ಸರ್ಜನಶೀಲ ಹಾಗೂ ಪ್ರತಿಭಾವಂತ ಸಂಗೀತ ದಿಗ್ದರ್ಶಕರ ಕೊರತೆ ನಮ್ಮ ಚಿತ್ರರಂಗದಲ್ಲಿ ಇರಲಿಲ್ಲ. ಇವರಲ್ಲಿ ಹೆಚ್ಚಿನವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಗುರು-ಶಿಷ್ಯ ಪರಂಪರೆಯಲ್ಲಿ ಪಡೆದವರಾಗಿದ್ದರು. ಸಂಗೀತದ ಆಳ ಅಭ್ಯಾಸವಿದ್ದ ಇವರಿಗೆ ಶಾಸ್ತ್ರೀಯ ಸಂಗೀತದ ಮಾಧುರ್ಯವನ್ನು ಜನಸಾಮಾನ್ಯರಿಗೆ ಸಿನೆಮಾ ಮಾಧ್ಯಮದ ಮೂಲಕ ತಲಪಿಸುವ ತುಡಿತ ಇತ್ತು. ಕೆಲವರು ಹುಚ್ಚು ಧೈರ್ಯದಿಂದ ಪ್ರಯೋಗಮಾಡಿ ಯಶಸ್ವಿ ಕೂಡ ಆದರು.
ಭಾರತ ವಿಶ್ವದ ಅತಿದೊಡ್ಡ ಚಲನಚಿತ್ರತಯಾರಕ ದೇಶ. ಪ್ರತಿವರ್ಷ ಒಟ್ಟಾರೆಯಾಗಿ ತಯಾರಾಗುತ್ತಿರುವ ೬೦೦ ಚಲನಚಿತ್ರಗಳ ಪೈಕಿ ಸುಮಾರು ೩೦೦ರಷ್ಟು ಚಲನಚಿತ್ರಗಳು ತೆಲುಗು ಮತ್ತು ಹಿಂದೀ ಭಾಷೆಗಳಲ್ಲಿದ್ದರೆ, ಇನ್ನುಳಿದವು ಇತರ ಭಾಷೆಗಳಲ್ಲಿವೆ. ಆದಾಗ್ಯೂ, ಭಾರತದಲ್ಲಿ ಚಲನಚಿತ್ರಗಳಿಂದ ಉತ್ಪತ್ತಿಯಾಗುತ್ತಿರುವ ಒಟ್ಟಾರೆ ಆದಾಯದ ಪೈಕಿ ಸುಮಾರು ಅರ್ಧದಷ್ಟು ಭಾಗವು ಹಿಂದೀ ಚಲನಚಿತ್ರಗಳಿಂದ ಬರುತ್ತದೆ ಎಂದರೆ ಹಿಂದೀ ಚಲನಚಿತ್ರಗಳ ಪಾತ್ರ ಎಷ್ಟು ದೊಡ್ಡದಿದೆ ಎಂದು ಊಹಿಸಿಕೊಳ್ಳಬಹುದು.
ಭಾರತೀಯ ಚಲನಚಿತ್ರ ಉದ್ದಿಮೆ ಶತಸಂವತ್ಸರಗಳನ್ನು ದಾಟಿ ದಾಪುಗಾಲು ಹಾಕುತ್ತಾ ಮುನ್ನಡೆದಿದೆ. ಈ ಅವಧಿಯ ಪ್ರಯಾಣದಲ್ಲಿ ಇದು ಅನೇಕ ರೀತಿಯ ಪ್ರಕ್ರಿಯೆಗಳಿಗೆ ಒಳಗಾಗಿದೆ. ಉದ್ದೇಶ ಹಾಗೂ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನದಲ್ಲಿ ಹಾಲಿವುಡ್ನ ಕೂಡ ಸ್ಪರ್ಧೆಗೆ ಇಳಿದಿದೆ. ವರ್ಷಕ್ಕೆ ಸಾವಿರಾರು ಕೋಟಿ ಲಾಭ ಮಾಡುತ್ತಾ ಹೊರದೇಶದ ಮಾರುಕಟ್ಟೆಗೂ ಲಗ್ಗೆಹಾಕಿದೆ. ವಿದೇಶೀ ಕಂಪೆನಿಗಳವರು ಕೂಡ ಬಂಡವಾಳ ಹಾಕಿ ಪಾಲುದಾರರಾಗುತ್ತಿದ್ದಾರೆ ಎಂದರೆ ಅದರ ವಿರಾಟ್ ಸ್ವರೂಪದ ಅರಿವು ಉಂಟಾಗುತ್ತದೆ.
