ಊಟಕ್ಕೂ ಗತಿಯಿಲ್ಲದ ತೃತೀಯ ಜಗತ್ತಿನ ಕಡುಬಡವರಾದರೂ ಸರಿ; ಔಷಧಿ ಕೊಟ್ಟು ಅವರ ರಕ್ತವನ್ನು ಹೀರಿ ನಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳುತ್ತೇವೆ ಎನ್ನುವ ಮನೋಭಾವವನ್ನು ಬಹುರಾಷ್ಟ್ರೀಯ ಬೃಹತ್ ಔಷಧಿ ಕಂಪೆನಿಗಳಲ್ಲಿ ಕಾಣುತ್ತೇವೆ. ಅವುಗಳ ಈ ಮನೋಭಾವ ‘ಅಮಾನವೀಯತೆಯೊಂದಿಗೆ ಅಭಿವೃದ್ಧಿ’ ಎನಿಸುವಂಥದ್ದು.
‘ಮಾನವೀಯ ಮುಖದೊಂದಿಗೆ ಅಭಿವೃದಿ’ (development with human face) ಎನ್ನುವ ಒಂದು ಮಾತನ್ನು ಈಚಿನ ದಿನಗಳಲ್ಲಿ ನಾವು ಆಗಾಗ ಕೇಳುತ್ತಿರುತ್ತೇವೆ. ಈ ಮಾತಿಗೆ ವಿಶೇಷವಾದ ಒತ್ತು ಸಿಗುತ್ತಿರುವುದರಿಂದ ಮಾನವೀಯ ಮುಖವಿಲ್ಲದ ಒಂದು ಅಭಿವೃದ್ಧಿ ಇದೆ; ಮತ್ತು ಇಂದಿನ ದಿನಗಳಲ್ಲಿ ಅದು ಪ್ರಬಲವಾಗುತ್ತಿದೆ ಎನ್ನುವ ಅಭಿಪ್ರಾಯಕ್ಕೆ ಪರೋಕ್ಷವಾಗಿಯಾದರೂ ನಾವು ಬರಬೇಕಾಗುತ್ತದೆ. ನಿಜವೆಂದರೆ ಅಭಿವೃದ್ಧಿ ಅಥವಾ ಅಭ್ಯುದಯ ಎನ್ನುವಂಥದೇ ಮಾನವೀಯ ಮುಖವುಳ್ಳಂಥದ್ದು; ಅವುಗಳದ್ದು ಅವಿನಾಭಾವ ಸಂಬಂಧ. ಆದರೆ ಅದೀಗ ಬದಲಾಗುತ್ತಿರುವುದೇಕೆ? ಅದಕ್ಕೆ ವಿಶೇಷ ಕಾರಣವೇನಾದರೂ ಇದೆಯೆ? – ಎಂದು ಪರಿಶೀಲಿಸಿದರೆ ಎರಡು ದಶಕಗಳ ಹಿಂದೆ ಈ ಜಗತ್ತಿನಲ್ಲಿ ಅಡಿಯಿಟ್ಟು ವಾಮನನಿಂದ ತ್ರಿವಿಕ್ರಮನಾಗಿ ಬೆಳೆಯತೊಡಗಿದ ತ್ರಿವಳಿ – ಜಾಗತೀಕರಣ, ಉದಾರೀಕರಣ, ಖಾಸಗೀಕರಣ (ಎಲ್ಪಿಜಿ) ದಲ್ಲಿ ಅದಕ್ಕೆ ಉತ್ತರವಿದೆಯೇ ಎಂದು ನೋಡಬೇಕೆನಿಸುತ್ತದೆ. ಈ ಅನುಮಾನವು ದೃಢವಾಗುವ ಸಾಕ? ಉದಾಹರಣೆಗಳು ಸಿಗುತ್ತವೆ.
ವ್ಯಾಪಾರಂ ದ್ರೋಹಚಿಂತನಮ್ ಎನ್ನುವ ಮಾತೇ ಇದೆ. ಲಾಭಗಳಿಕೆಯೇ ವ್ಯಾಪಾರ ಅಥವಾ ಉದ್ಯಮದ ಉದ್ದೇಶವಾಗಿರುತ್ತದೆ. ನಮ್ಮ ಲಾಭವೆಂದರೆ ಇನ್ನೊಬ್ಬರ ನಷ್ಟ ಆಗಿರಬೇಕಲ್ಲವೆ? ಆದರೂ ಅದಕ್ಕೆ ನ್ಯಾಯ-ನೀತಿಗಳ ಕಟ್ಟುಪಾಡು ಇರುತ್ತದೆ. ಅನ್ಯಾಯ- ಅಕ್ರಮಗಳನ್ನು ಮಾಡುವುದಿದ್ದರೂ ಅಂಜಿ-ಅಳುಕಿ ಸ್ವಲ್ಪವೇ ಮಾಡಬಹುದ?. ಅಂತಾರಾಷ್ಟ್ರೀಯ ವ್ಯಾಪಾರ-ವ್ಯವಹಾರಗಳ ಬಗೆಗೂ ಇದು ನಿಜ. ಹೀಗಿರುವಾಗ 1990ರ ದಶಕದಲ್ಲಿ ಬಂದ ಜಾಗತೀಕರಣದ ತ್ರಿವಳಿ ನ್ಯಾಯ-ಅನ್ಯಾಯಗಳ ಕಲ್ಪನೆಯನ್ನೇ ಬದಲಿಸಿತು. ಅನ್ಯಾಯಕ್ಕೆ ನ್ಯಾಯದ ಮುಖವಾಡವನ್ನು ತೊಡಿಸಿತು. ಲಾಭವೊಂದೇ ಗುರಿ; ಬೇರೆ ಏನಾದರೂ ತೊಂದರೆಯಿಲ್ಲ ಎಂಬ ಅನೈತಿಕ ಧಾಷ್ಟ್ಯವನ್ನು ಕಲಿಸಿತು ಮತ್ತು ಕಲಿಸುತ್ತಿದೆ; ಇನ್ನು ಪ್ರಸ್ತುತ ಲೇಖನದ ಸಂದರ್ಭದಲ್ಲಿ ಹೇಳುವುದಾದರೆ ಈ ಕ್ಷೇತ್ರದಲ್ಲಿ ಇಂದು ಮಾನವೀಯತೆಗೆ ಅವಕಾಶವೇ ಇಲ್ಲ; ಊಟಕ್ಕೂ ಗತಿಯಿಲ್ಲದ ತೃತೀಯ ಜಗತ್ತಿನ ಕಡುಬಡವರಾದರೂ ಸರಿ; ಔಷಧಿ ಕೊಟ್ಟು ಅವರ ರಕ್ತವನ್ನು ಹೀರಿ ನಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳುತ್ತೇವೆ ಎನ್ನುವ ಮನೋಭಾವವನ್ನು ಕಾಣುತ್ತೇವೆ. ಬಹುರಾಷ್ಟ್ರೀಯ ಬೃಹತ್ ಔಷಧಿ ಕಂಪೆನಿಗಳ ಈ ಮನೋಭಾವ ‘ಅಮಾನವೀಯತೆಯೊಂದಿಗೆ ಅಭಿವೃದ್ಧಿ’ ಎನಿಸುವಂಥದ್ದು. ಭಾರತದ ಮೇಲೆ ಈ ವಿದ್ಯಮಾನದ ಪರಿಣಾಮವೇನು ಎಂಬುದನ್ನಿಲ್ಲಿ ಗಮನಿಸಬಹುದು. ನಿಖರತೆಗಾಗಿ ಒಂದು ಔಷಧಿಯ ಉದಾಹರಣೆಯಿಂದ ಆರಂಭಿಸಬಹುದು.
ಹೆಪಟೈಟಿಸ್-ಸಿಗೆ ಔಷಧಿ
ಅಮೆರಿಕದ ಕಂಪೆನಿ ಗಿಲಿಯಾಡ್ ಸಯನ್ಸಸ್ನ ಔಷಧಿ ಸೊಫೋಸ್ಬುವೀರ್ ಅಥವಾ ಸೊಫೋ; ಅದನ್ನು ಸೊವಾಲ್ಡಿ ಎಂದೂ ಕರೆಯುತ್ತಾರೆ. ಅಮೆರಿಕ ಸರ್ಕಾರ ಅದಕ್ಕೆ ಡಿಸೆಂಬರ್ 2013ರಲ್ಲಿ ಅಂಗೀಕಾರ ನೀಡಿತ್ತು. ಅದರಿಂದ ಹೆಪಟೈಟಿಸ್-ಸಿ ಚಿಕಿತ್ಸೆಯಲ್ಲಿ ಕ್ರಾಂತಿಯೇ ಆಗಿದೆ. ಪಿತ್ತಕೋಶದ ಸಿರೋಸಿಸ್ ಅಥವಾ ಕ್ಯಾನ್ಸರನ್ನು ತರುವ ಭೀಕರ ರೋಗ ಹೆಪಟೈಟಿಸ್-ಸಿ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ)ಯ ಪ್ರಕಾರ ಪ್ರತಿವ? ಜಗತ್ತಿನಲ್ಲಿ 13ರಿಂದ 15 ಕೋಟಿ ಜನರಿಗೆ ಈ ರೋಗ ಬರುತ್ತದೆ; ಮತ್ತು ಸುಮಾರು 5 ಲಕ್ಷ ಜನ ಇದರಿಂದ ಸಾಯುತ್ತಾರೆ. ಸೊವಾಲ್ಡಿ ಹಿಂದಿನ ಔಷಧಿಗಳಿಗಿಂತ ತುಂಬ ಪರಿಣಾಮಕಾರಿ ಮತ್ತು ಅಡ್ಡಪರಿಣಾಮ ಇಲ್ಲದಂಥದ್ದು.
ಆದರೆ ಈ ಮಾತ್ರೆಗೆ ಗಿಲಿಯಾಡ್ ವಿಧಿಸಿದ ದರ ತುಂಬಾ ದುಬಾರಿ. ಆರಂಭದಲ್ಲಿ ಅಮೆರಿಕದಲ್ಲಿ ಅದಕ್ಕೆ ಪ್ರತಿ ಮಾತ್ರೆಗೆ 1000 ಡಾಲರ್ ಇತ್ತು; 84 ದಿನಗಳ ಕೋರ್ಸ್. ಅಂದರೆ 84 ಸಾವಿರ ಡಾಲರ್. ಅದರಿಂದ ರೋಗ ಬಹುತೇಕ ಗುಣವಾಗುತ್ತದೆ. ಸೊವಾಲ್ಡಿಯಿಂದ ಕಂಪೆನಿಗೆ 2014ರಲ್ಲಿ 1030 ಕೋಟಿ ಡಾಲರ್ ಆದಾಯ ಬಂತು. ಒಂದು ದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ಅದನ್ನು ಮಾರುವ ಉದ್ದೇಶದಿಂದ ಗಿಲಿಯಾಡ್ ಸಂಸ್ಥೆ
2014ರ ಜುಲೈನಲ್ಲಿ ನವದೆಹಲಿಯಲ್ಲಿರುವ ಔಷಧಿಗಳ ಪೇಟೆಂಟ್, ಡಿಸೈನ್ ಮತ್ತು ಟ್ರೇಡ್ಮಾರ್ಕ್ನ ಭಾರತದ ಕಂಟ್ರೋಲರ್ ಜನರಲ್ ಅವರ ಕಛೇರಿಗೆ ಒಂದು ಅರ್ಜಿಯನ್ನು ಸಲ್ಲಿಸಿತು. ಅರ್ಜಿ ಹರದೇವ್ ಕರಾರ್ ಎನ್ನುವ ಅಧಿಕಾರಿಯ ಮುಂದೆ ಬಂತು. ಡಬ್ಲ್ಯುಎಚ್ಓ ಪ್ರಕಾರ ಭಾರತದಲ್ಲಿ 120 ಲಕ್ಷ ಜನರಿಗೆ ಹೆಪಟೈಟಿಸ್-ಸಿ ಇದೆ. ಕರಾರ್ ಅವರು ಕಂಪೆನಿಗೆ ಪೇಟೆಂಟ್ ನೀಡಿದಲ್ಲಿ ಆ ಔಷಧಿಯನ್ನು ಈ ದೇಶದಲ್ಲಿ ತಯಾರಿಸಿ ಮಾರುವ ಅಧಿಕಾರ ಗಿಲಿಯಾಡ್ಗೆ ಮಾತ್ರ ಇರುತ್ತದೆ. ಜನವರಿ 14,2015ರಂದು ಕರಾರ್ ಅರ್ಜಿಯನ್ನು ವಜಾಗೊಳಿಸಿದರು. ಇದು ಜಗತ್ತಿನಾದ್ಯಂತ ಗಮನಸೆಳೆದ ಸುದ್ದಿಯಾಗಿತ್ತು.
ಪರಿಣಾಮವಾಗಿ ಭಾರತದ ಔಷಧಿ ಕಂಪೆನಿಗಳು ಸೊವಾಲ್ಡಿಯ ಜೆನೆರಿಕ್ ಔಷಧಿಗಳನ್ನು ತಯಾರಿಸಿ, ತಾವೇ ನಿಗದಿಪಡಿಸುವ ಬೆಲೆಯಲ್ಲಿ ಮಾರಾಟಮಾಡುವ ಹಾದಿ ಸುಗಮವಾಯಿತು. ಅದನ್ನು ವಿದೇಶಕ್ಕೆ ರಫ್ತು ಮಾಡಬಹುದು ಮತ್ತು ಗಿಲಿಯಾಡ್ ಸಂಸ್ಥೆ ನೇರವಾಗಿ ಮಾರುವಲ್ಲಿ ಕೂಡ ಮಾರಬಹುದು ಎಂಬ ಸ್ಥಿತಿ ಬಂತು. ಇಂತಹ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿದ್ದವರು ಇದನ್ನು ಸ್ವಾಗತಿಸಿ ಸಂತೋ? ವ್ಯಕ್ತಪಡಿಸಿದರು.
