ಬದಲಾವಣೆ ಚಕ್ರ ತಿರುಗುತ್ತಲೇ ಇರುವಾಗ ಮತ್ತೆ ಇನ್ನೆನು ಹೊಸ ಬದಲಾವಣೆ ಬರಬಹುದೋ ಗೊತ್ತಿಲ್ಲ. ಆದರೆ ಕಡ್ಲೆಪುರಿ ರುಚಿ ಹಾಗೇ ಇದೆ, ಹಾಗೇ ಇರಲಿ.
ಮೈಸೂರಿನ ಅಗ್ರಹಾರದ ಹೈಕಳು ಮಧ್ಯಾಹ್ನದ ವೇಳೆಗೆ ಬೀದಿಗಿಳಿದು ಒಬ್ಬ ಕಿಂದರಜೋಗಿಯ ಹಿಂದೆ ಬೀಳುತ್ತಿದ್ದರು. ‘ಗಂಜಾಂ ಪುರಿ, ಗರಮಾಗರಂ ಕಳ್ಳೆಪುರಿ, ಬಿಸಿಬಿಸಿ ಪುರಿ’ ಎಂದು ರಾಗರಾಗವಾಗಿ ಕೂಗುತ್ತಿದ್ದ ಬೀದಿವ್ಯಾಪಾರಿ, ಮಕ್ಕಳ ಕೈಗೆ ಸ್ವಲ್ಪ ಕಳ್ಳೆಪುರಿ ಕೊಟ್ಟು ಮನೆಯವರನ್ನು ಹಠಹಿಡಿದು ಜಾಸ್ತಿ ಪುರಿ ಕೊಂಡುಕೊಳ್ಳುವಂತೆ ಪ್ರಚೋದಿಸುತ್ತಿದ್ದ. ಅವನೊಬ್ಬ ಯಶಸ್ವಿ ಬೀದಿವ್ಯಾಪಾರಿ.
ಸ್ಕೂಲಿನಿಂದ ಬಂದ ಮಕ್ಕಳಿಗೆ ತಿಂಡಿ ಮಾಡಿಕೊಡುತ್ತಿದ್ದ ಕಾಲವಲ್ಲ ಅದು. ಈಗಿನಂತೆ ಜಂಕ್ಫುಡ್ ಕೂಡ ಲಭ್ಯವಿರಲಿಲ್ಲ. ಹೀಗಾಗಿ ಮಕ್ಕಳು ದುಂಬಾಲುಬಿದ್ದು ಕೇಳಿದಾಗ ಹಿರಿಯರು ಕಡ್ಲೆಪುರಿ ವ್ಯಾಪಾರಿಯನ್ನು ಕರೆದು ಸೇರಿನಷ್ಟು ಪುರಿ, ಚಟಾಕಿಯಷ್ಟು ಕಡ್ಲೆ (ಹುರಿಗಡ್ಲೆ) ಹಾಗೂ ವಿಶೇಷವಾಗಿ ತರುತ್ತಿದ್ದ ಖಾರದಕಳ್ಳೆಕಾಯಿ ಬೀಜ ಬೆರೆಸಿ ಮಕ್ಕಳಿಗೆ ಕೊಟ್ಟು ದೊಡ್ಡವರೂ ತಿಂದು ತೃಪ್ತಿಪಡುತ್ತಿದ್ದರು. ಕೆಂಪನಂಜಾಂಬ ಅಗ್ರಹಾರ, ದೇವಾಂಬ ಅಗ್ರಹಾರ ಮತ್ತು ಚೆಲುವಾಂಬ ಅಗ್ರಹಾರದಲ್ಲಿ ಮಧ್ಯಾಹ್ನದ ಈ ಚಟುವಟಿಕೆ ನಿರಂತರವಾಗಿ ನಡೆಯುತ್ತಿತ್ತು.
