ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಅಳಿಯಿತು ಎಂದು ಹೇಳಬೇಕಿದ್ದರೆ ಅದಕ್ಕೆ ನಾಲ್ಕು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಬೇಕು.
೧) ಪ್ರತಿಯೊಬ್ಬ ವ್ಯಕ್ತಿಗೂ ದೇವಾಲಯದ ಪ್ರವೇಶ ಲಭ್ಯವಿರಬೇಕು.
೨) ಒಂದೇ ಕೆರೆ (ಜಲಾಶಯ)ಯಲ್ಲಿ ಎಲ್ಲರಿಗೂ ಸ್ನಾನಮಾಡಲು ಸಾಧ್ಯವಿರಬೇಕು.
೩) ಒಂದೇ ಬಾವಿಯಿಂದ ಎಲ್ಲರಿಗೂ ನೀರೆತ್ತಲು ಮತ್ತದನ್ನು ಬಳಸಲು ಅವಕಾಶವಿರಬೇಕು; ಮತ್ತು
೪) ಸಹಭೋಜನದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟಮಾಡುವಂತಿರಬೇಕು
– ಅಂಬೇಡ್ಕರ್
ಅಮೆರಿಕದಲ್ಲಿ ಕರಿಯರಿಗಾಗಿ ಏಬ್ರಹಂ ಲಿಂಕನ್ ಏನು ಮಾಡಿದನೋ ಭಾರತದ ಭಂಗಿಗಳಿಗೆ ಡಾ||ಪಾಠಕ್ ಅದನ್ನೇ ಮಾಡಿದರು. ಇಬ್ಬರೂ ಕೂಡ ಮಹಾನ್ ಉದ್ಧಾರಕರು – ಖ್ಯಾತ ಸಾಹಿತಿ ಡಾ|| ಮುಲ್ಕ್ರಾಜ್ ಆನಂದ್
‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎನ್ನುವ ಒಂದು ಕವಿವಾಣಿ ತುಂಬ ಚಲಾವಣೆಯಲ್ಲಿದೆ. ಪದ್ಯ ಮುಂದುವರಿದು, ೧೯೪೭ರಲ್ಲಿ ದೇಶಕ್ಕೆ ಬಂದ ಸ್ವಾತಂತ್ರ್ಯ ಶ್ರೀಮಂತರು, ಭೂಮಾಲೀಕರು ಮುಂತಾದವರಿಗೆ ಬಂತೇ ಹೊರತು ಬಡವರಿಗೆ ಬರಲಿಲ್ಲ; ತುಳಿತಕ್ಕೊಳಗಾದ ದಲಿತರು ಮುಂತಾದವರಿಗೆ ಬರಲಿಲ್ಲ ಎಂಬಂತಹ ವಿವರಗಳನ್ನು ನೀಡುತ್ತದೆ.
ಅದಲ್ಲದೆ ಭಾರತದ ಸ್ವಾತಂತ್ರ್ಯ ಹೋರಾಟವು ನಡೆದ ರೀತಿಯಲ್ಲೇ ದೋಷವನ್ನು ಕಾಣುವುದು ಕೂಡ ಇದೆ. ಬಿರ್ಲಾರಂತಹ ಶ್ರೀಮಂತರ ನಿರಂತರ ಸಂಪರ್ಕದಲ್ಲಿದ್ದು, ಅವರಲ್ಲೇ ಆಶ್ರಯ ಪಡೆಯುತ್ತಾ ನಡೆಸಿದ ಮಹಾತ್ಮಾ ಗಾಂಧಿಯವರ ಹೋರಾಟ ಬಡವರಿಗೆ, ದುರ್ಬಲರಿಗೆ ಪರವಾಗಿರಲು ಸಾಧ್ಯವೇ ಇಲ್ಲ; ಆದ್ದರಿಂದ ಗಾಂಧಿಯವರ ಹೋರಾಟದ ಫಲಾನುಭವಿಗಳು ಶ್ರೀಮಂತರು ಮತ್ತು ಮೇಲ್ವರ್ಗದವರೇ ಆದರು ಎನ್ನುವ ವಾದವನ್ನು ಮುಖ್ಯವಾಗಿ ಎಡಪಂಥೀಯರು ಮಂಡಿಸುತ್ತಾರೆ; ದಲಿತ ನಾಯಕರ ಒಂದು ವರ್ಗದ ವಾದ ಕೂಡ ಬಹುತೇಕ ಅದೇ ರೀತಿಯಲ್ಲಿದೆ.
ಯಾವುದೇ ವಾದದ ಅಗತ್ಯವಿಲ್ಲದೆ ಅವರು ಅನುಭವಿಸುತ್ತಿದ್ದ (ಮತ್ತು ಈಗಲೂ ಇರಬಹುದಾದ) ದಾರುಣ ವಿದ್ಯಮಾನ ಮತ್ತು ಅವಮಾನಕರ, ಅಮಾನವೀಯ ಸ್ಥಿತಿಯನ್ನು ತಿಳಿದಲ್ಲಿ ‘ಇವರಿಗೆ ನಿಜವಾಗಿಯೂ ಸ್ವಾತಂತ್ರ್ಯ ಬಂದಿಲ್ಲ’ ಎಂದು ನಾವು ಒಪ್ಪಿಕೊಳ್ಳಬಹುದಾದ ಒಂದು ಸಮುದಾಯವಿದೆ. ಅವರೇ ಭಂಗಿಗಳು; ಮೆಹ್ತಾರ್ ಎಂದೂ ಅವರನ್ನು ಕರೆಯುತ್ತಾರೆ. ಕರ್ನಾಟಕದ ಕೆಲವು ಭಾಗಗಳಲ್ಲಿ ‘ತೋಟಿಗಳು’ ಎನ್ನುತ್ತಾರೆ. ‘ನಾಗರಿಕ ಸಮಾಜ’ ಹೊರಹಾಕಿದ ಮಲವನ್ನು ತೆಗೆದು ಬಕೆಟು ಅಥವಾ ಡ್ರಮ್ಗೆ ತುಂಬಿಸಿ ಬೇರೆಕಡೆಗೆ ಸಾಗಿಸಿ ವಿಲೇವಾರಿ ಮಾಡುವುದು ಅವರ ಕೆಲಸ. ನಗರ-ಪಟ್ಟಣಗಳಲ್ಲಿ ಅವರು ಶತಮಾನಗಳ ಕಾಲ ಮಾಡಿದ ಕೆಲಸ. ಮುಖ್ಯವಾಗಿ ೧೯೭೦ರ ದಶಕದ ಬಳಿಕ ದೇಶದಲ್ಲಿ ‘ಮಲಹೊರುವ ಪದ್ಧತಿ’ಯನ್ನು ನಿಷೇಧಿಸಲಾಗಿದೆಯಾದರೂ ಅಷ್ಟೊಂದು ಸುಲಭದಲ್ಲಿ ಅದು ಹೋಗಲಿಲ್ಲ; ಏನೇನೋ ಅಡ್ಡಿ-ಆತಂಕಗಳು ಬಂದು ಕುಂಟುತ್ತಾಸಾಗಿತು. ಎಲ್ಲರ ನಿಂದೆಗೆ ಗುರಿಯಾದ ಅಸ್ಪೃಶ್ಯತೆಗೆ ನಿಜವಾದ ಕಾರಣವೆಂಬಂತೆ ನಮ್ಮ ನಡುವೆ ಇದ್ದ ಮಲಹೊರುವ ಪದ್ಧತಿಯನ್ನು ಹೊರಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ ಓರ್ವ ವ್ಯಕ್ತಿ ನಮ್ಮ ನಡುವೆ ಇದ್ದಾರೆ. ಅವರೇ ‘ಸುಲಭ್ ಶೌಚಾಲಯ’ ಖ್ಯಾತಿಯ ಪದ್ಮಭೂಷಣ ಡಾ|| ಬಿಂದೇಶ್ವರ ಪಾಠಕ್. ಬಿಹಾರದವರಾಗಿದ್ದು ಮೊದಲಿಗೆ ರಾಜ್ಯಮಟ್ಟದಲ್ಲಿ ತಮ್ಮ ಸಾಧನೆಯ ಮೂಲಕ ಹಂತಹಂತವಾಗಿ ಮೇಲಕ್ಕೇರಿದ ಪಾಠಕ್ ಈಗ ರಾಷ್ಟ್ರಮಟ್ಟ ಮಾತ್ರವಲ್ಲ; ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತರು. ಮಲ ವಿಲೇವಾರಿಗೆ ಸಂಬಂಧಿಸಿ ಅವರು ಕಂಡುಹಿಡಿದ ಕಡಮೆವೆಚ್ಚದ ಸುಲಭ ಶೌಚಾಲಯ ವಿಧಾನವು ಕೆಲವು ಹೊರರಾಷ್ಟ್ರಗಳಲ್ಲೂ ಬಳಕೆಯಾಗುತ್ತಿದೆ.
ಗಾಂಧಿ ಜನ್ಮಶತಾಬ್ದ ಸ್ಫೂರ್ತಿ
೧೯೬೯ರಲ್ಲಿ ನಡೆದ ಮಹಾತ್ಮಾಗಾಂಧಿ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಬಿಂದೇಶ್ವರ ಪಾಠಕ್ ತಮ್ಮನ್ನು ಈ ಕೆಲಸದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಅವರು ಕಂಡುಹಿಡಿದ ಅವಳಿ ಗುಂಡಿಯ ಪರಿಸರಸ್ನೇಹಿ ಕಾಂಪೆಸ್ಟ್ ಫ್ಲಶ್ ಟಾಯ್ಲೆಟ್ಗಳು ದೇಶದ ಎಲ್ಲೆಡೆ ನಿರ್ಮಾಣಗೊಂಡವು. ೧೯೭೦ರ ನಂತರದ ೪೫ ವರ್ಷಗಳಲ್ಲ್ಲಿ ಆ ಮಾದರಿಯ ಸುಮಾರು ೧೩ ಲಕ್ಷ ಶೌಚಾಲಯಗಳು ನಿರ್ಮಾಣಗೊಂಡವು. ಅವುಗಳಲ್ಲಿ ಹೆಚ್ಚಿನವು ಹಿಂದೆ ಭಂಗಿಗಳು ಸ್ವಚ್ಛಗೊಳಿಸಿ ಮಲ ಕೊಂಡೊಯ್ಯುತ್ತಿದ್ದ ಬಕೆಟ್ ಲ್ಯಾಟ್ರಿನ್ಗಳು. ದೇಶದ ಸುಮಾರು ೧,೪೫೦ ಪಟ್ಟಣ-ನಗರಗಳಲ್ಲಿ ಈ ಪರಿವರ್ತನೆ ನಡೆದಿದ್ದು, ಅದರಿಂದ ಸುಮಾರು ೧.೨೦ ಲಕ್ಷ ಭಂಗಿಗಳು ವಿಮೋಚನೆಗೊಂಡರು. ಭಂಗಿಗಳು ಮಲ ಹೊರುತ್ತ ಇರುವ ತನಕ ಇತರ ಯಾರೂ ಅವರೊಂದಿಗೆ ಆಹಾರ ಸೇವಿಸುವುದಿಲ್ಲ; ಅಸ್ಪೃಶ್ಯತೆ ಅಕ್ಷರಶಃ ಜಾರಿಯಲ್ಲಿರುತ್ತದೆ ಎನ್ನುವ ಗಾಂಧಿಜೀ ಮಾತು ಅಪ್ಪಟ ಸತ್ಯವಾಗಿದ್ದು, ಭಂಗಿಗಳ ವಿಮೋಚನೆ ಅಥವಾ ಮುಕ್ತಿ ಬಿಂದೇಶ್ವರ ಪಾಠಕ್ ಅವರ ಜೀವಮಾನದ ಸಾಧನೆ ಎನ್ನಲಡ್ಡಿಯಿಲ್ಲ.
