
“ಅಯ್ಯೋ ಮಂಕೆ, ಯಾಕೆ ಹಾಗೆ ನಿಂತೆ? ನಾನು ಕಣೋ ಕಲ್ಲೇಶಿ, ಗುರುತಾಗಲಿಲ್ಲವಾ?”
ಧ್ವನಿ ಗುರುತಿಸಿದೆ. ಓಹ್, ನಮ್ಮ ಕಲ್ಲೇಶಿ! ಎಷ್ಟೊಂದು ಬದಲಾವಣೆಯಾಗಿದೆ ಇವನಲ್ಲಿ!
“ಏನೋ, ಹ್ಯಾಗಿದ್ದೀ?” ಎಂದು ಕೇಳಿದೆ.
ಹೆಗಲ ಮೇಲೆ ಕೈ ಹಾಕಿದವನು, “ಚೆನ್ನಾಗಿದ್ದೀನಿ ಕಣೋ, ಬಾ ಇಲ್ಲೇ ಒಂದು ಬೈಟು ಕಾಫಿ ಕುಡಿಯೋಣ” ಎಂದು ಸಮೀಪದಲ್ಲಿದ್ದ ಹೋಟೆಲ್ಗೆ ಕರೆದುಕೊಂಡು ಹೋದ.
ಹಿಂದೆ ತೆಳ್ಳಗೆ ಪೀಚಲಾಗಿದ್ದ ಇವನ ದೇಹ ಈಗ ಗುಂಡುಗುಂಡಾಗಿ ಇದೆ. ಕೆನ್ನೆಗಳಲ್ಲಿ ಕೆಂಪು, ಕುತ್ತಿಗೆ ಕೈಗಳಲ್ಲಿ ಬಂಗಾರದ ಹೊಳಪು ಕಾಣಿಸುತ್ತಿತ್ತು. “ಈಗೇನು ಮಾಡ್ತಿದ್ದೀಯಾ?” – ಕೇಳಿದೆ.
“ಟ್ರೈನಿಂಗ್ ಸೆಂಟರ್ ಒಂದನ್ನು ನಡೆಸುತ್ತಿದ್ದೇನೆ. ನಿಮ್ಮ ಊರಿನಲ್ಲಿಯೂ ಇದರ ಬ್ರ್ಯಾಂಚೊಂದನ್ನು ತೆರೆಯಬೇಕೆಂದು ನೋಡಿಕೊಂಡು ಹೋಗಲು ಬಂದೆ” ಎಂದ.
“ಯಾವುದು, ಕಂಪ್ಯೂಟರ್ ಟ್ರೈನಿಂಗಾ?”
“ಕಂಪ್ಯೂಟರ್ ಅಲ್ಲ, ನನ್ನದು ಲವ್ ಟ್ರೈನಿಂಗ್ ಸೆಂಟರ್” ಎಂದ.
“ಆಂ! ಏನೆಂದೆ?”
“ಹೌದು ಕಣೋ, ’ಲವ್ ಟ್ರೈನಿಂಗ್ ಸೆಂಟರ್’ ಅಂತ. ಇದರಲ್ಲಿ ನಮ್ಮ ಹಳ್ಳೀ ಹುಡುಗರಿಗೆ ಲವ್ ಮಾಡುವ ಬಗ್ಗೆ ಟ್ರೈನಿಂಗ್ ಕೊಡುತ್ತೇವೆ.
“ಲವ್ ಟ್ರೈನಿಂಗ್ ಸೆಂಟರ್ರಾ….?” ಸುಸ್ತು ಹೊಡೆದು ಅವನ ಮುಖವನ್ನೇ ನೋಡುತ್ತಾ ನಿಂತೆ. ಆತ ನನ್ನ ಮುಖದ ಮೇಲಾದ ಕೋಲಾಹಲಗಳನ್ನು ನೋಡಿ ಮಜಾ ತಗೊಂಡ. ಸರ್ವರ್ ತಂದ ಕಾಫಿಯನ್ನು ಗುಟುಕರಿಸುತ್ತಾ ಕಳೆದುಹೋಗಿದ್ದ ಚೈತನ್ಯವನ್ನು ಸ್ವಲ್ಪ ಸ್ವಲ್ಪವಾಗಿ ಗಳಿಸಿಕೊಳ್ಳಲು ಪ್ರಯತ್ನಿಸಿದೆ.