ನಮ್ಮ ದೇಶದಲ್ಲಿ ಚಲನಚಿತ್ರಗಳು ಯಶಸ್ವಿಯಾಗಲು ಮುಖ್ಯಕಾರಣ ಸಂಗೀತ. ಹಾಡುಗಳಿಲ್ಲದ ಚಲನಚಿತ್ರಗಳ ಕಲ್ಪನೆ ಕೂಡ ನಾವು ಮಾಡಲಾರೆವು. ಪ್ರತಿ ಐದು ನಿಮಿಷಕ್ಕೆ ರೇಡಿಯೋ, ಟಿ.ವಿ.ಯಲ್ಲಿ ಲತಾ, ರಫಿ ಮೊದಲಾದವರ ಸುಮಧುರ ಸಂಗೀತ ನಮ್ಮನ್ನು ರಂಜಿಸುತ್ತಾ ಇರುತ್ತದೆ. ಕಾಲೇಜು ಯುವಕರಿಗೆ ಸಿನೆಮಾ ಹಾಡುಗಳದ್ದೇ ಧ್ಯಾನ. ಕಿವಿಯಲ್ಲಿ ಇಯರ್ ಫೋನು ಸಿಕ್ಕಿಸಿ ಜಗದ ಪರಿವೆ ಇಲ್ಲದೆ ಬಿಂದಾಸ್ ಆಗಿ ಅಡ್ಡಾಡುತ್ತಿರುವ ದೃಶ್ಯ ನಮ್ಮಲ್ಲಿ ಸಾಮಾನ್ಯ. ಲಾಲಿಹಾಡು ಕೇಳುತ್ತಲೇ ನಿದ್ರೆಗೆ ಜಾರುವ ಮಗು, ಗಾನ ಕೇಳುತ್ತ ಕಾರ್ಮಿಕ ತನ್ನ ಕೆಲಸದಲ್ಲಿ ಮಗ್ನನಾಗುತ್ತಿದ್ದರೆ, ನೇಗಿಲಯೋಗಿ ತನ್ನ ಚಕ್ಕಡಿಗೆ ರೇಡಿಯೋ ಅಥವಾ ಟೇಪ್ರೆಕಾರ್ಡರನ್ನು ತೂಗುಹಾಕಿ ಹಾಡುಕೇಳುತ್ತ ತನ್ನ ಕಾಯಕದಲ್ಲಿ ತಲ್ಲೀನನಾಗಿರುತ್ತಾನೆ.
‘ಸಂಗೀತ ಚಿತ್ತವಿಚಲಿತನನ್ನಾಗಿ ಮಾಡುತ್ತದೆ’ ಎಂಬ ರನ್ನನ ಮಾತು ಅಕ್ಷರಶಃ ಸತ್ಯ. ಅದು ಆನಂದವನ್ನು ದ್ವಿಗುಣ ಮಾಡುವ ಮೋಹಕ ಕಲೆ. ಅರಸಿಕನನ್ನು ಸೂಜಿಗಲ್ಲಿನಂತೆ ಆಕರ್ಷಿಸುವಂತಹದ್ದು: ನೌಷಾದರು ಹೇಳುವಂತೆ `ಮನಕ್ಕೆ ಮುಟ್ಟುವಂತಹದ್ದು, ಹಾಗೂ ಹೃದಯಕ್ಕೆ ತಟ್ಟುವಂತಹದ್ದು’. ಭಾವನೆಗಳ ತಂತಿಯನ್ನು ಮೀಟಿ, ಉದ್ದೀಪಿಸಿ, ಸಂಚಿತ ಆನಂದದಲ್ಲಿ ಮಿಳಿತವಾಗುವ ಸಾಮರ್ಥ್ಯ ಸಂಗೀತದಲ್ಲಿ ಉಂಟು. ಭಾರತೀಯ ಸಂಗೀತಕ್ಕೆ ಅನನ್ಯ ಪರಂಪರೆ ಇದೆ. ಅದರ ಆಳ ಹಾಗೂ ಸಾಮರ್ಥ್ಯವನ್ನು ಕಂಡುಕೊಂಡ ಅಮೀರ ಖುಸ್ರೋ ರಾಮನಾಯಕನ ಸಹಾಯದಿಂದ ಖಯಾಲ ಎಂಬ ಪ್ರಕಾರವನ್ನು ಆವಿಷ್ಕರಿಸಿದ. ಮುಂದೆ ಕಾಲಕ್ರಮೇಣ ಠುಮರಿ, ಟಪ್ಪಾ, ಕವ್ವಾಲಿಗಳು ಹುಟ್ಟಿಕೊಂಡವು. ಆದರೆ ಈ ಎಲ್ಲ ಪ್ರಕಾರಗಳು ಮೇಧಾವಿಗಳಿಗೆ ಹಾಗೂ ಪ್ರಾಜ್ಞರಿಗೆ ಸೀಮಿತವಾದವು. ಶಾಸ್ತ್ರೀಯಸಂಗೀತಕ್ಕೆ ನಿಯಮಿತವಾದ ಚೌಕಟ್ಟು ಹಾಗೂ ಅದರದೇ ವ್ಯಾಕರಣ ಇದ್ದುದರಿಂದ ಜನಸಾಮಾನ್ಯರು ಅದರಿಂದ ಪರಾವೃತ್ತರಾದರು; ಸರಳವಾದ ಲೋಕಸಂಗೀತ, ಭಜನೆಗಳು ಹಾಗೂ ಭಾವಗೀತೆಗಳ ಕಡೆಗೆ ಹೆಚ್ಚು ಆಕರ್ಷಿತರಾದರು. ಜನಸಮಾನ್ಯರ ನಾಡಿಮಿಡಿತ ಬಲ್ಲ ಸಂಗೀತ ದಿಗ್ದರ್ಶಕರು ಜನ ಸ್ಪಂದಿಸುವಂತೆ ಹಾಗೂ ಮೆಚ್ಚುವಂತೆ ಹಾಡುಗಳನ್ನು ಸಂಯೋಜಿಸಿ ಚಿತ್ರದ ಯಶಸ್ಸಿಗೆ ಕಾರಣರಾದರು. ಸರ್ಜನಶೀಲ ಹಾಗೂ ಪ್ರತಿಭಾವಂತ ಸಂಗೀತ ದಿಗ್ದರ್ಶಕರ ಕೊರತೆ ನಮ್ಮ ಚಿತ್ರರಂಗದಲ್ಲಿ ಇರಲಿಲ್ಲ. ಇವರಲ್ಲಿ ಹೆಚ್ಚಿನವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಗುರು-ಶಿಷ್ಯ ಪರಂಪರೆಯಲ್ಲಿ ಕಲಿತವರಾಗಿದ್ದರು. ಸಂಗೀತದ ಆಳ ಅಭ್ಯಾಸವಿದ್ದ ಇವರಿಗೆ ಶಾಸ್ತ್ರೀಯ ಸಂಗೀತದ ಮಾಧುರ್ಯವನ್ನು ಜನಸಾಮಾನ್ಯರಿಗೆ ಸಿನೆಮಾ ಮಾಧ್ಯಮದ ಮೂಲಕ ತಲಪಿಸುವ ತುಡಿತ ಇತ್ತು. ಕೆಲವರು ಹುಚ್ಚು ಧೈರ್ಯದಿಂದ ಪ್ರಯೋಗಮಾಡಿ ಯಶಸ್ವಿ ಕೂಡ ಆದರು.