ಕಳೆದ (೨೦೧೫) ಮಾರ್ಚ್ ೧೩ರಂದು ಪಾಠಕ್ ಅವರು ನವದೆಹಲಿಯಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಆ ಸಮಾರಂಭದಲ್ಲಿ, ಹಿಂದೆ ತಲೆಯ ಮೇಲೆ ಮಲ ಹೊರುತ್ತಿದ್ದು ಈಗ ವಿಮುಕ್ತರಾಗಿರುವ ಹಲವು ಜನ (ಭಂಗಿಗಳು) ಬ್ರಾಹ್ಮಣರು ಮತ್ತು ಮೇಲ್ಜಾತಿಯವರೊಂದಿಗೆ ಸಹಭೋಜನ ಮಾಡಿದರು. ಬ್ರಾಹ್ಮಣರು ದಲಿತರ ಮನೆಗಳಿಗೆ ಹೋಗಿ ಅವರ ದೇವರ ಪಜೆ ನೆರವೇರಿಸಿ ಅವರಿಂದ ಪ್ರಸಾದ ಸ್ವೀಕರಿಸಿದರು. ನಿಜವೆಂದರೆ ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಯಸಿದ ನಾಲ್ಕು ಅಂಶಗಳಲ್ಲಿ ಒಂದಾಗಿತ್ತು. ಅದಲ್ಲದೆ ರಫಿ ಮಾರ್ಗದ ಮಾವಲಂಕರ್ ಸಭಾಂಗಣದಲ್ಲಿ ಜರಗಿದ ಆ ಸಮಾರಂಭದಲ್ಲಿ ೫೦ ಮಂದಿ ಯುವಬ್ರ್ರಾಹ್ಮಣ ಪರೋಹಿತರು ದಲಿತರ ಮನೆಗಳಿಗೆ ಹೋಗಿ ಪೂಜೆ ನೆರವೇರಿಸುತ್ತೇವೆಂದು ಪ್ರತಿಜ್ಞೆ ಕೈಗೊಂಡರು. ‘ಅಸ್ಪೃಶ್ಯತೆ ಇನ್ನು ಇಲ್ಲ’ ಎಂದು ಕರೆಯಲಾದ ಆ ಸಮಾರಂಭದಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ಸಿಂಗ್ ಮತ್ತಿತರರು ಭಾಗವಹಿಸಿದ್ದರು.
ತಮ್ಮ ಈ ಕಾರ್ಯದ ನಡುವೆ ಬಿಂದೇಶ್ವರ ಪಾಠಕ್ ಅವರು ಗಾಂಧಿಯವರಲ್ಲದೆ ಡಾ|| ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಕೂಡ ಗಮನದಲ್ಲಿರಿಸಿಕೊಂಡಿದ್ದಾರೆ. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಅಳಿಯಿತು ಎಂದು ಹೇಳಬೇಕಿದ್ದರೆ ಅದಕ್ಕೆ ನಾಲ್ಕು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಬೇಕು. ೧) ಪ್ರತಿಯೊಬ್ಬ ವ್ಯಕ್ತಿಗೂ ದೇವಾಲಯದ ಪ್ರವೇಶ ಲಭ್ಯವಿರಬೇಕು. ೨) ಒಂದೇ ಕೆರೆ (ಜಲಾಶಯ)ಯಲ್ಲಿ ಎಲ್ಲರಿಗೂ ಸ್ನಾನಮಾಡಲು ಸಾಧ್ಯವಿರಬೇಕು. ೩) ಒಂದೇ ಬಾವಿಯಿಂದ ಎಲ್ಲರಿಗೂ ನೀರೆತ್ತಲು ಮತ್ತದನ್ನು ಬಳಸಲು ಅವಕಾಶವಿರಬೇಕು; ಮತ್ತು ೪) ಸಹಭೋಜನದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟಮಾಡುವಂತಿರಬೇಕು ಎಂದು ಅಂಬೇಡ್ಕರ್ ಹೇಳಿದ್ದು ಅದನ್ನು ಕಾರ್ಯಗತಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಪಾಠಕ್ ಕೈಗೊಂಡಿದ್ದಾರೆ.
ಮಲಹೊರುವ ಕೆಲಸದಿಂದ ಬಿಡುಗಡೆಗೊಂಡ ಭಂಗಿಗಳನ್ನು ಸುಲಭ್ ಶೌಚಾಲಯ ಆಂದೋಲನದ ಈ ನೇತಾರ ದೇವಾಲಯಗಳಿಗೆ ಕರೆದೊಯ್ದಿದ್ದಾರೆ. ವಾರಾಣಸಿಯಲ್ಲಿ ಗಂಗಾನದಿಯಲ್ಲಿ ಮಿಂದ ಅವರು ಕಾಶಿ ವಿಶ್ವನಾಥನ ದೇವಾಲಯಕ್ಕೆ ತೆರಳಿ ಶಿವನನ್ನು ಪಜಿಸಿದರು. ಕಾಶಿಯಲ್ಲಿ ೨೦೦ ಬ್ರಾಹ್ಮಣ ಕುಟುಂಬದವರೊಂದಿಗೆ ಭೋಜನ ಸ್ವೀಕರಿಸಿದರು. ಅಲಹಾಬಾದ್(ಪ್ರಯಾಗ)ನ ಕುಂಭಮೇಳದಲ್ಲಿ ಸ್ನಾನಮಾಡಿದರು. ರಾಜಸ್ಥಾನದ ಆಲ್ವಾರ್ ಮತ್ತು ಟಾಂಕ್ನ ದಲಿತರು ಮೇಲಿನ ಯಾತ್ರೆಯನ್ನು ಮುಗಿಸಿಬಂದಾಗ ಮೇಲ್ಜಾತಿಯವರು ಅವರ ಮನೆಗಳಿಗೆ ಹೋಗಿ ಪ್ರಸಾದ ಸ್ವೀಕರಿಸಿದರು.
ವಿಮೋಚನೆಗೊಂಡವರ ಪನರ್ವಸತಿಯ ಉದ್ದೇಶದಿಂದ ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆ ಆಲ್ವಾರ್ ಮತ್ತು ಟಾಂಕ್ಗಳಲ್ಲಿ ಮಾನವಸಂಪನ್ಮೂಲ ಅಭಿವೃದ್ಧಿಯ ನಿಟ್ಟಿನಲ್ಲಿ ಕೌಶಲವೃದ್ಧಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿದೆ. ವಿಮೋಚಿತರು ಅಲ್ಲಿ ಹಪ್ಪಳ, ಶಾವಿಗೆ, ಉಪ್ಪಿನಕಾಯಿ ಮುಂತಾದವನ್ನು ತಯಾರಿಸುತ್ತಾರೆ; ಬ್ರಾಹ್ಮಣರು ಸೇರಿದಂತೆ ಎಲ್ಲರ ಮನೆಗಳಿಗೆ ಒಯ್ದು ಮಾರುತ್ತಾರೆ. ಇತರ ಗೌರವಪೂರ್ಣ ಕೆಲಸಗಳಾದ ಕಸೂತಿ ಹಾಕುವುದು, ಹೊಲಿಗೆ, ಬ್ಯೂಟಿಷಿಯನ್ ಕೋರ್ಸ್ಗಳಲ್ಲೂ ಅವರಿಗೆ ತರಬೇತಿ ನೀಡಲಾಗುತ್ತದೆ.
ಪೂರಕವಾದ ಮೋದಿ ಕನಸು
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಪಾಠಕ್ ಅವರ ಕನಸಿಗೆ ದೊಡ್ಡರೀತಿಯಲ್ಲಿ ಒದಗಿಬಂದಿದ್ದಾರೆ. ಜನ ಏನೇ ಹೇಳಲಿ, ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಬೇಕೆಂದು ನಾನು ನಿರ್ಧರಿಸಿದ್ದೇನೆ. ನಾನೊಂದು ಸಣ್ಣ ಹಿನ್ನೆಲೆಯಿಂದ ಬಂದವನಾಗಿದ್ದು, ಸಣ್ಣ ಜನರ ಸಣ್ಣ ಕೆಲಸಗಳನ್ನು ಮಾಡಿಕೊಡಬೇಕೆಂಬುದು ನನ್ನ ಬಯಕೆಯಾಗಿದೆ. ನಾನೊಬ್ಬ ಸಣ್ಣ ವ್ಯಕ್ತಿಯಾಗಿದ್ದು, ಸಣ್ಣವರಿಗಾಗಿ ದೊಡ್ಡ ಕೆಲಸಗಳನ್ನು ಮಾಡಬೇಕೆಂಬುದು ನನ್ನ ಆಶೆ…. ಗಾಂಧಿಯವರ ಸ್ವಚ್ಛ ಭಾರತದ ಕನಸಿಗಾಗಿ ಶ್ರಮಿಸುವುದು ಭಾರತದ ನಾಗರಿಕರಾಗಿ ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ೨೦೧೯ರಲ್ಲಿ ಅವರ ೧೫೦ನೇ ಜನ್ಮಶತಾಬ್ದಿಯ ಹೊತ್ತಿಗೆ ಅದು ಸಾಧ್ಯವಾಗಬೇಕು ಎಂದು ಘೋಷಿಸಿ ಪ್ರಧಾನಿ ಮೋದಿ ಕಾರ್ಯಪ್ರವೃತ್ತರಾಗಿದ್ದಾರೆ.
ಇಲ್ಲಿ ಶೌಚಾಲಯವಿಲ್ಲದೆ ಕಷ್ಟಪಡುವವರ ಕಷ್ಟ ನಿವಾರಿಸುವುದು ಒಂದಾದರೆ ಬಯಲು ಶೌಚವನ್ನು ತಡೆದು ಸ್ವಚ್ಛತೆಯನ್ನು ಸಾಧಿಸುವುದು ಇನ್ನೊಂದು. ಇದಕ್ಕಿಂತಲೂ ಮುಖ್ಯವಾದದ್ದು ಇನ್ನೂ ಉಳಿದಿರಬಹುದಾದ ಮಲಹೊರುವ ಪದ್ಧತಿಯ ಸಂಪರ್ಣ ನಿರ್ಮೂಲನ ಮತ್ತು ಭಂಗಿಗಳ ವಿಮುಕ್ತಿ. ಇದು ಪಾಠಕ್ ಅವರ ದೃಷ್ಟಿಯಲ್ಲಿ ನಿಜವಾದ ಸ್ವಾತಂತ್ರ್ಯ. ಮಲಹೊರುವ ಪದ್ಧತಿಯನ್ನು ತೊಡೆದುಹಾಕುವ ಬಗೆಗಿನ ಪಾಠಕ್ ಅವರ ಸಮಾಜ ಶಾಸ್ತ್ರೀಯ ಅಧ್ಯಯನವನ್ನು ಒಳಗೊಂಡ ಪಸ್ತಕದ ಶೀರ್ಷಿಕೆ ‘ರೋಡ್ ಟು ಫ್ರೀಡಮ್’ ಭಂಗಿಗಳ ಪಾಲಿಗೆ ಅವಮಾನಕರವಾದ ಮಲಹೆರುವುದರ ರದ್ಧತಿಯೇ ನೈಜ ಸ್ವಾತಂತ್ರ್ಯ. ದೇಶದ ಬಗೆಗೂ ಅದೇ ನಿಜ; ಆಗಲೇ ಪ್ರಜಾಪ್ರಭುತ್ವ, ನಮ್ಮ ಸಂವಿಧಾನಗಳಿಗೊಂದ ಅರ್ಥ. ತಮ್ಮ ಪಸ್ತಕವನ್ನು ಪಾಠಕ್ `ಯಾರ ಜನ್ಮಶತಾಬ್ದಿ ಆಚರಣೆ ನನ್ನ ಜೀವನದಲ್ಲೊಂದು ತಿರುವನ್ನು ತಂದಿತೋ ಅವರಿಗೆ’ ಎಂದು ಗಾಂಧಿಯವರಿಗೆ ಅರ್ಪಿಸಿದ್ದಾರೆ.