ಆದರೆ ಮುಖ್ಯವಾಗಿ ಕರಾರ್ ಅವರ ದುರದೃಷ್ಟಕ್ಕೆ ತೀರ್ಪು ನೀಡಿದ ಸಮಯ ಅವರಿಗೆ ಪ್ರತಿಕೂಲವಾಗಿತ್ತು. ಹತ್ತೇದಿನಗಳಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಬರುವವರಿದ್ದರು. ಪ್ರಧಾನಿಯವರೊಂದಿಗೆ ಅವರ ಮಾತುಕತೆ, ಕೆಲವು ಒಪ್ಪಂದಗಳ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಹಕ್ಕಿನ (Intellectual Property Rights) ವಿಷಯ ಕೂಡ ಚರ್ಚೆಗೆ ಬರುವ ನಿರೀಕ್ಷೆ ಇತ್ತು. ತಮ್ಮ ದೇಶದ ಬೃಹತ್ ಔಷಧಿ ಕಂಪೆನಿಗಳೊಂದಿಗೆ ಅಮೆರಿಕದ ರಾಜಕೀಯ ನಾಯಕರ ಸಂಬಂಧ ಗಾಢವಾದದ್ದು; ಅವರ ರಾಜತಾಂತ್ರಿಕರು ಈ ಕಂಪೆನಿಗಳ ಕೆಲಸವನ್ನು ನೇರವಾಗಿಯೇ ಮಾಡುತ್ತಾರೆ ಎನ್ನುವುದಕ್ಕೆ ವಿಕಿಲೀಕ್ಸ್ ಬೆಳಕಿಗೆ ತಂದ ಸೋರಿಕೆಗಳಲ್ಲಿ ಪುರಾವೆ ಸಿಕ್ಕಿದೆ.
ಗಿಲಿಯಾಡ್ನ ವಕೀಲರು ತಡವಿಲ್ಲದೆ ಕರಾರ್ ಅವರ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಅದೇ ಜನವರಿ 30ರಂದು ನ್ಯಾಯಾಲಯವು ಕರಾರ್ ಅವರ ಪ್ರಕ್ರಿಯೆ ದೋಷಪೂರ್ಣವಾಗಿತ್ತೆನ್ನುವ ಗಿಲಿಯಾಡ್ನ ವಾದವನ್ನು ಎತ್ತಿಹಿಡಿಯಿತು; ತೀರ್ಪನ್ನು ಬದಿಗೊತ್ತಿ ಪುನರ್ವಿಮರ್ಶೆ ಮಾಡಿ ‘ಹೊಸ ನಿರ್ಧಾರ’ವನ್ನು ಕೈಗೊಳ್ಳಿ ಎಂದು ಸೂಚಿಸಿತು.
ಒಪ್ಪಂದದ ಅಡ್ಡದಾರಿ
ಕೂಡಲೇ ಕಾರ್ಯಪ್ರವೃತ್ತವಾದ ಗಿಲಿಯಾಡ್ ಭಾರತದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸತೊಡಗಿತು. 11 ಭಾರತೀಯ ಔಷಧಿ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿತು. ಒಪ್ಪಂದದಂತೆ ಭಾರತೀಯ ಕಂಪೆನಿಗಳಿಗೆ ಈ ಔಷಧಿಯನ್ನು ಉತ್ಪಾದಿಸಿ, ಕೆಲವು ದೇಶಗಳಲ್ಲಿ ಮಾರಾಟಮಾಡುವ ‘ಸ್ವಯಂ ಪರವಾನಿಗೆ (voluntary licence)ಯನ್ನು ನೀಡಲಾಯಿತು. 84 ಮಾತ್ರೆಗಳಿಗೆ ಒಟ್ಟು 900 ಡಾಲರ್. ಅಮೆರಿಕದ ಮೂಲ ಔಷಧಿಯ ದರದ ಶೇ. ಒಂದಕ್ಕಿಂತ ಸ್ವಲ್ಪವೇ ಜಾಸ್ತಿ. ಕೆಲವು ಷರತ್ತುಗಳಿದ್ದು, ಮಾರಾಟದರದ ಶೇ. 7ರಷ್ಟು ಹಣವನ್ನು ರಾಯಲ್ಟಿಯಾಗಿ ಗಿಲಿಯಾಡ್ಗೆ ನೀಡಬೇಕೆಂಬುದು ಅದರಲ್ಲೊಂದು. ಈ ವ್ಯವಸ್ಥೆಯನ್ನು ಕೆಲವರು ವಿವಾದಗ್ರಸ್ತ ಯೋಜನೆ ಎಂದರೆ ಮತ್ತೆ ಕೆಲವರು ಉಪಯುಕ್ತವಾದ ರಾಜಿ ಎಂದು ವ್ಯಾಖ್ಯಾನಿಸಿದರು. ಇದರಂತೆ ಕೆಲವು ದೇಶಗಳ ಮಾರುಕಟ್ಟೆಗೆ ಜೆನೆರಿಕ್ ಔಷಧಿ ಉತ್ಪಾದಕರನ್ನು ಬಿಡುತ್ತಿದ್ದರೂ ಕೂಡ ಉಳಿದ ದೇಶಗಳ ಮೇಲೆ ಪೇಟೆಂಟ್ದಾರ ಕಂಪೆನಿ (ಗಿಲಿಯಾಡ್)ಯ ಏಕಸ್ವಾಮ್ಯ ಇದ್ದೇ ಇರುತ್ತದೆ. ಅಂದರೆ ಆ ದೇಶಗಳ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಈ ಔ?ಧಿ ಸಿಗುವುದಿಲ್ಲ.
ಗಿಲಿಯಾಡ್ ಒಪ್ಪಂದ ಮಾಡಿಕೊಂಡ 11 ಕಂಪೆನಿಗಳಲ್ಲಿ ಹೈದರಾಬಾದ್ನ ನ್ಯಾಟ್ಕೋ ಕೂಡ ಸೇರಿದೆ. ಹಿಂದೆ ಈ ಕಂಪೆನಿ ಬೌದ್ಧಿಕ ಆಸ್ತಿ ಹಕ್ಕಿನ (ಐಪಿಆರ್) ಮೂಲಕ ಭಾರತದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸಬಯಸುವ ವಿದೇಶೀ ಕಂಪೆನಿಗಳಿಗೆ ಸವಾಲು ಹಾಕಿತ್ತು. 2011-14ರ ನಡುವೆ ಅದು ಕ್ಯಾನ್ಸರಿನ ಔಷಧಿ ನೆಕ್ಸಾವರ್ (Nexavar)ಗೆ ಸಂಬಂಧಿಸಿ ಜರ್ಮನ್ ಕಂಪೆನಿ ಬೇಯರ್ (Bayer) ಜೊತೆ ಹೋರಾಟ ನಡೆಸಿ ಜಯಗಳಿಸಿತ್ತು. ಕಡ್ಡಾಯ ಲೈಸೆನ್ಸ್ (Compulsory Licence)ನ ಅನ್ವಯ ಭಾರತದಲ್ಲಿ ನೆಕ್ಸಾವರ್ ತಯಾರಿಸಿ, ವಿತರಿಸಿ ರೋಗಿಗಳ ಹಿತಾಸಕ್ತಿ ಕಾಪಾಡಿತ್ತು. ಗಿಲಿಯಾಡ್ನ ಪೇಟೆಂಟ್ ಅರ್ಜಿಗೆ ಇತರ ಮೂರು ಕಂಪೆನಿಗಳೊಂದಿಗೆ ಆಕ್ಷೇಪವನ್ನೂ ಸೂಚಿಸಿತ್ತು. ಆಕ್ಷೇಪವನ್ನು ವಾಪಸು ಪಡೆದು ಸ್ವಯಂ ಪರವಾನಿಗೆ(ವಿ.ಎಲ್.)ಗೆ ಅವಕಾಶವಿರುವ ಒಪ್ಪಂದಕ್ಕೆ ಸಹಿಹಾಕಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತು. ಇಂತಹ ಕ್ರಮ ಸ್ಪರ್ಧಾ ಆಯೋಗದ ಗಮನವನ್ನು ಸೆಳೆಯಬೇಕಿತ್ತು ಎಂದು ತಜ್ಞರು ಹೇಳಿದರು. ಏಕೆಂದರೆ ಪೇಟೆಂಟ್ಗೆ ವ್ಯಕ್ತಪಡಿಸಿದ ಆಕ್ಷೇಪವನ್ನು ವಾಪಸು ಪಡೆದು ಲೈಸೆನ್ಸ್ ಮಾಡಿಸಿಕೊಂಡಾಗ ಸ್ಪರ್ಧಾ ಆಯೋಗ ಆ ಬಗ್ಗೆ ತಪಾಸಣೆ ನಡೆಸುವುದು ಅಗತ್ಯ. ಏಕೆಂದರೆ ಆಕ್ಷೇಪದ ವಾಪಸಾತಿಯು ಜನಾರೋಗ್ಯ ಹಾಗೂ ಮಾರುಕಟ್ಟೆ ಸ್ಪರ್ಧೆಯ ಮೇಲೆ ಪರಿಣಾಮ ಬೀರುವ ಸಂಗತಿಯಾಗಿದೆ.
ಕ್ರಮೇಣ ನ್ಯಾಟ್ಕೋ ನಿರ್ಧಾರದ ಹಿಂದೆ ಗುಪ್ತಶಕ್ತಿಗಳ ಕೈವಾಡ ಇದ್ದಿರಬಹುದೆಂಬ ಗುಮಾನಿ ಹಬ್ಬಿತು. ಗಿಲಿಯಾಡ್ ಜೊತೆ ಒಪ್ಪಂದ ಮಾಡಿಕೊಂಡ ಇನ್ನೊಂದು ಪ್ರಮುಖ ಔಷಧಿ ಕಂಪೆನಿ ಮೈಲಾನ್ ಆ ಬಗ್ಗೆ ನ್ಯಾಟ್ಕೋ ಬಳಿ ಮನವಿ ಮಾಡಿಕೊಂಡಿತ್ತು. ಮೈಲಾನ್ ನ್ಯಾಟ್ಕೋದ ದೊಡ್ಡ ಗಿರಾಕಿಯಾಗಿದೆ. ಕೆಲವು ಔಷಧಿಗಳಲ್ಲಿ ಅವು ಮಾರುಕಟ್ಟೆ ಪಾಲುದಾರರಾಗಿರುವುದೂ ಇದೆ. ಗಿಲಿಯಾಡ್ ಜೊತೆ ಮಾತುಕತೆಗೆ ನ್ಯಾಟ್ಕೋವನ್ನು ಕರೆದು, ವಿ.ಎಲ್. ಒಪ್ಪಂದಕ್ಕೆ ಸಹಿ ಮಾಡುವಲ್ಲಿ ಮೈಲಾನ್ ಒಂದುರೀತಿಯಲ್ಲಿ ದಲ್ಲಾಳಿ ಕೆಲಸವನ್ನೂ ಮಾಡಿತೆಂದು ಆರೋಪಿಸಲಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಎರಡು ಕಂಪೆನಿಗಳು ಖಾಸಗಿ ಒಪ್ಪಂದ ಮಾಡಿಕೊಂಡು ಒಂದು ಪ್ರಮುಖ ಔಷಧಿಯು ಲಕ್ಷಾಂತರ ಜನರಿಗೆ ಸಿಗದಂತೆ ಮಾಡಿದ ಕ್ರಮ ಅಪಾಯಕಾರಿ ಎನಿಸಿತು.
ಈ ಒಪ್ಪಂದದಂತೆ ಆಫ್ರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೊವಾಲ್ಡಿಯನ್ನು ಮಾರಲು ಅವಕಾಶ ಉಂಟಾಯಿತು. ಯಾವಯಾವ ದೇಶಗಳಲ್ಲಿ ಮಾರಬಾರದೆಂಬುದನ್ನು ಬಲು ಜಾಣ್ಮೆಯಿಂದ ಆರಿಸಲಾಗಿತ್ತು. ಲಾಭ ಕಡಮೆ ಇರುವ ಕಡೆ ಭಾರತದ ಸ್ಪರ್ಧಿಗಳಿಗೆ ಅವಕಾಶ; ಅಧಿಕ ಲಾಭ ತರುವ ಚೀನಾ, ಬ್ರೆಜ಼ಿಲ್ನಂತಹ ದೇಶಗಳಲ್ಲಿ ಇವುಗಳಿಗೆ ಅವಕಾಶವಿಲ್ಲ. ಹೆಪಟೈಟಿಸ್-ಸಿ ರೋಗಿಗಳಲ್ಲಿ ಹೆಚ್ಚಿನ ಪಾಲು, ಅಂದರೆ 7.30 ಕೋಟಿ ರೋಗಿಗಳಿರುವಲ್ಲಿಗೆ ಭಾರತದ ಲೈಸೆನ್ಸ್ ಪಡೆದವರಿಗೆ ಪ್ರವೇಶವಿಲ್ಲ.