ಶಾಸ್ತ್ರೀಯ ಸಂಗೀತದ ಶ್ರೀಗಣೇಶ
ನಿಜವಾದ ಅರ್ಥದಲ್ಲಿ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಹಾಡುಗಳು ಪ್ರಾರಂಭವಾದದ್ದು ೧೯೪೩ರಲ್ಲಿ. ಶಂಕರವ್ಯಾಸರ ದಿಗ್ದರ್ಶನದಲ್ಲಿ ಸರಸ್ವತಿ ರಾಣೆಯವರು ‘ರಾಮರಾಜ್ಯ’ ಸಿನೆಮಾದಲ್ಲಿ ‘ಬೀನಾ ಮಧುರ ಮಧುರ’ ಎಂಬ ಭೀಮಪಲಾಸಿ ರಾಗ ಆಧಾರಿತ ಹಾಡಿನಿಂದ ಶ್ರೀಗಣೇಶ ಮಾಡಿದರು. ನಮ್ಮ ಸಂಗೀತ ದಿಗ್ದರ್ಶಕರಿಗೆ ಭೈರವಿ ಹಾಗು ಪೀಲು ರಾಗಗಳು ಬಹಳ ಪ್ರಿಯವಾದವು. ಯಮನ ಕಲ್ಯಾಣ, ದರ್ಬಾರಿ ಕಾನಡಾ, ಭೈರವಿ, ಪಹಾಡಿ, ಭೈರವ್ ರಾಗಗಳನ್ನು ಹಾಗೂ ಬಾಗೇಶ್ರಿ, ಭೀಮಪಲಾಸಿ, ಚಾರುಕೇಶಿ ಮತ್ತು ಶಿವರಂಜನಿ ರಾಗಗಳನ್ನು ಕೂಡ ಗುರುತಿಸಬಹುದು. ಕೆಲವು ಸಿನೆಮಾಗಳಲ್ಲಿ ಜಯಜಯವಂತಿ, ಕಲಾವತಿ, ದೇಸ್ ಹಾಗೂ ಖಮಾಜ ರಾಗಗಳ ಉಪಯೋಗವಾಗಿದೆ. ಭಿನ್ನಷಡ್ಜ, ದೇವಗಾಂಧಾರ, ಜನಸಮ್ಮೋಹಿನಿ ಇಂತಹ ಅಪರೂಪದ ರಾಗಗಳನ್ನು ಕೇವಲ ಒಂದೆರಡು ಹಾಡುಗಳಲ್ಲಿ ಮಾತ್ರ ಕಾಣಬಹುದು. ಶಾಸ್ತ್ರೀಯ ಸಂಗೀತದ ಮೇಲೆ ಆಧಾರಗೊಂಡ ಹಾಡುಗಳಲ್ಲಿ ಲತಾ ಮಂಗೇಶ್ಕರ್ ಅವರದ್ದೇ ಪಾರಮ್ಯ. ಆ ಕಾಲಕ್ಕೆ ಸಂಪೂರ್ಣ ಚಿತ್ರರಂಗದ ಮೇಲೆ ಅವರ ಪ್ರಭಾವವಿತ್ತು. ಅವರು ಹಾಡಿದ ಕೆಲವೊಂದು ಪ್ರಸಿದ್ಧ ಗೀತೆಗಳು ಹೀಗಿವೆ –
ಜಾ ಮೈ ತೂಸೇ ನಾಹಿ ಬೋಲು (ರಾಗ: ಅಡಾನಾ, ಚಿತ್ರ: ಸೌತೇಲಾ ಭಾಯಿ)
ನಾ ಬೋಲೇ ನಾ (ರಾ: ಬಾಗೇಶ್ವರಿ, ಚಿ: ಆಝಾದ್)
