ಪ್ರಕೃತಿ ಜೊತೆಗಿನ ಭಾವನಾತ್ಮಕ ಸಂಬಂಧದ ಕೊಂಡಿ
ಉತ್ತರ ಕನ್ನಡದ ಹುಲಿಯಪ್ಪನ ಆರಾಧನೆ
ನಮ್ಮ ಹಳ್ಳಿಯ ಜನಪದರು ಅವಿದ್ಯಾವಂತರಿರಬಹುದು, ಆದರೆ ಅನಾಗರಿಕರಲ್ಲ. ಆರ್ಥಿಕವಾಗಿ ಹಿಂದುಳಿದವರಿರಬಹುದು, ಆದರೆ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳವರು. ಪರಿಸರ, ಕಾಡು, ಪಶುಗಳ ಬಗೆಗಿನ ಅವರ ಕಾಳಜಿಗೆ ಎಂದೆಂದಿಗೂ ಬೆಲೆ ಕಟ್ಟಲಾಗದು. ಸಾಂಸ್ಕೃತಿಕ ಉತ್ಕೃಷ್ಟತೆಯನ್ನು ತೋರ್ಪಡಿಸುವ ಇವರಿಂದ ನಾವು ಕಲಿಯುವುದು ಬಹಳಷ್ಟಿದೆ…
ಅನಾದಿಕಾಲದಿಂದ ಮಾನವ ಪ್ರಕೃತಿಯೊಡನೆ ಸಾಮರಸ್ಯದ ಜೀವನ ನಡೆಸುತ್ತಾ ಬಂದಿದ್ದಾನೆ. ಪ್ರಕೃತಿಯ ಚೆಲುವು ಆತನನ್ನು ವಿಸ್ಮಯಗೊಳಿಸಿದರೆ, ಪ್ರಕೋಪಗಳು ಭಯ ಹುಟ್ಟಿಸಿದ್ದಿವೆ. ಮಾನವ-ಜೀವಜಗದ ಅವಿನಾಭಾವ ಸಂಬಂಧ, ಸುತ್ತಣ ಪರಿಸರದ ಕುರಿತ ಆತನ ಕುತೂಹಲ ಮತ್ತು ಭಯ-ಭಕ್ತಿ, ಕಾಲಾಂತರದಲ್ಲಿ ಪ್ರಕೃತಿಯ ಆರಾಧನೆಗೆ ಪ್ರೇರಣೆ ನೀಡಿದೆಯೆಂದು ಹೇಳಬಹುದು. ಭಾರತೀಯ ಸಂಸ್ಕೃತಿಯಲ್ಲಂತೂ ಪ್ರಕೃತಿಯ ಆರಾಧನೆಗೆ ಅತಿ ಮಹತ್ತ್ವದ ಸ್ಥಾನವಿದೆ. ಗಿಡ-ಮರಗಳನ್ನು, ಪಶು-ಪಕ್ಷಿಗಳನ್ನು, ನದಿ-ಸರೋವರಗಳನ್ನು ಪೂಜಿಸುವುದು ಹಿಂದೂ ಧರ್ಮದ ಅವಿಭಾಜ್ಯ ಅಂಗ. ಹಬ್ಬಹರಿದಿನಗಳ ಆಚರಣೆಯಾಗಲಿ ಅಥವಾ ಸಾಮಾಜಿಕ ಸಮಾರಂಭಗಳಾಗಲಿ, ಒಂದಿಲ್ಲೊಂದು ವೃಕ್ಷ ಅಥವಾ ಪಶುವಿನ ಆರಾಧನೆ ಮಾಡುವುದು ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿ ಬಂದಿದೆ. ವೃಕ್ಷಾರಾಧನೆಯಲ್ಲಿ ಆಲ, ಅಶ್ವತ್ಥ, ಮಾವು ಮತ್ತು ಬೇವು ಪ್ರಧಾನವಾದರೆ, ಪಶು ಆರಾಧನೆಯಲ್ಲಿ ಆಕಳು, ನಂದಿ, ಗಜ, ಸರ್ಪ ಮತ್ತು ವ್ಯಾಘ್ರ ಪ್ರಮುಖವಾದವುಗಳು.