ಜೆನೆರಿಕ್ ರಫ್ತಿಗೆ ತಡೆ
ಅಲ್ಲದೆ ಭಾರತದ ಕಂಪೆನಿಗಳು ಮಾಡುವ ರಫ್ತಿನ ಮೇಲೂ ನಿಯಂತ್ರಣ ತರಲಾಯಿತು. ಭಾರತದ ನಾಲ್ವರು ಲೈಸೆನ್ಸ್ದಾರರೇ (ಲಾರಸ್, ಹೆಟೆರೋ, ಅರಬಿಂದೊ ಮತ್ತು ಮೈಲಾನ್) ಈ ಔಷಧಿಯ ಕಚ್ಚಾವಸ್ತು(ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್ಗ್ರೀಡಿಯಂಟ್ಸ್ – ಎಪಿಐ)ವಿನ ಪೂರೈಕೆದಾರರಾದ ಕಾರಣ ಆ ಮೂಲಕ ಜಗತ್ತಿನ ಎಲ್ಲಾ ಔಷಧಿ ತಯಾರಕರ ಕೈಕಟ್ಟಿದಂತಾಯಿತು. ಬಹಳಷ್ಟು ಎಪಿಐಯನ್ನು ಗಿಲಿಯಾಡ್ ಸ್ವತಃ ಉತ್ಪಾದಿಸುತ್ತದೆ. ಒಟ್ಟಿನಲ್ಲಿ ಜಗತ್ತಿನ ಮಾರುಕಟ್ಟೆಯ ದೊಡ್ಡಭಾಗವನ್ನು ಗಿಲಿಯಾಡ್ ತನ್ನ ಏಕಸ್ವಾಮ್ಯಕ್ಕೆ ಒಳಪಡಿಸಿತು.
ಭಾರತದ ಒಳಗೂ ಗಿಲಿಯಾಡ್ನ ಬಿಗಿನಿರ್ಬಂಧ ಮುಂದುವರಿಯಿತು. ಔಷಧಿಯನ್ನು ಯಾರು ಖರೀದಿಸಬೇಕು, ಅದು ಎಲ್ಲಿಗೆ ಹೋಗಬೇಕು ಎಂದು ಕಂಪೆನಿಯೇ ನಿರ್ಧರಿಸುತ್ತದೆ. ವಿತರಣೆಯಲ್ಲಿ ಅವ್ಯವಸ್ಥೆ ಉಂಟಾಗಬಾರದು (anti-diversion) ಎಂದು ಇದಕ್ಕೆ ಸಮರ್ಥನೆ. ಔಷಧಿಗಳು ನಿರಾತಂಕವಾಗಿ ಅಗತ್ಯವಿರುವವರ ಕೈ ಸೇರಬೇಕೆಂದು ಜಾಗತಿಕ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ (ಎಂ.ಎಸ್. ಎಫ್.) ಸಂಸ್ಥೆಯು, ಪ್ಯಾಕಾದ ಬಾಟ್ಲಿಗಳಲ್ಲಿ ಬರುವ ಸೊವಾಲ್ಡಿ ಮಾತ್ರೆಯನ್ನು ರೋಗಿಯ ಐಡಿ, ನಾಗರಿಕತ್ವ ಮತ್ತು ವಿಳಾಸ ಪರಿಶೀಲಿಸಿಯೇ ನೀಡಬೇಕೆನ್ನುವ ಗಿಲಿಯಾಡ್ನ ವ್ಯವಸ್ಥೆಗೆ ತೀವ್ರವಾಗಿ ಆಕ್ಷೇಪಿಸಿದೆ. ಇದರಿಂದಾಗಿ ನಿರಾಶ್ರಿತರು ಮತ್ತು ಆರ್ಥಿಕ ವಲಸಿಗರು ಈ ಔ?ಧಿಯಿಂದ ವಂಚಿತರಾಗುತ್ತಾರೆ. ಹೊಸಬಾಟ್ಲಿ (ಔಷಧಿ)ಯನ್ನು ಪಡೆಯುವ ಮುನ್ನ ಹಳೆಯದನ್ನು ವಾಪಸು ಮಾಡಬೇಕೆಂಬ ನಿರ್ಬಂಧ ಕೂಡ ಇದೆ. ಈ ಬಲವಂತದ ಕ್ರಮ ಪೊಲೀಸ್ ವ್ಯವಸ್ಥೆಯಂತಿದ್ದು, ಹಿಂದೆಂದೂ ಇಂಥದ್ದಿರಲಿಲ್ಲವೆಂದು ಟೀಕಿಸಲಾಗಿದೆ. “ಮಾತ್ರೆಯನ್ನು ರೋಗಿಯ ಮೈಮೇಲೆಯೇ ಇಡಿ” ಎಂಬಂತೆ ಗಿಲಿಯಾಡ್ ಹೇಳುತ್ತಿದೆ ಎಂದು ಒಪ್ಪಂದದಲ್ಲಿ ಭಾಗಿಯಾದ ಔಷಧಿ ಸಂಸ್ಥೆ ಸಿಪ್ಲಾದ ನಿರ್ದೇಶಕರೇ ಹೇಳಿದ್ದಿದೆ.
ಅದನ್ನು ವಿರೋಧಿಸಿ ಎಂದು ಹೋರಾಟಗಾರರು (activists) ಒಪ್ಪಂದದಲ್ಲಿ ಸೇರಿಕೊಂಡಿರುವ ಭಾರತೀಯ ಕಂಪೆನಿಗಳನ್ನು ಒತ್ತಾಯಿಸುತ್ತಿದ್ದಾರೆ. “ವೈದ್ಯಕೀಯ ಪೂರೈಕೆದಾರರಿಗೆ ಗಿಲಿಯಾಡ್ ಪೊಲೀಸಿಂಗ್ ಕ್ರಮಗಳನ್ನು ಅನುಸರಿಸಲು ಹೇಳುತ್ತಿದೆ. ಇದು ಚಿಕಿತ್ಸೆಯಲ್ಲಿ ಅಪಾಯಕಾರಿ ಹಸ್ತಕ್ಷೇಪಕ್ಕೆ ದಾರಿಯಾದೀತು’ ಎಂದು ಎಚ್ಚರಿಸುವ ಹೋರಾಟಗಾರರು, “ಈ ವಿವಾದಾಸ್ಪದ ಡೈವರ್ಶನ್ ತಡೆ ಕಾರ್ಯಕ್ರಮಗಳನ್ನು ಜಾರಿ ಮಾಡಬೇಡಿ. ತುರ್ತು ಆವಶ್ಯಕತೆ ಇರುವವರಿಗೆ ಚಿಕಿತ್ಸೆ (ಔಷಧಿ) ಸಿಗಲೇಬೇಕು. ಸ್ವೀಕಾರಾರ್ಹವಲ್ಲದ ನಿಯಮಗಳು, ರೋಗಿಗಳ ಖಾಸಗಿತನದ ಮೇಲೆ ನಡೆಸುವ ದಾಳಿ ಅದಕ್ಕೆ ತಡೆ ಆಗಬಾರದು” ಎಂದು ಗಮನ ಸೆಳೆದಿದ್ದಾರೆ.
ಸಮಾಧಾನದ ಸಂಗತಿಯೆಂದರೆ, ಭಾರತದ ಕಂಪೆನಿಗಳು ಈ ಡೈವರ್ಶನ್ ತಡೆ ಕ್ರಮಗಳನ್ನು ಅನುಸರಿಸಿಲ್ಲ. ಅದಕ್ಕಾಗಿ ಮಾರ್ಚ್ (2015)ನಲ್ಲಿ ಗಿಲಿಯಾಡ್ನ ಓರ್ವ ಅಧಿಕಾರಿ ಅಮೆರಿಕದಿಂದ ಧಾವಿಸಿಬಂದು ಜೈಪುರದಲ್ಲಿ 11 ಉತ್ಪಾದಕ ಕಂಪೆನಿಗಳ ಸಭೆ ಕರೆದ. ಸಭೆಯಲ್ಲಿ ಗಿಲಿಯಾಡ್ಗೆ ಬಹಳಷ್ಟು ವಿರೋಧ ವ್ಯಕ್ತವಾಯಿತು. ಎಂಎಸ್ಎಫ್ನ ವಾದವನ್ನು ಬೆಂಬಲಿಸಿದ ಕಂಪೆನಿಗಳು ಡೈವರ್ಶನ್ವಿರೋಧಿ ಪ್ರಸ್ತಾವವನ್ನು ತಮಾ? ಮಾಡಿದವು. ಕಂಪೆನಿಯ ಪ್ರತಿನಿಧಿ ಚರ್ಚೆಯನ್ನೇ ಕಡಿತಗೊಳಿಸಿದ. ಡೈವರ್ಶನ್ವಿರೋಧಿ ಕಾರ್ಯಕ್ರಮಕ್ಕೆ ಹಿನ್ನಡೆ ಉಂಟಾಯಿತು. ಭಾರತದಂತಹ ದೊಡ್ಡ ದೇಶದಲ್ಲಿ ಪ್ರತಿಯೊಂದು ಮಾತ್ರೆ ಎಲ್ಲಿಗೆ ಹೋಯಿತೆಂದು ಗಮನಿಸುವುದು ಕಷ್ಟ ಸಾಧ್ಯವೆಂಬುದಾಗಿ ಪ್ರತಿನಿಧಿಗೆ ಮನವರಿಕೆಯಾಯಿತು.
ರೋಗಿಯ ಹೋರಾಟ
ಹೆಪಟೈಟಿಸ್-ಸಿಯ ಪ್ರಸ್ತುತ ಔಷಧಿಯ ಕುರಿತು ಇತ್ತೀಚೆಗೆ ಶೋಧ ನಡೆಸಿದ ‘ಕಾರವಾನ್’ ಪತ್ರಕರ್ತರ ತಂಡ ಇದಕ್ಕೆ ಸಮಾನಾಂತರವಾಗಿ ಆಸ್ಟ್ರೇಲಿಯದ ಓರ್ವ ರೋಗಿಗೆ ಎದುರಾದ ಸಮಸ್ಯೆ, ಆತ ಕಂಡುಕೊಂಡ ಪರಿಹಾರ ಮತ್ತು ಇದನ್ನೊಂದು ಸವಾಲಾಗಿ ಸ್ವೀಕರಿಸಿ ಇತರ ರೋಗಿಗಳಿಗೆ ಆತ ನೆರವಾದ ವಿಧಾನವನ್ನು ದಾಖಲಿಸಿದೆ. ಗ್ರೆಗ್ ಜೆಫ್ರೀಸ್ (60 ವರ್ಷ) ಎನ್ನುವ ಹೆಪಟೈಟಿಸ್-ಸಿ ರೋಗಿ ಯಾವುದೋ ಔಷಧಿ ಸೇವಿಸಿ ಅದರ ಅಡ್ಡಪರಿಣಾಮದಿಂದ ಕಂಗಾಲಾಗಿ ಅಲ್ಲಿಗೇ ಬಿಟ್ಟು ಜೀವನಶೈಲಿ ಬದಲಿಸಿ ರೋಗನಿಯಂತ್ರಣಕ್ಕೆ ಯತ್ನಿಸುತ್ತಿದ್ದ. ಆಗ ಹೊಸ ಔಷಧಿ ಸೋವಾಲ್ಡಿ ಬಗ್ಗೆ ತಿಳಿಯಿತು. ಕಂಪೆನಿಯ ಪೇಟೆಂಟ್ ಅರ್ಜಿ ಭಾರತದಲ್ಲಿ ವಜಾ ಆದ ಕಾರಣ ಅಗ್ಗದ ಔಷಧಿ (ಜೆನೆರಿಕ್) ಸಿಗುತ್ತದೆ ಎನ್ನುವ ಭರವಸೆ ಮೂಡಿತು. ರೋಗ ತೀವ್ರವಾದ ಕಾರಣ ಭಾರತಕ್ಕೆ ಹೋಗಿ ಔ?ಧಿ ಪಡೆಯುವುದೆಂದು ತೀರ್ಮಾನಿಸಿದ.
