಸಿ ಅದನ್ನು ಇಲಾಖೆಯ ಕಾರ್ಯದರ್ಶಿಗೆ ಕಳಿಸಿದ್ದರು. ಆದರೆ ಕಾರ್ಯದರ್ಶಿ ‘ಶೋಕಾಸ್ ನೋಟೀಸ್ ನೀಡುವ ಅಗತ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿ ಕಡತವನ್ನು ಇತ್ಯರ್ಥ ಮಾಡಿದರು; ಇದಲ್ಲವೇ ಪ್ರಭಾವದ ಕರಾಮತ್ತು! ಎಸ್ಸಾರ್ನ ಇಂತಹ ಎಲ್ಲ ಕಾರ್ಯತಂತ್ರಗಳು ಫಲ ನೀಡಿದವು ಎನ್ನಲಾಗದು. ವೊಡಾಫೋನ್ ಎಸ್ಸಾರ್ನ ಪಾಲನ್ನು ಅಂತಾರಾಷ್ಟ್ರೀಯ ಪಾಲುದಾರ ವೊಡಾಫೋನಿಗೆ ಮಾರಿದ ಪ್ರಕರಣದಲ್ಲಿ ರವಿ ರುಯ್ಯಾ, ಅಂಶುಮಾನ್ ರುಯ್ಯಾ, ಖೇತಾನ್ ದಂಪತಿ ಮತ್ತು ವಿಕಾಸ್ ಸರಾಫ್ ಹೆಸರು ಈಗಲೂ ಇರುವುದನ್ನು ಗುರುತಿಸಲಾಗಿದೆ.
ಪೆಟ್ರೋಲಿಯಂ ವ್ಯವಹಾರಗಳಿಗೆ ಸಂಬಂಧಿಸಿದ ಕನಿಷ್ಠ ಎರಡು ಪ್ರಕರಣಗಳಲ್ಲಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಮತ್ತು ಎಸ್ಸಾರ್ ಇಬ್ಬರೂ ಜೊತೆಯಾಗಿ ಸಿಕ್ಕಿಬಿದ್ದಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ದೆಹಲಿ ಪೊಲೀಸರು ಎರಡೂ ಗುಂಪಿನ ಅಧಿಕಾರಿಗಳನ್ನು ಬಂಧಿಸಿದರು. ಪೆಟ್ರೋಲಿಯಂ ಇಲಾಖೆಯ ಸೂಕ್ಷ್ಮ (ರಹಸ್ಯ) ದಾಖಲೆಗಳನ್ನು ಕದ್ದ ಆರೋಪ ಅವರ ಮೇಲಿತ್ತು. ಸಿಕ್ಕಿಬಿದ್ದ ಅಧಿಕಾರಿ ತಮ್ಮವನಲ್ಲ ಎಂದು ರಿಲಯನ್ಸ್ ಹೇಳಿಕೆ ನೀಡಿದರೆ, ಎಸ್ಸಾರ್ ಮೌನಕ್ಕೆ ಶರಣಾಗಿತ್ತು. ಸರ್ಕಾರಿ ರಹಸ್ಯಗಳು ಈ ಕಂಪೆನಿಗಳಿಗೆ ಸೋರಿಕೆ ಆಗುತ್ತಿದ್ದುದು ನಿಶ್ಚಿತ. ಸೋರಿಕೆಯಾದ ಇ-ಮೈಲ್ಗಳಲ್ಲಿ ಎಸ್ಸಾರ್ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ಇಲಾಖೆ, ಪೆಟ್ರೋಲಿಯಂ, ಕಲ್ಲಿದ್ದಲು, ಪರಿಸರ, ಉಕ್ಕು, ರೈಲ್ವೆ, ಶಿಪ್ಪಿಂಗ್ ಸಚಿವಾಲಯಗಳ ಮಾಹಿತಿಗಳೆಲ್ಲ ಇದ್ದವು. ಒಂದೆಡೆ ೨೦೧೨-೧೩ರ ಪೆಟ್ರೋಲಿಯಂ ಇಲಾಖೆಯ ಬಜೆಟ್ ಪ್ರಸ್ತಾವ ಕೂಡ ಇತ್ತು. ಹಲವು ವರ್ಷಗಳಿಂದ ಇದು ನಡೆಯುತ್ತಿರಬೇಕು. ಚಾಣಾಕ್ಷ ಅಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಸಲಹೆಗಾರ, ಅಜಿತ್ ದೇವಲ್ ಶ್ರಮವಹಿಸಿ ಇದನ್ನು ಪತ್ತೆಮಾಡಿದ್ದರು.