ಹಿಂದೂ ಸಂಸ್ಕೃತಿಯಲ್ಲಿನ ಪಶು ಆರಾಧನೆಗಳಲ್ಲಿ ಹುಲಿಯ ಆರಾಧನೆ ಬಹು ವಿಶಿಷ್ಟವಾದದ್ದು. ಗುಡ್ಡಗಾಡು ಜನರಲ್ಲಿ ಮತ್ತು ಕಾಡಿನ ಸಮೀಪ ವಾಸಿಸುವ ಜನರಲ್ಲಿ ಹುಲಿಯನ್ನು ಪೂಜಿಸುವುದು ಪರಂಪರಾಗತವಾಗಿ ಬಂದಿರುವ ಪದ್ಧತಿ. ಇದಕ್ಕೆ ಬಹುಶಃ ಎರಡು ಕಾರಣಗಳಿರಬಹುದು. ಒಂದು, ಅಣು ಅಣುವಿನಲ್ಲೂ ದೈವತ್ವವಿದೆ ಎಂಬ ಗಾಢವಾದ ನಂಬಿಕೆ ಮತ್ತು ಭಗವಂತನಿಂದ ಸೃಷ್ಟಿಸಲ್ಪಟ್ಟ ಈ ಜಗತ್ತಿನ ಎಲ್ಲ ಜೀವರಾಶಿಗಳನ್ನೂ ಗೌರವಿಸಬೇಕು ಎಂಬ ಉದಾತ್ತ ಮನೋಭಾವ; ಎರಡನೆಯದು, ಹುಲಿಯ ಆಕ್ರಮಣದ ಭೀತಿ ಮತ್ತು ತನ್ನನ್ನು ಆರಾಧಿಸುವ ಜನರನ್ನು ಮತ್ತವರ ದನಕರುಗಳನ್ನು ಹುಲಿರಾಯ ಕಾಪಾಡುತ್ತಾನೆ ಎಂಬ ಅಚಲ ನಂಬಿಕೆ. ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಹುಲಿಯನ್ನು ವ್ಯಾಘ್ರೇಶ್ವರನೆಂದು ಪೂಜಿಸುವುದುಂಟು. ವ್ಯಾಘ್ರೇಶ್ವರನಿಗೆ ದೇವಾಲಯಗಳನ್ನೂ ನಿರ್ಮಿಸಿದ ಉದಾಹರಣೆಗಳಿವೆ. ಇಂತಹ ದೇವಾಲಯಗಳು ಕಾಡಿನಂಚಿನಲ್ಲೋ ಅಥವಾ ಒಳಗೊ ಇರುತ್ತವೆ.
ಮೊರೆಹೊಗುವ ಪದ್ಧತಿ
ಹುಲಿಯ ಆರಾಧನೆಯು ಭಾರತದ ಬೇರೆ ಬೇರೆ ಭಾಗಗಳಲ್ಲಿ ಕಂಡುಬಂದರೂ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದು ಬಹಳ ವಿಶಿಷ್ಟವಾದದ್ದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹು ಹಿಂದಿನಿಂದಲೂ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಅಂಚಿನಲ್ಲೆಲ್ಲ ಜನವಸತಿ ಇದ್ದೇ ಇತ್ತು. ಜೀವನೋಪಾಯಕ್ಕಾಗಿ ಬೇಸಾಯ ನಡೆಸುತ್ತಿದ್ದ ಜನತೆಗೆ, ಅವರ ದನಕರುಗಳಿಗೆ ಯಾವತ್ತೂ ಹುಲಿ ಕಾಟ ಇದ್ದೇ ಇರುತ್ತಿತ್ತು. ಹುಲಿಯಿಂದ ಒದಗಬಹುದಾದ ತೊಂದರೆ ನಿವಾರಣೆಗೆ ಆತನ ಆರಾಧನೆಯೇ ಸೂಕ್ತ ಎನಿಸಿದ್ದಿರಬೇಕು ನಮ್ಮ ಪೂರ್ವಜರಿಗೆ. ಹಾಗೆ ಬೆಳೆದು ಬಂದ ಒಂದು ಅಪೂರ್ವ ಸಂಸ್ಕೃತಿ ಹುಲಿಯಪ್ಪನ ಆರಾಧನೆ. ಹಳ್ಳಿಗರ ಜೀವನದಲ್ಲಿ ಹುಲಿಯಪ್ಪ ಅವಿಭಾಜ್ಯ ಅಂಗ. ಹುಲಿಯಪ್ಪ ಎಂದೇ ಕರೆಯಲ್ಪಡುವ ಈ ದೇವರನ್ನು ಜನ ಬಹು ಭಯ-ಭಕ್ತಿ ಮತ್ತು ನೇಮ-ನಿಷ್ಠೆಗಳಿಂದ ಪೂಜಿಸುತ್ತಾರೆ. ಹುಲಿಯಪ್ಪನ ವಿಗ್ರಹಗಳನ್ನು ವೇದೋಕ್ತ ಮಂತ್ರಗಳಿಂದ ಪ್ರತಿಷ್ಠಾಪಿಸಿ ಅವನನ್ನು ಷೋಡಶೋಪಚಾರಗಳಿಂದ ಪೂಜಿಸುತ್ತಾರೆ. ಕೇವಲ ದನಕರುಗಳಿಗಷ್ಟೇ ಅಲ್ಲ, ತಮ್ಮೆಲ್ಲ ದಿನನಿತ್ಯದ ಸಂಕಷ್ಟಗಳಿಗೂ ಹುಲಿಯಪ್ಪನನ್ನೇ ಮೊರೆಹೊಗುವ ಪದ್ಧತಿ ಬೆಳೆದು ಬಂದಿರುವುದನ್ನು ನೋಡಿದರೆ, ಹಳ್ಳಿಗರ ಅಚಲ ಭಕ್ತಿಯ ಅರಿವಾಗುತ್ತದೆ. ಹುಲಿಯಪ್ಪನ ಸಣ್ಣ ಮತ್ತು ಮಧ್ಯಮ ಗಾತ್ರದ ವಿಗ್ರಹಗಳು ಜಿಲ್ಲೆಯ ನಾನಾ ಭಾಗಗಳಲ್ಲಿ, ಅದರಲ್ಲೂ ಪಶ್ಚಿಮ ಘಟ್ಟಗಳ ಕಾಡುಗಳ ಸಮೀಪ ಕಾಣಸಿಗುತ್ತವೆ. ಜಿಲ್ಲೆಯಲ್ಲಿ ಕಾಣಸಿಗುವ ಅತಿ ಪುರಾತನ ಹುಲಿಯಪ್ಪನ ವಿಗ್ರಹಗಳು ತೀರ ಚಿಕ್ಕವು, ಇತ್ತೀಚಿನವು ಗಾತ್ರದಲ್ಲಿ ಸ್ವಲ್ಪ ದೊಡ್ಡವು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಗಾರ ಗ್ರಾಮದ ಹುಲಿದೇವರ ಕಾರ್ತಿಕ ಜಾತ್ರೆ ಬಹಳ ಅಪರೂಪದ್ದು. ಈ ಗ್ರಾಮ ಹುತಗಾರ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿದ್ದು ಶಿರಸಿ ಪಟ್ಟಣದಿಂದ ಸುಮಾರು ಮೂರು ಕಿ. ಮೀ. ದೂರದಲ್ಲಿದೆ. ಪಾರಂಪರಿಕವಾಗಿ ಕಲಗಾರ ಹುಲಿಯಪ್ಪ, ಸಮೀಪದ ತೈಲಗಾರ ಗ್ರಾಮದ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದೆ. ಹುಲಿಯಪ್ಪನ ಜಾತ್ರೆ ಪ್ರತಿ ವರುಷ ಕಾರ್ತಿಕ ಬಹುಳ ಅಮಾವಾಸ್ಯೆಯ ದಿನ ರಾತ್ರಿ ನಡೆಯುತ್ತದೆ. ವರುಷದಲ್ಲಿ ಆರು ಬಾರಿ ಈ ಹುಲಿಯಪ್ಪನಿಗೆ ವಿಶೇಷ ಪೂಜೆ ಸಲ್ಲುತ್ತದಾದರೂ, ಕಾರ್ತಿಕದ ಜಾತ್ರೆ ಅತಿ ಸಂಭ್ರಮದಿಂದ ಕೂಡಿದ್ದು, ಸಹಸ್ರಾರು ಜನರನ್ನು ಆಕರ್ಷಿಸುವಂಥದ್ದು.
ಇತ್ತೀಚೆಗಷ್ಟೆ ಸ್ನೇಹಿತ, ಹಿತೈಷಿ ಶಿವಾನಂದ ಕಳವೆಯವರಿಂದ ಕಲಗಾರ ಹುಲಿದೇವರ ಜಾತ್ರೆಯ ವಿಷಯ ತಿಳಿಯಿತು. ಕಲೆ, ಸಂಸ್ಕೃತಿ, ಪರಿಸರ ಮತ್ತು ಇತಿಹಾಸಗಳಲ್ಲಿ ಅಭಿರುಚಿಯಿರುವ ನಮಗೆ ಇಂಥದೊಂದು ವಿಶಿಷ್ಟ ಜಾತ್ರೆಯನ್ನು ಕಣ್ಣಾರೆ ಕಾಣುವ ತವಕವೂ ಉಂಟಾಯಿತು. ಶಿರಸಿಯ ಈಶ್ವರ ನಾಯ್ಕರೂ ಅತ್ಯಂತ ಪ್ರೀತಿಯಿಂದ ಸಹಕಾರ ನೀಡಿದರು.
ಜನಪ್ರಿಯ ಜಾತ್ರೆ
ಕಲಗಾರದ `ಹುಲಿದೇವರ ಕಾರ್ತಿಕ’ ಎಂದೇ ಜನಪ್ರಿಯವಾಗಿರುವ ಈ ಜಾತ್ರೆ ಮೂರು ವಿಷಯಗಳಲ್ಲಿ ಇತರೆಲ್ಲ ಜಾತ್ರೆಗಳಿಗಿಂತ ವಿಭಿನ್ನ; ಒಂದು, ಇದು ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಮರುದಿನ ಮಧ್ಯಾಹ್ನದವರೆಗೆ ನಡೆವ ಜಾತ್ರೆ; ಎರಡನೆಯದು, `ಬಾಲಕ್ಕೊಂದು ಕಾಯಿ ಪದ್ಧತಿ’ – ಅಂದರೆ ಜನ ತಮ್ಮ ಬಳಿ ಇರುವ ಪ್ರತಿ ಹಸುವಿಗೊಂದರಂತೆ ಹುಲಿಯಪ್ಪನಿಗೆ ಕಾಯಿ ಒಡೆವ ಕ್ರಮ; ಮೂರನೆಯದು, ಜಾತ್ರೆಯೆಲ್ಲ ಮುಗಿದ ಮರುದಿನ ಗ್ರಾಮದ ಸ್ವಯಂಪ್ರೇರಿತ ಯುವಕರ ತಂಡ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸುವ ಅಪರೂಪದ ಸಂಗತಿ. ಇಂತಹ ವಿಶೇಷಗಳನ್ನು ಹೊಂದಿದ ಜಾತ್ರೆಯನ್ನು ವೀಕ್ಷಿಸುವ, ಆನಂದಿಸುವ ಅವಕಾಶ ಒದಗಿಬಂದಿದ್ದು ಅದೃಷ್ಟವೇ ಸರಿ!