ಮೇ ತಿಂಗಳಿನಲ್ಲಿ ಚೆನ್ನೈಗೆ ಆತ ಬಂದ. ಒಂದುವಾರ ಇದ್ದು ಮೂರು ಬಾಟ್ಲಿ (೮೪ ಮಾತ್ರೆ) ಸೊಫೋಸ್ಬುವೀರ್ (ಸೊವಾಲ್ಡಿ) ಮಾತ್ರೆ ಪಡೆದು ಮರಳುವುದು ಆತನ ಉದ್ದೇಶವಾಗಿತ್ತು. ಆದರೆ ಅ?ರಲ್ಲಿ ಡೈವರ್ಶನ್ವಿರೋಧಿ ಕ್ರಮ ಜಾರಿಯಾಗಿತ್ತು. ಯಾರದೋ ಶಿಫಾರಸಿನಿಂದ ಡಾಕ್ಟರನ್ನು ಹಿಡಿದಾಗ ಮಾತ್ರೆ ಬೇಕಿದ್ದರೆ ಹೊಸದಾಗಿ ಲಿವರ್ ಟೆಸ್ಟ್ ಆಗಬೇಕು ಎಂದಾಯಿತು. ಅದು ಮುಗಿದಾಗ ಮಾತ್ರೆ ಒಂದು ಬಾಟ್ಲಿ ಮಾತ್ರ ಸಿಗುತ್ತದೆ ಎಂದರು; ಅಂದರೆ ಆತ ಪುನಃ ಮಾತ್ರೆಗಾಗಿ ಬರಬೇಕಾಗುತ್ತದೆ. ಅಂತೂ ಭಾರೀ ಕ?ದಲ್ಲಿ ಮೂರು ಬಾಟ್ಲಿ ಸಿಕ್ಕಿತು. ಊರಿಗೆ ಮರಳಿದ ಜೆಫ್ರೀಸ್ ತನ್ನ ಬ್ಲಾಗಿನಲ್ಲಿ ಹೀಗೆ ಬರೆದುಕೊಂಡ: “ಮೂರು ಚಿಕ್ಕ ಪ್ಲಾಸ್ಟಿಕ್ ಜಾರ್ಗಳು; ಅದರಲ್ಲಿ ತಲಾ ೨೮ ಮಾತ್ರೆ. ಇದಕ್ಕಾಗಿ ಅರ್ಧ ಜಗತ್ತು ಸುತ್ತಿದ್ದೇನೆ; ಎಷ್ಟೋ ಕಷ್ಟಪಟ್ಟಿದ್ದೇನೆ.” ಆತನಿಗೆ ತಮಾ? ಎನಿಸಿತು. ಈ ಮೂರು ಸಣ್ಣ ಜಾರ್ಗಳೇ ಆರೋಗ್ಯ ಮತ್ತು ರೋಗ, ಬದುಕು-ಸಾವು, ಸಂತೋ?ದ ಜೀವನ – ಅಸಹನೀಯ ಜೀವನಗಳ ನಿರ್ಣಾಯಕ ಆಗಬೇಕೇ ಎನ್ನಿಸಿತು. ಇದು ಆತನಮೇಲೆ ಆಳವಾದ ಪ್ರಭಾವ ಬೀರಿತು. ತಾನು ಅದೃಷ್ಟಶಾಲಿ ಎನಿಸಿದಂತೆಯೇ ಅಪರಾಧಿಯೂ ಹೌದು ಎನಿಸಿತು. ಜಗತ್ತಿನಲ್ಲಿ ಕೋಟ್ಯಂತರ ಜನರಿಗೆ ಈ ಔ?ಧಿ ಬೇಕು; ಅವರು ಒದ್ದಾಡುತ್ತಾ ಇದ್ದಾರೆ ಎಂಬುದರಿಂದಾಗಿ ಅಪರಾಧಪ್ರಜ್ಞೆ. “ಇದು ಕ್ರೂರ; ಇದು ಹುಚ್ಚು. ಇನ್ನೊಬ್ಬನ ಕಷ್ಟವನ್ನು ನಿವಾರಿಸುವಂಥ ಒಂದು ವಸ್ತುವನ್ನು ಯಾವುದೇ ಮನು? ತಡೆಯಬಹುದೇ?” ಎಂದು ಜೆಫ್ರೀಸ್ ತನ್ನಲ್ಲೇ ರೋದಿಸಿದ. ಗಿಲಿಯಾಡ್ನ ವ್ಯವಹಾರದ ನೀತಿ ಇದಕ್ಕೆ ನೇರ ಕಾರಣ; ಒಬ್ಬ ವ್ಯಕ್ತಿಗೆ ಕಂಡದ್ದು ಒಂದು ಮಹಾನ್ ಸಂಸ್ಥೆಗೆ ಕಾಣುವುದಿಲ್ಲ; ಇದೇ ಅಚ್ಚರಿ.
ಹೊಸರೀತಿಯ ಸಂಬಂಧ
ಇದು ಭಾರತದ ಔಷಧಿ ಉದ್ಯಮ ಮತ್ತು ಪಾಶ್ಚಾತ್ಯ ಕಂಪೆನಿಗಳ ಹೊಸರೀತಿಯ ಸಂಬಂಧವೆನಿಸಿದೆ. ಭಾರತದ ಔಷಧಿ ಸಂಸ್ಥೆಗಳು ದಶಕಗಳಿಂದ ಪಶ್ಚಿಮದ ಬೃಹತ್ ಕಂಪೆನಿಗಳ ?ರತ್ತುಗಳಿಗೆ ಒಪ್ಪುತ್ತಿರಲಿಲ್ಲ. ಔಷಧಿಯ ಅಗತ್ಯವಿರುವ ಯಾರು ಎಲ್ಲೇ ಇರಲಿ ನಾವು ಒದಗಿಸುತ್ತೇವೆ ಎನ್ನುತ್ತಿದ್ದವು. ೧೯೮೦-೧೯೯೦ರ ದಶಕದಲ್ಲಿ ಜಗತ್ತಿನಲ್ಲಿ, ಮುಖ್ಯವಾಗಿ ಆಫ್ರಿಕದ ದೇಶಗಳಲ್ಲಿ ಎಚ್ಐವಿ ವೇಗವಾಗಿ ಹಬ್ಬಿದಾಗ ಪಾಶ್ಚಾತ್ಯ ಕಂಪೆನಿಗಳು ಅದನ್ನು ಎದುರಿಸಲು ಸಜ್ಜಾದವು. ಚಿಕಿತ್ಸೆಯ ವೆಚ್ಚ ವಾರ್ಷಿಕ ೧೦,೦೦೦ ಡಾಲರ್ನಿಂದ ೧,೦೦೦ ಡಾಲರಿಗೆ ಇಳಿಯಿತು. ಆದರೂ ಹಲವರಿಗೆ ಅದು ದುಬಾರಿ ಎನಿಸಿತು. ಆಗ ೨೦೦೧ರಲ್ಲಿ ಸಿಪ್ಲಾದ ಅಧ್ಯಕ್ಷ ಯೂಸುಫ್ ಹಮೀದ್ ಅವರು ಆಫ್ರಿಕದ ರೋಗಿಗಳಿಗೆ ಮೂರು ಔಷಧಿ ಸೇರಿಸಿದ ಕಾಕ್ಟೈಲನ್ನು ದಿನಕ್ಕೆ ಒಂದು ಡಾಲರ್ ಬೆಲೆಯಲ್ಲಿ ಒದಗಿಸುವುದಾಗಿ ಮುಂದೆ ಬಂದರು; ಅದೆಷ್ಟು ಬಡ ರೋಗಿಗಳಿಗೆ ನೆರವಾದರು.
ಭಾರತದಲ್ಲಿ ಕೂಡ ಇದೇ ರೀತಿ ಮುಕ್ತವಾಗಿ ಮಾರಬಹುದಿತ್ತು. ೧೯೭೦ರ ದಶಕದಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಒಂದು ಪ್ರಗತಿಪರ ಶಾಸನವನ್ನು ಜಾರಿಗೆ ತಂದಿದ್ದು, ಅದರಂತೆ ಭಾರತದಲ್ಲಿ ವೈದ್ಯಕೀಯ ಉತ್ಪನ್ನಗಳನ್ನು ಪೇಟೆಂಟ್ ಮಾಡುವಂತಿರಲಿಲ್ಲ. “ಆಫ್ರಿಕದಲ್ಲಿ ನಮಗೆ ಪೇಟೆಂಟ್ ಇದೆ; ಅಲ್ಲಿ ನೀವು ಮಾರಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ” ಎಂದು ಪಾಶ್ಚಾತ್ಯ ಕಂಪೆನಿಗಳು ಸಿಪ್ಲಾಗೆ ಎಚ್ಚರಿಕೆ ನೀಡಿದವು. ಆದರೆ ವಿವಿಧ ಸರ್ಕಾರಿ ಮತ್ತು ಉದ್ಯಮದ ವೇದಿಕೆಗಳಲ್ಲಿ ಸಿಪ್ಲಾ ಹಾಗೂ ಹೋರಾಟಗಾರರು ಹೋರಾಡಿ ಜಯಗಳಿಸಿದರು. ಕಾಕ್ಟೈಲ್ನ ವಿವಿಧ ಔ?ಧಿಗಳ ಪೇಟೆಂಟ್ ಹೊಂದಿರುವ ಕಂಪೆನಿಗಳು ನಡೆಸುವ ಜೆನೆರಿಕ್ ಔ?ಧಿ ಉತ್ಪಾದನೆ-ಮಾರಾಟಕ್ಕೆ ಅಡ್ಡಿಪಡಿಸಬಾರದೆಂದು ದಕ್ಷಿಣ ಆಫ್ರಿಕ ಸ್ಪರ್ಧಾ ಆಯೋಗವು ತೀರ್ಪುನೀಡಿತು. ೨೦೦೫ರ ಹೊತ್ತಿಗೆ ಸಿಪ್ಲಾದಿಂದ ಮಿಲಿಯಗಟ್ಟಲೆ ಮಾತ್ರೆಗಳನ್ನು ಹಡಗಿಗೆ ತುಂಬಿಸಿ ಆಫ್ರಿಕಕ್ಕೆ ಕಳುಹಿಸಲಾಗುತ್ತಿತ್ತು. ಎ? ಜೀವಗಳು ಉಳಿದವು. ಹಮೀದ್ ‘ಪ್ರಾಣರಕ್ಷಕ’ ಎಂಬ ಗೌರವಕ್ಕೆ ಪಾತ್ರರಾದರು. ಭಾರತ ಕೂಡ ಹಲವಾರು ಜೆನೆರಿಕ್ ಔ?ಧಿಗಳನ್ನು ಉತ್ಪಾದಿಸಿ ಜಗತ್ತಿನ ವಿವಿಧ ಬಡರಾ?ಗಳಿಗೆ ರಫ್ತುಮಾಡಿ ಅವುಗಳ ಆಶಾಕಿರಣವಾಗಿತ್ತು. ‘ಜಗತ್ತಿನ ಫಾರ್ಮಸಿ’ ಎಂಬ ಹೆಸರಿಗೆ ಪಾತ್ರವಾಗಿತ್ತು. ಅದು ಈಗ ಗತ ಇತಿಹಾಸವಾಗುತ್ತಿದೆಯೆ?
ದೊಡ್ಡ ಔಷಧಿ ಕಂಪೆನಿಗಳು ಕ್ರಮೇಣ ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧದ ಸ್ವರೂಪವನ್ನು ಬದಲಿಸುತ್ತಾ ಬಂದವು. ವ್ಯಾಪಾರದ ಬಗೆಗಿನ ಚರ್ಚೆಯ ವೇಳೆ ಬೌದ್ಧಿಕ ಆಸ್ತಿಯ ವಿ?ಯವನ್ನು ತುರುಕಲು ತಮ್ಮ ದೇಶದ ಸರ್ಕಾರಗಳ ಮೇಲೆ ಒತ್ತಡ ತಂದವು. ೧೯೯೪ರಲ್ಲಿ ವ್ಯಾಪಾರಸಂಬಂಧಿ ಬೌದ್ಧಿಕ ಆಸ್ತಿ ಹಕ್ಕಿನ ವಿಷಯ(ಟಿಆರ್ಐಪಿಎಸ್-ಟ್ರಿಪ್ಸ್)ಕ್ಕೆ ಭಾರತ ಸೇರಿದಂತೆ ಜಗತ್ತಿನ 162 ದೇಶಗಳು ಸಹಿ ಹಾಕಿದವು. ಅದರ ಪ್ರಕಾರ ಔಷಧಿ ಸೇರಿದಂತೆ ಎಲ್ಲ ‘ಸಂಶೋಧನೆ’ಗಳಿಗೆ ಪೇಟೆಂಟ್ ನೀಡಬೇಕು ಎಂದಾಯಿತು. ಐಪಿಆರ್ಗೆ ವ್ಯಾಪಾರದ ಸಂಬಂಧ ಮಾಡಿದ್ದು ಅದೇ ಪ್ರಥಮ. ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳಿಗೆ ಅದರ ಪೂರ್ತಿ ಜಾರಿಗೆ 10 ವರ್ಷಗಳ ಕಾಲಾವಕಾಶ ನೀಡಲಾಯಿತು.
ಭಾರತದ ಚೌಕಾಸಿ
ಆದರೆ ಭಾರತ ಚೌಕಾಸಿ ಮಾಡಿ ‘ಕಡ್ಡಾಯ ಲೈಸೆನ್ಸ್ ನೀಡುವ ನಿರ್ಣಾಯಕ ಷರತ್ತನ್ನು ಸೇರಿಸಲು ಯತ್ನಿಸಿತು. ಪೇಟೆಂಟ್ ಹೊಂದಿರುವ ಕಂಪೆನಿ ಜನಾರೋಗ್ಯದ ಹಿತಾಸಕ್ತಿಯನ್ನು ಪೂರೈಸದಿದ್ದರೆ ಪೇಟೆಂಟನ್ನು ಉಲ್ಲಂಘಿಸಿ ಇತರರಿಗೆ ಉತ್ಪಾದಿಸಲು ಅವಕಾಶ ನೀಡಬಹುದು ಎಂಬುದೇ ‘ಕಡ್ಡಾಯ ಲೈಸೆನ್ಸ್. ಇಷ್ಟು ವರ್ಷಗಳಲ್ಲಿ ಭಾರತ ಒಮ್ಮೆ ಮಾತ್ರ ಇದನ್ನು ಬಳಸಿಕೊಂಡಿದ್ದು, ಅದನ್ನು ಈಗಾಗಲೆ ಹೇಳಲಾಗಿದೆ (ನ್ಯಾಟ್ಕೋದ ಕಿಡ್ನಿ, ಲಿವರ್ ಕ್ಯಾನ್ಸರ್ ಔ?ಧಿ – ನೆಕ್ಸಾವರ್).