ತೇರೇ ಸುರ್ ಮೇರೇ ಗೀತ್ (ರಾ: ಬಿಹಾಗ್, ಚಿ: ಗೂಂಜ ಉಠೀ ಶಹನಾಯಿ)
ಮನಮೋಹನಾ ಬಡೆ ರhಠೆ (ರಾ: ಜಯಜಯವಂತಿ, ಚಿ: ಸೀಮಾ)
ಜೋ ತುಮ್ ಛೋಡೋ (ರಾ: ಭೈರವಿ, ಚಿ: ಝನಕ್ ಝನಕ್ ಪಾಯಲ್ ಬಾಜೇ)
ಓ ಸಜನಾ (ರಾ: ಖಮಾಜ, ಚಿ: ಪರಖ್)
ಲಾಗೇನಾ ಮೋರಾ ಜಿಯಾ (ರಾ: ಶಿವರಂಜನಿ, ಚಿ: ಘುಂಘಟ್)
ಪಿಯಾ ತೋಸೇ ನೈನಾ (ರಾ: ತಿಲಂಗ್, ಚಿ: ಗೈಡ್)
ಮೋಹೇ ಭೂಲಗಯೇ ಸಾವರಿಯಾ (ರಾ: ಕಾಲಿಂಗಡಾ)
ರಸಿಕ ಬಲಮಾ (ರಾ: ಯಮನ್ಕಲ್ಯಾಣ್, ಚಿ: ಚೋರೀ)
ಮೇಘಾ ಛಾಯೇ (ರಾ: ಪಟದೀಪ, ಚಿ: ಶರ್ಮೀಲೀ)
ಓ ಬಸಂತಿ ಪವನ ಪಾಗಲ (ರಾ: ಬಸಂತ್ ಮುಖಾರಿ, ಚಿ: ಜಿಸ್ ದೇಶ್ ಮೇ ಗಂಗಾ ಬಹತೀ ಹೈ), ಅನಾರ್ಕಲಿ ಸಿನೇಮಾದ `ಯೇ ಜಿಂದಗೀ ಉಸೀಕೇ ಹೈ’ ಈ ಹಾಡು ಅಜರಾಮರ. ರಾಗ ಭೀಮಪಲಾಸಿಯ ಮೇಲೆ ಆಧರಿಸಿದ ಈ ಹಾಡನ್ನು ಸಂಯೋಜಿಸಿದವರು ಚಿತಲಕರ ರಾಮಚಂದ್ರ. ಬಹುಶ್ರುತರಾದ ರಾಮಚಂದ್ರರು ಪ್ರಸಿದ್ಧ ಗಾಯಕರಾದ ಪಟವರ್ಧನ ಬುವಾ ಅವರ ಶಿಷ್ಯರು. ಶಿಸ್ತುಬದ್ಧವಾದ ಜೀವನ, ಸಂಗೀತದ ಮೇಲೆ ಅಪಾರ ಶ್ರದ್ಧೆ; ಗುಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಸಂಗೀತದ ಬಗ್ಗೆ ಚೂರುಪಾರು ತಿಳಿದಿದ್ದ ರಾಜಕಪೂರ್ ತನ್ನ ಮಿತ್ರ ಮುಖೇಶನ ಬಗ್ಗೆ ಶಿಫಾರಸು ಮಾಡಿದಾಗ, `ವೋ ಬೇಸುರ್ ಮೇ ಗಾತಾ ಹೈ’ (ಆತ ಅಪಶ್ರುತಿಯಲ್ಲಿ ಹಾಡುತ್ತಾನೆ) ಎಂದು ಮುಲಾಜು ಇಲ್ಲದೆ ರೆಕಾರ್ಡಿಂಗ್ ರೂಮಿನಿಂದ ಹೊರಗೆ ಕಳಿಸಿದ ಮಹಾನುಭಾವ.