ಉದ್ಯಮಿಗಳಿಗೆ ಆಪ್ತ
ಅರಣ್ಯ-ಪರಿಸರ ಇಲಾಖೆ ಸಚಿವರಾಗಿ ವೀರಪ್ಪ ಮೊಲಿ ಅವರು ಅಧಿಕಾರ ವಹಿಸಿಕೊಂಡದ್ದು ಎಸ್ಸಾರ್ನಂತಹ ಹಲವು ಉದ್ಯಮಪತಿಗಳಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಇಡೀ ೨೦೧೩ರಲ್ಲಿ ಮೊಲಿ ಅವರು ಗ್ರೂಪ್ನ ಅಧಿಕಾರಿಗಳೊಂದಿಗೆ ನಿರಂತರ ಹಾಗೂ ನಿಕಟ ಸಂಪರ್ಕದಲ್ಲಿದ್ದರು. ಸುನೀಲ್ ಬಜಾಜ್ ಮತ್ತು ಅವರ ಸಹೋದ್ಯೋಗಿಗಳು ಮೊಲಿ ಅವರನ್ನು ಹಲವು ಸಲ ಭೇಟಿಮಾಡಿ ಎಸ್ಸಾರ್ನ ಹಿತಾಸಕ್ತಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಿದ್ದಾರೆ. ಒಂದು ಇ-ಮೈಲ್ನಲ್ಲಿ ಪ್ರಶಾಂತ್ ರುಯ್ಯಾ ಮೊಲಿ ಅವರನ್ನು ಭೇಟಿ ಮಾಡಿದೆ. ನಾವು ಹೇಳಿದಂತೆ ಮಾಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ. ಇದು ಪಶ್ಚಿಮ ಬಂಗಾಳದ ರಾಣಿಗಂಜ್ನ ಕಲ್ಲಿದ್ದಲು ನಿಕ್ಷೇಪದ ಮೀಥೇನ್ ಬ್ಲಾಕ್ನ ವಿಷಯ.
ಇನ್ನೊಂದು ಇ-ಮೈಲ್ನಲ್ಲಿ ಎಸ್ಸಾರ್ನ ಕಾರ್ಪೊರೇಟ್ ಸಂಬಂಧಿ ಇಂಧನ ವಿಭಾಗದ ಅಧ್ಯಕ್ಷ ವೈದ್ಯನಾಥನ್ ರಾಮಚಂದ್ರನ್ ಅವರು ಈಗಷ್ಟೇ ಮೊಲಿ ಅವರ ಭೇಟಿ ಮುಗಿಯಿತು. ರತ್ನಾ ಆರ್ ಸೀರೀಸ್ನ ತೈಲ ಬ್ಲಾಕ್ ಬಗ್ಗೆ ಮಾತನಾಡಿದೆವು ಎಂದು ತಿಳಿಸಿದ್ದಾರೆ. ಅದು ಮುಂಬಯಿ ಕರಾವಳಿಯ ಬಳಿ ಇದ್ದು ೧೯೯೬ರಲ್ಲಿ ಅದನ್ನು ಎಸ್ಸಾರ್ಗೆ ನೀಡಲಾಗಿತ್ತು; ಮತ್ತೆ ಅದು ಕೆಂಪುಪಟ್ಟಿಗೆ ಗುರಿಯಾಗಿತ್ತು. ಅಲ್ಲಿಂದ ಕೂಡಲೆ ತೈಲ ಎತ್ತಬೇಕೆಂಬುದು ಎಸ್ಸಾರ್ ಅಪೇಕ್ಷೆಯಾಗಿತ್ತು. ಮಂತ್ರಿಗಳು ನನ್ನ ವಾದವನ್ನು ಒಪ್ಪಿಕೊಂಡು ತಮ್ಮ ಪರವಾಗಿ ಇಲಾಖಾ ಕಾರ್ಯದರ್ಶಿಗೆ ಬಿಗುವಾದ ಒಂದು ಪತ್ರ ಬರೆಯುವಂತೆ ಆಪ್ತ ಕಾರ್ಯದರ್ಶಿ(ಪಿಎಸ್)ಗೆ ಸೂಚಿಸಿದರು. ೮-೧೦ ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿದರು ಎಂದು ವೈದ್ಯನಾಥನ್ ವಿವರಿಸಿದ್ದಾರೆ.