ಟ್ರಿಪ್ಸ್ ಅನುಷ್ಠಾನಕ್ಕಾಗಿ ೨೦೦೫ರ ಹೊತ್ತಿಗೆ ೧೯೭೦ರ ಶಾಸನಕ್ಕೆ ತಿದ್ದುಪಡಿ ತರಲಾಯಿತು. ಆಗ ಕೇಂದ್ರದ ಯುಪಿಎ ಸರ್ಕಾರಕ್ಕೆ ಎಡಪಕ್ಷಗಳ ಬೆಂಬಲವಿತ್ತು. ಅವುಗಳ ಒತ್ತಾಯದ ಮೇರೆಗೆ ಹೊಸ ಕಾನೂನಿಗೆ ಸೆಕ್ಷನ್ ೩(ಡಿ)ಯನ್ನು ಸೇರಿಸಲಾಯಿತು. “ಒಂದು ವಸ್ತುವಿನ ಉಪಯೋಗ(ದಕ್ಷತೆ) ವನ್ನು ಹೆಚ್ಚಿಸದಿದ್ದರೆ ಪೇಟೆಂಟ್ ನೀಡುವುದಿಲ್ಲ” ಎಂಬುದೇ ಆ ನಿಯಮ. ಪೇಟೆಂಟ್ ಅರ್ಜಿಗಳನ್ನು ತಿರಸ್ಕರಿಸಲು ಸೆಕ್ಷನ್ ೩(ಡಿ)ಯನ್ನು ತುಂಬ ಸಲ ಬಳಸಲಾಗಿದ್ದು, ಅದು ಬೃಹತ್ ಕಂಪೆನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ಯಾನ್ಸರ್ ಔಷಧಿ ಗ್ಲೀವೆಕ್ಗೆ ಸಂಬಂಧಿಸಿ ನೊವಾರ್ಟಿಸ್ ಚೆನ್ನೈ ಕಛೇರಿಗೆ ಅರ್ಜಿ ಸಲ್ಲಿಸಿದಾಗ ಪೇಟೆಂಟ್ ನಿರಾಕರಿಸಲಾಯಿತು. ಕಂಪೆನಿ ಸುಪ್ರೀಂ ಕೋರ್ಟ್ನಲ್ಲಿ ಅದನ್ನು ಪ್ರಶ್ನಿಸಿದಾಗ ಏಪ್ರಿಲ್ ೨೦೧೩ರಲ್ಲಿ ನ್ಯಾಯಾಲಯ ಅರ್ಜಿಯನ್ನು ತಳ್ಳಿಹಾಕಿತು. ಹೀಗೆ ಸೆಕ್ಷನ್ ೩(ಡಿ) ಒಂದೆಡೆ ದೇಶದ ಔ?ಧಿ ಉತ್ಪಾದಕರಿಗೆ ಉತ್ತಮ ರಕ್ಷಣೆ ನೀಡಿದರೆ, ಇನ್ನೊಂದೆಡೆ ಬಹುರಾಷ್ಟ್ರೀಯ ಕಂಪೆನಿಗಳು ಟ್ರಿಪ್ಸ್ನ ಒಂದು ಲೋಪವನ್ನು ಬಳಸಿಕೊಂಡು ಟ್ರಿಪ್ಸ್ ಒಪ್ಪಂದದ ಆಶಯಭಂಗ ಮಾಡಲಾಗುತ್ತಿದೆ ಎಂದು ಟೀಕಿಸಿದವು. ಪೇಟೆಂಟ್ಗೆ ರಕ್ಷಣೆ ಇಲ್ಲದ ಕಾರಣ ಔ?ಧಿ ಉದ್ಯಮದ ಸಂಶೋಧನೆಗೆ ಹಿನ್ನಡೆ, ತನ್ಮೂಲಕ ಉದ್ಯಮಕ್ಕೆ ಹಾನಿ ಆದೀತು ಎಂದವು. ತಮ್ಮ ಸರ್ಕಾರ ಮತ್ತು ವ್ಯಾಪಾರೀ ಸಂಸ್ಥೆಗಳ ಮೂಲಕ ಭಾರತದ ಮೇಲೆ ಒತ್ತಡ ಹಾಕುತ್ತಲೇ ಇದ್ದವು. ಅಮೆರಿಕದ ಸೆನೆಟ್ ಮತ್ತು ಕಾಂಗ್ರೆಸ್ಗಳು ಅದಕ್ಕಾಗಿ ಲಾಬಿ ನಡೆಸುತ್ತಿದ್ದವು. ಕಾಂಗ್ರೆಸ್ನ ಸುಮಾರು ೧೭೦ ಜನ ಸದಸ್ಯರು ಅಧ್ಯಕ್ಷ ಒಬಾಮರಿಗೆ ಬರೆದ ಒಂದು ಪತ್ರದಲ್ಲಿ, “ಅಮೆರಿಕ ಮತ್ತು ಭಾರತದ ನಡುವಣ ವ್ಯಾಪಾರದಲ್ಲಿ ಭಾರೀ ಅಸಮತೋಲನ ಉಂಟಾಗಿದೆ. ಭಾರತ ಅಮೆರಿಕದ ಉದ್ಯಮಕ್ಕೆ ಹಾನಿಮಾಡುತ್ತಿದೆ” ಎಂದು ದೂರಲಾಗಿತ್ತು. ಹಾಗೂ ಅಮೆರಿಕ ತಯಾರಿಸಿದ ಔ?ಧಿಗಳನ್ನು ಭಾರತ ಖರೀದಿಸುವುದನ್ನು ಕಡ್ಡಾಯಗೊಳಿಸಬೇಕು ಎನ್ನುವ ಪ್ರಸ್ತಾವ ಕೂಡ ಆ ಪತ್ರದಲ್ಲಿತ್ತು. ಯುಪಿಎ ಸರ್ಕಾರ ಈ ನಿಟ್ಟಿನ ಬಾಹ್ಯ ಒತ್ತಡವನ್ನು ಸಾಕ? ಎದುರಿಸಿತು.
ಮೋದಿಗೆ ಸ್ವಾಗತ
ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರಬಹುದು ಎನ್ನುವ ಅಂಶ ಕಾಣಿಸುತ್ತಲೇ ಅದರಿಂದ ದೇಶ-ವಿದೇಶದಲ್ಲಿ ಉದ್ಯಮಕ್ಕೆ ಒಳ್ಳೆಯದಾಗುತ್ತದೆ ಎಂದು ಕೆಲವು ಲಾಬಿಗಳು ಭಾವಿಸಿದವು. ಗುಜರಾತ್ ಮುಖ್ಯಮಂತ್ರಿಯಾಗಿ ಅವರು ಉದ್ಯಮಸ್ನೇಹಿ ರಾಜಕಾರಣಿ ಎನಿಸಿದ್ದರು. ಐಪಿಆರ್ ವಿಷಯದಲ್ಲಿ ಈ ಸರ್ಕಾರ ಏನು ಮಾಡಬಹುದೆಂಬುದು ಹಲವರ ನಿರೀಕ್ಷೆಯಾಗಿತ್ತು. ಮೋದಿ ಗೆಲವಿಗೆ ಮುನ್ನವೇ ಅಮೆರಿಕ ಸರ್ಕಾರ ಮತ್ತು ಉದ್ಯಮದ ಲಾಬಿಗಳು ಬರಬಹುದಾದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದವು (ಮೋದಿಗೆ ವೀಸಾ ನಿರಾಕರಿಸಿದವರು ಕೆಂಪು ಜಮಖಾನೆ ಹಾಸಿ ಅವರ ದಾರಿ ಕಾಯತೊಡಗಿದರು). ಫೆಬ್ರುವರಿ ೨೦೧೪ರಲ್ಲಿ ಅಮೆರಿಕ ವ್ಯಾಪಾರ ಪ್ರತಿನಿಧಿ (ಯುಎಸ್ಟಿಆರ್) ಎಂಬ ಸರ್ಕಾರಿ ಸಂಸ್ಥೆ ಭಾರತವನ್ನು ಟೀಕಿಸುತ್ತಾ, “ಕಳೆದ ೨೫ ವರ್ಷಗಳಿಗೂ ಹೆಚ್ಚಿನ ಭಾಗದಲ್ಲಿ ಭಾರತ ನಮ್ಮ ‘ಆದ್ಯತಾ ನಿರೀಕ್ಷೆ ಪಟ್ಟಿ’ಯಲ್ಲಿತ್ತು” ಎಂದು ನೆನಪಿಸಿತು. ೨೦೧೪ರಲ್ಲಿ ಅಪಾರ ಶಕ್ತಿಶಾಲಿ ಔ?ಧಿ ಸಂಸ್ಥೆ ಪಿಎಚ್ಆರ್ಎಂಎ ಸೇರಿದಂತೆ ಲಾಬಿ ಗುಂಪುಗಳು ‘ಆದ್ಯತಾ ವಿದೇಶೀ ದೇಶ’ ಎಂಬಲ್ಲಿ ಭಾರತದ ಸ್ಥಾನವನ್ನು ಇಳಿಸಲು ಕರೆನೀಡಿದವು. ಇದರಿಂದ ತುಂಬ ಪರಿಣಾಮವಾಗುತ್ತದೆ. ಅಂತಹ ದೇಶಗಳ ವಿರುದ್ಧ ಶಿಕ್ಷೆ-ನಿರ್ಬಂಧಗಳನ್ನು ಹಾಕಲಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಲಾಯಿತು.
ಚುನಾವಣಾ ಫಲಿತಾಂಶಕ್ಕೆ ಒಂದೆರಡು ವಾರ ಮೊದಲು ಏಪ್ರಿಲ್ ೩೦, ೨೦೧೪ರಂದು ಬಿಡುಗಡೆಗೊಂಡ ಐಪಿಆರ್ ‘ಅಪರಾಧ’ಗಳ ಬಗೆಗಿನ ತನ್ನ ವಾರ್ಷಿಕ ಸಮೀಕ್ಷೆಯಲ್ಲಿ ಯುಎಸ್ಟಿಆರ್ ಭಾರತದ ವಿರುದ್ಧ ಹಲವು ದೂರುಗಳನ್ನು ಮಾಡಿತು. ಸೆಕ್ಷನ್ ೩(ಡಿ)ಯಿಂದಾಗಿ ಉಪಯುಕ್ತ ಸಂಶೋಧನೆಗಳ ಪೇಟೆಂಟ್ಗೆ ಮಿತಿ ಬಂದಂತಾಗಿದೆ ಎಂದ ಸಮೀಕ್ಷೆ, ವೈದ್ಯಕೀಯಕ್ಕೆ ಸಂಬಂಧಿಸಿ ಭಾರತ ‘ಕಡ್ಡಾಯ ಲೈಸೆನ್ಸ್’ ನೀಡುವುದನ್ನು ಟೀಕಿಸಿತು. ಅದೇ ವೇಳೆಗೆ ಭಾರತವನ್ನು ಕೀಳುಮಾಡಬಾರದು ಎನ್ನುವ ನೈಪುಣ್ಯ ಆ ಸಮೀಕ್ಷೆಯಲ್ಲಿತ್ತು. “ಹೊಸ ಸರ್ಕಾರ ಬಂದಾಗ ಮುಂದಿನ ತಿಂಗಳುಗಳಲ್ಲಿ ಅಮೆರಿಕ ತನ್ನ ಪ್ರಯತ್ನವನ್ನು ಇಮ್ಮಡಿಗೊಳಿಸುತ್ತದೆ. ಐಪಿ (ಬೌದ್ಧಿಕ ಆಸ್ತಿಹಕ್ಕು) ಸಂಬಂಧಿ ವಿ?ಯಗಳಲ್ಲಿ ನಿರಂತರ ಹಾಗೂ ಪರಿಣಾಮಕಾರಿ ಸಂಬಂಧವನ್ನು ಇರಿಸಿಕೊಳ್ಳಲಾಗುವುದು” ಎಂದು ತಿಳಿಸಿತ್ತು.
ಹೊಸ ಸರ್ಕಾರದ ಮೇಲೆ ವ್ಯಾಪಾರ ಸಂಬಂಧಿ ನಿರ್ಬಂಧ ಬರಬಹುದೆಂಬ ಭೀತಿ ಮೂಡಿಸಲು ಯುಎಸ್ಟಿಆರ್ ಅಕ್ಟೋಬರ್ ೨೦೧೪ರಲ್ಲಿ ಒಂದು ಹೊಸ ಸಮೀಕ್ಷೆ (out of cycle review) ನಡೆಸುವುದಾಗಿ ಹೇಳಿತು. ಇದು ಮಾಮೂಲಿನಂತೆ ಕಂಡರೂ ಐಪಿ ವಿ?ಯದಲ್ಲಿ ಪ್ರಗತಿ ತೋರಿಸಬೇಕೆನ್ನುವ ಎಚ್ಚರಿಕೆ ಮಾತಿನಂತಿತ್ತು. ಐಪಿಗೆ ಸಂಬಂಧಿಸಿ ಮೋದಿಯವರ ಎಲ್ಲ ಮಾತು, ನಿರ್ಧಾರಗಳನ್ನು ಎಂಎನ್ಸಿಗಳು ಗಮನಿಸುತ್ತಲೇ ಇವೆ.