ಮನ್ನಾಡೇ ಅವರದ್ದು ಶಾಸ್ತ್ರೀಯ ಸಂಗೀತಕ್ಕಾಗಿ ಹೇಳಿ ಮಾಡಿಸಿದ ಶಾರೀರ. ಚಿಕ್ಕಪ್ಪನಿಂದ ಸಂಗೀತದ ಶಿಕ್ಷಣ ಪ್ರಾಪ್ತಿಯಾಗಿತ್ತು. ಹೀಗಾಗಿ ಸಲೀಸಾಗಿ ಆಲಾಪ ಹಾಗೂ ತಾನಗಳನ್ನು ಮಾಡುತ್ತಿದ್ದರು. ‘ಪೂಛೋ ನ ಕೈಸೇ ರೈನ ಬಿತಾಯಿ’ ರಾಗ ಆಹಿರಭೈರವ್ ಮೇಲೆ ಆಧಾರಿತ ಈ ಹಾಡು, ಎಂತಹವರ ಹೃದಯವನ್ನೂ ಆರ್ದ್ರ ಮಾಡುತ್ತದೆ. ಅದರಂತೆ ಪ್ರೇಮಗೀತೆ (ಯೇ ರಾತ ಭೀಗೀ ಭೀಗೀ) ಅಥವಾ ಹಾಸ್ಯಗೀತೆ ‘ಏಕ್ ಚತುರ ನಾರಿ ಬಡಿ ಹೋಶಿಯಾರಿ’ (ಪಡೋಸನ್), ‘ಲಪಕ ಝಪಕ’ (ಬೂಟ ಪಾಲಿಶ)ಗಳನ್ನು ಹಾಡುವುದರಲ್ಲಿ ತಮ್ಮ ಛಾಪುಗಳನ್ನು ತೋರಿಸಿದವರು; ಅವರ ಕೆಲವೊಂದು ಸ್ಮರಣೀಯ ಗೀತೆಗಳು ಹೀಗಿವೆ –
ಲಪಕ ಝಪಕ (ರಾ: ಅಡಾನಾ, ಚಿ: ಬೂಟ್ ಪಾಲಿಶ್)
ಸುರ್ ನಾ ಸಜಿ (ರಾ: ಬಸಂತ್ ಬಹಾರ್, ಚಿ: ಬಸಂತ್ ಬಹಾರ್)
ಫುಲ ಗೆಂದುವಾ ನ ಮಾರೋ (ರಾ: ಭೈರವಿ, ಚಿ: ದೂಜಕಾ ಚಾಂದ)
ಜೋಗಿ ಆಯಾ (ರಾ: ಜೋಗಿಯಾ, ಚಿ: ಪೊಸ್ವ ಬಾಗ ನಂ–೯೯೯)
ಅಲಬೇಲ ನಾರ (ರಾ: ಮಾರವಾ, ಚಿ: ಮೈ ಶಾದೀ ಕರನೇ ಚಲಾ)
ಝನಕ್ ಪಾಯಲ್ (ರಾ: ದರ್ಬಾರೀ ಕಾನಡಾ, ಚಿ: ಬೈಜು ಬಾವರಾ)
ಲಗಾ ಚುನರಿಮೇ ದಾಗ್ (ರಾ: ಭೈರವಿ, ಚಿ: ದಿಲಹೀ ತೋ ಹೈ). ಈ ಕೊನೆಯ ಹಾಡಿನಲ್ಲಿರುವ ಎರಡು ನಿಮಿಷದ ತರಾನಾದ ಸೊಗಸನ್ನು ಕೇಳಿಯೇ ಆನಂದಿಸಬೇಕು.
ಮಹಮ್ಮದ್ ರಫಿಯವರ ಧ್ವನಿ ಶಾಸ್ತ್ರೀಯಸಂಗೀತಕ್ಕೆ ಅಷ್ಟಾಗಿ ಹೊಂದುವಂತಹದ್ದಲ್ಲ. ಪ್ರೇಮಗೀತೆಗಳು ಭಾವಗೀತೆಗಳಿಗೆ ಹೆಚ್ಚಾಗಿ ಒಗ್ಗುವಂತಹದು. ಶಾಸ್ತ್ರೀಯಸಂಗೀತದ ಮೇಲೆ ಆಧರಿಸಿದ ಅವರ ಹಾಡುಗಳು ಕೆಲವೊಮ್ಮೆ ಕೃತಕ ಹಾಗೂ ನಾಟಕೀಯವೆನಿಸುತ್ತದೆ. ಕೋಹಿನೂರ್ ಚಿತ್ರದಲ್ಲಿಯ ರಾಗ ಹಮೀರ್ ಮೇಲೆ ಆಧಾರಿತ, ‘ಮಧುಬನ ಮೇ ರಾಧಿ ಕಾ’ ಈ ಹಾಡು ದಿಲೀಪಕುಮಾರನ ತುಂಟ ಅಭಿನಯ, ಮೊಂಡು ಮೂಗಿ ಕುಂಕುಮಳ ನರ್ತನ ಹಾಗೂ ಅನನ್ಯವಾದ ಸಿತಾರಿನ ಗುಂಜಾರವದಿಂದ ಮೆಚ್ಚುಗೆ ಪಡೆಯಿತೇ ವಿನಾ ರಫಿಯವರ ಗಾನ ಕೌಶಲದಿಂದೆನ್ನಲಾಗದು. ಈ ಹಾಡಿನಲ್ಲಿ ಸುಮಾರು ಮೂರು ನಿಮಿಷದ ಸಿತಾರ್ನ ಝಲಕ್ ಇದೆ. ಅದು ಅಬ್ದುಲ್ ಹಲೀಮ ಝಾಫರಖಾನರ ಕೈಚಳಕ ಎಂದು ಕೇಳಿದ್ದೇನೆ. ಸಿನೆಮಾದಲ್ಲಿಯ ‘ತೂ ಹೈ ಮೇರಾ ಪ್ರೇಮ್ ದೇವತಾ’ (ರಾ: ಲಲಿತ ತೋಡಿ) ಗೀತೆಯನ್ನು ಮನ್ನಾಡೇ ಹಾಗೂ ರಫಿ ಹಾಡಿದ್ದಾರೆ. ತುಲನಾತ್ಮಕವಾಗಿ ಪರಿಶೀಲಿಸಿದರೆ ರಫಿಯವರ ಆಳ ಪ್ರಕಟಗೊಳ್ಳುತ್ತದೆ. ಬೈಜು ಬಾವರಾದಲ್ಲಿನ ‘ಮನ ತಡಪತ ಹರಿ ದರಶನ'(ರಾ: ಮಾಲಕಂಸ)ದ ವೈಶಿಷ್ಟ್ಯವೆಂದರೆ ಈ ಹಾಡು ಹಾಡಿದ್ದವರು ಅದನ್ನು ಬರೆದ ಕವಿಗಳು. ರಫಿ ಹಾಡಿದ ‘ಸೂರಜ್’ ಚಲನಚಿತ್ರದಲ್ಲಿಯ ‘ಬಹಾರೋ ಫೂಲ್ ಬರಸಾವೋ’ (ರಾಗ: ಶಿವರಂಜನಿ) ಮಾತ್ರ ಅದ್ವಿತೀಯವಾದದ್ದು.