ಹುಲಿಯಪ್ಪನ ಕಾರ್ತಿಕದ ಪೂಜಾವಿಧಿಗಳು ಕಾರ್ತಿಕ ಬಹುಳ ಅಮಾವಾಸ್ಯೆಯ ಮಧ್ಯಾಹ್ನ ತೈಲಗಾರ ಗ್ರಾಮದ ಮಹಾಗಣಪತಿ ದೇವಾಲಯದಲ್ಲಿ ಪ್ರಾರಂಭವಾಗುತ್ತದೆ. ಮಹಾಮಂಗಳಾರತಿಯ ಸಮಯಕ್ಕೆ ಮುಖ್ಯ ಅರ್ಚಕ, ಮಂಜುನಾಥ ಭಟ್ಟರ ಮೇಲೆ ಹುಲಿಯಪ್ಪನ ಆವಾಹನೆಯಾಗುತ್ತದೆ. ಮಧ್ಯರಾತ್ರಿ ಎರಡು ಗಂಟೆಯ ನಂತರ ಮತ್ತೆ `ಹುಲಿಯಪ್ಪನ ಕಾರ್ತಿಕ’ದ ಪೂಜೆ ಸವಿಸ್ತಾರವಾಗಿ ಪ್ರಾರಂಭವಾಗುತ್ತದೆ. ಮೊದಲು ಮಹಾಗಣಪತಿಗೆ ಮಹಾಪೂಜೆ, ಅನಂತರ ಮಹಾಮಂಗಳಾರತಿ. ಇದರ ಜತೆಜತೆಗೆ ಡೊಳ್ಳುಕುಣಿತ ಮತ್ತು ಪಟಾಕಿಗಳ ಸಿಡಿಮದ್ದು ಹಾರಿಸುವ ಸಂಭ್ರಮ ನಡೆಯುತ್ತಲೇ ಇರುತ್ತದೆ. ಮಹಾಮಂಗಳಾರತಿಯ ಸಮಯದಲ್ಲಿ ಅರ್ಚಕರ ಮೇಲೆ ಎರಡನೆಯ ಬಾರಿ ಹುಲಿಯಪ್ಪನ ಆವಾಹನೆಯಾಗುತ್ತದೆ. ಮಹಾಗಣಪತಿಯ `ಅನುಗ್ರಹ ಪ್ರಸಾದ’ದ ನಂತರ ದೇವಾಲಯದಿಂದ ಮೆರವಣಿಗೆ ಹೊರಡುತ್ತದೆ. ಮೆರವಣಿಗೆ ಹೊರಡಲು `ಅನುಗ್ರಹ ಪ್ರಸಾದ’ ಅತ್ಯಗತ್ಯ ಎಂಬುದಿಲ್ಲಿ ಉಲ್ಲೇಖಾರ್ಹ. ಮೆರವಣಿಗೆಯಲ್ಲಿ ಪವಿತ್ರ ಸಾಲಿಗ್ರಾಮವನ್ನು ಕಲಗಾರ ಗ್ರಾಮದ ಹುಲಿಯಪ್ಪನ ಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಕಲಗಾರ ಹುಲಿಯಪ್ಪನಿಗೆ ನೇರವಾಗಿ ಸಂಬಂಧಿಸಿದ ೨೫-೩೦ ಗ್ರಾಮದ ನೂರಾರು ಜನತೆ ಮೆರವಣಿಗೆಯ ಮುಂದಾಳುತ್ವವಹಿಸುತ್ತಾರೆ. ಆ ಮಧ್ಯರಾತ್ರಿಯ ನೀರವತೆಯನ್ನು ಗಂಟೆ, ಡೊಳ್ಳುಗಳ ನಾದ, ಪಟಾಕಿಯ ಸದ್ದು ಸೀಳುತ್ತ ಸಾಗುತ್ತದೆ. ಸಾಲಿಗ್ರಾಮ ಹೊತ್ತ ಅರ್ಚಕರು ಹುಲಿಯಪ್ಪನ ಕಟ್ಟೆ ಪ್ರವೇಶಿಸುವಾಗ ಯಾವುದೇ ಅಪಶಕುನ ಅಥವಾ ಅಪಚಾರವಾದರೂ ಮತ್ತೆ ಅರ್ಚಕರ ಮೇಲೆ ಹುಲಿಯಪ್ಪನ ಆವಾಹನೆಯಾಗುತ್ತದೆ.
`ಬಾಲಕ್ಕೊಂದು ಕಾಯಿ’
ಸರ್ವಾಲಂಕಾರ ಭೂಷಿತ ಹುಲಿಯಪ್ಪನಿಗೆ ಬಾಲಕ್ಕೊಂದು ಕಾಯಿ ಅರ್ಪಣೆ
ಸಾಲಿಗ್ರಾಮ ಹುಲಿಯಪ್ಪನ ಕಟ್ಟೆ ತಲಪಿದ ನಂತರ ಪ್ರಧಾನ ಅರ್ಚಕರು ಧಾರ್ಮಿಕ ಪೂಜಾವಿಧಿಗಳನ್ನು ಪ್ರಾರಂಭಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಹುಲಿಯಪ್ಪನಿಗೆ ಹರಿ-ಹರಾದಿ ಪ್ರಧಾನ ದೇವತೆಗಳಷ್ಟೇ ಸ್ಥಾನಮಾನಗಳನ್ನು ಪೂಜಾ ವಿಧಿಗಳಲ್ಲಿ ನೀಡಲಾಗುತ್ತದೆ. ಹುಲಿಯಪ್ಪನನ್ನು ಷೋಡಶೋಪಚಾರ ಪೂಜಾವಿಧಿಗಳಿಂದ ಪೂಜಿಸಲಾಗುತ್ತದೆ. ಮೊದಲು ಸಂಕಲ್ಪ ಮತ್ತು ಆವಾಹನೆ, ನಂತರ ಪುರುಷಸೂಕ್ತ ಮತ್ತು ರುದ್ರಾಭಿಷೇಕ, ತದನಂತರ ಬೆಳ್ಳಿಕವಚದ ತೊಡುಗೆ ಮತ್ತು ಪುಷ್ಪ, ತುಳಸಿ ಮತ್ತು ಅಡಿಕೆ ಸಿಂಗಾರದ ಅಲಂಕಾರ. ಹೀಗೆ ಸರ್ವಾಲಂಕಾರ ಭೂಷಿತನಾದ ಹುಲಿಯಪ್ಪನನ್ನು ನೋಡುವುದೇ ಕಣ್ಣಿಗೆ ಹಬ್ಬ. ಆಮೇಲೆ ಧೂಪ, ದೀಪ, ತೆಂಗಿನಕಾಯಿ ಮತ್ತು ಹಣ್ಣುಗಳ ನೈವೇದ್ಯ. ಇದು ಪ್ರಮುಖ ಘಟ್ಟ- `ಬಾಲಕ್ಕೊಂದು ಕಾಯಿ’ ಕಾರ್ಯಕ್ರಮ ಪ್ರಾರಂಭ.
ಕಲಗಾರ ಹುಲಿಯಪ್ಪ ಸುತ್ತಲಿನ ಸುಮಾರು ೨೫-೩೦ ಗ್ರಾಮಗಳಿಗೆ ನೇರವಾಗಿ ಸಂಬಂಧಿಸಿದ್ದು. ಕಲಗಾರ ಹುಲಿಯಪ್ಪನ ಕಟ್ಟೆಯ ಸುತ್ತಮುತ್ತಲಿನ ಈ ಗ್ರಾಮಗಳ ಜನತೆ ತಮ್ಮಲ್ಲಿ ಇರುವ ದನಕರುಗಳಷ್ಟೇ ಸಂಖ್ಯೆಯ ತೆಂಗಿನಕಾಯಿಗಳನ್ನು ಹುಲಿಯಪ್ಪನಿಗೆ ಪ್ರತಿ ವರುಷ ಶ್ರದ್ಧೆ ಭಕ್ತಿಯಿಂದ ಅರ್ಪಿಸುತ್ತಾರೆ. ಒಂದು ಬಾಲಕ್ಕೆ ಒಂದು ಕಾಯಿ! ನೂರಾರು ಜನ ಸರದಿಯ ಸಾಲಿನಲ್ಲಿ ತೆಂಗಿನಕಾಯಿಯ ಚೀಲಗಳನ್ನು ಹಿಡಿದು ಆ ರಾತ್ರಿಯಲ್ಲಿ ಭಕ್ತಿಭಾವಗಳಿಂದ, ತಾಳ್ಮೆಯಿಂದ, ಚಳಿಯನ್ನೂ ಲೆಕ್ಕಿಸದೆ ನಿಂತಿರುವುದನ್ನು ನೋಡುವುದು ಮನಸ್ಸಿಗೆ ಆಪ್ಯಾಯಮಾನ. ಹುಲಿಯಪ್ಪನ ಕಟ್ಟೆ ಒಡೆದ ತೆಂಗಿನಕಾಯಿಯ ಹೋಳುಗಳಿಂದ ತುಂಬಿಹೋಗುತ್ತದೆ.