“ಬಾಲ್ಯದಿಂದಲೂ ನನ್ನ ಸ್ವಭಾವ ಏನೆಂದು ನಿನಗೆ ಗೊತ್ತೇ ಇದೆ. ನಾಲ್ಕು ಜನರಿಗೆ ಉಪಕಾರ ಮಾಡಬೇಕು ಎನ್ನುವ ಗುರಿಯನ್ನು ಹೊತ್ತವನು ನಾನು. ಹಾಗಾಗಿಯೇ ಇಂತಹ ಟ್ರೈನಿಂಗ್ ಸೆಂಟರನ್ನು ಪ್ರಾರಂಭಿಸಿ ಯಶಸ್ವಿಯಾದೆ.”
ಕಾಫಿ ಕುಡಿಯುತ್ತಿದ್ದವನಿಗೆ ನಗು ಬಂದು ಕುಡಿದದ್ದು ನೆತ್ತಿಗೇರಿದಂತಾಗಿ ಕೆಮ್ಮಲಾರಂಭಿಸಿದೆ. ಕಣ್ಣುಗಳಲ್ಲಿ ನೀರೂರಿತು.
“ನಿಧಾನ ಕಣೋ, ನಿಧಾನ…” ತಲೆಯ ಮೇಲೆ ಮೆಲ್ಲಗೆ ತಟ್ಟಿದ.
“ತಮಾಷೆ ಮಾಡುವ ಸ್ವಭಾವ ನಿನಗಿನ್ನೂ ಹೋಗಿಲ್ಲವಲ್ಲೋ! ಅಲ್ಲಾ ಕಣೊ, ಸಮಾಜಸೇವೆಗೂ ಲವ್ವಿಗೂ ಏನೋ ಸಂಬಂಧ?”
“ತಾಳು, ಅವಸರ ಯಾಕೆ ಮಾಡ್ತೀಯಾ? ಹೇಳುವುದು ಪೂರ್ತಿ ಕೇಳಿಸಿಕೋ.”
“ಹಹ್ಹಾ… ಹೇಳಪ್ಪ… ಅದೇನು ಹೇಳ್ತಿಯಾ ಹೇಳು; ದೇಶದ ಜನಸಂಖ್ಯೆ ಬೆಳೆಸುವುದೇ ದೊಡ್ಡ ದೇಶಸೇವೆಯೆಂದು ನೀನು ಭಾವಿಸಿರುವಂತಿದೆ.”
ಹಳ್ಳಿಯ ಸಮಸ್ಯೆಗೆ ಪರಿಹಾರ
“ಮೊದಲು ಸರಿಯಾಗಿ ಕೇಳಿಸಿಕೊ… ನೀನೂ ನಾನೂ ಇಬ್ಬರೂ ಹಳ್ಳಿಯಿಂದ ಬಂದವರು. ಹಳ್ಳಿಗಳಲ್ಲಿ ಈಗ ಏನು ಸಮಸ್ಯೆಯಾಗಿದೆ ಎನ್ನುವುದು ನಿನಗೆ ಗೊತ್ತೇ ಇದೆ. ಕೃಷಿವೃತ್ತಿಯಲ್ಲಿರುವ ತರುಣರು ಮದುವೆಯಾಗಲು ಹೆಣ್ಣು ಸಿಗದೆ ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ. ಹಳ್ಳಿಯಲ್ಲಿರುವ ಯುವಕರೂ ಮದುವೆಯಾಗಿ ಚೆನ್ನಾಗಿ ಜೀವನ ನಡೆಸುವಂತಾಗಬೇಕು… ಅಲ್ಲವೇ? ಅದೇ ಉದ್ದೇಶದಿಂದ ಹಳ್ಳಿಯ ಹುಡುಗರಿಗೆ ಲವ್ ಮಾಡಿ ಮದುವೆಯಾಗುವುದು ಹೇಗೆ ಎಂಬ ಟ್ರೈನಿಂಗ್ ಕೊಡಲು ಪ್ರಾರಂಭಿಸಿದೆ. ನಮ್ಮ ತರಬೇತಿಯ ಕಾರಣದಿಂದ ಹಳ್ಳಿಯ ಕಡೆಗೆ ನವವಧುಗಳು ಬರುತ್ತಿರುವುದನ್ನು ಕಂಡ ಜನರು ಇಂದು ದೊಡ್ಡ ಸಂಖ್ಯೆಯಲ್ಲಿ ನಮ್ಮ ಸೆಂಟರ್ ಕಡೆಗೆ ಬರುತ್ತಿದ್ದಾರೆ” ಎಂದ.
“ಅಂತೂ ನಿನ್ನ ಅನುಭವವನ್ನು ಚೆನ್ನಾಗಿ ಎನ್ಕ್ಯಾಶ್ ಮಾಡಿಕೊಂಡೆ ಎನ್ನು.”
“ಹೌದು ಕಣೋ ಅದರಲ್ಲಿ ತಪ್ಪೇನು? ನನ್ನ ಹೆಂಡತಿ ಪದ್ಮ ಸಹ ನನ್ನ ಸಮಾಜಸೇವೆ ಕಮ್ ಬಿಸಿನೆಸ್ಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದಾಳೆ.”
“ಅದು ಸರಿ. ನಿನ್ನ ಈ ಬಿಸಿನೆಸ್ಗೆ ಮಹಿಳೆಯರಿಂದ ವಿರೋಧ ಬರಲಿಲ್ಲವೇ?”
“ಛೇ, ಅವರೇಕೆ ವಿರೋಧಿಸುತ್ತಾರೆ? ಹಳ್ಳಿಯ ಜೀವನದಲ್ಲಿ ಒಂದು ಸಲ ಮುಳುಗಿದ ಮೇಲೆ ಅವರಿಗೆ ಗೊತ್ತಾಗಿಯೇ ಆಗುತ್ತದೆ ಪೇಟೆಯ ಜೀವನಕ್ಕಿಂತ ಹಳ್ಳಿಯ ಜೀವನವೇ ಉತ್ತಮವೆಂದು. ತಮ್ಮ ಕಣ್ಣು ತೆರೆಸಿದ್ದಕ್ಕಾಗಿ ಎಷ್ಟೊಂದು ಜನ ನಮ್ಮ ಶಿಕ್ಷಣದ ಫಲಾನುಭವಿಗಳು ನನಗೆ ಧನ್ಯವಾದ ಹೇಳಿದ್ದಾರೆ ಗೊತ್ತಾ?”
“ಆದರೂ… ಚೆನ್ನಾಗಿ ಓದಿ ಕಲಿತ ಹುಡುಗಿಯರು ಈ ಲವ್ಟ್ರ್ಯಾಪ್ಗೆ ಅಷ್ಟು ಸುಲಭವಾಗಿ ಬೀಳುವರೇ?”
“ಏನು ಮಹಾ ಓದಿ ತಿಳಿದುಕೊಂಡಿರೋದು? ಇಂದಿನ ಶಿಕ್ಷಣ ಏನಪ್ಪಾ… ಒಂದಿಷ್ಟು ಇಂಗ್ಲಿಷ್ ಭಾಷೆಯ ಬಗ್ಗೆ, ವಿಜ್ಞಾನ ಗಣಿತದ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡಿರುತ್ತಾರೆ. ಈ ಸೋಕಾಲ್ಡ್ ವಿದ್ಯಾವಂತರೆನ್ನಿಸಿಕೊಂಡವರು. ಓದದವರಿಗಿಂತ ಈ ಓದಿದವರನ್ನು ಪ್ರೇಮ-ಪ್ರೀತಿಯ ಬಲೆಯಲ್ಲಿ ಬೀಳಿಸುವುದು ಇನ್ನೂ ಸುಲಭ, ನಿನಗೆ ಗೊತ್ತಾ?”