ಬಹುಮುಖ ಪ್ರತಿಭೆಗಳು
ಆಶಾ ಭೋಂಸಲೆ ಲಘು ಶಾಸ್ತ್ರೀಯಸಂಗೀತದಲ್ಲಿ ಎತ್ತಿದಕೈ. ‘ಫಿರ ವಹೀ ದಿಲ್ ಲಾಯಾ ಹ್ಹೂಂ’ ಚಿತ್ರದಲ್ಲಿಯ `ದೇಖೋ ಬಿಜಲೀ ಡೋಲೀ ಬಿನ ಬಾದಲಕೇ’ (ರಾಗ: ಭೈರವ್ಬಹಾರ್) ಹಾಡನ್ನು ಮರೆಯಲಾದೀತೆ? ಆಶಾಳ ಧ್ವನಿ ಎಲ್ಲ ಪ್ರಕಾರದ ಹಾಡುಗಳಿಗೆ ಹೊಂದುತ್ತಿತ್ತು. ಆಕೆಯದು ಬಹುಮುಖ ಪ್ರತಿಭೆ. ಆಕೆ ಲತಾಳಿಗೆ ಚೆನ್ನಾಗಿ ಸ್ಪರ್ಧೆ ನೀಡಿದ್ದಳು. ಲತಾಳಷ್ಟೇ ಪ್ರತಿಭೆಯುಳ್ಳವರು ಸುಮನ್ ಕಲ್ಯಾಣಪುರ್ ಹಾಗೂ ವಾಣಿ ಜಯರಾಮ್. ಸುಮನ್ ಕಲ್ಯಾಣಪೂರ್ ಹಾಡಿದ –
ಮನಮೋಹನಾ (ರಾ: ಅಡಾನಾ, ಚಿ: ಕೈಸೆ ಕಹೂ)
ಆಖಿಯಾ ತರಸತ (ರಾ: ಮಲ್ಹಾರ, ಚಿ: ಬೂಂದ ಬನಗಯೀ ಮೋತೀ)
ಗರಜತ ಬರಸತ (ರಾಗ: ಚಿ: ಬರಸಾತ್ ಕೀ ರಾತ) ಈ ಹಾಡುಗಳನ್ನು ಮರೆಯಲು ಸಾಧ್ಯವಿಲ್ಲ.
ಅದರಂತೆ ವಾಣಿ ಜಯರಾಮ್ ಹಾಡಿದ ‘ಮೀರಾ’ ಚಿತ್ರದ ‘ಶ್ಯಾಮ ಮೋರಿ’ (ರಾಗ: ಪೂರ್ವಿ) ಮತ್ತು ‘ಮೈ ತೋ ಪ್ರೇಮ ದಿವಾನಿ’ (ರಾಗ: ತೋಡಿ)ಗಳನ್ನು ಕೇಳಿಯೇ ಅನಂದಿಸಬೇಕು. ಮುಖೇಶ್ ಹಾಡಿದ ‘ರhಮತೀ ಚಲೀ ಹವಾ’ (ರಾಗ: ಸೋಹನೀ) ರಸಿಕರ ಹೃದಯ ಗೆಲ್ಲುತ್ತದೆ.
ಹಿರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರು ಚಲನಚಿತ್ರದ ನಂಟು ಇಟ್ಟುಕೊಂಡಿದ್ದರು. ಬಡೇ ಗುಲಾಮ್ ಅಲೀ ಖಾನ್, ಮೊಘಲ್-ಎ-ಆಝಾಮ್ನಲ್ಲಿ ಹಾಡಿದ ರಾಗ ‘ರಾಗೇಶ್ವರಿ’ ಮೇಲೆ ಆಧಾರಿತ, ‘ಶುಭ ದಿನ ಆಯೋರೇ’ ಮರೆಯಲಾಗದು. ಅವರೇ ಹಾಡಿದ ‘ಪ್ರೇಮ ಜೋಗನ’ ಗೀತೆ (ರಾಗ ಸೋಹನೀ ಮೇಲೆ ಆಧರಿಸಿದ್ದು) ಪ್ರಣಯದ ಉನ್ನತಾವಸ್ಥೆಯನ್ನು ನಮ್ಮ ಮುಂದೆ ಬಿಡಿಬಿಡಿಸಿ ಇಡುತ್ತದೆ. ಭೀಮಸೇನ ಜೋಶಿಯವರ ಸಂಗೀತದ ಮಾಧುರ್ಯವನ್ನು ‘ಪಿಯಾಬಿನ’ (ರಾ: ಝಿಂಝೋಟಿ, ಚಿ: ಪತಿವ್ರತಾ), ‘ಅನಕಹೀ’ ಹಾಗೂ ‘ಬಸಂತ್ ಬಹಾರ್’ ಸಿನೆಮಾಗಳಲ್ಲಿ ಅನುಭವಿಸಬಹುದು. ವಿಚಿತ್ರವೆಂದರೆ ಬಸಂತ್ ಬಹಾರ್ ಸಿನೆಮಾದಲ್ಲಿ ಮನ್ನಾಡೇ, ಜೋಶಿಯವರನ್ನು ಸಂಗೀತ ಸ್ಪರ್ಧೆಯಲ್ಲಿ ಸೋಲಿಸುತ್ತಾರೆ! ಇದಕ್ಕಾಗಿ ಮನ್ನಾಡೇ ನೊಂದುಕೊಂಡಿದ್ದರಂತೆ. ಜೋಶಿಯವರು ಅವರಿಗೆ ಸಮಾಧಾನ ಹೇಳಿದ್ದರಂತೆ. ಹೀರಾಬಾಯಿ ಬಡೋದೆಕರ್, ಜಸರಾಜ್, ಪರ್ವೀನ್ ಸುಲ್ತಾನಾ, ಡಿ.