ಅದನ್ನೆಲ್ಲ ಅಧ್ಯಯನ ಮಾಡಿದ ಪತ್ರಕರ್ತ ಸ್ವರಾಜ್ ಪಾಲ್ ಬರೂವಾ ‘ಐಪಿಆರ್ ಬಗೆಗಿನ ಕೇಂದ್ರಸರ್ಕಾರದ ನಿಲವಿನಲ್ಲಿ ಪರಸ್ಪರ ವಿರೋಧವಿದೆ’ ಎಂದಿದ್ದಾರೆ. ಐದು ದಿನಗಳ ಅಮೆರಿಕ ಪ್ರವಾಸವನ್ನು ಮುಗಿಸಿದ ಪ್ರಧಾನಿ ಮೋದಿ ಸೆಪ್ಟೆಂಬರ್ ೩೦, ೨೦೧೪ರಂದು ಒಬಾಮ ಅವರೊಂದಿಗೆ ನೀಡಿದ ಜಂಟಿ ಹೇಳಿಕೆಯಲ್ಲಿ, “ವಾರ್ಷಿಕ ನೆಲೆಯಲ್ಲಿ ಉನ್ನತಮಟ್ಟದ ಐಪಿ ಕ್ರಿಯಾ ತಂಡವನ್ನು ಸ್ಥಾಪಿಸುತ್ತೇವೆ. ಅದರ ಮೂಲಕ ‘ವ್ಯಾಪಾರ ನೀತಿ ವೇದಿಕೆ’ಯ ಭಾಗವಾಗಿ ಸೂಕ್ತ ನಿರ್ಧಾರ ಮತ್ತು ತಾಂತ್ರಿಕ ಮಟ್ಟದ ಸಭೆಯನ್ನು ನಡೆಸಲಾಗುವುದು” ಎಂದು ಹೇಳಿದರು. ಅದೊಂದು ರಾಜತಾಂತ್ರಿಕ ಹೇಳಿಕೆಯಾದರೂ ಜೆನೆರಿಕ್ ತಯಾರಕರು ಮತ್ತು ಹೋರಾಟಗಾರರು ಅಲ್ಲಿನ ಅಪಾಯವನ್ನು ಗುರುತಿಸಿ, “ಭಾರತದ ಐಪಿ ನೀತಿಯಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಅಮೆರಿಕಕ್ಕೆ ಇಲ್ಲ. ಸರ್ಕಾರ ಈ ಒತ್ತಡಕ್ಕೆ ಮಣಿಯಬಾರದು” ಎಂದು ಎಚ್ಚರಿಸಿದರು. ಕೆಲವು ಸಂಸ್ಥೆಗಳು ಮತ್ತು ಹೋರಾಟಗಾರರು ಮೋದಿ ಅವರಿಗೆ ಬಹಿರಂಗ ಪತ್ರ ಬರೆದು, “ಪೇಟೆಂಟ್ ವಿಷಯದಲ್ಲಿ ದೇಶದ ಸಾರ್ವಭೌಮತೆಗೆ ಧಕ್ಕೆಯಾಗದಿರಲಿ. ಈ ಸಂಬಂಧವಾಗಿ ರಾಜಿಮಾಡಿಕೊಳ್ಳಬೇಡಿ” ಎಂದು ಮನವಿಮಾಡಿದರು. ಅಮೆರಿಕ ಪಾಲುದಾರನಾಗಿರುವ ಯಾವುದೇ ಗುಂಪಿಗೆ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವುದರಿಂದ ದೇಶದ ಸಾರ್ವಭೌಮತೆಗೆ ಅಪಾಯ ಉಂಟಾಗಬಹುದು. ದೇಶದ ಸಂವಿಧಾನದ ಪ್ರಕಾರ ಪ್ರಜಾಸತ್ತಾತ್ಮಕವಾಗಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಮೇಲೆ ಅಂತಹ ದ್ವಿಪಕ್ಷೀಯ ವ್ಯವಸ್ಥೆಗೆ ಅಧಿಕಾರ ಇರಬಾರದು ಎಂದು ಒತ್ತಾಯಿಸಿದರು.
‘ಜಾಗತಿಕಮಟ್ಟ’ದ ಒಲವು
ಕಳೆದವ? ಏಪ್ರಿಲ್ನಲ್ಲಿ ಮೋದಿ ಒಂದೆಡೆ, “ನಮ್ಮ ಐಪಿ ಹಕ್ಕನ್ನು ಜಾಗತಿಕ ವ್ಯವಸ್ಥೆಗೆ ಸಮಾನವಾಗಿ ಹೊಂದಿಸಿಕೊಳ್ಳದಿದ್ದಲ್ಲಿ ಜಗತ್ತು ನಮ್ಮೊಂದಿಗೆ ಸಂಬಂಧ ಇರಿಸಿಕೊಳ್ಳುವುದಿಲ್ಲ. ಐಪಿಆರ್ ವಿ?ಷಯದಲ್ಲಿ ನಾವು ಜಗತ್ತಿನಲ್ಲಿ ವಿಶ್ವಾಸ ಮೂಡಿಸಿದಾಗ ಅವರ ಕ್ರಿಯಾಶೀಲ ಚಟುವಟಿಕೆಗಳು ನಮ್ಮ ಕಡೆಗೆ ಬರಬಹುದು” ಎಂದು ಹೇಳಿದಾಗ ಹಲವರಿಗೆ ಆಘಾತವಾಯಿತು. ಟ್ರಿಪ್ಸ್ ವಿಷಯದಲ್ಲಿ ಭಾರತ ಅದರ ನಿಯಮಗಳಿಗೆ ಪೂರ್ತಿ ಹೊಂದಿಕೊಳ್ಳುವುದೆಂದು ಪ್ರಧಾನಿ ಹೇಳಿದರೆಂದು ವ್ಯಾಖ್ಯಾನಿಸಿತು. ಪತ್ರಕರ್ತ ಬರೂವಾ, “ಇಂತಹ ಹೇಳಿಕೆ ಸ್ಥಳೀಯ ಸಂಶೋಧನೆಗೆ ಪ್ರತಿಕೂಲ ಹಾಗೂ ಭಾರತದ ಪೇಟೆಂಟಿಗೆ ಅನಾರೋಗ್ಯಕರ” ಎನ್ನುವ ಅಭಿಪ್ರಾಯ ನೀಡಿದರು. ಆದರೆ ಅದೇ ಹೊತ್ತಿಗೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಅವರು ನೀಡಿದ ಹೇಳಿಕೆ ವಿಭಿನ್ನವಾಗಿತ್ತು. “ಭಾರತದಲ್ಲಿ ಐಪಿ ರಕ್ಷಣೆಗೆ ಬೇಕಾದಷ್ಟು ವ್ಯವಸ್ಥೆ ಇದೆ. ಪ್ರಬಲವಾದ ಪೇಟೆಂಟ್ ವ್ಯವಸ್ಥೆ ಬೇಕೆಂಬುದು ಭಾರತದ ನಿಲವು. ಇದು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಹೊಂದುವಂತಿದೆ. ಐಪಿಆರ್ ವಿ?ಯದಲ್ಲಿ ಯಾರೂ ನಮ್ಮನ್ನು ಪ್ರಶ್ನಿಸುವ ಅಗತ್ಯವಿಲ್ಲ” ಎಂದು ಆಕೆ ಹೇಳಿದ್ದರು.
ಆದರೂ ಕೇಂದ್ರಸರ್ಕಾರದ ಕೆಲವು ಕ್ರಮಗಳು ಆಸಕ್ತ ಜನರಲ್ಲಿ ಆತಂಕ ಮೂಡಿಸಿದ್ದು ಸುಳ್ಳಲ್ಲ. ಜುಲೈ, ೨೦೧೪ರಲ್ಲಿ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ (ಡಿಐಪಿಪಿ) ರಾಷ್ಟ್ರೀಯ ಐಪಿ (ಬೌದ್ಧಿಕ ಆಸ್ತಿ) ನೀತಿಯನ್ನು ರೂಪಿಸಲು ಸಮಿತಿಯೊಂದನ್ನು ರಚಿಸಿತು. ಆಗಲೇ ಐಪಿಆರ್ ನೀತಿ ಇದ್ದ ಕಾರಣ ಹೊಸ ಸಮಿತಿ ಏಕೆ ಎಂಬುದೇ ಅಸ್ಪ?ವಾಗಿತ್ತು. ದೇಶದ ಐಪಿ ಕಾನೂನುಗಳಲ್ಲಿ ಸಾಮರಸ್ಯ ಇಲ್ಲದ ಕಾರಣ ಒಂದು ‘ಮುನ್ನೋಟದ ದಾಖಲೆ’ ತಯಾರಿಸುವುದು ಸಮಿತಿಯ ಉದ್ದೇಶ ಎಂದು ತಿಳಿಸಲಾಯಿತು. ಮೂರುತಿಂಗಳು ಕೆಲಸಮಾಡಿದ ಸಮಿತಿ ಒಂದು ವರದಿಯನ್ನು ನೀಡಿತು.
ಆದರೆ ಅದರ ಬೆನ್ನಿಗೇ ಡಿಐಪಿಪಿ ಅದೇ ಕೆಲಸ ಮಾಡಲು ಮತ್ತೊಂದು ‘ಚಿಂತನ ಚಿಲುಮೆ’ಯನ್ನು ರಚಿಸಿತು! ಮೊದಲಿನ ಸಮಿತಿಯವರು ಆಕ್ಷೇಪಿಸಿದಾಗ ಅದಕ್ಕೆ ಉತ್ತರ ಕೂಡ ನೀಡಲಿಲ್ಲ. ಕೊನೆಗೆ ತಿಳಿದುಬಂದ ಅಂಶವೆಂದರೆ, ಮೊದಲ ವರದಿಯನ್ನು ಏನುಮಾಡುವುದೆಂದು ಡಿಐಪಿಪಿಗೆ ಗೊತ್ತಾಗಲಿಲ್ಲವಂತೆ. ಭಾರತ ತನ್ನ ವ್ಯವಸ್ಥೆಗೆ ತಿದ್ದುಪಡಿ ತರುತ್ತಾ ಇದೆ. ಇಲ್ಲಿ ಬಂಡವಾಳ ಹೂಡಿಕೆಗೆ ಪರವಾದ ನೀತಿ ಬರುತ್ತಾ ಇದೆ ಎಂಬ ಭಾವನೆಯನ್ನು ಅಮೆರಿಕಕ್ಕೆ ಉಂಟುಮಾಡುವುದು ಅನಂತರದ ಚಿಂತನ ಚಿಲುಮೆಯ ಉದ್ದೇಶ – ಎನ್ನುವ ವಿವರಣೆ ಕೇಳಿಬಂತು. ತಮ್ಮ ವರದಿ ರಾ?ದ ಹಿತಾಸಕ್ತಿಯನ್ನು ರಕ್ಷಿಸುವಂತಿತ್ತು ಎಂದು ಮೊದಲ ಸಮಿತಿಯ ಓರ್ವ ಸದಸ್ಯರು ಹೇಳಿದ್ದಾರೆ.
ಎರಡನೇ ಸಮಿತಿಯಲ್ಲಿ ಹಿತಾಸಕ್ತಿಗಳ ಘ?ಣೆ ಇತ್ತು ಎಂಬ ಮಾತು ಕೂಡ ಕೇಳಿಬಂದಿದೆ. ಸದಸ್ಯರಾಗಿದ್ದ ನ್ಯಾಯವಾದಿ ಪ್ರತಿಭಾ ಸಿಂಗ್ ಅವರು ಗಿಲಿಯಾಡ್ ಸೇರಿದಂತೆ ಬಿಗ್ ಫಾರ್ಮಾಗಳ ಹಿತಾಸಕ್ತಿಗೆ ಪರವಾದವರು; ಆಕೆಯ ಪತಿ ನ್ಯಾಯವಾದಿ ಮಣೀಂದರ್ ಸಿಂಗ್ ಅರುಣ್ ಜೇಟ್ಲಿಯವರ ಜೂನಿಯರ್ ಆಗಿದ್ದವರು. ಪ್ರತಿಭಾ ಸಿಂಗ್ ಗಿಲಿಯಾಡನ್ನು ಪ್ರತಿನಿಧಿಸಿ ಸೊವಾಲ್ಡಿಯ ಪೇಟೆಂಟ್ಗೆ ಅರ್ಜಿ ಸಲ್ಲಿಸಿದ್ದರು. ಎರಡನೇ ಸಮಿತಿ ೨೦೧೪ರ ಡಿಸೆಂಬರ್ನಲ್ಲಿ ಒಂದು ವರದಿ ನೀಡಿ ಮುಂದೆ ಏಪ್ರಿಲ್ನಲ್ಲಿ ಅಂತಿಮ ಡ್ರಾಫ್ಟ್ ನೀಡಿತು. ಅದರ ಬಗ್ಗೆ ಅಸ್ಪ? ಹಾಗೂ ಚಿಂತನೆ ಮತ್ತು ಸಮರ್ಥನೆಗಳಿಲ್ಲದ ಶಿಫಾರಸುಗಳನ್ನು ನೀಡಿದೆ ಎನ್ನುವ ವಿಮರ್ಶೆ ಬಂತು. ಡಿಐಪಿಪಿ ಉನ್ನತಾಧಿಕಾರಿ ಅಮಿತಾಭ್ ಕಾಂತ್ ಅವರು, “ಇದು ಒಳಸುರಿ (ಇನ್ಪುಟ್) ಮಾತ್ರ; ಇನ್ನಾರು ವಾರದಲ್ಲಿ ಅಂತಿಮರೂಪ ನೀಡುತ್ತೇವೆ” ಎನ್ನುವ ವಿವರಣೆ ನೀಡಿದರು; ಆದರೆ ಅಂಥದ್ದೇನೂ ಬರಲಿಲ್ಲ.