ವ್ಯವಹಾರತಂತ್ರ
ಮನೆಯ ಮುಂದಿನ ಜಗುಲಿ ಮೇಲೆ ಕಡ್ಲೆಪುರಿ ಬುಟ್ಟಿಯನ್ನು ಇಳಿಸಲು ಬೇರೆಯೊಬ್ಬರ ಸಹಾಯ ಕೇಳುವ ತಾಪತ್ರಯವಿರಲಿಲ್ಲ. ಪುರಿ ಹಗುರದ ಸರಕು. ತರಕಾರಿ ಬುಟ್ಟಿ, ರಂಗೋಲಿ, ಅವರೇಕಾಯಿ ಇತರೆ ವಸ್ತುಗಳ ಬುಟ್ಟಿ ಇಳಿಸಬೇಕಾದರೆ ಮನೆಯವರೇ ವ್ಯಾಪಾರಿಗೆ ಬುಟ್ಟಿ ಇಳಿಸಲು ಕೈ-ಬಲ ನೀಡಬೇಕಾಗುತ್ತಿತ್ತು.
ಕಡ್ಲೆಪುರಿ ವ್ಯಾಪಾರ ಮಾಡುವ ಮೊದಲು ಕೇಳುತ್ತಿದ್ದ ಪ್ರಶ್ನೆ – ಬಿಸಿಯಾಗಿದಿಯಾ ಪುರಿ? ಹಾಗೆಂದು ಕೇಳಿದ ತಕ್ಷಣ ವ್ಯಾಪಾರಿ ಹತ್ತಿರ ನಿಂತಿದ್ದ ಹುಡುಗರ ತೊಡೆ ಮೇಲೆ ಪಾವನ್ನು ಒತ್ತಿ ‘ಬಿಸಿಯಿದೆಯಾ?’ ಎಂಬ ಮರುಪ್ರಶ್ನೆ ಕೇಳುತ್ತಿದ್ದ. ತೊಡೆ ಸುಟ್ಟಂತಾಗಿ ನಾವು ಹುಡುಗರು ಕಿರುಚುತ್ತಿದ್ದೆವು. ಯಾವಾಗಲೂ ಪುರಿ ರಾಶಿಯ ಮೇಲೆ ಒಂದು ಕೆಂಡದ ಕುಂಡವನ್ನು ಇಟ್ಟು ಶಾಖ ಕಾಪಾಡುತ್ತಿದ್ದ. ಮಧ್ಯಾಹ್ನ ನಾಲ್ಕುವರೆಯಿಂದ ಐದರ ಒಳಗೆ ಕಡ್ಲೆಪುರಿ ಮಾರುವವರನ್ನು ಹೆಚ್ಚುಕಮ್ಮಿ ಎಲ್ಲರ ಮನೆಯವರೂ ಎದುರು ನೋಡುವಂತೆ ಆಗಿರುತ್ತಿತ್ತು. ಮಕ್ಕಳನ್ನು ಕೀಟಲೆ ಮಾಡುವುದು ದೊಡ್ಡವರನ್ನು ಮಾತನಾಡಿಸುವುದು ಆ ಬೀದಿ ವ್ಯಾಪಾರಿಯ ವ್ಯವಹಾರದ ತಂತ್ರದ ಒಂದು ಭಾಗವಾಗಿತ್ತು.
ಮೊಹರಂ ಬಂದರೆ ಮೈಸೂರಿನಲ್ಲಿ ಎಲ್ಲಿಲ್ಲದ ಸಂಭ್ರಮ. ಹಿಂದುಗಳೂ ಅಂದು ಹುಲಿವೇಷ ಹಾಕಿಕೊಂಡು ಬೀದಿಗಿಳಿಯುತ್ತಿದ್ದರು. ಮನೆಯ ಮುಂದೆ ಹುಲಿಯ ದರ್ಶನ ಮತ್ತು ನರ್ತನ. ಅದನ್ನು ವೀಕ್ಷಿಸಿದ ಮೇಲೆ ನಾಲ್ಕು ಕಾಸನ್ನು ಜನರು