ವ್ಹಿ. ಪಲುಸ್ಕರ್, ಲಕ್ಷ್ಮೀಶಂಕರ, ಪಂಡಿತ್ ನಗರಕರ್, ಆರತಿ ಅಂಕಲೀಕರ್, ರಶೀದಖಾನ್, ಬಿರ್ಜು ಮಹಾರಾಜ್, ಫಿರೋಜ ದಸ್ತೂರ, ಶೋಭಾ ಗುರ್ತೂ, ವಸಂತರಾವ ದೇಶಪಾಂಡೆ, ಫೈಯಾಜ್, ಸುಬ್ಬುಲಕ್ಷ್ಮಿ ಈ ಎಲ್ಲ ಸಂಗೀತಕ್ಷೇತ್ರದ ದಿಗ್ಗಜರು ಚಲನಚಿತ್ರರಂಗಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ.
ಉಪಾಂಗ ಸಮ್ಮಿಳನ
ಸಂಗೀತವೆಂದರೆ ಕೇವಲ ಗಾಯನವಲ್ಲ. ಅದಕ್ಕೆ ಇನ್ನೂ ಎರಡು ಉಪಾಂಗಗಳಿವೆ. ವಾದನ, ನೃತ್ಯ ಎಂಬ ಎರಡು ಉಪಾಂಗಗಳಿಲ್ಲದಿದ್ದರೆ ಸಂಗೀತ ಪರಿಪೂರ್ಣವಾಗುವುದಿಲ್ಲ. ‘ಗೀತಂ ವಾದ್ಯಂ ಚ ನೃತ್ಯಂ ಚ ತ್ರಯಂ ಸಂಗೀತಮುಚ್ಯತೇ’ ಎಂದು ಲಾಕ್ಷಣಿಕ ಉಕ್ತಿ ಇದೆ. ಗಾಯನಕ್ಕೆ ಆಧೀನವಾಗಿ ವಾದನ, ವಾದನಕ್ಕೆ ಆಧೀನವಾಗಿ ನೃತ್ಯ ಹೀಗೆ ಒಂದಕ್ಕೊಂದು ಪೂರಕವಾಗಿಯೂ, ಸ್ವತಂತ್ರವಾದ ರೂಪಗಳಾಗಿವೆ. ಸೋಹನಲಾಲ, ಕೃಷ್ಣ ಕುಮಾರ, ಚಿಮನ ಸೇಠ, ಲಛು ಮಹಾರಾಜ, ಗೋಪಿಕೃಷ್ಣ ಹಾಗೂ ಸಿತಾರಾ ದೇವಿ, ಇಂತಹ ಘಟಾನುಘಟಿ ನೃತ್ಯ ದಿಗ್ದರ್ಶಕರು ತಮ್ಮ ಘರಾಣೆಯ ಶುದ್ಧ ಪರಂಪರೆಯ ನೃತ್ಯವನ್ನು ಉಳಿಸಿ ಬೆಳೆಸಿ, ಭ್ರಷ್ಟಗೊಳಿಸದೆ ಸಿನೆಮಾ ಮಾಧ್ಯಮದ ಮೂಲಕ ಅದರ ಸೌಂದರ್ಯವನ್ನು ಸಾದರಪಡಿಸಿದರು. ಮಧುಬಾಲಾಳ ‘ಮೋಹೇ ಪನ ಘಟಪೇ ನೃತ್ಯ’ ಮಧ್ಯಲಯದಲ್ಲಿ ಚಿತ್ರಿತವಾದ ನೃತ್ಯ ಕಣ್ಣಿಗೆ ಹಬ್ಬವನ್ನು ಉಂಟುಮಾಡುವಂತಹದ್ದು. ಲಖನೌ ಘರಾಣೆಯ ಲಛು ಮಹಾರಾಜರ ದಿವ್ಯ ದಿಗ್ದರ್ಶನದಲ್ಲಿ ಅದ್ಭುತ ಅಭಿನಯ ಹಾಗೂ ಭಾವನೆಗಳನ್ನು ನಟಿ ಅಭಿವ್ಯಕ್ತಗೊಳಿಸುತ್ತಿದ್ದಳು. ‘ಕಲ್ಪನಾ’ ಚಿತ್ರದಲ್ಲಿಯ ರಾಗಿಣಿ ಪದ್ಮಿನಿಯರ ನೃತ್ಯ, ವಹೀದಾ ರೆಹಮಾನಳ ‘ಗೈಡ್’ ಸಿನೆಮಾದಲ್ಲಿಯ ‘ಪಿಯಾ ತೋಸೇ’ ನೃತ್ಯ, ಗೋಪಿಕೃಷ್ಣರ ‘ಮುರಲಿ ಮನೋಹರ ಕೃಷ್ಣಕನ್ಹೈಯಾ’ (ಚಿ: ಝನಕ ಝನಕ ಪಾಯಲ್ ಬಾಜೇ) ಹಾಗೆಯೆ ಆಶಾ ಪಾರೇಖ್, ಕಮಲಾ ಲಕ್ಷ್ಮಣರ ನೃತ್ಯ ಮನಕ್ಕೆ ಕಚುಗುಳಿ ಇಡುವಂತಹದು.