ಎಸ್ಸಾರ್ ವಾದವನ್ನು ಪೂರ್ತಿ ಒಪ್ಪಿಕೊಂಡ ಮೊಲಿ ತೈಲಬ್ಲಾಕನ್ನು ಹೊಸದಾಗಿ ಬಿಡ್ ಮಾಡುವುದು ಸರ್ಕಾರಕ್ಕೆ ಅನುಕೂಲಕರ ಇರಬಹುದು. ಆದರೆ ಕಾನೂನಿನ ಸಮಸ್ಯೆಯ ಬಗ್ಗೆ ಇಲಾಖೆ ಎಚ್ಚರವಾಗಿರಬೇಕು; ಮತ್ತು ಅಂತಹ ನಿರ್ಧಾರವು ಹೂಡಿಕೆದಾರರ ಭಾವನೆಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಕೂಡ ಎಚ್ಚರ ಅಗತ್ಯ. ಹಣಕಾಸು ಇಲಾಖೆ ಈ ಕುರಿತು ಈಗಾಗಲೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದಿದೆ. ಅದು ನನಗೆ ಸಮಾಧಾನಕರವಾಗಿಲ್ಲ. ಕಾನೂನು ಇಲಾಖೆಯ ಸ್ಪಷ್ಟೀಕರಣದ ಬದಲು ಈ ವಿಷಯವನ್ನು ಆರ್ಥಿಕ ವ್ಯವಹಾರದ ಸಂಪುಟ ಸಮಿತಿ(ಸಿಸಿಇಎ)ಯ ಮುಂದಿಡುವುದು ಉತ್ತಮ. ಲಭ್ಯವಿರುವ ಪರ್ಯಾಯ ಮಾರ್ಗಗಳ ಸವಿವರ ವಿಶ್ಲೇಷಣೆ ಅಗತ್ಯ. ಅದರಲ್ಲಿ ಎಸ್ಸಾರ್ ಜೊತೆ ಗುತ್ತಿಗೆಯನ್ನು ಅಂತಿಮಗೊಳಿಸುವ ಅಂಶ ಕೂಡ ಇರಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ವಿವರಣೆ ಅನಗತ್ಯ: ಮೊಲಿ ಪರಿಸರ ಸಚಿವರಾಗಿ ಇದೇ ರೀತಿ ಹಲವು ಉದ್ಯಮಪತಿಗಳ ಆಪ್ತ ವಲಯಕ್ಕೆ ಸೇರಿಬಿಟ್ಟಿದ್ದರು!