ಪುನರ್ವಿಮರ್ಶೆಯ ಭರವಸೆ
‘ಕಡ್ಡಾಯ ಲೈಸೆನ್ಸ್’ ಕೂಡ ಭಾರತ-ಅಮೆರಿಕಗಳ ನಡುವೆ ವಿವಾದದ ವಸ್ತುವಾಗಿದ್ದು, ಈಗ ಅದರಲ್ಲೂ ಅಮೆರಿಕದ ಒತ್ತಡ ಫಲ ನೀಡಿದಂತಿದೆ. ಅಮೆರಿಕ- ಭಾರತ ಬ್ಯುಸಿನೆಸ್ ಕೌನ್ಸಿಲಿನ ಅಧ್ಯಕ್ಷ ಮುಖೇಶ್ ಅಘಿ ಅವರು, “ಯಾವುದೇ ಕಡ್ಡಾಯ ಲೈಸೆನ್ಸ್ ನೀಡುವುದಿಲ್ಲ ಎಂದು ಭಾರತ ಸರ್ಕಾರ ಅಮೆರಿಕದ ಕಂಪೆನಿಗಳಿಗೆ ಭರವಸೆ ನೀಡಿದೆ” ಎಂದು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದು ಸಾಲದು; ಸರ್ಕಾರ ಲಿಖಿತ ಘೋ?ಣೆ ಮಾಡಬೇಕೆನ್ನುವ ಒತ್ತಾಯವೂ ಬಂದಿದೆ. ಜೊತೆಗೆ ಇದನ್ನೊಂದು ವಿಲಕ್ಷಣ ವಿದ್ಯಮಾನ ಎಂದು ಕೂಡ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ಸರ್ಕಾರ ಸಾರ್ವಜನಿಕವಾಗಿ ಈ ಬಗ್ಗೆ ಏನೂ ಹೇಳಿಲ್ಲ; ಅದನ್ನು ಇನ್ಯಾರೋ ಹೇಳುತ್ತಿದ್ದಾರೆ. ಎಂದರೆ ಸರ್ಕಾರಕ್ಕೆ ಜನರ ವಿರೋಧದ ಅಳುಕು ಇರಬಹುದೆ?
ಅಮೆರಿಕದ ನಡವಳಿಕೆಯ ಆಧಾರದಲ್ಲಿ ಭಾರತ ಐಪಿ ನೀತಿಯ ಪುನರ್ವಿಮರ್ಶೆ ಮಾಡುವ ಭರವಸೆ ನೀಡಿರಬೇಕೆಂದು ನಂಬಲಾಗಿದೆ. ಯುಎಸ್ಟಿಆರ್ ಒಂದು ಹೇಳಿಕೆ ನೀಡಿ, “ಈಚಿನ ತಿಂಗಳುಗಳಲ್ಲಿ ಭಾರತ ಉಪಯುಕ್ತ ಬದ್ಧತೆಯನ್ನು ತೋರಿಸಿದೆ. ಐಪಿ ವಿ?ಯದಲ್ಲಿ ಉನ್ನತಮಟ್ಟದ ವ್ಯವಹಾರವನ್ನು ಸಾಂಸ್ಥೀಕರಣಗೊಳಿಸಿದ್ದು, ನಿರ್ದಿ? ಕೆಲಸವನ್ನು ಮಾಡುವುದು, ಸಹಕಾರ ಹಾಗೂ ಮಾಹಿತಿ ನಿಯಮವನ್ನು ಆಳಗೊಳಿಸುವುದು ಅದರಲ್ಲಿ ಸೇರಿದೆ” ಎಂದು ತಿಳಿಸಿತು. ಒಬಾಮ ಭಾರತ ಭೇಟಿಯ ಬಳಿಕ ಫೆಬ್ರುವರಿ (೨೦೧೫)ಯಲ್ಲಿ ನಡೆದ ಯುಎಸ್ಟಿಆರ್ ಸಭೆಯಲ್ಲಿ, “ಭಾರತ ಸರ್ಕಾರದ ಮುಕ್ತತೆ ಮತ್ತು ಸಂಶೋಧನೆ ಬಗೆಗಿನ ಪ್ರಯತ್ನದಿಂದಾಗಿ ಇಂದಿನ ತನಕ ನಾವು ಎದುರಿಸಿದ ಐಪಿ ಸಮಸ್ಯೆಯ ಪರಿಹಾರದಲ್ಲಿ ಪ್ರಗತಿ ಕಂಡುಬಂದಿದೆ” ಎಂದು ತಿಳಿಸಲಾಯಿತು. ಭಾರತದ ಐಪಿ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಮೋದಿ ಆಸಕ್ತಿ ತೋರಿಸಿದ್ದಾರೆ ಎಂದು ಅಮೆರಿಕದ ವ್ಯಾಪಾರಿ ಸಂಸ್ಥೆ ಪಿಎಚ್ಆರ್ಎಂಎ ಸಮಾಧಾನ ವ್ಯಕ್ತಪಡಿಸಿದ್ದೂ ಆಯಿತು.
ಆಫ್ರಿಕದಲ್ಲಿ ಆತಂಕ
ಭಾರತ ತನ್ನ ನಿಲವನ್ನು ಬದಲಿಸುತ್ತಿದೆ ಎಂಬುದು ಹಲವರ ಅರಿವಿಗೆ ಬರತೊಡಗಿತು. ಭಾರತದ ಜೆನೆರಿಕ್ ಔ?ಧಿಗಳನ್ನು ನಂಬಿರುವ ಆಫ್ರಿಕದ ದೇಶಗಳು ತೀವ್ರ ಆತಂಕಕ್ಕೆ ಗುರಿಯಾದವು. ಅಕ್ಟೋಬರ್ನಲ್ಲಿ ಜರಗಿದ ಭಾರತ-ಆಫ್ರಿಕ ಶೃಂಗಸಭೆಯಲ್ಲಿ ಆಫ್ರಿಕ ಖಂಡದ ಹಲವು ನಾಯಕರು, ಅಮೆರಿಕದ ಒತ್ತಡಕ್ಕೆ ಮಣಿಯಬೇಡಿ ಎಂದು ಒತ್ತಾಯಿಸಿದರು. “ನಾವು ಭಿಕ್ಷೆ ಬೇಡುತ್ತಾ ಇಲ್ಲ. ಜಗತ್ತಿನ ಅತ್ಯಂತ ಅಪಾಯದಲ್ಲಿರುವ ಜನರನ್ನು ನಾವು ರಕ್ಷಿಸಬೇಕಾಗಿದೆ” ಎಂದು ಎಚ್ಐವಿ- ಏಡ್ಸ್ ಕುರಿತ ವಿಶ್ವಸಂಸ್ಥೆ ಜಂಟಿ ಕಾರ್ಯಕ್ರಮದ ನಿರ್ವಾಹಕ ನಿರ್ದೇಶಕ ಮೈಕೇಲ್ ನಿಡಿಬೆ ನೆನಪಿಸಿದರು. ದಕ್ಷಿಣ ಆಫ್ರಿಕದ ಆರೋಗ್ಯಮಂತ್ರಿ ಮೊಟ್ಸೋಲೆಡಿ ಗಟ್ಟಿ ಮಾತುಗಳಲ್ಲಿ ತಮ್ಮ ವಾದವನ್ನು ಮಂಡಿಸಿದರು. “ಭಾರತ ನಿಧಾನವಾಗಿ ತನ್ನ ಪೇಟೆಂಟ್ ನೀತಿಯನ್ನು ದುರ್ಬಲಗೊಳಿಸುವಂತೆ ಕಾಣುತ್ತಿದೆ. ನಮಗೆ ತುಂಬ ಭಯ-ಚಿಂತೆ ಉಂಟಾಗಿದೆ. ಭಾರತ ತನ್ನ ಪ್ರಗತಿಪರ ಕಾನೂನುಗಳನ್ನು ಹಿಮ್ಮುಖ(ರಿವರ್ಸ್)ಗೊಳಿಸುತ್ತಿದೆ ಎನ್ನಲಾಗಿದೆ. ಐಪಿ (ಬೌದ್ಧಿಕ ಆಸ್ತಿ ಹಕ್ಕು) ವಿ?ಯದಲ್ಲಿ ನಾವು ಭಾರತದ ಹಾದಿಯಲ್ಲಿ ಸಾಗುತ್ತಾ ನಮ್ಮ ಹಿತಾಸಕ್ತಿಯನ್ನು ಕಾಪಾಡುತ್ತಾ ಬಂದಿದ್ದೇವೆ. ಅವರೇ ನಮ್ಮ ಹೀರೋಗಳು. ಅವರೀಗ ತಮ್ಮ ಕಾನೂನನ್ನು ಬದಲಿಸಿದರೆ ಆಫ್ರಿಕದಲ್ಲಿ ಭಾರೀ ಸಂಖ್ಯೆಯ ಜನ ಸಾಯುವುದು ನಿಶ್ಚಿತ” ಎಂದವರು ತಮ್ಮ ಅಳಲನ್ನು ತೋಡಿಕೊಂಡರು.
ಬಹುರಾಷ್ಟ್ರೀಯ ಔ?ಧಿ ಕಂಪೆನಿಗಳ ಲಾಬಿ ಮತ್ತು ಹಲವು ದೇಶಗಳು ಭಾರತದ ಮೇಲೆ ಒತ್ತಡವನ್ನು ತೀವ್ರಗೊಳಿಸಿದ ಕಾರಣ ಭಾರತ ತನ್ನ ನೀತಿಯನ್ನು ಬದಲಿಸಿ ಜನಸಾಮಾನ್ಯರ ಕೈಗೆಟಕುವ ಜೆನೆರಿಕ್ ಔ?ಧಿಗಳಿಗೆ ತಡೆಹಾಕುವಂತಿದೆ. ಪ್ರಾದೇಶಿಕ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳಲ್ಲಿ ಕೂಡ ಇದೇ ಒತ್ತಡ ಬರುತ್ತಿದೆ. ಜನಾರೋಗ್ಯದ (Pubಟiಛಿ heಚಿಟಣh) ಪರವಾದ ವಾದವನ್ನು ಎತ್ತಿಹಿಡಿಯಲು ಕ?ವಾಗುತ್ತಿದೆ. ಜೆನೆರಿಕ್ ಔ?ಧಿಗಳ ವಿರುದ್ಧ ಜಪಾನ್, ದಕ್ಷಿಣ ಕೊರಿಯಗಳಿಂದಲೂ ಒತ್ತಡ ಬಂದಿದೆ. ಐರೋಪ್ಯ ಒಕ್ಕೂಟ, ಸ್ವಿಜರ್ಲೆಂಡ್ ಕೂಡ ಒತ್ತಡ ತರುವ ಮೂಲಗಳಾಗಿವೆ.
ಅಮೆರಿಕವಂತೂ ಭಾರತ ತನ್ನ ಪೇಟೆಂಟ್ ನೀತಿಯನ್ನು ತಿದ್ದುವ ಬಗ್ಗೆ ಶತಾಯಗತಾಯ ಪ್ರಯತ್ನಿಸುತ್ತಿದೆ. ಆ ಒತ್ತಡ ಕೇವಲ ಅತ್ಯುನ್ನತರ ಮಟ್ಟದಲ್ಲಿ ಉಳಿದಿಲ್ಲ. ಕೆಳಗಿನವರೆಗೂ ಬಂದು ಪೇಟೆಂಟ್ ನೀಡುವ ಅಥವಾ ತಿರಸ್ಕರಿಸುವ ಹಂತದವರನ್ನೂ ಅದು ಮುಟ್ಟಿದೆ ಎನ್ನುವ ಅಭಿಪ್ರಾಯ ‘ಕಾರವಾನ್’ ತಂಡದ್ದು. ಗಿಲಿಯಾಡ್ ಕಂಪೆನಿಯ ಅರ್ಜಿಯನ್ನು ತಿರಸ್ಕರಿಸಿದ ಕರಾರ್ ಅವರ ಮೇಲೆ ಒತ್ತಡವಿರಲಿಲ್ಲವೆಂದು ಮೇಲ್ನೋಟಕ್ಕೆ ಕಂಡರೂ, ಮುಂದಿನ ಬೆಳವಣಿಗೆಗಳು ಅದು ನಿಜವಲ್ಲ ಎಂದು ಸಾಬೀತುಪಡಿಸುವಂತಿದ್ದವು. ಗಿಲಿಯಾಡ್ನ ವಕೀಲರು ಕರಾರ್ ಅವರನ್ನು ಮೇಲಿಂದ ಮೇಲೆ ಭೇಟಿ ಮಾಡಿದ್ದರಂತೆ.
ಹೆಪಟೈಟೀಸ್-ಸಿಯ ಶ್ರೇಷ್ಠ ಔಷಧಿ ಸೊಪೋಸ್ಬುವೀರ್ (ಸೊವಾಲ್ಡಿ) ಬಗೆಗಿನ ಗಿಲಿಯಾಡ್ನ ಅರ್ಜಿಯನ್ನು ತಿರಸ್ಕರಿಸುತ್ತಲೇ ಮೇಲಿನ ಅಧಿಕಾರಿಗಳು ಕರಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಡತವನ್ನು ಮತ್ತೆ ತೆರೆಯುವಾಗ ಕರಾರ್ ಬದಲಿಗೆ ಇನ್ನೊಬ್ಬ ಅಧಿಕಾರಿ ಬಂದಿದ್ದ. “ನಮ್ಮ ಒಬ್ಬ ಶ್ರೇ? ಅಧಿಕಾರಿಯನ್ನು ಹೇಗೆ ನಡೆಸಿಕೊಂಡರು ಎಂಬುದರಿಂದ ನಾವು ಭಯಭೀತರಾಗಿದ್ದೇವೆ. ಹಿಂದೆ ನಾವು ನಮ್ಮ ಕಛೇರಿಯಲ್ಲಿ ಎಂದೂ ಇಂತಹ ಒತ್ತಡವನ್ನು ಕಂಡಿಲ್ಲ” ಎಂದು ದೆಹಲಿ ಪೇಟೆಂಟ್ ಕಛೇರಿಯ ಓರ್ವ ಅಧಿಕಾರಿ ಹೇಳಿದರಂತೆ.