ಇನ್ನು ತಾಳಗಳ ಬಗ್ಗೆ ಹೇಳುವುದಾದರೆ ತೀನ್ ತಾಳದ ಪ್ರಯೋಗ ಸಿನೆಮಾಗಳಲ್ಲಿ ಹೆಚ್ಚು. ಮಧ್ಯಲಯ ತೀನ್ತಾಳದ ಪ್ರಯೋಗ ‘ಮನ ತಡಪ್ತ ಹರಿದರಶನ’ ಈ ಹಾಡಿನಲ್ಲಿ ಮಾತ್ರ ಆಗಿದೆ. ದಾದರಾ ಹಾಗೂ ಕವಾಲಿ ತಾಳಗಳ ಪ್ರಯೋಗ ಬಹಳಷ್ಟು ಆಗಿವೆ. ಝಂಪತಾಳ ಮುಖೇಶನ ಹಾಡುಗಳಲ್ಲಿ ಎದ್ದುಕಾಣುತ್ತದೆ. ಏಕತಾಲದ ಪ್ರಯೋಗ ಕೆಲವೇ ಹಾಡುಗಳಲ್ಲಿ ಮಾಡಲಾಗಿದೆ.
ಕವ್ವಾಲಿ – ಇದು ಹಿಂದುಸ್ತಾನಿ ಸಂಗೀತದ ಒಂದು ಭಾಗ. ಸೂಫಿಗಳು ಹೆಚ್ಚಾಗಿ ಉಪಯೋಗಿಸುವ ಸಂಗೀತದ ಪ್ರಕಾರ. ‘ಬರಸಾತ್ ಕೀ ರಾತ್’ ಈ ಚಿತ್ರದಲ್ಲಿ ‘ಯೇ ಇಶ್ಕ್ ಹೈ ಇಶ್ಕ್’ ಎಂಬ ಸಾರ್ವಕಾಲಿಕ ಕವ್ವಾಲಿ ಇದೆ. ಇದನ್ನು ಕೇಳಿಯೇ ಆನಂದಿಸಬೇಕು. ರಫಿ, ಮನ್ನಾಡೇ, ಸುಧಾ ಮಲ್ಹೋತ್ರಾ ಹಾಗೂ ಆಶಾ ಭೋಸ್ಲೆ ಈ ಕವ್ವಾಲಿಯನ್ನು ಹಾಡಿದ್ದಾರೆ.
ಇನ್ನು ಶಹನಾಯ್, ನವಾಜ್ ಬಿಸ್ಮಿಲ್ಲಾಖಾನರ ಶಹನಾಯ್ ಇಂಪನ್ನು ‘ಗೂಂಜ ಉಠೀ ಶಹನಾಯ್’ ಈ ಚಲನಚಿತ್ರದಲ್ಲಿ ಕೇಳಬಹುದು. ಅದರಂತೆ ಹರಿಪ್ರಸಾದ ಚೌರಾಸಿಯಾರ ಕೊಳಲುವಾದನ ಹಾಗೂ ರವಿಶಂಕರರ ಸಿತಾರವಾದನದ ಸೊಗಸನ್ನು ಕೂಡ ಕೆಲವು ಸಿನೆಮಾದಲ್ಲಿ ಕಾಣಬಹುದು.
ಈ ಲೇಖನದ ವ್ಯಾಪ್ತಿ ಹಿಂದೀ ಸಿನೆಮಾಗಳಿಗೆ ಮಾತ್ರ ಸೀಮಿತವಾದದ್ದು. ಕನ್ನಡ ಸಿನೆಮಾಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಕನ್ನಡ ಚಲನಚಿತ್ರದಲ್ಲಿ ಕೂಡ ಶಾಸ್ತ್ರೀಯ ಸಂಗೀತದ ಉಪಯೋಗ ಸಾಕಷ್ಟಾಗಿದೆ. ವರನಟ ರಾಜಕುಮಾರ್ ಅವರಿಗೆ ಹಾಡಲು ಬರುವುದಿಲ್ಲವೆಂದು ಕೆಲವು ಕುಹಕಿಗಳು ಗುಡುಗು ಹಾಕಿದಾಗ, ರಾಜಕುಮಾರರು ‘ನಾದಮಯ’ ಎಂಬ ಅಪರೂಪದ ಹಾಗೂ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತದ ಮೇಲೆ ಅಧರಿಸಿದ ಹಾಡನ್ನು ಹಾಡಿದ್ದು ಇತಿಹಾಸ.