ಹೊಸ ಬಗೆಯ ಎಕ್ಸೈಟ್ಮೆಂಟ್ನಿಂದ ಆತನ ಕಣ್ಣಗಳು ಹೊಳೆಯಲಾರಂಭಿಸಿದವು.
“ಏನೋಪ್ಪ, ಈ ವಿಷಯದಲ್ಲಿ ನಿನ್ನಷ್ಟು ತಿಳುವಳಿಕೆ ನನಗಿಲ್ಲ. ಆದರೆ… ಇಂತಹ ಕೆಲಸಕ್ಕೆ ಹುಡುಗಿಯರ ತಂದೆತಾಯಿಯರಿಂದ ವಿರೋಧ ಬರಲಿಲ್ಲವಾ? ಈಗಿನ ಪೋಷಕರು ತಮ್ಮ ಮಕ್ಕಳು ಸಿಟಿಯಲ್ಲಿ ಒಳ್ಳೆಯ ಜೀವನವನ್ನು ನಡೆಸಬೇಕೆಂದು ಬಯಸುತ್ತಿರುತ್ತಾರೆ.”
“ವಿರೋಧವೂ ಇಲ್ಲ. ಏನೂ ಇಲ್ಲ. ತಮ್ಮ ಮಗಳು ’ಲವ್ ಮ್ಯಾರೇಜ್’ ಆಗಿದ್ದಾಳೆ ಎಂದ? ಅವರಿಗೆ ತಿಳಿಯೋದು. ಹಳ್ಳಿಯ ಜೀವನದ ಪ್ಲಸ್ಪಾಯಿಂಟುಗಳ ಬಗ್ಗೆ ಕ್ರಮೇಣ ಅವರಿಗೂ ಅರಿವಾಗುತ್ತದೆ.”
“ನಿನ್ನ ಕೆಲಸ ತುಂಬ ಇಂಟರೆಸ್ಟಿಂಗ್ ಆಗಿದೆ. ನನಗೂ ಒಮ್ಮೆ ನಿನ್ನ ಶಾಲೆಗೆ ಬರಬೇಕೂಂತ ಆಸೆ ಆಗುತ್ತಿದೆ.”
“ಯಾಕಪ್ಪ! ಈ ವಯಸ್ಸಿನಲ್ಲಿ…”
“ಅಯ್ಯೋ ಹಂಗಲ್ಲಪ್ಪಾ, ನೀನು ಅದ್ಯಾವ ಟೆಕ್ನಿಕ್ಗಳನ್ನು ಹೇಳಿಕೊಡುತ್ತೀಯಾ ಎಂದು ತಿಳಿದುಕೊಳ್ಳುವ ಕುತೂಹಲ ಅಷ್ಟೆ.”