ಗಿಫ್ಟ್ಗಳ ಮಹಾಪೂರ
೨೦೦೯ರ ಚುನಾವಣಾ ಫಲಿತಾಂಶ ಬಂದೊಡನೆ ಎಸ್ಸಾರ್ನ ಉನ್ನತಾಧಿಕಾರಿ ಬಜಾಜ್ ಪ್ರಶಾಂತ್ ರುಯ್ಯಾ ಅವರಿಗೆ ಬರೆದ ಒಂದು ಪತ್ರದಲ್ಲಿ ದೆಹಲಿಯಲ್ಲಿ ಕಂಪೆನಿಯ ಕಾರ್ಪೊರೇಟ್ ವ್ಯವಹಾರದ ಕೆಲಸವನ್ನು ಬಲಪಡಿಸಬೇಕು ಎಂದಿದ್ದರು. ಅದಕ್ಕೆ ಅವರು ಕಂಡುಕೊಂಡ ದಾರಿ ಕುತೂಹಲಕರ. ಹೊಸ ಸಂಸದರಲ್ಲಿ ಹಲವರು, ವಿಶೇಷವಾಗಿ ಯುವಕರು ಟೆಕ್ನೋಪ್ರಿಯರು. ಪತ್ರಗಳಿಗಿಂತ ಇ-ಮೈಲ್ ಅವರಿಗೆ ಇಷ್ಟ. ಅಂತಹ ಎಂಪಿಗಳಿಗೆ ೨೦೦ ಟಾಪ್ ಎಂಡ್ ಸೆಲ್ಫೋನ್ಗಳನ್ನು ಎಸ್ಸಾರ್ನ ಗಿಫ್ಟ್ ಆಗಿ ಕೊಡೋಣ; ಉನ್ನತ ಅಧಿಕಾರಿಗಳಿಗೆ ಕೂಡ ಕೊಡಬಹುದು. ಹಾಗೆಯೇ ತಿಂಗಳಿಗೆ ೫,೦೦೦ ರೂ. ಸಹಿತವಾದ ಸಿಮ್ಕಾರ್ಡನ್ನೂ ಕೊಡೋಣ. ರಿಲಯನ್ಸ್, ಏರ್ಟೆಲ್ನಂತಹ ಹಲವು ಕಾರ್ಪೊರೇಟ್ ಹೌಸ್ಗಳು ಈಗಾಗಲೆ ಇದನ್ನು ಮಾಡುತ್ತಿವೆ ಎಂದಿದ್ದರು.
ಇನ್ನೊಂದು ಪತ್ರದಲ್ಲಿ ಎಲ್ಲ ಕಾರ್ಪೊರೇಟ್ ಹೌಸ್ಗಳಿಗೆ ಉದ್ಯೋಗದ ಬೇಡಿಕೆ ಬರುತ್ತದೆ; ನಾವು ಪ್ರತಿದಿನ ವ್ಯವಹರಿಸುವ ಸರ್ಕಾರಿ ಕಚೇರಿಗಳು, ರಾಜಕಾರಣಿಗಳು ಅಥವಾ ಅಧಿಕಾರಿಗಳಿಂದ ಬೇಡಿಕೆ ಬಂದಾಗ ಪಾಲಿಸದೆ ಇರಲು ಆಗುವುದಿಲ್ಲ. ನಾವು ಹೇಗೂ ಹೊರಗಿನಿಂದ ನೇಮಿಸುತ್ತಾ ಇರುತ್ತೇವೆ. ಹಾಗಿರುವಾಗ ಇವರನ್ನೇಕೆ ತೆಗೆದುಕೊಳ್ಳಬಾರದು? ಆದ್ದರಿಂದ ಇಂತಹ ಕೋರಿಕೆ ಈಡೇರಿಸಲು ಕನಿಷ್ಠ ೨೦೦ ಉದ್ಯೋಗಗಳನ್ನು ಇರಿಸಿಕೊಳ್ಳಬೇಕು ಎಂದಿದ್ದಾರೆ ಬಜಾಜ್. ಇದು ಇಂದಿನ ದುರವಸ್ಥೆ ಎನ್ನೋಣವೆ?
ಪ್ರಶಾಂತ್ ಭೂಷಣ್ ಅವರ ಪಿಐಎಲ್ನಲ್ಲಿ ಒಂದು ಅಂಶವನ್ನು ಸ್ಪಷ್ಟವಾಗಿ ಹೇಳಲಾಗಿದೆ: ಉದ್ಯೋಗ ಮತ್ತಿತರ ವಿಷಯದ ಬಗ್ಗೆ ಶಿಫಾರಸು ಮಾಡಿದ ಎಲ್ಲರಿಗೂ ಎಸ್ಸಾರ್ ಜೊತೆ ‘ಅಧಿಕೃತ ಡೀಲಿಂಗ್’ ಇತ್ತು ಅಥವಾ ಅವರು ತಮ್ಮ ಪ್ರಭಾವದ ಮೂಲಕ ಬಿಜಿನೆಸ್ನಲ್ಲಿ ನೆರವಾಗುವವರು. ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಇದು ಅಪರಾಧ ಎನಿಸುತ್ತದೆ. ಈ ಅಪರಾಧ ಇನ್ನಷ್ಟು ಅಪರಾಧಗಳಿಗೆ ದಾರಿಯಾಗುತ್ತಲೇ ಇರುತ್ತದೆ!