ಖ್ಯಾತ ಸಾಹಿತಿ ಡಾ|| ಮುಲ್ಕ್ರಾಜ್ ಆನಂದ್ ಅವರು ಒಂದೆಡೆ ಅಮೆರಿಕದಲ್ಲಿ ಕರಿಯರಿಗಾಗಿ ಅಬ್ರಹಾಂ ಲಿಂಕನ್ ಏನು ಮಾಡಿದನೋ ಭಾರತದ ಭಂಗಿಗಳಿಗೆ ಡಾ|| ಪಾಠಕ್ ಅದನ್ನೇ ಮಾಡಿದರು. ಇಬ್ಬರೂ ಕೂಡ ಮಹಾನ್ ಉದ್ಧಾರಕರು ಎಂದು ಹೇಳಿದ್ದಾರೆ. ಭಂಗಿಗಳು ಅನುಭವಿಸುತ್ತಿದ್ದ ಅವಮಾನಕರ, ಅಮಾನವೀಯ ಹಿಂಸೆ ಮತ್ತು ಸುಲಭ್ ಶೌಚಾಲಯದಿಂದ ಅವರು ಒಮ್ಮೆಗೇ ವಿಮೋಚನೆಗೊಂಡು ಸ್ವತಂತ್ರರಾಗಿ ಇತರರಿಗೆ ಸಮಾನರಾಗಿ ಬದುಕುವ ಅರ್ಹತೆ ಪಡೆದುದನ್ನು ಕಾಣುವಾಗ ಮುಲ್ಕ್ರಾಜ್ ಅವರ ಹೇಳಿಕೆಯಲ್ಲಿ ಯಾವುದೇ ಅತಿಶಯೋಕ್ತಿ ಕಾಣುವುದಿಲ್ಲ. ಆದರೆ ಇಂತಹ ವಿಮೋಚನಾ ಆಂದೋಲನವು ವೇಗವನ್ನು ಪಡೆದುಕೊಳ್ಳುವಾಗ ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು ಕಾಲು ಶತಮಾನವೇ ಸಂದುಹೋಯಿತೆನ್ನುವುದು ಬೇಸರದ ವಿಚಾರ.
ಮಲ ಹೊರುವ ಪದ್ಧತಿ
ನಾಗರಿಕ ಸಮಾಜದ ಈ ಒಂದು ವಿಮೋಚನೆಯ ಕುರಿತು ಚಿಂತಿಸುವಾಗ ಅದೊಂದು ಸಮಸ್ಯೆಯಾಗಿ ಬೆಳೆದ ಬಗೆಯನ್ನು ಪರಿಶೀಲಿಸುವುದು ಅಪ್ರಸ್ತುತ ಎನಿಸಲಾರದು. ಭಾರತ ಹಳ್ಳಿಗಳ ದೇಶ. ದೇಶದ ಶೇ. ೭೦ರಷ್ಟು ಜನ ಗ್ರಾಮವಾಸಿಗಳು ಎಂಬುದು ಪ್ರತೀತಿ. ಹಿಂದೆ ಅದಕ್ಕಿಂತಲೂ ಹೆಚ್ಚಿತ್ತು. ಹಳ್ಳಿಗಳಲ್ಲಿ ಶೌಚ ಒಂದು ಸಮಸ್ಯೆ ಆಗಿರಲಿಲ್ಲ. ಸಾಕಷ್ಟು ಹಾಡಿ, ಗುಡ್ಡ, ದಿಬ್ಬ, ಮರ-ಗಿಡ ಪೆದೆಗಳಿರುವಲ್ಲಿ ಜನ ಬಯಲು ಶೌಚಕ್ಕೆ ಒಗ್ಗಿಕೊಂಡಿದ್ದರು. ಮನೆಯ ಸಮೀಪವೇ ಮಲವಿಸರ್ಜನೆ ಸಲ್ಲದು. ಹಿಂದೆ ಸಾಕಷ್ಟು ದೂರ ಹೋಗಿ ಪಟ್ಟ ಗುಂಡಿ (ಕುಣಿ) ತೋಡಿ, ಅದರಲ್ಲಿ ಹುಲ್ಲು, ಎಲೆ ಹಾಕಿ ಮಲವಿಸರ್ಜನೆ ಮಾಡಿ ಮತ್ತೆ ಹುಲ್ಲ್ಲು, ಎಲೆ ಹಾಕಿ ಮಣ್ಣಿನಿಂದ ಮುಚ್ಚಿಬರುತ್ತಿದ್ದರಂತೆ. ಉಷ್ಣವಾತಾವರಣದಲ್ಲಿ ಅದು ಬಹುಬೇಗ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿತ್ತು. ಬಯಲು, ನದಿ-ಕೆರೆಗಳ ದಂಡೆ, ಊರಿನ ಹೊರ ಭಾಗವನ್ನು ಬಳಸುತ್ತಿದ್ದ ಕಾರಣ ಅದೊಂದು ಸಮಸ್ಯೆ ಆಗಿರಲಿಲ್ಲ; ಸ್ತ್ರೀಯರು ಕೂಡ ಅದಕ್ಕೆ ಹೊಂದಿಕೊಂಡಿದ್ದರು.
ಆದರೆ ಪಟ್ಟಣ-ನಗರಗಳಲ್ಲಿ ಮಲವಿಸರ್ಜನೆಗೆ ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಬೇಕಿತ್ತು. ಅದಕ್ಕಾಗಿ ಶೌಚಾಲಯದಂತಹ ರಚನೆಯನ್ನು ನಿರ್ಮಿಸಿಕೊಂಡಾಗ ಮಲದ ವಿಲೇವಾರಿ ಮಾಡಬೇಕಾಯಿತು. ಪ್ರಾಚೀನ ಗ್ರಂಥಗಳು ಹಾಗೂ ಸಾಹಿತ್ಯದಲ್ಲಿ ಕಂಡುಬರುವಂತೆ ಒಂದು ಜಾತಿ ಅಥವಾ ಕೆಲವು ಜಾತಿಗಳವರು ಅದನ್ನು ಮಾಡುತ್ತಿದ್ದರು. ನಾರದೀಯ ಸಂಹಿತೆಯಲ್ಲಿ ಗುಲಾಮರು ಮಾಡಬೇಕಾದ ೧೫ ಕೆಲಸಗಳನ್ನು ಉಲ್ಲೇಖಿಸಿದ್ದು ಅದರಲ್ಲೊಂದು ಮಲ ಸಾಗಿಸಿ ವಿಲೇವಾರಿ ಮಾಡುವುದೆಂದು ಡಾ|| ಬಿಂದೇಶ್ವರ ಪಾಠಕ್ ತಮ್ಮ ಪಿಎಚ್.ಡಿ ಸಂಶೋಧನೆಯನ್ನು ಆಧರಿಸಿದ ‘ರೋಡ್ ಟು ಫ್ರೀಡಮ್’ನಲ್ಲಿ ಹೇಳಿದ್ದಾರೆ. ವಾಜಸನೆಯಿ ಸಂಹಿತೆಯಲ್ಲಿ ಚಂಡಾಲ ಮತ್ತು ಪೌಲ್ಕಸ ಎಂಬ ಪದಗಳಿದ್ದು ಅವರು ಮಲ ವಿಲೇವಾರಿ ಮಾಡುವ ಗುಲಾಮರು. ಬೌದ್ಧರ ಕಾಲದಲ್ಲೂ ಈ ಎರಡು ಪದಗಳು ಪ್ರಚಲಿತವಿದ್ದವು. ಮೌರ್ಯರ ಕಾಲದಲ್ಲಿ ಪಾಟಲೀಪತ್ರ (ಪಾಟ್ನಾ) ಐದು ದೊಡ್ಡ ನಗರಗಳಲ್ಲಿ ಒಂದೆನಿಸಿತ್ತು. ಅಲ್ಲಿ ‘ನಾಗರಿಕ’ ಎಂಬ ಮೇಯರ್ನಂತಹ ಅಧಿಕಾರಿ ಇದ್ದು, ಭಂಗಿಗಳು ಮತ್ತು ಜಾಡಮಾಲಿಗಳು (ಕಸ ಗುಡಿಸುವವರು) ತಮ್ಮ ಕೆಲಸಗಳನ್ನು ಮಾಡುತ್ತಿದ್ದರು.
ಅವರದೇ ಒಂದು ಜಾತಿ
ಮೌರ್ಯರ ಕಾಲದಲ್ಲಿ ನಗರನೈರ್ಮಲ್ಯವು ಸುಧಾರಿಸಿತು. ಚಾಣಕ್ಯ ಪ್ರತಿ ಮನೆಯಲ್ಲಿ ಬಚ್ಚಲು ಇರಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಲವಿಸರ್ಜಿಸಿದರೆ ದಂಡ ವಿಧಿಸಬೇಕು ಎಂದಿದ್ದಾನೆ. ಆದರೆ ಅಶಕ್ತರು ಮತ್ತು ರೋಗಿಗಳಿಗೆ ಆತ ರಿಯಾಯಿತಿ ನೀಡಿದ್ದ. ಯುದ್ಧದ ವೇಳೆ ಸೆರೆಯಾದ ಶತ್ರುಸೇನೆಯವರನ್ನು ಭಂಗಿಗಳಾಗಿ ನೇಮಿಸುತ್ತಿದ್ದರು. ಅವರು ಮಲವನ್ನು ದೂರ ಒಯ್ದು ಹಾಕಬೇಕಿತ್ತು. ಒಮ್ಮೆ ಆ ಚಾಕರಿ ಮಾಡಿದವರು ಬಿಡುಗಡೆ ಆದರೂ ಅವರ ಜಾತಿಯವರು ಮತ್ತೆ ಅವರನ್ನು ಸ್ವೀಕರಿಸಲಿಲ್ಲ. ಆಗ ಅವರದೇ ಜಾತಿ (ಭಂಗಿ) ಆಯಿತೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ; ಮೊಗಲ್ ಚಕ್ರವರ್ತಿ ಅಕ್ಬರ್ ಅವರಿಗೆ ‘ಮೆಹ್ತಾರ್’ ಎಂದು ಹೆಸರಿಟ್ಟಿದ್ದ. ಭಾರತಕ್ಕೆ ಮುಸ್ಲಿಮರೊಂದಿಗೆ ಬಂದ ಹೆಂಗಸರು ಪರದೆಯ ಹಿಂದಿರುತ್ತಿದ್ದ ಕಾರಣ ಅವರಿಗೆ ಬಯಲು ಶೌಚ ನಿಷಿದ್ಧವಿತ್ತು; ಅವರಿಗಾಗಿ ಮನೆಯಲ್ಲಿ ‘ಬಕೆಟ್ ಪಾಯಿಖಾನೆ’ (ಃuಛಿಞeಣ ಠಿಡಿioಡಿಥಿ) ಮಾಡಿಕೊಳ್ಳುವುದು ಅನಿವಾರ್ಯವಾಯಿತು.