ಮೈನ್ ಕಾನ್ಸೆಪ್ಟ್ಸ್
“ಟೆಕ್ಕಿಕ್ ಗಿಕ್ನಿಕ್ ಅಂತ ವಿಶೇಷವಾದದ್ದು ಏನೂ ಇಲ್ಲ. ನಿಜವಾಗಿ ಹೇಳಬೇಕೆಂದರೆ, ಲವ್ ಮಾಡುವ ಬಗ್ಗೆ ಈ ಕಾಲದ ಯುವಕರಿಂದಲೇ ನಾವು ತಿಳಿದುಕೊಳ್ಳುವುದು ಬಹಳಷ್ಟಿದೆ. ನಾವು ಮುಖ್ಯವಾಗಿ ಮಾಡುತ್ತಿರುವುದೇನೆಂದರೆ, ಹಳ್ಳಿಯ ಹುಡುಗರಿಗೆ ಲವ್ ಮಾಡಲು, ಮದುವೆಯಾಗಲು ಧೈರ್ಯಕೊಡುವುದು ಅಷ್ಟೆ. ಉಳಿದೆಲ್ಲಾ ಸಂಗತಿಗಳೂ ತನ್ನಿಂದ ತಾನೇ ಘಟಿಸಿಬಿಡುತ್ತವೆ. ಎಲ್ಲಾ ಪ್ರಕೃತಿಯದೇ ಕೈವಾಡ, ನಮ್ಮದೇನಿದೆ?” ತತ್ತ್ವಜ್ಞಾನಿಯಂತೆ ಪೋಸುಕೊಟ್ಟ. “ಲವ್ ಮಾಡೋದು ಮಾಡ್ತೀರಾ, ಸ್ವಲ್ಪ ಸೀರಿಯಸ್ಸಾಗಿ ಲವ್ ಮಾಡಿ. ಲವ್ ಮಾಡೋದು ತಪ್ಪಲ್ಲ. ಆದರೆ ಲವ್ ಮಾಡಿಯೂ ಮದುವೆಯಾಗದಿರುವುದು ಮಹಾತಪ್ಪು. ಇವೆರಡೂ ನಾವು ಕೊಡುವ ಟ್ರೈನಿಂಗ್ನ ಮೈನ್ ಕಾನ್ಸೆಪ್ಪ್ಗಳು. ನಾವು ನಮ್ಮ ಹಳ್ಳಿಯ ಹುಡುಗರಿಗೆ ಹೇಳುವುದು ಇಷ್ಟೆ. ಲವ್ ಮಾಡುವುದಾದರೆ ಮುಂದಿನ ಭವಿಷ್ಯವನ್ನು ಚೆನ್ನಾಗಿ ಕಟ್ಟಿಕೊಳ್ಳುವುದಕ್ಕಾಗಿ ಲವ್ ಮಾಡಿ, ಮದುವೆಯಾಗಿ. ನಿಮ್ಮ ಅಪ್ಪ-ಅಮ್ಮಂದಿರ ತಲೆಬಿಸಿ ತಪ್ಪುತ್ತೆ…”
“ಅದೇನೋ ಸೀರಿಯಸ್ ಲವ್ ಎಂದಿಯಲ್ಲ. ಲವ್ನಲ್ಲೂ ಸೀರಿಯಸ್, ಹುಡುಗಾಟಿಕೆ ಎಂಬ ವಿಭಾಗಗಳಿವೆಯೇ?”
“ಹಹ್ಹಾ… ಅದಕ್ಕೇ ಈ ವಿಷಯದಲ್ಲಿ ನಿನ್ನನ್ನು ಶುದ್ಧ ಮಂಕು ಎನ್ನೋದು; ನಮ್ಮ ಕ್ಲಾಸುಗಳಲ್ಲಿ ಹಳ್ಳಿಯ ಹುಡುಗರಿಗೆ ಸೀರಿಯಸ್ಸಾಗಿ ಲವ್ ಮಾಡುವ ಬಗ್ಗೆ ಹೇಳಿಕೊಡುತ್ತೇವೆ. ಕಾಲೇಜುಗಳಲ್ಲಿ ನಿಮ್ಮ ಜಾತಿ ಅಂತಸ್ತಿಗೆ ಸರಿಯಿರುವ ಹುಡುಗಿಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಗೈಡೆನ್ಸ್ ಕೊಡುತ್ತೇವೆ. ಇದರಿಂದ ಕನ್ಯೆಯರ ತಂದೆತಾಯಿ ತಮ್ಮ ಮಕ್ಕಳು ಅಂತರ್ಜಾತಿ ವಿವಾಹವಾದರೆಂದು ನೊಂದುಕೊಳ್ಳುವುದು ತಪ್ಪುತ್ತದೆ. ಆಸ್ತಿ, ಅಂತಸ್ತುಗಳ ಬಗ್ಗೆಯೂ ಎರಡೂ ಕಡೆಯವರಿಗೆ ಬೇಜಾರಾಗದಂತೆ ನಾವು ನೋಡಿಕೊಳ್ಳುತ್ತೇವೆ.”