ಒಂದೆಡೆ ಗ್ರಾಮಸ್ಥರು ಹುಲಿಯಪ್ಪನಿಗೆ ಕಾಯಿ ಅರ್ಪಿಸುತ್ತಿದ್ದರೆ, ಇನ್ನೊಂದೆಡೆ ಪಟಾಕಿಯ ಸದ್ದು ತಾರಕಕ್ಕೇರುತ್ತದೆ. ವರ್ಷಪೂರ್ತಿ ಹೊತ್ತ ಹರಕೆಯನ್ನೂ ಹಳ್ಳಿಗರು ಹುಲಿಯಪ್ಪನಿಗೆ ಅರ್ಪಿಸುತ್ತಾರೆ. ಬೆಳ್ಳಿ ಬಂಗಾರದ ಸರ, ತೊಟ್ಟಿಲು, ಬೆಳ್ಳಿಯಿಂದ ಮಾಡಿದ ಮೃಗ ಅಥವಾ ಮನುಷ್ಯನ ದೇಹದ ಭಾಗಗಳು, ಹೀಗೆ ಚಿತ್ರ ವಿಚಿತ್ರ ಹರಕೆಯ ವಸ್ತುಗಳು ಹುಲಿಯಪ್ಪನಿಗೆ ಸಲ್ಲುತ್ತದೆ. ಹಳ್ಳಿಗರು ಸೇರಿ ಹುಲಿಯಪ್ಪನನ್ನು ವರ್ಣಿಸುವ, ಆತನ ಮಹಿಮೆ ಸಾರುವ ಜನಪದ ಹಾಡನ್ನು ಕುಣಿಯುತ್ತ ಹಾಡುತ್ತಾರೆ. ಜತೆಜತೆಗೆ ಡೊಳ್ಳು ಕುಣಿತ ನಡೆದೇ ಇರುತ್ತದೆ. ಗ್ರಾಮದ ಹಿರಿಯರು ಕಿರಿಯರೆಲ್ಲ ಸೇರಿ ಹುಲಿಯಪ್ಪನ ಕಟ್ಟೆಯ ಸುತ್ತ ಅಡಿಕೆ ಮರದ ದಬ್ಬೆಯಿಂದ ನಿರ್ಮಿಸಿದ ಕಟ್ಟೆಯ ಮೇಲೆ ನೂರಾರು ಹಣತೆಗಳನ್ನಿಟ್ಟು ದೀಪ ಹಚ್ಚುತ್ತಾರೆ. ಹುಲಿದೇವರ ಕಾರ್ತಿಕ ಪೂಜೆಯ ಮಹಾಮಂಗಳಾರತಿಯ ಸಮಯ – ಸುಮಾರು ಬೆಳಗಿನ ಜಾವ ೪ ಗಂಟೆ.
`ಸುತ್ತಾರತಿ’
ಕೊನೆಯಲ್ಲಿ ಸುತ್ತಾರತಿ. ಮಹಾಮಂಗಳಾರತಿಯನ್ನು ಸುತ್ತಾರತಿ ಎಂದು ಕರೆಯುವ ರೂಢಿಯಿದೆ ಇಲ್ಲಿ. ಪ್ರಧಾನ ಅರ್ಚಕರು ನವಿಲುಗರಿಗಳ ಗುಚ್ಛವನ್ನು ಹಿಡಿದಿರುತ್ತಾರೆ ಮತ್ತು ಸಹಾಯಕ ಅರ್ಚಕ ಸುತ್ತಾರತಿಯಿಂದ ಹುಲಿಯಪ್ಪನಿಗೆ ಹಲವು ಸುತ್ತು ಮಂಗಳಾರತಿ ಎತ್ತುತ್ತಾರೆ. ಒಂದೆಡೆ ಹಣತೆ ದೀಪಗಳ ಮಂದ ಬೆಳಕು, ಇನ್ನೊಂದೆಡೆ ಗಂಟೆ-ಜಾಗಟೆಗಳ ಮಂಗಳ ಧ್ವನಿ. ಎಂಥ ಅದ್ಭುತ ದೃಶ್ಯ!
ಈ ಸಮಯದಲ್ಲಿ ಮತ್ತೆ ಪ್ರಧಾನ ಅರ್ಚಕರ ಮೇಲೆ ಹುಲಿಯಪ್ಪನ ಆವಾಹನೆಯಾಗುತ್ತದೆ. ಹುಲಿಯಪ್ಪನ ಆವಾಹನೆಗೊಳಗಾದ ಅರ್ಚಕರು ಹುಲಿಯಂತೆ ಹೂಂಕರಿಸುತ್ತಾರೆ, ಘರ್ಜಿಸುತ್ತಾರೆ. ಸುತ್ತಲೂ ನೆರೆದ ಜನಸ್ತೋಮ ನಿಶ್ಶಬ್ಧ, ಅಚಲ! ಈ ಘರ್ಜನೆ ಪಶ್ಚಿಮ ಘಟ್ಟಗಳ ಮಳೆಕಾಡುಗಳಲ್ಲಿನ ನೀರವತೆಯನ್ನು ಸೀಳುತ್ತಾ ಪ್ರತಿಧ್ವನಿಸುತ್ತದೆ. ಕೇಳುಗರೆದೆ ಝಲ್ಲೆನಿಸುತ್ತದೆ! ರೋಮಾಂಚನಗೊಳಿಸುವ ನೋಟ! ಕಾರ್ತಿಕ ಮಾಸದ ಮಂಜುಮುಸುಕಿದ ವಾತಾವರಣದಲ್ಲಿ ಮೈಯಲ್ಲಿ ಮಿಂಚು ಹರಿದ ಅನುಭವ! ಹುಲಿಯಪ್ಪನನ್ನು ಸಂತೃಪ್ತಿಪಡಿಸಿದ ಧನ್ಯತಾ ಭಾವ ಗ್ರಾಮಸ್ಥರಲ್ಲಿ!