ನೀಡುತ್ತಿದ್ದರು. ಹಿಂದೂ-ಮುಸ್ಲಿಂ ಸೌಹಾರ್ದಯುತವಾಗಿ ಮೊಹರಂ ಆಚರಿಸುತ್ತಿದ್ದರು. ಅಂದು ನಮ್ಮ ಕಡ್ಲೆಪುರಿ ವ್ಯಾಪಾರಿ ತನ್ನ ವ್ಯಾಪಾರವನ್ನು ಮಾಡುತ್ತಿರಲಿಲ್ಲ. ಅವನು ಶ್ರೀಕೃಷ್ಣನ ವೇಷ ಧರಿಸಿ ಕೊಳಲನ್ನು ಹಿಡಿದುಕೊಂಡು ಬರುತ್ತಿದ್ದನು. ಎಲ್ಲರ ಮನೆಯಲ್ಲೂ ಅವನಿಗೆ ಅರ್ಧಾಣೆ, ಒಂದಾಣೆ ಕಾಣಿಕೆ ಕೊಡುತ್ತಿದ್ದರು. ಕೊಳಲು ಅಲಂಕಾರಿಕ ವಸ್ತುವಾಗಿ ಅವನ ಕೈಯಲ್ಲಿರುತ್ತಿತ್ತು. ಅವನಿಗೆ ಅದನ್ನು ನುಡಿಸಲು ಬಂದರೆ ತಾನೆ? ಆ ಶ್ರೀಕೃಷ್ಣ ಪಾತ್ರಧಾರಿಯ ಹಿಂದೆ ‘ಗಂಜಾಂ ಪುರಿ, ಕಡ್ಲೆಪುರಿ’ ಎಂದು ಅವನು ಕೂಗುವಂತೆ ಅನುಕರಣೆ ಮಾಡುತ್ತ ಹಿಂದೆ ಬರುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಹುಡುಗರಿಗೆ ಬಹಳ ಸುಲಭರೂಪದಲ್ಲಿ ರಾಕ್ಷಸನಾಗುವ ಉಪಾಯ ಬಾಯಿಯ ಎರಡು ತುದಿಯಲ್ಲಿ ಒಂದೊಂದು ಕಳ್ಳಿಪುರಿಯನ್ನು ಸಿಕ್ಕಿಸಿಕೊಂಡರೆ ಸಾಕಾಗುತ್ತಿತ್ತು. ಮಹಿಷಾಸುರನ ಕೋರೆಹಲ್ಲನ್ನು ಕಳ್ಳೆಪುರಿ ಮುಖಾಂತರ ಮೂಡಿಸಬಹುದಾಗಿತ್ತು.
ವ್ಯವಸ್ಥೆಯ ‘ಉಪಯೋಗ’
ಶೆಟ್ಟರ ಅಂಗಡಿಯಲ್ಲಿ ಮಕ್ಕಳನ್ನು ಅವರ ಮೂಲಕ ದೊಡ್ಡವರನ್ನು ತಮ್ಮ ಅಂಗಡಿಗೆ ಬರುವಂತೆ ಆಕರ್ಷಿಸಲು ಮಕ್ಕಳ ಕೈಗೆ ಚೂರು ಹುರಿಗಡ್ಲೆ ಕೊಡುವ ಪದ್ಧತಿ ಇತ್ತು. ಒಮ್ಮೊಮ್ಮೆ ಪುರಿ ತೆಗೆದುಕೊಂಡಾಗ ಬಿಟ್ಟಿ ಕಡ್ಲೆಯನ್ನು ಶೆಟ್ಟರ ಅಂಗಡಿಯಲ್ಲಿ ಮಕ್ಕಳು ಪಡೆಯುತ್ತಿದ್ದರು. ಮನೆಗೆ ಬೇಕಾದ ಸಾಮನುಗಳನ್ನು ಅರ್ಜೆಂಟಾಗಿ ತರಿಸಬೇಕಾದರೆ ಯಜಮಾನ್ರು ಮನೇಲಿ ಇರುತ್ತಿರಲಿಲ್ಲ, ಹೆಂಗಸರ ಹತ್ತಿರ ಹಣವಿರುತ್ತಿರಲಿಲ್ಲ. ಹೀಗಾಗಿ ಸಾಲದ ಅಂಗಡಿ ಗುರುತುಮಾಡಿಕೊಳ್ಳುತ್ತಿದ್ದರು. ಬೇಕಾದ ಸಾಮಾನುಗಳನ್ನು ಬೇಕಾದಾಗ ಉದರಿಗೆ ತೆಗೆದುಕೊಂಡು ಸಾಲ ಬರೆಸಿ ಮಕ್ಕಳ ಮೂಲಕ ಮನೆಯವರು ತರಿಸಿಕೊಳ್ಳುತ್ತಿದ್ದರು. ನನ್ನ ಗೆಳೆಯ ಗಿರಿ ತನಗೆ ಕಳ್ಳೆಪುರಿ ಬೇಕಾದಾಗಲೆಲ್ಲ ಈ ವ್ಯವಸ್ಥೆಯ ಉಪಯೋಗ (ಬೇಕಾದರೆ ದುರುಪಯೋಗವೆನ್ನಿ) ಪಡೆದು ಲೆಕ್ಕದಲ್ಲಿ ಬರೆಸಿ ಕಳ್ಳೆಪುರಿ ತಂದು ಗೆಳೆಯರಿಗೆಲ್ಲ ಪೊಟ್ಟಣದಲ್ಲಿ ಕಳ್ಳೆಪುರಿ ಕೊಡುತ್ತಿದ್ದ. ತಿಂಗಳ ಸಂಬಳದಲ್ಲಿ ಹಣ ಕೊಡುವುದು ರೂಢಿ. ತಿಂಗಳಲ್ಲಿ ಬರೆಸಿ ತಂದ ಸಾಮನಿನ ಪಟ್ಟಿ ಪರಿಶೀಲಿಸಿದಾಗ ಗಿರಿ ಎಷ್ಟು ಬಾರಿ ಕಳ್ಳೆಪುರಿ ತೆಗೆದುಕೊಂಡಿದ್ದಾನೆಂದು ತಿಳಿಯುತ್ತಿತ್ತು. ಆದರೆ ಅದರ ಬಗ್ಗೆ ವಿಚಾರಣೆ ನಡೆಸಿ ರಾದ್ಧಾಂತ ಮಾಡಲು ದೊಡ್ಡವರು ಇಚ್ಛಿಸುತ್ತಿರಲಿಲ್ಲ. ಆದರೆ ಎಷ್ಟೋ ವೇಳೆ ಹುಡುಗರಿಂದಲೇ ಗುಟ್ಟು ರಟ್ಟಾಗುತ್ತಿತ್ತು. ಅಂಗಡಿಯಿಂದ ತೆಗೆದುಕೊಂಡ ಕಡ್ಲೆಪುರಿಯನ್ನು ಚಡ್ಡಿಯ ಎರಡು ಜೋಬಿನಲ್ಲೂ ಹಾಕಿಸಿಕೊಂಡು ಬರುವಾಗ ಒಮ್ಮೊಮ್ಮೆ ಅಂಗಡಿಯಿಂದ ಮನೆಗೆ ಬರುವ ತನಕ ‘ಕಡ್ಲೆಪುರಿಯ ಸಾಲು’ ಗಿರಿಯನ್ನು ಹಿಂಬಾಲಿಸುತ್ತಿತ್ತು. ಚಡ್ಡಿ ಜೋಬಿನ ತೂತಿನಿಂದಾಗಿ ಕಳ್ಳೆಪುರಿ ಸೋರುತ್ತಿತ್ತು. ಗಿರಿಯ ಗೆಳೆಯರು ಕೆಳಗೆ ಬಿದ್ದ ಪುರಿಯನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದರು.