ಕ್ಷತ್ರಿಯರು ಮತ್ತು ಭಂಗಿಗಳಲ್ಲಿ ಸಮಾನ ಅಂಶಗಳಿರುವುದನ್ನು ಗುರುತಿಸಿದ ಸಂಶೋಧಕರು ಅವರ ಮೂಲ ಒಂದೇ ಎಂದು ಅಭಿಪ್ರಾಯಪಟ್ಟಿದಾರೆ; ಅವರು ಯುದ್ಧಕೈದಿಗಳು ಎಂಬುದಕ್ಕಿದು ಪರಾವೆ ಒದಗಿಸುತ್ತದೆ. ೧೯೩೧ರ ಜನಗಣತಿಯ ಪ್ರಕಾರ ದೇಶದಲ್ಲಿದ್ದ ಭಂಗಿಗಳ ಸಂಖ್ಯೆ ೧೯,೫೭,೪೬೦; ಅವರಲ್ಲಿ ೧೦,೩೮,೬೭೮ ಮಂದಿ ಪರುಷರು ಹಾಗೂ ೯,೧೮,೭೮೨ ಮಂದಿ ಹೆಂಗಸರು. ಹೀಗೆ ಒಟ್ಟಿನಲ್ಲಿ ಒಂದು ಬಗೆಯ ಐತಿಹಾಸಿಕ ಬೆಳವಣಿಗೆಯಿಂದಾಗಿ ಭಂಗಿ ಸಮಾಜದ ರಚನೆಯಾಯಿತು. ಅವರು ನಿರ್ದಿಷ್ಟ ಕೆಲಸದೊಂದಿಗೆ ಒಂದೇ ಕಡೆ ನೆಲೆಸಿದರು. ಮಲವನ್ನು ಮುಟ್ಟಿ ಕೆಲಸ ಮಾಡಬೇಕಾಗುವ ಕಾರಣ ಜಾತಿಗಳಲ್ಲಿ ಅವರದ್ದು ಅತಿ ಕೆಳಗಿನ ಸ್ಥಾನ, ಮಾನವರೇ ಅಲ್ಲ ಎಂಬಂತಹ ಸ್ಥಿತಿ; ಇಡೀ ಸಮಾಜದ ಈ ಬಗೆಯ ತುಳಿತದಿಂದ ಧ್ವನಿಯನ್ನೇ ಕಳೆದುಕೊಂಡ ಅವರು ಶತಮಾನಗಳ ಕಾಲ ಪ್ರತಿಭಟನೆಯನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದರು.
ಜಗತ್ತಿನ ಎಲ್ಲೆಡೆ
ಮಲ ಹೊರುವ ಪದ್ಧತಿ ಮತ್ತು ಅದರ ಬಗೆಗಿನ ಸಾಮಾಜಿಕ ತಿರಸ್ಕಾರಗಳು ಜಗತ್ತಿನ ಬೇರೆಬೇರೆ ಕಡೆ ಅನ್ಯಾನ್ಯ ರೀತಿಯಲ್ಲಿ ಇದ್ದಿರಲೇಬೇಕು. ಏಳನೇ ಶತಮಾನದಲ್ಲಿ ಇಸ್ಲಾಮ್ ಆರಂಭವಾಗುವ ಹೊತ್ತಿಗೆ ಮಲ ಸಾಗಿಸುವವರ ಬಗೆಗೆ ಮುಸ್ಲಿಂ ಗುರುಗಳ ನಡುವೆ ಮತೀಯ ತಿರಸ್ಕಾರ, ಬಹಿಷ್ಕಾರ ಇದ್ದುದನ್ನು ಗುರುತಿಸಲಾಗಿದೆ. ಆ ಹೊತ್ತಿಗೇ ಪಾಯಿಖಾನೆ ಮತ್ತು ಮಲ ವಿಲೇವಾರಿ ಇತ್ತು. ಮುಖ್ಯವಾಗಿ ಈಗಾಗಲೆ ಹೇಳಿದಂತೆ ಮುಸ್ಲಿಂ ಮಹಿಳೆಯರಿಗೆ ಪರ್ದಾದ ನಿರ್ಬಂಧ ಇರುವ ಕಾರಣ ಮನೆಯಲ್ಲೇ ಶೌಚಕ್ಕೆ ವ್ಯವಸ್ಥೆ ಅನಿವಾರ್ಯವಾಗಿತ್ತು. ಆದ್ದರಿಂದ ಭಂಗಿ ಕೆಲಸ ಕೂಡ ಇತ್ತು.
ಯೂರೋಪ್ ಮತ್ತು ಅಮೆರಿಕಗಳಲ್ಲೂ ಮಲಸಾಗಿಸುವ ಭಂಗಿ ಕೆಲಸ ಇತ್ತು. ‘ಸ್ಕಾವಿಂಜರ್’ ಎನ್ನುವ ಗ್ರಂಥ ಆ ಬಗೆಗಿನ ಕೆಲವು ವಿವರಗಳನ್ನು ನೀಡುತ್ತದೆ. ವಾಟರ್ ಕ್ಲೋಸೆಟ್ ಬರುವ ಮುನ್ನ ನಿಯೋಜಿತ ವ್ಯಕ್ತಿಗಳು ಮನೆಗಳ ಪ್ರೀವಿ ವಾಲ್ಟ್ (ಪಾಯಿಖಾನೆ)ಗಳಿಂದ ಮಲವನ್ನು ತೆಗೆದು ಸಮೀಪದ ಕೃಷಿಭೂಮಿಗೆ ಸಾಗಿಸುತ್ತಿದ್ದರು. ಅದು ಗೊಬ್ಬರವಾಗಿ ಬಳಕೆಯಾಗುತ್ತಿತ್ತು. ನಗರಕ್ಕೆ ತನ್ನ ಉತ್ಪನ್ನವನ್ನು ಮಾರಲು ತಂದು ರೈತ ಮರಳುವಾಗ ಮಲದಿಂದ ತಯಾರಾದ ಗೊಬ್ಬರವನ್ನು ಸಾಗಿಸುವುದಿತ್ತು. ಅಮೆರಿಕದಲ್ಲಿ ಕೂಡ ವಾಟರ್ ಕ್ಲೋಸೆಟ್ (ನೀರಿನ ಪಾಯಿಖಾನೆ) ತಡವಾಗಿ ಕಳೆದ ಶತಮಾನದಲ್ಲಷ್ಟೆ ಬಂತು. ೧೯ನೇ ಶತಮಾನದ ಮಧ್ಯಭಾಗದಲ್ಲಿ ಹಲವು ಕಡೆ ಮಲ ಸಾಗಿಸುವ ಕೆಲಸ ನಡೆಯದೆ ವ್ಯವಸ್ಥೆಯೇ ಮುರಿದುಬಿದ್ದಿತ್ತು. ನಗರದ ಸಮೀಪದ ರೈತರಿಗೆ ಈ ಗೊಬ್ಬರ ಧಾರಾಳವಾಗಿ ಸಿಗುತ್ತಿದ್ದರೆ ದೂರದವರಿಗೆ ಸಾಗಾಟದ ವೆಚ್ಚ ದುಬಾರಿ ಆಗುತ್ತಿತ್ತು. ವಾಟರ್ ಕ್ಲೋಸೆಟ್ಗಳನ್ನು ಒಳಚರಂಡಿಗೆ ಜೋಡಿಸುವವರೆಗೆ ಅಮೆರಿಕದಲ್ಲೂ ಮಲಹೊರುವ ಪದ್ಧತಿ ಇತ್ತು. ಮಲಕ್ಕೆ ಇಂಗ್ಲಿಷಿನಲ್ಲಿ ‘ನೈಟ್-ಸಾಯಿಲ್’ ಎನ್ನುವ ಹೆಸರು ಬರುವುದಕ್ಕೆ ಅಮೆರಿಕ, ಯೂರೋಪ್ಗಳಲ್ಲಿ ಅದನ್ನು ರಾತ್ರಿವೇಳೆ ಮನೆಗಳಿಂದ ಸಂಗ್ರಹಿಸಿ ಸಾಗಿಸುತ್ತಿದ್ದುದೇ ಕಾರಣ ಎಂಬ ಕುತೂಹಲಕರ ಸಂಗತಿಯೂ ಇಲ್ಲಿದೆ.
ಗಾಂಧಿ ಮಾರ್ಗ
ಮಲ ಹೊರುವ ಪದ್ಧತಿ ಮಾನವನ ಘನತೆಗೆ ತಕ್ಕುದಲ್ಲ ಎಂದು ಮನಗಂಡು ನೊಂದು ಈ ಬೃಹತ್ ಸಮಸೆಯ ಪರಿಹಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮೊದಲಾಗಿ ಕಾರ್ಯಪ್ರವೃತ್ತರಾದ ಓರ್ವ ನಾಯಕನೆಂದರೆ ಗಾಂಧಿಯವರು. ಅವರಿದ್ದ ಸನ್ನಿವೇಶದಲ್ಲಿ ತುಂಬ ಅಡಚಣೆಗಳಿದ್ದರೂ ಕೂಡ ಸಮಸ್ಯೆಯ ತೀವ್ರತೆ ಅವರನ್ನು ಬಲವಾಗಿ ತಟ್ಟಿತ್ತು. ಶೌಚಕ್ಕೆ ಸಂಬಂಧಿಸಿ ಅವರು ನಡೆಸಿದ ವಿವಿಧ ಪ್ರಯೋಗಗಳು ಮತ್ತು ಅಸ್ಪೃಶ್ಯತೆ ನಿರ್ಮೂಲನಕ್ಕಾಗಿ ಅವರು ಹಮ್ಮಿಕೊಂಡ ಕಾರ್ಯಕ್ರಮಗಳಿಂದ ಇದು ವ್ಯಕ್ತವಾಗುತ್ತದೆ. ಬಿರ್ಲಾ ಭವನದಲ್ಲಿ ಉಳಿದುಕೊಂಡಂತೆಯೇ ಗಾಂಧಿಯವರು ಭಂಗಿಕಾಲನಿಯಲ್ಲೂ ವಾಸ್ತವ್ಯ ಹೂಡುತ್ತಿದ್ದರು.
೧೯೦೧ ಕಲ್ಕತ್ತಾ (ಕೋಲ್ಕತಾ) ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದ ಗಾಂಧಿಜೀ ಶೌಚದ ಕೆಲಸಕ್ಕೆ ಭಂಗಿಗಳು ಬೇಡ; ಕಾರ್ಯಕರ್ತರೇ ಮಾಡಬಹುದು ಎಂದರು. ಕಾರ್ಯಕರ್ತರು ಶೌಚದ ಕೆಲಸಕ್ಕೆ ಒಪ್ಪಲಿಲ್ಲ; ಆದರೆ ಗಾಂಧಿಯವರು ತಮ್ಮ ಮಟ್ಟಿಗೆ ಅದನ್ನು ಜಾರಿಮಾಡಿಯೇಬಿಟ್ಟರು; ತಮ್ಮ ಪಾಯಿಖಾನೆಯನ್ನು ತಾವೇ ಸ್ವಚ್ಚಗೊಳಿಸಿದರು. ಆದರೆ ಅದು ಕಾರ್ಯಕರ್ತರ ಮೇಲೆ ಪರಿಣಾಮ ಬೀರಿತು; ಮುಂದಿನ ಕಾಂಗ್ರೆಸ್ ಅಧಿವೇಶನಗಳಲ್ಲಿ ಕಾರ್ಯಕರ್ತರೇ ಶೌಚದ ಕೆಲಸ ನಿರ್ವಹಿಸುವ ಪದ್ಧತಿ ಬಂತು.