“ನಿನ್ನದು ಹಾಗಾದರೆ ಉಲ್ಟಾ ಕೇಸು ಅನ್ನು. ಲವ್ ಮಾಡುವುದು ಹೃದಯದಿಂದ ಎನ್ನುತ್ತಾರೆ. ಪ್ರೇಮ ಕುರುಡು ಎಂತಲೂ ಹೇಳುತ್ತಾರೆ. ಹೃದಯಕ್ಕಿಂತ ಮೆದುಳಿಗೇ ಹೆಚ್ಚು ಕೆಲಸ ಕೊಡುವ ಇದು ಎಂತಹ ಲವ್ ಮಾರಾಯಾ…?!”
“ಹಾಗಲ್ಲ, ನಮ್ಮಲ್ಲಿ ಹೃದಯದೊಂದಿಗೆ ವಿವೇಕವನ್ನೂ ಉಪಯೋಗಿಸಿ ಲವ್ ಮಾಡುವುದನ್ನು ಹೇಳಿಕೊಡುತ್ತೇವೆ. ಈಗೇನಾಗುತ್ತಿದೆ? ಗಂಡಾದವನು ಸೀರಿಯಸ್ಸಾಗಿ ಓದಿ, ಒಂದು ವೃತ್ತಿಯನ್ನೋ, ಉದ್ಯೋಗವನ್ನೋ ಹಿಡಿದು ಅಲ್ಲಿ ನೆಲೆನಿಂತ ನಂತರ ಮದುವೆಯಾಗಲು ತನ್ನ ಜಾತಿಗೆ ಸೇರಿದ, ತನ್ನ ಅಂತಸ್ತಿಗೊಪ್ಪುವ ಹುಡುಗಿಯನ್ನು ಮದುವೆಯಾಗಲು ಪ್ರಯತ್ನಿಸುತ್ತಾನೆ. ಈ ವಿಧಾನವನ್ನು ಅನುಸರಿಸುವ ಬದಲು… ಲವ್ ಆರಂಭಿಸುವಾಗಲೇ ಜಾತಿ, ಅಂತಸ್ತುಗಳನ್ನು ಪರಿಗಣನೆಗೆ ತಂದುಕೊಂಡರೆ ಲವ್-ಕಮ್-ಮದುವೆ ಯಶಸ್ವಿಯಾಗುತ್ತದೆ ಎಂದು ನಾವು ಮಾರ್ಗದರ್ಶನ ಮಾಡುತ್ತೇವೆ.”
“ನಿಜವಾಗಿಯೂ ಚೆನ್ನಾಗಿದೆ ಕಣಯ್ಯ ನಿನ್ನ ಐಡಿಯಾಗಳು, ನಿನ್ನ ಕೆಲಸ ಎಲ್ಲವೂ. ನಮ್ಮೂರಿನಲ್ಲಿ ನಿನಗೆ ಯಶಸ್ಸು ಸಿಗಲಿ…” ಹೃದಯತುಂಬಿ ಅಭಿನಂದಿಸಿದೆ.
“ನನ್ನ ಮಗನಿಗೂ ಈಗ ಮದುವೆಯ ವಯಸ್ಸು; ಹಳ್ಳಿಯ ಹುಡುಗನಾದ್ದರಿಂದ ಆತನ ಮದುವೆಯ ಬಗ್ಗೆ ಚಿಂತೆಯಾಗಿದೆ. ನಿನ್ನ ಟ್ರೈನಿಂಗ್ ಸ್ಕೂಲಿಗೆ ಅವನನ್ನು ಸೇರಿಸುತ್ತೇನೆ.”
“ಚಿಂತೆ ಮಾಡುವುದೇ ಬೇಡ. ನಮ್ಮ ಕ್ಲಾಸು ಸೇರಿದ ಆರು ತಿಂಗಳೊಳಗೆ ಅವನ ಮದುವೆಯಾಗುತ್ತದೆ. ನೋಡ್ತಾ ಇರು…”
ಅಭಯ ಹಸ್ತವನ್ನು ತೋರಿದ ಕಲ್ಲೇಶಿ ನನಗೆ ದೇವರಂತೆ ಕಂಡ.