ಜಾತ್ರೆಯ ಸಡಗರ
ಹುಲಿಯಪ್ಪನಿಗೆ ಕಾಯಿ ಒಡೆಸಲು ಸರತಿಯಲ್ಲಿ ನಿಂತ ಜನಸ್ತೋಮ
ಹಣತೆಗೆ ದೀಪ ಹಚ್ಚುವ ಉತ್ಸಾಹದಲ್ಲಿ ಹಳ್ಳಿಗರು
ಸೂರ್ಯೋದಯವಾಗುತ್ತಿದ್ದಂತೆ ಜಾತ್ರೆಯ ಸಡಗರ ಆರಂಭ. ನೆರೆಹೊರೆಯ ಗ್ರಾಮಸ್ಥರು, ಹತ್ತಿರದ ಪಟ್ಟಣಗಳ ಜನತೆ ಸಾವಿರಾರು ಸಂಖ್ಯೆಯಲ್ಲಿ ಹುಲಿಯಪ್ಪನ ಕಟ್ಟೆಗೆ ಬರುತ್ತಾರೆ. ಬರುವ ನೂರಾರು ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆಗೆ ವ್ಯವಸ್ಥೆ. ನೂರಾರು ಅಂಗಡಿಗಳು ತಾತ್ಕಾಲಿಕವಾಗಿ ನಿರ್ಮಿಸಿದ ಟೆಂಟುಗಳಲ್ಲಿ ತಮ್ಮ ವ್ಯಾಪಾರ ಪ್ರಾರಂಭಿಸುತ್ತವೆ. ಆಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಸಾಮಾನುಗಳು, ಆಟಿಕೆಗಳು, ಬೇಸಾಯಕ್ಕೆ ಬೇಕಾದ ಕಬ್ಬಿಣದ ಉಪಕರಣಗಳು, ತಿಂಡಿ-ತಿನಿಸುಗಳು – ಹೀಗೆ ನೂರಾರು ಅಂಗಡಿಗಳು ಗ್ರಾಹಕರಿಗಾಗಿ ಸಿದ್ಧ. ಇದರೊಟ್ಟಿಗೆ ಹುಲಿಯಪ್ಪನ ಶಕ್ತಿ-ಸಾಮರ್ಥ್ಯಗಳನ್ನು ಕೊಂಡಾಡುವ ಮತ್ತು ಅವನನ್ನು ಪ್ರಾರ್ಥಿಸುವ ಜನಪದ ಹಾಡುಗಳ ಗಾಯನ ಮತ್ತು ನರ್ತನ ಮುಂದುವರಿಯುತ್ತದೆ. ಮಧ್ಯಾಹ್ನ ಸುಮಾರು ೨.೩೦ರ ಹೊತ್ತಿಗೆ ಜಾತ್ರೆ ಮುಗಿದು, ಸಾಲಿಗ್ರಾಮವನ್ನು ವಿಧಿಪೂರ್ವಕ ಮೆರವಣಿಗೆಯಲ್ಲಿ ತೈಲಗಾರ ಗ್ರಾಮದ ಮಹಾಗಣಪತಿ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಹುಲಿಯಪ್ಪನಿಗೆ ನೇರವಾಗಿ ಸಂಬಂಧಿಸಿದ ಗ್ರಾಮಸ್ಥರೇ ಪುನಃ ಮೆರವಣಿಗೆಯ ಮುಂದಾಳುತ್ವವಹಿಸುತ್ತಾರೆ. ಈ ಗ್ರಾಮಸ್ಥರೆಲ್ಲರಿಗೆ ಈಡುಗಾಯಿ ಪ್ರಸಾದ ನೀಡಿ ಗೌರವಿಸುವ ಪರಿಪಾಠವಿದೆ.