೧೯೧೮ರಲ್ಲಿ ಗಾಂಧಿ ಸಾಬರ್ಮತಿ ಆಶ್ರಮವನ್ನು ಸ್ಥಾಪಿಸಿದಾಗ, ಮಲವನ್ನು ಅವರವರೇ ವಿಲೇವಾರಿ ಮಾಡಬೇಕೆಂದು ಆಶ್ರಮವಾಸಿಗಳಿಗೆ ಸೂಚಿಸಿದರು. ಆಶ್ರಮದಲ್ಲಿ ಎರಡು ಬಕೆಟ್ ಇಡುತ್ತಿದ್ದರು. ಒಂದು ಮಲಕ್ಕೆ; ಇನ್ನೊಂದು ತೊಳೆಯುವ ನೀರು, ಮೂತ್ರಕ್ಕೆ. ಬಕೆಟ್ನಲ್ಲಿದ್ದ ಮಲವನ್ನು ದೂರ ಒಯ್ದು ಗುಂಡಿಗೆ ಹಾಕಿ ಮಣ್ಣು ಮುಚ್ಚುತ್ತಿದ್ದರು; ಅದು ಮುಂದೆ ಗೊಬ್ಬರ ಆಗುತ್ತಿತ್ತು. ಮಲವನ್ನು ಕಾಂಪೆಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಬಳಸುವುದನ್ನು ಆಫ್ರಿಕದ ಟಾಲ್ಸ್ಟಾಯ್ ಆಶ್ರಮದಲ್ಲಿ ೧೯೦೮ರಲ್ಲೇ ಅವರು ಜಾರಿಗೆ ತಂದಿದ್ದರು. ಗಾಂಧಿಯವರು ಒಮ್ಮೆ ನನಗೆ ಪನರ್ಜನ್ಮ ಇರುವುದಾದರೆ ಭಂಗಿಗಳ ಮನೆಯಲ್ಲಿ ಜನಿಸಿ ಮಲ ಹೊರುವ ಅಮಾನವೀಯ, ಅನಾರೋಗ್ಯಕರ ಪದ್ಧತಿಯನ್ನು ನಿರ್ಮೂಲನ ಮಾಡುವೆ ಎಂದು ಹೇಳಿದ್ದರು.
ಒಂದು ಗಮನಿಸಬೇಕಾದ ಅಂಶವೆಂದರೆ, ಗಾಂಧಿ ಅನುಯಾಯಿಗಳಲ್ಲಿ ಕೂಡ ಮಲ ವಿಲೇವಾರಿಯ ಕೆಲಸಕ್ಕೆ ಮುಂದಾಗುವವರ ಸಂಖ್ಯೆ ಇತರ ಸಾಮಾಜಿಕ, ರಚನಾತ್ಮಕ ಕೆಲಸಗಳಿಗೆ ಸಿಗುವ ಪ್ರಮಾಣದಲ್ಲಿ ಇರಲಿಲ್ಲ. ಅದರಲ್ಲಿ ಎದ್ದು ಕಾಣುವವರು ಅಪ್ಪಾಸಾಹೇಬ್ ಪಟವರ್ಧನ್ ಅವರು. ಜೀವಮಾನ ಪರ್ಯಂತ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ‘ಗೋಪರಿ’ ಎನ್ನುವ ಕಾಂಪೋಸ್ಟ್ ಮಾದರಿ ಶೌಚಾಲಯವನ್ನು ರೂಪಿಸಿದರು.
ಭಂಗಿಗಳು ತಲೆಯಲ್ಲಿ ಮಲ ಹೊರುವುದು ಸಲ್ಲದು ಎಂದ ಗಾಂಧಿಯವರು, ಯಾವುದಾದರೂ ಸುರಕ್ಷಿತ ವಿಧಾನದಿಂದ ಮಲದ ವಿಲೇವಾರಿ ಮಾಡಬೇಕೆಂದು ಸೂಚಿಸಿದರು. ವಾರ್ಧಾದ ಸೇವಾಗ್ರಾಮದಲ್ಲಿ ಅವರು ಗುಂಡಿ ಪಾಯಿಖಾನೆ(ಟ್ರೆಂಚ್ ಲಟ್ರೀನ್)ಯನ್ನು ನಿರ್ಮಿಸಿದ್ದರು. ೨-೩ ಅಡಿ ಆಳ ಮತ್ತು ೩-೪ ಅಡಿ ಅಗಲದ ಗುಂಡಿ ತೋಡಿ ಅದರ ಮೇಲೆ ತೂತಿರುವ ಮರದ ಹಲಗೆಯನ್ನು ಜೋಡಿಸುವುದು; ಅದರ ಮೇಲೆ ಕುಳಿತು ಮಲವಿಸರ್ಜನೆ ಮಾಡಿದ ನಂತರ ಅದರ ಮೇಲೆ ಸ್ವಲ್ಪ ಹುಲ್ಲು ಅಥವಾ ಮಣ್ಣನ್ನು ಹಾಕಿ ಬರಬೇಕು. ಸುಮಾರು ಆರು ತಿಂಗಳಲ್ಲಿ ಗುಂಡಿ ಭರ್ತಿಯಾಗುತ್ತದೆ. ಆಗ ಇನ್ನೊಂದು ಗುಂಡಿಯನ್ನು ನಿರ್ಮಿಸಿಕೊಳ್ಳಬೇಕು. ಪ್ರತಿ ಆರು ತಿಂಗಳಿಗೆ ಗುಂಡಿಯನ್ನು ಬದಲಿಸುವುದು ಇದರಲ್ಲಿನ ಕಷ್ಟವಾಗಿದೆ; ಮತ್ತು ದುರ್ವಾಸನೆ ಇರುತ್ತದೆ; ನೊಣಗಳ ಉತ್ಪತ್ತಿಯಾಗದಂತೆ ತಡೆಯುವುದು ಕಷ್ಟ. ಹುಳು ಹಾಗೂ ಬ್ಯಾಕ್ಟೀರಿಯಗಳು ಕೂಡ ಹರಡಬಹುದು. ದಕ್ಷಿಣ ಆಫ್ರಿಕದ ಡರ್ಬಾನಿನ ಫೀನಿಕ್ಸ್ ಆಶ್ರಮದಲ್ಲೇ ಗಾಂಧಿ ಮಲ ವಿಸರ್ಜನೆಯ ಬಳಿಕ ಮಣ್ಣುಹಾಕುವ ಗುಂಡಿ ಪಾಯಿಖಾನೆಯನ್ನು ಬಳಸುತ್ತಿದ್ದರು.
ದುಬಾರಿಯಾದ ಒಳಚರಂಡಿ
ಭಾರತದಲ್ಲಿ ೧೮೭೦ರಲ್ಲಿ ಮೊದಲಬಾರಿಗೆ ಕಲ್ಕತ್ತಾದಲ್ಲಿ ಒಳಚರಂಡಿಯನ್ನು ನಿರ್ಮಿಸಲಾಯಿತು. ಮುಂದೆ ಅದಕ್ಕೆ ನೀರಿನಿಂದ ಫ್ಲಶ್ ಮಾಡುವ ಪಾಯಿಖಾನೆಗಳನ್ನು ಜೋಡಿಸುವ ವಿಧಾನವನ್ನು ಅನುಸರಿಸಲಾಯಿತು. ಒಳಚರಂಡಿ ಮೂಲಕ ಸಾಗಿಸಿದ್ದನ್ನು ಗ್ರಾಮಸಾರ ಸಂಸ್ಕರಣ ಸ್ಥಾವರ(ಸೂಇಜ್ ಟ್ರೀಟ್ಮೆಂಟ್ ಪ್ಲಾಂಟ್)ಗಳಿಗೆ ತಂದು ಅಲ್ಲಿ ಸಂಸ್ಕರಿಸುವ ವಿಧಾನವೂ ಬಂತು. ಆದರೆ ಆರಂಭವಾದಲ್ಲಿಂದ ೧೪೫ ವರ್ಷಗಳಲ್ಲಿ ದೇಶದ ೯೨೯ ಪಟ್ಟಣ-ನಗರಗಳಲ್ಲಿ (ಒಟ್ಟು ಪಟ್ಟಣ-ನಗರಗಳು ೭,೯೩೫) ಮಾತ್ರ ಈ ವಿಧಾನವನ್ನು ಅನುಸರಿಸಲಾಯಿತು; ಇಡೀ ನಗರವನ್ನು ಒಳಗೊಂಡದ್ದು ಕೂಡ ಕಡಮೆ. ಎಸ್ಟಿಪಿ ಇರುವ ನಗರಗಳಂತೂ ತೀರಾ ಕಡಮೆ. ಇಂತಹ ಒಳಚರಂಡಿಗೆ ತಗಲುವ ದುಬಾರಿ ವೆಚ್ಚ, ಫ್ಲಶ್ಗೆ ತುಂಬ ನೀರು ಬೇಕಾಗುವುದು ಈ ವಿಧಾನದ ಪ್ರತಿಕೂಲ ಅಂಶಗಳಾಗಿವೆ. ಆದ್ದರಿಂದ ಇದು ಹೆಚ್ಚು ವಿಸ್ತರಿಸದೆ ಸೀಮಿತವಾಯಿತು.
ಭಾರತದಲ್ಲಿ ಭಂಗಿ ವಿಮೋಚನೆ ಆಗುವುದರ ಜೊತೆಗೆ ವೆಚ್ಚ ಕಡಮೆ ಇರುವುದು ಕೂಡ ಅಗತ್ಯ. ಇನ್ನು ಉಳಿದ ವಿಧಾನವೆಂದರೆ ಸೆಪ್ಟಿಕ್ ಟ್ಯಾಂಕ್ ಸಹಿತವಾದ ಶೌಚಾಲಯ. ಅದರಲ್ಲಿ ಲ್ಯಾಟ್ರಿನ್ನ ಕೆಳಭಾಗದಲ್ಲಿ ಆಯತಾಕಾರದ ಚೇಂಬರ್ ಇರುತ್ತದೆ. ಮಲದಿಂದ ಟ್ಯಾಂಕ್ ತುಂಬುವುದು ಇದರ ಸಮಸ್ಯೆಯಾಗಿದೆ; ತುಂಬಿದಾಗ ಖಾಲಿ ಮಾಡಬೇಕಾಗುತ್ತದೆ. ಅದಕ್ಕೆ ಮತ್ತೆ ಭಂಗಿಗಳೇ ಬೇಕಾಗುತ್ತಾರೆ; ಅಂದರೆ ಇದರಿಂದ ಭಂಗಿಗಳ ವಿಮೋಚನೆ ಆಗುವುದಿಲ್ಲ. ಸೆಪ್ಟಿಕ್ ಟ್ಯಾಂಕ್ ತುಂಬಿದಾಗ ಉಕ್ಕಿಹರಿಯುತ್ತದೆ. ಅದು ದುರ್ವಾಸನೆಯಿಂದ ಕೂಡಿದ್ದು ಅನಾರೋಗ್ಯಕಾರಿಯಾಗಿರುತ್ತದೆ; ಬಳಸುವವರು ಉಕ್ಕಿಹರಿಯದಂತೆ ಎಚ್ಚರವಹಿಸಬೇಕು; ಆಗಾಗ ನೋಡಬೇಕು. ಇದಕ್ಕೆ ಕೂಡ ಖರ್ಚು ಜಾಸ್ತಿ.