ಹೆಣದ ಮೆರವಣಿಗೆ ಹೋಗುವಾಗ ಕೆಲವು ಸಂಪ್ರದಾಯದವರು ಕಳ್ಳೆಪುರಿಯನ್ನು ಹೆಣದ ಮೇಲೆ ಎರಚುವ ಪದ್ಧತಿಯಿದೆ. ಹಾಗೆ ಕೆಳಗೆ ಬಿದ್ದ ಕಳ್ಳೆಪುರಿಯನ್ನು ತೆಗೆದು ತಿನ್ನಬಾರದು ಎಂದು ಮಕ್ಕಳಿಗೆ ಹೇಳುತ್ತಿದ್ದರು. ನನಗೆ ಇನ್ನೂ ಅರ್ಥವಾಗದ ವಿಷಯವೆಂದರೆ….. ಹೆಣ ಸ್ಮಶಾನಕ್ಕೆ ಹೋಗುವಾಗ ಕಡ್ಲೆಪುರಿ ಎರಚುವುದು ಏಕೆ ಎಂದು. ನನ್ನ ಸ್ನೇಹಿತನೊಬ್ಬನ ಪ್ರಕಾರ ಲೇಟಾಗಿ ಬಂದ ನೆಂಟರಿಷ್ಟರ ಬಳಗಕ್ಕೆ ಸ್ಮಶಾನದ ದಾರಿ ತೋರಿಸುವ ಸಲುವಾಗಿ ಹಾಗೆ ಮಾಡಲಾಗುತ್ತದಂತೆ. ಈ ಉತ್ತರ ಸಮಾಧಾನಕರವಾಗಿಲ್ಲವೆಂದು ನಾನು ತಿರಸ್ಕರಿಸಿದೆ. ಅದಕ್ಕೆ ಮೊದಲನೆಯ ಕಾರಣ ಬೇರೊಂದು ಹೆಣ ಬೇರೊಂದು ಸ್ಮಶಾನಕ್ಕೆ ಹೋಗುವಾಗಲು ಕಳ್ಳೆಪುರಿ ಹಾಕುತ್ತಾ ಹೋದರೆ ದಾರಿ ತಪ್ಪುವುದಿಲ್ಲವೆ? ನನ್ನ ಎರಡನೆ ಸಂದೇಹವೆಂದರೆ ಕಡ್ಲೆಪುರಿ ಎಸೆದಾಗ ಗಾಳಿ ಬೀಸಿದರೆ ಅದು ಹಾರಿ ಮಾಯವಾಗುವುದಿಲ್ಲವೆ? ಅದಕ್ಕೆ ಪರಿಹಾರವೆಂಬಂತೆ ನನ್ನ ಸ್ನೇಹಿತ ಹೇಳಿದ್ದು ಕಳ್ಳೆಪುರಿ ಜೊತೆ ಅದಕ್ಕೆ ಕಾಸನ್ನು ಎಸೆಯುವ ಪದ್ಧತಿ. ಕಾಸನ್ನು ಬೇರೆಯವರು ತೆಗೆದುಕೊಳ್ಳದೇ ಇರುವುದಕ್ಕೆ ಖಾತರಿಯಿಲ್ಲ. ವಿಚಾರವೇನೇ ಇರಲಿ ಕಳ್ಳೆಪುರಿ ವ್ಯಾಪಾರವಾಗುವುದಂತು ವಾಸ್ತವ. ಕೆಲವು ಸಂಪ್ರದಾಯದಲ್ಲಿ ಹೆಣದ ಬಾಯಿಗೆ ಅಕ್ಕಿ ಹಾಕುವ ಪದ್ಧತಿಯಿರುವಾಗ ಹೆಣದ ಮೇಲೆ ಅಕ್ಕಿಯ ಬೈ-ಪ್ರಾಡಕ್ಟ್ ಕಳ್ಳೆಪುರಿ ಹಾಕಿದರೇನು ತಪ್ಪು? ಎಂದು ಒಬ್ಬ ಮಹಾಶಯ ಹೇಳಿದಾಗ ನನಗೆ ಮಾತನಾಡಲಾಗಲಿಲ್ಲ. ಇದೊಂದು ಋಣ ತೀರಿಸುವ ಕೆಲಸವೆಂದು ಅನಿಸಿತು. ಅಂತಿಮ ಗೌರವದ ಸಲ್ಲಿಕೆಯ ಭಾಗವೆಂದು ಸ್ಪಷ್ಟವಾಯಿತು.