ಸ್ವಚ್ಛತಾ ಕೈಂಕರ್ಯ
ಈಗ ಕೊನೆಯ ಘಟ್ಟ- ಮರುದಿನ ಹುಲಿಯಪ್ಪನ ಕಟ್ಟೆಯ ಪ್ರದೇಶವನ್ನು ಸಂಪೂರ್ಣ ಶುಚಿಗೊಳಿಸುವುದು. ಕೆಲ ವರ್ಷಗಳ ಹಿಂದೆ ಗ್ರಾಮದ ಕೆಲ ಯುವಕರು ಸೇರಿ ಜಾತ್ರೆಯ ಮರುದಿನ ಸುತ್ತಲಿನೆಲ್ಲ ಪ್ರದೇಶವನ್ನು ಸ್ವಚ್ಛಗೊಳಿಸುವ ಪರಿಪಾಠ ಆರಂಭಿಸುವ ನಿರ್ಧಾರ ಕೈಗೊಂಡರು. ಸ್ವಯಂಸೇವಕ ಯುವಕರ ತಂಡ ಪ್ರತಿವರ್ಷ ಶಿಸ್ತುಬದ್ಧ ಸಿಪಾಯಿಗಳಂತೆ ಈ ಸ್ವಚ್ಛತಾ ಕೈಂಕರ್ಯಕ್ಕೆ ಬದ್ಧರಾಗಿರುವುದು ನಿಜಕ್ಕೂ ಪ್ರಶಂಸನೀಯ. ಜಾತ್ರೆ ನಡೆದ ಸ್ಥಳದಲ್ಲಿ ಒಂದೇ ಒಂದು ಕಸ ಇರದಂತೆ ಸ್ವಚ್ಛಗೊಳಿಸುವ ಇವರ ಶಿಸ್ತು ನಿಜಕ್ಕೂ ಆಶ್ಚರ್ಯಮೂಡಿಸುತ್ತದೆ. ಈ ಯುವಕರ ದೂರದೃಷ್ಟಿಕೋನ ಶ್ಲಾಘನೀಯ, ಅವರ ಕಾರ್ಯ ಅನುಕರಣೀಯ. `ಸ್ವಚ್ಛ ಭಾರತ’ ಅಭಿಯಾನ ಇಂಥವರಿಂದಲೇ ಅಲ್ಲವೇ ಸಫಲವಾಗಲು ಸಾಧ್ಯ?
ಜಾತ್ರೆಯ ನಂತರ ಸ್ವಚ್ಛತೆಗೆ ಸಿದ್ಧರಾದ ಯುವ ಸ್ವಯಂಸೇವಕರ ತಂಡ
ವಿದ್ಯಾವಂತರು ಮತ್ತು ಮುಂದುವರಿದವರೆಂದು ಕರೆಯಿಸಿಕೊಳ್ಳುವ ಎಷ್ಟೋ ಜನ ಹಳ್ಳಿಗಾಡುಗಳ ಜನರನ್ನು ಹಿಂದುಳಿದವರೆಂದೂ, ಮೂಢರೆಂದೂ, ಅವರ ಇಂಥ ಆಚರಣೆಗಳನ್ನು ಕುರುಡು ನಂಬಿಕೆಗಳೆಂದು ಹೀಗಳೆಯುವುದುಂಟು. ನಮ್ಮ ಹಳ್ಳಿಯ ಜನಪದರು ಅವಿದ್ಯಾವಂತರಿರಬಹುದು, ಆದರೆ ಅನಾಗರಿಕರಲ್ಲ. ಆರ್ಥಿಕವಾಗಿ ಹಿಂದುಳಿದವರಿರಬಹುದು, ಆದರೆ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳವರು. ಪರಿಸರ, ಕಾಡು, ಪಶುಗಳ ಬಗೆಗಿನ ಅವರ ಕಾಳಜಿಗೆ ಎಂದೆಂದಿಗೂ ಬೆಲೆಕಟ್ಟಲಾಗದು. ಸಾಂಸ್ಕೃತಿಕ ಉತ್ಕೃಷ್ಟತೆಯನ್ನು ತೋರ್ಪಡಿಸುವ ಇವರಿಂದ ನಾವು ಕಲಿಯುವುದು ಬಹಳಷ್ಟಿದೆ.
ಹುಲಿಯಪ್ಪನೊಂದಿಗಿನ ಹಳ್ಳಿಗರ ಭಾವನಾತ್ಮಕ ಸಂಬಂಧ, ಭಯ-ಭಕ್ತಿ, ಶ್ರದ್ಧೆಯಿಂದ ಪ್ರತಿ ವರುಷ ಆತನನ್ನು ಪೂಜಿಸುವ ಅವರ ನಿಷ್ಠೆ, ನಾವು ಜೀವನದಲ್ಲಿ ನಮ್ಮ ಸುತ್ತಣ ಪರಿಸರವನ್ನು, ಜೀವಜಗತ್ತನ್ನು ಗೌರವಿಸಬೇಕೆಂಬ ಪಾಠ ಕಲಿಸುತ್ತದೆ. ಕಾಡಿನ ಹುಲಿಯಿಂದ ಒದಗಬಹುದಾದ ತೊಂದರೆಯನ್ನು ನಿವಾರಿಸಲು, ಅದನ್ನು ಕೊಲ್ಲುವ ಬದಲು, ದೇವರ ರೂಪದಲ್ಲಿ ಪೂಜಿಸುವ ಹಳ್ಳಿಗರ ಶ್ರೇಷ್ಠ ಪರಂಪರೆ ಅಹಿಂಸೆಯ ಬಹುದೊಡ್ಡ ಸಂದೇಶವನ್ನೂ ನೀಡುವಂಥದ್ದು.