ಭಾರತಿಯ ಸಿರಿಕಂದ ಶ್ರೀವಿವೇಕಾನಂದ
ಧಾರುಣಿಗೆ ಮತ್ತೊಮ್ಮೆ ನೀವಿಳಿದು ಬರೆ ಚೆಂದ ||ಪ||
ನರರೆಲ್ಲರೊಳಿತಿಗಾಗಿಯೆ ಬಾಳ್ವ ಪಥ ಬೆಸಸೆ
ದುರಿತ ಮಾರ್ಗವನುಳಿದು ಸರಿಮಾರ್ಗದೊಳು ನಡೆಸೆ
ಧರೆಯ ಸೊಗಕಾಗನವರತ ದುಡಿಯಲಿಕೆ ಕಲಿಸೆ
ಪರಮಾರ್ಥ ಗಳಿಸಲಿಕೆ ಸನ್ಮಾರ್ಗವನು ತಿಳಿಸೆ ||೧||
ವಿಜ್ಞಾನದಲಿ ಮಾತ್ರ ಮುಳುಗಿಹರನೆಚ್ಚರಿಸೆ
ತಜ್ಞರಿಲ್ಲೆಮಗಿಂತಲೆಂಬವರ ಮದವಿಳಿಸೆ
ಅಜ್ಞಾನದಲಿ ಬಿದ್ದು ಕೊಳೆವವರ ಸಂಸ್ಕರಿಸೆ
ಸುಜ್ಞಾನವಿತ್ತವರ ಬಹುಬೇಗನುದ್ಧರಿಸೆ ||೨||
ನಾನು ನನ್ನದುಯೆಂದು ಬೀಗುವರ ಹದಗೊಳಿಸೆ
ದಾನವರವೋಲ್ನಡೆವ ದುಷ್ಟತನವನು ಬಿಡಿಸೆ
ಮಾನವರು ಮೊದಲಾಗಿರೆಂದವರ ಸರಿಪಡಿಸೆ
ಸಾನುರಾಗದಿ ಬಾಳ್ವ ಸದ್ಬುದ್ಧಿಯನು ಹರಸೆ ||೩||
ನಾಶಗೊಳಿಪಂಥ ಜಾತಿಮತಭೇದವನಳಿಸೆ
ಲೇಶನೀಯ್ವಂಥುಪನಿಷನ್ಮಾರ್ಗವನ್ನುಳಿಸೆ
ಈಶನೊಡವೆರೆವ ನಿಜಪಥದತ್ತ ಮನ ಬೆಳೆಸೆ
ದೇಶಭಕ್ತಿಯ ತುಂಬುತದರೇಳ್ಗೆಯನ್ನೆಳೆಸೆ ||೪||
ಶಿವ ನಮ್ಮ ಬೆನ್ನಹಿಂದಿರಲು ಭಯವೇಕೆನಿಸೆ
ಭುವನದಿ ಸಮರಿರದೋಲ್ಬಾಳಲ್ಕನುಗ್ರಹಿಸೆ
ಯುವಶಕ್ತಿಯಂ ಬಡಿದು ಮೇಲೇಳಿಸನುಗೊಳಿಸೆ
ತವೆದುಡಿದು ದೇಶಕೀರ್ತಿಧ್ವಜವ ಮೇಲ್ನಿಲಿಸೆ ||೫||
— ಕುಮಾರನಿಜಗುಣ