ಈ ವಿಧಾನಗಳ ದೋಷಗಳನ್ನು ಸರಿಪಡಿಸಿ ದೇಶಕ್ಕೆ ಹೊಂದುವ ಒಂದು ತಂತ್ರಜ್ಞಾನವನ್ನು ಅನುಸರಿಸಲು ಬಿಂದೇಶ್ವರ ಪಾಠಕ್ ಕಾರ್ಯಪ್ರವೃತ್ತರಾದರು. ಗಾಂಧಿಯವರು ತನಗೆ ಇನ್ನೊಂದು ಜನ್ಮವಿದ್ದರೆ ಭಂಗಿಗಳ ಮನೆಯಲ್ಲಿ ಜನಿಸಿ ಮಲಹೊರುವ ಅಮಾನವೀಯ ಪದ್ಧತಿಯನ್ನು ನಿರ್ಮೂಲನಗೊಳಿಸುವುದಾಗಿ ಹೇಳಿದ್ದರು; ಪಾಠಕ್ ಭಂಗಿಗಳ ಮನೆಯಲ್ಲಿ ಜನಿಸದೇ ಆ ಕಾರ್ಯವನ್ನು ಸಾಧಿಸಿದ್ದಾರೆನ್ನಬಹುದು. ಗಾಂಧಿಯವರ ಕಾಲದಲ್ಲಿ ಪ್ರಯತ್ನ ನಡೆದರೂ ಫಲ ಅಷ್ಟೇನೂ ಸಿಗಲಿಲ್ಲ. ಕಾರಣವೆಂದರೆ, ಆಗ ಸರ್ಕಾರ ಬ್ರಿಟಿಷರದಾಗಿತ್ತು; ಮತ್ತು ಬೇಕಾದ ತಂತ್ರಜ್ಞಾನ ಇರಲಿಲ್ಲ.
ಎರಡು ಪಿಟ್ಗಳ ನಿರ್ಮಾಣ
ಬಿಂದೇಶ್ವರ್ ತಮ್ಮ ಸುಲಭ್ದಲ್ಲಿ ನೀರು ತುಂಬ ಕಡಮೆ ಸಾಕಾಗುವ (ವಾಟರ್ ಸೀಲ್) ವಿನ್ಯಾಸವನ್ನು ತಂದರು. ಫ್ಲಶ್ ಮಾಡಲು ಒಂದರಿಂದ ಎರಡು ಲೀಟರ್ನಷ್ಟು ನೀರು ಸಾಕು. ನೀರಿನ ಮುಚ್ಚಳ(ಸೀಲ್) ಗುಂಡಿಯಿಂದ ದುರ್ವಾಸನೆ ಬರದಂತೆ ತಡೆಂiತ್ತದೆ. ಇದರಲ್ಲಿ ಎರಡು ಗುಂಡಿ (ಪಿಟ್)ಗಳಿದ್ದು ಒಂದು ಬಳಕೆಯಾಗುವಾಗ ಇನ್ನೊಂದು ಬದಲಿಯಾಗಿ ಖಾಲಿ ಇರುತ್ತದೆ. ಒಂದು ತುಂಬಿದಾಗ ಮತ್ತೊಂದನ್ನು ತೆರೆಯಲಾಗುತ್ತದೆ. ಎರಡು ವರ್ಷಗಳಾಗುವಾಗ ಮುಚ್ಚಿದ ಗುಂಡಿಯಲ್ಲಿದ್ದ ಮಲ ಗೊಬ್ಬರವಾಗಿರುತ್ತದೆ. ಅದನ್ನು ತೆಗೆದು ಕೃಷಿಗೆ ಬಳಸಲಾಗುತ್ತದೆ; ವೆಂಟ್ಪೈಪ್ ಇಲ್ಲದ ಕಾರಣ ವಾಯುಮಾಲಿನ್ಯ ಇರುವುದಿಲ್ಲ.
೧೯೬೮ರಲ್ಲಿ ಪಾಠಕ್ ಬಿಹಾರದ ಗಾಂಧಿ ಜನ್ಮಶತಮಾನೋತ್ಸವ ಸಮಿತಿಯಲ್ಲಿ ಸೇರಿಕೊಂಡರು. ಆ ಹೊತ್ತಿಗೆ ಅವರ ಸುಲಭ್ ಶೌಚಾಲಯದ ಮಾದರಿ ಸಿದ್ಧವಾಗಿತ್ತು. ಶತಮಾನೋತ್ಸವ ವರ್ಷದಲ್ಲಿ ಅವರು ಮಲ ಹೊರುವ ಪದ್ಧತಿಯನ್ನು ನಿಷೇಧಿಸಬೇಕೆನ್ನುವ ‘ಭಂಗಿ ಮುಕ್ತಿ’ ಚಳವಳಿಯಲ್ಲಿ ಸೇರಿಕೊಂಡರು. ಗಾಂಧಿ ಜನ್ಮಶತಾಬ್ದಿಯ ಅಂಗವಾಗಿ ರಾಜ್ಯದ ಎಲ್ಲ ಬಕೆಟ್ ಪ್ರೀವಿಗಳನ್ನು ವಾಟರ್ಸೀಲ್ ಶೌಚಾಲಯವಾಗಿ ಪರಿವರ್ತಿಸಬೇಕೆಂದು ಬಿಹಾರ ನಿರ್ಧರಿಸಿತ್ತು. ಒಳಚರಂಡಿ ಸಂಪರ್ಕವಾದರೂ ಸರಿ, ತೇವಾಂಶ ಇಂಗಿ ಹೋಗುವ ಲೀಚಿಂಗ್ ಪಿಟ್ ಆದರೂ ಸರಿ; ಇಡೀ ರಾಜ್ಯದಲ್ಲಿ ಮಲಹೊರುವ ಪದ್ಧತಿ ಉಳಿಯಬಾರದೆನ್ನುವುದು ಸರ್ಕಾರದ ಆಶಯವಾಗಿತ್ತು. ಸುಲಭ್ ಶೌಚಾಲಯವು ಲೀಚಿಂಗ್ ಪಿಟ್ ತಂತ್ರಜ್ಞಾನವನ್ನು ಅನುಸರಿಸುವಂಥದ್ದು.
ತಗಲುವ ವೆಚ್ಚದ ಶೇ. ೫೦ ಭಾಗವನ್ನು ವಹಿಸಿಕೊಳ್ಳುವುದಾಗಿ ಸರ್ಕಾರ ಹೇಳಿತು. ಈ ಬೃಹತ್ ಕಾರ್ಯಕ್ರಮದ ಪ್ರಚಾರದ ಹೊಣೆಯನ್ನು ರಾಜ್ಯಸರ್ಕಾರ ಬಿಹಾರ ರಾಜ್ಯ ಗಾಂಧಿ ಜನ್ಮಶತಮಾನೋತ್ಸವ ಸಮಿತಿಗೆ ವಹಿಸಿತು. ಪ್ರಚಾರ ಮತ್ತು ಪ್ರಾತ್ಯಕ್ಷಿಕೆ ನಡೆಸುವ ಕೆಲಸವನ್ನು ಸಮಿತಿ ನಿರ್ವಹಿಸಿತಾದರೂ ಕೆಲಸದಲ್ಲಿ ಹೆಚ್ಚು ಪ್ರಗತಿಯಾಗಲಿಲ್ಲ. ಅದಕ್ಕೆ ಒಂದು ಕಾರಣವೆಂದರೆ ಸ್ಥಳೀಯಾಡಳಿತ ಸಂಸ್ಥೆಗಳಿಂದ ಹಣ ಸರಿಯಾಗಿ ಸಿಗಲಿಲ್ಲ.
ಸ್ವಂತ ಹಾದಿ ಹಿಡಿದರು
ಆಗ ಬಿಂದೇಶ್ವರ ಪಾಠಕ್ ಅವರು, ಪರಿವರ್ತನೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಭಾಗಿಗಳಾಗಲು ಅವಕಾಶ ಕಲ್ಪಿಸಿ ಎಂದು ಗಾಂಧಿ ಜನ್ಮಶತಮಾನೋತ್ಸವ ಸಮಿತಿ ಕಾರ್ಯದರ್ಶಿಯವರಿಗೆ ಸಲಹೆ ನೀಡಿದರು. ಅದಕ್ಕೆ ಕಾರ್ಯದರ್ಶಿಯವರು ಸ್ವಯಂಸೇವಾ ಸಂಸ್ಥೆಗಳು ಪ್ರಚಾರ ಮಾಡಿದರೆ ಸಾಕು; ಅನುಷ್ಠಾನದಲ್ಲಿ ಭಾಗಿಯಾಗುವುದು ಬೇಡ. ಇದರಲ್ಲಿ ಹಣ ಸಂಗ್ರಹಿಸುವುದು ಬೇಡ; ದಾನ-ಅನುದಾನಗಳ ಮೂಲಕ ಕೆಲಸ ಮಾಡಿದರೆ ಸಾಕು ಎಂದು ಉತ್ತರಿಸಿದರು. ಅದನ್ನು ವಿರೋಧಿಸಿದ ಪಾಠಕ್ ಹೆಚ್ಚು ಜನರಿಗೆ ಸೇವೆ ಸಲ್ಲಿಸುವುದು ಮುಖ್ಯವಾಗಬೇಕು. ಅನುದಾನ ಅದಕ್ಕೆ ಸಾಕಾಗುವುದಿಲ್ಲ ಎಂದು ಹೇಳಿದರು.
ಆ ಹಂತದಲ್ಲಿ ಪಾಠಕ್ ಅವರಿಗೆ ಜನ್ಮಶತಮಾನೋತ್ಸವ ಸಮಿತಿಯಿಂದ ಹೊರಗೆ ಬರುವುದು ಅಗತ್ಯವೆನಿಸಿತು. ಸಮಿತಿಯ ಸಂಪರ್ಕವನ್ನು ತೊರೆದು ೧೯೭೦ರಲ್ಲಿ ‘ಸುಲಭ್ ಶೌಚಾಲಯ ಸಂಸ್ಥಾನ’ವನ್ನು ಸ್ಥಾಪಿಸಿದರು. ಅದೇ ವರ್ಷ ಬಿಹಾರ ಸರ್ಕಾರ ನೀರಿನ (ಫ್ಲಶ್) ಶೌಚಾಲಯವಿಲ್ಲದ ಮನೆ ಮಾಲೀಕರನ್ನು ಶಿಕ್ಷೆಗೊಳಪಡಿಸುವುದಾಗಿ ಪ್ರಕಟಣೆ ಹೊರಡಿಸಿತು. ಅದೇ ಅಕ್ಟೋಬರ್ನಲ್ಲಿ ಗಾಂಧಿಜನ್ಮಶತಮಾನೋತ್ಸವ ಸಮಿತಿ ಬರ್ಖಾಸ್ತಾಯಿತು; ಸುಲಭ್ ಶೌಚಾಲಯ ಸಂಸ್ಥಾನ ಉಳಿದುಕೊಂಡಿತು.
೧೯೬೯-೧೯೭೪ರ ಅವಧಿಯಲ್ಲಿ ಬಿಹಾರ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ೩೦ ಲಕ್ಷ ರೂ. ಅನುದಾನ ನೀಡಿತು. ಆದರೆ ಸಾಧನೆ ಏನೂ ಇಲ್ಲ. ಪಾಯಿಖಾನೆಗಳನ ಪರಿವರ್ತಿಸುವ ಪ್ರಸ್ತುತ ಕೆಲಸ ಅವುಗಳಿಂದ ಸಾಧ್ಯವಾಗಲಿಲ್ಲ. ಅಂತೂ ಸುಲಭ್ ಶೌಚಾಲಯ ಸಂಸ್ಥೆಯನ್ನು ಗುರುತಿಸಿ ಅದರ ಮೂಲಕ ಕಾರ್ಯಕ್ರಮದ ಅನುಷ್ಠಾನ ಮಾಡುವುದಕ್ಕೆ ರಾಜ್ಯಸರ್ಕಾರ ಬರೋಬ್ಬರಿ ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ಫಲಾನುಭವಿಗಳು, ಸ್ಥಳೀಯ ಆಡಳಿತ ಮತ್ತು ಸರ್ಕಾರಗಳ ನಡುವೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಿತ್ತು. ಮನೆಮನೆಗೆ ಹೋಗಿ ಶೌಚಾಲಯ ನಿರ್ಮಿಸುವ ಬಗ್ಗೆ ತಿಳಿಸಿ ಮನವೊಲಿಸುವುದು, ಸಾಲ-ಸಬ್ಸಿಡಿ ಪಡೆಯುವ ಬಗ್ಗೆ ಅವರಿಂದ ಅರ್ಜಿ ತುಂಬಿಸಿ ಸರ್ಕಾರಕ್ಕೆ ನೀಡುವುದು ಕೂಡ ಸುಲಭ್ನ ಕಾರ್ಯಕರ್ತರ ಕೆಲಸ. ಸರ್ಕಾರದ ಹಣ ಸುಲಭ್ ಸಂಸ್ಥೆಗೇನೇ ಬರುತ್ತದೆ. ಅದರಿಂದ ಸುಲಭ್ ಮಾದರಿಯ ಶೌಚಾಲಯ ನಿರ್ಮಾಣ ಆಗುತ್ತದೆ.