ಟೈಂಪಾಸ್ ಸರಕು
ಹಲ್ಲಿದ್ದಾಗ ಕಡ್ಲೆ ಇಲ್ಲ, ಕಡ್ಲೆ ಇದ್ದಾಗ ಹಲ್ಲಿಲ್ಲ ಎಂಬ ಗಾದೆ ಮಾತಿದೆ. ಆದರೆ ಹಲ್ಲಿಲ್ಲದವನೂ ಕಡ್ಲೆಪುರಿ ತಿನ್ನಬಹುದಲ್ಲವೆ? ವಯಸ್ಸಿನ ಅಂತರವೆನ್ನದೆ ಆಬಾಲವೃದ್ಧರು ಸಮನಾಗಿ ಕಡ್ಲೆಪುರಿ ಸೇವಿಸಬಹುದು. ಅನೇಕ ಮನೆಗಳಲ್ಲಿ ಈಗಲೂ ಒಂದು ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ಉಪ್ಪು-ಖಾರ ಹಾಕಿದ ಕಳ್ಳೆಪುರಿಯನ್ನು ಅತಿಥಿಗಳ ಮುಂದೆ ಇಡುತ್ತಾರೆ. ಹರಟೆಹೊಡೆಯುವಾಗ ಆಗಾಗ್ಗೆ ಕಳ್ಳೆಪುರಿ ಬಾಯಿಗೆ ಬೀಳುತ್ತಿರಬೇಕು. ಎಷ್ಟು ಮಾತನಾಡಿದರೂ ತೃಪ್ತಿಯಿಲ್ಲ, ಎಷ್ಟು ಕಡ್ಲೆಪುರಿ ತಿಂದರೂ ಹೊಟ್ಟೆ ತುಂಬುವುದಿಲ್ಲ, ಕಾಲ ಕಳೆಯಲು ಒಳ್ಳೆ ಸರಕು. ಟೈಂಪಾಸ್ ಕಳ್ಳೆಕಾಯಿ ಅನ್ನುವ ಹಾಗೆ ಟೈಂಪಾಸ್ ಕಳ್ಳೆಪುರಿ ಎಂದೂ ಹೇಳಬಹುದು. ಅತಿಯಾದ ಕಳ್ಳೆಪುರಿ ಸೇವನೆಯಿಂದ ಶೀತವಾಗುತ್ತದೆ, ಗ್ಯಾಸ್ಟಿಕ್ ಆಗುತ್ತದೆ – ಅನ್ನುತ್ತಾರೆ ಕೆಲವರು. ಆದರೆ ವೈಜ್ಞಾನಿಕವಾಗಿ ಧೃಡಪಟ್ಟಿಲ್ಲ. ಕಡ್ಲೆಪುರಿಯಿಂದ ಯಾವ ಸೀರಿಯಸ್ ಖಾಯಿಲೆ ಬಂದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದ್ದರಿಂದ ಅದನ್ನು ಸೇವಿಸಿದರೆ ಅಪಾಯವಿಲ್ಲ. ಹೆಚ್ಚು ಸೇವಿಸಿದರೆ ಅಮೃತವೂ ವಿಷವಾಗುತ್ತದೆ ನಿಜ. ಆದರೆ ಪುರಿ ಅಮೃತವಲ್ಲವೆನ್ನುವುದೇ ಸಮಾಧಾನ.
ಬಹೂಪಯೋಗಿ
ಕಡ್ಲೆಪುರಿ ತಿನ್ನುವುದು ಸೋಮಾರಿಗಳ ಕೆಲಸವೆ? ಒಬ್ಬರು ನಮ್ಮ ಮೇಲೆ ಶಕ್ತಿಪ್ರದರ್ಶನ ಮಾಡಿದರೆ ‘ನಾನೇನು ಕಳ್ಳೆಪುರಿ ತಿನ್ನುತ್ತಾ ಇರುತ್ತೇನೆಯೆ?’ ಎಂದು ಹೇಳುವುದು ರೂಢಿ. ಕಡ್ಲೆಪುರಿ ತಿಂದರೆ ರೋಷ ಬರುವುದಿಲ್ಲ ಎಂಬರ್ಥವೆ? ಕಡ್ಲೆಪುರಿ ಸಾತ್ತ್ವಿಕ ಆಹಾರವಿರಬಹುದು. ಆದರೆ ಸೋಮಾರಿತನವನ್ನು ಹುಟ್ಟುಹಾಕುವ ಆಹಾರವಲ್ಲ. ಹಾಗಿದ್ದರೆ ಯಂತ್ರಗಳ ಪೂಜೆ ಮಾಡುವಾಗ ಕಡ್ಲೆಪುರಿ ಏಕೆ ಹಂಚಬೇಕು? ಕಡ್ಲೆಪುರಿ ಚಲನೆಯ ಸಂಕೇತ, ಚಟುವಟಿಕೆಯ ಸಂಕೇತ. ಶುಕ್ರವಾರದ ಪೂಜೆಗೆ ಮಕ್ಕಳಿಗೆ ಕಡ್ಲೆಪುರಿ ಹಂಚುವುದನ್ನು ಈಗಲೂ ನೋಡುತ್ತಿರುತ್ತೇವೆ. ಆಯುಧಪೂಜೆಯಲ್ಲಿ ಕಡ್ಲೆಪುರಿಗೆ ಅಗ್ರಸ್ಥಾನ. ಮೊನ್ನೆ ನಮ್ಮ ಮನೆ ಎದುರುಗಿರುವ ಪಾರ್ಕಿನಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು ಬಂದು ಧ್ವಜಾರೋಹಣ ಮಾಡಿ ಭಾಷಣ ಬಿಗಿದರು. ಅನಂತರ ಎಲ್ಲರಿಗೂ ಕಡ್ಲೆಪುರಿ ಹಂಚಿದರು. ಬಹಳ ಅಗ್ಗವಾಗಿ ಸಿಗುತ್ತದೆ ಎಂಬುದು ಒಂದು ಕಾರಣವಾದರೆ ಎಷ್ಟು ಜನಕ್ಕೆ ಬೇಕಾದರೂ ಹಂಚಬಹುದು ಎಂಬುದು ಮತ್ತೊಂದು ಬಲವಾದ ಕಾರಣ. ನಿರಾಳವಾಗಿ ಹಣ ಖರ್ಚುಮಾಡುವವರನ್ನು ‘ಕಳ್ಳೆಪುರಿ ಖರ್ಚಾದ ಹಾಗೆ ಖರ್ಚು ಮಾಡುತ್ತಾನೆ’ ಎಂದು ಹೇಳುತ್ತೇವೆ.
ಈಗೀಗ ಕಡ್ಲೆಪುರಿಯನ್ನು ಬೇರೆಬೇರೆ ರೂಪದಲ್ಲಿ ತಿನ್ನಲು ಪ್ರಾರಂಭಿಸಿದ್ದೇವೆ. ಮನೆಯಲ್ಲಿ ಕಡ್ಲೆಪುರಿ ಉಪ್ಪಿಟ್ಟು ಮಾಡುತ್ತಾರೆ. ಈಗಿನ ಪೀಳಿಗೆಯವರಿಗೆ ಬೇಲ್ಪುರಿ ಎಂದರೆ ಅತ್ಯಂತ ಪ್ರಿಯವಾದ ತಿಂಡಿ. ದಾವಣಗೆರೆಯಲ್ಲಿ ಮಂಡಕ್ಕಿ ಜನಪ್ರಿಯ. ಮಂಡಕ್ಕಿ ಭಟ್ಟಿಗಳಿವೆ. ಅದನ್ನು ಮುಸನ್ಮಾನರು ನಡೆಸುತ್ತಾರೆ. ಮಂಡಕ್ಕಿ ಉಸುಳಿ ಬಹಳ ರುಚಿಯಾದ ತಿನಿಸು. ಅದನ್ನು ‘ನರ್ಗೀಸ್’ ಎಂದು ಕರೆಯುತ್ತಾರೆ. ಮೆಣಸಿನಕಾಯಿ ಬಜ್ಜಿ ಮತ್ತು ನರ್ಗೀಸ್ ಅತ್ಯುತ್ತಮ ಜೋಡಿ ತಿಂಡಿ.
ಸಾಧನೆಯ ಗೈರತ್ತು!
ಬೀದಿವ್ಯಾಪಾರ, ಎಲ್ಲರಿಗೂ ಅದರಲ್ಲೂ ಮನೆಯ ಹೆಂಗಸರಿಗೆ, ಬಹಳ ಇಷ್ಟವಾದ ಶಾಪಿಂಗ್. ಕಾಸಿಲ್ಲವೆಂದು ಚೌಕಾಸಿಯಲ್ಲ. ಕೇಳಿದ ಬೆಲೆಯನ್ನೇ ಕೊಟ್ಟು ಪದಾರ್ಥಗಳನ್ನು ಕೊಳ್ಳುವುದರಲ್ಲಿ ಏನು ಸ್ವಾರಸ್ಯ? ಹೇಳಿದ ಬೆಲೆಯನ್ನು ಜಗ್ಗಾಡಿ ಸ್ವಲ್ಪ ಕಮ್ಮಿಮಾಡಿ ಕೊಂಡರೆ ಏನೊ ಸಾಧಿಸುವಂತಾಗುತ್ತಿತ್ತು. ಮನೆಯ ಹಳೆಬಟ್ಟೆಯನ್ನು ಕೊಟ್ಟು ಸ್ಟೀಲ್ ಪಾತ್ರೆ ತೆಗೆದುಕೊಳ್ಳುವುದರಲ್ಲಿ ಏನೋ ಖುಷಿ. ಹಾಗೆ ಮನೆಯಲ್ಲಿರುವ ಭತ್ತದ ತೌಡು, ಅಕ್ಕಿನುಚ್ಚು ಕೊಟ್ಟು ಅವರೇಕಾಯಿ, ಮಾವಿನಹಣ್ಣನ್ನು ಕೊಳ್ಳುವುದರಲ್ಲಿ ಏನೋ ಆನಂದ.