ರೋಗಪೀಡಿತರಿಗೆ ಚಿಕಿತ್ಸೆ ನೀಡಬೇಕು; ಚಿಕಿತ್ಸೆ ರೋಗಿಯ ಕೈಗೆ ಎಟುಕಬೇಕು. ಅಂದರೆ ದುಬಾರಿ ಆಗಬಾರದು ಎಂಬುದು ಸಹಜ ನ್ಯಾಯ. ಜಗತ್ತು ಇದುತನಕ ಆ ರೀತಿಯಲ್ಲಿ ನಡೆದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕಿ ಮಾರ್ಗರೆಟ್ ಚಾನ್ ಅವರು ಜನವರಿ ೨೪, ೨೦೧೪ರಷ್ಟು ಈಚೆಗೆ ಕೂಡ “ಜನಾರೋಗ್ಯದ ವಿ?ಯದಲ್ಲಿ ಸೂಕ್ತವಾದುದನ್ನು ಮಾಡುವ ಸ್ವಾತಂತ್ರ್ಯ ಸರ್ಕಾರಗಳಿಗೆ ಇರಬೇಕು; ಹಿತಾಸಕ್ತಿಯ ಗುಂಪುಗಳು ಅವುಗಳನ್ನು ಬಲಾತ್ಕರಿಸಬಾರದು” ಎಂದು ಹೇಳಿದ್ದಾರೆ. ಆಯಾ ದೇಶದ ಪರಿಸ್ಥಿತಿಗನುಗುಣವಾದ ಶಾಸನವನ್ನು ರಚಿಸಿಕೊಳ್ಳಬೇಕೆಂದು ಕೂಡ ಡಬ್ಲ್ಯುಎಚ್ಓ ಹೇಳುತ್ತದೆ.
ಆದರೆ ನಡೆಯುತ್ತಿರುವುದೇನು? ಜಾಗತೀಕರಣದ ಅಮಾನವೀಯ ಮುಖಕ್ಕೆ ತಡೆ ಎಲ್ಲಿಂದ ಬರಬೇಕು?
344 ಎಫ್ಡಿಸಿ ಔಷಧಿ ನಿಷೇಧ
ಒಂದೆಡೆ ಕೇಂದ್ರಸರ್ಕಾರ ತನ್ನ ಪೇಟೆಂಟ್ ಶಾಸನವನ್ನು ದುರ್ಬಲಗೊಳಿಸುವ ವಿಷಯದಲ್ಲಿ ಬಹುರಾಷ್ಟ್ರೀಯ ಔಷಧಿ ಕಂಪೆನಿಗಳು ಮತ್ತು ಅಮೆರಿಕದಂತಹ ದೇಶಗಳ ಒತ್ತಡಕ್ಕೆ ಸಿಲುಕಿದರೆ ಇನ್ನೊಂದೆಡೆ ಕೇಂದ್ರ ಆರೋಗ್ಯ ಸಚಿವಾಲಯ ದೀರ್ಘಕಾಲದಲ್ಲಿ ಪ್ರಯೋಜನ ನೀಡಬಲ್ಲ ಒಂದು ದಿಟ್ಟಕ್ರಮಕ್ಕೆ ಅಡಿ ಇಟ್ಟಿದೆ. ಅದೆಂದರೆ 344 ನಿರ್ದಿಷ್ಟ ಪ್ರಮಾಣ ಸಂಯೋಜನೆಯ ಔಷಧಿಗಳ ನಿಷೇಧ. ಇದರಲ್ಲಿ ಕಾಫ್ಸಿರಪ್ ‘ಕೊರೆಕ್ಸ್’, ‘ವಿಕ್ಸ್ ಆಕ್ಷನ್–೫೦೦’, ತಲೆನೋವಿನ ಮಾತ್ರೆ ‘ಸಾರಿಡಾನ್’ ಕೂಡ ಸೇರಿವೆ. ಇನ್ನೂ ಸುಮಾರು 500 ಎಫ್ಡಿಸಿ ಔಷಧಿಗಳನ್ನು ನಿಷೇಧಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಈ ಸಂಶಯಿತ ಔಷಧಿಗಳ ನಿಷೇಧದಿಂದ ಅವುಗಳನ್ನು ನೆಚ್ಚಿಕೊಂಡ ಕೆಲವು ಬಳಕೆದಾರರಿಗೆ ಮತ್ತು ಸಂಬಂಧಪಟ್ಟ ಔಷಧಿ ಕಂಪೆನಿಗಳಿಗೆ ಆಘಾತವಾಯಿತು. ನೆಗಡಿ, ಫ್ಲೂ ಔಷಧಿಗಳು, ನೋವು ನಿವಾರಕಗಳು, ಮಧುಮೇಹ, ಹೈಪರ್ಟೆನ್ಷನ್, ಕೊಲೆಸ್ಟರಾಲ್ ತಡೆಗಳು, ಕೆಲವು ಆಂಟಿಬಯೋಟಿಕ್ಗಳು, ಕಾಫ್ಸಿರಪ್ಗಳು ನಿಷೇಧಿತ ಔಷಧಿಗಳಲ್ಲಿ ಸೇರಿವೆ. ಸ್ವಲ್ಪ ತಲೆನೋವು ಕಾಣಿಸಿಕೊಂಡರೆ, ನೆಗಡಿಯಾದರೆ, ಸ್ವಲ್ಪ ಮೈಕೈನೋವು–ಜ್ವರ ಬಂದರೆ ಮಾತ್ರೆನುಂಗುವವರು, ಸ್ವಲ್ಪ ಗಂಟಲುಕೆರೆತ ಕಾಣಿಸಿದರೆ ಸಿರಪ್ ಕುಡಿಯುವವರು ನಮ್ಮ ನಡುವೆ ಬೇಕ? ಇದ್ದಾರೆ. ತಾವು ನಂಬಿದ ಔಷಧಿ ಹಾನಿಕರವೆ ಎಂಬುದೀಗ ಅವರ ಅಚ್ಚರಿ; ಇನ್ನೇನು ಮಾಡುವುದು ಎಂಬುದವರ ಚಿಂತೆ.
ಈ ಔ?ಧಿಗಳಿಂದ ಅಪಾಯವಿದೆ; ಇದಕ್ಕಿಂತ ಬೇರೆ ಸುರಕ್ಷಿತ ಔಷಧಿಗಳು ಲಭ್ಯ ಇವೆ ಎಂದು ಸರ್ಕಾರ ಹೇಳುತ್ತದೆ. ಬೆಳಗಾವಿ ಕೆಎಇ ವಿಶ್ವವಿದ್ಯಾಲಯದ ಕುಲಪತಿ ಡಾ|| ಚಂದ್ರಕಾಂತ ಕೋಕಟೆ ಅವರ ನೇತೃತ್ವದ ಸಮಿತಿ 344 ಔಷಧಿಗಳು ಅಸುರಕ್ಷಿತ ಎಂದ ಕಾರಣ ಸರ್ಕಾರ ಅವುಗಳನ್ನು ನಿ?ಧಿಸಿತು. ಅವುಗಳಲ್ಲಿ ಹಲವು ಪಾಶ್ಚಾತ್ಯದೇಶಗಳಲ್ಲಿ ಈಗಾಗಲೆ ನಿಷೇಧಿತವಾಗಿವೆ. ಇನ್ನೊಂದು ಕೇಂದ್ರ ತಜ್ಞರ ಸಮಿತಿ ಬೇರೆ ೫೦೦ಕ್ಕೂ ಅಧಿಕ ಎಫ್ಡಿಸಿ ಔಷಧಿಗಳ ಪರಿಶೀಲನೆಯನ್ನು ನಡೆಸುತ್ತಿದೆ.
ಹಠಾತ್ ನಿಷೇಧದಿಂದ ಸಾವಿರಾರು ಕೋಟಿ ರೂ. ನಷ್ಟವಾಗುತ್ತಿದೆ ಎಂದು ಔ?ಧಿ ಕಂಪೆನಿಗಳು ದೂರಿಕೊಂಡರೆ, ತಜ್ಞರು, ನಿಮ್ಮ ಉತ್ಪನ್ನಗಳು ಸುರಕ್ಷಿತವೆಂದು ಸಾಬೀತುಮಾಡಿ ಎಂದು ಔಷಧಿ ಕಂಪನಿಗಳಿಗೆ ಹೇಳಿದ್ದೇವೆ. ಅವರು ಅದರಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ. ಎಫ್ಡಿಸಿ ಔಷಧಿಯಲ್ಲಿ ೨–೩ ಮೆಡಿಕಲ್ ಮಾಲೆಕ್ಯೂಲ್ಗಳಿರುತ್ತವೆ. ಪ್ರತಿಯೊಂದು ಎಫ್ಡಿಸಿಯನ್ನು ಹೊಸ ಔಷಧಿಯಂತೆ ಪರಿಶೀಲಿಸಬೇಕು; ಏಕೆಂದರೆ ಮಾಲೆಕ್ಯೂಲ್ಗಳು ಒಟ್ಟಾದಾಗ ಪರಿಣಾಮ ಬೇರೆ ಆಗಬಹುದು ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಹೇಳಿದರೆ, ಇಂತಹ ಪ್ರತಿ ಔಷಧಿಗೂ ಲೈಸನ್ಸ್ ಕೊಡುವುದು ತ್ರಾಸದಾಯಕ. ಇದಕ್ಕೆ ಹಲವು ಹಂತದ ಕ್ಲಿನಿಕಲ್ ಪರೀಕ್ಷೆ ಬೇಕಾಗುತ್ತದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಔಷಧಿ ಕಂಪನಿಗಳು ಕೇಂದ್ರಸರ್ಕಾರವನ್ನು ಬೈಪಾಸ್ ಮಾಡಿ ರಾಜ್ಯದ ಡ್ರಗ್ ಅಧಿಕಾರಿಗಳಿಂದ ಒಪ್ಪಿಗೆ ಪಡೆಯುವುದೂ ಇದೆ; ರಾಜ್ಯದವರಲ್ಲಿ ತಜ್ಞತೆ ಇರುವುದಿಲ್ಲ ಎಂದವರು ವಿವರಿಸುತ್ತಾರೆ.
ಹೆಚ್ಚಿನ ಡಾಕ್ಟರ್ಗಳು ನಿಷೇಧವನ್ನು ಬೆಂಬಲಿಸುತ್ತಾ, ಒಂದು ಔ?ಧಿಯಲ್ಲಿರುವ ಎರಡು ಕಂಪೌಂಡ್ಗಳು ಮಾಡುವ ಕೆಲಸದಲ್ಲಿ ಪರಸ್ಪರ ಹಸ್ತಕ್ಷೇಪ ಮಾಡಿ ಅದರಿಂದ ದೇಹದಲ್ಲಿ ವಿಷವಸ್ತು ಉಂಟಾಗಬಹುದು; ಒಂದು ಮಾಲೆಕ್ಯೂಲ್ ಇನ್ನೊಂದನ್ನು ತಡೆದು ಔಷಧಿ ನಿಷ್ಕ್ರಿಯ ಆಗಲೂಬಹುದು ಎಂದಿದ್ದಾರೆ. ಆಂಟಿಬಯೋಟಿಕ್ ಇರುವ ಎಫ್ಡಿಸಿಗಳನ್ನು ವಿವೇಚನೆ ಇಲ್ಲದೆ ಸೇವಿಸಿದರೆ ಆಂಟಿಬಯೋಟಿಕ್ ನಿರೋಧಕತೆ (ರೆಸಿಸ್ಟೆನ್ಸ್) ಉಂಟಾಗಬಹುದು. ಅದಲ್ಲದೆ ಎಫ್ಡಿಸಿಯ ಪ್ರತಿಯೊಂದು ಘಟಕದ ಅಡ್ಡಪರಿಣಾಮಗಳನ್ನು ಪತ್ತೆಮಾಡುವುದು ಕಷ್ಟ. ಇನ್ನು ಈ ಔಷಧಿಗಳಲ್ಲಿ ನಿರ್ದಿಷ್ಟ ಡೋಸೇಜ್ ಇರುವ ಕಾರಣ ರೋಗಿಯ ಆವಶ್ಯಕತೆಯಂತೆ ಬದಲಿಸಲು ಅಸಾಧ್ಯ; – ಮುಂತಾದ ಅಂಶಗಳನ್ನು ಗಮನಿಸಲಾಗಿದೆ.
ಅದೇ ವೇಳೆ ಎಲ್ಲ ಎಫ್ಡಿಸಿಗಳು ಅಸುರಕ್ಷಿತವಲ್ಲ. ಅವುಗಳನ್ನು ವೈಜ್ಞಾನಿಕವಾಗಿ ಜೋಡಿಸಿದಾಗ ಕ?ದಲ್ಲಿರುವ ರೋಗಿಗಳಿಗೆ ಪರಿಣಾಮಕಾರಿ ಎನಿಸಬಲ್ಲದು. ಕಾಂಬಿನೇಶನ್ ಡ್ರಗ್ನಿಂದಾಗಿ ಕ್ಷಯ (ಟಿಬಿ), ಕ್ಯಾನ್ಸರ್, ಮಲೇರಿಯದಂತಹ ರೋಗಗಳಿಗೆ ಕಡಮೆ ಮಾತ್ರೆ ಸಾಕಾಗುತ್ತದೆ; ಮತ್ತು ವೆಚ್ಚವೂ ತಗ್ಗಬಹುದು. ಅಗತ್ಯವೆಂದರೆ ಬಿಗಿಯಾದ ತಪಾಸಣೆ (ಸ್ಕ್ರೀನಿಂಗ್) ಬೇಕು; ಆದರೆ ಭಾರತದಲ್ಲಿ ಅದರ ಕೊರತೆ ತುಂಬ ಇದೆ.