೧೯೭೪ರಿಂದ ರಾಜ್ಯಾದ್ಯಂತ ಕೆಲಸ ಈ ರೀತಿಯಲ್ಲಿ ವೇಗವನ್ನು ಪಡೆದುಕೊಂಡಿತು. ಕೆಲಸ ಸುಲಭ್ ಸಂಸ್ಥೆಯಿಂದಲೇ ನಡೆಯುತ್ತದೆ. ಫಲಾನುಭವಿ ಜನ ಏನೂ ಮಾಡಬೇಕಿಲ್ಲ. ಅವರು ಉಸ್ತುವಾರಿ ಮಾಡಬಹುದು. ಅವ್ಯವಹಾರಕ್ಕೆ ಅವಕಾಶವಿಲ್ಲ. ಶೌಚಾಲಯದ ನಿರ್ಮಾಣ ಸರಿಯಾಗಿ ಆಗಿರುವ ಬಗ್ಗೆ ಕೆಲಸಗಾರರು (ಮೇಸ್ತ್ರಿ) ಮನೆ ಮಾಲೀಕರಿಂದ ಪತ್ರ ತರಬೇಕು. ಕೆಲಸ ಸರಿಯಾಗಿ ಇಲ್ಲದಿದ್ದರೆ ತಡೆದು ಸುಲಭ್ ಕಛೆರಿಗೆ ತಿಳಿಸಬಹುದು; ಇಲ್ಲವಾದರೆ ಕಾಮಗಾರಿ ಮುಗಿದ ನಂತರ ಸುಲಭ್ ಸಿಬ್ಬಂದಿ ಹೋಗಿ ನೋಡಿ ಬರುತ್ತಾರೆ.
ಸುಲಭ್ ನಡೆಸಿದ ಕಾಮಗಾರಿಗೆ ಗ್ಯಾರಂಟಿ ಇದೆ. ಐದು ವರ್ಷದೊಳಗೆ ದೋಷ ಕಂಡುಬಂದರೆ ದೂರು ಕೊಡಬಹುದು; ಏಳು ದಿನಗಳೊಳಗೆ ಸುಲಭ್ ವತಿಯಿಂದ ಅದನ್ನು ಸರಿಪಡಿಸಿ ಕೊಡಲಾಗುತ್ತದೆ. ಈ ವಿಧಾನ ಚೆನ್ನಾಗಿ ಕೆಲಸ ಮಾಡಿತು. ೧೯೬೮-೬೯ರಲ್ಲಿ ೨ ಲಕ್ಷ ರೂ. ಇದ್ದ ಸಂಸ್ಥೆಯ ಬಜೆಟ್ ೧೯೮೫-೮೬ರ ಹೊತ್ತಿಗೆ ೨ ಕೋಟಿ ರೂ. ಆಗಿತ್ತು ಎಂದು ಬಿಂದೇಶ್ವರ ಪಾಠಕ್ ನೆನಪಿಸಿಕೊಳ್ಳುತ್ತಾರೆ. ಸಂಸ್ಥೆಯ ಅಧ್ಯಕ್ಷ ನೆಲೆಯಲ್ಲಿ ಅವರು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲವೂ ಆಗಿ ಕಾರ್ಯನಿರ್ವಹಿಸಬೇಕಿತ್ತು. ಸಣ್ಣ ಮನಸ್ಸಿನಿಂದ ಸಾಮ್ರಾಜ್ಯವನ್ನು ಆಳುವುದು ಅಸಾಧ್ಯ ಎನ್ನುತ್ತಾರೆ ಪಾಠಕ್.
ಜಾಗತಿಕ ಸಂಸ್ಥೆಗಳ ಶ್ಲಾಘನೆ
ಅವರ ಕೆಲಸದ ಕುರಿತು ವಿಶ್ವಸಂಸ್ಥೆಯ ಅಂಗವಾದ ಅಂತಾರಾಷ್ಟ್ರೀಯ ಕಾರ್ಮಿಕರ ಸಂಸ್ಥೆ (ಐ.ಎಲ್.ಓ) ಹೀಗೆ ಹೇಳಿದೆ: ಎರಡು ಗುಂಡಿಯ ಪೆರ್ಫ್ಲಶ್ ಲ್ಯಾಟ್ರಿನ್ನ ಕಲ್ಪನೆ ಹೊಸತಲ್ಲ. ಆದರೆ ಸುಲಭ್ ಶೌಚಾಲಯ ಸಂಸ್ಥಾನದ ಯೋಜನೆಯ ಕೆಲವು ವಿವರಗಳು ಸ್ವಂತಿಕೆಯಿಂದ (ಮೂಲ ಕಲ್ಪನೆಯಿಂದ) ಕೂಡಿದ್ದು ಎಂಬುದು ನಿಜ. ಯೋಜನೆಯ ಯಶಸ್ಸಂತೂ ಹೊಸತು. ಈ ಮೂಲಕ ಒಂದು ಖಾಸಗಿ ಸಂಸ್ಥೆ ಕೇವಲ ಅಲ್ಪಾವಧಿಯಲ್ಲಿ ದಶಸಾವಿರಗಟ್ಟಲೆ ಶೌಚಾಲಯಗಳನ್ನು ನಿರ್ಮಿಸಿದ್ದು ವಿಶೇಷವೇ ಸರಿ.
೧೯೭೮ರಲ್ಲಿ ಪಾಟ್ನಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ), ಯುನಿಸೆಫ್ ಹಾಗೂ ಕೇಂದ್ರ್ರ ಲೋಕೋಪಯೋಗಿ ಮತ್ತು ಗೃಹನಿರ್ಮಾಣ ಇಲಾಖೆಗಳ ನೇತೃತ್ವದಲ್ಲಿ ಜರಗಿದ ವಿಚಾರಗೋಷ್ಠಿ ಅದನ್ನು ಒಪ್ಪಿಕೊಂಡಿತು. ಅದಕ್ಕೆ ಮುನ್ನ ಸರ್ಕಾರ ಅದನ್ನು ಜಾಸ್ತಿ ಜಾಗ ಲಭ್ಯವಿರುವ ಹಳ್ಳಿ ಪ್ರದೇಶಕ್ಕೆ ಮಾತ್ರ ಶಿಫಾರಸ್ಸು ಮಾಡುತ್ತಿತ್ತು. ಆ ಸೆಮಿನಾರಿನಲ್ಲಿ ದೇಶದ ಎಲ್ಲ ರಾಜ್ಯಗಳವರು ಭಾಗವಹಿಸಿದ್ದರು. ಒಣಪಾಯಿಖಾನೆಯನ್ನು ಈ ರೀತಿ ಹ್ಯಾಂಡ್ ಫ್ಲಶ್ ವಾಟರ್ ಸೀಲ್ ಲ್ಯಾಟ್ರಿನ್ ಮಾಡುವುದರಿಂದ ಯಾವುದೇ ತೊಂದರೆ ಇಲ್ಲವೆಂದು ಡಬ್ಲ್ಯುಎಚ್ಓ ಒಪ್ಪಿಕೊಂಡು ಅದನ್ನು ಪ್ರಚಾರ ಮಾಡಿತು; ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಮತ್ತು ಯುನಿಸೆಫ್ಗಳು ಕಡಮೆ ವೆಚ್ಚದ ಲ್ಯಾಟ್ರಿನ್ ಎಂಬ ನೆಲೆಯಲ್ಲಿ ಸುಲಭ್ಗೆ ಪ್ರಚಾರ ನೀಡಿದವು.
ಬಿಹಾರದಲ್ಲಿ ಸುಲಭ್ ಇಂಟರ್ನ್ಯಾಷನಲ್ನ ಯಶಸ್ಸು ಕಂಡ ಕೇಂದ್ರ ಗೃಹನಿರ್ಮಾಣ ಮತ್ತು ಸಮಾಜಕಲ್ಯಾಣ ಇಲಾಖೆಗಳು ೧೯೮೦-೮೧ರಲ್ಲಿ ವಾಟರ್ಫ್ಲಶ್ ಲ್ಯಾಟ್ರಿನ್ ನಿರ್ಮಾಣವನ್ನು ನಾಗರಿಕ ಹಕ್ಕು ಕಾಯ್ದೆಯ ಅಡಿಯಲ್ಲಿ ತಂದವು. ಸ್ವಾತಂತ್ರ್ಯ ಬಂದು ೩೪ ವರ್ಷದ ಬಳಿಕವೂ ಮಲ ಹೊರುವ ಪದ್ಧತಿ ಇದೆಯೆಂದರೆ ಇದು ಅತ್ಯಂತ ಕ್ರೂರವಾದ ದೌರ್ಜನ್ಯ” ಎಂದ ಇಲಾಖೆ, “ಪಟ್ಟಣಗಳನ್ನು ಘಟಕವಾಗಿ ತೆಗೆದುಕೊಂಡು ಆಯಾ ಪಟ್ಟಣದಲ್ಲಿ ಅದು ಇರಬಾರದು ಎಂದು ಹೇಳಿತು. ಅದರಿಂದ ಹಲವು ನಗರ-ಪಟ್ಟಣಗಳಲ್ಲಿ ಸುಲಭ್ ಶೌಚಾಲಯಗಳು ರಚನೆಯಾದವು. ಕೇಂದ್ರ-ರಾಜ್ಯಸರ್ಕಾರಗಳು ತಲಾ ಶೇ. ೫೦ ವೆಚ್ಚ ಭರಿಸಿದವು. ಸುಮಾರು ೧೯ ರಾಜ್ಯಗಳಲ್ಲಿ ಇದು ನಡೆಯಿತು.
೧೯೭೦ರಲ್ಲಿ ಸ್ಥಾಪನೆಗೊಂಡ ಕೇಂದ್ರ ಗೃಹನಿರ್ಮಾಣ ಮತ್ತು ನಗರಾಭಿವೃದ್ಧಿ ನಿಗಮವು (ಹುಡ್ಕೋ) ಮಲ ಹೊರುವುದನ್ನು ನಿಲ್ಲಿಸುವ ಬಗ್ಗೆ ೧೯೮೩ರಲ್ಲಿ ಪ್ರಾಥಮಿಕ ನೈರ್ಮಲ್ಯ ಯೋಜನೆಯನ್ನು ಆರಂಭಿಸಿತು. ಹುಡ್ಕೋ ಕೂಡ ಸುಲಭ್ದ ಎರಡು ಗುಂಡಿ ಲೀಚಿಂಗ್ ಸಿಸ್ಟಮನ್ನು ಪೆತ್ಸಾಹಿಸಿತು. ೧೯೮೦ರ ದಶಕವನ್ನು ‘ಅಂತಾರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ದಶಕ’ ಎಂದು ಕರೆಯಲಾಗಿದ್ದು, ಆ ಹಿನ್ನೆಲೆಯಲ್ಲ್ಲಿ ಭಾರತ ಸರ್ಕಾರ ಲ್ಯಾಟ್ರಿನ್ ಪರಿವರ್ತನೆ-ನಿರ್ಮಾಣಕ್ಕೆ ಕ್ರಮ ಕೈಗೊಂಡಿತು. ಗುರಿ ವಿಧಿಸಿ ಸಾಧನೆ ಮಾಡಿದ್ದು, ೧೯೮೯ರಲ್ಲಿ ಹತ್ತು ರಾಜ್ಯಗಳ ೨೧೨ ಪಟ್ಟಣಗಳಲ್ಲ್ಲಿ ವ್ಯಾಪಕವಾಗಿ ಲ್ಯಾಟ್ರಿನ್ ನಿಮಾಣ ನಡೆಯಿತು.