ಈಗ ಕಾಲ ಬದಲಾಗಿ ಬೀದಿ ವ್ಯಾಪಾರದಿಂದ ನಗರಗಳಲ್ಲಿ ಮಾಲ್ಗೆ ಬಂದಿದ್ದೇವೆ. ಅದೂ ಕಮ್ಮಿಯಾಗುತ್ತಾ ಆನ್ಲೈನ್ನಲ್ಲಿ ಪದಾರ್ಥ ಕೊಳ್ಳುವುದಕ್ಕೆ ಪ್ರಾರಂಭಿಸಿದ್ದೇವೆ. ಮಕ್ಕಳು ಮನೆಗೆ ಬೇಕಾಗುವುದನ್ನೆಲ್ಲ ತಮ್ಮ ಸ್ಮಾರ್ಟ್ಫೋನಿನಲ್ಲೊ, ಕಂಪ್ಯೂಟರ್ ಮೂಲಕವೊ ಆರ್ಡರ್ ಮಾಡುತ್ತಾರೆ. ಅವು ಮನೆಯ ಬಾಗಿಲಿಗೆ ಬರುತ್ತವೆ. ನಾವು, ಮನೆಯಲ್ಲಿರುವ ಹಿರಿಯರು ಬಾಗಿಲು ತೆರೆದು ಪದಾರ್ಥಗಳನ್ನು ಬರಮಾಡಿಕೊಳ್ಳುತ್ತೇವೆ. ದುಡ್ಡು ಮೊದಲೇ ಕೊಟ್ಟಾಗಿರುತ್ತೆ. ಚೌಕಾಸಿಗೆ ಅವಕಾಶವೇ ಇಲ್ಲ. ಒಟ್ಟಿನಲ್ಲಿ ಮತ್ತೆ ಬೀದಿವ್ಯಾಪಾರಕ್ಕೆ ಬಂದಿಳಿದಿದ್ದೇವೆ. ಕೂಗುವ ಅಬ್ಬರವಿಲ್ಲ. ಎಲ್ಲ ಕಾಲಿಂಗ್ಬೆಲ್ ಮೂಲಕವೇ. ಕಡ್ಲೆಪುರಿಯನ್ನು ಹೋಲ್ಸೇಲಾಗಿ ಆನ್ಲೈನ್ನಲ್ಲಿ ಬುಕ್ ಮಾಡಿದರೆ ಆಕರ್ಷಕ ಪ್ಯಾಕಿಂಗ್ನಲ್ಲಿ ಮನೆಯ ಹೊಸ್ತಿಲಿಗೆ ಬರುವ ದಿನ ದೂರವಿಲ್ಲ. ವ್ಯಾಪಾರವೆಲ್ಲ ಸದ್ದುಗದ್ದಲವಿಲ್ಲದೆ, ಚಿಲ್ಲರೆಗಾಗಿ ಒದ್ದಾಡದೆ ನಡೆದು ಹೋಗುತ್ತದೆ. ಬದಲಾವಣೆ ಚಕ್ರ ತಿರುಗುತ್ತಲೇ ಇರುವಾಗ ಮತ್ತೆ ಇನ್ನೆನು ಹೊಸ ಬದಲಾವಣೆ ಬರಬಹುದೋ ಗೊತ್ತಿಲ್ಲ. ಆದರೆ ಕಡ್ಲೆಪುರಿ ರುಚಿ ಹಾಗೇ ಇದೆ, ಹಾಗೇ ಇರಲಿ.
Comments are closed.