ಪ್ರಬಲ ಇಚ್ಛಾಶಕ್ತಿ
ಇದರಿಂದ ತಿಳಿಯುವ ಅಂಶವೆಂದರೆ, ಸುಲಭ್ ಕಡಮೆ ವೆಚ್ಚದ ಲಭ್ಯ ವಿಧಾನವಾಗಿದೆ. ಅದು ಬಾವಿ, ಅಂತರ್ಜಲ ಅಥವಾ ವಾತಾವರಣದ ಮಾಲಿನ್ಯವನ್ನು ಉಂಟುಮಾಡುವುದಿಲ್ಲ. ಎಲ್ಲ ವಿಧಗಳಲ್ಲಿ ಅತ್ಯಂತ ಅಗ್ಗವಾಗಿದ್ದು ನಿರ್ವಹಣೆಯೂ ಸುಲಭ. ಭಾರತ ಮತ್ತು ಇಂತಹ ಅಭಿsವೃದ್ಧಿಶೀಲ ದೇಶಗಳಿಗೆ ಇದೇ ಉತ್ತಮ. ಇದು ನೈರ್ಮಲ್ಯ ತಂತ್ರಜ್ಞಾನದ ಮಹತ್ತ್ವದ ಶೋಧವಾಗಿದ್ದು, ಭಂಗಿಗಳ ವಿಮೋಚನೆ ಆಗುವುದು ಇದರ ದೊಡ್ಡ ಸಾಧನೆಯಾಗಿದೆ ಎಂದು ಪಾಠಕ್ ಹೇಳಿಕೊಂಡಿದ್ದಾರೆ.
ಪ್ರಬಲ ಇಚ್ಛಾಶಕ್ತಿಯಿಂದಾಗಿ ರಾಜಕಾರಣಿಗಳು, ಮಾಧ್ಯಮಗಳು, ತಾಂತ್ರಿಕರು, ಆಡಳಿತಗಾರರು ಹೀಗೆ ಎಲ್ಲರ ಮುಂದೆಯೂ ಬಲವಾದ ಸಮರ್ಥನೆ ನೀಡಲು ನನಗೆ ಸಾಧ್ಯವಾಯಿತು. ಸುಲಭ್ ಸಂಸ್ಥೆಯ ಕೆಲಸದ ಗುಣಮಟ್ಟ ಎಲ್ಲರನ್ನೂ ಆಕರ್ಷಿಸಿದೆ. ೧೯೭೪-೮೮ರ ಅವಧಿಯಲ್ಲಿ ಬಿಹಾರ ರಾಜ್ಯವೊಂದರಲ್ಲೇ ೧.೮೬ ಲಕ್ಷ ಒಣ ಪಾಯಿಖಾನೆಗಳನ್ನು ಸುಲಭ್ ಶೌಚಾಲಯವಾಗಿ ಪರಿವರ್ತಿಸಲಾಯಿತು. ಇದರಿಂದ ರಾಜ್ಯದ ೧೫ ಪಟ್ಟಣಗಳ ೩ ಸಾವಿರಕ್ಕೂ ಅಧಿಕ ಭಂಗಿಗಳ ವಿಮೋಚನೆ ಆಗಿದೆ. ಹಣದ್ದೇ ತೊಂದರೆ. ಇಲ್ಲವಾದರೆ ಎಲ್ಲ ೪ ಲಕ್ಷ ಪಾಯಿಖಾನೆಗಳ ಕನ್ವರ್ಶನ್ ನಡೆದು ಬಿಹಾರ ‘ಭಂಗಿಮುಕ್ತ್ತ’ ರಾಜ್ಯ ಆಗುತ್ತಿತ್ತು ಎಂದು ಆಗ ಅವರು ಹೇಳಿದ್ದರು. ೩,೦೦೦ದ ಸಂಖ್ಯೆ ಈಗ ೧.೨೦ ಲಕ್ಷಕ್ಕೆ ಬೆಳೆದಿದೆ.
ವಿಮೋಚಿತರ ಹರ್ಷ
ತಮ್ಮ ಪಿಎಚ್.ಡಿ. ಸಂಶೋಧನೆಗಾಗಿ ಬಿಂದೇಶ್ವರ ಪಾಠಕ್ ವ್ಯಾಪಕ ಕ್ಷೇತ್ರಕಾರ್ಯವನ್ನು ಕೈಗೊಂಡಿದ್ದರು. ಸುಲಭ್ ಶೌಚಾಲಯದಿಂದಾಗಿ ವಿಮೋಚನೆಗೊಂಡ ಭಂಗಿ ಜನರ ಬಗೆಗಿನ ವಿವರಗಳು ಅವರ ಪಸ್ತಕದ ರಸಘಟ್ಟಿಯಂತಹ ಭಾಗವಾಗಿದೆ. ಮಾನವೀಯತೆಯಲ್ಲಿ ಅದ್ದಿ ತೆಗೆದಂತಿರುವ ಆ ಅಂಶಗಳು ಪಾಠಕ್ ಎನ್ನುವ ಈ ವ್ಯಕ್ತಿಯ ಹೃದಯದಲ್ಲಿ ಅಡಗಿದ ಪ್ರೀತಿಯ ಸಾಗರವನ್ನು ಪರಿಚಯಿಸುತ್ತವೆ; ವಿಮೋಚಿತರ ಹಿಂದಿನ ಮತ್ತು ಇಂದಿನ ಚಿತ್ರಗಳು ಕೂಡ ಪುಸ್ತಕದಲ್ಲಿವೆ. ‘ಅದು ಕೊಳಕು ಕೆಲಸ’ ಎಂಬುದು ಅವರ ಉದ್ಗಾರ. ನೇಮಕಾತಿಯಲ್ಲಿ ಪರುಷರ ಹೆಸರಿದ್ದರೂ ಕೂಡ ಅವರು ಬೇರೆ ಕೆಲಸ ಮಾಡಿದರೆ ಮಲ ಹೊರುವ ಕೆಲಸ ಬಹುತೇಕ ಪರ್ತಿಯಾಗಿ ಹೆಂಗಸರ ಮೇಲಿತ್ತು. ಮಲಸಾಗಿಸುವ ಕೆಲಸ ಮಾಡುವವರನ್ನು ಯಾರೂ ಮುಟ್ಟಿಸಿಕೊಳ್ಳುವುದಿಲ್ಲ; ದಲಿತರಲ್ಲೇ ಇತರರು ಕೂಡ ಅವರನ್ನು ಕೀಳಾಗಿ ಕಾಣುತ್ತಾರೆ.
ವಿಮೋಚಿತರಿಗೆ ಗುಡಿಸುವುದು, ರಸ್ತೆಗಳನ್ನು ಸ್ವಚ್ಛಗೊಳಿಸುವುದು, ಕಸಸಾಗಾಟ ಮುಂತಾದ ಕೆಲಸಗಳನ್ನು ನಗರಸಭೆಗಳು ನೀಡಿವೆ. ಸುಲಭ್ ಶೌಚಾಲಯಗಳ ನಿರ್ಮಾಣ ಚುರುಕಾದ ೧೯೭೦ರ ಬಳಿಕವಷ್ಟೇ ಬಿಹಾರದಲ್ಲಿ ಭಂಗಿಮುಕ್ತಿ ವೇಗವನ್ನು ಪಡೆದುಕೊಂಡಿತು. ಅವರ ವಿಮೋಚನೆಗೆ ಸುಲಭ್ನಿಂದ ಸ್ಕೀಮ್ ಕೂಡ ತಯಾರಾಗಿತ್ತು. ಬಿಹಾರವಲ್ಲದೆ ಬೇರೆ ರಾಜ್ಯಗಳಲ್ಲೂ ಸಂಸ್ಥೆ ಪ್ರಯತ್ನಿಸಿತು. ವಿಮೋಚನೆಯ ಫಲವಾಗಿ ಅವರಿಗೆ ನಿರುದ್ಯೋಗ ಬಾರದಂತೆ ಪಾಠಕ್ ಎಚ್ಚರವಹಿಸಿದ್ದಾರೆ.
ವಿಮೋಚನೆಯ ಬಳಿಕ ದೇವಸ್ಥಾನಗಳಿಗೆ ಹೋಗುವುದು, ಮನೆಯ ಸಮಾರಂಭಗಳಿಗೆ ಬ್ರ್ರಾಹ್ಮಣ ಪರೋಹಿತರನ್ನು ಕರೆಯುವುದು, ಮನೆಯ ಹಬ್ಬಕ್ಕೆ ಬೇರೆ ಸಮಾಜದವರನ್ನು ಕರೆಯುವುದು, ಕೆರೆ-ಬಾವಿಗಳಲ್ಲಿ ಅವಕಾಶ, ಹೊಟೇಲ್ಗಳಿಗೆ ಪ್ರವೇಶ ಮುಂತಾಗಿ ಭಂಗಿಗಳ ಸ್ಥಿತಿಯಲ್ಲಿ ತುಂಬ ಸುಧಾರಿಸಿದೆ ಎನ್ನಲಾಗಿದೆ. ಕುತೂಹಲದ ಸಂಗತಿಯೆಂದರೆ, ವಿಮೋಚಿತರು ಈಗಲೂ ಭಂಗಿ ಕೆಲಸ ಮಾಡುವವರ ಸಂಬಂಧವನ್ನೇ ಕಡಮೆ ಮಾಡಿದ್ದಾರಂತೆ!
ನರೇಂದ್ರ ಮೋದಿ ಅವರು ದೇಶದ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಐದು ವರ್ಷಗಳ ಗುರಿಯನ್ನು (೨೦೧೯) ಹಾಕಿಕೊಂಡಿದ್ದಾರೆ. ಅದು ಪಾಠಕ್ ಅವರ ಸುಲಭ್ ಶೌಚಾಲಯಕ್ಕೆ ಐದು ದಶಕ ತುಂಬುವ ವರ್ಷವೂ ಹೌದು. ದೇಶದಲ್ಲೀಗ ಮಲ ಹೊರುವ ಪದ್ಧತಿ ಬಹುತೇಕ ಇಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಕೂಡ ಅಂತಹ ವಿದ್ಯಮಾನಗಳು ಅಪರೂಪಕ್ಕೊಮ್ಮೆ ವರದಿಯಾಗುವುದನ್ನು ಅಲ್ಲಗಳೆಯುವಂತಿಲ್ಲ. ಬಯಲು ಶೌಚಕ್ಕೆ ಪರ್ತಿ ವಿದಾಯ ಹೇಳುವ ಘನಕಾರ್ಯವೂ ದೇಶದ ಮುಂದಿದೆ. ಇಬ್ಬರು ಮಹಾನ್ ನಾಯಕರಿಗೆ ಯಶಸ್ಸು ಕೋರೋಣ; ಅಲ್ಲವೆ?
Comments are closed.